ರಾಮಾಯಣ, ಮಹಾಭಾರತ ಬೃಹತ್ ಕಥೆಗಳು ಭಾರತೀಯರ ಮಹಾ ಕೃತಿಗಳು. ನಮ್ಮ ಪ್ರಾಚೀನ ಭಾರತೀಯ ಸಾಹಿತ್ಯ ಕೃತಿಗಳು ಇವುಗಳಿಗೆ ಒಂದಿಲ್ಲೊಂದು ಬಗೆಯಲ್ಲಿ ಋಣಿಯಾಗಿವೆ. ಭಾರತೀಯ ಸಂಸ್ಕೃತಿಯ ಸತ್ವವನ್ನು ಹೀರಿ, ಪುಷ್ಟವಾಗಿ ಬೆಳೆದ ಈ ಬೃಹತ್ ಕೃತಿಗಳು. ಇಡೀ ಭರತ ಖಂಡದ ಸಂಸ್ಕೃತಿಗೆ ಮೂಲಾಧಾರವಾಗಿ ನಿಂತು, ಈ ಸಂಸ್ಕೃತಿಯ ಪ್ರಭುತ್ವವನ್ನು ಸ್ಥಾಪಿಸಿವೆ. ಈ ಕೃತಿಗಳಲ್ಲಿ ಮಡುಗಟ್ಟಿ ನಿಂತ ಆದರ್ಶಗಳನ್ನು ಅಳವಡಿಸಿಕೊಳ್ಳುವಲ್ಲಿ ಭಾರತೀಯ ಪೌರರು, ಜನಪದರು ತಮ್ಮ ಬಾಳಿನ ಪರಮಾರ್ಥವನ್ನು ಕಂಡು ಕೊಂಡಿದ್ದಾರೆ. ಈ ಗ್ರಂಥಗಳಲ್ಲಿಯ ಸುಗುಣ ಗಂಭೀರ ನಾಯಕರ ಧ್ಯೇಯ, ಧೋರಣೆಗಳನ್ನು ಅನುಸರಿಸಿ, ತಮ್ಮ ಬಾಳನ್ನು ಸಾರವತ್ತಾಗಿಸಿಕೊಂಡಿದ್ದಾರೆ.

ಈ ಮಹೋದ್ವ ಕೃತಿಗಳು ಇಂದಿನ ಬೃಹತ್ ಸ್ವರೂಪ ತಾಳುವ ಮೊದಲು, ಶತಶತಮಾನಗಳಿಂದ ಬರವಣಿಗೆಗಿಳಿಯದೆ, ಬಾಯಿಮಾತಿನ ಮೂಲಕ ಬಂದವುಗಳೆಂದು ಪಂಡಿತರ ತೀರ್ಮಾನ. ರಾಮಾಯಣವನ್ನು ವಾಲ್ಮೀಕಿಯಿಂದ ಕೇಳಿ ಕಲಿತ ಕುಶಲವರು ಮೊದಲು ಆಶ್ರಮದ ಮುನಿಗಳೆದುರು ಹಾಡಿದರು. ಆ ಮೇಲೆ ರಾಮಾಯಣವನ್ನು ಅನೇಕ ಶ್ರೋತೃ ವೃಂದದ ಮುಂದೆ ಹಾಡುತ್ತ ಹಾಡುತ್ತ ದೃಢೀಕರಿಸಿಕೊಂಡು, ಅಯೊಧ್ಯೆಗೆ ಬಂದು, ಶ್ರೀರಾಮನ ಎದುರಿಗೇ ತುಂಬಿದ ಸಭೆಯಲ್ಲಿ ಹಾಡಿದರು. ವ್ಯಾಸ ಪ್ರಣೀತ ಮಹಾಭಾರತವನ್ನು ಜನಮೇಜಯನು ಕೈಗೊಂಡ ಸರ್ಪಯಾಗದ ಸಮಯದಲ್ಲಿ ನೆರೆದ ನೆರವಿಯೆದುರಿಗೆ ವೈಶಂಪಾಯನನ್ನು ಕೈಗೊಂಡ ಸರ್ಪಯಾಗದ ಸಮಯದಲ್ಲಿ ನೆರೆದ ನೆರವಿಯೆದುರಿಗೆ ವೈಶಂಪಾಯನನು ಹೇಳಿದನು. ವರರುಚಿಯ ಕಥಾ ಸಮೂಹವನ್ನು ಕಾಣಭೂತಿಯೆಂಬ ಪಿಶಾಚಿಯಿಂದ ಗುಣಾಡ್ಯನು ಕೇಳಿ ಬೃಹತ್ ಕಥೆಯನ್ನು ಸಂಗ್ರಹಿಸಿದನು – ಎಂದು ಮುಂತಾಗಿ ಸಂಪ್ರದಾಯದ ವಜ್ರ ಕವಚವಿರುವುದನ್ನು ಗುರುತಿಸಬಹುದು.

ವೈದಿಕ ಸಾಹಿತ್ಯದಲ್ಲಿ ರಾಜರು, ದಾನಿಗಳೂ, ಹಾಗೂ ವಿರರನ್ನು ಕುರಿತು ಹೊಗಳಿಕೆ ದಾನ ಸ್ತುತಿಗಳಿವೆ; ಗಾಥಾನಾರ ಶಂಸಿಗಳಿವೆ; ಪುರಣ ದೇವತಾ ಕಥೆಗಳಿವೆ. ಈ ಕಥನ ಗೀತೆಗಳನ್ನು ಯಜ್ಞ ಯಾಗಗಳ ಕಾಲಕ್ಕೆ ಹಾಗೂ ಇನ್ನಿತರೆ ವಿಶೇಷ ಸಮಾರಂಭಗಳು ಕಾಲಕ್ಕೆ ಭಟ್ಟಂಗಿಗಳು-ಸೂತರು ಹಾಡುತ್ತಿದ್ದರು. ಈ ಸೋತರು ಸಮಾಜದಲ್ಲಿ  ಗಣ್ಯಸ್ಥಾನವುಳ್ಳ, ಅರಮನೆಯಲ್ಲಿ ವಿಶೇಷ ಸಲಿಗೆಯುಳ್ಳ ಮಧ್ಯಮ ವರ್ಗಕ್ಕೆ ಸೇರಿದ ಜನ. ಮನುಧರ್ಮ ಶಾಸ್ತ್ರದ ಪ್ರಕಾರ ಕ್ಷತ್ರೀಯ ತಂದೆ, ಬ್ರಾಹ್ಮಣ ತಾಯಿಯೆಂದು ಜನಿಸಿದವರು. ಇವರು ರಾಜಕುಮಾರರ ಸಾರಥ್ಯವನ್ನು ವಹಿಸಿ, ಯುದ್ಧ ರಂಗದ ಪ್ರತ್ಯೇಕ್ಷದರ್ಶಿಗಳಾಗಿರುತ್ತಿದ್ದರು. ಇದರಿಂದ ವೀರರ ಶೌರ್ಯಸಾಹಸಾದಿಗಳನ್ನು ಕಂಡು, ರಸವೇಶಗೊಂಡು ವೀರಗಾಥೆಗಳನ್ನು ರಚಿಸಿ ಹಾಡಲು ಶಕ್ತರಾಗುತ್ತಿದ್ದರು.  ಈ ಸೂತರು ತಮ್ಮ ವಿರಾಮ ವೇಳೆಯಲ್ಲಿ ವೀರರ ಹಿರಿಮೆಯನ್ನು ಸಾರುವ ವೀರಗಾಥೆಗಳನ್ನು ಕಾಲಕಾಲಕ್ಕೆ ಜನಪದ ಭಾಷೆಯಲ್ಲಿ  ರಚಿಸಿ ವಿಶೇಷ ಸಂದರ್ಭಗಳಲ್ಲಿ ಹಾಡುವ ಪರಿಪಾಠವನ್ನಿಟ್ಟುಕೊಂಡಂತಿದೆ. ಹೀಗೆ ಸೂತರು ವೀರಗಾಥೆಗಳ ಜನ್ಮದಾತರಾಗುತ್ತಾರೆ. ರಾಮಾಯಣದಲ್ಲಿ ಸೂತ ಸುಮಂತ್ರನ ಪ್ರಸ್ಥಾಪ ಬರುತ್ತದೆ. ಮಹಾಭಾರತದಲ್ಲಿ ಸೂತ ಸಂಚಿಯ ದೃತರಾಷ್ಟ್ರನಿಗೆ ಮಹಾಭಾರತ ಯುದ್ಧವನ್ನು ಬಣ್ಣಿಸುತ್ತಾನೆ. ಇನ್ನೂ ಅನೇಕ ಸೂತ ಪುರಣಿಕರ ಉಲ್ಲೇಖ ಭಾರತೀಯ ಸಾಹಿತ್ಯದಲ್ಲಿ ಮೇಲಿಂದ ಮೇಲೆ ಬರುತ್ತದೆ.

ಸೂತರಿಂದ ನಿರೂಪಿತವಾದ ಐತಿಹಸಿಕ  ಘಟನೆಗಳಿಂದ ಕೂಡಿದ, ವೀರ ಗಾಥೆಗಳ ಪ್ರಸಾರ ಕಾರ್ಯವನ್ನು ಕುಶಲವರೆಂಬ ಸಂಚಾರಿ ಗಾಯಕರು ಕಥಾನಕವನ್ನು ಒಬ್ಬರಿಂದೊಬ್ಬರಿಗೆ ಮುಟ್ಟಿಸುವಾಗ, ಮೂಲಕಥೆ, ಅನೇಕ ಪ್ರೇಕ್ಷಕಗಳಿಗೆ ಈಡಾಗಿ ಮಾರ್ಪಡುವುದು ಸಹಜ. ಹೀಗಾಗಿ ಪೂರ್ವದ ವಾಸ್ತವ ಇತಿಹಾಸ ಕಥೆಗೆ ಜನಪದ ಕಥೆ, ಉಪಕಥೆಗಳು ಇಲ್ಲವೇ ಇನ್ನಿತರೆ ವಿಷಯಗಳು ಸೇರ್ಪಡೆಯಾಗಿ, ಮೂಲಕಥೆ ಹಿಗ್ಗುತ್ತಾ, ರೂಪಾಂತರಗೊಳ್ಳುತ್ತ ಹೋಗುತ್ತದೆ.”ಇಂತಹ ಕಥಾಪುಂಜಗಳನ್ನೇ ವೀರಗಾಥಾ (balled cycle) ಎನ್ನುತ್ತಾರೆ…  ಈ ಗಾಥೆಗಳು ವಿವಿಧ ಕಥ ಚಕ್ರಗಳಾಗಿ ಚಲಿಸುತ್ತಾ ಚಲಿಸುತ್ತಾ ಕಡೆಗೆ ಒಬ್ಬ ಶಕ್ತನಾದ ಕವಿಯ ಅಯಸ್ಕಾಂತ ಪ್ರತಿಭೆಯೊಳಗೆ ಕೂಡಿಕೊಂಡು ಒಂದು ಮಹಾಕಾವ್ಯವಾಗಿ ರೂಪುಗೊಳ್ಳುತ್ತವೆ.”

[1]ರಾಮಾಯಣ, ಮಹಾಭಾರತ,ಇಲಿಯಡ್, ಒಡೆಸಿ, ಬೀವುಲ್ಫ, ಕಲೇವಾಲಗಳೆಲ್ಲ ರೂಪುಗೊಂಡದ್ದು ಹೀಗೆ. ಒಟ್ಟಿನಲ್ಲಿ ರಾಮಾಯಣ, ಮಹಾಭಾರತ ಮುಂತಾದ “ಮಹಾಕಾವ್ಯಗಳ ಮೂಲ ಸಾಮಗ್ರಿ ಅತ್ಯಂತ ಪ್ರಾಚೀನ ಕಾಲದಿಂದ ಅವರಿವರಿಂದ ರಚಿತವಾದ ಇತಿಹಾಸ ಮತ್ತು ಜಾನಪದ ಕಥೆಗಳು ಒಂದು ಪರಂಪರೆಯಿಂದ ಕೂಡಿದ್ದಾಗಿದೆ ಎನ್ನಬಹುದು”[2]


[1]     ಡಾ.ಜಿ.ಎಸ್. ಶಿವರುದ್ರಪ್ಪ ಮಹಾಕಾವ್ಯ ಸ್ವರೂಪ ಪು.೩೪-೩೫

[2]      ಡಾ|| ಜಿ.ಎಸ್. ಶಿವರುದ್ರಪ್ಪ ಮಹಾಕಾವ್ಯ ಸ್ವರೂಪ ಪು.೩೪