ಕಥಾ ಸಾರಾಂಶ

 

. ಯಕ್ಷಗಾನ ಭೀಷ್ಮೋತ್ಪತ್ತಿ

ಹೆಸರೇ ಹೇಳುವ ಹಾಗೆ ಯಕ್ಷಗಾನ ಭೀಷ್ಮೋತ್ಪತ್ತಿ ಪ್ರಸಂಗ ಕೃತಿ ಶಂತನು ಚಕ್ರವರ್ತಿ ಮತ್ತು ಗಂಗಾದೇವಿಯರ ಮಗ ದೇವವ್ರತ ತನ್ನ ಭೀಷಣ ಪ್ರತಿಜ್ಞೆಯಿಂದ ಭೀಷ್ಮನಾಗಿ ಉದ್ಭವಗೊಂಡ ಕಥೆಯನ್ನು ಒಳಗೊಂಡಿದೆ.  ಇದನ್ನು ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ಬರೆದಿದ್ದಾನೆ. ಕರ್ನಾಟಕದಲ್ಲಿ ಹಲವು ಹಲಸಿನ ಹಳ್ಳಿಗಳು ಇರಬಹುದಾದರೂ ಈ ನರಸಿಂಹಶಾಸ್ತ್ರಿಯ ಹಲಸಿನ ಹಳ್ಳಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿದೆ.  ವರತುಂಗಾದಕ್ಷಿಣಾ ಕೂಲದೊಳ್ ಪನಸಾಖ್ಯ ಪುರಿವಾಸ ಹವ್ಯಕದ್ವಿಜನು, ಉರಗೇಂದ್ರ ಶಾಸ್ತ್ರಿಯ ತರಳನು ನರಹರಿ…. ಎಂದು ತನ್ನ ಪರಿಚಯವನ್ನು ತಾನು ರಚಿಸಿದ ಹೆಚ್ಚಿನ ಪ್ರಸಂಗ ಕೃತಿಗಳಲ್ಲಿ ಹೇಳಿಕೊಂಡಿದ್ದಾನೆ. ಪನಸಾಖ್ಯಪುರಿ ಎಂದರೆ ಹಲಸಿನಹಳ್ಳಿ ; ಉರಗೇಂದ್ರ ಶಾಸ್ತ್ರಿ ಎಂದರೆ ನಾಗೇಂದ್ರಶಾಸ್ತ್ರಿ. ಅಜ್ಜನ ಹೆಸರು ರಾಮಾಶಾಸ್ತ್ರಿ ಎಂದೂ ಹೇಳಲಾಗುತ್ತದೆ. ಇವನ ವ್ಯಕ್ತಿಗತ ಪರಿಚಯದ ವಿಷಯದಲ್ಲಿ ಹೆಚ್ಚು ಮಾಹಿತಿಗಳು ಸಿಗುವುದಿಲ್ಲ. ಸಾಗರದ ಶ್ರೀ ಮೋಹನ ಹೆಗಡೆಯವರು ಶಾಸ್ತ್ರಿಯ ನಿಕಟವರ್ತಿ ಒಡನಾಡಿಗಳ ಹೇಳಿಕೆಗಳನ್ನು ಆಧರಿಸಿ ಒಂದು ಬರೆಹ ಪ್ರಕಟಿಸಿದ್ದಾರೆ.  ಹುಟ್ಟೂರು ಹಲಸಿನ ಹಳ್ಳಿಯಾದರೂ ಆಗುಂಬೆಯ ಶ್ರೀಮಂತರಲ್ಲೊಬ್ಬರಾದ ವಾಸುದೇವಯ್ಯನವರಲ್ಲಿ ಗುಮಾಸ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದನಂತೆ. ನಾಟಕದ ಹಾಸ್ಯಪಾತ್ರಧಾರಿಯಾಗಿದ್ದನಲ್ಲದೆ ತಾಳಮದ್ದಳೆಯ ಅರ್ಥಧಾರಿಯೂ ಆಗಿದ್ದನಂತೆ. ಆಗುಂಬೆಯ ಗುತ್ತಿಗೆದಾರ ನಾರಾಯಣಪ್ಪ, ವಿಠ್ಠಲಪಂಡಿತ, ಪಟೇಲ ಶಂಕರಯ್ಯ, ಆಗುಂಬೆಯ ಸುಬ್ಬಣ್ಣ ಭಟ್ಟ, ನರಸಿಂಹ ಮಲ್ಯ, ಕಮಕೊಂಡು ನರಸಿಂಹಶಾಸ್ತ್ರಿ ಇವರೆಲ್ಲ ಮಿತ್ರವರ್ಗವಂತೆ. ಸಾಹಿತ್ಯದ eನವುಳ್ಳ ಹಾಸ್ಯಮಿಶ್ರಿತ ಸರಸಮಯ ಮಾತಿನಶೈಲಿ ಇವನ ಅರ್ಥದ ವೈಶಿಷ್ಟ್ಯಗಳಂತೆ. ಭೀಷ್ಮ (ಯಾವ ಪ್ರಸಂಗದ್ದೆಂದು ತಿಳಿದಿಲ್ಲ) ರುಕ್ಮಾಂಗದ ಇವನ ಹೆಸರಾದ ಪಾತ್ರಗಳಂತೆ. ನಾಟಕ ಬರೆಯುವುದು ಮತ್ತು ಹೇಳಿಕೊಡುವುದು ಆಶುಕವಿತ್ವ, ಉಪನಯನ, ವಿವಾಹ ಮುಂತಾದ ಮಂಗಲ ಕಾರ್ಯಗಳಲ್ಲಿ ಹಾಡಬಹುದಾದ ಹಾಡುಗಳನ್ನು ರಚಿಸುವುದು ಓದು, ಬರಹ ಇವನ ಹವ್ಯಾಸಗಳಾಗಿದ್ದುವಂತೆ.

ಇವನ ಬದುಕಿನ ಅವಧಿಯನ್ನು ನಿರ್ಧರಿಸುವುದು ಕಷ್ಟ. ಹೆಚ್ಚಿನ ಪ್ರಸಂಗ ಕೃತಿಗಳಲ್ಲಿ ಅದನ್ನು ಮುಗಿಸಿದ ಸಂವತ್ಸರ, ಮಾಸ, ಪಕ್ಷ, ತಿಥಿಗಳನ್ನು ಹೇಳಿದ್ದರೂ ಶಕ ವರ್ಷವನ್ನು ಸೂಚಿಸದಿರುವುದರಿಂದ ಕಾಲ ನಿರ್ಧಾರ ಕಷ್ಟ, ಮೋಹನ ಹೆಗಡೆಯವರು ತಮ್ಮ ಬರೆಹದಲ್ಲಿ ಇವನ ಜೀವಿತಾವಧಿಯನ್ನು ೧೮೭೦-೧೯೫೩ ಎಂದು ಸೂಚಿಸುತ್ತಾರೆ. ಆಕರವನ್ನು ಹೇಳುವುದಿಲ್ಲ. ಡಾ|| ಕಾರಂತರು ೧೯೩೦ರಸುಮಾರಿಗೆ ತೀರಿಕೊಂಡನೆಂದು ಹೇಳುತ್ತಾರೆ.  ಮೋಹನ ಹೆಗಡೆಯವರ ಹೇಳಿಕೆಯೇ ವಾಸ್ತವವಾಗಿರುವ ಸಾಧ್ಯತೆಯಿದೆ. ಇವನ ಮೊಟ್ಟಮೊದಲ ಪ್ರಸಂಗಕೃತಿ ಶಶಿಕಲಾ ಸ್ವಯಂವರ ೧೮೯೦ರಲ್ಲಿ ರಚನೆಯಾದುದೆಂದು ಮೋಹನಹೆಗಡೆ ಹೇಳುತ್ತಾರೆ. ಅಲ್ಲದೆ ಈತ ರಚಿಸಿದ ಮೂವತ್ತಾರು ಪ್ರಸಂಗಕೃತಿಗಳಲ್ಲಿ ಲಭ್ಯವಾದ ಸುಮಾರು ಹದಿನೈದು ಪ್ರಸಂಗಕೃತಿಗಳ ಇಸ್ವಿಯನ್ನೂ ಆವರಣದಲ್ಲಿ ಕೊಡುತ್ತಾರೆ.  ಆದರೆ ಸೂಚಿತ ವರ್ಷಗಳು ರಚನೆಗೊಂಡ ವರ್ಷವೆ ಅಥವಾ ಮುದ್ರಣಗೊಂಡ ವರ್ಷವೆ ಎಂಬುದು ಸ್ಪಷ್ಟವಾಗುವುದಿಲ್ಲ.

ಕೌಶಿಕ ಚರಿತ್ರೆ,  ವಿದ್ಯುನ್ಮತೀಕಲ್ಯಾಣ, ಪುಂಡರೀಕ ಚರಿತ್ರೆ, ವಾಮನಚರಿತ್ರೆ, ರುಗ್ಮವತಿ ಕಲ್ಯಾಣ, ಪಾರಿಜಾತಾಪಹಾರ, ಚಂದ್ರಹಾಸ ಚರಿತ್ರೆ, ಭೀಷ್ಮವಿಜಯ, ಕುಮುದ್ವತಿ ಕಲ್ಯಾಣ ಭೀಷ್ಮಾರ್ಜುನಕಾಳಗ, ದೇವಯಾನಿ ಕಲ್ಯಾಣ, ಶ್ರೀಕೃಷ್ಣವಿವಾಹ, ಶಲ್ಯಪರ್ವ, ವೀರಮಣಿ ಕಾಳಗ, ರುಕ್ಮಾಂಗದ ಚರಿತ್ರೆ, ವಿಶ್ವಾಮಿತ್ರ ಪ್ರತಾಪ, ಮುಂತಾದವು ಅವರ ಪ್ರಸಂಗಕೃತಿಗಳು, ಭೀಷ್ಮೋತ್ಪತ್ತಿ, ಭೀಷ್ಮವಿಜಯ, ಭೀಷ್ಮಾರ್ಜುನಕಾಳಗ ಮೂರು ಸೇರಿ ಸಮಗ್ರ ಭೀಷ್ಮ ಆಗಿ ಡೇರೆ ಮೇಳಗಳ ತಿರುಗಾಟದಲ್ಲಿಯೂ ಜಯಭೇರಿ ಬಾರಿಸಿವೆ. ಭೀಷ್ಮವಿಜಯ ಸಮಯಮಿತಿಯ ಪ್ರದರ್ಶನಕ್ಕೂ ಅಳವಟ್ಟಿದೆ. ಭೀಷ್ಮ ವಿಜಯ ವೇ ಡಾ|| ಕಾರಂತರ ನೃತ್ಯನಾಟಕಕ್ಕೂ ಒದಗಿದೆ. ಇವನ ಪ್ರಸಂಗಕೃತಿಗಳ ಕೆಲವು ಪಾತ್ರಗಳು ಪಡುವಲಪಾಯದ ಬಡಗು-ತೆಂಕುಗಳೆರಡರಲ್ಲಿಯೂ ನಟಪರಂಪರೆಗೆ ನಿದರ್ಶನಗಳಾಗಿವೆ. ಹಲವು ಪ್ರಸಂಗಕೃತಿಗಳು ಡೇರೆ ಮೇಳಗಳಲ್ಲಿಯೂ ಬಯಲಾಟದ ಮೇಳಗಳಲ್ಲಿಯೂ ಬಳಕೆಯಾಗಿವೆ. ಯಕ್ಷಗಾನ ಪ್ರಸಂಗಸಾಹಿತ್ಯಕ್ಕೆ ನರಸಿಂಹಶಾಸ್ತ್ರಿಯ ಕೊಡುಗೆ ಸ್ವತಂತ್ರವಾಗಿ ಅಧ್ಯಯನಕ್ಕೆ ಯೋಗ್ಯವಾದುದು.

ಕಥಾಸಾರ : ಹಸ್ತಿನಾವತಿಯನ್ನು ಆಳುತ್ತಿದ್ದ ಶಂತನು ಚಕ್ರವರ್ತಿ ಚಂದ್ರವಂಶದ ಪ್ರತೀಪ-ಸುನಂದೆಯರ ಮಗ. ತರುಣಿಯೋರ್ವಳು ನೀನಿದ್ದಲ್ಲಿಗೆ ತಾನಾಗಿಯೇ ಬರುತ್ತಾಳೆ ; ಏನನ್ನೂ ವಿಚಾರಿಸದೆ ಅವಳನ್ನು ವಿವಾಹವಾಗು ಎಂದು ತಂದೆ ಹೇಳಿದ್ದ. ಒಂದು ದಿನ ಬೇಟೆಗೆಂದು ಅರಣ್ಯಕ್ಕೆ ಹೋದಾಗ ಸರ್ವಾಂಗಸುಂದರ ಸ್ತ್ರೀ ಅವನ ಎದುರಿಗೆ ಬಂದಳು. ಶಂತನು ಅವಳನ್ನು ವಿವಾಹವಾಗಲು ನಿಶ್ಚಯಿಸಿದ. ತನ್ನ ಯಾವ ನಡವಳಿಕೆಯನ್ನೂ ಪ್ರಶ್ನಿಸಕೂಡದು ; ಪ್ರಶ್ನಿಸಿದ ತಕ್ಷಣ ತೊರೆದು ಹೋಗುವೆ ಎಂಬ ನಿಬಂಧನೆ ಹಾಕಿದಳು. ಶಂತನು ಆ ನಿಬಂಧನೆಯನ್ನೂ ಒಪ್ಪಿ ಮದುವೆಯಾದ. ಏಳು ಜನ ಕ್ರಮವಾಗಿ ಅವಳ ಹೊಟ್ಟೆಯಲ್ಲಿ ವರ್ಷಕ್ಕೊಬ್ಬೊಬ್ಬರಂತೆ ಹುಟ್ಟಿದರು. ಹುಟ್ಟಿದ ತಕ್ಷಣ ಅವಳು ಶಿಶುವನ್ನು ಗಂಗೆಯ ನೀರಿನಲ್ಲಿ ಎಸೆದು ಬಿಡುತ್ತಿದ್ದಳು. ಆದರೂ ಶಂತನು ಅವಳನ್ನು ಪ್ರಶ್ನಿಸಲಿಲ್ಲ. ಎಂಟನೆಯ ಮಗು ಹುಟ್ಟಿದಾಗಲೂ ಅವಳು ಗಂಗೆಗೆ ಎಸೆಯಲು ಮುಂದಾದಳು. ಆಗ ಶಂತನು ಅವಳನ್ನು ತಡೆದು ಪ್ರಶ್ನಿಸಿದ. ಅವಳು ಎಲ್ಲವನ್ನೂ ವಿವರಿಸಿದಳು. ಅವಳು ಬೇರೆ ಯಾರೂ ಅಲ್ಲ. ಗಂಗಾದೇವಿಯೇ. ಹಿಂದೊಂದು ಸಲ ಅವಳು ಬ್ರಹ್ಮನ ಸಭೆಗೆ ಹೋದಾಗ ಅವಳ ಸೆರಗು ಗಾಳಿಯಿಂದಾಗಿ ಜಾರಿಹೋದಾಗ ಸೂರ್ಯವಂಶದ ಮಹಾಭಿಷ ಎಂಬ ರಾಜ ಪ್ರೇಮಭರಿತ ದೃಷ್ಟಿಯಿಂದ ನೋಡಿದ್ದ. ಭೂಲೋಕದಲ್ಲಿ ಜನಿಸುವಂತೆ ಬ್ರಹ್ಮನಿಂದ ಶಾಪ ಪಡೆದಿದ್ದ. ಅವನೇ ಚಂದ್ರವಂಶದ ರಾಜ ಶಂತನುವಾಗಿ ಹುಟ್ಟಿದ್ದ. ಗಂಗೆಗೂ ಅವನ ಹೆಂಡತಿಯಾಗುವಂತೆ ಬ್ರಹ್ಮ ಶಾಪಕೊಟ್ಟಿದ್ದ. ಬ್ರಹ್ಮನ ಶಾಪ, ತಂದೆಯ ಮಾತು, ಪರಸ್ಪರ ಆಕರ್ಷಣೆ ಎಲ್ಲ ಸೇರಿ ವಿವಾಹವಾಗಿದ್ದರು. ನಿಬಂಧನೆ ಭಂಗವಾದುದರಿಂದ ಶಂತನುವನ್ನು ತ್ಯಜಿಸಲು ಅವಳು ಸಿದ್ಧಳಾಗಿಬಿಟ್ಟಳು. ವಸಿಷ್ಠನ ಶಾಪಕ್ಕೊಳಗಾದ ಅಷ್ಟವಸುಗಳಲ್ಲಿ ಏಳು ಜನ ಅವಳ ಹೊಟ್ಟೆಯಲ್ಲಿ ಹುಟ್ಟಿ ಶಾಪಮುಕ್ತರಾಗಿದ್ದರು. ಎಂಟನೆಯ ಮಗು ದೀರ್ಘಾಯುವಾಗಲಿ ಎಂದು ಹರಸಿದಳು. ಗಂಗಾದೇವಿಗೆ ಹುಟ್ಟಿದ್ದರಿಂದ ಆತ ಗಾಂಗೇಯನಾದ. ದೇವವ್ರತನೆನ್ನುವ ಇನ್ನೊಂದು ಹೆಸರನ್ನೂ ಇಡಲಾಯಿತು. ದೇವವ್ರತನಿಗೆ ಚೌಲ ಉಪನಯನ ಸಂಸ್ಕಾರಗಳನ್ನೆಲ್ಲ ನೆರವೇರಿಸಿ ಪರಶುರಾಮನಲ್ಲಿ ವಿದ್ಯಾಭ್ಯಾಸಕ್ಕೆ ಕಳುಹಿದ.

ಶಂತನು ಮಹಾರಾಜ ಜಾಹ್ನವಿಯ ವಿರಹ ಚಿಂತೆಯಲ್ಲೇ ಇರುವಾಗ ಗಾಲವ ಮಹರ್ಷಿ ಬಂದು ವಜ್ರಕೇತು ದೈತ್ಯನ ಮಗ ತಮಾಲಕೇತ ಮುನಿವೃಂದಕ್ಕೆ ಮಾಡುತ್ತಿರುವ ಉಪಟಳವನ್ನು ವಿವರಿಸಿದ. ಆ ದೈತ್ಯನನ್ನು ನಿಗ್ರಹಿಸಬೇಕೆಂದು ಕೇಳಿಕೊಂಡ. ಶಂತನು ತಮಾಲಕೇತನನ್ನು ಯುದ್ಧದಲ್ಲಿ ಕೊಂದುಹಾಕಿದ.

ಮರಳಿ ಬರುವಾಗ ಕಾಳಿಂದೀ ತೀರದಲ್ಲಿ ದಾಶರಾಜನೆಂಬ ಬೆಸ್ತರ ಅರಸನ ಸಾಕು ಮಗಳಾದ ಸತ್ಯವತಿಯನ್ನು ನೋಡಿ ಮೋಹಿತನಾಗಿಬಿಟ್ಟ. ಯೋಜನಗಂಧಿಯಾದ ಅವಳ ಸೂಚನೆಯಂತೆ ದಾಶರಾಜ ಕಂಧರನನ್ನೇ ಮಗಳನ್ನು ಮದುವೆ ಮಾಡಿ ಕೊಡುವಂತೆ ಕೇಳಿದ. ತನ್ನ ಮಗಳ ಹೊಟ್ಟೆಯಲ್ಲಿ ಹುಟ್ಟಿದ ಮಗನಿಗೇ ರಾಜ್ಯಕೊಡುವುದಾದರೆ ಮಾತ್ರ ಮಗಳನ್ನು ಕೊಡುವೆ ಎಂದ. ಶಂತನುವಿಗೆ ದೇವವ್ರತನನ್ನು ಬಿಟ್ಟು ಬೇರೆಯಾರಿಗೂ ರಾಜ್ಯ ಕೊಡುವ ಇಷ್ಟವಿರಲಿಲ್ಲ. ಆತ ಸುಮ್ಮನೆ ಹಿಂತಿರುಗಿದ. ಸತ್ಯವತಿಯ ಮೇಲಿನ ಮೋಹ ಕಡಿಮೆಯಾಗಲಿಲ್ಲ. ತೀವ್ರ ಚಿಂತೆಯಿಂದ ರಾಜಕಾರ್ಯದಿಂದಲೂ ವಿಮುಖನಾಗಿಬಿಟ್ಟ. ದೇವವ್ರತ ವಿದ್ಯಾಪಾರಂಗತನಾಗಿ ತಾಯಿಯನ್ನು ಬೀಳ್ಕೊಟ್ಟು ಹಸ್ತಿನಾವತಿಗೆ ಬಂದ. ವಿದ್ಯಾಪಾರಂಗತನಾಗಿ ತಾಯಿಯನ್ನು ಬೀಳ್ಕೊಟ್ಟು ಹಸ್ತಿನಾವತಿಗೆ ಬಂದ. ತಂದೆಯ ಶೋಚನೀಯ ಸ್ಥಿತಿಯ ಕಾರಣ ತಿಳಿದು ದಾಶರಾಜನಲ್ಲಿ ಹೋಗಿ ತಾನು ಬ್ರಹ್ಮಚಾರಿಯಾಗಿಯೇ ಉಳಿಯುತ್ತೇನೆ ,ಎಂದೂ ಪಟ್ಟ ಏರುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ. ಪ್ರತಿಜ್ಞೆ ಕೇಳಿದ ದೇವತೆಗಳು ಹೂಮಳೆಗರೆದು ಭೀಷ್ಮನೆಂದು ಘೋಷಿಸಿದರು. ಶಂತನು-ಸತ್ಯವತಿಯರ ಮದುವೆಯಾಯಿತು. ಮತ್ಸ್ಯಗಂಧಿಯಾದ ಸತ್ಯವತಿ ಅದ್ರಿಕೆ ಎಂಬ ಅಪ್ಸರ ಸ್ತ್ರೀಯ ಮಗಳಾಗಿದ್ದಳು. ಬ್ರಹ್ಮನ ಶಾಪದಿಂದ ಅದ್ರಿಕೆ ಮತ್ಸ್ಯಜನ್ಮ ಪಡೆದಿದ್ದಳು. ಉಪರಿಚರ ಎಂಬ ಅರಸನ ಸ್ಖಲಿತ ವೀರ‍್ಯವನ್ನು ನುಂಗಿದ್ದರಿಂದ ಮತ್ಸ್ಯಕನ್ನೆಗೆ ಮತ್ಸ್ಯರಾಜನೆಂಬ ಪುತ್ರನೂ ಮತ್ಸ್ಯಗಂಧೆಯೆಂಬ ಮಗಳೂ ಜನಿಸಿದ್ದರು. ಮತ್ಸ್ಯಗಂಧೆಯನ್ನು ದಾಶರಾಜ ಸಾಕಿಕೊಂಡಿದ್ದ.

ಶಂತನು-ಸತ್ಯವತಿ ದಂಪತಿಗೆ ಚಿತ್ರಾಂಗ ಮತ್ತು ವಿಚಿತ್ರವೀರ್ಯ ಎಂಬ ಅವಳಿ ಮಕ್ಕಳು ಹುಟ್ಟಿದರು. ಚಿತ್ರಾಂಗ ಪಟ್ಟವೇರುವ ಮೊದಲು ದಿಗ್ವಿಜಯಕ್ಕೆ ತೆರಳಿದ. ಹಲವು ಯುದ್ಧಮಾಡಿ ಗೆದ್ದ. ಕೊನೆಗೆ ಚಿತ್ರಾಂಗನೆಂದೇ ಹೆಸರಿರುವ ಗಂಧರ್ವನೊಡನೆ ಯುದ್ಧಮಾಡುವಾಗ ಹತನಾಗಿ ಬಿಟ್ಟ. ಸತ್ಯವತಿ ತೀವ್ರವಾದ ಪುತ್ರಶೋಕಕ್ಕೊಳಗಾದಳು. ಭೀಷ್ಮ ಗಂಧರ್ವಕುಲವನ್ನೇ ನಾಶಪಡಿಸಿಬಿಡಲು ಸನ್ನದ್ಧನಾದ. ಅಶರೀರವಾಣಿ ಅವನನ್ನು ನಿಯಂತ್ರಿಸಿತು. ಭೀಷ್ಮ ವಿಚಿತ್ರ ವೀರ‍್ಯನಿಗೆ ಹಸ್ತಿನಾವತಿಯ ಪಟ್ಟಕಟ್ಟಿದ. ತಾನು ರಕ್ಷಣೆಗೆ ನಿಂತ ಎಂಬಲ್ಲಿಗೆ ಭೀಷ್ಮೋತ್ಪತ್ತಿ ಪ್ರಸಂಗಕೃತಿ ಮಂಗಲವಾಗುತ್ತದೆ.

ಈ ಪ್ರಸಂಗ ಕೃತಿಯಲ್ಲಿರುವ ಕೆಲವು ವಿಶೇಷ ಅಂಶಗಳನ್ನು ಗುರುತಿಸಬಹುದು. ಪ್ರಸಂಗಕಾರ ವ್ಯಾಸನ ಮಹಾಭಾರತವನ್ನೇ ಹೆಚ್ಚು ಅನುಸರಿಸಿದ್ದಾನೆ. ಕುಮಾರವ್ಯಾಸನಲ್ಲಿ ಈ ಸಂದರ್ಭಗಳೆಲ್ಲ ಹೆಚ್ಚು ಸಂಕ್ಷೇಪವಾಗಿ ಬಂದಿವೆ. ಭೀಷ್ಮನನ್ನು ವಿದ್ಯಾಭ್ಯಾಸಕ್ಕೆ ಶಂತನುವೇ ಕಳಿಸುತ್ತಾನಲ್ಲದೆ ಗಾಲದಮುನಿ ಮತ್ತು ವಜ್ರಕೇತುವಿನ ಪಾತ್ರಗಳನ್ನು ತಂದಿದ್ದಾನೆ. ಚಿತ್ರಾಂಗನ ದಿಗ್ವಿಜಯ ವಿವರಗಳನ್ನು ಹಿಗ್ಗಿಸಿದ್ದಾನೆ. ಇದರಿಂದ  ವಿವಿಧ ಪಾತ್ರಗಳು ರಂಗಕ್ಕೆ ಬರಲು ಸಾಧ್ಯವಾಗಿದೆ. ಯಕ್ಷಗಾನದ ಕಾಳಗ ಪ್ರಧಾನ ಪರಂಪರೆಗೆ ಈ ಕಾಳಗ ವಿವರಗಳು ಪೂರಕವಾಗಿವೆ. ದಾಶರಾಜನ ಪಾತ್ರದ ಪದ್ಯಗಳನ್ನು ಕರಾವಳಿಯ ಆಡುಭಾಷೆಯಲ್ಲಿ ಬರೆದುದು ವಿಶೇಷವಾಗಿದೆ. ಹಿಂದಿನ ಶತಮಾನದ ಆರು, ಏಳನೆಯ ದಶಕಗಳಲ್ಲಿ ಡೇರೆಮೇಳಗಳ ಸಮಗ್ರಭೀಷ್ಮ ಎಂಬ ಪೂರ್ಣ ರಾತ್ರಿಯ ಪ್ರದರ್ಶನದಲ್ಲಿ ಸೇರಿದ ಮೂರು ಪ್ರಸಂಗಗಳಲ್ಲಿ ಇದೂ ಒಂದು. ಶಂತನು ಸತ್ಯವತಿ, ದೇವವ್ರತ, ದಾಶರಾಜ ಮುಂತಾದ ಪಾತ್ರಗಳ ನಿರ್ವಹಣಕ್ರಮ ಪರಂಪರೆಯನ್ನು ಸ್ಥಾಪಿಸಿವೆ.

* * *

. ಯಕ್ಷಗಾನ ಭೀಷ್ಮವಿಜಯ

ಕಥಾಸಾರ : ಚಂದ್ರವಂಶದ ಪುರೂರವನಿಂದ ಪರಂಪರೆಯಾಗಿ ಬಂದ ಹಸ್ತಿನಾವತಿಯ ಪಟ್ಟವನ್ನು ಭೀಷ್ಮ ವಿಚಿತ್ರವೀರ್ಯಕನಿಗೆ ಕಟ್ಟಿ ತಾನು ಅದನ್ನು ಸಂರಕ್ಷಿಸುತ್ತಲೂ ಪರಿಪರಿಯ ನೀತಿಯನ್ನು ಬೋಧಿಸುತ್ತಲೂ ಇದ್ದ. ಅದೇ ಕಾಲದಲ್ಲಿ ಕಾಶೀರಾಜ ಪ್ರತಾಪಸೇನ ತನ್ನ ಪುತ್ರಿಯರಾದ ಅಂಬೆ, ಅಂಬಿಕೆ, ಅಂಬಾಲಿಕೆಯರ ಸ್ವಯಂವರ ಏರ್ಪಡಿಸಿ ಹಲವು ರಾಜರಿಗೆ ಆಮಂತ್ರಣ ಕಳುಹಿಸಿದ. ಸೌಭದೇಶದ ದೊರೆ ಸಾಲ್ವನಿಗೆ ಆಮಂತ್ರಣ ಹೋಗಿರಲಿಲ್ಲ. ಗೂಢಚಾರರಿಂದ ಸ್ವಯಂವರದ ವಿಷಯ ತಿಳಿದ ಸಾಲ್ವ ಕೋಪಗೊಂಡು ಸ್ವಯಂವರದಲ್ಲಿ ಭಾಗವಹಿಸಲು ಕಾಶೀರಾಜ್ಯಕ್ಕೆ ಹೊರಟ. ಮಾರ್ಗಮಧ್ಯೆ ಜಲಕ್ರೀಡೆಯಾಡಲು ಬಂದ ಅಂಬೆಯನ್ನು ನೋಡಿದ. ಪರಸ್ಪರ ಮೋಹಗೊಂಡರು. ಮಾರನೆಯ ದಿನದ ಸ್ವಯಂವರದಲ್ಲಿ ಅಂಬಿಕೆ, ಅಂಬಾಲಿಕೆಯರು ಯಾರನ್ನೇ ಮದುವೆಯಾಗಲಿ ತಾನು ಮಾತ್ರ ಸಾಲ್ವನನ್ನೇ ಮದುವೆಯಗುವುದಾಗಿ ಅಂಬೆ ಸಾಲ್ವನಿಗೆ ಮಾತುಕೊಟ್ಟಳು.

ಸ್ವಯಂವರ ಮಂಟಪದಲ್ಲಿ ಸೇರಿದ ರಾಜರುಗಳ ನಡುವೆ ಪರಾಕ್ರಮಪಂಥ ನಡೆಯುತ್ತಿದ್ದಾಗ ಆಮಂತ್ರಣವೂ ಇಲ್ಲದ ಹಸ್ತಿನಾವತಿಯ ಭೀಷ್ಮ ಪ್ರತಿಷ್ಠೆಯಿಂದ ದಾಳಿಯಿಟ್ಟ. ಉಳಿದ ರಾಜರು ಹೆದರಿ ಹಿಂಜರಿದುಬಿಟ್ಟರು. ಸಾಲ್ವ ಭೀಷ್ಮನೊಂದಿಗೆ ಹೋರಾಡಿ ಸೋತು ಹೋದ. ಉಳಿದ ರಾಜರು ಭೀಷ್ಮನಿಗೆ ಶರಣಾದರು. ಗೆದ್ದ ಭೀಷ್ಮ ಕನ್ನೆಯರನ್ನು ರಥವೇರಿಸಿಕೊಂಡು ಹಸ್ತಿನಾವತಿಗೆ ಕರೆತಂದ.

ಮೂವರು ಕನ್ನೆಯರನ್ನು ಎದುರಿಗಿರಿಸಿಕೊಂಡು ಹಸ್ತಿನಾವತಿಯ ವಂಶಪರಂಪರೆಯನ್ನು ನಿವರಿಸಿ ಮೂವರನ್ನೂ ಸತ್ಯವತಿಯ ಮಗ ವಿಚಿತ್ರವೀರ‍್ಯಕನಿಗೆ ಕೊಟ್ಟು ಮದುವೆ ಮಾಡಲು ಸಿದ್ಧನಾದ. ಅಂಬಿಕೆ, ಅಂಬಾಲಿಕೆಯರು ಮರುಮಾತನಾಡದೆ ಒಪ್ಪಿಕೊಂಡರು. ಅಂಬೆ ಒಪ್ಪದೆ ತಾನು ಸೌಭದೇಶದ ದೊರೆ ಸಾಲ್ವನಿಗೆ ಒಲಿದು ಮಾತುಕೊಟ್ಟಿರುವೆನೆಂದು ತಿಳಿಸಿದಳು. ಓರ್ವ ಬ್ರಾಹ್ಮಣನನ್ನು ಜತೆ ಮಾಡಿ ಭೀಷ್ಮ ಅಂಬೆಯನ್ನು ಸಾಲ್ವನಲ್ಲಿಗೆ ಕಳುಹಿಸಿದ. ತುಂಬಿದ ಸಭೆಯಲ್ಲಿ ಅಪಮಾನಿತನಾಗಿದ್ದ ಸಾಲ್ವ ಅಂಬೆಯನ್ನು ತಿರಸ್ಕರಿಸಿದ. ತಿರುಗಿ ಭೀಷ್ಮನಲ್ಲಿಗೆ ಬಂದ ಅಂಬೆ ತನ್ನನ್ನು ಮದುವೆಯಾಗಲೇಬೇಕೆಂದು ಒತ್ತಾಯಿಸಿದಳು. ಭೀಷ್ಮ ತನ್ನ ಪ್ರತಿಜ್ಞೆಯ ವಿಷಯ ವಿವರಿಸಿ ತನಗೂ ಬೇಡ ; ತನ್ನ ತಮ್ಮನಿಗೂ ಬೇಡ ಎಂದು ನಿರಾಕರಿಸಿಬಿಟ್ಟ. ಸಿಟ್ಟಿಗೆದ್ದ ಅಂಬೆ ಭೀಷ್ಮನನ್ನು ಕೊಲ್ಲುವ ಪ್ರತಿಜ್ಞೆ ಮಾಡಿ ವಿಂಧ್ಯಾರಣ್ಯ ಸೇರಿದಳು.  ಅಲ್ಲಿ ತನ್ನನ್ನು ಮೋಹಿಸಿಬಂದ ಏಕಲವ್ಯನೆಂಬ ಕಿರಾತನ ಮನವೊಲಿಸಿ ಭೀಷ್ಮನನ್ನು ಕೊಲ್ಲಲು ಕರೆದು ತಂದಳು. ಆತನೂ ಸೋತುಹೋದ. ಅಂಬೆ ಯತಿಧರ‍್ಮಪಾಲಿಸುವುದಾಗಿ ಹೇಳಿ ಮತ್ತೆ ಅರಣ್ಯ ಸೇರಿದಳು. ಅಲ್ಲಿ ಶೈಖ್ಯಾವತ್ಯ ಮುನಿಯ ಆಶ್ರಮ ಸೇರಿದಳು. ಅಲ್ಲಿಗೆ ಬಂದ ಅಂಬೆಯ ಅಜ್ಜ ಹೋತೃ ವಾಹನ ಮೊಮ್ಮಗಳನ್ನು ಗುರುತಿಸಿದ. ಪರಶುರಾಮನ ಮೂಲಕ ಮದುವೆ ಮಾಡಿಸುವುದಾಗಿ ಹೇಳಿ ಪರಶುರಾಮನಲ್ಲಿಗೆ ಕರೆತಂದ. ಶಿಷ್ಯ ಭೀಷ್ಮನನ್ನು ಮದುವೆಗೆ ಒಪ್ಪಿಸಿಯೇ ಬಿಡುವುದಾಗಿ ಹೇಳಿ ಪರಶುರಾಮ ಹಸ್ತಿನಾವತಿಗೆ ಬಂದ. ಭೀಷ್ಮನ ಮನವೊಲಿಸಲು ಪರಶುರಾಮ ಪರಿಪರಿಯಾಗಿ ಪ್ರಯತ್ನಿಸಿದ. ಶಾಪಾನುಗ್ರಹದ ಬೆದರಿಕೆ ಹಾಕಿದ. ಭೀಷ್ಮ ಒಪ್ಪಲಿಲ್ಲ, ಕುರುಕ್ಷೇತ್ರದಲ್ಲಿ ಅವರಿಬ್ಬರ ನಡುವೆ ಘನಘೋರ ಯುದ್ಧವಾಯಿತು. ಭೀಷ್ಮ ಸೋಲುವವನಲ್ಲ ; ಯುದ್ಧ ನಿರರ್ಥಕ ಎಂದು ಅಶರೀರವಾಣಿಯಾದಾಗ ಪರಶುರಾಮ ನಿರ್ಗಮಿಸಿದ. ಮುಂದಿನ ಜನ್ಮದಲ್ಲಿ ಭೀಷ್ಮನನ್ನು ಕೊಲ್ಲುವುದಾಗಿ ಶಪಥಮಾಡಿ ಅಗ್ನಿಕುಂಡಕ್ಕೆ ಹಾರಿ ಪ್ರಾಣಕಳೆದುಕೊಂಡಳು. ತನ್ನಿಂದ ಸ್ತ್ರೀಹತ್ಯೆಯಾಗಿಬಿಟ್ಟಿತೆಂದು ಭೀಷ್ಮ ಚಿಂತಿತನಾದ. ನಾರದ ಬಂದು ಭೀಷ್ಮನಿಗೆ ಸಮಾಧಾನ ಹೇಳಿದ. ಭೀಷ್ಮ ಹಸ್ತಿನಾವತಿಗೆ ಬಂದು ತಾಯಿಗೆ ವಂದಿಸಿ ವೃತ್ತಾಂತವನ್ನೆಲ್ಲ ಹೇಳಿದ. ಪಟ್ಟಣವನ್ನೆಲ್ಲ ಶೃಂಗರಿಸಿ ವಿಜೃಂಭಣೆಯಿಂದ ಅಂಬಿಕೆ, ಅಂಬಾಲಿಕೆಯರ ಮದುವೆಯನ್ನು ವಿಚಿತ್ರವೀರ್ಯಕನೊಂದಿಗೆ ನೆರವೇರಿಸಿದ. ಎಂಬಲ್ಲಿಗೆ ಭೀಷ್ಮವಿಜಯ ಪ್ರಸಂಗಕೃತಿಯ ಕಥೆ ಮುಕ್ತಾಯವಾಗುತ್ತದೆ.

ಈ ಪ್ರಸಂಗ ಕೃತಿಯಲ್ಲಿಯೂ ಕೆಲವು ವಿಶೇಷಗಳಿವೆ. ಕಥಾ ಸಂದರ್ಭವನ್ನು ಕುಮಾರವ್ಯಾಸನಿಂದಲೇ ತೆಗೆದುಕೊಂಡಿದ್ದರೂ ರಂಗಕ್ಕೆ ಅನುಗುಣವಾಗಿ ದೃಶ್ಯಗಳನ್ನು ಹಿಗ್ಗಿಸುವಲ್ಲಿ ಕವಿ ತುಂಬ ಯಶಸ್ಸು ಪಡೆದಿದ್ದಾನೆ. ಈ ಪ್ರಸಂಗಕೃತಿಯ ರಂಗಕೃತಿಯಲ್ಲಿ ಭೀಷ್ಮ, ಅಂಬೆ, ಸಾಲ್ವ, ಪರಶುರಾಮ ಪಾತ್ರಗಳ ನಿರ್ವಹಣೆಯ ಕ್ರಮದಲ್ಲಿ ಸಾಕಷ್ಟು ನಟ ಪರಂಪರೆಗಳು ಸ್ಥಾಪಿತವಾಗಿವೆ. ಹಲವು ಪ್ರಧಾನ ವೇಷಧಾರಿಗಳೂ ಸ್ತ್ರೀ ವೇಷಧಾರಿಗಳೂ ಬೇರೆ-ಬೇರೆ ಕಾಲಘಟ್ಟಗಳಲ್ಲಿ ಅತ್ಯಂತ ಪ್ರಸಿದ್ಧಿ ಪಡೆದಿದ್ದಾರೆ. ಸ್ತ್ರೀ ಸ್ವಾತಂತ್ರ್ಯದ ಹಿರಿಮೆಯನ್ನೂ ದುರಂತವನ್ನೂ ಅಂಬೆಯ ಪಾತ್ರದಲ್ಲಿ ಚಿತ್ರಿಸಿ ಹೆಸರು ಮಾಡಿದವರಿದ್ದಾರೆ. ಅಂಬೆಯ ಬದುಕನ್ನೂ ಆಕಸ್ಮಿಕವಾಗಿ ಪ್ರವೇಶಿಸಿ ಆ ಬದುಕನ್ನು ಹಾಳುಗೆಡಹುವ ಖಳ ಸಾಲ್ವನನ್ನು ಚಿತ್ರಿಸುವ ಬದಲು ಭಗ್ನಪ್ರಣಯಿಯಾದ ಸಾಲ್ವನನ್ನು ಚಿತ್ರಿಸುವ ಪರಂಪರೆಯೂ ತೊಡಗಿದೆ. ಕರಾವಳಿಯ ಕೆಲವು ಕಡೆಗಳಲ್ಲಿ ಸಾಲ್ವನನ್ನು ಬಣ್ಣದ ವೇಷ (ರಾಕ್ಷಸ)ದಂತೆ ರೂಪಿಸುವ ಕ್ರಮವೂ ಇದೆ. ಪ್ರಸಂಗ ಕೃತಿ ರಂಗದಲ್ಲಿ ಮತ್ತು ತಾಳಮದ್ದಳೆ ಎರಡರಲ್ಲೂ ಖ್ಯಾತಿ ಪಡೆದಿದೆ. ಅಂಬೆಯನ್ನು ಬಯಸಿ ಭೀಷ್ಮನೊಂದಿಗೆ ಯುದ್ಧ ಮಾಡುವ ಕಿರಾತನ ಪಾತ್ರ ಪ್ರಸಂಗದಲ್ಲಿ ಹೊಸದಾಗಿ ಸೇರಿದೆ. ಇದರಿಂದ ಯಕ್ಷಗಾನ ಶಬರಪಾತ್ರ ಪರಂಪರೆಗೆ ಅವಕಾಶವಾಗಿದೆ. ಡಾ.ಕಾರಂತರ ನೃತ್ಯನಾಟಕ ಪ್ರಯೋಗಕ್ಕೂ ಇತ್ತೀಚಿನ ಸಮಯಮಿತಿಯ ಪ್ರದರ್ಶನಕ್ಕೂ ಈ ಪ್ರಸಂಗ ಒದಗಿದೆ. ಒಟ್ಟಿನಲ್ಲಿ ಯಕ್ಷಗಾನರಂಗಭೂಮಿಯ ಚರಿತ್ರೆಯ ಅತ್ಯಂತ ಪ್ರಮುಖ ಪ್ರಸಂಗಗಳಲ್ಲಿ ಒಂದಾಗಿದೆ.

* * *

ಯಕ್ಷಗಾನ ಕರ್ಣಪಟ್ಟಾಭಿಷೇಕ  

ಹಾಭಾರತದ ಪ್ರಸಂಗಗಳಲ್ಲಿ ಯಕ್ಷಗಾನ ಕುಂತಿ ಸ್ವಯಂವರವೂ ಒಂದು ಅದನ್ನು ಸೀತಾನದಿ ಗಣಪಯ್ಯ ಶೆಟ್ಟಿ ರಚಿಸಿದ್ದಾರೆ.

ಕಥಾಸಾರ : ಕುಂತಿದೇಶದ ಅರಸು ಕುಂತೀಭೋಜ ಒಂದು ದಿನ ಒಡ್ಡೋಲಗದಲ್ಲಿದ್ದ. ಆಗ ಅಲ್ಲಿಗೆ ದೂರ್ವಾಸಮುನಿ ಆಗಮಿಸಿದ. ಕೆಲಕಾಲ ಅರಮನೆಯಲ್ಲಿಯೇ ವಾಸವಾದ. ಅವನ ಸೇವೆಗೆ ಕುಂತಿಭೋಜ ತನ್ನ ಸಾಕುಮಗಳಾದ ಕುಂತಿಯನ್ನು ನಿಯಮಿಸಿದ. ಅವಳ ಶುಶ್ರೂಷೆಯನ್ನು ಮೆಚ್ಚಿಕೊಂಡ ದೂರ್ವಾಸ ಐದು ಮಂತ್ರಗಳನ್ನು ಉಪದೇಶಿಸಿದ. ಅವುಗಳ ಬಲದಿಂದ ಕುಂತಿ ತನಗೆ ಬೇಕಾದ ದೇವತೆಯನ್ನು ತನ್ನಲ್ಲಿಗೆ ಬರಮಾಡಿಕೊಳ್ಳಬಹುದಾಗಿತ್ತು.

ಒಮ್ಮೆ ವನವಿಹಾರಕ್ಕೆ ಹೋದ ಕುಂತಿ ದೂರ್ವಾಸಮುನಿಯ ಮಂತ್ರಶಕ್ತಿಯನ್ನು ಪರೀಕ್ಷಿಸಬಯಸದಳು.  ಸೂರ್ಯನನ್ನು ನೆನೆದು ಆಹ್ವಾನಿಸಿದಳು. ಆತ ಎದುರಿಗೆ ಬಂದಾಗ ಸಂಕೋಚಪಟ್ಟು ಏನನ್ನೂ ಬೇಡಲೇ ಇಲ್ಲ. ಸೂರ್ಯನೇ ಪುತ್ರನೊಬ್ಬನನ್ನು ದಯಪಾಲಿಸಿದ. ಕುಂತಿ ಗಾಬರಿಗೊಂಡಳು. ಮದುವೆಗಿಂತ ಮೊದಲೇ ಅವಳು ಮಗುವಿನ ತಾಯಿಯಾಗಿಬಿಟ್ಟಿದ್ದಳು. ಸಖಿಯ ಸಲಹೆಯಂತೆ ಮಗುವನ್ನು ಗಂಗೆಯಲ್ಲಿ ತೇಲಿಬಿಟ್ಟಳು. ಅಧಿರಥನೆಂಬ ಸೂತ ಮಕ್ಕಳಿಲ್ಲದ ಬಗ್ಗೆ ಚಿಂತಿತನಾಗಿ ಗಂಗೆಯನ್ನು ಪ್ರಾರ್ಥಿಸುತ್ತಿದ್ದ. ಆತ ಗಂಗೆಯಲ್ಲಿ ತೇಲಿಬರುತ್ತಿದ್ದ ಶಿಶುವನ್ನು ಕಂಡ, ತೆಗೆದುಕೊಂಡುಹೋಗಿ ಪತ್ನಿ ರಾಧೆಗೆ ನೀಡಿದ. ವಸುಸೇಣನೆಂದು ಹೆಸರಿಟ್ಟ ಪೋಷಿಸಿದರು. ಇತ್ತ ಕುಂತಿ ಪ್ರಾಪ್ತ ವಯಸ್ಕಳಾದಳು. ಕುಂತೀಭೋಜ ಸ್ವಯಂವರವನ್ನು ಏರ್ಪಡಿಸಿದ. ಬೇರೆ ಬೇರೆ ದೇಶದ ರಾಜರುಗಳಿಗೆ ಆಮಂತ್ರಣ ಕಳುಹಿದ.  ಎಲ್ಲ ದೇಶದ ರಾಜರುಗಳೂ ಕುಂತಿಯನ್ನು ವಿವಾಹವಾಗಲು ಬಂದರು. ಹಸ್ತಿನಾವತಿಯ ಪಾಂಡುವೂ ಬಂದ. ದಮಘೋಷ, ವೃದ್ಧಕ್ಷತ್ರ ಮುಂತಾದವರೊಡನೆ ಪಾಂಡು ಯುದ್ಧಮಾಡಿ ಗೆದ್ದು ಕುಂತಿಯನ್ನು ವಿವಾಹವಾದ. ಈ ಕಡೆ ಅಧಿರಥನ ಸಾಕುಮಗ ವಸು ಷೇಣ ಪರಶುರಾಮನಲ್ಲಿಗೆ ಹೋಗಿ ತಾನು ಕ್ಷತ್ರಿಯನಲ್ಲವೆಂದು ತಿಳಿಸಿ ಬಿಲ್ಲುವಿದ್ಯೆ ಕಲಿಯತೊಡಗಿದ. ಹಸ್ತಿನಾವತಿಯಲ್ಲಿ ಭೀಷ್ಮ ಪಾಂಡುವಿಗೆ ಮದ್ರದೇಶದ ರಾಜನ ಮಗಳಾದ ಮಾದ್ರಿಯನ್ನು ತಂದು ಮದುವೆ ಮಾಡಿದ. ಪಾಂಡು ಇಬ್ಬರು ರಾಣಿಯರೊಂದಿಗೆ ಸುಖವಾಗಿದ್ದ.

ವನಪಾಲಕರ, ಕೋರಿಕೆಯಂತೆ ಒಂದು ದಿನ ಮೃಗಬೇಟೆಗೆ ಹೋದ. ಅಲ್ಲಿ ಜೋಡಿ ಜಿಂಕೆ ರತಿಕ್ರೀಡೆಯಲ್ಲಿ ತೊಡಗಿದುದನ್ನು ನೋಡಿ ಅವನ್ನು ಕೊಲ್ಲಲು ಮುಂದಾಗಿ ಬಾಣ ಪ್ರಯೋಗಿಸಿದ. ಕಿಂದಮನೆಂಬ ಋಷಿ ಜಿಂಕೆಯ ರೂಪತಾಳಿ ಸತಿಯೊಡನೆ ಕ್ರೀಡಿಸುತ್ತಿದ್ದ. ಕಿಂದಮ ಸತ್ತುಹೋದ. ಋಷಿಪತ್ನಿ ಪಾಂಡುವಿಗೆ ಶಾಪಕೊಟ್ಟಳು. ಪಾಂಡುವೂ ಪತ್ನಿಯನ್ನು ಭೋಗಿಸಿದರೆ ಸಾಯುವುದಾಗಿ ತಿಳಿಸಿ ಗಂಡನೊಡನೆ ಚಿತೆ ಏರಿದಳು. ಪಾಂಡು ಹಸ್ತಿನಾವತಿಗೆ ಬಂದು ಧೃತರಾಷ್ಟ್ರನಿಗೆ ವಿಷಯವನ್ನೆಲ್ಲ ಹೇಳಿ ರಾಜ್ಯವನ್ನು ಅಣ್ಣನಿಗೆ ಒಪ್ಪಿಸಿ ತಾನು ತನ್ನಿಬ್ಬರು ರಾಣಿಯರೊಂದಿಗೆ ಹಿಮಗಿರಿಗೆ ಹೋಗಿ ತಪಸ್ಸನ್ನು ಕೈಕೊಂಡ. ಬ್ರಾಹ್ಮಣನೆಂದು ಹೇಳಿಕೊಂಡು ಪರಶುರಾಮನಲ್ಲಿ ಬಿಲ್ಲುವಿದ್ಯೆ ಕಲಿಯುತ್ತಿದ್ದ ವಸುಷೇಣ ಒಂದು ದಿನ ಸಮಿಧೆಗಳ ತರಲು ಕಾಡಿಗೆ ಹೋಗಿದ್ದ. ಯಾವುದೊಂದು ಕಾಡುಮೃಗವೆಂದು ಭಾವಿಸಿ ಗಾಲವ ಮುನಿಯ ಗೋವನ್ನು ಕೊಂದುಬಿಟ್ಟ. ಸಿಟ್ಟಾದ ಗಾಲವ ಯುದ್ಧದ ಸಂದರ್ಭದಲ್ಲಿ ಜೀವನ್ಮರಣದ ಹೋರಾಟ ನಡೆದಾಗ ನಿನ್ನ ರಥಚಕ್ರವನ್ನು ಭೂಮಿದೇವಿ ಕಚ್ಚಿ ಹಿಡಿದು ನಿನಗೆ ಮರಣ ಬರಲಿ ಎಂದು ಶಾಪಕೊಟ್ಟರು. ಈ ಕಡೆ ಹಿಮಗಿರಿಯಲ್ಲಿದ್ದ ಪಾಂಡುಚಕ್ರವರ್ತಿ ಮಕ್ಕಳಿಲ್ಲದೆ ಕೊರಗಿದ. ನಿಯೋಗದಿಂದ ಮಕ್ಕಳನ್ನು ಪಡೆಯಲು ಬಯಸಿದ. ಆಗ ಕುಂತಿ ಪಾಂಡುವಿಗೆ ದೂರ್ವಾಸನ ಮಂತ್ರದ ವಿಷಯ ಹೇಳಿದಳು. ಪಾಂಡುವಿನ ಸೂಚನೆಯಂತೆ ಯಮಧರ್ಮನನ್ನು ಬರಮಾಡಿಕೊಂಡು ಒಬ್ಬ ಮಗನನ್ನು ಪಡೆದಳು. ಕುಂತಿಯ ಮೊದಲ ಮಗ ವಸುಷೇಣ ಪರಶುರಾಮನ ಸನ್ನಿಧಿಯಲ್ಲಿ ನಿಷ್ಠೆಯಿಂದ ವಿದ್ಯಾಭ್ಯಾಸ ಮಾಡುತ್ತಿದ್ದ. ಪರಶುರಾಮನೂ ಅವನ ಮೇಲೆ  ತುಂಬ ವಿಶ್ವಾಸವಿಟ್ಟಿದ್ದ. ಒಂದು ದಿನ ಪರಶುರಾಮ ವಸುಷೇಣನ ತೊಡೆಯ ಮೇಲೆ ನಿದ್ದೆ ಹೋಗಿದ್ದ. ಅದೇ ಸರಿಯಾದ ಸಮಯವೆಂದರಿತ ದೇವೇಂದ್ರ ವಸುಷೇಣನ ಮೇಲಿನ ಮತ್ಸರದಿಂದ ದುಂಬಿಯ ರೂಪತಾಳಿ ಬಂದು ವಸುಷೇಣನ ತೊಡೆಯನ್ನು ಕಚ್ಚಿದ. ರಕ್ತ ಧಾರಾಕಾರ ಸುರಿದರೂ ಗುರುವಿಗೆ ಎಚ್ಚರವಾಗಿ ನಿದ್ರಾಭಂಗವಾಗುತ್ತದೆಂದು ವಸುಷೇಣ ನೋವನ್ನು ಸಹಿಸಿಕೊಂಡ. ಹರಿದ ರಕ್ತ ತಾಗಿ ಪರಶುರಾಮನಿಗೆ ಎಚ್ಚರವಾಯಿತು. ನೋಡಿದರೆ ರಕ್ತ !  ವಸುವೇಷಣನ ಈ ಮನೋಧರ್ಮ ಕ್ಷತ್ರಿಯನಾಗಿರಬೇಕೆಂದು ಪರಶುರಾಮ ಶಂಕಿಸಿದ. ಪರಶುರಾಮನಿಗೆ ವಂಚನೆಯ ಅರಿವಾಯಿತು. ಆಪತ್ತಿನ ಕಾಲದಲ್ಲಿ ಕಲಿತ ವಿದ್ಯೆ ಮರೆತುಹೋಗಲಿ ಎಂದು ಶಾಪಕೊಟ್ಟು ಬಿಟ್ಟ. ವಸುಸೇಣ ದಯನೀಯವಾಗಿ ಬೇಡಿಕೊಂಡ. ಅಗ್ನಿಗೆ ಹಾರಿ ಆತ್ಮಾಹುತಿ ಮಾಡಿಕೊಳ್ಳುವೆ ಎಂದ.  ಪರಶುರಾಮನ ಹೃದಯ ಕರಗಿತು. ಯುದ್ಧದಲ್ಲಿ ಮಾದ್ರದೇಶದ ಅಧಿಪತಿ ಶಲ್ಯ ನಿನ್ನ ಸಾರಥಿಯಾದರೆ ಶಾಪ ಫಲಿಸದೆ ಅಸ್ತ್ರಸಿದ್ಧಿಯಾಗಿ ಸೋಲುಬರುವುದಿಲ್ಲ  ಎಂದು ಅನುಗ್ರಹಿಸಿದ. ನೋವಿನಿಂದಲೇ ಗುರುವನ್ನು ಬೀಳ್ಕೊಟ್ಟು ಆಶ್ರಮದಿಂದ ಹೊರಟ. ಸಾಕು ತಾಯಿ ತಂದೆಯರು ಇದ್ದಲ್ಲಿಗೆ ಬಾರದೆ ಗಂಗೆಯ ತಡಿಯಲ್ಲಿ ಆಶ್ರಮ ರಚಿಸಿಕೊಂಡು ಶಿವನನ್ನು ಕುರಿತು ತಪಸ್ಸು ತೊಡಗಿದ.

ಹಿಮಗಿರಿಯಲ್ಲಿ ಪಾಂಡುವಿನೊಡನಿದ್ದ ಮಾದ್ರಿ ಒಂದು ದಿನ ಸಂಭ್ರಮದಿಂದ ತನ್ನನ್ನು ಶೃಂಗರಿಸಿಕೊಂಡು ವನದಲ್ಲಿ  ವಿಹರಿಸುತ್ತಿದ್ದಳು. ಅವಳನ್ನು ಕಂಡು ಪಾಂಡು ಮೋಹಗೊಂಡ. ಸತಿ ಅಂಗಲಾಚಿದರೂ ಕೇಳದೆ ಅವಳನ್ನು ಸುಖಿಸುತ್ತಿರುವಾಗ ಕಿಂದಮನ ಶಾಪ ನಿಜವಾಗಿ ಮರಣಪಟ್ಟ. ಮಾದ್ರಿಯ ಆಕ್ರಂದನ ಕೇಳಿ ಋಷಿ ಮುನಿಗಳು ಓಡಿಬಂದರು. ಪಾಂಡುವಿನ ಶವಸಂಸ್ಕಾರದ ವ್ಯವಸ್ಥೆಯಾಯಿತು. ಮಾದ್ರಿಯೂ ಪತಿಯೊಡನೆ ಚಿತೆ ಏರಿದಳು. ಕುಂತಿ ತನ್ನ ಮಕ್ಕಳೊಡನೆ ಹಸ್ತಿನಾವತಿ ಸೇರಿದಳು.

ಬಡತನದ ಬೇಗೆಯಲ್ಲಿದ್ದ ದ್ರೋಣ ಬಾಲ್ಯಸ್ನೇಹಿತ ದ್ರುಪದನನ್ನು ನೋಡಲು ಬಂದ. ಆದರೆ ಗಣಿಕೆಯರ ನೃತ್ಯವಿಲಾಸದಲ್ಲಿ ಒಡ್ಡೋಲಗದಲ್ಲಿ ಮಗ್ನನಾಗಿದ್ದ ದ್ರುಪದ ದ್ರೋಣನನ್ನು ಗುರುತಿಸದೆ ತಿರುಕನೆಂದು ಹಿಯಾಳಿಸಿದ. ಸಿಟ್ಟಿಗೆದ್ದ ದ್ರೋಣ ತನ್ನ ಶಿಷ್ಯರಿಂದ ದ್ರುಪದನನ್ನು ಸೆರೆಹಿಡಿದು ತರಿಸುವುದಾಗಿ ಪ್ರತಿಜ್ಞೆ ಮಾಡಿದ. ಅಲ್ಲಿಂದ ದೇಶ-ದೇಶಗಳಲ್ಲಿ ತೊಳಲುತ್ತ ಮಗನೊಡನೆ ಹಸ್ತಿನಾವತಿಗೆ ಬಂದ. ತನ್ನ ಚಾಪತಂತ್ರವನ್ನು ತೋರಿಸಲು ಬಾವಿಗೆ ಬಿದ್ದ ಮುದ್ರಿಕೆಯನ್ನು ತೆಗೆದು ಸೋಜಿಗವನ್ನು ಉಂಟು ಮಾಡಿದ. ಭೀಷ್ಮನ ಸಲಹೆಯಂತೆ ಹಸ್ತಿನಾವತಿಯಲ್ಲಿ ಗುರುಕುಲ ಸ್ಥಾಪಿಸಿ ಕೌರವರು-ಪಾಂಡವರೂ ಸೇರಿದಂತೆ ಹಲವರಿಗೆ ಗುರುವಾದ. ಅವನ ಕೀರ್ತಿ ಎಲ್ಲೆಡೆಗೆ ಹಬ್ಬಿತು.

ಋಷ್ಯಶೃಂಗನೆಂಬ ಮುನಿಯ ಸೂಚನೆಯಂತೆ ವಸುಷೇಣ ಜರಾಮನ್ಯು ಎಂಬ ರಾಕ್ಷಸನನ್ನು ಕೊಂದ. ಸಂತೋಷಗೊಂಡ ಋಷ್ಯಶೃಂಗ ವಸುಷೇಣನಿಗೆ ವಿಪ್ರರ ಆಚರಣೆ, ತ್ಯಾಗಗುಣ, ರಾಜಸ್ನೇಹ, ದೈವಾನುಗ್ರಹ ಲಭಿಸಲಿ ಎಂದು ಆಶೀರ್ವದಿಸಿದ. ಮಾರುವೇಷದಲ್ಲಿ ಬಂದು ಬೇಡಿದ ಇಂದ್ರನಿಗೆ ತನ್ನ ನಿವಾತ ಕವಚವನ್ನು ನೀಡಿದ. ಮೆಚ್ಚಿದ ಇಂದ್ರ ತನ್ನ ನಿಜರೂಪ ತೋರಿ ವಿಶೇಷವಾದ ಶಕ್ತಿಯನ್ನೂ ಕರ್ಣನೆನ್ನುವ ಹೆಸರನ್ನೂ ನೀಡಿದ. ಅಲ್ಲಿಂದ ಕರ್ಣ ಸಿಂಧು ದೇಶಕ್ಕೆ ಬಂದ. ಸಿಂಧುದೇಶದ  ಅರಸ ಕರ್ಣನಿಗೆ ಹಸ್ತಿನಾವತಿಗೆ ಹೋಗಿ ವಿದ್ಯೆ ಕಲಿಯಲು ಹೇಳಿದ. ಅರಣ್ಯದಲ್ಲಿ ಬರುತ್ತಿರುವಾಗ ಸಿಂಹದ ಘರ್ಜನೆ ಕೇಳಿದ. ಹೋಗಿ ನೋಡುವಷ್ಟರಲ್ಲಿ ಬೇಟೆಗೆ ಬಂದ ದುಃಶಾಸನನನ್ನು ಸಿಂಹ ಕೊಲ್ಲುವುದರಲ್ಲಿತ್ತು. ಕರ್ಣ ಸಿಂಹವನ್ನು ಕೊಂದು ದುಶ್ಯಾಸನನನ್ನು ರಕ್ಷಿಸಿದ. ದುಶ್ಯಾಸನ ಕರ್ಣನ ಕಾಲಿಗೆರಗಿದ. ಪರಸ್ಪರ ಪರಿಚಯವಾಯಿತು. ತಾನೊಬ್ಬ ನತದೃಷ್ಟನೆಂದು ಕರ್ಣ ಪರಿಚಯಿಸಿಕೊಂಡ. ದುಶ್ಯಾಸನ ಕರ್ಣನನ್ನು ಆದರದಿಂದ ಅರಮನೆಗೆ ಕರೆದೊಯ್ದ. ಅಣ್ಣ ದುರ್ಯೋಧನನಿಗೆ ಪರಿಚಯಿಸಿ ನಡೆದುದನ್ನೆಲ್ಲ ಹೇಳಿದ. ಯೋಚಿಸಿದ ದುರ್ಯೋಧನ ಕರ್ಣನ ಮೂಲಕ ಅರ್ಜುನನನ್ನು ಸೋಲಿಸಲು ಸಾಧ್ಯವೆಂದು ಆಶ್ರಯ ನೀಡಿದ. ಕುಲ, ಹುಟ್ಟನ್ನೆಲ್ಲ ಪರಿಗಣಿಸುವದಿಲ್ಲವೆಂದೂ ಹೇಳಿದ. ಅಷ್ಟರಲ್ಲಿಯೇ ದ್ರೋಣ ಭೀಷ್ಮನನ್ನು ಸಮಾಲೋಚಿಸಿ ಶಿಷ್ಯರಿಗೆ ಕಲಿಸಿದ ವಿದ್ಯೆಯನ್ನೆಲ್ಲ ಪರೀಕ್ಷಿಸಲು ವ್ಯವಸ್ಥೆ ಮಾಡಿದ. ವಿಶಾಲವಾದ ಬಯಲಿನಲ್ಲಿ ಎಲ್ಲ ವ್ಯವಸ್ಥೆಗಳೂ ಆದವು. ಹಿರಿಯರೆಲ್ಲ ಬಂದರು. ಪಾಂಡವರು, ಕೌರವರು ಅನುಕ್ರಮವಾಗಿ ಬಂದು ತಮ್ಮ-ತಮ್ಮ ಕೌಶಲವನ್ನು ಪ್ರದರ್ಶಿಸಿದರು. ಭೀಮ ತನ್ನ ಪರಿಣತಿಯನ್ನು ಪ್ರದರ್ಶಿಸುವಾಗ ದುರ್ಯೋಧನ ಮತ್ತು ಭೀಮನ ಪರಸ್ಪರ ಮೂದಲಿಸಿಕೊಂಡು ಕಾದಾಡಲು ಮುಂದಾದರು. ಭೀಷ್ಮ ದ್ರೋಣ ಮುಂತಾದವರು ಅವರನ್ನು ತಡೆದರು. ನಂತರ ಅರ್ಜುನ ಬಂದು ಶಬ್ದವೇಧಿ ಮುಂತಾದ ಧನುರ್ವಿದ್ಯೆಯನ್ನು ತೋರಿದ. ಸುರರು ಹೂಮಳೆಗರೆದರು. ನೋಡಿದ ಕರ್ಣ ಕನಲಿ ತಾನೂ ಅಂಥ ವಿದ್ಯೆಗಳನ್ನೆಲ್ಲ ತೋರಿಸುವೆನೆಂದು ಮುಂದೆ ಬಂದ. ಪಾರ್ಥನನ್ನೂ ಪಂಥಕ್ಕೆ ಕರೆದ. ಭೀಮ ಎದ್ದುನಿಂತು ಕರ್ಣನು ತನ್ನ ಕುಲಗೋತ್ರಗಳನ್ನು ಘೋಷಿಸಿಕೊಳ್ಳಬೇಕೆಂದನು. ಅದಿರಥ ಸೂತ ಚಂದ್ರವಂಶದ ಅರಸು ಕುವರರ ಜತೆ ಸ್ಪರ್ಧಿಸುವುದು ಸಾಧ್ಯವಿಲ್ಲವೆಂದ. ಕರ್ಣನಿಗೆ ಅಪಮಾನವಾಯಿತು. ಕುಲವೇ ತನಗೆ ಕುಠಾರವಾಗಿಬಿಟ್ಟಿತೆಂದುಕೊಂಡ. ಆತ್ಮಹತ್ಯೆಯೇ ಪರಿಹಾರವೆಂದುಕೊಳ್ಳುತ್ತ ಮಿತ್ರ ಸುಯೋಧನನ ಬಳಿಗೆ ಸಾರಿದನು. ಕೌರವ ಕರ್ಣನ ಮಾನ ಉಳಿಸಲು ಅಂಗದೇಶದ ರಾಜಪಟ್ಟಕಟ್ಟಲು ಮುಂದಾದ.  ಸಿಂಹಾಸನವನ್ನು ತರಿಸಿ ಅಲ್ಲಿಯೇ ಪಟ್ಟಾಭಿಷೇಕ ಮಾಡಿಸಿದ. ಮಾನ ಉಳಿಸಿದ ಕೌರವನ ಕಾಯಕಕ್ಕೆ ತನ್ನ ತನು ಮೀಸಲು ; ಪಾಂಡವರು ಜನ್ಮ ಶತ್ರುಗಳೆಂದು ಕರ್ಣ ಸಾರಿದ. ಮುಂದಿನ ಯುದ್ಧಕ್ಕೆ ಖಚಿತ ನಾಂದಿಯಾಯಿತು ಎಂಬಲ್ಲಿಗೆ ಕಥೆಗೆ ಮಂಗಲ.

ಪ್ರಸಂಗಕಾರರ ಪರಿಚಯ : ಕರ್ಣಪಟ್ಟಾಭಿಷೇಕ ಎಂಬೀ ಯಕ್ಷಗಾನ ಕಥಾನಕದ ಪ್ರಸಂಗ ರಚಿಸಿದವ ಸೀತಾನದಿ ಗಣಪಯ್ಯ ಶೆಟ್ಟಿ. ಮೊದಲು ಕುಂತೀ ಸ್ವಯಂವರದ ವರೆಗಿನ ಕಥೆ ಮಾತ್ರ ಉಳ್ಳ ಇದನ್ನು ನಂತರ ಕರ್ಣನ ಪಟ್ಟಾಭಿಷೇಖದ ವರೆಗಿನ ಕಥೆ ಸೇರಿಸಿ ಪೂರ್ಣ ರಾತ್ರಿಯ ಪ್ರದರ್ಶನಕ್ಕೆ ಅನುಕೂಲಿಸುವಂತೆ ವಿಸ್ತರಿಸಿದರು. ದುಶ್ಯಾಸನ ಬೇಟೆಗೆ ಹೋಗುತ್ತಾನೆಂದೂ ಸಿಂಹ ಅವನನ್ನು ಕೊಲ್ಲುತ್ತಿರುವಾಗ ಕರ್ಣ ಬಂದು ರಕ್ಷಿಸಿದನೆಂದು ಹೊಸದಾಗಿ ಕಲ್ಪಿಸಿಕೊಳ್ಳಲಾಗಿದೆ. ಇದರಿಂದ ಸಿಂಹನಪಾತ್ರದ ಪ್ರವೇಶಕ್ಕೆ ಅವಕಾಶವಾಗಿದೆ. ಸೀತಾನದಿ ಗಣಪಯ್ಯ ಶೆಟ್ಟಿ ಯಕ್ಷಗಾನದ ಪ್ರಮುಖ ಪ್ರಸಂಗಕರ್ತದಲ್ಲಿ ಒಬ್ಬರು. ಹಿರಿಯಡಕ ಶ್ರೀ ವೀರಭದ್ರನಾ ಕೃಪೆಯೊಳಿಹ ಹಿರಿಯಶಾಲೆಯೊಳಿರುವ ವರ ಸಹಾಯಕನು ಬರೆದೆ ಸೀತಾನದಿಯ ಗಣಪಯ್ಯ ಶೆಟ್ಟಿ ಎಂದು ಕರ್ಣಪಟ್ಟಾಭಿಷೇಕದ ಕೊನೆಯಲ್ಲಿ ಹೇಳಿಕೊಂಡಿದ್ದಾರೆ. ಸೀತಾನದಿ ಕಾರ್ಕಳ ತಾಲೂಕಿನಲ್ಲಿದೆ. ಅಧ್ಯಾಪಕ ವೃತ್ತಿಯಲ್ಲಿದ್ದವರು. ಐವತ್ತೈದರಷ್ಟು ಯಕ್ಷಗಾನ ಪ್ರಸಂಗಕೃತಿಗನ್ನೂ ಅರವತ್ತಕ್ಕಿಂತ ಹೆಚ್ಚು ಇತರ ಕೃತಿಗಳನ್ನೂ ರಚಿಸಿದ್ದಾರೆ. ಹೆಚ್ಚಿನವು ಪ್ರಕಟಗೊಂಡಿವೆ. ಸಹದೇವ ದಿಗ್ವಿಜಯ, ಶಕುಂತಲಾ ಪರಿಣಯ, ಜಗಜಟ್ಟಿ ಜರಾಸಂಧ ಹೆಸರಿಸಬಹುದಾದ ಇವರ ಪ್ರಸಂಗಕೃತಿಗಳು. ಇತ್ತೀಚೆಗೆ ಇವರ ಹೆಸರಿನಲ್ಲಿ ಪ್ರಶಸ್ತಿಯೊಂದು ಸ್ಥಾಪಿತವಾಗಿದೆ.

* * *

. ಯಕ್ಷಗಾನ ಆದಿಪರ್ವ

ಕ್ಷಗಾನದ ಎಲ್ಲ ಪ್ರಸಂಗ ಕೃತಿಗಳಿಗಿಂತ ಪ್ರಾಚೀನವಾದುದೆಂದು ಸಮರ್ಥಿಸಬಹುದಾದ ಯಕ್ಷಗಾನ ಆದಿಪರ್ವ ಪ್ರಸಂಗಕೃತಿ ಹಲವು ವೈಶಿಷ್ಟ್ಯಗಳಿಂದ ಕೂಡಿದೆ. ಸಿದ್ಧಾಪುರದ ಪ್ರೊ. ಎಂ.ಎ. ಹೆಗಡೆಯವರಿಂದ ಸಂಪಾದನೆಗೊಂಡು ಉತ್ತರ ಕನ್ನಡ ಜಿಲ್ಲೆಯ ಕುಮಟೆ ತಾಲೂಕಿನ ಹೆಗಡೆಯ ಕನ್ನಡ ಕರಾವಳಿ ಗ್ರಂಥ ಪ್ರಕಾಶನದಿಂದ ೧೯೮೩ರಲ್ಲಿ ಪ್ರಕಟಗೊಂಡ ಈ ಕೃತಿ ಅಲ್ಲಿಯವರೆಗೂ ತಾಳೆಯ ಗರಿಯಲ್ಲಿತ್ತು. ಡಾ.ಕಾರಂತರ ಪಟ್ಟಿಯಲ್ಲಿಯೂ ಇದು  ಸೇರಿರಲಿಲ್ಲ. ಉತ್ತರ ಕನ್ನಡದ ಸಿದ್ಧಾಪುರ ತಾಲೂಕಿನ ಹೇರೂರು ಗ್ರಾಮದ ಕಂಚೀಮನೆ ಮಜರೆಯ ಗಣೇಶ ಹೆಗಡೆಯವರ ಮನೆಯಲಿದ್ದ ಒಂದೇ ಒಂದು ಪ್ರತಿಯನ್ನು ಆಧರಿಸಿ ಇದನ್ನು ಸಂಪಾದಿಸಲಾಗಿದೆ. ಪ್ರಸಂಗಕೃತಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಅನೇಕ ವಿಸ್ಮಯಕಾರಕ ಸಂಗತಿಗಳು ತಿಳಿದುಬರುತ್ತದೆಯೆಂಬ ಸಂಪಾದಕರ ಮಾತು ನೂರಕ್ಕೆ ನೂರು ಸತ್ಯ. ಕನ್ನಡದ ಮಹಾಕಾವ್ಯಗಳ ರಚನಾಕ್ರಮಗಳಿಗಿಂತ ಭಿನ್ನವಾದ ಯಕ್ಷಗಾನ ಪ್ರಸಂಗಕೃತಿಗಳ ರಚನಾಕ್ರಮದ ಪ್ರಾಥಮಿಕ ಸ್ಥಿತಿಯನ್ನು ಈ ಕೃತಿ ಸೂಚಿಸುತ್ತದೆ. ಅಲ್ಲದೆ ಯಕ್ಷಗಾನ ಪ್ರಸಂಗಕೃತಿಯ ಇತಿಹಾಸದ ಮೇಲೆಯೇ ಹೊಸಬೆಳಕು ಬೀರುತ್ತದೆ.

ಕಥಾಸಾರ : ಚಂದ್ರವಂಶದ ಪಾಂಡು ಒಂದು ದಿನ ಒಡ್ಡೋಲಗದಲ್ಲಿದ್ದ. ವನಪಾಲಕರು ಬಂದು ಕಾಡು ಮೃಗಗಳ ಹಾವಳಿಯನ್ನು ನಿವೇದಿಸಿಕೊಂಡರು. ಪಾಂಡುರಾಜ ಬೇಟೆಗಾಗಿ ಕಾಡಿಗೆಹೊರಟ. ಮೃಗಬೇಟೆಯಾಡುವಾಗ ಜಿಂಕೆಗಳೆರಡು ರತಿಕ್ರೀಡೆಯಲ್ಲಿ ತೊಡಗಿದುದನ್ನು ಕಂಡು ಗಂಡುಜಿಂಕೆಯನ್ನು ಕೊಂದುಬಿಟ್ಟ. ಆದರೆ ಅವು ಜಿಂಕೆಗಳಾಗಿರಲಿಲ್ಲ. ಕಿಂದಮನೆಂಬ ಮುನಿ ಜಿಂಕೆ ರೂಪಧರಿಸಿ ತನ್ನ ಪ್ರಿಯೆಯೊಂದಿಗೆ ಕ್ರೀಡಿಸುತ್ತಿದ್ದ. ತಕ್ಷಣ ಕಿಂದಮ ನಿಜರೂಪ ಧರಿಸಿ ಪಾಂಡುರಾಜನಿಗೆ ನೀನೂ ನಿನ್ನ  ಸತಿಯನ್ನು ಕೂಡಿದರೆ ಸಾಯುವೆ ಎಂದು ಶಾಪಕೊಟ್ಟು ಸತ್ತುಹೋದ. ಪಾಂಡು ಖಿನ್ನನಾದ. ರಾಷ್ಟ್ರಾಧಿಕಾರವನ್ನು ಧೃತರಾಷ್ಟ್ರನಿಗೆ ಒಪ್ಪಿಸಿ ತಾನು ಕುಂತಿ ಮತ್ತು ಮಾದ್ರಿಯರೊಂದಿಗೆ ಬದರಿಕಾಶ್ರಮದಲ್ಲಿ ತಪಸ್ಸು ಮಾಡಿಕೊಂಡಿದ್ದ. ಹಸ್ತಿನಾವತಿಯಲ್ಲಿ ಧೃತರಾಷ್ಟ್ರ ಗಾಂಧಾರಿಯೊಂದಿಗೆ ವಿವಾಹಮಾಡಿಕೊಂಡು ವೇದವ್ಯಾಸರ ಅನುಗ್ರಹದಿಂದ ಗಾಂಧಾರಿ ಗರ್ಭಧರಿಸಿ ಸಂತೋಷದಿಂದಿದ್ದರು.

ಬದರಿಕಾಶ್ರಮದಲ್ಲಿದ್ದ ಕುಂತಿಗೂ ಮಕ್ಕಳ ಬಯಕೆಯಾಗಿಬಿಟ್ಟಿತು. ಆದರೆ ಶಾಪಗ್ರಸ್ತ ಪಾಂಡುವಿನಿಂದ ಮಕ್ಕಳನ್ನು ಪಡೆಯುವಂತಿರಲಿಲ್ಲ. ಕೊನೆಗೆ ಕುಂತಿಯೇ ದೂರ್ವಾಸನ ವರದ ವಿಷಯವನ್ನೂ ಪಾಂಡುವಿಗೆ ವಿವರಿಸಿದಳು. ಸೂರ್ಯನಿಂದ ಮಗನನ್ನು ಪಡೆದು ಗಂಗೆಗೆ ಹಾಕಿದುದನ್ನು ಹೇಳಿದಳು. ಉಳಿದ ನಾಲ್ಕು ವರಗಳಿಂದ ಮಕ್ಕಳನ್ನು ಪಡೆಯುವುದಾಗಿ ಹೇಳಿದಳು. ಪಾಂಡುವೂ ಒಪ್ಪಿದ. ಯಮಧರ್ಮರಾಜನನ್ನು ಬರಮಾಡಿಕೊಂಡು ಧರ್ಮರಾಜನನ್ನು ಪಡೆದಳು. ಈ ವಾರ್ತೆ ಹಸ್ತಿನಾವತಿಯಲ್ಲಿದ್ದ ಗಾಂಧಾರಿಗೆ ತಲುಪಿತು. ಸಿಟ್ಟಿನಿಂದ ಬಸುರನ್ನು ಹಿಚುಕಿಕೊಂಡಳು. ಮಾಂಸಪಿಂಡಗಳೆಲ್ಲ ನೆಲಕ್ಕೆ ಬಿದ್ದವು.  ಅಷ್ಟರಲ್ಲಿ ಅಲ್ಲಿಗೆ ಬಂದ ವೇದವ್ಯಾಸ ಅವನ್ನೆಲ್ಲ ಸಂರಕ್ಷಿಸಿದ. ನೂರಒಂದನೆಯ ದಿನಕ್ಕೆ ಕೌರವರ ಜನನವಾಯಿತು.

ಈ ಕಡೆ ಕುಂತಿ ವಾಯುದೇವನಿಂದ ಭೀಮನನ್ನೂ ಇಂದ್ರನಿಂದ ಅರ್ಜುನನ್ನೂ ಪಡೆದಳು. ಮಾದ್ರಿ ಅಶ್ವಿನೀ ದೇವತೆಯರನ್ನು ನೆನೆದು ನಕುಲಸಹದೇವರನ್ನು ಪಡೆದಳು. ಹೀಗೆ ಪಾಂಡವರ ಜನನವಾಯಿತು. ಹೀಗಿರುತ್ತಿರಲಾಗ ಒಂದು ದಿನ ಪಾಂಡು ಮಾದ್ರಿಯೊಂದಿಗೆ ಮೋಹಗೊಂಡುಬಿಟ್ಟ. ಅವಳನ್ನು ಭೋಗಿಸಲು ಬಯಸಿದ. ಆ ಸಮಯದಲ್ಲಿ ಕುಂತಿ ಅಲ್ಲಿರಲಿಲ್ಲ. ಮಾದ್ರಿ ಪರಿಪರಿಯಿಂದ ಬೇಡಿಕೊಂಡರೂ ಪಾಂಡುಲೆಕ್ಕಿಸಲಿಲ್ಲ. ಋಷಿಯ ಶಾಪವನ್ನು ನೆನಪಿಸಿದರೂ ಹಿಂಜರಿಯಲಿಲ್ಲ. ಮಾದ್ರಿಯನ್ನು ಕೂಡಿಬಿಟ್ಟ. ಮುನಿಶಾಪ ನಿಜವಾಗಿಬಿಟ್ಟಿತು. ಪಾಂಡು ಮರಣಹೊಂದಿದ. ಪಾಂಡವರು ಅರಣ್ಯದಲ್ಲಿದ್ದ ಋಷಿಮುನಿಗಳ ನೆರವಿನಿಂದ ಪಾಂಡುವಿನ ಉತ್ತರಕ್ರಿಯೆಗಳನ್ನು ಮಾಡಿದರು.

ಕುಂತಿ ಮತ್ತು ಮಾದ್ರಿಯರು ಮಕ್ಕಳೊಂದಿಗೆ ಹಸ್ತಿನಾವತಿಗೆ ಬಂದರು. ಧೃತರಾಷ್ಟ್ರ ಎಲ್ಲರಿಗೂ ಸಮಾಧಾನ ಹೇಳಿದ. ಮಕ್ಕಳೆಲ್ಲರಿಗೂ ಕೃಪಾಚಾರ‍್ಯರಲ್ಲಿ ವಿದ್ಯಾಭ್ಯಾಸದ ವ್ಯವಸ್ಥೆ ಮಾಡಿದ. ಆದರೆ ಭೀಮ ಕೌರವರಿಗೆ ತೊಂದರೆಕೊಡತೊಡಗಿದ. ಧೃತರಾಷ್ಟ್ರನ ಬುದ್ಧಿಮಾತನ್ನೂ ಕಿವಿಯಮೇಲೆ ಹಾಕಿಕೊಳ್ಳಲಿಲ್ಲ. ಕೌರವರೂ ಭೀಮನಿಗೆ ಕಜ್ಜಾಯದಲ್ಲಿ ವಿಷಹಾಕಿ ತಿನ್ನಿಸಿದರು. ಭೀಮನಿಗೆ ಏನೂ ಆಗಲಿಲ್ಲ. ಕೌರವರು ಮತ್ತು ಪಾಂಡವರು ಜತೆಯಾಗಿ ಇರುವುದೇ ಕಷ್ಟವಾಗಿಬಿಟ್ಟಿತು.

ಅದೇ ಕಾಲದಲ್ಲಿ ಭಾರಧ್ವಾಜನ ಮಗ ದ್ರೋಣಾಚಾರ‍್ಯ ತನ್ನ ಮಗ ಅಶ್ವತ್ಥಾಮನೊಂದಿಗೆ ದ್ರುಪದ ರಾಜನನ್ನು ಸಂದರ್ಶಿಸಲು ಪಾಂಚಾಲನಗರಕ್ಕೆ ಹೋದ. ಆದರೆ ದ್ರುಪದರಾಜ ದ್ರೋಣನನ್ನು ಗೌರವಿಸಲಿಲ್ಲ. ಅವನನ್ನು ಅವಮಾನಿಸಿ ಆಸ್ಥಾನದಿಂದ ಹೊರದೂಡಿಸಿದ. ಸಿಟ್ಟಿಗೆದ್ದ ದ್ರೋಣ ತನ್ನಿಂದ ವಿದ್ಯೆ ಕಲಿತ ಶಿಷ್ಯನೊಬ್ಬನಿಂದ ದ್ರುಪದರಾಜನನ್ನು ಬಂಧಿಸುವ ಪಣತೊಟ್ಟ. ಅಲ್ಲಿಂದ ತನ್ನ ಮಗನೊಂದಿಗೆ ಹಸ್ತಿನಾವತಿಗೆ ಬಂದ. ಪುರದ ಹೊರಭಾಗದಲ್ಲಿ ಕೌರವರು ಮತ್ತು ಪಾಂಡವರು ಆಟವಾಡುತ್ತಿದ್ದರು. ಅವರ ಉಂಗುರ ಬಾವಿಯಲ್ಲಿ ಬಿದ್ದು ಹೋಗಿತ್ತು. ಅದನ್ನು ಹೆಕ್ಕಿ ತೆಗೆಯುವ ಉಪಾಯವನ್ನು ಕಾಣದೆ ಕಂಗಾಲಾಗಿದ್ದರು. ಆಗ ದ್ರೋಣಾಚಾರ‍್ಯ ಹುಲ್ಲನ್ನು ಮಂತ್ರಿಸಿಬಿಟ್ಟು ಉಂಗುರವನ್ನು ಹೆಕ್ಕಿಕೊಟ್ಟ. ಹುಡುಗರೆಲ್ಲ ವಿಸ್ಮಿರತಾದರು. ಭೀಷ್ಮ ದ್ರೋಣರನ್ನು ಬರಮಾಡಿಕೊಂಡು ಮಕ್ಕಳ ಅಸ್ತ್ರಾಭ್ಯಾಸದ ಹೊಣೆ ವಹಿಸಿದ. ಸೂತನಾಗಿ ಬೆಳೆಯುತ್ತಿದ್ದ ಕರ್ಣನೂ ಅಲ್ಲಿ ವಿದ್ಯಾಭ್ಯಾಸ ಮಾಡತೊಡಗಿದ. ವಿದ್ಯಾಭ್ಯಾಸದಲ್ಲಿಯೂ ಒಂದು ಬಗೆಯ ಪೈಪೋಟಿ ತೊಡಗಿತು. ಶಿಷ್ಯರೆಲ್ಲ ವಿದ್ಯಾಪರಿಣತರಾದರೆಂದು ತಿಳಿಯುತ್ತಿದ್ದ ಹಾಗೆ ದ್ರುಪದನ ಮೇಲೆ ಸೇಡು ತೀರಿಸಿಕೊಳ್ಳುವ ಪ್ರಸ್ತಾಪವೆತ್ತಿದ. ಕೌರವರು ದ್ರುಪದನೊಡನೆ ಯುದ್ಧಕ್ಕೆ ಹೋಗಿ ಸೋತು ಬಂದರು. ನಂತರ ಅರ್ಜುನನೊಬ್ಬನೇ ದ್ರುಪದನನ್ನು ತುಡುಕಿ ಬಂಧಿಸಿತಂದನು. ಪಾದದಲ್ಲಿ ಬಿದ್ದ ದ್ರುಪದನನ್ನು ನೋಡಿ ದ್ರೋಣ ಹೀನಾಯ ನಿಂದಿಸಿದ. ಬಂಧಮುಕ್ತನಾದ ಧ್ರುಪದ ಯಜ್ಞಮಾಡಿ ಮಕ್ಕಳನ್ನು ಪಡೆದ.

ಹಸ್ತಿನಾವತಿಯಲ್ಲಿದ್ದ ಕೌರವ ಮುಖಭಂಗವಾಗಿ ಚಿಂತಿತನಾದ. ಕುರುಡು ತಂದೆಯೊಡನೆ ಅಳಲು ತೋಡಿಕೊಂಡ. ಧೃತರಾಷ್ಟ್ರ ಪುರೋಚನನಿಂದ ವಾರಣಾವತದಲ್ಲಿ ಅರಗಿನಾಯವನ್ನು ಕಟ್ಟಿಸಿ ಪಾಂಡವರನ್ನು ಅಲ್ಲಿಗೆ ಕಳಿಸಿದ. ಕುಟಿಲವರಿಯದ ಪಾಂಡವರು ಹದಿನಾಲ್ಕು ತಿಂಗಳು ಅಲ್ಲಿ ವಾಸಮಾಡಿದರು. ನಂತರ ಅರಗಿನಮನೆಗೆ ಬೆಂಕಿ ಇಡಲಾಯಿತು. ಆ ಬೆಂಕಿಯಲ್ಲಿ ತಿರಿದು ಉಣ್ಣುವ ಹೆಂಗುಸೊಬ್ಬಳು ತನ್ನ ಐವರು ಮಕ್ಕಳೊಂದಿಗೆ ಸುಟ್ಟುಹೋದಳು ಪಾಂಡವರೇ ಕುಂತಿಯೊಂದಿಗೆ ಸತ್ತರೆಂದು ಎಲ್ಲರೂ ತಿಳಿದರು. ಭೀಮನು ಎಲ್ಲರನ್ನೂ ರಕ್ಷಿಸಿ ಕರೆದುಕೊಂಡು ಹೋದ. ಪಾಂಡವರು ಕಾಮ್ಯಕ ವನ ಸೇರಿದರು. ಅಲ್ಲಿ ಹಿಡಿಂಬೆ ಭೀಮನನ್ನು ಮೋಹಿಸಿದಳು. ಭೀಮ ಹಿಡಿಂಬಾಸುರನನ್ನು ಕೊಂದ. ವ್ಯಾಸರ ಸೂಚನೆಯಂತೆ ಭೀಮ ಹಿಡಿಂಬೆಯನ್ನು ಮದುವೆಯಾದ, ಘಟೋತ್ಕಚ ಹುಟ್ಟಿದ. ನಂತರ ಪಾಂಡವರು ಏಕಚಕ್ರ ನಗರ ಸೇರಿದರು. ಅಲ್ಲಿ ಬಕಾಸುರನನ್ನು ಕೊಂದರು. ನಂತರ ದ್ರೌಪದಿಯ ಸ್ವಯಂವರದ ವಾರ್ತೆ ತಿಳಿದು ಪಾಂಚಾಲನಗರಕ್ಕೆ ಹೊರಟರು. ಮಾರ್ಗಮಧ್ಯೆ ಅಂಗಾರವರ್ಮನನ್ನು ಸೋಲಿಸಿದರು. ಆತ ಶರಣಾದ. ಸ್ವಯಂವರದಲ್ಲಿ ಅರ್ಜುನ ದ್ರೌಪದಿಯನ್ನು ಗೆದ್ದ. ನಂತರ  ವೇದವ್ಯಾಸರ ಸೂಚನೆಯಂತೆ ಐವರೂ ಮದುವೆಯಾದರು. ಎಂಬಲ್ಲಿಗೆ ಆದಿಪರ್ವದ ಕಥೆ ಮಂಗಲವಾಗುತ್ತದೆ.

ವಿಶೇಷತೆ : ನಂತರದ ಕಾಲದ ಯಕ್ಷಗಾನ ಪ್ರಸಂಗಕೃತಿಗಳ ಸ್ವರೂಪಕ್ಕೂ ಈ ಪ್ರಸಂಗಕೃತಿಯ ಸ್ವರೂಪಕ್ಕೂ ತುಲನೆ ಮಾಡಿದರೆ ಇದರ ವೈಶಿಷ್ಠ್ಯ ಎದ್ದು ಕಾಣುತ್ತದೆ. ಇವನ್ನು ಮೂಲ ಸಂಪಾದಕರಾದ ಪ್ರೊ. ಎಂ.ಎ. ಹೆಗಡೆ ವಿವರವಾಗಿ ಪ್ರತಿಪಾದಿಸಿದ್ದಾರೆ. ಯಕ್ಷಗಾನದ ಹೆಚ್ಚಿನ ಪ್ರಸಂಗಕಾರರೆಲ್ಲ ಕುಮಾರವ್ಯಾಸ ಮತ್ತು  ಅವನ ನಂತರದ ಅಭಿಜಾತ ಕವಿಗಳಿಂದ ಪ್ರಭಾವಿತರು. ಇವರನ್ನೇ ಹೆಚ್ಚು ಅನುಸರಿಸುತ್ತಾರೆ. ಆದರೆ ಆದಿಪರ್ವ ಪ್ರಸಂಗಕಾರ ಮೂಲವ್ಯಾಸಭಾರತದಿಂದಲೇ ಪ್ರಭಾವಿತವಾದ ಹಾಗಿದೆ. ಆತ ಕಥಾವಸ್ತುವನ್ನು ನೇರ ವ್ಯಾಸಭಾರತದಿಂದಲೇ ಎತ್ತಿಕೊಂಡಂತಿದೆ. ನಿರೂಪಣೆಯ ತಂತ್ರದ ದೃಷ್ಟಿಯಿಂದಲೂ ಅಷ್ಟೆ. ಪ್ರತಿ ಪ್ರಸಂಗಕೃತಿಯಲ್ಲಿಯೂ ಕಥೆ ಹೇಳುವವ ಮತ್ತು ಕೇಳುವವ ಇರುತ್ತಾರೆ. ಮಹಾಭಾರತದ ಕಥೆಯಾದರೆ ವೈಶಂಪಾಯನ ಜನಮೇಜಯನಿಗೆ ಹೇಳುತ್ತಾನೆ. ರಾಮಾಯಣದ್ದಾದರೆ ಶುಕಹರ ಗಿರಿಜೆಗೆ ಅಥವಾ ವಾಲ್ಮೀಕಿ ಲವಕುಶರಿಗೆ ಕಥೆ ಹೇಳುತ್ತಾರೆ. ಭಾಗವತದ್ದಾದರೆ ಶುಕ ಪರೀಕ್ಷಿತನಿಗೆ ಕಥೆ ಹೇಳುತ್ತಾನೆ.  ಈ ನಿರೂಪಣಾ ತಂತ್ರ ಕುಮಾರವ್ಯಾಸನಿಂದ ಈಚೆಗೆ ಜನಪ್ರಿಯವಾಗಿದೆ. ಆದರೆ ಆದಿಪರ್ವದಲ್ಲಿ ನಿರೂಪಕನೇ ನೇರವಾಗಿ ಕಥೆ ಹೇಳುತ್ತಾನೆ. ನಂತರದ ಪ್ರಸಂಗಕೃತಿಗಳಲ್ಲಿ ಸಾಂಗತ್ಯವೆಂಬ ಛಂದೋರೂಪ ಧಾರಾಳವಾಗಿ ಬಳಕೆಯಾಗುತ್ತದೆ. ಆದಿಪರ್ವದಲ್ಲಿ ಒಂದೇ ಒಂದು ಸಾಂಗತ್ಯವಿಲ್ಲ. ಭಾಮಿನಿ, ವಾರ್ಧಕ ಷಟ್ಪದಿಗಳೂ ಇದರಲ್ಲಿ ಬಳಕೆಗೊಂಡಿಲ್ಲ. ವಚನ ಮತ್ತು ದ್ವಿಪದಿಗಳು ಸಾಕಷ್ಟು ಬಳಕೆಗೊಂಡಿವೆ. ಕಾಲಕ್ರಮದಲ್ಲಿ ಯಕ್ಷಗಾನ ಪ್ರಸಂಗಕೃತಿಗಳಲ್ಲಿ ವಚನದ ಬಳಕೆ ಕಡಮೆಯಾಗುತ್ತ ಕ್ರಮೇಣ ಮಾಯವಾಗಿರುವುದನ್ನು ಗಮನಿಸಬಹುದು. ವಚನಗಳಲ್ಲಿಯೂ ಒಂದು ಹದದ ಪ್ರಾಸವನ್ನೂ ಗೆರೆಗಳನ್ನೂ ಬಳಸಿ ಪದ್ಯಾತ್ಮಕಗೊಳಿಸುವ ಪ್ರಯತ್ನ ಕಾಣುತ್ತದೆ. ಆದಿ ಮತ್ತು ರೂಪಕತಾಳಗಳೂ ಈ ಕೃತಿಯಲ್ಲಿ ಬಳಕೆಯಾಗಿಲ್ಲ. ಜಾನಪದ ಮಟ್ಟುಗಳು ಹೆಚ್ಚು ಬಳಕೆಗೊಂಡಿವೆ. ಬೇಂಟೆ ಮತ್ತು ಬೇಟೆ ಮುಂತಾದ ಪದಗಳು ಸಬಿಂದುಕವಾಗಿಯೂ ಅಬಿಂದುಕವಾಗಿಯೂ ಬಳಕೆಗೊಂಡಿವೆ. ಇವೆಲ್ಲವನ್ನೂ ಗಮನಿಸಿದರೆ ಆದಿಪರ್ವ ಲಭ್ಯ ಪ್ರಸಂಗಕೃತಿಗಳಲ್ಲಿಯೇ ಪ್ರಾಚೀನವಾದುದಿರಬೇಕು. ಈ ಕೃತಿಯ ಚಾರಿತ್ರಿಕ ಮಹತ್ವ ನಿರ್ಧರಿಸಲು ಹೆಚ್ಚಿನ ಸಂಶೋಧನೆ ಅಗತ್ಯ.

ಕೃತಿಕಾರ : ಪ್ರಸಂಗಕಾರನ ಹೆಸರು, ಜನ್ಮಸ್ಥಳ, ಕಾಲ ಇವು ಆದಿಪರ್ವ ಕೃತಿಯಲ್ಲಿ ಪ್ರತ್ಯಕ್ಷವಾಗಿ ಆಗಲೀ ಪರೋಕ್ಷವಾಗಿ ಆಗಲಿ ಎಲ್ಲಿಯೂ ಪ್ರಸ್ತಾಪವಾಗಲಿಲ್ಲ.  ಆರಂಭದ ಸ್ತುತಿ ಪದ್ಯಗಳಲ್ಲಿ. ಮುಕ್ತಾಯದ ಮಂಗಲಪದ್ಯಗಳಲ್ಲಿ ಸಿದ್ಧಿವಿನಾಯಕ, ಸಾಂಬಶಿವ, ಗಿರಿಜಾತೆ, ವೀಣಾಪಾಣಿ, ಪುರಂದರ ವಿಠಲರಾಯ ಮುಂತಾಗಿ ದೇವರ ಹೆಸರಿವೆಯೇ ವಿನಾ ಊರಿನ ಹೆಸರಿಲ್ಲ. ಕವಿಯ ೧೩ ಅಥವಾ ೧೪ನೆಯ ಶತಮಾನದಲ್ಲಿ ಕೃತಿಯನ್ನು ರಚಿಸಿರಬೇಕು ಎಂದು ಪ್ರೊ. ಎಂ.ಎ. ಹೆಗಡೆ ಊಹಿಸಿದ್ದಾರೆ. ಪ್ರತಿ ದೊರಿಕಿದ್ದು ಉತ್ತರ ಕನ್ನಡದ ಹಳ್ಳಿಯೊಂದರಲ್ಲಿ ಎನ್ನುವುದರಿಂದ ಕವಿ ಆ ಜಿಲ್ಲೆಯವನಾಗಿರಬೇಕೆಂದು ತರ್ಕಿಸಿದ್ದಾರೆ.

* * *

. ಭಾರತದ ಗುರುಕುಲ

ಭಾರತದ ಗುರುಕುಲ ಕೆ.ಪಿ.ವೆಂಕಪ್ಪಶೆಟ್ಟಿ ರಚಿಸಿದ ಪ್ರಸಂಗಕೃತಿ. ಇದರಲ್ಲಿ ಕೌರವ-ಪಾಂಡವರ ಬಾಲಕೇಳಿಯಿಂದ ತೊಡಗಿ ಗುರುದಕ್ಷಿಣೆಯವರೆಗಿನ ಕಥೆಯಿದೆ. ಯಕ್ಷಗಾನದ ಪ್ರಸಂಗರಚನೆಯ  ಪರಂಪರೆಪರಂಪರೆ ಮತ್ತು ಅದು ಬದಲಾಗುತ್ತ ಬಂದ ರೀತಿಗೆ ಈ ಪ್ರಸಂಗಕೃತಿ ಒಂದು ಮಾದರಿ.

ಕಥಾಸಾರ : ಹಸ್ತಿನಾವತಿಯಲ್ಲಿ ಧೃತರಾಷ್ಟ್ರ, ಭೀಷ್ಮ, ವಿದುರ ಮುಂತಾದವರೊಂದಿಗೆ ರಾಜ್ಯಭಾರ ಮಾಡುತ್ತಿದ್ದ. ಪಾಂಡುರಾಜನೂ ಮರಣ ಹೊಂದಿದ್ದರಿಂದ ಧೃತರಾಷ್ಟ್ರ-ಗಾಂಧಾರಿಯರ ಮತ್ತು ಕುಂತಿ, ಮಾದ್ರಿಯರ ಮಕ್ಕಳನ್ನೆಲ್ಲ ಹಿರಿಯರು ಪ್ರೀತಿ-ವಾತ್ಸಲ್ಯದಿಂದ ನೋಡಿಕೊಳ್ಳುತ್ತಿದ್ದರು. ಕೌರವರು ಮತ್ತು ಪಾಂಡವರು ಪರಸ್ಪರ ದ್ವೇಷಿಸದೆ, ಹೊಡೆದಾಡಿಕೊಳ್ಳದೆ ಪ್ರೀತಿಯಿಂದ ಆಟ ಆಡಿಕೊಂಡಿರಬೇಕೆಂದು ಭೀಷ್ಮ ಮತ್ತೆ-ಮತ್ತೆ ಹೇಳುತ್ತಿದ್ದ. ಆದರೆ ಕೌರವ ಮತ್ತು ಭೀಮ ಮತ್ತೆ ಮತ್ತೆ ಕಚ್ಚಾಡುತ್ತಿದ್ದರು. ಆಟ ಹೊಡೆದಾಟಕ್ಕೆ ತಿರುಗುತ್ತಿತ್ತು. ಮತ್ತೆ ಮತ್ತೆ ಭೀಷ್ಮನಲ್ಲಿ ದೂರು ಹೇಳುವುದು. ಆತ ಸಮಾಧಾನ ಹೇಳುವದು ಇದೇ ನಡೆದಿತ್ತು. ಅಜ್ಜನ ಸೂಚನೆಯಂತೆ ಮಾರನೆಯದಿನ ಭೀಮನನ್ನು ಬಿಟ್ಟು ಆಟ ಆಡತೊಡಗಿದರೂ ಆತ ನಡುವೆ ಬಂದು ಎಲ್ಲರಿಗೂ ತೊಂದರೆ ಕೊಡುತ್ತಿದ್ದ. ಮಾವಿನ ಮರ ಏರಿ ಹಣ್ಣು ಕೀಳುತ್ತಿದ್ದರೆ ಮರವನ್ನೇ ಅಲುಗಿಸಿ ಎಲ್ಲರನ್ನೂ ಕೆಳಗೆ ಕೆಡವಿಬಿಡುತ್ತಿದ್ದ. ವಿದುರನೊಂದಿಗೆ ಸಮಾಲೋಚಿಸಿ ಧೃತರಾಷ್ಟ್ರ ಕೃಪಾಚಾರ‍್ಯನಿಂದ ಮಕ್ಕಳಿಗೆ ಶಿಕ್ಷಣಕೊಡಿಸುವದೆಂದು ತೀರ‍್ಮಾನಿಸಿದ. ಆದರೂ ಮಾರನೆಯದಿನ ಕೌರವರು ಭೀಮನೊಡನೆ ಸ್ನೇಹ ನಟಿಸಿ ಅವನನ್ನು ಕೊಂದುಬಿಡಲು ಹಲವು ಉಪಾಯ ಮಾಡಿದರು. ಯಾವುದೂ ಫಲಿಸಲಿಲ್ಲ. ಭೀಮ ಕೌರವರನ್ನು ಒಂದಲ್ಲ ಒಂದು ದಿನ ಕೊಂದೇ ತೀರುತ್ತೇನೆಂದು ಪ್ರತಿಜ್ಞೆ ಮಾಡಿದ.

ಗುರುಕುಲ ತೊಡಗಿತು. ಕೃಪಾಚಾರ‍್ಯ ವಿದ್ಯಾಗುರುವಾದ. ಭೀಷ್ಮ ಗುರುಕುಲದ ಮಹದೋದ್ದೆಶಗಳನ್ನೆಲ್ಲ ಮನವರಿಕೆ ಮಾಡಿಕೊಟ್ಟ. ಯಾವೆಲ್ಲ ವಿಷಯಗಳನ್ನು ಕಲಿಸಬೇಕೆಂಬುದು ತೀರ್ಮಾನವಾಯಿತು. ವಿಧಿಯುಕ್ತವಾದ ಪೂಜೆಯೊಂದಿಗೆ ವಿದ್ಯಾಭ್ಯಾಸ ತೊಡಗಿತು. ಶಾರದಾ ಮಹೋತ್ಸವವೂ ನಡೆಯಿತು. ಅಜ್ಜ ಭೀಷ್ಮ ವಿದುರನೊಂದಿಗೆ ಗುರುಕುಲ ಸಂದರ್ಶಿಸಿ ಮಕ್ಕಳು ಕಲಿಯುತ್ತಿರುವುದನ್ನು ಗಮನಿಸಿದ. ಮಕ್ಕಳೆಲ್ಲ ಅಜ್ಜ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದಿರು. ಭೀಷ್ಮ ಸಂತೋಷದಿಂದ ಮರಳಿದ.

ಈ ಕಡೆ ಭಾರಧ್ವಜನ ಮಗ ದ್ರೋಣ ತನ್ನ ಮಗ ಅಶ್ವತ್ಥಾಮನೊಂದಿಗೆ ಬಾಲ್ಯ ಸ್ನೇಹಿತನಾದ ದ್ರುಪದರಾಜನನ್ನು ಹುಡುಕಿಕೊಂಡು ಪಾಂಚಾಲನಗರಿಗೆ ಬಂದ. ಆದರೆ ದ್ರುಪದ ದ್ರೋಣನನ್ನು ಅಪಮಾನಿಸಿದ. ತನ್ನ ಶಿಷ್ಯರಿಂದ ದ್ರುಪದನನ್ನು ಸೆರೆಹಿಡಿಸುವ ಪ್ರತಿಜ್ಞೆ ಮಾಡಿ ದ್ರೋಣ ಅಲ್ಲಿಂದ ಹೊರಟ. ನೊಂದು ಅಲೆಯುತ್ತ ಅಪ್ಪ ಮತ್ತು ಮಗ ಹಸ್ತಿನಾವತಿಗೆ ಬಂದರು. ಪುರದ ಹೊರವಲಯದಲ್ಲಿ ಕೌರವ-ಪಾಂಡವರು ಆಟವಾಡುತ್ತಿದ್ದರು. ಅವರ ಆಟದ ಮಿಗ ಬಾವಿಗೆ ಬಿದ್ದಿತ್ತು. ತೆಗೆಯಲಾಗದೆ ಒದ್ದಾಡುತ್ತಿದ್ದರು. ದ್ರೋಣ ತನ್ನ ಶರತಂತ್ರ ಬಲದಿಂದ ತೆಗೆಸಿ ಕೊಟ್ಟ. ವಿಷಯ ತಿಳಿದ ಭೀಷ್ಮ ದ್ರೋಣನನ್ನು ಬರಮಾಡಿಕೊಂಡು ಮಕ್ಕಳ ಶಸ್ತ್ರಾಭ್ಯಾಸದ ಹೊಣೆ ವಹಿಸಿದ. ಶಸ್ತ್ರಶಾಲೆಯ ನಿರ್ಮಾಣವಾಯಿತು. ಎಲ್ಲರೊಂದಿಗೆ ಕರ್ಣನೂ ಅಲ್ಲಿಗೆ ಕಲಿಯಲು ಬಂದ. ಕರ್ಣ ಮತ್ತು ಕೌರವನಲ್ಲಿ ವಿಶೇಷವಾದ ಸ್ನೇಹ, ವಿಶ್ವಾಸ ವರ್ಧಿಸಿತು. ಎಲ್ಲರೂ ಅಭ್ಯಾಸಮಗ್ನರಾಗಿ ಒಬ್ಬೊಬ್ಬರು ಒಂದೊಂದರಲ್ಲಿ ಪರಿಣತರಾದರು. ಅರ್ಜುನ ಎಲ್ಲರಿಗಿಂತ ಮಿಗಿಲಾದ. ಅವನಿಗೆ ದ್ರೋಣ ಶಸ್ತ್ರವಿದ್ಯೆಯ ರಹಸ್ಯಗಳನ್ನೆಲ್ಲ ಬೋಧಿಸಿದ. ಹಿರಣ್ಯ ಧನುವಿನ ಮಗ ಏಕಲವ್ಯನೂ ವಿದ್ಯೆ ಬಯಸಿಬಂದ. ಆದರೆ ದ್ರೋಣ ಅವನನ್ನು ಶಿಷ್ಯನನ್ನಾಗಿ ಸ್ವೀಕರಿಸಲಿಲ್ಲ. ಆತ ಮರಳಿ ಹೋಗಿ ದ್ರೋಣನ ಮಣ್ಣಿನ ಮೂರ್ತಿ ಮಾಡಿಕೊಂಡು ಬಿಲ್ಲುವಿದ್ಯೆಯಲ್ಲಿ ಪಾರಂಗತನಾದ.

ದ್ರೋಣ ತನ್ನ ಶಿಷ್ಯರ ಪರಿಣತಿ ಪರೀಕ್ಷಿಸಲು ಭೀಷ್ಮನೊಂದಿಗೆ ಸಮಾಲೋಚಿಸಿ ಏರ್ಪಾಡು ಮಾಡಿದ. ಎಲ್ಲ ವ್ಯವಸ್ಥೆಯಾಗಿ ಸಕಲರೂ ಬಂದು ಸೇರಿದರು. ಪಾಂಡವರು ಕೌರವರೆಲ್ಲ ತಮ್ಮ-ತಮ್ಮ ಕೌಶಲ್ಯ ತೋರಿದರು. ಕರ್ಣನೂ ತನ್ನ ಕೌಶಲ ತೋರಲು ಮುಂದಾದ. ಆಗ ಆತನ ಕುಲ ಮತ್ತು ಸ್ಥಾನ-ಮಾನದ ಪ್ರಶ್ನೆ ಎದುರಾಯಿತು. ಕೌರವ ಅಲ್ಲಿಯೇ ಕರ್ಣನಿಗೆ ಅಂಗದೇಶದ  ಪಟ್ಟಕಟ್ಟಿದ. ವಿವಾದ ತೀವ್ರಗೊಂಡು ಕೌರವ ಮತ್ತು ಭೀಮ ಕಾದಾಡಲು ಮುಂದಾದರು. ಕೃಪಾಚಾರ್ಯ ತಡೆದ. ಬೇಸರಗೊಂಡ ಭೀಷ್ಮ ಅಲ್ಲಿಂದ ನಿರ್ಗಮಿಸಿಬಿಟ್ಟಿ.

ಮಾರನೆಯ ದಿನವೇ ಶಿಷ್ಯರಿಂದ ಗುರುದಕ್ಷಿಣೆ ಪಡೆಯಲು ಯೋಗ್ಯ ಸಂದರ್ಭವೆಂದು ದ್ರೋಣ ನಿರ್ಧರಿಸಿದ. ಶಿಷ್ಯರನ್ನೆಲ್ಲ ಕರೆದು ದ್ರುಪದನನ್ನು ಸೆರೆಹಿಡಿದು ತರುವ ಇಂಗಿತ ಹೇಳಿದ. ಕೌರವಾದಿಗಳು ತಕ್ಷಣ ಉತ್ಸಾಹದಿಂದ ಹೊರಟು ಸೋತು ಮರಳಿದರು. ನಂತರ ಭೀಮಾರ್ಜುನರು ಹೋಗಿ ದ್ರುಪದನೊಡನೆ ಕಾದು ಸೆರೆಹಿಡಿದು ತಂದರು. ದ್ರೋಣನಿಗೆ ಸಂತೋಷವಾಯಿತು. ದ್ರುಪದನಿಗೆ ಬುದ್ಧಿವಾದ ಹೇಳಿ ಜೀವದಾನಕೊಟ್ಟು ಕಳಿಸಿದ ಎಂಬಲ್ಲಿಗೆ ಕಥೆ ಮಂಗಲವಾಗುತ್ತದೆ.

ಪ್ರಸಂಗಕಾರರ ಪರಿಚಯ : ಪ್ರಸಂಗಕಾರರಾದ ಕೆ.ಪಿ. ವೆಂಕಟಪ್ಪಶೆಟ್ಟಿ ಮುಳಿಯ ತಿಮ್ಮಪ್ಪಯ್ಯ ಮಂಜೇಶ್ವರ ಗೋವಿಂದ ಪೈ ಮುಂತಾದವರ ಒಡನಾಡಿಗಳು. ಹಳಗನ್ನಡದ, ನಡುಗನ್ನಡದ ಕಾವ್ಯಗಳನ್ನು ಚೆನ್ನಾಗಿ ಓಡಿಕೊಂಡವರು. ಕವಿಭೂಷಣ ಎಂದು ಖ್ಯಾತಿ ಪಡೆದವರು. ಲತ್ತೆ ಪಗಡೆ, ಸಾಹಸಭೀಮವಿಜಯ ಮುಂತಾದ ಪ್ರಸಂಗಕೃತಿಗಳನ್ನು ರಚಿಸಿದವರು. ಪ್ರಸಿದ್ಧ ಅರ್ಥಧಾರಿಗಳು. ಪಾರ್ತಿಸುಬ್ಬ ಕವಿಯ ಕಾಲದೇಶಗಳ ವಿಚಾರದಲ್ಲಿ ಸಾಕಷ್ಟು ಲೇಖನಗಳನ್ನು ಬರೆದವರು.

ಕೃತಿಯ ವಿಶೇಷತೆ : ಕೃತಿಯನ್ನು ಗಮನಿಸಿದಾಗ ಅದರ ವಿಶೇಷತೆ ಎದ್ದು ಕಾಣುತ್ತದೆ. ಸಾಂಪ್ರದಾಯಿಕ ಪ್ರಸಂಗ ಕೃತಿಗಳಲ್ಲಿ ದೃಶ್ಯ ನಡೆಯುವ ಸ್ಥಳ. ಭಾಗವಹಿಸುವ ಪಾತ್ರಗಳು, ಸಜ್ಜಿಕೆ ಮುಂತಾದ ವಿವರಗಳಿರುವುದಿಲ್ಲ ಭಾರತದ ಗುರುಕುಲ ಪ್ರಸಂಗಕೃತಿಯಲ್ಲಿ ಇವೆಲ್ಲವನ್ನೂ ನೋಡಬಹುದು. ಕೃತಿಯಲ್ಲಿ ದೃಶ್ಯಗಳನ್ನು ನೋಟ ಎಂಬ ಹೆಸರಿನಲ್ಲಿ ವಿಭಜಿಸಲಾಗಿದೆ. ಮೊದಲ ಮತ್ತು ಕೊನೆಯ ನೋಟಕ್ಕೆ ಕ್ರಮವಾಗಿ ಬಾಲಕೇಳಿ ಕಥನ ಗುರುದಕ್ಷಿಣಿ ಎಂಬ ಉಪಶೀರ್ಷಿಕೆಯನ್ನು ಕೊಡಲಾಗಿದೆ. ಕೃತಿಯನ್ನು ಪ್ರಸಂಗಕಾರರು ಯಕ್ಷಗಾನ ವರ್ಣಕ ಎಂದು ಹೆಸರಿಸಿದ್ದಾರೆ. ಕಾವ್ಯಗಳಲ್ಲಿ  ವಸ್ತುತ ಮತ್ತು ವರ್ಣಕ ಎಂದು ಎರಡು ಬಗೆಗಳಿವೆ. ವಸ್ತುಕದಲ್ಲಿ ಕಲ್ಪನೆಗೆ ಅವಕಾಶವಿಲ್ಲ. ವರ್ಣಕದಲ್ಲಿ ಕಲ್ಪನೆಗೆ ಅವಕಾಶವಿದೆ. ಭಾರತದ ಗುರುಕುಲದಲ್ಲಿ ಹದವಾದ ಕಲ್ಪನೆಯನ್ನು ಸೇರಿಸಿ ಪ್ರಸಂಗಕಾರರು ಅದರ ಸೌಂದರ್ಯವನ್ನು ಸಾಧ್ಯತೆಯನ್ನೂ ಹೆಚ್ಚಿಸಿದ್ದಾರೆ. ಮೂರನೆಯ ನೋಟದ ಕೊನೆಯಲ್ಲಿ ಕಾಲ್ಪನಿಕವಾದ ಪಾತ್ರಗಳ ವಾಕ್ಯರೂಪದ ಸಂಭಾಷಣೆಯನ್ನು ಅಳವಡಿಸಿದ್ದಾರೆ.

* * *

 ಯಕ್ಷಗಾನ ದ್ರೌಪದಿ ಸ್ವಯಂವರಹಟ್ಟಿಯಂಗಡಿ ರಾಮಭಟ್ಟ

 ಯಕ್ಷಗಾನ ದ್ರೌಪದಿ ಸ್ವಯಂವರದೇವಿದಾಸ

ದ್ಯ ತಿಳಿದು ಬಂದಂತೆ ಯಕ್ಷಗಾನ ದ್ರೌಪದೀ ಸ್ವಯಂವರ ಎರಡಿವೆ. ಒಂದು ದೇವಿ ದಾಸನದು. ಅದು ಮುಂಬಯಿಯ ಪದವೀಧರ ಯಕ್ಷಗಾನ ಸಮಿತಿಯವರು ಪ್ರಕಟಿಸಿದ ಪೊಲ್ಯದೇಜಪ್ಪ ಶೆಟ್ಟಿ ಸಂಸ್ಮರಣ ಪ್ರಸಂಗಮಾಲಿಕೆಯ ಹದಿನೇಳನೆಯ ಸಂಪುಟದಲ್ಲಿ ಸಂಕಲನಗೊಂಡಿದೆ. ಎರಡೂ ಪ್ರಸಂಗಕೃತಿಗಳು ಅರಗಿನಮನೆಯ ಅಪಾಯದಿಂದ ಪಾಂಡವರು ಪಾರಾದಲ್ಲಿಂದ ತೊಡಗಿ ದ್ರೌಪದಿಯ ವಿವಾಹ ಮುಗಿಯುವವರೆಗಿನ ಸಂದರ್ಭವನ್ನೇ ಒಳಗೊಂಡಿವೆ. ಎರಡರಲ್ಲಿಯೂ ಮುಖ್ಯ ಘಟನೆಗಳು  ಸಮಾನವಾಗಿವೆ. ಹಿಡಿಂಬಾಸುರ ವಧೆ, ಹಿಡಿಂಬಾವಿವಾಹ, ಘಟೋತ್ಕಚ ಜನನ, ಬಕಾಸುರವಧೆ, ಸ್ವಯಂವರದಲ್ಲಿ ಅರ್ಜುನ ದ್ರೌಪದಿಯನ್ನು ಗೆಲ್ಲುವುದು ಇವೇ ಎರಡರಲ್ಲಿಯೂ ಪ್ರತ್ಯಕ್ಷವಾಗುವ ಘಟನೆಗಳು.  ಆದರೆ ದೇವಿದಾಸನ ದ್ರೌಪದಿ ಸ್ವಯಂವರದಲ್ಲಿ ಇವುಗಳ ಜತೆಗೆ ಪಾಂಡುವಿನ ಸಾವು, ಮಾದ್ರಿಯ ಸಹಗಮನ, ದ್ರುಪದನ ಪುತ್ರ ಕಾಮ್ಯಾಧ್ವರದ ವಿವರ ಇವೂ ಸೇರಿಕೊಳ್ಳುತ್ತವೆ. ರಾಮಭಟ್ಟ ಕೆಲವು ಸಂದರ್ಭಗಳನ್ನು ಪ್ರಸ್ತಾಪಕ್ಕೆ ಸೀಮಿತಗೊಳಿಸಿದರೆ ದೇವಿದಾಸ ಅವೇ ಸಂದರ್ಭಗಳನ್ನು ವಿಸ್ತೃತಗೊಳಿಸುತ್ತಾನೆ. ಉದಾಹರಣೆಗೆ ದ್ರೌಪದಿಗೆ ಐವರು ಗಂಡಂದಿರಾಗಲು ಕಾರಣವಾಗುವ ಪೂರ್ವಜನ್ಮದ ಕಥೆಯನ್ನು ರಾಮಭಟ್ಟ  ತುಂಬ ಸ್ಥೂಲವಾಗಿ ಅಳವಡಿಸುತ್ತಾನೆ. ದೇವಿದಾಸ ಪೂರ್ಣ ವಿವರಗಳನ್ನು ಕೊಡುತ್ತಾನೆ. ದ್ರೌಪದಿಯ ಪೂರ್ವಜನ್ಮದ ಹೆಸರು ನಾರಾಯಣಿ ಅವಳು ಒಬ್ಬ ಮುನಿ ಶ್ರೇಷ್ಠನ ಹೆಂಡತಿ. ಪರಮ ಪತಿವ್ರತೆ. ಗಂಡನಿಗೆ ಕುಷ್ಟ. ಹೆಂಡತಿಯನ್ನು ಪರೀಕ್ಷಿಸಲು ಕುಷ್ಟದಿಂದ ಕೊಳೆತ ಬೆರಳುಗಳನ್ನು ಅದ್ದಿದ ಶೇಷಾನ್ನವನ್ನು ತಿನ್ನಲು ಹೇಳುತ್ತಾನೆ. ಅವಳು ಉಣ್ಣುತ್ತಾಳೆ. ಅವಳ ಪತಿಭಕ್ತಿಗೆ ಮೆಚ್ಚಿದ ಮುನಿ ಬೇಕಾದ  ವರ ಕೇಳಿಕೊಳ್ಳಲು ಹೇಳುತ್ತಾನೆ. ದಿವ್ಯಸ್ವರೂಪದಿಂದ ತನಗೆ ಸುರತಸುಖ ನೀಡಲು ಕೇಳಿಕೊಳ್ಳುತ್ತಾಳೆ. ಅಂಥ ಸುಖವನ್ನು ಅನುಭವಿಸುತ್ತಿರುವಾಗಲೇ ಆ ಮುನಿಗೆ ತನ್ನ ತಪಸ್ಸಿನ ನೆನಪಾಗಿ ಬಿಡುತ್ತದೆ. ಹೊರಡಲು ಅನುವಾದ ಅವನ ಸೆರಗನ್ನು  ನಾರಾಯಣಿ ಹಿಡಿದುಕೊಂಡುಬಿಡುತ್ತಾಳೆ. ಸಿಟ್ಟಿಗೆದ್ದ ಆತ ರಾಜಕುಮಾರಿಯಾಗಿ ಹುಟ್ಟು ಎಂದು ಶಾಪಕೊಡುತ್ತಾನೆ. ದುಃಖಿತೆಯಾದ ಅವಳು ಶಿವನನ್ನು ಭಜಿಸುತ್ತಾಳೆ. ಪ್ರತ್ಯಕ್ಷನಾದ ಶಿವನಲ್ಲಿ ಅವಳು ಪತಿಂದೇಹಿ ಎಂದು ಐದು ಸಲ ಬೇಡಿಕೊಂಡುಬಿಡುತ್ತಾಳೆ. ನಿನಗೆ ಐವರು ಗಂಡಂದಿರಾಗುತ್ತಾರೆ ; ಆದರೂ ನೀನು ಪತಿವ್ರತೆ ಎಂದು ಹರಸಿ ಶಿವ ಮಾಯವಾಗುತ್ತಾನೆ. ಕಥೆಯನ್ನು ಅರಿಯುವ ದೃಷ್ಟಿಯಿಂದ ಈ ವಿವರ ಅಗತ್ಯವಾಗುತ್ತದೆ.

ಡಾ|| ಕಾರಂತರ ಕಾಲನಿರ್ಧಾರದ ಪ್ರಕಾರ ದೇವಿದಾಸ ಮತ್ತು ಹಟ್ಟಿಯಂಗಡಿಯ ರಾಮಭಟ್ಟ ಹಿರಿ-ಕಿರಿಯ ಸಮಕಾಲೀನರು. ಡಾ|| ಎಂ. ಪ್ರಭಾಕರ ಜೋಷಿಯವರ ಪ್ರಕಾರ ದೇವಿದಾಸನ* ಕಾಲ ಕ್ರಿ.ಶ. ೧೮೦೦. ಇವರ ಪ್ರಕಾರ ರಾಮಭಟ್ಟನೇ ಪ್ರಾಚೀನ. ರಾಮಭಟ್ಟನ ದ್ರೌಪದಿ ಸ್ವಯಂವರದ ಪ್ರಭಾವ-ಪ್ರೇರಣೆ ದೇವಿದಾಸನ ಪ್ರಸಂಗಕೃತಿಯ ಮೇಲೆ ಇರಬಹುದೆ ? ಡಾ|| ಕಾರಂತರು ದೇವಿದಾಸನ ಪ್ರಸಂಗಕೃತಿಯ ಯಾದಿಯಲ್ಲಿ ದ್ರೌಪದಿ ಸ್ವಯಂವರವನ್ನು ಸೇರಿಸುವುದೇ ಇಲ್ಲ. ಬಹಳಕಾಲ ಹಸ್ತ ಪ್ರತಿಯ ರೂಪದಲ್ಲಿದ್ದ ದೇವಿದಾಸನ ದ್ರೌಪದಿ ಸ್ವಯಂವರವನ್ನು ೧೯೯೮ರಲ್ಲಿ ಮುಂಬಯಿಯ ಪದವೀಧರ ಯಕ್ಷಗಾನ ಸಮಿತಿ ಪ್ರಕಟಿಸಿದೆ.

ದೇವಿದಾಸನ ಪದ್ಯ ರಚನೆ ಹೆಚ್ಚು ಪರಿಷ್ಕೃತಗೊಂಡಂತೆ ತೋರುತ್ತದೆ. ಈ ಪರಿಷ್ಕರಣ ಸಂಪಾದನೆ, ಮುದ್ರಣ, ಪ್ರಕಟಣೆಯ ಹಂತದಲ್ಲಿಯೂ ಆಗಿರಬಹುದಾದ ಸಾಧ್ಯತೆಯಿದೆ. ಉದಾಹರಣೆಗೆ ಪ್ರೊ. ಎಂ.ಎ. ಹೆಗಡೆ ಕೊಟ್ಟ ರಾಮಭಟ್ಟನ ದ್ರೌಪದಿ ಸ್ವಯಂವರದ ಭಾಷೆಗಿಂತಲೂ ಕೆ.ಜಿ.ರಾಮರಾವ್ ಕೊಟ್ಟ ದ್ರೌಪದಿ ಸ್ವಯಂವರ ಹೆಚ್ಚು ಪರಿಷ್ಕೃತಗೊಂಡಿದೆ.  ಈ ಎರಡನೆಯದು  ಮೂರನೆಯ ಮುದ್ರಣ. ಮೊದಲನೆಯದರ ರಕ್ಷಾಪ್ಪಟಗಳೆಲ್ಲ ಜೀರ್ಣಗೊಂಡುದರಿಂದ ಮುದ್ರಣ ವಿವರಗಳು ಗೊತ್ತಾಗುವುದಿಲ್ಲ. ಈ ಸಂಪಾದನಕಾರ್ಯಕ್ಕೆ ೧೯೪೮ ರಲ್ಲಿ ಉಡುಪಿಯ ಶ್ರೀ ಕೃಷ್ಣ ಮುದ್ರಣಾಲಯದಲ್ಲಿ ಮುದ್ರಣಗೊಂಡು ಶ್ರೀಮನ್ಮಧ್ವಸಿದ್ಧಾಂತ ಗ್ರಂಥಾಲಯದಿಂದ ಪ್ರಕಟಗೊಂಡ ಮೂರನೆಯ ಆವೃತ್ತಿಯನ್ನು ಬಳಸಿಕೊಳ್ಳಲಾಗಿದೆ.

ಕಥಾಸಾರ : ಆರಗಿನಮನೆಯ ಅಪಾಯದಿಂದ ಪಾರಾದ ಪಾಂಡವರು ಅರಣ್ಯ ಸೇರಿದರು. ಅದು ಹಿಡಿಂಬವನ. ಅಲ್ಲಿ ವಾಸವಾಗಿದ್ದ ಹಿಡಿಂಬಾಸುರ ಅವರನ್ನೆಲ್ಲ ತಿಂದೇ ಬಿಡಲು ಬಂದ. ಭೀಮ ಅವನನ್ನು ಕೊಂದ. ಅವನ ತಂಗಿ ಹಿಡಿಂಬೆ ಭೀಮನಿಗೆ ಒಲಿದು ಬಂದಳು. ಮದುವೆಯಾಗಲು ಭೀಮ ಒಪ್ಪಲಿಲ್ಲ. ಅಲ್ಲಿಗೆ ಬಂದ ವೇದವ್ಯಾಸಮುನಿ ಮುಂದೆ ನಡೆಯಲಿರುವ ಮಹಾಭಾರತ ಯುದ್ಧದಲ್ಲಿ ಹಿಡಿಂಬೆಗೆ ಹುಟ್ಟುವ ಮಗನಿಂದಾಗುವ ಸಹಾಯವನ್ನು ಮನವರಿಕೆ ಮಾಡಿಕೊಟ್ಟು ಮದುವೆಮಾಡಿಕೊಳ್ಳಲು ಸಲಹೆ ಮಾಡಿದ. ಭೀಮ-ಹಿಡಿಂಬೆಯರ ಮದುವೆಯಾಯಿತು. ಘಟೋತ್ಕಚ ಹುಟ್ಟಿದ. ಅವನಿಗೆ ಅಧಿಕಾರ ನೀಡಿ ಪಾಂಡವರು ಏಕಚಕ್ರ ನಗರಕ್ಕೆ ಬಂದು ಬ್ರಾಹ್ಮಣವೇಷದಲ್ಲಿ ಭಿಕ್ಷೆ ಬೇಡುತ್ತ ಬಾಳತೊಡಗಿದರು. ಏಕಚಕ್ರನಗರಕ್ಕೆ ಹೊಂದಿಕೊಂಡಿದ್ದ ಅಡವಿಯಲ್ಲಿ ಬಕಾಸುರನೆಂಬ ರಕ್ಕಸನಿದ್ದ. ಊರವರ ಮತ್ತು ಅವನ ನಡುವೆ ಆದ ಒಪ್ಪಂದದಂತೆ ಪ್ರತೀದಿನ ಹನ್ನೆರಡು ಖಂಡುಗದ ಅಕ್ಕಿಯ ಅಡುಗೆ, ಎರಡುಕೋಣ ಮತ್ತು ಒಬ್ಬ ಮನುಷ್ಯನನ್ನು ಬಕನ ಆಹಾರವಾಗಿ ಕಳಿಸಬೇಕಿತ್ತು. ಮಾರನೆಯದಿನ ವಾಸವಾಗಿದ್ದ ನೆರಮನೆಯ ಬ್ರಾಹ್ಮಣನ ಪಾಳಿಯಾಗಿತ್ತು. ತಾಯಿಯ ಸೂಚನೆಯಂತೆ ಭೀಮನೇ ಅವನ್ನೆಲ್ಲ ಒಯ್ದು  ಉಂಡು ಬಕಾಸುರನನ್ನು ಕೊಂದು ಬಂದ.

ಪಾಂಚಾಲರ ರಾಜ ದ್ರುಪದನಿಗೆ ಬೇಹಿನಚರರು ಅರಗಿನಮನೆಯಲ್ಲಿ ಪಾಂಡವರು ಸುಟ್ಟುಹೋದರೆಂದು ಸುದ್ದಿ ಮುಟ್ಟಿಸಿದರು. ಆತ ಚಿಂತಿತನಾದ. ದ್ರೋಣನ ಹಗೆ ತೀರಿಸಿಕೊಳ್ಳಲು ತನ್ನ ಮಗಳನ್ನು ಅರ್ಜುನನಿಗೆ ಕೊಟ್ಟು ಮದುವೆಮಾಡಬೇಕೆಂದು ನಿಶ್ಚಯಿಸಿಕೊಂಡಿದ್ದ. ಪುರೋಹಿತರನ್ನು ಕರೆಸಿ ಸಮಾಲೋಚಿಸಿದ. ಪುರೋಹಿತ ಸ್ವಯಂವರದ ಸಲಹೆಕೊಟ್ಟ. ವೈಭವದ ಸ್ವಯಂವರದ ಏರ್ಪಾಡಾಯಿತು. ದೇಶದ ರಾಜರುಗಳಿಗೆಲ್ಲ ಓಲೆ ಹೋಯಿತು.

ಬ್ರಾಹ್ಮಣವೇಷದ ಪಾಂಡವರು ರಾತ್ರಿವೇಳೆಯಲ್ಲಿ ಕೊಳ್ಳಿಯ ಬೆಳಕಿನಲ್ಲಿ ಪಾಂಚಾಲ ನಗರಕ್ಕೆ ಹೊರಟರು. ಮಾರ್ಗ ಮಧ್ಯೆ ತನ್ನ ನಾರೀ ವೃಂದದೊಂದಿಗೆ ಜಲಕೇಳಿಗೆ ಬಂದ ಅಂಗಾರಪರ್ಣ ಸಿಟ್ಟಿಗೆದ್ದು ಪಾಂಡವರ ಮೇಲೆ ಏರಿಹೋದ. ಅರ್ಜುನನೊಂದಿಗೆ ಯುದ್ಧಮಾಡಿ ಸೋತು ಶರಣಾದ. ಅವರು ಪಾಂಡವರೆಂದು ತಿಳಿದುಕೊಂಡು ಅನೇಕ ಬಗೆಯಿಂದ ಉಪಕರಿಸಿದ.

ಆ ಕಡೆ ಕೌರವರಿಗೂ ಸ್ವಯಂವರದ ಆಮಂತ್ರಣ ಹೋಗಿತ್ತು. ಕೌರವ ತನ್ನೆಲ್ಲ ಪರಿವಾರದೊಂದಿಗೆ ಪಾಂಚಾಲಕ್ಕೆ ಹೊರಟ. ದಾರಿಯಲ್ಲಿ ಅನೇಕ ಅಪಶಕುನಗಳಾದವು. ಕಾರಣವನ್ನೇ ಕಾಯುತ್ತಿದ್ದ ಹಾಗೆ ದ್ರೋಣ ಮತ್ತು ಕರ್ಣರ ನಡುವೆ ಶಕುನದ ವಿಷಯದಲ್ಲಿಯೇ ಜಗಳವಾಯಿತು. ಕೌರವ ಸಮಾಧಾನ ಹೇಳಿ ಜಗಳ ನಿಲ್ಲಿಸಿದ.

ಪಾಂಚಾಲಕ್ಕೆ ಬಂದ ಪಾಂಡವರು ಕುಂಬಾರನೊಬ್ಬನ ಮನೆಯಲ್ಲಿ ಉಳಿದಕೊಂಡರು. ದ್ವಾರಕೆಯಿಂದ ಬಂದ ಶ್ರೀಕೃಷ್ಣ ಕುಂಬಾರನ ಮನೆಗೇ ಹೋಗಿ ಪಾಂಡವರನ್ನು ಕಂಡ. ಕೃಷ್ಣನು ಅರ್ಜುನನಿಗೆ ಕೊಟ್ಟ ಮುದ್ರಿಕೆಯ ಉಂಗುರವನ್ನು ಸ್ವಲ್ಪ ಕಾಲ ಪಡೆದ ಭೀಮ ತನ್ನ ಅಸಾಮಾನ್ಯ ಭೋಜನ ಸಾಮರ್ಥ್ಯ ಪ್ರದರ್ಶಿಸಿ ಊಟ ನೀಡಿದ ದೃಷ್ಟದ್ಯುಮ್ನ ಸೋಲೊಪ್ಪುವಂತೆ ಮಾಡಿದ.೧

ಸ್ವಯಂವರ ಮಂಟಪದಲ್ಲಿ ಧೃಷ್ಟದ್ಯುಮ್ನ ತಂದೆಯ ಸೂಚನೆಯಂತೆ ಮತ್ಸ್ಯಯಂತ್ರವನ್ನು ಸಜ್ಜುಗೊಳಿಸಿದ. ಶೃಂಗಾರಗೊಂಡ ದ್ರೌಪದಿ ಸ್ವಯಂವರ ಮಂಟಪಕ್ಕೆ ಬಂದಳು. ಮತ್ಸ್ಯಯಂತ್ರ ಭೇದಿಸಿ ದ್ರೌಪದಿಯನ್ನು ವರಿಸಲು ಅನೇಕ ರಾಜರು ಪ್ರಯತ್ನಿಸಿ ಸೋತುಹೋದರು. ಕೌರವ, ಕರ್ಣ ಮುಂತಾದವರೂ ಸೋತರು. ಕ್ಷತ್ರಿಯರು ಕೈ ಸೋತಾಗ ಬ್ರಾಹ್ಮಣರೂ ಭಾಗವಹಿಸಬಹುದು ಎಂದಾಯಿತು.

ಅಣ್ಣ ಧರ್ಮಜನ ಕಣ್ಸನ್ನೆಯಂತೆ ಬ್ರಾಹ್ಮಣವೇಷದ ಅರ್ಜುನ ಪಂಥಕ್ಕೆ ಅಣಿಯಾದ. ಹಲವರು ಹಲವು ರೀತಿಯ ಮಾತಾಡಿ ಲೇವಡಿ ಮಾಡಿದರು. ಅರ್ಜುನ ಮತ್ಸ್ಯಯಂತ್ರ ಭೇದಿಸಿ ದ್ರೌಪದಿಯನ್ನು ಗೆದ್ದ. ಕೌರವನ ಪ್ರಚೋದನೆಯಂತೆ ಯುದ್ಧಕ್ಕೆ ಬಂದ ರಾಜರುಗಳನ್ನೆಲ್ಲ ಭೀಮಾರ್ಜುನರು ಸದೆಬಡಿದರು. ನಂತರ ದ್ರೌಪದಿಯೊಡನೆ ತಾವು ಉಳಿದುಕೊಂಡಿದ್ದ ಕುಂಬಾರನ ಮನೆಗೆ ಬಂದರು. ದ್ರೌಪದಿಯನ್ನು ಹೊರಗೆ ನಿಲ್ಲಿಸಿ ಒಳಗೆ ಬಂದ ಐವರೂ ತಾಯಿಯ ಪಾದಕ್ಕೆರಗಿ ದಿವ್ಯ ಮೌಕ್ತಿಕವೊಂದನ್ನು ತಂದಿದ್ದೇವೆ ಎಂದರು. [ದೇವಿದಾಸನ ಪ್ರಸಂಗಕೃತಿಯಲ್ಲಿ ಆಯತಾಕ್ಷಿಯೆಂಬಮೋಘ ಮೌಕ್ತಿಕವ ನಾನು ತಂದೆ ಎಂದು ಅರ್ಜುನ ಹೇಳುತ್ತಾನೆ]. ಅದನ್ನು ಕೇಳಿದ ತಾಯಿಕುಂತಿ ಐವರೂ ಸಮವಾಗಿ ವಿನಯದಿಂದ  ಹಂಚಿಕೊಳ್ಳಿ ಎಂದು ಬಿಟ್ಟಳು. ಮಾತೆಯ ಮಾತು ತಪ್ಪದ ಪಾಂಡವರು ಐವರೂ ದ್ರೌಪದಿಯನ್ನು ಮದುವೆಯಾದರು. ಧೃಷ್ಟದ್ಯುಮ್ನ ಮರೆಯಲ್ಲಿ ನಿಂತು ಎಲ್ಲ ವಿದ್ಯಮಾನಗಳನ್ನು ಗಮನಿಸಿದ. ಅವರು ಪಾಂಡವರೇ ಎಂಬುದು ಅವನಿಗೆ ಖಾತ್ರಿಯಾಯಿತು. ದ್ರುಪದನಿಗೆ ಎಲ್ಲವನ್ನೂ ವಿವರಿಸಿದ. ನಂತರ ವೈಭವದಿಂದ ವಿವಾಹ ಮಹೋತ್ಸವ ಜರುಗಿತು. ವ್ಯಾಸಮುನಿ ಬಂದು ಶಿವ ಪಂಚಮುಖದಿಂದ ವರಕೊಟ್ಟಿದ್ದರಿಂದ ದ್ರೌಪದಿ ಪಂಚವಲ್ಲಭೆಯಾಗಲೇ ಬೇಕು ಎಂದನು. ಎಂಬಲ್ಲಿಗೆ ಹಟ್ಟಿಯಂಗಡಿಯ ರಾಮಭಟ್ಟನ ದ್ರೌಪದಿ ಸ್ವಯಂವರ ಮಂಗಲವಾಗುತ್ತದೆ.

ಇಂದು ರಂಗಸ್ಥಳದಲ್ಲಿ ಬಳಕೆಯಾಗುವುದು ರಾಮಭಟ್ಟನ ದ್ರೌಪದಿ ಸ್ವಯಂವರವೇ ಹಿಡಿಂಬಾಸುರವಧೆ, ಹಿಡಿಂಬಾವಿವಾಹ, ಬಕಾಸುರ ವಧೆ, ದ್ರೌಪದಿ ಸ್ವಯಂವರ ಇವೆಲ್ಲ ಬಿಡಿಯಾಗಿಯೂ ಇಡಿಯಾಗಿಯೂ ರಂಗಸ್ಥಳದಲ್ಲಿ ಪ್ರದರ್ಶನಗೊಳ್ಳುವ ಪರಂಪರೆಯಿದೆ. ಒಂದು ಕಾಲದಲ್ಲಿ ಹಿಡಿಂಬಾ ವಿವಾಹ-ಬೇಡರಕಣ್ಣಪ್ಪ ಅತ್ಯಂತ ಜನಪ್ರಿಯವಾದ ಪ್ರದರ್ಶನ. ಮಾಯಾ ಹಿಡಿಂಬೆಯ ಪಾತ್ರಪರಂಪರೆ ಅನೂಚಾನವಾಗಿದೆ. ಕೃತಿಯಲ್ಲಿ ಹಲವು ಸಾಂಪ್ರದಾಯಿಕ ಮಟ್ಟುಗಳು ಪದ್ಯಗಳಿವೆ.

* * *

. ಸುಭದ್ರಾ ಕಲ್ಯಾಣ

ದು ಹಟ್ಟಿಯಂಗಡಿ ರಾಮಭಟ್ಟರ ಪ್ರಸಂಗ ಕೃತಿಗಳಲ್ಲೊಂದು. ಇವರು ಪ್ರಮುಖ ಪ್ರಸಂಗ ಕರ್ತರಲ್ಲಿ ಒಬ್ಬರು. ಸಂಖ್ಯೆಯ ದೃಷ್ಟಿಯಿಂದ ಇವರನ್ನು ಮೀರಿಸಿದ ಪ್ರಸಂಗಕರ್ತರಿಲ್ಲವೆಂದೇ ಹೇಳಬೇಕು ಎಂದು ಡಾ.ಕಾರಂತರು ಹೇಳಿದ್ದರೂ ಹಲಸಿನ ಹಳ್ಳಿ ನರಸಿಂಹಶಾಸ್ತ್ರಿ, ಮೈಸೂರಿನ ಅಳಿಯ ಲಿಂಗರಾಜ ಇವರಿಗಿಂತ ಹೆಚ್ಚಿನ ಸಂಖ್ಯೆಯ ಪ್ರಸಂಗಕೃತಿಗಳನ್ನು ರಚಿಸಿದ್ದಾರೆ.

ಕಥಾಪರಿಚಯ : ರಾಮಭಟ್ಟ ಕುಂದಾಪುರ ತಾಲೂಕಿನ ಹಟ್ಟಿಯಂಗಡಿಯ ಲೋಕನಾಥ ದೇವಾಲಯದ ಅರ್ಚಕರ ಮನೆತನಕ್ಕೆ ಸೇರಿದವ. ತನ್ನ ಎಲ್ಲ ಪ್ರಸಂಗ ಕೃತಿಗಳಲ್ಲಿ ಆತ ಸ್ಪಷ್ಟವಾದ ಮಾಹಿತಿ ನೀಡಿರುವುದರಿಂದ ಅವನ ವಾಸಸ್ಥಳ ಮತ್ತು ಇನ್ನಿತರ ವಿಷಯಗಳಲ್ಲಿ ಅಷ್ಟೊಂದು ಗೊಂದಲವಿಲ್ಲ. ಡಾ. ಶಿವರಾಮ ಕಾರಂತರು ಇವನ ಕಾಲವನ್ನು ಸುಮಾರು ಕ್ರಿಸ್ತ ಶಕ ೧೬೫೦ ಎಂದು ತೀರ್ಮಾನಿಸಿದ್ದಾರೆ. ಆದರೆ ಇವನ ವಿಷಯದಲ್ಲಿ ಐರೋಡಿ ಶಿವರಾಮಯ್ಯನವರ ಯಕ್ಷಗಾನೋಜ್ಜೀವಕರಾದ ಹಟ್ಟಿಂಗಡಿ ರಾಮಭಟ್ಟರು ಬರೆಹದಲ್ಲಿ ರಾಮಭಟ್ಟರ ಜನನ ಕಾಲವೇ ೧೭೯೪ ಎಂದು ಹೇಳಿದ್ದಾರೆ. ಇದನ್ನು ಡಾ. ಕಾರಂತರು ಒಪ್ಪುವುದಿಲ್ಲ. ಕ್ರಿ.ಶ. ೧೭೧೬ ಮತ್ತು ೧೭೨೨ರ ಸುಭದ್ರಾ ಕಲ್ಯಾಣದ ತಾಡವಾಲೆಯ ಪ್ರತಿ ಸಿಗುವುದರಿಂದ ರಾಮಭಟ್ಟ ತೀರಿಕೊಂಡಿದ್ದೇ ೧೬೭೪ರಲ್ಲಿ ಎನ್ನುತ್ತಾರೆ. ಆತ ಅರವತ್ತು ವರ್ಷಗಳ ಕಾಲ ಬದುಕಿದ್ದನೆಂದೂ ಹುಟ್ಟಿದ ತಿಥಿ ಮಾಸ ಸಂವತ್ಸರದಲ್ಲಿಯೇ ಸತ್ತನೆಂದೂ ಹೇಳುತ್ತಾರೆ. ಈ ಲೆಕ್ಕದಲ್ಲಿ ಆತ ೧೬೭೪ರಲ್ಲಿ ಹುಟ್ಟಿ ೧೭೩೪ರಲ್ಲಿ ತೀರಿಕೊಂಡಿರಬಹುದು.

ಈತ ಹವ್ಯಕ ಬ್ರಾಹ್ಮಣ ಕುಲದವ. ತಂದೆ ಸೂರಭಟ್ಟ, ಬಸರೂರಿನ ಸೂರದೀಕ್ಷಿತರಲ್ಲಿ ಪ್ರೌಢಪಾಠದ ಸಂಸ್ಕಾರವಾಯಿತು. ಕಾವ್ಯ ಮತ್ತು ನಾಟಕಗಳ ಶಿಕ್ಷಣವೂ ಸಿಕ್ಕಿತು. ಕೊಲ್ಲೂರಿನ ಗೋವಿಂದರಾಮ ಎಂಬವರಿಂದ ತತ್ವೋಪದೇಶ ಪಡೆದ, ಘಟ್ಟದ ಮೇಲಿನ ಹನ್ನರ ಮಾಗಣೆಯ ಬೈಸಗಲ್ ಶಂಕರಯ್ಯನಿಂದ ಹಲವು ವಿಷಯಗಳ ಮಾಹಿತಿಯನ್ನೂ ಪಡೆದ. ಈತ ಕಾವ್ಯರಚನಾಶಕ್ತಿ ಪಡೆಯಲು ಶಂಕರಯ್ಯನ ಒಡನಾಟವೇ ಕಾರಣವಂತೆ. ಶ್ರೀರಾಮ ದೇವರ ಜೋಗುಳಪದ ಪದ್ಯಮಾಲಿಕೆಯನ್ನು ರಚಿಸಿದ್ದಾನೆ. ತಕ್ಷಣದ ಘಟನೆಗಳಿಗೂ ಛಂದೋಬದ್ಧ ರಚನೆಯ ಮೂಲಕ ಪ್ರತಿಕ್ರಿಯಿಸಬಲ್ಲ ಶಕ್ತಿಯುಳ್ಳವ. ಅಂಥ ಒಂದೆರಡು ಸಂದರ್ಭಗಳನ್ನೂ ಐರೋಡಿ ಶಿವರಾಮಯ್ಯನವರೂ ಪ್ರಸ್ತಾಪಿಸಿದ್ದಾರೆ. ಒಳ್ಳೆಯ ಪ್ರವಚನಕಾರ.

ಇವರು ರಚಿಸಿದ ಪ್ರಸಂಗಗಳಲ್ಲಿ ಅಚ್ಚಾದವೂ ಇವೆ, ಅಚ್ಚಾಗದವೂ ಇವೆ. ಲವಕುಶಕಾಳಗ, ದ್ರೌಪದಿ ಸ್ವಯಂವರ, ಅತಿಕಾಯ ಕಾಳಗ, ಧ್ರುವಚರಿತ್ರೆ, ರತಿ ಕಲ್ಯಾಣ, ಕಂಸವಧೆ ಬಿಲ್ಲ ಹಬ್ಬ, ದ್ರೌಪದಿ ವಸ್ತ್ರಾಪಹರಣ, ರಾಜಸೂಯ, ಸುಲೋಚನ ಚರಿತ್ರೆ, ಸೇತುಮಾಧವ, ಶೇಷಗರ್ವಾಪಹರಣ, ಗಿರಿಜಾವಿಲಾಸ, ಇಂದ್ರಜಿತುಕಾಳಗ ಇವೆಲ್ಲ ಅವನಿಂದ ರಚಿತವಾದ ಪ್ರಸಂಗಕೃತಿಗಳು. ಈತ ರಚಿಸಿರಬಹುದಾದ ಇನ್ನಿತರ ಪ್ರಸಂಗಕೃತಿಗಳ ಸಂಶೋಧನೆ, ಎಲ್ಲ ಪ್ರಸಂಗಕೃತಿಗಳುಳ್ಳ ಸಂಪುಟದ ಪ್ರಕಟಣೆ, ಸಮಗ್ರ ಅಧ್ಯಯನ ನಡೆದಲ್ಲಿ ಇವನ ವ್ಯಕ್ತಿತ್ವದ ಕುರಿತು, ಸಾಮರ್ಥ್ಯದ ಕುರಿತು ಹೊಸ ಆಲೋಚನೆಗಳು ಸಾಧ್ಯವಾಗಬಹುದು. ಯಕ್ಷಗಾನದ ಸಮರ್ಥ ಕವಿ ; ಅವನ ಪ್ರಸಂಗಕೃತಿಗಳಲ್ಲಿ ರಂಗಗುಣವಿದೆ. ಕರ್ಣಾಟಕ ಕವಿ ಚರಿತೆಯ ಮೂರನೆಯ ಸಂಪುಟದಲ್ಲಿ ಈತನ ಕಾಲ, ಕುಲ ಹಾಗೂ ಇನ್ನಿತರ ಸಂಗತಿಗಳ ಬಗ್ಗೆ ಬರೆದ ಮಾಹಿತಿಗಳು ಸರಿಯಾಗಿಲ್ಲ ಎಂಬುದನ್ನು ಡಾ.ಆನಂದರಾಮ ಉಪಾಧ್ಯಾಯ ಎತ್ತಿ ತೋರಿಸಿದ್ದಾರೆ.

ಕಥಾಸಾರ : ಸುಭದ್ರಾಕಲ್ಯಾಣ ಪ್ರಸಂಗಕೃತಿಯಲ್ಲಿ ಮುಖ್ಯವಾಗಿರುವುದು ಭಾರತ ಕಥಾಬ್ಧಿಯೊಳ್ ವನಜಾಂಬಕಂ ಕೃಪೆಯೊಳೊಲಿದು ತನ್ನನುಜೆ ಸೌಭದ್ರೆಯಂ ಫಲಗುಣಂಗೆ ವಿನುತ ವೈವಾಹಮಂ ವಿರಚಿಸುದುದು. [ಭಾರತಕಥಾಸಮುದ್ರದಲ್ಲಿ ಕೃಷ್ಣನು ಅನುಗ್ರಹದಿಂದ ತಂಗಿ ಸೌಭದ್ರೆಯನ್ನು ಅರ್ಜುನನಿಗೆ ವಿವಾಹ ಮಾಡಿಸಿದ್ದು]. ಇದಕ್ಕೆ ಪೂರಕವಾಗಿ ಹಲವು ಘಟನೆಗಳು ಬರುತ್ತವೆ.

ಅರಗಿನಾಲಯದ ಪ್ರಕರಣ, ದ್ರೌಪದೀ ಸ್ವಯಂವರ ಮುಂತಾದವೆಲ್ಲ ಮುಗಿದ ಮೇಲೆ ಪಾಂಡವರೆಲ್ಲ ಇಂದ್ರಪ್ರಸ್ಥದಲ್ಲಿ ಸಂತೋಷವಾಗಿ ಇರುವಲ್ಲಿಂದ ಸುಭದ್ರಾ ಕಲ್ಯಾಣದ ಕಥೆ ತೊಡಗುತ್ತದೆ. ಆಗ ಪಾಂಡವರಲ್ಲಿಗೆ ನಾರದ ಬಂದ. ಒಬ್ಬೊಬ್ಬರು ಒಂದೊಂದು ವರ್ಷ ದ್ರೌಪದಿಯ ಪತಿಗಳಾಗಬೇಕೆಂದೂ  ಆ ಅವಧಿಯಲ್ಲಿ ಪಾಂಡವರೊಳಗೆ ಇತರರು ಯಾವುದೇ ಕಾರಣಕ್ಕಾಗಿ ಸಜ್ಜೆ ಮನೆಯನ್ನು ಪ್ರವೇಶಿಸಿದರೆ ಒಂದು ವರ್ಷ ತೀರ್ಥಯಾತ್ರೆ ಮಾಡಬೇಕೆಂದೂ ನಿರ್ಬಂಧ ಮಾಡಿಸಿದ.

ದ್ರೌಪದಿ ಧರ್ಮರಾಜನ ಪತ್ನಿಯಾಗಿದ್ದ ಅದೇ ಅವಧಿಯಲ್ಲಿ ಕಳ್ಳರು ಅಗ್ರಹಾರವನ್ನು ದೋಚಿಬಿಟ್ಟರು. ಅಗ್ರಹಾರವಾಸಿಗಳು ರಕ್ಷಣೆಗಾಗಿ ಅರ್ಜುನನ ಮೊರೆ ಹೊಕ್ಕರು. ಚೋರರನ್ನು ನಿಗ್ರಹಿಸಲು ಅರ್ಜುನ ಆಯುಧಗಳಿಗಾಗಿ ಶಯ್ಯಾಗೃಹವನ್ನು ಪ್ರವೇಶಿಸಲೇ ಬೇಕಾಯಿತು. ಕಳ್ಳರನ್ನು ನಿಗ್ರಹಿಸಿದ ಅರ್ಜುನ ನಿಯಮದಂತೆ ಒಂದು ವರ್ಷದ ತೀರ್ಥಾಟನೆಗೆ ಹೊರಟೇ ಬಿಟ್ಟ. ಸಂಚರಿಸುತ್ತ ಅರ್ಜುನ ಪಶ್ಚಿಮದ ಸಮುದ್ರ ತಡಿಗೆ ಬಂದ. ಅಲ್ಲಿ ಮುದಿಕಪಿ ತ್ರೇತಾಯುಗದ  ಸೇತುವೆಯನ್ನು ಕಾಯುತ್ತ ಕುಳಿತಿತ್ತು. ಆತ ಹನುಮಂತನೆಂದು ತಿಳಿದಾಗ ಅವರಿಬ್ಬರಲ್ಲಿಯೂ ಸೇತುವನ್ನು ಕಟ್ಟುವ ಮತ್ತು ಮುರಿಯುವ ವಿಷಯದಲ್ಲಿ ಪಂಥ ಏರ್ಪಟ್ಟಿತು. ಅರ್ಜುನ ತನ್ನ ಬಾಣದಿಂದ ಮೂರು ಬಾರಿ ಸೇತುವನ್ನು ನಿರ್ಮಿಸಿದರೂ ಹನುಮಂತ ಅದನ್ನು ಮುರಿದು ಬಿಟ್ಟ. ಸೋತ ಅರ್ಜುನ ಪಂಥದಂತೆ ಅಗ್ನಿಕುಂಡಕ್ಕೆ ಹಾರಿ ಆತ್ಮತ್ಯಾಗ ಮಾಡಲು ಅನುವಾದ. ಅಷ್ಟರಲ್ಲಿ ಬ್ರಾಹ್ಮಣ ರೂಪದಲ್ಲಿ ಅಲ್ಲಿಗೆ ಬಂದ. ತನ್ನೆದುರಿಗೆ ಪಂಥ ಇನ್ನೊಮ್ಮೆ ನಡೆಯಬೇಕೆಂದು ಹೇಳಿ ಅರ್ಜುನ ಕಟ್ಟಿದ ಸೇತುಗೆ ಕೂರ್ಮರೂಪದಲ್ಲಿ ಆಧಾರವಾಗಿ ನಿಂತ. ಪಂಥದಲ್ಲಿ ಸೋತು ದುಃಖಿಸುತ್ತಿರುವ ಹನುಮಂತನಿಗೆ ಕೃಷ್ಣ ತನ್ನ ರಾಮರೂಪ ತೋರಿದ. ಕೃಷ್ಣಾವತಾರದಲ್ಲಿ ಅರ್ಜುನ ತನ್ನ ಸಖನೆಂದೂ ಆತ ನೆನೆದಾಗ ಬಂದು ಹನುಮಂತನೂ ಅರ್ಜುನನ ಶೌರ್ಯದಲ್ಲಿ ನೆರವಾಗಬೇಕೆಂದೂ ಒಡಂಬಡಿಸಿದ. ಅಲ್ಲಿಂದ ಚಿತ್ರಾಂಗದೆಯನ್ನೂ ಮಡದಿಯನ್ನಾಗಿ ಸ್ವೀಕರಿಸುವಲ್ಲಿಗೆ ಅರ್ಜುನನ ತೀರ್ಥ ಯಾತ್ರೆಯ ಎರಡು ತಿಂಗಳ ಅವಧಿ ಮುಗಿಯುತ್ತದೆ.

ಅರ್ಜುನ ದ್ವಾರಕೆಗೆ ಬಂದ. ಅಷ್ಟರಲ್ಲಿ ಮಳೆಗಾಲ ಪ್ರಾರಂಭವಾಗಿಬಿಟ್ಟಿತು. ಆ ಅವಧಿಯಲ್ಲಿ ಕಳೆಯುವುದು ಅರ್ಜುನನಿಗೆ ಸಮಸ್ಯೆಯಾಯಿತು. ಯತಿವೇಷ ಧರಿಸಿದ ಆತ ದ್ವಾರಕೆಯ ಹೊರವಲಯದ ಉದ್ಯಾನವನದಲ್ಲಿ ಕುಳಿತು ಕೃಷ್ಣನನ್ನು ಧ್ಯಾನಿಸತೊಡಗಿದ. ಅಲ್ಲಿಗೆ ಬಂದ ಕೃಷ್ಣ  ಅರ್ಜುನನಿಗೆ ಮುಂದೆ ಅನುಸರಿಸಬೇಕಾದ ಉಪಾಯಗಳನ್ನೆಲ್ಲ ಸೂಚಿಸಿದ. ಅರ್ಜುನನ ಆಸೆಗಳೆಲ್ಲ ಈಡೇರುತ್ತವೆಯೆಂದು ಆಶೀರ್ವದಿಸಿದ.

ಹೊರವಲಯದ ಉದ್ಯಾನವನದಲ್ಲಿ ಮಹಾಮಹಿಮರಾದ ಯತಿಯೋರ್ವರು ತಂಗಿದ್ದಾರೆಂಬ ಸುದ್ದಿ ವನಪಾಲಕರಿಂದ ಬಲರಾಮನಿಗೆ ತಿಳಿಯಿತು. ಆತ ಯತಿಯನ್ನು ಚಾತುರ್ಮಾಸಕ್ಕಾಗಿ ಅರಮನೆಗೇ ಕರೆತಂದ. ಸುಭದ್ರೆಯನ್ನೇ ಯತಿ ಅರ್ಜುನನ ಸೇವೆಗೆ ನಿಯಮಿಸಿದ. ಕೃಷ್ಣ ಆಕ್ಷೇಪಿಸಿದರೂ ಬಲರಾಮ ಲಕ್ಷಿಸಲಿಲ್ಲ.

ಹೀಗೆ ಇರುವಾಗಲೇ ಬಲರಾಮ ತನ್ನ ತಂಗಿ ಸೌಭದ್ರೆಯನ್ನು ಕೌರವನಿಗೆ ಮದುವೆ ಮಾಡಿಕೊಡಲು ನಿಶ್ಚಯಿಸಿದ. ಗಾರ್ಗ್ಯನ ಮೂಲಕ ಕೌರವನಿಗೆ ನಿರೂಪಕಳಿಸಿದ, ಕೌರವ ಸಂತೋಷದಿಂದ ಒಪ್ಪಿದ. ಗಾರ್ಗ್ಯ ಮರಳಿಬಂದು ಕೌರವ ಮದುವೆಗೆ ಒಪ್ಪಿದುದನ್ನು ತಿಳಿಸಿದ. ದ್ವಾರಕೆಯಲ್ಲಿ ವಿವಾಹದ ಸಿದ್ಧತೆ ವೈಭವದಿಂದ ತೊಡಗಿತು. ಪುರವನ್ನೆಲ್ಲ ಶೃಂಗರಿಸಲಾಯಿತು. ಈ ಸಂಗತಿಯನ್ನು ಸಖಿ ಕಲಾವತಿ ಸುಭದ್ರೆಗೆ ತಿಳಿಸಿದಳು. ಸುಭದ್ರೆ ದುಃಖಿತಳಾದಳು. ಅರ್ಜುನನನ್ನೇ ವಿವಾಹವಾಗುವುದೆಂದು ನಿರ್ಧರಿಸಿದಳು. ಇದನ್ನು ತಿಳಿದ ವಸುದೇವ ಬಲರಾಮನಿಗೆ ತಿಳಿಸಿದ. ಆತ ತಿರಸ್ಕರಿಸಿ ಬಿಟ್ಟ. ಸುಭದ್ರೆಗೆ ದುಃಖ ಹೆಚ್ಚಾಯಿತು. ಆಗ ನಾರದ ಬಂದು ಆಕೆಗೆ ಸಮಾಧಾನ ಹೇಳಿ ಆಕೆ ಅರ್ಜುನನನ್ನೇ ಮದುವೆಯಾಗುತ್ತಾಳೆಂದು ಭರವಸೆ ನೀಡಿದ.  ಈ ಕಡೆಯಲ್ಲಿ ಕೌರವನ ದಿಬ್ಬಣ ಹಸ್ತಿನಾವತಿಯಿಂದ ದ್ವಾರಕೆಗೆ ಹೊರಟಿತು. ಮದುವೆಗಾಗಿ ಮಗಧ ದೇಶದಿಂದ ಮಾಗಧನೂ ಆಗಮಿಸಿದ. ವಧುವಾಗಿ ಸುಭದ್ರೆಯೂ ಶೃಂಗಾರಗೊಂಡಳು. ಯತಿಗಳಿಗೆ ವಂದಿಸಿಬರುವಂತೆ ಬಲರಾಮ ಸುಭದ್ರಗೆ ಆದೇಶಿಸಿದ. ಸುಭದ್ರೆಗೆ ಯತಿರೂಪದ ಅರ್ಜುನ ತನ್ನ ನಿಜರೂಪ ತೋರಿಸಿದ. ಅಲ್ಲಿಯೇ ಸುಭದ್ರೆ ಅವನನ್ನು ವರಿಸಿದಳು. ಕೌರವನ ದಿಬ್ಬಣಕ್ಕೂ ಅನೇಕ ಬಗೆಯ ಅಪಶಕುನಗಳಾದವು. ಅರ್ಜುನ ಹನುಮಂತನನ್ನು ನೆನೆದಾಗ ಆತ ಬಂದು, ಅರ್ಜುನ-ಸುಭದ್ರೆಯರನ್ನು ಹೆಗಲಸೇರಿಸಿಕೊಂಡು ಹೊರಟ. ಯಾದವರು ಅರ್ಜುನನ್ನು ತಡೆದರು. ಯುದ್ಧ ತೊಡಗಿತು. ಕರ್ಣಾರ್ಜುನರೂ ಯುದ್ಧ ಮಾಡಿಕೊಂಡರು. ಹನುಮಂತನ ಮಂತ್ರಪೂತ ರೋಮವನ್ನು ಅರ್ಜುನ ಪ್ರಯೋಗಿಸಿದಾಗ ಯಾದವರೆಲ್ಲ ಸಮ್ಮೋಹನಕ್ಕೊಳಗಾದರು. ಬಲರಾಮನೂ ಅರ್ಜುನನೊಡನೆ ಸೆಣಸಿದ. ಬಲಭದ್ರನ ಮುಸಲಾಯುಧವನ್ನು ಹನುಮಂತ ಕಸಿದು ಶರಧಿಗೆ ಎಸೆದು ಬಿಟ್ಟ. ಕೃಷ್ಣ ಪ್ರವೇಶಿಸಿ ಬಲರಾಮನನ್ನು ಛೇಡಿಸುತ್ತ ವಿವಾಹಕ್ಕೆ ಒಪ್ಪಿಸಿದ. ಕೌರವ ಅವಮಾನಿತನಾಗಿ ನಿರ್ಗಮಿಸಿದ. ಅರ್ಜುನ ತೀರ್ಥಯಾತ್ರೆಯನ್ನೂ ಮುಗಿಸಿ ಸುಭದ್ರೆಯೊಡನೆ ಇಂದ್ರಪ್ರಸ್ಥಕ್ಕೆ ಬಂದ. ಎಂಬಲ್ಲಿಗೆ ಸುಭದ್ರಾ ಕಲ್ಯಾಣ ಮಂಗಲವಾಗುತ್ತದೆ.

ಪ್ರಸಂಗ ಕೃತಿಯ ವಿಶೇಷತೆ : ಯಕ್ಷಗಾನ ಸುಭದ್ರಾ ಕಲ್ಯಾಣ ಪ್ರಸಂಗಕೃತಿಗೆ ವಿಶಿಷ್ಟವಾದ ರಂಗಚರಿತ್ರೆಯಿದೆ. ಪಡುವಲ ಪಾಯದ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಸುಭದ್ರಾ ಕಲ್ಯಾಣದ ಬಲರಾಮ ಮತ್ತು ಕೃಷ್ಣನ ಜೋಡಿ ಪಾತ್ರಗಳಿಗೆ ಕಾಲಕ್ರಮದಲ್ಲಿ ಹಲವರು ಹೆಸರು ಮಾಡಿ ಪರಂಪರೆಯನ್ನು ಸ್ಥಾಪಿಸಿದ್ದಾರೆ. ಪೂರ್ಣರಾತ್ರಿಯ ಪ್ರದರ್ಶನ ವ್ಯವಸ್ಥೆಯಲ್ಲಿ ಶರಸೇತುಬಂಧನವನ್ನೂ ಸೇರಿಸಿದಂತೆ ಇಡಿಯದನ್ನು ಆಡುವ ಕ್ರಮವಿತ್ತು. ಕಾಲಕ್ರಮದಲ್ಲಿ ಶರಸೇತು ಬಂಧನವನ್ನು ಪ್ರತ್ಯೇಕವಾಗಿಯೂ ಸುಭದ್ರಾ ಕಲ್ಯಾಣವನ್ನು ಪ್ರತೇಕವಾಗಿಯೂ ಬೇರೆ-ಬೇರೆ ಹೆಸರಿನಲ್ಲಿ ಆಡುವ ಕ್ರಮ ಬಳಕೆಯಲ್ಲಿ ಬಂದಿದೆ. ಶರಸೇತುಬಂಧನದ ಸಂದರ್ಭಕ್ಕೆ ತ್ರೇತಮತ್ತು ದ್ವಾಪರದ ಯುಗ ಸಂಬಂಧದ ಉದ್ದೇಶವಿದ್ದರೆ ಸುಭದ್ರ ಕಲ್ಯಾಣ ಸಂದರ್ಭ ಮೇಲುನೋಟಕ್ಕೆ ಒಂದು ಪ್ರಹಸನವೆಂದಾದರೆ ಅದರ ಆಯಾಮದಲ್ಲಿ ಧರ್ಮ ಮತ್ತು ರಾಜಕಾರಣದ ಸಂಬಂಧದ ವ್ಯಾಖ್ಯಾನವೂ ಹೊರೆದುಕೊಳ್ಳುತ್ತದೆ.

ತಂಗಿ ಬಾರವ್ವ ಸುಭದ್ರೆ, ಹೀಗೆ ಪೇಳುವರೆ ತಂಗಿ ಮುಂತಾದ ಪದ್ಯಗಳ ಸಾಂಪ್ರದಾಯಿಕ ಮಟ್ಟು ಮತ್ತು ನಡೆ ತೀರ ಜನಪ್ರಿಯವಾಗಿದೆ. ನಂತರದ ಮುದ್ದಣನಂಥ ಪ್ರಸಂಗಕಾರನ ಮೇಲೆ ಈ ಕೃತಿಯ ಪ್ರಭಾವ ಎದ್ದು ಕಾಣುತ್ತದೆ.

* * *

. ಯಕ್ಷಗಾನ ಖಾಂಡವವನ ದಹನ

ಮಹಾಭಾರತದ ಕಥಾ ಸಂದರ್ಭವನ್ನು ಬಳಸಿಕೊಂಡು ರಚನೆಯಾದ ಪ್ರಸಂಗಗಳಲ್ಲಿ ಯಕ್ಷಗಾನ ಖಾಂಡವವನ ದಹನವೂ ಒಂದು. ಒಂದೇ ಘಟನೆಯನ್ನಿಟ್ಟುಕೊಂಡ ಪುಟ್ಟ ಪ್ರಸಂಗಕೃತಿ.

ಕಥಾಸಾರ : ಖಾಂಡವ ವನ ಇಂದ್ರನ ಉದ್ಯಾನವನಗಳಲ್ಲೊಂದು. ಈ ವನದಲ್ಲಿ ಅಜೀರ್ಣವನ್ನು ಹೋಗಲಾಡಿಸುವ ಉತ್ತಮ ಮೂಲಿಕೆಗಳಿದ್ದವು. ಒಮ್ಮೆ ವರುಣಲೋಕದಲ್ಲಿ ಹನ್ನೆರಡು ವರ್ಷಗಳವರೆಗೆ ಒಂದು ಯಜ್ಞನಡೆದುದರಿಂದ ಅಗ್ನಿದೇವನ ಜೀರ್ಣ ಶಕ್ತಿಕುಂದಿ ಅಗ್ನಿಮಾಂದ್ಯವಾಗಿ ಬಿಟ್ಟಿತು. ಖಾಂಡವ ವನದಲ್ಲಿದ್ದ ಗಿಡಮೂಲಿಕೆಗಳನ್ನು ಸೇವಿಸಿದರೆ ಅಜೀರ್ಣ ನಿವಾರಣೆಯಾಗುವುದೆಂದು ಅಶ್ವಿನಿ ದೇವತೆಗಳು ಅಗ್ನಿಗೆ ಹೇಳಿದ್ದರು. ಪಾಂಡವರು ಇಂದ್ರಪ್ರಸ್ಥದಲ್ಲಿದ್ದಾಗ ಕೃಷ್ಣನೂ ಅಲ್ಲಿಗೆ ಬಂದಿದ್ದ. ಕೃಷ್ಣ ಅರ್ಜುನನೊಂದಿಗೆ ಖಾಂಡವ ವನಕ್ಕೆ ಬೇಟೆಗೆಂದು ಹೋದ. ಅಲ್ಲಿಗೆ ಅಜೀರ್ಣ ರೋಗದಿಂದ ಬಳಲುತ್ತಿದ್ದ ಅಗ್ನಿ ಬ್ರಾಹ್ಮಣ ವೇಷಧರಿಸಿ ಬಂದು ಖಾಂಡವ ವನವನ್ನು ದಹಿಸಿ ಕೊಡುವಂತೆ ಕೃಷ್ಣನಿಂದ ವರಪಡೆದ. ಅರ್ಜುನನ ಬಾಣ ಪ್ರಯೋಗದಿಂದ ಖಾಂಡವ ವನ ಸುಡತೊಡಗಿತು. ಸರ್ಪರಾಜ ತಕ್ಷಕನ ಮಗ ಅಶ್ವಸೇನನೆಂಬ ಸರ್ಪ ತಪ್ಪಿಸಿಕೊಂಡು ಕರ್ಣನ ಬತ್ತಳಿಕೆ ಸೇರಿತು. ಇದೇ ಖಾಂಡವವ ವನದಲ್ಲಿ ಮಯ ಎನ್ನುವ ಒಬ್ಬ ರಾಕ್ಷಸ ಶಿಲ್ಪಿ ವಾಸವಾಗಿದ್ದ. ಇವನನ್ನೂ ಅರ್ಜುನ ರಕ್ಷಿಸಿದ. ಕೃತಜ್ಞತೆಗಾಗಿ ಈತ ಪಾಂಡವರಿಗೆ ಇಂದ್ರಪ್ರಸ್ಥದಲ್ಲಿ ವಿಸ್ಮಯ ಪೂರ್ಣವಾದ ಸಭೆಯನ್ನು ನಿರ್ಮಿಸಿಕೊಟ್ಟ. ತನ್ನ ಉಪವನದ ರಕ್ಷಣೆಗೆ ಸ್ವತಃ ಇಂದ್ರನೇ ಬರಬೇಕಾಯಿತು. ಇಂದ್ರ ಮತ್ತು ಅರ್ಜುನನ ನಡುವೆ ಯುದ್ಧವಾಯಿತು. ಬ್ರಹ್ಮ ಪ್ರತ್ಯಕ್ಷನಾಗಿ ಸಂಧಾನ ಏರ್ಪಡಿಸಿದ. ಅಗ್ನಿ ಸುಪ್ರೀತನಾಗಿ ಕೃಷ್ಣಾರ್ಜುನರಿಗೆ ರಥ, ಧನುಸ್ಸು, ಅಕ್ಷಯ ತೂಣೀರ, ಗದೆಗಳನ್ನು ನೀಡಿದ. ಎಂಬಲ್ಲಿಗೆ ಕಥೆಗೆ ಮಂಗಲ.

ಪ್ರಸಂಗಕಾರರು : ಈ ಕೃತಿಯನ್ನು ರಚಿಸಿದವ ಗಣಪಯ್ಯ. ಈತ ದಕ್ಷಿಣ ಕನ್ನಡಜಿಲ್ಲೆಯ ಪುತ್ತೂರು ತಾಲೂಕಿನ ಪಂಚಸೀಮೆಯ ಚೊಕಾಡಿಯೊಲ್ಲಿರುವ ಸುಬ್ರಹ್ಮಣ್ಯ ಎಂಬವರ ಮಗ. ನಳಸಂವತ್ಸರದಲ್ಲಿ ಜನಿಸಿದವ. ಇಷ್ಟು ವಿಷಯಗಳನ್ನು ಇದೇ ಪ್ರಸಂಗ ಕೃತಿಯಲ್ಲಿ ಹೇಳಿಕೊಂಡಿದ್ದಾನೆ.

* * *

 ೧೦.  ಯಕ್ಷಗಾನ ರಾಜಸೂಯಾಧ್ವರ

ಹಾಭಾರತ ಕಥೆಯಲ್ಲಿ ಪಾಂಡವರು ನೆರವೇರಿಸಿದ ರಾಜಸೂಯ ಯಾಗದ ಆಚೆ ಮತ್ತು ಈಚಿನ ಸಂದರ್ಭಗಳನ್ನೊಳಗೊಂಡ ಒಟ್ಟು ನಾಲ್ಕು ಪ್ರಸಂಗಕೃತಿಗಳು ಈಗಿರುವ ಮಾಹಿತಿಯ ಪ್ರಕಾರ ರಚನೆಯಾಗಿವೆ. ಸೀತಾನದಿ ಗಣಪಯ್ಯ ಶೆಟ್ಟಿಯವರ ಜಗಜೆಟ್ಟಿ ಜರಾಸಂಧ, ರಾಮಭಟ್ಟನದಾಗಿರಬಹುದಾದ ರಾಜಸೂಯಾಧ್ವರ, ಕಲ್ಯಾಣ ಭೀಮರಾಯರ ರಾಜಸೂಯ ಮತ್ತು ಬಿಷ್ಟಪ್ಪಕವಿಯ ರಾಜಸೂಯ. ಇವುಗಳಲ್ಲಿ ರಾಮಭಟ್ಟನ ರಾಜಸೂಯಾಧ್ವರ ತೆಂಕಿನಲ್ಲಿ ಪ್ರದರ್ಶನಕ್ಕೆ ಬಳಕೆಯಾಗುತ್ತದೆ. ಬಡಗಿನಲ್ಲಿ ಬಹುಮಟ್ಟಿಗೆ ಬಿಷ್ಟಪ್ಪ ಕವಿಯ ರಾಜಸೂಯ ಯಾಗವೇ ಬಳಕೆಯಾಗುತ್ತದೆ. ಈ ಕೃತಿಯ ಪರಿಷ್ಕೃತ ಮುದ್ರಿಣದ ಒಳ್ಳೆಯ ಪ್ರತಿಯೂ ಇಂದು ಲಭ್ಯವಿಲ್ಲ. ಆದ್ದರಿಂದ  ಈ ಸಂಪುಟಕ್ಕೆ ಬಿಷ್ಟಪ್ಪಯ್ಯನ ರಾಜಸೂಯ ಪ್ರಸಂಗಕೃತಿಯನ್ನೇ ಬಳಸಿಕೊಳ್ಳಲಾಗಿದೆ.

ಕಥಾಪರಿಚಯ : ಮಗಧದ ಗಿರಿವ್ರಜದಲ್ಲಿ ಬ್ರಹದ್ರಥ ಆಳುತ್ತಿದ್ದ. ಕಲಾವತಿ ಭಾನುಮತಿಯರೆಂಬ ಪತ್ನಿಯರಿದ್ದರು. ಮಕ್ಕಳೇ ಇಲ್ಲವೆಂಬ ಚಿಂತೆ ಅವರನ್ನೆಲ್ಲ ಕಾಡುತ್ತಿತ್ತು. ಬೇಸರಗೊಂಡ ಮೂವರೂ ಅರಣ್ಯಕ್ಕೆ ಹೊರಟುಬಿಟ್ಟರು. ಅಲ್ಲಿ ವಿಶ್ವಾಮಿತ್ರ ಮುನಿ ಅನುಗ್ರಹಿಸಿದ ಮಾವಿನ ಹಣ್ಣನ್ನು ರಾಜ ಇಬ್ಬರೂ ರಾಣಿಯರಿಗೆ ಹಂಚಿಕೊಟ್ಟ. ಎರಡೂ ರಾಣಿಯರಿಗೆ ಸೀಳಾದ ಶಿಶು ಹುಟ್ಟಿಬಿಟ್ಟಿತು. ರಾಜನ ಆಜ್ಞೆಯಂತೆ ಸೀಳುಗಳೆರಡನ್ನೂ ಊರಾಚೆಗೆ ಎಸೆಯಲಾಯಿತು. ಜರೆ ಎನ್ನುವ ರಾಕ್ಷಸಿ ಸೀಳುಗಳನ್ನು ಕಂಡು ಅವನ್ನು ಸೇರಿಸಿ ರಾಜನಿಗೆ ತಂದುಕೊಟ್ಟು ಜರಾಸಂಧ ಎಂದು ಹೆಸರಿಟ್ಟು ಪೋಷಿಸಲು ಹೇಳಿದಳು. ಸಂತೋಷಗೊಂಡ ಅರಸ ಜರಾಸಂಧನನ್ನು ಪೋಷಿಸಿದ.

ಈ ಕಡೆ ಇಂದ್ರಪ್ರಸ್ಥದಲ್ಲಿ ಸಹೋದರರೊಂದಿಗೆ ಧರ್ಮರಾಜ ರಾಜ್ಯಭಾರ ಮಾಡುತ್ತಿದ್ದ. ಆ ಸ್ಥಾನಕ್ಕೆ ಬಂದ ನಾರದ ಪಾಂಡು ಚಕ್ರವರ್ತಿಯ ಸದ್ಗತಿಗೆ ರಾಜಸೂಯ ಮಾಡಬೇಕೆಂದು ಉಪದೇಶಿಸಿದ. ಸಹೋದರರನ್ನೂ ಶ್ರೀಕೃಷ್ಣನನ್ನೂ ಸಮಾಲೋಚಿಸಿ ಧರ್ಮರಾಜ ರಾಜಸೂಯ ಯಾಗವನ್ನು ನಿಶ್ಚಯಿಸಿದ. ಅಷ್ಟರಲ್ಲೇ ಮಾಗಧನ ಸೆರೆಯಲ್ಲಿದ್ದ ರಾಜರುಗಳೂ ತಮ್ಮನ್ನು ಬಂಧ ಮುಕ್ತಗೊಳಿಸುವಂತೆ ದೂತರ ಮೂಲಕ ಕೃಷ್ಣನನ್ನು ಬೇಡಿಕೊಂಡಿದ್ದರು. ಸೆರೆಬಿಡಿಸುವ ಭರವಸೆಕೊಟ್ಟು ಕಳಿಸಿದ್ದ. ಕೃಷ್ಣ ಇಂದ್ರಪ್ರಸ್ಥಕ್ಕೆ ಬಂದು ಪಾಂಡವರೊಂದಿಗೆ ರಾಜಸೂಯದ ಸಾಧಕ-ಬಾಧಕಗಳನ್ನು ವಿವರಿಸಿದ. ಜರಾಸಂಧ ಮುಂತಾದವರನ್ನು ಕೊಲ್ಲುವದು ಸುಲಭವಲ್ಲ ಎಂದ. ಎದೆಗುಂದಿದ ಭೀಮನಿಗೆ ಕೃಷ್ಣ ಭರವಸೆ ನೀಡಿದ. ಕೃಷ್ಣನ ನೆರವಿನೊಂದಿಗೆ ಜರಾಸಂಧನನ್ನು ವಧಿಸಲು ಭೀಮ ಮತ್ತು ಅರ್ಜುನ ಗಿರಿವ್ರಜಕ್ಕೆ ಹೊರಡುವುದು ಎಂದಾಯಿತು.

ಪ್ರಾಯಪ್ರಬುದ್ಧನಾದ ಜರಾಸಂಧ ಶಿವನಿಂದ ವರವನ್ನೂ ಪಡೆದು ಅನೇಕ ರಾಜರುಗಳನ್ನು ಸೆರೆಮನೆಯೊಳಗಿಟ್ಟು ದರ್ಪದಿಂದ ರಾಜ್ಯಭಾರ ಮಾಡುತ್ತಿದ್ದ. ಮಾಷನೆಂಬ ರಾಕ್ಷಸನ ಚರ್ಮದಿಂದ ನಗಾರಿ ಮಾಡಿಸಿ ಇಟ್ಟಿದ್ದ. ಅದನ್ನು ನಾಶಪಡಿಸಿದ ಹೊರತು ಜರಾಸಂಧನ ವಧೆ ಸಾಧ್ಯವಿರಲಿಲ್ಲ. ಭೀಮಾರ್ಜುನರು ಆ ನಗಾರಿಯನ್ನು ಒಡೆದುಹಾಕಿದರು. ಅದರಿಂದ ರಾಜ್ಯದಲ್ಲಿ ಉತ್ಪಾತವಾಯಿತು. ಪುರೋಹಿತರ ಆಣತಿಯಂತೆ ಜರಾಸಂಧ ಶಾಂತಿ ಮೂಡಿಸಲು ಸನ್ನದ್ಧನಾದ. ಕೃಷ್ಣ, ಭೀಮ, ಅರ್ಜುನರು ಬ್ರಾಹ್ಮಣ ವೇಷಧರಿಸಿ ಅಪರದ್ವಾರದಿಂದ ಜರಾಸಂಧನ ಆಸ್ಥಾನ ಪ್ರವೇಶಿಸಿದರು. ಇವರನ್ನು ಕಂಡು ಜರಾಸಂಧನಿಗೆ ಅನುಮಾನವಾಯಿತು. ವಿಚಾರಿಸಿದ. ಕೃಷ್ಣ ಎಲ್ಲರ ಪರಿಚಯವನ್ನೂ ಸರಿಯಾಗಿಯೇ ಮಾಡಿಕೊಟ್ಟು ಯುದ್ಧಕ್ಕೆ ಆಹ್ವಾನಿಸಿದ. ಶಸ್ತ್ರಾಸ್ತ್ರಗಳನ್ನೆಲ್ಲ ಒದಗಿಸಿ ಮಾಗಧ ಯುದ್ಧಕ್ಕೆ ಅಣಿಯಾದ. ಭೀಮ ಮತ್ತು ಜರಾಸಂಧನ ನಡುವೆ ಹದಿನಾಲ್ಕು ದಿನಗಳ ಕಾಲ ಯುದ್ಧ ನಡೆದರೂ ಜರಾಸಂಧ ಸೋಲಲಿಲ್ಲ. ವಾಯು ದೇವನನ್ನು ನೆನೆದು ಭಿಮ ಜರಾಸಂಧನನ್ನು ಸೀಳಿ ಕೃಷ್ಣನ ಸೂಚನೆಯಂತೆ ಸೀಳುಗಳನ್ನು ಪಲ್ಲಟಿಸಿ ಒಗೆದ. ಜರಾಸಂಧ ಸತ್ತು ಹೋದ. ಮಾಗಧನ ಹೆಂಡತಿ ಶೋಕಿಸುತ್ತ ಕೃಷ್ಣನ ಕಾಲಿಗೆ ಎರಗಿ ಮಗ ಸಹದೇವನನ್ನು ಸಲಹಲು ಕೇಳಿಕೊಂಡು ಸಹಗಮನಕ್ಕೆ ಸಿದ್ಧಳಾದಳು. ಕೃಷ್ಣ ಸಹದೇವನಿಗೆ ಪಟ್ಟಕಟ್ಟಿ ಸೆರೆಯಲ್ಲಿದ್ದವರನ್ನೆಲ್ಲ ಬಿಡಿಸಿದ. ನಂತರ ಭೀಮಾರ್ಜುನರೊಡನೆ ಇಂದ್ರಪ್ರಸ್ಥಕ್ಕೆ ಬಂದು ನಡೆದದ್ದೆಲ್ಲವನ್ನೂ ವಿವರಿಸಿದ.

ರಾಜಸೂಯಾಧ್ವರ ಮುಂದುವರಿದು ಮುಕ್ತಾಯವಾಗುವ ಬಗೆಗೆ ಧರ್ಮರಾಜನಿಗೆ ಮತ್ತೆ ಅಳುಕಾಯಿತು. ಭೀರ್ಮಾರ್ಜುನರು ಭರವಸೆ ನೀಡಿದರು. ದಿಕ್ಕಿಗೊಬ್ಬೊಬ್ಬರಂತೆ ಹೊರಟು ಯಾಗಕ್ಕೆ ಅಗತ್ಯವಾದ ಧನಕನಕಗಳನ್ನು ತಂದರು. ಅಣ್ಣನ ಆಣತಿಯಂತೆ ಅರ್ಜುನ ದ್ವಾರಕೆಗೆ ಹೋಗಿ ಕೃಷ್ಣನನ್ನು ಆಮಂತ್ರಿಸಿ ಬಂದ. ಕೃಷ್ಣ ಪರಿವಾರ ಸಮೇತ ಇಂದ್ರಪ್ರಸ್ಥಕ್ಕೆ ಬಂದ. ಕೃಷ್ಣನ ಸಲಹೆಯಂತೆ ಯಾಗಸ್ಥಳದ ಶುದ್ಧೀಕರಣ ಮಾಡುವ ಪುರುಷಾಮೃಗವನ್ನು ಕರೆತರಲು ಹಿಮಾಚಲದ ಕಡೆಗೆ ಭೀಮ ಧಾವಿಸಿದ. ಮಾರ್ಗಮಧ್ಯೆ ಹನುಮಂತ ಭೀಮನ ತ್ರಾಣದ ಅರಿವು ಮಾಡಿಕೊಟ್ಟು ಪುರುಷಾಮೃಗದ ಓಟವನ್ನು ನಿಯಂತ್ರಿಸಲು ಭೂಮಿಗೆ ಇಟ್ಟತಕ್ಷಣ ಶಿವಲಿಂಗವಾಗುವ ಎಂಟು ರೋಮಗಳನ್ನು ತನ್ನ ಬಾಲದಿಂದ ತಾನೇ ಕಿತ್ತುಕೊಟ್ಟ. ಅದನ್ನೂ ಬಳಸಿಕೊಂಡು ಭೀಮ ಪುರುಷಾಮೃಗವನ್ನು ಕರೆದುತಂದ. ಯಾಗದ ಸಕಲಸಿದ್ಧತೆಗಳೂ ಆದವು.

ಯಾಗದ ಅಗ್ರಪೂಜೆಯನ್ನು ಯಾರಿಗೆ ಸಲಿಸಬೇಕೆಂಬ ಪ್ರಶ್ನೆ ಎದುರಾಯಿತು. ಧರ್ಮರಾಜ ಭೀಷ್ಮನನ್ನು ಕೇಳಿದ. ಅಗ್ರಪೂಜೆಗೆ ಕೃಷ್ಣನೇ ಯೋಗ್ಯನೆಂದ. ಋಷಿಮುನಿಗಳೂ ಸಮ್ಮತಿಸಿದರು. ಕೃಷ್ಣನಿಗೆ ಅಗ್ರಪೂಜೆ ಸಂದಿತು. ಚೈದ್ಯ ದೇಶದ ರಾಜ ಶಿಶುಪಾಲ ವಿರೋಧಿಸಿದ. ಕೃಷ್ಣ ಶಿಶುಪಾಲನನ್ನು ಕೊಂದ. ಶಿಶುಪಾಲನ ಮಗ ಸುಕೇತು ಕೃಷ್ಣನಿಗೆ ಶರಣಾಗಿ ಅಭಯವನ್ನು ಬೇಡಿದ. ರಾಜಸೂಯ ನಿರಾತಂಕ ಮುಕ್ತಾಯವಾಯಿತು. ಎಂಬಲ್ಲಿಗೆ ಬಿಷ್ಟಪ್ಪ ಕವಿಯ ರಾಜಸೂಯ ಯಜ್ಞ ಪ್ರಸಂಗಕೃತಿ ಮಂಗಲವಾಗುತ್ತದೆ.

ಕವಿಯ ಪರಿಚಯ : ಹಸ್ತಪ್ರತಿಯಲ್ಲಿರುವ ಎರಡು ವಾರ್ಧಕಗಳಲ್ಲಿ ಈತ ತನ್ನ ಸುಮಾರಿನ ಪರಿಚಯ ಹೇಳಿಕೊಂಡಿದ್ದಾನೆ. ಆ ಪ್ರಕಾರ ಈತ ಭಾರದ್ವಾಜ ಗೋತ್ರೋದ್ಭವ, ಅದ್ವೈತಿ, ಕರಾಡ ವಂಶಸ್ಥ. ಸುಬ್ಬನೆಂಬವನ ಸಹೋದರ. ಉತ್ತರ ಕನ್ನಡದ (ಸಿರ್ಸಿ ಹತ್ತಿರದ) ಕಾನುಗೋಡು ಎಂಬ ಖೇಟಕ (ಚಿಕ್ಕ ಹಳ್ಳಿಯಲ್ಲಿ) ದಲ್ಲಿ ವಾಸವಾಗಿದ್ದವ. ಭೀಷ್ಮನೆನ್ನುವ ಹೆಸರುಳ್ಳವ. ಅದೇ ಊರಿನ ಲಕ್ಷ್ಮೀಕಾಂತ ದೇವಾಲಯದ ಅರ್ಚಕ. ಅದೇ ದೇವರ ಆರಾಧಕ. ಶಾಲಿವಾಹನ ಶಕವರ್ಷ ಸಾವಿರದೆಂಟುನೂರಾ ಐದನೆಯ ಸುಭಾನು ಸಂವತ್ಸರದಲ್ಲಿ ಈ ಪ್ರಸಂಗ ಕೃತಿಯನ್ನು ರಚಿಸಲು ತೊಡಗಿ ಪಾರ್ಥಿ ಸಂವತ್ಸರದಲ್ಲಿ ಮುಕ್ತಾಯ ಮಾಡಿದನಂತೆ. ಇದು ೧೮೮೩ಕ್ಕೆ ಸಮವಾಗುತ್ತದೆ. ಕರಾರುವಾಕ್ಕಾಗಿ ಕವಿಯ ಕಾಲವನ್ನು ಹೇಳಲು ಸಾಧ್ಯವಿರದಿದ್ದರೂ ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಹುಟ್ಟಿ ಇಪ್ಪತ್ತನೆಯ ಶತಮಾನದ ಪೂರ್ವಾರ್ಧದಲ್ಲಿ ಮರಣ ಪಟ್ಟಿರಬಹುದು. ಇವನೇ ಪ್ರಸಂಗಕಾರ ಬಿಷ್ಟಪ್ಪ ಎನ್ನುವವನು ಎಂದು ಸಿದ್ಧಾಪುರದ ಪ್ರೊ. ಎಂ.ಎ. ಹೆಗಡೆ ವಾದಿಸುತ್ತಾರೆ.

ಈ ಪ್ರಸಂಗಕೃತಿಯ ಲಭ್ಯ ಹಸ್ತಪ್ರತಿ ಹಸುರುಗೋಡು ಶಂಕ್ರಪ್ಪ ಭಾಗವತನ ಕೈ ಬರೆಹದಲ್ಲಿದೆ. ಆತ ಇದನ್ನು ಪರಿಧಾವೀ ನಾಮಸಂವತ್ಸರದ ಆಷಾಢ ಮಾಸದಂದು ಬರೆದು ಮುಗಿಸಿದನಂತೆ.

ಇದು ರಂಗಸ್ಥಳದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಪ್ರದರ್ಶನಗೊಂಡ ಪ್ರಸಂಗ. ರಾಜಸೂಯ ಯಾಗ ಇಡಿಯಾಗಿ ಪೂರ್ಣ ರಾತ್ರಿಯ ಪ್ರಸಂಗವಾಗಿ ಪ್ರದರ್ಶನಗೊಂಡುದೂ ಇದೆ. ಮೊದಲ ಭಾಗ ಮಾತ್ರ ರಾಜಸೂಯ, ಮಾಗಧ ವಧೆ, ಜರಾಸಂಧ ವಧೆ, ಜರಾಸಂಧ ಮುಂತಾದ ಹೆಸರಿನಲ್ಲಿ ಪ್ರದರ್ಶಿತವಾದುದೂ ಇದೆ.  ಜರಾಸಂಧ ಮತ್ತು ಕೃಷ್ಣನ ಪಾತ್ರದ ಜೋಡಿಗಳು ಹೆಸರಾಗಿವೆ. ಕಾಲಕ್ರಮದಲ್ಲಿ ಜರಾಸಂಧನ ಮತ್ತು ಕೃಷ್ಣಪಾತ್ರಕ್ಕಾಗಿ ಹೆಸರು ಮಾಡಿದವರಿದ್ದಾರೆ.

* * *

 ೧೧. ಯಕ್ಷಗಾನ ಇಂದ್ರಕೀಲಕ

ಂದ್ರಕೀಲ ಅಥವಾ ಇಂದ್ರಕೀಲಕ ಹಿಮವತ್ ಪ್ರಾಂತದ ಒಂದು ಪರ್ವತ. ಪಾಂಡವರು ವನವಾಸದಲ್ಲಿದ್ದಾಗ ಅರ್ಜುನ ಶಿವನನ್ನು ಕುರಿತು ಈ ಪರ್ವತದಲ್ಲಿ ತಪಸ್ಸು ಮಾಡಿ ಪಾಶುಪತಾಸ್ತ್ರವನ್ನು ಪಡೆದ. ವಿಷ್ಣು ಭಾಗವತ ಬರೆದ ಈ ಪ್ರಸಂಗದ ಕೃತಿಗೂ ಯಕ್ಷಗಾನ ಇಂದ್ರಕೀಲಕ ಎಂದೇ ಹೆಸರು. ಕಾಳಗ ಪ್ರಧಾನ ಪರಂಪರೆಯಲ್ಲಿ ಶಬರಾರ್ಜುನ ಕಾಳಗ. ಶಬರ ರೂಪದ ಶಿವನೊಡನೆ ಅರ್ಜುನ ಕಾದು ಅನುಗ್ರಹೀತನಾದ ಸಂದರ್ಭ ಇದು.

ಕಥಾಸಾರ : ದ್ಯೂತದಲ್ಲಿ ಸೋತ ಪಾಂಡವರು ನಿಬಂಧನೆಯಂತೆ ವನವಾಸಕ್ಕೆ ಹೊರಟರು. ಕಾಮ್ಯಕ ವನದಲ್ಲಿ ವಾಸಿಸುವುದು ಎಂದಾಯಿತು. ಸೂರ್ಯನನ್ನು ಭಜಿಸಿ ಧರ್ಮರಾಜ ಅಕ್ಷಯ ಪಾತ್ರೆಯನ್ನು ಪಡೆದ. ಅದೇ ಹೊತ್ತಿಗೆ ಹಸ್ತಿನಾವತಿಗೆ ಬಂದ ಮೈತ್ರೇಯ ಮುನಿ ಪಾಂಡವರನ್ನು ಪುನಃ ಹಸ್ತಿನಾವತಿಗೆ ಕರೆಸಿಕೊಳ್ಳಲು ಕೌರವನಿಗೆ ಹೇಳಿದ. ಸೊಕ್ಕಿದ ಕೌರವ ತನ್ನ ತೊಡೆತಟ್ಟಿಕೊಂಡ. ಕೋಪಗೊಂಡ ಮೈತ್ರೇಯ ತೊಡೆಯೊಡೆದೇ ಸಾಯಿ ಎಂದು ಶಪಿಸಿದ.

ಕಾಮ್ಯಕವನದ ಸಮೀಪದಲ್ಲಿ ಬಕಾಸುರನ ಅಣ್ಣ ಕಿರ್ಮೀರ ನೆಲಸಿ ಎಲ್ಲರನ್ನೂ ಪೀಡಿಸುತ್ತಿದ್ದ. ಭೀಮ ಅವನನ್ನು ಕೊಂದ. ಬಳಿಕ ಪಾಂಡವರು ವ್ಯಾಕುಲವಿಲ್ಲದೆ ಅಡವಿಯಲ್ಲಿ ವಾಸಿಸ ತೊಡಗಿದರು. ಪಾಂಡವರಿಗೆ ವನವಾಸವಾಗಿದೆಯೆಂಬ ಸುದ್ದಿ ಶ್ರೀ ಕೃಷ್ಣನಿಗೆ ತಿಳಿಯಿತು. ಆತ ಪರಿವಾರ ಸಮೇತ ಪಾಂಡವರನ್ನು ನೋಡಲು ಅಡವಿಗೆ ಬಂದ. ದ್ರುಪದರಾಜ, ಕುಂತೀಭೋಜ ಮುಂತಾದವರೂ ಬಂದರು. ಶ್ರೀ ಕೃಷ್ಣ ಪಾಂಡವರಿಗೂ ದ್ರೌಪದಿಗೂ ಸಮಾಧಾನ ಹೇಳಿದ. ಕೌರವರನ್ನು ನಾಶಮಾಡಿ ದ್ರೌಪದಿಯ ಮುಡಿಕಟ್ಟಿಸುವ ಭರವಸೆ ನೀಡಿದ. ಕೃಷ್ಣನನ್ನು ಬೀಳ್ಕೊಟ್ಟರು. ಕಣ್ವ ಋಷಿಯ ಪ್ರದೇಶದ ಜಂಬೂಫಲವನ್ನೂ ತಿಳಿಯದೆ ಕೊಯ್ದ ಶಾಪಕ್ಕೆ ಒಳಗಾಗಬಹುದಾದ ಸಂದರ್ಭವೂ ಕೃಷ್ಣನ ಅನುಗ್ರಹದಿಂದ ತಪ್ಪಿತು. ಪಾಂಡವರು ಸುರಕ್ಷಿತರಾದರು.

ಹೀಗಿರುವಾಗ ವೇದವ್ಯಾಸಮುನಿ ಪಾಂಡವರಲ್ಲಿಗೆ ಬಂದ. ಧರ್ಮರಾಜನ ಮೂಲಕ ಅರ್ಜುನನಿಗೆ ಈಶ್ವರನ ಬೀಜಮಂತ್ರ ಬೋಧಿಸಿ ಅರ್ಜುನ ಇಂದ್ರಕೀಲದಲ್ಲಿ ಶಿವನನ್ನು ಕುರಿತು ತಪಸ್ಸು ಮಾಡಿ ಪಾಶುಪತಾಸ್ತ್ರ ಪಡೆಯಲಿ ಎಂದ. ಅರ್ಜುನ ಇಂದ್ರಕೀಲದಲ್ಲಿ ತಪೋನಿರತನಾದ. ದ್ವಿಜರೂಪದಿಂದ ಅಲ್ಲಿಗೆ ಬಂದ ಇಂದ್ರ ನಿಜರೂಪ ತೋರಿ ಆಶೀರ್ವದಿಸಿದ.  ಅರ್ಜುನನ ತಪಸ್ಸಿನ  ತೀವ್ರತೆಗೆ ಋಷಿಮುನಿಗಳು ಶಿವನಿಗೆ ದೂರುಕೊಟ್ಟರು. ಶಿವ ಅವರಿಗೆ ಪರಿಹಾರದ ಭರವಸೆ ನೀಡಿದ. ಶಿವ ಶಿವೆಯರು ಶಬರ-ಶಬರಿಯಾಗಿ ಕಿರಾತಪಡೆಯೊಂದಿಗೆ ಇಂದ್ರಕೀಲಕ್ಕೆ ಬೇಟೆಗೆ ಬಂದರು. ಒಂದು ಕಾಡುಹಂದಿ ತಪೋನಿರತ ಅರ್ಜುನನ ಏಕಾಗ್ರತೆಗೆ ಭಂಗ ಉಂಟು ಮಾಡಿತು. ಆತ ಅದನ್ನು ಬಾಣದಿಂದ ಹೊಡೆದು ಕೆಡಹಿದ. ಅದೇ ಕಾಲಕ್ಕೆ ಶಬರನಾದ ಶಿವನ ಬಾಣವೂ ಅದಕ್ಕೆ ನಾಟಿತು. ಶಬರ ಮತ್ತು ಅರ್ಜುನನ ನಡುವೆ ಘರ್ಷಣೆಗೆ ಕಾರಣವಾಯಿತು. ಇಬ್ಬರ ನಡುವೆ ಯುದ್ಧ ತೊಡಗಿತು. ಯುದ್ಧದಲ್ಲಿ ಕಿರಾತನೇ ಗೆದ್ದ. ಸೋತ ಅರ್ಜುನ ಮಳಲಿನಿಂದ ಲಿಂಗ ಮಾಡಿ ಪೂಜಿಸಿದ. ಶಿವನನ್ನು ಪ್ರಾರ್ಥಿಸಿ ಮತ್ತೆ ಯುದ್ಧಕ್ಕೆ ಅಣಿಯಾದ. ಮತ್ತೆ ಯುದ್ಧ ಮತ್ತೆ ಸೋಲು, ಮತ್ತೆ ಶಿವಪೂಜೆ ಸಾಗಿತು. ಕೊನೆಗೆ ಶಬರನೇ ಶಿವನೆಂಬುದು ಅರ್ಜುನನಿಗೆ ಮನವರಿಕೆಯಾಯಿತು. ಶರಣಾದ ಶಿವನಿಂದ ಪಾಶುಪತಾಸ್ತ್ರವನ್ನೂ ಶಿವೆಯಿಂದ ಅಂಜನಾಸ್ತ್ರವನ್ನೂ ಪಡೆದ.

ಮಗನ ಅಭ್ಯುದಯವನ್ನು ಪ್ರತ್ಯಕ್ಷ ಕಂಡು ಸಂತೋಷಿಸಲು ಬಂದ ದೇವೇಂದ್ರ ಅರ್ಜುನನ್ನು ತನ್ನ ಲೋಕಕ್ಕೆ ಕರೆಸಿಕೊಂಡ. ಸಿಂಹಾಸನದಲ್ಲಿ ತನ್ನ ಪಕ್ಕ ಕೂರಿಸಿಕೊಂಡು, ಗೌರವಿಸಿದ. ತಂದೆ ಪಾಂಡುವಿನ ದರ್ಶನ ಮಾಡಿಸಿದ. ಮೇನಕೆ ಮುಂತಾದವರಿಂದ ನಾಟ್ಯ ಏರ್ಪಡಿಸಿದ. ನಾಟ್ಯದ ಸಂದರ್ಭದಲ್ಲಿ ಅರ್ಜುನನ ಮನಸ್ಸು ಊರ್ವಶಿಯನ್ನು ಬಯಸಿದೆ ಎಂದು ಭಾವಿಸಿದ. ಚಿತ್ರಸೇನನ್ನು ಕರೆದು ಊರ್ವಶಿಯನ್ನು ಅರ್ಜುನನ ಮಂದಿರಕ್ಕೆ ಕಳುಹಿಸಲು ಸೂಚಿಸಿದ. ಊರ್ವಶಿಯೂ ಅತ್ಯಂತ ಸಂತೋಷದಿಂದ ತನ್ನನ್ನು ಶೃಂಗರಿಸಿಕೊಂಡು ಕಾಮಮೋಹಿತಳಾಗಿ ಅರ್ಜುನನ ಮಂದಿರಕ್ಕೆ ಹೋದಳು. ಆದರೆ ಅರ್ಜುನ ಆಕೆ ತಾಯಿಯೆಂಬ ಗೌರವದಿಂದ ವಿನಯ ಪೂರ್ವಕ ನಿರಾಕರಿಸಿದ. ಸಿಟ್ಟಿಗೆದ್ದ ಊರ್ವಶಿ ಒಂದು ವರ್ಷ ಷಂಡನಾಗೆಂದು ಶಪಿಸಿಬಿಟ್ಟಳು. ಅeತದ  ಅವಧಿಯಲ್ಲಿ ಶಾಪ ಅನುಕೂಲವೇ ಆಗುತ್ತದೆಂದು ದೇವೇಂದ್ರ ಅರ್ಜುನನನ್ನು ಸಂತೈಸಿದ. ಇಂದ್ರನ ಕೋರಿಕೆಯಂತೆ ಅರ್ಜುನ ಕಾಲಕೇಯ, ನಿವಾತಕವಚರೆಂಬ ಹಿರಣ್ಯಪುರದ ರಾಕ್ಷಸರನ್ನು ಕೊಂದು ಇಂದ್ರನಿಗೆ ನೆರವಾದ,  ಶಚಿಯಾದಿಯಾಗಿ ದೇವತೆಗಳೆಲ್ಲ ಅರ್ಜುನನನ್ನು ಪುರಸ್ಕರಿಸಿದರು.

ಈ ಕಡೆ ಅರ್ಜುನನ ವಿಷಯದಲ್ಲಿ ಉಳಿದ ಪಾಂಡವರು ಆತಂಕಕ್ಕೊಗೊಳಗಾದರು. ಅರ್ಜುನ ಮರಳಿ ಬಂದ. ವಿದ್ಯಮಾನಗಳನ್ನೆಲ್ಲ ವಿವರಿಸಿದ. ಅರ್ಜುನನನ್ನು ಎಲ್ಲರೂ ಕೊಂಡಾಡಿದರು. ಎಂಬಲ್ಲಿಗೆ ಇಂದ್ರಕೀಲಕದ ಕಥೆ ಸಾಂಗವಾಗುತ್ತದೆ.

ಕವಿ ಪರಿಚಯ : ಇಂದ್ರಕೀಲಕ ಪ್ರಸಂಗ ಕೃತಿಯ ಕೊನೆಯ ಭಾಗದ ಕಂದಪದ್ಯವೊಂದರಲ್ಲಿ ದ್ವಿಜ ಕುಲಜಾತಂ ರಾಮಾತ್ಮಜ ವಿಷ್ಣುವೆನಿಪ್ಪನಜಪುರೇಶನ ಭಜಕಂ ಸೃಜಿಸಿದನ್ ಕಾವ್ಯವನ್ ಎಂದಿದ್ದಾನೆ.  ರಾಮನ ಮಗ ವಿಷ್ಣು ಇಂದ್ರಕೀಲಕ ಪ್ರಸಂಗ ಕೃತಿಯನ್ನು ರಚಿಸಿದನೆಂಬುದು ಸ್ಪಷ್ಟ. ಧ್ವಜಪುರದ ನಾಗ (ನಾಗಪ್ಪಯ್ಯ)ನೂ ಯಕ್ಷಗಾನ ಇಂದ್ರಕೀಲಕ ಜಟಾಸುರಕಾಳಗ ಪ್ರಸಂಗ ಕೃತಿಯನ್ನು ರಚಿಸಿದ್ದಾನೆ. ಕೃತಿಯ ಕೊನೆಯಲ್ಲಿ ಇವನೂ ತನ್ನ ಹೆಸರನ್ನು ಹೇಳಿಕೊಂಡಿದ್ದಾನೆ.  ಈ ಕೃತಿ ಕಣಂಜಾರು ಆನಂದ ಶೆಟ್ಟಿ ಸಂಸ್ಮರಣ ಪ್ರಸಂಗ ಮಾಲಿಕೆಯ ಇಪ್ಪತ್ತೆರಡನೆಯ ಸಂಪುಟದಲ್ಲಿ ಪ್ರಕಟಗೊಂಡಿದೆ. ಕಥಾವಸ್ತು ಮತ್ತು ಸಂದರ್ಭಗಳು ಒಂದೇ ಆದರೂ ಎರಡರ ನಡುವೆ ದೃಶ್ಯ, ಪಾತ್ರ, ಪದ್ಯವತ್ಯಾಸಗಳಿವೆ. ಧ್ವಜಪುರದ ನಾಗಪ್ಪಯ್ಯನ ಕಾಲವನ್ನು ಡಾ.ಕಾರಂತರು ೧೭ನೆಯ ಶತಮಾನ (ಕ್ರಿ.ಶ.೧೬೦೦-೫೦) ಎಂದು ಸೂಚಿಸುತ್ತಾರೆ. ಆದರೆ ಡಾ. ಕಾರಂತರು ನಾಗಪ್ಪಯ್ಯ ರಚಿಸಿದ ಪ್ರಸಂಗ ಕೃತಿಗಳ ಪಟ್ಟಿಯಲ್ಲಿ ಇಂದ್ರಕೀಲವನ್ನು ಸೇರಿಸುವದಿಲ್ಲ. ಇಂದ್ರಕೀಲದ ಕಥೆಯನ್ನು ಹಟ್ಟಿಯಂಗಡಿ ರಾಮಭಟ್ಟನೂ ಬರೆದಿದ್ದಾನೆಂದು ಅವರು ಹೇಳುತ್ತಾರೆ. ಯಕ್ಷಗಾನ ಮಹಾಭಾರತದ ಪ್ರಸಂಗಗಳು ಗ್ರಂಥದ ಲೇಖಕ ಡಾ.ಆನಂದರಾಮ ಉಪಾಧ್ಯಾಯರು ನಾಗಪ್ಪಯ್ಯನ ಜಟಾಸುರ ವಧೆಯನ್ನು ಮಾತ್ರ ಹೆಸರಿತ್ತಾರೆ. ಇಂದ್ರಕೀಲಕವನ್ನಲ್ಲ ಇಂದ್ರಕೀಲಕ ಪ್ರಸಂಗಕೃತಿ ಬ್ರಹ್ಮಾವರದ ವಿಷ್ಣುಭಾಗವತನದೆಂದೇ ಬರೆದಿದ್ದಾರೆ. ಇಂದ್ರಕೀಲಕ ಪ್ರಸಂಗಕೃತಿ ಅಚ್ಚೂ ಆಗಿದೆ ; ರಂಗಸ್ಥಳದಲ್ಲಿ ಪ್ರಚಾರದಲ್ಲಿಯೂ ಇದೆ. ಈ ಸಂಪುಟದಲ್ಲಿ ರಾಮನ ಮಗ ವಿಷ್ಣುವಿನ ಇಂದ್ರಕೀಲಕವನ್ನೇ ಸಂಪಾದಿಸಲಾಗಿದೆ. ಇದು ಬಡಗು ತಿಟ್ಟಿನಲ್ಲಿ ಹೆಚ್ಚು ಜನಪ್ರಿಯವಾದ ಪ್ರಸಂಗ. ಶಬರ ಮತ್ತು ಅರ್ಜುನನ ಪಾತ್ರಗಳಿಗೆ ಬೇರೆ-ಬೇರೆ ಅವಧಿಗಳಲ್ಲಿ, ಬೇರೆ-ಬೇರೆ ಪ್ರದೇಶದಲ್ಲಿ ವಿಶಿಷ್ಟ ನಟ ಪರಂಪರೆಯನ್ನೂ ನಡೆಯನ್ನೂ ಸ್ಥಾಪಿಸಿದೆ. ವಿಷ್ಣುಭಾಗವತ ಇಂದ್ರಕೀಲಕವನ್ನಲ್ಲದೆ ವಿರಾಟಪರ್ವ, ಬಾಣಾಸುರ ಕಾಳಗ ಪ್ರಸಂಗಕೃತಿಗಳನ್ನು ರಚಿಸಿದ್ದಾನೆ. ವಿರಾಟಪರ್ವ ಸುದೀರ್ಘವಾದ ರಂಗಚರಿತ್ರೆಯನ್ನೂ ಪ್ರದರ್ಶನ ಪರಂಪರೆಯನ್ನು ಹೊಂದಿದೆ. ವಿಷ್ಣು ಒಬ್ಬ ಸಮರ್ಥ ಯಕ್ಷಗಾನದ ರಂಗಭಾಗವತನೂ ಆಗಿರಬಹುದಾದ ಸಾಧ್ಯತೆಯಿದೆ.

ಡಾ|| ಕಾರಂತರು ವಿಷ್ಣುವನ್ನು ಹದಿನಾರನೆಯ ಶತಮಾನದವನೆಂದೂ ಇವನೇ ಯಕ್ಷಗಾನದ ಮೊದಲ ಪ್ರಸಂಗ ಕರ್ತನೆಂಬ ನಿರ್ಧರಿಸುತ್ತಾರೆ. ಆದರೆ ಯಕ್ಷಗಾನ ಆದಿಪರ್ವ ಪ್ರಸಂಗಕೃತಿ ಸಿಕ್ಕಿದ ಮೇಲೆ ಮೊದಲ ಪ್ರಸಂಗ ಕರ್ತನೆಂಬ ನಿರ್ಧಾರ ಬದಲಾಗಿದೆ. ಈತ ಬ್ರಹ್ಮಾವರದಲ್ಲಿರುವ ಮಹಾಲಿಂಗೇಶ್ವರನ ಭಕ್ತ. ತನ್ನ ಪ್ರಸಂಗಕೃತಿಗಳಲ್ಲಿ ಮಹಾಲಿಂಗೇಶ್ವರನನ್ನು ಮತ್ತೆ ಮತ್ತೆ ಸ್ತುತಿಸುತ್ತಾನೆ. ಅಲ್ಲಿನ ವಾರಂಬಳ್ಳಿ ಮನೆತನಕ್ಕೆ ಸೇರಿದವ. ವಾರಂಬಳ್ಳಿ ವಿಷ್ಣು ಎಂದೇ ಪ್ರಸಿದ್ಧಿ.

* * *

 ೧೨.  ಯಕ್ಷಗಾನ ಚಿತ್ರಸೇನ ಕಾಳಗ

ಚಿತ್ರಸೇನ ಒಬ್ಬ ಗಂಧರ್ವ. ವಿಶ್ವಾವಸುವೆಂಬ ಗಂಧರ್ವನ ಮಗ. ಅರ್ಜುನ ಇಂದ್ರಕೀಲ ಪರ್ವತದಿಂದ ದೇವಲೋಕಕ್ಕೆ ಹೋಗಿ ಅಲ್ಲಿಯೇ ಕೆಲವು ವರ್ಷಗಳವರೆಗೆ ವಾಸಿಸುತ್ತಿದ್ದ ಅವಧಿಯಲ್ಲಿ ಇದೇ ಚಿತ್ರಸೇನ ಅರ್ಜುನನಿಗೆ ಗಾಂಧರ್ವ ವೇದವನ್ನು ಕಲಿಸಿದ್ದ. ಪಾಂಡವರು ಅರಣ್ಯವಾಸದಲ್ಲಿದ್ದಾಗ ದುರ‍್ಯೋಧನ ಘೋಷಯಾತ್ರೆಯ ನೆಪದಿಂದ ಸೇನಾ ಸಮೇತ ಬಂದು ಅವರನ್ನು ಪೀಡಿಸಿದ. ಆಗ ಇದೇ ಚಿತ್ರಸೇನ ಇಂದ್ರನ ಅಪ್ಪಣೆಯಂತೆ ಆ ವನಕ್ಕೆ ಬಂದು ದುರ‍್ಯೋಧನನನ್ನು ಸೆರೆಹಿಡಿದು ಅವಮಾನಿಸಿದ. ಹಿಂಗಟ್ಟು ಬಿಗಿದು ಇಂದ್ರಲೋಕಕ್ಕೆ ಒಯ್ದುಬಿಡಲು ಅಣಿಯಾದ. ಆಗ ಯುಧಿಷ್ಠಿರನ ಅಪ್ಪಣೆಯ ಮೇರೆಗೆ ಅರ್ಜುನ ಇವನೊಂದಿಗೆ ಯುದ್ಧ ಮಾಡಿ ಸೋಲಿಸಿ ದುರ‍್ಯೋಧನನನ್ನು ಬಿಡಿಸಿದ. ಮಹಾಭಾರತದ ವನ ಪರ್ವತದಲ್ಲಿ ಬರುವ ಈ ಕಥಾನಕವನ್ನು  ಕೇಂದ್ರವಾಗಿರಿಕೊಂಡ ಯಕ್ಷಗಾನ ಪ್ರಸಂಗಕರ್ತ ದೇವಿದಾಸ ಯಕ್ಷಗಾನ ಚಿತ್ರಸೇನ ಕಾಳಗ ರಚಿಸಿದ್ದಾನೆ.

ಪ್ರಸಂಗ ಕರ್ತನ ಪರಿಚಯ : ಪ್ರಸಂಗ ಕೃತಿಯಲ್ಲಿ ಎಲ್ಲಿಯೂ ಪ್ರಸ್ತಾಪವಿರದಿದ್ದರೂ ಯಕ್ಷಗಾನ ಚಿತ್ರಸೇನ ಕಾಳಗ ದೇವಿದಾಸನದೆಂಬುದನ್ನು ಎಲ್ಲ ಬರಹಗಾರರೂ ಒಪ್ಪಿಕೊಳ್ಳುತ್ತಾರೆ. ಆದರೆ ಈ ದೇವಿದಾಸನ ಪೂರ್ವಾಪರದ ಬಗ್ಗೆ ಇಂದಿಗೂ ನಿಶ್ಚಿಗವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ. ಈತನೇ ರಚಿಸಿದ ದೇವಿ ಮಹಾತ್ಮೆ ಪ್ರಸಂಗಕೃತಿಯ ಐದು ಪದ್ಯಗಳಲ್ಲಿ ಬರುವ ಒಗಟಿನ ರೂಪದ ಹೇಳಿಕೆಗಳನ್ನು ಆಧರಿಸಿ ಇವನ ವಿಷಯಕವಾದ ವಿವರಗಳನ್ನು ವಿದ್ವಾಂಸರು ಊಹಿಸಿದ್ದಾರೆ. ಜತೆಗೆ ಜನಬಳಕೆಯಲ್ಲಿರುವ ಸಂಗತಿಗಳನ್ನೂ ಜೋಡಿಸಿ ಬದುಕಿನ ಸಂಗತಿಗಳನ್ನು ಪುನರ್ ನಿರೂಪಿಸಲಾಗಿದೆ. ಜನಶ್ರುತಿ ಮತ್ತು ಪರಂಪರೆಯಂತೆ ದೇವಿದಾಸ ಚಿತ್ರಸೇನ ಕಾಳಗದ ಕವಿ. ಡಾ. ಶಿವರಾಮಕಾರಂತರು …ಕವಿಯ ಹೆಸರು ದಾಸ ಅಥವಾ ದೇವಿದಾಸ ಆತನ ತಾಯಿ ದೇವಿ ಎಂಬವಳು. ತಂದೆ ಓರ್ವ ಬ್ರಾಹ್ಮಣ. ಆತನ ಊರು (ದಕ್ಷಿಣ ಕನ್ನಡದ) ಬಾರಕೂರು ಇರಬೇಕು. ತಂದೆಯ ಹೆಸರು ಹಂಪ ಎಂದಿರಬೇಕು. …. ಎಂದಿದ್ದಾರೆ. ಕರ್ನಾಟಕ ಕವಿ ಚರಿತ್ರೆಯಲ್ಲಿ ಆರ್. ನರಸಿಂಹಾಚಾರ್ಯರು ಇವನನ್ನು ಮಧ್ವದಾಸ ಎಂದು ಹೆಸರಿಸಿದ್ದಾರೆ. ಜನಶೃತಿಯಂತೆ ಆತನ ತಾಯಿ ದೇವಿ ಎಂಬುವಳು. ಶೂದ್ರ ಸ್ತ್ರೀ. ಈತನ ತಂದೆಯ ಪ್ರೇಯಸಿ, ಜೀವನ ಸಂಗಾತಿ. ಹಾಗಾಗಿ ಈತನಿಗೆ ತಾಯಿಯಿಂದಾಗಿ ಶೂದ್ರಜಾತಿ ಎಂದು ಡಾ.ಎಂ. ಪ್ರಭಾಕರ ಜೋಶಿ ಹೇಳುತ್ತಾರೆ. ಈತ ಧರ್ಮಸ್ಥಳದ ಮಂಜುನಾಥ, ಗಣಪತಿಯರನ್ನೂ ಉಡುಪಿ ಕುಂಜರಗಿರಿಯ ದುರ್ಗೆಯನ್ನೂ ಪಂಚಲಿಂಗನನ್ನೂ ಪೊಳಲಿಯ ದೇವಿ, ಪದ್ಮನಾಭ, ವೆಂಕಟೇಶ, ಮಧ್ವಾಚಾರ‍್ಯರನ್ನೂ ತನ್ನ ಕೃತಿಗಳಲ್ಲಿ ಸ್ತುತಿಸಿದ್ದಾನೆ. ಈತನ ಕಾಲದ ವಿಷಯದಲ್ಲಿಯೂ ಹಲವು ವಿದ್ವಾಂಸರು ಆಧಾರವನ್ನೂ ಊಹೆಯನ್ನೂ ಅನುಸರಿಸಿ ೧೮೦೦ ಎಂಬ ತೀರ‍್ಮಾನಕ್ಕೆ ಬಂದಿದ್ದಾರೆ. ಕೃಷ್ಣಸಂಧಾನ, ಭೀಷ್ಮಪರ್ವ, ಅಭಿಮನ್ಯು ಕಾಳಗ, ಸೈಂಧವ ವಧೆ, ಇಂದ್ರಕೀಲಕ, ಕೃಷ್ಣಾರ್ಜುನ ಕಾಳಗ, ಇವು ದೇವಿದಾಸನ ಪ್ರಸಂಗಕೃತಿಗಳೇ ಆಗಿವೆಯೆಂದು ವಿದ್ವಾಂಸರು ತೀರ್ಮಾನಿಸಿದ್ದಾರೆ.

ಚಿತ್ರಸೇನ ಕಾಳಗದ ಕಥಾಸಾರ : ಕಾಮ್ಯಕವನದಲ್ಲಿರುವ ಧೌಮ್ಯಮುನಿಯ ಆಶ್ರಮದಲ್ಲಿ ಪಾಂಡವರು ವನವಾಸವನ್ನು ಕಳೆಯುತ್ತಿದ್ದರು. ಸೂರ್ಯದೇವ ಅನುಗ್ರಹಿಸಿದ ಅಕ್ಷಯ ಪಾತ್ರೆಯಿಂದ ಅತಿಥಿಗಳನ್ನೆಲ್ಲ ಸತ್ಕರಿಸುತ್ತಿದ್ದರು. ಹಸ್ತಿನಾವತಿಯಲ್ಲಿ ದುರ್ಯೋಧನ ತನ್ನ ಆಪ್ತರೊಡನೆ ಸುಖವಾಗಿ ರಾಜ್ಯಭಾರ ಮಾಡುತ್ತಿದ್ದ. ಆಸ್ಥಾನಕ್ಕೆ ಬಂದ ದೂರ್ವಾಸ ಮುನಿಯನ್ನು ಸತ್ಕರಿಸಿ ಮೆಚ್ಚಿಸಿ ಪಾಂಡವರಲ್ಲಿಗೆ ಹೋಗಿ ಅಕ್ಷಯ ಪಾತ್ರೆಯನ್ನು ತೊಳೆದಿಟ್ಟ ಮೇಲೆ ಊಟ ನೀಡಲು ಕೇಳಿಕೊಳ್ಳಿ ; ಊಟ ಹಾಕದಿದ್ದಾಗ ಶಾಪಕೊಟ್ಟು ಬನ್ನಿ ಎಂದು ಬೇಡಿಕೊಂಡ. ಕೃಷ್ಣನ ಅನುಗ್ರಹದಿಂದ ಕೌರವನ ಈ ತಂತ್ರ ವಿಫಲವಾಗಿ ಬಿಟ್ಟಿತು. ಕೌರವನ ಒಳಸಂಚನ್ನು ಬಯಲು ಮಾಡಿ ಕೃಷ್ಣನ ಕ್ಷಮೆಯಾಚಿಸಿ ದೂರ್ವಾಸ ಹೊರಟು ಹೋದ. ಕೃಷ್ಣನೂ ದ್ವಾರಕೆಗೆ ತೆರಳಿದ.

ಹಸ್ತಿನಾವತಿಯಲ್ಲಿದ್ದ ಧೃತರಾಷ್ಟ್ರ ಪಾಂಡವರು ಅರಣ್ಯದಲ್ಲಿ ಸುಖವಾಗಿರುವುದನ್ನು ಬ್ರಾಹ್ಮಣರಿಂದ ತಿಳಿದು ಚಿಂತೆಗೀಡಾಡ. ವನವಾಸ ಮುಗಿಸಿಬಂದ ಮೇಲೆ ಪಾಂಡವರಿಂದ ತನ್ನ ಮಕ್ಕಳಿಗೆ ತೊಂದರೆಯಾಗಿಬಿಡಬಹುದೆಂದು ಅವನಿಗೆ ಆತಂಕ. ಶಕುನಿ ಮುಂತಾದವರು ಸಮಾಧಾನ ಹೇಳಿದರು. ಆದರೆ ಕೌರವ ಘೋಷಯಾತ್ರೆಯ ನೆವದಲ್ಲಿ ಪಾಂಡವರಿರುವ ಅರಣ್ಯಕ್ಕೇ ಹೋಗಿ ಅವರಿಗೆ ತೊಂದರೆ ಕೊಡಲು ನಿಶ್ಚಯಿಸಿದ.

ಮೃಗಬೇಟೆಗೆ ಹೋಗಲು ವೈಭವಪೂರ್ಣವಾದ ಸಕಲ ಸಿದ್ಧತೆಗಳೂ ಆದವು. ಆಪ್ತಪರಿವಾರವನ್ನೂ ರಾಣಿಯರನ್ನೂ ಗಣಿಕಾಂಗನೆಯರನ್ನೂ ಸೇನಾಬಲವನ್ನೂ ಕೂಡಿಕೊಂಡು ಕೌರವ ಧೌಮ್ಯಮುನಿಯ ಆಶ್ರಮಕ್ಕೆ ಹೊರಟ. ಅರಣ್ಯದಲ್ಲಿ ಭೀಮ ಮುಂತಾದವರು ಎದುರಾದರೆ ಅವರನ್ನು ಸದೆದು ದ್ರೌಪದಿಯನ್ನು ಸೆರೆಹಿಡಿದು ತರುವುದು ಅವನ ಉದ್ದೇಶವಾಗಿತ್ತು.  ಧೃತರಾಷ್ಟ್ರ ವಿರೋಧಿಸಿದರೂ ಕೇಳಲಿಲ್ಲ. ಭೀಷ್ಮ, ದ್ರೋಣ, ಕೃಪ, ವಿದುರ ಮುಂತಾದವರು ಬೇಡವೆಂದರೂ ಲೆಕ್ಕಿಸಲಿಲ್ಲ. ಕರ್ಣ, ಶಕುನಿ ಮುಂತಾದವರು ವಿರೋಧಿಸಿದವರನ್ನೇ ಅನುಮಾನಿಸಿ ಹೀಗಳೆದರು. ಪ್ರಯಾಣದ ಸಂದರ್ಭದಲ್ಲಿ ಅಪಶಕುನಗಳಾದರೂ ಕೌರವ ಗಮನಿಸಲಿಲ್ಲ.

ಕೌರವನ ಜತೆಗೆ ಅರಣ್ಯಕ್ಕೆ ಬಂದ ಗಣಿಕಾಂಗನೆಯರು ತಪಸ್ಸಿನಲ್ಲಿ ತೊಡಗಿದ್ದ ಅಲ್ಲಿನ ಋಷಿ ಮುನಿಗಳಿಗೆ ವಿಧವಿಧದ ಪೀಡೆಕೊಟ್ಟರು. ಭಾನುಮತಿಯೂ ಅವರನ್ನು ಸೇರಿಕೊಂಡು ತಪೋನಿರತರೊಂದಿಗೆ ಅಸಹ್ಯ ಕುಚೇಷ್ಟೆ ಮಾಡಿದರು. ಜಲಕ್ರೀಡೆಯ ನೆಪದಲ್ಲಿ ತಿಳಿನೀರಿನ ಸರೋವರಗಳನ್ನೆಲ್ಲ ಕದಡಿ ಹಾಕಿದರು. ಅವರೆಲ್ಲ ಧೌಮ್ಯಾಶ್ರಮದಲ್ಲಿದ್ದ ಧರ್ಮರಾಜನಿಗೆ ದೂರಿತ್ತರು.. ಸಿಟ್ಟಿಗೆದ್ದ ಭೀಮ ಕೌರವಬಲವನ್ನೆಲ್ಲ ಮುರಿಯಲು ಮುಂದಾದ. ಧರ್ಮರಾಜ ತಡೆದ.

ಕಾಮ್ಯಕವನದಲ್ಲಿರುವ ಉಪವನವೊಂದನ್ನು ವಿಹಾರದ ನೆಪದಲ್ಲಿ ಹಾಳುಗೆಡವತೊಡಗಿದರು. ಕಾವಲುಗಾರರನ್ನು ಕಂಗೆಡಿಸಿದರು. ದೇವೇಂದ್ರನ ಪ್ರತಿನಿಧಿಯಾಗಿ ಆ ಪ್ರದೇಶವನ್ನೆಲ್ಲ ನೋಡಿಕೊಳ್ಳುತ್ತಿದ್ದ ಗಂಧರ್ವ ಚಿತ್ರಸೇನನಿಗೆ ವನಚರರಿಂದ ವಿಷಯ ತಿಳಿಯಿತು. ಚಿತ್ರಸೇನ ತನ್ನ ಪಡೆಯನ್ನು ಮೊದಲು ಯುದ್ಧಕ್ಕೆ ಕಳಿಸಿದ. ಪಡೆ ಸೋತುಹೋಯಿತು. ದೇವೇಂದ್ರನ ಆಣತಿಯಂತೆ ಚಿತ್ರಸೇನನೇ ಯುದ್ಧಕ್ಕೆ ಹೋದ. ಎರಡೂ ಬಲಗಳ ನಡುವೆ ಘನಘೋರ ಯುದ್ಧವಾಯಿತು. ಕೊನೆಗೆ ಚಿತ್ರಸೇನ ಕೌರವನನ್ನು ಸೆರೆಹಿಡಿದು ಇಂದ್ರನಲ್ಲಿ ಒಯ್ಯಲು ಹೊರಟು ಬಿಟ್ಟ. ಕೌರವಬಲ ಕಂಗೆಟ್ಟಿತು. ಭಾನುಮತಿ ಆದಿಯಾಗಿ ಎಲ್ಲರೂ ಚಿಂತೆಗೀಡಾದರು. ವನದಲ್ಲಿಯೇ ಧರ್ಮರಾಜನ ಮೊರೆ ಹೋದರು. ದ್ರೌಪದಿಯನ್ನು ಬೇಡಿಕೊಂಡರು. ನಮ್ಮನ್ನು ಅಡವಿಗಟ್ಟಿದ ಕೌರವನನ್ನು ರಕ್ಷಸಲೇಬಾರದೆಂದು ಭೀಮ ಹಠ ಹಿಡಿದ. ಧರ್ಮರಾಜ ಅರ್ಜುನನನ್ನು ಕರೆದು ಕೌರವರನ್ನು ಬಿಡಿಸಿಕೊಂಡು ಬರಲು ಆದೇಶಿಸಿದ. ಅರ್ಜುನ ಚಿತ್ರಸೇನನೊಡನೆ ಮಾತನಾಡಿ  ಅವನಿಗೆ ಮನವರಿಕೆ ಮಾಡಿಕೊಟ್ಟು ಕೌರವನನ್ನು ಬಿಡಿಸಿತಂದ. ಚಿತ್ರ ಸೇನನೂ ಧರ್ಮರಾಜನಿದ್ದಲ್ಲಿಗೆ ಬಂದು ಸ್ನೇಹದ ಮಾತನ್ನಾಡಿ ಹೋದ. ಕೌರವನ ದುಸ್ಥಿತಿಯನ್ನೂ ಕಂಡು ದ್ರೌಪದಿಯೂ ಹಂಗಿಸಿ ಮಾತನಾಡಿದಳು. ಕೌರವ ತನ್ನ ಸೇನೆಯೊಂದಿಗೆ ಮರಳಿದರೂ ಅಪಮಾನ ಅಸಹ್ಯವಾಯಿತು. ಪಾಂಡವರನ್ನು ಭಂಗಿಸಲು ಘೋಷಯಾತ್ರೆ ಕೈಕೊಂಡರೆ ತನಗೇ ಮುಳುವಾಗಿತ್ತು. ನೊಂದ ಕೌರವ ಭಾಗೀರಥೀ ದಡದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ. ಧೃತರಾಷ್ಟ್ರ ಗಾಂಧಾರಿಯರ ಉಪದೇಶವೂ ವ್ಯರ್ಥವಾಯಿತು. ಕೊನೆಯಲ್ಲಿ ಪಾತಾಳಲೋಕದಿಂದ ರಾಕ್ಷಸರು ಬಂದು ಮುಂದೆ ನಡೆಯಲಿರುವ ಯುದ್ಧದಲ್ಲಿ ಪಾಂಡವರನ್ನು ಕೊಂದು ಹಾಕುವುದಾಗಿ ಕೌರವನಿಗೆ ಆಶ್ವಾಸನೆ ನೀಡಿದರು. ಕೌರವ ಸಮಾಧಾನಗೊಂಡು ಆತ್ಮಹತ್ಯೆಯ ನಿರ್ಧಾರವನ್ನು ಕೈ ಬಿಟ್ಟ.

ಆದರೆ ಕೌರವನಿಗೆ ದ್ರೌಪದಿಯ ಮೇಲಿದ್ದ ಸಿಟ್ಟು ಹೋಗಲಿಲ್ಲ. ಸಿಂಧುದೇಶದ ಜಯದ್ರಥನನ್ನು  ಕರೆಯಿಸಿ ದ್ರೌಪದಿಯನ್ನು ಅಪಹರಿಸಿತರುವಂತೆ ಸೂಚಿಸಿದ. ಹಾಗೆಯೇ ಮಾಡಹೊರಟ ಜಯದ್ರಥನಿಗೆ ಪಾಂಡವರಿಂದ ಹೀನಾಯ ಸೋಲುಂಟಾಯಿತು. ಅಪಮಾನಕ್ಕೊಳಗಾದ ಆತ ಶಿವನನ್ನು ಭಜಿಸಿ ಪಾಂಡವರನ್ನು ಕೊಲ್ಲಲು ವರ ಪಡೆದ. ಅರ್ಜುನನಿಲ್ಲದ ಪಾಂಡವರೊಡನೆ ಕಾದಿದರೆ ಗೆಲುವು ಖಂಡಿತ ಎಂದು ಶಿವ ವರಕೊಟ್ಟ.

ಯಮ ತನ್ನ ಮಗ ಧರ್ಮರಾಜನನ್ನು ಯಕ್ಷಪ್ರಶ್ನೆಯ ಮೂಲಕ ಪರೀಕ್ಷಿಸಿದ. ತನ್ನ ಪ್ರಶ್ನೆಗಳಿಗೆ ತಕ್ಕ ಉತ್ತರ ಪಡೆದ ಯಮ ನಿಜರೂಪ ತೋರಿ ಪಾಂಡವರನ್ನು ಅನುಗ್ರಹಿಸಿದ. ವನವಾಸದ ಅವಧಿ ಮುಗಿಯಿತೆಂದೂ ಅeತಕ್ಕೆ ಸಿದ್ಧವಾಗಬೇಕೆಂದು ಸೂಚಿಸಿದ. ಅeತದಲ್ಲಿ ಪಾಂಡವರನ್ನು ಗುರುತಿಸಲು ಸಾಧ್ಯವಾಗದ ವರವ ನೀಡಿದ. ಎಂಬಲ್ಲಿಗೆ ಚಿತ್ರಸೇನ ಕಾಳಗ ಮಂಗಲವಾಗುತ್ತದೆ.

ಕೃತಜ್ಞತೆಗಳು :

ಈ ಸಂಪುಟವನ್ನು ಸಂಪಾದಿಸಲು ಅವಕಾಶ ಮಾಡಿಕೊಟ್ಟ. ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಿಗೆ, ಸದಸ್ಯರಿಗೆ, ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗಕ್ಕೆ ಸಂಪಾದನ ಸಮಿತಿಯ ಸಮಸ್ತ ಸದಸ್ಯರಿಗೆ, ಸಹ ಸಂಪಾದಕ ಮಿತ್ರರಿಗೆ, ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ (ರಿ), ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಬೆಳೆಯೂರು, ಸಾಗರ, ತಾ. ಸಿರಿವಂತೆ ತಾಳಮದ್ದಳೆ ಯಕ್ಷಗಾನ ಸಂಘ, ಪುರಪ್ಪೆ ಮನೆಯ ಸಾಕೇತ ಕಲಾವಿದರು ಇವರುಗಳಿಗೆ ಅಗತ್ಯ ಸಲಹೆ, ಸೂಚನೆ, ಮಾಹಿತಿ, ಸಹಕಾರ ನೀಡಿದ ಸಿದ್ಧಾಪುರದ ಪ್ರೊ. ಎಂ.ಎ. ಹೆಗಡೆ ಇವರಿಗೆ ಇತರ ಎಲ್ಲರಿಗೆ ನನ್ನ ಹಾರ್ದಿಕ ಕೃತಜ್ಞತೆಗಳು.

ಡಾ|| ಜಿ.ಎಸ್. ಭಟ್ಟ, ಸಾಗರ

ಸಂಪಾದಕ