ಪೀಠಿಕೆ :

“ಡೊಳ್ಳು” ಎರಡು ಮುಖದ ಚರ್ಮವಾದ್ಯವಾಗಿದೆ. ಜನಪದ ವಾದ್ಯಗಳಲ್ಲಿಯೇ ಹಿರಿದಾದ ವಾದ್ಯವಾಗಿದೆ. ಮೂಲತಃ ಕುರುಬ ಜನಾಂಗದ ಬಾರಿಸುವ – ಕುಣಿತ ತೋರಿಸುವ ಉತ್ಸಾಹಭರಿತ ವಾದ್ಯವಾಗಿದೆ. ವ್ಯಕ್ತಿ ವ್ಯಕ್ತಿಗಳ ಉತ್ಸಾಹ ಭರಿತ ಶಕ್ತಿ ಸಾಮರ್ಥ್ಯಕ್ಕೆ ಹೆಸರುವಾಸಿಯಾದ ಕಲೆಯ ಕೇಂದ್ರವೆನಿಸಿಕೊಂಡಿದೆ.

ಡೊಳ್ಳು ಕಲೆಯು ಒಂದು ಜನಪದ ಗಂಡು ಕಲೆಯಾಗಿದೆ. ಪ್ರಾಚೀನ ಕರ್ನಾಟಕದ ಈ ಕಲೆಯು, ಈಗ ಸಾರ್ವತ್ರಿಕವಾದ ಜನಪದ ಗಂಡು ಕಲೆಯಾಗಿದೆ. ಪ್ರಾಚೀನ ಕರ್ನಾಟಕದ ಈ ಕಲೆಯು ಈಗ ಪ್ರಚಾರಗೊಂಡು, ವೈಭವ ತೋರಿ ಬೀರಿ ಇಡೀ ಭಾರತೀಯ ಜನಾಂಗದವರ ಜನಪದ ಪ್ರದರ್ಶನ ಕಲೆಗಳಲ್ಲಿಯೇ ಹಿರಿಮೆಗೊಂಡುದುದಾಗಿದೆ.

ಡೊಳ್ಳಿಗೂ – ಕರ್ನಾಟಕದ ಕುರುಬ ಜನಾಂಗದವರಿಗೂ ಪ್ರಾಚೀನ ಕಾಲದಿಂದಲೂ ಸಂಬಂಧಹುಟ್ಟಿ ಬೆಳೆದು ಬಂದಿದೆ. ಡೊಳ್ಳಿಗೆ ಸಂಬಂಧಿಸಿದಂತೆ ೩-೪ ಪುರಾಣಗಳಿವೆ. ಅವುಗಳೆಲ್ಲ ಮೌಖಿಕ ಪುರಾಣಗಳು. ಕೆಲವೆಡೆಗೆ ಅಲ್ಲಲ್ಲಿ ಬರೆದದ್ದುಂಟು.

ಪುರಾಣ -೧ :  ಹಿಂದೆ ಡೊಳ್ಳಾಸೂರ ಎಂಬ ರಾಕ್ಷಸನಿದ್ದ. ಆತ ಶಿವನನ್ನು ಒಲಸಿಕೊಳ್ಳಲು ಸೂಜಿಯ ಮೊನೆಯ ಮೇಲೆನಿಂತು ತಪಶ್ಚರ್ಯ ಮಾಡಿದನು. ಒಂದು ದಿನ ಶಿವ ಅವನಿಗೆ ದರ್ಶನವಾದನು. ವರವನ್ನು ಕೇಳು ಎಂದನು ಶಿವ. ಶಿವನನ್ನೇ ನುಂಗಬೇಕು ಎಂದು ವರ ಕೇಳಿದನು. ಶಿವನು ಕೊಟ್ಟು ಬಿಟ್ಟನು. ಶಿವ ಯಾರಿಗೆ ಒಲಿಯುವನೋ ಅವನು ವರವನ್ನೆಂದೂ ಕೇಳಿದವರಿಗೆ ಕೊಟ್ಟೇ ಬಿಡುತ್ತಾನೆ. ತಥಾಸ್ತು ಎಂದನು.

ಡೊಳ್ಳಾಸುರನು ಶಿವನನ್ನು ನುಂಗಿದನು. ಬಳಿಕ ಮೂರು ಲೋಕವು ಪ್ರಳಯವಾದಂತಾಯಿತು. ದೇವಾನು ದೇವತೆಗಳಿಗೆ ಚಿಂತೆಯಾಯಿತು ದುಃಖಿಸಿದರು.

ಶಿವನ ಭಾರತಡೆಯಲಾರದೇ “ನೀನು ಹೊರಗೆ ಬಾ” ಎಂದನು ಡೊಳ್ಳಾಸುರ.

ಡೊಳ್ಳಾಸುರನ ಹೊಟ್ಟೆ ಒಡೆದು ಶಿವ ಹೊರಗೆ ಬಂದನು.

ಬಳಿಕ ಆತನ ಡಿಂಬವನ್ನು ಡೊಳ್ಳು ಮಾಡಿ ಅವನ ಚರ್ಮ ಸುಲಿದು, ಡೊಳ್ಳಿನ ದ್ವಿಮುಖಕ್ಕೆ ಅವನ ಚರ್ಮ ಬಿಗಿದನು. ಕರುಳಿನಿಂದ ಹಗ್ಗ, ಕೈಗಳ ಎಲುಬಿನಿಂದ ಗುಣಿ ಮಾಡಿದನು. ಇದು ಬಹು ಪ್ರಚಲಿತ ಇರುವ ಮೌಖಿಕ ಪುರಾಣ ಮತ್ತು ಹಾಲು ಮತದವರ ಡೊಳ್ಳಿನ ಹಾಡು.

ಪುರಾಣ -೨ : ಡೊಳ್ಳಾಸುರನದೇ ಹೆಚ್ಚು ಕಡಿಮೆ ಇಂತಹದೇ ಒಂದು ಪುರಾಣವಿದೆ.

ಪುರಾಣ -೩ : ಶಿವ-ಶಿವೆ (ಪಾರ್ವತಿ) ಹಾಗೂ ನಾರದರು ಕೂಡಿಕೊಂಡು ರಾಕ್ಷಸರ ವಧೆಯನ್ನು ಮಾಡಿದ ಪುರಾಣವಿದೆ. ಇಲ್ಲಿ ಶಿವನನ್ನು ಮೆಚ್ಚಿಸಲು ನಾರದನೇ ಹಾಡಿದ ಹಾಡು ಇದೆ. ಆ ಹಾಡಿನ ಪಲ್ಲ ಕೆಳಗಿನಂತಿದೆ.

ದೇವಿಯೆ ನಿಮ್ಮಯ ದೇವರು ಬಂದಾನ ಬನ್ನಿರೆs
ದೇವಿಯೆ ನಿಮ್ಮಯ ದೇವರು ಬಂದಾನ ಬನ್ನಿರೆs ||

ಹಾಗೇ,

ಸ್ವಾಮಿಯೇ ನಿಮ್ಮಯ ದೇವರು ಬಂದಾನ ಬನ್ನಿರೇ ||

ಎಲ್ಲ ಡೊಳ್ಳಿಯ ಮೇಳದವರು ಹಾಡುವ ಸುದೀರ್ಘ ಮೌಖಿಕ ಹಾಡೊಂದು ಡೊಳ್ಳಿನ ಕಥೆಯಾಗಿ ಪರಿಣಮಿಸಿದೆ. ಅದು ಕೆಳಗಿನಂತಿದೆ.

ಹಾಡು

ದೇವಿಯೇ ನಮ್ಮಯ ದೇವರು ಬಂದಾವ ಬನ್ನಿsರೇss |
ಮಾರಹರನು ತಾ ಪ್ರಭುವಿನ ಕುರಿತು
ಘೋರತಪಸ್ಸು ಮಾಡಿದನಲ್ಲs |
ದೀರನಾದಕಚಾರನೆಂಬ ದೈತ್ಯನ
ಪಾರತಿರಗಲಿಕ್ಕೆ ಇಟ್ಟನಲ್ಲ ||

ನಮ್ಮ ಗಿರಿಜೆ ಸುಮ್ಮನಿರದೆ ತಾ
ನಾರದ ಕರೆದು ಕೇಳಿದವಳಲ್ಲಾ |
“ಶಿವನು ತಾನು ಎಲ್ಲಿ ಅಡಗಿದನು”
ತಿಳಿಯದು ತಾ ಮಹಾದೇವನ ಲೀಲಾ ||

ಕುಸುಮಶರನು ಎತ್ತ ಪೋದನೂ
ಪಶುಪತಿ ಹೇಳೋ ನಮಗೆಲ್ಲಾs |
ಮತ್ತ ಬಂದಿತೋ ನಾರದ ಸವರಿ
ಸತ್ಯದಿಂದ ಆಡುತಲೀಲಾ ||

ಸೀಳುವೆ ದೈತ್ಯನಾದ ಕಚಾರನ
ಬಾಳಾಕ್ಷಣ ತೋರುವನೆಲ್ಲಾs |
ಹಿಂದೆ ಪಾರ್ವತ ಮುಂದ ಬಸವರಾಜ
ಬಂದಾರಾಗ ನಿರ್ಜರ ಕೋಟಿ ||

ಕೆಟ್ಟ ದೈತ್ಯನ ಮೆಟ್ಟಿ ಸೀಳಿದ
ಶ್ರೇಷ್ಠ ಬಸವರಾಜನು ತಾನು |
ಕಟ್ಟಳೆ ಇಲ್ಲದ ಬೇಡಿಕೊಳ್ಳತಾನು
ದಿಟ್ಟನಾದ ಕಚಾರನೆಂಬವನು ||

ನಿರ್ಮಲ ಪಾದ ಸೊಂಕಿದಾಗ
ಯಮದಧರ್ಮನ ಭಯ ಹೋದಿತೊ ಇನ್ನು |
ಚರ್ಮವ ತೆಗೆದು ಆಸ್ತಿಯ ಬಿಗಿದು
ನರದ ಹಗ್ಗವ ಮಾಡಿದನು ||

ಪೂರ್ಣವಾಗಿನಾದು ಏರಲು ಬ್ರಹ್ಮಕೆ
“ಹಿರಿಡೊಳ್ಳು” ಎಂಬ ಹೆಸರಿಟ್ಟನು |

[1]ಯಾರಿಗೂ ಕಾಣದ್ಹಂಗ ವಾರಿಗೆ ಕುಳಿತನು
ಬೀರ ತಾನೊಂದು ಯೋಗದಲಿ ||

ಬಾರಮ್ಮ ಗಿರಿಜೆಯೆ ಬೀರುವೆ ನಿನ್ನೊಳು
ಬಾರಿಸಿ ಡೊಳ್ಳಿನ ನಾದದಲಿ |
ದೇವರು ಬಂದಾನು ಬನ್ನಿರಿಲ್ಲಿ
ಜಗಜ್ಜೀವನ ಬಂದಾನು ಬನ್ನಿರಿಲ್ಲಿs ||

ಶಿವನು ಅನೇಕ ಅವತಾರಗಳನ್ನು ತಾಳಿದ್ದಾನೆ. ಅವೆಲ್ಲ ಅವತಾರಗಳು “ಶಿಷ್ಟರನ್ನು ಪಾಲಿಸಲಿಕ್ಕೆ ದುಷ್ಟರನ್ನು ಸಂಹರಿಸಲಿಕ್ಕೆ” ಎಂಬುದು ಪುರಾಣಗಳ ಅಂತರಂಗದ ತಿಳುವಳಿಕೆಯಾಗಿದೆ. “ಬೀರ ದೇವರು ಕುರುಬ ಜನಾಂಗದ ಆದಿದೈವ” ಎಂಬ ನಂಬಿಕೆ ಅಷ್ಟೇ ಏಕೆ ? ಸಕಲ ಜಗದ ಜನಾಂಗದ ದೇವರು ಎಂಬುದಾಗಿ ಡೊಳ್ಳಿನ ಹಾಡುಗಳ ಸಾರವಾಗಿದೆ. ನನ್ನ ಕ್ಷೇತ್ರ ಕಾರ್ಯದಲ್ಲಿ ಉತ್ತರ ಕರ್ನಾಟಕದ ವಾಲಗದವರನ್ನು ಕೇಳಿದಾಗ ಹೇಳುವ ಭಾವ ಒಂದೇಯಾಗಿದೆ. ಡೊಳ್ಳು ಹುಟ್ಟಿಕೊಂಡಿರುವ ಪುರಾಣದ ಹಾಡುಗಳಲ್ಲೆಲ್ಲ ರಾಕ್ಷಸರ ವಧೆಯಾಗುತ್ತದೆ ಮತ್ತು ಅವರ ಚರ್ಮ, ನರ, ಎಲುಬುಗಳಿಂದ ಡೊಳ್ಳು ತಯಾರಾಗುತ್ತದೆ. ಕೈಗಳಿಂದ ಡೊಳ್ಳಿನ ಗುಣಿಗಳು (ಡೊಳ್ಳು ಬಡಿಯುವ ಸಾಧನಗಳು) ರಚನೆಗೊಳ್ಳುತ್ತಿವೆ.

ಹಾಲು ಮತದ ಪುರಾಣಗಳು ಸಾಹಿತ್ಯ ಕೃತಿಗಳು ಇಪ್ಪತ್ತನೆಯ ಶತಮಾನದಲ್ಲಿ ಅನೇಕರಿಂದ ದಾಖಲೆಗಳಾಗಿರುತ್ತವೆ. ಅವುಗಳಲ್ಲಿ ಕೆಲವನ್ನು ಕೆಳಗಿನಂತೆ ನೋಡಬಹುದು.

(೧) ತೇಜೋಮಯ ಹಾಲುಮತ ಪುರಾಣ ಸಂ|| ತೋಂಟಾಪೂರ ಎನ್.ಬಿ.

(೨) ಶ್ರೀ ರೇವಣಸಿದ್ಧೇಶ್ವರ ಲೀಲಾ ಸಂಯುಕ್ತ ಹಾಲಮತೋತ್ತೇಜಕ ಪುರಾಣ – ಶ್ರೀ ಭೀಮಕವಿ ವಿರಚಿತ ಪುರಾಣ (೧೯೮೨) ಸಂಗ್ರಹ ಮತ್ತು ಪ್ರಕಟಣೆ ತೋಂಟಾಪೂರ ಎನ್.ಬಿ.

(೩) ಹಾಲ್ಮಿತದ ಶ್ರೀ ಸಿದ್ಧಬೀರೇಶ್ವರ ಅರ್ಥಾತ್ ಕರಿಸಿದ್ಧೇಶ್ವರ ಪುರಾಣ : ನಿಂಗಪ್ಪ ಕರಿಯಪ್ಪ ಪೂಜಾರ, ಬೀಳಗಿ ಜಿ|| ಬಾಗಲಕೋಟ

(೪) ಹಾಲಿಮತ ಪುರಾಣವು ರಚನೆ : ಬಸವಣ್ಣೆಪ್ಪ ನೀಲಪ್ಪ ಹಳವಳ್ಳಿ ಸಾ|| ಬಂಕಾಪೂರ, ಜಿ|| ಧಾರವಾಡ

(೫) ಹಾಲುಮತದ ಚರಿತ್ರೆ, ರಚನೆ : ಯ.ಪ. ಅತ್ತಿಕೊಳ್ಳ, ಧಾರವಾಡ.

(೬) ಮೈತ್ರಿ ಕೆ.ಎಂ. ೧೯೯೪ ಬೀದರ ಜಿಲ್ಲೆಯ ಗೊಂಡ ಆದಿವಾಸಿ ಸಮುದಾಯ – ಒಂದು ಸಮಾಜ ಶಾಸ್ತ್ರೀಯ ಅಧ್ಯಯನ ಪಿ.ಎಚ್.ಡಿ. ಪದವಿಗಾಗಿ ಮೈಸೂರು ವಿ.ವಿ.ಕ್ಕೆ ಸಾದರಪಡಿಸಿದ ಮಹಾಪ್ರಬಂಧ,

(೭) ಕುರುಬ ಜನಪದ ಸಂ|| ಪ್ರೊ. ಚನ್ನಪ್ಪಕಟ್ಟಿ ಮತ್ತು ಪ್ರೊ|| ಆರ್.ಎಸ್. ವಾಡೇದ ಸಾ|| ಸಿಂದಗಿ, (೮) ಹಾಲುಮತದ ಹುಟ್ಟು, ರಚನೆ : ಬೋನಾ ಬಸವರಾಜ, ವಿದ್ಯಾನಿಧಿ ಪ್ರಕಾಶನ ಗದಗ,

(೯) ಹಾಲುಮತದ ಜನಪದ ಮಹಾಕಾವ್ಯ : ಸಂ|| ಡಾ. ವೀರಣ್ಣ ದಂಡೆ, ಪುಸ್ತಕ ಪ್ರಾಧಿಕಾರ ಬೆಂಗಳೂರು.

(೧೦) ಹಾಲುಮತದ ಬಗೆಗೆ ಹಾಡುಗಳು ಸಂ|| ಡಾ. ನಿಂಗಣ್ಣ ಸಣ್ಣಕ್ಕಿ, ಗೋಕಾಕ, ಜಿ|| ಬೆಳಗಾವಿ.

(೧೧) ಬೀರದೇವರ ಚರಿತ್ರೆ : ರಚನೆ ಬಸವಣ್ಣೆಪ್ಪ ನೀಲಪ್ಪ ಹಳವಳ್ಳಿ. ಸಾ|| ಬಂಕಾಪೂರ ಜಿ|| ಧಾರವಾಡ.

(೧೨) ಸ್ಕಂದ ಪುರಾಣ, ಅಗಸ್ತ್ಯೆ ಸಂಹಿತೆಯ ೧೦ನೆಯ ಸ್ಲೋಕ.

(೧೩) ಉತ್ತರ ಭಾರಿತದ ಕುರುಬರ ಗೋತ್ರಗಳು ಡಾ|| ಶ್ಯಾಮಸಿಂಗ ಶಶಿ ಕೃತಿ : “ಶಫರ‍್ಡ್ಸ್ ಆಫ್ ಇಂಡಿಯಾ’ ಅನುವಾದಕರು : ಡಾ|| ನಿಂಗಣ್ಣ ಸಣ್ಣಕ್ಕಿ

(೧೪) ಕರ್ನಾಟಕ ಕುರುಬ ಜನಾಂಗದ ಬೆಡಗುಗಳು. ರಚನೆ : ತೋಂಟಾಪುರ ಎನ್.ಬಿ. ಕನಕ ಮುದ್ರನಾಲಯ ಗಾಂಧಿ ನಗರ ಬೆಂಗಳೂರು – ೯.

(೧೫) ಹಾಲತೊರೆ, ಸಂಪಾದಕರು, ಎಂ. ಕರಿಯಪ್ಪ ಪ್ರಕಾಶಕರು ನಗರ ಕುರುಬರ ಸಂಘ (ರಿ.) ಬೀರೇಶ್ವರ ವಿದ್ಯಾರ್ಥಿನಿಲಯ ದಾವಣಗೆರೆ.

1)    “Indeed, the Kurubas must be regarded as a very old inhabitants of this land, who can contest with their Dravidian kinsmen the priority of occupation of the Indian soil” !

            – by Gustev oppert – The original inhabitants of India P-126.

 

2)    “They (The Kurubas) are the modern representatives of the ancient Kurubas or pallavas who were once so powerful, through out South India.

– Madras Census Report – 1891

ಹಾಲು ಮತ, ಕುರುಬ ಜನಾಂಗ, ಕುರುಬರ ದೇವತೆಗಳು, ಕುರುಬರ ಪರಂಪರೆ, ಕರ್ನಾಟಕದ-ಭಾರತದ ಕುರುಬರು ಡೊಳ್ಳು-ಡೊಳ್ಳಿನ ಹಾಡುಗಳು, ಸಂಗೀತ-ಸಾಧನೆಗಳು, ಕಲೆಗಳು ಅರಸು ಮನೆತನಗಳು, ವೃತ್ತಿಗಳು, ಕುರುಬರ ಪಂಗಡಗಳು ಇತ್ಯಾದಿ ಇತ್ಯಾದಿಯಾಗಿ ಸಾಹಿತ್ಯ ಸಂಕಲನಗಳು ಬೆಳೆಯುತ್ತಲೇ ಇವೆ. ಕುರುಬರ ಜನಾಂಗದಲ್ಲಿ ಉತ್ತರ-ಎತ್ತರ, ಮಹತ್ತರ-ಮಹಿಮರ, ಮಹಿಳೆಯರ ಸಾಹಿತ್ಯವೂ ದಾಖಲೆಗಳಾಗುತ್ತಿವೆ.

“ಹಾಲುಮತದ ಹುಟ್ಟು” ಕೃತಿಯು ವೈಜ್ಞಾನಿಕವಾಗಿ ಈ ಶತಮಾನದ (ಕ್ರಿ.ಶ.೨೦೦೦) ವಿಷಯ ವಿವರಣೆಯ ಸಾಹಿತ್ಯ ಕೃತಿಯಾಗಿದೆ. ಇದರಲ್ಲಿ ಶೂನ್ಯದಿಂದ ಸಾಕಾರಕ್ಕೆ ವಿಷಯ ನಿರೂಪಣೆಯಲ್ಲಿ ಬೃಹದ್ ಬ್ರಹ್ಮಾಂಡ, ರಚನೆಗೊಂಡ ವಿವಿಧ ವಿಚಾರಗಳಿವೆ. ಮಂಗನ ಸೃಷ್ಟಿ, ಮಾನವ ಸೃಷ್ಟಿ ವೈಚಾರಿಕ ಬರಹಗಳಿವೆ. (೧) ಮೂಲಗೊಂಡ ಮೂಲಬ್ಬೆಯರ ಜನನ, (೨) ಮಲೆಗೊಂಡ ಮಲೆಯಬ್ಬೆಯರ ಜನನ ಹಾಗೂ (೩) ಕೇಡುಗೊಂಡ – ಕೇಡಬ್ಬೆಯರ ಜನನ (೪) ದೇವ ಕುರುಬರು ಇತ್ಯಾದಿ ವಿಷಯಗಳ ವಿವರಗಳುಂಟು.

“ಏನೋ ಕುರುಬರು” ಎಂಬ ಮೂಗು ಮುರಿಯುವ ಪಂಡಿತ-ಪಾಮರರಿಗೆಲ್ಲರಿಗೂ, ತಾವು ಮೂಲದಲ್ಲಿ ಕುರುಬರೇ (ದ್ರಾವಿಡರೆಲ್ಲರೂ) ಆಗಿದ್ದರೆಂಬ ವಿಚಾರ ಬಾರದಿರದು. ಮಾನವಶಾಸ್ತ್ರದ ಮೂಲದಲ್ಲೂ ಮಾನವ ಬೇಟೆಯಾಡುವುದನ್ನು ನಿಲ್ಲಿಸಿ, ಪಶುಪಾಲಕರಾದಾಗ (ಕುರು-ಎತ್ತರ) ಅಂದರೆ ಬದುಕಿನಲ್ಲಿ ಎತ್ತರ ಪಡೆಯುತ್ತ ಬದಲಾದುದು ಕಂಡು ಬರುತ್ತದೆ.  ಕುರುಬರು ಜನಾಂಗದ ಬಗೆಗೆ ಹಲವಾರು ಹೇಳಿಕೆಗಳನ್ನು ನೀಡುತ್ತ ಹೋದರೆ, ಸಾಹಿತ್ಯ ಕೃತಿಯೇ ಆಗುತ್ತದೆ. ಆದರೂ ಎರಡು ಮೂರು ಪ್ರಾಚೀನ ಹೇಳಿಕೆಗಳನ್ನು ನೋಡುವಾ.

“ದಕ್ಷಿಣ ದೇಶದಲ್ಲಿ ಸಿಕ್ಕುವ ನಾಣ್ಯಗಳೆಂದರೆ ಕುರುಬರವೇ”[2] ಅತೀ ಪ್ರಾಚೀನ ಹಾಗೂ ಆರ್ವಾಚೀನ ಕಾಲಗಳಲ್ಲಿ ಮಾನವಶಾಸ್ತ್ರಜ್ಞರ ಅಭಿಪ್ರಾಯಗಳನ್ನು ಗಮನಿಸುತ್ತ ಹೋದ ಹಾಗೆ ಭಾರತ ಭೂಮಿಯಲ್ಲಿ ಕುರುಬರ ಜನಾಂಗದವೇ ಮೂಲರು ಮತ್ತು ಮಾಲೆಯರು ಎಂಬುದು ಸ್ಪಷ್ಟ.

“ಅತೀ ಪ್ರಾಚನ ಕಾಲದಿಂದಲೂ ಪಶುಪಾಲನೆ, ಅದರಲ್ಲೂ ಕುರಿಗಳ ಪಾಲನೆ, ಪೋಷನೆ ಈ ಜನಾಂಗದ ಮುಖ್ಯ ಕಸುಬು. ಕುರಿ ಸಾಕಾಣಿಕೆ ಈಗಲೂ ಇವರ ಮುಖ್ಯ ವೃತ್ತಿಗಳಲ್ಲೊಂದಾಗಿದೆ. ಹೀಗೆ ಕುರಿ ಪಾಲಿಸುತ್ತಿದ್ದುದರಿಂದ ಇವರಿಗೆ ಕುರುಬರೆಂಬ ಹೆಸರು ಬಂದಿದೆ ಎಂಬುದು ಸಾಮಾನ್ಯವಾದ ಅಭಿಪ್ರಾಯವಾಗಿದೆ. ಆದರೆ “ಕುರು” ಎಂಬುದಕ್ಕೆ “ಎತ್ತರ” ಎಂಬ ಅರ್ಥವಿದೆ. “ಕೂ” ಅಥವಾ “ಕು” ಎಂದರೆ ಪರ್ವತವೆಂದೂ ಅರ್ಥವಿದೆ. ಇದರಿಂದ ಕುರುಬ ಅಥವಾ ಕುರಬ ಎಂದರೆ ಪರ್ವತವಾಸಿ ಎಂಬುದು ಸೂಚಿತವಾಗುತ್ತದೆ. ತಮ್ಮ ಜೀವನಕ್ಕಾಗಿ ಗುಡ್ಡಬೆಟ್ಟಗಳ ಹುಲ್ಲಿನ ಪ್ರದೇಶವನ್ನು ಆರಿಸಿಕೊಂಡು ಹೋಗಿ ಈ ಜನಾಂಗ ಬದುಕಬೇಕಾಗುತ್ತದೆ ಎಂಬುದನ್ನು ನೆನೆದಾಗ ಈ ಅರ್ಥ ಅಸಂಭವನೀಯವೆನಿಸುವುದಿಲ್ಲ. ಇಷ್ಟು ಮಾತ್ರವಲ್ಲದೆ ಕುರುಂಬರನ್ನು ಪ್ರಾಚೀನ ತಮಿಳು ಕಾವ್ಯಗಳಲ್ಲಿ ಮಲೆಯರು ಎಂದು ವರ್ಣಿಸಲಾಗಿದೆ. ಆದ್ದರಿಂದ ಕುರುಬರೆಂದರೆ ಎತ್ತರವಾದ ಪ್ರದೇಶಗಳಲ್ಲಿ ಬೆಟ್ಟ-ಗುಡ್ಡಗಳಲ್ಲಿ ದಾಳಿಮಾಡಿ ಪರಾಜಿತರಾದವರು”[3]. ಇದೇ ರೀತಿಯಲ್ಲಿ ಜನಾಂಗದ ವಿವರಗಳು ದೊರಕುತ್ತವೆ. “ಆದಿ ಮಾನವ ಅನೇಕ ಪ್ರಾಣಿಗಳನ್ನು ಸಾಕ ತೊಡಗಿದ. ಹಾಲು, ಬೆಣ್ಣೆ ಮತ್ತು ಉಣ್ಣೆಯನ್ನು ಹಸು ಮತ್ತು ಕುರಿಯನ್ನ ಸಾಕತೊಡಗಿದ ಎಂಬುದಾಗಿ ಸಮಾಜ ವಿಜ್ಞಾನಿಗಳು ಹೇಳುತ್ತಾ ಬಂದಿದ್ದಾರೆ……… ನಂತರ ಉಣ್ಣೆಯನ್ನು ಉಪಯೋಗಿಸತೊಡಗಿದ ಕುರುಬರು ಉಣ್ಣೆಯ ನೂಲನ್ನು ತೆಗೆದು ಉಡುಪುಗಳನ್ನು ತಯಾರಿಸ ತೊಡಗಿದರು.[4]

“ಕುರುಬ ಜನಾಂಗದವರು ಎಲ್ಲೆಲ್ಲಿ ಇರುವರೋ ಅಲ್ಲಿ ಡೊಳ್ಳುಗಳು ಇವೆ. ಡೊಳ್ಳುಗಳು ಎಲ್ಲೆಲ್ಲಿ ಇವೆಯೋ ಅಲ್ಲಿ ಕುರುಬ ಜನಾಂಗದವರಿದ್ದಾರೆ”. ಎಂಬ ಸಹಜ ಮಾತುಗಳಿವೆ. ಕುರುಬರು ಡೊಳ್ಳು, ಡೋಲು, ಕಪ್ಪಟ್ಟು, ಕೊಳಲು ತಾಳು, ಚೆಳ್ಳಂಕ (ಚೆಳ್ಳಂಗ) ಇವುಗಳೆಲ್ಲ ನಿಮ್ಮ ಹಿರಿಯರು ನುಡಿಸಿ-ಬಾರಿಸಿದ ವಾದ್ಯಗಳೆಂದು ಹೆಮ್ಮೆಯಿಂದ ಹೇಳಿಕೊಳ್ಳುವರು. ಈ ಎಲ್ಲ ವಾದ್ಯಗಳಲ್ಲಿ ಡೊಳ್ಳಿಗೆ ಹಿರಿಮೆಯುಂಟು. ಈ ಡೊಳ್ಳನ್ನು ಕುರುಬ ಜನಾಂಗದ ಎಲ್ಲ ಪಂಗಡದವರೂ ಬಾರಿಸುತ್ತಾರೆ ಮತ್ತು ಡೊಳ್ಳು ಹಾಡಿನ ಹಾಡುಗಳನ್ನು ಹಾಡುತ್ತಾರೆ.

 

ಕುರುಬರ ಪ್ರಮುಖ ಪಂಗಡಗಳು

ಕುರುಬರು

1) ಹಾಲು ಕುರುಬರು       – a) ಹತ್ತಿ ಕಂಕಣದವರು,  b) ಉಣ್ಣಿ ಕಂಕಣದವರು

2) ಹಂಡೆ ಕುರುಬರು

3) ಕಂಬಳಿ ಕುರುಬರು

ಕುರುಬರ ಜನಾಂಗದಲ್ಲಿ ಉತ್ತರ ಭಾರತದಲ್ಲಿ ಅಗ್ನಿವಂಶ ಋಷಿಗೋತ್ರ, ವಶಸಿ, ಪ್ರವರ್ ಎಂಬ ಮೂಲ ಗೋತ್ರಗಳನ್ನು ಹೇಳುತ್ತಾರೆ. ಇವುಗಳ ಏಣಿಕೆಗೆ ಇನ್ನೂ ನಡದೇ ಇದೆ.

ಕರ್ನಾಟಕದಲ್ಲಿ ಕುರುಬರ ಪಂಗಡವಾದ ಗೊಂಡ, ರಾಜಗೊಂಡ ಪಂಗಡದವರನ್ನು ವಿಚಾರಿಸುತ್ತ (೧೧೧) ಒಂದನೂರಾ ಒಂದು ಒಳ ಪಂಗಡಗಳಿವೆ ಎಂದೂ, (೫೦೦) ಐದು ನೂರು ಬೆಡಗಗಳಿವೆ ಎಂದೂ ಹಾಲುಮತ ಪುರಾಣಕರ್ತರು ಹೇಳುವುದುಂಟು. ಇವರಿಗೆಲ್ಲರಿಗೂ ಕನ್ನಡ, ಅದರಲ್ಲೂ ಪ್ರಾಚೀನ ಕನ್ನಡ ನೆಲದವರಿಗೆ ಶ್ರೀ ಬೀರದೇವರೆ ಪ್ರಮುಖ ದೈವವೆಂದು ಹೇಳುವುದು ಖಚಿತವಾಗಿದೆ.

ಬೀರಪ್ಪ ಆರಾಧ್ಯ ದೈವ

“ಬೀರಪ್ಪ ಕುರುಬರ ಆರಾಧ್ಯ ದೈವ (ಲೌಕಿಕ ದೇವರು) ತಮ್ಮ ಕುಂದು ಕೊರತೆ ಹರಕೆಗಳನ್ನು ಸಲುಗೆಯಿಂದ ಈ ದೇವನೊಂದಿಗೆ ಇವರು ಹಂಚಿಕೊಳ್ಳುತ್ತಾರೆ. ಪ್ರತಿಯೊಂದು ದೇವರಿಗೂ ಒಂದು ಚರಿತ್ರೆ ಇರುವಂತೆ ಬೀರದೇವರಿಗೂ ಒಂದು ಚರಿತ್ರೆಯಿದೆ”.[5] ಡಾ. ವೀರಣ್ಣ ದಂಡೆ ಅವರು ಸಂಪಾದಿಸಿದ “ಜನಪದ ಹಾಲುಮತ ಮಹಾಕಾವ್ಯದಲ್ಲಿ ಕೈಲಾಸದ ಹಾಡಿಕೆಯ ನಂತರ, “ಬೀರಪ್ಪನ ಪೂರ್ವಜರ ವೃತ್ತಾಂತ”ದ ಸುದೀರ್ಘ ಹಾಡಿಕೆಯ ನಂತರ ಬೀರಪ್ಪನ ಜನನ ವೃತ್ತಾಂತವನ್ನು ಹಾಡುಗಾರ ಹಾಡಿಕೊಂಡಿದ್ದಾನೆ. ಮೌಖಿಕವಾಗಿ ಕಂಠದಿಂದ ಕಂಠಕ್ಕೆ ಹರಿದುಬಂದ ಈ ವೃತ್ತಾಂತವನ್ನು ಸಾಹಿತ್ಯಕವಾಗಿ ಮತ್ತು ಪೌರಾಣಿಕ ಅಂಶಗಳಿಂದ ಕೂಡಿದ ಈ ಕಾವ್ಯವನ್ನು ಗಮನಿಸಬೇಕಾಗುತ್ತದೆ. (ಕುರುಬರ) ಈ ಜನಾಂಗದಲ್ಲಿ ಇನ್ನೂ ಅನೇಕ ದೇವರುಗಳು ಆರಾಧಿಸಲ್ಪಟ್ಟರೂ ಅವುಗಳೆಲ್ಲ ಶೈವ ಮತದ ದೇವರುಗಳೇ ಆಗಿವೆ. ಆ ದೇವರುಗಳನ್ನೆಲ್ಲ ಶಿವನ ಅವತಾರಗಳು, ಶಿವನ ಸ್ವರೂಪಗಳು ಎಂದು ಬಗೆಯಲಾಗುತ್ತಿದೆ. ಸ್ತ್ರೀ ದೇವತೆಗಳು ಕುರುಬ ಜನಾಂಗದವರಿಂದ ಆರಾಧಿಸಲ್ಪಟ್ಟರೂ, (ಶೈವ) ಶಿವನ ಪರಿವಾರಕ್ಕೆ ಸಂಬಂಧಿಸಿದವರಾಗಿದ್ದೂ, ಪ್ರತೀಕವೆಂದಾಗಿರುತ್ತವೆ. ಬರಬರುತ್ತ ವೈಷ್ಣವ ದೇವರುಗಳ ಆರಾಧನೆಯೂ ಕುರುಬ ಜನಾಂಗದವರಿಂದ ಸಾಗಿ ಬಂದಿದೆ. ಈ ವಿಷಯ ಪ್ರತ್ಯೇಕ ಅಧ್ಯಯನದ ವಿಷಯವೇ ಆಗಿದೆ.

ಡೊಳ್ಳಿನ ರಚನೆ :

ಸಿಲಿಂಡರಾಕಾರದ ಮರದ ದಿಮ್ಮಿಯನ್ನು ತೆಗೆದುಕೊಂಡು ಅದನ್ನು ಒಳಭಾಗದಲ್ಲಿ ಪೊಳ್ಳು ಮಾಡಲಾಗುವುದು. ಈ ಮರದ ದಿಮ್ಮಿಗಳು ಹಗುರಾಗಿರಬೇಕು. ಅದಕ್ಕೆಂದೇ ಕರ್ನಾಟಕದಲ್ಲಿರುವ ಶಿವಾಲಯ ಮರ ಅಥವಾ ಕರಿಮತ್ತಿ ಮರಗಳನ್ನು ಆಯ್ಕೆ ಮಾಡಿಕೊಳ್ಳುವರು. ಇವು ಪೊಳ್ಳಾದ ಬಳಿಕ ಹಗುರಾಗಿ ಮತ್ತು ಬಿರುಸಾಗಿ ಇರುವವು. ಕಟ್ಟಿಗೆ ಒಣಗಿದ ನಂತರ ಗಟ್ಟಿ ಉಂಟಾಗುವುದು. ಇವುಗಳನ್ನು ವಿವಿಧ ಬಗೆಯ ಸಿಲಿಂಡರುಗಳನ್ನಾಗಿ ಮಾಡುವರು. ಚಿಕ್ಕದು ದೊಡ್ಡದು ಎಂಬ ಡೊಳ್ಳುಗಳನ್ನು ಅವುಗಳ ಸ್ವರೂಪಗಳನ್ನು ತಿಳಿಸಲಾಗುತ್ತಿದೆ. ಅತೀ ಚಿಕ್ಕ ಹಾಗೂ ಗಟ್ಟ ಡೊಳ್ಳಿಗೆ “ಕೈಪಟ್ಟು” ಅಥವಾ “ಕೈಪಟ್ಟು” ಎಂದೂ ಕರೆಯಲಾಗುತ್ತದೆ. ಈ ಕೈಪಟ್ಟಿಗೆ ಗುಣಿಯಿಂದ ಬಾರಿಸುವಂತಿಲ್ಲ ! ಎರಡೂ ಕೈಗಳಿಂದ ಮತ್ತು ಬಲಗೈ ಸಣ್ಣ ಚಬಕ (ಬಿರುಸಾದ ಕಟ್ಟಿಗೆಯ ಎಳಸು) ನಿಂದ ಬಾರಿಸಲಾಗುತ್ತಿದೆ.

ಡೊಳ್ಳಿನ ಆಕಾರದ “ಬಿದಿರಿನ ಬಳಿ”ಯನ್ನು ತಯಾರಿಸಿ, ಆಡು-ಹೋತುಗಳ ಚರ್ಮಗಳನ್ನು ಇಪ್ಪತ್ತೊಂದು ದಿವಸ ಹದಮಾಡಿ (ಮೂರು ನಾಲ್ಕು ದಿವಸ ಸುಣ್ಣದ ನೀರನ್ನು ಎರಚಿ) ಅಂತರದಲ್ಲಿ ತೂಗುಹಾಕಿ ನೆರಳಲ್ಲಿಯೇ ಒಣಗಿಸಬೇಕಾಗುತ್ತದೆ. ಬಳಿಕ ಚರ್ಮದ ಮೇಲಿರುವ ಕೂದಲುಗಳನ್ನು ರೆಂಪಿಗೆಯಿಂದ ಕೆತ್ತಿ, ಬಲಬದಿಗೆ ಹೋತಿನ ಚರ್ಮ, ಎಡಗಡೆಗೆ ಆಡಿನ ಚರ್ಮಗಳನ್ನು ಹೊದಿಸಿ, ಬಿದಿರಿನ ಬಳಿಗೆ ಅಂಟಿಸಿ (ಕಟ್ಟಿ) ಹಗ್ಗ ಚಳಿ (ನಾರು ಅಥವಾ ತೆಗಲು)ಯಿಂದ ವಿರುದ್ಧವಾಗಿ ಬಿಗಿಯಲಾಗುತ್ತಿದೆ. ಎಂಟತ್ತು ದಿವಸಗಳವರೆಗೆ ಹಾಗೇ ಇಟ್ಟು, ಬಲಭಾಗದ ಡೊಳ್ಳಿನ ತುಂಬ ಎಣ್ಣೆಯ ಜಿಗಿಯನ್ನು ಅಂಟಿಸಲಾಗುವುದು. ಹೀಗೆ ಅಂಟಿಸಿದ ಬಲಭಾಗಕ್ಕೆ ಗುಣಿಯಿಂದ ಬಡಿಯುವುದು, ಬಾರಿಸುವುದು, ನಾದಕ್ಕೆ ಯೋಗ್ಯತೆ ಹೆಚ್ಚಾಗುವುದು ಮತ್ತು ಗಟ್ಟಿತನವೂ ಬಲಗೊಳ್ಳುವುದು. ಎಡಭಾಗದ ಆಡಿನ ಚರ್ಮವು ಚಿಂಗ್-ಪಂಗ್ ಧ್ವನಿಗೆ ನಾದಯೋಗ್ಯತೆಯನ್ನು ಹೊಂದುವುದು.

ಹೀಗೆ ತಯಾರಾದ ಹೊಸ ಡೊಳ್ಳನ್ನು ಅಮಾವಾಸ್ಯೆಯ ದಿನ ಗುಡಿಯ ಎದುರಿನಲ್ಲಿಟ್ಟು ಅದರ ಬದಿ ಕಂಬಳಿಯನ್ನು ಹಾಸಿ (ಕೆಲವು ಕಡೆಗೆ ಕಂಬಳಿಯ ಮೇಲೆ ಡೊಳ್ಳನ್ನು ಇಟ್ಟು) ಭಂಡಾರ ಹೂವುಗಳನ್ನು ಡೊಳ್ಳಿಗೆ ಧರಿಸಿ, ಬಳಿಕ ಐದು ಕೈಗಳನ್ನು ಬಾರಿಸಲಾಗುವುದು. ಇದು ಪರಂಪರಾಗತವಾಗಿ ಬಂದಿರುವ ಡೊಳ್ಳಿನ ರಚನೆಯಾಗಿರುವುದು.

ಕೈಪಟ್ಟು ಹಾಗೂ ಚಿಕ್ಕ ಡೊಳ್ಳುಗಳ ಸಿಲಿಂಡರಾಕಾರ (ದೊಡ್ಡಬಳ್ ಆಕಾರ)ಗಳನ್ನು ಕಂಚಿನಿಂದ ತಯಾರಿಸಲಾಗುತ್ತಿದೆ.

ಬಿದಿರಿನ ಹಾಗ ಮಸಿವಾಳ ಕೈಟ್ಟಿಗೆಯಿಂದ ಬಾರಿಸುವ ಗುಣಿಗಳನ್ನು ತಯಾರಿಸಲಾಗುತ್ತಿದೆ. ಗುಣಿಗಳಲ್ಲೂ ವಿಧವಿಧವಾದ ಆಕಾರಗಳನ್ನು ಮಾಡಲಾಗುತ್ತಿದೆ.

ಕರ್ನಾಟಕದಲ್ಲಿ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕರಾವಳಿ ಅಥವಾ ಮಲೆನಾಡು ಕರ್ನಾಟಕ ಎಂಬ ಭೌಗೋಳಿಕ ಕ್ಷೇತ್ರಗಳಲ್ಲಿ ಡೊಳ್ಳುಗಳ ಆಕಾರಗಳು ಒಂದೇ ಮಾದರಿಯಾಗಿರುವುದು ಗಮನಾರ್ಹ ಸಂಗತಿಗಳೇ ಆಗಿವೆ.

ಮೂಲದಲ್ಲಿ ಕೆಲವು ಹಿರಿಯರ ಹೇಳಿಕೆಯಂತೆ ಡೊಳ್ಳಿಗೆ ಕುರಿಯ ಚರ್ಮವನ್ನೇ ಹದಗೊಳಿಸಿ (ತೊಗಲಾಗಿಸಿ) ಎರಡೂ ಬದಿಗೆ ಬಿಗಿಯಲಾಗುತ್ತಿತ್ತು ಎಂದೆನ್ನುತ್ತಾರೆ.[6]

ಡೊಳ್ಳಿನನಾದ ಮಾಧುರ್ಯಕ್ಕೆ ವಿಶೇಷವಾಗಿ ಚರ್ಮವನ್ನು ಹದಮಾಡಲು ಈಗ ಡೋಹರ ಮನೆ ಮನೆಗಳಲ್ಲಿಯೇ ತಯಾರಿಸಿ ಕೊಡಲು ಹೇಳುತ್ತಾರೆ.

ಡೊಳ್ಳನ್ನು ತಯಾರಿಸಿದ ನಂತರ, ಗುರು ಬೀರಪ್ಪನನ್ನು ಸಿದ್ಧ-ಸಿದ್ಧರನ್ನು, ಶಿವ-ಪಾರ್ವತಿ, ಶಿವ-ಗಣಂಗಳನ್ನು ಸ್ಮರಿಸಿ, ಸ್ತುತಿ ಹಾಡುಗಳನ್ನೂ ಹಾಡುತ್ತಾರೆ. ಹಾಡುಗಳನ್ನೆಲ್ಲ ಹಾಡಿ ಮುಕ್ತಾಯದ ವೇಳೆಗೆ ಹರಕೆಯ ಹಾಡನ್ನು ಹಾಡುತ್ತಾರೆ.

ಹಾಡಿನ ಮೇಳದವರು ಬಹುವಾಗಿ, ಬೆಳ್ಳಂಬೆಳಗು ಹಾಡಿದರೆ, ಪ್ರತಿ ಮೇಳದವರು ಒಂದೊಂದು ಹರಕೆಯ ಹಾಡುಗಳನ್ನೋ ಅಥವಾ ಮಂಗಲ ಪದ್ಯವನ್ನೋ ಹಾಡಿ ವಾಲಗ (ಗೋಷ್ಠಿ) ಮುಕ್ತಾಯಗೊಳಿಸುತ್ತಾರೆ.

ಡೊಳ್ಳು ಹಾಡುಗಾರರಲ್ಲಿ ಹಾಡುವ ಮೇಳಗಳ ಸಂಪ್ರದಾಯಗಳೆಂದು ಗೊತ್ತು ಮಾಡಿಕೊಂಡಿರುವುದು ಕ್ಷೇತ್ರ ಕಾರ್ಯದಿಂದ ಕಂಡು ಬಂದಿದೆ. ಅವು ; ಬೀರದೇವರ ಸಂಪ್ರದಾಯ, ಅಮೋಘ ಸಿದ್ಧ ಸಂಪ್ರದಾಯ, ಹುಲಿಜಂತಿ ಮಾಳಿಲಗರಾಯ ಸಂಪ್ರದಾಯ, ಕರಿಸಿದ್ಧ ಸಂಪ್ರದಾಯ, ಮೈಲಾರ ದೇವರ ಸಂಪ್ರದಾಯ, ರೇವಣಸಿದ್ಧ ಸಂಪ್ರದಾಯ, ಲಕ್ಷ್ಮೀ ಸಂಪ್ರದಾಯ, ಮಹಾಲಕ್ಷ್ಮೀ ಸಂಪ್ರದಾಯ, ಉದ್ದಮ್ಮ ಸಂಪ್ರದಾಯ, ಮಾಯಮ್ಮ ಸಂಪ್ರದಾಯ ಇತ್ಯಾದಿ, ಯಾವುದೇ ಸಂಪ್ರದಾಯವಿದ್ದರೂ, ಅವರೆಲ್ಲರಿಗೂ ಎಲ್ಲ ದೇವ-ದೇವತೆಗಳು ಒಂದೇ ಎಂಬ ಭಾವನೆ ಇರುತ್ತದೆ. ಎಲ್ಲ ದೇವಾನು ದೇವತೆಗಳು ಶಕ್ತಿಯ ಪ್ರತೀಕಗಳಾಗಿರುವುದನ್ನು ಹೇಳುತ್ತಾರೆ. ಸಜ್ಜನರನ್ನು ಸಲಹುವ ದೇವತೆಗಳೆಂದೂ, ದುಷ್ಟರನ್ನು ಇಲ್ಲಿ ಮಾಡುವ ದೇವರುಗಳೆಂದೂ ನಂಬುತ್ತಾರೆ. ಜೊತೆ ಈ ಜಗವನ್ನು ಪರಿಪಾಲಿಸುವವರೆಂದೂ ಭಾವಿಸುತ್ತಾರೆ.

ಎಲ್ಲ ಮೇಳದವರು ವಿಶೇಷವಾಗಿ ಬೀರದೇವರಿಗೆ ಮಹತ್ವವನ್ನೀಯುವರು. ಆದಿಗುರು ಬೀರಪ್ಪ, ಗುರುಬೀರಪ್ಪ, ದೇವರಗುಡಿ ಬೀರಪ್ಪ, ಬಾಸುರಾಂಗ ಬೀರಪ್ಪ, ಆಡಕಾದ ಬೀರಪ್ಪ, ಕುರಿತಾದ ಬೀರಪ್ಪ, ಕಾಳಿರಮಣ ಬೀರಪ್ಪ, ಹುಲಿ ಹೊಡಿದ ಬೀರಪ್ಪ, ದೈತ್ಯ ಸಂಹಾರಕ ಬೀರಪ್ಪ, ಹೀಗೆ ಹಲವು ಬಗೆಯ ವರ್ಣನೆಗಳನ್ನು ಮಾಡುವ ಪ್ರಸಂಗಗಳು ಡೊಳ್ಳಿನ ಹಾಡಿನಲ್ಲುಂಟು. ನನ್ನ ಕ್ಷೇತ್ರ ಕಾರ್ಯದಲ್ಲಿ ಶ್ರೀ ಭಗವಾನ ಬೀರಪ್ಪ ಶ್ರೀ ಭಗವಾನ ಬೀರೇಶ ಎಂಬುದಾಗಿಯೂ ಕೇಳಿ ಬರುತ್ತಿದೆ. ಬಿಜಾಪೂರ-ಬಾಗಲಕೋಟೆ ಜಿಲ್ಲೆಗಳಲ್ಲಿಯ ಮೇಳಗಳು ಶ್ರೀ ಭಗವಾನ್ ಬೀರೇಶನೆಂದು ಹಾಡುಗಳಲ್ಲಿ ಕೊಂಡಾಡುವುದುಂಟು.

ಡೊಳ್ಳು ಮೇಳಗಳು ಹಾಗೂ ಸ್ತುತಿ ಪದಗಳು : ಕೈಪಟ್ಟು (ಕೈಪೆಟ್ಟು) = ದಿಮ್ಮು ಹಾಡುಗರಿಗೆ ಮುಖ್ಯ ವಾದ್ಯವಾಗಿರುತ್ತದೆ. ಜೊತೆ ಇಬ್ಬರು ತಾಳು ಬಾರಿಸುವವರು, ಇಬ್ಬರು ಹಿಮ್ಮೇಳದವರು ಅಥವಾ ಮೂರು ಜನರು ಒಟ್ಟು ಡೊಳ್ಳಿನ ಮೇಳದಲ್ಲಿ ೫ ಅಥವಾ ಆರು ಜನರು ಹಾಡುಕಾರರು ಇರುತ್ತಾರೆ. ತಾಳು ಬಾರಿಸುವವನು ಒಬ್ಬನಿದ್ದರೂ ಇನ್ನೊಬ್ಬನು ತಾಳಿನ ಗತಿಗೆ ಕೈ ಚಪ್ಪಾಳೆ ಬಾರಿಸುವನು.

ಇಬ್ಬರು ತಾಳವಾದಕರು ಮುಂದೆ ಹಾಡುವವರು (ಮುಮ್ಮೇಳ) ಎಂದೆನಿಸಿಕೊಳ್ಳುತ್ತಾರೆ.  ಇವರು ದಿಮ್ಮ ಬಾರಿಸುವವನ ಗತ್ತಿಗೆ ತಾಳಬಾರಿಸುತ್ತಾರೆ. ತಾಳಬಾರಿಸುವವರಿಗೆ ಚಳ್ಳಂಕ = ಚಳ್ಳಂಗ ಬಾರಿಸುವವರೆಂದು ಕರೆಯುತ್ತಾರೆ. ಇತ್ತೀಚೆಗೆ ದಿಮ್ಮುಬಾರಿಸುವವನ ಜೊತೆ ತಬಲಾ ನುಡಿಸುತ್ತಾರೆ. ಮೊದಲಿನಿಂದಲೂ ಕೊಳಲು ಊದುವ ಸಂಪ್ರದಾಯ ಮೇಳಗಳಲ್ಲಿ ಉಂಟು.

ಒಬ್ಬ ದಿಮ್ಮು ಬಾರಿಸುವವ, ಒಬ್ಬ ತಾಳಬಾರಿಸುವವ, ಹಿಮ್ಮೇಳದವರಿಬ್ಬರು, ಒಬ್ಬ ಕೊಳಲು ನುಡಿಸುವವನ-ಹೀಗಿದ್ದರೆ, ಹಾಡು ಕೇಳುವುದಕ್ಕೆ ಉತ್ತಮವೆಂದು ವಾಲಿಗದ ಹಿರಿಯರು, ಅರಿಷಣ ಬಿಟ್ಟು ಅಥವಾ ಬಂಡಾರ ಕೊಡುವಾಗ ಕರಾರನ್ನುಂಟು ಮಾಡಿ ಬರುತ್ತಾರೆ. ಈ ಪದ್ಧತಿಗೆ ಓಲಗ (ವಾಲಗ) ಕರೆಯುವುದು ಎಂದು ಗೊತ್ತು ಮಾಡಿಕೊಂಡಿರುತ್ತಾರೆ. ಹಾಡಲು ಒಪ್ಪಿಕೊಳ್ಳುವವರಿಗೆ “ಭಂಡಾರ ಹಿಡಿಯುವುದು” ಎಂದೆನ್ನುತ್ತಾರೆ. ವಾಲಗಗಳನ್ನು ಕರೆಯುವುದು ಎಂದರೆ, ಜಾತ್ರೆ, ಹಬ್ಬ ಹರಿದಿನ, ಅಮಾವಾಸ್ಯೆ “ಹಾಡುಗಳ ಶರತ್” ಸಂದರ್ಭಗಳಲ್ಲಿ ಮೇಳಗಳನ್ನು ಕರೆಯುತ್ತಾರೆ. ಜಾತ್ರೆಗಳಲ್ಲಾದರೆ, ಬೆಳ್ಳಂಬೆಳಗು ಹಾಡುಗಾರಿಕೆ ನಡೆಯುವುದು. ಬೆಳಿಗ್ಗೆ ಡೊಳ್ಳು ಕಟ್ಟುವುದು ೫-೬ ತಾಸುಗಳವರೆಗೆ ಡೊಳ್ಳು ಬಾರಿಸುವ ಕುಣಿಯುವ ಕಾರ್ಯಕ್ರಮ ಸಾಂಗವಾಗುವುದು.

ಸ್ತುತಿ ಹಾಡು : ಸ್ತುತಿ ಹಾಡುಗಳು ಹಲವಾರು, ಸಂಶೋಧಕರು, ಸಂಗ್ರಹಕಾರರು ಅವುಗಳನ್ನೆಲ್ಲ ದಾಖಲಾಯಿಸಿಕೊಂಡಿಲ್ಲ ! ಹಾಡುವವರು ಮಾತು ಹಾಡುತ್ತಲೇ ಇದ್ದಾರೆ.

ಹಾಡು :       

ಗುರುವೆ ನಮ್ಮಯ ದೇವರು ಬಂದಾವ ಬನ್ನೀsರೇs
ಗುರುವ ಬೀರಪ್ಪನಿಗೆ ಶೆರಣೆನ್ನುವರೇs        ||ಪ||

ಮೊದಲು ಗುರುವಿನ ಸ್ಮರಣೆಯ ತೆಗೆದುs
ಸರ್ವರಿಗೆ ಮಾಡುವೆ ನಮ್ಮ ಶರಣಾs           ||ಅ.ಪ||

ನಿರಂಕಾರನಿರ್ಬಯಲಿನೊಳಗ ಇದ್ದs
ಆದಿ ಮೂರತಿಗೆ ನಮ್ಮ ಶರಣೋs   ||೧||

ಲೀಲಾ ಮೂರುತಿ ತೋರಿಸಿದಂತಾs
ರೇವಣಸಿದ್ಧಗೆ ನಮ್ಮ ಶರಣೋs      ||೨||

ತಾಯಿ ಸರಸತಿs ತಂದಿ ಬ್ರಹ್ಮಗೋs
ಆದಿ ಮೂರುತಿಗಳಿಗೆ ನಮ್ಮ ಶರಣೋs        ||೩||

ತಂದೆ-ತಾಯಿಗಿಂತ ಜಾಣನೆನಿಸಿದೋs
ಗಣಪತಿ ದೇವರಿಗೆ ನಮ್ಮ ಶರಣೋs            ||೪||

ಬೇಗಬೆಳಗ ಮಾಡುವಂತಹಾss
ಸೂರ್ಯ-ಚಂದ್ರರಿಗೆ ನಮ್ಮ ಶರಣೋs         ||೫||

ಕೈಲಾಸದಿಂದ ಮಾಯದ ಪಟಕಾ ತರಿಸಿಕೊಂಡs
ಹುಲಿ ಜಂತಿ ಮಾಳಿಂಗರಾಯಾಗ ನಮ್ಮ ಶರಣೋs    ||೬||

ಸಿದ್ಧ-ಸಿದ್ಧರಿಗೆಲ್ಲ ನೆನೆಯುತ ಮಾಡುವೆ ಶರಣೋs
ಅಮೋಫಿ ಸಿದ್ಧನಿಗೆ ನಮ್ಮ ಶರಣೋs           ||೭||

ಸಕಲ ಶೆರಣರಿಗೊಲಿದ ಬಸವಣ್ಣನವರಿಗೆs
ಸಕಲರು ಕೂಡಿ ಮಾಡುವೆ ನಮ್ಮ ಶರಣೋs ||೮||

ವಡೇರಹಟ್ಟಿ ಊರಿನಲ್ಲಿ ಭಕ್ತರಿಗೊಲಿದs
ತಾಯಿ ಲಕ್ಕವ್ವಗ (ಲಕ್ಷ್ಮೀದೇವಿಗೆ) ನಮ್ಮ ಶರಣೋs    ||೯||

(ಹಾಡಿದವರು ಕುರುಬರ ಶ್ರೀ ಭೀಮಪ್ಪ ಕೆಂಚಪ್ಪ ಪೂಜಾರಿ ಹಾಗೂ ಮೇಳದವರು. ವಡೇರ ಹುಟ್ಟಿ ಊರಿನ ಕಾರ್ತಿಕ ಅಮವಾಸ್ಯೆ. ತಾ|| ಗೋಕಕ ; ಜಿ|| ಬೆಳಗಾವಿ)

ಡೊಳ್ಳು ಹಾಡುಗಳ ಸಂಗೀತ : “ಕೈಪಟ್ಟು” ಮೇಳಗಳಲ್ಲಿ ವಿವಿಧ ಬಗೆಯಾಗಿ ಬಾರಿಸುತ್ತಿದ್ದರೂ, “ಆದಿಗತ್ತು” ಎಂಬುದಾಗಿ ಎಲ್ಲ ಮೇಳಗಳಲ್ಲಿ ಒಂದೆರಡು ಕಾಲುಗಳು (ಒಂದೆರಡು ಗತ್ತುಗಳು) ಒಂದೇ ಮಾದರಿಯವುಗಳಾಗಿವೆ.

೧ನೆಯ ಕಾಲ :

ತಾಕಡಕಡ ತಾಕಡಕಡ ತಾಕಡಕಡ ತಾಕಡಕಡ ತಾಕಡಕಡ
ತಾಕಡಕಡ ತಾಕಡಕಡ ತಾs
ತಾಕಡಕಡ ತಾಕಡಕಡ ತಾಕಡಕಡ ತಾs
ತಾಕಡಕಡ ತಾಕಡಕಡ ತಾಕಡಕಡ ತಾs

೨ನೆಯ ಕಾಲ :

ತತ್ ತತ್ ತಾಕಡತಾಕಡಕಡಕಡ ತಾಕಡತಾಕಡಕಡಕಡ
ತಾಕಡತಾಕಡಕಡಕಡ ತಾಕಡತಾಕಡಕಡಕಡ
ತತ್ ತತ್        ತಾಕಡತಾಕಡಕಡಕಡ ತಾಕಡತಾಕಡಕಡಕಡ
ತಾಕಡತಾಕಡಕಡಕಡ ತಾs
ತಾಕಡತಾಕಡಕಡಕಡ ತಾಕಡತಾಕಡಕಡಕಡ
ತಾಕಡತಾಕಡಕಡಕಡ ತಾs

೩ನೆಯ ಕಾಲ :

ತತ್ ತತ್ ತತ್ ತತ್
ತಾಕಡಕಡಕಡ ತಾಕಡಕಡಕಡ ತಾಕಡಕಡಕಡ
ತಾಕಡಕಡಕಡ ತಾಕಡಕಡಕಡ ತಾಕಡಕಡಕಡ
ತಾಕಡಕಡಕಡ ತಾಕಡಕಡಕಡ ತಾಕಡಕಡಕಡ
ತಾಕಡಕಡಕಡ ತಾಕಡಕಡಕಡ ತಾಕಡಕಡಕಡ

ಪಲ್ಟಾ :

ಗಿಡದಾಗಿಡಗಿಡ ಗಿಡದಾಗಿಡಗಿಡ ಗಿಡದಾಗಿಡಗಿಡ
ಗಿಡದಾಗಿಡಗಿಡ ಗಿಡದಾಗಿಡಗಿಡ ಗಿಡದಾಗಿಡಗಿಡ
ಗಿಡದಾಗಿಡಗಿಡ ಗಿಡದಾಗಿಡಗಿಡ ಗಿಡದಾಗಿಡಗಿಡ

ಮುಕ್ತಾಯ :

ತಾಕಡಗಡ ತಾಕಡತಾಗಡಗಡ ತತ್
ತಾಕಡಗಡ ತಾಕಡತಾಗಡಗಡ ತತ್
ತಾಕಡಗಡ ತಾಕಡತಾಗಡಗಡ ತತ್

ಈ ರೀತಿಯಾಗಿ ವಿವಿಧ ಪಲ್ಟಾ ಮತ್ತು ಬೋಲ್‌ಗಳನ್ನು ಮೂರನೆಯ ಕಾಲ, ನಾಲ್ಕನೆಯ ಕಾಲದಲ್ಲಿ ಬಾರಿಸಿ ತೋರಿಸುತ್ತಾರೆ. ಇದಕ್ಕೆ “ಉಳಿಕೆ” “ಉಳಿಸುವಿಕೆ” ಅಥವಾ “ಉಳಿಕೆ ಮಾಡುವಿಕೆ” ಎಂದೂ ಕರೆಯುತ್ತಾರೆ. ಹೀಗೆ ಎಂಟು ಅಕ್ಷರ ಆರು ಅಕ್ಷರ ಹನ್ನೆರಡು ಅಕ್ಷರ, ಹದಿನಾರು ಅಕ್ಷರದವರೆಗೆ “ಉಳಿಕೆ ಮಾಡಿ ತೋರಿಸುತ್ತಾರೆ.

ತಾಳಗಳು :

೧       ೨     ೩   ೧      ೨     ೩
ತಿಸೈ     ಕ     ತಿಸೈ     ತಿಸೈ    ಕ     ತಿಸೈ

ಎಂದು ಮೂರು ಅಕ್ಷರ, ಆದಿತಾಳ, ಅಷ್ಟತಾಳ, ರೂಪಕ, ಠೇಕಗಳು ಕೂಡ, ಹಾಡಿನ ವಿಶಿಷ್ಟ ಗುಣಧರ್ಮಕ್ಕನುಸರಿಸಿ, ಬಳಕೆಯಾಗುತ್ತವೆ. ಹಾಡಿನ ಆರಂಭದಲ್ಲಿ ಇದಕ್ಕೆ ಸ್ವಲ್ಪ ಸ್ವತಂತ್ರ ಸ್ಥಾನವಿರುತ್ತದೆ. “ದಿಮ್ಮ”ದ ಬೋಲಗಳನ್ನೇ ಆಗ ಬಾರಿಸಿ ತೋರಿಸುತ್ತಾರೆ. ಅದು ಅಲ್ಲದೆ ಚಲತಿ ಹಾಡುಗಳ ಸಂದರ್ಭದಲ್ಲಿ ಹಿಮ್ಮೇಳದೊಂದಿಗೆ ಪೂರ್ಣವಾಗಿ ಬಳಕೆಯಾಗುತ್ತದೆ.[1]        ಬೀರ-ವೀರ ಬೀರದೇವರ ಅವತಾರವೇ ಶಿವನ ಅವತಾರ ಎಂದು ಹಾಡುಗರ ಭಾವ. ಈ ಹಾಡನ್ನು ಹಾಡಿದವರು ಹಿರಿಯರಾದ ಶ್ರೀ ಯಲ್ಲಪ್ಪ ಸಣತಮ್ಮಪ್ಪ ಪೂಜಾರಿ, ಸಾ|| ಉದಗಟ್ಟಿ ; ತಾ|| ಗೋಕಾಕ ಇವರಿಗೆ ಕಲಿಸಿದವನು.  ಶ್ರೀ ದಳವಾಯಿ ಅಜ್ಜ ಉದಗಟ್ಟಿ ಊರಿನವರೇ. ಈ ಪೂಜಾರಿಗೆ ಮೂಲದಲ್ಲಿ “ಗೋಡೇರ” ಎಂಬ ಹೆಸರುಂಟು.

[2]        ಡಾ. ಶಂ.ಬಾ. ಜೋಶಿ ಅವರ ಹೇಳಿಕೆ. ಹಾಲು ಮತ ದರ್ಶನ ಹಾಗೂ ಕರ್ನಾಟ ಸಂಸ್ಕೃತಿಯ ಪೂರ್ವ ಪೀಠಿಕೆ. (ಇವೆರಡಲ್ಲೂ ಉದ್ಧೃತ)

[3]        ಕುರುಬ ಜನಪದ ಸಂ|| ಪ್ರೊ|| ಚನ್ನಪ್ಪಕಟ್ಟಿ, ಪ್ರೊ|| ಆರ್.ಎಸ್. ವಾಡೇದ, ಲೇಖನ ಕುರುಬ ಜನಾಂಗದ ಐತಿಹಾಸಿಕ ಹಿನ್ನೆಲೆ – ಡಾ. ಎಚ್.ಜೆ. ಲಕ್ಕಪ್ಪಗೌಡ – ಪು. ೬ ಮತ್ತು ೭.

[4]        The shepherds of India by Dr. S.S. Shashi the Land and The People – Page-13

[5]        ಉತ್ತರ ಕರ್ನಾಟಕದ ಜನಪದ ಗೀತೆ ಮೇಳಗಳು ಒಂದು ಸಾಂಸ್ಕೃತಿಕ ಅಧ್ಯಯನ. ಡಾ|| ವೀರೇಶ ಶ. ಬಡಿಗೇರ ೧೯೯೯  ಪುಟ. ೧೭೫

[6]        ಅ)  ಶ್ರೀ ಉದ್ದಪ್ಪ ದಳವಾಯಿ, ಊರು ಉದಗಟ್ಟಿ ತಾ|| ಗೋಕಾಕ, ಜಿ|| ಬೆಳಗಾವಿ.

ಬ)  ಶ್ರೀ ಮಹಾದೇವ ಸಿದ್ದಪ್ಪ ಕುರಿ, ಕೊಣ್ಣೂರ ತಾ|| ಹುನಗುಂದ, ಜಿ|| ಬಾಗಲಕೋಟೆ.

ಕ)  ಶ್ರೀ ಮಾರುತಿ ಸಿ. ಪೂಜಾರಿ, ಊರ ಕ್ವಾಣಗನೂರ (ಕೊಣ್ಣೂರ) ಜಿ|| ಬಿಜಾಪುರ.