ಇಸ್ಲಾಂ ಧರ್ಮದ ಐತಿಹಾಸಿಕ ಘಟನೆ ಹಾಗೂ ಆ ಧರ್ಮದ ಸಾಧು ಸಂತರ ಚರಿತ್ರೆಗಳನ್ನು ನಿರೂಪಿಸುವ ಜೊತೆಗೆ ಹಿಂದು ಮುಸ್ಲಿಂ ಬಾಂಧವ್ಯದ ಕೊಂಡಿಗಳಂತಿರುವ ಮೊಹರಂ ಪದಗಳನ್ನು ಹಾಡುವ ಪದ್ಧತಿ ಉತ್ತರ ಕರ್ನಾಟಕದಲ್ಲಿಯೇ ವಿಶೇಷವಾಗಿ ರೂಢಿಯಲ್ಲಿದ್ದು ಅವುಗಳನ್ನು ‘ಮೊಹರಂ’ ಸಂದರ್ಭದಲ್ಲಿ ಮಾತ್ರ ಹಾಡಲಾಗುತ್ತದೆ. ಹಿಜರಿ ಶಕೆಯ ಮೊಹರಂ ತಿಂಗಳಿನಲ್ಲಿ ಮುಸ್ಲಿಂ ಜನಾಂಗದವರು ಆಚರಿಸುವ ಒಂದು ವಿಶೇಷ ಆಚರಣೆ ‘ಮೊಹರಂ’.

ಧರಮಕ ಸತ್ತವರು ಸಿಗತಾರ ಕೋಟಿಗೊಬ್ಬ ಜನರಾ
ಮುಸಲ್ಮಾನ ಮಂದ್ಯಾಗ ದೊರಿತಾರ ಹುಸೇನ ಸಾಹೇಬರಾ ||

ಎಂದು ಪ್ರಾರಂಭವಾಗುವ ಒಂದು ಜನಪದ ಹಾಡು, ಮುಂದುವರಿದು,

ಜಂಗ ಎದರ ಬದರಾ ವೈರಿಯ ಮೋಸಕ ಜಯಕಾರಾ
ಶರಣು ಹೋಗದವರಾ ಸ್ವರ್ಗಕ ಹೋದರಾ ಹಜರತರಾ ||

ಎಂಬ ವಿಷಯವನ್ನು ಹೇಳಿ ಮೊಹರಂ ಆಚರಣೆಗೆ ಮೂಲ ಕಾರಣವಾದ ಘಟನೆಯತ್ತ ನಮ್ಮ ಲಕ್ಷ್ಯವನ್ನು ಸೆಳೆದು ಮುಕ್ತಾಯಗೊಳ್ಳುತ್ತದೆ.

ಸುಮಾರು ಹದಿಮೂರು ನೂರು ವರ್ಷಗಳ ಹಿಂದೆ ಇಮಾಮ ಹುಸೇನರು ಧರ್ಮರಕ್ಷಣೆಗಾಗಿ ಸತ್ಯಕ್ಕಾಗಿ, ಅರಬಸ್ತಾನದ ಕರ್ಬಲಾ ಮರುಭೂಮಿಯಲ್ಲಿ ಪ್ರಾಣ ನೀಡಿದ ಕಥೆಯನ್ನು ಈ ಹಾಡು ತಿಳಿಸುತ್ತದೆ. ಅಂದು ಅವರು ಕರ್ಬಲಾ ಕಾಳಗದಲ್ಲಿ ಸತ್ಯವನ್ನು ಎತ್ತಿ ಹಿಡಿಯಲು ಸುರಿಸಿದ ರಕ್ತ, ಶಾಂತಿ ಪ್ರೀಯರಿಗೆ, ಧರ್ಮ ರಕ್ಷಕರಿಗೆ, ನ್ಯಾಯಪರರಿಗೆ ಸ್ಫೂರ್ತಿಯ ಸೆಲೆಯಾಗಿದೆ. ಸತ್ಯ, ಧರ್ಮ, ನ್ಯಾಯಗಳ ಉಳಿವಿಗಾಗಿ ತಮ್ಮ ಪ್ರಾಣವನ್ನು ಬಲಿದಾನ ಮಾಡಿದ ಐತಿಹಾಸಿಕ ಸತ್ಯವನ್ನು, ಒಮ್ಮೆ ಅಭಿಮಾನದಿಂದ, ಮತ್ತೊಮ್ಮೆ ಭಾರವಾದ ಹೃದಯದಿಂದ ನಮ್ಮ ಜಾನಪದ ಕವಿಗಳು ಹಾಡಿದ ಹಾಡುಗಳೇ ಮೊಹರಂ ಪದಗಳು.

ಇವುಗಳನ್ನು ಕರ್ಬಲಾ ಪದಗಳೆಂದು, ರಿವಾಯಿತ ಪದಗಳೆಂದು ಉತ್ತರ ಕರ್ನಾಟಕಟದಲ್ಲಿ ಕರೆಯುತ್ತಾರೆ. ದಕ್ಷಿಣ ಕರ್ನಾಟಕದಲ್ಲಿ ಇವುಗಳನ್ನು ಹಾಡುವ ರೀತಿಯ ಬಗೆಗೆ ಹೆಚ್ಚು ವಿವರ ದೊರೆಯುವುದಿಲ್ಲ. ಉತ್ತರ ಕನ್ನಡದಲ್ಲಿ ಕರ್ಬಲಾ ಪದಗಳನ್ನೇ ಅಲಾವಿ ಪದಗಳೆಂದು ಹೇಳುತ್ತಾರೆ. ಉತ್ತರ ಪ್ರದೇಶದ ಲಖನೌ, ರಾಜಸ್ತಾನದ ಜಯಪುರ, ಮಹಾರಾಷ್ಟ್ರದ ಫತೇಹಪುರ, ಆಂಧ್ರಪ್ರದೇಶದ ಹೈದರಾಬಾದ್ ನಗರಗಳಲ್ಲಿ ಮರ್ಶಿಯಾ ಗೀತೆ ಹೇಳುತ್ತಾರೆ. ಇವು ಉರ್ದುವಿನಲ್ಲಿದ್ದು ಕರ್ಬಲಾ ಕಾಳಗದ ವಸ್ತುವಿವರಣೆಗಳನ್ನು ಒಳಗೊಂಡಿರುತ್ತವೆ.

ಮುಸ್ಲೀಮರ ಹಿಜರಿ ಶಕವರ್ಷದಲ್ಲಿ ೧೨ ತಿಂಗಳುಗಳಿದ್ದು ಅವುಗಳಲ್ಲಿ  ಮೊಹರಂ ತಿಂಗಳು ಒಂದು ಹಿಜರಿ ಸನ್ ೬೧ನೆಯ ಮೊಹರಂ ತಿಂಗಳು ೧೦ನೆಯ ದಿನಾಂಕ ಹ | ಇ | ಹುಸೇನ ಮತ್ತು ಅವರ ಅನುಯಾಯಿಗಳು ಕರ್ಬಲಾ ಮರಭೂಮಿಯಲ್ಲಿ ಹುತಾತ್ಮರಾದರು. ಇದರ ನೆನಪಿಗಾಗಿ ಶೋಕಗೀತೆಗಳನ್ನು ಮೊಹರಂ ತಿಂಗಳಿನಲ್ಲಿ ಹಾಡುವುದರಿಂದ ಇವುಗಳನ್ನು ಮೊಹರಂ ಪದಗಳೆಂದು ಕರೆಯಲಾಗುತ್ತದೆ. ಕರ್ಬಲಾದಲ್ಲಿ ಹುಸೇನರು ಮತ್ತು ಅವರ ಅನುಯಾಯಿಗಳು ಯಜೀದನ ಸೈನಿಕರೊಂದಿಗೆ ಹೋರಾಡಿ ವೀರಸ್ವರ್ಗ ಪಡೆದರು. ಆ ಯುದ್ಧ ಘಟನೆಯನ್ನು ನೆನಪಿಸಿ ಹೇಳುವ ಪದಗಳನ್ನು ‘ಜಂಗಿನ ಪದಗಳೆಂದು, ಕರ್ಬಲಾ ಪದಗಳೆಂದು ಗುರುತಿಸುತ್ತಾರೆ. ಮೊಹರಂ ಆಚರಣೆಯ ಸಂದರ್ಭದಲ್ಲಿ ಅಲಂ ಇಡುವ ಕೋಣೆಯ ಎದುರು ಅಲಾವಿ ತೋಡಿ, ಅಲಾವಿ ಸುತ್ತ ಪ್ರದಕ್ಷಿಣೆ ಹಾಕುತ್ತ ಹಾಡುವ ಹಾಡುಗಳಿಗೆ ಉತ್ತರ ಕನ್ನಡದಲ್ಲಿ ಅಲಾವಿ ಹಬ್ಬದ ಪದಗಳು ಎನ್ನುವರು. ರಿವಾಯಿತ್ ಎಂದರೆ ಪರ್ಶಿಯನ್ ಭಾಷೆಯಲ್ಲಿ ರೂಢಿ, ಸಂಪ್ರದಾಯ ಎಂದರ್ಥ. ಹ | ಇ | ಹುಸೇನರ ಕತೆಗೆ ಸಂಬಂಧಿಸಿದ ಶೋಕಗೀತೆಗಳನ್ನು ಮೊಹರಂ ಆಚರನೆಯ ಸಂದರ್ಭದಲ್ಲಿ ವರ್ಷ ವರ್ಷವೂ ಸಾಂಪ್ರದಾಯಕವಾಗಿ ಹಾಡುತ್ತ ಬಂದಿರುವುದರಿಂದ ಇವುಗಳಿಗೆ ರಿವಾಯಿತ್ ಪದಗಳೆಂದು ಹೇಳುವರು.  ಇಂದಿಗೂ ಗ್ರಾಮೀಣ ಭಾಗಗಳಲ್ಲಿ ಹಾಡುವ ಹಸ್ತಪ್ರತಿಗಳ ಹಳೆಯ ಹೊತ್ತಿಗೆಗಳ ಮೇಲೆ ರಿವಾಯಿತ ಪದಗಳೆಂದೆ ಬರೆದಿರುವುದನ್ನು ಕಾಣಬಹುದು. ಆದರೆ ಈ ರಿವಾಯಿತ ಪದಗಳಲ್ಲಿ ಶೋಕಗೀತೆಗಳ ಜೊತೆಗೆ ಮೊಹರಂ ಘಟನೆಗೆ ಸಂಬಂಧಿಸಿದ ಲಾವಣಿಪದಗಳು ದೊರೆಯುತ್ತವೆ. ಆದುದರಿಂದ ಒಟ್ಟು ಪದಗಳನ್ನು ಗಮನಿಸಿ ‘ಮೊಹರಂ ಪದಗಳು’ ಎಂದು ಕರೆಯುವಲ್ಲಿ ತಪ್ಪೇನಿಲ್ಲವೆನಿಸುತ್ತದೆ.

ಮೊಹರಂ ಪದಗಳನ್ನು ಮೊಹರಂ ಆಚರಣೆಯ ಸಂದರ್ಭದಲ್ಲಿ ಹಾಡುತ್ತಿರುವುದು ಸರ್ವವಿಧಿತ. ಮೊಹರಂ ಪದಗಳಿಗೆ ಮತ್ತು ಮೊಹರಂ ಆಚರಣೆಗೆ ತನ್ನದೇ ಆದ ಐತಿಹಾಸಿಕ ಹಿನ್ನೆಲೆಯಿದ್ದು. ಈ ಸಂದರ್ಭದಲ್ಲಿ ಸಮಗ್ರವಾಗಿ ಅಲ್ಲದಿದ್ದರೂ ಸಂಕ್ಷಿಪ್ತವಾಗಿ ಅವಲೋಕಿಸುವುದು ಅವಶ್ಯ.

ಹಿನ್ನಲೆ

ಹ | ಮುಹ್ಮದ ಪೈಗಂಬರರು ಮಾನವ ಕಲ್ಯಾಣಕ್ಕಾಗಿ ಬಹು ಕಷ್ಟ-ನಷ್ಟ ಅನುಭವಿಸಿ ಇಸ್ಲಾಂ ಪ್ರಜಾಪ್ರಭುತ್ವದ ಸ್ಥಾಪನೆ ಮಾಡಿದರು. ಅವರ ಮರಣದ ಕೆಲ ವರ್ಷಗಳಲ್ಲಿ ಖಲೀಫರಾಗಿ ಹ | ಅಬೂಬಕ್ರ ಸಿದ್ದೀಕ್ (ಕ್ರಿ.ಶ. ೬೩೨-೬೩೪) ಹ | ಉಮರ ಫಾರೋಖ್ (ಕ್ರಿ.ಶ. ೬೩೪-೬೪೪) ಹ | ಉಸ್ಮಾನ ಗನಿ (ಕ್ರಿ. ೬೪೪-೬೫೬) ಪ್ರಜಾಪ್ರಭುತ್ವ ನಡೆಸಿದರು. ನಾಲ್ಕನೆಯ ಖಲೀಫರಾಗಿ ಬನೀ ಹಾಷೀಮ್ ಪಂಗಡದವರು ಹ | ಆಲಿ ಅವರನ್ನು ಚುನಾಯಿಸಲು ಸಿರಿಯಾದ ಪ್ರಾಂತಾಧಿಕಾರಿಯಾದ ಹ | ಮುಆವಿಯಾ ವಿರೋಧಿಸಿದನು. ಎರಡು ಪಂಗಡಗಳ ನಡುವೆ ಘರ್ಷಣೆ ನಡೆದು ಒಪ್ಪಂದವಾಯಿತು. ಆದರೆ ಕ್ರಿ.ಶ. ೬೬೧ರಲ್ಲಿ ಹ | ಮುಆವಿಯಾನ ಕುತಂತ್ರಕ್ಕೆ ಹ | ಅಲಿ ಅವರು ಬಲಿಯಾಗಲು ಅವರ ಜೇಷ್ಠ ಸುಪುತ್ರ ಹ | ಇಮಾಮ ಹಸನ್ ಪ್ರಜಾಭಿಪ್ರಾಯ ಮನ್ನಿಸಿ ಖಲೀಫರಾದರು. ಮುಆವಿಯಾ ಸಾಯುವ ಮುನ್ನ ತನ್ನ ಮಗನಾದ ಯಜೀದನನ್ನು ಖಲೀಫ್‌ನೆಂದು ಘೋಷಿಸಿ ಕೊನೆಯುಸಿರೆಳೆದನು. ತಂದೆಯ ಮರಣಾನಂತರ ಯಜೀದ್, ಇಮಾಮ ಹಸನರನ್ನು ಮೋಸದಿಂದ ವಿಷಪ್ರಾಶನ ಮಾಡಿಸಿ ಕೊಲ್ಲಿಸಿದನು. ಮತ್ತು ನಿಜವಾದ ಖಲೀಫನಾದ ತನಗೆ ಮುಸ್ಲಿಂ ಮುಖಂಡರು ‘ಬಯ್ಯತ್’ ಕೈಗೊಳ್ಳಬೇಕೆಂದು ಆಜ್ಞೆ ಹೊರಡಿಸಿದನು. ಖಲೀಫನಾಗಲು ಅನರ್ಹನಾದ ಯಜೀದನನ್ನು ದಿಕ್ಕರಿಸಿ ಅರೇಬಿಯಾ, ಇರಾಣ್, ಇರಾಕ್, ಕೂಫಾ ಜನರು ಹ | ಇ | ಹುಸೇನರಿಗೆ ಬೆಂಬಲ ನೀಡಿದರು. ಕೂಫೇದ ಜನ ದೌರ್ಜನ್ಯದಿಂದ ತಮ್ಮನ್ನು ಕಾಪಾಡಬೇಕೆಂದು ವಿನಂತಿಸಿ ಪತ್ರ ಬರೆದರು. ಧರ್ಮ ರಕ್ಷಣೆಗಾಗಿ, ಮಾನವ ಕಲ್ಯಾಣಕ್ಕಾಗಿ ಹ | ಇಮಾಮ ಹುಸೇನರು ಯಜೀದನ ಕ್ರೌರ್ಯವನ್ನು ದುರಾಡಳಿತವನ್ನು ಪ್ರತಿಭಟಿಸಿದರು. ಹೆಂಡತಿ ಮಕ್ಕಳು ಹತ್ತಿರದ ಬಂಧು-ಬಳಗ ಮೊದಲಾಗ ೭೨ ಜನರೊಂದಿಗೆ ಕೂಫೆಗೆ ಪ್ರಯಾಣ ಬೆಳೆಸಿದರು.

ಹಿಜರಿ ಸನ್ ೬೧ರ ಮೊಹರಂ ತಿಂಗಳು (ಕ್ರಿ.ಶ. ೬೮೦) ಒಂದನೆಯ ದಿನಾಂಕದಂದು ಇರಾಕ್ ಪ್ರಾಂತ ಪ್ರವೇಶಿಸಿದರು. ಐದನೆಯ ದಿನ ಕರ್ಬಲಾ ಭೂಮಿಗೆ ಬಂದಿಳಿದರು. ವೈರಿ ಸೈನಿಕರು ಜಲಾಶಯಗಳಿಗೆ ವಿಷಬೆರಸಿ ಅನ್ನ ನೀರಿಗೆ ತೊಂದರೆಯಾಗುವಂತೆ ವ್ಯವಸ್ಥೆ ಮಾಡಿದರು. ಹತ್ತು ದಿನಗಳವರೆಗೆ ಅನ್ನ ನೀರಿಲ್ಲದೆ ಹುಸೇನರ ಪರಿವಾರ ತತ್ತರಿಸಿತು. ಮೊಹರಂ ಅಂಗಳ ಒಂಬತ್ತನೆಯ ದಿನ ಯಜೀದನ ಅಸಂಖ್ಯಾತ ಸೈನಿಕರಿಗೂ ಹುಸೇನರ ಅನುಯಾಯಿಗಳಿಗೂ ಘನಘೋರ ಯುದ್ಧ ನಡೆಯಿತು. ಕಾಸೀಮಧೂಲಾ, ಅಬ್ದುಲ್ಲಾ, ಅಬ್ಬಾಸ ಅಲಿ, ಹುಸೇನ ಅವರ ವೀರಾವೇಶದ ಹೋರಾಟಕ್ಕೆ ವೈರಿ ಸೈನಿಕರು ತತ್ತರಿಸಿದರು. ಯುದ್ಧ ನೀತಿ ಗಾಳಿಗೆ ತೂರಿದರು. ಮೋಸದಿಂದ ಹುಸೇನರ ಅನುಯಾಯಿಗಳ ರುಂಡ ಚಂಡಾಡುತ್ತ ನಡೆದರು. ಕೊನೆಗುಳಿದ ಹ | ಇಮಾಮ ಹುಸೇನರನ್ನು ಎದುರಿಸಿ ಯುದ್ಧಮಾಡಲು ಯಾರೊಬ್ಬರಿಗೂ ಧೈರ್ಯವಾಗಲಿಲ್ಲ. ಆಗ ವೈರಿ ಪಡೆಯನಾಯಕನಾದ ‘ಶುಮರ’ ಘಾತುಕ ರೀತಿಯಲ್ಲಿ ಆಕ್ರಮಣ ಮಾಡಲು ಆಜ್ಞೆ ಮಾಡಿದನು. ‘ಜರಿವೀನ್ ಶರೀಕ್’ ಎಂಬ ಕ್ರೂರಿಯೊಬ್ಬ ಹುಸೇನರ ಎಡಗೈಯನ್ನು ಖಡ್ಗದಿಂದ ಕತ್ತರಿಸಿ ಹಾಕಿದನು.೨

[1] “ಸಿನಾನ್ ಬಿನ್ ಅನಾಸ್ ಬಿನ ಅಮ್ರ ಅಲ್ ನಾಖಿಯಾ’ ಎಂಬುವನು ಹುಸೇನರನ್ನು ನೆಲಕ್ಕೆ ಕೆಡವಿದನು. ಆಗ ‘ಖವಾಲಿ ಬಿನ್ ಯಜೀದ್ ಅಲ್ ಅಸ್ಬಾಹಿ’ ಅವರ ತಲೆಯನ್ನು ಕತ್ತರಿಸಿ ಹಾಕಿದನು. ಮೋಸಕ್ಕೆ ಜಯವಾಯಿತು. ಧರ್ಮಕ್ಕೆ ಸೋಲಾಯಿತು. ಹ | ಇಮಾಮ ಹುಸೇನರು ವೀರಮರಣ ಹೊಂದಿದರು.

ಈ ಘೋರ ದುರಂತ ಕೇಳಿದ ಮಕ್ಕಾ ಮದೀನಾ, ಜನ, ಯಜೀದನ ಗುಂಪಿನ ಮೇಲೆ ದಂಗೆಯೆದ್ದು ಸೇಡು ತೀರಿಸಿಕೊಂಡರು. ಯಜೀದನ ಮರಣದ ಅನಂತರ ಬನೀ ಉಮೈಯರು, ಬನೀ ಹಾಷೀಮರು ಖಲೀಫರಾಗಿ ಆಳಿದರು. ಇದು ಕರ್ಬಲಾ ದುರಂತದ ಭೀಕರ ಕಥೆ.೩[2]

ಹ | ಅಲಿ ಅವರ ಅನುಯಾಯಿಗಳಾದ ಷಿಯಾ ಮುಸ್ಲೀಮರು, ಹ | ಇಮಾಮ ಹುಸೇನರ ವೀರ ಮರಣದ ಕೆಲವರ್ಷಗಳ ಅನಂತರ ಅವರ ಗೌರವಾರ್ಥ ಸಭೆ ಸೇರಿ ಶೋಕ ವ್ಯಕ್ತಪಡಿಸಿದರು. ಕ್ರಿ.ಶ. ೯೬೨ರಲ್ಲಿ ‘ಬುವಯಹಿ’ ಸಂತತಿಯ ಷಿಯಾ ಮುಸ್ಲೀಮರು ಹ | ಅಲಿ ಅವರ ಸಂತತಿಗೆ ಭಕ್ತಿಗೌರವ, ಆದರಗಳಿಂದ ನಡೆದುಕೊಂಡು ಕರ್ಬಲಾ ಕಾಳಗದ ನೆನಪಿಗಾಗಿ ಕೂಟ ಕೂಡುವುದಕ್ಕೆ ಪ್ರೋತ್ಸಾಹಕೊಟ್ಟರು.೪[3] ಹುಸೇನರ ಆತ್ಮಕ್ಕೆ ಶಾಂತಿಸಿಗಲೆಂದು ಮೊಹರಂ ತಿಂಗಳಿನಲ್ಲಿ ಮುಸ್ಲೀಮರು ಉಪವಾಸ ವೃತ, ಕುರಾನ್ ಪಠಣ, ದಾನ-ಧರ್ಮ ಇತ್ಯಾದಿಗಳನ್ನು ಮಾಡುತ್ತಿದ್ದರು. ದುಃಖ ಮೂಲವಾದ ಇಂತಹ ಮೊಹರಂ ಆಚರಣೆ ಸುಪ್ರಸಿದ್ಧ ಬಾದಶಹಾ ಅಮೀರ ತೈಮೂರಲಂಗ (ಕ್ರಿ.ಶ. ೧೩೩೬-೧೪೦೫)ನ ಕಾಲದಲ್ಲಿ ಭಾರತವನ್ನು ಪ್ರವೇಶಿಸಿತು. ‘ತಾಜಿಯಾ’ ತಯಾರಿಸುವ ಪದ್ಧತಿಯನ್ನು ಭಾರತದಲ್ಲಿ ಆರಂಭಿಸಿದವನು ಇವನೇ.೫[4] ಮೊಗಲರ ಆಳ್ವಿಕೆಯಲ್ಲಿ ಇದೇ ಪದ್ಧತಿ ಮುಂದುವರಿದು ಕಾಲಕಳೆದಂತೆ ಮೊಹರಂ ಆಚರಣೆಯಲ್ಲಿ ಭಾಗವಹಿಸುವ ಹಿಂದುಗಳು ಕೂಡ ತಾಜಿಯಾ ತಯಾರಿಸಿ ಮೆರವಣಿಗೆ ಮಾಡಲಾರಂಭಿಸಿದರು. ಶೇರಖಿ ರಾಜ ಸಂತತಿಯ ಸುಲ್ತಾನರು (ಕ್ರಿ.ಶ. ೧೩೯೮-೧೪೮೬) ಮೊಹರಂ ಆಚರಣೆಯಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಿದ್ದರು ಮತ್ತು ಸಕಲ ಮತಪಂಥಗಳಿಗೆ, ಮೊಹರಂ ಆಚರಣೆಗೆ ಧನ ಸಹಾಯ ನೀಡುತ್ತಿದ್ದರು.೬[5]

ಮೊಹರಂ ಆಚರಣೆಗೆ ಪ್ರೋತ್ಸಾಹ

ಔಧ ಪ್ರಾಂತವನ್ನಾಳಿದ ಮೊಗಲ್ ಸಾಮ್ರಾಜ್ಯದ ನವಾಬ ಶುಜಾ ಉದ್ದೌಲನ ಹೆಂಡತಿ ಮೊಹರಂ ಆಚರಣೆಗೆ ಸಾಕಷ್ಟು ಹಣ ಖರ್ಚು ಮಾಡುತ್ತಿದ್ದಳು ಮತ್ತು ಸ್ವತಃ ಭಾಗವಹಿಸುತ್ತಿದ್ದಳು. ಕ್ರಿ.ಶ. ೧೮೧೪ರಲ್ಲಿ ಔಧ ಸಿಂಹಾಸನವೇರಿದ ಗಾಜಿ ಉದ್ದೀನ ಹೈದರ ಲಖನೌದಲ್ಲಿ ‘ಶಹಾ ನಜಫ್’ ಎಂಬ ಇಮಾಮಬಾಡಾ ಕಟ್ಟಿಸಿದ್ದನು ಮತ್ತು ಹಿಂದೂ-ಮುಸ್ಲೀಮರಿಗೆ ಹಣ ನೀಡಿ ಮೊಹರಂ ಆಚರಿಸಲು ಪ್ರೋತ್ಸಾಹ ನೀಡುತ್ತಿದ್ದನು.

ದಕ್ಷಿಣ ಭಾರತದಲ್ಲಿ ಕಲಬುರ್ಗಿ ಮತ್ತು ಬೀದರದಿಂದ ಆಳಿದ ಬಹಮನಿ ಸುಲ್ತಾನರು (ಕ್ರಿ.ಶ. ೧೩೪೭-೧೫೩೮). ಬಿಜಾಪುರದ ಆದಿಲ್ ಷಾಹಿಗಳು (ಕ್ರಿ.ಶ ೧೪೮೯-೧೬೮೯) ಸಂಭ್ರಮ ಹಾಗೂ ಸಡಗರದಿಂದ ಮೊಹರಂ ಆಚರಿಸುತ್ತಿದ್ದರು. ಗೋಲ್ಕೊಂಡಾದ ಕುತುಬ್ ಷಾಹಿಗಳು (ಕ್ರಿ.ಶ. ೧೫೫೦-೧೬೭೨) ಹೈದರಾಬಾದ್ ನಗರದಲ್ಲಿ ಅಲಂ ಇಡುವ ಪದ್ಧತಿ ಆರಂಭಿಸಿ ಮುಂದುವರಿಸಿಕೊಂಡು ಬಂದರು. ಅಲಮ್‌ಗಳ ಮುಂದೆ ಮಜಲಿಸ್ ಏರ್ಪಡಿಸಿ ಉದಾರ ಮನಸ್ಸಿನಿಂದ ತಮ್ಮ ಬೊಕ್ಕಸದಿಂದ ಧನ ಸಹಾಯ ಮಾಡುತ್ತಿದ್ದರು. ‘ಅಬ್ದುಲ್ ಕುತುಬ್ ಷಾ’ ಮೊಹರಂ ತಿಂಗಳ ಮೊದಲನೆಯ ದಿನದಿಂದ ಸಫರ ತಿಂಗಳ ೨೦ನೆಯ ದಿನಗಳವರೆಗೆ ಹೆಂಡ ಕುಡಿಯುವುದನ್ನು ಕ್ಷೌರ ಮಾಡಿಸಿಕೊಳ್ಳುವುದನ್ನು, ತಾಂಬೂಲ ಸೇವಿಸುವುದನ್ನು ಅಪರಾಧವೆಂದು ಸಾರಿದ್ದನು. ಅಲಂ ಇಡುವುದಕ್ಕಾಗಿ ಕಟ್ಟಿಸಿದ ಆಶೂರಖಾನೆಗಳು ಇಂದಿಗೂ ಸುಸ್ಥಿತಿಯಲ್ಲಿದ್ದು ಹೈದರಾಬಾದ್ ನಗರದ ಸಾಂಸ್ಕೃತಿಕ ಮಹತ್ವವನ್ನು ಸಾರಿ ಹೇಳುತ್ತವೆ.

ಸಾಮ್ರಾಟ ಅಕ್ಬರ (ಕ್ರಿ.ಶ. ೧೫೪೨-೧೬೦೫) ದೀನ್-ಎ-ಇಲಾಹಿ ಸ್ಥಾಪಿಸಿದ ಅನಂತರ ಮೊಹರಂ ಹಬ್ಬ ರಾಷ್ಟ್ರೀಯ ಹಬ್ಬವಾಗಿ ಮಾರ್ಪಾಡಾಯಿತು. ೧೮ನೆಯ ಶತಮಾನದಲ್ಲಿ ಮೈಸೂರು ಸಂಸ್ಥಾನವನ್ನಾಳಿದ ಮೈಸೂರು ಹುಲಿ ಟಿಪ್ಪೂ ಸುಲ್ತಾನನು ‘ಮೊಹರಂ ಒಂದು ಹಬ್ಬವಲ್ಲ ಅದು ಹ | ಮಹ್ಮದ ಪೈಗಂಬರರ ಮೊಮ್ಮಕ್ಕಳು ಹೋರಾಡಿ ಹುತಾತ್ಮರಾದ ಪುಣ್ಯದ ದಿನ ಅದನ್ನು ಸೂತಕದಂತೆ ಆಚರಿಸಬೇಕು’ ಎಂದು ಹೇಳುತ್ತಿದ್ದನು. ಆದರೆ ಕುತಂತ್ರಿ ಬ್ರಿಟೀಶರು ತಮಗೆ ಸಿಂಹಸ್ವಪ್ನವಾಗಿದ್ದ ಟಿಪ್ಪೂವನ್ನು ಮುಸ್ಲೀಮರಿಂದ ಬೇರ್ಪಡಿಸಲು ಮೊಹರಂ ಪ್ರಸಂಗವನ್ನು ಉಪಯೋಗಿಸಿಕೊಂಡರು. ಕಂಪನಿ ಅಧಿಕಾರಿಗಳಿಗೆ ಮುಸ್ಲೀಮರ ಗೆಳೆತನ ಮಾಡಿಸಿ ಮುಸ್ಲಿಂ ಮುಜಾವರರಿಗೆ ಸಾಕಷ್ಟು ಹಣನೀಡಿ ‘ಮೊಹರಂ’ ಅನ್ನು ಅದ್ದೂರಿಯಿಂದ ಆಚರಿಸಲು ವ್ಯವಸ್ಥೆ ಮಾಡಿದರು೭[6] ಅಂದು ಬ್ರಿಟಿಷ ಅಧಿಕಾರಿಗಳು ಹಣದಾಸೆ, ಅಧಿಕಾರದಾಸೆ ತೋರಿಸಿ ಪ್ರಾರಂಭಮಾಡಿದ ಮೊಹರಂ ವಿಕಾರ ರೂಪ ಹೊಂದಿ ಬಳಕೆಯಲ್ಲಿ ಬಂದಿತು. ಇಂದಿಗೂ ಕೆಲ ಹಳ್ಳಿಗಳಲ್ಲಿ ಸರಕಾರಿ ಕಾಮಣ್ಣನಿಡುವಂತೆ, ಸರಕಾರಿ ಡೋಲಿ, ಸರಕಾರಿ ಅಲಂ ಇಡುವುದನ್ನು ನಾವು ಕಾಣುತ್ತೇವೆ.

ಹೀಗೆ ಹಿಂದೂಗಳ ಪ್ರಭಾವದಿಂದ ಬ್ರಿಟಿಷರ ಪೈಪೋಟಿತನದಿಂದ ಶೋಕಮೂಲ ಮೊಹರಂ ಆಚರಣೆ ಮರೆಯಾಗಿ ಸಂತೋಷ ಮತ್ತು ಸಂಭ್ರಮದ ಹಬ್ಬವಾಗಿ ವಿಶೇಷವಾಗಿ ಕರ್ನಾಟಕದಲ್ಲಿ ಮಾರ್ಪಾಟಾಯಿತು. ತತ್ಫಲವಾಗಿ ಹಿಂದೂ-ಮುಸ್ಲೀಮರಲ್ಲಿ ಹೊಂದಾಣಿಕೆ ಗಟ್ಟಿಗೊಂಡು ಭಾವೈಕ್ಯ ಸಾಧನೆಗೆ ಹಾದಿಯಾಯಿತು.

ಹಿಂದೂಮುಸ್ಲಿಂ ಮೈತ್ರಿ

ಭಾರತೀಯರು ವಿವಿಧ ಹಬ್ಬಗಳನ್ನು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಆಚರಿಸುವಂತೆ ಮೊಹರಂ ಹಬ್ಬವನ್ನು ಆಚರಿಸುತ್ತಾರೆ. ಮೊಹರಂ ಹಬ್ಬದ ಮೇಲೆ ಹಿಂದು ಸಂಸ್ಕೃತಿಯ ಗಾಢ ಪ್ರಭಾವವಾಗಿದೆ. ಪ್ರಾದೇಶಿಕವಾಗಿ ರೂಢಿಯಲ್ಲಿರುವ ಮೊಹರಂ ಆಚರಣೆಯನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಹಿಂದೂ-ಮುಸ್ಲಿ ಮೈತ್ರಿಯ ಕುರುಹುಗಳು ಸ್ಪಷ್ಟವಾಗಿ ಗೋಚರಿಸುತ್ತವೆ.

ಉತ್ತರ ಪ್ರದೇಶದ ಲಖನೌ ನಗರದಲ್ಲಿ ಷಿಯಾ-ಸುನ್ನಿ ಮುಸ್ಲೀಮರ ಜೊತೆಗೆ ಹಿಂದುಗಳು ಸೇರಿ ತಾಜಿಯಾ ಕಟ್ಟುತ್ತಾರೆ. ಮೊಹರಂ ತಿಂಗಳ ಆರನೆಯ ದಿನ ‘ಆಸಫಿ ಇಮಾಮ ಬಾಡಾದಲ್ಲಿ ಬರಿಗಾಲಿನಿಂದ ಬೆಂಕಿಯ ಮೇಲೆ ನಡೆದು ಹೋಗುವ ದೃಶ್ಯ, ಮೆಹಂದಿ ಜುಲೂಸನಲ್ಲಿ ಪಾಲಕಿ ಪಾಲ್ಗೊಳ್ಳುವುದು ಹಿಂದೂ ಸಂಸ್ಕೃತಿಯಿಂದ ಪ್ರಭಾವಗೊಂಡ ಅಂಶಗಳು. ಚನೋರಬಾ ಗ್ರಾಮದಲ್ಲಿ ಮೊಹರಂ ಮೆರವಣಿಗೆ ಹೊರಟಾಗ ಹಿಂದೂ-ಮುಸ್ಲಿಂಮರು ರೋಗಪೀಡಿತ ಮಕ್ಕಳನ್ನು ತಾಜಿಯಾಗಳ ಕೆಳಗೆ ಹಾಯಿಸುತ್ತಾರೆ. ಈ ಪದ್ಧತಿ ಹಿಂದುಗಳ ರಥೋತ್ಸವವನ್ನು ನೆನಪಿಸುತ್ತದೆ.

ಆಂಧ್ರಪ್ರದೇಶದ ಹೈದರಾಬಾದ್ ಮತ್ತು ಗೋಲ್ಕೊಂಡ ನಗರಗಳ ಮೊಹರಂ ಆಚರಣೆಯಲ್ಲಿ ಹಿಂದುಗಳು ಪಾಲ್ಗೊಂಡು ‘ಅಲ್ಮೆ ಮುಬಾರಕ್’ಗಳಿಗೆ ಎಡೆ ಉಡಿ ಕಾಣಿಕೆ ನೀಡುತ್ತಾರೆ. ಹತ್ತನೆಯ ದಿನ ಮಾತಂ ನಡೆಯುವಾಗ ನಿಂತು ಕಣ್ಣಿರು ಸುರಿಸುತ್ತಾರೆ. ಪಶ್ಚಿಮ ಬಂಗಾಲದ ವಿಷ್ಣುಪುರ ನಗರದ ಮೊಹರಂ ಜುಲೂಸನಲ್ಲಿ ಪಾಲ್ಗೊಳ್ಳುವ ‘ಧುಲ್‌ಧುಲ್’ ಎಂಬ ಮಣ್ಣಿನ ಕುದುರೆಯನ್ನು ಪೋತದಾರರು ತಯಾರಿಸುತ್ತಾರೆ. ಇದರಲ್ಲಿ ಹಿಂದು ದೇವ-ದೇವತೆಗಳ ಮಣ್ಣಿನ ಮಾದರಿಯ ಛಾಯೆ ಕಂಡುಬರುತ್ತದೆ.

ಮಹಾರಾಷ್ಟ್ರ ರಾಜ್ಯದ ಅಕ್ಕಲಕೋಟೆ ನಗರದಲ್ಲಿ ಹಿಂದು-ಮುಸ್ಲೀಮರು ಸೇರಿ ತಾಜಯಾ ತಯಾರಿಸುತ್ತಾರೆ. ಗ್ರಾಮದೇವತೆಗಳಿಗೆ ಹಿಂದುಗಳು ತೆಂಗಿನಕಾಯಿ ಒಡೆಯುವಂತೆ ತಾಜಿಯಾಗಳಿಗೆ ಹಿಂದು-ಮುಸ್ಲೀಮರು ತೆಂಗಿನಕಾಯಿಗಳನ್ನು ಒಡೆಸುತ್ತಾರೆ. ಮತ್ತು ಹಿಂದೂ ದೇವರಿಗೆ ಎಲೆ ಬಳ್ಳಿ ಪೂಜೆ ಮಾಡುವಂತೆ ಹಿಂದು-ಮುಸ್ಲೀಮರು ತಾಜಿಯಾಗಳಿಗೆ ವೀಳ್ಯೆದೆಲೆಯ ಹಾರ ಹಾಕುತ್ತಾರೆ. ರತ್ನಾಗಿರಿ ಜಿಲ್ಲೆಯ ಫತ್ತೇಹ ಪುರದಲ್ಲಿ ಮೊಹರಂ ಆಚರಣೆಯು ಸಂದರ್ಭದಲ್ಲಿ ತಮಾಷೆ ಮದ್ದುಗಳನ್ನು ಸುಡುತ್ತಾರೆ. ಹಾಗು ಹೊಸಬಟ್ಟೆ ತೊಟ್ಟು ಮುಖಕ್ಕೆ ಸುಗಂಧ ದ್ರವ್ಯಗಳನ್ನು ಲೇಪಿಸಿಕೊಳ್ಳುತ್ತಾರೆ. ಈ  ಸಂಭ್ರಮ ಹಿಂದುಗಳ ದೀಪಾವಳಿ ಹಬ್ಬವನ್ನು ನೆನಪಿಸುತ್ತದೆ.

ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆಯ ಮುದಗಲ್ಲ ಗ್ರಾಮದ ಮೊಹರಂ ಆಚರಣೆಯಲ್ಲಿ ಮುಸ್ಲೀಮೇತರರೇ ಹೆಚ್ಚಾಗಿ ಭಾಗವಹಿಸುತ್ತಾರೆ. ಹರಕೆ ಹೊತ್ತ ಹಿಂದೂ-ಮುಸ್ಲೀಮರು ಹುಲಿವೇಷ, ಅಳ್ಳಳ್ಳಿ ಬವ್ವಾವೇಷ ಹಾಕಿ ಕುಣಿದು ಕುಪ್ಪಳಿಸುತ್ತಾರೆ. ಕಂದೂರಿ ಮಾಡಿ ಎಡೆ ನೀಡಿ ಮನಸ್ಸಿಗೆ ನೆಮ್ಮದಿ  ತಂದುಕೊಳ್ಳುತ್ತಾರೆ. ದೀರ್ಘದಂಡ ನಮಸ್ಕಾರ ಹಾಕಿ ಧನ್ಯರಾಗುತ್ತಾರೆ. ಹತ್ತನೆಯ ದಿನ ಹೊರಡುವ ಕಾಸೀಮ ಅಲಂ ಮತ್ತು ಹಸನ ಅಲಂ ಒಂದಕ್ಕೊಂದು ಭೆಟ್ಟಿಯಾದಾಗ ನೆರೆದು ಜನ ಸಮೂಹ ತೇರಿನಮೇಲೆ ಹಣ್ಣುಕಾಯಿ ಎಸೆಯುವಂತೆ ಸೂರೆ ಮಾಡಿ ಭಯಭಕ್ತಿಯಿಂದ ಕೈಮುಗಿದು ತೃಪ್ತರಾಗುತ್ತಾರೆ. ಹಿಂದುಗಳ ಜಾತ್ರೆಯ ಸಂಭ್ರಮವನ್ನು ನೆನಪಿಸುವ ಮುದಗಲ್ಲ ಮೊಹರಂ ಇಂದಿಗೂ ಸರ್ವರ ಇಷ್ಟಾರ್ಥಗಳನ್ನು ಪೂರೈಸುವ ಪುಣ್ಯಕ್ಷೇತ್ರೋತ್ಸವವೆಂದೇ ಪ್ರಚಲಿತವಾಗಿದೆ.

ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಕೂಡಿಸುವ ಮೌಲಾಲಿ ಅಲಮ್‌ಗಳಿಗೆ ಹಿಂದೂ-ಮುಸ್ಲೀಮರು ರಾಮುಲಸ್ವಾಮಿ ಎಂದೇ ಕರೆಯುತ್ತಾರೆ. ಒಂಬತ್ತನೆಯ ದಿನ ರಾತ್ರಿ ಎಡೆ ಕೊಡುವಾಗ ಉಪ್ಪನ್ನು ಒಯ್ದು ಅಲಾವಿಯಲ್ಲಿ ಚೆಲ್ಲಿ ಹುರುಕು ಕಜ್ಜಿಗಳನ್ನು ವಾಸಿಮಾಡಿಕೊಳ್ಳುತ್ತಾರೆ. ಕೋಲಾರ ಜಿಲ್ಲೆಯ ನಾಗಸಂದ್ರದ ಮೊಹರಂ ಬಾಬಯ್ಯನ ಹಬ್ಬವೆಂದೇ ಪ್ರಸಿದ್ಧಿ ಪಡೆದಿದೆ.

ಧಾರವಾಡ ಜಿಲ್ಲೆಯ ಯರಗುಪ್ಪಿ ಗ್ರಾಮದ ಮೊಹರಂ ಸುತ್ತ ಹತ್ತು ಹಳ್ಳಿಗಳಲ್ಲಿ ಮೊಹರಂ ಜಾತ್ರೆಯೆಂದೇ ಹೆಸರಾಗಿದೆ. ಊರಿನ ಹಿಂದೂ-ಮುಸ್ಲೀಮರು ವಿಶೇಷವಾಗಿ ಬ್ರಾಹ್ಮಣರು ತಮ್ಮ ಶಕ್ತ್ಯಾನುಸಾರ ದೇವರ ಚಾಕರಿ ಮಾಡುತ್ತಾರೆ. ಹರಕೆ ತೀರಿಸುತ್ತಾರೆ. ಗದಗ-ಬೆಟಗೇರಿಯಲ್ಲಿ ನಡೆಯುವ ಮೊಹರಂ ಮೆರವಣಿಗೆಯಲ್ಲಿ ಹಿಂದೂ-ಮುಸ್ಲಿಂ ಭಕ್ತರು ಪಾಲ್ಗೊಂಡು ಮೈತುಂಬಿದ ದೇವರಿಂದ ಮಳೆ-ಬೆಳೆ ಕುರಿತು ಹೇಳಿಕೆ-ಕೇಳಿಕೆ ಮಾಡುತ್ತಾರೆ. ಸೊಟಕನಹಾಳದ ಡೋಲಿ ಮತ್ತು ಕೈ-ದೇವರು ದ್ಯಾಮವ್ವನ ಗುಡಿಗೆ ಭೆಟ್ಟಿಯಿತ್ತಾಗ ಊರಜನ ಇಮಾಮ ಹುಸೇನರು ತಂಗಿ ದ್ಯಾಮವ್ವನ ದರ್ಶನಕ್ಕೆ ಬಂದಿದ್ದಾರೆಂದೇ ತಿಳಿಯುತ್ತಾರೆ.

ಹೀಗೆ ಮೊಹರಂ ಆಚರಣೆ ಶೋಕಮೂಲವಾಗಿದ್ದರೂ ಮೂಲತಃ ಮುಸ್ಲೀಮರಿಗೆ ಸಂಬಂಧಪಟ್ಟಿದ್ದರೂ ಅದು ಹಿಂದುಗಳ ಸ್ನಿಗ್ಧ ಸ್ನೇಹದಿಂದ ಭಾವೈಕ್ಯದ ಪ್ರತೀಕವಾಗಿ ಎಲ್ಲರ ಹಬ್ಬವಾಗಿ ಬಳಕೆಯಲ್ಲಿದೆ. ಹಿಂದು-ಮುಸ್ಲೀಮರನ್ನು ಒಂದುಗೂಡಿಸುವ ಧಾರ್ಮಿಕ ಸೌಹಾರ್ದವನ್ನು ಹುಟ್ಟು ಹಾಕುವ ‘ಮೊಹರಂ’ ಭಾವೈಕ್ಯದ ಬೆಸುಗೆಗೆ ಮತೀಯ ಸಾಮರಸ್ಯಕ್ಕೆ ಬಹುದೊಡ್ಡ ಕಾಣಿಕೆಯಾಗಿದೆ.

ಕರ್ನಾಟಕದಲ್ಲಿ ಮೊಹರಂ ಆಚರಣೆಯ ಸಮಯದಲ್ಲಿ – ಹಾಡಲಾಗುವ ಮೊಹರಂ ಪದಗಳು ಇಸ್ಲಾಂ ಧರ್ಮಕ್ಕೆ ಮತ್ತು ಇಸ್ಲಾಮೇತರ ಧರ್ಮಕ್ಕೆ ಸಂಬಂಧಿಸಿದವುಗಳಾಗಿದ್ದು ಹಾಡುವಾಗ ಹಿಂದೂ-ಮುಸ್ಲಿಂಮರು ಒಟ್ಟಾಗಿ ಮರ್ಸಿಯಾ (ಶೋಕಪೂರ್ಣ) ದಾಟಿಯಲ್ಲಿ ಹೇಳುವುದು ಕಂಡುಬರುತ್ತದೆ.

ಮೊಹರಂ ಪದಗಳ ವರ್ಗೀಕರಣ ಮತ್ತು ವಿವರಣ

ಮೊಹರಂ ಪದಗಳನ್ನು ಅವು ಒಳಗೊಂಡಿರುವ ಕಥಾವಸ್ತು, ಭಾವ, ಭಾಷೆ ಇತ್ಯಾದಿಗಳನ್ನು ಆಧರಿಸಿ ೧) ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದ ಪದಗಳು, ೨) ಇಸ್ಲಾಮೇತರ ಧರ್ಮಕ್ಕೆ ಸಂಬಂಧಿಸಿದ ಪದಗಳು ಎಂದು ಸ್ಥೂಲವಾಗಿ ವಿಂಗಡಿಸಬಹುದು.

ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದ ಪದಗಳನ್ನು ಪುನಃ ೧) ಕರ್ಬಲಾ ಪದಗಳು ೨) ಖಲೀಫರಿಗೆ ಸಂಬಂಧಿಸಿದ ಪದಗಳು, ೩) ಹ | ಮುಹ್ಮದ ಪೈಗಂಬರರಿಗೆ ಸಂಬಂಧಿಸಿದ ಪದಗಳು, ೪) ಪೂರ್ವದ ಪೈಗಂಬರರಿಗೆ ಸಂಬಂಧಿಸಿದ ಪದಗಳು, ೫) ಸೂಫಿ ಸಂತರಿಗೆ ಸಂಬಂಧಿಸಿದ ಪದಗಳು೬) ಇಸ್ಲಾಂ ಧರ್ಮ ತತ್ವ ಮಹಿಮಾ ಸಾರುವ ಪದಗಳು, ೭) ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದ ಸವಾಲ್-ಜವಾಲ್ ಪದಗಳು – ಎಂದು ಮುಂತಾಗಿ ವರ್ಗೀಕರಿಸಬಹುದು.

ಇಸ್ಲಾಮೇತರ ಪದಗಳನ್ನು ೧) ಐತಿಹಾಸಿಕ ಪದಗಳು, ೨) ಸಾಮಾಜಿಕ ಪದಗಳು,                         ೩) ಇಸ್ಲಾಮೇತರ ಸವಾಲ್-ಜವಾಬ್ ಪದಗಳು ಎಂದು ವಿಭಾಗಿಸಬಹುದು.

ಕರ್ಬಲಾ ಪದಗಳು

ಮೊಹರಂ ಆಚರಣೆಯ ಹಿನ್ನೆಲೆಯಲ್ಲಿ ಪರಶೀಲಿಸಿದಾಗ ಕರ್ಬಲಾ ಪದಗಳೇ ನಿಜವಾದ ಅರ್ಥದಲ್ಲಿ ಮೊಹರಂ ಪದಗಳೆನಿಸುತ್ತವೆ. ಆದುದರಿಂದ ಒಟ್ಟು ಮೊಹರಂ ಪದಗಳಲ್ಲಿ ಅವುಗಳಿಗೆ ಅಗ್ರಸ್ಥಾನ ಸಲ್ಲುತ್ತದೆ. ಸಲ್ಲಬೇಕು.

ಮೊಹರಂ ತಿಂಗಳ ಆರಂಭದ ಹತ್ತು ದಿನ ಇರಾಕ್ ದೇಶದ ಕರ್ಬಲಾ ಮರುಭೂಮಿಯಲ್ಲಿ ನಡೆದ ಘಟನೆಗಳನ್ನು ಈ ಪದಗಳು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತವೆ. ಅವುಗಳ ರೂಪ ಮತ್ತು ಲಕ್ಷಣ ಲಾವಣಿಯಂತಿದ್ದರೂ ಹಾಡುವ ದಾಟಿ ಧರ್ತಿ ಮಾತ್ರ – ಮರ್ಶಿಯಾದಂತಿರುತ್ತದೆ. ಉರ್ದು ಪಾರ್ಶಿ ಶಬ್ದಗಳು ಈ ಪದಗಳಲ್ಲಿ ಸಾಕಷ್ಟು ಬಳಕೆಗೊಂಡಿವೆ. ಕರ್ಬಲಾ ಪದಗಳಲ್ಲಿ – ಮುಸ್ಲೀಮರು ಹುತಾತ್ಮರಾದ ಪದಾ, ವೀರಕಾಸೀಮನ ಲಢಾಯಿ, ಅಸ್ಗರ ಅಲಿ ಪದ, ಅಬ್ದುಲ್ಲಾನ ಜಂಗಿನ ಪದಾ, ಅಬ್ಬಾಸ ಅಲಿ, ಜಂಗಿನ ಪದಾ, ಹುಸೇನರು ಹುತಾತ್ಮರಾದ ಪದಾ, ಕರ್ಬಲಾದ ರಕ್ತದ ಮಹತ್ವ – ಮುಂತಾದ ಪದಗಳು ಪ್ರಮುಖವಾಗಿವೆ.

ಇವುಗಳಲ್ಲಿ ಅಬ್ಬಾಸ ಅಲಿ ಜಂಗಿನ ಪದವೊಂದು, ಹೀಗಿದೆ. ಹಿಜರಿ ಸನ್ ೬೦ರ ಜಿಲ್‌ಹಜ್ ತಿಂಗಳ ೮ನೆಯ ದಿನಾಂಕ ಇಮಾಮ ಹುಸೇನರು ಹೆಂಡತಿ ಮಕ್ಕಳು ಸಂಬಂಧಿಕರೊಂದಿಗೆ ಕೂಫೆಗೆ ಪ್ರಯಾಣ ಬೆಳಸಿ ಮೊಹರಂ ತಿಂಗಳ ಮೊದಲನೆಯ ದಿನ ಇರಾಕ್ ಪ್ರಾಂತ ಪ್ರವೇಶಿಸಿದರು. ಮುಂದೆ ಹಲವಾರು ಘಟನೆಗಳು ನಡೆದವು.

ವೈರಿ ಸೈನಿಕರು ಬಿಟ್ಟ ಬಾಣಗಳನ್ನು ಹುಸೇನರು ಅನುಯಾಯಿಗಳು ಒಂದೊಂದಾಗಿ ಕತ್ತರಿಸಿ ಭೂಮಿಗೆ ಚೆಲ್ಲುತ್ತಿದ್ದರು. ಹುಸೇನರ ಸಣ್ಣ ಸೈನ್ಯ ೫೦೦ ಜನ ಬಿಲ್ಲುಗಾರರನ್ನು ಸೋಲಿಸಿ ಹಿಂದಕ್ಕಟ್ಟಿತು ಮಧ್ಯಾಹ್ನದ ಹೊತ್ತಿನವರೆಗೆ ಜಯದ ಸೂಚನೆ ಯಾವೊಂದು ಪಡೆಗೂ ಕಾಣಲಿಲ್ಲ. ಆಗ ಇಬ್ನೆಸಾದ್ ಹಿಂದಿನಿಂದ ಮುತ್ತಿಗೆ ಹಾಕಲು ಆಜ್ಞೆಮಾಡಿದನು. ಇದರಿಂದ ಹುಸೇನರ ಅನುಯಾಯಿಗಳು ಹುತಾತ್ಮರಾದರು. ಕೊನೆಗೆ ಹ | ಅಬ್ಬಾಸ ಅಲಿ ಮತ್ತು ಹ | ಇ | ಹುಸೇನರು ಉಳಿದರು ಯುದ್ಧಮಾಡುತ್ತ ಮಾಡುತ್ತ ನಿತ್ರಾಣರಾದರು. ಕುಡಿಯಲು ಹನಿ ನೀರಿಲ್ಲದೆ ತುಟಿಗಳು ಒಣಗಿದವು ಪಕ್ಕದಲ್ಲಿ ಹರಿಯುತ್ತಿದ್ದ ಯುಪ್ರಟೀಸ ನದಿಗೆ ವೈರಿಗಳು ಸರ್ಪಕಾವಲಿದ್ದರು. ಅಬ್ಬಾಸಲಿ ಮತ್ತು ಹುಸೇನರು ದಾರಿಯುದ್ದಕ್ಕೂ ಯುದ್ಧಮಾಡುತ್ತ ನದಿ ದಂಡೆ ತಲುಪಿದರು. ಬೊಗಸೆಯಲ್ಲಿ ನೀರು ತುಂಬಿಕೊಂಡು ಕುಡಿಯಬೇಕೆನ್ನುವಷ್ಟರಲ್ಲಿ ಎಲ್ಲಿಂದಲೋ ಬಂದ ಬಾಣಗಳು ಅವರ ಗಂಟಲು ಸೇರಿದವು. ಇಬ್ಬರೂ ಗಾಯಗೊಂಡು ತೀರದ ದಾಹದಿಂದ ಮರಳಿದರು. ಗುಟಿಸಲು ಇನ್ನೂ ಮುಟ್ಟಿರಲಿಲ್ಲ. ಅಬ್ಬಾಸಲಿಯವರ ಮೇಲೆ ವೈರಿ ಸೈನಿಕರು ದಾಳಿ ಮಾಡಿದರು. ನಾಲ್ಕುನಿಟ್ಟಿನಿಂದ ಮೋಸದಿಂದ ಮುತ್ತಿದ ವೈರಿ ಸೈನಿಕರನ್ನು ಎದುರಿಸುತ್ತ ರುಂಡ ಚಂಡಾಡುತ್ತ ಕೊನೆಗೆ ಹುತಾತ್ಮರಾದರು. ಇದನ್ನೆ ಬಾಗಲಕೋಟೆ ನಾಗು-ಗೌಸು ಕವಿಗಳು ಹೀಗೆ ಬಣ್ಣಿಸಿದ್ದಾರೆ.

ಸೂರಾಧೀರಾ ತಗೊಂಡ ಹತಿಯಾರಾ
ಕೈಯಾಗ ಹಿಡದಾ ಅಂತಾನೋ ಬರ್ರೆಂದಾ
ಅಬ್ಬಾಸಲಿ ಶರಣರ ಜಂಗ ನಡೆದಿತೋ ಆವಾಗ
ಇಟ್ಟಿದಿಲ್ಲೊ ಜೀವದ ಹಂಗ | ನಬಿಸಾಬರ ಕರುಣ ನಮಗ
ಐತಿ ನಮ್ಮ ಮ್ಯಾಲಿ | ಅಂತಾರೋ ಅಬ್ಬಾಸಲಿ | ಶಿವನ ಮನಿಹುಲಿ.
ಕಡದಾಹೊಡದಾನಡದಾ

‘ಅಬ್ಬಾಸಲಿ ಶಿವನ ಮನಿ ಹುಲಿ’ ಎನ್ನುವ ಧ್ವನಿಪೂರ್ಣ ಮಾತು ಅಬ್ಬಾಸ ಅಲಿ ವ್ಯಕ್ತಿತ್ವದ ಮೇಲೆ ಬೆಳಕು ಚೆಲ್ಲುತ್ತದೆ.

ಕರ್ಬಲಾ ಕದನದಲ್ಲಿ ಪಾಲ್ಗೊಂಡು ಆತ್ಮಾರ್ಪಣೆಗೈದ ಧರ್ಮವೀರರ ಸಾಹಸ ಸಂಕಟ ಸಾವು ನೋವುಗಳನ್ನು ನಿರೂಪಿಸುವ ಕರ್ಬಲಾ ಪದಗಳಲ್ಲಿ ಹ | ಇಮಾಮ ಹಸೇನರ ಹೋರಾಟದ ಚಿತ್ರಣವನ್ನು ಕೊಡುವ ಪದಗಳು ಮುಖ್ಯವಾಗಿವೆ.

ಹುಸನೈನ ಸ್ವಾಮಿ ಶರಣರು ಕುದುರಿಗೆ | ಜೀನಹಾಕಿ ಕುಂತಾರವರು
ಕುದುರಿ ಕುಣಿಸೂತ ಶರಣಾ | ಅಂದಾರೋ ದೀನ್ ದೀನಾ
ಕರ್ಬಲಕ ಹೋಗಿ ಮಾಡ್ಯಾರೋ ರಣಾ

ಸತ್ಯಧರ್ಮಗಳ ಉಳಿವಿಗಾಗಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿ ಲೌಕಿಕದಲ್ಲಿ ಸೋತಂತೆ ಕಂಡರೂ ವಿಶ್ವಕ್ಕೆ ಸತ್ಯದ ನಿತ್ಯತ್ವವನ್ನು ಮನಗಾಣಿಸಿಕೊಟ್ಟು ವೀರಮರಣವನ್ನಪ್ಪಿದ ಹ | ಇ | ಹುಸೇನರಂತವರು ಇತಿಹಾಸದಲ್ಲಿ ತೀರ ವಿರಳವಾಗಿ ದೊರೆಯುವರು ಇದನ್ನೆ ಜನಪದ ಕವಿ :

ಧರ್ಮಕ ಸತ್ತವರು ಸಿಗತಾರ ಕೋಟಿಗೊಬ್ಬ ಜನರಾ
ಮುಸಲ್ಮಾನ ಮಂದ್ಯಾಗ ದೊರಿತಾರ ಹುಸೇನ ಸಾಹೇಬರಾ

ಎಂಬ ಮಾತಿನಲ್ಲಿ ತಿಳಿಸಿದ್ದಾನೆ.

ಹ | ಇ | ಹುಸೇನರು ಮರಣಿಸಿದಾಗ ಅಲ್ಲಿದ್ದ ಪಶು-ಪಕ್ಷಿ ಸಂಕುಲ ಕೂಡ ತಮ್ಮ ಶೋಕ ಪ್ರದರ್ಶಿಸಿದಂತೆ ಜನಪದ ಕವಿ ಹೇಳಿದುದು ಬಹಳ ಅರ್ಥಪೂರ್ಣವಾಗದೆ.

ಶರಣರನ್ನು ನೋಡಿ ಕಣ್ಣಿರು ಸುರಿಸ್ಯಾವರಿ
ಪಕ್ಷಿಗಳೆಲ್ಲ ಅವರ ಮೇಲೆ ಬಿದ್ದು ಮಾಡುವವು ಗುಲ್ಲಾ
ರಕ್ತ ಮುಳುಗಿ ಕೆಂಪಗೆ ಮೈ ಕೈ ಎಲ್ಲಾ
ಆಗ ದುಃಖಾತೋ ಅತಿ ಬಿಟ್ಟಾವು ಅನ್ನ ನೀರಾ
ಆಗಲೆ ಅವು ಸಕಲಾ ಎದಿವಡಿದು ಆದಾವು ಅಡವಿಪಾಲಾ

ಇಲ್ಲಿ ಪಕ್ಷಿಗಳು ದುಃಖದಲ್ಲಿ ಪಾಲುಗೊಂಡುದನ್ನು ಓದಿದಾಗ ನಮಗೆ ತಟ್ಟನೆ ಲಕ್ಷ್ಮೀಶನ ಜೈಮಿನಿ ಭಾರತದ ಸೀತೆಯ ದುಃಖದಲ್ಲಿ ಅಲ್ಲಿದ್ದ ಪಕ್ಷಿ ಮೃಗ ಸಮೂಹ ಭಾಗಿಯಾದ ಸನ್ನೀವೇಶ ನೆನಪಿಗೆ ಬರದಿರದು.

ಆಡುವ ಮಾತುಗಳನ್ನೇ ಮೂಲ ಬಂಡವಾಳವಾಗಿಸಿಕೊಂಡ ಈ ಹಾಡುಗಳ ಪಾಲಿಗೆ ಅವುಗಳ ಸರಳ ಸೌಂದರ್ಯವೇ ಒಂದು ವೈಶಿಷ್ಟ್ಯ ಆದರೂ ಆಗಾಗ ಮಿಂಚಿಬರುವ ಮಾತಿನ ಬೆಡಗು-ಬಿನ್ನಾಣವನ್ನು ಗುರುತಿಸಬಹುದು.

ಖಲೀಫರಿಗೆ ಸಂಬಂಧಿಸಿದ ಪದಗಳು

ಖಲೀಫರ ಪದಗಳು, ಇಸ್ಲಾಮೀ ಸಾಮ್ರಾಜ್ಯಕ್ಕೆ ಧರ್ಮಪ್ರಭುಗಳೆಸಿ ಖಲೀಫ ಪಟ್ಟವನ್ನು ಏರಿದ ಖಲೀಫರ ಮತ್ತು ಅವರ ಸಂಬಂಧಿಗಳ ಜೀವನ ಮೌಲ್ಯಗಳ ಸುತ್ತ ಹೆಣೆದ ಪವಾಡ ಕಥಾನಕಗಳಾಗಿವೆ. ಈ ಪವಾಡಗಳಲ್ಲಿ ಕೆಲವು ಹಿಂದೂ ಧರ್ಮದ ಪ್ರಭಾವದಿಂದ ಸೃಷ್ಟಿಗೊಂಡವುಗಳೆಂದು ವಿದ್ವಾಂಸರು  ಅಭಿಪ್ರಾಯಪಡುತ್ತಾರೆ.

ಖಲೀಫರ ಮತ್ತು ಅವರ ಸಂಬಂಧಿಗಳಿಗೆ ಸಂಬಂಧಿಸಿದ ಪದಗಳಲ್ಲಿ – ಸೂರ್ಯನಿಗೆ ಉಮರ ಕೊಟ್ಟ ಪದಾ, ಮೌಲಾಲಿಯ ಜನನ ಮತ್ತು ಬಾಲಲೀಲೆ, ನಾಲ್ಕು ದಾರಿಯಪದಾ, ಕಂದೂರ ಕಿಲ್ಲೆಯ ಸೈನ್ಯ ಸೋಲಿಸಿದ ಮೌಲಾಲಿ ಪದಾ, ಹುಸೇನ ಹುಸೇನರ ಆಟದ ಪದಾ, ಸ್ವರ್ಗದ ಹಣ್ಣು ತಿಂದ ಹುಸೇನ ಹುಸೇನರ ಪದಾ, ಹುಸೇನ ಹುಸೇನರನ್ನು ಒತ್ತಿ ಇಟ್ಟ ಪದಾ, ದಾನ ಮಾಡಿದ ಪದಾ, ಘಾತಿಮಾರ ಮರಣದ ಪದಾ – ಮುಂತಾದವು ಮುಖ್ಯವಾಗಿವೆ.

ಎರಡನೆಯ ಖಲೀಫ ಹ | ಉಮರ ಫಾರೋಖ ಸೂರ್ಯನಿಗೆ ಕೊಟ್ಟ ಶಾಪದ ಪದವೊಂದು ಹೀಗಿದೆ.

ನಮಾಜು ಮುಗಿಸಿಕೊಂಡು ಉತ್ಪತ್ತಿಯ ವನಕ್ಕೆ ಬಂದ ಹ | ಉಮರ ಫಾರೋಖ ಅಲ್ಲಿ ಕುಳಿತು ತಾವು ತೊಟ್ಟ ಹರಕು ಅಂಗಿಯನ್ನು ಕಳೆದು ಹೊಲಿಯ ತೊಡಗಿದರು. ಅಷ್ಟು ಹೊತ್ತಿಗೆ ಉದಯಿಸಿದ ಸೂರ್ಯನ ಕಿರಣಗಳ ಬಿಸಿಯಿಂದ ಉಮರರ ಬೆನ್ನು ಸುಡಲು ಅವರು ಸಿಟ್ಟಿಗೆದ್ದರು. ಆಗ ಸೂರ್ಯ ಹೆದರಿ ಏಳನೆಯ ಪಾತಾಳದಲ್ಲಿ ಅಡಗಿಕೊಂಡನು. ಇದರಿಂದ ಎಲ್ಲ ಕಡೆಗೆ ಕತ್ತಲೆ ಆವರಿಸಿ ಎಲ್ಲರಿಗೂ ತೊಂದರೆಯಾಯಿತು. ಸೂರ್ಯ ಪುನಃ ಉದಿಸಿ ಬರಲು ಪೈಗಂಬರರು ನಾಲ್ಕು ಮಂದಿ ಜೊತೆಗಾರರನ್ನು ಕರೆದುಕೊಂಡು ಉಮರರಿದ್ದ ಉತ್ತತ್ತಿಯ ವನಕ್ಕೆ ಹೋದರು. ಅಲ್ಲಿ ಉಮರರು ಬರಿಮೈಯಿಂದ ಅಂಗಿ ಹೊಲಿಯುತ್ತ ಇನ್ನು ಕುಳಿತಿದ್ದರು. ಆಗ ದೂರದಿಂದ ಗುರುತಿಸಿದ ಪೈಗಂಬರರು ಉಮರರನ್ನು ಕುರಿತು ನುಡಿದರು :

ಇಷ್ಟು ಸಿಟ್ಟ ಇಟ್ಟರ ನೀವು ಮನಸಿನವೊಳಗ
ನಡದೀತು ಹ್ಯಾಂಗ ಆದೀತು ಹ್ಯಾಂಗ ಬೈಗು ಬೆಳಗು
ಬಂದ ಜಿಬ್ರಾಯಿಲ ತಂದ ಮಾಹಿತಿ ಹೇಳಿದ ನಮಗ
ನೋಡಿ ಸೂಚನಾ ನಾವು ಇಲ್ಲಿ ತನಾ
ನಡದ ಬಂದೇನಿ ಕೊಡಬೇಕ ಮಾನ ಪಾನಾ
ಇಲ್ಲಂದರ ಇಂದಿಗೆ ಸೂರ್ಯ ಬರೂದಿಲ್ಲಂದಾ
ಇಷ್ಟು ಕೇಳಿ ಉಮರ ಸೂರ್ಯಗ ಝಟ್ಟನೆ ಕರದಾ
ಕೇಳಿ ಶಬ್ದಾ ಆದ ಅಂವಾ ಲುಬ್ದಾ ತೆರದೀತ ಪ್ರಾರಬ್ದಾ
ಬಂದಾನೋ ಸೂರ್ಯ ಭೂಮಿಮ್ಯಾಲೆ ಮೂಡಿ.

ಪುನಃ ಹುಟ್ಟಿಬಂದ ಸೂರ್ಯನನ್ನು ಕಂಡು ಸರ್ವರ ಮನಕ್ಕೆ ಸಂತೋಷವಾಯಿತು. ಸೂರ್ಯದೇವನನ್ನು ಕೂಡ ಅಂಜಿಸಬಲ್ಲ ಸಾಮರ್ಥ್ಯ ಹ | ಉಮರ ಫಾರೋಖರಲ್ಲಿ ಇದ್ದಿತೆಂಬ ಕವಿಯ ಆಶಯ ಇಲ್ಲಿ ಚನ್ನಾಗಿ ಮುಡಿಬಂದಿದೆ.

ತಮ್ಮ ಆಜ್ಞೆಯ ಮೂಲಕ ಶರಣರು ಸೂರ್ಯನನ್ನು ನಿಲ್ಲಿಸಿದ ಪವಾಡಗಳು ವೀರಶೈವ ಪುರಾಣಗಳಲ್ಲಿ ಬರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬೇಕು. ಅವುಗಳ ಪ್ರಭಾವ ಜನಪದ ಕವಿಯ ಮೇಲೆ ಆಗಿರುವ ಸಾಧ್ಯತೆಯಿದೆ.

ಹ | ಮುಹ್ಮದ ಪೈಗಂಬರರ ತರುವಾಯ ಮುಸ್ಲೀಮರು ಆರಿಸಿದ ನಾಲ್ವರು ಖಲೀಫರಲ್ಲಿ ನಾಲ್ಕನೆಯವರೆ ಹ | ಅಲಿಯವರು ಪೈಗಂಬರರ ಅಳಿಯಂದಿರಾದ ಇವರು ನಾಲ್ಕುವರ್ಷ ಒಂಬತ್ತು ತಿಂಗಳು ಖಲೀಫರಾಗಿ ಸೇವೆ ಸಲ್ಲಿಸಿದರು. ಪ್ರವಾದಿಗಳಿಗಿಂತ ಮೂವತ್ತು ವರ್ಷ ಚಿಕ್ಕವರಾದ ಹ | ಅಲಿ ಅವರು ತಮ್ಮ ಒಂಬತ್ತನೆಯ ವಯಸ್ಸಿನಲ್ಲಿ ಇಸ್ಲಾಂ ಧರ್ಮ ಸ್ವೀಕರಿಸಿದ ಸಾತ್ವಿಕರು, ನೀತಿವಂತರು. ಇವರನ್ನು ಜನಪದ ಕವಿ ಒಬ್ಬ ಪವಾಡ ಪುರುಷರಂತೆ ಬಣ್ಣಿಸಿದ್ದರಲ್ಲಿ ಆಶ್ಚರ್ಯವಿಲ್ಲ.

ಹ | ಅಲಿಯವರ ಜನನ ಮತ್ತು ಬಾಲಲೀಲೆ ವರ್ಣಿಸುವ ಪದವೊಂದು ಹೀಗಿದೆ. ಹ | ಅಲಿಯವರು ಜನಿಸಿದಾಗ ಮೂರು ಲೋಕವೆ ಅದುರಿತು. ‘ಕಾಬಾ’ದ ತುಂಬ ಬೆಳಕು ಬಿದ್ದಿತು. ನಾಗಕನ್ಯೆಯರು ಸ್ವರ್ಗದ ನೀರ ತಂದು ಮಗುವಿಗೆ ಎರೆದರು. ದೇವತೆಯರು ತೊಟ್ಟಿಲು ತೂಗಿ ಹಡಿ ಹರಸಿದರು. ಒಂದು ದಿನ ಕೂಸು ತೊಟ್ಟಿಲಿನಲ್ಲಿ ಆಡುತ್ತಿದ್ದಾಗ ಒಂದು ಘಟನೆ ನಡೆಯಿತು :

ತೊಟ್ಟಿಲದಾಗ ಮನಗಿಸಿ ಅಲಿ ಮೌಲಾಗ | ತಾಯಿ ಕೂತ್ರ ಬಚ್ಚಲದಾಗ ಜಳಕಕ
ಹಾಂವ ಒಂದ ತೊಟ್ಟಿಲದಾಗ | ಬಂದ ಚಿತ್ತ ಮೌಲಾನ ಮ್ಯಾಗ
ಎಚ್ಚರಾಗಿ ನೋಡುದರೊಳಗ | ಬಂತ ಕಡಿಯಾಕ
ಕಸುವ ತೋರಸ್ಯಾರ ಹುಟ್ಟಿದ ನಾಕ ದಿನಕ | ಆಗ ಮೌಲಾ
ಮಾಡಿ ಚಾಲಾಕಿ | ಎರಡು ಕೈಬಟ್ಟ ಹಾಂವಿನ ಬಾಯಾಗ ತುರಕಿ
ಸೀಳಿ ಒಗದಾರ ಮಾಡಿ ಎರಡು ಪಕರಾಣಕಿ

ತಾಯಿ ಜಳಕಮಾಡಿ ಎದ್ದು ಬಂದು ನೋಡಿದರೆ ತೊಟ್ಟಿಲ ಎಡಬಲದಲ್ಲಿ ಘಟಸರ್ಪ ಸತ್ತು ಬಿದ್ದೀತ್ತು ಇದನ್ನು ನೋಡಿ ಹ | ಅಲಿಯವರ ತಾಯಿ ಹೆದರಿ ಚಿಟ್ಟನೆ ಚೀರಿದಳು. ನೆರೆಹೊರೆಯವರು ಕೂಡಿದರು. ಪೈಗಂಬರರು ಆಗಮಿಸಿದರು. ಮಗುವಿನ ಧೈರ್ಯ ಮೆಚ್ಚಿ ಮನಸಾರೆ ಹರಿಸಿದರು. ಇಂಥ ಅಸಾಮಾನ್ಯ ಬಾಲಕ ಬೆಳೆದು ದೊಡ್ಡವನಾದ ಶಕ್ತಿಯಲ್ಲಿ ಪ್ರಚಂಡನಾದ ಜಗಜಟ್ಟಿಯಾದ.

ಅಲಿ ಶಿಶುವನ್ನು ನಾಗಕನ್ಯೆಯರು ಸ್ವರ್ಗದಿಂದ ತಂದ ನೀರಿನಿಂದ ಎರೆದ ಸನ್ನಿವೇಶ, ಆ ಶಿಶು ಘಟಸರ್ಪ ಸೀಳಿ ಎಸೆದ ಘಟನೆ – ಎರಡು ಹಿಂದೂ ಪುರಾಣಗಳಿಂದ ಪ್ರಭಾವಿತವಾದವುಗಳು.

ಖಲೀಫರಿಗೆ ಸಂಬಂಧಿಸಿದ ಮೊಹರಂ ಪದಗಳನ್ನು ಒಟ್ಟಾರೆ ಗಮನಿಸಿದಾಗ ಹ | ಅಲಿಯವರನ್ನು ಕುರಿತು ರಚಿತವಾದ ಪದಗಳೇ ಹೆಚ್ಚು ಕಂಡು ಬರುತ್ತವೆ. ಹ | ಅಲಿಯವರಿಗೆ ಸಂಬಂಧಿಸಿದ ಬೀಬಿ ಮಾತಿಮಾ, ಹಸನ ಮತ್ತು ಹುಸೇನರನ್ನು ಕುರಿತು ರಚಿತವಾದ ಪದಗಳು ಕಡಿಮೆ ಪ್ರಮಾಣದಲ್ಲಿ ದೊರೆಯುತ್ತವೆ. ಎರಡನೆಯ ಖಲೀಫ ಹ | ಉಮರರ ಬಗೆಗೆ ಒಂದೇ ಒಂದು ಪದ ದೊರೆಯುತ್ತದೆ. ಆದರೆ ಉಳಿದ ಖಲೀಫರನ್ನು ಆ ಖಲೀಫರಿಗೆ ಸಂಬಂಧಿಸಿದವರನ್ನು ಕುರಿತು ಮೊಹರಂ ಪದಗಳು ಸೃಷ್ಟಗೊಂಡಂತಿಲ್ಲ.

| ಮುಹ್ಮದ ಪೈಗಂಬರರಿಗೆ ಸಂಬಂಧಿಸಿದ ಪದಗಳು

ಮೊಹರಂ ಹಬ್ಬದ ಸಂದರ್ಭದಲ್ಲಿ ಹಾಡುವ ಹ | ಮುಹ್ಮದ ಪೈಗಂಬರರಿಗೆ ಸಂಬಂಧಿಸಿದ ಪದಗಳನ್ನು ಕೂಲಂಕುಷವಾಗಿ ಗಮನಿಸಿದಾಗ ಕೆಲವು ಪದಗಳ ಕಥಾವಸ್ತು ಮುಸ್ಲಿಂ ಪರಂಪರೆಯಿಂದ ಬಂದವುಗಳಾಗಿದ್ದು ಅವು ಕುರಾನ್ ಮತ್ತು ಹದೀಸುಗಳಲ್ಲಿ ದೊರೆಯುತ್ತವೆ. ಇನ್ನು ಕೆಲವು ಪದಗಳು ಹಿಂದೂ ಧರ್ಮದ ಕಥಾವಸ್ತುಗಳ ಪ್ರಭಾವಕೆ ಒಳಗಾಗಿದ್ದು ಕಂಡುಬರುತ್ತದೆ.

ಹ | ಮುಹ್ಮದ ಪೈಗಂಬರರಿಗೆ ಸಂಬಂಧಿಸಿದ ಪದಗಳಲ್ಲಿ – ಮುಹ್ಮದ ಪೈಗಂಬರರು ಹುಟ್ಟಿದಾಗ ಹಾಡಿದ ಜೋಗುಳ ಪದಾ, ನಬಿಸಾಬರು ಮುಟ್ಟಿ ಜಗ್ಗಿದ ಪದಾ, ಮೊಮ್ಮಕ್ಕಳನ್ನು ಹೊತ್ತು ಸಮಾಜು ಮಾಡಿದ ಪದಾ, ಮೆಅರಾಜಕ್ಕೆ ಹೋಗಿಬಂದ ಪದಾ, ಚಂದ್ರನನ್ನು ಹೋಳುಮಾಡಿ ಮತ್ತೆ ಕೂಡಿಸಿದ ಪದಾ, ಪಾದಧೂಳಿಯ ಪವಾಡ ಪದಾ, ಜಾಬೀರನ ಮಕ್ಕಳನ್ನು ಬದುಕಿಸಿದ ಪದಾ – ಮುಂತಾದವು ಪ್ರಮುಖವಾಗಿವೆ.

ಹ | ಮುಹ್ಮದರ ಜನನದ ಕುರಿತು ಒಂದು ಪದ ಹೀಗಿದೆ. ಇದಕ್ಕೆ ಮೆಣಸಗಿ ರುದ್ರಗೌಡ ಪಾಟೀಲರ ಅಂಕಿತವಿದೆ. ಆದ್ದರಿಂದ ಅವರು ಅದನ್ನು ಬರೆದಿರಬೇಕು.

ಮಕ್ಕಾ ಪಟ್ಟಣದಲ್ಲಿ ಹ | ಮುಹ್ಮದ ಪೈಗಂಬರರು ಹ | ಬೀಬಿ ಅಮೀನಾ ಅವರ ಪುಣ್ಯಗರ್ಭದಿಂದ  ಜನ್ಮತಾಳಿದರು. ಆಗ ಆರು ತಾಸು ರಾತ್ರಿಯಾಗಿತ್ತು ಗಂಧರ್ವರು ದೇವಕನ್ಯೆಯರು ಸ್ವರ್ಗದಿಂದ ನೀರು ತಂದು ಬಾಣಂತಿಗೆ ಎರೆದರು ಮತ್ತಿನ ತೊಟ್ಟಿಲಕಟ್ಟಿ ನಬಿಸಾಹೇಬರನ್ನು ಮಲಗಿಸಿ ಜೋಗುಳ ಹಾಡಿದರು.

ಜೋ ಜೋ ಚೈತುನ್ನಬಿಕೋ ಜೋ ಜೋ
ಅಲ್ಲಾಕು ಪ್ಯಾರೆ ಪೈಗಂಬರಿ ನಬಿ ನೂರೇ ಕು ಜೂಲ ಜೂಲಾರೇ ಜೋ ಜೋ
ಏಳು ಲೋಕಕ್ಕೆ ಅಧಿಪತಿ ನೀನು ಶಿವನ ಕರುಣದಿಂದ ಹುಟ್ಟಿಬಂದವನೋ
ಜಗದ ಗುರುವಿನಂತೆ ನಬಿಸಾಹೇಬನೋ
ನಿನ್ನ ಜನ್ಮದ ನಾಮ್ಹೆಸರು ಮಹ್ಮದ ಹೌದೇನೋ ಜೋ ಜೋ

ಇಲ್ಲಿ ದೈವಿ ಪುರುಷರು ಅವತರಿಸುವದು ಶಿವನ ಕಾರುಣ್ಯ ಕಿರಣದಿಂದ ಎಂದು ಭಾವಿಸಿದ ಕವಿ ಹ | ಮುಹ್ಮದ ಪೈಗಂಬರರನ್ನು ಅದೇ ಭಾವನೆಯಲ್ಲಿ ಸ್ವೀಕರಿಸಿದ್ದಾನೆ. ಇಂಥವರ ಜನನ ಸಾಮಾನ್ಯವಾದುದೆಂದು ಹೇಳಲು ಆತ ಒಪ್ಪದೇ ‘ಏಳು ಲೋಕಕ್ಕೆ ಅಧಿಪತಿ ನೀನು ಶಿವನ ಕರುಣದಿಂದ ಹುಟ್ಟಿಬಂದವನು’ ಎಂದು ವರ್ಣಿಸಿ ಸ್ವರ್ಗಲೋಕದಿಂದ ದೇವಕನ್ಯೆಯರನ್ನು ಕರೆಸಿ ಜನ್ಮೋತ್ಸವ ಮಾಡಿಸಿದ್ದಾನೆ.

ದಿನ ದಿನಕ್ಕೆ ಬಿದಿಗೆಯ ಚಂದ್ರನಂತೆ ಬೆಳೆದ ಮುಹ್ಮದರು ಎಂಟು ವರ್ಷದವರಾಗುವ ಹೊತ್ತಿಗೆ  ತಂದೆ ತಾಯಿ ಅಜ್ಜಂದಿರನ್ನು ಕಳೆದುಕೊಂಡು ಅನಾಥರಾದರು. ಕಾಲಕ್ರಮೇಣ ಮನೆತನ ಉದ್ಯೋಗವಾದ ವ್ಯಾಪಾರವನ್ನು ಕೈಕೊಂಡು ಜೀವನ ಸಾಗಿಸತೊಡಗಿದರು.

ಹ | ಮುಹ್ಮದ ಪೈಗಂಬರರು ಮದೀನೆಗೆ ಪಲಾಯನ ಕೈಗೊಳ್ಳುವ ಒಂದು ವರ್ಷ ಮೊದಲು ರಜ್ಜಬ ತಿಂಗಳ ೨೭ನೆಯ ರಾತ್ರಿ ಆಕಾಶಾರೋಹಣದಂತಹ ಚಮತ್ಕಾರಪೂರ್ಣ ಸಾಂಕೇತಿಕ ಅರ್ಥವುಳ್ಳ ಭವಿಷ್ಯ ಸೂಚಕ ಘಟನೆಯೊಂದು ಸಂಭವಿಸಿತು. ಈ ಪವಾಡ ಸದೃಶ್ಯ ಘಟನೆ ಅವರ ಬದುಕಿನಲ್ಲಿ ನಡೆದಂತೆ ಮುಸ್ಲೀಮರೆಲ್ಲರೂ ನಂಬುತ್ತಾರೆ.೮[7] ಕುರಾನೇ ಷರಿಫದಲ್ಲಿ ಕುರಾನೇ ಷರೀಪರಲ್ಲಿ ಹದೀಸ ವಾಣಿಗಳಲ್ಲಿ ಹಾಗೂ ‘ಮಿಶ್ಕತ್ ಉಲ್ ಮಸಾಬಿಹ’ ಎಂಬ ಕೃತಿಯಲ್ಲಿ ಮೇ ಅರಾಜಿನ ಉಲ್ಲೇಖವಿದೆ.೯[8].

ಹ | ಮುಹ್ಮದ ಪೈಗಂಬರರ ಜೀವನದಲ್ಲಿ ನಡೆದ ಅಘಟಿತ ಘಟನೆಗಳನ್ನು ಸಹಿಸದ ಜನ ಅದು ಕಣ್ಕಟ್ಟು ವಿದ್ಯೆಯೆಂದು ಬಗೆದು ಅವರನ್ನು ಪರೀಕ್ಷಿಸಲು ಮುಂದಾದರು. ಪೈಗಂಬರರ ಕೀರ್ತಿಯನ್ನು ಸಹಿಸದ ಕುಟಿಲ ಅಬೂಜಹಲ್ ಮತ್ತು ಇತರರು ಮುಹ್ಮದ ಪೈಗಂಬರರ ಬಳಿ ಬಂದು ಕಣ್ಕಟ್ಟು ವಿದ್ಯೆಯಿಂದಾ ನೀವು ಜನರನ್ನು ಮರುಳು ಮಾಡುತ್ತಿರುವಿರೆಂದು ಆಪಾದಿಸಿ ಹೀಗೆ ಸವಾಲು ಹಾಕಿದರು :

ಬಿಟ್ಟ ಭೂಮಿಮ್ಯಾಗ ತೋರಿಸಬೇಕ ಆಕಾಶ ಮ್ಯಾಗ
ಇಲ್ಲಂದರ ಜಲಮಾ ಉಳಿಯಾಕಿಲ್ಲಾ
ಎರಡು ತುಣುಕುಮಾಡಿ ಚಂದ್ರಗ ರಸೂಲಿಲ್ಲಾ
ಕಾಣೂಹಾಂಗ ಸರೂ ಜನರಕ್ಕೆಲ್ಲಾ | ಶರಣರಾ ನೆನೆದಾರ ಶಂಕರಾ
ನಮಾಜಮಾಡಿ ವರವಬೇಡಿ ಚಂದರಗ ಸನ್ನಿಯ ಮಾಡಿ
ಆದೀತ ಎರಡು ತುಕಡಿ ಅಜೂಜಹಲ್ ಅಂತಾನ ನೋಡಿ
ಮತ್ತ ಕೂಡಸರಿ ರಸೂಲಿಲ್ಲಾ | ಚಂದರಗ ಒಂದ ಆಗಂದ್ರ ರಸೂಲಿಲ್ಲಾ

ಸವಾಲಿಗೆ ಉತ್ತರ ದೊರೆತರೂ ಅಬೂಜಹಲ್ ಒಪ್ಪಿಕೊಳ್ಳಲಿಲ್ಲ. ನೋಡಿದ ಜನರೆಲ್ಲಾ ಹೇಳಿದರೂ ಕೇಳದೆ ತನ್ನ ಮೊಂಡುವಾದವನ್ನೇ ಮಂಡಿಸಿದನು. ಆದರೆ ಅಬೂಜಹಲ್‌ನೊಂದಿಗೆ ಬಂದ ಯಹೂದಿ ಪೈಗಂಬರರ ಸತ್ಯವನ್ನು ತಿಳಿದು ಕಲ್ಮಾ ಓದಿದನು.

ಹ | ಮುಹ್ಮದ ಪೈಗಂಬರರ ವ್ಯಕ್ತಿತ್ವದ ಮೇಲೆ ಬೆಳಕು ಚೆಲ್ಲುವ ಚಂದ್ರನನ್ನು ಹೋಳುಮಾಡಿ ಕೂಡಿಸಿದ ಈ ಘಟನೆ ಹದೀಸದಲ್ಲಿ ಕೂಡ ಉಲ್ಲೇಖವಾಗಿದೆ.

ಪೂರ್ವದ ಪೈಗಂಬರರಿಗೆ ಸಂಬಂಧಿಸಿದ ಪದಗಳು

ಮೊಹರಂ ಪದಗಳಲ್ಲಿ ಹ | ಮುಹ್ಮದ ಪೈಗಂಬರರಿಗೆ ಸಂಬಂಧಿಸಿದ ಪದಗಳಷ್ಟೇ ಮಹತ್ವಪೂರ್ಣ ಪದಗಳೆಂದರೆ ಅವರಿಗಿಂತಲೂ ಪೂರ್ವದ ಪೈಗಂಬರರಿಗೆ ಸಂಬಂಧಿಸಿದ ಪದಗಳು. ಪೈಗಂಬರರ ಪರಂಪರೆಯಲ್ಲಿ ಹ | ಆದಮ್ ಅವರು ಪ್ರಥಮ ಮಾನವರು ಮತ್ತು ಪ್ರಥಮ ಪೈಗಂಬರರೆಂಬ ನಂಬಿಕೆ ಮುಸ್ಲೀಮರಲ್ಲಿದೆ. ಅವರ ತರುವಾಯ ಇಸ್ಲಾಂ ಧರ್ಮಕ್ಕೆ ಪರಿಪೂರ್ಣತೆ ತರಲು ಒಂದು ಲಕ್ಷ ಇಪ್ಪತ್ನಾಲ್ಕು ಸಾವಿರ ಪೈಗಂಬರರು ಜನ್ನ ತಾಳಿದರು. ಹ | ಮಹ್ಮದ ಪೈಗಂಬರರೇ ಅವರಲ್ಲಿ ಕೊನೆಯವರು. ಇವರೆಲ್ಲರೂ ತಮ್ಮ ತಮ್ಮ ಜನಾಂಗದವರಿಗೆ ತಮ್ಮ ತಮ್ಮ ಕಾಲದಲ್ಲಿ ಇಸ್ಲಾಂ ಧರ್ಮದ ತತ್ವಗಳನ್ನು ಬೋಧಿಸಿದರೆಂದು ಕುರಾನ್‌ದಲ್ಲಿರುವ ದೇವವಾಣಿಗಳಿಂದ ತಿಳಿದುಬರುತ್ತದೆ.೧೦[9] ಈ ಪೈಗಂಬರರಲ್ಲಿ ಕೆಲವರನ್ನು ಕುರಿತು ಮೊಹರಂ ಪದಗಳು ರಚನೆಗೊಂಡಿವೆ.

ಪೂರ್ವದ ಪೈಗಂಬರರಿಗೆ ಸಂಬಂಧಿಸಿದ ಪದಗಳಲ್ಲಿ – ಹ | ಅಯ್ಯೂಬರಿಗೆ ಇಬ್‌ಲೀಷ ಕಾಡಿದ ಪದಾ, ಹ | ಸುಲೇಮಾನರ ಅಂತರಗಮನದ ಪದಾ, ಹ | ಈಸಾ ಪೈಗಂಬರರು ಮಾಡಿದ ಪವಾಡ ಪದಾ, ಹ | ಈಸಾರು ಡೋಗಿ ಬದುಕಿಸಿದ ಪದಾ, ಜೇಲಿನಿಂದ ಪಾರಾದ ಪದಾ, ಹ | ಶಮವೂನ ಪೈಗಂಬರರಿಗೆ ಒದಗಿದ ಕಷ್ಟ, ಸಾರಾ ಅವರ ಪತಿವೃತಾ ಭಕ್ತಿಯ ಪದಾ – ಮುಂತಾದವು ಮುಖ್ಯ ಪದಗಳಾಗಿವೆ.

ಹ | ಅಯ್ಯೂಬ ಪೈಗಂಬರರ ಜೀವನದ ಸುತ್ತ ಜನಪದ ಕವಿಗಳು ಪದಗಳನ್ನು ಹೆಣೆದಿರುವರು ಅವುಗಳಲ್ಲಿ ಹ | ಅಯ್ಯೂಬರಿಗೆ ಇಬಲೀಷ ಕಾಡಿದ ಪದವು ಒಂದು. ಇದನ್ನು ನವಲಗುಂದ ತಾಲ್ಲೂಕ ಸೊಟಕನಹಾಳ ಗ್ರಾಮದಲ್ಲಿ ಹಾಡುತ್ತಾರೆ. ಮಹಾಪುಣ್ಯವಂತರಾದ ಹ | ಅಯ್ಯೂಬರಿಗೆ ಧನ-ದೌಲತ್ತಿಗೇನು ಕಡಿಮೆಯಿರಲಿಲ್ಲ. ಮಕ್ಕಳು ಕೂಡ ಅವರ ಮನಸ್ಸಿಗೆ ತಕ್ಕಂತೆ ನಡೆದುಕೊಳ್ಳುವವರಾಗಿದ್ದರು. ಇಷ್ಟಿದ್ದರೂ ಅಲ್ಲಾಹನನ್ನು ಅವರು ಮರೆತವರಲ್ಲ. ಇಂಥವರ ಪಂಥ ಕೆಡಿಸಲು ಇಬಲೀಸ್ ಕಾಡಿಸಿತೊಡಗಿದನು.

ಆಕಸ್ಮಿಕವಾಗಿ ಬೆಂಕಿಹತ್ತಿ ಅವರ ಮನೆಸುಟ್ಟುಹೋಯಿತು. ಆನೆ ಕುದುರೆಗಳು ಭಸ್ಮವಾದವು. ಬೀಬಿ ರಹಿಮಾ ಒಬ್ಬರನ್ನು ಬಿಟ್ಟು ಉಳಿದ ಮೂರು ಜನ ಹೆಂಡಂದಿರು ಸ್ವರ್ಗಸೇರಿದರು. ಇದ್ದ ಏಳು ಮಂದಿ ಮಕ್ಕಳು ತೀರಿಕೊಂಡರು. ಇಷ್ಟೆಲ್ಲ ಕಷ್ಟನಷ್ಟವಾದರೂ ‘ಹ್ಯಾಂಗ ಇಡತಾನ ಶಿವ ಹಾಂಗ ನಡಿಯಬೇಕ’ ಎನ್ನುವ ಅಚಲ ನಿಷ್ಠೆ ಅಯ್ಯೂಬ ಶರಣರದು. ಆದರೂ ಇಬ್‌ಲೀಷನಕಾಟ ನಿಲ್ಲಲಿಲ್ಲ :

ಶರಣರ ಕಾಲಿಗೆ ಹುಣ್ಣಾಗಿ ಬಹುಬ್ಯಾನಿ ಮಾಡಿತು ಜೀವಕ
ಏನು ಹಚ್ಚಿದರೂ ಮಾಯಲಿಲ್ಲ ಹೆಚ್ಚಾದಿತು ದಿನದಿನಕ
ಸುರುವಾತು ಮೈತುಂಬ ಹಬ್ಬುವುದಕ
ಸುಲದೀತೋ ಎಲ್ಲ ಮೈಯಾನ ತೊಗಲು ಉಳಿಯಲಿಲ್ಲ ತಟಕ
ಕೀವ ರಕ್ತ ಸೋರಿ ಹುಳಬಿದ್ದಾವು ಮೈ ಹತ್ತಿ ನಾರುದಕ
ಅವನ ಹೆಂಡತಿ ಮಹಾಗುಣವತಿ ಹೇಸಲಿಲ್ಲೋ ಅದಕ
ಹಗಲಿ ರಾತರಿ ಬೆಳತನಕ ಗಂಡನ್ನ
ಜೀಂವದಕ್ಕಿಂತ ಹೆಚ್ಚು ಮಾಡ್ಯಾಳೋ ಜೋಪಾನ
ಊರಮಂದಿ ಬೇಜಾರು ಮಾಡ್ಯಾರೋ ಮೈನಾರುದಕ
ಹೊರಕ ಹಾಕಿದಾರೋ ಊರಿಂದ ಅಯ್ಯೂಬನ ನಸೀಬಕ

ಉಪಾಯವಿಲ್ಲದೆ ಗಂಡನ ಕರೆದುಕೊಂಡು ಏಳೂರು ತಿರುಗಿದರೂ ಸ್ವಲ್ಪ ಜಗ ಸಿಗಲಿಲ್ಲ. ಹೆಂಡತಿ ಗಂಡನೊಂದಿಗೆ ಅಡವಿಯೊಳು ವಾಸಮಾಡತೊಡಗಿದಳು. ಅಯ್ಯೂಬರು ಮಾತ್ರ ತಪ್ಪದೆ ಐದುಹೊತ್ತು ನಮಾಜ ಮಾಡುತ್ತಿದ್ದರು. ಒಮ್ಮೊಮ್ಮೆ ಶಕ್ತಿ ಸಾಲದೇ ಇದ್ದಾಗ ಪತ್ನಿಯ ತಲೆಗೂದಲು ಹಿಡಿದು ಅದರ ಆಶ್ರಯದಿಂದ ನಮಾಜು ಸಲ್ಲಿಸುತ್ತಿದ್ದರು. ಹ | ಬೀಬಿ ರಹಿಮಾನರು ಸಮೀಪದ ಹಳ್ಳಿಗೆ ಹೋಗಿ ಕೂಲಿ ಮಾಡಿ ರೊಟ್ಟಿ ತರುತ್ತಿದ್ದರು. ತಂದಿದ್ದನ್ನು ಶರಣರಿಗೆ ಉಣಿಸಿ ತಾವೂ ಉಣ್ಣುತ್ತಿದ್ದರು. ಇಬ್‌ಲೀಷನ ಕಾಡಾಟ ಮತ್ತೆ ಮುಂದುವರೆಯಿತು.

ತಡವಿಲ್ಲದೆ ಗಡ ಬಂದಾನೋ ಇಬಲೀಷಾಗ ಅಯ್ಯೂಬನಂತೇಕ
ಇಲ್ಲದೊಂದು ಮಾಡಿ ಹೇಳತಾನೋ ಮಲಕ
ನಿಮ್ಮ ಹೆಂಡತಿ ಬಾಳ ಪರಿಣಿತಳು ತುಡುಗ ಮಾಡಲಾಕ
ಸಿಕ್ಕಳಿಂದು ಪುರಮಾಸಿ ತಲೆಕತ್ತರಿಸಿ ಮಾಡ್ಯಾರ ಮುಂಡಕ
ಕೇಳಿ ಅಯ್ಯುಬಗ ಸಿಟ್ಟಬಂತು ಹೆಣತಿ ಕೃತ್ಯೇಕ.

ಅದೇ ಕ್ಷಣದಲ್ಲಿ ಜಿಬರಾಯಿಲರು ಬಂದಿಳಿದು ಹ | ಅಯ್ಯೂಬರಿಗೆ ನಿಜ ಸಂಗತಿಯನ್ನು ಅರುಹಿದರು. ಹ | ಬೀಬಿ ರಹಿಮಾನರಿಗೆ ಸ್ವರ್ಗದಿಂದ ನೀರು ತಂದು ಕೊಟ್ಟರು. ಜಳಕ ಮಾಡಿದ ನಂತರ ಎಲ್ಲವೂ ಸುಖಾಂತವಾಯಿತು. ಈ ಪದದಲ್ಲಿ ಹ | ಬೀಬಿ ರಹಿಮಾನರ ಪತಿಭಕ್ತಿ ಸಂಪದವನ್ನು ಹ | ಅಯ್ಯೂಬರ ವೃತನಿಷ್ಠೆಯನ್ನು ಹೇಳಿರುವ ಜೊತೆಗೆ ಅವರು ಅನುಭವಿಸಿದ ನರಕಯಾತನೆಯನ್ನು ಕೇಳುಗರ ಕಣ್ಣು ಹನಿಗೂಡುವಂತೆ ವರ್ಣಿಸಲಾಗಿದೆ. ‘ಎಷ್ಟು’ ಮಾಡಿದರೂ ಇಬ್‌ಲೀಸನ ಆಟ ನಡೆಯಲಿಲ್ಲ.’ ಎನ್ನುವ ಕವಿಯ ಮಾತು ಸತ್ಯಕ್ಕೇ ಕೊನೆಗೆ ಜಯವಾಗುವದೆಂಬುದರ ಸೂಚನೆಯಾಗಿದೆ.

ಇವಲ್ಲದೆ – ಶಿವನಾಗಬಯಸಿದ ಫರವೂನನಿಗೆ ಬುದ್ಧಿಕಲಿಸಿದ ಮೂಸಾಹಾರೂನರ ಪದಾ, ಆದಮ್ ಪೈಗಂಬರರು ಭೂಮಿ ಬಿತ್ತಿದ ಪದಾ, ಇಬ್ರಾಹಿಮ್ ಕಲಿಲುಲ್ಲಾರು ಕುರ್‌ಬಾನಿ ನೀಡಿದ ಪದಾ, ಯುನೂಸ್ ಪೈಗಂಬರರ ಪದಾ, ದಾವೂದ ಪೈಗಂಬರರು ನ್ಯಾಯ ನಿಗದಿಸಿದ ಪದಾ – ಮೊದಲಾದವು ಪೂರ್ವದ ಪೈಗಂಬರರ ಜೀವನ ಚಿತ್ರಣ ಹಾಗೂ ಅವರು ತೋರಿದ ಪವಾಡದ ಘಟನೆಗಳನ್ನು ನಿರೂಪಿಸುವವು.

ಮಾಬುಸುಬಾನಿ ಮತ್ತು ಇತರ ಸೂಫಿಸಂತರಿಗೆ ಸಂಬಂಧಿಸಿದ ಪದಗಳು

ಸೂಫಿ ಸಿದ್ಧಾಂತವನ್ನು ವಿಶ್ವದ ಮೂಲೆ ಮೂಲೆಗೂ ಮುಟ್ಟಿಸಿದ ಸಂತರಲ್ಲಿ ಮಾಬುಸುಬಾನಿ, ಜಲಾಲುದ್ದೀನ್ ರೂಮಿ, ಖ್ವಾಜಾ ಮೈನುದ್ದೀನ್ ಚಿಸ್ತಿ, ಹಸನ ಬಸರಿ, ರಾಬಿಯಾ ಬಸರಿ ಖ್ವಾಜಾ ಬಂದಾನವಾಜ, ಖಾದಿರಷಾವಲಿ – ಮುಂತಾದವರು ಪ್ರಮುಖರು. ಇಂಥವರ ಜೀವನ ಚರಿತ್ರೆ ಹಾಗೂ ಇವರು ಮೆರೆದ ಪವಾಡಗಳ ಬಗೆಗೆ ಕೆಲವು ವಿವರಗಳು ಮೊಹರಂ ಪದಗಳಲ್ಲಿ ಬರುತ್ತಿವೆಯಾದರೂ ಹ | ಮಾಬುಸುಬಾನಿಯವರಿಗೆ ಸಂಬಂಧಿಸಿದ ಪದಗಳೇ ಹೆಚ್ಚಾಗಿ ದೊರೆಯುತ್ತವೆ. ಕಾಮುಕ ಹೆಣ್ಣಿಗೆ ಕ್ಷಮಿಸಿದ ಮಾಬುಸುಬಾನಿ, ಸುಂದರಿಯ ಮಾನ ಕಾಪಾಡಿದ ಮಾಬುಸುಬಾನಿ, ಏಳು, ಮಕ್ಕಳ ಫಲಾ ನೀಡಿದ ಮಾಬುಸುಬಾನಿ, ಸತ್ತ ಮದುಮಗನನ್ನು ಬದುಕಿಸಿದ ಪದಾ, ಅಬೂ ಸ್ವಾಲಿಹ ಅವರ ಸೇಬು ಹಣ್ಣಿನ ಪದಾ, ಹಸನ ಬಸರಿ ಮತ್ತು ಚೋಳಿನ ಪದಾ, ರಾಬಿಯಾ ಬಸರಿ ರೊಟ್ಟಿದಾನ ಮಾಡಿದ ಪದಾ – ಇತ್ಯಾದಿ ಮುಖ್ಯವಾದ ಪದಗಳಾಗಿವೆ.

ಹ | ಮುಹ್ಮದ ಪೈಗಂಬರರ ಅಳಿಯಂದಿರರಾದ ಹ | ಅಲಿ ಅವರ ವಂಶಸ್ಥರಾಗಿರುವ ಹ | ಮಾಬುಸುಬಾನಿಯವರ ಮೂಲ ಹೆಸರು ಶೇಖ್ ಅಬ್ದುಲ್‌ಖಾದಿರ್ ಜಿಲಾನಿ ಹಸೈನುಲ್ ಹುಸೇನಿ, ಇರಾಕ್ ದೇಶದ ಜಿಲಾನಿ ಗ್ರಾಮದಲ್ಲಿ ಕ್ರಿ.ಶ. ೧೦೭೮ರಲ್ಲಿ ಜನಿಸಿದ ಮಾಬುಸುಬಾನಿ ಅವರನ್ನು ಜನಸಾಮಾನ್ಯರಿಗಾಗಿ ಅಸಂಖ್ಯಾತ ಪವಾಡಗಳನ್ನು ಮೆರೆದ ಪವಾಡ ಪುರುಷರೆಂದೇ ನಂಬಲಾಗಿದೆ. ಮಕ್ಕಳಿಲ್ಲವೆಂದು ಹಲಬುವ ಹೆಣ್ಣು ಮಗಳೊಬ್ಬಳಿಗೆ ಮಾಬುಸುಬಾನಿಯವರು ಪುತ್ರಫಲಕೊಟ್ಟು ಬದುಕು ಬಂಗಾರ ಮಾಡಿದ ಪದವೊಂದು ಹೀಗಿದೆ.

ಒಬ್ಬ ಹೆಣ್ಣು ಮಗಳು ಬಂಜೆಯ ಶಬುದ ಹೊರಲಾರದೆ ಸಮಾಜದ ಕಟುನುಡಿ ಸಹಿಸಲಾರದೆ ಶರಣರ ಸನ್ನಿದಾನಕ್ಕೆ ಬಂದು ಮಕ್ಕಳ ಫಲಬೇಡಿ ಅವರ ಪಾದ ಹಿಡಿದಳು :

ಮೆಹಬೂಬ ಸ್ವಂತಾ ತಮ್ಮ ಕೈಮುಟ್ಟಿ ಹಸ್ತಾ
ಕೊಟ್ಟ ವಿಭೂತಿ ಕಟ್ಟಿಗೊ ಕೊರಳಾಗ ತಾಯಿತಾ
ಕಳಿಸ್ಯಾರೋ ತುರತಾ ಬಾಲಿಗೆ ಮಾಡಿ ಸನಮಂತಾ
ಪತಿವ್ರತಾ ಹೋದಾಳೊ ನಕ್ಕೊಂತಾ
ಶರಣರ ಭಾಷೆ ಆಗಲಿಲ್ಲ ಹುಸಿ
ಹಡದಾಳೋ ಏಳುಮಕ್ಕಳ ಒಂದೊಂದ ಎಣಿಸಿ
ಸತ್ಯವಂತಕೊಟ್ಟ ಹುಟ್ಟಿಸ್ಯಾನೋ ಭಗವಂತಾ
ಕರಾಮತ್ ಮೆಹಬೂಬ ಶರಣರದು ಪ್ರಖ್ಯಾತಾ.
ಇಸ್ಲಾಂ ತತ್ವಮಹಿಮಾ ಸಾರುವ ಪದಗಳು

ಕರ್ಬಲಾ ಕಾಳಿಗ ನಡೆದುದೇ ಇಸ್ಲಾಂ ಧರ್ಮ ಮತ್ತು ತತ್ವಗಳ ರಕ್ಷಣೆಗಾಗಿ ಅಂತೆಯೇ ಮೊಹರಂ ಪದಗಳಲ್ಲಿ ಧಾರ್ಮಿಕ ಪದಗಳ ಸಮಾವೇಶವಾಗಿದೆ. ಇಸ್ಲಾಂ ಧರ್ಮ ನಿಂತಿರುವುದು ನಂಬುಗೆಯ ಮೇಲೆ ಇದನ್ನು ‘ಇಮಾನ್’ ಎಂದು ಕರೆಯುವರು. ಕುರಾನೇ ಷರೀಫದಲ್ಲಿ ನಂಬುಗೆ ಕುರಿತು ವಿವರಗಳು ಬರುವಂತೆ ಕಲಿಮಾ, ನಮಾಜ, ರೋಜಾ, ಜಕಾತ್ ಹಾಗೂ ಹಜ್ಜಯಾತ್ರೆಗಳ ಬಗ್ಗೆಯೂ ವಿವರಿಸಲಾಗಿದೆ. ನಂಬುಗೆ ಮತ್ತು ಪಂಚಸೂತ್ರಗಳ ನಿರೂಪಣೆ ಮೊಹರಂ ಪದಗಳಲ್ಲಿ ಬರುತ್ತದೆ. ಕಥೆಯೊಂದರ ಮೂಲಕವೇ ತತ್ವ ನಿರೂಪಣೆ ಬಂದಿರುವುದು ಇಲ್ಲಿ ಸಾಮಾನ್ಯ.

ಇಸ್ಲಾಂ ತತ್ವ ಮಹಿಮಾ ಸಾರುವ ಪದಗಳಲ್ಲಿ – ಬಿಸ್ಮಿಲ್ಲಾದ ಮಹತ್ವ ಹೇಳುವ ಪದಾ, ಕಲಿಮಾದ ಮಹತ್ವ ಹೇಳುವ ಪದಾ, ನಮಾಜಿನ ಮಹತಿ ಹೇಳುವ ಪದಾ, ಹಜ್‌ಯಾತ್ರೆಯ ಪದಾ, ಕುರಾನ್‌ದ ಮಹತ್ವ ಹೇಳುವ ಪದ, ಸತ್ತಾಗ ಅಳಬಾರದೆನ್ನುವ ಪದಾ, ಶಬ್ದಾದ ಅರಸನ ಪದಾ, ದಜ್ಯಾಲನ ಮರಣದ ಪದಾ, ಅಬುಶ್ಯಾಮಾನ ಪದಾ, ನಮರೂದ ಅರಸನ ಗರ್ವಭಂಗದ ಪದಾ – ಮುಂತಾದವು ಪ್ರಮುಖವಾಗಿವೆ.

ಇಸ್ಲಾಂ ಧರ್ಮದ ಪಂಚಸೂತ್ರಗಳಲ್ಲಿ ಕೊನೆಯದು ಹಜ್‌ಯಾತ್ರೆ ಅರೇಬಿಯಾದ ಮುಕ್ಕಾ ಮತ್ತು ಮದೀನಾ ಪಟ್ಟಣಗಳಿಗೆ ಯಾತ್ರೆ ಮಾಡಿ ಕಾಬಾ ಸಂದರ್ಶಿಸಿ ವಿಧಿವತ್ತಾದ ಪ್ರಾರ್ಥನೆ ಸಲ್ಲಿಸುವುದೇ ಹಜ್. ಹಜ್‌ಗೆ ಹೋಗಿ ಬಂದವರು ಹಾಜಿಗಳು. ಹಜ್‌ಯಾತ್ರೆ ಮುಸ್ಲೀಮರ ಜೀವನದಲ್ಲಿ ಪವಿತ್ರವಾದ ಕಾರ್ಯ ಹಜ್‌ಯಾತ್ರೆಯಲ್ಲಿ ಕಾಬಾ ಸಂದರ್ಶನ ಬಹಳ ಮುಖ್ಯ.೧೧[10] ಇಂಥ ಪವಿತ್ರ ‘ಕಾಬಾ’ದ ಬಗೆಗೆ ಅಪನಂಬಿಕೆ ನಿಂದೆ ಸಲ್ಲದು. ಈ ಆಶಯ ಸ್ಪಷ್ಟಪಡಿಸುವ ಮೊಹರಂ ಪದವೊಂದು ಇಂತಿದೆ.

ಪ್ರತಿವರ್ಷ ಜಿಲ್‌ಹಜ್ ತಿಂಗಳ ಮಕ್ಕಾಯಾತ್ರೆಗೆ ಹೋಗುವ ಮುಸಲ್ಮಾನರನ್ನು ಕಂಡು ಅಬ್ರಾಹಮ್ ಅರಸನು ತನ್ನ ದೇಶದಲ್ಲಿಯೇ ಹಜ್‌ಯಾತ್ರೆ ನಡೆಯುವಂತೆ ಮಾಡಲು ಬಯಸಿ ಸಾಕಷ್ಟು ಹಣ ಸುರಿದು ಮತ್ತೊಂದು ಕಾಬಾ ಕಟ್ಟಿಸಿದನು. ಮಕ್ಕೆಗೆ ಹೋಗುವುದನ್ನು ಬಿಟ್ಟು ಇಲ್ಲಿ ಹಜ್ ಮಾಡಬೇಕೆಂದು ಆಜ್ಞಾಪಿಸಿದನು. ಯರೊಬ್ಬರು ಅವನ ಆಜ್ಞೆಗೆ ಕಿವಿಗೊಡಲಿಲ್ಲ. ಕರಕರ ಹಲ್ಲುಕಡಿಯುತ್ತ ಮಕ್ಕೆಯಲ್ಲಿರುವ ಕಾಬಾದ ಕಟ್ಟಡ ಕೆಡುವಲು ಸಿದ್ಧನಾದನು.

ಅಬ್ರಹಾಮನ ಕಾರ್ಯವೈಖರಿ ಕಂಡ ಸೃಷ್ಟಿಕರ್ತ ‘ಕಾಬಾ’ ರಕ್ಷಣೆಮಾಡಲು ಸಾವಿರಗಟ್ಟಲೇ ‘ಅಬಾಬಿಲ’ ಎಂಬ ಪಕ್ಷಿಗಳನ್ನು ಕಳಿಸಿಕೊಟ್ಟ ಒಂದೊಂದು ಪಕ್ಷಿಯ ಬಳಿ ಅಸಾಧಾರಣ ಶಕ್ತಿಯ ಮೂರು ಮೂರು ಹರಳುಗಳಿದ್ದವು.

ಚನ್ನಂಗಿ ಪ್ರಕಾರ ಒಂದು ಬಾಯಾಗ ಎರಡು ಕಾಲಾಗ
ಎರಡು ಒಗುತ್ತಿದ್ದವು ಒಗದಾಂಗ ಬಂದೂಕ ಗುಂಡಾ
ನೆತ್ತಿಗೆ ಬಡದು ಬೆನ್ನಲ್ಲೇ ಪಾರಾಗಿ ಹೋಗುವ ಪ್ರಾಣಾ
ಇದರಂತೆ ಅಬ್ರಾಹಮನ ದಂಡು ಸತ್ತಿತ ಹತ್ತಲಿಲ್ಲ ಒಂದು ಕ್ಷಣಾ
ನೋಡಿ ಅರಸ ಓಡಿಹ್ವಾದಾ ಕಾಬಾ ಬಿಟ್ಟ
ಅಷ್ಟರಲ್ಲಿ ಒಂದ ಬಂತ ಅಬಾಬಿಲ ಅವನ ಮನಿತನಾ
ಗಾಬಾಗಿ ಅರಸ ಮಂದೀಗೆ ಅಂದಾ ಇದರಂತೆ ಮರಣಾ
ಹಳ್ಳ ಒಗೀತ ಅರಸಗ ಅಬಾಬಿಲಾ
ನೆತ್ತಿಗೆ ಬಡದು ಸತ್ತಾನ ಅಬ್ರಾಹಮ ಮಾಡಿ ದುರ್ಗುಣಾ

ಅಲ್ಲಾಹನ ಆಜ್ಞೆ ನೆರವೇರಿಸಲು ಜಿಬ್ರಾಯಿಲರು ಬರುವುದು ಸಾಮಾನ್ಯ ಆದರೆ ಆ ಕಾರ್ಯವನ್ನು ‘ಅಬಾಬಿಲ್’ ಪಕ್ಷಿಗೆ ವಹಿಸಿ ಅದರ ಹತ್ತರಿರುವ ಹರಳಿಗೆ ಅಸಾಮಾನ್ಯ ಶಕ್ತಿ ಬರಿಸಿ ಧರ್ಮದ ದಾರಿಗೆ ಅಡ್ಡಗಲ್ಲಾಗಿ ನಿಂತ ಅಬ್ರಾಹಮ ಅರಸನನ್ನು ನಾಶಮಾಡಿದುದು ಈ ಪದದ ವಿಶೇಷತೆ. ಈ ಪದ ಕಾಬಾದ ದರ್ಶನದ ಮಹತಿಯನ್ನು ಸೂಚಿಸುವ ಜೊತೆ ಮತ್ತೊಂದೆಡೆ ಕಾಬಾ ಕಟ್ಟಿಸುವುದು ಸಲ್ಲ ಎಂಬ ನಂಬಿಕೆಯನ್ನು ತಿಳಿಸುತ್ತದೆ.

ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದ ಸವಾಲ್ಜವಾಬ್ ಪದಗಳು

ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ರಿವಾಯಿತ ಪದಗಳನ್ನು ಹಾಡುವ ಮೇಳಗಳು ಇವೆ. ಈ ಮೇಳಗಳು ಮೊಹರಂ ಹಬ್ಬಕ್ಕಿಂತ ಮೊದಲೇ ತಾಲೀಮು ಮಾಡಲು ಪ್ರಾರಂಭಿಸುತ್ತವೆ. ಉತ್ತಮವಾಗಿ ಹಾಡುವ ತಂಡದವರನ್ನು ಸುತ್ತಮುತ್ತಣ ಹಳ್ಳಿಯವರು ವೀಳೆಯಕೊಟ್ಟು ಆಮಂತ್ರಿಸಿ ಹಾಡಿಸುವರು. ಒಮ್ಮೊಮ್ಮೆ ಒಂದಕ್ಕಿಂತ ಹೆಚ್ಚು ತಂಡದವರನ್ನು ಕರೆಯಿಸಿ ಹಾಡಿಸಿ ಗೆದ್ದ ಮೇಳಕ್ಕೆ ಬಹುಮಾನ ಕೊಡುವರು. ಹೂಹಾರ ಹಾಕಿ ಗೌರವಿಸುವರು. ಇಂಥ ಸಂದರ್ಭದಲ್ಲಿ ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದ ಸವಾಲ್-ಜವಾಬ್ ಪದಗಳನ್ನು ಹಾಡುತ್ತಿದ್ದರೆಂದು ಹೇಳಲಾಗುತ್ತದೆ. ಆದರೆ ಈಗ ಅದು ರೂಢಿಯಲ್ಲಿಲ್ಲ.

ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದ ಸವಾಲ್ ಜವಾಬ್ ಪದಗಳು ಪೈಗಂಬರರ ಜೀವನಕ್ಕೆ, ಇಸ್ಲಾಂ ಧರ್ಮಕೆ, ಕರ್ಬಲಾ ಕಾಳಗಕ್ಕೆ, ಖಲೀಫರಿಗೆ ಸಂಬಂಧಿಸಿದ ಕಥಾವಸ್ತುಗಳನ್ನು ಕುರಿತಾಗಿರುತ್ತವೆ. ಸ್ಪರ್ಧೆಗೆ ಬಂದ ಮೇಳಗಳು ಪ್ರಾರಂಭದಲ್ಲಿ ಸಲಾಮಿ ಪದ ಹೇಳಿ ಅನಂತರ ಸವಾಲು ಪದ ಜವಾಬು ಪದ ಹಾಡುವರು. ಹಾಡುಗಾರರು ಮುಮ್ಮೇಳದಲ್ಲಿ ಇಬ್ಬರಿದ್ದರೆ ಹಿಮ್ಮೇಳದಲ್ಲಿ ನಾಲ್ಕೈದು ಜನರಿದ್ದು ನುಡಿಗಳ ಕೊನೆಯ ಸಾಲನ್ನು ಏರುಧ್ವನಿಯಲ್ಲಿ ಹೇಳುವರು.

ಇಸ್ಲಾಂ ಧರ್ಮ ಕುರಿತು ಸವಾಲು-ಜವಾಬು ಪದಗಳಲ್ಲಿ – ಅಯ್ಯುಬರ ಹೆಂಡರ ಹೆಸರು ಹೇಳೋ? ಪದಾ, ಯಾವ ಪೈಗಂಬರರ ಹೆಂಡತಿ ಮೊದಲು ಜಡಿ ಹಾಕ್ಯಾರೋ ಎಂದು ಕೇಳುವ ಪದ – ಇತ್ಯಾದಿಗಳು ಮುಖ್ಯವಾದವು

ಶಬ್ದಾದ ಅರಸನ ಸ್ವರ್ಗದ ಜವಾಬು ಪದಾ ಧಾರವಾಡ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ಪ್ರಸಿದ್ಧವಾಗಿದ್ದು ಅದು ಹೀಗೆ ಮುಕ್ತಾಯವಾಗುತ್ತದೆ.

ಶಬ್ದಾದನ ಸ್ವರ್ಗ ನಾಲ್ವತ್ತು ಫರಲಾಂಗ ಓದಿ ನೋಡಿಕೋ ಹೋಗಿ
ನಾಲ್ಕು ಸಾವಿರ ಗೌಂಡೆರ ಕೂಡಿ ಕಟ್ಟುತಿದ್ದರೋ ತೂಕಾಮಾಡಿ
ಒಬ್ಬೊಬ್ಬನ ಕೈಯಾಗ ನೂರುಮಂದಿ ಓಡ್ಯಾಡಿ ದುಡುತ್ತಿದ್ದರೋ ಚನ್ನಾಗಿ
ಹನ್ನೊಂದು ವರ್ಷಕ ಪೂರಾ ಸ್ವರ್ಗಾತೋ ನೋಡೋ ತಯ್ಯಾರಾ

ಮೊಹರಂ ಹಬ್ಬದ ಸಂದರ್ಭದಲ್ಲಿಯಲ್ಲದೆ ಕೆಲವು ಪ್ರಾದೇಶಿಕ ಉರುಸುಗಳಲ್ಲಿ ಈ ಸವಾಲ್-ಜವಾಬ್ ಪದಗಳನ್ನು ಆಗಾಗ ಹಾಡುವುದುಂಟು. ಆಗ ಹಾಡುಗಾರರು ರಿವಾಯಿತ ದಾಟಿಯ ಸವಾಲ್ ಜವಾಬ್ ಪದಗಳ ಜೊತೆಗೆ ಇತ್ತೀಚಿನ ಕವಿಗಳು ರಚಿಸಿದ ಪದಗಳನ್ನು ಹಾಡುವರು. ಯಾವ ಪೈಗಂಬರ ಸತಿಯು ಮೊದಲು ಜಡಿಯ ಹಾಕ್ಯಾರೋ ಎನ್ನುವ ಸವಾಲು ಪದ ಇದಕ್ಕೆ ಒಂದು ಉದಾಹರಣೆಯಾಗಿದೆ. ಪದದಲ್ಲಿ ಬರುವ ಸವಾಲು ಹೀಗಿದೆ :

ಯಾವ ಪೈಗಂಬರ ಸತಿಯು ಮೊದಲು ಜಡಿಯ ಹಾಕ್ಯಾರೋ ನೀಟಾ
ಶಾಸ್ತ್ರ ಹಿಡಿದು ಸವಾಲು ಒಡಿಯೋ ಕಟ್ಟಿ ಇಟ್ಟಂಗಿ ಗಂಟಾ
ಒಡೆದು ಒಯ್ಯೋ ಇಲ್ಲಿ ನೋಟಾ ಇಲ್ಲಂದರ ಬೀಳತಾವೋ ಏಟಾ
ಸಣ್ಣ ಸವಾಲು ಒಡಿದರ ಕೊಡತೇನಿ ತಿನ್ನಾಕ ಬಿಸ್ಕೀಟಾ

– ಈ ರೀತಿ ಮುಂಡರಗಿ, ಬಾಗಲಕೋಟೆ ಹಾಗೂ ಇತರ ಪ್ರದೇಶಗಳಲ್ಲಿ ಸವಾಲ-ಜವಾಬ್ ಪದಗಳನ್ನು ಹಾಡುತ್ತಾರೆ.

ಮೊಹರಂ ಸಂದರ್ಭದಲ್ಲಿ ಇಸ್ಲಾಂ ಧರ್ಮ, ತತ್ವ ಅದರಲ್ಲಿ ಆಗಿಹೋದ ಮಹಾಪುರುಷರು, ಕರ್ಬಲಾ ಕಾಳಗ – ಇತ್ಯಾದಿಗಳಿಗೆ ಸಂಬಂಧಿಸಿದ ಹಾಡುಗಳನ್ನು ಹಾಡುವ ಜೊತೆಗೆ ಇಸ್ಲಾಮಿಗೆ ಸಂಬಂಧಿಸಿದ ಹಾಡುಗಳನ್ನು ಹಾಡುವುದುಂಟು. ಇದಕ್ಕೆ ಮುಖ್ಯಕಾರಣ ಇಸ್ಲಾಮೇತರರೂ ಯಾವ ಭೇದ ಭಾವವಿಲ್ಲದೆ ಮೊಹರಂ ಆಚರಣೆಯಲ್ಲಿ ಭಾಗವಹಿಸುವರು. ಇಸ್ಲಾಮೇತರ ಇಂತಹ ಪದಗಳನ್ನು ೧) ಹಿಂದೂ ಧರ್ಮದ ಭಕ್ತಿ ಪದಗಳು, ೨) ಪೌರಾಣಿಕ ಪದಗಳು ೩) ಐತಿಹಾಸಿಕ ಪದಗಳು ೪) ಸಾಮಾಜಿಕ ಪದಗಳು ೫) ಸವಾಲ್-ಜವಾಬ್ ಪದಗಳು; ಇತರ ಪದಗಳು ಎಂದು ವರ್ಗೀಕರಿಸಬಹುದು. ಈ ಪದಗಳು ಹಿಂದೂ-ಮುಸ್ಲಿಂ ಭಾವೈಕ್ಯದ ಬೆಸುಗೆಯಾಗಿ ಕರ್ನಾಟಕದಲ್ಲಿ ರೂಢಿಯಲ್ಲಿವೆ.

ಐತಿಹಾಸಿಕ ಪದಗಳು

ದೇಶದ ಸ್ವಾತಂತ್ರ್ಯಕ್ಕಾಗಿ, ಪರಕೀಯರ ಆಕ್ರಮಣವನ್ನು ತಡೆಯುವುದಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಂಡ ಐತಿಹಾಸಿಕ ವ್ಯಕ್ತಿಗಳ ಸುತ್ತ ಹೆಣೆದ ಪದಗಳನ್ನು ಮೊಹರಂ ಹಬ್ಬದ ಸಂದರ್ಭದಲ್ಲಿ ಹಾಡುತ್ತಾರೆ. ಈ ಐತಿಹಾಸಕ ವ್ಯಕ್ತಿಗಳಲ್ಲಿ ಇತ್ತೀಚಿನವರೂ ಇದ್ದಾರೆ. ಇಂತಹ ಪದಗಳು ಲಾವಣಿ ಪದಗಳಲ್ಲಿ ಸೇರ್ಪಡೆಯಾದರೂ ಮೊಹರಂ ಸಂದರ್ಭದಲ್ಲಿ ಹಾಡುವುದರಿಂದ ಅವುಗಳನ್ನು ಇಲ್ಲಿ ಎತ್ತಿಕೊಂಡಿದೆ. ಇವುಗಳಲ್ಲಿ – ಸಿಂಧೂರ ಲಕ್ಷ್ಮಣನ ಪದಾ, ನೆಹರೂರ ಮರಣದ ಪದಾ, ದೊಡ್ಡಮೇಟಿ ಅಂದಾನಪ್ಪನವರ ಪದಾ – ಮುಂತಾದವು ಪ್ರಮುಖವಾದವು.

ತಮ್ಮ ಧೈರ್ಯ ಸಾಹಸಗಳಿಂದ ಜನಪದ ಕವಿಗಳ ಎದೆಯನ್ನು ಮುಟ್ಟಿ ತಟ್ಟಿದ ಕೆಲವು ಜನ ವೀರ ಪುರುಷರ ಪದಗಳು ಕನ್ನಡದಲ್ಲಿ ದೊರೆಯುತ್ತವೆ. ಅವರು ಜನಸಾಮಾನ್ಯರಿಂದ ಎದ್ದು ಬಂದವರು  ಅವುಗಳಲ್ಲಿ ಸಿಂಧೂರ ಲಕ್ಷ್ಮಣನ ಪದವೂ ಒಂದು ಮೊಹರಂ ಆಚರಣೆಯ ಸಂದರ್ಭದಲ್ಲಿ ಅದನ್ನು ಹಾಡಲಾಗುತ್ತದೆ.

ಸಿಂಧೂರ ಲಕ್ಷ್ಮಣನ ರೂಪ ಮತ್ತು ಸಾಹಸದ ವರ್ಣನೆ ಮಾಡುತ್ತ ಪದವು ಮುಂದುವರೆಯುತ್ತದೆ. ಅನಂತರ ಲಕ್ಷ್ಮಣನ ಕುಲ, ಸೌಂದರ್ಯ, ಶಕ್ತಿ, ಶೌರ‍್ಯ ಇತ್ಯಾದಿಗಳನ್ನು ಎಳೆ-ಎಳೆಯಾಗಿ ಬಿಚ್ಚಿಹೇಳುತ್ತಾ ಪದಾ ಮುಂದುವರಿಯುತ್ತದೆ. ಮುಂದೆ ಗೌಡ, ಧನಿ ಮತ್ತು ಸಿಂಧೂರಲಕ್ಷ್ಮಣರ ಮಧ್ಯ ವೈಮನಸ್ಸುಂಟಾಗಿ ಅವರಿಂದ ಲಕ್ಷ್ಮಣನು ಸಿಡಿದು ನಿಂತು ದರೋಡೆ ಮಾಡಲಾರಂಭಿಸುತ್ತಾನೆ. ಇಲ್ಲಿಂದ ಲಕ್ಷ್ಮಣನ ವೀರಜೀವನ ಪ್ರಾರಂಭವಾಗುತ್ತದೆ. ಬ್ರಿಟಿಷ ಸರಕಾರ ‘ವಾರಂಟು’ ಹೊರಡಿಸಿ ಅವನನ್ನು ಹಿಡಿದು ಜೇಲಿಗೆ ಹಾಕುತ್ತದೆ.

ರಾತ್ರೋರಾತ್ರಿ ಜೇಲುಮುರಿದು ಹೊರಬಿದ್ದ ಲಕ್ಷ್ಮಣನೂ ಅವನ ಸಂಗಡಿಗರೂ ತಮ್ಮ ಬೆನ್ನು ಹತ್ತಿದ ಪೋಲೀಸರಿಗೆ ಕವಣಿಕಲ್ಲು ಬೀಸಿಪಾರಾಗಿ ಮುಧೋಳಕ್ಕೆ ಬರುತ್ತಾರೆ. ಮುಧೋಳ ಸರಕಾರ ಅವರನ್ನು ಹಿಡಿಯಲು ಮಾಡಿದ ಪ್ರಯತ್ನಗಳೆಲ್ಲ ವಿಫಲವಾಗುತ್ತವೆ. ಬ್ರಿಟೀಷ ಸರಕಾರ ಲಕ್ಷ್ಮಣ ಮತ್ತು ಅವನ ಸಂಗಡಿಗರನ್ನು ಹುಡುಕಿ ತರಲು ಪೋಲೀಸರನ್ನು ಕಳುಹಿಸುತ್ತದೆ. ಮಾರುವೇಷದಲ್ಲಿ ಹೊರಟ ಪೋಲೀಸರು ಅಲ್ಲಲ್ಲಿ ಹುಡಕಾಡಿ ಅವರಿವರಿಂದ ವಿಷಯ ಸಂಗ್ರಹಿಸಿ ಲಕ್ಷ್ಮಣ ಇರುವ ಸ್ಥಳಕ್ಕೆ ಬರುತ್ತಾರೆ.

ಪೋಲೀಸ ಸಾಹೇಬರಾ ಮನಿ ಸುತ್ತ ಹಾಕಿ ಗೇರಾ
ಮಾಡ್ಯಾರೋ ಗೋಲಿಯ ಬಾರಾ ಜನರೆಲ್ಲಾ
ಬಸ್ಯಾ ಎಂಬುವ ಶೂರಾ ಪೋಲೀಸರ ಮ್ಯಾಲೆ ಪೈರಾ
ಮಾಡ್ಯಾನೋ ಎರಡು ಬಾರಾ ಬಡಿಲಿಲ್ಲಾ
ಶೂರ ಮನ್ನಾ ಸಾಹೇಬಾ ಬಸ್ಯಾಗ ಇಟ್ಟಾನೋ ನೆದರಾ
ಮಾಡ್ಯಾನೋ ಒಬ್ಬಗ ಪೈರಾ ಸತ್ತಾನಲ್ಲಾ
ಪೋಲೀಸ ಜನರಾ ಗೋಲಿಯ ಬಾರಾ ಅಳತಿ ಇದ್ದಿದಿಲ್ಲಾ
ಅದರಾಗ ತಪ್ಪಿಸಿ ಹ್ವಾದಾನೋ ಓಡಿ ಲಕ್ಷ್ಯಾ ಸಿಗಲಿಲ್ಲಾ.

ಪೋಲೀಸರಿಂದ ಬಚಾವಾದ ಲಕ್ಷ್ಮಣ ಮತ್ತು ಅವನ ಜೊತೆಗಾರರು ಹುಲ್ಯಾಳ ದರೋಡೆ ಮಾಡಿ ತೆಗ್ಗಿ ನಾಯಕನಲ್ಲಿ ಆಶ್ರಯ ಪಡೆಯುತ್ತಾರೆ. ಸರಕಾರದವರು ಪಿತೂರಿಮಾಡಿ ತೆಗ್ಗಿನಾಯಕನಿಂದ ಲಕ್ಷ್ಮಣನನ್ನು ಹಿಡಿಯುವಲ್ಲಿ ಸಫಲರಾಗುತ್ತಾರೆ.

ಸಿಂಧೂರ ಲಕ್ಷ್ಮಣನ ಶೌರ್ಯ ಸಾಹಸವನ್ನು ಜನಪದ ಕವಿ ಈ ಪದದಲ್ಲಿ ಸಶಕ್ತವಾಗಿ ವರ್ಣಿಸಿದ್ದಾನೆ. ‘ಇಂಗ್ರೇಜಿ ಸರಕರ ಕೈಯಾಗ ಯಾರು ಪಾರಾಗುವರಿಲ್ಲಾ’ ಎನ್ನುವ ಮಾತು ಅಂದಿನ ಜನಸಾಮಾನ್ಯರ ಅಭಿಪ್ರಾಯವನ್ನು ಬಿಂಬಿಸುತ್ತದೆ.

ಸಾಮಾಜಿಕ ಪದಗಳು

ಲಾವಣಿಶಿಲ್ಪದಲ್ಲಿ ರಚಿತವಾದ ಸಾಮಾಜಿಕ ಕಥಾವಸ್ತುವುಳ್ಳ ಪದಗಳನ್ನು ಮೊಹರಂ ಹಬ್ಬದಲ್ಲಿ ಹಾಡುವುದುಂಟು. ಇವುಗಳಲ್ಲಿ ಮೊಹರಂ ಹಬ್ಬಕ್ಕೆ ಸಂಬಂಧಿಸಿದ ಯಾವ ಅಂಶಗಳು ದೊರೆಯುವುದಿಲ್ಲ. ಹೆಚ್ಚೆಂದರೆ ಇಸ್ಲಾಂ ಮತದ ಹೆಸರು, ಇಸ್ಲಾಂ ಪರಿವೇಷತೊಟ್ಟ ಕೆಲವು ಶಬ್ದಗಳು ಮಾತ್ರ ಸಿಗುತ್ತವೆ. ಕೆಲವೊಂದು ಪದಗಳಲ್ಲಿ ಅದ್ಭುತ, ಅಲೌಕಿಕ ಘಟನೆಗಳು ನುಸುಳಿಕೊಂಡಿವೆ. ಸಮಾಜದಲ್ಲಿಯ ಸುಖ-ದುಃಖ ಕಂಡುಂಡ ಕವಿ ತನಗೆ ಒಗ್ಗುವ ರೀತಿಯಲ್ಲಿ ರೂಢಿಯಲ್ಲಿರುವ ಶಬ್ದಗಳನ್ನೇ ಇವುಗಳಲ್ಲಿ ಬಳಸಿದ್ದಾನೆ. ಈ ಪದಗಳು ಕೇಳುಗರ ಹೃದಯವನ್ನು ನೇರವಾಗಿ ತಲುಪಬಲ್ಲವು. ಅಂತೆಯೇ ಮೊಹರಂ ಹಬ್ಬದಲ್ಲಿ ಇವುಗಳನ್ನು ಹಾಡುತ್ತಿರಬಹುದು. ಇವುಗಳ ಉದ್ದೇಶ ನೀತಿಬೋಧೆಯಾಗಿರುವುದರಿಂದಲೂ ಇವು ಜನಪದರ ಸಮಸ್ಯೆಗಳಿಗೆ ನಿರೂಪಿಸುವುದರಿಂದಲೂ ಮೊಹರಂ ಹಬ್ಬದಲ್ಲಿ ಇವನ್ನು ಹಾಡುತ್ತಿರಬೇಕು.

ಸಾಮಾಜಿಕ ಪದಗಳು ಕುಟುಂಬ ಜೀವನವನ್ನೊಳಗೊಂಡಂತೆ ಸಮಕಾಲೀನ ಬದುಕಿನ ನೈಜ ಚಿತ್ರಣವನ್ನು ಬಿಡಿಸಿ ಹೇಳುತ್ತವೆ. ದಾಂಪತ್ಯ ಜೀವನ, ಅತ್ತೆ ಸೊಸೆಯರ – ಸಂಬಂಧ ಸವತಿ ಮಾತ್ಸರ್ಯ, ತಾಯಿ ಮಕ್ಕಳ ಮಮತೆ, ಅಣ್ಣ ತಂಗಿಯರ ವಾತ್ಸಲ್ಯ ಮುಂತಾದ ವಿವಿಧ ಬಗೆಯ ಭಾವ ಭಾವನೆಗಳನ್ನು ಕಾಮದ ಕ್ರೌರ್ಯ, ಹಣದ ಪ್ರಭಾವ, ಮೂಢನಂಬಿಕೆ ಇತ್ಯಾದಿಗಳಿಂದ ಹುಟ್ಟಿಕೊಳ್ಳುವ ಸಮಸ್ಯೆಗಳನ್ನು ವಿವರಿಸಿ ಹೆಚ್ಚಾಗಿ ಸುಖಾಂತವಾಗಿ ಮುಕ್ತಾಯಗೊಳ್ಳುತ್ತವೆ. ಇಂತವುಗಳಲ್ಲಿ – ಅಣ್ಣ ತಂಗಿಯ ಪದಾ, ಗಂಡನಿಗೆ ಮೋಸಮಾಡಿದ ಹೆಣ್ಣಿನ ಪದಾ ಪ್ರಮುಖವಾದವು.

ಜನಪದ ಸಾಹಿತ್ಯದಲ್ಲಿ ಪ್ರಸಿದ್ಧವಾಗಿರುವ ಅಣ್ಣ-ತಂಗಿಯ ಕಥೆ ಉತ್ತರಕರ್ನಾಟಕದಲ್ಲಿ ಹೆಣ್ಣುಮಕ್ಕಳ ಹಾಡಾಗಿ, ಲಾವಣಿ ಪದವಾಗಿ, ಮೊಹರಂ ಪದವಾಗಿ ರೂಢಿಯಲ್ಲಿದೆ. ದಕ್ಷಿಣ ಕರ್ನಾಟಕದ ದೊಂಬಿದಾಸರು ಕೂಡ ಇಂಥ ಕತೆ ಹಾಡುತ್ತಾರೆ. ಪ್ರದೇಶ, ಕಾಲ, ಕವಿ, ಹಾಡುಗಾರ ಏನೇ ವ್ಯತ್ಯಾಸವಾದರೂ ಕಥಾವಸ್ತುವಿನ ಹೂರಣ ಮಾತ್ರ ಹಾಗೆ ಉಳಿದಿದೆ. ಪ್ರಸ್ತುತ ಅಣ್ಣ ತಂಗಿಯರ ಪದ ಬೆಳಗಾಂವ ಜಿಲ್ಲೆಯ ರಾಮದುರ್ಗ ತಾಲ್ಲೂಕಿನಲ್ಲಿ ದೊರೆತಿದ್ದು ಅದು ಹೀಗಿದೆ :

ಒಬ್ಬ ಬಡವನಿಗೆ ಒಂದು ಗಂಡು ಒಂದು ಹೆಣ್ಣು ಇಬ್ಬರು ಮಕ್ಕಳು. ತಾಯಿ ತಂದೆ ಅವರನ್ನು ಪ್ರೀತಿಯಿಂದ ಬೆಳೆಸಿದರು ಪ್ರಾಯಕ್ಕೆ ಬಂದ ಮಗಳ ಸೌಂದರ್ಯ ನೋಡಿ ಒಂದು ಶ್ರೀಮಂತ ಮನೆತನ ಸಾಕಷ್ಟು ಆಭರಣಹಾಕಿ ಅವಳನ್ನು ತಮ್ಮ ಮನೆಯ ಸೊಸೆಯನ್ನಾಗಿ ಮಾಡಿಕೊಂಡರು. ಗಂಡನ ಮನೆಯಲ್ಲಿ ಅವಳು ಸುಖದಿಂದ ಸಂಸಾರ ಮಾಡುತ್ತಿದ್ದಳು. ಪಂಚಮಿಹಬ್ಬ ಬರಲು ತಾಯಿ ತಂದೆಗಳಿಗೆ ಮಗಳ ನೆನಪಾಯಿತು. ತಂಗಿಯನ್ನು ಕರೆದುಕೊಂಡು ಬರಲು ಮಗನಿಗೆ ತಿಳಿಸಿದರು. ಗಂಡನ ಮನೆಯವರು ಬೆಳ್ಳಿ ಬಂಗಾರದ ದಾಗೀನು ಹಾಕಿ, ಜರದಮಡಿ ಉಡಿಸಿ ಪ್ರೀತಿಯಿಂದ ಸೊಸೆಯನ್ನು ಅವಳ ಅಣ್ಣನ ಜೊತೆ ಕಳುಹಿಸಿಕೊಟ್ಟರು. ತಂಗಿಯ ಮೈಮೇಲಿನ ಆಭರಣ ರಾಶಿಕಂಡು ಅಣ್ಣ ಬೆಕ್ಕಸ ಬೆರಗಾದ. ಅರ್ಧ ದಾರಿ ಕ್ರಮಿಸಿದ ಮೇಲೆ :

ಹಿಂದ ಮುಂದ ಮಂದಿಯ ನೊಡಿ ಇಳಿಸ್ಯಾನೋ ತಂಗಿಯನಾ
ಮೈಮ್ಯಾಲಿನ ದಾಗೀನಾ ಬಿಚ್ಚಂತಾ ಹಿಡಿದಾನೋ ರಟ್ಟಿಯನಾ
ಬಿಚ್ಚಾನೋ ದಾಗೀನಾ ಕೆಡವಿ ತಂಗಿಯನಾ
ಕೈಕಾಲ ಕಟ್ಟಿ ಬಿಗಿದಾನೋ ಕೊಲ್ಲುದಕ ತಂಗಿಯನಾ
ಕೊಲ್ಲುದಕ ತೆಕ್ಕಿಹಾಕಿ ನೆಗವಿದ ಕಲ್ಲವನಾ
ಸರ್ಪ ಕಚ್ಚಿ ಬಿದ್ದ ಬಳಲತಾನೋ ಒಂದೇ ಸವನಾ

ಕೈಕಾಲು ಬಿಚ್ಚಿಕೊಂಡು ಎದ್ದು ಬಂದ ತಂಗಿ ಅಣ್ಣನನ್ನು ತೆಕ್ಕಿಬಿದ್ದು ಕಣ್ಣೀರಿಟ್ಟಳು! ಅಣ್ಣನ ಪ್ರಾಣಾ ಉಳಿಸೋ ಭಗವಾನಾ ಮೈಮ್ಯಾಲಿನ ದಾಗೀನಾ ಮಾಡುವೆ ದಾನಾ’ ಎಂದು ಪರಿಪರಿಯಾಗಿ ಬೇಡಿಕೊಂಡಳು. ಆರ್ತನಾದ ಅರಣ್ಯರೋಧನವಾಗಲು ಗಿಡಕ್ಕೆ ಹಗ್ಗಕಟ್ಟಿ ಉರುಲು ಹಾಕಿಕೊಂಡು ಪ್ರಾಣಬಿಡಲು ಮುಂದಾದಳು. ಬಾಲಿಯ ಭಕ್ತಿಗೆ ಮೆಚ್ಚಿದ ಶಿವ ತನ್ನ ರೂಪ ಬದಲಿಸಿಕೊಂಡು ಧರೆಗಿಳಿದ ಸತ್ತ ಅಣ್ಣನನ್ನು ಬದುಕಿಸಿ ಅಣ್ಣ-ತಂಗಿಯರನ್ನು ಕೂಡಿಸಿ ಮಾಯವಾದ.

ತನ್ನನ್ನೇ ಕೊಲ್ಲಲು ಮುಂದಾದ ಅಣ್ಣ ಸರ್ಪಕಚ್ಚಿಬಿದ್ದಾಗ ತುಟಿಗಲ್ಲ ಹಿಡಿದು ಅಳುವ ತಂಗಿಯ ಭ್ರಾತೃವಾತ್ಸಲ್ಯ ಓದುಗರ ಮನವನ್ನು ಕರಗಿಸುವಂತಹದು. ಕತೆಯ ಕೊನೆಯ ಭಾಗದಲ್ಲಿ ತಂಗಿಯ ಬೇಡಿಕೆಯಂತೆ ಅಣ್ಣನನ್ನು ಶಿವ ಬದುಕಿಸುವ ಪ್ರಸಂಗ ಭಕ್ತರನ್ನು ಶಿವ ರಕ್ಷಿಸುವನೆಂಬ ಜನಪದರ ಗಟ್ಟಿ ನಂಬಿಕೆಯನ್ನು ಸೂಚಿಸುತ್ತದೆ. ತಾಮ್ರದ ದುಡ್ಡು ತಾಯಿಮಕ್ಕಳನ್ನು ಕೆಡಿಸುತ್ತದೆಂಬ ನಾಣ್ಣುಡಿ ಜನಪದರಲ್ಲಿ ರೂಢಿಯಲ್ಲಿದೆ. ಇಲ್ಲಿ ಅದು ಅಣ್ಣನ ಮನಸ್ಸನ್ನು ಕೆಡಿಸಿದ್ದರೆ ಆಶ್ಚರ್ಯಪಡಬೇಕಿಲ್ಲ.

ಇಸ್ಲಾಮೇತರ ಧರ್ಮಕ್ಕೆ ಸಂಬಂಧಿಸಿದ ಸವಾಲ್ಜವಾಬ್ ಪದಗಳು

ಇಸ್ಲಾಮೇತರ ಧರ್ಮಕ್ಕೆ ಸಂಬಂಧಿಸಿದ ಸವಾಲ್-ಜವಾಬ್ ಪದಗಳು ಯಾವುದೇ ವಿಷಯಕ್ಕೆ ಸಂಬಂಧಿಸಿದ ಒಂದು ಪ್ರಶ್ನೆಯನ್ನೋ, ಸಮಸ್ಯೆಯನ್ನೋ ಮುಂದಿಟ್ಟು ಅದಕ್ಕೆ ಉತ್ತರವನ್ನು ಅಪೇಕ್ಷಿಸುವ ರೀತಿಯವಾಗಿವೆ. ಇವು ಕಲ್ಗಿ ತುರಾಯಿ ಅಥವಾ ಹರದೇಶಿ ನಾಗೇಶಿ ಪದಗಳ ತರಹವೇ ಇದ್ದು ಏರು, ಇಳುವು, ಖ್ಯಾಲ, ಅಂತ್ಯಪ್ರಾಸ, ಹೊಂದಿರುತ್ತವೆ. ಕೇಳುಗರಲ್ಲಿ ಕುತೂಹಲವನ್ನು ಕೆರಳಿಸಿ ಅವರ ಮನಸ್ಸನ್ನು ಆಕರ್ಷಿಸುವ ಇಂತಹ ಪದಗಳನ್ನು ಮೊಹರಂ ಸಂದರ್ಭದಲ್ಲಿ ಹಾಡುವುದು ಸಹಜವೇ ಆಗಿದೆ. ಇವುಗಳಲ್ಲಿ – ಕಲ್ಲ ನೀರಮ್ಯಾಲೆ, ನಾಯಿ ಮುಗಿಲಮ್ಯಾಲೆ, ಗಿಡದ ಹೆಸರು ಹೇಳಬೇಕೋ? ಕೂಸು ಎಲ್ಲಿ ಹೋತೋ? ಬ್ರಾಹ್ಮಣ ಸತ್ತದೋಷ ಯಾರಿಗೆ ಬಂತೋ, ೩೬೦ ಹೆಂಡಿರ ಗಂಡನ ಹೆಸರು ಹೇಳುವ ಪದಾ – ಮುಂತಾದವುಗಳನ್ನು ಹೆಸರಿಸಬಹುದು.

ಕೆಲವು ಸವಾಲು ಪದಗಳಲ್ಲಿ ಯಾವ ಕತೆಯೂ ಇರದೆ ನೇರವಾಗಿ ಸವಾಲುಗಳೇ ಇರುತ್ತವೆ.  ಹಲವು ಜವಾಬು ಪದಗಳು ನೇರವಾಗಿ ಸವಾಲಿಗೆ ಜವಾಬು ಹೇಳುತ್ತವೆ. ಇವೆರಡು ರೀತಿಗೆ ೩೬೦ ಹೆಂಡಿರ ಗಂಡನ ಹೆಸರೇನು? ಮತ್ತು ೩೬೦ ಹೆಂಡಿರ ಗಂಡನ ಹೆಸರು ಹೇಳುವ ಜವಾಬು ಪದಗಳನ್ನು ಉದಾಹರಿಸಬಹುದು.

ಶಾಹೀರಗ ಕೇಳತೇನಿ ನಾನಾ | ಮೂನ್ನಾರಾರವತ್ತು ಹೆಂಡಿರ |
ಗಂಡ ಒಬ್ಬ ಇರತಾನೋ

ಜಗತ್ತಿನೊಳಗ ಪುಂಡಾ | ಹೇಳ ಅವನ ಹೆಸರೇನಾ
                      ತಿಳಿತೈತಿ ನಿನ್ನ ಶಾಣೇತನಾ

ಇದಕ್ಕೆ ಉತ್ತರವನ್ನು ಎದುರು ಪಕ್ಷದವರು ಜವಾಬು ಪದದಲ್ಲಿ ಹೀಗೆ ಹಾಡುವರು :

ಉತ್ತರ ತುರ್ತಾ ಕೊಡುವೆ ಈಗಿಂದಾ ಈಗ ಪರತಾ
ಮೂನ್ನಾರಾರವತ್ತು ಸ್ತ್ರೀಯರು ಅಂದರೆ ನರಗಳು
ಗಂಡ ಅಂಬುವಂತಾ ಆತ್ಮನಲ್ಲಿ ಜೀಂವಾ ಕೇಳೋ
ಬಾಗಲಕೋಟೆ ಮೋಜಿನ ಪ್ಯಾಟಿ ನೆನೆದಾರ ಘಟ್ಟ

ಇದು ಸವಾಲ್-ಜವಾಬ್ ನಡೆಯುವ ರೀತಿ.

ಕರ್ನಾಟಕದ ಪ್ರಮುಖ ಧರ್ಮಗಳಲ್ಲಿ ವೀರಶೈವ ಧರ್ಮವೂ ಒಂದು ವೀರಶೈವ ಧರ್ಮದ ಪ್ರಭಾವ ಮತ್ತು ವೀರಶೈವ ಸಾಹಿತ್ಯದ ಪ್ರಭಾವ ಮೊಹರಂ ಪದಗಳ ಮೇಲೆ ಸಾಕಷ್ಟು ಆಗಿದೆ. ಇಸ್ಲಾಮೇತರ ಧರ್ಮಕ್ಕೆ ಸಂಬಂಧಿಸಿದ ಸವಾಲು-ಜವಾಬು ಪದಗಳಲ್ಲಿ ವೀರಶೈವ ಧರ್ಮಕ್ಕೆ ಸಂಬಂಧಿಸಿದ ಒಂದು ಸವಾಲು ಪದ ಹೀಗಿದೆ :

ಆರು ಸ್ಥಲ ಆರು ಚಕ್ರ ಆರು ಪ್ರಮಾಣ ಆರುಲಿಂಗ ಇದರರ್ಥ ಮಾಡೋ ನೀನಾ
ಸಭಾದೊಳು ನಿಂತು ಸರ್ವ ಸಭಾಕ ತಿಳುವ ಹಾಂಗ
ಆರು ಸ್ಥಲದ ವರಣದೊಳು ಮೂಲಸ್ಥಾನ ಯಾವುದು ಹೇಳು
ಯಾವ ಸ್ಥಲಕ ಯಾವ ಚಕ್ರ ಯಾವ ಪ್ರಮಾಣ ಯಾವ ಲಿಂಗ
ಸಭಾದೊಳು ಬಂದು ಇಟ್ಟೀದಿ ಬಡಿವಾರ ಶೋಧನಾ ಮಾಡೋ ನೀನಾ

ಸವಾಲು ವೀರಶೈವ ತತ್ವಕ್ಕೆ ಸಂಬಂಧಿಸಿದ್ದಾದರೂ ರಿವಾಯಿತ ಪದಗಳ ಹೊತ್ತಿಗೆಯಲ್ಲಿ ದೊರೆತಿರುವುದು ಒಂದು ವೈಶಿಷ್ಟ್ಯ.

ಹೀಗೆ ಮೊಹರಂ ಪದಗಳು ಹಿಂದೂ-ಮುಸ್ಲಿಂ ಮೈತ್ರಿಯ ಸಂಕೇತವನ್ನು ಸಾರುತ್ತವೆ. ಭಾವೈಕ್ಯದ ಬೆಸುಗೆಯನ್ನು ಗಟ್ಟಿಗೊಳಿಸಲು ಪ್ರಮುಖ ಪಾತ್ರವಹಿಸುತ್ತವೆ.

ಸಾಹಿತ್ಯಕ ದೃಷ್ಟಿಯಿಂದ ಮೊಹರಂ ಪದಗಳು

ಮೊಹರಂ ಪದಗಳಲ್ಲಿ ಕಂಡುಬರುವ – ಇಟ್ಟು ಅಡಿ ಪ್ರಾಸ ಮಾಡಿಹಾಡುವನೋ ಜಾಣ, ಅಕ್ಷರ ಚಂದ ಕಟಬಂದ ತಿಳಿರಿ ನುಡಿ ಕೇಳರಿ – ಮುಂತಾದ ಮಾತುಗಳು ಮೊಹರಂ ಪದಗಳ ಬಗೆಗೆ ಜನಪದ ಕವಿಗಳು ತಾಳಿದ ನಿಲುಮೆಯನ್ನು ಸ್ಪಷ್ಟಪಡಿಸುತ್ತವೆ. ಪದಗಳಲ್ಲಿ ವರ್ಣನೆಗಳು, ಅಲಂಕಾರಗಳು ಬರಬೇಕೆಂಬ ಅಭಿಪ್ರಾಯ ಅವರದಾದರೂ ಅವು ಯವ ಪ್ರಮಾಣದಲ್ಲಿರಬೇಕು ಎಂಥವಿರಬೇಕು ಎಂಬುದರ ಬಗೆಗೆ ಎಲ್ಲಿಯೂ ಅವರು ಬಿಚ್ಚಿಹೇಳಿಲ್ಲ. ಆದರೂ ಅವರ ಹಾಡುಗಳಲ್ಲಿ ಅವು ಬಂದಿವೆ.

ಸಾಹಿತ್ಯಕ ದೃಷ್ಟಿಯಿಂದ ಅವನ್ನು ಪರಿಶೀಲಿಸಲು ಅಭ್ಯಾಸದ ಅನುಕೂಲತೆಗಾಗಿ ೧) ಕಥನಕಲೆ, ೨) ವರ್ಣನೆಗಳು, ೩) ಅಲಂಕಾರಗಳು, ೪) ರಸ ನಿರೂಪಣೆ, ೫) ಪಾತ್ರಪೋಷಣೆ, ೬) ನಾಟಕೀಯತೆ, ೭) ಸಮಾಜ ಚಿತ್ರಣ ೮) ಭಾಷೆ, ೯) ಭಾವೈಕ್ಯ ೧೦) ಮೊಹರಂ ಪದಗಳ ಸ್ವರೂಪ-ಲಕ್ಷಣ – ಎಂದು ಭಾಗಮಾಡಬಹುದು.

ಕಥನ ಕಲೆ

ಕಥನಕಲೆಯ ದೃಷ್ಟಿಯಿಂದ ಮೊಹರಂ ಪದಗಳನ್ನು ನೋಡಿದಾಗ ಎಲ್ಲ ಪದಗಳಲ್ಲಿ ಕೆಲವೊಂದು ಸಮಾನ ಲಕ್ಷಣಗಳನ್ನು ಗುರುತಿಸಬಹುದಾಗಿದೆ. ಪ್ರತಿಯೊಂದು ಪದ ನೆರೆದ ಸಭೆಗೆ ವಿನಂತಿಸಿಕೊಂಡು ಪ್ರಾರಂಭವಾಗುತ್ತದೆ. ಅನಂತರ ಹಲವಾರು ಮಾತುಗಳಿಂದ ಎದುರಾಳಿಯನ್ನು ತೆಗಳಿ ಕಥೆ ಪ್ರಾರಂಭಿಸಲಾಗುತ್ತದೆ. ಕೊನೆಯಲ್ಲಿ ಕಥೆಯಲ್ಲಿ ಬಂದ ವಸ್ತು ಮತ್ತು ಉದ್ದೇಶವನ್ನು ಸ್ಪಷ್ಪಪಡಿಸಿ ಕವಿಗಾರರು ಪರಿಚಯ ಹೇಳಿ ಊರು, ಓಣಿ, ದರಗಾ, ಅಂಕಿತ ಇತ್ಯಾದಿ ತಿಳಿಸಿ ಪದ ಮುಗಿಸುವರು.  ಇಂಥ ಒಂದು ಕಥಾ ಹಂದರದೊಳಗೆ ಮೊಹರಂ ಪದಗಳು ತಮ್ಮ ರೂಪರಂಗನ್ನ ಪ್ರದರ್ಶಿಸುತ್ತವೆ.

ಮೊಹರಂ ಪದಗಳಲ್ಲಿಯ ಕಥೆಗಳಲ್ಲಿ – ಕರ್ಬಲಾ ಕಾಳಗದ ಚಿತ್ರಣ, ಖಲೀಫರ ವ್ಯಕ್ತಿತ್ವ ನಿರೂಪಣೆ, ಪೈಗಂಬರರ ಅಸಾಮಾನ್ಯ ಶಕ್ತಿಯ ಹಿರಿಮೆ, ಸೂಫಿ ಸಂತರ ದೈವೀಶಕ್ತಿ, ಭಕ್ತಿಯ ಪಾರಮ್ಯ, ಪೌರಾಣಿಕ ಅಂಶಗಳ ವಿವರಣೆ, ಐತಿಹಾಸಿಕ ವ್ಯಕ್ತಿಗಳ ಪರಿಚಯ, ಅಂದಿನ ಕಾಲದ ಸಮಾಜ ಚಿತ್ರಣ – ಇತ್ಯಾದಿಗಳು ಮುಖ್ಯವಾಗಿ ಮತ್ತು ಹಿತಮಿತವಾಗಿ ಬರುತ್ತವೆ. ಮೊಹರಂ ಪದಗಳಲ್ಲಿ ಬರುವ ಕೆಲ ಶಬ್ದ ಚಿತ್ರಗಳು ಕಥೆಯ ಒಡಲೊಳಗೇ ಬಂದಿರಲಿ ಅಥವಾ ಸ್ವತಂತ್ರವಾಗಿಯೇ ಇರಲಿ ಕೇಳುಗರ ಮನವನ್ನು ಸೂರೆಗೈಯುವ ಶೈಲಿಯಲ್ಲಿದ್ದು ಉದ್ದೇಶಿತವಸ್ತುವಿನ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸುತ್ತವೆ.

ಒಟ್ಟಿನಲ್ಲಿ ಪ್ರಾಸಬದ್ಧಶೈಲಿ, ವಿಶಿಷ್ಟದಾಟಿ, ವಿಶಿಷ್ಟ ಕಥಾವಸ್ತು, ಸತ್ಯಕ್ಕಾಗಿ, ಧರ್ಮಕ್ಕಾಗಿ ಒಕ್ಕಟ್ಟಿನಿಂದ ಹೋರಾಡಬೇಕೆನ್ನುವ ಸಂದೇಶ ಇವು ಮೊಹರಂ ಮೊಹರಂ ಪದಗಳಲ್ಲಿ ಮೇಳವಿಸಿದರ ಫಲವಾಗಿ ಅವುಗಳ ಕಥನ ಕಲೆಗೆ ಒಂದು ಬಗೆಯ ವಿಶೇಷ ಮೆರಗುಂಟಾಗಿ ಜನಪದ ಸಾಹಿತ್ಯದಲ್ಲಿ ವಿಶಿಷ್ಟಸ್ಥಾನವನ್ನು ಪಡೆಯಲು ಅವು ಅರ್ಹವಾಗಿವೆ.

ವರ್ಣನೆಗಳು

ಕವಿಯ ಕಲ್ಪನಾಶಕ್ತಿ, ಮಾತಿನ ಮೋಡಿ, ಶಬ್ದಭಂಡಾರ ಮತ್ತು ವರ್ಣನೆಗಳು ಪಾಂಡಿತ್ಯ ಪ್ರದರ್ಶನಕ್ಕೆ ತಕ್ಕಮಟ್ಟಿಗೆ ಅನುವುಮಾಡಿಕೊಡುತ್ತವೆ. ಒಮ್ಮೊಮ್ಮೆ ಸಂದರ್ಭಗಳಿಗನುಗುಣವಾಗಿ ವರ್ಣನೆಗಳು ಹಿತಮಿತವಾಗಿ ಬರುವುದುಂಟು. ಮಹಾಕವಿಗಳು ತಮ್ಮ ಕಾವ್ಯಗಳಲ್ಲಿ ಅಷ್ಟಾದಶ ವರ್ಣನೆಗಳನ್ನು ಕಡ್ಡಾಯವಾಗಿ ತಂದರೆ ಜನಪದ ಕವಿಗಳು ಕಥೆಗೆ ಅನುಗುಣವಾಗಿ, ಪಾತ್ರಪೋಷಣೆಗಾಗಿ, ರಸ ನಿರೂಪಣೆಗಾಗಿ ವರ್ಣನೆಗಳನ್ನು ಔಚಿತ್ಯವರಿತು ತಂದಿರುವುದು ಕಂಡುಬರುತ್ತದೆ ಮೊಹರಂ ಪದಗಳಲ್ಲಿ ಕೆಲವು ಸುದೀರ್ಘವಾಗಿ ಬಂದಿರುವ ವರ್ಣನೆಗಳಲ್ಲಿ – ಜನ್ಮೋತ್ಸವ ವರ್ಣನೆ, ಯುದ್ಧವರ್ಣನೆ, ವೀರಸ್ವರ್ಗದ ವರ್ಣನೆ ಇತ್ಯಾದಿ ಪ್ರಮುಖವಾಗಿವೆ. ಸಂಕ್ಷೇಪವಾಗಿ ಬಂದಿರುವ ವರ್ಣನೆಗಳಲ್ಲಿ ವೇಶ್ಯೆಯರ ವರ್ಣನೆ, ಕಾಮಜಾನಿಯ ವರ್ಣನೆ ಮುಖ್ಯವಾಗಿವೆ.

ಅಲ್ಲಾಹನ ಆಜ್ಞಾನುಸಾರ ಜಿಬ್ರಾಯಿಲ್ ಹ | ಮುಹ್ಮದ ಪೈಗಂಬರರನ್ನು ಕಾಮಜಾನಿಯ ಮೇಲೆ ಕೂಡಿಸಿಕೊಂಡು ಮೇ ಅರಾಜಕ್ಕೆ ಕರೆದುಕೊಂಡು ಹೋದ ವರ್ಣನೆ ಮೊಹರಂ ಪದಗಳಲ್ಲಿ ಬರುತ್ತದೆ. ಕಾಮಧೇನುವಿನಂತಹ ಒಂದು ಕಾಲ್ಪನಿಕ ಪ್ರಾಣಿ ‘ಕಾಮಜಾನಿ’ ಅದನ್ನು ‘ಬುರಾಖ್’ ಎಂದು ಪೈಗಂಬರರ ಚರಿತ್ರೆಯಲ್ಲಿ ಕರೆಯಲಾಗಿದೆ. ಕಾಮಧೇನುವಿನ ಕಲ್ಪನೆಯಿರುವ ಕನ್ನಡದ ಜನಪದ ಕವಿ ಅದನ್ನು ಕಾಮಜಾನಿ ಎಂದು ಕರೆದಂತೆ ತೋರುತ್ತದೆ. ಆ ಕಾಮಜಾನಿಯ ವರ್ಣನೆ ಒಂದು ಪದದಲ್ಲಿ  ಹೀಗೆ ಬಂದಿದೆ.

ಮುತ್ತುರತ್ನ ಬೆಳಕಿನ ಛಾಯಾ ಗೋಮೇಧಿಕ ಗರಿಗಳು ಪಾಯಾ
ಪಂಚವರ್ಣ ಮುಖದಲಿ ನಾಮಾ ಲಾ ಇಲಾಹಾ ಬರೆದಿತ್ತೊ ಕಲ್ಮಾ
ಸೃಷ್ಟಿಗೆ ಅಪರೂಪ ಜಲ್ಮಾ ಹುಟ್ಟಿಸಿದ ಪರಮಾತ್ಮಾ

ಇಂಥ ಅಪರೂಪದ ಪ್ರಾಣಿಯನ್ನು ಪರಮಾತ್ಮಾ ಹುಟ್ಟಿಸಿದನೆಂದು ಕವಿ ಹೇಳುವ ಮಾತುಗಳು ಕಾಮಜಾನಿಯ ವೈಶಿಷ್ಟ್ಯವನ್ನು ಎತ್ತಿ ಹೇಳುತ್ತವೆ.

ಉಳಿದವುಗಳಲ್ಲಿ ಶಬ್ದಾದ ಅರಸ ಕಟ್ಟಿಸಿದ ಸ್ವರ್ಗದ ವರ್ಣನೆ ಮತ್ತು ಅಲ್ಲಲ್ಲಿ ಬಂದಿರುವ ಸ್ತ್ರೀವರ್ಣನೆಗಳು ಸಾಧಾರಣವಾಗಿವೆ.

ಅಲಂಕಾರಗಳು

ಲೋಕ ರೂಢಿಗೆ ಮೀರಿದ ಕಾವ್ಯಸೌಂದರ್ಯ ಉಂಟುಮಾಡುವ ಶಬ್ದಾರ್ಥ ವೈಚಿತ್ರವೇ ಅಲಂಕಾರ. ಕಾವ್ಯದಲ್ಲಿ ಅಲಂಕಾರದ ಸ್ಥಾನ-ಮನದ ಬಗೆಗೆ ವಾದ-ವಿವಾದವಿದ್ದರೂ ಅನೇಕ ಕವಿಗಳಿಗೆ ಅಲಂಕಾರಗಳು ಪ್ರೀಯವೆಂಬ ವಿಷಯ ಕಾವ್ಯಾಭ್ಯಾಸದಿಂದ ಕಂಡುಬರುತ್ತದೆ. ಅಷ್ಟಾದಶ ವರ್ಣನೆಗಳಿಗೆ ಕಟ್ಟುಬಿದ್ದ ಪಂಡಿತ ಮಾನ್ಯ ಕವಿಗಳಂತೆ ಜನಪದ ಕವಿಗಳು ತಮ್ಮ ರಚನೆಗಳಲ್ಲಿ ಅಲಂಕಾರಗಳನ್ನು ಪಾಂಡಿತ್ಯ ಪ್ರದರ್ಶನಕ್ಕಾಗಿ ತಂದು ತುರುಕದಿರುವುದು ಒಂದುವಿಶೇಷ. ಜನಸಾಮಾನ್ಯರಲ್ಲಿ ಪ್ರಚಲಿತವಿರುವ ಉಹಾಹರಣೆಗಳನ್ನೇ ಅವರು ಭಾವ ನಿರೂಪಣೆ, ರಸ ಪೋಷಣೆ, ಪಾತ್ರ ಚಿತ್ರಣ, ಹಾಗೂ ಅರ್ಥ ಸ್ಪಷ್ಟತೆಗಾಗಿ ಬಳಸುತ್ತಾರೆ. ಅವರಿಗರಿವಿಲ್ಲದೆ ಸಹಜವಾಗಿಯೇ ಹಲವಾರು ಅಲಂಕಾರಗಳು ಜನಪದ ಹಾಡುಗಳಲ್ಲಿ ಕಾಣಿಸಿಕೊಳ್ಳುತ್ತವೆ. ಮೊಹರಂ ಪದಗಳಲ್ಲಿ ಉಪಮೆ, ರೂಪಕ ಉತ್ಪ್ರೇಕ್ಷೆ ಅಲಂಕಾರಗಳು ಹೇರಳವಾಗಿ ಬಳಕೆಯಾಗಿವೆ. ಅರ್ಥಾಂತರನ್ಯಾಸ, ಅತಿಶಯೋಕ್ತಿ, ಅತ್ಯುಕ್ತಿ ಅಲಂಕಾರಗಳು ಪದ್ಯಕ್ಕೆ ಪೋಷಕವಾಗಿ ಅಲ್ಲಲ್ಲಿ ಬಂದಿವೆ. ಉಳಿದ ಅಲಂಕಾರಗಳ ಬಳಕೆ ಅಪರೂಪ.

ಆಕಿ ನಾಸಿಕ ಸಂಪಗಿ ಅರಳಾ ಕಣ್ಣುಗಲ್ಲಾ ಕನ್ನಡಿ ಹರಳಾ, ಕೊಡಬೇಕ ನನಗ ಒಂದು ಪುತ್ರಫಲಾ, ಕೈ ಕಮಲಾ ಆಗಿತ್ತು ಮಾಣಿಕದ ಹೋಲಾ, ನನ್ನ ಕೂಸ ರಾಜಹಂಸ, ಬಾಡಿತು. ಮುಖಕಮಲಾ, ಮಾರಿಚಿನ್ನಾ ಹೊಳುವತಿತ್ತೊ ಹಾಲಿ, – ಮುಂತಾದ ರೂಪಕ ಅಲಂಕಾರಗಳು ಹೃದ್ಯವಾಗಿ ಮೂಡಿಬಂದಿವೆ.

ಅನನ್ವಯ, ದೃಷ್ಟಾಂತ, ಸಂದೇಹ, ಅಪಹ್ನುತಿ, ಸ್ವಭಾವೋಕ್ತಿ, ವ್ಯಾಜನಿಂದೆ ಅಲಂಕಾರಗಳು ಬಹಳ ಅಪರೂಪವಾಗಿ ಮೊಹರಂ ಪದಗಳಲ್ಲಿ ದೊರೆಯುತ್ತವೆ. ಒಟ್ಟಿನಲ್ಲಿ ಮೊಹರಂ ಪದಗಳಲ್ಲಿ ದೊರೆವ ಅಲಂಕಾರಗಳು ಕನ್ನಡ ನುಡಿಯ ಬೆಡಗು ಬಿನ್ನಾಣವನ್ನು ಪ್ರದರ್ಶಿಸುವಲ್ಲಿ ಸಮಾಜ ಚಿತ್ರಣ ನೀಡುವಲ್ಲಿ ಸಹೃದಯರಿಗೆ ರಸಸ್ಫೂರ್ತಿ ಉಂಟುಮಾಡುವಲ್ಲಿ ಯಶಸ್ವಿಯಾಗಿರುವುದನ್ನು ಮರೆಯುವಂತಿಲ್ಲ.

ರಸ ನಿರೂಪಣೆ

ಜನಪದ ಕವಿಗಳ ಉದ್ದೇಶ ಕಥೆಯ ಮೂಲಕ ಜನ ಸಾಮಾನ್ಯರಿಗೆ ಮಾನವ ಧರ್ಮವನ್ನು ಬೋಧಿಸುವುದು. ಆದುದರಿಂದ ಅವರ ಲಕ್ಷ್ಯವೆಲ್ಲ ಕಥೆಯ ಕಡೆಗೆ ಮತ್ತು ಮಾನವ ಧರ್ಮ ನಿರೂಪಣೆಯ ಕಡೆಗೆ ಕೇಂದ್ರೀಕೃತವಾಗಿದ್ದರೂ ಸಮಯ ಸನ್ನಿವೇಶಗಳಿಗೆ ತಕ್ಕಂತೆ ತಮ್ಮ ಹೇಳಿಕೆ ಪರಿಣಾಮಕಾರಿಯೂ ಆಕರ್ಷಕವೂ ಆಗಬೇಕೆಂಬ ಇಚ್ಛೆ ಅವರಿಗಿದ್ದುದರಿಂದ ಹಾಗೆ ಮಾಡುವಾಗ ಸಹಜವಾಗಿಯೆ ರಸ ಪ್ರತಿಪಾದನೆಗೆ ತೊಡಗಿರುವುದು ಕಂಡುಬರುತ್ತದೆ. ಮೈನವಿರೇಳುವಂತೆ ಮಾಡುವ ವೀರರಸವನ್ನು, ಹೃದಯವನ್ನು ಕಲಕಿ ಕಣ್ಣನ್ನು ಹನಿಗೂಡಿಸುವ ಕರುಣರಸವನ್ನು ಮನಮುಟ್ಟುವಂತೆ ಹೃದಯ ತಟ್ಟುವಂತೆ ಜನಪದ ಕವಿಗಳು ಚಿತ್ರಿಸಿರುವರು.

ವೀರರಸ ನಮರಸಗಳಲ್ಲಿ ಒಂದು ಯುದ್ಧ ವರ್ಣನೆಯಲ್ಲಿ ವೀರರಸ ನಿರೂಪಣೆಗೆ ಅವಕಾಶ ಹೆಚ್ಚು. ಮೊಹರಂ ಪದಗಳಲ್ಲಿ ಕರ್ಬಲಾ ಕಾಳಗದ ವಿವರಣೆ ಬರುವುದರಿಂದ ಅಲ್ಲಿ ವೀರರಸ ಪ್ರತಿಪಾದನೆಗೆ ಸಹಜವಾಗಿಯೇ ಅವಕಾಶ ದೊರೆಯುತ್ತದೆ. ಹ | ಇ | ಹುಸೇನರ ಮಗ ಅಬ್ದುಲ್ಲಾ ತಂದೆ ತಾಯಿಗಳ ಅಪ್ಪಣೆ ಪಡೆದು ವೈರಿ ಸೈನಿಕರ ರುಂಡ ಚಂಡಾಡುವ ದೃಶ್ಯ ಮೈನವಿರೇಳಿಸುವಂತದು. ವೀರರಸ ಚಿಮ್ಮಿಸುವಂತದು.

ಹಾಂ ಹಾಂ ಕುಂತಾರೋ ತಮ್ಮ ಕುದರಿಮ್ಯಾಗ
ಅಂತಾತೋ ದೊರಿ ಬಾ ವೈರಿ ನನ್ನ ಸರಿ
ಉಳದ ಬೆಳದ ಹೋಗಂತ ತುಳದ ಬಿಡತೇನಿ ಅಂತಾನ ಅಬ್ದುಲ್ಲಾ
ಮುಂದ ಜಿಗದ ಹತಿಯಾರ ಹಿರದ
ಹೋಗಿ ಬಿದ್ದಾನ ವೈರಿಮ್ಯಾಲೆ ಆಡಿನೊಳಗ ಬಿದ್ದಂಗಾತು ಹುಲಿ
ಹಾರತಾವೋ ಮ್ಯಾಲೆ ತಲಿ ದಡದಡನೆ ಭೂಮಿಮ್ಯಾಲೆ

‘ತುಳದ ಬಿಡತೇನಿ, ಆಡಿನೊಳಗ ಬಿದ್ದಂಗಾತು ಹುಲಿ, ಹಾರತಾವೋ ಮ್ಯಾಲೆ ತಲಿ’ – ಎನ್ನುವ ಮಾತುಗಳು ಧ್ವನಿಪೂರ್ಣವಾಗಿದ್ದು ವೀರರಸ ಸ್ಪುರಿಸುತ್ತವೆ.

ಒಟ್ಟಾರೆ ಮೊಹರಂ ಪದಗಳಲ್ಲಿ ಶೃಂಗಾರ, ಹಾಸ್ಯ, ಭೀಭತ್ಸ ರಸಗಳು ಹೆಚ್ಚಾಗಿ ಬಂದಿಲ್ಲ. ರೌದ್ರ, ಭಯಾನಕ, ಶಾಂತ ರಸಗಳಿಗೆ ಹೆಚ್ಚಿನ ಆಸ್ಪದ ದೊರೆತಿಲ್ಲ. ಆದರೆ ವೀರ ಕರುಣ ಅದ್ಭುತ ರಸಗಳು ಸಮರ್ಥವಾಗಿ ಮೂಡಿಬಂದಿರುವುದನ್ನು ಕಾಣಬಹುದು.

ಪಾತ್ರ ಪೋಷಣೆ

ಮೊಹರಂ ಪದಗಳು ಮೂಲತಃ ಸುದೀರ್ಘವಲ್ಲದ ಬಿಡಿಬಿಡಿಯಾದ ಜನಪದ ರಚನೆಗಳು. ಅವು ಒಬ್ಬ ವ್ಯಕ್ತಿ ಅಥವಾ ಒಂದು ಪಾತ್ರಕ್ಕೆ ಸಂಬಂಧಿಸಿದಂತೆ ಒಂದು ಅಥವಾ ಕೆಲವು ಅಂಶಗಳನ್ನು ಮಾತ್ರ ಒಳಗೊಂಡಿರುತ್ತವೆ. ಅದರಿಂದಾಗಿ ಯಾವುದೇ ಪಾತ್ರದ ಸಮಗ್ರ ಮೂರ್ತಿ ಸ್ವರೂಪ ಅಖಂಡವಾಗಿ ಅವುಗಳಲ್ಲಿ ದೊರೆಯಲಾರದು. ಆದರೆ ಒಂದು ಪಾತ್ರ ಹಲವಾರು ಹಾಡುಗಳಿಗೆ ವಸ್ತುವಾದಾಗ ಅವುಗಳಲ್ಲಿ ಅಭಿವ್ಯಕ್ತಗೊಂಡಿರುವ ಆ ಪಾತ್ರದ ವಿವಿಧ ಅಂಶಗಳನ್ನು ಕ್ರೋಢಿಕರಿಸಿ ಅವುಗಳಿಗೊಂದು ರೂಪಕೊಡುವ ಮೂಲಕ ಆಯಾ ಪಾತ್ರಗಳ ಕೆಲಮಟ್ಟಿನ ನಿರೂಪಣೆ ಸಾಧ್ಯ.

ಕರ್ಬಲಾ ಘಟನೆಗೆ ಸಂಬಂಧಿಸಿದ ಮೊಹರಂ ಪದಗಳ ಕಥಾನಾಯಕ ಹ | ಇ | ಹುಸೇನ ಜನಪದ ಕವಿಗಳು ಅವರ ಮಾನವೀಯತೆ, ಧರ್ಮಜಿಜ್ಞಾಸೆ, ಶೌರ್ಯಸಾಹಸ ಇತ್ಯಾದಿ ಗುಣಗಳನ್ನು ಮೆಚ್ಚಿ ಮನಸಾರೆ ಹೊಗಳಿದ್ದಾರೆ ಮತ್ತು ಅವುಗಳನ್ನು ಎಳೆ ಎಳೆಯಾಗಿ ತಮ್ಮ ಪದಗಳಲ್ಲಿ ಬಿಡಿಸಿ ತೋರಿಸಿದ್ದಾರೆ.

ಮೊಹರಂ ಪದಗಳಲ್ಲಿ ಕಾಸೀಮ ಧೂಲಾ, ಹ | ಅಲಿ, ಹ | ಮುಹ್ಮದ ಪೈಗಂಬರ ಮಾಬುಸುಬಾನಿ, ಯಜೀದ್, ಹ | ಸುಲೇಮಾನ್, ಹ | ಇಸಾ, ಹ | ಬೀಬಿ ಘಾತಿಮಾ, ಶಹರಬಾನು, ಶುಮರ – ಮುಂತಾದ ಪಾತ್ರಗಳು ಅಮೋಘವಾಗಿ ಚಿತ್ರಿತವಾಗಿವೆ.

ಹ | ಸುಲೇಮಾನ್ ಅಸಾಮಾನ್ಯ ಶಕ್ತಿವಂತರು ಸತ್ಯವಂತರು, ಸಾಂಬನಲ್ಲಿ ವಿಶಿಷ್ಟ ಶಕ್ತಿಯ ಉಂಗುರ ಪಡೆದವರು. ಇರುಬಿ ಎಂಬತ್ತು ಕೋಟಿ ಜೀವರಾಶಿಗೆ ಊಟಹಾಕುವ ಪ್ರಯತ್ನ ಮಾಡಿದವರು ಎಂದು ಮೊಹರಂ ಪದಗಳಲ್ಲಿ ನಿರೂಪಿಸಲಾಗಿದೆ. ಹ | ಇಸಾ ಅಲ್ಲಾಹನ ಆಜ್ಞೆಯ ಮೇರೆಗೆ ಸತ್ತವರನ್ನು, ಸತ್ತಪಶುಪಕ್ಷಿಗಳನ್ನು ಬದುಕಿಸುತ್ತಿದ್ದರೆಂದೂ ರೋಗ ಪೀಡಿತರನ್ನು ನಿರೋಗಿಗಳನ್ನಾಗಿ ಮಾಡುತ್ತಿದ್ದರೆಂದೂ ಮೊಹರಂ ಪದಗಳಲ್ಲಿ ಹೇಳಲಾಗಿದೆ.

ಹ | ಫಾತಿಮಾ ಅವರು ತಮ್ಮ ಪುತ್ರ ಹಸನ್ ಮತ್ತು ಹುಸೇನರನ್ನು ಬಹುವಾಗಿ ಪ್ರೀತಿಸುತ್ತಿದ್ದರು. ಎಂಥ ಬಡತನ ಬಂದರೂ ಅವರು ದಾನ ಮಾಡುವುದನ್ನು ಬಿಟ್ಟವರಲ್ಲ ಎಂದು ಮೊಹರಂ ಪದಗಳಲ್ಲಿ ಹೇಳಿದ್ದು ಕಂಡುಬರುತ್ತದೆ.

ಹೀಗೆ ಮೊಹರಂ ಪದಗಳಲ್ಲಿ ಜನಪದ ಕವಿಗಳು ತಮಗೆ ತೋಚಿದ ವಿಚಾರಗಳನ್ನು ಅನಿಸಿದ ಭಾವನೆಗಳನ್ನು ತಿಳಿದುಕೊಂಡ ಗುಣಾವಗುಣಗಳನ್ನು ಪಾತ್ರಗಳಲ್ಲಿ ಮೂಡಿಸಿದ್ದಾರೆ.

ನಾಟಕೀಯತೆ

ಕಾವ್ಯದಲ್ಲಿಯೇ ಆಗಲಿ ಹಾಡಿನಲ್ಲಿಯೇ ಆಗಲಿ ವಾದ-ಸಂವಾದ ರೂಪದ ನಾಟಕೀಯತೆ ಹದವರಿತು ಸೇರಿಕೊಂಡಾಗ ಒಂದು ಬಗೆಯ ಆಕರ್ಷಣೆಯುಂಟಾಗುತ್ತದೆ. ಮೊಹರಂ ಪದಗಳಲ್ಲಿ ಇಂತಹ ನಾಟಕೀಯತೆ ಅಲ್ಲಲ್ಲಿ ಮಿಂಚಿದೆ. ಇಸ್ಲಾಂ ಮತ್ತು ಇಸ್ಲಾಮೇತರ ಧರ್ಮಕ್ಕೆ ಸಂಬಂಧಿಸಿದ ಪದಗಳಲ್ಲಿ ಇದಕ್ಕೆ ನಿದರ್ಶನಗಳು ದೊರೆಯುತ್ತವೆ. ಈ ನಾಟಕೀಯ ಸನ್ನಿವೇಶಗಳನ್ನು ಓದಿದಾಗ ಇಲ್ಲವೇ ಕೇಳಿದಾಗ ಪಾತ್ರಗಳು ಪ್ರತ್ಯಕ್ಷಬಂದು ಸಂಭಾಷಣೆ ಮಾಡಿದ ಅನುಭವವುಂಟಾಗದಿರದು.

ಕರ್ಬಲಾ ಯುದ್ಧಭೂಮಿಯಲ್ಲಿ ಹ | ಇ | ಹುಸೇನರ ಅನುಯಾಯಿಗಳು ವೈರಿಗಳ ಮೋಸಕ್ಕೆ ಪಕ್ಕಾಗಿ ಹತರಾಗುತ್ತಿರುವುದನ್ನು ಕಂಡ ಹುಸೇನರ ಮಗ ಅಬ್ದುಲ್ಲಾ ತಾನೂ ಯುದ್ಧಮಾಡಲು ಅಪ್ಪಣೆ ಕೊಡುವಂತೆ ತನ್ನ ತಂದೆಗೆ ಕೇಳಿದಾಗಿನ ಪ್ರಸಂಗ ನಾಟಕೀಯತೆಗೆ ಒಂದು ಒಳ್ಳೆಯ ಉದಾಹರಣೆಯಾಗಿದೆ :

ಅಬ್ದುಲ್ಲಾ:ಕೊಡರಿ ಹೋಗಲಾಕ ಅಪ್ಪಣೆ ನನಗ ಅನುಮಾನಯಾಕೀಗ. ಹೋಗುವುದು ರಣದಾಗ ಕಡದಾಡಿ ಕೊಲಿ ಹಾರಿಸಿ ತಲಿ ಭೂಮಿಮ್ಯಾಲೆ ಹಿಡಿದು ಹೊಡೆದು ಕಡದು ಹಾಕುವೆ ನನಗೇನು ಥರ ಜಲ್ಲಾ.

ಹುಸೇನ:ನಿಂದೇನು ವಯಸ್ಸಲ್ಲಾ ಕದನ ಮಾಡುವಾಗಿಲ್ಲಾ ನಿನ್ನ ವಯ ಹೋಗಬ್ಯಾಡೋ ನೀನು ಹೇಳತೇನೋ ನಾನು ಮರತ ಬಿಡೋ ನಿನ್ನ ಶರಥ ನಿನ್ನಿಂದೇನಾಗಾಕಿಲ್ಲಾ.

ಅಬ್ದುಲ್ಲಾ:ಶರಣ ಕರುಣ ಮಾಡಿರಿ.

ಹುಸೇನ:ನಿನಗ ಬಿಟ್ಟೇನಿ ಶಿವನಮ್ಯಾಗ ನಿನ್ನ ಅದೃಷ್ಟದಾಗ ಬರದಂತ ಬರಿ ಶ್ರೀಹರಿ ತಪ್ಪದಲಿ ನಾನೇನ ಮಾಡಲಿ ದೈವೇನು ನೋಡಿ ಬಂದಿಲ್ಲಾ.

– ಈ ಸಂವಾದದಲ್ಲಿ ಅಬ್ದುಲ್ಲಾರ ವಿರೋಚಿತ ಮಾತುಗಳು ಹ | ಇ | ಹುಸೇನರು ತಿಳಿಹೇಳುವ ರೀತಿಯು ಸಹಜ ಸುಂದರವಗಿ ಮೂಡಿಬಂದಿವೆ.

ಅಪ್ರಾಪ್ತ ವಯಸ್ಸಿನ ಬಾಲಕ ಕಾಸೀಮಧೂಲಾ ತಾನೂ ಯುದ್ಧಮಾಡಲು ಹೋಗುವುದಾಗಿ ಚಿಕ್ಕಮ್ಮನಿಗೆ ಕೇಳುವ ಪ್ರಸಂಗ, ಹ | ಸುಲೇಮಾನರು ಇರುಬಿ ಎಂಬತ್ತು ಕೋಟಿ ಜೀವರಾಶಿಗೆ ಊಟ ಹಾಕಬೇಕೆಂದು ನಿರ್ಧರಿಸಿ ಶಿವನಿಗೆ ತಿಳಿಸಿದರು. ಆಗ ಶಿವ ಮತ್ತು ಸುಲೇಮಾನರಲ್ಲಿ ನಡೆದ ವಾದ-ವಿವಾದ ಪ್ರಸಂಗ-ನಾಟಕೀಯತೆಗೆ ಉತ್ತಮ ಉದಾಹರಣೆ

ಸಮಾಜ ಚಿತ್ರಣ

ಜನಪದ ಸಾಹಿತ್ಯ ಗ್ರಾಮ ಸಂಸ್ಕೃತಿಯ ದರ್ಪಣ ಹಳ್ಳಿಯ ಸರಳ ಜೀವನದ ವಿವಿಧ ಮುಖಗಳು ಅದರಲ್ಲಿ ಸ್ಪಷ್ಟವಾಗಿ ಗೋಚರಿಸುತ್ತವೆ. ಸಂಸಾರದ ಸುಖದುಃಖಗಳು ಬಂಧುಮಿತ್ರರ ಮಧ್ಯದ ವಿವಿಧ ಸಂಬಂಧಗಳು, ಜಾತಿ-ಮತ ಹಬ್ಬ ಹರಿದಿನ, ರೂಢಿ ವಿಧಿ ಕ್ರಿಯೆಗಳು ಒಟ್ಟಾರೆ ಅವರ ಜೀವನವನ್ನು ರೂಪಿಸುವ ಸ್ಫೂರ್ತಿ ವಿಶೇಷಗಳು ಜನಪದ ಸಾಹಿತ್ಯದಲ್ಲಿ ಹೇರಳವಾಗಿ ದೊರೆಯುತ್ತವೆ. ಜನಪದ ಸಾಹಿತ್ಯದ ಒಂದು ಭಾಗವಾದ ಮೊಹರಂ ಪದಗಳು ಇದಕ್ಕೆ ಹೊರತಲ್ಲ.

ಅಭ್ಯಾಸದ ಅನುಕೂಲತೆಯ ದೃಷ್ಟಿಯಿಂದ ಹ | ಮುಹ್ಮದ ಪೈಗಂಬರ ಪೂರ್ವದ ಮತ್ತು ಪೈಗಂಬರರ ಸಮಕಾಲೀನ ಸಮಾಜ ಚಿತ್ರಣ ಹಾಗೂ ಇತ್ತೀಚಿನ ಸಮಾಜ ಚಿತ್ರಣ ಎಂದು ವಿಭಾಗಿಸಿ ಪರಿಶೀಲಿಸಬಹುದು.

ಹ | ಮುಹ್ಮದ ಪೈಗಂಬರರಿಗಿಂತ ಮೊದಲು ಮತ್ತು ಅವರ ಸಮಕಾಲೀನದಲ್ಲಿ ಧಾರ್ಮಿಕ ಘರ್ಷಣೆಗಳು ನಡೆದುದರ ವಿವರಗಳು ಮೊಹರಂ ಪದಗಳಲ್ಲಿ ದೊರೆಯುತ್ತವೆ. ಅಂತಹ ಘರ್ಷಣೆಗಳಿಗೆ ಇದ್ದ ಮುಖ್ಯ ಕಾರಣಗಳಲ್ಲಿ ಮೂರ್ತಿಪೂಜೆಯೂ ಒಂದು ಹ | ಮುಹ್ಮದ ಪೈಗಂಬರರಿಗಿಂತ ಪೂರ್ವದ ಪೈಗಂಬರ ಇಬ್ರಾಹಿಮ್ ಅವರು ‘ನಮರೂದ್’ ಎಂಬುವ ಅರಸನಿಗೆ ಮೂರ್ತಿಪೂಜೆ ಬಿಡಲು ತಿಳಿಸಿದಾಗ ಅವನು ಸಿಟ್ಟಿಗೆದ್ದು ‘ಕೊಂದುಬಿಡುವೆ ನಿಮ್ಮ ಅಲ್ಲಾಗ ಬೆಂಕಿ ಹಚ್ಚುವೆ ಕೈಲಾಸಕ’ ಎಂದು ಎಗರಾಡಿದನು. ಪೈಗಂಬರರ ಸಮಕಾಲೀನ ಸಮಾಜದಲ್ಲಿ ‘ಬಿಸಮಿಲ್ಲಾ’ ಎಂದವರಿಗೆ ಮರಣದಂಡನೆ ವಿಧಿಸಲಾಗುತ್ತಿತ್ತು. ಹಡೆದ ತಂದೆ-ತಾಯಿಗಳೇ ಇದಕ್ಕೆ ಒಪ್ಪಿಗೆ ಕೊಡುತ್ತಿದ್ದರು.

ಸತ್ಯದ ಮಾರ್ಗದಲ್ಲಿ ದಾನ ಧರ್ಮ ಮಾಡುತ್ತ ನಮಾಜ ರೋಜಾ ಪಾಲಿಸುತ್ತ ಮರಣವನ್ನಪ್ಪಿದರೆ ಅವರಿಗೆ ಸ್ವರ್ಗ ಸಿಗುವುದೆಂಬ ನಂಬಿಕೆ ಅಂದಿನ ಸಮಾಜದಲ್ಲಿತ್ತು. ತಾಯಿ-ತಂದೆಗಳಿಗೆ ದುಃಖವುಂಟುಮಾಡಿದರೆ, ಬೇರೊಬ್ಬರ ವಸ್ತುವನ್ನು ಸ್ವಾಧೀನಪಡಿಸಿಕೊಂಡರೆ ನರಕ ಪ್ರಾಪ್ತಿಯಾಗುವುದೆಂದು ಪೈಗಂಬರರ ಕಾಲದಲ್ಲಿ ತಿಳಿದುಕೊಳ್ಳಲಾಗಿದ್ದಿತು.

ಮೊಹರಂ ಪದಗಳನ್ನು ಬರೆದವರು ಪ್ರಚಲಿತವಿದ್ದ ಪ್ರಸಂಗಗಳನ್ನು ಕೇಳಿ, ದೊರೆತ ಶಾಸ್ತ್ರಗ್ರಂಥಗಳನ್ನು ಅಭ್ಯಸಿಸಿ ಪ್ರಾದೇಶಿಕ ಭಾಷೆಯಲ್ಲಿ ಸಮಾಜವನ್ನು ಯಥಾವತ್ತಾಗಿ ಚಿತ್ರಿಸುವ ಪ್ರಾಮಾಣಿಕ ಪ್ರಯತ್ನಮಾಡಿದ್ದಾರೆ. ಅದನ್ನು ಸಂಸಾರಿಕ ಚಿತ್ರಣ ಉದ್ಯೋಗ ವೃತ್ತಿ, ಜಾರ-ಜಾರೆಯರು, ಜ್ಯೋತಿಷ್ಯ-ಭವಿಷ್ಯ, ಮೋಸಗಾರರು-ಕೊಲೆಗಾರರು, ಬಡವರು-ಸಿರಿವಂತರು, ದೇವ ದೇವತೆಗಳು, ಮನೋರಂಜನೆ ಆಟಗಳು, ವೇಷಭೂಷಣ-ಅಲಂಕಾರಗಳು, ಊಟ-ತಿಂಡಿ-ತಿನಿಸು – ಮುಂತಾಗಿ ವಿಂಗಡಿಸಿ ನೋಡಬಹುದು.

ಮೊಹರಂ ಪದಗಳ ಭಾಷೆ

ಮೊಹರಂ ಪದಗಳ ತವನಿಧಿಯಾದ ಉತ್ತರ ಕರ್ನಾಟಕದ ಭಾಗವನ್ನು ಹಲವು ಕಾಲ ಮುಸ್ಲಿಂ, ಮರಾಠಾ ಮತ್ತು ಬ್ರಿಟೀಶ ಅರಸರು ಆಳಿದರು. ಅದರಿಂದಾಗಿ ಗುಲಬರ್ಗಾ, ರಾಯಚೂರು, ಬೀದರ್, ಬಿಜಾಪುರ, ಧಾರವಾಡ, ಬೆಳಗಾಂವ ಜಿಲ್ಲೆಗಳ  ಭಾಷೆಯ ಮೇಲೆ – ಉರ್ದು, ಮರಾಠಿ ಅರಬ್ಬಿ, ಪರ್ಶಿಯನ್ ಮತ್ತು ಇಂಗ್ಲೀಷ್ ಭಾಷೆಗಳ ಪ್ರಭಾವ ಹೆಚ್ಚಾಗಿದ್ದುದನ್ನು ಕಾಣಬಹುದು. ಮೊಹರಂ ಪದಗಳೂ ಇದಕ್ಕೆ ಹೊರತಿಲ್ಲ. ಜೊತೆಗೆ ಪ್ರಾದೇಶಿಕತೆಯೂ ಸಾಕಷ್ಟು ಪ್ರಭಾವ ಬೀರಿದೆ. ಇದರ ಜೊತೆಗೆ ತಮ್ಮ ಸುತ್ತ ಮುತ್ತಲಿನ ಪರಿಸರದಲ್ಲಿ ಪ್ರಚಲಿತವಿದ್ದ ಅನೇಕ ದೇಶಿಯ ಪದಗಳನ್ನು ನುಡಿಗಟ್ಟುಗಳನ್ನು ಜನಪದ ಕವಿಗಳು ಯಥೇಚ್ಛ ಬಳಸಿ ಹಾಡಿ ತೃಪ್ತರಾಗಿದ್ದಾರೆ. ಇದು ಜೀವಂತ ಭಾಷೆಯ ಆರೋಗ್ಯಕರ ಲಕ್ಷಣ.

ಈ ಎಲ್ಲ ವೈಲಕ್ಷಣಗಳನ್ನು ಗಮನದಲ್ಲಿಟ್ಟುಕೊಂಡು ಮೊಹರಂ ಪದಗಳಲ್ಲಿ ಒಡೆದು ಕಾಣುವ ಭಾಷಾ ವೈಶಿಷ್ಟ್ಯಗಳನ್ನು – ಸ್ವರ ವ್ಯತ್ಯಾಸ, ಮಧ್ಯಸ್ವರಾಗಮ, ಮಧ್ಯವರ್ಣಲೋಪ, ಅನುಕರಣವಾಚಿಗಳು, ಕೂಡುನುಡಿಗಳು, ದ್ವಿರುಕ್ತಿಗಳು, ನುಡಿಗಟ್ಟುಗಳು, ತದ್ಭವಗಳು, ಬೈಗುಳ, ಗಾದೆಗಳು ಎಂದು ಸ್ಥೂಲವಾಗಿ ವರ್ಗೀಕರಿಸಿ ವಿವರಿಸಬಹುದು.

ಮೊಹರಂ ಪದಗಳಲ್ಲಿ ಭಾವೈಕ್ಯ

ಭಾರತದಲ್ಲಿ ಅನೇಕ ಜಾತಿಗಳು, ಅನೇಕ ಧರ್ಮಗಳು ಇದ್ದರೂ ಮೂಲಭೂತವಾಗಿ ಅವೆಲ್ಲವುಗಳ ಉದ್ದೇಶ ಒಂದೇ ಅದೇ ಸತ್ಯಾನ್ವೇಷಣೆ ವಿವಿಧತೆಯಲ್ಲಿ ಏಕತೆಯಿರುವುದೇ ನಮ್ಮ ದೇಶದ ಒಂದು ವೈಶಿಷ್ಟ್ಯ.

ಮೊಹರಂ ಆಚರಣೆ ಮೂಲತಃ ಶೋಕಸ್ಥಾಯಿಯಾಗಿದ್ದರೂ ಕಾಲಚಕ್ರದಲ್ಲಿ ತನ್ನತನವನ್ನು ಕಳೆದುಕೊಂಡು ಉತ್ಸವದ ರಂಗು ಪಡೆದು ರಂಜಿಸುತ್ತಿರುವುದು ಕಂಡುಬರುತ್ತದೆ. ಮೊಹರಂ ಹಬ್ಬದ ಸಂದರ್ಭದಲ್ಲಿ ಹಾಡಲಾಗುವ ಮೊಹರಂ ಪದಗಳು ಹಿಂದು-ಮುಸ್ಲಿಂ ಮೈತ್ರಿಯ ಭದ್ರ ಬುನಾದಿಯಾಗಿವೆ. ಇವು ಇಸ್ಲಾಂ ಧರ್ಮಕ್ಕೆ ಸಂಬಂಧಿಸಿರುವುದರ ಜೊತೆಗೆ ಇಸ್ಲಾಮೇತರ ಧರ್ಮಕ್ಕೆ ಸಂಬಂಧಿಸಿದವುಗಳಾಗಿವೆ. ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದ ಮೊಹರಂ ಪದಗಳು ಸಹ ಹಿಂದೂ-ಸಂಸ್ಕೃತಿಯ ಗಾಢಪ್ರಭಾವಕ್ಕೆ ಒಳಗಾಗಿವೆ.

ಹಸೇನ ಹುಸೇನರನ್ನು ಒತ್ತೆಯಿಟ್ಟ ಹ | ಅಲಿ ಅವರ ಪದವು ಹಿಂದುಕಾವ್ಯಗಳಲ್ಲಿ ಬಸವಣ್ಣನವರು ಸೂರ್ಯನನ್ನು ತಡೆದು ನಿಲ್ಲಿಸಿದ ಕಥೆಯಿಂದ ಪ್ರೇರಣೆ ದೊರೆತಂತಿದೆ. ಬೆಳವನ ಪದ ಶಿಬಿ ಚಕ್ರವರ್ತಿಯ ಕಥೆಯನ್ನು, ಚಿಗರಿಯ ಕಥೆ ಮಲ್ಲಿಗೆ ದಂಡೆ ಎಂಬ ಜಾನಪದ ಹಾಡಿನಲ್ಲಿಯ ಗೋವಿನ ಕಥೆಯನ್ನು ಹೋಲುತ್ತದೆ.

ಮೊಹರಂ ಪದಗಳನ್ನು ಹಾಡುವ ಮೇಳಗಳಲ್ಲಿಯೂ ಮತೈಕ್ಯವನ್ನು ಕಾಣುತ್ತೇವೆ.

ನಾಗು-ಗೌಸು ಅಂತಾರ ಸೋಸಿ, ಸಂಗ್ಯಾಗದಿಗ್ಯಾನ ಬುದ್ದಿಗೆ ಬೆಲೆಯಿಲ್ಲಾ ರಿವಾಯಿತ ಹೇಳುವರಲ್ಲಾ ಖುಲ್ಲಾ- ಮುಂತಾದ ಹೆಸರುಗಳ ಯಾದಿಯನ್ನು ಹೇಳಬಹುದು.

ಮೊಹರಂ ಪದಗಳ ಸ್ವರೂಪ ಲಕ್ಷಣ

ಜನಪದ ಸಾಹಿತ್ಯದಲ್ಲಿ ಗೀತ ಸಾಹಿತ್ಯವು ಪ್ರಮುಖವಾದದ್ದು. ಗೀತ ಸಾಹಿತ್ಯದ ಒಂದು ಭಾಗವಾದ ಮೊಹರಂ ಪದಗಳು ಮೊಹರಂ ಹಬ್ಬದ ಸಂದರ್ಭದಲ್ಲಿ ಮಾತ್ರ ಬಯಲಿಗೆ ಬರುವಂತಹವುಗಳು. ಸಮಸ್ತರ ಚಿತ್ತವನ್ನು ಸೆರೆಹಿಡಿವ ಇವುಗಳನ್ನು ಶೋಕಸ್ಥಾಯಿಯ ಹಿನ್ನಲೆಯಲ್ಲಿ ಅತ್ಯಂತ ಗಂಭೀರವಾದ ದಾಟಿಯಲ್ಲಿ ಹಾಡಲಾಗುತ್ತದೆ. ಲಾವಣಿಯನ್ನು ಹೋಲುವ, ಲಾವಣಿಯಿಂದ ಭಿನ್ನವಾದ ತಮ್ಮದೇ ಆದ ಸ್ವರೂಪ ಲಕ್ಷಣಗಳುಳ್ಳ ಮೊಹರಂ ಪದಗಳು ಜನಪದ ಗೀತ ದಾಟಿಯಲ್ಲಿ ರೂಢಿಯಲ್ಲಿವೆ.

ಶರಣರ ಮತ್ತು ದಾಸರ ಪದಗಳಲ್ಲಿ ಇರುವಂತೆ ಮೊಹರಂ ಪದಗಳಲ್ಲಿಯೂ ಪಲ್ಲ ಅನು ಪಲ್ಲ ನುಡಿಗಳು ಇರುತ್ತವೆ. ಸಭಿಕರನ್ನು ಉದ್ದೇಶಿಸಿ ಪ್ರಾರಂಭವಾಗುವ ಪಲ್ಲದಲ್ಲಿ ಕಥೆಯ ಉದ್ದೇಶವನ್ನು ಹೇಳಲಾಗಿರುತ್ತದೆ. ಅನಂತರ ಬರುವ ನುಡಿಗಳಲ್ಲಿ ಕಥೆಯನ್ನು ವಿವರಿಸಲಾಗಿರುತ್ತದೆ. ಪ್ರತಿನುಡಿಗಳ ಕೊನೆಗೆ ಪಲ್ಲ ಇರುತ್ತದೆ. ಪದದ ಕೊನೆಯಲ್ಲಿ ಕವಿಗಳ, ಹಾಡುಗಾರರ ಪರಿಚಯ ಅಂಕಿತ ಇರುತ್ತದೆ.

ಪಲ್ಲ ಮುಕ್ತಾಯಗೊಂಡ ತರುವಾಯ ಆರಂಭವಾಗುವ ನುಡಿಗಳು ರೂಪದಲ್ಲಿ ಪಲ್ಲದ ಛಂದಸ್ಸನ್ನೇ ಹೋಲುತ್ತಿದ್ದರೂ ಸಾಲುಗಳ ಸಂಖ್ಯೆ ಹೆಚ್ಚಾಗಿರುತ್ತವೆ. ಇವುಗಳನ್ನು ದಾಟಿಗನುಗುಣವಾಗಿ ಇಳವು, ಏರು ಚ್ಯಾಲ ಎಂದು ವರ್ಗೀಕರಿಸಿ ನುಡಿಗಳನ್ನಾಗಿ ಮಾಡಿರುತ್ತಾರೆ. ಎಂಥ ಗಂಭೀರ ಸನ್ನಿವೇಶಗಳನ್ನು ಸಹ ಇವು ಯಶಸ್ವಿಯಾಗಿ ನಿರೂಪಿಸುತ್ತವೆ.

ಮೊಹರಂ ಪದಗಳಲ್ಲಿ ವೃತ್ಯಾನುಪ್ರಾಸ, ಛೇಕಾನುಪ್ರಾಸ, ಅಡಿಪ್ರಾಸ ಇದ್ದು ಇವು ಕೇಳುಗರ ಮನ ಅರಳಿಸುವಲ್ಲಿ ಸಫಲವಾಗುತ್ತವೆ. ಮೊಹರಂ ಪದಗಳ ಒಂದು ಭಾಗವಾದ ಸವಾಲ್ ಜವಾಬ್ ಪದಗಳು ಮೂಲತಃ ಸ್ಪರ್ಧಾ ಮನೋಭಾವ ಇರಿಸಿಕೊಂಡೇ ಹುಟ್ಟಿದಂತವುಗಳು. ಇವುಗಳಲ್ಲಿ ಸಾಹಿತ್ಯಕ ಸತ್ವಕ್ಕಿಂತ ಪುರಾಣ, ಶಾಸ್ತ್ರಧರ್ಮಕ್ಕೆ ಸಂಬಂಧಿಸಿದ ವಿಷಯ ವರದಿಗಳು ಇರುತ್ತವೆ. ತೋಡಿ ಪದಗಳು ಸ್ಪರ್ಧಾ ಮನೋಭಾವವುಳ್ಳವುಗಳಾಗಿದ್ದರೂ ಸವಾಲ್ ಜವಾಬ್ ಪದಗಳಿಗಿಂತ ಭಿನ್ನವಾಗಿರುತ್ತವೆ.

ಮೊಹರಂ ಪದಗಳು ಲಾವಣಿಯ ಶಿಲ್ಪವನ್ನು ಹೋಲುತ್ತಿದ್ದರೂ ಹಾಡುವ ದಾಟಿ ಹೇಳುವ ಕಥಾವಸ್ತುವಿನಿಂದ ಭಿನ್ನವಾಗಿ ನಿಲ್ಲುತ್ತವೆ. ಛಂದಸ್ಸಿನ ದೃಷ್ಟಿಯಿಂದ ನೋಡಿದಾಗ ಶಿಷ್ಟ ಸಾಹಿತ್ಯದ ಛಂದಸ್ಸುಗಳಿಗೆ ಜನಪದ ಹಾಡುಗಳು ಹೊಂದಿಕೊಳ್ಳುವುದಿಲ್ಲ. ಆದರೂ ಕೆಲವು ಮೊಹರಂ ಪದಗಳು ಹಾಡು ಗಬ್ಬಗಳ ಛಂದಸ್ಸಾದ ಸಾಂಗತ್ಯ, ಅಥವಾ ತ್ರಿಪದಿಯ ಮೊದಲಿನ ಸಾಲಿನ ಅಂಶಗಣ ಛಂದಸ್ಸಿಗೆ ಹೆಚ್ಚು ಹತ್ತಿರವಾಗಿ ನಿಲ್ಲುತ್ತವೆ.

ಉತ್ತರ ಕರ್ನಾಟಕದಲ್ಲಿ ಪ್ರಚಲಿತವಿರುವ ಮೊಹರಂ ಪದಗಳು ಮಾತ್ರಾಗಣಕ್ಕೆ ಹೊಂದಿಕೊಳ್ಳುವುದಿಲ್ಲ. ಆದರೆ ಲಯದ ದೃಷ್ಟಿಯಿಂದ ಕೆಲವೊಂದು ಪದಗಳು ಅಪರೂಪವಾಗಿ ಶರಷಟ್ಪದಿ, ಲಯ, ಭಾಮಿನಿ ಷಟ್ಪದಿ ಲಯವನ್ನು ಹೋಲುತ್ತವೆ. ತಾಳದಲ್ಲಿ ಏಕತಾಳ, ಕೇರವಾತಾಳ, ದಾದರ ದೀಪಚಂದಿಯನ್ನು ಹೋಲುತ್ತವೆ.

ಹೀಗೆ ಹಿಂದು-ಮುಸ್ಲಿಂ ಸಾಮರಸ್ಯದ ಸಂಕೇತಗಳಾಗಿ ಉಳಿದು ಬಂದಿರುವ ಈ ಮೊಹರಂ ಪದಗಳು ಜನಪದ ಸಾಹಿತ್ಯದ ಅಮೂಲ್ಯರತ್ನಗಳು ಅವುಗಳನ್ನು ಉಳಿಸಿಕೊಂಡು ಹೋಗಬೇಕಾದುದು ನಮ್ಮ-ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

ಡಾ|| ದಸ್ತಗೀರ ಅಲ್ಲೀಭಾಯಿ2.B Lewis & others (Ed) – Encyclopedia of Islam Vol.III (Netherland Pub-1971) P : 611. Prof. Fazl Ahmad – Husain (Taj Comp Pub New Delhi – 1983) Pg No. : 137.

[2] .       ಡಾ. ದಸ್ತಗೀರ ಅಲ್ಲೀಭಾಯಿ ಹೈದ್ರಾಬಾದ್ ಮೊಹರಂ (ಸಂ. . ೨೮..೧೯೯೦) ಪುಟ : .

[3] 4. G..E. Grunebaum – Mohammadan Festivals (H.S. Pub New Yark – 1951) P : 89.

[4] 5.           Mrs. Meer Hasan ali – Observations of the Muslaman’s of India Pg No. : 18.

[5] 6.           Shaikh Abrar Husain – Marriage Customs A.M. in India (Sterling Pub – 1976) P : 20.

[6] .       ಎಂ. ಜೀವನಟೀಪೂ ಎಕ್ಸ್ಪ್ರೆಸ್ (ನವ ಸಮಾಜ ಪ್ರಕಾಶನ ಹುಬ್ಬಳ್ಳಿ೧೯೮೨) ಪು : ೮೬.

 

[7] .       ಡಾ. ಎಂ. ಅಕಬರಅಲಿಕರ್ಬಲಾ ಹಾಡುಗಳು (ಜಾ.ಸಾ.. ಭಾಗ, .ವಿ.ವಿ.ಧಾ೧೯೭೪) ಪು:೨೫೧

[8] .       ಡಾ. ಹಿರಣ್ಮಯಮುಸ್ಲಿಂ ಉತ್ಸವ ಮತ್ತು ಸಂಸ್ಕಾರಗಳು (ಮೈ.ವಿ.ವಿ. ಮೈಸೂರು೧೯೭೧) ಪು.೧೯.

 

[9] ೧೦.     ಡಾ. ದಸ್ತಗೀರ ಅಲ್ಲೀಭಾಯಿ. ಮೊಹರಂ ಪದಗಳು (ಅಪ್ರಕಟಿತ ಮಹಾಪ್ರಬಂಧ) ಪು. ೨೬೬.

 

[10] ೧೧.   ಮಮ್ತಾಜ – ಹಜ್ಜಯಾತ್ರೆ (ತರಂಗ ವಾರಪತ್ರಿಕೆ ಮಣಿಪಾಲ ೧೬.೯.೧೯೮೪) ಪುಟ. : ೯-೧೦.