ಮಹಾಭಾರತವು ಮೂಲತಃ ಈಗಿರುವಷ್ಟು ದೊಡ್ಡದಾಗಿರದೇ ಚಿಕ್ಕದಾಗಿತ್ತು. ಹಸ್ತಿನಾಪೂರದ ಸಿಂಹಾಸನಕ್ಕಾಗಿ ಧೃತರಾಷ್ಟ್ರ ಹಾಗೂ ಪಾಂಡು ಚಕ್ರವರ್ತಿಯ ಮಕ್ಕಳು ಹೋರಾಟ ನಡೆಸಿ, ಕೊನೆಯಲ್ಲಿ ಪಾಂಡು ಪುತ್ರರು ಕುರುಕ್ಷೇತ್ರ ರಣರಂಗದಲ್ಲಿ ಜಯಗಳಿಸಿದ ಐತಿಹಾಸಿಕ ಘಟನೆಯನ್ನು ವೀರಗೀತೆಯಾಗಿ, ಯಾರೋ ಸೂತರು ಹಾಡಿರಬೇಕು. ಪಾಂಡರವರು, ಕೌರವರನ್ನು ಜಯಿಸಿದ ವೀರಗಾಥೆಯಿದ್ದಾದರಿಂದ ಇದರ ಮೂಲ ಹೆಸರು “ಜಯ” ಎಂದು ಹೇಳಲಾಗುತ್ತದೆ.  ಶತಮಾನಗಳುರುಳಿದಂತೆ ”  ಈ “ಜಯ”  ಕಥೆಗೆ ಇನ್ನಿತರೆ ಭರತ ವಂಶೀಯರ ಕಥೆ ಹಾಗೂ ಬೇರೆ ಕಥೆಗಳು”

[1] ಸೇರಿ ಇದು ಭಾರತವಾಯ್ತು. ಜಯ ಮತ್ತು ಭಾರತವೆಂವ ಎರಡೂ ಹಂತಗಳನ್ನು ದಾಟಿ, ಭಾರತೀಯರ ತಲೆಯಲ್ಲಿ ತುಂಬಿದ ಸಕಲ ತಾತ್ವಿಕ ವಿಚಾರಗಳನ್ನು ತನ್ನಲ್ಲಳವಡಿಸಿಕೊಂಡು ಒಂದು “ವಿಶ್ವಕೋಶ”ವಾಗಿ ಇಂದಿನ ಮಹಾಭಾರತ ರೂಪುಗೊಂಡಿತು. “ಪ್ರಪಂಚದಲ್ಲಿ ಇರುವುದೆಲ್ಲವೂ ” ಈ ಕೃತಿಯಲ್ಲಿ ಇದೆ; ಇಲ್ಲಿ ಇಲ್ಲದ್ದು ಎಲ್ಲಿಯೂ ಇಲ್ಲ”[2] ಎಂಬ ಅಗ್ಗಳಿಕೆ ನೆಲೆಯಾಯಿತು.

ಮಹಾಭಾರತ ವಿಷಯದಲ್ಲಿ ಉಗ್ರಶ್ರವ್ಯ ೮೮೦೦ ಶ್ಲೋಕಗಳಿಂದ ಕೂಡಿದ ಕಾವ್ಯವು ತನಗೆ ಗೊತ್ತಿದೆಯೆನ್ನುತ್ತಾನೆ. ಆದರೆ ವ್ಯಾಸರು ೨೪ ಸಾವಿರ ಶ್ಲೋಕಗಳನ್ನು ಭಾರತ ಸಂಹಿತೆಯಲ್ಲಿ? ಕೂಡಿದ್ದೇನೆನ್ನುತ್ತಾರೆ ಅನಂತರ ಆತನೇ ೬೦ ಸಾವಿರ ಶ್ಲೋಕಗಳ ಮಹಾಕಾವ್ಯವನ್ನು ರಚಿಸಿದೆನೆನ್ನುತ್ತಾನೆ”.[3] ಆಧುನಿಕರ ಪರಿಭಾಷೆಯಲ್ಲಿ ಹೇಳುವುದಾದರೆ ವ್ಯಾಸ ರಚಿತವಾದ “ಜಯ”ವೆಂಬ ಕಾವ್ಯವನ್ನು ವೈಶಂಪಾಯನನ್ನು ಸಂಪಾದಿಸಿ, ಭಾರತವೆಂದು ಕರೆದು ಪ್ರಕಟಿಸಿದನು. ಸೌತಿಯು ಅದಕ್ಕೆ ಉಫದ್ಘಾತ. ವಿಷಯ ಸೂಚಿಕ ಟಿಪ್ಪಣಿ ಅನುಭಂಧ ಮುಂತಾದುವುಗಳನ್ನು ಸೇರಿಸಿ, ಮಹಾಭಾರತವೆಂಬ ವಿಸ್ತ್ರತ ರೂಪದಲ್ಲಿ ಪುನಃ ಪ್ರಕಾಶಮಾನಗೊಳಿಸಿದನು”[4] ಈ ಎಲ್ಲಾ ಹೇಳಿಕೆಗಳು ಮಹಾಭಾರತವು ಪ್ರಕ್ಷೇಪಗಳಿಗೊಳಗಾಗಿ ಬೆಳವಣಿಗೆ ಪಡೆದಿರಬಹುದಾದ ಹಂತಗಳನ್ನು ಸೂಚಿಸುತ್ತವೆ.

ಇಂದು ಮಹಾಭಾರತವು ತನ್ನ ಮೂಲ ಕಥೆಗೆ ಅನೇಕಾನೇಕ ಉಪಕಥೆಗಳನ್ನು ಒಳಗೊಂಡು ಸುಮಾರು ಲಕ್ಷ ಶ್ಲೋಕಗಳ ವ್ಯಾಪ್ತಿಯನ್ನು ಪಡೆದಿವೆ. ಇದರ ಕೆಲವು ಉಪಕಥೆಗಳು ಸಹ ಮಹಾಕಾವ್ಯ ವ್ಯಾಪ್ತಿಯನ್ನು ಪಡೆದಿವೆ. ಗ್ರೀಕರ ಮಹಾಕಾವ್ಯಗಳಾದ ಇಲಿಯೆಡ್ ಒಡೆಸ್ಸಿಗಳು ಮಹಾಭಾರತದಲ್ಲಿಯ ಇಂತಹ ಉಪಕಥೆಗಳಿಗೆ ಸಮಾನಗವಾಬಹುದು.

ಪ್ರಪಂಚದ ಮಹಾಕೃತಿಗಳಲ್ಲಿ ಅತ್ಯಂತ ದೊಡ್ಡದಾದ ಮಹಾಭಾರತವು, ಭಾರತೀಯರ ವೈವಿಧ್ಯಪೂರ್ಣವಾದ ಬದುಕನ್ನೆಲ್ಲ ತನ್ನಲ್ಲಿ ಗರ್ಭೀಕರಿಸಿಕೊಂಡು, ವೇದ ವೇದಾಂತ ತತ್ವಗಳನ್ನು ತನ್ನಲ್ಲಿ ಅಳವಡಿಸಿಕೊಂಡು ಮಹತ್ತು ಹಾಗೂ ಬೃಹತ್ ಎರಡರಲ್ಲಿಯೂ ಅದ್ವೀತಿಯ ಗ್ರಂಥವಾಗಿದೆ. ಹಿಂದುಗಳು ಇದನ್ನು ಪಂಚಮವೇದವೆಂದು ಗೌರವಿಸುತ್ತಾರೆ. ಇದಕ್ಕೆ ಕಾರಣ ವೇದಗಳಲ್ಲಿಯ ಅನೇಕ ಋಕ್ಕುಗಳು ಅಲ್ಪಸ್ವಲ್ಪ ವ್ಯತ್ಯಾಸಗೊಂಡು, ಭಾವಾನುವಾದ ಪಡೆದು ಇದರಲ್ಲಿವೆ. ಉಪನಿಷತ್ತು ಬ್ರಾಹ್ಮಣಗಳಲ್ಲಿಯ ಅನೇಕ ವಿಚಾರಗಳು ಇಲ್ಲಿ ಉಕ್ತವಾಗಿವೆ. ಈ ಗ್ರಂಥ ನೂರಾರು ಕಥೆಗಳಿಂದ ಕೂಡಿದ ಮಹಾಸಾಗರ. ಹೀಗಾಗಿ ಈ ಗ್ರಂಥ ಪೌರ. ಜಾನಪದರಿಗೆ ನೀತಿ ಧರ್ಮ ಬೋಧನೆ ಮತ್ತು ಕಥಾಕಾಲಕ್ಷೇಪ ಮನರಂಜನೆ ಎರಡನ್ನೂ ಒದಗಿಸುವ ಅಮೂಲ್ಯ ನಿಧಿಯಾಯ್ತು.  ಈ ಗ್ರಂಥ ಪಠನ ಮಾಡುವುದು ಅವರಿಗೆ ಪರಮಪೂಜ್ಯ ಕೆಲಸವಾಯ್ತು. ಆದರೆ ಈ ಬೃಹತ್‌ ಗ್ರಂಥ ಪಠನ ಸುಲಭ ಸಾಧ್ಯವಲ್ಲ. ಅದಕ್ಕಾಗಿ ಮಹಾಭಾರತವನ್ನು ತಿಂಗಳು ಗಟ್ಟಲೆ ಓದಿ ವ್ಯಾಖಾನಿಸುವ ಪರಿಪಾಠ ಬೆಳೆಯಿತು.  ಈ ಗ್ರಂಥದ ಬೇರೆ ಬೇರೆ ಅಖ್ಯಾನಗಳನ್ನು ತೆಗೆದುಕೊಂಡು ನಾಟಕ, ಯಕ್ಷಗಾನಾದಿಗಳನ್ನು ಆಡಿ, ಜನತೆಗೆ ಮನರಂಜನೆ ಹಾಗೂ ಧರ್ಮ ಪರಿಜ್ಞಾನ ಕುದುರಿಸುವ ಪದ್ಧತಿ ಬೆಳೆದುಕೊಂಡು ಬಂದಿತು. ಹೀಗಾಗಿ ಮಹಾಭಾರತ ಕಥೆ ಜಾನಪದರಲ್ಲಿಯೂ ಸಾಕಷ್ಟು ಪುನರ ಪ್ರಸಾರ ಪಡೆದು ಅವರ ಸಾಂಸ್ಕೃತಿಕ ಜೀವನದಲ್ಲಿ ತನ್ನ ಅಪ್ರತಿಮ ಪ್ರಭಾವ ಬೀರಿತು.


[1]      ಮಹಾಭಾರತದಲ್ಲಿ ಅನೇಕಾನೇಕ ಜೈನ ಬೌದ್ಧ ಕಥೆಗಳು ಸೇರಿ ಹೋಗಿವೆಯೆಂದು ವಿಮರ್ಶಕರು ಸಾಧಿಸಿದ್ದಾರೆ

[2]      ಮಹಾಭಾರತ ೧-೫೬-೩೩

[3]      ಓದು M. Winternitiz; A History of Indian Literature Vol-1 Part-II P.284, 285

[4]      ಸಿ.ವಿ. ವೈದ್ಯ: ಉದ್ದರಣೆ: ವಚನ ಭಾರತ :ಟಿಪ್ಪಣಿಗಳು ಪುಟ ೮