ಜನಪದ ಸಾಹಿತ್ಯದಲ್ಲಿ ಕಾವ್ಯದ ಹರವು ಬಲು ವಿಸ್ತಾರವಾಗಿದ್ದು ವೈವಿಧ್ಯಪೂರ್ಣವಾದುದಾಗಿದೆ. ‘ಲಾವಣಿ’ ಜನಪದ ಸಾಹಿತ್ಯದ ಒಂದು ಪ್ರಮುಖ ಕಾವ್ಯ ಪ್ರಕಾರವಾಗಿದೆ. ಅಷ್ಟೇ ಶ್ರೀಮಂತಿಕೆಯಿಂದ ಕೂಡಿದ ಸಾಹಿತ್ಯವಾಗಿದೆ. ಲಾವಣಿಯನ್ನು ಇಂಗ್ಲೀಷಿನಲ್ಲಿ balladಗೆ ಸಂವಾದಿಯಾಗಿದೆಯೆಂದು ಕೆಲ ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಆದರೆ ಇದು ತಪ್ಪು. balladಗೆ ಕಥಾಂಶವೇ ಮುಖ್ಯ. ಲಾವಣಿಗೆ ಹಾಡುಗಾರಿಕೆಯೇ ಮುಖ್ಯ. “ಜನಪದ ಗೀತೆಯೊಂದು ಮೊದಲಿನಿಂದ ಕೊನೆಯವರೆಗೆ ಕಥೆಯನ್ನು ಹೇಳದೆ ಹೋದರೆ ಅದನ್ನು ನಾವು ಃಚಿಟಟಚಿಜ ಎಂದು ಕರೆಯುವುದಿಲ್ಲ. ಪದ್ಯವೊಂದು ಕಥೆಯನ್ನು ಹೇಳಿದರೂ ಹಾಡಲಾಗದಿದ್ದರೆ ಮತ್ತೆ ಅದನ್ನು ‘ಲಾವಣಿ’ ಎನ್ನಲಾಗುವುದಿಲ್ಲ. ಲಾವಣಿ ಎಂದು ಕರೆಯಬೇಕಾದರೆ ಹಾಡು ಸಾಂಪ್ರದಾಯಿಕ ಜೀವನವನ್ನು ಹೊಂದಿರಬೇಕು. ಅಂದರೆ ಅದು ಪ್ರಧಾನವಾಗಿ ಜನತೆಯ ಸ್ಮರಣೆಗಳಲ್ಲಿ ಜೀವಂತವಾಗಿರಬೇಕು ಮತ್ತು ಗಾಯಕನಿಂದ ಗಾಯಕನಿಗೆ ವಾಚಿಕವಾಗಿ ಬಂದಿರಬೇಕು.’’೧

[1] ಆದರೆ ಕೆಲವರು ಹಾಡಿನ ರೂಪದಲ್ಲಿರುವ ಎಲ್ಲ ಕಥಾನಕಗಳನ್ನು ಲಾವಣಿಯೆಂದು ಕರೆದಿದ್ದಾರೆ. ಇದು ಸರಿಯಲ್ಲ. ಕಥನ ಕಾವ್ಯಗಳೆಲ್ಲವೂ ಲಾವಣಿಗಳಲ್ಲ. ಲಾವಣಿಗಳು ಪ್ರಾದೇಶಿಕವಾಗಿಯೂ ಭಿನ್ನವಾಗಿವೆ. ಮೈಸೂರು ಸೀಮೆಯ ಲಾವಣಿಗಳು ಗ್ರಾಂಥಿಕವಾಗಿದ್ದು ಅವುಗಳನ್ನು ಹಾಡುವ ರೀತಿಯೂ ಬೇರೆಯಾಗಿದೆ. ಉತ್ತರ ಕರ್ನಾಟಕದ ಲಾವಣಿಗಳೇ ಬೇರೆ. ವಿಶೇಷವಾಗಿ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ಕಂಡುಬರುವ ಲಾವಣಿಗಳು ಅಥವಾ ಗೀಗೀ ಪದಗಳನ್ನು ಃಚಿಟಟಚಿಜ ನೊಂದಿಗೆ ತಳಕು ಹಾಕುವುದು ಸರಿಯಲ್ಲ. ನಾನೀಗ ಉತ್ತರ ಕರ್ನಾಟಕದಲ್ಲಿ ವಿಶಿಷ್ಯ ಕಾವ್ಯ ಪ್ರಕಾರವಾದ ಲಾವಣಿಗಳನ್ನು ಅವಲೋಕಿಸಿರುವೆ. ಈಗಾಗಲೇ ಲಾವಣಿ ಕುರಿತು ಸಾಕಷ್ಟು ಅಧ್ಯಯನ ನಡೆದಿದೆಯಾದರೂ ಪ್ರಸ್ತುತ ಸಂಗ್ರಹಕ್ಕೆ ಪೂರಕವಾಗಿ ಲಾವಣಿ ಬಗೆಗೆ ಸಂಕ್ಷಿಪ್ತವಾಗಿ ನೋಡಲಾಗಿದೆ.

ಲಾವಣಿ ಬೆಳೆದುಬಂದ ಬಗೆ :

ಲಾವಣಿಗೆ ಲವಣ, ಲಾವಣ್ಯ, ಲಾವಳ ಶಬ್ದಗಳೇ ಮೂಲಾಧಾರವಾಗಿವೆ. ಲವಣ ಎಂದರೆ ಉಪ್ಪು, ರುಚಿ, ಲಾವಣಿ ಸಾಹಿತ್ಯ ರುಚಿಕರವಾದುದು. ಲಾವಣ್ಯ ಎಂದರೆ ಸೌಂದರ್ಯ, ಶೃಂಗಾರ. ಹೆಣ್ಣಿನ ಲಾವಣ್ಯವನ್ನು ವರ್ಣಿಸುವ ಶೃಂಗಾರ ಸ್ವಭಾವದ ಲಾವಣಿಗಳು ಇರುತ್ತವೆ. “ಶೃಂಗಾರದಿಂದ ವ್ಯುತ್ಪತ್ತಿಗೊಂಡ ಲಾವಣಿ ಉಗಮ ಕುರಿತು ನಿಖರವಾಗಿ ಹೇಳುವ ಯಾವುದೇ ಆಧಾರಗಳು ಈವರೆಗೆ ಲಭ್ಯವಿಲ್ಲವಾದರೂ ಮಹಾರಾಷ್ಟ್ರದ ಗಡಿ ಪ್ರದೇಶದಲ್ಲಿ ಈ ತರಹದ ಸಾಹಿತ್ಯ ವಿಪುಲವಾಗಿ ದೊರೆಯುವುದರಿಂದ ಅದು ಅಲ್ಲಿಂದಲೇ ಉಗಮಿಸಿರಬಹುದೆಂದು ಊಹಿಸಲಾಗಿದೆ. ಇನ್ನೊಂದು  ತಿಳುವಳಿಕೆಯ ಪ್ರಕಾರ ಪೇಶ್ವೆಯವರು ಯುದ್ಧ ಸಮಯದಲ್ಲಿ ಸೈನಿಕರಿಗೆ ಹುರುಪು-ಹುಮ್ಮಸ್ಸು ನೀಡುವುದಕ್ಕಾಗಿ ಹೇಳಿಸುತ್ತಿದ್ದ ಪೋವಾಡ ಲಾವಣಿಗಳು ಕನ್ನಡ ಲಾವಣಿ ರಚನೆಗೆ ಪ್ರೇರಣೆಯಾದವು.’’೨[2] ಎಂದು ಅಭಿಪ್ರಾಯಪಡಲಾಗಿದೆ.

ಆದರೆ ಲಾವಣಿ ಮೂಲವನ್ನು ಕನ್ನಡದಲ್ಲಿಯೇ ಕಂಡುಕೊಳ್ಳಲು ಯತ್ನಿಸಲಾಗಿದೆ. ಗುಣಚಂದ್ರನು (ಕ್ರಿ.ಶ. ೧೬೫೦) ತನ್ನ ಛಂದಸ್ಸಾರದಲ್ಲಿ ‘ಲಾವಳಿ’ ವ್ಯಾಖ್ಯೆಯನ್ನು ನೀಡಿದ್ದಾನೆ.

ಲಘುಗಳ ಮಿಳಿತವ ಮಾಡಿ
ಕೊನೆಯಲಿ ಗುರುಗಳ ಹೂಡಿ
ಅರ್ಥವ ಸಾರವ ನೋಡಿ
ಪ್ರಾಸವ ಕೊನೆಯಲಿ ಕೂಡಿ
ಪಾದಮಿತಿಯ ಬೀಸಾಡಿ
ಲಾವಳಿ ಕೃತಿಗಳ ಪಾಡಿ

ಇದರ ಪ್ರಕಾರ ‘ಲಾವಳಿ’ ಪದದಿಂದ ‘ಲಾವಣಿ’ ಹುಟ್ಟಿದೆಯೆಂದು ಭಾವಿಸಲಾಗುತ್ತಿದೆ. ಲಾವಣಿಯ ಇತಿಹಾಸವನ್ನು ಏಳನೆಯ ಶತಮಾನದಷ್ಟು ಹಿಂದಕ್ಕೆ ಒಯ್ಯಲಾಗುತ್ತದೆ. ಕಾವ್ಯಾವಲೋಕನದಲ್ಲಿ ಬರುವ ಬಾಜನಗಬ್ಬವು ಇಂದಿನ ಲಾವಣಿಯಾಗಿರಬೇಕೆಂದು ತರ್ಕಿಸಲಾಗಿದೆ. ಲಭ್ಯ ಐತಿಹಾಸಿಕ ಲಾವಣಿಗಳ ಪ್ರಕಾರ ಲೆಕ್ಕ ಹಾಕಿದರೆ ಕನ್ನಡ ಲಾವಣಿಗೆ ಮುನ್ನೂರು ವರ್ಷಗಳ ಇತಿಹಾಸವಿದೆಯೆಂದು ಹೇಳಬಹುದು.

ಲಾವಣಿಗೆ ‘ಶಾವಿರಿಕಿ’ ಎಂದು ಕರೆಯಲಾಗಿದೆ. ಇದು ಪರ್ಶಿಯನ್ ಮೂಲದಿಂದ ಬಂದ ಶಬ್ದವಾಗಿದೆ. ‘ಶಾವಿರಿಕಿ’ ಎಂದರೆ ವೀರಗೀತಗಳು. ಲಾವಣಿಗಳಲ್ಲಿ ಸಾಕಷ್ಟು ವೀರಗೀತಗಳಿರುವುದನ್ನು ಕಾಣಬಹುದು. ಆದರೆ ಶಾವಿರಿಕಿ ಅಷ್ಟಾಗಿ ಬಳಕೆಯಲ್ಲಿಲ್ಲ. ಲಾವಣಿಗಳನ್ನು ಹಾಡುವಾಗ ಚರ್ಮದಿಂದ ತಯಾರಾದ ದಪ್ಪುವಾದ್ಯ ಬಳಸುವುದರಿಂದ ಇದನ್ನು ‘ದಪ್ಪಿನಪದ’ವೆಂದೂ ಕೆಲವೆಡೆ ಕರೆಯಲಾಗುತ್ತದೆ. ಲಾವಣಿಗಳನ್ನು ಹಾಡುವಾಗ ಪ್ರತಿ ಚರಣಕ್ಕೊಮ್ಮೆ ‘ಗೀಯಾಗೀಯಾಗೀ’ ಅಥವಾ ‘ಜೀಯಾಜೀಜೀ’ ಎಂಬ ಸೊಲ್ಲು ಹೇಳುವುದರಿಂದ ಇವುಗಳನ್ನು ಗೀಗೀಪದ ಅಥವಾ ಜೀಪದಗಳೆಂದೂ ಕರೆಯುವರು.  ಲಾವಣಿಗಳಲ್ಲಿ ಹರದೇಶಿ-ನಾಗೇಶಿ, ಕಲ್ಗಿ-ತುರಾಯಿ, ಸವಾಲ್-ಜವಾಬ್, ತೋಡಿ-ತೋಡಿ ಎಂಬ ಸಂಪ್ರದಾಯಗಳಿವೆ. ಇವೆಲ್ಲ ಒಂದೇ ಆಗಿದ್ದು ಶಿವ-ಶಕ್ತಿ ಆರಾಧಕರ ಪಂಗಡಗಳಾಗಿವೆ. ಇವುಗಳನ್ನು ಸ್ವತಂತ್ರ ಪ್ರಕಾರಗಳೆಂದು ಪರಿಗಣಿಸಲಾಗದು. ಸಂವಾದ ರೂಪದಲ್ಲಿರುವ ಈ ಲಾವಣಿಗಳು ಜನಾಕರ್ಷಣೆಗಾಗಿ ಜನ್ಮ ತಳೆದಿದ್ದು ಮೂಲ ಉದ್ದೇಶದಲ್ಲಿಯೂ ಬದಲಾಗಿವೆ. ಲಾವಣಿ ಮತ್ತು ಗೀಗೀ ಪದಗಳಿರುವ ಸಂಬಂಧ ಮತ್ತು ವ್ಯತ್ಯಾಸಗಳನ್ನು ಕುರಿತು ಈ ಕೆಳಗಿನ ವಿದ್ವಾಂಸರ ಅಭಿಪ್ರಾಯಗಳೊಂದಿಗೆ ಪರಿಶೀಲಿಸೋಣ.

 “ಜನರಂಜನೆ ಮತ್ತು ಹೆಚ್ಚಿನ ಪ್ರಚಾರಕ್ಕಾಗಿ ಲಾವಣಿಯು ಬರುಬರುತ್ತಾ ಗೀಗೀ ಸಂಪ್ರದಾಯ ಸ್ವರೂಪಕ್ಕೆ ತಿರುಗಿರಬೇಕೆನಿಸುತ್ತದೆ. ಹೀಗಾಗಿ ಇತ್ತೀಚೆಗಂತೂ ಉತ್ತರ ಕರ್ನಾಟಕದಲ್ಲಿ ಲಾವಣಿಕಾರರಿಗೂ, ಗೀಗೀಯವರಿಗೂ ಯಾವುದೇ ರೀತಿಯ ಅಂತರವೇ ಇಲ್ಲವೆನ್ನುವಷ್ಟು ಏಕರೂಪತೆಯನ್ನು ಸಾಧಿಸಿದೆ. ಹಾಡಿನ ವಸ್ತು ವಿಶೇಷದಲ್ಲಿ ಅಷ್ಟೇ. ಆದರೆ ಕಂಡು ಬರುವುದಷ್ಟೇ ಅಂತರ, ಗೀಗೀ ಹಿಮ್ಮೇಳದವರು ಪಲ್ಲವಿಗೊಮ್ಮೆ “ಗೀಯಾಗೀಯಾಗ’’ ಇಲ್ಲವೆ “ಜೀಜೀಜೀ” ಎಂದು ಹೇಳಿದರೆ, ಲಾವಣಿಯ ಹಿಮ್ಮೇಳದವರು ಹಾಡಿನ ಪಲ್ಲವಿಯ ಸಾಲುಗಳನ್ನೇ ಪುನರಾವೃತ್ತಿ ಮಾಡುತ್ತಾರೆ. ಸಂದರ್ಭಸಿಕ್ಕಾಗ ಗೀಗೀಯವರಂತೆ ಅವರೂ ವಿಡಂಬನಾತ್ಮಕ ಬೆರಕಿಯ ಮಾತುಗಳನ್ನು ನಡುನಡುವೆ ಸೇರಿಸಿ ಕೇಳುಗರನ್ನು ರಂಜಿಸುತ್ತಾರೆ. ಆದರೆ ಇಲ್ಲಿಯ ಎರಡೂ ಸಂಪ್ರದಾಯದವರೂ ದಪ್ಪು ವಾದ್ಯವನ್ನೇ ತಮ್ಮ ಹಾಡಿನ ಹಿನ್ನೆಲೆಯಲ್ಲಿ ಬಳಸುತ್ತಾರೆಂಬುದು ಮಹತ್ವದ್ದಾಗಿದೆ.’’ (ಸೋಮಶೇಖರ ಇಮ್ರಾಪುರ, ಜಾನಪದ ವ್ಯಾಸಂಗ, ಪುಟ-೫೧).

 “ಕಲಾಕಾರನ ಬುದ್ಧಿ ಯಾವಾಗಲೂ ಹೊಸದನ್ನು ಸುಲಭವಾದುದನ್ನು ಹುಡುಕುತ್ತಲೇ ಇರುತ್ತದೆ. ಲಾವಣಿ ಲಯಕ್ಕೆ ಒಗ್ಗುವ ವಾದ್ಯಗಳನ್ನು ಹುಡುಕುವುದರ ಜೊತೆಗೆ ಹಿಮ್ಮೇಳ ಹೊಂದಿದ್ದರೆ ಒಳಿತೆಂದು ಅವನ ಬುದ್ಧಿ ಕಂಡುಕೊಂಡಿರಬೇಕು. ಅಂದೇ ಲಾವಣಿಯ ವಿಶಿಷ್ಟವಾದ ಗೀಗೀ ಪದಗಳು ಹೊರಬಂದವು. ಮುಮ್ಮೇಳದ ಲಾವಣಿ ಹಾಡುಗಾರನಿಗೆ ಇದರಿಂದ ಶ್ರಮದ ಸೌಕರ್ಯ, ಗೇಯತೆಯ ಸೌಲಭ್ಯ ಒದಗಿಬಂದಿತು. ಹಾಡುಗಾರನ ಕೈಯಲ್ಲಿ ತಾಳ, ತುಂತುಣಿ ನುಡಿಯತೊಡಗಿದವು. ಹಾಡುಗಾರ ಒಂದೊಂದು ನುಡಿ ಹಾಡಿ ನಿಂತೊಡನೆ ಹಿಮ್ಮೇಳದವರು ಹಾಡಿನ ಪಲ್ಲವನ್ನೋ ಹಾಡುಗಾರ ಅಂದುದನ್ನೋ ಹಾಡುತ್ತಾ ಮುದ್ರಿಕೆಯಾಗಿ ಗೀಗೀ ಮೇಳದ ವೈಶಿಷ್ಟ್ಯವಾಯಿತು ….. ಹರದೇಶಿ ನಾಗೇಶಿ ಲಾವಣಿಗಳನ್ನು ಗೀಗೀ ಮೇಳದವರು ಹೇಳಬಲ್ಲರು ….. ಒಟ್ಟಿನಲ್ಲಿ ಗೀಗೀ ಮೇಳದವರು ಎಲ್ಲ ತರಹದ ಲಾವಣಿಗಳನ್ನು ಹಾಡಬಲ್ಲರು.’’ (ಜಾನಪದ ಸಾಹಿತ್ಯ ದರ್ಶನ-೫, ಪುಟ-೧೫೭).

“ಲಾವಣಿಗೂ ಮತ್ತು ಗೀಗೀ ಪದಗಳಿಗೂ ಇರುವ ಅಂತರ ಗೋಷ್ಠಿ ವಿಧಾನದಲ್ಲಿಯೇ ಹೊರತು ರಚನಾ ಶಿಲ್ಪದಲ್ಲಲ್ಲ. ಮೂಲತಃ ಲಾವಣಿ ಕವಿ ಒಂದು ಹಾಡನ್ನು ಒಬ್ಬನೇ ಹಾಡಬೇಕು ಅಥವಾ ಮೇಳದವರೇ ಹಾಡಬೇಕು ಎಂದು ನಿಶ್ಚಯಿಸಿ ಕಟ್ಟುವುದಿಲ್ಲ. ಒಂದು ಲಾವಣಿ ಪದ ನಿರ್ಮಾಣಗೊಂಡ ಮೇಲೆ ಅದನ್ನು ಒಬ್ಬನೇ ನಿಂತು ಹಾಡಬಹುದು ಅಥವಾ ಮೇಳಗೂಡಿಯೂ ಹಾಡಬಹುದು. ಒಬ್ಬನೇ ನಿಂತು ಹಾಡುವಾಗ ‘ಬಯಲು ಲಾವಣಿ’ ಎನಿಸಿಕೊಳ್ಳುತ್ತದೆ. ಮೇಳಗೂಡಿ ಹಾಡುವಾಗ ಅದೇ ‘ಮೇಳ ಲಾವಣಿ’ಯಾಗುತ್ತದೆ. ಈ ಮೇಳಲಾವಣಿಗೆ ‘ಗೀಗೀಪದ’, ‘ಶಾವಿರಕಿ ಹಾಡು’, ‘ಜೀಜೀಪದ’ ಎಂಬ ಪರ್ಯಾಯ ನಾಮಗಳುಂಟು.’’ (ಡಾ. ಶ್ರೀರಾಮ ಇಟ್ಟಣ್ಣನವರ ಲಾವಣಿ, ಪುಟ-೨೭).

“ಯಾವ ಬಗೆಯ ಲಾವಣಿಯೇ ಇರಲಿ; ಅದರ ಜೀವಜೀವಾಳ ಉತ್ಸಾಹ. ಓಟ ನಿಟ್ಟೋಟ. ರಾಗಲಯಕ್ಕಿಂತಲೂ ತಾಳಲಯವೇ ಅದರಲ್ಲಿ ಪ್ರಾಧಾನ್ಯ. ಏರು ಇಳುವು ವೈವಿಧ್ಯಧಾಟಿಯ ಕುರುಹು. ಲಾವಣಿಯ ಭಾಷೆ ಜನಸಾಮಾನ್ಯರಿಗೂ ತಿಳಿಯುವಂತಹದು; ಸಂಸ್ಕೃತದ ಪ್ರಾಬಲ್ಯ ಇಲ್ಲವೆ ಇಲ್ಲ. ಅಂತ್ಯ ಪ್ರಾಸ ಮಾತ್ರ ಬೇಕೇಬೇಕು. ಈ ಹೃದಯಂಗಮ ಸಾಹಿತ್ಯಕ್ಕೆ ಮನಸೋತ ಗ್ರಾಮೀಣರು ಇಂದಿಗೂ ಅದನ್ನು ಉಳಿಸಿಕೊಂಡು ಬಂದಿದ್ದಾರೆ. ಗರತಿಗೆ ತ್ರಿಪದಿ ಒಲಿದಂತೆ ಪುರುಷರಿಗೆ ಲಾವಣಿ ಸೋತುಬಂದಿದೆ. ಅಷ್ಟು ಹೃದಯಂಗಮವಾಗಿದೆ ಕನ್ನಡ ಲಾವಣಿ ಸಾಹಿತ್ಯ.’’ (ಡಾ. ಎಂ.ಎಸ್. ಸುಂಕಾಪುರ : ಲಾವಣಿ ಸಾಹಿತ್ಯದಲ್ಲಿ ಸಂಗೊಳ್ಳಿ ರಾಯಣ್ಣ – ಮುನ್ನುಡಿ – ಘಿII).

ಲಾವಣಿ ಲಕ್ಷಣ :

ಲಾವಣಿ ಜನಪದ ಸಾಹಿತ್ಯದ ಒಂದು ಕಾವ್ಯ ಪ್ರಕಾರವಾಗಿದ್ದರೂ ಗೇಯತೆಯೇ ಅದರ ಲಕ್ಷಣವಾಗಿದೆ. ರಗಳೆಯ ಹಾಗೆ ಇದು ಛಂದೋಪ್ರಕಾರವೂ ಹೌದು. ಮೂಲತಃ ನಿರೂಪಣಾತ್ಮಕ ವಾದುದು. ಹಾಗಾಗಿ ಕಥೆ, ತತ್ವ, ಆಧ್ಯಾತ್ಮ, ಅನುಭಾವ, ಶೃಂಗಾರ, ಘಟನೆ, ಮನರಂಜನೆ, ಹಾಸ್ಯ ಇನ್ನೂ ಮುಂತಾದ ವಸ್ತುಗಳನ್ನು ಒಳಗೊಂಡಿರುತ್ತದೆ. ಲಾವಣಿಗೆ ಇಂಥದೇ ವಸ್ತು ಇರಬೇಕು ಎಂಬ ಕಟ್ಟುಪಾಡುಗಳಿಲ್ಲ. ಪೌರಾಣಿಕ, ಐತಿಹಾಸಿಕ, ಚಾರಿತ್ರಿಕ, ಸಾಮಾಜಿಕ, ರಾಜಕೀಯ, ಆಧ್ಯಾತ್ಮ, ವಿಜ್ಞಾನಕ್ಕೆ ಸಂಬಂಧಿಸಿದ ವಸ್ತುಗಳನ್ನು ಲಾವಣಿಗಳು ಒಳಗೊಂಡಿವೆ. ವೈವಿಧ್ಯಮಯ ವಸ್ತುವನ್ನಾಧರಿಸಿ ಲಾವಣಿಗಳು ರಚಿತವಾಗಿರುವುದರಿಂದ ಅದರ ಹರವು ಬಲುವಿಸ್ತಾರವಾದುದಾಗಿದೆ. ಹಳ್ಳಿಗರು ಈ ಲಾವಣಿಗಳನ್ನು ರಚಿಸಿರುವರಾದರೂ ಅವುಗಳಲ್ಲಿ ಪ್ರೌಢ ಸಾಹಿತ್ಯದ ಒಳ್ಳೆಯ ಲಕ್ಷಣಗಳನ್ನು ಕಾಣಬಹುದು. ಹಾಗೆಯೇ ವಸ್ತುವಿಗೆ ಅನುಸಾರವಾಗಿ ಶೃಂಗಾರ, ವೀರ, ಕರುಣ, ಹಾಸ್ಯರಸಗಳನ್ನು ಕಾಣಬಹುದು. ಹಲವಾರು ಲಾವಣಿಗಳು ಚರಿತ್ರೆ ನಿರ್ಮಾಣದಲ್ಲಿ ಸಹಕಾರಿಯಾಗಿವೆ.

ಲಾವಣಿಗಳು ಜನಪದ ಸಾಹಿತ್ಯಕ್ಕೆ ಸೇರಿದ್ದರೂ ಅವು ವೈಯಕ್ತಿಕ ಸೃಷ್ಟಿಗಳಾಗಿವೆ. “ಲಾವಣಿಕಾರರು ಅನೇಕ ಪರಿಕರಗಳ ಮುಖಾಂತರ ಒಬ್ಬನೇ ಕಾವ್ಯ ನಿರ್ಮಿಸುತ್ತಾನೆ. ಲಾವಣಿ ನಿರ್ಮಾಣಗೊಂಡರೆ ಮುಗಿಯಲಿಲ್ಲ ಅಥವಾ ಕೇವಲ ವಾಚನ ಮಾಡಿದರೆ ಏನನ್ನೂ ಸಾಧಿಸಿದಂತಾಗಲಿಲ್ಲ. ಇದು ಕೃತಾರ್ಥವಾಗುವುದು ಒಬ್ಬನ ಬಾಯಲ್ಲಿ ಹಾಡಾಗಿ ನಿಂತಾಗ. ಲಾವಣಿಯ ಒಂದು ಪ್ರಮುಖವಾದ ಲಕ್ಷಣವೆಂದರೆ ಇದು ಹಾಡುಗಬ್ಬ. ಕಂಠದಿಂದ ಕಂಠಕ್ಕೆ ಊರಿನಿಂದ ಊರಿಗೆ ಪ್ರಸಾರವಾಗುತ್ತ ಹೋದಾಗ  ಹುಟ್ಟಿದ್ದಕ್ಕೆ ಸಾರ್ಥಕ’’೩[3] ಲಾವಣಿಗೂ ಜನಪದ ಸಾಹಿತ್ಯದ ಇತರ ಕಾವ್ಯ ಪ್ರಕಾರಗಳಿಗೂ ಬಹಳ ವ್ಯತ್ಯಾಸವಿದೆ.

ಲಾವಣಿಯ ಶಿಲ್ಪ

ಪ್ರತಿಯೊಂದು ಹಾಡಿಗೂ ತನ್ನದೇ ಆದ ಶಿಲ್ಪವಿರುತ್ತದೆ. ಲಾವಣಿಯ ಶಿಲ್ಪವು ಉಳಿದ ಹಾಡುಗಳಿಗಿಂತ ಭಿನ್ನವಾಗಿರುತ್ತದೆ. ಲಾವಣಿಯಲ್ಲಿ ಸಾಹಿತ್ಯಕ್ಕಿಂತ ಹಾಡುಗಾರಿಕೆಯೇ ಮುಖ್ಯವಾಗಿರುತ್ತದೆ. ಹಾಡುಗಾರಿಕೆ ಸಾಗಿದಂತೆಲ್ಲ ಹಾಡಿನ ಛಂದಸ್ಸು ಬದಲಾಗುತ್ತದೆ. ಹಾಡಿನ ಏರಿಳಿತಗಳು ಕೇಳುಗರ ಮನವನ್ನು ತಟ್ಟುತ್ತವೆ. ಲಾವಣಿಯ ಶಿಲ್ಪ ಅಥವಾ ಅದರ ಮೈಕಟ್ಟಿನಲ್ಲಿ ಪಲ್ಲ, ಚೌಕ, ನುಡಿ, ಚಾಲ, ಶ್ಲೋಕ, ದುಡಕಿ, ಕೂಡುಪಲ್ಲ, ಅಗಮ ಎಂಬ ಅಂಗಾಂಗಗಳಿವೆ. ಅವು ಹಂತಹಂತವಾಗಿ ಬರುತ್ತವೆ. ಇವೆಲ್ಲವೂ ಎಲ್ಲಾ ಲಾವಣಿಗಳಲ್ಲಿ ಇರಬೇಕೆಂಬ ನಿಯಮವಿಲ್ಲ. ಅದು ರಚನೆಕಾರರನ್ನು ಹಾಡುವ ವಸ್ತುವನ್ನು ಅವಲಂಬಿಸಿರುತ್ತದೆ.

ಪಲ್ಲ : ಲಾವಣಿಯ ಪಲ್ಲವು ಸಾಮಾನ್ಯವಾಗಿ ಕೇಳುಗರನ್ನು ಕುರಿತಾಗಿರುತ್ತದೆ. ಸಾವಿರಾರು ಜನರು ಎದುರಿಗೆ ಹಾಡು ಕೇಳಲು ಕುಳಿತಿರುತ್ತಾರೆ. ಅವರಿಗೆ ವಿನಯದಿಂದ ವಂದಿಸಿ ಇಡೀ ಜನರ ಗಮನವನ್ನು ತನ್ನ ಕಡೆಗೆ ಕೇಂದ್ರೀಕರಿಸಿಕೊಳ್ಳುವುದು ಪಲ್ಲದ ಉದ್ದೇಶವಾಗಿರುತ್ತದೆ. ಪಲ್ಲದಲ್ಲಿಯೇ ತಾನು ಯಾವ ಹಾಡು ಹಾಡುತ್ತೇನೆಂಬ ಸೂಚನೆಯನ್ನು ನೀಡುತ್ತಾನೆ.

ಚಿತ್ತಗೊಟ್ಟು ಕೇಳಿರಣ್ಣ ಕಿತ್ತೂರ ನಾಡಿನ ಸುದ್ದಿ
ಕತ್ತಿ ಹಿರದ ನಿಂತ್ತಿದಾನ ಲಡಾಯಕ
ಸಂಗೊಳ್ಳಿ ರಾಯಣ್ಣನಂಥ ಬಂಟ ಇದ್ದರಿರಬೇಕ

ಪ್ರತಿ ಚೌಕನ್ನು ಮುಗಿಸಿ ಪಲ್ಲವನ್ನು ಮತ್ತೆ ಮತ್ತೆ ಹೇಳುವುದರಿಂದ ಕೇಳುಗರನ್ನು ಜಾಗೃತಗೊಳಿಸುವ ಉದ್ದೇಶ ಇದಾಗಿರುತ್ತದೆ.

ಚೌಕ : ಪಲ್ಲದ ತರುವಾಯ ಬರುವುದೇ ಚೌಕ. ಒಂದೊಂದು ಲಾವಣಿ ಐದರಿಂದ ಏಳೆಂಟು ಚೌಕಗಳವರೆಗೂ ಹಬ್ಬಿರುತ್ತದೆ. ಕಡಿಮೆಯೆಂದರೆ ಮೂರು ಚೌಕಗಳಿರುತ್ತವೆ. ಚೌಕಗಳಲ್ಲಿ ಕಥೆ ಅಥವಾ ವಿಷಯ ಪ್ರತಿಪಾದನೆಗಳಿರುತ್ತವೆ.

ನುಡಿ : ಇದು ಚೌಕಿನ ಮುಖ್ಯ ಭಾಗವಾಗಿದ್ದು ಪಲ್ಲದ ಪುನರಾವರ್ತನೆಯೂ ಆಗಿರುತ್ತದೆ.

ಚಾಲ : ಲಾವಣಿಗೆ ಮೆರಗು ಬರುವುದೇ ಈ ಚಾಲದಿಂದ. ಇದನ್ನು ‘ಇಳವು’ ಎಂದೂ ಕರೆಯುತ್ತಾರೆ. ಇದು ಚೌಕದ ತರುವಾಯ ಬರುತ್ತದೆ. ಇದರ ಚರಣಗಳು ಚಿಕ್ಕದಾಗಿದ್ದು ಪ್ರಾಸಯುಕ್ತವಾಗಿರುತ್ತವೆ. ಹಾಡಿನ ಏಕತಾನತೆಯನ್ನು ತಪ್ಪಿಸಿ ವೈವಿಧ್ಯತೆಯನ್ನುಂಟು ಮಾಡುವುದೇ ಚಾಲದ ಉದ್ದೇಶವಾಗಿರುತ್ತದೆ. ಸನ್ನಿವೇಶವನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರೂಪಿಸಲು ಚಾಲವನ್ನು ಬಳಸುತ್ತಾರೆ.

ಶ್ಲೋಕ : ಇದು ಪದ್ಯಗಳಲ್ಲಿಯೇ ಗದ್ಯರೂಪದಲ್ಲಿ ನಿರೂಪಿಸಿದ ವಿಧಾನವಾಗಿರುತ್ತದೆ. ಇಲ್ಲಿ ಸಂವಾದ ವಿಧಾನವಿರುವುದರಿಂದ ನಿಧಾನವಾಗಿ ಬರುತ್ತದೆ. ಇಲ್ಲಿ ಕಾವ್ಯಾಂಶವಿರುವುದಿಲ್ಲ. ಸಂಸ್ಕೃತ ಶ್ಲೋಕಕ್ಕೂ ಇದಕ್ಕೂ ಸಂಬಂಧವಿಲ್ಲ.

ದುಡಕಿ : ಇದು ನಿಯತವಾಗಿ ಬರುವುದಿಲ್ಲ. ಹಾಡು ರಂಗೇರಿದಾಗ ದುಡಕಿ ಬರುತ್ತದೆ. ಇದರ ಹೆಸರೇ ಸೂಚಿಸುವಂತೆ ಇದು ತೀವ್ರಗತಿಯಲ್ಲಿರುತ್ತದೆ. ಪ್ರಾಸಾನುಪ್ರಾಸಗಳ ಶಬ್ದಗಳು ಪುನರಾವರ್ತನೆಯಾದಾಗ ಕೇಳುಗರು ಮೈಮರೆತು ಬಿಡುತ್ತಾರೆ.

ಕೂಡುಪಲ್ಲ : ಕೂಡುಪಲ್ಲವು ಚೌಕಿನ ಕೊನೆಯ ಭಾಗವಾಗಿರುತ್ತದೆ. ಚೌಕದ ಕೊನೆಯ ಚರಣಗಳು ಪಲ್ಲಕ್ಕೆ ಹೋಗಿ ಕೂಡುವುದರಿಂದ ‘ಕೂಡುಪಲ್ಲ’ ಎಂದು ಕರೆಯುತ್ತಾರೆ. ಚಾಲ ಇಳುವಿನಲ್ಲಿದ್ದರೆ ಕೂಡುಪಲ್ಲ ‘ಏರು’ವಿನಲ್ಲಿರುತ್ತದೆ. ಆದುದರಿಂದ ಇದಕ್ಕೆ ಏರು ಎಂಬ ಹೆಸರಿದೆ. ಕೂಡುಪಲ್ಲ ಹಾಡಿನ ಮೇಳಕ್ಕೆ ವಿಶ್ರಾಂತಿಯ ಸಂದರ್ಭವೂ ಆಗಿರುತ್ತದೆ.

ಅಗಮ : ಇದು ಹಾಡಿಗೆ ಸಂಬಂಧವಿಲ್ಲವಾದರೂ ಹಾಡುವಾಗ ಅಥವಾ ಹಾಡು ಕಟ್ಟಿದವರ ವಿವರಣೆಯಿರುತ್ತದೆ. ಹೆಸರು, ಊರು, ಗುರು, ಮೇಳಗಾರರು, ಹಾಡಿನ ಪಾಂಡಿತ್ಯ, ಕೌಶಲ್ಯ ಇತ್ಯಾದಿಗಳನ್ನು ವಿವರಿಸಲಾಗುತ್ತದೆ. ಇದು ಲಾವಣಿಯ ಆಕರವಾಗಿರುತ್ತದೆ.

ಲಾವಣಿ ಪ್ರಕಾರಗಳು :

ಲಾವಣಿ ಒಂದೇ ಶರೀರವಾಗಿ ಹುಟ್ಟಿದರೂ ಸಹ ಅದು ಎರಡು ರೀತಿಯಲ್ಲಿ ಪ್ರದರ್ಶನವಾಗುತ್ತದೆ. ಒಂದು ಬಯಲು ಲಾವಣಿ. ಇನ್ನೊಂದು ಮೇಳ ಲಾವಣಿ.

ಬಯಲು ಲಾವಣಿ : ಬಯಲಿನಲ್ಲಿ ಜನರನ್ನು ಕೂಡಿಸಿ ಒಬ್ಬನೇ ಕಾಲಿಗೆ ಗೆಜ್ಜೆ ಕಟ್ಟಿಕೊಂಡು, ಕೈಯಲ್ಲಿ ಚಟಿಕೆ ಹಿಡಿದು, ಟೊಂಕಕ್ಕೆ ಸೆಲ್ಲೆ ಸುತ್ತಿ ತಾನೇ ನುಡಿಸುವ ತಾಳಕ್ಕೆ ತಕ್ಕಂತೆ ಕುಣಿಯುವ ರೀತಿಯೇ ಬಯಲು ಲಾವಣಿ ಅಥವಾ ಒಂಟಿ ಲಾವಣಿ ಎಂದು ಕರೆಯುತ್ತಾರೆ. ಇದು ದಾಸರಿಂದ ಪ್ರಭಾವಿತವಾದುದೆಂದು ಭಾವಿಸಲಾಗುತ್ತದೆ. ಇದು ತಾಸುಗಟ್ಟಲೇ ಒಬ್ಬನೇ ಹಾಡಲು ತ್ರಾಸಾದುದರಿಂದ ದಪ್ಪನ್ನು ಬಳಸಿ ಹಾಡುವ ಪದ್ಧತಿ ಬಂದಿತಂತೆ.

ಮೇಳ ಲಾವಣಿ : ಒಬ್ಬನೇ ಹಾಡುವ ಬದಲಾಗಿ ಕನಿಷ್ಟ ಮೂವರು ಕೂಡಿ ಮೇಳವಾಗಿ ಹಾಡುವುದರಿಂದ ಮೇಳಲಾವಣಿ ಎಂಬ ಹೆಸರು ಬಂದಿದೆ. ಇವರೆಲ್ಲ ದೈನಂದಿನ ವೇಷದಲ್ಲಿರುತ್ತಾರೆ. ಈ ಮೇಳದಲ್ಲಿ ದಪ್ಪು, ತುಂತುಣಿ, ತಾಳಗಳನ್ನು ಬಳಸಲಾಗುತ್ತದೆ. ಮುಖ್ಯ ಹಾಡುಗಾರ ದಪ್ಪು ಹಿಡಿದಿರುತ್ತಾನೆ. ಉಳಿದಿಬ್ಬರು ತುಂತುಣಿ ಮತ್ತು ತಾಳಗಳನ್ನು ಹಿಡಿದಿದ್ದು ಹಿಮ್ಮೇಳದವರಾಗಿರುತ್ತಾರೆ. ಮುಖ್ಯ ಹಾಡುಗಾರ ದಪ್ಪು ಬಡಿದು ಕೇಳುಗರನ್ನು ತನ್ನತ್ತ ಆಕರ್ಷಿಸಿಕೊಂಡು ಹಾಡಿಗೆ ಪೀಠಿಕೆ ಹಾಕುತ್ತಾನೆ. ಹಿಮ್ಮೇಳದವರು ಹಾಡುಗಾರನ ದನಿಗೆ ದನಿಗೂಡಿಸುತ್ತ ಹಾಡಿನ ಮಧ್ಯೆಮಧ್ಯೆ “ಹೇಳಪ್ಪಾ … ಮತ್ತೇನಪ್ಪಾ ….. ಮುಂದೇನಾತಪಾ …..’’ ಎಂಬ ಪ್ರಶ್ನೆ ಕೇಳಿ ಹಾಡಿಗೆ ರಂಜನೆಯನ್ನುಂಟು ಮಾಡುತ್ತಾರೆ. ಪ್ರತಿನುಡಿ ಮುಗಿಯುತ್ತಲೇ “ಹರೇಗೀಯ ಗಾಗೀಯ ಗೀಗೀಗೀಗೀ …..’’ ಅಥವಾ “ಜೀಯಾಜೀ ಜೀಜೀ …’’ ಎನ್ನುವ ಸೊಲ್ಲನ್ನು ಹೊರಡಿಸುತ್ತಾರೆ. ಹಾಡಿನುದ್ದಕ್ಕೂ ಈ ಸೊಲ್ಲು ಇರುತ್ತದೆ. ಮೇಳ ಲಾವಣಿಕಾರಾಗಲಿ, ಒಂಟಿ ಲಾವಣಿಕಾರರಾಗಲಿ ಅವರು ವೃತ್ತಿಗಾಯಕರಲ್ಲ. ಅವರಿಗೆ ಅದೊಂದು ಪ್ರವೃತ್ತಿ. ಹಬ್ಬ-ಹರಿದಿನ, ಜಾತ್ರೆ-ಉತ್ಸವಗಳ ಸಂದರ್ಭದಲ್ಲಿ ಒಳ್ಳೆಯ ಹಾಡುಗಾರರನ್ನು ಅಮಂತ್ರಿಸಿ ಹಾಡಿಸಿ ಖುಷಿಯಿಂದ ಸಂಭಾವನೆ ಕೊಡುವ ಪದ್ಧತಿಯಿದೆ.

ಮೇಳ ಲಾವಣಿಯ ಇನ್ನೊಂದು ವೈಶಿಷ್ಟ್ಯವೆಂದರೆ ಶೃಂಗಾರದ ಹಾಡುಗಳನ್ನು ಹೆಣ್ಣು ಹೆಚ್ಚು ಗಂಡು ಹೆಚ್ಚು ಎಂಬ ವಾದ ಮಾಡುವ ಎರಡು ಪಂಗಡಗಳಲ್ಲಿ ಸ್ಪರ್ಧೆಯನ್ನೇರ್ಪಡಿಸುವುದಾಗಿದೆ. ಇದು ಬರುಬರುತ್ತಾ ಪರಸ್ಪರ ಪಂಗಡಗಳು ಒಬ್ಬರನ್ನೊಬ್ಬರು ಟೀಕೆ ಮಾಡುವ ಮತ್ತು ಸ್ವಪ್ರತಿಷ್ಠೆ ಹೆಚ್ಚಿಸುವ ಮಟ್ಟಕ್ಕಿಳಿದು ಇದು ಸಾಲದೆಂಬಂತೆ ಹೆಣ್ಣು ಮಕ್ಕಳನ್ನು ಹಾಡಲು ವೇದಿಕೆಗೆ ಕರೆತಂದರು. ಪ್ರವೃತ್ತಿಯಾಗಿದ್ದ ಲಾವಣಿ ಹಾಡುಗಾರಿಕೆ ಮುಂದೆ ಕೆಲವರಿಗೆ ವೃತ್ತಿಯಾಯಿತು. ಹೆಣ್ಣು ಹೆಚ್ಚು, ಗಂಡು ಹೆಚ್ಚು ಎಂದು ವಾದಮಾಡುವ ಹಾಡುಗಳು ಹರದೇಶಿ-ನಾಗೇಶಿ ಎಂಬ ಹೆಸರಿನಲ್ಲಿ ಒಂದು ಸಂಪ್ರದಾಯವನ್ನೇ ಹುಟ್ಟುಹಾಕಿದವು. ಈ ಸಂಪ್ರದಾಯಕ್ಕೆ ಸವಾಲ್-ಜವಾಬ್, ತೋಡಿ-ತೋಡಿ ಎಂದೂ ಕರೆಯಲಾಗುತ್ತದೆ. ಈ ಸಂಪ್ರದಾಯದ ಹಾಡುಗಳ ಪ್ರತ್ಯೇಕ ಸಂಪುಟ ಹೊರಬರುವುದರಿಂದ ಅಂಥ ಲಾವಣಿಗಳನ್ನು ಈ ಸಂಪುಟದಲ್ಲಿ ಸೇರಿಸಿಲ್ಲ. ಈಚೆಗೆ ಹಳ್ಳಿಗಳು ಆಧುನಿಕತೆಗೆ ಒಳಗಾಗಿದ್ದು ಹಿಂದಿನ ಲಾವಣಿ ವೈಭವ ಈಗ ಕಂಡು ಬರುವುದಿಲ್ಲ.

ಲಾವಣಿಗಳ ವರ್ಗೀಕರಣ

ಲಾವಣಿಗಳನ್ನು ಎರಡು ರೀತಿಯಿಂದ ವರ್ಗೀಕರಿಸಲಾಗುತ್ತಿದೆ. ಒಂದು ಹಾಡುವ ಪದ್ಧತಿಯನ್ವಯವಾದರೆ, ಇನ್ನೊಂದು ವಸ್ತುವಿನ ದೃಷ್ಟಿಯಿಂದ ವರ್ಗೀಕರಿಸಲಾಗುತ್ತಿದೆ. ಹಾಡುವ ಪದ್ಧತಿಯ ಬಗೆಗೆ ಈಗಾಗಲೇ ನೋಡಲಾಗಿದೆ. ಈಗ ವಸ್ತುವನ್ನು ಆಧಾರವಾಗಿಟ್ಟುಕೊಂಡು ಲಾವಣಿಗಳ ವರ್ಗೀಕರಣಕ್ಕೆ ಕೈ ಹಾಕೋಣ. ಡಾ. ಹಾ.ಮಾ. ನಾಯಕರು ಲಾವಣಿಗಳನ್ನು ೧. ಪೌರಾಣಿಕ,

೨. ಚಾರಿತ್ರಿಕ, ೩. ವಾಸ್ತವಿಕ, ೪. ವಿಡಂಬನಾತ್ಮಕ, ೫. ಮಾಂತ್ರಿಕ ಎಂಬ ಐದು ವಿಭಾಗಗಳನ್ನು ಮಾಡಿದ್ದಾರೆ. ಈ ವರ್ಗೀಕರಣದಲ್ಲಿ ಹಲವಾರು ಕೊರತೆಗಳು ಮತ್ತು ಸಂದಿಗ್ಧತೆಗಳಿವೆ. ಕಾರಣ ಇದು ಸಮಂಜಸವಾದ ವರ್ಗೀಕರಣವಲ್ಲ.

ಡಾ. ಎಂ.ಎಸ್. ಸುಂಕಾಪುರವರು ಲಾವಣಿಗಳನ್ನು ವಸ್ತುವಿನ ದೃಷ್ಟಿಯಿಂದ ಶೃಂಗಾರ ಲಾವಣಿಗಳು, ವೀರ ಲಾವಣಿಗಳು, ಕಥಾನಕ ಲಾವಣಿಗಳು, ತತ್ವ-ನೀತಿ-ಲಾವಣಿಗಳು, ಸಂವಾದ ಲಾವಣಿಗಳು ಎಂದು ವರ್ಗೀಕರಿಸಿದ್ದಾರೆ. ಇದು ಸಹ ಪರಿಪೂರ್ಣ ವರ್ಗೀಕರಣವಾಗಲಾರದು.

ಡಾ. ಸಂಗಮೇಶ ಬಿರಾದಾರ ಅವರ ಪ್ರಕಾರ ೧. ಪೌರಾಣಿಕ, ೨. ಐತಿಹಾಸಿಕ, ೩. ಚಾರಿತ್ರಿಕ, ೪. ಸಾಮಾಜಿಕ (ಶೃಂಗಾರ ಪದ ವಿಡಂಬನೆ ನೀತಿಯುತ) ೫. ತಾತ್ವಿಕ (ಗರ್ಭಾವಳಿ, ನಿರಾಕಾರ) ಹೀಗೆ ವರ್ಗೀಕರಣ ಮಾಡಲಾಗಿದೆ. ಇದು ಸಹ ಮುಖ್ಯ ಪ್ರಕಾರದಲ್ಲಿ ಕೆಲ ಉಪಪ್ರಕಾರಗಳನ್ನು ಒಳಗೊಂಡಿದೆ. ಸ್ಪಷ್ಟವಾಗಿಲ್ಲವಾದ್ದರಿಂದ ಇದನ್ನೂ ಕೈಬಿಡಬೇಕಾಗುತ್ತದೆ.

ಡಾ. ಶ್ರೀರಾಮ ಇಟ್ಟಣ್ಣನವರ ನಿರೂಪಣಾತ್ಮಕ ಲಾವಣಿಗಳು ಮತ್ತು ಸಂವಾದಾತ್ಮಕ ಲಾವಣಿಗಳು ಎಂದು ಎರಡು ಪ್ರಮುಖ ವರ್ಗೀಕರಣ ಮಾಡಿದ್ದಾರೆ.

ನಿರೂಪಾಣಾತ್ಮಕ ಲಾವಣಿಗಳು :

೧.ಕಥನ ನಿರೂಪಣೆ
ಅ. ಪೌರಾಣಿಕ ಆ. ಚಾರಿತ್ರಿಕ ಇ. ಸಾಮಾಜಿಕ

೨.ರಸ ನಿರೂಪಣೆ
ಅ. ಶೃಂಗಾರ ಆ. ಹಾಸ್ಯ

೩.ತತ್ವ ನಿರೂಪಣೆ
ಅ. ಶಾಸ್ತ್ರ ಆ. ಅನುಭವ

ಸಂವಾದಾತ್ಮಕ ಲಾವಣಿಗಳು

೧. ಹರದೇಶಿ-ನಾಗೇಶಿ ೨. ಸವಾಲ್-ಜವಾಬ್ ೩. ತೋಡಿ-ತೋಡಿ

ಈ ಮೇಲಿನ ವಿಭಾಗ ಕ್ರಮವನ್ನು ಈ ಕೆಳಗಿನಂತೆ ರೇಖಿಸಲಾಗಿದೆ.೪[4]

ಲಾವಣಿಗಳು

ನಿರೂಪಣಾತ್ಮಕ

ಸಂವಾದಾತ್ಮಕ

ಹರದೇಶಿ-ನಾಗೇಶಿ ಸವಾಲ್-ಜವಾಬ್ ತೋಡಿ-ತೋಡಿ
ಕಥಾ ನಿರೂಪಣೆ ರಸ ನಿರೂಪಣೆ ತತ್ವ ನಿರೂಪಣೆ
ಪೌರಾಣಿಕ ಚಾರಿತ್ರಿಕ ಸಾಮಾಜಿಕ ಶೃಂಗಾರ ಹಾಸ್ಯ ಶಾಸ್ತ್ರ ಅನುಭಾವ

ಈ ವಿಭಾಗಕ್ರಮವನ್ನು ಒಪ್ಪಿಕೊಳ್ಳಬಹುದಾಗಿದೆ. ಆದರೆ ಸಮಗ್ರ ಲಾವಣಿ ಸಂಪಾದನೆ ಸಂದರ್ಭದಲ್ಲಿ ಇದು ಸ್ವಲ್ಪ ಸಂಕೀರ್ಣತೆಗೆ ಎಡೆಮಾಡಿಕೊಟ್ಟಿದೆ. ಆದುದರಿಂದ ಈ ಹಿಂದಿನ ಲಾವಣಿ ಸಂಪಾದಕರು ಮಾಡಿಕೊಂಡ ವರ್ಗೀಕರಣವನ್ನು ನಾವು ಆಧಾರವಾಗಿಟ್ಟುಕೊಂಡು, ಅದರಂತೆ ಲಾವಣಿಗಳನ್ನು ವರ್ಗೀಕರಿಸಿದರೆ ವರ್ಗೀಕರಣದ ಪಟ್ಟಿ ದೊಡ್ಡದಾಗುತ್ತದೆ. ಈ ಸಂಪುಟ ಸಂಪಾದನೆಗೆ ನಾವು ನಮ್ಮದೇ ಆದ ವರ್ಗೀಕರಣವನ್ನು ಮಾಡಿಕೊಂಡಿದ್ದು ಅದು ಹೀಗಿದೆ :

 • ೧.ಸ್ತುತಿಗಳು
  ೨.ಪೌರಾಣಿಕ
  ೩.ಚಾರಿತ್ರಿಕ
  ೪.ಪುಣ್ಯ ಪುರುಷರು
  ೫.ರಾಷ್ಟ್ರೀಯ
  ೬.ಶೃಂಗಾರ
  ೭.ನೀತಿ
  ೮.ಹಾಸ್ಯ
  ೯.ಸಾಮಾಜಿಕ
  ೧೦.ಸಂಕೀರ್ಣ

ಸ್ತುತಿಗಳು

ಇದರಲ್ಲಿ  ಲಾವಣಿಯನ್ನು ಹಾಡುವ ಪೂರ್ವದಲ್ಲಿ ತಮ್ಮ ಇಷ್ಟ ದೇವತೆಯನ್ನು ಪ್ರಾರ್ಥಿಸುವರು. ಇದರಲ್ಲಿ ಲಾವಣಿಯನ್ನು ಹಾಡುವ ಪೂರ್ವದಲ್ಲಿ ತಮ್ಮ ಇಷ್ಟದೇವತೆಯನ್ನು ಪ್ರಾರ್ಥಿಸುವ, ಪೂಜಿಸುವ, ನೆನೆಸಿಕೊಳ್ಳುವ, ಬೇಡಿಕೊಳ್ಳುವ ಸ್ತುತಿ ರೂಪದ ಪದಗಳಿರುತ್ತವೆ.

ಪೌರಾಣಿಕ

ರಾಮಾಯಣ, ಮಹಾಭಾರತ, ಪುರಾಣ, ಸ್ಥಳೀಯ ಕ್ಷೇತ್ರದೇವತೆಗಳು ಕೆಲ ಆಚರಣೆಗಳು ವೃತಗಳು, ಸ್ತ್ರೀ ಶಿರೋಮಣಿಗಳ ಚರಿತ್ರೆಗಳು, ಪುರಾಣ ಪುರುಷರು ಇತ್ಯಾದಿ ಪೌರಾಣಿಕ ಸಂಗತಿಗಳಿಗೆ ಸಂಬಂಧಿಸಿದ ಲಾವಣಿಗಳು ಇದರಲ್ಲಿವೆ.

ಚಾರಿತ್ರಿಕ

ಜಾಗತಿಕ ಮಹಾಯುದ್ಧ, ಭಾರತ ಸ್ವತಂತ್ರ ಚಳುವಳಿ, ಕರ್ನಾಟಕ ಏಕಿಕರಣ, ದೇಶೀಯ ಸಂಸ್ಥಾನಿಕರು, ಬ್ರಿಟಿಷರ ವಿರುದ್ಧ ಹೋರಾಡಿದ ಘಟನೆಗಳು ವೀರ ಯೋಧರ ಸಾಹಸಗಳು, ಹೈದ್ರಾಬಾದ್ ರಜಾಕಾರರ ಹಾವಳಿ ಇತ್ಯಾದಿ ಚರಿತ್ರೆಗೆ ಸಂಬಂಧಿಸಿದ ಲಾವಣಿಗಳನ್ನು ಇದರಲ್ಲಿ ಸೇರಿಸಲಾಗಿದೆ.

ಪುಣ್ಯ ಪುರುಷರು

ಇದರಲ್ಲಿ ಏಸುವಿನಿಂದ ಹಿಡಿದು ಇಂದಿನ ನಾಡ ವಿದ್ವಾಂಸರನ್ನು ಕುರಿತು ಬರೆದ ಲಾವಣಿಗಳಿವೆ. ಬಸವಣ್ಣನವರನ್ನು ಒಳಗೊಂಡಂತೆ ಶರಣರ ಚರಿತ್ರೆಗಳಿವೆ. ಕಿತ್ತೂರ ಚೆನ್ನಮ್ಮ, ಬೆಳವಡಿ ಮಲ್ಲಮ್ಮನಂತಹ ವೀರ ನಾರಿಯರನ್ನು ಕುರಿತಾದ ಲಾವಣಿಗಳಿವೆ. ಸಂಗೊಳ್ಳಿ ರಾಯಣ್ಣ, ನರಗುಂದ ಬಾಬಾಸಾಹೇಬ, ಮುಂಡರಗಿ ಭೀಮರಾಯರ ಸಾಹಸ ಕಥಾನಕಗಳಿವೆ. ಮಹಾತ್ಮಗಾಂಧಿ, ಸಂತವಿನೋಬ, ಸುಭಾಸ್‌ಚಂದ್ರಬೋಸರಂತಹ ರಾಷ್ಟ್ರೀಯ ನೇತಾರರಿದ್ದಾರೆ. ನೆಹರೂ, ಶಾಸ್ತ್ರಿ, ಇಂದಿರಾ ಗಾಂಧಿಯವರಂತಹ ಸ್ವಾತಂತ್ರ್ಯೋತ್ತರ ರಾಷ್ಟ್ರನಾಯಕರಿದ್ದಾರೆ. ದಾನವೀರ ಸಿರಸಂಗಿ ಲಿಂಗರಾಜರನ್ನೊಳಗೊಂಡು ಸಾಹಿತ್ಯ, ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ ದುಡಿದವರ ಹಾಡುಗಳಿವೆ. ಈ ಪುಣ್ಯ ಪುರುಷರ ವಿಭಾಗವು ಒಂದರ್ಥದಲ್ಲಿ ಚಾರಿತ್ರಿಕ ವಿಭಾಗವೇ ಆಗಿದೆ. ಆದರೆ ದೇಶದ ನಾಡಿನ ಕೀರ್ತಿಯನ್ನು ಹೆಚ್ಚಿಸಿದ ಈ ಮಹನೀಯರು ಕೇವಲ ವ್ಯಕ್ತಿಗಳಾಗಿರದೇ ಇಂದಿಗೂ ಆದರ್ಶಪ್ರಾಯರಾಗಿದ್ದು ಪುಣ್ಯಪುರುಷರಾಗಿದ್ದಾರೆ. ಆದುದರಿಂದ ಇವರನ್ನು ಪುಣ್ಯಪುರುಷರೆಂದು ಪರಿಗಣಿಸಲಾಗಿದೆ. ಪ್ರಾಚೀನ ಕಾಲದಿಂದ ಹಿಡಿದು ಆಧುನಿಕ ಕಾಲದ ಪುಣ್ಯಪುರುಷರು ಈ ವಿಭಾಗದಲ್ಲಿ ಬರುತ್ತಾರೆ.

ರಾಷ್ಟ್ರೀಯ

ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯೋತ್ತರ ಕಾಲದ ದೇಶದ ನೀತಿ, ತತ್ವ, ಸಿದ್ಧಾಂತ, ಸಂದರ್ಭ, ಧೋರಣೆಗಳನ್ನು ಒಳಗೊಂಡ ಲಾವಣಿಗಳು ಇದರಲ್ಲಿ ಸೇರ್ಪಡೆಯಾಗಿವೆ. ಈ ಲಾವಣಿಗಳು ರಾಷ್ಟ್ರೀಯ ಸಮಸ್ಯೆಗಳನ್ನು ಬಿಂಬಿಸುತ್ತವೆ.

ಶೃಂಗಾರ

ಮೂಲತಃ ಲಾವಣಿ ಶೃಂಗಾರ ಸಾಹಿತ್ಯವಾದುದಾಗಿದೆ. ಆದರೆ ಹರದೇಶಿ-ನಾಗೇಶಿ ಸಂಪ್ರದಾಯ ದಲ್ಲಿ ಶೃಂಗಾರವೇ ಅಧಿಕವಾಗಿದ್ದು ಆ ಕುರಿತು ಪ್ರತ್ಯೇಕ ಸಂಪುಟ ಪ್ರಕಟವಾಗಲಿರು ವುದರಿಂದ ಕೆಲ ಬಿಡಿ ಶೃಂಗಾರ ಲಾವಣಿಗಳನ್ನು ಮಾತ್ರ ಇದರಲ್ಲಿ ಸೇರಿಸಲಾಗಿದೆ.

ನೀತಿ

ಅಧ್ಯಾತ್ಮ ಪದಗಳನ್ನು ಒಳಗೊಂಡಂತೆ ಕೆಲ ನೀತಿಪರ ಲಾವಣಿಗಳು ಇದರಲ್ಲಿವೆ.

ಹಾಸ್ಯ

ಲಾವಣಿಯು ಜನಾಕರ್ಷಣೆಗಾಗಿ ಹಾಸ್ಯವನ್ನು ಅವಲಂಬಿಸಬೇಕಾಗುತ್ತದೆ. ಕೆಲ ಬೇರೆ ಲಾವಣಿಗಳಲ್ಲಿ ಸಾಂದರ್ಭಿಕವಾಗಿ ಹಾಸ್ಯ ಬಂದಿರುತ್ತದೆ. ನಮ್ಮ ಗಮನಕ್ಕೆ ಬಂದ ಮೂರು ಬಿಡಿ ಹಾಸ್ಯ ಲಾವಣಿಗಳನ್ನು ಇದರಲ್ಲಿ ಸೇರಿಸಲಾಗಿದೆ.

ಸಾಮಾಜಿಕ

ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಹಾಗೂ ಸಾಮಾಜಿಕ ಬದುಕನ್ನು ರೂಪಿಸುವ ಕೆಲ ಲಾವಣಿಗಳು ಇದರಲ್ಲಿವೆ.

ಸಂಕೀರ್ಣ

ಯಾವ ವಿಭಾಗಕ್ಕೂ ಸೇರದ ಲಾವಣಿಗಳನ್ನು ಸಂಕೀರ್ಣ ವಿಭಾಗದಲ್ಲಿ ಸೇರಿಸಲಾಗಿದೆ. ಇದರಲ್ಲಿ ಗೀಗೀ ಸ್ಪರ್ಧೆಯ ಕುರಿತಾದ ಎರಡು ಲಾವಣಿಗಳಿದ್ದು ಅವು ಗೀಗೀ ಸಾಹಿತ್ಯದ ಪರಿವರ್ತನೆ ಹಾಗೂ ವಿಕಾಸವನ್ನು ತಿಳಿಸುತ್ತವೆ.

ಈ ಮೇಲ್ಕಂಡಂತೆ ಹತ್ತು ವಿಭಾಗಗಳನ್ನು ಮಾಡಿಕೊಂಡರೂ ಒಂದಿಲ್ಲೊಂದು ಸಮಸ್ಯೆ ಎದುರಿಸಬೇಕಾಗುತ್ತದೆ. ಲಾವಣಿ ಸಾಹಿತ್ಯದಲ್ಲಿ ಯಾವ ವರ್ಗೀಕರಣವೂ ಸರ್ವಸಮ್ಮತವಾಗಲಾರದು. ಸಂಪಾದನೆ ಮತ್ತು ಅಧ್ಯಯನದ ದೃಷ್ಟಿಯಿಂದ ಈ ಮೇಲಿನಂತೆ ಲಾವಣಿಗಳನ್ನು ವರ್ಗೀಕರಿಸಿಕೊಳ್ಳಲಾಗಿದೆ.

ಈ ಸಂಪಾದನೆಯಲ್ಲಿ ಪ್ಲೀಟರು ಸಂಗ್ರಹಿಸಿದ ಲಾವಣಿಗಳನ್ನು ಒಳಗೊಂಡಂತೆ ೨೩೨ ಲಾವಣಿಗಳಿವೆ. ಕೆಲವು ಒಂದೇ ಪುಟದ ಲಾವಣಿಯಾಗಿದ್ದರೆ, ಸಂಗೊಳ್ಳಿ ರಾಯಣ್ಣ ಮತ್ತು ಸಿರಸಿಂಗಿ ಲಿಂಗರಾಜರನ್ನು ಕುರಿತಾದ ಲಾವಣಿಗಳು ಮೂವತ್ತು ಪುಟದಷ್ಟು ದೀರ್ಘವಾಗಿವೆ. ಇನ್ನೂ ಸಾವಿರಾರು ಲಾವಣಿಗಳು ಕನ್ನಡದಲ್ಲಿವೆ. ಆದರೆ ಅಲಭ್ಯವಾಗಿವೆ. ಕನ್ನಡದಲ್ಲಿ ಈವರೆಗೆ ಸುಮಾರು ಮೂವತ್ತಕ್ಕೂ ಹೆಚ್ಚು ಲಾವಣಿ ಸಾಹಿತ್ಯ ಸಂಗ್ರಹಿತ ಕೃತಿಗಳು ಪ್ರಕಟವಾಗಿವೆ. ಅವುಗಳಲ್ಲಿ ಕೆಲವು ಅಲಭ್ಯವಾಗಿವೆ. ನನಗೆ ದೊರೆತ ಕೃತಿಗಳು ಕೇವಲ ಹದಿನೈದು ಮಾತ್ರ. ಆ ಕೃತಿಗಳಲ್ಲಿ ಪ್ರಕಟವಾದ ಲಾವಣಿಗಳು ಈ ಸಂಪುಟದಲ್ಲೇ ಸಂಗ್ರಹಿತವಾಗಿವೆ. ಲಾವಣಿ ಸಾಹಿತ್ಯದ ಸಮಗ್ರ ಪ್ರಕಟಣೆಗೆ ಈ ಸಂಪುಟ ನಾಂದಿಯಾಗಿದೆ. ಈ ಕುರಿತು ಮುಂದುವರೆಯುವುದು ಅಗತ್ಯವಾಗಿದೆ. ಹಾಗಾದಲ್ಲಿ ಇನ್ನೊಂದೆರಡು ಲಾವಣಿ ಸಂಪುಟಗಳು ಹೊರಬರಬಹುದಾಗಿವೆ.

ರಾಷ್ಟ್ರೀಯ ಚಳುವಳಿಯಲ್ಲಿ ಲಾವಣಿ ಮಾಧ್ಯಮ

ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯೋತ್ತರ ಕಾಲದಲ್ಲಿ ಲಾವಣಿ ಪದಗಳು ರಾಷ್ಟ್ರೀಯ ಚಳುವಳಿಯಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸಿದವು. ಕೇವಲ ಮನರಂಜನೆ ಮತ್ತು ತಾತ್ವಿಕ  ವಿಚಾರಗಳಿಗೆ ಸೀಮಿತವಾಗಿದ್ದ ಲಾವಣಿಗಳು ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದವು. ಅಂದು ಪತ್ರಿಕೆಯ ನಂತರ ಲಾವಣಿಯೇ ಪ್ರಮುಖ ಮಾಧ್ಯಮವಾಗಿದ್ದಿತು. “೧೯೨೪ರಲ್ಲಿ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಸಮಾವೇಶಗೊಂಡ ಕಾಂಗ್ರೆಸ್ ಅಧಿವೇಶನ ಬ್ರಾಹ್ಮಣ ಹಾಗೂ ಬ್ರಾಹ್ಮಣೇತರರ ನಡುವಿನ ತಪ್ಪುಕಲ್ಪನೆಯನ್ನು ತೊಡೆದುಹಾಕಿದ ಕಾರಣ ಸಹಸ್ರಾರು ಸಂಖ್ಯೆಯಲ್ಲಿ ಬ್ರಾಹ್ಮಣೇತರರು ಕಾಂಗ್ರೆಸ್ ಸೇರಿ ರಾಷ್ಟ್ರೀಯ ಚಳುವಳಿ ಬಲಗೊಳ್ಳುವ ವಾತಾವರಣ ನಿರ್ಮಿಸಿತು. ನಗರ ಪ್ರದೇಶದ ಸುಶಿಕ್ಷಿತರಂತೂ ಬ್ರಿಟಿಷ್ ದಮನಕಾರಿ ಧೋರಣೆಗಳ ಧಿಕ್ಕಾರ ಹಾಗೂ ಸ್ವರಾಜ್ಯ ಸಂಪಾದನೆಗಾಗಿ ಶ್ರಮಿಸುತ್ತಿರುವ ಗಾಂಧೀಜಿ, ಸುಭಾಸ್‌ಚಂದ್ರಬೋಸ್ ಮುಂತಾದ ಕಾಂಗ್ರೆಸ್ ಧುರೀಣರ ಜೈಕಾರ ಮಾಡಲು ಸಾವಿರಾರು ಸಭೆಗಳನ್ನು ಏರ್ಪಡಿಸಿ ರಾಷ್ಟ್ರೀಯ ಜಾಗೃತಿಗೆ ಕಾರಣರಾದರೂ ಸಾರಿಗೆ-ಸಂಪರ್ಕದ ಅಭಾವದಿಂದಾಗಿ ತಮ್ಮ ಕಾರ್ಯಚಟುವಟಿಕೆಗಳನ್ನು ಗ್ರಾಮಾಂತರ ಪ್ರದೇಶಗಳಿಗೆ ವಿಸ್ತರಿಸಲಾಗದಿದ್ದರಿಂದ ಗ್ರಾಮಾಂತರ ಜನರು ರಾಷ್ಟ್ರೀಯ ಚಳುವಳಿಯಿಂದ ದೂರ ಉಳಿದರು. ಹಾಗೆಯೇ ಅನಕ್ಷರತೆ, ಅಜ್ಞಾನ, ಕಿತ್ತು ತಿನ್ನುತ್ತಿರುವ ಬಡತನದಿಂದಾಗಿ ಗ್ರಾಮಾಂತರ ಜನತೆ ತಮ್ಮ ಹೊಟ್ಟೆ-ಬಟ್ಟೆಗೆ ಹೆಚ್ಚು ಗಮನಕೊಟ್ಟರೆ ವಿನಃ ಸ್ವರಾಜ್ಯ ಸಂಪಾದನೆಯ ಗುರಿಯೊಂದಿಗೆ ಆರಂಭಗೊಂಡ ರಾಷ್ಟ್ರೀಯ ಚಳುವಳಿಯ ಹಿಂದುಳಿವಿಕೆಗೆ ಹಾಗೂ ಅವರು ಅನುಭವಿಸುತ್ತಿರುವ ಕಷ್ಟ-ಕಾರ್ಪಣ್ಯಗಳಿಗೆ ಪರಕೀಯ ಆಳ್ವಿಕೆಯೇ ಕಾರಣವಾಗಿದ್ದು ಅದರ ಮೂಲೋತ್ಪಾಟನೆಗಾಗಿ ಉದ್ದೇಶಿಸಲಾಗಿರುವ ರಾಷ್ಟ್ರೀಯ ಚಳುವಳಿಯೆಡೆಗೆ ಗ್ರಾಮಾಂತರ ಜನತೆಯನ್ನು ಆಕರ್ಷಿಸಲು ಹಲವಾರು ತಂತ್ರಗಳನ್ನು ರೂಪಿಸಿದರೂ ‘ಲಾವಣಿ’ಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟರು.’೫[5] ರಾಷ್ಟ್ರೀಯ ಆಂದೋಲನದಲ್ಲಿ ಜನಪದ ಕಾವ್ಯ ಪ್ರಕಾರವೊಂದು ಜನಮನ್ನಣೆ ಪಡೆದು ಜನತಾ ಮಾಧ್ಯಮವಾದುದು ಮಹತ್ವದ ಸಂಗತಿಯಾಗಿದೆ. ಈ ಕುರಿತು ಪ್ರತ್ಯೇಕ ಅಧ್ಯಯನವೇ ಬೇಕಾಗುತ್ತದೆ.

ಗ್ರಾಮಾಂತರ ಪ್ರದೇಶದಲ್ಲಿ ಜನಪದ ಕಲಾ ಮೇಳಗಳ ಉತ್ಸವ ಹಾಗೂ ಸ್ಪರ್ಧೆಯನ್ನೇರ್ಪಡಿಸುವ ಪರಂಪರೆಯೊಂದು ಆರಂಭವಾಯಿತು. ಆಧುನೀಕರಣದಲ್ಲಿ ಆ ಕಲೆಗಳು ಉಳಿದು ಬರಬೇಕೆಂಬುದೇ ಅದರ ಉದ್ದೇಶ. ಅದರಂತೆ ಲಾವಣಿ ಸ್ಪರ್ಧೆಗಳು ನಡೆದವು. ಆದರೆ ಈ ಸ್ಪರ್ಧೆ ಎರಡು ತಂಡಗಳ ನಡುವೆ ನಡೆಯುವಂಥ ಸವಾಲ್-ಜವಾಬ್ ಸಂಪ್ರದಾಯವಲ್ಲ. ಇಂಥ ಒಂದು ಸ್ಪರ್ಧೆಯ ಬಗೆಗೆ ಒಂದು ಲಾವಣಿ ಪದ್ಯವನ್ನೇ ಸಾಲೋಟಗಿ ಶರಣಪ್ಪನವರು ರಚಿಸಿದ್ದಾರೆ. ಅವರ ದೃಷ್ಟಿಯಲ್ಲೂ ಗೀಗೀ-ಲಾವಣಿಗಳು ಬೇರೆಬೇರೆಯಲ್ಲ. ಅವೆರಡು ಒಂದೇ ಎಂದು ಸ್ಪಷ್ಟಪಡಿಸಿದ್ದಾರೆ.

ಪರರಾಳಿಕೆಯಲಿ ಮರೆಯಾದ ಪೂರ್ವಸಂಸ್ಕೃತಿ
ಹೊರತೆಗೆದು ತೋರಿಸುವ ಕರ್ನಾಟಕ ಸಾಹಿತಿ
ಸರಳ ಶೈಲಿಯಲಿ ಸರ್ವರಿಗೆ ತಿಳಿಸುವ ಕೃತಿ
| ಗೀಗೀ ಲಾವಣಿ
ಗೀಗೀ ಲಾವಣಿ ಪುನರುತ್ಥಾನ ಸಮಿತಿಯ
ಮಾನ್ಯ ಸದಸ್ಯರ ಕರೆಗೆ
| ಓಗೊಟ್ಟು ಬಂದ ಸರ್ವರಿಗೆ || ||

ರಾಜ್ಯಮಟ್ಟದಲ್ಲಿ ಗೀಗೀ-ಲಾವಣಿ ಪುನರುತ್ಥಾನ ಸಮಿತಿ ಹುಟ್ಟಿಕೊಂಡು ಅಂಥ ಪ್ರಯತ್ನ ನಡೆದಿದ್ದು ಸ್ತುತ್ಯ. ಮುಂದೆ ಸಹ ಅಂಥಕಾರ್ಯ ನಡೆದರೆ ಈ ಕಲೆ ಉಳಿದು-ಬೆಳೆದು ಬರುವಲ್ಲಿ ಸಾಧ್ಯವಾದೀತೆಂಬುದು ನಮ್ಮ ಅಭಿಪ್ರಾಯ. ಸರಕಾರ-ಅಕಾಡೆಮಿ-ಸಂಘ-ಸಂಸ್ಥೆಗಳು ಇದರತ್ತ ಗಮನ ಹರಿಸುವುದು ಸೂಕ್ತ.

ಲಾವಣಿ ಕಟ್ಟಿದವರಿಗೆ ಮತ್ತು ಹಾಡುಗಾರರಿಗೆ ಯಾವುದೇ ಭೇದವಿಲ್ಲ. ಇದು ಬ್ರಾಹ್ಮಣೇತರ ಸಾಹಿತ್ಯವೆಂದು ಕರೆಯುತ್ತಾರೆ. ಸಂಗೀತದಲ್ಲಿರುವಂತೆ ಇಲ್ಲೂ ಗುರುಪರಂಪರೆಯಿದೆ. ಜೊತೆಗಾರ ಹಾಡುಗಾರರಿದ್ದಾರೆ. ‘ಜನಪದ ಕಲಾವಿದರ ಸೂಚಿ’ ಕೃತಿಯಲ್ಲಿ ೫೩ ಹಾಡುಗಾರರ ಮಾಹಿತಿ ಲಭ್ಯವಿದೆ. ಅವರೆಲ್ಲಾ ಉತ್ತರಕರ್ನಾಟಕಕ್ಕೆ ಸೇರಿದ ಕಲಾವಿದರಾಗಿದ್ದಾರೆ. ಲಾವಣಿ ರಚನೆಕಾರರು ಕೊನೆಯಲ್ಲಿ ತಮ್ಮ ಹೆಸರು ಅಥವಾ ಅಂಕಿತವನ್ನು ಹೇಳಿಕೊಂಡಿದ್ದಾರೆ. ಇನ್ನೂ ಕೆಲ ರಚನೆಗಳಲ್ಲಿ ರಚನೆಕಾರನ ಹೆಸರಿರುವುದಿಲ್ಲ. ಮುಸಲ್ಮಾನರು, ಹಿಂದುಳಿದ ಹೆಣ್ಣು ಮಕ್ಕಳು ಸೇರಿದಂತೆ ಎಲ್ಲಾ ಜಾತಿಯವರಿದ್ದಾರೆ. ಲಾವಣಿ ಪ್ರಕಾರ ಕೋಮುಸೌಹಾರ್ದತೆಗೆ ಹಾಗೂ ರಾಷ್ಟ್ರಪ್ರೇಮಕ್ಕೆ ಸಾಕಷ್ಟು ಕೊಡುಗೆ ನೀಡಿದೆಯೆಂದು ಹೇಳಬಹುದಾಗಿದೆ.

ಲಾವಣಿಗಳ ಸಂಪಾದನೆ

ಲಾವಣಿಗಳ ಸಂಪಾದನೆಗೆ ನೂರು ವರ್ಷಗಳ ಮಿಕ್ಕಿದ ಇತಿಹಾಸವಿದೆ. ಇವುಗಳ ಸಂಪಾದನೆಗೆ ಪಾಶ್ಚಾತ್ಯ ವಿದ್ವಾಂಸರೇ ನಾಂದಿ ಹಾಡಿದ್ದಾರೆ. ಮೂಲತಃ ಇಂಗ್ಲೆಂಡಿನವರಾದ ಜಾನ್ ಫೆಯ್ತಪುಲ್ ಪ್ಲೀಟರು ೧೮೬೭ರಲ್ಲಿ ಮುಂಬೈ ಪ್ರಾಂತ್ಯಕ್ಕೆ ಅಸಿಸ್ಟಂಟ್ ಕಲೆಕ್ಟರ್‌ರಾಗಿ ಬಂದು ಸೇವೆಗೆ ಸೇರಿದರು. ಹಲವಾರು ಹುದ್ದೆಗಳನ್ನು ಅಲಂಕರಿಸಿದರು. ಅವರು ಸಾಹಿತ್ಯ, ಶಾಸನ, ಜಾನಪದಕ್ಕೆ ಸಂಬಂಧಿಸಿದಂತೆ ಹಲವಾರು ಆಸಕ್ತಿಗಳನ್ನು ಬೆಳೆಸಿಕೊಂಡಿದ್ದರು. ಜಾನಪದಕ್ಕೆ ಸಂಬಂಧಿಸಿದಂತೆ ಜನಪದ ಗೀತೆಗಳನ್ನು, ಲಾವಣಿಗಳನ್ನು ಪ್ಲೀಟರು ಸಂಗ್ರಹಿಸಿ ಅವುಗಳನ್ನು ಇಂಡಿಯನ್ ಎಂಟಿಕ್ವರಿಯಲ್ಲಿ ಪ್ರಕಟಿಸಿದರು. ವಿದೇಶಿ ವಿದ್ವಾಂಸರ ಈ ಕಾರ್ಯವನ್ನು ನಮ್ಮ ದೇಶಿ ವಿದ್ವಾಂಸರು ಲಾವಣಿ ಮತ್ತು ಜಾನಪದ ಗೀತೆಗಳ ಬಗೆಗಿರುವ ಗೊಂದಲದ ಬಗೆಗೆ ಅಪಸ್ವರವೆತ್ತಿದ್ದಾರೆ. ಅವರ ಕಾಲದ ಸಂದರ್ಭವೇ ಹಾಗಿತ್ತು. ಆದರೆ “ಅವರ ಸಂಗ್ರಹ ಬಾಹುಳ್ಯಕ್ಕಿಂತ, ಸಂಗ್ರಹಣೆಯಲ್ಲಿ ಅವರು ತೋರಿರುವ ಒಪ್ಪ ಓರಣ ಹಾಗೂ ಶಾಸ್ತ್ರೀಯ ದೃಷ್ಟಿಗಳು ಇಂದಿಗೂ ನಮಗೆ ಮೇಲ್ಪಂಕ್ತಿಯಾಗಿವೆ.’’ ಎಂದು ಪ್ಲೀಟರ ಲಾವಣಿಗಳನ್ನು ಸಂಗ್ರಹಿಸಿದ ಶ್ರೀ ಕ್ಯಾತನಹಳ್ಳಿ ರಾಮಣ್ಣನವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಪ್ಲೀಟರ ಸಂಗ್ರಹದ ಬಗೆಗೆ ಹೆಚ್ಚಿಗೆ ಚರ್ಚಿಸುವ ಅಗತ್ಯವಿಲ್ಲ. ಅವರ ಅಂದಿನ ಕಾರ್ಯ ನಮ್ಮ ಚರಿತ್ರೆಯ ಪುಟಗಳಿಗೆ, ಜಾನಪದ ಅಧ್ಯಯನಕ್ಕೆ ಸಾಕ್ಷಿಯಾಗಿದೆ ಎಂಬುದನ್ನು ಮರೆಯುವಂತಿಲ್ಲ. ಮೊದಲಿಗೆ ಶ್ರೀ ಕ್ಯಾತನಹಳ್ಳಿ  ರಾಮಣ್ಣನವರು ಪ್ಲೀಟರು ಸಂಗ್ರಹಿಸಿದ ಐದು ಐತಿಹಾಸಿಕ ಲಾವಣಿಗಳನ್ನು ಪ್ರಕಟಿಸಿದರು. ಆದಾದ ಮೇಲೆ ಶ್ರೀ ಕ್ಯಾತನಹಳ್ಳಿಯವರು ಪ್ಲೀಟರ ಅಪ್ರಕಟಿತ ಲಾವಣಿಗಳನ್ನು ಸಮಗ್ರವಾಗಿ ಪ್ರಕಟಿಸಿದ್ದು ಅದರಲ್ಲಿ ಕೋಲುಪದ, ಜೋಗುಳಪದ, ಪೋವಾಡಗಳು, ದಂಡಕಗಳು ಸೇರಿವೆ. ಆದರೆ ಅವರ ಕೃತಿಯಿಂದ ನಾವು ಲಾವಣಿಗಳಷ್ಟನ್ನೇ ಆಯ್ಕೆ ಮಾಡಿಕೊಂಡಿದ್ದೇವೆ.

೧೯೩೩ರ ಸುಮಾರಿಗೆ ಹಲಸಂಗಿ ಗೆಳೆಯರಾದ ಸಿಂಪಿ ಲಿಂಗಣ್ಣ ಮತ್ತು ಧೂಲಾಸಾಹೇಬರು ಸೇರಿ ‘ಜೀವನ ಸಂಗೀತ’ವೆಂಬ ಕೃತಿಯನ್ನು ಪ್ರಕಟಿಸಿದ್ದು ಅದು ಪ್ರಸಿದ್ಧ ಲಾವಣಿಗಳ ಸಂಗ್ರಹವಾಗಿದೆ. ಅವರೇ ಹೇಳಿರುವಂತೆ ಅದರಲ್ಲಿ ಪ್ರಸಿದ್ಧರಾದ ಏಳು ಮಂದಿ ಲಾವಣಿಕಾರರ ಮಿಗಿಲಾದ ಹನ್ನೆರಡು ಲಾವಣಿಗಳಿವೆ. ಅವುಗಳನ್ನು ಈ ಸಂಪುಟದಲ್ಲಿ ಬಳಸಿಕೊಳ್ಳಲಾಗಿದೆ.

ಜಾನಪದ ಸಾಹಿತ್ಯದ ಬಗೆಗೆ ಜಾಗೃತಿ ಮೂಡಿದಂತೆ ಜಾನಪದದ ಉಳಿದ ಪ್ರಕಾರಗಳೊಂದಿಗೆ ಲಾವಣಿ ಪ್ರಕಾರವನ್ನು ಸಂಗ್ರಹಿಸುವ ಕಾರ್ಯ ಪ್ರಾರಂಭವಾಯಿತು. ೧೯೬೦-೭೦ರ ದಶಕದಲ್ಲಿ ಸಂಗ್ರಹಕಾರ್ಯ ವೈಯಕ್ತಿಕ ಮಟ್ಟದಲ್ಲಿ ವ್ಯಾಪಕವಾಗಿ ನಡೆಯಿತು. ಸಂಗ್ರಹಿಸಿದ ಸಾಹಿತ್ಯ ಲಾವಣಿ ಯಾವುದು? ಡೊಳ್ಳಿನ ಪದ ಯಾವುದು? ಹೋಳಿಹಾಡು ಯಾವುದು? ಎಂಬುದು ಲೆಕ್ಕಕ್ಕೆ ಬಾರದಾಯಿತು. ಮುಂದೆ ಸಂಗ್ರಹಿಸಿದ ಸಾಹಿತ್ಯದ ವೈಜ್ಞಾನಿಕ ಅಧ್ಯಯನ ಪ್ರಾರಂಭವಾಯಿತು. ಕ್ಷೇತ್ರಕಾರ್ಯಗಳ ಮೂಲಕ ಆಯಾ ಹಾಡುಗಳ ರೀತಿ-ಲಕ್ಷಣಗಳನ್ನು ಗಮನಿಸಿ ವರ್ಗೀಕರಿಸಿ ಕಾರ್ಯ ನಡೆಯಿತು. ವಿಚಾರಗೋಷ್ಠಿಗಳು, ಸಮ್ಮೇಳನಗಳು ನಡೆದವು. ಇದೀಗ ಆಯಾ ಸಾಹಿತ್ಯ ಕುರಿತು ಒಂದಿಷ್ಟು ಶಿಸ್ತಿನ ಕಾರ್ಯ ನಡೆದಿದೆ. ಆ ಹಿನ್ನೆಲೆಯಲ್ಲಿ ಸಂಗ್ರಹವಾದ ಲಾವಣಿ ಕೃತಿಗಳು ಸಾಕಷ್ಟಿವೆ. ಆದರೆ ಬಹಳಷ್ಟು ಅಲಭ್ಯವಿದೆ.

ಲಾವಣಿಕಾರರಾದ ಹುಲಕುಂದ ಭೀಮಕವಿ, ಬಾಳಗೋಪಾಳ, ಮರಿಮಲ್ಲಕವಿ, ಶರಣಪ್ಪ ವಾಲಿಯವರ ಕೃತಿಗಳು ಹೊರಬಂದಿವೆ. ಸಂಗೊಳ್ಳಿ ರಾಯಣ್ಣ, ನರಗುಂದ ಬಾಬಾಸಾಹೇಬ, ಕಿತ್ತೂರು ಸಂಸ್ಥಾನ ಕುರಿತು ಕೆಲ ಕೃತಿಗಳು ಬಂದಿವೆ. ಉಳಿದಂತೆ ಬಿಡಿ ಹಾಗೂ ಸಂಕೀರ್ಣ ಲಾವಣಿಗಳ ಸಂಗ್ರಹಗಳಿವೆ.

ಲಾವಣಿಗಳನ್ನು ಕುರಿತು ವಿವಿಧ ನೆಲೆಗಟ್ಟಿನಲ್ಲಿ ಅಧ್ಯಯನವೂ ನಡೆದಿದೆ. ಈ ದಿಸೆಯಲ್ಲಿ ಡಾ. ಶ್ರೀರಾಮ ಇಟ್ಟಣ್ಣನವರ ‘ಲಾವಣಿ’, ಡಾ. ಶಿವಾನಂದ ಗುಬ್ಬಣ್ಣನವರ ‘ಲಾವಣಿ ಸಾಹಿತ್ಯದಲ್ಲಿ ರಾಷ್ಟ್ರೀಯತೆ’, ಡಾ. ಶ್ರೀಕಂಠ ಕೂಡಿಗೆಯವರ ‘ಲಾವಣಿ ಸಾಹಿತ್ಯ’ ಮುಂತಾದವು ಮಹತ್ವದ ಕೃತಿಗಳಾಗಿವೆ. ಬೀಬೀ ಇಂಗಳಗಿ ಭಾಗದ ಲಾವಣಿಗಳು, ತೇರದಾಳ ಭಾಗದ ಲಾವಣಿಗಳು ಹೀಗೆ ಕೆಲ ಊರಿನ ಲಾವಣಿ ಪರಂಪರೆ ಪರಿಚಯಿಸುವ ಕೃತಿಗಳು ಬಂದಿವೆ. ಆದರೂ ಲಾವಣಿಗಳನ್ನು ಕುರಿತಾದ ಅಧ್ಯಯನ ನಿಂತಂತಾಗಿದೆ. ಕಾರಣ ಲಾವಣಿ ಗೋಷ್ಠಿಗಳೇ ಕಡಿಮೆಯಾಗಿವೆ. ಅದಕ್ಕೆ ಕಾರಣಗಳು ಹಲವಾರು.

ಈ ಸಂಪುಟದಲ್ಲಿ ಪ್ರಕಟಿತ ಹಾಗೂ ಉಪಲಬ್ಧ ಕೃತಿಗಳಲ್ಲಿ ಬಂದಿರುವ ಲಾವಣಿಗಳನ್ನು ಬಳಸಿಕೊಳ್ಳಲಾಗಿದೆ. ಅನುಪಲಬ್ಧ ಕೃತಿಗಳು ಲಭ್ಯವಾದರೆ ಇನ್ನೊಂದು ಸಂಪುಟವನ್ನು ತರಬಹುದು. ಇಲ್ಲಿ ಆಯ್ಕೆಮಾಡಿಕೊಂಡ ಲಾವಣಿ ರಚನೆಕಾರನ ಹೆಸರನ್ನು ಮತ್ತು ಆ ಲಾವಣಿ ಪ್ರಕಟವಾದ ಕೃತಿಯನ್ನು ಆಯಾ ಲಾವಣಿಯ ಅಡಿಯಲ್ಲಿ ಕೊಡಲಾಗಿದೆ. ಇದರಿಂದ ಓದುಗರಿಗೆ ಅನುಕೂಲವಾಗುವುದು. ಈ ಲಾವಣಿಗಳು ಪ್ರಾದೇಶಿಕವಾಗಿರುವುದರಿಂದ ಕೊನೆಯಲ್ಲಿ ಅಕಾರಾದಿಯಲ್ಲಿ ಶಬ್ದಾರ್ಥಕೋಶವನ್ನು ನೀಡಲಾಗಿದೆ. ನಾವು ಸಂಪಾದನೆಗೆ ಬಳಸಿಕೊಂಡ ಕೃತಿಗಳ ಪಟ್ಟಿಯನ್ನು ಕೊನೆಯಲ್ಲಿ ಕೃತಜ್ಞತೆಯೊಂದಿಗೆ ಸ್ಮರಿಸಿ ಕೊಡಲಾಗಿದೆ. ಎಲ್ಲಾ ಲಾವಣಿ ಸಂಗ್ರಾಹಕ-ಸಂಪಾದಕ, ಪ್ರಕಾಶಕ ಇವರಿಗೆ ನನ್ನ ವಂದನೆಗಳು.

ಈ ಸಂಪಾದನೆಯಲ್ಲಿ ಸಮಗ್ರ ಲಾವಣಿಗಳು ಸೇರಿವೆಯೆಂದು ಹೇಳಿಕೊಳ್ಳಲು ಧೈರ್ಯವಿಲ್ಲ. ಕೆಲವೊಂದು ಕೃತಿಗಳು ಲಭ್ಯವಿಲ್ಲ. ನನಗೆ ಲಭ್ಯವಾದ ಲಾವಣಿ ಕೃತಿಗಳನ್ನು ಮಾತ್ರ ಈ ಸಂಪಾದನೆಯಲ್ಲಿ ಬಳಸಿಕೊಂಡಿದ್ದೇನೆ. ಈ ಸಂಪಾದನೆ ಅಂತಿಮವಾದುದಲ್ಲ. ಲಾವಣಿ ಮತ್ತು ಗೀಗೀ ಪದಗಳ ಬಗೆಗಿರುವ ನನ್ನ ಗೊಂದಲವನ್ನು ಬಗೆಹರಿಸಿ ಈ ಸಂಪುಟ ಸಂಪಾದನೆಗೆ ಚಾಲನೆ ನೀಡಿದ ಹಿರಿಯ ಜಾನಪದ ವಿದ್ವಾಂಸರ ಸಮಗ್ರ ಜನಪದ ಸಾಹಿತ್ಯ ಪ್ರಕಟಣಾ ಸಮಿತಿ ಅಧ್ಯಕ್ಷರಿಗೂ, ಸದಸ್ಯರಿಗೂ, ಡಾ. ಎಂ.ಎಸ್. ಲಠ್ಠೆಯವರಿಗೂ ನನ್ನ ಧನ್ಯವಾದಗಳು. ಈ ಗ್ರಂಥದ ಕರಡು ಪ್ರತಿ ತಿದ್ದುವಲ್ಲಿ ನೆರವಾದ  ಡಾ. ಗವಿಸಿದ್ಧಪ್ಪ ಪಾಟೀಲ, ಶ್ರೀ ಸಿದ್ಧಲಿಂಗಪ್ಪ ಪಾಟೀಲ, ಶ್ರೀ ಮಲ್ಲೇಶಪ್ಪ ಸಿದ್ರಾಂಪೂರ ಇವರನ್ನು ಕೃತಜ್ಞತೆಯಿಂದ ನೆನೆಯುವೆ. ಸಂಪಾದನಾ ಕಾರ್ಯವನ್ನು ವಹಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಿಗೆ ನನ್ನ ಕೃತಜ್ಞತೆಗಳು.

ಕನ್ನಡ ಪ್ರಾಧ್ಯಾಪಕರು
ಡಾ. ಮೃತ್ಯುಂಜಯ ಹೊರಕೇರಿ
ಸ್ನಾತಕೋತ್ತರ ಕೇಂದ್ರ,
ರಾಯಚೂರು.


[1] ೧.       ಜನಪದ ಸಾಹಿತ್ಯ ರೂಪಗಳು-ಡಾ. ರಾಗೌ, ಪು-೧೯.

[2] .       ಲಾವಣಿ ಸಾಹಿತ್ಯದಲ್ಲಿ ರಾಷ್ಟ್ರೀಯತೆ ಡಾ. ಶಿವಾನಂದ ಗುಬ್ಬಣ್ಣವರ, ಪು೧೧.

[3] ೩.       ಲಾವಣಿ-ಡಾ. ಶ್ರೀರಾಮ ಇಟ್ಟಣ್ಣನವರ, ಪು-೧೩.

[4] ಲಾವಣಿ – ಡಾ. ಶ್ರೀರಾಮ ಇಟ್ಟಣ್ಣನವರ ಪು – ೫೫

[5] .       ಲಾವಣಿ ಸಾಹಿತ್ಯದಲ್ಲಿ ರಾಷ್ಟ್ರೀಯತೆ : ಡಾ. ಶಿವಾನಂದ ಗುಬ್ಬಣ್ಣವರ, ಪುಟ. ೪೩.