ಜಾನಪದ ಸಾಹಿತ್ಯ ಮತ್ತು ಡೊಳ್ಳಿನ ಹಾಡುಗಳ ಸಾಹಿತ್ಯ :

“ಉತ್ತರ ಕರ್ನಾಟಕದಲ್ಲಿ ಜಾನಪದವು ಹಸಿರು ನೆಲವಾಗಿ ಕಾಣುತ್ತಿದೆ”. ಎಂಬುದನ್ನು ಜಾನಪದ ವಿದ್ವಾಂಸರೆಲ್ಲರೂ ಬಲ್ಲರು. ಇಡೀ ಕರ್ನಾಟಕದಲ್ಲಿ ಜಾನಪದ ಅಧ್ಯಯನಕಾರರು ಬರೆಯುತ್ತಿದ್ದಾರೆ. ಆದರೂ ಇಲ್ಲಿಯವರೆಗೆ ಡೊಳ್ಳಿನ ಸಾಹಿತ್ಯ ದಾಖಲಾಗಿ ಬಂದಿರುವುದು ಕಡಿಮೆ ಎನ್ನಿಸುತ್ತದೆ.೬ ಜಾನಪದ ಸಾಮಾನ್ಯವಾಗಿ ನಾಲ್ಕು ಬಗೆಯಾಗಿದೆ. ಸಾಹಿತ್ಯಕ ಬಗೆ ವೈಜ್ಞಾನಿಕ ಬಗೆ, ಭಾಷಿಕ ಬಗೆ, ವೈಜ್ಞಾನಿಕ ಬಗೆ ಹಾಗೂ ಕ್ರಿಯಾತ್ಮಕ ಬಗೆ, ಪುರಾಣ, ಜನಪದ ಕಥೆ, ಹಾಡು, ಮೊದಲು ಗುಂಪಿನವು. ಮಾತು, ಸನ್ನೆ, ಒಗಟು, ಗಾದೆ ಎರಡನೆಯ ಗುಂಪಿನವು. ಮದ್ದು, ಚಿಕಿತ್ಸೆ, ಯಕ್ಷಿಣಿ, ಭವಿಷ್ಯ ಹಾಗೂ ವಿವಿಧ ನಂಬಿಕೆಗಳು, ವೈಜ್ಞಾನಿಕ ಬಗೆಗೆ ಸೇರುತ್ತವೆ. ಕೊನೆಯದರಲ್ಲಿ ನೃತ್ಯ, ಸಂಗೀತ ಆಟ, ವಿನೋದ, ನಾಟಕ, ಉಡಿಗೆ, ಅಡಿಗೆ, ಕಲೆ, ಮುಂತಾದವು ಸೇರಿಕೊಳ್ಳುತ್ತವೆ.

[1]

ಡೊಳ್ಳು ಹಾಗೂ ಡೊಳ್ಳಿನ ಹಾಡುಗಳು ಸಾಹಿತ್ಯ ಬಗೆಯಾಗಿಯೂ, ನಾಲ್ಕನೆಯ ಗುಂಪಿನ ಕ್ರಿಯಾತ್ಮಕ ಬಗೆಯಾಗಿಯೂ ನಮ್ಮಲ್ಲಿ ತೋರುತ್ತಿದೆ. ಹೀಗಾಗಿರುವುದರಿಂದ ಡೊಳ್ಳಿನ ಸುತ್ತ ಮುತ್ತಲಿನ ಚಾರಿತ್ರಿಕ ಹಾಗೂ ಸಾಹಿತ್ಯಕ ಬಗೆಗಳು ವಿದ್ವಾಂಸರಿಂದ ಹೆಚ್ಚಾಗಿ ಸಾಗಬೇಕಾಗಿದೆ.

“ಕನ್ನಡ ಜಾನಪದ ಸಾಹಿತ್ಯ ಗುಣಗಾತ್ರಗಳೆರಡರಿಂದಲೂ ಸುಸಮೃದ್ಧವಾಗಿದೆ. ಬೇರೆ ಕಡೆಗೆ ಸಿಗದ ಮೌಲಿಕ ಸಾಹಿತ್ಯ ಅಪಾರವಾಗಿದೆ. ಜಾಗತಿಕ ಜಾನಪದ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆಗಳಾಗಬಹುದಂತಹ, ಕೆಲವನ್ನು ಮಾತ್ರ ನಿದರ್ಶನಾರ್ಥವಾಗಿ ಸೂಚಿಸಿ, ಆ ಕಡೆಗೆ ವಿದ್ವಾಂಸರ ಗಮನ ಸೆಳೆಯುವುದೇ ಉದ್ದೇಶವಾಗಿದೆ”. ಸಮರ್ಪಕವಾಗಿ ತೌಲನಿಕ ಅಧ್ಯಯನ ನಡೆದಾಗ ಮಾತ್ರ ಇಲ್ಲಿಯ ಸಾಹಿತ್ಯಕ ಘನತೆ-ಮಹತ್ತುಗಳು ಮನವರಿಕೆಯಾದಾವು.[2] ಡಾ. ದೇ. ಜವರೇಗೌಡ ಅವರ ಅಭಿಪ್ರಾಯ ಸತ್ಯಸ್ಯೆ ಸತ್ಯೆವಾದುದು.

ಇಡೀ ಕರ್ನಾಟಕವನ್ನು ಅಧ್ಯಯನ ದೃಷ್ಟಿಯಿದ ನಿರೀಕ್ಷಿಸಿದಾಗ “ಮಲೆನಾಡಿನಲ್ಲಿ ಡೊಳ್ಳಿನ ಹಾಡುಗಳು ಕಡಿಮೆ ಒಂದೊಂದು ಕಡೆಗೆ ಜನಪದ ಕವಿಯೊಬ್ಬನು “ನಗ್ಗೇಡು ಇದಕೆ ಮಲೆನಾಡು” ಎಂಬುದಾಗಿ ಹಾಡಿಕೊಂಡದ್ದೂ ಉಂಟು.

“ಸುಗ್ಗಿ ದಾಸೋಹವೆಂದು ಹಿಗ್ಗಿ ಬೆಳವಲನೋಡು
ಹುಗ್ಗಿ ಹೋಳಿಗೆಯು ನಿನ್ಹಾಡು | ಸುಗ್ಯೂಟ
ನಗ್ಗೇಡು ಇದಕೆ ಮಲೆನಾಡು”.[3]

ಈ ರೀತಿ ಹಾಡಿನ ಹಿರಿಮೆಯನ್ನು ಹೇಳದೇ ಇಲ್ಲ. ಆದರೆ ಕರ್ನಾಟದಲ್ಲಿ ಆರಾಧನಾ ಬೇರೆ ಬೇರೆ ಕಲೆಗಳು ಪ್ರದರ್ಶನಗೊಳ್ಳುತ್ತಲೇ ಇವೆ. “ಎಲ್ಲವ್ವ, ಮಾಯವ್ವ, ಕರಿಯಪ್ಪ, ದ್ಯಾಮವ್ವ, ಮೊದಲಾದ ದೇವತೆಗಳ ಉತ್ಸವಗಳನ್ನು ಮಾಡುವ ಕಾಲಕ್ಕೆ ಡೊಳ್ಳು, ಹಲಗೆ, ದಮ್ಮಡಿ, ದಪ್ಪು, ಟುಮುಕಿ ಮೊದಲಾದ ವಾದ್ಯಗಳನ್ನು ಬಾರಿಸಿಯೂ, ಏಕತಂತಿ, ಚೌಡಕಿ, ತಾಳಗಳನ್ನು ನುಡಿಸಿಯೋ ಕುಣಿಯುವುದನ್ನು ಕರ್ನಾಟಕ ತುಂಬಾ ನೋಡಬಹುದು”.[4] ಹಾಗೇ ಡಾ. ಗೆದ್ದಿಗೆ ಮಠ ಅವರು ಇನ್ನೊಂದು ಅಭಿಪ್ರಾಯವನ್ನು ನೀಡುವುದನ್ನು ಗಮನಿಸಬೇಕಾಗುತ್ತದೆ.

ಈ ಕುಣಿತಗಳನ್ನು ಕುಣಿಯುವ ದಿನಗಳೆಂದರೆ, ಹೋಳಿ ಹಬ್ಬ, ಸುಗ್ಗಿ, ಜಾತ್ರೆ, ಮಹೋತ್ಸವ, ಪಂಚಮಿ ಹಬ್ಬ, ಬನ್ನಿ ಹಬ್ಬ, ಹಟ್ಟಿಯ ಹಬ್ಬ ಮೊದಲಾದ ಬಿಡುಗಾಲದಲ್ಲಿ ಉತ್ಸವಕಂಡಲ್ಲಿ ಜಂಗು ನುಡಿಸಿಯೇ ಕರಡೆ, ಚೌಗಡ, ಸಂಬಾಳ, ಮದ್ದಲಿ, ದಿಮ್ಮು (ಸಣ್ಣಡೊಳ್ಳು) ದುಂದುಭಿ, ತಾಳ, ಚೈಯಾಕ, (ಚಳ್ಳಂಕ-ಚಳ್ಳಂಗ), ಡೊಳ್ಳು, ಜಗ್ಗಲಿಗೆ ಮೊದಲಾದವುಗಳನ್ನು ಸಂಜೋಡಣೆ ಮಾಡಿ ಹಾವ-ಭಾವ ತುಂಬಿ ಹಳ್ಳಿಗರು ಕುಣಿಯುತ್ತಾರೆ.[5]

ಕರ್ನಾಟಕದಲ್ಲಿ ಅದರಲ್ಲೂ ಉತ್ತರ ಕರ್ನಾಟಕದಲ್ಲಿ ರೈತರು ತಮ್ಮ ಕಾಡಸಿರಿ-ನಾಡಸಿರಿಗಳಿಗೆ ಹಿಗ್ಗಿ ಹಂತಿಯಂತಹ ಕಾಲದಲ್ಲಿ, ರಾಶಿಯನ್ನು ಮನೆಗೆ ಒಯ್ಯುವಾಗ, ಹಲಗೆ-ದಪ್ಪು-ಡೊಳ್ಳುಗಳನ್ನು ಬಾರಿಸುತ್ತ ಹಾಡುತ್ತ ಸಾಗುವರು. ಬೇರೆ ಜಾತ್ರೆಗೆ ಸಾಗುವಾಗಲೂ ಈ ಪರಿಸರವು ಸಂತೋಷಗೊಳ್ಳದೇ ಇರದು. ಜನಪದರಿಗೆ ಹಾಡು ಎಲ್ಲಿ ಬರುತ್ತೆ – ಕುಣಿತವೆಲ್ಲಿ ಬರುತ್ತೆ ಎಂಬುದಕ್ಕೆ ಅವರವರ ಉತ್ಸಾಹ, ಆನಂದ ಮರುಕಳಿಸಿದಾಗ ಮಾತ್ರ ಎಂಬುದನ್ನು ಗಮನಿಸಬೇಕಾಗುತ್ತದೆ. ಉತ್ಸಾಹ – ಆನಂದತರುವ ಕಾಲಯಾನವು ಅವರಿಗೆ ಮೊದಲೇ ತಿಳಿದಿರುತ್ತದೆ. ಅದಕ್ಕಾಗಿ ಅವರು ಹೊಸದನ್ನು ಹುಟ್ಟು ಹಾಕುವ ನೈಪುಣ್ಯತೆ ಪಡೆದಿರುವರು “ವೃಂದಗಾನಗಳಾದ ಕೋಲಾಟದ ಹಾಡು, ಸೋಬಾನದ ಹಾಡು ಕ್ಷೀಣಿಸಿದಂತೆ ಡೊಳ್ಳಿನ ಹಾಡುಗಳು ಕ್ಷೀಣಿಸಿಲ್ಲ. ಅಂದಿನಿಂದ ಹಾಡಿಕೊಂಡು ಬಂದವುಗಳ ಜೊತೆಗೆ ಈಗಲೂ ಕಟ್ಟುತ್ತಿರುವ ಹಾಡುಗಳು ಹಲವು ಆ ರಾಶಿಗೆ ಬಂದು ಸೇರುತ್ತಿವೆ. ಆದರೆ ಲಾವಣಿ ಗೀಗೀ ಪದಗಳಷ್ಟು, ವೈವಿಧ್ಯೆ ಪೂರ್ಣತೆಯನ್ನು ಡೊಳ್ಳಿನ ಹಾಡುಗಳಲ್ಲಿ ಅಪೇಕ್ಷಿಸುವಂತಿಲ್ಲ. ಡೊಳ್ಳಿನ ಹಾಡುಗಳು ವಸ್ತುವನ್ನು ಗೇಯ ಸೌಂದರ್ಯ ಅಭಿವ್ಯಕ್ತಿಯನ್ನೂ ಚಮತ್ಕಾರ, ಚಾತುರ್ಯ, ಶ್ರೀಮಂತಿಕೆ ಪಡೆದುಕೊಂಡಿವೆ”[6].

ಡೊಳ್ಳಿನ ಹಾಡುಗಳಲ್ಲೂ ವಿಶೇಷವಾದ ಮಾಧುರ್ಯ ಉಂಟು. ವಚನ-ರ‍್ವಾಣಗಳು ಅತೀ ಹೆಚ್ಚಿನ ವಿಷಯ ವೈವಿಧ್ಯತೆಗಳನ್ನು ನೀಡುತ್ತಲಿವೆ. ಡೊಳ್ಳಿನ ಹಾಡುಗಾರರು ಸಮಕಾಲೀನ ಪ್ರಜ್ಞೆಯನ್ನಿಟ್ಟುಕೊಂಡು ಹಾಡುಗಳನ್ನು ಹಾಡುತ್ತಾರೆ. ಇವರಲ್ಲೂ ದ್ವಿಪದಿ, ತ್ರಿಪದಿ, ಚೌಪದಿ, ರಗಳೆ, ಇತ್ಯಾದಿ ಕಾವ್ಯ ಪ್ರಕಾರದ ಹಾಡುಗಳು ರಚನೆಯಾಗುತ್ತಲೇ ಇವೆ. ಸರಕಾರದ ರೀತಿ-ನೀತಿಗಳನ್ನು ಪ್ರತಿಕ್ರಿಯಿಸುವ ಹಾಡುಗಳು ಹಾಡಕಾರರಲ್ಲಿವೆ. ಕರಿಯಪ್ಪ, ಮೈಲಾರ, ಮೈಲಾರಲಿಂಗದಂತಹ ಮಾರ್ಗದ ಪದಗಳು ಹಾಲಮತದ ಸಂಪ್ರದಾಯದಂತೆ ಪ್ರಾಮಾಣಿಕ ಚಿತ್ರಕೊಡುವ ಹಾಡುಗಳು ಉಂಟು. ತಾವು ಸಂಗ್ರಹವಾಗಿ ಇನ್ನು ಮೇಲಾದರೂ ದಾಖಲೆಗೊಳ್ಳಬೇಕಾದ ಅವಶ್ಯ ಇದೆ. ಆಧುನಿಕ ದೇವತೆಗಳ ನಿರ್ಮಾಣನಿಂತಿಲ್ಲ. ಹೊಳೆವ್ವ-ಕರೆವ್ವ-ಕಾಂತೆವ್ವ ಮುಂತಾದ ದೇವತೆಗಳ ಹಾಡುಗಳು ಇವೆ.

“ಶಿವ-ಪಾರ್ವತಿ-ಭೃಂಗಿ, ನಂದಿ, ಬೀರದೇವರು, ಮಾಳಿಂಗ ದೇವ್ರು, ಮೈಲಾರದೇವರು, ಗಂಗಿಮಾಳಮ್ಮ, ರೇವಣಸಿದ್ಧ, ಸಿದ್ಧರಾಮ, ಅಮೋಘಸಿದ್ಧ, ಮುದ್ದುಗೊಂಡ, ಮುದ್ದವ್ವ, ಮಾಯವ್ವ, ಆದಿಗೊಂಡ, ಪದುಮಗೊಂಡ, ಸ್ವಾಮಿ ರಾವ ಶಾಂತಮುತ್ತಯ್ಯ ಹಾಡುಗಳು ಸಂಪ್ರದಾಯ ಸಂಸ್ಕೃತಿಗಳನ್ನು ನಿರೂಪಿಸುವ ಸುದೀರ್ಘವಾದ ಅನೇಕ ಸಂದುಗಳಲ್ಲಿ ಹರಡಿಕೊಂಡಿರುವ “ಹಾಲುಮತದ ಪುರಾಣವೂ ಒಂದಿದೆ ![7]

ಡೊಳ್ಳಿನ ಪದಗಳ ಬಗೆಗೆ ಡೊಳ್ಳಿನ ಪದಗಳ ಬಗೆಗೆ ಕರ್ನಾಟಕದ ಯಾವ ಭಾಗದಲ್ಲೂ ಸಮಗ್ರ ಅಧ್ಯಯನ ನಡದೇ ಇಲ್ಲ. ಸಂಗ್ರಹಕಾರರೋ ಅಧ್ಯಯನಕಾರರೋ ತಮಗೆ ಸಿಕ್ಕಷ್ಟು ತಮ್ಮ ಉಡಿಗಳಲ್ಲಿ ತುಂಬಿಕೊಂಡು ಹೆಮ್ಮೆಪಡುತ್ತಿದ್ದಾರೆ. ಈ ಸಂಗ್ರಹಕಾರರ ಅಧ್ಯಯನಕಾರರ ಕೃತಿಗಳು ಜಾನಪದ ಪುನರ್ ಮೌಲೀಕರಣವಾಗಬೇಕಾಗಿದೆ.

ಜಾನಪದದಲ್ಲಿ ಡೊಳ್ಳಿನ ಹಾಡುಗಳು ಯಾವ ಕಾಲದಲ್ಲಿ ರಚನೆಗೊಂಡವು ಎಂಬುದಕ್ಕೆ ಖಚಿತ ಕಾಲಮಾನ ಗೊತ್ತಾಗಿಲ್ಲ.

ಮಧುರ ಕವಿಯು ಟೀಕಿಸಿದ (ಕ್ರಿ.ಶ. ೧೪೦೦) ಕಾಲಮಾನ ಗೊತ್ತುಂಟು
“ಪಂಡಿತರು ವಿವಿಧ ಕಳಾ ಮಂಡಿತರಂ ಕೇಳತಕ್ಕ ಕೃತಿಯಂ
ಕ್ಷಿತಿಯೊಳ್ ಕಂಡರೆ, ಕೋಳ್ವೊಡೆ “ಗೊರವರ” ದುಂಡುಚಿಯೂ ಬೀದಿವರೆ
“ಬೀರ”ನ ಕಥೆ ಹಾಗೇ ಹಿಂದನ ಕಾಲದ ಇನ್ನೊಂದು ಸಾಕ್ಷಿ.
“ಮಾರಯ್ಯ ಬೀರಯ್ಯ ಕೇಚರಗಾವಿಲ ಅಂತರಬೆಂತರ
ಕಾಳಯ್ಯ ಧೂಳಯ್ಯ ಕೇತಯ್ಯಗಳೆಂಬ ನೂರು ಮಡಕೆಗೆ
ನಮ್ಮ ಕೂಸಂ ಶರಣೆಂಬುದೊಂದು ದಡಿಸಾಲದೆ ?  (ಬ.ವ. ೫೫೭)

ಹನ್ನೆರಡನೆಯ ಶತಮಾನಕ್ಕೂ ಪೂರ್ವದಲ್ಲಿ, ಅಂದರೆ ಮಾರ್ಗ ಸಾಹಿತ್ಯ ರಚನೆಯಾಗುವ ಪೂರ್ವ ಜಾನಪದವು ಕನ್ನಡ ನೆಲದಲ್ಲಿ ಜನಪದರ ಉಸಿರಾಗಿತ್ತು. “ಶರಣರ, ಸರ್ವಜ್ಞನ ಹಾಗೂ ಕನಕದಾಸರ ಪದಗಳನ್ನು ಈ ಒಗಟಿನ ಪದಗಳನ್ನು ಅಧ್ಯಯನ ಮಾಡಿದಾಗ, ಶರಣ, ದಾಸರ ಪ್ರಭಾವ ಡೊಳ್ಳಿನ ಪದಗಾರರ ಮೇಲೆ ಆಗಿದೆಯೋ, ಈ ಜನಪದ ಡೊಳ್ಳಿನ ಪದಗಳ ಪ್ರಭಾವ ಇವರ ಮೇಲಾಗಿದೆಯೋ ನಿರ್ಧರಿಸುವುದು ಸ್ವಲ್ಪ ಕಷ್ಟದ ಕೆಲಸ. ಆದರೂ ಜನಪದ ಸಾಹಿತ್ಯಕ್ಕೆ ತುಂಬಾ ಪ್ರಾಚೀನತೆ ಇರುವುದರಿಂದ ಅದರಿಂದಲೇ ಶರಣ-ದಾಸರು ಪ್ರೇರೆ ಪಡೆದಿರಬೇಕೆಸುತ್ತದೆ”.[8]

ಹೀಗೆ ಅಧ್ಯಯನಗಳಿಂದ ಒಂದೊಂದು ಅಂಶಗಳನ್ನು ಗಟ್ಟಿಗೊಳಿಸುವುದು ಒಳ್ಳೆಯದು.

“ಒಟ್ಟಾರೆ ಜನಪದ ಪರಂಪರೆಗಳು ಧಾರ್ಮಿಕ ಮೂಲದ್ದವುಗಳಾಗಿದ್ದರೂ, ಸಾಮಾಜಿಕ ಬದುಕನ್ನು ಹಸನುಗೊಳಿಸಿಕೊಳ್ಳುವ ನೀತಿಯನ್ನು ಬಾಳಲು ಬೇಕಾದ ಸ್ಥೈರ್ಯ, ಧೈರ್ಯಗಳನ್ನೂ ಹೆಚ್ಚಿಸಲು ಮಾನವನಿಗೆ ನಿರಂತರವಾಗಿ ನೆರವಾಗಿವೆ. ಕಂಠಸ್ಥವಾಗಿ ಬೆಳೆದು ಬಂದ ಜನಪದ ಸಾಹಿತ್ಯ, ಅಂತಹ ಜನಪ್ರಿಯ ಪರಂಪರೆಗಳನ್ನು ಜೀವಂತ ಹಿಡಿಯುವ ಮತ್ತು ವಿದ್ವಾಂಸರ ಅಧ್ಯಯನಕ್ಕೆ ಬೇಡಿದ್ದನ್ನು ಕೊಡುವ ಅಕ್ಷಯ ಪಾತ್ರೆಯಂತಿದೆ. ಕರ್ನಾಟಕದಲ್ಲಿ ಇತ್ತೀಚೆಗೆ ಜನಪದ ಸಾಹಿತ್ಯ ಹಾಗೂ ಜನಪದ ಪರಂಪರೆಗಳನ್ನು ತೌಲನಿಸಿ ನೋಡುವ ಜಿಜ್ಞಾಸೆ ಬೆಳೆಯುತ್ತಿರುವುದು, ನಿಜಕ್ಕೂ ಜಾನಪದ ಅಧ್ಯಯನದ ಕುರಿತ ಬೆಳವಣಿಗೆಗೆ ಸಹಾಯಕಾರಿಯಾಗಿದೆ”.[9]

ರ‍್ವಾಣಗಳು :

ಡೊಳ್ಳು ಹಾಡುಗಳು ವಾಲಗದ ಮೇಳದವರಿಂದ ರಾತ್ರಿ ಎಂಟುಗಂಟೆಗೆ ಸುರುವಾಗಿ ಸೂರ್ಯೋದಯಕ್ಕೆ ಹರಕೆಯ ಹಾಡುಗಳು ಸುರುವಾಗುತ್ತಿವೆ. ಇಷ್ಟು ರಾತ್ರಿಯ ವೇಳೆಯಲ್ಲಿ “ರ‍್ವಾಣ”ಗಳು ಹೇಳಲ್ಪಡುವವು. ರ‍್ವಾಣಗಳೆಂದರೆ ವಿಶಿಷ್ಟ ಪ್ರಕಾರದ ಸಂವಾದದ ಗದ್ಯ-ಪದ್ಯ ಮಿಶ್ರಿತ ಪ್ರಸಂಗಗಳಾಗಿವೆ. ಇವು ಒಡಪಿನ ರೀತಿಯಾಗಿಯೂ ಇರುತ್ತವೆ. ಹಾಸ್ಯ ಭರಿತವಾಗಿಯೂ ಇರುತ್ತವೆ. “ರ‍್ವಾಣ ಸಂವಾದದಲ್ಲಿ” ಹುಲ್ಲುಲಗೆಪ್ಪಾ ಹುಲುಲಿಗ್ಯೋ | ಹುಲುಲಿಗೆಪ್ಪ ಹುಲ್ಲುಲಿಗೊ’ ಎಂಬ ಧ್ವನಿಯೊಂದಿಗೆ ಮುಕ್ತಾಯವಾಗುತ್ತದೆ.

ಇನ್ನು ಕೆಲವು ಕಡೆಗೆ “ಅಣ್ಣನಪ್ಪೊ ಅಣ್ಣಣೋ” ಎಂದು ಪ್ರಾರಂಭವಾಗಿ ವಿಷಯ-ಕಥೆ, ಒಡಮ, ಒಗಟುಗಳು ಆಶ್ಚರ್ಯ ಮೂಡಿಸಿ “ಅಣ್ಣನಪ್ಪೋs ಅಣ್ಣಣೋ” ಎಂಬ ಘೋಷದೊಂದಿಗೆ ಮುಕ್ತಾಯಗೊಳ್ಳುತ್ತದೆ.

ಹಾಸ್ಯದ ರ‍್ವಾಣಕ್ಕೆ ಒಂದು ಉದಾಹರಣೆ

ಡೊಳ್ಳಿನಂತ ಹೊಟ್ಟೆಯವಳೆ
ಕುಂಬಳಕಾಯಿಯಂತಹ ಕುಂಡಿಯವೆ
ಹಂಜಿ ಬುಟ್ಟಿಯಂತಹ ತೆಲಿಯವಳೆ
ಮಾವಿನ ಹಣ್ಣಿನಂತ ಮಲಿಯವಳೆ
ಬಾಳಿದಿಂಡಿನಂತಹ ತೋಳ-ತೊಡಿಯವಳೆ
ಜಂತಿ ಕುಂಟಿಯಂತಹ ಹಲ್ಲಿನವಳೆ

ತೀರ ಸಾಮಾನ್ಯವಾದ ಉಪಮೆಗಳನ್ನು ರ‍್ವಾಣ ಹೇಳವನು. ಉಪಯೋಗಿಸಿ ಹೊಸ-ಹೊಸ ವಿಷಯಗಳಿಂದ ನಗಿಸುತ್ತಾನೆ. ತೂಕಡಿಸುವ ಪ್ರೇಕ್ಷಕರನ್ನು ಎಚ್ಚರಿಸುತ್ತಾನೆ.

ರ‍್ವಾಣಗಳಿಗೆ ಕೆಲವು ಪ್ರದೇಶಗಳಲ್ಲಿ “ರೋಣ”ಗಳೆಂದೂ ಕರೆಯುತ್ತಾರೆ. ಕೆಲವರು ರಾವಣ ಹೋಗಿ “ರ‍್ವಾಣ” “ರೋಣ” ಶಬ್ದಗಳ ಪ್ರಯೋಗವಾಗಿರಬೇಕೆಂದು ತರ್ಕಿಸುತ್ತಾರೆ.

“ರಾವಣನು ಭಕ್ತಿಯಿಂದ ಹಾಡಿ ಶಿವನನ್ನು ಒಲಿಸಿಕೊಂಡುದು ಪುರಾಣ ಪ್ರಸಿದ್ಧ ವಿಷಯ. ರಾವಣನು ದಶಕಂಠಗಳಿಂದ ಹೊರಹೊಮ್ಮುವನಾದ ಸುಮಧುರವಾಗಿತ್ತು. ಕಿವಿಗೆ ಹಿತಕರವಾಗಿತ್ತು ಆದ್ದರಿಂದ ರ‍್ವಾಣ ಹೇಳುವುದು ಎಂದರೆ ಸುಮಧುರವಾಗಿ ಹಾಡುವುದು ಎದು ಅರ್ಥ. ಕುರುಬರು ಹಾಗೆ ಹಾಡುತ್ತ ಬಂದಿರುವುದರಿಂದ ಅವರ ಹಾಡುಗಳಿಗೆ “ರ‍್ವಾಣ” ಹೇಳುವ ಪದ ರೂಢಿಯಲ್ಲಿ ಬಂದಿದೆ. ಈ ರ‍್ವಾಣ ಪದಗಳು ತಾಳಲಯಕ್ಕೆ ಅನುಗುನವಾಗಿ ಕೇಳಿ ಬರುವವು.  ಈ ಹಾಡುಗಳು (ರ‍್ವಾಣಗಳು) ರಸಿಕರಿಗೆ ರಸದೂಟ ನೀಡುತ್ತವೆ”. ಒಟ್ಟಿನಲ್ಲಿ ಮನೋರಂಜನೆಯೇ ರ‍್ವಾಣದ ಹಾಡುಗಳ ಗುರಿ ಎಂದು ಹೇಳಬಹುದು”. ಎಂಬುದಾಗಿ ಪ್ರೊ. ಎಂ.ಎಸ್. ಸುಂಕಾಪೂರ ಅವರು ಶ್ರೀ ಬಸವಗೌಡ ಪಾಟೀಲ ಅವರ “ಹಿಂಗಬಿಟ್ರ ದೇಶಾ ಆಳ್ಯಳ” ಡೊಳ್ಳು ಸಂಗ್ರಹಕ್ಕೆ ಪ್ರಸ್ತಾವನೆಯ ಮಾತುಗಳನ್ನು ಬರೆದಿರುವರು.

ರ‍್ವಾಣದ ಒಂದು ಮಾದರಿ ಇಲ್ಲಿದೆ ನೋಡಿ

ಉದಾ :

ರ‍್ವಾಣಗಾರ : ಹುಲ್ಲಿಲಿಗ್ಯಾ ಹುಲ್ಲಿಲಿಗ್ಯಾ ಅನ್ನಪ

ಮರಿರ‍್ವಾಣಗಾರ : ಸುರಂಬಳ್ಯಾಗ ಸುರಂಬಳ್ಯಾಗ ಅನ್ಯಪಾs

ರ‍್ವಾಣಗಾರ : ಹತ್ತ ರೂಪಾಯಿ ತಕ್ಕೊಂಡು ದೇಶಾನೆಲ್ಲಾ ತಿರುಗಿದರೂ ಈಗಿನ ಹೆಣ್ಣ ಮಕ್ಕಳಿಗೆ ಕಡಿವಾನ ಕಟ್ಟವರ ಸಿಗವಲ್ಲಂತಪಾ

ಮರಿರ‍್ವಾಣಗಾರ : ಕಡಿವಾನ ಕಟ್ಟವರ ಸಿಗಲಿಲ್ಲರಿತಪಾ

ರ‍್ವಾಣಗಾರ : ಕಲ್ಲವ್ವ ಬಂದು ಕಟ್ಟಿದಳು. ನೀಲವ್ವ ಬಂದು ನೀರಾಗಿ ಹೊಯ್ದಳು. ಯಲ್ಲವ್ವ ಬಂದು ಚೆಂದಾಗೇತೆಂದಳಪಾ, ಇನ್ನೊಬ್ಬಾಕಿ ಬಂದೂ ಇನ್ನೂ ಚಂದಾಗೇತೆಂದಳಪಾ.

ಮರಿರ‍್ವಾಣಗಾರ : ಹೌದs……. ಹೌದಪಾs

ರ‍್ವಾಣಗಾರ : ಕಡಿವಾನದಾಕಿ ಶೆಟ್ಟಿ ಸಾಂವಕಾರ ಅಂಗಡಿ ಮುಂದ ಹಾದ ಹೋಗುವಾಗ ಆಕಿ ನೋಡಿ ಏನ ಅಂತಾನಪಾs ತಿಂದ್ರ, ಅರಿತಂದ್ರ

ಮರಿರ‍್ವಾಣಗಾರ : ಏನ ಅಂತಾನಪಾ ?

ರ‍್ವಾಣಗಾರ : ಯಳಿಗೆ ನೂರು, ತಳಿಗೆ ನೂರು, ಕಡಿವಾಣಕ ಮುಟ್ಟೇತಿ. ಮುನ್ನೂರು ಮುಲ್ಲಾ, ನಿನ್ನ ಅಂಗಡ್ಯಾಗಿಲ್ಲ ಅಚ್ಚೇರ ಬೆಲ್ಲಾ ಅಂದಳಂತಪಾ.

ಮರಿರ‍್ವಾಣಗಾರ : ಏ ಬೇಸ ಅಂದಾಳ ನೋಡಪಾ

ರ‍್ವಾಣಗಾರ : ಆವಾಗ ಶೆಟ್ಟಿ ಸಾಂವಕಾರ ಏನಂತಾನಂದ್ರ

ಮರಿರ‍್ವಾಣಗಾರ : ಏ ಕಮಾರಕ್ಕೆ (ಕರಿಮಾರ‍್ಯಾಕೆ) ನಿನ್ನ ನೋಡಿದರ [10]

ಹೀಗೆ ಮುಂದೊರೆಯುತ್ತದೆ ರ‍್ವಾಣ. ಇವುಗಳಲ್ಲಿ ಗಾದೆಯ ಮಾತುಗಳನ್ನು ಬಳಸಿ ಸಂಭಾಷಣೆ ಹಾಸ್ಯದ ಹೊನಲಾಗುತ್ತದೆ. ರ‍್ವಾಣಗಾರ-ಮರಿರ‍್ವಾಣಗಾರರು ನಾಟಕೀಯ ರೀತಿ ಅಭಿನಯಿಸುತ್ತ ಪ್ರೇಕ್ಷಕರ ಮಧ್ಯೆ ತಿರುಗುತ್ತಾರೆ.

ರ‍್ವಾಣಗಳನ್ನು ಅಧ್ಯಯನ ದೃಷ್ಟಿಯಿಂದ ನೀತಿ ಬೋಧಕ, ಲಘುಹಾಸ್ಯ, ಕ್ರಿಮಿ-ಕೀಟ-ಪಕ್ಷಿಗೆ ಸಂಬಂಧಿಸಿದ ಅದ್ಭುತ ಸ್ಥಳನಾಮ, ದೇವಾದಿ ದೇವತೆಗಳು, ಆಧ್ಯಾತ್ಮಿಕ ಇತ್ಯಾದಿ ರ‍್ವಾಣಗಳನ್ನು ವಿಂಗಡಿಸಿ ಅಧ್ಯಯನ ಮಾಡುತ್ತಿದ್ದಾರೆ. ಭಾಷಿಕ-ಸಾಂಸ್ಕೃತಿಕ ಸಂಗತಿಗಳನ್ನು ರ‍್ವಾಣಗಳಿಂದ ತಿಳಿಯಲು ಶಕ್ಯವಾಗುತ್ತದೆ.

ಉತ್ತರ ಕರ್ನಾಟಕದ ರಾಯಚೂರ, ಕೊಪ್ಪಳ ಜಿಲ್ಲೆಗಳಲ್ಲಿ ರ‍್ವಾಣ ಹೇಳುವಾಗ ಹಾಡುಗಾರನು “ಅಂಣನಪ್ಪ ಅಂಣಾನೋs” “ಅಂಣನಪ್ಪ ಅಂಣಾನೋs” ಎಂದ ಕೂಡಲೆ ರ‍್ವಾಣಗಳ ಪ್ರಾರಂಭವಾಯಿತು ಎಂದು ಹೇಳಲಾಗುವುದು. “ರ‍್ವಾಣ”ವು ಅಧ್ಯಯನ ದೃಷ್ಟಿಯಿಂದ ಡೊಳ್ಳು ಹಾಡುಗಳ ಅವಿಭಾಜ್ಯ ಅಂಗಗಳಾಗಿ ತೋರುತ್ತದೆ. ಡೊಳ್ಳಿನ ಹಾಡುಗಳು ನವರಸಗಳನ್ನು ಸೂಸಿಸುತ್ತವೆ. ಆದರೆ ಕೆಲವು ವಿದ್ವಾಂಸರು ಒಂದೇ ಮಾದರಿ ಎಂದಿದ್ದಾರೆ. ಇದು ಒಪ್ಪೊಕೊಳ್ಳುವ ಅಭಿಪ್ರಾಯವಲ್ಲ. ಡೊಳ್ಳಿನ ಹಾಡುಗಳನ್ನು ಹೇಳುವಾಗ ಭಕ್ತಿರಸ ಪ್ರಧಾನವಾದ ರ‍್ವಾಣಗಳನ್ನು ರ‍್ವಾಣ ಹಾಡುಗಾರರು ತಿಳಿಸುತ್ತಾರೆ. ಇತ್ತೀಚೆಗೆ ರ‍್ವಾಣಗಳ ಬದಲಾಗಿ ನಮ್ಮ ಹಿಂದಿನ ಕವಿವರ್ಯರು ಚಂಪೂವಿನಲ್ಲಿ ಬಳಸಿದ ಗದ್ದದಂತೆ” ಹಾಡುಕಾರರು “ವಚನ” (ಗದ್ಯ) ಹೇಳಿ ಮತ್ತೆ ಹಾಡಿಗೆ ಬರುತ್ತಾರೆ. ಆದಿಗೊಂಡನ ಚರಿತ್ರೆಯಲ್ಲಿ ಒಂದು ಉದಾಹರಣೆ.

“ಕೇಳಿರಿ, ಕೇಳಿರಿ, ಅಜ್ಜ ಆದಿಗೊಂಡ ಮತ್ತ್ಯಾ ಮುದ್ದುಗೊಂಡ. ಆದಿಗೊಂಡನ ಮಕ್ಕಳು ಆರುಮಂದಿ ಅವರು ಯಾರ‍್ಯಾರು ಅಂದರೆ ಅಮರಗೊಂಡ, ಶಿವಗೊಂಡ, ಸಿದ್ಧಗೊಂಡ, ಪಡ್ಡಿಗೊಂಡ ಮಿಂಚಗೊಂಡ, ಕಡೆಯ ಹುಟ್ಟಿದವ ಉಂಡಾಡ ಪದ್ಮಗೊಂಡ. ಹೀಗೆ ಆರು ಮಂದಿ ಮಕ್ಕಳಿಗೆ ಆರು ಕಂಕಣಗಳು ಹುಟ್ಟಿದವು. ಅವು ಯಾವವು ಅಂದರೆ – ಹತ್ತಿಕಂಕಣ, ಉಣ್ಣಿಕಂಕಣ, ನಾರಕಂಕಣ, ಅಳಿಗಾರ, ಬಳಿಗಾರ ಬಿರಂಚಿ ಎಂಬ ಆರು ಕಂಕಣಗಳು….. ಇವರಿಗೆ ಕರೇವಾಡ ಸಿದ್ಧೇಶ್ವರನೇ ಗತಿಯೋ ! [11]

ಇಲ್ಲಿಯವರೆಗೆ ಕರ್ನಾಟಕದ ಡೊಳ್ಳು ಸಾಹಿತ್ಯವನ್ನು ಸಮಗ್ರವಾಗಿ ಹಿಡಿದಿಟ್ಟಿಲ್ಲವಾದರೂ, ಸಮಗ್ರ ಕನ್ನಡ ಜಾನಪದದಲ್ಲಿ ಒಂದಿಷ್ಟನ್ನಾದರೂ ಗೊತ್ತು ಮಾಡಲು “ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು ಅಡಿಯಲ್ಲಿ ಕರ್ನಾಟಕ ಸರಕಾರವು” ಕನ್ನಡ ಸಮಗ್ರ ಜನಪದ ಸಾಹಿತ್ಯ ಸಂಪುಟ ಸಮಿತಿ ರಚನೆಗೊಂಡಿದೆ. ಇಲ್ಲಿಯವರೆಗೆ ಡೊಳ್ಳು ಪದಗಳ ಸಮೀಕ್ಷೆಯನ್ನಷ್ಟು ಮಾಡುವುದು (ಸಂಕ್ಷಿಪ್ತವಾಗಿ) ಒಂದು ನೋಟ ಕೆಳಗಿನಂತಿದೆ.

ಡೊಳ್ಳಿನ ಪದಗಳ ಸಮೀಕ್ಷೆ :

ಡೊಳ್ಳಿನ ಪದಗಳು ಮತ್ತು ಡೊಳ್ಳು ವಾದನ ಜನಪದ ವಾಙ್ಮಯ, ಜನಪದ ಕ್ರಿಯೆ, ಜನಪದ ಧರ್ಮ ಮತ್ತು ಜನಪದ ವಿಜ್ಞಾನ, ಜನಪದ ಸಂಪ್ರದಾಯ ಇತ್ಯಾದಿಗಳನ್ನು ರೂಢಿಸಿಕೊಂಡ ಜಾನಪದವಾಗಿವೆ.

ಕರ್ನಾಟಕದಲ್ಲಿ ಜಾನಪದ ಅಧ್ಯಯನ ಈಗ ಒಂದು ಖಚಿತವಾದ ನೆಲಗಟ್ಟಿನ ಮೇಲೆ ನಿಲ್ಲುತ್ತದೆ. ಜಾನಪದ ಅನೇಕ ಪ್ರಕಾರಗಳಲ್ಲಿ ಅಮೂಲ್ಯ ಸಾಮಗ್ರಿಯನ್ನು ಸಂಗ್ರಹಿಸಿ, ಹೊರತರುತ್ತಿರುವ ಪ್ರಯತ್ನಗಳ ಜೊತೆಗೆ ಅದನ್ನು ಕುರಿತು ಅಧ್ಯಯನವೂ ಸಾಕಷ್ಟು ಬೆಳೆಯುತ್ತಿದೆ. ಇದರ ಜೊತೆಗೆ ಎಷ್ಟೋ ಅಜ್ಞಾತವಾಗಿದ್ದ ಗೀತ ಸಂಪ್ರದಾಯಗಳೂ ಈಗ ಬೆಳಕಿಗೆ ಬರುತ್ತಿವೆ. ಇಂತಹ ನಿದರ್ಶನಗಳಲ್ಲಿ ಡೊಳ್ಳಿನ ಹಾಡುಗಳ ಸಂಕಲನವೂ ಸಹ ಒಂದಾಗಿದೆ. ಯಾಕಂದರೆ ಡೊಳ್ಳು ಕುಣಿತ ನಮ್ಮಲ್ಲಿ ಸಾಕಷ್ಟು ಜನಪ್ರಿಯತೆಯನ್ನೂ ಗಳಿಸಿಕೊಂಡಿದ್ದರೂ, ಅದಕ್ಕೆ ಅಡಿಗಲ್ಲಾಗಿ ಒಂದು ಕಥಾಮೇಳವೂ ರೂಪುಗೊಂಡಿದೆ. ಆ ಸಂಪ್ರದಾಯದ ಸಾಹಿತ್ಯವೂ ಹೇರಳವಾಗಿದೆ ಎಂಬುದರ ಬಗ್ಗೆ ದಕ್ಷಿಣ ಕರ್ನಾಟಕದಲ್ಲಿ ಈವರೆಗೆ ಯಾರೂ ವಿಚಾರ ಮಾಡಲಿಲ್ಲ. ಉತ್ತರ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿದ್ದ ಈ ವಿಶಿಷ್ಟ ಸಂಪ್ರದಾಯ ದಕ್ಷಿಣ ಕರ್ನಾಟಕದಲ್ಲೂ ಸಾಕಷ್ಟು ವ್ಯಾಪಕವಾಗಿ ಕಂಡು ಬರುತ್ತದೆ.[12]

ಹಲಸಂಗಿ ಗೆಳೆಯರ ಬಳಗದ ಪ್ರಮುಖ ಶ್ರೀ ಮಧುರ ಚನ್ನರು ಕುರುಬರ “ಗ್ರಾಮ ಕಾವ್ಯ” ಒಂದಿದೆ ಎಂದು ಹೇಳಿದ್ದುಂಟು.

“ಸುಮಾರು ಮೂರು ಸಾವಿರ ನುಡಿಗಳನ್ನುಳ್ಳ ಬೀರನ ಹಾಡುಗಳು ಎಂಬುದೊಂದು ಅರವತ್ತು ಸಂಧಿಗಳನ್ನೊಳಗೊಂಡ ರಸವತ್ತಾದ ಗ್ರಾಮ ಕಾವ್ಯವು ಕುರುಬರಲ್ಲಿದೆ” ಎಂಬುದಾಗಿ ಶ್ರೀ ಸಿಂಪಿ ಲಿಂಗಣ್ಣನವರು ದಾಖಲೆ ಪಡೆಯಿಸಿರುವರು.

“ಜನಪದ ಹಾಲು ಮತ ಮಹಾಕಾವು’ ಇತ್ತೀಚಿನ ವರುಷಗಳಲ್ಲಿ “ಜನಪದ ಹಾಲು ಮತ ಮಹಾಕಾವ್ಯ”ವು (೨೦೦೦) ಡಾ. ವೀರಣ್ಣ ದಂಡೆ ಅವರಿಂದ ಸಂಪಾದನೆಗೊಂಡು ಹೊರಬಂದಿದೆ. ಮುಖ್ಯ ಹಾಡುಗಾರನದ ಕಲಬುರ್ಗಿ ಜಿಲ್ಲೆಯ ಶಹಾಪೂರ ತಾಲೂಕಿನ, ಸೈದಾಪೂರ ಗ್ರಾಮದ

ಶ್ರೀ ಸಿದ್ಧಪ್ಪ ಭೀಮಪ್ಪ ಮೇಟಿಯವರು ಮಹಾಕಾವ್ಯ ಹಾಡಿಕೊಂಡಿದ್ದುಂಟು. ಇವರ ಜೊತೆ ಎಂಟು ಜನ ಹಾಡುಕಾರರು ಈ “ಜನಪದ ಹಾಲುಮತ ಮಹಾಕಾವ್ಯ”ವನ್ನು ಹಾಡಿಕೊಂಡಿದ್ದಾರೆ.

ಈ ಬೃಹತ್ ಗ್ರಂಥಕ್ಕೆ ಸುದೀರ್ಘವಾದ ಪ್ರಸ್ತಾವನೆಯನ್ನು ಸಂಪಾದಕರು ಬರೆದಿದ್ದಾರೆ. ಈ ಕೃತಿಯ ವಿಷಯಗಳೆಲ್ಲವನ್ನೂ ಡೊಳ್ಳಿನ ಹಾಡಿನಲ್ಲಿ ತುಂಬಿದ್ದಾರೆ ಪ್ರಾರಂಭಕ್ಕೆ

“ಸ್ವಾಮಿ ನಮ್ಮಯ್ಯ ದೇವರ ಬಂದಾವ ಬನ್ನಿರೆ”

ಎಂದಿದ್ದಾರೆ, ಮಧ್ಯದಲ್ಲಿ ಮತ್ತು ಕೊನೆಯಲ್ಲಿ ಸಂದನ್ನು ಹೇಳುತ್ತಾರೆ. (ಇಲ್ಲಿಗೆ ಒಂದು ಸಂದ್ ಸಂದಿಗೇಳು ಬಿಳ್ ಮುಂ-ಮುಂದೇಳೋs)

“ಇಲ್ಲಿಗೆ ಹರಹರ ಇಲ್ಲಿಗೆ ಶಿವಶಿವ
ಇಲ್ಲಿಗೆ ಇದು ಒಂದು ಸಂದೇಳೊ
ಸಂದಿನ ಪದಗಳು ವಂದಿಸಿ ಹೇಳುವೆ
ತಂದಿ ಮಾಳಿಂಗ ರಾಯಾನೋ
ದೇವರು ಬಂದಾವ ಬನ್ನಿರೇ”[13]

ಈ “ಜನಪದ ಹಾಲುಮತ ಮಹಾಕಾವ್ಯ”ದಲ್ಲಿ (೧) ಕೈಲಾಸದ ಹಾಡಿಕೆ (೨) ಬೀರಪ್ಪನ ಪೂರ್ವಜನ್ಮದ ವೃತ್ತಾಂತ (೩) ಕಾಳಿನಾರ‍್ಯಾಣ ದೇವರ ವೃತ್ತಾಂತ (೪) ಬೀರಪ್ಪನ ಜನನ ವೃತ್ತಾಂತ (೫) ಅಕ್ಕವ್ವ-ಮಾಯವ್ವರ ವೃತ್ತಾಂತ (೬) ಬಾಲ ಬೀರಣ್ಣನ ಲೀಲಾ ವೃತ್ತಾಂತ (೭) ಲಿಂಗ ಬೀರಣ್ಣನ ಮದುವೆಯ ವೃತ್ತಾಂತ (೮) ಲಿಂಗ ಬೀರಣ್ಣ ದೇವರ ವೃತ್ತಾಂತ (೯) ಮಾಳಿಂಗರಾಯನ ಪೂರ್ವಜರ ವೃತ್ತಾಂತ (೧೦) ಮಾಳಿಂಗರಾಯ ಗುರು ಬೀರಣ್ಣನ ಸೇವೆಯಲ್ಲಿ (೧೧) ಡಂಕನಾಡ ಡೈಗೊಂಡನ ವೃತ್ತಾಂತ (೧೨) ಅಮೋಗಸಿದ್ಧನ ವೃತ್ತಾಂತ (೧೩) ಪಾಂಡುರಂಗನ ವೃತ್ತಾಂತ (೧೪) ಇತರ ಶರಣರ ವೃತ್ತಾಂತಗಳು ಹಿಂಗೆ ೬೩೧ ಪುಟಗಳ ಕಾವ್ಯ ರಚನೆಯಾಗಿದೆ.

ಇಲ್ಲಿಯವರೆಗೆ (ಕ್ರಿ.ಶ.೨೦೦೫) ಹಾಲುಮತ ಕಾವ್ಯ ಇಂತಹ ಕೃತಿ ರಚನೆಯಾದುದು ಇದೊಂದೇ ಎಂದು ಹೆಮ್ಮೆಪಡಬೇಕಾಗುತ್ತದೆ.

ಜೀವನ ಜೋಕಾಲಿ ಭಾಗ – ೬ (ಡೊಳ್ಳಿನ ಹಾಡು)

ಪ್ರಸ್ತುತ ಕೃತಿಯನ್ನು ಡಾ.ಎಂ.ಎಸ್. ಸುಂಕಾಪೂರ ಅವರು ಸಂಪಾದಿಸಿರುವರು. (೧) ಗಣಸ್ತುತಿ (೨) ಗುರುಸ್ತುತಿ (೩) ಮತಸ್ತುತಿ (೪) ಪುರಾಣಸ್ತುತಿ (೫) ಶರಣಸ್ತುತಿ (೬) ನೀತಿಸ್ತುತಿ ಇವುಗಳನ್ನು ವರ್ಗೀಕರಿಸಿ ಒಟ್ಟು ೫೩ ಡೊಳ್ಳಿನ ಹಾಡುಗಳನ್ನು ಪ್ರಕಟಿಸಿರುವರು. ಡೊಳ್ಳಿನ ಅಪ್ಪಟ ಹಾಡುಗಳೆಂದು ಸಮೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಡಾ. ಸುಂಕಾಪುರ ಅವರು ಈ ಕೃತಿಗೆ ಪ್ರಸ್ತಾವನೆಯನ್ನು ಬರೆದು ಕೃತಿ ಸಾಹಿತ್ಯವು ಮೌಲಿಕವಾದವುಗಳೆಂದೂ, ಕುರುಬರ ಜನಾಂಗವು ನಿಜ ಮಾನವರೆಂದೂ ಅಭಿಪ್ರಾಯವನ್ನೂ ಪ್ರಕಟಿಸಿರುವರು. “ಕುರುಬರ ಮತ (ಹಾಲುಮತ) ಸತ್ಯಕ್ಕೆ ಸದಾಚಾರಕ್ಕೆ, ಸದ್ಗುಣಕ್ಕೆ, ಶುದ್ಧ ಭಕ್ತಿಗೆ ಹೆಸರಾಂತ ಮತ. ಮರಣರಹಿತ ಮಹಾದೇವನನ್ನು ಭಜಿಸುತ್ತ ಸತ್ಯ ಶುದ್ಧ ಕಾಯಕವನ್ನು ಮಾಡುತ್ತ ನಮ್ಮ ನಾಡಿನ ಕುರುಬರು ಮೊದಲಿನಿಂದಲೂ ನಡೆದುಕೊಂಡು ಬಂದಿದ್ದಾರೆ. ಅವರಲ್ಲಿ ಮರೆಮೋಸ ಇಲ್ಲವೇ ಇಲ್ಲ. ತ್ರಿಕರಣ ಪೂರ್ವಕವಾಗಿ ಜೀವನದಲ್ಲಿ ಶುದ್ಧಿಯನ್ನು ಪಡೆದವರು ಈ ಜನರು. ಈ ಜನಾಂಗದ ಪೂರ್ವಜರು ಗುಡ್ಡದ ಮೇಲೆ ನಿಂತು ಕಂಬಳಿ ಬೀಸಿದರೆ ಮಳೆ ಬರುತ್ತಿತ್ತು. ಶುಭ ಕಾರ್ಯಕ್ಕೆ ಕುರುಬನೇ ಮುಂದಾಳಾಗಬೇಕೆಂದು ಜನತೆಯ ಬಯಕೆ, ಹಾಗೇ ಆದರೆ ಲಾಭ ಕಟ್ಟಿಟ್ಟದ್ದು”.

“ದೇವsರ್ ಬಂದಾವ್ ಬನ್ನೀsರೆ” ಡಾ. ಶಿವಾನಂದ ಗುಬ್ಬಣ್ಣವರ ಅವರು ಭಾಗ-೧ ರಲ್ಲಿ ಹತ್ತೊಂಬತ್ತು ಹಾಡುಗಳನ್ನೂ ಭಾಗ-೨ರಲ್ಲಿ ಹದಿಮೂರು ಹಾಡುಗಳನ್ನು ಸಂಪಾದಿಸಿ ಕೃತಿಗಳನ್ನು ಪ್ರತ್ಯೇಕವಾಗಿಯೇ ಪ್ರಕಟಿಸಿದ್ದಾರೆ. ಎರಡೂ ಸಂಗ್ರಹಗಳಲ್ಲಿ ಹಾಡುಗಾರರ ಹೆಸರುಗಳನ್ನು ಪ್ರದೇಶವನ್ನು ಪ್ರಕಟಿಸಿದ್ದಾರೆ. ಡೊಳ್ಳಿನ ಹಾಡುಗಳ ಉಪಯುಕ್ತ ಕೃತಿಗಳು ಇವಾಗಿವೆ. ಹಾಲುಮತದ ಪುರಾಣಕತೆಗಳು, ನೀತಿಕಥೆಗಳು ಮುಖ್ಯವಾಗಿ ಕಾಣಿಸಿಕೊಂಡಿವೆ. ಸುದೀರ್ಘವಾದ ಪ್ರಸ್ತಾವನೆಗಳು ಈ ಕೃತಿಗೆ ಮೆರಗನ್ನುಂಟು ಮಾಡಿದೆ. ಮೊದಲನೆಯ ಭಾಗಕ್ಕೆ ಡಾ. ಎಂ.ಎಸ್. ಸುಂಕಾಪುರ ಹಾಗೂ ಎರಡನೆಯ ಭಾಗಕ್ಕೆ ಶ್ರೀ ಎಚ್.ಎಲ್. ನಾಗೇಗೌಡರ ಸದಭಿಪ್ರಾಯಗಳನ್ನು ಕಂಡಿವೆ.

ತೂಕ ಮಾಡಿ ಹೇಳತೀನಿ ನ್ಯಾಯಾ : ಶ್ರೀ ಬಸಗೌಡ ಪಾಟೀಲವರು ಸಂಪಾದಕರಾಗಿ, ಯಳವತ್ತಿಯ ಒಕ್ಕಲು ಮಕ್ಕಳ ಪ್ರಕಾಶನದಿಂದ (೧೯೮೦) ಪ್ರಕಟಿಸಿದ ಕೃತಿ ಇದಾಗಿದೆ. ಒಟ್ಟು ಹದಿನೆಂಟು ಹಾಡುಗಳಿಂದಕೂಡಿದ ಕೃತಿ ಇದಾಗಿದ್ದು ಗದ್ಯರೂಪಕ್ಕೇರಿದ ವಚನಗಳು ಇಲ್ಲಿವೆ. ಇಂದು ಕಾಲದ ಭಕ್ತಿರಸದ ರ‍್ವಾಣಗಳೇ ವಚನಗಳಾಗಿ ಕಂಡುಬರುತ್ತಿವೆ. ಡೊಳ್ಳಿನ ಸಾಹಿತ್ಯಕ್ಕೆ ಈ ಕೃತಿಯು ಸಹಾಯಕವೇ ಆಗಿದೆ. ಮಹಾಭಾರತಕ್ಕೆ ಸಂಬಂಧಿಸಿದ ಹಾಡುಗಳು, ಶರಣರ ಹಾಡುಗಳು ಗಮನಾರ್ಹವಾಗಿವೆ.

ಕಾಡು ಹೂವುಗಳು : ಸಂ.ಜಿ.ಬಿ. ಖಾಡೆ ಅವರು ಸಂಪಾದಿಸಿದ “ಕಾಡು ಹೂವುಗಳು” ಕೃತಿಯಲ್ಲಿ “ಪುಂಡ ಭೂತಾಳ ಸಿದ್ಧ ದೇವರು, ಹುಲಿಯ ಫಜೀತಿ, ಗುರುವಿನ ಮಾರ್ಗಪದ ೧ನೆಯ ಸಂಧಿ-೬೭ನೆಯ ಸಂಧಿಯವರೆಗೆ ಸುದೀರ್ಘ ದ್ವಿಪದಿ – ತ್ರಿಪದಿಗಳ ಹಾಡು ಸಾಗುತ್ತ ರೇವಣಸಿದ್ಧಣನನ್ನು ನೆನೆಯುತ್ತ ೬ನೆಯ ಸಂಧಿ ಮಂಗಳಾರುತಿ, ೬೯ನೆಯ ಸಂಧಿ ಮಂಗಳಾರುತಿಯ ಪದಗಳನ್ನು ಸಂಗ್ರಹಿಸಿ ಪ್ರಕಟಿಸಿದ್ದು ಮಹತ್ವ ಸನ್ನಿವೇಶಗಳನ್ನು ನೀಡಿರುವುದೂ ಗಮನವಹಿಸಬೇಕಾಗಿದೆ. ಕೊನೆಯಲ್ಲಿ ಕೆಲವು ಜನಪದ ಶಬ್ದಗಳಿಗೆ ಸರಳ ಅರ್ಥಗಳನ್ನು ನೀಡಿದ್ದಾರೆ.

ನಡಿಯಪ್ಪ ನಮ್ಮ ನಾಡಿಗೆ : ಕೆ. ವಿರೂಪಾಕ್ಷಗೌಡ ಮತ್ತು ಮೇಟಿ ಕೊಟ್ರಪ್ಪನವರು ಸಹಾಸಮಾಡಿ  ಕೃತಿಯಲ್ಲಿ ಡೊಳ್ಳಿನ ಹಾಡುಗಳನ್ನು ದಾಖಲಾಯಿಸಿದ್ದಾರೆ. ಇಲ್ಲಿ ಒಟ್ಟು ೪೮ ಡೊಳ್ಳಿನ ಹಾಡುಗಳಿವೆ. ೩೪ನೆಯ ಮತ್ತು ೪೭ನೆಯ ಹಾಡುಗಳು (ರ‍್ವಾಣ = ರೋಣ)ಗಳ ಬಗೆಗೆ ತಿಳುವಳಿಕೆ ನೀಡುತ್ತಿವೆ. ಹಣರಿಬೊಮ್ಮನಹಳ್ಳಿ ಪ್ರದೇಶದಲ್ಲಿ ರೋಣವೆಂದರೆ ರ‍್ವಾಣ ಎಂಬುದಾಗಿ ತಿಳುವಳಿಕೆ ನೀಡುತ್ತಿವೆ.

“ಹಲುಲುಗ್ಯಾ ಹುಲುಲುಗ್ಯಲೇ ತಮ್ಮ ಹುಲುಲುಗ್ಯಾ
ಹೇಳ್ತೀನಿ ಕೇಳಲೇ ತಮ್ಮ ಹುಲುಲುಗ್ಯಾ
ಶಿರಹಟ್ಟಿ ಜಾತ್ರೆಗೊಮ್ಮೆ ಹೋರಿ ತರಾಕಹೊಂಟ್ನಿಲೆ ತಮ್ಮಾ ಹುಲುಲುಗ್ಯಾ’.
(ಪುಟ ೪೩)

“ಅಣ್ಣಣ್ಣ ಕೇಳ್ ನಮ್ಮಣ್ಣ ರೋಣ ಹೇಳ್ತೀನಿ ರೋಣದ ಅರ್ಥ ಹೇಳ್ತೀನಿ
ಅರ್ಥ ತಿಳಿದವ ಅಕ್ಷರ ತಿಳಿದವ ಅಕ್ಷರದ ಗುರ್ತು ತಿಳಿದವ”.
(ಪುಟ ೫೫)

ಹೀಗೆ “ರ‍್ವಾಣ”ವನ್ನು “ರೋಣ”ವೆಂದು ಬಳಕೆಯಾಗಿ ಚಲಾವಣೆಯಲ್ಲಿರುವುದನ್ನು ತಿಳಿಸುವ ದಾಖಲೆಗಳು ಇವಾಗಿವೆ. ಈ ಕೃತಿ ಅಧ್ಯಯನಕಾರರಿಗೆ ಕ್ಷೇತ್ರ ಅಧ್ಯಯನದವರಿಗೆ, ಕ್ಷೇತ್ರಕಾರ್ಯಕ್ಕೆ ಮಹತ್ವದ ಕೃತಿಯೇ ಆಗಿದೆ.

ಗಂಡಸರ ಜನಪದ ಹಾಡುಗಳು : ನಿಂಗಣ್ಣ ಸಣ್ಣಕ್ಕಿಯವರು ೧೯೭೧ರಿಂದ ೧೯೮೨ರವರೆಗೆ ಕೈಕೊಂಡ ಜಾನಪದ ಕ್ಷೇತ್ರಕಾರ್ಯದಲ್ಲಿ ತಮಗೇ (ನನಗೆ) ಏನೇನು ದೊರಕುತ್ತದೆಯೋ ಅವುಗಳನ್ನೆಲ್ಲ ದಾಖಲಿಸಿಕೊಂಡು ಈ ಕೃತಿಯಲ್ಲಿ ಮಾದರಿಗಾಗಿ ಡೊಳ್ಳಿನ ಹಾಡುಗಳ ಪ್ರಕಟಣೆ ಪ್ರಕಾಶಮಾನಗೊಳಿಸಲಾಗಿದೆ. ಅಂದಿನಿಂದ ಇಂದಿನವರೆಗೂ (ಕ್ರಿ.ಶ.೨೦೦೫) ಸಂಗ್ರಹ-ಸಂಶೋಧನೆ ಸಾಗಿಯೇ ಇದೆ. ಡೊಳ್ಳಿನ ಹಾಡುಗಳ ಸಂಗ್ರಹವೂ ಉಂಟು. ಇವುಗಳಲ್ಲಿ “ಹರಕಿ ಹಾಡಿ ಅಥವಾ ಕರಿ ಹಾಡು ಮಹತ್ವದ ಸ್ಥಾನ ಪಡೆಯಲರ್ಹವಾಗಿವೆ” (ಪ್ರೊ) ಜ್ಯೋತಿ ಹೊಸೂರು ಅವರ ಅಭಿಪ್ರಾಯ ಒಂದನ್ನು ಪಟ್ಟಿದ್ದಾರೆ.

ಜಾನಪದದಲ್ಲಿ ಕಲವಡೆ ಗುರು ಶಾಂತೇಶ : ಶ್ರೀ ಬಸವರಾಜ ಪಾವಟೆ ಮೂಲತಃ ಗೋಕಾಕ ತಾಲೂಕಿನ ಮಮದಾಪೂರ ಗ್ರಾಮದವರು. ಶಲವಡಿಗೆ ನೌಕರಿ ಜೀವನದಲ್ಲಿ ತಮ್ಮ ಸ್ವಯಂ ಸ್ಫೂರ್ತಿಯಿಂದ ಕ್ಷೇತ್ರ ಕಾರ್ಯನಡೆಯಿಸಿ ಈ ಕೃತಿ ಪ್ರಕಟಿಸಿದ್ದುಂಟು. ಡೊಳ್ಳು ಹಾಡುಗಾರರಿಂದ “ಗುರುಶಾಂತೆ” ಎಂದು ಹಾಡುಗಳನ್ನು ಸಂಗ್ರಹಿಸಿ ಪ್ರಕಟಿಸಿರುವರು.

ರಾಯಚೂರ ಜಿಲ್ಲೆಯ ಜನಪದ ಗೀತೆಗಳು : ಟಿ.ಎಸ್. ರಾಜಪ್ಪ ಅವರು ರಾಯಚೂರ ಜಿಲ್ಲೆಯಲ್ಲಿ ಕ್ಷೇತ್ರಕಾರ್ಯದಲ್ಲಿ ಸಂಗ್ರಹಿಸಿದ ಜನಪದ ಹಾಡುಗಳನ್ನು ಕನ್ನಡ ಅಧ್ಯಯನ ಸಂಸ್ಥೆ ಮೈಸೂರು ವಿ.ವಿ.ಯಿಂದ ಪ್ರಕಾಶಗೊಳಿಸಲಾಗಿದೆ. (೧೯೭೬) ಹದಿನಾಲ್ಕು (೧೪) ಡೊಳ್ಳಿನ ಹಾಡುಗಳನ್ನು ಈ ಸಂಗ್ರಹದಲ್ಲಿ ಪ್ರಕಟಿಸಿರುವರು. ಇವುಗಳಲ್ಲಿ ಬಸವಣ್ಣನ (ನಂದಿ = ಎತ್ತ) ಮಹತ್ವ ಮತ್ತು ಪಾವಿತ್ರತೆಯನ್ನು ಹೇಳುವ ಹಾಡೊಂದು ಇದೆ. ಪ್ರತಿ ಅಂಗದಲ್ಲೂ ಒಬ್ಬೊಬ್ಬ ದೇವನಿರುವುದನ್ನು ಹೇಳಲಾಗುತ್ತಿದೆ. ರಾಯಚೂರ ಜಿಲ್ಲೆಯ ಡೊಳ್ಳಿನ ಹಾಡುಗಳ ಬಗೆಬಗೆಯಾಗಿರುವುದು ತಿಳಿದು ಬರುತ್ತದೆ.

“ಹಿಂಗಬಿಟ್ರ ದೇಶಾ ಆಳ್ಯಾಳ” : ಶ್ರೀ ಬಸಗೌಡ ಪಾಟೀಲರು ಉತ್ಸಾಹದಿಂದ ತಮ್ಮ ಕೃತಿಯನ್ನು ಈ ಮೊದಲು ರಚಿಸಿದ್ದು (ತೂಕ ಮಾಡಿ ಹೇಳತೀನಿ ನ್ಯಾಯ) ನೆನಪಿಸುವುದವಶ್ಯ ಹಾಗೂ ಮತ್ತೊಂದು ಡೊಳ್ಳಿನ ಈ ಸಂಗ್ರಹ ಅವರ ಉತ್ಸಾಹಕ್ಕೆ ಹೆಚ್ಚಿನ ಮೆರಗು ತಂದಿದೆ. ಆಧುನಿಕ ವಿಷಯಗಳನ್ನೊಳಗೊಂಡ ಹಾಡುಗಳು ಇಲ್ಲಿವೆ. ಒಟ್ಟು ಹಾಡುಗಳು ಹದಿನೈದು (೧೫) ಇವೆ. ಹಾಡಿದವರ ಪರಿಚಯವೂ ಇಲ್ಲಿ ಸೇರಿಸಲಾಗಿದೆ. ಸಿಪಾಯಿ, ನಾಜೂಕನಾರಿ, ಪೋರಿ, ಪಾತರದವಳು, ಕದನ ಗಡಕಿ, ತಂಜಾವರಿ ಇತ್ಯಾದಿ ಹಾಡುಗಳನ್ನು ಡೊಳ್ಳಿನವರು ಹಾಡುವುದು ಆಧುನಿಕ ವಿಷಯವೆನ್ನದೇ ಇರಲಾಗದು. ಇವು ಹಾಡಿನ ಚಲನೆಗಳನ್ನು ತೋರುತ್ತವೆ. ಮುನ್ನುಡಿಯಲ್ಲಿ ರ‍್ವಾಣಗಳ ಬಗೆಗೆ ಪ್ರಸ್ತಾಪವಿದ್ದು ಪ್ರಸ್ತಾವನೆಯಲ್ಲೂ ವಿವರಗಳುಂಟು. ಈ ಕಡೆಗೆ ರ‍್ವಾಣ ಹೇಳುವವರು. “ಅಣಣಣ……. ಅಣಣಣ………. ಅಣಣ… ಹೌದಣ್ಣ ಹೌದು” ಎಂಬ ಮಾತು ಚಲಾಯಿಸುವುದುಟು ಎಂಬುದಾಗಿ ತಿಳಿಸಿದ್ದಾರೆ. ಇವರ ಅಭಿರುಚಿ – ಅಧ್ಯಯನ ಗಮನಾರ್ಹ.

ಒಂದು ಶತಮಾನ ಸಮೀಪಿಸುತ್ತ ಕನ್ನಡ ಜಾನಪದವು ದಾಖಲೆಗೊಳ್ಳುತ್ತದೆ. ಕನ್ನಡದಲ್ಲಿ ಗಮನಾರ್ಹವಾಗಿ ಸಂಗ್ರಹ ಸಂಶೋಧನೆಗಳು ನಡೆಯುತ್ತ ಸಾಗಿವೆ. ಆದರೆ ಬಹು ಎತ್ತರ ಹಾಗೂ ವಿಸ್ತಾರವಾದ ಡೊಳ್ಳಿನ ಪದಗಳ ಸಂಗ್ರಹ ಮತ್ತು ಸಂಶೋಧನೆ ಗಮನಾರ್ಹವಾಗಿ ಸಾಗಿಬಂದಿಲ್ಲ ; ಅಧ್ಯಯನಕಾರರು ಡೊಳ್ಳಿನ ಪದಗಳಲ್ಲಿ “ಮಹಾಕಾವ್ಯಗಳ” ಬಗೆಗೆ ಗಮನ ಹರಿಸಿದಂತಿಲ್ಲ. “ಡೊಳ್ಳಿನ ಹಾಡುಗಳ ಸಮೀಕ್ಷೆ” ಕೃತಿಯೊಂದನ್ನು ಪ್ರೋ || ಜ್ಯೋತಿ ಹೊಸೂರು ಅವರು ತಮ್ಮ ಕಾಲಗತಿ ಪ್ರಕಾಶನ ರಾಯಭಾಗದಿಂದ (೨೦೦೩ ಪ್ರ. ಮುದ್ರಣ) ಹೊರತಂದಿರುವರು. ಡೊಳ್ಳು, ಡೊಳ್ಳು-ಕುಣಿತ, ಡೊಳ್ಳು ಸಂಗೀತ, ಡೊಳ್ಳಿನ ಹಾಡುಗಳು ಕುರಿತಾಗಿ ಸುದೀರ್ಘವಾದ ಅಧ್ಯಯನ ನಡೆಯಿಸಿದವರು. ಅವರು ಈ ಕೃತಿಯಲ್ಲಿ ಅನುಬಂಧ-೧ರಲ್ಲಿ ಡೊಳ್ಳಿನ ಪದಗಳ ೧೦ ಕೃತಿಗಳ ಪಟ್ಟಿ, ಅನುಬಂಧ-೨ರಲ್ಲಿ ಡೊಳ್ಳಿನ ಪದಗಳ ೬ ಕೃತಿಗಳ ಪಟ್ಟಿ ಅನುಬಂಧ-೩ರಲ್ಲಿ ಡೊಳ್ಳಿನ ಪದಗಳ ೬ ಕೃತಿಗಳ ಪಟ್ಟಿಯನ್ನು ನೀಡಿದ್ದಾರೆ. ಅವರ ಒಟ್ಟು ವಿವೇಚನೆ ಹೀಗಿದೆ. “ಡೊಳ್ಳು ಮತ್ತು ಡೊಳ್ಳಿನ ಹಾಡುಗಳ ಕುರಿತಂತೆ ಪ್ರಕಟವಾಗಿರುವ ಬರವಣಿಗೆ ತೀರ ಸ್ವಲ್ಪ ಎಂಬುದು ವಿದಿತವಾಗುತ್ತದೆ. ಮೇಳಗಳ ಸರಿಯಾದ ಕ್ರಮ ಹಾಡುಗಳ ಮತ್ತು ಹಾಡುಗಾರರ ಮಜಲುಗಳು ಸರಿಯಾದ ರೀತಿ, ಕ್ಷೇತ್ರ ಕಾರ್ಯದ ಹಿನ್ನೆಲೆಯಲ್ಲಿ ಹಾಡುಗಳ ವಸ್ತು ವೈವಿಧ್ಯದ ವಿಶ್ಲೇಷಣೆ ಹಾಗೂ ಪರಂಪರಾಗತ ವಿವಿಧ ಬಗೆಯ ಪರಿಭಾಷಿಕಗಳ ವಿವರಣೆ ಇತ್ಯಾದಿಗಳ ಬಗ್ಗೆ ಹೆಚ್ಚಿನ ಮತ್ತು ನಿಖರವಾದ ಮಾಹಿತಿ ಇಂದಿನವರೆಗೆ ಹೊರಬಂದಿಲ್ಲವೆಂಬುದು ಈಗ ಸ್ಪಷ್ಟವಾಗುತ್ತದೆ”[14]

ಡೊಳ್ಳಿನ ವಾಙ್ಮಯವು ಜಾನಪದ ವಾಙ್ಮಯವೇ ಆಗಿದ್ದು, ಹಾಡುಗರ ಕಂಠಗಳಲ್ಲಿ ತುಂಬಿಕೊಂಡಿದೆ. ಈಗಾಗಲೇ ಕನ್ನಡ ಜಾನಪದದಲ್ಲಿ ಡೊಳ್ಳಿನ ಪದಗಳು ಬೃಹತ್ ಅಥವಾ ಹಬ್ಬೊತ್ತಿಗೆಗಳಿಂದ ಅಕ್ಷರಗಳ ದಾಖಲೆಯಾಗಿ ಹೊರಬರಬೇಕಾಗಿತ್ತು. ಈ ಅಧ್ಯಯನಕ್ಕೆ ಸರಕಾರದ ಯಾವ ವಿಭಾಗವೂ ಮಹತ್ವ ಕೊಡದೆ ಬಂದಿದೆ. ಇನ್ನು ಮೇಲಾದರೂ ಈ ಸಂಪತ್ತು ಹೊರಬರಬೇಕಾದುದು ಅವಶ್ಯ. ಹೀಗಾದಲ್ಲಿ ನಾಡು-ನುಡಿ ಸಂಸ್ಕೃತಿಗೆ ಹೆಚ್ಚಿನ ಮಹತ್ವ ಬಾರದೇ ಇಲ್ಲ. ಒಬ್ಬಿಬ್ಬರು ಹಾಡುಗಾರರಲ್ಲೇ ಒಂದೊಂದು ಗ್ರಂಥಗಳಾಗುವಷ್ಟು ವಿಷಯ ತುಂಬಿಕೊಂಡಿದೆ. ಗೋಕಾಕ ತಾಲೂಕಿನ ವಡೇರ ಹಟ್ಟಿ ಗ್ರಾಮದ ಶ್ರೀ ಲಕ್ಷ್ಮಣ ಸಿದ್ಧಪ್ಪ ಜಗಮುತ್ತಿ ಮತ್ತು ಶ್ರೀ ಭೀಮಪ್ಪ ಕೆಂಚಪ್ಪ ಪೂಜಾರಿ, ಗುರು-ಶಿಷ್ಯರಾಗಿ ಹಾಡುವ ಕೆಲವು ಡೊಳ್ಳಿನ ಪದಗಳನ್ನು ದಾಖಲಾಯಿಸಿಕೊಂಡಿರುವನು.

ಈಗ ಹತ್ತು ವರುಷದಿಂದ ಡೊಳ್ಳಿನ ಹಾಡುಗಳನ್ನು  ಮಹಿಳೆಯರು ಹಾಡಲು ಸುರು ಮಾಡಿ ವಾಲಗಗಳಲ್ಲಿ ಪುರಸ್ಕಾರಗಳನ್ನು ಪಡೆಯುತ್ತಿದ್ದಾರೆ. ಗೋಕಾಕ ತಾಲೂಕಿನ ಖನಗಾವಿ ಗ್ರಾಮದ ಇಬ್ಬರು ಮಹಿಳೆಯರು ಮಾರ್ಗದ ಹಾಡುಗಳನ್ನು ಮೇಳ ಕಟ್ಟಿಕೊಂಡು ಹಾಡುತ್ತಿದ್ದಾರೆ. ಅವರ ಹೆಸರುಗಳು. (೧) ಶ್ರೀಮತಿ ಮಲ್ಲವ್ವ ಅಪ್ಪಯ್ಯ ಮರೇಪ್ಪಗೋಳ (೨) ಶ್ರೀಮತಿ ಯಮನವ್ವ ಶಿವಪ್ಪ ಮರೆಪ್ಪ ಗೋಳ ಹಾಗೂ ಎಂಟು ಜನ ಸಂಗಡಿಗರು (ಇವರೆಲ್ಲ ಪುರುಷರು). ಮುಖ್ಯ ಹಾಡುಗಾರರು ಮಹಿಳೆಯರು ಹಾಡುತ್ತಾರೆಂಬುದಾಗಿ ಸಂದೇಶ ಹಬ್ಬಿದಾಗ ಎಲ್ಲಿಲ್ಲದ ಜನ ಕೇಳಿದವರೆಲ್ಲರೂ ಡೊಳ್ಳಿನ ಪದಗಳನ್ನು ಕೇಳಲು ಕೊಡುತ್ತಾರೆ. ಆದರೆ ನಿರೀಕ್ಷಣೆಯಲ್ಲಿ ಕಂಡು ಬರುವುದೇನೆಂದರೆ “ಡೊಳ್ಳಿನಲ್ಲಿ ವಾದ-ವಿವಾದದ ಹಾಡುಗಳೇ ಹೆಚ್ಚು. ಕಲಗಿ-ತುರಾಯಿ ಹಾಡಿನಂತೆ ಮೇಳಗಳಲ್ಲಿ ಚರ್ಚೆ ನಡೆಯುತ್ತದೆ. ಇವರ ಹಾಡುಗಳಲ್ಲಿ ಪುರಾಣ, ಮಹಾಕಾವ್ಯದ ಪ್ರಸಂಗಗಳಿದ್ದರೂ, ಹಾಗೇಕೆ ? ಹೀಗೇಕೆ ? ಪ್ರಶ್ನಾರ್ಥಕವಾಗಿ ನಿಲ್ಲುತ್ತವೆ. ತಮ್ಮ ತಮ್ಮ ಕೀರ್ತಿಗಳನ್ನು ತಾವೇ ಪದಕಟ್ಟಿ ಹಾಡುತ್ತಾ ಸಾಗಿದ್ದಾರೆ. ಇವರು ತಯಾರಿಸುತ್ತಿರುವ ಧ್ವನಿ ಸುರುಳಿ (ಟೇಪ್‌ರಿಕಾರ್ಡ್)ಗಳು ಇದೇ ಮಾದರಿಯಾಗಿರುತ್ತವೆ.

ಡೊಳ್ಳಿನ ಪದಗಳ ಮೇಳದವರು (ವಾಲಗದವರು) ಇಡಿಯಾಗಿ ಲೆಕ್ಕ ಹಾಕಲಾಗಿಲ್ಲ. ಅಲ್ಲಲ್ಲಿ ಕಂಡಷ್ಟು ಹೇಳಲಾಗುತ್ತದೆ. ಸಂ|| ಸಿದ್ಧರಾಜ ಪೂಜಾರಿ ಮತ್ತು ಜಯವಂತ ಕಾಡದೇವರ ಇವರು “ಬೆಳವಲದ ಬೆಡಗು” (ಅ.ಭಾ.೬೪ನೆಯ ಕ.ಸಾ. ಸಮ್ಮೇಳನ ಮುಧೋಳ, ಜಿ|| ಬಾಗಲಕೋಟೆ (ಬಿಜಾಪೂರ) ಕೃತಿಯಲ್ಲಿ ಒಟ್ಟು ೫೭ ಡೊಳ್ಳಿನ ತಂಡಗಳನ್ನು ಗುರುತಿಸಿದ್ದಾರೆ.

ಇತ್ತೀಚೆಗೆ (ದಿ. ೫-೪-೨೦೦೫)ರಂದು ೫೧೬ನೆಯ ಜಯಂತೋತ್ಸವ ಹಾಗೂ ರಾಮದುರ್ಗ ತಾಲೂಕಾ ಹಿಂದುಳಿದವರ ಸಮಾವೇಶ ಕಾರ್ಯಕ್ರಮದ ಯೋಜನೆಯಲ್ಲಿ ಶ್ರೀ ಲಕ್ಷ್ಮಣ ಯು. ಕಮತ ಅವರ ಮುಖ್ಯತ್ವದಲ್ಲಿ “ಒಂದು ಸಾವಿರದಾ ಒಂದು ಡೊಳ್ಳುಗಳು” ಕೂಡಿದ್ದವು. (ಕರೆಯಲಾಗಿತ್ತು) ರಾಮದುರ್ಗ ಹಾಗೂ ಸುತ್ತಮುತ್ತಲಿನ ಹಳ್ಳಿಯ ಡೊಳ್ಳು ಮೇಳದವರು ಕೂಡಿದ್ದರು. ಇವರಲ್ಲಿ ಹಾಡುವವರ ಮೇಳದವರು (೧೦೦) ನೂರಾರು.

ಈ ವಿವರವನ್ನು “ಕನಕರಶ್ಮಿ”ಯ ಜೂನ್ ಸಂಚಿಕೆ ೨ರಲ್ಲಿ ಸಂ|| ಎಸ್.ಬಿ. ಬಿಚ್ಚಗತ್ತಿ ಅವರು “ಮೈದಳೆದು ಅರ್ಭಟಿಸಿದ ಡೊಳ್ಳಿನನಿನಾದ” ಎಂಬುದಾಗಿ ಪುಟ-೨೪-೨೫ರಲ್ಲಿ ವಿವರಿಸಿದ್ದಾರೆ.

ಡೊಳ್ಳಿನ ೪೦ ಜನ ಹಾಡುಗಾರರ ಪಟ್ಟಿಯನ್ನು ಡಾ. ವೀರೇಶ ಶೆ. ಬಡಿಗೇರ ಅವರು ತಮ್ಮ ಮಹಾಪ್ರಬಂಧದಲ್ಲಿ ದಾಖಲಾಯಿಸಿದ್ದಾರೆ.

ಇಡೀ ಕರ್ನಾಟಕದಲ್ಲಿ ಡೊಳ್ಳಿನ ಹಾಡುಗಳ ಸಂಗ್ರಹ ಮಾಡಿದರೆ, ಡೊಳ್ಳು ಗಾತ್ರದ ಅನೇಕ ಸಂಪುಟಗಳೇ ತಯಾರಾಗುವುದರಲ್ಲಿ ಸಂಶಯವಿಲ್ಲ ! ಕುರುಬರ (ಹಾಲುಮತ) ಜನಾಂಗದ ಪ್ರಾಚೀನ ಮತ್ತು ಆರ್ವಾಚೀನ ಸಂಸ್ಕೃತಿಯು ತಿಳಿಯುವುದರ ಜೊತೆ ಕನ್ನಡ ಭಾಷೆಯ ಶಬ್ದ ಸಂಸ್ಕೃತಿಯ ಸಿರಿತನ, ಮೂಡಿ ನಿಲ್ಲುವುದು ಖಚಿತವಾಗಿ ಗೊತ್ತಾಗುತ್ತದೆ. ಅನೇಕರ ಚರಿತ್ರೆಗಳು, ನಡಾವಳಿ-ನುಡಾವಳಿ, ತತ್ವಜ್ಞಾನ-ವಿಜ್ಞಾನ ಬೆಳಕಿಗೆ ಬರುವುದುಂಟು. ಈ ಕಾರ್ಯ ಇನ್ನು ಮುಂದೆ ನಿರಂತರ ನಡೆಯುವುದವಶ್ಯವಿದೆ.

ಡೊಳ್ಳಿನ ಪದಗಳಲ್ಲಿ ಹಾಲುಮತ “ಗ್ರಾಮಕಾವ್ಯ” ಹೊರಬರುವುದವಶ್ಯವಿದೆ. ಇನ್ನೂ ಹಾಲುಮತದ ಮಹಾಕಾವ್ಯಗಳು ಖಂಡಕಾವ್ಯಗಳು ಮರೆಯಾಗಿರುವುದು ತಿಳಿದು ಬರುತ್ತಲಿದೆ.

ಇಷ್ಟೆಲ್ಲವನ್ನು ನಾವು ಮರೆಯಾಗುವಿಕೆಯಿಂದ ಬೆಳಕಿನಡೆಗೆ ಬರಬೇಕಾಗಿದೆ. ಹೀಗಾದಲ್ಲಿ ಸಂತೋಷ ಅಷ್ಟಿಷ್ಟಲ್ಲ. ನಮ್ಮ ಬದುಕಿನ ಆಹಾರವೇ ಈ ಪದಗಳು ಹರಕೆಯಿಂದ ಮುಂದೊಗೆಯುತ್ತವೆ.

ಹರಕೆ

ಆಳು ಮಕ್ಕಳ ಉಂಡ ಮನೆಯೊಳಗೋ
ಹಾಲಿನ ಕಾವಲಿ ಹರಿಯಲೇs ||

ನಮ್ಮ ಪೂಜಾರಿ ಉಂಡ ಮನೆಯೊಳಗೋ
ತುಪ್ಪದ ಕಾವಲಿ ಹರಿಯಲೇs ||

ನಮ್ಮ ದೇವರು ಉಂಡ ಮನೆಯೊಳಗೋ
ಹೊನ್ನದ ರಾಶಿ ಅಳೆಯಲೇs ||

ಕರಿಕಂಬಳಿ ಧರಮರೋ
ಹಿಂಗ ಹರಕೆಯ ನೀಡುವರೋs ||

ಹಿಂಗ ನಾವು ಬಾಳಿದ್ದೇ ಹಾಡುವೆವೋs
ಮತ್ತ ಹಿಂಗ ನಾವು ಹಾಡಿದ್ದೇ ಬದುಕುವೆವೋs
ದೇವರ ಬಂದಾವ ಬನ್ನೀರೇss ||

ಡಾ. ನಿಂಗಣ್ಣ ಸಣ್ಣಕ್ಕಿ[1]        ಜಾನಪದ ಸ್ವರೂಪ ಡಾ. ಹಾ.ಮಾ. ನಾಯಕ ಪುಟ ೩೫-೩೬ ೧೯೭೧ (೧೯೭೧) ಪ್ರಕಟಣೆ : ತ.ವಂ.ಸ್ಮಾ. ಮೈಸೂರು.

[2]        “ಜಾನಪದ ವಾಹಿನಿ” ಡಾ|| ದೇ. ಜವರೇಗೌಡ (ಜಾಗತಿಕ ಸಾಹಿತ್ಯಿಕ ಕನ್ನಡ ಜನಪದ ಸಾಹಿತ್ಯದ ಕೊಡುಗೆ ಪು.೯೩).

೧೯೮೬ ಪ್ರಕಟಣೆ ಡಿ.ವಿ.ಕೆ. ಮೂರ್ತಿ ಮೈಸೂರು – ೪.

[3]        ಹಸ್ತ ಪ್ರತಿ ಸಂಗ್ರಹ ಡಾ. ನಿಂಗಣ್ಣ ಸಣ್ಣಕ್ಕಿ ಸಾ|| ಗೋಕಾಕ

[4]        ಕನ್ನಡ ಜಾನಪದ ಗೀತೆಗಳು, ಡಾ. ಬಿ.ಎಸ್. ಗದ್ದಿಗಿಮಠ ಪುಟ ೨೦,೨೧ ಕರ್ನಾಟಕ ವಿ.ವಿ. ಧಾರವಾಡ ಪ್ರಕಟಣೆ ೧೯೬೩.

[5]        ಅದೇ ಪು-೨೯

[6]        ಸುವರ್ಣ ಜಾನಪದ ಡಾ. ಬಿ.ಬಿ. ಹೆಂಡಿ ಅವರ ಲೇಖನ ಪು-೨೯೨. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು. ಮುದ್ರಣ ೧೯೯೮.

[7]        ಅದೇ – ಪುಟ ೨೯೩.

[8]        ಡೊಳ್ಳಿನ ಪದಗಳು – ಡಾ. ಅರ್ಜುನಗೊಳಸಂಗಿ, ಕರ್ನಾಟಕ ವಿ.ವಿ. ಧಾರವಾಡ ಪ್ರಸಾರಾಂಗ. ಮೇ ೧೯೯೮ ಪ್ರಕಟಣೆ ಪುಟ ೩೪-೩೫.

[9]        ಕರ್ನಾಟಕದ ಜಾನಪದ ಬೆಂಗಳೂರು ವಿವಿ ಬೆಂಗಳೂರು ಸಂ|| ಜಿ.ಎಸ್. ಶಿವರುದ್ರಪ್ಪ ಪ್ರ.೧೯೮೧ ಜನಪ್ರಿಯ ಪರಂಪರೆ ಮತ್ತು ಜನಪರ ಸಾಹಿತ್ಯ ಪು-೩೪. ಪ್ರೊ|| ಡಾ. ಸೋಮಶೇಖರ ಇಮ್ರಾಪುರ ಕ.ವಿ.ವಿ. ಧಾರವಾಡ.

[10]       “ಗಡಿನಾಡು ಬೆಡಗು” ಸಂ|| ಚಂದ್ರಶೇಖರ ಅಕ್ಕಿ ಮತ್ತು ಶ್ರೀ ಮಹಾಲಿಂಗಮಂಗಿ, ರ‍್ವಾಣಗಳು ಲೇಖನ

ಡಾ|| ಸಿದ್ದಣ್ಣ ಎಫ್ ಜಕಬಾಳು ಲೇಖನ ಪುಟ-೧೦೪ ವಿದ್ಯಾನಿಧಿ ಪ್ರಕಾಶನ ಗದಗ, ಪ್ರ.ಮು-೨೦೦೫.

[11]       “ತೂಕ ಮಾಡಿ ಹೇಳತೀನಿ ನ್ಯಾಯಾ” – ಸಂ|| ಬಸನಗೌಡ ಪಾಟೀಲ ಆದಿಗೊಂಡನ ಚರಿತ್ರೆ ಪುಟ-೬ ಒಕ್ಕಲು ಮಕ್ಕಳ ಪ್ರಕಾಶನ ಯಳವತ್ತಿ ಪ್ರ.೧೯೮೦.

[12]       “ಜೀಶಂಪ ಅವರ ಜಾನಪದ ಬರಹಗಳು” ಸಂ|| ಪ್ರೊ. ಕಾಳೇಗೌಡ ನಾಗವಾರ, ಡಾ. ಅಂಬಳಕೆ ಹಿರಿಯಣ್ಣ ಕ.ಜಾ.ಯ.ಅ. ಬೆಂಗಳೂರು ಡೊಳ್ಳು ಮೇಳ ಪುಟ- ೨೧೧.

[13]       ಜನಪದ ಹಾಲು ಮತ ಮಹಾಕಾವ್ಯ ಡಾ.ವೀರಣ್ಣದಂಡೆ, ಪ್ರಸ್ತಾವನೆ xv

[14]       ಡೊಳ್ಳಿನ ಹಾಡುಗಳ ಸಮೀಕ್ಷೆ ಪ್ರೊ|| ಜ್ಯೋತಿ ಹೊಸೂರು ಪು-೩೫. ಕಾಲಗತಿ ಪ್ರಕಾಶನ ರಾಯಭಾಗ ೨೦೦೩ ಪ್ರಥಮ ಮುದ್ರಣ.