ಅಶ್ವಮೇಧ ಪ್ರಸಂಗಗಳು

1. ವಾಜಿಗ್ರಹಣ ಅಥವಾ ಯೌವನಾಶ್ವ ಕಾಳಗ

ವಾಜಿಗ್ರಹಣ ಅಥವಾ ಯೌವನಾಶ್ವ ಕಾಳಗ ಒಂದು ಪುಟ್ಟ ಪ್ರಸಂಗಕೃತಿ. ಪಾಂಡವರು ಅಶ್ವಮೇಧಯಾಗಕ್ಕೆ ಅಗತ್ಯವಾದ ಕುದುರೆಯನ್ನು ಭದ್ರಾವತಿ ನಗರದ ಯೌವನಾಶ್ವನಿಂದ ಗೆದ್ದುತರುವ ಒಂದೇ ಒಂದು ಪ್ರಮುಖ ಘಟನೆಯನ್ನು ಕೇಂದ್ರವಾಗಿಟ್ಟುಕೊಂಡು ರಚನೆಯಾದುದರಿಂದ ಬಂಧದ ದೃಷ್ಟಿಯಿಂದಲೂ ಗಮನಾರ್ಹವಾಗುತ್ತದೆ.  ಇದೇ ಘಟನೆಯನ್ನು ಆಧರಿಸಿ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಜಾನಕೈ ತಿಮ್ಮಪ್ಪ ವೆಂಕಪ್ಪ ಹೆಗಡೆ ಯೌವನಾಶ್ವ ಅನುಸಾಲ್ವ ಕಾಳಗ ರಚಿಸಿದ್ದಾರೆ, ಹೆಸರೇ ಹೇಳುವಂತೆ ಆ ಕೃತಿಯಲ್ಲಿ ಅನುಸಾಲ್ವನೆನ್ನುವ ರಾಕ್ಷಸ ಯಜ್ಞಾಶ್ವವನ್ನು ಅಡಗಿಸಿಬಿಡುವ ಕಥೆಯೂ ಒಳಗೊಂಡಿದೆ. ಈ ಇಬ್ಬರೂ ಸಮಕಾಲೀನರ ಎರಡೂ ಪ್ರಸಂಗ ಕೃತಿಗಳು 1957ರಲ್ಲಿ ಪ್ರಥಮ ಮುದ್ರಣ ಕಂಡಿವೆ.  ಮಹಾಭಾರತದ ಅಶ್ವಮೇಧದ ಭಾಗಕ್ಕೆ ಸಂಬಂಧಿಸಿದ ಬಹುತೇಕ ಪ್ರಸಂಗ ಕೃತಿಗಳಲ್ಲಿ ಯೌವನಾಶ್ವ, ಅನುಸಾಲ್ವರ ಸಂದರ್ಭ ಪ್ರಸ್ತಾಪವಾದರೂ ಸ್ವತಂತ್ರ ಪ್ರಸಂಗ ಕೃತಿಗಳಾಗಿ ಆಕಾರಪಡೆದುದು ಇವೆರಡರಲ್ಲಿಯೇ. ಅದರಲ್ಲಿಯೂ ಬಡಕ್ಕಿಲ ವೆಂಕಟರಮಣ ಭಟ್ಟರ ವಾಜಿಗ್ರಹಣ ಅಥವಾ ಯೌವನಾಶ್ವ ಕಾಳಗ ಸಮಯಮಿತಿಯ ಪ್ರದರ್ಶನಕ್ಕೆ ಹೇಳಿ ಮಾಡಿಸಿದ್ದು. ಸ್ತ್ರೀಪಾತ್ರವೇ ಇಲ್ಲದಿರುವುದು ಈ ಕೃತಿಯ ವಿಶೇಷಗಳಲ್ಲಿ ಒಂದು.

ಪ್ರಸಂಗಕಾರರ ಪರಿಚಯ : ಬಡಕ್ಕಿಲ ವೆಂಕಟರಮಣಭಟ್ಟ

ಪ್ರಸಂಗ ಕೃತಿಯ ಪ್ರಥಮ ಮುದ್ರಣದಲ್ಲಿ ಮುಳಿಯ ಮಹಾಬಲಭಟ್ಟರು ಪ್ರಸಂಗಕಾರರನ್ನು ಪರಿಚಯಿಸಿಕೊಟ್ಟಿದ್ದಾರೆ. ಈ ಪರಿಚಯದಲ್ಲಿಯೂ ಪ್ರಸಂಗಕಾರ ಹುಟ್ಟಿದ ಮತ್ತು ಮರಣ ಹೊಂದಿದ ವರ್ಷಗಳು ಪ್ರಸ್ತಾಪವಾಗಲಿಲ್ಲ. ಯಕ್ಷಗಾನ ಮಹಾಭಾರತದ ಪ್ರಸಂಗಗಳು ಗ್ರಂಥದ ಡಾ. ಆನಂದರಾಮ ಉಪಾಧ್ಯಾಯರು ಕೃತಿಯ ಪ್ರಕಟಣೆಯ ವರ್ಷವಾದ 1957ನ್ನು ಆಧರಿಸಿ ಇಪ್ಪತ್ತನೆಯ ಶತಮಾನದವರೆಂದು ಸೂಚಿಸಿದ್ದಾರೆ. ಪ್ರಸಂಗಕಾರರು ಹಲವು ವರ್ಷ ಮಂಗಳೂರಿನಲ್ಲಿ ವ್ಯಾಪಾರ, ವ್ಯವಹಾರ ನಡೆಸಿದವರು. ನಂತರ ಮಂಗಳೂರನ್ನು ಬಿಟ್ಟು ಪುತ್ತೂರಿನ ಸಮೀಪದ ಬಡೆಕ್ಕಿಲದಲ್ಲಿ ನೆಲೆಗೊಂಡವರು. ಇದೇ ಅವರ ಹುಟ್ಟೂರು. ವಿದ್ವತ್ತಿನ ಜತೆಗೆ ಸ್ವತಂತ್ರ ವಿಚಾರಶಕ್ತಿಯನ್ನು ಬೆಳೆಸಿಕೊಂಡವರು. ವೆಂಕಟರಮಣಂ ಬಡಿಕಿಲ ಶಂಕರನಾಯಾರಣ…. ಭೂಸುರನ ಸುತಂ ಪಂಕಜನಾಭನ ಪದಯುಗ ಕಿಂಕರನಾಂ ಎಂದು ಮುಕ್ತಾಯದ ಕಂದಪದ್ಯವೊಂದರಲ್ಲಿ ಹೇಳಿಕೊಂಡಿದ್ದಾರೆ. ಕರ್ನಾಟಕ ಪರಿಸ್ಥಿತಿ ಎಂಬ ಚಿಕ್ಕ ಕಾವ್ಯವನ್ನೂ ತಿಳಿಗನ್ನಡದ ಭಾಮಿನಿ ಷಟ್ಪದಿಯಲ್ಲಿ ಗೀತ ಸಾರ ಎಂಬ ಕೃತಿಯನ್ನೂ ರಚಿಸಿದವರು. ಯಕ್ಷಗಾನದ ತಾಳಮದ್ದಲೆಯ ಅರ್ಥಗಾರಿಕೆ ಯಲ್ಲಿಯೂ ಪಳಗಿದವರು, ಈ ಪ್ರಸಂಗಕೃತಿಯನ್ನಲ್ಲದೆ ಭೀಮವಿಜಯ ಎಂಬ ಇನ್ನೊಂದು ಪ್ರಸಂಗಕೃತಿಯನ್ನೂ ರಚಿಸಿದವರು.

ಕಥಾಸಾರ :

ಮಹಾಭಾರತದ ಯುದ್ಧದ ತರುವಾಯ ಪಾಂಡವರು ಹಸ್ತಿನಾವತಿಯಲ್ಲಿ ರಾಜ್ಯಭಾರ ಮಾಡುತ್ತಿದ್ದರು. ಯುದ್ಧದಲ್ಲಿ ಹತ್ತಿರದ ಬಂಧುಗಳನ್ನೂ ಗುರುಗಳನ್ನೂ ಕೊಂದುಬಿಟ್ಟೆವೆಂಬ ನೋವು ಧರ‌್ಮರಾಜನನ್ನು ಕಾಡತೊಡಗಿತು. ತನ್ನ ಅಳಲನ್ನು ತಮ್ಮಂದಿರೊಂದಿಗೆ ಹಂಚಿಕೊಂಡ. ಅರಸುತನವನ್ನೇ ಬಿಟ್ಟು ವನವಾಸಕ್ಕೆ ಹೋಗಿಬಿಡುವುದಾಗಿ ಹೇಳಿದ. ಭೀಮ ಸಮಾಧಾನ ಹೇಳುತ್ತಿರುವಷ್ಟರಲ್ಲಿಯೇ ವೇದವ್ಯಾಸಮುನಿ ಆಸ್ಥಾನಕ್ಕೆ ಬಂದ. ಅವನಲ್ಲಿಯೂ ಧರ‌್ಮರಾಜ ತನ್ನ ಅಳಲನ್ನು ತೋಡಿಕೊಂಡ. ಅಶ್ವಮೇಧ ಯಾಗವನ್ನು ನಿರ್ವಹಿಸಿದರೆ ಬಂಧು ಹತ್ಯದೋಷ ನಿವಾರಣೆಯಾಗುವುದೆಂದು ವೇದವ್ಯಾಸ ಸಲಹೆ ನೀಡಿದ. ಮರುತ್ತನ ಸಂಪತ್ತಿನ ವಿಷಯವನ್ನೂ ಭದ್ರಾವತಿ ನಗರದ ಯೌವನಾಶ್ವನಲ್ಲಿ ಯಜ್ಞಕ್ಕೆ ಅಗತ್ಯವಾದ ದಿವ್ಯಾಶ್ವವಿದೆ ಎಂಬುದನ್ನೂ ತಿಳಿಸಿದ. ಭೀಮ, ವೃಷಕೇತು ಮುಂತಾದವರು ಸಂಪತ್ತನ್ನೂ ಕುದುರೆಯನ್ನೂ ತರುವ ಭರವಸೆ ನೀಡಿದರು. ಇವಕ್ಕೆಲ್ಲ ಶ್ರೀ ಕೃಷ್ಣನ ಅನುಗ್ರಹ ಅಗತ್ಯವೆಂದು ಅಂದುಕೊಳ್ಳುವಷ್ಟರಲ್ಲಿ ಕೃಷ್ಣ ಹಸ್ತಿನಾವತಿಗೇ ಬಂದು ಧರ‌್ಮರಾಜನ ಯಜ್ಞದ ವಿಷಯವನ್ನೂ ತೊಡಕು-ತೊಂದರೆಗಳನ್ನೂ ವಿವರಿಸಿದ. ಕೃಷ್ಣ ಯಜ್ಞನಿರ್ವಹಣೆಯ ಸಾಧ್ಯತೆಯನ್ನು ಅನುಮಾನಿಸಿದ. ಯಜ್ಞಾಶ್ವವನ್ನು ತರಲು ಹೊರಡುವ ಭೀಮನ ಸಾಮರ್ಥ್ಯವನ್ನೂ ಶಂಕಿಸಿದ. ಭೀಮ ಜೀವಮಾನದ ತನ್ನ ಸಾಧನೆಗಳನ್ನೆಲ್ಲ ಹೇಳಿಕೊಂಡು ಸಾಮರ್ಥ್ಯವನ್ನೂ ಸಮರ್ಥಿಸಿಕೊಂಡ, ನಂತರ ಕೃಷ್ಣನೂ ಒಪ್ಪಿ ಶುಭ ಹಾರೈಸಿ ದ್ವಾರಕೆಗೆ ಹೊರಟ.

ಈ ಕಡೆ ಭೀಮನ ನೇತೃತ್ವದಲ್ಲಿ ವೃಷಕೇತು, ಮೇಘನಾದ ಮುಂತಾದವರು ಭದ್ರಾವತಿ ನಗರಕ್ಕೆ ಬಂದರು. ನಗರದ ಸೌಂದರ‌್ಯವನ್ನು ಅಚ್ಚುಕಟ್ಟುತನವನ್ನೂ ಕಂಡು ಮೆಚ್ಚದರು. ಮೇಘನಾದ ವೃಷಕೇತು ಇಬ್ಬರೂ ಅಪ್ಪಣೆಕೊಟ್ಟರೆ ಕುದುರೆಯನ್ನು ಭೀಮನಿಗೆ ತಂದು ಒಪ್ಪಿಸುವ ಪೌರುಷವನ್ನು ಸಾರಿದರು. ಆದರೆ ಸ್ನಾನಕ್ಕೆಂದು ಸರೋವರಕ್ಕೆ ಬಂದ ಅಸಂಖ್ಯ ಕುದುರೆಗಳಲ್ಲಿ ಈ ದಿವ್ಯಾಶ್ವವನ್ನು ಕಾಣದೆ ಚಿಂತೆಗೀಡಾದರು. ಕೊನೆಗೆ  ಅದನ್ನು ಕಂಡು ಹಿಡಿದು  ಮೇಘನಾದ ಮಾಯೆಯಿಂದ ಕುದುರೆಯನ್ನು ಹಿಡಿದು ತಂದ. ಕುದುರೆಯನ್ನು ಬಿಡಿಸಿಕೊಂಡು ಹೋಗಲು ಬಂದ ಸೈನ್ಯವನ್ನೂ ಯೌವನಾಶ್ವನನ್ನೂ ವೃಷಕೇತು ಯುದ್ಧದಲ್ಲಿ ಸೋಲಿಸಿದ. ಯೌವನಾಶ್ವ ಭೀಮನಿಗೆ ಶರಣಾದ. ಪಾಂಡವರು ನೆರವೇರಿಸಲಿರುವ ಯಜ್ಞಕಾರ್ಯದಲ್ಲಿ ತಾನೂ ನೆರವಾಗಲು ಎಲ್ಲರೊಡನೆ ಯೌವನಾಶ್ವನೂ ಹಸ್ತಿನಾವತಿಗೆ ಬಂದ. ಕುದುರೆಯನ್ನೂ ಗೌರವದಿಂದ ಬರಮಾಡಿಕೊಂಡರು. ಉಳಿದೆಲ್ಲ ಸಿದ್ಧತೆಗಳೊಂದಿಗೆ ಯಜ್ಞ ಯಶಸ್ವಿಯಾಗಿ ಪರಿಸಮಾಪ್ತಿಗೊಂಡಿತೆನ್ನುವಲ್ಲಿಗೆ ಕಥೆ ಮಂಗಲವಾಗುತ್ತದೆ.

* * *

2. ಯೌವನಾಶ್ವ ಅನುಸಾಲ್ವ ಕಾಳಗ

ಸ್ತ್ರೀ ಪಾತ್ರವಿಲ್ಲದಿರುವುದು ಬಡಕ್ಕಿಲ ವೆಂಕಟರಮಣ ಭಟ್ಟರ ಯೌವನಾಶ್ವ ಕಾಳಗದ ವೈಶಿಷ್ಟ್ಯವಾದರೆ ಜಾನಕೈ ತಿಮ್ಮಪ್ಪ ಹೆಗಡೆಯವರ ಯೌವನಾಶ್ವ ಅನುಸಾಲ್ವ ಕಾಳಗದಲ್ಲಿ ಸ್ತ್ರೀ ಪಾತ್ರವನ್ನು ಅಳವಡಿಸಿರುವುದು ವೈಶಿಷ್ಟ್ಯವಾಗಿದೆ. ನಿಜವಾಗಿ ಈ ಕಥೆಯ ಸಂದರ್ಭದಲ್ಲಿ ಸ್ತ್ರೀ ಪಾತ್ರಕ್ಕೆ ಅವಕಾಶವಿಲ್ಲ. ಅನುಸಾಲ್ವ ಕಾಳಗದಲ್ಲಿ ಸತ್ಯಭಾಮೆಯ ಪಾತ್ರಕ್ಕೆ ಸಣ್ಣ ಅವಕಾಶವಿದೆ. ಅದೇ ಯೌವನಾಶ್ವಕಾಳಗದಲ್ಲಿ ಅವಕಾಶ ಇಲ್ಲವೇ ಇಲ್ಲ. ಆದರೆ ಯಕ್ಷಗಾನರಂಗಭೂಮಿಯಲ್ಲಿ ಸ್ತ್ರೀ ಪಾತ್ರದ ಪರಂಪರೆ ಅವಿಚ್ಛಿನ್ನವಾಗಿದೆ. ಸ್ತ್ರೀ ಪಾತ್ರಗಳಿಲ್ಲದ ಪ್ರಸಂಗ ಕೃತಿಯನ್ನಾಗಲೀ ಪ್ರದರ್ಶನವನ್ನಾಗಲೀ ನಿರೀಕ್ಷಿಸುವುದು ಕಷ್ಟ. ಆದ್ದರಿಂದ ಜಾನಕೈ ತಿಮ್ಮಪ್ಪ ಹೆಗಡೆ ಈ ಪ್ರಸಂಗ ಕೃತಿಯಲ್ಲಿ ರುಕ್ಷ್ಮಿಣಿಯ ಪಾತ್ರವನ್ನು ತರುತ್ತಾರೆ. ಹಸ್ತಿನಾವತಿಗೆ ಹೊರಟುನಿಂತ ಕೃಷ್ಣನನ್ನು ಕಂಡು ಅವಳು ವಿಷಯವನ್ನೆಲ್ಲ ಕೇಳಿತಿಳಿದಂತೆ ಸಂದರ್ಭವಿದೆ.

ಜಾನಕೈ ತಿಮ್ಮಪ್ಪ ಹೆಗಡೆ :

ತಿಮ್ಮಪ್ಪ ಹೆಗಡೆಯವರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಕರ್ಕಿಸವಲು ಗ್ರಾಮದ ಜಾನಕೈ ಎಂಬ ಊರಿನವರು. 1898ರಲ್ಲಿ ಹುಟ್ಟಿದರು. ತಂದೆಯ ಹೆಸರು ವೆಂಕಪ್ಪ. ತಾಯಿಯ ಹೆಸರು ಗಂಗೆ. ಆ ಕಾಲದಲ್ಲಿ ಇವರು ಕೇವಲ ಆರನೆಯ ತರಗತಿಯವರೆಗೆ ಓದಿದವರು. ನಂತರ ಆ ಕಾಲದ ಪ್ರಸಿದ್ಧ ಭಾಗವತರಾದ ಹೊನ್ನಾವರ ತಾಲೂಕಿನ ಗುಡಿಹಿತ್ತಲ ವೆಂಕಪ್ಪ ಹೆಗಡೆಯಲ್ಲಿ ಕೆಲವು ಕಾಲ ಯಕ್ಷಗಾನದ ತಾಳ ಲಯಗಳನ್ನೂ ಅಭ್ಯಾಸ ಮಾಡಿದರು. ಮದನಸುಂದರಿ ಸ್ವಯಂವರ, ಮಾರುತಿ ಪ್ರತಾಪ, ಸಂಪೂರ್ಣ ರಾಮಾಯಣ, ಅನಸೂಯಾ ಚರಿತ್ರ, ಶನಿಕಥೆ, ಸತ್ಯಹರಿಶ್ಚಂದ್ರ ಕಥೆ, ಸತ್ಯವ್ರತ ಚಿತ್ರಕೇತು ಕಾಳಗ, ಲವಲೀ ಕಲ್ಯಾಣ ಇವು ಇವರ ಇತರ ಪ್ರಸಂಗ ಕೃತಿಗಳು. ಇವರ ಸತ್ಯಹರಿಶ್ಚಂದ್ರ ಕೃತಿ ರಂಗದಲ್ಲಿ ತುಂಬ ಯಶಸ್ಸನ್ನು ಕಂಡಿದೆ. ಅನಂತವ್ರತದ ಕಥೆಯನ್ನು ಹಾಡಿನರೂಪದಲ್ಲಿ ರಚಿಸಿದ್ದಾರೆ.

* * *

3. ಅನುಸಾಲ್ವ ಗರ್ವಭಂಗ ಮತ್ತು ನೀಲಧ್ವಜ ಕಾಳಗ

ಪ್ರಸಂಗ ಕೃತಿಯಲ್ಲಿಯೂ ಮಹಾಭಾರತದ ಅಶ್ವಮೇಧ ಪರ್ವದ ಥೆಯೇ ಬಳಕೆಗೊಂಡಿದೆ. ಪಾಂಡವರ ಅಶ್ವಮೇಧಕ್ಕೆ ಭದ್ರಾವತಿ ನಗರದ ಯೌವನಾಶ್ವರಾಜನಿಂದ ಕುದುರೆಯನ್ನು ತರುವ ಕಥೆಯನ್ನು ಒಳಗೊಂಡಂತೆ ಅದರ ಮುಂದುವರಿಕೆಯಾಗಿದೆ. ಪಾಂಡವರ ಅಶ್ವಮೇಧದಲ್ಲಿ ಯಾರಾದರೊಬ್ಬ ರಾಜನೊಂದಿಗೆ ಯುದ್ಧಮಾಡುವ ಕಥೆ ಇದ್ದರೂ, ಮಹಾಭಾರತ ಯುದ್ಧದ ನಂತರ ಗೋತ್ರ ಹತ್ಯೆಗಾಗಿ ಚಿಂತಿಸುತ್ತಿದ್ದ ಧರ್ಮರಾಜನಿಗೆ ವೇದವ್ಯಾಸಮುನಿ ಅಶ್ವಮೇಧದ ಸಲಹೆಕೊಡುವಲ್ಲಿಂದಲೇ ಪ್ರಸಂಗ ಕೃತಿಯ ಕಥೆ ತೊಡಗುತ್ತದೆ. ಈ ಕೃತಿ 1954ರಲ್ಲಿ ಮೊದಲ ಸಲ ಮುದ್ರಣಗೊಂಡಿದೆ. ಕಾಳಗವೇ ಪ್ರಧಾನವಾಗಿರುವುದರಿಂದ ರಂಗಸ್ಥಳದಲ್ಲಿ ಜನಪ್ರಿಯವೂ ಆಗಿದೆ. ಜ್ವಾಲಾ ಎಂಬ ಹೆಸರಿನಲ್ಲಿ ಡೇರೆ ಮೇಳದ ತಿರುಗಾಟದಲ್ಲಿಯೂ ಗಲ್ಲಾ ಪೆಟ್ಟಿಗೆ ತುಂಬುವಲ್ಲಿಯೂ ಯಶಸ್ವಿಯಾದುದು.

ಕಥಾ ಸಾರಾಂಶ :

ಕೌರವ-ಪಾಂಡವರ ಕುರುಕ್ಷೇತ್ರ ಯುದ್ಧದ ಪರಿಣಾಮವಾಗಿ ಪಾಂಡವರು ಸಹಜವಾಗಿಯೇ ಯುದ್ಧದಲ್ಲಿ ತಮ್ಮ ಕುಲಭಾಂದವರನ್ನು ಕೊಲ್ಲಬೇಕಾಯಿತು. ಧರ್ಮರಾಜನಿಗೆ ಇದು ನಿರಂತರವಾಗಿ ಕಾಡುವ ಸಂಗತಿಯಾಯಿತು. ಇದರ ಪರಿಹಾರಕ್ಕಾಗಿ ವೇದವ್ಯಾಸರ ಸಲಹೆಯಂತೆ ಅಶ್ವಮೇಧಯಾಗವನ್ನು ನೆರವೇರಿಸುವ ತಯಾರಿಗಳಾದವು. ಭದ್ರಾವತಿ ನಗರದಿಂದ ಯೌವನಾಶ್ವ ಮೊದಲು ಯುದ್ಧಮಾಡಿದರೂ ನಂತರ ದಿವ್ಯಾಶ್ವದೊಂದಿಗೆ ಹಸ್ತಿನಾವತಿಗೆ ಬಂದ. ಮರುತ್ತನ ಯಜ್ಞದಲ್ಲಿ ಮಿಕ್ಕುಳಿದ ಧನ-ಕನಕಗಳೂ ಹಿಮವತ್ ಪ್ರದೇಶದಿಂದ ಬಂದವು. ಭೀಮ ದ್ವಾರಕೆಗೆ ಹೋಗಿ ಕೃಷ್ಣನನ್ನೂ ಸಕಲ ಯಾದವರನ್ನೂ ಆಮಂತ್ರಿಸಿ ಕರೆದುಕೊಂಡೇ ಬಂದ. ಎಲ್ಲರೂ ಸರಸಸಲ್ಲಾಪದ ಸಂಭ್ರಮದಲ್ಲಿದ್ದರು. ಇನ್ನೇನು ಕುದುರೆಯನ್ನು ಶೃಂಗರಿಸಿ ಪೂಜಿಸಿ ದಿಗ್ವಿಜಯಕ್ಕೆ ಹೊರಡಬೇಕೆನ್ನುವಷ್ಟರಲ್ಲಿ ಕುದುರೆಯೇ ಮಾಯವಾಗಿ ಬಿಟ್ಟಿತು. ಕೃಷ್ಣನಿಂದ ಹಿಂದೆ ಹತನಾದ ರಾಕ್ಷಸಸಾಲ್ವನ ತಮ್ಮ ಅನುಸಾಲ್ವ ಅಶ್ವಮೇಧದ ವಿವರಗಳನ್ನೆಲ್ಲ ತಿಳಿದು ಕೃಷ್ಣನನ್ನು ಕೊಂದು ಸೇಡು ತೀರಿಸಿಕೊಳ್ಳಲು ಇದೇ ತಕ್ಕ ಸಮಯವೆಂದು ಭಾವಿಸಿ ತನ್ನ ಬಲದೊಂದಿಗೆ ಹಸ್ತಿನಾವತಿಗೆ ಬಂದಿದ್ದ. ಮಾಯಾ ಬಲದಿಂದ ಕಾರ್ಗತ್ತಲೆಯನ್ನೂ ಕವಿಸಿ ಅಶ್ವಮೇಧದ ಕುದುರೆಯನ್ನೇ ಅಪಹರಿಸಿ ಬಿಟ್ಟಿದ್ದ. ಕುದುರೆಂುನ್ನು ಪೂಜಿಸಲು ಅಣಿಯಾಗಿದ್ದ ನಾರಿಯರೆಲ್ಲ ಕುದುರೆಯನ್ನೇ ಕಾಣದೆ ಕಂಗಾಲಾಗಿದ್ದರು. ಅನುಸಾಲ್ವ ತನ್ನ ಬಲವನ್ನೆಲ್ಲ ಜೋಡಿಸಿ ಯುದ್ಧಕ್ಕೆ ಕಾದುನಿಂತಿದ್ದ.

ನಡೆದ ವಿದ್ಯಮಾನಗಳನ್ನೆಲ್ಲ ಕೃಷ್ಣ ಗಮನಿಸಿದ. ಅನುಸಾಲ್ವನೊಡನೆ ಯುದ್ಧಮಾಡಿ ಕುದುರೆಯನ್ನು ಹುಡುಕಿ ತರಲು ಪ್ರದ್ಯುಮ್ನ ಮುಂದೆ ಬಂದ. ಆದರೆ ಯುದ್ಧದಲ್ಲಿ ಸೋತು ಹೋದ. ಕೃಷ್ಣ ಪ್ರದ್ಯುಮ್ನನನ್ನು ಹಿಯಾಳಿಸಿ ಎಡಗಾಲಿನಿಂದ ಒದ್ದ. ನಂತರ ಕರ್ಣನ ಮಗ ವೃಷಕೇತು ಅನುಸಾಲ್ವನೊಡನೆ ಯುದ್ಧ ಮಾಡಲು ಹೋಗಿ ಯುದ್ಧದಲ್ಲಿ ಸೋತು ಮೂರ್ಛೆ ಹೋಗಿಬಿಟ್ಟ. ಬಳಿಕ ಕೃಷ್ಣನೇ ಸ್ವತಃ ಯುದ್ಧಕ್ಕೆ ನಿಂತ. ಅವನೂ ಸೋತುಹೋದ. ಸೋತ ಕೃಷ್ಣನನ್ನು ಸತ್ಯಭಾಮೆ ನಿಂದಿಸಿದಳು. ಸಿಟ್ಟಿಗೆದ್ದ ಕೃಷ್ಣ ಮತ್ತೆ ಯುದ್ಧಕ್ಕೆ ಅಣಿಯಾಗುವಷ್ಟರಲ್ಲಿ ಮೂರ್ಛೆ ತಿಳಿದೆದ್ದ ವೃಷಕೇತು ಅನುಸಾಲ್ವನ ಮೇಲೆ ರೋಷಾವೇಶದಿಂದ ಏರಿಹೋಗಿ ಅನುಸಾಲ್ವನನ್ನು ನೆಲಕ್ಕೆ ಕೆಡವಿ ಸೆರೆಹಿಡಿದ. ಅನುಸಾಲ್ವನಿಗೆ ತನ್ನ ತಪ್ಪಿನ ಅರಿವಾಯಿತು. ಸೊಕ್ಕು ಮುರಿದಿತ್ತು. ಕೃಷ್ಣನಿಗೆ ಶರಣಾದ. ಕುದುರೆಯನ್ನು ಒಪ್ಪಿಸಿ ಅದರ ರಕ್ಷಣೆಯ ಭಾರವನ್ನೂ ಹೊತ್ತು ಪಾಂಡವಬಲವನ್ನು ಸೇರಿಕೊಂಡ.

ಯಜ್ಞ ನಿರಾತಂಕಗೊಂಡು ಪ್ರಾರಂಭವಾಯಿತು. ಗಂಗಾನದಿಯ ದಡದಲ್ಲಿ ಯಜ್ಞಶಾಲೆಯನ್ನು ನಿರ್ಮಿಸಿ ಪದ್ಧತಿಯಂತೆ ಶುಭಮುಹೂರ್ತದಲ್ಲಿ ಕುದುರೆಯನ್ನು ದಿಗ್ವಿಜಯಕ್ಕೆ ಹೊರಡಿಸಿದರು. ಕುದುರೆಯ ಬೆಂಗಾವಲಿಗೆ ಅರ್ಜುನ, ಪ್ರದ್ಯುಮ್ನ, ವೃಷಕೇತು, ಸಾತ್ಯಕಿ, ಕೃತವರ್ಮ, ಅನುಸಾಲ್ವ ಮುಂತಾದವರೆಲ್ಲ ಹೊರಟರು. ದಕ್ಷಿಣದ ಅರಸರಿಂದ ಕಪ್ಪಕಾಣಿಕೆಗಳನ್ನೆಲ್ಲ ಸ್ವೀಕರಿಸುತ್ತ ಬರುತ್ತಿರುವಾಗ ಕುದುರೆ ಮಾಹಿಷ್ಮತಿ ನಗರವನ್ನು ಪ್ರವೇಶಿಸಿತು.

ಮಾಹಿಷ್ಮತಿಯಲ್ಲಿ ನೀಲಧ್ವಜನೆಂಬ ಅರಸು ಆಳುತ್ತಿದ್ದ. ಅವನಿಗೆ ಸುನಂದೆ ಮತ್ತು ಜ್ವಾಲೆ ಎಂಬ ಇಬ್ಬರು ರಾಣಿಯರಿದ್ದರು. ಸುನಂದೆಯ ಮಗ ಪ್ರವೀರ, ಜ್ವಾಲೆಯ ಮಗಳು ಸ್ವಾಹಾದೇವಿ. ಅವಳು ಅಗ್ನಿಯನ್ನು ಇಷ್ಟಪಟ್ಟು ಮದುವೆಯಾಗಿದ್ದಳು. ಅಗ್ನಿ ಮಾವನಮನೆಯಲ್ಲೇ ಉಳಿದುಕೊಂಡು ಪಟ್ಟಣವನ್ನು ಕಾಪಾಡುತ್ತಿದ್ದ. ಪ್ರವೀರ ತನ್ನ ಮಡದಿ ಮದನಮಂಜರಿಯೊಂದಿಗೆ ವನವಿಹಾರಕ್ಕೆ ಜಲಕ್ರೀಡೆಗೆ ಬಂದವ ಯಜ್ಞಾಶ್ವವನ್ನು ಕಂಡ. ಹಣೆಯಲ್ಲಿರುವ ಬರೆಹ ಓದಿ ಕುದುರೆಯನ್ನು ಕಟ್ಟಿ ಯುದ್ಧಕ್ಕೆ ಸಿದ್ಧನಾದ. ವಿಷಯ ತಿಳಿದ ನೀಲಧ್ವಜನೂ ಮಗನ ಬೆಂಬಲಕ್ಕೆ ನಿಂತ.  ಮೊದಲು ಕರ್ಣನ ಮಗ ವೃಷಕೇತು ಪ್ರವೀರನೊಡನೆ ಯುದ್ಧ ಮಾಡಿ ಸೋತ.  ಬಳಿಕ ಅನುಸಾಲ್ವನೂ ಯುದ್ಧಕ್ಕೆ ನಿಂತ. ನೀಲಧ್ವಜ ಯುದ್ಧರಂಗ ಪ್ರವೇಶಿಸಿ  ಅರ್ಜುನನೊಡನೆ ಯುದ್ಧದಲ್ಲಿ ತೊಡಗಿದ. ಅಗ್ನಿಯೂ ಮಾವನ ಸಹಾಯಕ್ಕೆ ಬಂದ. ನೀಲಧ್ವಜನಿಗೆ ಸೋಲಿನ ಸಂದರ್ಭ ಒದಗಿದಾಗ ಅಗ್ನಿ ಸಿಟ್ಟಿಗೆದ್ದು ಅರ್ಜುನನ ಸೈನ್ಯವನ್ನೇ ಸುಡತೊಡಗಿದ. ಅರ್ಜುನ ಕಂಗಾಲಾದ. ಬೇರೆ ದಾರಿಯಿಲ್ಲದೆ ಶಸ್ತ್ರವನ್ನು ಕೆಳಗಿಟ್ಟು ಅಗ್ನಿದೇವನನ್ನೂ ಸ್ತುತಿಸಿದ. ಪ್ರತ್ಯಕ್ಷನಾದ ಅಗ್ನಿದೇವ ಪಾಂಡವರ ಯಜ್ಞಕ್ಕೆ ಕೃಷ್ಣನ ಅನುಮತಿ ಮತ್ತು ಅನುಗ್ರಹ ಎರಡೂ ಇರುವುದನ್ನು ಗಮನಿಸಿದ. ಅರ್ಜುನನ ಸೈನ್ಯವನ್ನು ವ್ಯಾಪಿಸಿದ ಬೆಂಕಿಯನ್ನು ತಡೆದ. ಸೋಲೊಪ್ಪಿಕೊಂಡು ಕಪ್ಪಕೊಡುವಂತೆ ಮಾವನಿಗೂ ಸೂಚಿಸಿದ. ನೀಲಧ್ವಜ ಕಪ್ಪಕೊಡಲು ಸಿದ್ಧನಾದ. ಅಷ್ಟರಲ್ಲಿ ಸ್ವಾಭಿಮಾನಿಯಾದ ಜ್ವಾಲೆ ಬಂದು ನೀಲಧ್ವಜನನ್ನು ತಡೆದು ಕಪ್ಪ ನೀಡುವುದನ್ನೂ ವಿರೋಧಿಸಿದಳು. ಯುದ್ಧವನ್ನೇ ಮುಂದುವರಿಸಬೇಕೆಂದು ಹಠ ಹೊತ್ತಳು.

ಮರುದಿನ ನೀಲಧ್ವಜ ಮತ್ತೆ ಯುದ್ಧಕ್ಕೆ ಬಂದ. ಮೊದಲು ಪ್ರವೀರನಿಗೂ ಅರ್ಜುನನಿಗೂ ಯುದ್ಧವಾಯಿತು. ಯುದ್ಧದಲ್ಲಿ ಪ್ರವೀರನ ರುಂಡ ನೆಲಕ್ಕುರುಳಿತು. ನೀಲಧ್ವಜ ದುಃಖಿತನಾದ. ಕ್ರೋಧಗೊಂಡು ಅರ್ಜುನನ ಮೇಲೆ ಏರಿಹೋದ. ಯುದ್ಧದಲ್ಲಿ ಸೋತುಹೋದ. ಹೆಂಡತಿ ಜ್ವಾಲೆಯ ಮೇಲೆ ಸಿಟ್ಟಿಗೆದ್ದು ಬೈದು ಪಟ್ಟಣದಿಂದ ಹೊರಗೆ ಹಾಕಿಬಿಟ್ಟ. ಕುದುರೆಯನ್ನು ಪಾಂಡವರಿಗೆ ಒಪ್ಪಿಸಿ ಕಪ್ಪ ಕಾಣಿಕೆಗಳನ್ನು ನೀಡಿದ. ಅರ್ಜುನ ನೀಲಧ್ವಜವನ್ನು ಗೌರವದಿಂದ ಬರಮಾಡಿಗೊಂಡ.

ಮಾಹಿಷ್ಮತಿಯಿಂದ ಹೊರದಬ್ಬಿಸಿಕೊಂಡ ಜ್ವಾಲೆ ತನ್ನ ತಮ್ಮ ಉನ್ಮುಖನಲ್ಲಿಗೆ ಬಂದಳು. ಯುದ್ಧಕ್ಕೆ ಹುರಿದುಂಬಿಸಲು ಪ್ರಯತ್ನಿಸಿದಳು. ಕೃಷ್ಣನೊಡನೆ ವೈರ ಸಲ್ಲದೆಂದು ಆತ ಅವಳ ಮಾತನ್ನು ಧಿಕ್ಕರಿಸಿದ. ನಿರಾಸೆಗೊಂಡ ಅವಳು ಗಂಗಾದೇವಿಯಲ್ಲಿಗೆ ಹೋಗಿ ಭೀಷ್ಮನನ್ನು ಅರ್ಜುನ ಕೊಂದುದನ್ನು ನೆನಪಿಸಿ ತಿಂಗಳೊಳಗೆ ಅರ್ಜುನನ ರುಂಡ ಅವನ ಮಗನಿಂದಲೇ ನೆಲಕ್ಕುರುಳಲಿ ಎಂದು ಶಾಪಕೊಡುವಂತೆ ಪ್ರೇರೇಪಿಸಿದಳು. ತಾನು ಬಾಣವಾಗಿ ಬಭ್ರುವಾಹನನ ಬತ್ತಳಿಕೆಯನ್ನು ಸೇರಿಕೊಂಡಳು. ಮಾಹಿಷ್ಮತಿಯಿಂದ ಕುದುರೆ ಮುಂದಕ್ಕೆ ಹೋಗಿ ಯಜ್ಞ ನೆರವೇರಿತೆಂಬಲ್ಲಿಗೆ ಪ್ರಸಂಗದ ಕಥೆ ಮಂಗಲವಾಗುತ್ತದೆ.

ಪ್ರಸಂಗಕಾರ :

ಪ್ರಸಂಗಕಾರ ಅಜ್ಜನಗದ್ದೆ ಶಂಕರನಾರಾಯಣಯ್ಯ. ಇವರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ತಾಲೂಕಿನ ಪಡನೂರು ಗ್ರಾಮದ ಸುಬ್ರಾಯನೆಂಬವರ ಮಗ ಎಂದು ಪ್ರಸಂಗಕೃತಿಯಲ್ಲಿದೆ. ಇವರು ಪ್ರಸಿದ್ಧ ಭಾಗವತರಾಗಿದ್ದರು. ಇವರ ಚಿಕ್ಕಪ್ಪ ದೇರಾಜೆ ಸೀತಾರಾಮಯ್ಯ ಅತ್ಯಂತ ಪ್ರಸಿದ್ಧ ಅರ್ಥಧಾರಿಗಳಾಗಿದ್ದರು. ಅಲ್ಲದೆ ಮಹಾಭಾರತದ, ರಾಮಾಯಣದ ಕಥೆಗಳನ್ನು ಸರಳಗನ್ನಡದಲ್ಲಿ ನಿರೂಪಿಸಿದವರು. ಕೊಳಂಬೆ ಪುಟ್ಟಣ್ಣ ಶೆಟ್ಟರು ಈ ಪ್ರಸಂಗಕಾರರ ಮಾರ್ಗದರ್ಶಕರಾಗಿದ್ದರು. ಕೀರ್ತನೆ, ಹಾಡುಗಳನ್ನು ರಚಿಸಿದ್ದಾರೆ. ಖಾಂಡವವನ ದಹನ ಎಂಬ ಇನ್ನೊಂದು ಪ್ರಸಂಗ ಕೃತಿಯನ್ನು ಇವರು ರಚಿಸಿದ್ದಾರೆ. ಹಿಂದಿನ ಶತಮಾನದ ಮಾಢ್ಯೆವಧಿಯಲ್ಲಿ ಜೀವಿಸಿ ಪ್ರಸಂಗಕೃತಿಗಳನ್ನು ರಚಿಸಿದವರು.

* * *

4. ಸುಧನ್ವ ಕಾಳಗ

ಡುಪಿಯ ಶ್ರೀ ಮನ್ಮ್ವ ಸಿದ್ಧಾಂತ ಗ್ರಂಥಾಲಯದಿಂದ ಪ್ರಕಟಗೊಂಡ ಹದಿಮೂರನೆಯ ಮುದ್ರಣವನ್ನು ಇಲ್ಲಿ ಬಳಸಿಕೊಳ್ಳಲಾಗಿದೆ. ಯಕ್ಷಗಾನ ಮಹಾಭಾರತ ಪ್ರಸಂಗಗಳು ಗ್ರಂಥದ ಡಾ.ಆನಂದರಾಮ ಉಪಾಧ್ಯಾಯರು ಮಹಾಭಾರತದ ಕಥೆಯನ್ನು ಆಶ್ರಯಿಸಿದ ಪ್ರಸಂಗಗಳ ಪಟ್ಟಿಯಲ್ಲಿ ಎರಡು ಸುಧನ್ವ ಕಾಳಗ ಪ್ರಸಂಗಕೃತಿಗಳನ್ನು ಸೇರಿಸುತ್ತಾರೆ. ಮೊದಲನೆಯದನ್ನು ಮುಲ್ಕಿ ರಾಮಕೃಷ್ಣಯ್ಯನದೆಂದು ಅನುಮಾನ ಪಡುತ್ತಾರೆ. ಎರಡನೆಯದಕ್ಕೆ ಯಾರ ಹೆಸರೂ ಇಲ್ಲ. ವಿವರಣೆಯಲ್ಲಿ ಸುಧನ್ವ ಕಾಳಗ ಮೂಲ್ಕಿ ರಾಮಕೃಷ್ಣಯ್ಯನದೆಂದು ಅದು 19ನೆಯ ಶತಮಾನದಲ್ಲಿ ರಚಿತವಾದುದೆಂದೂ ಹೇಳಿ 1978ನೇ ಇಸ್ವಿಯನ್ನು ಸೂಚಿಸುತ್ತಾರೆ. ಆದರೆ ದಶಕಗಳ ಮೊದಲೇ ಸುಧನ್ವಾರ್ಜುನ ರಂಗದಲ್ಲಿ ಯಶಸ್ವಿಯಾದುದಕ್ಕೆ ದಾಖಲೆಯಿದೆ. ಡಾ. ಕಾರಂತರು ಸುಧನ್ವ ಕಾಳಗ ಅಪರಿಚಿತ ಕವಿಯದೆಂದೂ ಆತ ಸು,ಕ್ರಿ,ಶ,1600ದವನೆಂದೂ ಹೇಳುತ್ತಾರೆ. ದೀರ್ಘಕಾಲದಿಂದಲೂ ರಂಗಸ್ಥಳದಲ್ಲಿ ಬಭ್ರುವಾಹನ ಕಾಳಗದಷ್ಟೇ ಜನಪ್ರಿಯವಾಗಿ ಬಂದುದೆಂಬ ಅವರ ಮಾತು ನಿಜ. ಅದರ ಅತಿ ಮೊದಲ ತಾಡವಾಲೆ ಪ್ರತಿ ಕ್ರಿ.ಶ. 1661ರದ್ದು ದೊರೆಯುತ್ತದೆ ಎಂದಿದ್ದಾರೆ. ಈ ಕವಿ ತನ್ನ ಪ್ರಸಂಗದಲ್ಲಿ ಕಾಂತಾವರದ ಕಾಂತೇಶನನ್ನೂ, ವೇಲಾಪುರಿ (ಬೇಲೂರು) ಚೆನ್ನಕೇಶವನನ್ನೂ, ಹೈಡಿಂಬಪುರದ (ಭೀಮನಟ್ಟೆ ಅಥವಾ ಭೀಮನ ಕೋಣೆ) ಸುಬ್ರಹ್ಮಣ್ಯನನ್ನೂ ಸ್ತುತಿಸಿದ್ದಾನೆ ಎನ್ನುತ್ತಾರೆ. ಈ ಸಂಪುಟದಲ್ಲಿ ಬಳಕೆಗೊಂಡ ಆವೃತ್ತಿಯ ರಕ್ಷಾಪುಟದಲ್ಲಿ ಯಕ್ಷಗಾನ ಸುಧನ್ವ ಕಾಳಗ ಎಂತಲೂ ಮುಕ್ತಾಯದಲ್ಲಿ ಯಕ್ಷಗಾನ ಸುಧನ್ವ ಸುರಥರ ಕಾಳಗ ಮುಗಿದುದು ಎಂತಲೂ ಇದೆ. ರಂಗದಲ್ಲಿ ಜನಪ್ರಿಯವಾದ ಎಲ್ಲ ಪದ್ಯಗಳೂ ಸಂದರ್ಭಗಳೂ ಇವೆ. ಪ್ರಾರಂಭದಲ್ಲಿ ಮೂಲಿಕೆ ನಿವಾಸ ಗುರುವೆಂಕಟೇಶ ನನ್ನೂ ಮುಕ್ತಾಯದಲ್ಲಿ ಕಣ್ವಪುರದ ಕೃಷ್ಣನನ್ನೂ ಸ್ತುತಿಸಿದ್ದಾನೆ. ಪ್ರಸಂಗ ಮುಖದ ವಾರ್ಧಿಕವೊಂದರಲ್ಲಿ ವರ ಭಾರತಾಶ್ವಮೇಧಾಗಮದೊಳು ಸುಧನ್ವ ಸುರಥರಂ ಶ್ವೇತವಾಹನ ಗೆಲ್ದ ಕಥೆಯ ವಿಸ್ತರಿಸಿ ಮೂಲಿಕೆಂು ನರಸಿಂಹ ಗುರು ವೆಂಕಟೇಶ್ವರನ ಸತ್ಕರುಣದಿಂ ಎಂದಿದ್ದಾನೆ.

ಕಥಾ ಸಾರಾಂಶ :

ಮಹಾಭಾರತದ ಯುದ್ಧದ ನಂತರ ಪಾಂಡವರು ಹಸ್ತಿನಾವತಿಯಲ್ಲಿ ರಾಜ್ಯಭಾರ ಮಾಡುತ್ತಿದ್ದರು. ಧರ‌್ಮರಾಜನನ್ನು ಬಂಧುಹತ್ಯಾಪಾತಕ ಕಾಡುತ್ತಿತ್ತು. ಆಸ್ಥಾನಕ್ಕೆ ಬಂದ ವೇದವ್ಯಾಸನೊಂದಿಗೆ ತನ್ನ ಅಂತರಂಗ ತೋಡಿಕೊಂಡ. ವೇದವ್ಯಾಸ ಅಶ್ವಮೇಧಯಾಗ ಮಾಡುವ ಸೂಚನೆ ಕೊಟ್ಟ. ದ್ರವ್ಯ ಸಂಗ್ರಹವೂ ಇಲ್ಲ; ದಿವ್ಯಾಶ್ವವೂ ಇಲ್ಲ. ಕೃಷ್ಣನ ಅಪ್ಪಣೆಯೂ ಇಲ್ಲವೆಂದು ಧರ‌್ಮರಾಜನಿಗೆ ಚಿಂತೆಯಾಯಿತು. ವೇದವ್ಯಾಸನೇ ಪರಿಹಾರ ಸೂಚಿಸಿದ. ಭದ್ರಾವತಿ ಪುರದ ಯೌವನಾಶ್ವನಲ್ಲಿ ಕುದುರೆಯಿದೆ. ಮರುತ್ತನ ಯಜ್ಞದಲ್ಲಿ ಬ್ರಾಹ್ಮಣರಿಗೆ ನೀಡಿದ ಧನ-ಕನಕಗಳು ಹಿಮವತ್ ಪ್ರಾಂತದಲ್ಲಿವೆ. ಭೀಮನನ್ನು ಕಳಿಸಿ ಕೃಷ್ಣನನ್ನೂ ಕರೆಸಿಕೊಳ್ಳಬಹುದು. ಎಲ್ಲ ವ್ಯವಸ್ಥೆಗಳೂ ಆದವು. ಕುದುರೆಯನ್ನು ಪೂಜಿಸಿ ದಿಗ್ವಿಜಯಕ್ಕೆ ಹೊರಡಬೇಕೆನ್ನುವಷ್ಟರಲ್ಲಿ ಸೌಭದೇಶದ ದೊರೆ ಅನುಸಾಲ್ವ ತನ್ನ ಮಾಯೆಯಿಂದ ಕುದುರೆಯನ್ನು ಅಡಗಿಸಿಬಿಟ್ಟ. ಅವನೊಡನೆ ಯುದ್ಧ ಮಾಡಿದ ಪ್ರದ್ಯುಮ್ನ ಸೋತುಹೋದ. ಪ್ರದ್ಯುಮ್ನನನ್ನು ಅಣಕಿಸುತ್ತ ಕೃಷ್ಣ ತಾನೇ ಯುದ್ಧಕ್ಕೆ ಹೋಗಿ ಸೋತುಹೋದ. ನಂತರ ವೃಷಕೇತು ಅನುಸಾಲ್ವನನ್ನು ಸೋಲಿಸಿದ. ಶರಣಾಗತನಾದ ಅನುಸಾಲ್ವ ಅಶ್ವಮೇಧವನ್ನೂ ಬೆಂಬಲಿಸುವ ಭರವಸೆಯಿತ್ತ. ಕುದುರೆಯನ್ನು ಶೃಂಗರಿಸಿ ಅರ್ಜುನನ ಬೆಂಗಾವಲಿನಲ್ಲಿ ಹೊರಡಿಸಿದರು. ಮಾಹಿಷ್ಮತಿಯ ಅರಸು ನೀಲಧ್ವಜ ಕುದುರೆಯನ್ನು ಕಟ್ಟಿ, ಯುದ್ಧಮಾಡಿ, ಸೋತು ಪಾಂಡವ ಬಲ ಸೇರಿಕೊಂಡ. ಮುಂದುವರಿದ ಸೇನೆ ವಿಂಧ್ಯಾದ್ರಿಗೆ ಬಂದಾಗ ಶಿಲೆಯಾಗಿದ್ದ ಚಂಡಿ ಅರ್ಜುನನಿಂದ ಉದ್ಧಾರಗೊಂಡಳು. ಮುಂದೆ ಕುದುರೆ ಹಂಸಧ್ವಜ ಆಳುತ್ತಿದ್ದ ಚಂಪಕಾನಗರವನ್ನು ಪ್ರವೇಶಿಸಿತು. ಹಂಸಧ್ವಜ ಕುದುರೆಯನ್ನು ಕಟ್ಟಿ ಯುದ್ಧಕ್ಕೆ ಸಿದ್ಧನಾದ. ಹರಿಯದರ್ಶನಕ್ಕೆ ಅನುಕೂಲವಾಯಿತೆಂದು ಹಿಗ್ಗಿದ. ಯುದ್ಧಕ್ಕೆ ಹಿಂಜರಿದವರನ್ನು ಕಾದ ಎಣ್ಣೆಯ ಕೊಪ್ಪರಿಗೆಯಲ್ಲಿ ಎಸೆಯುವ ಶಿಕ್ಷೆ ಕೊಡಲಾಗುವದೆಂದು ಡಂಗುರ ಹೊಡೆಸಿದ. ಮಗ ಸುಧನ್ವ ಯುದ್ಧಕ್ಕೆ ಹೊರಟುನಿಂತ. ತಾಯಿ ಮತ್ತು ತಂಗಿಯನ್ನು ಬೀಳ್ಕೊಂಡ, ಹೆಂಡತಿ ಪ್ರಭಾವತಿಯನ್ನು ಕಾಣಲು ಬಂದ. ಅವಳು ತನಗೆ ಋತುದಾನ ನೀಡಲೇಬೇಕೆಂದು ಒತ್ತಾಯಿಸಿದಳು. ಸುಧನ್ವ ಧರ‌್ಮಸಂಕಟಕ್ಕೆ ಸಿಲುಕಿಕೊಂಡ.  ಕೊನೆಗೆ ಸತಿಯ ಋತುದಾನದ ಸಂದರ್ಭ, ಉಪವಾಸವಿರಲೇಬೇಕಾದ ಏಕಾದಶೀ ವ್ರತ. ಶೇಷಾನ್ನವನ್ನು ಉಣ್ಣಲೇಬೇಕಾದ ಪಿತೃಶ್ರಾದ್ಧ ಈ ಮೂರು ಒಂದೇ ದಿನಬಂದರೆ ಅನುಸರಿಸಬಹುದಾದ ವಿಧಾನವನ್ನು ಆಲೋಚಿಸಿದ. ಮೂರೂ ನಿರ್ವಹಿಸಬೇಕಾದ ಕರ್ತವ್ಯಗಳೇ. ಆಗ ಶೇಷಾನ್ನವನ್ನು ಆಘ್ರಾಣಿಸಿದರೆ ಏಕಾದಶೀವ್ರತಕ್ಕೂ ಭಂಗಬಾರದು. ಶೇಷಾನ್ನವನ್ನು ಉಣ್ಣಲೇಬೇಕೆಂಬ ನಿಯಮವೂ ಈಡೇರುವುದು. ನಡುರಾತ್ರಿ ಕಳೆದ ಮೇಲೆ ಮಡದಿಗೆ ಋತುದಾನ ಮಾಡಬಹುದು. ಈ ಹಿನ್ನೆಲೆಯಲ್ಲಿ ಪ್ರಭಾವತಿಯ ಮನದ ಬಯಕೆಯನ್ನು ಈಡೇರಿಸಲು ಆ ರಾತ್ರಿಯನ್ನು ಅವಳೊಂದಿಗೆ ಕಳೆಯಲು ನಿರ್ಧರಿಸಿದ.

ಹೊಡೆಸಿದ ಡಂಗರದಂತೆ ಎಲ್ಲರೂ ಯುದ್ಧಕ್ಕೆ ಅಣಿಯಾದರೂ ಸುಧನ್ವ ಮಾತ್ರ ಬರಲಿಲ್ಲ. ಹಂಸಧ್ವಜ ಅದನ್ನು ಗಮನಿಸಿದ. ನಿಯಮದಂತೆ ತಪ್ತತೈಲದ ಕೊಪ್ಪರಿಗೆಯಲ್ಲಿ ಎಸೆಯಲು ವ್ಯವಸ್ಥೆಯಾಯಿತು. ಶಂಖ ಮತ್ತು ಲಿಖಿತರೆಂಬ ಬ್ರಾಹ್ಮಣರಿಬ್ಬರು ಈ ಕಾರ್ಯ ನೆರವೇರಿಸಿದರು. ಆದರೆ ಶ್ರೀ ಹರಿಯ ದಯದಿಂದ ಸುಧನ್ವ ಎಣ್ಣೆಯ ಕೊಪ್ಪರಿಗೆಯಿಂದ ಎದ್ದು ಬಂದ. ಸುಧನ್ವ ಯುದ್ಧರಂಗಕ್ಕೆ ಬಂದ. ವೃಷಕೇತು, ಪ್ರದ್ಯುಮ್ನ, ಕೃತವರ್ಮ, ಮೇಘನಾದ, ಯವ್ವನಾಶ್ವ ಅನುಸಾಲ್ವ ಮುಂತಾದವರೆಲ್ಲ ಸುಧನ್ವನಿಂದ ಸೋತುಹೋದರು. ನಂತರ ಸುಧನ್ವ ಮತ್ತು ಅರ್ಜುನರ ನಡುವೆ ಘನಘೋರ ಯುದ್ಧವಾಯಿತು.

ಅರ್ಜುನ ದಯನೀಯವಾಗಿ ಸೋಲುವ ಸಂದರ್ಭ ಬಂದಾಗ ಕೃಷ್ಣ ಅವನ ನೆರವಿಗೆ ಬಂದ. ಮತ್ತೆ ಅರ್ಜುನ-ಸುಧನ್ವರ ನಡುವೆ ಭೀಕರ ಕಾಳಗ ತೊಡಗಿತು. ಅರ್ಜುನನ ರಥ ಬುಗುರಿಯಂತೆ ತಿರುಗಿತು. ಕುದುರೆಗಳು ಕಂಗಾಲಾದವು. ಇಬ್ಬರ ನಡುವೆ ಪ್ರತಿಜ್ಞೆ- ಪ್ರತಿಪ್ರತಿಜ್ಞೆಗಳಾದವು. ಅರ್ಜುನ ಪ್ರಯೋಗಿಸಿದ ಬಾಣಗಳಿಗೆ ಕೃಷ್ಣ ತನ್ನ ಅವತಾರಗಳ ಪುಣ್ಯಗಳನ್ನೆಲ್ಲ ಧಾರೆ ಎರೆದರೂ ಸುಧನ್ವ ಅವುಗಳನ್ನೆಲ್ಲ ಕತ್ತರಿಸಿದ. ಅರ್ಜುನನ ಮೂರನೆಯ ಬಾಣಕ್ಕೆ ಸುಧನ್ವ ಬಲಿಯಾದ. ಹಂಸಧ್ವಜ, ತಾಯಿ ಸುಗರ್ಭೆ ಎಲ್ಲರೂ ದುಃಖಿತರಾದರು. ಆತನ ತಮ್ಮ ಸುರಥನೂ ಅರ್ಜುನನೊಂದಿಗೆ ಹೋರಾಡಲು ಬಂದು ಪ್ರಾಣತೆತ್ತ. ಸುರಥನ ರುಂಡದ ವಿಷಯದಲ್ಲಿ ಗರುಡನಿಗೂ ವೃಷಭನಿಗೂ ಯುದ್ಧವಾಯಿತು. ನಂತರ ಶಿವ ಸುಧನ್ವನ ಮತ್ತು ಸುರಥನ ರುಂಡಗಳನ್ನು ತನ್ನ ಮಾಲೆಯಲ್ಲಿ ಧರಿಸಿದ. ಮಕ್ಕಳನ್ನು ಕಳೆದುಕೊಂಡ ಹಂಸಧ್ವಜನಿಗೆ ಕೃಷ್ಣ ಸಮಾಧಾನ ಹೇಳಿದ. ನಂತರ ಹಂಸಧ್ವಜನೂ ಪಾಂಡವ ಬಲದಲ್ಲಿ  ಒಬ್ಬನಾಗಿ ಕುದುರೆಯ ಹಿಂದೆ ಹೊರಟ ಎಂಬಲ್ಲಿಗೆ ಸುಧನ್ವಕಾಳಗದ ಕಥೆ ಮಂಗಲವಾಗುತ್ತದೆ.

ಸಹಜವಾಗಿಯೇ ಸುಧನ್ವಕಾಳಗದ ಕಥೆಯ ಕೆಲಸ ಕೃಷ್ಣನ ಮಹತ್ವವನ್ನು ಬಿಂಬಿಸುವುದು. ಯುಧಿಷ್ಠರ ಯಜ್ಞ ತೊಡಗುವುದೇ ಕೃಷ್ಣನ ನೆರವಿನಿಂದ. ಒದಗಿದ ಅಡ್ಡಿಗಳೆಲ್ಲ ನಿವಾರಣೆಯಾಗುವುದೂ ಕೃಷ್ಣನಿಂದ. ಹಂಸಧ್ವಜ ಕುದುರೆಯನ್ನು ಕಟ್ಟುವುದೇ ಕೃಷ್ಣದರ್ಶನಕ್ಕಾಗಿ. ಸುಧನ್ವ ಭೀಕರವಾದ ಯುದ್ಧ ಮಾಡುವುದೇ ಕೃಷ್ಣನನ್ನು ಬರಮಾಡಿಕೊಳ್ಳುವುದಕ್ಕಾಗಿ. ಸುಧನ್ವ ಸಾಯುವುದೇ ಕೃಷ್ಣ ಅರ್ಜುನನಿಗೆ ನೆರವಾಗುವುದಕ್ಕಾಗಿ. ಹಂಸಧ್ವಜನ ಮನಸ್ಸು ಪರಿವರ್ತನೆಯಾಗುವುದೇ ಕೃಷ್ಣನ ಅನುಗ್ರಹದಿಂದಾಗಿ. ಭಾಗವತ ಪಂಥದ ಎಲ್ಲ ಅಂಶಗಳೂ ಇಲ್ಲಿ ಕಂಡು ಬರುತ್ತವೆ.

ಪ್ರಸಂಗದ ಪ್ರದರ್ಶನದಲ್ಲಿಯೂ ಕೃಷ್ಣನ ಮಹತ್ವವೇ ಮುಖ್ಯವಾಗುತ್ತದೆ. ಹಂಸಧ್ವಜನ ಒಳ ತೋಟಿ ಸುಧನ್ವನ ಸಂಘರ್ಷ, ಪ್ರಭಾವತಿಯ ಬಯಕೆ, ಅರ್ಜುನನ ಪರಾಕ್ರಮಗಳಿಗೆಲ್ಲ ಸಾರ್ವತ್ರಿಕ ಪಾತಳಿಗಿಂತ ಕೃಷ್ಣ ಭಕ್ತಿಯೇ ಮುಖ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿಯೇ ಸುಧನ್ವ ಕಾಳಗದ ಆಟವೂ ಜನಪ್ರಿಯವಾಗಿದೆ. ಕಾಳಗದ ಬಿಸಿಯ ಜತೆಗೆ ಸುಧನ್ವ-ಪ್ರಭಾವತಿಯರ ಶೃಂಗಾರಮಯ ಸನ್ನಿವೇಶವೂ ಜನಪ್ರಿಯವಾಗಿದೆ. ಹಂಸಧ್ವಜ, ಸುಧನ್ವ, ಪ್ರಭಾವತಿ, ಅರ್ಜುನ ಈ ಪಾತ್ರಗಳ ನಿರ್ವಹಣೆಯ ಕ್ರಮದಲ್ಲಿಯೂ ಆಯಾ ಕಾಲಘಟ್ಟದಲ್ಲಿ ಹಲವು ಪಾತ್ರಧಾರಿಗು ಹೆಸರು ಮಾಡಿದ್ದಾರೆ.

* * *

5. ತಾಮ್ರಧ್ವಜ ಕಾಳಗ

ಪ್ರಸಂಗ ಕೃತಿಯಲ್ಲಿಯೂ ಮಹಾಭಾರತದ ಅಶ್ವಮೇಧಕ್ಕೆ ಸಂಬಂಧಿಸಿದ ಕಥೆಯೇ ಇದೆ. ಇದೊಂದು ಪುಟ್ಟ ಪ್ರಸಂಗಕೃತಿ. ರತ್ನಪುರದ ರಾಜ ಮಯೂರಧ್ವಜನ ತ್ಯಾಗಮನೋಭಾವವನ್ನು ಯುವರಾಜ ತಾಮ್ರಧ್ವಜನ ಪರಾಕ್ರಮವನ್ನು ಸ್ಥಾಪಿಸುವ ಉದ್ದೇಶವುಳ್ಳದು. ಯಕ್ಷಗಾನ ಪರಂಪರೆಯ ಕಾಳಗ ಪ್ರಾಧಾನ್ಯಕ್ಕೆ ಸಾಕ್ಷಿಯಾಗುವಂತಹದು.

ಕಥಾ ಸಾರಾಂಶ :

ಮಹಾಭಾರತ ಯುದ್ಧದ ನಂತರ ಧರ‌್ಮರಾಜ ಬಂಧುಗಳನ್ನೇ ಹತ್ಯೆ ಮಾಡಿದ ದೋಷದ ವಿಷಯದಲ್ಲಿ ತುಂಬ ಚಿಂತಿತನಾದ. ಆಸ್ಥಾನಕ್ಕೆ ವೇದವ್ಯಾಸ ಬಂದ. ಬಂಧುಹತ್ಯಾದೋಷ ನಿವಾರಣೆಗೆ ವೇದವ್ಯಾಸ ಅಶ್ವಮೇಧಯಾಗ ಮಾಡುವ ಸಲಹೆ ನೀಡಿದ.  ಭದ್ರಾವತೀ ನಗರದ ಅರಸ ಯೌವನಾಶ್ವನಲ್ಲಿ ಯಾಗಕ್ಕೆ ಅಗತ್ಯವಾದ ಕುದುರೆ ಇದೆ ಎಂದೂ ಹೇಳಿದ. ಭೀಮ ಮುಂತಾದವರು ಹೋಗಿ ತುರಗವನ್ನು ತಂದರು. ಅಶ್ವವನ್ನು ಪೂಜಿಸಿ ದಿಗ್ವಿಜಯಕ್ಕೆ ಬಿಟ್ಟರು. ಕುದುರೆಯ ರಕ್ಷಣೆಗೆ ಅರ್ಜುನ, ಅನುಸಾಲ್ವ, ಅನಿರುದ್ಧ, ವೃಷಕೇತು ಹೊರಟರು. ನೀಲಧ್ವಜ, ಹಂಸಧ್ವಜವನ್ನು ಗೆಲಿದು ಕುದುರೆ ರತ್ನಪುರಕ್ಕೆ ಧಾವಿಸಿತು.

ಅಲ್ಲಿನ ಯುವರಾಜ ತಾಮ್ರಧ್ವಜ ತನ್ನ ತಂದೆ ನೆರವೇರಿಸುತ್ತಿರುವ ಯಜ್ಞಾಶ್ವದೊಂದಿಗೆ ಹೊರಟಿದ್ದ. ಆತ ಪಾಂಡವರ ಅಶ್ವಮೇಧದ ಕುದುರೆಯನ್ನೂ ಸೇನೆಯನ್ನೂ ಕಂಡ. ಹರಿಕೃಪೆಯ ಸುಲಭ ಅವಕಾಶ ದೊರೆತುದಕ್ಕೆ ಸಂತೋಷಪಟ್ಟ. ಪಾಂಡವರ ಯಜ್ಞಾಶ್ವವನ್ನು ಕಟ್ಟಿ ಯುದ್ಧಕ್ಕೆ ಸಿದ್ಧನಾದ. ಅರ್ಜುನನೂ ಸೇರಿದಂತೆ ಪಾಂಡವರ ಕಡೆಯ ಪ್ರಮುಖರೆಲ್ಲ ತಾಮ್ರಧ್ವಜನ ಪರಾಕ್ರಮದಿಂದ ಮೂರ್ಛೆ ಹೋದರು. ಎರಡೂ ಕುದುರೆಯೊಂದಿಗೆ ತಾಮ್ರಧ್ವಜ ತನ್ನ ನಗರಕ್ಕೆ ಹಿಂದಿರುಗಿದ. ತಂದೆಗೆ ವಿದ್ಯಮಾನಗಳನ್ನೆಲ್ಲ ವಿವರಿಸಿದ. ಕೃಷ್ಣ ದರ್ಶನದ ಸದವಕಾಶ ತಪ್ಪಿಹೋಯಿತೆಂದು ಮಯೂರಧ್ವಜ ಚಿಂತಿತನಾದ. ಮಯೂರಧ್ವಜನ ಭಕ್ತಿ ನಿಷ್ಠೆಯ ಹಿರಿಮೆಯನ್ನು ತೋರಿಸಲು ಇದೇ ಸಂದರ್ಭವೆಂದು ಭಾವಿಸಿದ. ಕೃಷ್ಣ ತಾನು ಮುದಿ ಬ್ರಾಹ್ಮಣನ ವೇಷಧರಿಸಿ ಅರ್ಜುನನಿಗೆ ತನ್ನ ಶಿಷ್ಯನ ವೇಷತೊಡಿಸಿ ಮಯೂರಧ್ವಜನಿದ್ದಲ್ಲಿಗೆ ಹೊರಟನು. ದಾರಿಯಲ್ಲಿ ಸಂಜೆಯಾಯಿತು. ಪಟ್ಟಣದಲ್ಲಿ ರಾತ್ರಿ ಸರಿದಂತೆ ಎಲ್ಲರೂ ನಿದ್ದೆ ಹೋದರು. ವೇಶ್ಯಾವಾಟಿಕೆಯಲ್ಲಿ ಮಾತ್ರ ವಿಟಪುರುಷರು ವಿವಿಧ ಬಗೆಯ ಚಾಪಲ್ಯವನ್ನೂ ವೇಶ್ಯೆಯರು ಆತಂಕವನ್ನೂ ವ್ಯಕ್ತಪಡಿಸುತ್ತಿದ್ದರು. ಬೆಳಗಾಗುವಷ್ಟರಲ್ಲಿ ವೃದ್ಧ ಬ್ರಾಹ್ಮಣನೂ ಶಿಷ್ಯನೂ ಮಯೂರಧ್ವಜನ ಆಸ್ಥಾನಕ್ಕೆ ಬಂದರು. ಮಯೂರಧ್ವಜ ನಮಸ್ಕರಿಸುವ ಮೊದಲೇ ಆಶೀರ್ವದಿಸಿದರು. ರಾಜ ಆಶ್ಚರ್ಯ ಚಕಿತನಾದ. ನಂತರ ಬ್ರಾಹ್ಮಣ ಹೇಳಿದ, ತನಗೆ ಕೃಷ್ಣಶರ್ಮನೆಂಬ ಮಗನಿದ್ದಾನೆ. ಆತ ಮದುವೆ ಮಾಡಿಕೊಂಡು ಹೆಂಡತಿಯೊಂದಿಗೆ ಬರುವಾಗ ಸಿಂಹವೊಂದು ಆತನನ್ನು ಹಿಡಿದುಕೊಂಡು ಬಿಟ್ಟಿದೆ. ರಾಜನ ಅರ್ಧ ಶರೀರ ತನಗೆ ತಿನ್ನಲು ದೊರೆತರೆ ಮಗನನ್ನು ತಿನ್ನದೆ ಬಿಡುತ್ತೇನೆ ಎನ್ನುತ್ತಿದೆ. ಅದಕ್ಕಾಗಿ ನಿನ್ನಲ್ಲಿಗೆ ಬಂದೆವು ಅಂದರು. ಮಯೂರಧ್ವಜ ಸಂತೋಷದಿಂದ ಒಪ್ಪಿದ. ತನ್ನ ಸತಿಸುತರ ಮೂಲಕ ಶರೀರವನ್ನು ಕರಗಸದಿಂದ ಕತ್ತರಿಸಿಕೊಡಲು ಸಿದ್ಧನಾದ. ಕೊರೆಯುತ್ತಿರುವಂತೆಯೇ ಆತನ ಎಡಗಣ್ಣಿನಿಂದ ನೀರು ಸುರಿಯತೊಡಗಿತು. ಅದನ್ನು ಕಂಡ ಬ್ರಾಹ್ಮಣ ರೋದಿಸುತ್ತ ಕೊಡುವ ದಾನ ತನಗೆ ಬೇಡವೇ ಬೇಡ ಎನ್ನುತ್ತ ಹೊರಟೇ ಬಿಟ್ಟ. ಆಗ ಮಯೂರಧ್ವಜ ತಾನು ದಾನ ಮಾಡುತ್ತಿರುವುದು ಶರೀರದ ಬಲಭಾಗವನ್ನು. ಆದರೆ ಎಡಭಾಗಕ್ಕೆ ಆ ಭಾಗ್ಯವಿಲ್ಲ. ಅದಕ್ಕಾಗಿ ದುಃಖೀಸುತ್ತಿದ್ದೇನೆ. ಆದ್ದರಿಂದ ಎಡಗಣ್ಣಿನಿಂದ ನೀರು ಬಂತು ಎಂದ. ಮಯೂರಧ್ವಜನ ತ್ಯಾಗಮನೋಧರ್ಮಕ್ಕೆ ಕೃಷ್ಣ ಮೆಚ್ಚಿದ. ತನ್ನ ನಿಜರೂಪ ತೋರಿದ, ಮಯೂರಧ್ವಜ ತನ್ನ ಸರ್ವಸ್ವವನ್ನೂ ಹರಿಪಾದಕ್ಕೆ ಸಮರ್ಪಿಸಿದ. ಯಜ್ಞದ ಕುದುರೆ ಅಲ್ಲಿಂದ ಮುಂದೆ ಹೊರಟಿತು, ಎಂಬಲ್ಲಿಗೆ ತಾಮ್ರಧ್ವಜ ಕಾಳಗ ಪ್ರಸಂಗದ ಕಥೆ ಮುಕ್ತಾಯವಾಗುತ್ತದೆ.

ಪ್ರಸಂಗಕಾರನ ಪರಿಚಯ :

ಪಡುವಲಪಾಯದ ಯಕ್ಷಗಾನ ಪ್ರಸಂಗ ಸಾಹಿತ್ಯದ ಸಂದರ್ಭದಲ್ಲಿ ರಾಮನೆಂಬ ಹೆಸರುಳ್ಳ ಮೂವರು ಪ್ರಸಂಗಕಾರರು ಸದ್ಯಕ್ಕೆ ಲಭ್ಯ.  ಅವರಲ್ಲೊಬ್ಬ ಕೃಷ್ಣಾರ್ಜುನ ಕಾಳಗ ಬರೆದ ಹಳೆಮಕ್ಕಿ ರಾಮ. ಇನೊಬ್ಬ ಸುಭದ್ರಾಕಲ್ಯಾಣದಂಥ ಜನಪ್ರಿಯ ಪ್ರಸಂಗಕೃತಿ ರಚಿಸಿದ ಹಟ್ಟಿಯಂಗಡಿ ರಾಮ. ಮೂರನೆಯವ ತಾಮ್ರ ಧ್ವಜಕಾಳಗ ಬರೆದ ರಾಮ. ಇವನನ್ನು ರತ್ನಪುರದ ರಾಮ ಎಂದು ಅನುಕೂಲಕ್ಕಾಗಿ ಹೆಸರಿಸಿಕೊಳ್ಳಬಹುದು. ಈತ ತನ್ನ ಬಗ್ಗೆ ಹೇಳಿಕೊಂಡ ಯಾವ ಹೆಚ್ಚಿನ ಸಂಗತಿಗಳೂ ತಾಮ್ರಧ್ವಜ ಕಾಳಗದಲ್ಲಿ ಕಂಡುಬರುವುದಿಲ್ಲ. ಕೃತಿಯಲ್ಲಿ ರತ್ನಪುರದ ವೆಂಕಟನನ್ನು ಹೊಗಳಿದ್ದಾನೆ. ಈ ರತ್ನಪುರ ಯಾವುದೆಂದು  ನಿರ್ಧರಿಸುವುದು ಕಷ್ಟ. 1691ರ ತಾಳವಾಲೆಯ ಪ್ರತಿಯಲ್ಲಿ ತಾನು ಚಂದ್ರಮೌಳಿಯ ಮಗನೆಂದೂ ತನ್ನ ಅಜ್ಜಿ ದೇವಮ್ಮನೆಂದೂ ಹೇಳಿಕೊಂಡಿದ್ದಾನೆಂದು ಡಾ. ಕಾರಂತರು ಹೇಳುತ್ತಾರೆ. ಈ ಸಂಗತಿಯೂ ಮುದ್ರಿತ ಪ್ರತಿಯಲ್ಲಿಲ್ಲ. ಅವನ ಊರು ಶಿವಪುರವೆಂದು ತರ್ಕಿಸಲು ಆಧಾರವಿದೆಯೆನ್ನುವ ಡಾ.ಕಾರಂತರು ಆಧಾರ ಹೇಳುವುದಿಲ್ಲ. ಈತ ಮೂಲಿಕಾಸುರ ಕಾಳಗ ಎಂಬ ಇನ್ನೊಂದು ಪ್ರಸಂಗ ರಚಿಸಿದ್ದಾನೆ. ತನ್ನ ಪುರೋಹಿತ ತಾಮ್ರಧ್ವಜ ಕಾಳಗದ ಪ್ರಬಂಧವನ್ನು ನೀಡಿದನೆಂದು ಹೇಳಿಕೊಂಡಿದ್ದಾನೆ. ಬಹುಶಃ ತಾಮ್ರಧ್ವಜಕಾಳಗದ ಕಥಾ ವಿವರಗಳನ್ನು ೇಳಿ ಯಕ್ಷಗಾನ ಪ್ರಸಂಗ ಬರೆಯಲು ಸೂಚಿಸಿರಬಹುದು.  ತಾಡವಾಲೆಯ ಪ್ರತಿ ಸಿಕ್ಕಿದ ಆಧಾರದ ಮೇಲಿಂದ ಇವನ ಕಾಲವನ್ನು ಸು.ಕ್ರಿ.ಶ. ಹದಿನೇಳನೇ ಶತಮಾನವೆಂದು ತೀರ‌್ಮಾನಿಸಲಾಗಿದೆ. ನಿರ್ದಿಷ್ಟ ಸಂಶೋಧನೆ ನಡೆದ ವಿನಾ ಇದಕ್ಕಿಂತ ಹೆಚ್ಚಿನ ರೀತಿಯಲ್ಲಿ ಪರಿಚಯಿಸಲು ಸಾಧ್ಯವಾಗಲಾರದು.

ವಿಶೇಷತೆ :

ಒಂದು ಕಾಲಾವಧಿಯಲ್ಲಿ ತಾಮ್ರಧ್ವಜನ ಪುಂಡುಪಾತ್ರಕ್ಕೆ ಮಯೂರ ಧ್ವಜನ ಭಕ್ತಿಪ್ರಧಾನ ಪಾತ್ರಕ್ಕೆ ಪ್ರದರ್ಶನ ಹೆಸರಾದುದು ನಿಜ. ಅಂತಿಮವಾಗಿ ಹರಿಪಾರಮ್ಯವನ್ನು ಸ್ಥಾಪಿಸುವುದೇ ಪ್ರಸಂಗದ ಪ್ರಧಾನ ಉದ್ದೇಶ. ಎಷ್ಟೇ ಕಷ್ಟಪಟ್ಟರೂ ಇದೊಂದು ಪೂರ್ಣ ರಾತ್ರಿಯ ಪ್ರಸಂಗವಾಗಿ ಬೆಳೆಯಲು ಸಾಧ್ಯವಿಲ್ಲ. ಪ್ರಸಂಗಕ್ಕಾಗಲೀ ಪ್ರದರ್ಶನಕ್ಕಾಗಲೀ ಏನೇನೂ ಅಗತ್ಯವಿರದ ಸೂಳೆಗೇರಿಯ ಸಂದರ್ಭವನ್ನು ಅಳವಡಿಸಿದ್ದು ಈ ಪ್ರಸಂಗದ ವಿಶೇಷ. ಮಹಾಕಾವ್ಯಗಳ ಅಷ್ಟಾದಶ ವರ್ಣನೆಗಳಲ್ಲೊಂದಾದ ವೇಶ್ಯಾವಾಟಿಕೆಯ ವರ್ಣನೆ ಈ ಪ್ರಸಂಗ ಕೃತಿಯಲ್ಲಿದೆ. ಹಾಗೆಂದು ಬೇರೆ ಯಾವ ಅಷ್ಟಾದಶ ವರ್ಣನೆಯೂ ಇಲ್ಲ. ಅದೊಂದು ದೃಶ್ಯವಾಗಿಯೂ ಬೆಳೆಯುವುದಿಲ್ಲ. ಅನಿಶ್ಚಿತ ಸಂಖ್ಯೆಯ ಪಾತ್ರಗಳು ಪ್ರಸ್ತಾಪವಾಗುತ್ತವೆ. ಮಯೂರಧ್ವಜನ ಹೆಂಡತಿ ಕುಮುದ್ವತಿಯ ಪಾತ್ರ ಬಿಟ್ಟರೆ ಬೇರೆ ಸ್ತ್ರೀ ಪಾತ್ರಗಳೂ ಇಲ್ಲ.

* * *

6. ಬಭ್ರುವಾಹನ ಕಾಳಗ

ದುವರೆಗೂ ಯಾರು ರಚಿಸಿದರೆಂದು ಪತ್ತೆಯಾಗದ ಬಭ್ರುವಾಹನ ಕಾಳಗ ರಂಗದಲ್ಲಿ ಸಾಕಷ್ಟು ಯಶಸ್ವಿಯಾದ ಪ್ರಸಂಗಕೃತಿ. ಕಾಳಗ ಪ್ರಧಾನ ಪರಂಪರೆಗೆ ಸಂದುದು. ಅರ್ಜುನ, ಚಿತ್ರಾಂಗದೆ, ಬಭ್ರುವಾಹನ ಈ ಮೂರೂ ಪಾತ್ರಗಳ ನಿರ್ವಹಣೆಯ ಪರಂಪರೆಗೆ ಕಾರಣವಾದುದು. ಡಾ. ಕಾರಂತರ ನೃತ್ಯ ನಾಟಕದ ಪ್ರಯೋಗಕ್ಕೂ ಒಳಗಾದುದು. ಇದರಲ್ಲಿ ಮುಖ್ಯವಾಗಿ ಚಿತ್ರಾಂಗದೆಯ ಬದುಕಿನ ಉತ್ತರಾರ್ಧದ ಕಥೆ ಬರುತ್ತದೆ. ಪೂರ್ವಾರ್ಧದ ಕಥೆಯಾದ ಅವಳ ಹುಟ್ಟು, ಪುರುಷರ ಮನೋಧರ್ಮದ ಬೆಳವಣಿಗೆ, ಅರ್ಜುನನೊಂದಿಗಿನ ಪ್ರೇಮ ಮತ್ತು ವಿವಾಹ ಈ ಕಥೆಯಲ್ಲಿಲ್ಲ. ಬಭ್ರುವಾಹನ ಪಾತ್ರಕೇಂದ್ರಿತ ಕೃತಿ. ಜತೆಗೆ ಪ್ರಮೀಳೆಯ ಕಥೆಯೂ ಬರುತ್ತದೆ. ಪ್ರಮೀಳಾರ್ಜುನೀಯ ಎಂಬುದು ಪ್ರತ್ಯೇಕ ಸ್ವತಂತ್ರ ಪ್ರಸಂಗಕೃತಿ ಎಂದು ಪ್ರದರ್ಶನಗೊಳ್ಳುವುದೂ ಇದೆ. ಪ್ರಮೀಳಾರ್ಜುನೀಯವನ್ನು ಬಭ್ರುವಾಹನ ಕಾಳಗದ ಪೂರ್ವಾರ್ಧವೆಂದು ಗ್ರಹಿಸುವುದೂ ಇದೆ. ಬಭ್ರುವಾಹನ ಕಾಳಗ ಪ್ರಮೀಳೆಯ ಸಂದರ್ಭವನ್ನುಳಿದು ಜನಪ್ರಿಯವಾದುದೇ ಹೆಚ್ಚು. ಎರಡೂ ಸ್ವತಂತ್ರ ಕಥೆ. ಪಾಂಡವರ ಅಶ್ವಮೇಧದ ಸಂದರ್ಭದಲ್ಲಿ ಕುದುರೆಯ ಬೆಂಗಾವಲಿಗೆ ಹೊರಟ ಅರ್ಜುನನಿಂದ ನಡೆದ ಘಟನೆ ಎಂಬುದೇ ಈ ಸ್ವತಂತ್ರ ಕಥೆಗಳನ್ನು ಪರಸ್ಪರ ಜೋಡಿಸುತ್ತದೆ.

ಕಥಾ ಸಾರಾಂಶ :

ವೇದವ್ಯಾಸರ ಸಲಹೆಯಂತೆ ಧರ್ಮರಾಜ ಬಂಧುಹತ್ಯೆಯ ಪಾತಕವನ್ನು ನಿವಾರಿಸಿಕೊಳ್ಳಲು ಅಶ್ವಮೇಧಯಾಗಕ್ಕೆ ತೊಡಗಿದ. ಯಜ್ಞಕ್ಕೆ ಅಗತ್ಯವಾದ ಕುದುರೆ ಮತ್ತು ಧನಕನಕಾದಿಗಳ ವ್ಯವಸ್ಥೆಯೂ ನಿರೀಕ್ಷೆಯಂತೆ ಆಯಿತು. ಧರ್ಮರಾಜನ ಸೂಚನೆಯಂತೆ ಭೀಮ ದ್ವಾರಕೆಗೆ ಹೋಗಿ ಕೃಷ್ಣನನ್ನು ಕರೆದುಕೊಂಡು ಬಂದ. ವೇದವ್ಯಾಸರ ಮಾರ್ಗದರ್ಶನದಲ್ಲಿಯೇ ಯಜ್ಞಕುಂಡ ರಚನೆಗೊಂಡು ಕುದುರೆಯನ್ನು ಪೂಜಿಸಿ ದಿಗ್ವಿಜಯಕ್ಕೆ ಹೊರಟರು. ಕುದುರೆಯ ಬೆಂಗಾವಲಿಗೆ ಅರ್ಜುನನೂ ಅವನ ಜತೆಗೆ ಪ್ರದ್ಯುಮ್ನ ವೃಷಕೇತು ಮುಂತಾದವರೂ ಹೊರಟರು. ನೀಲಧ್ವಜನನ್ನೂ ಹಂಸಧ್ವಜನನ್ನೂ ಗೆದ್ದಾಯಿತು. ಚಂಡಿಯ ಉದ್ಧಾರವೂ ಆಯಿತು. ಅನೇಕ ತುಂಡುರಾಜರುಗಳನ್ನು ಗೆಲ್ಲುತ್ತ ಕುದುರೆ ಸ್ತ್ರೀಯರೇ ಆಳುತ್ತಿರುವ ಸ್ತ್ರೀ ರಾಜ್ಯವನ್ನೂ ಪ್ರವೇಶಿಸಿತು. ಪ್ರಮೀಳೆ ಕುದುರೆಯನ್ನು ಕಟ್ಟಿ ಯುದ್ಧಕ್ಕೆ ಸಿದ್ಧಳಾದಳು. ಯುದ್ಧದಲ್ಲಿ ಇಬ್ಬರಿಗೂ ಜಯ ಲಭಿಸಲಿಲ್ಲ. ಅರ್ಜುನ ಅವಳನ್ನು ಗೆಲ್ಲುವುದು ಸಾಧ್ಯವಿಲ್ಲ; ಒಲಿಸಿಕೊಂಡರೆ ಸೂಕ್ತ ಎಂದು ಅಶರೀರವಾಣಿಯಾಯಿತು. ಅರ್ಜುನ ಹಾಗೇ ಮಾಡಿದ. ಪ್ರಮೀಳೆ ಹಸ್ತಿನಾವತಿಗೆ ಹೋಗಿ ತನ್ನ ಕನ್ಯತ್ವದಲ್ಲಿರುವ ವಿಷತ್ವವನ್ನು ಕಳೆದುಕೊಳ್ಳಬೇಕೆಂದೂ ಯಾಗದ ಕಾರ್ಯಗಳೆಲ್ಲ ಮುಗಿದಮೇಲೆ ತಾನು ವಿವಾಹವಾಗುವೆನೆಂದೂ ಹೇಳಿ. ಅದಕ್ಕೆ ಒಪ್ಪಿದ ಪ್ರಮೀಳೆ ತನ್ನ ಸರ‌್ವಸ್ವದೊಂದಿಗೆ ಹಸ್ತಿನಾವತಿಗೆ ಹೋದಳು. ನಂತರ ಯಜ್ಞಾಶ್ವ ವಿವಿಧ ಮತ್ತು ವಿಚಿತ್ರ ದೇಶಗಳನ್ನು ಗೆಲ್ಲುತ್ತ ವಜ್ರಪುರವನ್ನು ಪ್ರವೇಶಿಸಿತು. ಅಲ್ಲಿ ಭೀಷಣನೆನ್ನುವ ಘೋರ ರಾಕ್ಷಸ ತನ್ನ ಮೂರು ಕೋಟಿ ಕಾಳರಕ್ಕಸರೊಡನೆ ರಾಜ್ಯಭಾರಮಾಡುತ್ತಿದ್ದ. ಮೇದೋಹೋತನೆನ್ನುವ ಪಾಪಿಯಾಚಾರ‌್ಯ ಅವನ ಪುರೋಹಿತನಾಗಿದ್ದ. ಭೀಷಣ ಬಕಾಸುರನ ಮಗನಾಗಿದ್ದ. ಭೀಮ ಇವನ ತಂದೆಯನ್ನೂ ಕೊಂದಿದ್ದ. ಆ ಸೇಡನ್ನು ಅರ್ಜುನನ ಮೇಲೆ ತೀರಿಸಿಕೊಂಡು ನರಮೇಧ ಮಾಡಲು ಭೀಷಣ ತಯಾರಾದ. ಅರ್ಜುನನೊಡನೆ ಯುದ್ಧ ಮಾಡಿ ಮೂರ್ಛೆ ಹೋದ ನಂತರ ಯೋಜನಸ್ತನಿ, ಲಂಬೋದರಿ, ಊರ್ಧ್ವಕೇಶಿ ಮುಂತಾದವರು ಪಾಂಡವಬಲದ ಹನುಮಂತ ಮುಂತಾದವರೊಂದಿಗೆ ಕಾದಿ ಹತರಾದರು. ಮುಂದೆ ಕುದುರೆ ಬಭ್ರುವಾಹನ ರಾಜ್ಯಭಾರ ಮಾಡುತ್ತಿರುವ ಮಣಿಪುರವನ್ನು ಪ್ರವೇಶಿಸಿತು. ಅರ್ಜುನ ದೂರದಿಂದಲೇ ಮಣಿಪುರದ ಸೊಗಸನ್ನೂ ಸಮೃದ್ಧಿಯನ್ನೂ ಗಮನಿಸಿದ. ಹಂಸಧ್ವಜನಿಂದ ಅದರ ವಿವರಗಳನ್ನೂ ತಿಳಿದ. ಅದೇ ಹೊತ್ತಿಗೆ ಅರ್ಜುನನಿಗೆ ಭಾರೀ ಅಪಶಕುನವೂ ಆಯಿತು. ಉಳಿದವರು ಕಂಗಾಲಾದರು.

ಬಭ್ರುವಾಹನ ಕುದುರೆಯನ್ನು ಕಟ್ಟಿ ಯುದ್ಧಕ್ಕೆ ಸಿದ್ಧನಾದ. ಮರೆಯಲ್ಲಿ ನಿಂತು ವಿವರಗಳನ್ನೆಲ್ಲ ಕೇಳಿಸಿಕೊಂಡ ಕಟಕಿ ಎಂಬ ದೂತಿ ನಡೆಯುತ್ತಿರುವುದನ್ನೆಲ್ಲ ಚಿತ್ರಾಂಗದೆಗೆ ವಿವರಿಸಿದಳು. ಮತ್ತೆ ಮತ್ತೆ ಕೇಳಿ ಅರ್ಜುನ ಬಂದುದನ್ನು ಚಿತ್ರಾಂಗದೆ ಖಾತ್ರಿ ಮಾಡಿಕೊಂಡಳು. ಮಗನ ಮೇಲೆ ಸಿಟ್ಟಾದಳು. ತಕ್ಷಣ ಮಗನನ್ನು ಕಂಡು ಅರ್ಜುನ ತಂದೆ ಎಂಬುದನ್ನೆಲ್ಲಾ ಹೇಳಿ ಅವನನ್ನು ಮಾನ-ಸನ್ಮಾನಗಳೊಡನೆ ಬರಮಾಡಿಕೊಳ್ಳಲು ಹೇಳಿದಳು. ಮಂತ್ರಿಯೊಡನೆ ಸಮಾಲೋಚಿಸಿ ಕಪ್ಪ-ಕಾಣಿಕೆಗಳೊಡನೆ ಅರ್ಜುನನನ್ನು ಬರಮಾಡಿಕೊಳ್ಳಲು ನಗರವನ್ನೆಲ್ಲ ಶೃಂಗರಿಸಿದ. ಸಕಲ ಪರಿವಾರದೊಡನೆ ಅರ್ಜುನನಲ್ಲಿಗೆ ಹೋಗಿ ಎರಗಿ ಕಪ್ಪ-ಕಾಣಿಕೆ ಕೊಟ್ಟು ನಾನು ನಿನ್ನ ಮಗ ; ಕುದುರೆ ಕಟ್ಟಿದ ಅಪರಾಧ ಮನ್ನಿಸು. ತಾಯಿ ಚಿತ್ರಾಂಗದೆ ಎಲ್ಲ ವಿಷಯ ಹೇಳಿದ್ದಾಳೆ ಎಂದ. ಅನುಸಾಲ್ವ, ಹಂಸಧ್ವಜಾದಿಗಳೂ ಅವನ ಮಾತನ್ನು ಅನುಮೋದಿಸಿದರು.

ಆದರೆ ಅರ್ಜುನ ಸಿಟ್ಟಿಗೆದ್ದ. ಈತ ತನ್ನ ಮಗ ಹೇಗಿರಲಿ, ಕ್ಷತ್ರಿಯನಾಗಿರಲೂ ಸಾಧ್ಯವಿಲ್ಲ. ಇದ್ದ ಒಬ್ಬ ಮಗ ಅಭಿಮನ್ಯು ಮಹಾಭಾರತಯುದ್ಧದಲ್ಲಿ ಮಡಿದಿದ್ದಾನೆ ಎಂದು ಹಂಗಿಸಿ ನುಡಿದ. ಬಭ್ರುವಾಹನ ಕೋಪಗೊಂಡ. ಯುದ್ಧದಲ್ಲಿ ಅರ್ಜುನನ ತಲೆ ಕತ್ತರಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿದ. ಕಪ್ಪ-ಕಾಣಿಕೆಯನ್ನೆಲ್ಲ ಹಿಂದಕ್ಕೆ ಕಳಿಸಿದ. ಪಾಂಡವಬಲದೊಂದಿಗೆ ಯುದ್ಧ ಪ್ರಾರಂಭವಾಯಿತು. ಸಾಂಬ, ಸಾತ್ಯಕಿ, ಅನುಸಾಲ್ವ, ಪ್ರದ್ಯುಮ್ನ, ಸುವೇಗ, ನೀಲಧ್ವಜ, ಕೃತವರ್ಮ ಮುಂತಾದವರೆಲ್ಲ ಸೋತೇ ಹೋದರು.  ವೃಷಕೇತು ಸತ್ತೇಹೋದ. ಅರ್ಜುನ ಮತ್ತು ಬಭ್ರುವಾಹನನ ನಡುವೆ ಘನಘೋರ ಯುದ್ಧ ತೊಡಗಿತು. ತಂದೆ ಮಗನ ಯುದ್ಧ ನೋಡಿದರೆ ರಾಮಾಯಣದಲ್ಲಿ ರಾಮ ಮತ್ತು ಅವನ ಮಕ್ಕಳ ನಡುವಿನ ಯುದ್ಧ ನೆನಪಿಗೆ ಬರುವಂತಿತ್ತು. ಅರ್ಜುನನ ಶಕ್ತಿ-ಸಾಮರ್ಥ್ಯಗಳು ಶಸ್ತ್ರಾಸ್ತ್ರ ವಿಶೇಷಗಳೆಲ್ಲ ನಿರರ್ಥಕವಾದವು. ಬಭ್ರುವಾಹನ ಯುದ್ಧದಲ್ಲಿ ಅರ್ಜುನನ ರುಂಡವನ್ನು ಕತ್ತರಿಸಿ ಹಾಕಿದ ನೀಲಧ್ವಜನ ಹೆಂಡತಿ ಜ್ವಾಲೆ ಗಂಗೆಯ ಮೂಲಕ ಕೊಡಿಸಿದ ಶಾಪ ನಿಜವಾಗಿ ಬಿಟ್ಟಿತು.

ನಾಗಕನ್ನಿಕೆಯೂ ಅರ್ಜುನನ ಇನ್ನೊಬ್ಬ ಹೆಂಡತಿಯೂ ಆದ ಉಲೂಪಿ ಮತ್ತು ಚಿತ್ರಾಂಗದೆಯರಿಬ್ಬರೂ ಚಿಂತಿತರಾದರು. ಉಲೂಪಿ ದಾಳಿಂಬೆಯ ಮರದಲ್ಲಿ ಕುರುಹನ್ನೂ ನೋಡಿ ಅರ್ಜುನನನ್ನು ಬದುಕಿಸುವ ಉಪಾಯವನ್ನು ಅರಿತು ಸಂಜೀವಿನಿಯನ್ನು ತರಲು ಪುಂಡರಿಕ ಫಣಿ ಎನ್ನುವ ಉರಗನನ್ನು ನಾಗಲೋಕದಲ್ಲಿರುವ ತಂದೆ ಶೇಷರಾಜನಲ್ಲಿಗೆ ಕಳುಹಿಸಿದಳು. ಈ ವಿಷಯವನ್ನು ಶೇಷರಾಜ ಸಮಾಲೋಚನೆಗಾಗಿ ಸಭೆಯಲ್ಲಿ ಇಟ್ಟ. ಧೃತರಾಷ್ಟ್ರ ಎಂಬ ಫಣಿ ವಿರೋಧಿಸಿದ್ದರಿಂದ ಶೇಷರಾಜ ಸಂಜೀವಿನಿಯನ್ನು ಕೊಡಲು ಸಮ್ಮತಿಸಲಿಲ್ಲ. ಉರಗ ಪುಂಡರಿಕಫಣಿ ಮರಳಿ ಬಂದ. ವಿಷಯ ತಿಳಿದ ಬಭ್ರುವಾಹನ ಒಂದೇ ಸಮನೆ ಬಾಣ ಪ್ರಯೋಗಿಸಿ ಪಾತಾಳಲೋಕದ ನಾಗಗಳೆಲ್ಲ ಹೌಹಾರುವಂತೆ ಮಾಡಿದ. ಆಗ ಭೀತರಾದ ಫಣಿಗಳು ಸಂಜೀವಿನಿಯನ್ನು ಕೊಡಲು ಸಮ್ಮತಿಸಿದವು. ಆದರೆ ಅಷ್ಟರಲ್ಲಿ ಧೃತರಾಷ್ಟ್ರಫಣಿ ಅರ್ಜುನನ ರುಂಡವನ್ನು ಅಡಗಿಸಿಬಿಟ್ಟ. ಇದರಿಂದ ಎಲ್ಲರೂ ಕಂಗಾಲಾಗುತ್ತಾರೆ. ಹಸ್ತಿನಾಮತಿಯಲ್ಲಿರುವ ಕುಂತಿಗೆ ಅಪಶಕುನದ ಕನಸು ಬೀಳುತ್ತದೆ. ಕೃಷ್ಣ ಎಲ್ಲರನ್ನೂ ಸಮಾಧಾನಪಡಿಸುತ್ತಾನೆ. ಭೀಮ, ಕುಂತಿ ಮುಂತಾದವರೊಂದಿಗೆ ಗರುಡವಾಹನನಾಗಿ ಮಣಿಪುರಕ್ಕೆ ಬರುತ್ತಾನೆ. ಸತ್ತು ಬಿದ್ದ ಅರ್ಜುನನ್ನೂ ಕಂಡು ಕೃಷ್ಣನಿಗೂ ದುಃಖವಾಗುತ್ತದೆ. ನಂತರ ಅರ್ಜುನನ ರುಂಡ ದೊರಕುತ್ತದೆ. ಕೃ್ಣ ತನ್ನ ಬ್ರಹ್ಮಚರ‌್ಯವನ್ನು ಫಣಕ್ಕಿಟ್ಟು ಎಲ್ಲರನ್ನೂ ಬದುಕಿಸುತ್ತಾನೆ. ಬಭ್ರುವಾಹನ ತನ್ನ ಸರ್ವಸ್ವವನ್ನೂ ಅರ್ಜುನನ ಪಾದದಲ್ಲಿ ಸಮರ್ಪಿಸಿದ. ಆದರೆ ಮುನಿಸಿಕೊಂಡ ಅರ್ಜುನ ಸ್ವೀಕರಿಸಲು ನಿರಾಕರಿಸಿದ. ಭೀಮ ಅರ್ಜುನನಿಗೆ ಬುದ್ಧಿವಾದ ಹೇಳಿ ಒಪ್ಪಿಸಿದ. ಪ್ರಾಯಶ್ಚಿತ್ತ ಮಾಡಿಕೊಳ್ಳಲು ಸಿದ್ಧನಾದ ಬಭ್ರುವಾಹನನಿಗೂ ಭೀಮ ಬುದ್ಧಿ ಹೇಳಿದ. ಎಲ್ಲರೂ ಸಂಭ್ರಮವನ್ನು ಆಚರಿಸಿದರು. ಐದು ದಿನ ಕಳೆದ ಮೇಲೆ ಉಲೂಪಿ, ಚಿತ್ರಾಂಗದೆ, ಕುಂತಿ, ದೇವಕಿ, ಭೀಮ ಯಶೋದೆ ಮುಂತಾದವರೆಲ್ಲ ಹಸ್ತಿನಾವತಿಗೆ ತೆರಳಿದರು. ಬಭ್ರುವಾಹನನ್ನೂ ಕೂಡಿಕೊಂಡ ಪಾಂಡವಸೇನೆ ಮುಂದುವರಿಯಿತು. ಒಂದು ವರ್ಷದ ನಂತರ ಯಜ್ಞವನ್ನು ಮುಗಿಸಿ ಪಾಂಡವರು ನೆಮ್ಮದಿಯಿಂದ ರಾಜ್ಯಭಾರಮಾಡತೊಡಗಿದರು. ಎಂಬಲ್ಲಿಗೆ ಯಕ್ಷಗಾನ ಬಭ್ರುವಾಹನ ಕಾಳಗ ಮಂಗಲವಾಗುತ್ತದೆ.

ಈ ಪ್ರಸಂಗಕೃತಿಯೂ ಮುದ್ರಣದಿಂದ ಮುದ್ರಣಕ್ಕೆ ಪರಿಷ್ಕಾರವಾಗುತ್ತ ಬಂದಂತಿದೆ. ರಾಗ ಮತ್ತು ತಾಳಗಳಿಗೆ ಅನುಗುಣವಾಗಿ ಶಬ್ದವನ್ನು ಹಿಗ್ಗಿಸುವ, ಕುಗ್ಗಿಸುವ ಕ್ರಮ ಅದರ ಆರನೆಯ ಮುದ್ರಣದಲ್ಲಿಯೂ ಕಂಡುಬಂದಿದೆ. ಇಂಥಲ್ಲಿ ಭಾಷೆ ಮತ್ತು ವ್ಯಾಕರಣಕ್ಕಿಂತ ರಾಗ, ತಾಳವೇ ಮುಖ್ಯವಾಗುತ್ತದೆ. ಉದಾಹರಣೆಗೆ ಈ ಸಾಲುಗಳನ್ನು ಗಮನಿಸಬಹುದು. ಮಗನೆ ನೀ ಮತಿಗೆಟ್ಟು ನಡೆವಾರೇ ಕುಂತೀ ಮಗನ ವಾಜಿಯ ಕಟ್ಟಿ ತಡೆವಾರೆ ಇಲ್ಲಿ ವಕಾರದ ಬದಲು ವಾಕಾರವನ್ನು ಬಳಸಲಾಗಿದೆ.

ಬಂಧದ ದೃಷ್ಟಿಯಿಂದ ಪ್ರಸಂಗಕೃತಿ ತುಂಬ ಚೆನ್ನಾಗಿದೆ. ಕ್ಷಿಷ್ಟವಾದ ಕಥೆಯನ್ನೂ ಸರಳವಾಗಿ ರಾಗ, ತಾಳಗಳ ಚೌಕಟ್ಟಿಗೆ ಪ್ರಸಂಗಕಾರ ಒಗ್ಗಿಸಿದ್ದಾನೆ. ಚಿತ್ರಾಂಗದೆ ಮಿತ್ರೆ  ಕಟಕಿಯೊಡನೆ ಅರ್ಜುನನ ಆಗಮದ ವಿಷಯದಲ್ಲಿ ವ್ಯಕ್ತಪಡಿಸುವ ಸಂಭ್ರಮ, ಆತಂಕಗಳುಳ್ಳ ಪದ್ಯ ಶ್ರೇಣಿಯ ಅಹುದೆ ಎನ್ನಯ ರಮಣ… ರಚನೆಗಳು ಭಾವಗೀತೆಯಂತೆ ಭಾವಪೂರ್ಣವಾಗಿವೆ. ಪ್ರಸಂಗಮುಖದಲ್ಲಿ ಕವಿ ಮಹಾಭಾರತದ ಪ್ರಮುಖ ಘಟನೆಗಳನ್ನು ಎರಡು ದ್ವಿಪದಿ, ಎರಡು ವಾರ್ಧಿಕಗಳಲ್ಲಿ ಅಡಕಿಸಿದ್ದಾನೆ. ಇದರಲ್ಲಿ ಕೌರವರ ಹುಟ್ಟಿನಿಂದ ಧರ‌್ಮರಾಜ ಬಂಧುಹತ್ಯಾಪಾತಕಕ್ಕಾಗಿ ಚಿಂತಿಸುವರೆಗಿನ ಕಥೆ ಬರುತ್ತದೆ. ಹಾಗೇ ಅರ್ಜುನ ಮತ್ತು ಬಭ್ರುವಾಹನ ಯುದ್ಧಕ್ಕೆ ತೊಡಗಿದ ಸಂದರ್ಭದಲ್ಲಿ ಮೂಲವನ್ನೇ ಅನುಸರಿಸಿ ಕವಿ ರಾಮಾಯಣದ ಕಥೆಯನ್ನು ಆರು ಪದ್ಯ ಮತ್ತು ಒಂದು ಭಾಮಿನಿಯಲ್ಲಿ ಅಡಕಿಸುತ್ತಾನೆ. ಇವೆಲ್ಲ ಸಂಗ್ರಹಗುಣಕ್ಕೆ ಸಾಕ್ಷಿಯಾಗುತ್ತವೆ. ಇವೆಲ್ಲವುಗಳಿಗೆ ಹೊರತಾಗಿ ಯಕ್ಷಗಾನ ಬಭ್ರುವಾಹನ ಕಾಳಗ ರಂಗದಲ್ಲಿ ವಿಶೇಷ ಆಕರ್ಷಣೆಯನ್ನು ಪಡೆಯುತ್ತದೆ.

* * *

7. ವಿಷಯೆ ಕಲ್ಯಾಣ ಎಂಬ ಚಂದ್ರಹಾಸೋಪಾಖ್ಯಾನ

ತ್ತರ ಕನ್ನಡ ಜಿಲ್ಲೆಯ ಭಟಕಳ ತಾಲೂಕಿನ ಶಿರಾಲಿ ಗ್ರಾಮದ ಮಾಲೆಕೊಡಲು ಮಜರೆಯ ಶಂಭುಗಣಪತಿ ಭಟ್ಟ ಬರೆದ ವಿಷಯ ಕಲ್ಯಾಣವೆಂಬ ಚಂದ್ರಸೋಪಾಖ್ಯನವೂ ಜೈಮಿನಿ ಭಾರತದ ಅಶ್ವಮೇಧದ ಕಥೆಗೇ ಸಂಬಂಧಿಸಿದ್ದು. ಚಂದ್ರಹಾಸರಾಜನ ಮಕ್ಕಳಾದ ಮಕರಧ್ವಜ ಮತ್ತು ಪದ್ಮಾಕ್ಷ ಕುಂತಲರಾಜ್ಯದ ಹೊರವಲಯದಲ್ಲಿ ಸಂಚರಿಸುತ್ತಿದ್ದಾಗ ಯುಧಿಷ್ಠರನ ಅಶ್ವಮೇಧದ ಕುದುರೆ ಅಲ್ಲಿಗೆ ಬಂದುದನ್ನು ಕಂಡು ವಿಸ್ಮಿತರಾಗಿ ಸಮಾಚಾರವನ್ನು ತಂದೆಗೆ ತಿಳಿಸಿದರು. ಈ ಸಂದರ್ಭದಲ್ಲಿ ಚಂದ್ರಹಾಸನ ವಿವರ ಕಥೆ ಬಂದಂತೆ ಕಲ್ಪಿತ. ಹಲವು ಕಥೆಗಳ ಸಂಕಲನವೆಂಬ ಖ್ಯಾತಿಯುಳ್ಳ ಜೈಮಿನಿ ಭಾರತದಲ್ಲಿ ಚಂದ್ರಹಾಸನ ಕಥೆ ತುಂಬ ರೋಚಕವಾದುದು.

ಯಕ್ಷಗಾನ ಮಹಾಭಾರತದ ಪ್ರಸಂಗಗಳು ಗ್ರಂಥದ ಡಾ. ಆನಂದರಾಮ ಉಪಾಧ್ಯಾಯರು ಚಂದ್ರಹಾಸ ಚರಿತ್ರೆಯ ನಾಲ್ಕು ಪ್ರಸಂಗಕೃತಿಗಳನ್ನು ಪಟ್ಟಿ ಮಾಡುತ್ತಾರೆ. ಮೊದಲಿನ ಮೂರು ಕ್ರಮವಾಗಿ ಹಲಸಿನಹಳ್ಳಿ ನರಸಿಂಹಶಾಸ್ತ್ರಿ, ಅಲಟ್ಟಿ ರಾಮಣ್ಣ ಶಗ್ರಿತ್ತಾಯ ಮತ್ತು ಮಟ್ಟಿ ವಾಸುದೇವ ಪ್ರಭು ಅವರುಗಳದು. ನಾಲ್ಕನೆಯ ಕೃತಿ ಚಂದ್ರಹಾಸ ಬಲಿಪ ನಾರಾಯಣ ಭಾಗವತರದು. ಇವರ ಪಟ್ಟಿಯಲ್ಲಿ ಮಾಲೆಕೊಡಲು ಶಂಭುಗಣಪತಿ ಭಟ್ಟನ ವಿಷಯ ಕಲ್ಯಾಣವೆಂಬ ಚಂದ್ರಹಾಸಾಖ್ಯಾನ ಇಲ್ಲ. ತಿರುಗಾಟದ ಮೇಳಗಳ ಮೂಲಕ ಸಾಕಷ್ಟು ಪ್ರದರ್ಶನ ಕಂಡಿದೆ ಎನ್ನುವ ಅವರ ಹೇಳಿಕೆ ನರಸಿಂಹಶಾಸ್ತ್ರಿಯ ಚಂದ್ರಹಾಸ ಚರಿತ್ರೆಗೆ ಅನ್ವಯಿಸುವದಿಲ್ಲ. ಬದಲು ಈ ಕೃತಿಗೆ ಅನ್ವಯಿಸುತ್ತದೆ.

ಈ ಪ್ರಸಂಗ ಕೃತಿಯ ರಂಗಚರಿತ್ರೆಯೂ, ಅಷ್ಟು ದೀರ್ಘವಾದುದಲ್ಲ. ಅದರ ಮೊದಲ ಮುದ್ರಣವೇ 1950ರಲ್ಲಿ. ಮರುಮುದ್ರಣಗೊಳ್ಳುತ್ತಿರುವುದು ಈ ಸಂಪುಟದಲ್ಲಿಯೇ. ಮುದ್ರಿತ ಪ್ರತಿಗಳೂ ಸಿಗುವುದಿಲ್ಲ. ಕೃತಿ ರಚನೆಯಾದುದೇ ಸುಮಾರು 1940ರ ಸುಮಾರಿಗೆ.

ದುಂದುಭಿ ಸಂವತ್ಸರದಲ್ಲಿ ಪೂರ್ಣಗೊಳಿಸಿದನೆಂದು ಕವಿ ಹೇಳಿದ್ದಾನೆ. ದಿ. ಕೆರೆಮನೆ ಶಿವರಾಮ ಹೆಗಡೆ ತನ್ನ ದುಷ್ಟಬುದ್ಧಿ ಪಾತ್ರದ ಮೂಲಕ ಮೊಟ್ಟ ಮೊದಲ ಬಾರಿಗೆ ರಂಗಕ್ಕೆ ತಂದರೆಂಬ ಬಗ್ಗೆ ದಾಖಲೆಯಿದೆ.  ನಂತರದ ದಿನಗಳಲ್ಲಿ ಮೂರೂರು ದೇವರು ಹೆಗಡೆ, ಕೆರೆಮನೆ ಮಹಾಬಲ ಹೆಗಡೆ, ಚಿಟ್ಟಾಣಿರಾಮ ಚಂದ್ರಹೆಗಡೆ, ಜಲವಳ್ಳಿ ವೆಂಕಟೇಶ ರಾವ್, ಕೆರೆಮನೆ ಶಂಭುಹೆಗಡೆ ಮುಂತಾದವರು ದುಷ್ಟಬುದ್ಧಿ ಪಾತ್ರ ನಿರ್ವಹಣೆಯ ಪರಂಪರೆಯಲ್ಲಿದ್ದಾರೆ.

ಕಥಾ ಸಾರಾಂಶ :

ಮೇಧಾವಿ ಎಂಬ ರಾಜ ಕೇರಳ ದೇಶವನ್ನು ಆಳುತ್ತಿದ್ದ. ಶೀಲೆ ಅವನ ರಾಣಿ. ಅವರಿಗೆ ಮಕ್ಕಳೇ ಇಲ್ಲವೆಂಬ ಕೊರಗಿತ್ತು. ಅನಂತರ ಮೂಲ ನಕ್ಷತ್ರದ ಅರಿಷ್ಟಾಂಶದಲ್ಲಿ ಎಡಪಾದದಲ್ಲಿ ಆರು ಬೆರಳುಗಳುಳ್ಳ ಗಂಡುಮಗ ಹುಟ್ಟಿದ. ಇವೆರಡರ ಪರಿಣಾಮವಾಗಿ ಪದ್ಮಪುರದ ರಾಜನಾದ ಮಾರ್ತಾಂಡತೇಜನ ಆಕ್ರಮಣಕ್ಕೆ ಬಲಿಯಾಗಿ ರಾಜ ಮೇಧಾವಿ ಮರಣಹೊಂದಿದ. ತಾಯಿಯೂ ತೀರಿಹೋದಳು. ಮಗು ಅನಾಥನಾದ. ಮುದಿದಾದಿಯೊಬ್ಬಳು ಸಾಕುತ್ತಿದ್ದಳು. ಇಬ್ಬರೂ ದುಷ್ಟಬುದ್ಧಿಯ ಆಳ್ವಿಕೆಯಲ್ಲಿದ್ದ ಕುಂತಳ ದೇಶಕ್ಕೆ ಬಂದರು.  ಸಾಕು ತಾಯಿಯೂ ಸತ್ತು ಹೋದಳು. ಕುಂತಳವನ್ನು ಸುಬುದ್ಧಿರಾಜ ಆಳುತ್ತಿದ್ದರೂ ದುಷ್ಟಬುದ್ಧಿಯೇ ಸರ್ವಾಧಿಕಾರಿಯಾಗಿದ್ದ. ಅರಸೊತ್ತಿಗೆ ತನಗೂ ನಂತರ ತನ್ನ ಮಗನಿಗೂ ದಕ್ಕಬೇಕೆಂದು ಕನಸು ಕಾಣುತ್ತಿದ್ದ. ಅದಕ್ಕಾಗಿ ಬ್ರಾಹ್ಮಣರನ್ನು ಭೋಜನ ದಕ್ಷಿಣೆಗಳಿಂದ ಸಂತೃಪ್ತಿಪಡಿಸಿದ. ಅಲ್ಲಿ ಮಕ್ಕಳೊಂದಿಗೆ ಆಡುತ್ತಿದ್ದ ಹುಡುಗನನ್ನು ಕಂಡು ಅವನೇ ಮುಂದೆ ಕುಂತಳಕ್ಕೆ ಅರಸನಾಗುತ್ತಾನೆಂದು ಬ್ರಾಹ್ಮಣರು ನುಡಿದರು. ವಿಸ್ಮಿತನಾದ ದುಷ್ಟಬುದ್ಧಿ ಕಟುಕರನ್ನು ಕರೆದು ಹುಡುಗನನ್ನು ಅರಣ್ಯಕ್ಕೆ ಒಯ್ದು ಕೊಂದು, ಕುರುಹನ್ನು ತಂದು ತೋರಿದರೆ ವಿಶೇಷವಾದ ಬಹುಮಾನ ಕೊಡುವುದಾಗಿ ಹೇಳಿದ. ಕಟುಕರು ಕಾಡಿಗೆ ಕರೆದೊಯ್ದರು. ಆದರೆ ಅವರಿಗೆ ಕೊಲ್ಲುವುದಕ್ಕೆ ಮನಸ್ಸು ಬರಲಿಲ್ಲ. ಅವನ ಎಡಪಾದದಲ್ಲಿದ್ದ ಆರನೆಯ ಬೆರಳನ್ನು ಕತ್ತರಿಸಿ ಕೊಂದಿದ್ದೇವೆಂದು ಕುರುಹು ತೋರಿಸಿಬಿಟ್ಟರು. ದುಷ್ಟಬುದ್ಧಿ ನಿರುಮ್ಮಳನಾದ.

ಕಂಗಾಲಾದ ಹುಡುಗ ಕಾಡಿನಲ್ಲಿ ಅಳುತ್ತ ಕೂತಿದ್ದ. ಅಷ್ಟರಲ್ಲಿ ಅಲ್ಲಿಗೆ ಚಂದನಾವತಿಯನ್ನು ಆಳುತ್ತಿದ್ದ ಬೇಡರ ಅರಸು ಕುಳಿಂದಕ ಬೇಟೆಗಾಗಿ ಬಂದ. ಅವನಿಗೆ ಮಕ್ಕಳಿರಲಿಲ್ಲ. ಹುಡುಗನನ್ನು ಕಂಡು ಅವನಿಗೆ ಅಪಾರ ಸಂತೋಷವಾಯಿತು. ಮನೆಗೆ ಕರೆದುಕೊಂಡು ಹೋದ. ಅವನ ಹೆಂಡತಿಗೂ ತುಂಬ ಸಂತೋಷವಾಯಿತು. ಚಂದ್ರಹಾಸನೆಂದು ಹೆಸರಿಟ್ಟು ಅಕ್ಕರೆಯಿಂದ ಸಾಕಿದರು. ಚಂದ್ರಹಾಸ ಸಕಲ ವಿದ್ಯಾಪಾರಂಗತನಾದ.  ರಾಜ್ಯವನ್ನೂ ಬೊಕ್ಕಸವನ್ನೂ ಬಲಪಡಿಸಿದ. ಪಟ್ಟಕ್ಕೆ ಬಂದ.

ಪಟ್ಟಾಭಿಷೇಕದ ಕಾರಣಕ್ಕಾಗಿ ದೂತರ ಮೂಲಕ ಕುಂತಳಕ್ಕೆ ಕಪ್ಪ ಕಳಿಸಿದ. ಕಪ್ಪ ಸ್ವೀಕರಿಸಿದ ದುಷ್ಟಬುದ್ಧಿ ದೂತರೊಂದಿಗೆ ಮಾತನಾಡಿ ವಿಷಯ ತಿಳಿದ. ಕಟುಕರೇ ತನಗೆ ಮೋಸಮಾಡಿದರೆಂದು ಊಹಿಸಿದ. ಸ್ವತಃ ಚಂದನಾವತಿಗೆ ಧಾವಿಸಿ ವಿದ್ಯಮಾನಗಳನ್ನೆಲ್ಲ ಗಮನಿಸಿದ. ಚಂದ್ರಹಾಸನನ್ನು ಕೊಂದ  ಹೊರತು ಅಧಿಕಾರ ದಕ್ಕುವದಿಲ್ಲವೆಂದು ನಂಬಿಕೊಂಡ. ಚಂದ್ರಹಾಸನನ್ನು ಕಪಟ ವಾತ್ಸಲ್ಯದಿಂದ ಮಾತನಾಡಿಸಿದ. ದುಷ್ಟಬುದ್ಧಿ ತುರ್ತಾದ ರಹಸ್ಯ ಕಾರಣಕ್ಕಾಗಿ ಪತ್ರವೊಂದನ್ನು ಒಯ್ದು ಕುಂತಳದಲ್ಲಿದ್ದ ತನ್ನ ಮಗ ಮದನನಿಗೆ ತಲುಪಿಸಲು ಹೇಳಿದ. ವಿಷಕೊಟ್ಟು ಚಂದ್ರಹಾಸನನ್ನು ಕೊಲ್ಲುವಂತೆ ಪತ್ರದಲ್ಲಿ ಬರೆದು ದುಷ್ಟಬುದ್ಧಿ ತಾನೇ ಚಂದ್ರಹಾಸನ ಸೆರಗಿನಲ್ಲಿ ಕಟ್ಟಿದ.

ದಾರಿಯಲ್ಲಿ ಚಂದ್ರಹಾಸ ಕುಂತಲನಗರದ ಉದ್ಯಾನಮನದಲ್ಲಿ ವಿಶ್ರಮಿಸಿಕೊಳ್ಳುತ್ತ ನಿದ್ದೆಹೋದ. ದುಷ್ಟಬುದ್ಧಿಯ ಮಗಳು ವಿಷಯೆ ವನವಿಹಾರಕ್ಕಾಗಿ ಸಖಿಯರೊಂದಿಗೆ ಅಲ್ಲಿಗೆ ಬಂದಿದ್ದಳು. ಚಂದ್ರಹಾಸನನ್ನು ಕಂಡು ಮೋಹಗೊಂಡಳು. ನಿದ್ದೆಯಲ್ಲಿದ್ದ ಅವನ ಸೆರಗಿನಲ್ಲಿದ್ದ ಓಲೆಯನ್ನು ಗಮನಿಸಿದಳು. ಬಿಚ್ಚಿ ಓದಿದಳು. ತಂದೆಯ ಬರೆಹವೇ ಹೌದಾದರೂ ಕೈ ತಪ್ಪಿನಿಂದ ವಿಷಯೆಯನ್ನು  ಕೊಡು ಎಂದು ಬರೆಯುವ ಬದಲು ವಿಷವ ಕೊಡು ಎಂದು ಬರೆದು ಬಿಟ್ಟಿದ್ದಾನೆಂದು ಊಹಿಸಿದಳು. ಕಣ್ಣಿನ ಕಾಡಿಗೆ ಬಳಸಿ ತನ್ನ ಸೆಳ್ಳುಗುರಿನಿಂದ ಪತ್ರವನ್ನು ತಿದ್ದಿದಳು. ಮೊದಲಿದ್ದ ಹಾಗೇ ಇಟ್ಟು ಅರಮನೆಗೆ ನಡೆದುಬಿಟ್ಟಳು.

ಚಂದ್ರಹಾಸ ನಿದ್ದೆಯಿಂದೆದ್ದು ಪಟ್ಟಣ ಸೇರಿ ಪತ್ರವನ್ನು ಮದನನಿಗೆ ನೀಡಿದ. ಅಪ್ಪನ ಅನುಪಸ್ಥಿತಿಯಲ್ಲಿ ಕಾರ‌್ಯಭಾರ ನಡೆಸುತ್ತಿದ್ದ ಮದನ ಉತ್ಸಾಹದಲ್ಲಿದ್ದ. ಏಕಾಂತದಲ್ಲಿ ಪತ್ರ ಓದಿದ ಆತ ತನ್ನ ತಂಗಿಗೆ ಚಂದ್ರಹಾಸ ಯೋಗ್ಯವರನೆಂದು ತೀರ‌್ಮಾನಿಸಿ ಸ್ವಲ್ವವೂ ವಿಳಂಬ ಮಾಡದೆ ಅತ್ಯಂತ ವಿಜೃಂಭಣೆಯಿಂದ ವಿವಾಹ ನೆರವೇರಿಸಿದ. ಇಷ್ಟರಲ್ಲೇ ಚಂದ್ರಹಾಸ ಸತ್ತಿರಲೇಬೇಕೆಂಬ ಸಂತೋಷದಿಂದ ದುಷ್ಟಬುದ್ಧಿ ಚಂದನಾವತಿಯಿಂದ ಕುಂತಳಕ್ಕೆ ಧಾವಿಸಿಬಂದ. ದಾರಿಯಲ್ಲೇ ಅವನಿಗೆ ಸೂಚನೆಗಳೂ ಸಮಾಚಾರಗಳೂ ಸಿಕ್ಕಿದವು. ಆಸ್ಥಾನಕ್ಕೆ ಬಂದು ವಿಷಯ ತಿಳಿಯುವಷ್ಟರಲ್ಲಿ ಕಡುವೈರಿ ಚಂದ್ರಹಾಸ ಅಳಿಯನಾಗಿ ಬಿಟ್ಟಿದ್ದ. ಮಗ ಮದನನ್ನು ತರಾಟೆಗೆ ತೆಗೆದುಕೊಂಡರೆ ಅವನದು ತಪ್ಪೇ ಇರಲಿಲ್ಲ. ದುಷ್ಟಬುದ್ಧಿ ಹತಾಶನಾದ.

ಆದರೂ ನಯವಂಚನೆಯಿಂದ ಮದುಮಕ್ಕಳನ್ನು ಆಶೀರ್ವದಿಸಿ ಹೊಸಮದುಮಗ  ಊರ ಹೊರಗಿನ ಕಾಳಿಕಾಲಯಕ್ಕೆ ಒಂಟಿಯಾಗಿ ಹೋಗಿ ಪೂಜಿಸುವುದು ಸಂಪ್ರದಾಯ. ಇವತ್ತೇ ಸೂರ‌್ಯಾಸ್ತದಲ್ಲಿ ಹೋಗಿ ಪೂಜಿಸಿ ಬಾ ಎಂದು ಆಣತಿಯಿತ್ತ. ಚಂದ್ರಹಾಸ ಸಂತೋಷದಿಂದ ಒಪ್ಪಿದ. ಸಿದ್ಧತೆಗಾಗಿ ಆ ಕಡೆ ತೆರಳಿದ ಕೂಡಲೆ ದುಷ್ಟಬುದ್ಧಿ ಈ ಕಡೆ ಕಟುಕರನ್ನು ಕರೆದು ಸೂರ್ಯಾಸ್ತದಲ್ಲಿ ಕಾಳಿಗುಡಿಗೆ ಪೂಜೆಗಾಗಿ ಬರುವವನನ್ನು ಹಿಂದು-ಮುಂದು ನೋಡದೆ ಕತ್ತರಿಸಿಕೊಲ್ಲಿ ಎಂದು ಆಜ್ಞಾಪಿಸಿದ.

ಅದೇ ಹೊತ್ತಿಗೆ ಕುಂತಳದ ಅರಸ ಸುಬುದ್ಧಿಗೆ ಅವಸಾನ ಕಾಲ ಸಮೀಪಿಸಿತು. ಆತ ತತ್‌ಕ್ಷಣ ಚಂದ್ರಹಾಸನಿಗೆ ಪಟ್ಟಕಟ್ಟಿ ತನ್ನ ಒಬ್ಬಳೇ ಮಗಳನ್ನು ಅವನಿಗೆ ಧಾರೆ ಎರೆದುಕೊಡಲು ನಿಶ್ಚಯಿಸಿದ್ದ. ಚಂದ್ರಹಾಸನನ್ನು ಆಸ್ಥಾನಕ್ಕೆ ಕರೆದು ತರಲು ಮದನನೇ ಓಡಿದ.  ನಡುದಾರಿಯಲ್ಲಿ ಆತ ಚಂದ್ರಹಾಸನನ್ನು ಆಸ್ಥಾನಕ್ಕೆ ಕಳುಹಿಸಿ ಅವನ ಬದಲು ತಾನೇ ಕಾಳೀಪೂಜೆಗೆ ಹೊರಟ. ಕಟುಕರಿಂದ ಹತನಾದ. ಈ ಕಡೆ ಚಂದ್ರಹಾಸ ರಾಜಪುತ್ರಿ ಚಂಪಕಮಾಲಿನಿಯನ್ನು ಮದುವೆಯಾಗಿ ಕುಂತಳದ ದೊರೆಯಾದ. ಅಷ್ಟರಲ್ಲಿ ಸುದ್ದಿಯೆಲ್ಲ ದುಷ್ಟಬುದ್ಧಿಯ ಕಿವಿಗೆ ಬಿತ್ತು. ಮಗ ಕೊಲೆಯಾಗಿದ್ದ. ಕಾಳಿಗುಡಿಗೆ ಧಾವಿಸಿ ತಾನೂ ಪ್ರಾಣತೆತ್ತ. ಸುದ್ದಿ ತಿಳಿದ ಚಂದ್ರಹಾಸ ತಾನೂ ಕಾಳಿಗೆ ಬಲಿಯಾದ.  ಕಾಳಿ ಪ್ರಸನ್ನಳಾದಳು. ಎಲ್ಲರಿಗೂ ಜೀವದಾನ ಮಾಡಿದಳು. ದುಷ್ಟಬುದ್ಧಿಯ ಮನಸ್ಸು ಪರಿವರ್ತನೆಯಾಯಿತು. ಚಂದ್ರಹಾಸನಿಗೆ ಚಂಪಕಮಾಲಿನಿಯಲ್ಲಿ ಪದ್ಮಾಕ್ಷನೆಂಬ ಮಗನೂ ವಿಷಯೆಯಲ್ಲಿ ಮಕರಾಕ್ಷನೆಂಬವನೂ ಹುಟ್ಟಿದರು. ಎಂಬಲ್ಲಿಗೆ ಚಂದ್ರಹಾಸಾಖ್ಯಾನದ ಕಥೆ ಮಂಗಲವಾಗುತ್ತದೆ.

ಪ್ರಸಂಗಕಾರ :

ಈ ಪ್ರಸಂಗಕೃತಿ ಮೊಟ್ಟಮೊದಲ ಬಾರಿಗೆ 1950ರಲ್ಲಿ ಪ್ರಕಟವಾಗಿದೆ. ಆಗ ಜಿ. ಆರ್. ಪಾಂಡೇಶ್ವರ ಮುನ್ನುಡಿ ಬರೆದಿದ್ದಾರೆ (2.6.1950) ಆ ಹೊತ್ತಿಗೆ ಶಂಭು ಭಟ್ಟ ದಿವಂಗತರಾಗಿ ಹತ್ತೆಂಟು ವರ್ಷ ದಾಟಿದೆ ಎಂದಿದ್ದಾರೆ. ಅಂದರೆ ಪ್ರಸಂಗಕಾರ ಸುಮಾರು 1940ರ ಸುಮಾರಿಗೆ ತೀರಿಕೊಂಡಿರಬಹುದು. ಹುಟ್ಟಿದ ಮತ್ತು ತೀರಿಕೊಂಡ ಕರಾರುವಾಕ್ಕಾದ ವರ್ಷವನ್ನು ತಿಳಿಯಬೇಕೆಂಬ ನನ್ನ ಪ್ರಯತ್ನ ಏನೇನೂ ಫಲಕೊಡಲಿಲ್ಲ. ಉತ್ತರ ಕನ್ನಡ ಜಿಲ್ಲೆಯ ಗ್ರಂಥಾಕಾರರು ಕೃತಿಯಲ್ಲಿ ಇವರ ಪರಿಚಯವಿಲ್ಲ. ಡಾ. ಕಾರಂತರೂ ಪ್ರಸ್ತಾಪಿಸುವುದಿಲ್ಲ. ಕೆರೆಮನೆ ಶಿವರಾಮ ಹೆಗಡೆ (1908-1993) ಪ್ರಸಂಗ ಕೃತಿಯನ್ನು ಒಯ್ದು ಆಡಿದರಂತೆ. ಈ ಪ್ರಸಂಗವನ್ನು ತಾನೇ ಮೊದಲ ಬಾರಿಗೆ ರಂಗಕ್ಕೆ ತಂದೆನೆಂದು ಕೆರೆಮನೆ ಶಿವರಾಮ ಹೆಗಡೆ ತನ್ನ ಆತ್ಮಚರಿತ್ರೆಯಲ್ಲಿ ಹೇಳಿದ್ದಾರೆ. ಕೆರೆಮನೆ ಶಿವರಾಮ ಹೆಗಡೆಯವರಿಗೆ ಒಡನಾಟವೂ ಬಾಂಧವ್ಯವೂ ಇವರೊಂದಿಗೆ ಇದ್ದಿರಬೇಕು. ಆದ್ದರಿಂದ ಕೆರೆಮನೆಯವರ ಹಿರಿಯ ಸಮಕಾಲೀನರೆಂದು ನಿರ್ಧರಿಸಬಹುದು.

ಜಿ.ಆರ್. ಪಾಂಡೇಶ್ವರರು ಮುನ್ನುಡಿಯಲ್ಲಿ ಪ್ರಸಂಗಕಾರರ ಬಗ್ಗೆ ಕೆಲವು ಮಾತುಗಳನ್ನು ಹೇಳಿದ್ದಾರೆ. ಇವರದು ಹವ್ಯಕ ಬ್ರಾಹ್ಮಣ ಮನೆತನ. ಗಣಪತಿ ಭಟ್ಟ ಮತ್ತು ನಾಗಮ್ಮ ದಂಪತಿಗಳ ಹಿರಿಯ ಮಗ. ಇವರಿಗೆ ಅಪ್ಪು ಭಟ್ಟ ಎಂಬ ಅಡ್ಡ ಹೆಸರೂ ಇತ್ತಂತೆ. ಮನೆತನದಲ್ಲಿ ಭಾಗವತಿಕೆ ಸಾಂಪ್ರದಾಯಿಕವಾಗಿಯೇ ಬಂದುದು. ಇವರ ಅಣ್ಣ ಶಾಮಭಟ್ಟರೂ ತಮ್ಮ ಬಾಬುಭಟ್ಟರೂ ಹಾಡುಗಾರಿಕೆಯಲ್ಲಿಯೂ ಮದ್ದಳೆವಾದನದಲ್ಲಿಯೂ ನೈಪುಣ್ಯ ಪಡೆದಿದ್ದರಂತೆ. ಶಂಭುಭಟ್ಟರು ತಾಳಮದ್ದಳೆಯಲ್ಲಿ ಒಳ್ಳೆಯ ಅರ್ಥಧಾರಿಗಳೂ ಹಾಡುಗಾರರೂ ಆಗಿದ್ದರಂತೆ. ಕೇವಲ ನಾಲ್ಕನೆಯ ಇಯತ್ತೆ ಕನ್ನಡ ಕಲಿತವರು. ಛಂದಸ್ಸು, ವ್ಯಾಕರಣ, ಅಲಂಕಾರಾದಿಗಳನ್ನು ಕಲಿತವರಲ್ಲ. ದಕ್ಷಿಣ ಕನ್ನಡದಲ್ಲಿ ಕೆಲಕಾಲ ಹೋಟೆಲ್ ಉದ್ಯಮ ನಡೆಸಿದ್ದರಂತೆ.

* * *

8.  ಚಂದ್ರಹಾಸ ಚರಿತ್ರೆ

ಹಿರಿ-ಕಿರಿಯ ಸಮಕಾಲೀನ ಪ್ರಸಂಗಕಾರರು ಒಂದೇ ಸ್ತುವನ್ನು ಒಂದೇ ಕಥಾ ಸಂದರ್ಭವನ್ನು ಒಂದೇ ಉದ್ದೇಶವನ್ನು ಇಟ್ಟುಕೊಂಡು ಯಕ್ಷಗಾನದ ಛಂದಸ್ಸಿನಲ್ಲಿ ಎರಕ ಹೊಯ್ದು ವಿಭಿನ್ನ ಪ್ರಸಂಗಕೃತಿಗಳನ್ನು ರಚಿಸಬಲ್ಲರೆಂಬುದಕ್ಕೆ ಮಾಲೆಕೊಡಲು ಶಂಭುಭಟ್ಟನ ವಿಷಯೆ ಕಲ್ಯಾಣ ಮತ್ತು ಹಲಸಿನಹಳ್ಳಿ ನರಸಿಂಹಶಾಸ್ತ್ರಿಯ ಚಂದ್ರಹಾಸ ಚರಿತ್ರೆ ಪ್ರಸಂಗಕೃತಿಗಳು ಸಾಕ್ಷಿ. ಕಥೆ ಎರಡರಲ್ಲಿಯೂ ಒಂದೇ. ಅಲ್ಲಲ್ಲಿ ಸಣ್ಣ-ಪುಟ್ಟ ದೃಶ್ಯಗಳನ್ನು ನಿರ್ವಹಿಸುವಲ್ಲಿ ಅಲ್ಪ-ಸ್ವಲ್ಪ ವ್ಯತ್ಯಾಸಗಳಿವೆ. ಪಾತ್ರದ ಹೆಸರುಗಳಲ್ಲಿ ಸ್ವಲ್ಪ ವ್ಯತ್ಯಾಸಗಳಿವೆ. ನರಸಿಂಹಶಾಸ್ತ್ರಿಯ ಚಂದ್ರಹಾಸಚರಿತ್ರೆ ಕುಂತಳದ ಅರಸು ಚಿತ್ರಧ್ವಜನ ಒಡ್ಡೋಲಗದಿಂದ ತೊಡಗುತ್ತದೆ. ಮಾಲೆಕೊಡಲು ಶಂಭುಭಟ್ಟನ ವಿಷಯೆ ಕಲ್ಯಾಣ ಮೇಧಾವಿಯ ಒಡ್ಡೋಲಗದಿಂದ ತೊಡಗುತ್ತದೆ. ಪ್ರಸಂಗದಲ್ಲಿ ಸಾಯುವ ಪಾತ್ರದ ಒಡ್ಡೋಲಗದಿಂದ ಕಥೆ ರಂಗಸ್ಥಳದಲ್ಲಿ ತೊಡಗಬಾರದೆಂಬ ಪರಂಪರೆಯನ್ನು ನರಸಿಂಹಶಾಸ್ತ್ರಿ ಅನುಸರಿಸಿದ್ದಾನೆ.  ಚಿತ್ರಧ್ವಜನಿಂದ ಅಧಿಕಾರಪಡೆದ ಮಂತ್ರಿ ದುಷ್ಟಬುದ್ಧಿ ಪಕ್ಕದ ಸೌರಾಷ್ಟ್ರ ದೇಶದ ಶೂರಸೇನನನ್ನು ನಿಯಂತ್ರಿಸಿ ರಾಜ್ಯಕ್ಕೆ ಶತ್ರುಗಳೇ ಇಲ್ಲದಂತೆ ಮಾಡುವ ಸನ್ನಿವೇಶ ಚಂದ್ರಹಾಸ ಚರಿತ್ರೆಯಲ್ಲಿದೆ. ವಿಷಯೆ ಕಲ್ಯಾಣದಲ್ಲಿ ಇಲ್ಲ. ದುಷ್ಟಬುದ್ಧಿಯೇ ಕೇರಳಾಧಿಪ ಮೇಧಾವಿಯ ಮೇಲೆ ದಾಳಿ ಮಾಡಿ ಅವನನನ್ನು ಕೊಲ್ಲಲು ಶೂರಸೇನನಿಗೆ ೆರವಾಗುತ್ತಾನೆ. ಎರಡೂ ಕಥೆಯಲ್ಲಿ ಮೇಧಾವಿಯ ಸಾವಿಗೆ ಮಗನ ಮೂಲನಕ್ಷತ್ರ ಮತ್ತು ಎಡಪಾದದ ಆರನೆಯ ಬೆರಳು ಕಾರಣವಾಗುತ್ತದೆ. ಚಂದ್ರಹಾಸ ಚರಿತ್ರೆಯಲ್ಲಿ ದುಷ್ಟಬುದ್ಧಿಯ ಮನಸ್ಸು ಪರಿವರ್ತನೆಯಾದ ಮೇಲೆ ಅವನೇ ಚಂದ್ರಹಾಸನಿಗೆ ಶೂರಸೇನನ ವಿಷಯ ತಿಳಿಸುತ್ತಾನೆ. ಚಂದ್ರಹಾಸ ಶೂರಸೇನನೊಂದಿಗೆ ಯುದ್ಧಮಾಡಿ ತನ್ನ ರಾಜ್ಯವನ್ನು ಮರಳಿ ಪಡೆಯುತ್ತಾನೆ. ಶೂರಸೇನನಿಗೆ ಚಂಡಸೇನನೆಂಬ ತಮ್ಮನೊಬ್ಬ ಚಂದ್ರಹಾಸ ಚರಿತ್ರೆಯಲ್ಲಿ ಇದ್ದಾನೆ. ವಿಷಯೆ ಕಲ್ಯಾಣದಲ್ಲಿ ಇಲ್ಲ. ದುಷ್ಟಬುದ್ಧಿಯ ಕಿರಿಯಮಗ, ಮದನನ ತಮ್ಮ ವಿಮಲನ ಪಾತ್ರವೂ ಹಾಗೆಯೇ. ಅನೇಕ ಪದ್ಯಗಳಲ್ಲಿ ಪ್ರಸಂಗಕಾರರ ಪರಸ್ಪರ ಛಾಯೆ ಹೊಡೆದು ಕಾಣುತ್ತದೆ. ಪ್ರಭಾವಗಳನ್ನು ನಿರ್ಧರಿಸುವುದು ಕಷ್ಟ. ಇಬ್ಬರೂ ಸಮಕಾಲೀನರು. ಯಕ್ಷಗಾನ ಮೇಳಗಳು ಬಳಸುವುದು ವಿಷಯೆ ಕಲ್ಯಾಣವನ್ನು. ಚಂದ್ರಹಾಸಚರಿತ್ರೆಯ ಒಂದೆರಡು ಪದ್ಯಗಳನ್ನು ಮಾತ್ರ ಬಳಸುವ ಪದ್ಧತಿ ಇದೆ. ಎರಡರಲ್ಲಿಯೂ ಹರಿಪಾರಮ್ಯ, ಸಾಲಿಗ್ರಾಮ ಮತ್ತು ಏಕಾದಶೀ ಮಹಾತ್ಮೆಯ ಉದ್ದೇಶಗಳಿವೆ. ಸ್ವಭಾವಗಳ ಸಂಘರ್ಷದ ರೂಪಕದ ಧ್ವನಿ ಎರಡರಲ್ಲಿಯೂ ಇದೆ.

* * *

9. ಶ್ರೀ ಕೃಷ್ಣ ಪರಂಧಾಮ : ಪಾಂಡವ ಸ್ವರ್ಗಾರೋಹಣ

ಕಥಾ ಸಾರಾಂಶ :

ಶ್ವಮೇಧವೂ ಮುಗಿದ ಮೇಲೆ ಹಸ್ತಿನಾವತಿಯಲ್ಲಿ ಆಳುತ್ತಿದ್ದ ಧರ್ಮರಾಜ ಒಂದು ದಿನ ಒಡ್ಡೋಲಗದಲ್ಲಿದ್ದ. ರಾಜ್ಯಭಾರದಲ್ಲಿ ಯಾವ ತೊಂದರೆಯೂ ಇರಲಿಲ್ಲ. ಒಡ್ಡೋಲಗದಲ್ಲಿ ತಮ್ಮಂದಿರೊಡನೆ ಎಲ್ಲವನ್ನೂ ವಿಚಾರಿಸಿ ಸಭೆಯನ್ನು ವಿಸರ್ಜಿಸುತ್ತಿದ್ದ. ರಾಜಗೃಹದಲ್ಲಿ ಧೃತರಾಷ್ಟ್ರ, ಗಾಂಧಾರಿ, ವಿದುರ, ಸಂಜಯ, ಮುಂತಾದವರು ಭಗವನ್ನಾಮ ಸ್ಮರಣೆಯಲ್ಲಿ ಕಾಲ ಕಳೆಯುತ್ತಿದ್ದರು. ಆದರೆ ಭೀಮ ಆಗಾಗ ಬಂದು ನಂಜು ಮಾತನ್ನಾಡಿ ನೆಮ್ಮದಿ ಕೆಡಿಸುತ್ತಿದ್ದ. ಸಹಿಸಿಕೊಳ್ಳಲಾಗದೆ ಧೃತರಾಷ್ಟ್ರ ಎಲ್ಲರೊಡನೆ ಕಾಡಿಗೆ ಹೋಗಲು ನಿರ್ಧರಿಸಿದ. ಧರ್ಮರಾಜ ಮೊದಲು ಒಪ್ಪಲಿಲ್ಲ. ನಂತರ ವೇದವ್ಯಾಸ, ಕುಂತಿ ಹೇಳಿದ ಮೇಲೆ ಒಪ್ಪಿದ. ಧೃತರಾಷ್ಟ್ರ, ಗಾಂಧಾರಿ, ಕುಂತಿ, ವಿದುರ, ಸಂಜಯ ಎಲ್ಲರೂ ಕಾಡಿಗೆ ಹೊರಟರು. ಶತಯೂಪನ ಆಶ್ರಮಕ್ಕೆ ಹೋಗಿ ಸನ್ಯಾಸಿಗಳಾದರು. ಎಂಟು ವರ್ಷಗಳ ಬಳಿಕ ನಾರದ ಧರ‌್ಮರಾಜನ ಆಸ್ಥಾನಕ್ಕೆ ಬಂದು ವಿದುರ ಸತ್ತುದನ್ನೂ ಉಳಿದವರು ದಾವಾನಲಕ್ಕೆ ಸಿಕ್ಕಿ ನಾಶವಾದುದನ್ನೂ ಸಂಜಯ ಬದರಿಕಾಶ್ರಮಕ್ಕೆ ಹೋದುದನ್ನೂ ಹೇಳಿದ. ದುಃಖಿತ ಧರ್ಮರಾಜ ಅವರ ಅಪರಕರ್ಮಗಳನ್ನು ಮಾಡಿ ವೈರಾಗ್ಯದಿಂದಲೆ ರಾಜ್ಯಭಾರಮಾಡತೊಡಗಿದ.

ದ್ವಾರಕೆಯಲ್ಲಿದ್ದ ಯಾದವರು ವಿಜೃಂಭಣೆಯಿಂದ ನವರಾತ್ರಿ ಉತ್ಸವ ಆಚರಿಸಲು ಸಿದ್ಧರಾದರು. ಕಾರ್ಯಕ್ರಮದಲ್ಲಿ ಹಲವು ಬಗೆಯ ಮನರಂಜನೆ ನೀಡಲು ನಿರ್ಧಾರವಾಯಿತು. ಕೃತವರ್ಮ ಗಂಡುವೇಷವನ್ನೂ ಸಾಂಬ ಹೆಣ್ಣು ವೇಷವನ್ನೂ ಹಾಕಿ ಬೀದಿಯ ಜನರನ್ನೆಲ್ಲ ನಗಿಸಲು ಮುಂದಾದರು. ಅಷ್ಟರಲ್ಲಿ ಅಲ್ಲಿಗೆ ಕಣ್ವ ಋಷಿ ಬಂದ. ಕೃತವರ್ಮ ಅವರೊಂದಿಗೆ ತಮಾಷೆ ಮಾಡಿದ. ಇವಳು ತನ್ನ ಹೆಂಡತಿ ; ಬಸುರಿ ; ಹುಟ್ಟುವ ಮಗು ಯಾವುದು? ಎಂದು ಕಣ್ವನನ್ನು ಕೇಳಿದ. ಸಿಟ್ಟಿಗೆದ್ದ ಕಣ್ವ ನಿನ್ನ ಈ ಹೆಂಡ%E