ಅನಾದಿ ಕಾಲದಿಂದ ಜನತೆಯ ಬಾಯಿಯಿಂದ ಬಾಯಿಗೆ ಬರುತ್ತಿದ್ದ ಮಹಾಭರತ ಕಥಾಪುಂಜ ಮಹಾಕವಿ ಪ್ರತಿಭೆಯ ತಿಗರಿಗೆ ಸಿಕ್ಕು, ಅಭಿಜಾತ ಮಹಾಭಾರತವಾಗಿ ರೂಪುಗೊಂಡಿರಬೇಕೆಂದು ಪಂಡಿತರ ಊಹೆ. ಅಭಿಜಾತವಾಗಿ ಬೆಳೆದು ನಿಂತ ಈ ಮಹಾಭಾರತದ ಕಥೆ. ಉಪಕಥೆಗಳನ್ನು ಕೈಗೆತ್ತಿಕೊಂಡು, ಪುರಾಣ ಪ್ರವಚನಕಾರರು, ಕೀರ್ತನಕಾರರು, ಕವಿ ಗಮಕಿಗಳು, ನಟರು ತಂತಮ್ಮ ಮಾದ್ಯಮಗಳ ಮೂಲಕ ಜಾನಪದರಿಗೆ ಮುಟ್ಟಿಸಿದರು. ಅಭಿಜಾತ ಮಹಾಭಾರತ ಹೀಗೆ ಜನ ಸಾಮಾನ್ಯರಲ್ಲಿ ಸಂವಹನೆಗೊಳ್ಳುವಾಗಲೇ, ಜನತೆಯಲ್ಲಿ ರೂಢ ಮೂಲವಾಗಿ ಬೆಳೆದುಕೊಂಡು ಬಂದ, ವಿಭಿನ್ನ ಸಂಪ್ರದಾಯದ ಮಹಾಭಾರತ ಕಥೆಗಳೂ, ತಲೆ ತಲಾಂತರದಿಂದ ಜನತೆಯ ನಾಲಿಗೆಯ ಮೇಲೆ ನಲಿಯುತ್ತ ಒಬ್ಬರಿಂದೊಬ್ಬರಿಗೆ ಸಾಗುತ್ತಿದ್ದಂತಿದೆ. ಹೀಗೆ ಸಾಗುವಾಗ ಕಾಲ ಕಾಲದ ವರ್ತಮಾನ ಜಾನಪದರ ಪ್ರಜ್ಞೆಯ ಕೈವಾಡವೂ ಸಾಕಷ್ಟು ನಡೆಯುತ್ತದೆ. ಈ ಕಥಾಪುಂಗಳಲ್ಲಿ ಜಾನಪದರು ತಮ್ಮ ಜಾಯಮಾನಕ್ಕೆ ತಕ್ಕಂತೆ ತಮ್ಮ ಆಶೆ ಅನಿಸಿಕೆಗಳ ಎರಕ ಹೊಯ್ದು, ತಮ್ಮ ಒಡನಾಡಿಗಳಿಗೆ ಗದ್ಯ ಇಲ್ಲವೆ ಪದ್ಯ ಮಾದ್ಯಮಗಳ ಮೂಲಕ ಮುಟ್ಟಿಸುತ್ತಾರೆ.  ಹೀಗಾಗಿ ಇಂದಿನ ಜಾನಪದ ಮಹಾಭಾರತದ ಮೇಲೆ ಅಭಿಜಾತ ಮಹಾ ಭಾರತದ ಪ್ರಭಾವ, ಪುರಾಣ ಪ್ರವಚನಕಾರಾದಿಗಳ ಪ್ರಭಾವ, ಅನಾದಿ ಕಾಲದಿಂದ ಜನತೆಯ ನಾಲಿಗೆಯ ಮೇಲೆ ನಲಿದಾಡುತ್ತಿದ್ದ ವಿಭಿನ್ನ ಜಾನಪದ ಸಂಪ್ರದಾಯ ಕಥಾಪುಂಜಗಳ  ಪ್ರಭಾವ, ಕಾಲ ಕಾಲದ ಜಾನಪದ ಪ್ರಜ್ಞೆಯ  ಪ್ರಭಾವ ಹೀಗೆ ನಾಲ್ಕು ಮಜಲಗಳಲ್ಲಿ ಪ್ರಭಾವದಂತಿವೆ. ಈ ಚತುರ್ಮುಖಿಗಳ ಪ್ರಭಾವ ಫೋಷಣೆಯಲ್ಲಿ ಇಂದು ನಮಗೆ ಲಭ್ಯವಾಗುವ ಜಾನಪದ ಮಹಾಭಾರತ ರೂಪು ಗೊಂಡಿದೆಯೆಂದು ಹೇಳಬಹುದು.

ಹೀಗೆ ಮೂಲ ಮಹಾಭಾರತ ಕಥಾವಸ್ತುವಿನಲ್ಲಿ ಗಣನೀಯ ಬದಲಾವಣೆಗಳಾಗುತ್ತವೆ. ವ್ಯಾಸನ ಕಾಲದ ಮನೋಧರ್ಮಗಳು ಕ್ರಮೇಣ ದೂರವಾಗುತ್ತವೆ. ವರ್ತಮಾನ ಮನೋಧರ್ಮಗಳು ಪಾದಾರ್ಪಣೆ ಮಾಡುತ್ತವೆ. ಮೂಲ ಪಾತ್ರಗಳ ಗುಣ ಸ್ವರೂಪಗಳು ಬದಲಾಗುತ್ತವೆ.  ಪಾತ್ರಗಳ ಅಲೌಕಿಕತೆ ದೂರ ಸರಿಯುತ್ತದೆ. ಅನೇಕ ಅಲೌಕಿಕ ಘಟನೆಗಳು ಲೌಕಿಕ ಘಟನೆಗಳಾಗಿ ಅವತರಿಸುತ್ತವೆ.  ಜಾನಪದ ಅನೇಕ ರೂಢಿ, ನಂಬಿಕೆ, ಸಂಪ್ರದಾಯಗಳು ಕಥೆಯಲ್ಲಿ ಸೇರಿಕೊಳ್ಳುತ್ತವೆ.  ಮಹಾಭಾರತದ ಮೌಲ್ಯಗಳು ಕ್ರಮೇಣ  ದೂರ ಸರಿದು, ಜಾನಪದರು ನಂಬಿದ ಕೆಲವು ಮೌಲ್ಯಗಳು ಹಾಗೂ ರೂಢಿ ಸಂಪ್ರದಾಯಗಳ ಸ್ಥಿರೀಕರಣ ಮಪ್ರಯತ್ನಗಳು ಗೋಚರಿಸುತ್ತವೆ.

ಈ ರೀತಿ ಮಾರ್ಪಾಡಾಗುವಾಗ ಎಲ್ಲೆಡೆಯಲ್ಲಿಯೂ ಸಮುಚಿತವಾದ ಸುಂದರ ಮಾರ್ಪಾಡಾಗುತ್ತದೆಯಂದೇನೂ ಇಲ್ಲ. ಹಲವೆಡೆ ಮೂಲದ ಸೊಗಸು ಮಸುಕಾಗಬಹುದು. ಕೆಲವೆಡೆ ಅನೌಚಿತ್ಯದ ಚಂಚು ಪ್ರವೇಶವಾಗಬಹುದು. ಅಲ್ಲಲ್ಲಿ  ಪಾತ್ರ ಪೋಷಣೆ ತಲೆಕೆಳಗಾಗಬಹುದು. ಅನೇಕ ಸಂದರ್ಭಗಳಲ್ಲಿ ಕಾವ್ಯದ ಸೊಗಸು ಬತ್ತಿ ಹೋಗಬಹುದು: ಶಿಥಿಲ ಶೈಲಿ ಎಲ್ಲದರಲ್ಲಿಲಯೂ ಭಿನ್ನ ಸ್ವರೂಪ ಪಡೆದ ಸಾಕಷ್ಟು ಮಣ್ಣಿನವಾಸನೆ ಅಂಟಿದ ಇನ್ನೊಂದು ಬಗೆಯ ಜಾನಪದ ಭಾರತ ಲೋಕದರ್ಶನವನ್ನು ನಾವು ಜಾನಪದ ಮಹಾಭಾರತದಲ್ಲಿ ಕಾಣಬಹುದು.

ಈ ಜಾನಪದ ಮಹಾಭಾರತ ಸಂಪ್ರದಾಯ ಅಶಿಕ್ಷಿತ ಜನತೆಯಿಂದ ನಿರಂತರವಾಗಿ ಬದಲಾವಣೆಯನ್ನು ಹೊಂದುತ್ತ ಮುಂದುವರೆಯುತ್ತಲೇ ಹೋಗುತ್ತದೆ. ಇನ್ನು ಶತಶತಮಾನಗಳು ಉರುಳಿದ ಮೇಲೆ, ಇಂದು ನಮಗೆ ದೊರೆತ ಜಾನಪದ ಮಹಾಭಾರತ ಕಥೆಗೂ ಸಾಕಷ್ಟು ವ್ಯತ್ಯಾಸ ತಲೆದೋರಿದರೆ ನಾವು ಅಚ್ಚರಿಪಡಬೇಕಾಗಿಲ್ಲ. ಒಟ್ಟಿನಲ್ಲಿ ಜನತೆಯ ನಾಲಿಗೆಯ ಮೇಲೆ ನಲಿದಾಡುವ ಮಹಾಭರತ ನಿತ್ಯ ಪರಿವರ್ತನಾಶೀಲವಾದುದು: ಸಜೀವವಾದುದು. ಈ ಜಾನಪದ ಮಹಾಭಾರತ ನಿತ್ಯ ರೂಪ ವ್ಯತ್ಯಾಸ ಹೊಂದುತ್ತ ತನ್ನ ನಿತ್ಯ ನೂತನತೆಯನ್ನು ಕಾಪಾಡಿಕೊಳ್ಳುತ್ತದೆ.  ಅದಕ್ಕಾಗಿ ಜಾನಪದ ಸಂಗ್ರಹಣೆಯ ಕಾರ್ಯ ಕಾಲಕಾಲಕ್ಕೆ ಅವ್ಯಾಹತವಾಗಿ ಸಾಗುತ್ತಲೇ ಹೋಗಬೇಕು. ಅಂದಾಗ ಮಾತ್ರ ಜಾನಪದ ಯವ ರೀತಿಯಲ್ಲಿ ಬದಲಾವಣೆ ಹೊಂದುತ್ತ ಹೋಗುತ್ತದೆ ಎನ್ನುವುದರ ಇತಿಹಾಸ ನಮಗೆ ದೊರಕಲು ಸಾಧ್ಯ. ಭಾಷೆ, ವಸ್ತು ತಂತ್ರಗಳಲ್ಲಿ ಆದ ವಿಕಾಸದ ಹಂತಗಳನ್ನು ಗುರುತಿಸಲು ಸಾಧ್ಯ.

ಜಾನಪದ ರಾಮಾಯಣ ಹಾಗೂ ಮಹಾಭಾರತವನ್ನೂ ಕುರಿತಾದ ಒಂದೆರಡು ಸಂಗ್ರಹಗಳು ಈಗಾಗಲೇ ಪ್ರಕಟವಾಗಿವೆ,. ಆದರೆ ಅವುಗಳಿಂದ ಸಂಪೂರ್ಣ ಭಿನ್ನ ಜಾಡಹಿಡಿದ ಈ ಗ್ರಂಥ ಜಾನಪದ ಲೋಕಕ್ಕೊಂದು ವಿಶಿಷ್ಟವಾದ ಕೊಡುಗೆಯೆಂದು ನನ್ನ ಅನಿಸಿಕೆ. ಈ ಗ್ರಂಥದಲ್ಲಿ ಉತ್ತರ ಕನ್ನಡ ಜಿಲ್ಲೆಯ ಗಾಮೊಕ್ಕಲರಲ್ಲಿ ಪ್ರಚಲಿತವಿರುವ ಮಹಾಭಾರತ ಕಥೆಗಳನ್ನು ಸಂಗ್ರಹಿಸಿ ಕೊಡಲಾಗಿದೆ.