ನೆಲದ ಮಕ್ಕಳಾದ ನಮ್ಮ ಸುತ್ತ ಹಗಲೂ ಇರುಳೂ ತಿರುಗುತ್ತಿರುವ ಅಸಂಖ್ಯ ಗ್ರಹತಾರಕೆಗಳಲ್ಲಿ ಚಂದ್ರನಷ್ಟು ಹತ್ತಿರವಾದ ಹಾಗೂ ಪ್ರಿಯವಾದ ಜ್ಯೋತಿರ್ಮಂಡಲ ಮತ್ತೊಂದಿಲ್ಲ.  ನಾವು ಹೇಗೆ ಈ ಭೂಮಿಯ ಸಂತಾನವೋ, ಚಂದ್ರನೂ ಹಾಗೆಯೆ ಈ ಭೂಮಿಯ ಮೊದಲ ಸಂತಾನವೇ.  ಯಾಕೆಂದರೆ ಎಂದೋ ಒಮ್ಮೆ ಲಕ್ಷಾಂತರ ವರ್ಷಗಳ ಹಿಂದೆ, ಯಾವುದೋ ಕಾರಣದಿಂದ ಈ ಭೂಮಿಯ ಮೈಯ ಒಂದಷ್ಟು ಭಾಗವೇ ಸಿಡಿದು ದೂರಕ್ಕೆ ಚಿಮ್ಮಿ ಒಂದು ಸ್ವತಂತ್ರ ಉಪಗ್ರಹವಾಗಿ ಈ ಭೂಮಿಯನ್ನು ಸುತ್ತಲು ಪ್ರಾರಂಭವಾಯಿತಲ್ಲ, ಆ ಭೂಮಿಯ ತುಣುಕೇ ಚಂದ್ರ ಎಂಬುದು ವೈಜ್ಞಾನಿಕ ಸತ್ಯವಾಗಿದೆ.    ಹೀಗಾಗಿ ನಮ್ಮಂತೆಯೇ ಈ ಚಂದ್ರನೂ ಈ ಭೂಮಿಯ ತನೂಭವನೇ.  ಇದರಿಂದಾಗಿ ನಮಗೂ ಚಂದ್ರನಿಗೂ ಇರುವ ಮೊದಲ ಸಂಬಂಧವೆಂದರೆ ಮೃಣ್ಮಯ ಸಂಬಂಧವೇ.  ಎರಡನೆಯದಾಗಿ, ನಮಗೂ ಚಂದ್ರನಿಗೂ ಎಷ್ಟೋ ಶತಮಾನಗಳಿಂದ ಬೆಳೆದು ಬಂದ ಬೆಳುದಿಂಗಳ ಬಾಂಧವ್ಯದಿಂದ, ಆತ ನಮ್ಮ ಮನಸ್ಸಿಗೆ ಹಾಗೂ ಹೃದಯಕ್ಕೆ ತೀರಾ ಹತ್ತಿರದವನಾಗಿದ್ದಾನೆ.  ಈ ಚಂದ್ರನನ್ನು ‘ಚಂದಮಾಮಾ’ ಎಂದು ತೊದಲು ನುಡಿಯಿಂದ ಕಣ್ಣರಳಿಸಿ ಕರೆಯುತ್ತ ಬೆರಗಾಗದ ಮಗುವಿಲ್ಲ : ಚಂದ್ರನ ಚೆಲುವಿಗೆ ಹಾಗೂ ಬೆಳುದಿಂಗಳ ಮೋಡಿಗೆ ಮರುಳಾಗದ ಕವಿ ಇಲ್ಲ.

ಹಗಲು ಸೂರ್ಯನ ತೇಜಸ್ಸು, ಇರುಳು ಚಂದ್ರನ ಕಾಂತಿ ಈ ನೆಲದ ಬದುಕನ್ನು ಕಾಯ್ದುಕೊಂಡು ಬಂದಿವೆ.  ಈ ಎರಡೂ ಶತಶತಮಾನಗಳಿಂದ ಜನದ ಗೌರವದ, ವಿಸ್ಮಯದ, ಆರಾಧನೆಯ, ಪ್ರಶಂಸೆಯ ಮೂರ್ತಿಗಳಾಗಿವೆ.  ನಿಸರ್ಗದ ದೃಶ್ಯಾದೃಶ್ಯ ಶಕ್ತಿಗಳನ್ನು ಕುರಿತು ಮೊಟ್ಟಮೊದಲು ಅವುಗಳನ್ನು ವಿವಿಧ ದೈವತಗಳನ್ನಾಗಿ ಕಲ್ಪಿಸಿಕೊಂಡು, ಸ್ತುತಿಸಿದ ಹಾಗೂ ವರ್ಣಿಸಿದ ಪ್ರಾಚೀನ ವೇದಕಾಲೀನ ಋಷಿಗಳ ಸೂಕ್ತಿಗಳಲ್ಲಿ ಇಂದ್ರ, ಅಗ್ನಿ, ವರುಣ, ಉಷಸ್, ಸೂರ್ಯ, ಪೂಷನ್ ಇವರುಗಳ ಪ್ರಸ್ತಾಪವಿದ್ದರೂ, ಯಾಕೋ ಏನೋ ಚಂದ್ರನನ್ನು ಕುರಿತ ಯಾವ ಒಂದು ಸೂಕ್ತವೂ ಇಲ್ಲವೆನ್ನುವುದು ಸ್ವಾರಸ್ಯದ ಸಂಗತಿಯಾಗಿದೆ.  ನಿಸರ್ಗದ ಮಳೆ-ಗಾಳಿ-ಗುಡುಗು-ಮಿಂಚು-ಸೂರ್ಯ ಇಂಥವು ಅವರ ಗಮನವನ್ನು ಸೆಳೆದಂತೆ, ಚಂದ್ರ ಅವರ ಮನಸ್ಸನ್ನು ಯಾಕೆ ಸೂರೆಗೊಳ್ಳಲಿಲ್ಲವೋ ತಿಳಿಯದು.  ಆದರೆ ಚಂದ್ರ ನಿಜವಾದ ಸ್ಥಾನವನ್ನು ಪಡೆದುಕೊಡದ್ದು, ಮುಂದೆ ರಚಿತವಾದ ಕಾವ್ಯಗಳಲ್ಲಿಯೇ – ಅದರಲ್ಲೂ ವಾಲ್ಮೀಕಿ ರಾಮಾಯಣದಲ್ಲಿ ಬರುವ ಚಂದ್ರೋದಯ ವರ್ಣನೆಯ ನಂತರವೇ ಎಂದು ಕಾಣುತ್ತದೆ.  ಆದರೆ ಋಗ್ವೇದ ಸಂಹಿತೆಯಲ್ಲಿ ಬರುವ ‘ಪುರುಷಸೂಕ್ತ’ದಲ್ಲಿ ಅಮೂರ್ತವಾದ ಆ ಪರಬ್ರಹ್ಮವನ್ನು, ಮೂರ್ತವಾದ ಸೃಷ್ಟಿಶಕ್ತಿಯ ಪ್ರತಿನಿಧಿಯಾಗಿ ಪರಿಭಾವಿಸಿದ ವಿರಾಟ್ ಪುರುಷನ ವರ್ಣನೆಯನ್ನು ಕುರಿತ ಸೂಕ್ತದಲ್ಲಿ,

ಚಂದ್ರಮಾ ಮನಸೋ ಜಾತಃ | ಚಕ್ಷೋಃ ಸೂರ್ಯೋ ಅಜಾಯತ
ಮುಖಾದಿಂದ್ರಾಗ್ನಿಶ್ಚ
| ಪ್ರಾಣಾದ್ವಯುರಜಾಯತ (೧೪)

‘ಈ ವಿರಾಟ ಪುರುಷನ ಮನಸ್ಸಿನಿಂದ ಚಂದ್ರನೂ, ಕಣ್ಣಿನಿಂದ ಸೂರ್ಯನೂ, ಬಾಯಿಂದ ಇಂದ್ರಾಗ್ನಿಗಳೂ, ಪ್ರಾಣದಿಂದ ವಾಯುವೂ ಉತ್ಪನ್ನರಾದರು’ – ಎಂಬ ಉಕ್ತಿಯಿದೆ.  ಇಲ್ಲಿ ಚಂದ್ರನು ವಿರಾಟ್ ಪುರುಷನ ಮನಸ್ಸಿನಿಂದ ಹುಟ್ಟಿ ಬಂದವನು ಎಂಬ ಕಲ್ಪನೆ ತುಂಬಾ ಸೊಗಸಾಗಿದೆ.  ಭಗವಂತನ ಮನಸ್ಸಿನ ಸ್ವರೂಪವನ್ನು ಚಂದ್ರನೊಂದಿಗೆ ಸಮೀಕರಿಸುವ ಬಗೆ ಪರಿಭಾವನಾಯೋಗ್ಯವಾಗಿದೆ.  ಸೂರ್ಯ ತನ್ನ ಪ್ರಖರ ತೇಜಸ್ಸಿನಿಂದ ಭಯದ ಗೌರವದ ಆರಾಧನೆಯ ಮೂರ್ತಿಯಾದರೆ, ಚಂದ್ರ ತನ್ನ ಮನೋಹರವಾದ ಕಾಂತಿಯಿಂದ, ವಿಸ್ಮಯದ, ಪ್ರಶಂಸೆಯ ಹಾಗೂ ಹಾಡಿನ ಸ್ಫೂರ್ತಿಯ ಸೆಲೆಯಾಗಿದ್ದಾನೆ. ಶ್ರೀಸಾಮಾನ್ಯರ ಪರಂಪರೆಯಲ್ಲೂ ಸೂರ್ಯನಲ್ಲಿ ಕಾಣದ ಅನೇಕ ಏರಿಳಿತಗಳೂ, ಹುಣ್ಣಿಮೆ ಅಮಾವಾಸ್ಯೆಗಳಿಗೆ ಅನುಸಾರವಾಗಿ ಅದು ತಾಳುವ ವೃದ್ಧಿ – ಕ್ಷಯಗಳೂ, ಚಂದ್ರನನ್ನು ಕುರಿತ ವಿವಿಧ ಕಲ್ಪನೆಗಳಿಗೆ, ನಂಬಿಕೆಗಳಿಗೆ ಕಾರಣವಾಗಿದೆ.  ಸೂರ್ಯನ ಬೆಳಕು ಈ ಲೋಕವಾಸ್ತವವನ್ನು ಯಥಾಸ್ವರೂಪದಲ್ಲಿ ಅನಾವರಣಗೊಳಿಸಿದರೆ, ತನ್ನ ಏರಿಳಿತಗಳಿಗೆ ಅನುಸಾರವಾಗಿ ಬದಲಾಗುವ ಚಂದ್ರನ ಬೆಳಕು ಒಂದು ಬಗೆಯ ಮಾಟಗಾರಿಕೆಯನ್ನೂ, ಸಮ್ಮೋಹಕತೆಯನ್ನೂ ಕವಿಯಿಸುತ್ತದೆ.  ಈ ಮಾಟಗಾರಿಕೆ ಮತ್ತು ಸಮ್ಮೋಹಕತೆಗಳು ಕವಿತೆಗೆ ಹತ್ತಿರವಾದದ್ದು, ಅಷ್ಟೇ ಅಲ್ಲ, ಪ್ರಖರವಾದ ಸೂರ್ಯಾತಪವನ್ನು ರಮ್ಯವಾದ ಬೆಳುದಿಂಗಳನ್ನಾಗಿ ಪರಿವರ್ತಿಸುವ ಚಂದ್ರಮಂಡಲದ ಈ ಕಾರ್ಯ, ಒಂದು ರೀತಿಯಲ್ಲಿ ಕವಿಯ ಪ್ರತಿಭಾವ್ಯಾಪಾರಕ್ಕೆ ಸಂವಾದಿಯಾಗಿದೆ.  ಕವಿಪ್ರತಿಭೆಯ ಮುಖ್ಯಕಾರ್ಯ, ಈ ಲೋಕವನ್ನು ಅದು ಇದ್ದಂತೆಯೆ ಅನುಕರಿಸುವುದಲ್ಲ, ಅದನ್ನು ಯಥಾ ಸ್ವರೂಪದಲ್ಲಿ ತೋರಿಸುವುದೂ ಅಲ್ಲ;  ಅದು ಲೋಕಾನುಭವಗಳನ್ನು ಒಂದು ನಿರ್ದಿಷ್ಟ ಮನೋಧರ್ಮದ ಮೂಲಕ ಗ್ರಹಿಸಿ, ಅದು ಬೇರೊಂದೆಂಬಂತೆ ಭಾಸವಾಗುವ ಹಾಗೆ ಪರಿವರ್ತಿಸುವುದು.  ಮಹಾ ದಾರ್ಶನಿಕನೂ, ಆಲಂಕಾರಿಕನೂ ಆದ  ಆನಂದವರ್ಧನನು ತನ್ನ ‘ಧನ್ಯಾಲೋಕ’ದಲ್ಲಿ ಹೇಳುತ್ತಾನೆ:  ‘ಅಪಾರವಾದ ಕಾವ್ಯಸಂಸಾರದಲ್ಲಿ ಕವಿಯೇ ಅದರ ಪ್ರಜಾಪತಿ ಅಥವಾ ಸೃಷ್ಟಿಕರ್ತ.  ಅವನು ತನಗೆ ಹೇಗೆ ರುಚಿಸುವುದೋ ಹಾಗೆ, ಈ ವಿಶ್ವವನ್ನು ಪರಿವರ್ತಿಸುತ್ತಾನೆ.’  ಒಂದರ್ಥದಲ್ಲಿ ಚಂದ್ರನೇ ಕಲ್ಪನೆಯ ಅಧಿದೇವತೆ ಎಂದು ಹೇಳಿದರೂ ನಡೆಯುತ್ತದೆ.  ಆದರೆ ಭಾರತೀಯ ಕಾವ್ಯಮೀಮಾಂಸೆಯಲ್ಲಿ ಈ ಕುರಿತ ಪ್ರಸ್ತಾಪವಿಲ್ಲ.  (ಆ ಕಾಲಕ್ಕೆ ಸೂರ್ಯಾತಪವೇ ಚಂದ್ರನ ಮೂಲಕ ಬೆಳುದಿಂಗಳಾಗಿ ಪರಿವರ್ತಿತವಾಗುವುದೆಂಬ ಸಂಗತಿ ಬಹುಶಃ ತಿಳಿದಿರಲಿಕ್ಕಿಲ್ಲ.)  ಆದರೂ ಚಂದ್ರನು ರಸಾಧಿಪತಿಯೆಂದೂ, ಸಸ್ಯಾಧಿಪತಿ ಎಂದೂ ನಮ್ಮ ಪರಂಪರೆಯಲ್ಲಿ ಭಾವಿತವಾಗಿರುವುದರಲ್ಲಿ ಚಂದ್ರನಿಗೂ ಸೃಜನಶೀಲತೆಗೂ ಇರುವ ಸಂಬಂಧ ಸೂಚಿತವಾಗಿದೆ.  ಆದರೆ ಒಂದು ಮಾತಂತೂ ನಿಜ : ಕವಿಗಳ ಉಪಮಾ ಪ್ರಪಂಚದಲ್ಲಿ ಚಂದ್ರನಿಗಿರುವ ಸ್ಥಾನ ಮಾತ್ರ ಬಹುಶಃ ಎಲ್ಲ ದೇಶಗಳ ಕಾವ್ಯಗಳಲ್ಲೂ ವಿಶೇಷವಾದದ್ದು.  ‘ಚಂದ್ರಮುಖಿ’ಯಂಥ ಅಲಂಕಾರಗಳು ಈ ದೇಶದ ಕಾವ್ಯಪರಂಪರೆಯಲ್ಲಿ ಅಜೀರ್ಣವಾಗುವಷ್ಟರಮಟ್ಟಿಗೆ ಇಡಿಕಿರಿದಿವೆ – ಅದೂ ಹೆಣ್ಣಿನ ಮೈಸಿರಿಯ ಬಣ್ಣನೆಯಲ್ಲಿ.

ಬಹು ಹಿಂದಿನಿಂದಲೂ ಚಂದ್ರನನ್ನು ಕುರಿತು ವಿವಿಧ ದೇಶಗಳ, ಜನಾಂಗಗಳ ಹಾಗೂ ಸಂಸ್ಕೃತಿಯೊಳಗಣ ಮನಸ್ಸು ಅನೇಕ ಬಗೆಯ ಕಲ್ಪನೆಗಳನ್ನು, ಐತಿಹ್ಯಗಳನ್ನು, ನಂಬಿಕೆಗಳನ್ನು ಬೆಳೆಯಿಸಿಕೊಂಡು, ತಮ್ಮದೇ ಆದ ಪುರಾಣಗಳನ್ನು ಕಟ್ಟಿಕೊಂಡಿವೆ.  ಈ ಪುರಾಣಗಳು, ವಿಜ್ಞಾನಪೂರ್ವಕಾಲದ ಜನಮನಸ್ಸು, ಈ ಲೋಕದ ವಾಸ್ತವಗಳನ್ನೂ, ವಿಸ್ಮಯಗಳನ್ನೂ ತನಗೆ ಸಮ್ಮತವಾಗುವ ರೀತಿಯಲ್ಲಿ ಅರ್ಥೈಸಿಕೊಳ್ಳುತ್ತಿದ್ದ ವಿಧಾನಗಳಲ್ಲಿ ಒಂದು.  ಚಂದ್ರಗ್ರಹಣದ ವಾಸ್ತವವನ್ನು ರಾಹು-ಕೇತುಗಳ ಪುರಾಣವನ್ನಾಗಿ ಕಲ್ಪಿಸಿಕೊಂಡದ್ದು ಇದಕ್ಕೆ ಒಂದು ನಿದರ್ಶನ.  ಭಾರತೀಯ ಪುರಾಣಗಳ ಪ್ರಕಾರ ಚಂದ್ರ ಗಂಡು, ಪಶ್ಚಿಮದ ಪುರಾಣಗಳ ಪ್ರಕಾರ ಚಂದ್ರ ಹೆಣ್ಣು.  ಸುರಾಸುರರು ಅಮೃತಕ್ಕಾಗಿ ಕ್ಷೀರಸಾಗರವನ್ನು ಮಥಿಸಿದಾಗ ಉದ್ಭವವಾದ ವಸ್ತು ಚಂದ್ರ; ಈ ಚಂದ್ರನನ್ನು ತೆಗೆದುಕೊಂಡು ಶಿವನು ತನ್ನ ಜಟಾಜೂಟದಲ್ಲಿ ಒಂದು ಅಲಂಕಾರವೆಂಬಂತೆ ಧರಿಸಿಕೊಂಡು ‘ಚಂದ್ರಶೇಖರ’ನಾದನೆಂಬುದು ಪರಿಭಾವಿಸಿದಷ್ಟೂ ರಮ್ಯವಾದ ಒಂದು ಕಥೆಯಾಗಿದೆ (ವಿಷ್ಣುಪುರಾಣ ೨-೧.೯).  ಮತ್ತೊಂದು ಪುರಾಣದ ಪ್ರಕಾರ, ಚಂದ್ರನು ಅತ್ರಿಯ ಮಗ.  ಈತ ಬೃಹಸ್ಪತ್ಯಾಚಾರ್ಯರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ, ಬೃಹಸ್ಪತಿಯ ಪತ್ನಿಯಾದ ತಾರೆಗೂ ಚಂದ್ರನಿಗೂ ಪ್ರಣಯವು ಬೆಳೆದು ಆತ ತಾರೆಯನ್ನಪಹರಿಸಿ ಅವಳನ್ನು ಮದುವೆ ಮಾಡಿಕೊಂಡ.  ಹೀಗೆಂದು ಹರಿವಂಶ, ಪದ್ಮಪುರಾಣ, ಬ್ರಹ್ಮಪುರಾಣ, ವಾಯುಪುರಾಣಗಳಲ್ಲಿ ಹೇಳಲಾಗಿದೆ.  ಅಷ್ಟೇ ಅಲ್ಲ, ಲಿಂಗಪುರಾಣದ ಪ್ರಕಾರ ಚಂದ್ರನು ದಕ್ಷಬ್ರಹ್ಮನ ಪುತ್ರಿಯರಲ್ಲಿ ಅಶ್ವಿನೀ ಮೊದಲಾದ ಇಪ್ಪತ್ತೇಳು ಮಂದಿಯನ್ನು ಮದುವೆ ಮಾಡಿಕೊಂಡ.  ಆದರೆ ಅವನಿಗೆ ರೋಹಿಣಿಯೆಂಬುವಳಲ್ಲಿ ಮಾತ್ರ ವಿಶೇಷ ಆಸಕ್ತಿ.  ಹೀಗೆ ಇನ್ನೂ ಬೇರೆ ಬೇರೆಯ ಕತೆಗಳಿವೆ.  ಈ ಪುರಾಣ ಕತೆಗಳೆಲ್ಲ ಲೋಕವಾಸ್ತವಗಳನ್ನು ಪ್ರಾಚೀನ ಮನಸ್ಸು ಗ್ರಹಿಸುವ ಸಾಂಕೇತಿಕ ರೂಪಗಳೆಂದು ಭಾವಿಸುವುದು ಸರಿಯಾದದ್ದು.  ಗ್ರೀಕ್ ಪುರಾಣಗಳ ಪ್ರಕಾರ ‘ಅರ್ತಿಮೀಸ್’ ಎಂಬಾಕೆ ಚಂದ್ರನಿಗೆ ಸಂಬಂಧಿಸಿದ, ಬೇಟೆಯ ರಕ್ಷಕ ದೇವತೆ.  ಇಟಲಿಯ ಡಯಾನ ದೇವತೆಯನ್ನು ಜನರು ಚಂದ್ರನೊಡನೆ ಸಮೀಕರಿಸುತ್ತಾರೆ.  ಅಷ್ಟೇ ಅಲ್ಲ, ಆಕೆ ಸಂತಾನದೇವತೆಯೆಂದು ಪೂಜಿತಳಾಗಿದ್ದಾಳೆ.  ಚೀನಾದೇಶದ ಜನರ ಪಾಲಿಗೆ ಚಂದ್ರ ಪ್ರೇಮದೇವತೆ.  (ಇನ್ನಷ್ಟು ವಿರಗಳಿಗೆ ನೋಡಿ : ಅಗ್ರಹಾರ ಕೃಷ್ಣಮೂರ್ತಿ : ಬೆಳ್ದಿಂಗಳಪ್ಪನ ಪೂಜೆ : ೧೯೭೬ : ೧೯೭೯) ಒಟ್ಟಾರೆಯಾಗಿ ಈ ಜಗತ್ತಿನ ಎಲ್ಲ ದೇಶಗಳ ಜನರ ಬದುಕಿನಲ್ಲಿ ಚಂದ್ರನು ಹಾಸುಹೊಕ್ಕಾಗಿದ್ದಾನೆ.  ರಾಜಾಧಿರಾಜರಿಂದ ಹಿಡಿದು ಗ್ರಾಮೀಣ ಜಾನಪದರವರೆಗೆ, ಮುಗ್ಧವಾದ ಮಗುವಿನಿಂದ ಹಿಡಿದು ಪ್ರತಿಭಾವಂತರಾದ ಕವಿಗಳವರೆಗೆ, ಚಂದ್ರನೊಂದಿಗೆ ತಮ್ಮನ್ನು ಸಂಬಂಧಿಸಿಕೊಳ್ಳದವರೇ ಇಲ್ಲ.  ಚಂದ್ರನನ್ನು ತಮ್ಮ ವಂಶದ ಮೂಲಪುರುಷನೆಂದು ಗುರುತಿಸಿಕೊಂಡ ಎಷ್ಟೋ ರಾಜವಂಶಗಳಿವೆ.  ಚಂದ್ರನ ಬೆಳುದಿಂಗಳಲ್ಲಿ ವಿಹರಿಸುವುದು ಜೀವನಸಂತೋಷದ ಒಂದು ಭಾಗವೆಂದು ಭಾವಿಸುತ್ತ ‘ಕೌಮುದೀ ಮಹೋತ್ಸವ’ಗಳನ್ನು ಏರ್ಪಡಿಸುತ್ತ, ನಾಗರಿಕ ಜೀವನ ಬೆಳುದಿಂಗಳ ಆಹ್ಲಾದವನ್ನು ವೈಭವೀಕರಿಸಿದರೆ, ಗ್ರಾಮೀಣ ಪರಿಸರದ ಸಾಮಾನ್ಯಜನ, ಬನದಲ್ಲಿ ಬೆಳದಿಂಗಳೂಟ ಮಾಡುತ್ತ, ಕೋಲಾಟವಾಡಿ ಕುಣಿಯುತ್ತ, ತಮ್ಮ ಮನೆಗಳ ಮುಂದೆ ವಿವಿಧ ಚಿತ್ತಾರಗಳನ್ನು ಬರೆದು ‘ಬೆಳ್ದಿಂಗಳಪ್ಪ’ನ ಪೂಜೆ ಮಾಡುತ್ತಾ – ಹಾಡುಗಳನ್ನು ಕಟ್ಟಿ ಹಾಡುತ್ತ ತಮಗೂ ನಿಸರ್ಗಕ್ಕೂ ಇರುವ ಮಧುರ ಬಾಂಧವ್ಯವನ್ನು ನಿರಂತರವಾಗಿ ಕಾಯ್ದುಕೊಂಡು ಬರುವ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದೆ.  ‘ಬಾರಯ್ಯ ಬೆಳುದಿಂಗಳೇ, ನಮ್ಮೂರ ಹಾಲಿನಂಥ ಬೆಳುದಿಂಗಳೇ’ ಎಂದು ಈ ನಿಸರ್ಗದ ಸಹಜ ಸೌಂದರ್ಯದೊಂದಿಗೆ ತನಗಿರುವ ಆತ್ಮೀಯತೆಯನ್ನು ತೋಡಿಕೊಂಡಿದೆ.

ಈಗ ಕಾಲ ಬದಲಾಗಿದೆ.  ನಾಗರಿಕತೆಯಲ್ಲಿ ನಾವು ಮುಂದುವರಿದಂತೆ ನಮಗೂ ನಿಸರ್ಗಕ್ಕೂ ನಡುವಣ ಅಂತರ ಹೆಚ್ಚಾಗುತ್ತಿದೆ.  ಅಭಿವೃದ್ಧಿಶೀಲತೆಯ ಹೆಸರಿನಲ್ಲಿ ನಮ್ಮ ಕಣ್ಣೆದುರಿಗೇ ನಾವು ಪರಿಸರ ನಾಶದ ಮಹಾದುರಂತಗಳನ್ನು ಕಾಣುತ್ತಿದ್ದೇವೆ.  ನಮ್ಮ ಜೀವಧಾತುವಾದ ಹಸಿರು ಕಣ್ಮರೆಯಾಗುತ್ತಿದೆ; ಯಂತ್ರೋದ್ಯಮಗಳ ಆಧಿಕ್ಯದಿಂದ ನಮ್ಮ ನದೀಜಲಗಳು ಕಲ್ಮಶಗೊಳ್ಳುತ್ತಿವೆ; ಉಸಿರಾಡುವ ಗಾಳಿ, ತಿನ್ನುವ ಅನ್ನ – ಎಲ್ಲವೂ ಮಲಿನಗೊಳ್ಳುತ್ತಿವೆ.  ನಗರೀಕರಣದ, ಯಾಂತ್ರೀಕರಣದ ಭರಾಟೆಗಳಲ್ಲಿ ನಾವು ಸುತ್ತಣ ನಿಸರ್ಗದ ಯಾವ ಚೆಲುವನ್ನೂ ಕಾಣಲಾರದ ಪ್ರಾಯೋಜನಿಕ ಬುದ್ಧಿಯ ಬಂದಿಗಳಾಗಿದ್ದೇವೆ.  ‘ಬಾರಯ್ಯ ಬೆಳುದಿಂಗಳೇ, ನಮ್ಮೂರ ಹಾಲಿನಂಥ ಬೆಳುದಿಂಗಳೇ’ ಎಂಬ ಹಾಡು, ಕೇವಲ ಧ್ವನಿಮುದ್ರಕದ ಮೂಲಕ ಮೊಳಗುತ್ತ, ಆ ಹಾಡಿನ ಅರ್ಥ ಈ ಹೊತ್ತಿನಲ್ಲಿ ಕೇವಲ ಒಂದು ಅಣಕದಂತೆ ಭಾಸವಾಗುತ್ತಿದೆ.  ಯಾಕೆಂದರೆ ಈಗ ಆ ಹೊತ್ತಿನ ಬೆಳುದಿಂಗಳೂ ಇಲ್ಲ, ಆ ಹೊತ್ತಿನ ಹಾಲೂ ಇಲ್ಲ! ಯಾವುದೂ ತನ್ನ ಮೊದಲಿನ ಶುದ್ಧ ರೂಪದಲ್ಲಿ ದೊರೆಯಲಾಗದ ಒಂದು ‘ಮಾಲಿನ್ಯ ಯುಗ’ವನ್ನು ನಾವು ಪ್ರವೇಶಿಸುತ್ತಿದ್ದೇವೆ.  ಈ ಮಾಲಿನ್ಯ ಕೇವಲ ಹೊರಗಿನದು ಮಾತ್ರವಲ್ಲ, ಒಳಗಿನದೂ.

ಇಂಥ ಒಂದು ಪರಿಸ್ಥಿತಿಯಲ್ಲಿ ನಾವು ಮತ್ತೆ ನಿಸರ್ಗದ ಸಹಜವಾದ ಚೆಲುವುಗಳೊಂದಿಗೆ ನಮ್ಮನ್ನು ನಾವು ಬೆಸೆದುಕೊಂಡು ನಮ್ಮನ್ನು ನಾವು ನವೀಕರಿಸಿಕೊಳ್ಳಬೇಕಾಗಿದೆ ಹಾಗೂ ಪಾರಂಪರಿಕ ಸ್ಮೃತಿಗಳೊಂದಿಗೆ ನಮ್ಮನ್ನು ಕೂಡಿಸಿಕೊಳ್ಳಬೇಕಾಗಿದೆ.  ಈ ಒಂದು ಪ್ರಕ್ರಿಯೆಯ ಸಂಕೇತವಾಗಿ ಪ್ರಾರಂಭವಾಗಿದೆ, ‘ಕಾವ್ಯಪೂರ್ಣಿಮಾ’ ಎಂಬ ಹೆಸರಿನ ‘ಬೆಳುದಿಂಗಳ ಕವಿಗೋಷ್ಠಿ’. ಇದರ ಕನಸು ಕಂಡವರೂ, ಇದರ ರೂವಾರಿಗಳೂ ಸಿರಿಗೆರೆಯ ತರಳಬಾಳು ಬೃಹನ್ಮಠದ ಶ್ರೀ ಜಗದ್ಗುರುಗಳಾದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.  ಕಳೆದ ಹಲವು ವರ್ಷಗಳಿಂದಲೂ ಬೆಂಗಳೂರಿನ ತರಳಬಾಳು ಕೇಂದ್ರದ ಮೇಲುಪ್ಪರಿಗೆಯ ಮೇಲೆ, ವೈಶಾಖ ಶುಕ್ಲ ಪೂರ್ಣಿಮೆಯ ಬೆಳ್ದಿಂಗಳಿರುಳಿನಲ್ಲಿ ಕನ್ನಡದ ಪ್ರಾತಿನಿಧಿಕ ಕವಿಗಳನ್ನು ಕೂಡಿಸಿ, ಕಿಕ್ಕಿರಿದ ಸಹೃದಯ ಶೋತೃಗಳೆದುರಿಗೆ ‘ಬೆಳುದಿಂಗಳ ಕವಿಗೋಷ್ಠಿ’ಯನ್ನು ಯಶಸ್ವಿಯಾಗಿ ನಡೆಯಿಸಿಕೊಂಡು ಬರುತ್ತಿದ್ದಾರೆ.  ಈ ಕವಿಸಮ್ಮೇಳನ, ಅದರಲ್ಲಿ ಪಾಲುಗೊಂಡ ಕವಿಗಳಿಗೆ ಮತ್ತು ಕಿವಿಗಳಿಗೆ ಒಂದು ಮರೆಯಲಾರದ ಅನುಭವವಾಗಿ ಅವರ ನೆನಪಿನಲ್ಲಿ ಅನುರಣಿಸುವಂಥ ಒಂದು ಘಟನೆಯಾಗಿದೆ.

ಹೀಗೆ ಪ್ರತಿವರ್ಷವೂ ಬೆಳುದಿಂಗಳ ಕವಿಗೋಷ್ಠಿಯಲ್ಲಿ ಮಂಡಿತವಾಗುವ ಕವನಗಳು, ಅನಂತರ ‘ಕಾವ್ಯಪೂರ್ಣಿಮೆ’ ಎಂಬ ಹೆಸರಿನ ಸಂಕಲನವಾಗಿ ಪ್ರಕಟಗೊಳ್ಳುವುದು ಅಗತ್ಯ ಎಂಬ ಯೋಜನೆಯೊಂದು, ಕಳೆದ ಸಲ ಪ್ರಸ್ತಾಪಿತವಾದಾಗ, ನಾನೊಂದು ಸೂಚನೆಯನ್ನು ಪೂಜ್ಯ ಸ್ವಾಮಿಗಳ ಎದುರು ಮಂಡಿಸಿದೆ.  ‘ಕಾವ್ಯಪೂರ್ಣಿಮಾ’ ಎಂಬ ಹೆಸರಿನಲ್ಲಿ ಆಯಾ ವರ್ಷದ ಬೆಳುದಿಂಗಳ ಕವಿಗೋಷ್ಠಿಯ ಕವಿತೆಗಳನ್ನು ಸಂಕಲನವೊಂದರಲ್ಲಿ ಪ್ರಕಟಿಸುವುದರ ಜತೆಗೆ, ನಮ್ಮ ಕನ್ನಡ ಕವಿಗಳು ಚಂದ್ರನನ್ನು ಕುರಿತು, ಬೆಳುದಿಂಗಳನ್ನು ಕುರಿತು ಹೇಗೆ ಕಾವ್ಯ ರೂಪದಲ್ಲಿ ಸ್ಪಂದಿಸಿದ್ದಾರೆಂಬುದನ್ನು ದಾಖಲಿಸುವ ಪ್ರತ್ಯೇಕವಾದ ಸಂಕಲವೊಂದನ್ನು ಸಿದ್ಧಪಡಿಸಿ ಪ್ರಕಟಿಸುವುದಾದರೆ ಚೆನ್ನಾಗಿರುತ್ತದೆ – ಎಂದೆ.  ಪೂಜ್ಯ ಸ್ವಾಮಿಗಳ ಕಣ್ಣರಳಿದವು, ಮುಖದಲ್ಲಿ ಮಂದಸ್ಮಿತ ಕಾಣಿಸಿಕೊಂಡಿತು.  “ಹಾಗಾದರೆ ನೀವೇ ಇದನ್ನು ಮಾಡಿಕೊಡಿ.  ಜತೆಗೆ ನಮ್ಮ ಕಡೆಯಿಂದಲೂ ಒಬ್ಬರಿರುತ್ತಾರೆ – ನಿಮ್ಮ ಸಹಾಯಕ್ಕೆ” ಎಂದರು.  ಅದರ ಪರಿಣಾಮವೇ – ಈ ಸಂಕಲನ.

ಈ ಸಂಗ್ರಹದಲ್ಲಿ ಪಂಪನಿಂದ ಮೊದಲ್ಗೊಂಡು ಈ ಹೊತ್ತಿನ ಹೊಸಕಾಲದ ತರುಣ ಕವಿಗಳವರೆಗೂ ಚಂದ್ರನನ್ನು, ಚಂದ್ರಿಕೆಯನ್ನು ಕುರಿತ ಪ್ರಾತಿನಿಧಿಕ ಕವಿತೆಗಳಿವೆ.  ಒಂದು ಸಾವಿರ ವರ್ಷಗಳ ಕಾಲಮಾನದಲ್ಲಿ ನಮ್ಮ ಕನ್ನಡ ಕವಿಗಳು ಚಂದ್ರನಿಗೆ ಹೇಗೆ ಸ್ಪಂದಿಸಿದ್ದಾರೆ ಎನ್ನುವ ಒಂದು ಚರಿತ್ರೆಯನ್ನೇ ಇಲ್ಲಿ ಗುರುತಿಸಬಹುದು.  ಅಷ್ಟೇ ಅಲ್ಲ, ಚಂದ್ರನ ಜತೆಗೆ ಹೆಣೆದುಕೊಂಡುಬಂದ ಪುರಾಣಸ್ಮರಣೆಗಳೂ, ನಂಬಿಕೆಗಳೂ ಹಾಗೂ ಆಚರಣೆಗಳೂ ಆ ಚರಿತ್ರೆಯಲ್ಲಿ ಕಾಣಿಸಿಕೊಂಡಿವೆ.  ಈ ಸಂಕಲನದ ಕವಿತೆಗಳನ್ನು ಮೂರು ವಿಭಾಗವಾಗಿ ವಿಂಗಡಿಸಲಾಗಿದೆ.  ಮೊದಲನೆಯದು ಮಾರ್ಗ ಹಾಗೂ ದೇಸಿ ಪರಂಪರೆಯ ಕವಿಗಳು ಚಂದ್ರ ಮತ್ತು ಚಂದ್ರಿಕೆಯನ್ನು ಕುರಿತು ಬರೆದ ಪದ್ಯಗಳು.  ಎರಡನೆಯದು, ಹೊಸಗನ್ನಡ ಕಾವ್ಯ ಸಂದರ್ಭದ ಕವಿಗಳು ಮುಖ್ಯವಾಗಿ ಚಂದ್ರ ಮತ್ತು ಬೆಳುದಿಂಗಳನ್ನು ಕುರಿತು ಬರೆದವು; ಮೂರನೆಯದು ಅನುಬಂಧ.  ಇದರಲ್ಲಿ ಕಾವ್ಯಪೂರ್ಣಿಮಾ-೧೯೯೧ರ ಬೆಳುದಿಂಗಳ ಕವಿಗೋಷ್ಠಿಯಲ್ಲಿ ಪ್ರಸ್ತಾಪಿತವಾದ ಮಾತುಗಳು ಮತ್ತು ಕವಿಗಳು ಮಂಡಿಸಿದ ಕವಿತೆಗಳು ಇವೆ.  ಈ ವಿಭಾಗದಲ್ಲಿ ಗೋಷ್ಠಿಯಲ್ಲಿ ಕವಿಗಳು ವಾಚಿಸಿದ ಚಂದ್ರಸಂಬಂಧಿತವಲ್ಲದ ಪ್ರಕಟಿತ ಮತ್ತು ಅಪ್ರಕಟಿತ ಕವಿತೆಗಳಿವೆ.  ಈ ವಿಭಾಗಗಳಲ್ಲಿ ಮೊದಲ ವಿಭಾಗದಲ್ಲಿರುವ ಪದ್ಯಗಳು ಮುಖ್ಯವಾಗಿ ನಮ್ಮ ಪ್ರಾಚೀನ ಕನ್ನಡ ಕವಿಗಳು ವಸ್ತುನಿಷ್ಠ ಕಾವ್ಯಮಾರ್ಗಕ್ಕೆ ಸೇರಿದ ಕಥನ ಪರಂಪರೆಯ ಸಂದರ್ಭದಲ್ಲಿ ಚಂದ್ರೋದಯ ಹಾಗೂ ಬೆಳುದಿಂಗಳನ್ನು ವರ್ಣಿಸಿರುವ ಕ್ರಮವನ್ನು ಪರಿಚಯ ಮಾಡಿಕೊಟ್ಟರೆ, ಎರಡನೆಯ ವಿಭಾಗದ ಕವಿತೆಗಳು, ನಮ್ಮ ಹೊಸಗನ್ನಡ ಕವಿಗಳು ವ್ಯಕ್ತಿನಿಷ್ಠ ಕಾವ್ಯ ಪರಂಪರೆಯ ಸಂದರ್ಭದಲ್ಲಿ ತಾವು ವಿವಿಧ ನಿಲುವುಗಳಲ್ಲಿ ನಿಸರ್ಗದ ಮನಮೋಹಕವಾದ ‘ಚಂದ್ರ’ನೆಂಬ ವಿಸ್ಮಯಕ್ಕೆ ಸ್ಪಂದಿಸಿದ ಕ್ರಮವನ್ನು ಪರಿಚಯ ಮಾಡಿಕೊಡುತ್ತವೆ.  ಪ್ರಾಚೀನ ಕನ್ನಡ ಕವಿಗಳಲ್ಲಿ ‘ಚಂದ್ರೋದಯ’, ಸೂರ್ಯಾಸ್ತಮಾನದ ನಂತರದ ಕಾಲಮಾನದ ಘಟನೆಗಳನ್ನು ಕಥೆಯ ಅಗತ್ಯಕ್ಕನುಸಾರವಾಗಿ ವರ್ಣಿಸುವ ಒಂದು ಸಂದರ್ಭವಾಗಿದೆ.  ಕಾವ್ಯದ ಕಥಾನಾಯಕನು ಬೆಳುದಿಂಗಳಿರುಳಿನಲ್ಲಿ ವಿಹರಿಸಿದನೆಂಬಂತೆ ಚಿತ್ರಿಸುವ ಈ ಭಾಗ, ಅಂದಿನ ಕಾವ್ಯ ಸಂಪ್ರದಾಯದ ಒಂದು ಅನಿವಾರ್ಯವಾದ ಅಂಗವೂ ಹೌದು.  ‘ಚಂದ್ರಿಕಾ ವಿಹಾರವರ್ಣನಂ’ ಎಂದುಕರೆಯಲಾಗುವ ಕಥನದ ಈ ಚೌಕಟ್ಟಿನಲ್ಲಿ, ನಾಯಕನ ಚಂದ್ರಿಕಾವಿಹಾರ, ಶೃಂಗಾರ ಪ್ರಪಂಚದ ವಿಸ್ತಾರವನ್ನು ತೆರೆಯಲು ಕವಿಗೊಂದು ಅವಕಾಶವನ್ನು ಕಲ್ಪಿಸಿಕೊಡುತ್ತದೆ.  ಚಂದ್ರನು ಪ್ರೇಮದ ಹಾಗೂ ಸೌಂದರ್ಯದ ಅಧಿದೇವತೆ ಎಂಬ ಕಲ್ಪನೆ ಈ ಸಂದರ್ಭದಲ್ಲಿ ಸಾರ್ಥಕವಾಗುತ್ತದೆ.   ಇಂಥ ಒಂದು ಸಂದರ್ಭಕ್ಕಾಗಿ ಕವಿ ಚಿತ್ರಿಸುವ ಚಂದ್ರೋದಯದ ಹಾಗೂ ಬೆಳುದಿಂಗಳ ವರ್ಣನೆ, ಎಷ್ಟೋ ವೇಳೆ ಕವಿಗಿರುವ ನಿಸರ್ಗ ಪ್ರೀತಿಯ ತುರ್ತಿನಿಂದ ಹುಟ್ಟಿಕೊಂಡದ್ದು ಎಂದು ಅನ್ನಿಸುವುದಿಲ್ಲ.  ಹಾಗೆಂದರೆ ಕವಿ ಬೇರೆ ಬೇರೆಯ ಕಾಲಮಾನಗಳಲ್ಲಿ ನಿಜವಾದ ನಿಸರ್ಗಪ್ರೀತಿಯ ತುರ್ತಿನಿಂದ ಪಡೆದ ಚಂದ್ರಾನುಭವದ ವರ್ಣನೆಗಳನ್ನು ತನ್ನ ಕಾವ್ಯದ ಕಥಾಸಂದರ್ಭದೊಳಗೆ ಕೂಡಿಸಿರುವ ನಿದರ್ಶನಗಳಿಲ್ಲವೆಂದೇನೂ ಅರ್ಥವಲ್ಲ.  ಅಂಥ ತೀವ್ರವಾದ ವ್ಯಕ್ತಿನಿಷ್ಠ ಸೌಂದರ್ಯಾನುಭವದ ಅಭಿವ್ಯಕ್ತಿಗಳೂ ಸಾಕಷ್ಟಿವೆ ಅನ್ನುವುದನ್ನು ಪಂಪ, ರನ್ನ, ನಾಗವರ್ಮ, ನೇಮಿಚಂದ್ರ, ಹರಿಹರ – ಇಂಥವರ ವರ್ಣನೆಗಳು ಸಮರ್ಥಿಸುತ್ತವೆ.  ಆದರೆ ‘ಚಂದ್ರಿಕಾ ವಿಹಾರವರ್ಣನಂ’ ಎಂಬುದು ಕಾವ್ಯಸಂಪ್ರದಾಯವೊಂದರ ಕಡ್ಡಾಯವಾದ ಭಾಗವೆಂಬಂತೆ, ಯಾವಾಗ ಗೃಹೀತವಾಗುತ್ತದೋ ಆಗ, ಕಥಾನಾಯಕ ನಾಯಿಕಾ ಪಾತ್ರಗಳ ಅಂದಂದಿನ ಭಾವಸ್ಥಿತಿಗೆ ಅನುಗುಣವಾಗಿ ವರ್ಣಿತವಾಗುವ ಚಂದ್ರಾನುಭವ, ಪುರಾಣಸ್ಮರಣೆಗಳ ಹಾಗೂ ಕವಿಸಮಯಾದಿಗಳ ಮಗ್ಗದೊಳಗೆ ನೇಯ್ದ ವರ್ಣ ವಸ್ತ್ರವಾಗುತ್ತದೆ.  ಆದರೆ ಹೊಸಗನ್ನಡ ಸಂದರ್ಭದ ವ್ಯಕ್ತಿನಿಷ್ಠ ಕಾವ್ಯಪರಂಪರೆಯಲ್ಲಿ ಹಿಂದಿನ ಕವಿಗಳಿಗಿಂತ ಭಿನ್ನವಾದ ಹಾಗೂ ವೈವಿಧ್ಯಮಯವಾದ ಮುಕ್ತಪ್ರತಿಭೆಯ ಅಭಿವ್ಯಕ್ತಿಗಳೇ ಮಿಗಿಲಾಗಿವೆ.  ಒಟ್ಟಾರೆಯಾಗಿ ಈ ಎಲ್ಲ ಕವನಗಳನ್ನು ಓದುತ್ತಿದ್ದರೆ, ಚಂದ್ರೋದಯಕ್ಕೆ ಚಂದ್ರಿಕೆಗೆ ಸೌಂದರ್ಯನಿಷ್ಠ ನೆಲೆಯಲ್ಲಿ ಕವಿ ಸ್ಪಂದಿಸಿದ ಕ್ರಮಗಳಿವೆ; ಇಂಥ ಬೆಳುದಿಂಗಳಿನ ಚೆಲುವನ್ನು ಆಸ್ವಾದಿಸುವುದು ಹೇಗೆ, ಅದರೊಂದಿಗೆ ತನ್ಮಯವಾಗುವುದು ಹೇಗೆ ಎಂಬ ತುಡಿತಗಳಿವೆ;    ಬೆಳುದಿಂಗಳಿಗೆ ಕವಿ ಮರುಳುಗೊಂಡ ಹಾಗೂ ಅದರೊಂದಿಗೆ ತನ್ನ ವ್ಯಕ್ತಿತ್ವವನ್ನು ಕರಗಿಸಿಕೊಂಡ ‘ತಾದಾತ್ಮಾನುಭವ’ಗಳನ್ನು ಕುರಿತ ಅಭಿವ್ಯಕ್ತಿಗಳಿವೆ;  ವಿವಿಧ ಸಂದರ್ಭಗಳಲ್ಲಿ ವ್ಯಕ್ತಿಯ ಮನಃಸ್ಥಿತಿಗನುಸಾರವಾಗಿ ಚಂದ್ರನನ್ನು ಕಂಡ ಹಾಗೂ ಕಾಣಿಸಿದ ವ್ಯಕ್ತಿನಿಷ್ಠಾನುಭವದ ವರ್ಣನೆಗಳಿವೆ; ಚಂದ್ರನನ್ನು ಕುರಿತು ಹೊಸಕಾಲದ ತಿಳಿವಳಿಕೆಯ ಹಿನ್ನೆಲೆಯಲ್ಲಿ, ತೋರಿದ ಪ್ರತಿಕ್ರಿಯೆಗಳಿವೆ;  ಕಲ್ಪನಾವಿಲಾಸಗಳಿವೆ; ವ್ಯಂಗ್ಯ, ವಿನೋದ, ವಿಡಂಬನೆಗಳೂ ಇವೆ.  ಜತೆಗೆ ನಮ್ಮ ಈ ಆಧುನಿಕ ಮನಸ್ಸಿಗೂ ಚಂದ್ರನಿಗೂ ನಡುವೆ ಏರ್ಪಟ್ಟಿರುವ ಸಂಬಂಧರಾಹಿತ್ಯವನ್ನು ಕುರಿತ ದಟ್ಟ ವಿಷಾದದ ಛಾಯೆಗಳಿವೆ.

ಇಂಥ ಒಂದು ಸಂಕಲನವನ್ನು ಸಿದ್ಧಪಡಿಸುವ ಜವಾಬ್ದಾರಿಯನ್ನು ನನಗೆ ವಹಿಸಿದ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳಿಗೆ ನನ್ನ ಮೊದಲ ನಮನಗಳು.  ಈ ಸಂಕಲನದ ಸಿದ್ಧತೆಗೆ ಮಠದ ಪರವಾಗಿ ನನ್ನ ಜತೆಗೆ ನಿಂತು ಹೆಜ್ಜೆ ಹೆಜ್ಜೆಗೂ ಶ್ರಮವಹಿಸಿ ಸಹಕರಿಸಿದ ಸಹ ಸಂಪಾದಕರಾದ ಡಾ. ರಾ. ವೆಂಕಟೇಶ ಶೆಟ್ಟಿಯವರಿಗೆ, ಇದರೊಳಗಿನ ಕವಿತೆಗಳನ್ನು ಹೀಗೆ ಸೇರಿಸಿಕೊಳ್ಳಲು ಸಮ್ಮತಿಸಿದ ಕವಿಗಳಿಗೆ ನನ್ನ ಹೃತ್ಪೂರ್ವಕವಾದ ಧನ್ಯವಾದಗಳು.

ಕಾವ್ಯಪೂರ್ಣಿಮಾ : ಸಂ : ಡಾ. ರಾ. ವೆಂಕಟೇಶಶೆಟ್ಟಿ, ೧೯೯೯