ಕನ್ನಡ ಸಾಹಿತ್ಯದ ಮಹಾಪ್ರವಾಹದಲ್ಲಿ ಕಾಲದಿಂದ ಕಾಲಕ್ಕೆ ಬೇರೆ ಬೇರೆ ಬಣ್ಣಗಳ ಬೇರೆ ಬೇರೆ ರೀತಿ ಗತಿಗಳ, ವಿಭಿನ್ನ ಸಾಹಿತ್ಯವಾಹಿನಿಗಳು ಜೊತೆಗೂಡುತ್ತ ಬಂದಿವೆ. ಓದುವ, ಓದಿಸಿ ಕೇಳುವ, ಹಾಡುವ, ಹಾಡಿಸಿ ಕುಣಿಸಿ ನೋಡುವ, ಹೇಳುವ ಕೇಳುವ ಮುಂತಾಗಿ ಬೇರೆ ಬೇರೆ ಕಾಲಗಳಲ್ಲಿ ಬೇರೆ ಬೇರೆ ಉದ್ದೇಶಗಳಿಗಾಗಿ ಸಾಹಿತ್ಯರಚನೆಯಾಯಿತು. ಪಂಪನಿಂದ ಹಿಡಿದು, ಸಂಚಿ ಹೊನ್ನಮ್ಮ, ರತ್ನಾಕರವರ್ಣಿ ಮುಂತಾದವರ ತನಕವೂ ಸಾಹಿತ್ಯವನ್ನು ಓದುವವರು ಒಬ್ಬರಾದರೆ ಕೇಳುವವರು ಹಲವರಾಗಿರುತ್ತಿದ್ದರು. ಒಬ್ಬರು ಹಾಡಿ ಕುಣಿದರೆ ಹತ್ತಾರು ಜನ ಕೇಳುತ್ತಾ ನೋಡುತ್ತಿದ್ದರು. ಅಂತೆಯೇ ಪಂಪನ ಕೃತಿಯಲ್ಲಿ “ಕಥೆಯ ಮೆಯ್ಗೆಡಲೀಯದೇ ಪೇ’ ಡೆ ಪಂಪನೆ ಪೇಳ್ಗುಂ’’ ಎಂಬ ಮಾತು ಬರುತ್ತದೆ. ಪಂಪನೂ ತಾನು ‘ಉಳಿದವರಿಗೆ ಹೇಳಿದ್ದೇ ಹೊರತು ಓದಲು ಬರೆದಿದ್ದಲ್ಲ’. – ಎಂಬ ಸೂಚನೆ ನೀಡಿದ್ದಾನೆ. ವಚನಕಾರರ ವಚನಗಳಂತೂ ಇತರರಿಗೆ ನೇರವಾಗಿ ಹೇಳಿದ ಪ್ರತ್ಯಕ್ಷ ಮಾತುಗಳೇ ಆಗಿವೆ. ಕೀರ್ತನೆಗಳು ಕಾಲಿಗೆ ಗೆಜ್ಜೆ ಕಟ್ಟಿ ತಾಳ-ತಂಬೂರಿ ಹಿಡಿದು ಕುಣಿಯುತ್ತಾ ಹಾಡಿ, ಕೇಳಿಸುವ, ರಾಗ-ತಾಳ-ಧಾಟಿಗಳ ರಚನೆಗಳಾಗಿವೆ. ಹರಿಹರ ರಾಘವಾಂಕರ ಕಾವ್ಯಗಳಾಗಲೀ ಲಕ್ಷ್ಮೀಶ ಕುಮಾರವ್ಯಾಸ ಚಾಮರಸರ ಕೃತಿಗಳಾಗಲೀ ಬರಿಯ ಓದಾಣ ಗಳಾಗಿರದೇ ‘ಕೇಳಾಣ’ಗಳೂ ಆಗಿವೆಯೆಂಬುದನ್ನು ನಮ್ಮ ‘ಗಮಕ’ ಪರಂಪರೆ ಸಾಬೀತುಪಡಿಸಿದೆ. ಮುಂದೆ ಸಂಚಿ ಹೊನ್ನಮ್ಮ, ರತ್ನಾಕರವರ್ಣಿಯ ಸಾಂಗತ್ಯಗಳಂತೂ ಸಂಪ್ರದಾಯದ ಹಾಡುಗಳಂತೆ ಮನೆಮನೆಗಳಲ್ಲಿ ಹಾಡುವ, ಕೇಳುವ ಕ್ರಿಯೆಗೆ ಒಳಗಾದವು. ಇದೇ ಒಂದು ಪರಂಪರೆಯಲ್ಲಿ ಹಾಡುವ, ಕೇಳಿಸುವ ಉದ್ದೇಶಕ್ಕಾಗಿ ರಚಿತವಾಗಿದ್ದ ಒಂದು ಪ್ರಕಾರ ಯಕ್ಷಗಾನ ಹಾಡುಗಬ್ಬಗಳು. ೨೦೦-೩೦೦ ಪದ್ಯಗಳನ್ನು ಹೊಂದಿರುತ್ತಿದ್ದ ಈ ಯಕ್ಷಗಾನ ಕಥನ ಕಾವ್ಯಗಳಿಂದ, ಕೆಲವು ಸನ್ನಿವೇಶಗಳ ಪದ್ಯಗಳನ್ನು, ಕೆಲವು ಕಥಾಪ್ರಸಂಗಗಳ ಪದ್ಯಗಳನ್ನು ಆಯ್ದುಕೊಂಡು ತಾಳಮದ್ದಲೆಯನ್ನೋ, ಬಯಲಾಟವನ್ನೋ ಮಾಡುವ ಕ್ರಮ ಆರಂಭವಾಗಿರಬೇಕು. ಹಾಗೆ ಮಾಡುತ್ತಾ, ಮಾಡುತ್ತಾ ನಂತರದಲ್ಲಿ ಈ ಬಯಲಾಟ ತಾಳಮದ್ದಲೆಗಳಿಗಾಗಿಯೇ ಪ್ರತ್ಯೇಕ ಪದ್ಯಗಳನ್ನು ರಚಿಸಲು ತೊಡಗಿರಬೇಕು. ಮೊದಲು ತಮಗೆ ಬೇಕಾದ “ಪ್ರಸಂಗಗಳನ್ನು ಹಾಡುಗಬ್ಬಗಳಿಂದ ಆಯ್ದುಕೊಳ್ಳುತ್ತಿದ್ದ ಕಾರಣ ಹಾಗೂ ಮೊದಲಿಗೆ ಯಕ್ಷಗಾನ ಹಾಡುಗಬ್ಬವನ್ನು ಆಧರಿಸಿದ ಕಾರಣ “ಯಕ್ಷಗಾನ ಪ್ರಸಂಗ’’ ಎಂಬ ಪದ ಈ ವಿಶಿಷ್ಟ ಸಾಹಿತ್ಯಕ್ಕೂ ಕೂಡ ಉಳಿದಿರಬೇಕು. ಆದರೆ ಈ ಪ್ರಸಂಗವೆಂಬ ಪದವಾದರೂ ಮೊದಲಿಗೆ ಇರಲಿಲ್ಲ. ‘ಯಕ್ಷಗಾನದಲ್ಲಿ ಹೇಳುವೆನು’  ಈ ಕಥೆಯ ಪದ್ಯದಲ್ಲಿ ವಿಸ್ತರಿಸುವೆನು” ಎಂದು ಮುಂತಾಗಿಯೇ ಹೇಳಿಕೊಳ್ಳುತ್ತಿದ್ದರು. ಈ ಪ್ರಸಂಗ ಪದವನ್ನು ಮೊದಲಿಗೆ ಪಾರ್ತಿಸುಬ್ಬನೇ ರಚಿಸಿದೆನು ಪ್ರಸಂಗಮಂ ಎಂದು ಬಳಸಿದ್ದನ್ನು ಗುರುತಿಸಲಾಗಿದೆ. ೫-೬ ಶತಮಾನಗಳ ಹಿಂದೆ ವೈಷ್ಣವ ಭಕ್ತಿ ಪಂಥವು ಹಾಡು ಕುಣಿತಗಳೊಂದಿಗೆ ವಿವಿಧ ಬಗೆಯಲ್ಲಿ ಭಕ್ತಿ ಪ್ರಸಾರ ಮಾಡುವಂದು ಹರಿಭಕ್ತಿಯ ಗಾಳಿ ಬೀಸುತ್ತಿದ್ದ ಕಾಲದಲ್ಲೇ ಹರಿಯ ದಶಾವತಾರಗಳ ಕುರಿತಾದ ಕಥೆಯನ್ನಾಧರಿಸಿ ಯಕ್ಷಗಾನ “ಆಟ’’ ಗಳೂ ತಾಳಮದ್ದಳೆ ಕೂಟಗಳೂ ಆರಂಭವಾದವು. ಮೊದಮೊದಲಿಗೆ ರಾಮಾಯಣ ಮಹಾಭಾರತಗಳನ್ನು ಆಧರಿಸಿಯೇ ಪ್ರಸಂಗಗಳು ರಚನೆಗೊಂಡವು. ಮುಂದಿನ ಕಾಲಘಟ್ಟಗಳಲ್ಲಿ ಭಾಗವತ, ವಿವಿಧ ಪುರಾಣಗಳು, ಕಾಲ್ಪನಿಕ ಕಥೆಗಳು, ಇತಿಹಾಸ, ಮಾತ್ರವಲ್ಲ ಆಧುನಿಕ ದಿನಮಾನಗಳಲ್ಲಿ ಪರಿಸರ, ಆರೋಗ್ಯ, ಶಿಕ್ಷಣ, ಮುಂತಾಗಿ ಹಲವು ವರ್ತಮಾನದ ಸಂಗತಿಗಳೂ ಪ್ರಸಂಗಗಳಾಗತೊಡಗಿವೆ.

ಆರಂಭ ಕಾಲದ ಪ್ರಸಂಗಗಳಲ್ಲಿ ದ್ವಿಪದಿ, ವಚನ, ಚೂರ್ಣಿಕೆಗಳೂ ಪ್ರಸಂಗಗಳಲ್ಲಿ ಇರುತ್ತಿದ್ದು ನಂತರದ ಕಾಲದ ಪ್ರಸಂಗಗಳಲ್ಲಿ ಅವು ಮಾಯವಾಗಿವೆ. ಆರಂಭದಲ್ಲೊಂದು ಸ್ತುತಿ ಪದ್ಯವು ಕಂದದಲ್ಲಿಯೋ, ಶಾರ್ದೂಲ ವಿಕ್ರೀಡಿತ ಅಥವಾ ಮಹಾಸ್ರಗ್ಧರಾ ವೃತ್ತದಲ್ಲಿಯೋ ಇರುತ್ತವೆ. ಉಳಿದಂತೆ ಭಾಮಿನಿ, ವಾರ್ಧಕ ಷಟ್ಪದಿಗಳೂ ಕಂದ, ವೃತ್ತ, ರಗಳೆ ಸಾಂಗತ್ಯಗಳು, ವಿವಿಧ ತಾಳಗಳ ಪದ್ಯಗಳೂ ಇರುತ್ತವೆ. ಹೀಗೆ ಪ್ರಸಂಗಗಳಲ್ಲಿ ಅಕ್ಷರ ವೃತ್ತಗಳೂ ಮಾತ್ರಾ ಬಂಧಗಳೂ, ಅಂಶಗಣಬದ್ಧ ಗೀತೆಗಳು ಅಂಶಗಣ-ಮಾತ್ರಾಗಣ ಮಿಶ್ರಿತ ಪದ್ಯಗಳೂ ಬಳಕೆಗೊಂಡಿವೆ.

ಪ್ರಸಂಗಗಳಲ್ಲಿ ಒಳ್ಳೆಯ ಸಾಹಿತ್ಯವಿದೆಯಾದರೂ ಅವು ಕೇವಲ ಸಾಹಿತ್ಯಕೃತಿಗಳಲ್ಲ, ಯಕ್ಷಗಾನ ಬಯಲಾಟ ಅಥವಾ ತಾಳಮದ್ದಳೆಗಳೆಂಬ ರಂಗಪ್ರಕಾರಗಳಿಗೆ ಆಧಾರವಾದ ಪಠ್ಯಗಳು. ಆದಕಾರಣ ಪ್ರಸಂಗಗಳ ಹೊಣೆಗಾರಿಕೆ ಗುರುತರವಾದುದೆಂಬುದು ಸ್ಪಷ್ಟವಾಗುತ್ತದೆ. ಯಕ್ಷಗಾನ ಬಯಲಾಟವೆಂದರೆ- ಭಾಗವತರ ಹಾಡುಗಾರಿಕೆ, ಚಂಡೆ-ಮೃದಂಗಗಳ ಹಿಮ್ಮೇಳ, ಕಲಾವಿದರ ಅದ್ಭುತವಾದ ವೇಷಭೂಷಣ, ಮುಖವರ್ಣಿಕೆಗಳು, ಅವರ ಅಭಿನಯ ಹಾಗೂ ವೈವಿಧ್ಯಪೂರ್ಣ ನರ್ತನ – ಇವೆಲ್ಲವುಗಳ ಮೂಲಕವಾಗಿ ಪ್ರಸಂಗ ಪಠ್ಯವನ್ನು ಪ್ರದರ್ಶಿಸುವ ಒಂದು ಪ್ರಕ್ರಿಯೆ. ಅಂದರೆ ಪ್ರಸಂಗವೊಂದು ಈ ಮೇಲಿನ ಎಲ್ಲ ಮಾಧ್ಯಮಗಳೂ ಸುಸಂಬದ್ಧವಾಗಿ ಆಕರ್ಷಿತವಾಗಿ ಬಳಕೆಗೊಂಡು ಪ್ರಸ್ತುತವಾಗುವುದಕ್ಕೆ ಅಗತ್ಯವಾದ ಆಸರೆ – ಅವಲಂಬನವೂ ಆಗಿರಬೇಕು. ಆದ್ದರಿಂದ ಕಥಾ ನಿರ್ವಹಣೆಯ ಮುಖ್ಯ ಕಾರ್ಯವನ್ನು ವೈವಿಧ್ಯಪೂರ್ಣ ಛಂದಸ್ಸಿನ ಪದ್ಯಗಳಲ್ಲಿ ವಿಂಗಡಿಸಿ, ಕ್ರಮಪಡಿಸಿ, ನಾಟಕೀಯತೆಯನ್ನು ಆಳವಡಿಸಿ ಕವಿ ನಿರ್ವಹಿಸುವನು. ಸಾಮಾನ್ಯವಾಗಿ ಭಾಮಿನಿ ವಾರ್ಧಕದಂತಹ  ಷಟ್ಪದಿಗಳನ್ನು, ವೃತ್ತ, ಕಂದಗಳನ್ನು ಸನ್ನಿವೇಶ ಚಿತ್ರಣ, ಕಥೆಯ ಬೆಳವಣಿಗೆಗಳಿಗೆ ಹೇಳಲು ಬಳಸಿದರೆ ವಿವಿಧ ರಾಗ ತಾಳಗಳ ಮಟ್ಟುಗಳನ್ನು ಸಂಭಾಷಣೆಗೆ ಬಳಸಲಾಗುತ್ತದೆ.  ಮೊದಲಿನ ಕಾಲದ ಪ್ರಸಂಗಗಳಲ್ಲಿ ಪದ್ಯಗಳ ನಡುವೆ, ಅಗತ್ಯ ಬಿದ್ದಾಗ ವಚನ (ಗದ್ಯ)ಗಳನ್ನೂ ಬಳಸಲಾಗಿದೆ. ಉದಾ : ಕೃಷ್ಣಾರ್ಜುನ ಕಾಳಗ, ಕನಕಾಂಗಿ ಕಲ್ಯಾಣ ಮುಂತಾದ ಹೊಸ ಕಾಲದ ಪ್ರಸಂಗಗಳಲ್ಲಿ ವಚನಗಳು ಕಂಡಬರುವುದಿಲ್ಲ. ಆದ್ದರಿಂದ ಸೊಗಸಾದ ಹಾಡುಗಾರಿಕೆಗೆ ಅನುಕೂಲವಾಗುವ, ರಾಗ ತಾಳ ಲಯಗಳಲ್ಲಿ ವಿನ್ಯಾಸಗೊಂಡ ಪದ್ಯಗಳನ್ನು ರಚಿಸಬೇಕಾಗುತ್ತದೆ. ಹೀಗೆ ಪ್ರಸಂಗ ಪದ್ಯಗಳು ಮೂರು ಬಗೆಯವದ್ದು ಮೂರು ಬಗೆಯ ಕಾರ್ಯವನ್ನು ನಿರ್ವಹಿಸುತ್ತವೆ. ಅದೇನೆಂದರೆ ಸನ್ನಿವೇಶವನ್ನು ಹೇಳುವಂಥವು, ರಂಗಸ್ಥಳದಲ್ಲಿ ನಡೆಯುವ ಘಟನೆಗಳನ್ನು ಸೂಚಿಸುವಂಥವು, ಸಂಭಾಷಣೆಗೆ ಅನುಕೂಲವಾಗುವಂಥವು. ಕೊನೆಯ ಎರಡು ಪ್ರಕಾರದ ಉದ್ದೇಶವನ್ನು ತಾಳದ ಪದ್ಯಗಳೇ ಪೂರ್ಣಗೊಳಿಸುತ್ತವೆ. ಹೀಗೆ ವಿಶಿಷ್ಟವಾದ ಉದ್ದೇಶವನ್ನುಳ್ಳ ಪ್ರಸಂಗ ಪದ್ಯಗಳಿಗೆ ವಿಶೇಷವಾದ ಲಕ್ಷಣಗಳೇ ಇರಬೇಕಾಗುತ್ತದೆ …… ರಂಗ ಪ್ರದರ್ಶನವೊಂದರ ಆಧಾರವಾದ ಪ್ರಸಂಗವು ವಿವಿಧ ರಸಗಳ ಅಭಿವ್ಯಂಜನೆಗೆ ಆಕರವಾಗಲೇಬೇಕಾದುದು ಅನಿವಾರ್ಯ. ಯಕ್ಷಗಾನದಲ್ಲಿ ಸಾಮಾನ್ಯವಾಗಿ ವೀರರಸ ಪ್ರಧಾನವಾಗಿದ್ದು ಶೃಂಗಾರ ಕರುಣಗಳಂತಹ ರಸಗಳಿಗೂ ಅಲ್ಲಿ ಅವಕಾಶವಿರುತ್ತದೆ. ಅಂತೆಯೇ ಪ್ರಸಂಗಗಳು-ಕಾಳಗಗಳು ಅಥವಾ ಕಲ್ಯಾಣಗಳು ವಿಶೇಷವಾಗಿವೆ (ಉದಾ : ಕುಂಭಾಸುರ ಕಾಳಗ-ಕನಕಾಂಗಿ ಕಲ್ಯಾಣ). ಇನ್ನು ಕೆಲವು ‘ದುಷ್ಟಶಿಕ್ಷಣ’ ದ ಕಥೆ ಹೇಳುವ ‘ವಧೆಗಳಿವೆ’ (ರಾವಣವಧೆ, ವಾಲಿವಧೆ-ಮುಂ) ಆದರೆ ಅಂತಹ ಪ್ರಸಂಗಗಳನ್ನು ಭಕ್ತ ಜನರ ಮನಾಕರ್ಷಣೆಗಾಗಿಯೇ ‘ಮೋಕ್ಷ’ವಾಗಿ ಬದಲಾಯಿಸುವ ಪದ್ಧತಿಯಿದೆ. ಉದಾ :- ಅತಿಕಾಯ ಕಾಳಗ – ಅತಿಕಾಯ ಮೋಕ್ಷವಾಗಿದೆ, ವಾಲಿವಧೆಯನ್ನು ವಾಲಿ ಮೋಕ್ಷವಾಗಿ ಬದಲಾಯಿಸುವ ರೂಢಿಯಿದೆ. ಒಟ್ಟಿನಲ್ಲಿ ಯಕ್ಷಗಾನದ ‘ರಮ್ಯಾದ್ಭುತ’ ವೆನ್ನಿಸುವ ಮಾಧ್ಯಮದ ಮೂಲಕ ವಿವಿಧ ರಸಾಭಿವ್ಯಂಜನೆಗೆ ಪ್ರಸಂಗ ಪದ್ಯಗಳು ಕಾರಣವಾಗಬೇಕು. ಯಕ್ಷಗಾನ ರೂಪೀ ನಾಟಕದ ಆಧಾರ ಪಠ್ಯದ ಜೀವಾಳವು ‘ನಾಟಕೀಯತೆ’ ಯಾಗಿರಬೇಕು. ವಿವಿಧ ಘಟನೆಗಳ ಮೂಲಕ ಯಕ್ಷಗಾನವು ಪೂರ್ಣಗೊಳ್ಳಬೇಕಾದ ಕಾರಣ ಒಡ್ಡೋಲಗ, ಯುದ್ಧ, ಬೇಟೆ, ಜಲಕ್ರೀಡೆ, ಪ್ರಯಾಣಗಳಂತಹ ಕ್ರಿಯೆಗಳನ್ನೂ ಅವುಗಳಿಗಾಗಿಯೇ ಇರುವ ವಿಶೇಷ ನೃತ್ಯಗಳನ್ನೂ ಕಾಣಿಸಬಲ್ಲ ತಾಳಗಳ ಮಟ್ಟುಗಳು ಅಳವಟ್ಟಿರಬೇಕಾಗುತ್ತದೆ. ಮಾತ್ರವಲ್ಲ, ರಮ್ಯಾದ್ಭುತವಾದ ‘ವೇಷ’ಗಳು ಯಕ್ಷಗಾನದ ಅನನ್ಯತೆಯಾದ ಕಾರಣ ಅಂತಹ ವೇಷಗಳನ್ನೆಲ್ಲ ಕಾಣಿಸಬಲ್ಲ ಪಾತ್ರಗಳ ಸೃಷ್ಠಿ ಇಲ್ಲಿ ಅನಿವಾರ್ಯವಾಗಿರುತ್ತದೆ. ಕಿರೀಟ ವೇಷ,  ಪಗಡೆ ವೇಷ, ಮುಂಡಾಸು, ಸ್ತ್ರೀಪಾತ್ರಗಳು, ಬಣ್ಣದ ವೇಷಗಳು, ಹೆಣ್ಣುಬಣ್ಣ, ಕಿರಾತ, ಚಾರಕರು ಮುಂತಾದ ವೈವಿಧ್ಯಗಳೆಲ್ಲ ರಂಗದ ಮೇಲೆ ಮೆರೆಯಲು ಪ್ರಸಂಗದಲ್ಲಿಯೇ ಹುಟ್ಟಿಕೊಂಡಿರಬೇಕಾಗುತ್ತದೆ. ಪ್ರತಿಭಾಶಾಲಿಯಾದ ಪ್ರಸಂಗಕಾರನೊಬ್ಬ ಪಾತ್ರಾನುಗುಣವಾದ ಶೈಲಿ, ಭಾಷೆಗಳನ್ನೂ ಸಹ ಬೆಳಸಿರುತ್ತಾನೆ. ‘ಮೇಲುವರ್ಗದ’ ‘ಸುಸಂಸ್ಕೃತ’ ವೆನಿಸಿಕೊಳ್ಳುವ ಪಾತ್ರವೊಂದು ಸಂಸ್ಕೃತಭೂಯಿಷ್ಠವಾದ ಪ್ರೌಢ ಭಾಷೆಯಲ್ಲಿ ಮಾತನಾಡಿದರೆ ಪಾರ್ತಿಸುಬ್ಬನ ಪಂಚವಟಿಯಲ್ಲಿ ಮಾಯಾ ಶೂರ್ಪನಖಿ ರಾಮನೊಂದಿಗೆ ಮಾತನಾಡುವಾಗ “ರಾಘವ ನರಪತೇ ಶ್ರುಣುಮಮ ವಚನಂ’’ ಎಂದೇ ಸಂಸ್ಕೃತದಲ್ಲಿ ಮಾತನಾಡುವಳು. ಚಾರಕ, ದೂತರಂತಹ ಪಾತ್ರಗಳು ಗ್ರಾಮ್ಯ ಶೈಲಿಯಲ್ಲಿ ಹಾಗೂ ಸಮಕಾಲೀನವಾದ ಅನ್ಯಭಾಷಾ ಮಿಶ್ರಿತ ಹದದಲ್ಲಿ ಮಾತನಾಡುತ್ತವೆ. ಉದಾ : ಹಲಸಿನಹಳ್ಳಿ ನರಸಿಂಹ ಶಾಸ್ತ್ರಿಗಳ ವೀರಮಣಿ ಕಾಳಗದಲ್ಲಿ ಚಾರಕರು “ಗದ್ದಲ್ ಗಂಜಲ್ ಯಾಕೋ……… ಅಗಡ ಸಿಫಾಯಿಗಳ ಸುದ್ದಿ ನಿನಗೆ ಸಾಕೊ…… ಬೇಡ ಖಂಡಿತ ಚಾಕರಿಯಿದಕೊ ಲಕ್ಡಿಯನು’’ ಎಂದೆಲ್ಲ ಮಾತನಾಡುತ್ತಾರೆ. ಒಟ್ಟಿನಲ್ಲಿ ೫-೬ ಶತಮಾನಗಳ ಕಾಲಮಾನದ ಹಾದಿಯಲ್ಲಿ ನಡೆದು ಬಂದ ಪ್ರಸಂಗ ಸಾಹಿತ್ಯವು ಆಯಾಕಾಲದ ಭಾಷಾಪ್ರಯೋಗಗಳ ಪಡಿಗನ್ನಡಿಯೂ ಆಗಿದೆಯೆಂಬುದು ವಾಸ್ತವ.

ಪ್ರಸಂಗವು ಯಕ್ಷಗಾನವೆಂಬ ಸರ್ವಾಂಗ ಸುಂದರ ಪ್ರದರ್ಶನ ಕಲೆಯ ಒಂದು ಅಂಗವಾಗಿರುವುದರಿಂದ, ಭಾಗವತರಿಗೆ ಹಾಡಲು, ಕಲಾವಿದರಿಗೆ ಗ್ರಹಿಸಿ, ನರ್ತಿಸಿ, ಅಭಿನಯಿಸಲು, ಪ್ರೇಕ್ಷಕರಿಗೆ  ಇಂಪು-ಸೊಂಪು, ಅರ್ಥಗಳನ್ನು ಕೇಳಿ ಆನಂದಿಸಲು ಅನುಕೂಲವಾಗುವಂತೆ ಸರಳತೆಯ ಸೌಂದರ್ಯವನ್ನು ಹೊಂದಿರಬೇಕಾಗುತ್ತದೆ. ಪಾರ್ತಿಸುಬ್ಬನ ರಾಮಾಯಣ ಪ್ರಸಂಗಗಳು ಜನಪ್ರಿಯತೆ ಗಳಿಸಿ ಅವನಿಗೆ ‘ಯಕ್ಷಗಾನ ವಾಲ್ಮೀಕಿ’ಯೆಂಬ ಬಿರುದನ್ನು ತಂದು ಕೊಟ್ಟಿದ್ದಿದ್ದರೆ ಅದಕ್ಕೆ ಕಾರಣ ಮುಖ್ಯವಾಗಿ ಅಲ್ಲಿನ ಪದ್ಯಗಳ ಸರಳತೆ ಮತ್ತು ಸೌಂದರ್ಯಗಳು. ಪ್ರಸಂಗವೊಂದು ತನ್ನೊಳಗೆ ಬರಿಯ ಕಥೆಯೊಂದನ್ನು ಹೊಂದಿದರೆ ಸಾಕಾಗದು. ಕಥೆಯೆಲ್ಲಿಯದೇ ಆಗಿದ್ದರೂ ಅದರೊಳಗೊಂದು ಸ್ಪಷ್ಟ ಆಶಯ ಮನೆ ಮಾಡಿರಬೇಕಾಗುತ್ತದೆ. ಹಿಂದಿನ ಪುರಾಣಗಳನ್ನು ಆಧರಿಸಿ ರಚಿಸಲ್ಪಟ್ಟ ಕೆಲವು ಪ್ರಸಂಗಗಳಲ್ಲಿನ ಆಶಯಗಳು ಪ್ರತಿಗಾಮೀ ಧೋರಣೆಯವಾಗಿದ್ದರೆ ಇಂದಿಗೆ ಅದನ್ನು ಕೆಲಮಟ್ಟಿಗೆ ಬದಲಿಸಿಕೊಳ್ಳಬೇಕಾದ, ಮಾನವೀಯತೆಯ ನೆಲೆಯಲ್ಲಿ ಪ್ರಸ್ತುತಪಡಿಸುವ ಕಾರ್ಯವೂ ಅಗತ್ಯವಾಗಿದೆ. ಹೊಸ ಕಾಲದ ಪ್ರಗತಿಗಾಮಿ ಆಶಯಗಳನ್ನುಳ್ಳ ಪ್ರಸಂಗಗಳೂ ಸಹ ಹೊಸ ಯುಗದಲ್ಲಿ ಬೆಳಕಿಗೆ ಬರುತ್ತಿವೆ.

ಪ್ರಸಂಗಗಳು ಪ್ರದರ್ಶನಗಳ ಆಧಾರದ ಪಠ್ಯವೆಂದಾಗಿದ್ದರೂ ಸಹ ಅವುಗಳನ್ನು ಯಥಾವತ್ತಾಗಿ ಎಲ್ಲಿಯೂ ಬಳಸಲಾಗುವುದಿಲ್ಲವೆಂಬುದನ್ನು ಗಮನಿಸಬೇಕಾಗಿದೆ. ಬಯಲಾಟವಿರಲಿ, ತಾಳಮದ್ದಲೆಯಿರಲಿ, ಪ್ರತಿ ಪ್ರದರ್ಶನದಲ್ಲೂ ಅಂದಂದಿನ ಅಗತ್ಯವನ್ನು ಗಮನಿಸಿಕೊಂಡು, ಪಾತ್ರಧಾರಿಗಳು (ಅರ್ಥಧಾರಿಗಳು) ಸನ್ನಿವೇಶ, ಸಮಯಾವಕಾಶ, ಪ್ರೇಕ್ಷಕ ನಿರೀಕ್ಷೆ ಮುಂತಾದ ಹಲವಾರು ಅಂಶಗಳನ್ನು ಪರಿಗಣಿಸಿ ‘ಪ್ರಸಂಗ’ ಸಂಪಾದನೆಯನ್ನು ಮಾಡಿಕೊಳ್ಳಲಾಗುತ್ತದೆ. ಪದ್ಯಗಳ ಸಂಖ್ಯೆ, ಯಾವ ಯಾವ ಪದ್ಯಗಳು ಬೇಕು ಎಂಬುದನ್ನು ಯೋಚಿಸಿ ಭಾಗವತರು, ಕಲಾವಿದರು, ಸಂಘಟಕರು ಮುಂತಾದವರೆಲ್ಲ ಸೇರಿ ನಿರ್ಧರಿಸುವರು. ಕೆಲವೊಮ್ಮೆ ಅಗತ್ಯ ಬಿದ್ದರೆ ಭಾಗವತರು ಆ ಸಂದರ್ಭಕ್ಕೆ ಪದ್ಯವೊಂದನ್ನು ಕಟ್ಟಿ ಅಲ್ಲೆ ಹಾಡುವ, ಕೆಲವೊಮ್ಮೆ ಬೇರೆ ಪ್ರಸಂಗಗಳ ಪದ್ಯಗಳನ್ನು ಸೇರಿಸಿಕೊಳ್ಳುವ ಕೆಲಸವನ್ನು ಮಾಡಬೇಕಾಗುತ್ತದೆ.

ಪ್ರಸಂಗ ಕವಿಗಳು ಸಾಮಾನ್ಯವಾಗಿ ತಮ್ಮ ವಸ್ತುಗಳನ್ನು ಜನಪ್ರಿಯ ಕಾವ್ಯಗಳಿಂದ ಅದರಲ್ಲೂ ಜಾನಪದ ಕಾವ್ಯಸತ್ತ್ವಗಳಿಂದ ತುಂಬಿರುವ ಮಹಾಕಾವ್ಯಗಳಿಂದಲೇ ಆಯ್ದುಕೊಂಡಿರುವರು. ರಾಮಾಯಣ, ಭಾರತ, ಭಾಗವತಗಳಂತಹ ಸಾಗರ -ಸಮೃದ್ಧಿಯ ಪೌರಾಣಿಕ ಆಕರಗಳು ಲಕ್ಷ್ಮೀಶ, ಕುಮಾರವ್ಯಾಸ, ಕುಮಾರ ವಾಲ್ಮೀಕಿ ಮುಂತಾದ ದೇಸೀ ಸತ್ತ್ವಸಂಪನ್ನ ಕವಿಗಳ ಮೂಲಕ ಪ್ರಸಂಗ ಕವಿಗಳ ಕೈಗೆ ಬಂದಿರುತ್ತವೆ. ಆದ್ದರಿಂದಲೇ ‘ಆಟ’ ನೋಡುವ ಜನಸಾಮಾನ್ಯರಿಗೆ ಪ್ರಸಂಗ ಪದ್ಯಗಳು ಸುಂದರ, ಆಕರ್ಷಕ ಹಾಗೂ ಹೃದ್ಯವೆನಿಸುತ್ತವೆ. ನೇರವಾಗಿ ಈ ಮೇಲಿನ ಕಾವ್ಯಗಳನ್ನೇ ಆಧರಿಸಿದ ಪ್ರಸಂಗಗಳು ಮೊದಮೊದಲಿಗೆ ರಚಿತವಾಗುತ್ತಿದ್ದರೂ ನಂತರದ ಕಾಲದಲ್ಲಿ ಪುರಾಣಗಳು, ವಿವಿಧ ಸಂಸ್ಕೃತ ಕಾವ್ಯನಾಟಕಗಳನ್ನಾಧರಿಸಿದ ಪ್ರಸಂಗಗಳು ರಚಿತವಾದವು. ಮಾತ್ರವಲ್ಲ ರಾಮಾಯಣ, ಮಹಾಭಾರತ ಕಾವ್ಯಗಳು ಹೃದ್ಗತವಾಗುತ್ತಾ ಆಗುತ್ತಾ ಅವು ನಮ್ಮ ಭಾವಕೋಶದ ಒಂದು ಭಾಗವಾಗುತ್ತಾ ಹೋದಂತೆ ಆ ಮೂಲಕ ಕಥೆಯ ಪಾತ್ರಗಳು, ಅವುಗಳ ಗುಣ ಸ್ವಭಾವಗಳು ಅವರ ಮನಸ್ಸಿನಲ್ಲಿ ಸಂಚಲನೆಯನ್ನುಂಟು ಮಾಡುತ್ತಾ ಆ ಕುರಿತು ಕಲ್ಪನೆಗಳು, ಕಾಲ್ಪನಿಕ ಕಥೆಗಳು ಬೆಳೆಯಲು ಕಾರಣವಾಗಿರಬೇಕು. ಮಾತ್ರವಲ್ಲ ತಮ್ಮ ಕಾಲದಲ್ಲಿ ದೊರೆತ ಚಂದಮಾಮ ಕಥೆಗಳು, ಜನಪದರ ನಡುವೆ ಪ್ರಚಲಿತವಿರುವ ಮಾಯ – ಮಂತ್ರಗಳಿಂದ ಕೂಡಿದ ಕಥೆಗಳೂ ಪ್ರಸಂಗ ವಸ್ತುಗಳಾದವು. ಜೊತೆಗೆ ಅವುಗಳಲ್ಲಿನ ಕೌತುಕ, ರಮ್ಯಾದ್ಭುತ ಅಂಶಗಳು ಅಂತಹ ಪ್ರಸಂಗಗಳಿಗೆ, ಪ್ರದರ್ಶನಗಳಿಗೆ ಜನಪ್ರಿಯತೆಯನ್ನು ಒದಗಿಸಿದವು. ಹಾಗಾಗಿ ಇಂತಹ ವಿಶಿಷ್ಟ ಪ್ರಸಂಗಗಳಿಗೆ ಪ್ರಸಂಗ ಸಾಹಿತ್ಯದ ನಡುವೆ ಮಹತ್ವದ ಸ್ಥಾನ ಪ್ರಾಪ್ತವಾಗಿದೆ.

ಪ್ರಸಂಗ ಸಾಹಿತ್ಯವು ಇಷ್ಟೆಲ್ಲ ಮಹತ್ವವನ್ನು ಹೊಂದಿರುವುದಾದರೂ ಸಾಹಿತ್ಯ ಚರಿತ್ರೆಯಲ್ಲಿ ಅದಕ್ಕೊಂದು ಸ್ಥಾನ ಸಿಗದಿರುವುದು ವಿಷಾದಕರ ಸಂಗತಿ. ಆದರೆ ಪ್ರಸಂಗ ಸಾಹಿತ್ಯದ ಕುರಿತಾದ ಅಧ್ಯಯನವನ್ನು ಸಂಶೋಧಕರು ಸಾಕಷ್ಟು ಪೂರೈಸಿದ್ದಾರೆ. “ಯಕ್ಷಗಾನ ರಾಮಾಯಣ ಪ್ರಸಂಗಗಳು” “ಯಕ್ಷಗಾನ ಮಹಾಭಾರತ ಪ್ರಸಂಗಗಳು”, “ಯಕ್ಷಗಾನ ಭಾಗವತ ಪ್ರಸಂಗಗಳು” ಮುಂತಾಗಿ ಎಂಫಿಲ್, ಪಿ.ಎಚ್.ಡಿ. ಅಧ್ಯಯನಗಳಾಗಿವೆ. ಇದೀಗ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಮುಖಾಂತರ ‘ಸಮಗ್ರ ಜಾನಪದ ಸಂಪುಟಗಳ ಸಂಪಾದನೆ’ ಎಂಬ  ಕಾರ್ಯಕ್ರಮವನ್ನು ಕೈಗೊಂಡಿದ್ದು ಅದರಲ್ಲಿ ಯಕ್ಷಗಾನ ಪ್ರಸಂಗಗಳನ್ನು ಹಲವು ಸಂಪುಟಗಳಲ್ಲಿ ಪ್ರಕಟಿಸುತ್ತಿರುವುದು ನಿಜಕ್ಕೂ ಸಂತೋಷದ ಸಂಗತಿ. ಯಕ್ಷಗಾನದಲ್ಲಿ ‘ಯಾವ ಪ್ರಸಂಗ’ ? ‘ಯಾವ ಮೇಳದ ಆಟ’ ? ಎಂದು ವಿಚಾರಿಸುವ ಪದ್ಧತಿಯಿದೆಯೇ ವಿನಾ ‘ಯಾರು ಬರೆದ ಪ್ರಸಂಗ’ ಎಂದು ಕೇಳುವ ಪದ್ಧತಿಯೇ ಇಲ್ಲ. ಬಹಳಷ್ಟು ಯಕ್ಷಗಾನ ಕವಿಗಳು ಅಜ್ಞಾತರಾಗಿಯೇ ಉಳಿದುಬಿಟ್ಟಿದ್ದಾರೆ. ಪ್ರಸಂಗಗಳಲ್ಲಿಯೂ ಸಹ

‘ಶ್ರೀ ಮನ್ಮಹಾಭಾರತ’ ದೊಳಗಣ ‘ಕನಕಾಂಗಿ ಕಲ್ಯಾಣ’ ಎಂಬ ರೀತಿಯಲ್ಲಿ ಬರವಣಿಗೆಯಿರುತ್ತದೆಯೇ ಹೊರತು ‘ಬರೆದ ಕವಿ ಯಾರು’ ಎಂಬುದನ್ನು ಉಲ್ಲೇಖಿಸಿರುವುದಿಲ್ಲ. ಇದೀಗ ನಡೆಯುತ್ತಿರುವ ಸಂಪಾದನ ಕಾರ್ಯದಿಂದಾಗಿ ಅಜ್ಞಾತರಾಗಿಯೇ ಉಳಿದಿದ್ದ ಎಷ್ಟೋ ಕವಿಗಳ ಹೆಸರೂ ಬಯಲಿಗೆ ಬರಬಹುದು, ಕನ್ನಡ ಸಾಹಿತ್ಯ ವಾರಾಶಿಗೆ ಸೇರ್ಪಡೆಯಾಗಬಲ್ಲ, ತಮ್ಮ ಸಾಮರ್ಥ್ಯವನ್ನು ಕಾಣಿಸುವ ಅವಕಾಶ ಯಕ್ಷಗಾನ ಪ್ರಸಂಗಗಳಿಗೆ ಬರಬಹುದು. ಮಾತ್ರವಲ್ಲ, ಮೂಲೆಯಲ್ಲಿ ಬಿದ್ದು, ಒರಲೆ ತಿಂದು ಹೋಗುತ್ತಿದ್ದ ಎಷ್ಟೋ ಪ್ರಸಂಗಗಳು ಯಕ್ಷಗಾನಾಭಿಮಾನಿಗಳ ಕೈಗೆ ದೊರೆಯುವವು.

ಈ ಸಂಪುಟದ ಶೀರ್ಷಿಕೆಯೇ ಸೂಚಿಸುವಂತೆ ಇಲ್ಲಿ ಹೊಂದಿಸಲಾದ ಪ್ರಸಂಗಗಳು ನೇರವಾಗಿ ಮಹಾಭಾರತದ್ದಾಗಲಿ ರಾಮಾಯಣ, ಭಾಗವತಗಳದ್ದಾಗಲೀ ಆಗಿರುವುದಿಲ್ಲ. ಅವುಗಳ ಮೂಲ ಕಥೆಗೆ ಸಂಬಂಧಿಸಿ ಊಹಿಸಿ ಕಲ್ಪಿಸಿದ್ದು ಕೆಲವಾದರೆ, ಜನಜನಿತವಾದ ಅಂತಹ ಕಥೆಗಳನ್ನು ಆಧರಿಸಿ ರಚಿಸಿದವು ಕೆಲವು.. ರಮ್ಯಾದ್ಭುತ ಕಲ್ಪನೆಗಳನ್ನು ಕೂಡಿಸಿ ಚಂದಮಾಮ ಕಥೆಯಂತಹ ವಸ್ತುಗಳನ್ನು ಬಳಸಿ ರಚಿಸಿದವು ಮತ್ತೆ ಕೆಲವು.  ಹೀಗೆ, ಪ್ರಸಂಗ ಕವಿಗಳ ವಿಶಿಷ್ಟ ಪ್ರತಿಭೆ ಈ ಪ್ರಸಂಗಗಳಲ್ಲಿ ಬೆಳಗಿರುವುದನ್ನು ಕಾಣಬಹುದು. ಇಲ್ಲಿ ಒಟ್ಟೂ ಹನ್ನೊಂದು ಪ್ರಸಂಗಗಳನ್ನು ಹೊಂದಿಸಲಾಗಿದೆ. ಅವು ಯಾವುವೆಂದರೆ

೧. ರತಿ ಕಲ್ಯಾಣ  ೨. ದ್ರೌಪದೀ ಪ್ರತಾಪ ೩. ಕನಕಾಂಗಿ ಕಲ್ಯಾಣ ೪.ಕಲಾವತಿ ಪರಿಣಯ                  ೫. ರತ್ನಾವತಿ ಕಲ್ಯಾಣ ೬. ಯೋಗಿನೀ ಕಲ್ಯಾಣ ೭. ಚಂದ್ರಾವಳೀ ಪ್ರಸಂಗ ೮. ಲವಕುಶ

(ಪಠದ ಸಂಧಿ)  ೯. ರಾಧಾ ವಿಲಾಸ ೧೦. ಕೃಷ್ಣಾರ್ಜುನ ಕಾಳಗ  ೧೧. ವೀರಮಣಿ ಕಾಳಗ. ಇವುಗಳಲ್ಲಿ ಮೊದಲ ಎರಡು ಪ್ರಸಂಗಗಳಲ್ಲಿ ದ್ರೌಪದಿಯೇ ನಾಯಕಿ. ಅವಳ ಶೌರ್ಯ, ಧೈರ್ಯ, ಬುದ್ಧಿವಂತಿಕೆ ಪರಾಕ್ರಮಗಳ ಮೆರವಣಿಗೆ ಇಲ್ಲಿದೆ. ಸ್ತ್ರೀ ಪಾತ್ರಕ್ಕೆ ಮಹತ್ತ್ವ ಕಡಿಮೆಯಿದ್ದಂತಹ  ಯಕ್ಷಗಾನದಲ್ಲಿ ಸ್ತ್ರೀಪಾತ್ರವೇ ಪ್ರಧಾನವಾಗಿರುವ ‘ಪ್ರಸಂಗಗಳು’ ಜನರಿಗೆ ತುಂಬ ಆಕರ್ಷಕವೆನಿಸಿದವು. ಶಾಕ್ತೇಯ ಪಂಥದ ಪ್ರಭಾವದಿಂದ ದ್ರೌಪದಿಯನ್ನು ಶಕ್ತಿ ಸ್ವರೂಪಿಣಿಯೆಂದು ಕಲ್ಪಿಸಿ ರಚಿಸಿದ ಪ್ರಸಂಗಗಳಿವು. ಕನಕಾಂಗಿ ಕಲ್ಯಾಣವು ದಾಯಾದಿ ಮತ್ಸರ, ಮೇಲಾಟಗಳ, ಜನಪದರ ಬದುಕಿನ ರಾಗದ್ವೇಷಗಳ ಅನುಭವವನ್ನು ದುಡಿಸಿಕೊಂಡು ರಚಿಸಲಾದ ಜನಪ್ರಿಯ ಪ್ರಸಂಗ, ‘ಕಲಾವತಿ ಪರಿಣಯ, ರತ್ನಾವತಿ  ಕಲ್ಯಾಣ, ಯೋಗಿನಿ ಕಲ್ಯಾಣಗಳು ಚಂದಮಾಮ ಕಥೆಯಂತಹ ರಮ್ಯ ಕಲ್ಪನೆಗಳನ್ನು ಬಳಸಿಕೊಂಡು ಬರೆಯಲಾದಂತಹವು. ಚಂದ್ರಾವಳಿ ವಿಲಾಸ ಮತ್ತು ರಾಧಾ ವಿಲಾಸ ಭಾಗವತ ಮೂಲದ ಶ್ರೀ ಕೃಷ್ಣನ ಶೃಂಗಾರ ಲೀಲೆಗಳನ್ನು ಮಧುರ ಭಕ್ತಿಯ ತತ್ತ್ವವನ್ನೂ ಮೇಳೈಸಿ ಮೆರೆಸಿದ ಪ್ರಸಂಗಗಳು. ಲವಕುಶ ಕಾಳಗ (ಪಠದ ಸಂಧಿ) ಮತ್ತು ವೀರಮಣಿ ಕಾಳಗಗಳು ರಾಮಾಯಣ ಕಥೆಗೆ ಸಂಬಂಧಿಸಿದ, ಕಲ್ಪನೆಗಳನ್ನು ಬೆಳೆಸಿ ರಚಿಸಿದ ಪ್ರಸಂಗಗಳು. ಹೆಣ್ಣಿನ ಸೇಡು ತಳೆಯಬಹುದಾದ ಕ್ರೂರ ರೂಪಗಳ ಕಲ್ಪನೆ ಪಠದ ಸಂಧಿಯಲ್ಲಿ ಕೆಲಸ ಮಾಡಿದ್ದರೆ ವೀರಮಣಿ ಕಾಳಗದಲ್ಲಿ ಹರಿ – ಹರ ಭಕ್ತರ ಭಕ್ತಿಯ ವಿಲಾಸ ಪ್ರತಿಪಾದಿತವಾಗಿದೆ. ‘ಕೃಷ್ಣಾರ್ಜುನ ಕಾಳಗ’ ಸಹ ಮಹಾಭಾರತದ ಕಥೆಗೆ ಸಂಬಂಧಿಸಿಯೇ ಬೆಳೆಸಲಾದ ಪ್ರಸಂಗ. ಗಯ ಚರಿತ್ರೆಯ ಈ ಕಥೆಯನ್ನಾಧರಿಸಿ ಇನ್ನೂ ನಾಲ್ಕು ಪ್ರಸಂಗಗಳು ಯಕ್ಷಗಾನದಲ್ಲಿವೆ. ಸಂಕಯ್ಯ ಭಾಗವತ, ದೇವಿದಾಸ, ಮೂಲಿಕೆ ರಾಮಕೃಷ್ಣಯ್ಯ ಹಾಗೂ ಬಲಿಪ  ಭಾಗವತರು ಇವರೆಲ್ಲ ಕೃಷ್ಣಾರ್ಜುನ ಕಾಳಗಗಳನ್ನು ಬರೆದಿರುವರು. ಇವೆಲ್ಲದಕ್ಕಿಂತ ಪ್ರಾಚೀನವಾದ (೧೬೧೮) ಹಳೇಮಕ್ಕಿ ರಾಮನ ಪ್ರಸಂಗವನ್ನೇ ಇಲ್ಲಿ ಸಂಪಾದಿಸಲಾಗಿದೆ. ೧೭ನೇ ಶತಮಾನದ ದೇಸೀ ಪ್ರಯೋಗಗಳು, ರಾಗ ಮತ್ತು ಸಾಹಿತ್ಯಗಳ ಸಂಬಂಧ, ಕಥಾಸರಣಿಯಲ್ಲಿ ಸೂತ್ರಬದ್ಧತೆ ಮುಂತಾದ ಅಂಶಗಳಿಂದಾಗಿ ಖ್ಯಾತಿ ಪಡೆದ ಪ್ರಸಂಗವಿದು.

ಸಂಪಾದನೆ ಮಾಡಿದ ಪ್ರಸಂಗಗಳ ಕವಿ ಕೃತಿ ವಿಚಾರ ಸಹಿತವಾದ ಕಥಾ ಸಾರಾಂಶ ಹಾಗೂ ವೈಶಿಷ್ಟ್ಯಗಳು ಈ ಕೆಳಗಿನಂತಿವೆ.