ಭಾರತದಲ್ಲಿ ಶಕ್ತಿಯ ಆರಾಧನೆ ಬಹುಪೂರ್ವ ಕಾಲದಿಂದಲೂ ನಡೆದುಬಂದಿದೆ. ಅದು ಇಂದಿಗೂ ಅನೇಕ ಕಡೆಗಳಲ್ಲಿ ಬಹು ವಿಜೃಂಭಣೆಯಿಂದ ನಡೆಯುತ್ತಲಿದೆ. ಬಂಗಾಲದಲ್ಲಿ ದುರ್ಗಾದೇವಿಯ ಆರಾಧನೆ ಸಾರ್ವತ್ರಿಕ ಹಬ್ಬವೆನ್ನುವಂತೆ ಆಚರಿಸಲ್ಪಡುತ್ತಿದೆ. ಕರ್ನಾಟಕದಲ್ಲಂತೂ ಮೂಲಶಕ್ತಿಯ ಅನಂತ ರೂಪಗಳ ಆರಾಧನೆಯನ್ನು ಕುರಿತು ಸಾಕಷ್ಟು ವರ್ಣಿಸಲಾಗಿದೆ. ಐತಿಹಾಸಿಕ ಯುಗ ಪ್ರಾರಂಭವಾಗುವ ಪೂರ್ವದಲ್ಲಿಯೇ ನಮ್ಮ ದೇಶದಲ್ಲಿ ದೇವಿಯ ಪೂಜೆಗೆ ಅಗ್ರಸ್ಥಾನ ಇದ್ದುದನ್ನು ಹರಪ್ಪಾ ಮೊಹೆಂಜೋದಾರೋ ಪ್ರದೇಶಗಳಲ್ಲಿ ದೊರೆತ ವಸ್ತುಗಳಿಂದ ತಿಳಿಯಬಹುದಾಗಿದೆ. ಆರ್ಯರು ಭಾರತದಲ್ಲಿ ಕಾಲಿಡುವ ಪೂರ್ವದಲ್ಲಿಯೇ ದೇವಿಯ ಉಪಾಸನೆ ನಮ್ಮಲ್ಲಿ ಸಾರ್ವತ್ರಿಕವಾಗಿತ್ತೆಂದು ಅರಿಯಲು ಅನೇಕ ಆಧಾರಗಳಿವೆ. ಪ್ರಕೃತಿಯ ಪ್ರಕೋಪಕ್ಕೆ ಅಂಜಿದ ಮೂಲಮಾನವನು ಭಯಭೀತಿಯನ್ನುಂಟು ಮಾಡುವ ಸ್ಥಳಗಳಲ್ಲಿ ಉಗ್ರದೇವತೆಯ ಪ್ರತೀಕವೊಂದನ್ನು ನಿರ್ಮಿಸಿ ಪೂಜಿಸುತ್ತ ಬಂದಿರುವುದು ಸಹಜ. ತನಗೆ ತೊಂದರೆಯನ್ನೂ ರೋಗ ರುಜಿನಗಳನ್ನೂ ಕಷ್ಟ ನಷ್ಟಗಳನ್ನೂ ತರುವ ಶಕ್ತಿ, ಪರಿಹರಿಸುವ ಯುಕ್ತಿ ಆ  ಉಗ್ರಶಕ್ತಿ (ಪ್ರಕೃತಿ) ಯಲ್ಲಿ ಇದೆಯೆಂದು ಆತ ಭಾವಿಸಿ ಆ ಶಕ್ತಿಗೆ ತಲೆಬಾಗಿ ನಡೆದುದನ್ನು  ಆನವಿಕಶಾಸ್ತ್ರ ಕಂಡುಕೊಂಡಿದೆ. ಜನಪದದಲ್ಲಂತೂ ಈ ನಂಬಿಕೆ ಹೆಚ್ಚು ಪ್ರಬಲವಾಗಿದೆ. ಇಂತಹ ಉಗ್ರ ಶಕ್ತಿಯನ್ನು ಪೂಜಿಸುವವರಿಗೆ ಶಾಕ್ತೇಯರೆಂದು, ಆ ಮತಕ್ಕೆ ಶಾಕ್ತಮತವೆಂದೂ ಕರೆಯಲಾಗಿದೆ. ದ್ರಾವಿಡ ದೇವತೆಗಳಾದ ರುದ್ರ, ಶಿವ, ಪಾರ್ವತಿಯರು ಈ ಮತಕ್ಕೆ ತೀರ ಹತ್ತಿರದ ದೇವತೆಗಳು. ಉಗ್ರತೆಯ ಪ್ರತೀಕಗಳಾಗಿ ಅವು ನಿಂತಿರುವುದೇ ಮೂಲಭೂತ ತತ್ವ. ಶಕ್ತಿಗೆ ಕಾಳಿ, ಮಾಯೆ ಮುಂತಾಗಿ ಅನೇಕ ಹೆಸರುಂಟು.

ಪುರುಷ ಪ್ರಕೃತಿಗಳ ಸಂಬಂಧವೇ ಸೃಷ್ಟಿಯ ಉತ್ಪತ್ತಿಗೆ ಕಾರಣವೆಂದು ಭಾರತೀಯ ಧರ್ಮತತ್ವಗಳು ಪ್ರತಿಪಾದಿಸುತ್ತ ಬಂದಿವೆ. ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರು ಕ್ರಮವಾಗಿ ಸರಸ್ವತಿ, ಲಕ್ಷ್ಮೀ, ಪಾರ್ವತಿಯರೊಡನೆ ಅವಿನಾಭಾವ ಸಂಬಂಧದಿಂದ ಬೆರೆತಿರುವುದನ್ನು ಸಾರಿ ಹೇಳಿವೆ’; ಸೃಷ್ಟಿಯ ಉತ್ಪತ್ತಿ ಸ್ಥಿತಿ ಲಯಗಳಿಗೆ ತ್ರಿಮೂರ್ತಿಗಳೇ ಕಾರಣವೆಂದು ಹೇಳುವಲ್ಲಿ, ಅವರಲ್ಲಿ ಬೆರೆತಿರುವ ಬಲವಾದ ನಂಬಿಗೆ. ಈ ದೇವಿಯರು ಪರಬ್ರಹ್ಮನ ಪ್ರತೀಕ. ವೇದಗಳಲ್ಲಿ ಉಷೆ ಮುಂತಾದ ಸ್ತ್ರೀ ದೇವತೆಗಳು ಮಂತ್ರ ಸ್ವರೂಪವಾಗಿರುವುದು ಈ ಕಾರಣದಿಂದಲೇ. ಇಂದ್ರನಿಗೆ ಇಂದ್ರಾಣಿಯನ್ನು ಜೋಡಿಸುವುದು ಈ ಅರ್ಥದಲ್ಲಿಯೇ ಸ್ತ್ರೀದೇವತೆಗಳನ್ನು ಉಪನಿಷತ್ತುಗಳೂ ಆಗಮ ಪುರಾಣಗಳೂ ಹೊಗಳದೆ ಬಿಟ್ಟಿಲ್ಲ. ತ್ರಿಮೂರ್ತಿಗಳಲ್ಲಿ ಒಬ್ಬನಾದ ಬ್ರಹ್ಮನ ವರ್ಚಸ್ಸು ಕಡಿಮೆಯಾದಂತೆ ಸರಸ್ವತಿಯ ಶಕ್ತಿ ಕುಂದಿ ಹೋಯಿತು. ಶಿವ-ವಿಷ್ಣುಗಳ ಹೆಂಡಂದಿರಾದ ಪಾರ್ವತಿ- ಲಕ್ಷ್ಮಿಯರಿಗೆ ಅಗ್ರಪಟ್ಟಿ ದೊರೆಯಿತು. ಅವರು ತಮ್ಮ ಗಂಡಂದಿರಿಗಿಂತ ಒಂದು ಕೈಮೇಲಾಗಿ ಮೆರೆಯತೊಡಗಿದರು. ಪ್ರಸಂಗ ಬಂದಾಗ ತಮ್ಮ ಗಂಡಂದಿರನ್ನೇ ಎದುರಿಸುವ ದುಷ್ಟಶಕ್ತಿಗಳ ದಮನಕ್ಕೆ ಕೈ ಹಾಕಿ ಅವರು ಯಶಸ್ವಿಯಾದರು. ಪುರಾಣ ಪುಣ್ಯ ಕಥೆಗಳಲ್ಲಿ ಈ ವಿಷಯವನ್ನು ಅದ್ಭುತವಾಗಿ ವರ್ಣಿಸಲಾಗಿದೆ. ಈ ದೇವತೆಗಳ ಆದಮ್ಯ ಕಾರ್ಯಗಳನ್ನು ಪ್ರಕಟಿಸಲು ಅವರವರ ಹೆಸರಿನಲ್ಲಿ ಸ್ವತಂತ್ರ ಪುರಾಣಗಳೂ ಸೃಷ್ಟಿಯಾಗಿವೆ.

ಸಂಖ್ಯಾಶಾಸ್ತ್ರದ ಪ್ರಕಾರ ಪುರುಷ ಏನನ್ನೂ ಮಾಡಲಾರ; ಆತ ಸಾಕ್ಷೀ ಭೂತ. ಪ್ರಕೃತಿಯೇ ವಿಶ್ವಸೃಷ್ಟಿಯನ್ನು ನಿರ್ಮಿಸುತ್ತದೆ. ಸ್ಥಿತಿ ಲಯಗಳೆರಡೂ ಆ  ಪ್ರಕೃತಿಗೇ ಸಂಬಂಧಿಸಿದೆ. ಸಾಂಖ್ಯರು ಈ ಪ್ರಕೃತಿಗೆ ಮಾಯೆಯೆಂದು ಕರೆದಿದ್ದಾರೆ. ಪಾರ್ವತಿ ಲಕ್ಷ್ಮಿಯರು ಈ ಪ್ರಕೃತಿಯ ಭಿನ್ನರೂಪಗಳು, ಇವರು ಬರುಬರುತ್ತ ಮಹಾಮಾಯೆಯ ಸ್ಥಾನವನ್ನೇ ಆಕ್ರಮಿಸಿದರು; ಅನಂತ ರೂಪಗಳನ್ನು ತಾಳಿ ಮಹಿಮಾ ಸ್ತ್ರೀಯರೆಂದು ಮೆರೆಯತೊಡಗಿದರು. ಈ ಅವತಾರಗಳಲ್ಲಿ ದುರ್ಗಿಯ ಸ್ಥಾನ ದೊಡ್ಡದು. ಆದ್ದರಿಂದಲೇ ಅರ್ಜುನನು, ಶ್ರೀಕೃಷ್ಣನ ಅಪ್ಪಣೆಯಂತೆ ಮಹಾಭಾರತ ಯುದ್ಧದಲ್ಲಿ ತನಗೇ ಜಯವಾಗಲೆಂದು ದುರ್ಗಾದೇವಿಯ ಸ್ತೋತ್ರ ಮಾಡಿದುದು ಗಮನಾರ್ಹ ಸಂಗತಿ. ದುರ್ಗಾದೇವಿಗೆ ಕುಮಾರಿ, ಕಾಳಿ, ಮಹಾಕಾಳಿ, ಕಾಪಾಲಿ, ಕಾತ್ಯಾಯಿನಿ, ಕರಾಲೆ, ಚಂಡಿ ಮುಂತಾದ ಬಿರುದುಗಳು ಅವಳು ನಿರ್ವಹಿಸಿದ ಕಾರ್ಯಗಳಿಂದ ಬಂದಿವೆ. ಇವಳು ಗುಡ್ಡಗಾಡು ಪ್ರದೇಶಗಳಲ್ಲಿ ವಾಸವಾಗಿದ್ದಳು. ಆದ್ದರಿಂದ ಅಲ್ಲಿದ್ದ ಶಬರ, ಪುಳಿಂದ, ಬರ್ಬರ ಮೊದಲಾದ ಕಾಡು ಜನಾಂಗಗಳು ಅವಳನ್ನು ತಮ್ಮ ಅಧಿದೇವತೆಯೆಂದು ನಂಬಿ ಪೂಜಿಸಿದರು. ಇಂಥ ವರ ಕುಲದೇವತೆ ಮಾಂಸಾಹಾರಿಯಾಗಿದ್ದರೆ ಆಶ್ಚರ್ಯವೇನಿಲ್ಲ.

ಶೈವ ಧರ್ಮಗಳಲ್ಲಿಯೂ ಶಕ್ತಿಗೆ ಮಹತ್ವದ ಸ್ಥಾನ ಕೊಡಲಾಗಿದೆ. ಮಾರ್ಕಂಡೇಯ ಪುರಾಣದಲ್ಲಿ, ಶಕ್ತಿದೇವಿಯನ್ನು ಪಾರ್ವತಿಯ ಅವತಾರವೆಂದು ತಿಳಿಸಲಾಗಿದೆ. ಲೋಕಕಂಠಕರಾದ ಕುಂಭ ನಿಶುಂಭ ದೈತ್ಯರನ್ನು ಕೊಂದುದಲ್ಲದೆ, ಮಹಿಷಾಸುರನನ್ನು ಮರ್ದಿಸಿದ್ದಕ್ಕಾಗಿ ಅವಳಿಗೆ ಮಹಿಷಾಸುರ ಮರ್ದಿನಿಯೆಂದು ಹೆಸರಿಸಲಾಗಿದೆ. ಮಾರ್ಕಂಡೇಯ ಪುರಾಣದಲ್ಲಿ ಈ ವಿಷಯ ಹೆಚ್ಚು ವ್ಯಾಪಕವಾಗಿ ಬಂದುದನ್ನು ಅರಿಯಬೇಕು. ಇವಳು ಪಾರ್ವತಿಯ ಕೋಶದಿಂದ ಹುಟ್ಟಿ ಬಂದಿರುವುದರಿಂದ ಕೌಶಿಕಯೆಂದೂ ಕರೆಸಿಕೊಂಡಿರುವಳು.

ವಿಷ್ಣು ಪುರಾಣಗಳಲ್ಲಿ ಸಹ ಶಕ್ತಿಯ ಸಾಹಸವನ್ನು ಮಿತಿಮೀರಿ ವರ್ಣಿಸಲಾಗಿದೆ. ಲಕ್ಷ್ಮಿಯ ಅವತಾರವೇ ಶಕ್ತಿಯ ಅವತಾರ. ಅವಳಿಗೆ ಅಸಾಧ್ಯವಾದುದು ಪ್ರಪಂಚದಲ್ಲಿಯೇ ಇಲ್ಲ. ಜಗದಂಬೆಯೆಂದು ಮೆರೆಯುವ ಅವಳ ಮಹಿಮೆಯನ್ನು ವಾಯುಪುರಾಣ ಹರಿವಂಶ, ಭಾಗವತ, ಮಹಾಭಾರತ ಮುಂತಾದ ಕೃತಿಗಳಲ್ಲಿ ಮನೋಹರವಾಗಿ ಹೇಳಲಾಗಿದೆ. ಈ ಸ್ತ್ರೀದೇವತೆಗಳ ಪ್ರಭಾವದಿಂದಲೋ ಏನೋ ಎನ್ನುವಂತೆ ಬೌದ್ಧ, ಜೈನ ಧರ್ಮಗಳಲ್ಲಿ ಸ್ತ್ರೀದೇವತೆಗಳು ಪ್ರವೇಶಿಸಿದ್ದಾರೆಂದು ಅಭಿಪ್ರಾಯಪಡುತ್ತಾರೆ. ಅದೇ ಏನೇ ಇರಲಿ, ಹಿಂದು ಧರ್ಮಗಳಲ್ಲಿ ಶಕ್ತಿ ದೇವತೆಗೆ ಪ್ರಾಧಾನ್ಯವಿದ್ದುದನ್ನು ಅರಿಯಬಹುದು.

ಕನ್ನಡ ನಾಡಿನ ಗ್ರಾಮೀಣ ಪ್ರದೇಶಗಳಲ್ಲಿ ಶಕ್ತಿಯ ಪೂಜೆಗೆ ಅಗ್ರಸ್ಥಾನವಿದೆ. ಗ್ರಾಮದೇವತೆಗಳಿಲ್ಲದ ಹಳ್ಳಿಗಳೇ ವಿರಳವೆಂದು ಹೇಳಬಹುದು. ಹಳ್ಳಿಗರು ಗ್ರಾಮ ದೇವತೆಗಳಾದ ದೇವಿ, ದುರ್ಗಿಯನರನ್ನು ಬಹು ಭಯಭಕ್ತಿಯಿಂದ ಪೂಜಿಸುತ್ತಾರೆ. ಈ  ಸ್ತ್ರೀದೇವತೆಗಳು ಪಾರ್ವತಿಯ ಅವತಾರಿಗಳೆಂದು ಅವರು ನಂಬಿದ್ದಾರೆ. ರೋಗ ರುಜಿನಗಳನ್ನು ಹಬ್ಬಿಸುವ, ಪರಿಹರಿಸುವ ಶಕ್ತಿ ಅವರಲ್ಲಿದೆಯೆಂದು ಅವರು ನಂಬಿ ಈ ದೇವತೆಗಳನ್ನು ಭಕ್ತಿಯಿಂದ ಕಾಣುವರು. ಒಂದೊಂದು ದೇವತೆ ಒಂದೊಂದಕ್ಕೆ ಪ್ರಸಿದ್ಧ. ಹೀಗಾಗಿ ಈ ದೇವಿಯರ ಸಂಖ್ಯೆ ಹೆಚ್ಚಾಗಿದೆ. ಹಳ್ಳಿಗರು ಗ್ರಾಮದೇವತೆಗಳ ಕೂಡ ಮಾರೆವ್ವ, ಕರಿಯವ್ವ, ಮಾರಿಕಾಂಬೆ ಮುಂತಾದ ನೂರೆಂಟು ದೇವಿಯರನ್ನು ಪೂಜಿಸುವುದು ಇಂದಿಗೂ ರೂಢಿಯಲ್ಲಿದೆ. ಇವರೆಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ಪಾರ್ವತಿಯ ಅವತಾರಿಗಳು. ಇದಲ್ಲದೆ ಕೆಲವೊಂದು ಗ್ರಾಮಗಳಲ್ಲಿ ನೆಲೆಸಿದ ವಿಶಿಷ್ಟ ದೇವಿಯರಿಗೆ ಅಗ್ರಪೂಜೆ ಸಲ್ಲುವುದನ್ನು ಕಾಣುತ್ತೇವೆ. ನಮ್ಮ ನಾಡಿನಲ್ಲಿರುವ ಶಿರಸಿಯ ಮಾರಿಕಾಂಬೆ, ಕೊಲ್ಲಾಪುರದ ಜಗದಂಬೆ, ಚಿಂಚಲಿಯ ಮಾಯವ್ವ, ಶಿರಸಂಗಿಯ ಕಾಳಮ್ಮ, ಬಂಕಾಪುರದ ಅಂಬೆ, ಮುನಿರಾಬಾದದ ಹುಲಿಗೆಮ್ಮ, ಸವದತ್ತಿಯ ಎಲ್ಲಮ್ಮ ಮುಂತಾದ ಶಕ್ತಿದೇವತೆಗಳು ಕನ್ನಡ ಕುಲಕೋಟಿಯ ಕುರಿ ದೇವತೆಗಳೆಂದು ಪ್ರಖ್ಯಾತಿ ಪಡೆದಿದ್ದಾರೆ. ಕನಿಷ್ಟ ಪಕ್ಷ ವರ್ಷಕ್ಕೊಮ್ಮೆಯಾದರೂ ಆಯಾ ದೇವರ ಭಕ್ತರು ಅವರಿದ್ದಲ್ಲಿಗೆ ಹೋಗಿ ಪೂಜೆ ಮಾಡಿ, ಹರಕೆ ಸಲ್ಲಿಸಿ ಬರುವುದುಂಟು. ಮಂಗಳವಾರ, ಶುಕ್ರವಾರ ದೇವಿಯ ದಿನಗಳೆಂದು ನಂಬುವ ಈ ಜನರು ಅವೆರಡು ದಿನಗಳಲ್ಲಿ ದೇವಿಯ ದರ್ಶನ ಪಡೆಯುವುದುಂಟು. ಹುಣ್ಣಿಮೆ ದೇವಿಯ ದರ್ಶನಕ್ಕೆ ಒಳ್ಳೆಯ ಶುಭಮುಹೂರ್ತ, ಅಂದು ಭಕ್ತರು ಅಧಿಕ ಸಂಖ್ಯೆಯಲ್ಲಿ ಬರುವರು. ವರ್ಷಕ್ಕೊಂದು ಸಲ ದೇವಿಯ ಜಾತ್ರೆ ನೆರವೇರುತ್ತದೆ. ಆಗ ದೇವಿಯ ಪ್ರೀತ್ಯರ್ಥವಾಗಿ ಬಲಿಕೊಡುವುದೂ ಸಿಡಿಯಾಡುವುದೂ ನಡೆಯುತ್ತಲಿತ್ತು. ಅದೀಗ ಕಡಿಮೆಯಾಗತೊಡಗಿದೆ. ಆದರೂ ಈ ಉಗ್ರ ದೇವತೆಗಳಿಗೆ ಭಕ್ತರು ಅರ್ಪಿಸುವ ಕಾಣಿಕೆ ದೊಡ್ಡದೆಂದೇ ಹೇಳಬೇಕು.

ಏಳುಕೊಳ್ಳದ ಎಲ್ಲಮ್ಮ

ಬೆಳಗಾವಿ ಜಿಲ್ಲೆಯ ಸವದತ್ತಿಯ ಸಮೀಪದಲ್ಲಿರುವ ಕೊಳ್ಳದಲ್ಲಿ ನೆಲೆಸಿರುವ ಶಕ್ತಿದೇವತೆ ಎಲ್ಲಮ್ಮ. ಅವಳನ್ನು ಸವದತ್ತಿಯ ಎಲ್ಲಮ್ಮ. ಏಳುಕೊಳ್ಳದ ಎಲ್ಲಮ್ಮ ಎಂದು ಕರೆಯುವುದು ರೂಢಿಯಾಗಿದೆ. ಏಳು ಕೊಳ್ಳದ ಎಲ್ಲಮ್ಮ ಎಂದು ಕರೆಯುವುದರಲ್ಲಿ ಔಚಿತ್ಯವಿದೆ. ಆ ಪ್ರದೇಶದಲ್ಲಿ ಏಳುಗುಡ್ಡಗಳೂ ಏಳು ಕೊಳ್ಳಗಳೂ ಇವೆ. ಮುರಗೋಡ ಗುಡ್ಡ, ಸೊಗಲ ಗುಡ್ಡ, ನವಿಲತೀರ್ಥ ಗುಡ್ಡ, ಮುನವಳ್ಳಿ ಗುಡ್ಡ, ಸವದತ್ತಿ ಗುಡ್ಡ, ಪರಕುಗಡ ಗುಡ್ಡ, ಎಲ್ಲಮ್ಮನ ಗುಡ್ಡ ಇವೇ ಆ ಏಳು ಗುಡ್ಡಗಳು.  ಪ್ರತಿಯೊಂದು ಗುಡ್ಡದಲ್ಲಿಯೂ ಒಂದೊಂದು ಕೊಳ್ಳವಿದೆ. ಹೀಗೆ ಏಳು ಕೊಳ್ಳಗಳು. ಈ ಏಳೂ ಕೊಳ್ಳಗಳಲ್ಲಿ ಎಲ್ಲಮ್ಮ ಸಂಚರಿಸಿ, ತನ್ನ ಮರ್ತ್ಯವ ಮಣಿಹವನ್ನು ಪೂರೈಸಿದ್ದಾಳೆ. ಆದ್ದರಿಂದ ಅವಳಿಗೆ ಏಳುಕೊಳ್ಳದ ಎಲ್ಲಮ್ಮ ಎಂದು ಸಂಭೋಧಿಸಲಾಗಿದೆ.

ಎಲ್ಲಮ್ಮ ಎನ್ನುವುದು ಅಚ್ಚಗನ್ನಡ ಶಬ್ದ. ಜಗದಂಬಾ ಎಂಬ ಸಂಸ್ಕೃತ ಶಬ್ದದ ಸಮಾನ ಪದ. ಎಲ್ಲಮ್ಮನಿಗೆ ಮಾಯೆ, ಮಾಯಾಕಾರ್ತಿ, ರೇಣುಕಾ ಹೀಗೆ ಸಂಸ್ಕೃತದಲ್ಲಿ ಅನೇಕ ಪದಪ್ರಯೋಗಗಳುಂಟು. ಎಲ್ಲಮ್ಮ ನೆಲೆಸಿರುವ ಕೊಳ್ಳ ಅಷ್ಟೇನು ದೊಡ್ಡದಿಲ್ಲ. ಅಲ್ಲಿ ಗಿಡ ಮರಗಳು ಹೆಚ್ಚಾಗಿಲ್ಲ. ಗುಡ್ಡದ ಪಡೆಯಿಂದ ಧಾರಾಕಾರವಾಗಿ ಝರಿಯೊಂದು ಹರಿದುಬರುತ್ತಿದೆ. ಅದೆಂದೂ ಬತ್ತಿಲ್ಲ. ಅವರ ಮಾರ್ಗದಲ್ಲಿಯೇ ಭವ್ಯ ದೇವಾಲಯವೊಂದು ನಿರ್ಮಿತವಾಗಿದೆ. ಅದರ ಗರ್ಭಗುಡಿಯಲ್ಲಿ ಎಲ್ಲಮ್ಮನ ಸುಂದರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಈ ಗುಡಿಯ ಶಿಲ್ಪ ಹಳೆಯ ಕಾಲದ್ದು’ ಸುಂದರವಾಗಿದೆ. ಅದರಲ್ಲಿ ಚಾಲುಕ್ಯ ಶಿಲ್ಪದ ಮಾದರಿಯಲ್ಲಿ ಮುಖಮಂಟಪ, ನವರಂಗ, ಶುಕನಾಸಿ, ಗರ್ಭಗುಡಿ ರಚಿಸಲ್ಪಟ್ಟಿವೆ. ಈ ಗುಡಿಗೆ ಮೂರು ದ್ವಾರಗಳಿದ್ದು, ಗುಡಿಯ ಸುತ್ತಲೂ ಭವ್ಯವಾದ ಪೌಳಿ ಇದೆ. ಅದರ ಸುತ್ತಲೂ ಭಕ್ತರ ವಸತಿಗಾಗಿ ಕಟ್ಟಿಸಲಾದ ಕೋಣೆಗಳಿವೆ. ಎಲ್ಲಮ್ಮನ  ವಿಗ್ರಹ ಸುಂದರವಾಗಿದೆ. ದರ್ಶನಮಾತ್ರದಲ್ಲಿಯೇ ದರ್ಶನಾರ್ಥಿಗಳಲ್ಲಿ ಭಯಭಕ್ತಿಯನ್ನು ಹುಟ್ಟಿಸುವ ಭವ್ಯ ತೇಜವಿದೆ. ಈ ದೇವಿಯ ಅರ್ಚಕರು ವೀರಶೈವರು. ಪೂಜಾವಿಧಾನಗಳು ಶಾಸ್ತ್ರೋಕ್ತವಾಗಿ ನಡೆಯುತ್ತದೆ. ಭಕ್ತರು ವಿಪುಲಕಾಣಿಕೆ ಅರ್ಪಿಸುತ್ತಾರೆ.  ಹೀಗಾಗಿ ದೇವಿಯ ಸೇವೆಗೆ ಆತಂಕವಿಲ್ಲ.

ಎಲ್ಲಮ್ಮನ ಗುಡಿಯ ಮೇಲುಗಡೆಯ ಗುಡ್ಡದ ಪಡೆಯಿಂದ ಪುಟನೆಗೆದು ಬರುವ ಝರಿಯಿಂದ ಅಲ್ಲಿಯೇ  ಇರುವ ಮೂರು ಹೊಂಡಗಳು ತುಂಬಿ ಹರಿಯುತ್ತವೆ ಈ ಹೊಂಡಗಳಿಗೆ ಎಣಿಗೊಂಡ, ಅರಿಷಿಣ ಹೊಂಡ ಮತ್ತು ಕುಂಕುಮ ಹೊಂಡ ಎಂದು ಕರೆಯುವರು ಈ ಹೊಂಡದ ಮಡಿನೀರು ತಂದು ದೇವಿಯ ಅಭ್ಯಂಜನ ಮಾಡುವರಂತೆ. ದೇವಿಯ ಅಭ್ಯಂಜನಕ್ಕೆ ಎಣ್ಣೆ, ಅರಿಷಿಣ ಮತ್ತು ಕುಂಕುಮ ಅವಶ್ಯವಾದ್ದರಿಂದ ಈ ಹೊಂಡಗಳಿಗೆ ಹೀಗೆ ಹೆಸರು ಬಂದಿರಲು ಸಾಕು. ದೇವಿಯ ದರ್ಶನಕ್ಕೆ ಬರುವ ಭಕ್ತರು ಧೂಳಿಗಾಲಿನಿಂದ  ಮೊದಲು  ಈ ಹೊಂಡಗಳಿಗೆ ಹೋಗಿ ಆ ಹೊಂಡಗಳ ನೀರು ಪಡೆದು ಮಡಿಯಾಗುತ್ತಾರೆ. ಆಮೇಲೆ ದೇವಿಯ ದರ್ಶನಕ್ಕೆ ಸಾಗುವರು.

ಎಲ್ಲಮ್ಮನ ಗುಡಿಗಿಂತ ಸ್ವಲ್ಪ ಎತ್ತರದ ಗುಡ್ಡ ದೋರೆಯಲ್ಲಿ ರೇವಣಸಿದ್ದೇಶ್ವರನ ಗುಡಿಯಿದೆ. ಅವನೊಬ್ಬ ವೀರಶೈವ ಪವಾಡಪುರುಷ. ಅವನ ಕಾಲದಿಂದೀಚೆಗೆ ಎಲ್ಲಮ್ಮ ವೀರಶೈವರ ಪ್ರಭಾವಕ್ಕೆ ಒಳಗಾದಂತಿದೆ. ಆ ಗುಡಿಯ ಎದುರಿನಲ್ಲಿಯೇ ಪರಶುರಾಮನ ಗುಡಿ, ಪರಶುರಾಮನು ತಾನು ಮಾಡಿದ ಅಪರಾಧವನ್ನು ಸಂತೈಸಿಕೊಳ್ಳಲೋ ಏನೋ ಎಂಬಂತೆ ಕೈಯಲ್ಲಿ ಚೌಡಿಕೆ ಹಿಡಿದು ದೇವಿಯ ಸ್ತುತಿಸುತ್ತ ನಿಂತಿರುವುದನ್ನು ಕಾಣಬಹುದು. ಸಮೀಪದಲ್ಲಿಯೇ ಮಾತಂಗಿ ನೆಲೆಸಿದ್ದಾಳೆ. ಅವಳು ಎಲ್ಲಮ್ಮನ ಪರಮಭಕ್ತಳು. ಕಾಲಭೈರವನ ಮೂರ್ತಿ ಅಲ್ಲಿಯೇ ಸಮೀಪದಲ್ಲಿದೆ, ಆತನು ಕೈಯಲ್ಲಿ ಕತ್ತಿ, ತ್ರಿಶೂಲ, ಕಪಾಲ ಧರಿಸಿಕೊಂಡು ನಿಂತಿದ್ದಾರೆ. ಗುಡ್ಡದ ಹಾಸುಬಂಡೆಯ ಮೇಲೆ ಎಕ್ಕಯ್ಯ, ಜೋಗಯ್ಯರ ಪಾದಗಳಿವೆ. ಜಮದಗ್ನಿ ಯಲ್ಲಮ್ನ ಪತಿ. ಅವನು ಮಾತ್ರ ಸ್ವಲ್ಪ ದೂರದಲ್ಲಿದ್ದಾನೆ. ಈ ಎಲ್ಲ ದೇವತಾ ವಿಗ್ರಹಗಳು ತಮ್ಮದೇ ಆದ ಕಥೆಗಳನ್ನು ಹೇಳುತ್ತವೆ; ಎಲ್ಲಮ್ಮನ ಜೀವನವೃತ್ತಾಂತವನ್ನು ರೂಪಿಸುತ್ತವೆ.

ಗುಡ್ಡದ ಕೆಳಗೆ, ಭಕ್ತರು ಎಲ್ಲಮ್ಮನ ದರ್ಶನಕ್ಕೆ ಬರುವ ಮಾರ್ಗದಲ್ಲಿ ಜೋಗುಳ ಬಾವಿ ಇದೆ. ಅಲ್ಲಿ ಸತ್ಯವ್ವನ ದೇಗುಲವಿದೆ. ಅವಳು ಮಹಾಸತ್ವವುಳ್ಳ ಸತ್ಯದೇವತೆ. ಪರಶುರಾಮನನ್ನು ಹಡೆದಾಗ ಎಲ್ಲಮ್ಮನ ಬಾಣಂತಿತನ ಮಾಡಿದವಳು ಇವಳೇ. ಅವಳ ಹತ್ತಿರದಲ್ಲಿಯೇ ಪರಶುರಾಮ ಎಕ್ಕಯ್ಯ ಜೋಗಯ್ಯರ ವಿಗ್ರಹಗಳಿವೆ. ಸತ್ಯವ್ವ ಪರಶುರಾಮನನ್ನು ಸಾಕಿ ಸಲುಹಿದ ಮಹಾತಾಯಿ. ಜಮದಗ್ನಿಯ ತಾಪದಿಂದ ಎಲ್ಲಮ್ಮನಿಗೆ ಕುಷ್ಠರೋಗ ಬಡೆಯಿತು. ಆಗ ಅವಳು ಅಲ್ಲಿಯೇ ನೆಲೆಸಿದ್ದ ಎಕ್ಕಯ್ಯ ಜೋಗಯ್ಯರ ಅನುಮತಿಯಂತೆ ಜೋಗುಳ ಬಾವಿಯಲ್ಲಿ ಸ್ನಾನ ಮಾಡಿ ತನ್ನ ರೋಗ ಕಳೆದುಕೊಂಡಳು. ಅಂತಹ ಶಕ್ತಿ ಆ ಬಾವಿಯ ನೀರಲ್ಲಿದೆ. ಆದ್ದರಿಂದಲೇ ಚರ್ಮರೋಗವುಳ್ಳ ಭಕ್ತರು ಇಂದಿಗೂ ಆ ಬಾವಿಯ ನೀರಲ್ಲಿ ಸ್ನಾನ ಮಾಡಿ, ಬೇವಿನ ಉಡುಗೆ ಉಟ್ಟುಕೊಂಡು, ಗುಡ್ಡವನ್ನೇರಿ ಎಲ್ಲಮ್ಮನ ದರ್ಶನಕ್ಕೆ ಸಾಗುವರು. ಎಲ್ಲಮ್ಮನ ಭಕ್ತರಿಗೆ ಇದೊಂದು ನಿಲ್ದಾಣ. ಭಕ್ತರು ಅಲ್ಲಿ ನಿಂತು ಸತ್ಯವ್ವನನ್ನು ಪೂಜಿಸಿ ಎಕ್ಕಯ್ಯ ಜೋಗಯ್ಯ ಅವರಿಗೆ ಪಡಲಿಗೆ ತುಂಬಿಸಿ ಬಾವಿಯಲ್ಲಿ ತಮ್ಮ ಕಾಣಿಕೆ ಹಾಕಿ ಮುಂದೆ ಸಾಗುವುದು ಪದ್ಧತಿಯಾಗಿದೆ. ಅವರು ದಾರಿಯುದ್ದಕ್ಕೂ ’ಎಕ್ಕಯ್ಯ ಜೋಗಯ್ಯ ಉಧೋ ಉಧೋ ಎನ್ನುತ್ತ ಸಾಗಿರುವ ದೃಶ್ಯ ಅಗಾಧವಾದುದು. ಅವರ ಧ್ವನಿಯ ಅಲೆಗಳು ಗುಡ್ಡದ ತುಂಬೆಲ್ಲ ಪ್ರತಿಧ್ವನಿ ಹುಟ್ಟಿಸುತ್ತವೆ. ದೇವಿಯ ಧ್ಯಾನಕ್ಕೆ ತದೇಕ ಚಿತ್ತವನ್ನು ತಂದುಕೊಡುತ್ತವೆ.

ಎಲ್ಲಮ್ಮನ ಚರಿತ್ರೆ:

ಎಲ್ಲಮ್ಮನ ಜೀವನ ಚರಿತ್ರೆ ಅರಿಯುವಲ್ಲಿ ಪುರಾಣಗಳೂ ಜನಪದ ಕಥೆಗಳೂ ಸಾಕಷ್ಟು ಸಹಾಯ ನೀಡುತ್ತವೆ. ಪುರಾಣಗಳಲ್ಲಿ ಎರಡು ವಿಧ ೧) ವಿಷ್ಣು ಪುರಾಣ ೨) ಶಿವಪುರಾಣ. ವಿಷ್ಣುಪುರಾಣಗಳಲ್ಲಿ ಹರಿವಂಶ, ಭಾಗವತ, ವಾಯುಪುರಾಣ, ಮಹಾಭಾರತ ಮುಂತಾದವು ಎಲ್ಲಮ್ಮನ ಚರಿತ್ರೆಗೆ ಸಂಬಂಧಿಸಿದ ವಿಷಯಗಳನ್ನು ಅನುಷಂಗಿಕವಾಗಿ ಹೇಳಿವೆ. ಈ ಪುರಾಣಗಳಲ್ಲಿ ಎಲ್ಲಮ್ಮನನ್ನು ರೇಣುಕಾ ಎಂದು ಹೇಳಿದೆ. ರೇಣುಕೆ ಇಕ್ಷ್ವಾಕು  ವಂಶದ ರೇಣುಕಾರಾಜನ ಮಗಳ

[1]. ಆದರೆ ರೇಣುಕ ರಾಜನನ್ನು ಪ್ರಸೇನಜಿತನೆಂದು ಭಾಗವತದಲ್ಲಿ ಹೇಳಲಾಗಿದೆ[2]. ರೇಣುಕೆ ಅಯೋನಿಜೆಯೆಂದೂ ಕಮಲದಲ್ಲಿ ಜನಿಸಿದೆಳೆಂದೂ ಪ್ರಸೇನಜಿತನು ಈಕೆಯ ಸಾಕುತಂದೆಯೆಂದೂ ಹರಿವಂಶದಲ್ಲಿ ತಿಳಿಸಲಾಗಿದೆ[3]. ವಾಯುಪುರಾಣದಲ್ಲಿ ರೇಣುಕೆಯ ಹುಟ್ಟಿನ ಬಗೆಗೆ ಬೇರೆ ಕಥೆಯಿದೆ. ಅವಳು ಸುವೇಣನೆಂಬ ಮುನಿಯ ಮಗಳೆಂದೂ ಅವಳಿಗೆ ಕಾಮಾಲಿ ಎಂದು ಹೆಸರು ಇದ್ದಿತೆಂದೂ ತಿಳಿದುಬರುತ್ತದೆ[4]. ಮಹಾಭಾರತದಲ್ಲಿ ಹೇಳಿದಂತೆ ರೇಣುಕೆ ಭೃಗುವಂಶದ ಜಮದಗ್ನಿ ಮಹರ್ಷಿಯನ್ನು ಮದುವೆಯಾದಳು ಜಮದಗ್ನಿ ಮಹಾಮುಂಗೋಪಿ; ಮೇಲಾಗಿ ಕಠೋರ ನಿಯಮಗಳನ್ನು ಇಟ್ಟುಕೊಂಡು ತಪಶ್ಚರ್ಯಮಾಡುವಂಥವನು. ಹೀಗಿದ್ದರೂ ರೇಣುಕೆ ತನ್ನ ಗಂಡ ಮೆಚ್ಚುವಂತೆ ಕಾರ್ಯಕಲಾಪಗಳನ್ನು ನಡೆಸಿಕೊಂಡು ಒಂದು ಆದರ್ಶ ಗೃಹಿಣಿಯಾಗಿ ಬಾಳುತ್ತ ಬಂದಳು. ಅವಳಿಗೆ ಕಾಲಾಂತರದಲ್ಲಿ ರುಮನ್ವಾಂತ, ಸುಷೇಣ, ವಸು, ವಿಶ್ವಾವಸು ಮತ್ತು ಪರಶುರಾಮ ಎಂಬ ಐವರು ಮಕ್ಕಳಾದರು.

ಒಂದು ದಿನ, ರೇಣುಕೆ ಇತರ ಸ್ತ್ರೀಯರೊಡನೆ ನೀರು ತರಲು ಜಲಾಶಯಕ್ಕೆ ಹೋದಳು, ಅಲ್ಲಿ ಚಿತ್ರ ರಥನೆಂಬ ಗಂಧರ್ವನು ದಿವ್ಯ ಮಾಲಾಂಬರಧಾರಿಯಾಗಿ ತನ್ನ ಸತಿಯರೊಡನೆ ಜಲಕ್ರೀಡೆಯಲ್ಲಿ ತೊಡಗಿದ್ದನು. ಆ ದೃಶ್ಯವನ್ನು ಕಂಡೊಡನೆ ರೇಣುಕೆಯ ಚಿತ್ತ ಚಂಚಲವಾಯಿತು. ಅವಳು ಆ ಕ್ರೀಡೆಯನ್ನು ನೋಡುತ್ತ ಬಹು ಹೊತ್ತು, ಅಲ್ಲಿಯೇ ಮೈಮರೆತು ನಿಂತಳು. ತಿರುಗಿ ಬರುವಷ್ಟರಲ್ಲಿ ಜಮದಗ್ನಿಯ ಪೂಜೆಯ ವೇಳೆ ಮೀರಿಹೋಗಿತ್ತು. ಜಮದಗ್ನಿಯ ಕೋಪ ಭುಗಿಲೆದ್ದು ಉರಿಯ ತೊಡಗಿತು. ಸಿಟ್ಟಿನ ಭರದಲ್ಲಿ ಅವನು ತನ್ನ ಮಕ್ಕಳನ್ನು ಕರೆದು ರೇಣುಕೆಯ ರುಂಡವನ್ನು ಚಂಡಾಡಲು ಆಜ್ಞೆ ಮಾಡಿದನು. ಮಕ್ಕಳೆಲ್ಲ ಭಯಭೀತರಾದರು. ಕೊನೆಯ ಮಗನಾದ ಪರಶುರಾಮನು ತಂದೆಯ ಆಜ್ಞೆಯನ್ನು ಶಿರಸಾವಹಿಸಿ, ತನ್ನ ತಾಯಿಯ ರುಂಡವನ್ನು ಹಾರಿಸಿದನು. ಅಷ್ಟೇ ಅಲ್ಲದೆ ತಂದೆಯ ಆಜ್ಞೆಯನ್ನು ಪಾಲಿಸಲು ಹಿಂಜರಿದ ತನ್ನ ನಾಲ್ವರು ಅಣ್ಣಂದಿರನ್ನೂ ಕೊಂದು ಹಾಕಿದನು. ನಂತರ ತನ್ನ ತಂದೆಯ ಸಿಟ್ಟು ಇಳಿದ ಮೇಲೆ ಅವನಿಂದಲೇ ವರ ಪಡೆದು ಪರಶುರಾಮನೇ ಸರ್ವರನ್ನು ಬದುಕಿಸಿದನು. ರೇಣುಕಾದೇವಿ ತನ್ನ ಜೀವನದಲ್ಲಿ ಅನೇಕ ಕಷ್ಟ ನಷ್ಟಗಳನ್ನು ಅನುಭೋಗಿಸಿದಳು. ಒಮ್ಮೆ ಉರಿಬಿಸಿಲಲ್ಲಿ ನಡೆಯುವ ಪ್ರಸಂಗ ಬಂದಿತ್ತು. ಭೂಮಿ ಕಾದಹಂಚಾಗಿತ್ತು. ಮುಂದೆ ಹೆಜ್ಜೆ ಇಡುವುದೇ ದುಸ್ತರವಾಗಿತ್ತು. ಅಂತಹ ಸ್ಥಿತಿಯಲ್ಲಿ ಅವಳಿದ್ದಾಗ ಭೃಗುಮಹರ್ಷಿಗಳು ಅವಳಿಗಾಗಿ ಮರುಕಪಟ್ಟು ಆಕೆಗೆ ಪಾದುಕೆ ಛತ್ರಗಳನ್ನು ನೀಡಿ ಸಾಂತ್ವನಗೊಳಿಸಿದರೆಂದು ಭಾರತದಲ್ಲಿ ಹೇಳಿದೆ೧[5].

ಕಾರ್ತಿವೀರ್ಯ ಜಮದಗ್ನಿ :

ಕಾರ್ತಿವೀರ್ಯನು ಸೂರ್ಯವಂಶದ ರಾಜ; ಅವನ ತಂದೆ ಕೃತವೀರ್ಯಾರ್ಜುನ. ಕಾರ್ತಿವೀರ್ಯನು ವಿಂದ್ಯಪರ್ವತ ಪ್ರಾಂತವನ್ನು ಆಳುತ್ತಿದ್ದ ಮಹೀಷ್ಪತಿ ಅದರ ರಾಜಧಾನಿಯಾಗಿತ್ತು. ರಾಜನು ತನ್ನ ಕುಲಗುರುವಾದ ಗಾರ್ಗ್ಯಮುನಿಯ ಉಪದೇಶದಂತೆ ಬಹುಕಾಲದವರೆಗೆ ದತ್ತಾತ್ರೇಯ ಮುನಿಯ ಆರಾಧನೆ ಮಾಡಿ ವರಗಳನ್ನು ಪಡೆದನು. ಯುದ್ಧದಲ್ಲಿ ಯಾವಾಗಲೂ ತನಗೆ ಜಯವಾಗಬೇಕು ಮತ್ತು ಯುದ್ಧ ಸಮಯದಲ್ಲಿ ತನಗೆ ಸಹಸ್ರ ಬಾಹುಗಳಿರಬೇಕು ಎಂಬುದು ಕಾರ್ತಿರ್ವೈನ ಬೇಡಿಕೆ. ಅದಕ್ಕೆ ಅಸ್ತು ಎಂದ ದತ್ತಾತ್ರೇಯ ಮುನಿ೨[6]. ಕಾರ್ತಿವೀರ್ಯನನ್ನು ಪರಾಧನ ಗೊಳಿಸುವುದೇ ಅರಿರಾಜರಿಗೆ ಅಸಾಧ್ಯವಾಯಿತು. ಇವನ ಸೊಕ್ಕು ಮುರಿಯಬೇಕೆಂದ ವಸಿಷ್ಠರು ಕಾರ್ತಿವೀರ್ಯನ ಸಹಸ್ರ ತೋಳುಗಳು ಪರುಶುರಾಮನಿಂದ ಕತ್ತರಿಸಲ್ಪಡಲಿ ಎಂದು ಶಾಪ ಕೊಟ್ಟರು೧[7].

ಒಮ್ಮೆ ಕಾರ್ತಿ ವೀರ್ಯನು ತನ್ನ ಸಮಸ್ತಸೇನೆಯನ್ನೊಳಗೊಂಡು ಬೇಟೆಯಾಡುತ್ತ ಜಮದಗ್ನಿ ಋಷಿಯ ಆಶ್ರಮಕ್ಕೆ ಬಂದನು, ಆಗ ಜಮದಗ್ನಿಯು ತನ್ನಲ್ಲಿದ್ದ ದೇವಲೋಕದ ಕಪಿಲೆಯ ಮಹಿಮೆಯಿಂದ ಕಾರ್ತಿವೈರ್ಯನ ಸಮಸ್ತ ಸೈನ್ಯಕ್ಕೆ ಮೃಷ್ಟಾನ್ನಭೋಜನ ಬಡಿಸಿ ಸಕಲರನ್ನೂ ಸಂತೃಪ್ತಿಗೊಳಿಸಿದನು. ಮದಾಂಧನಾದ ಕಾರ್ತಿವೀರ್ಯನು ಆ ದೇವಲೋಕದ ಆಕಳನ್ನು ಪಡೆದುಕೊಳ್ಳಲು ಎಣಿಕೆ ಹಾಕಿದನು, ಆದರೆ ಅದನ್ನು ಕೈವಶಮಾಡಿಕೊಳ್ಳುವ ಬಗೆಯೆಂತು? ಜಮದಗ್ನಿ ಅದನ್ನು ಕೊಡಲಾರ; ಕಾರ್ತಿವೀರ್ಯ ಅದನ್ನು ಬಿಡಲಾರ. ಈ ಸಂದರ್ಭದಲ್ಲಿ ಕೊಲೆ ಮಾಡಿದ ಆ ದುಷ್ಟನನ್ನು ಹಾಗೆ ಬಿಡಬಾರದೆಂದು ಪರಶುರಾಮನು ಅವನೊಡನೆ ಯುದ್ಧಮಾಡಿ ಕಾರ್ತಿವೀರ್ಯನ ಸಾವಿರ ತೋಳುಗಳನ್ನು ಕತ್ತರಿಸಿ ಹಾಕಿದನು. ಅವನ ರಾಜಧಾನಿಯಾದ ಮಾಹಿಷ್ಪತಿ ನಗರಕ್ಕೆ ಮುತ್ತಿಗೆ ಹಾಕಿ ಇಡೀ ರಾಜ್ಯವನ್ನೇ ಮಣ್ಣುಪಾಲು ಮಾಡಿದನು೨[8]. ಕೊನೆಗೆ ಆತನು ಪಾರ್ವತೀದೇವಿಯನ್ನು ಸ್ತುತಿಸಿ, ಜರಾಮರಣರಹಿತ ವರವನ್ನು ಪಡೆದು, ತಾನು ಗೆದ್ದ ಭೂಮಂಡಲವನ್ನು ಬ್ರಾಹ್ಮಣರಿಗೆ ದಾನ ಮಾಡಿ, ಚಿರಂಜೀವಿಯಾದನು. ಅವನು ಮಹೇಂದ್ರ ಪರ್ವತದಲ್ಲಿ ತಪಸ್ಸು ಮಾಡುತ್ತ ಇರುವನೆಂದು ಹರಿವಂಶ ಹೇಳುತ್ತದೆ೩[9]. ದೇವೀಭಾಗವತದಲ್ಲಿ ಪರಶುರಾಮನ ಮಹಿಮೆ ವಿಸ್ತಾರವಾಗಿ ಬಂದಿದೆ.

ಶಿವಪುರಾಣಗಳಲ್ಲಿ ಶಕ್ತಿಯ ವರ್ಣನೆ ಸಾಕಷ್ಟು ಬಂದಿದ್ದು ಅದು ವಿಷ್ಣುಪುರಾಣಗಳ ಕಥೆಗಿಂತ ಭಿನ್ನವಾದುದು. ಶಕ್ತಿ ಪಾರ್ವತಿಯ ಅಂಶ. ಅವಳೂ ಅವತಾರಿ ಸ್ತ್ರೀ. ಲೋಕಕಂಟಕರಾದವರನ್ನು ದಮನಗೊಳಿಸಿ ಜಗತ್ತಿನಲ್ಲಿ ಶಾಂತಿಯನ್ನು ಸ್ಥಾಪಿಸುವುದೇ ಅವಳ ಅವತಾರದ ಗುರಿ. ಚಂಡಿ, ಚಾಮುಂಡಿ, ಭದ್ರಕಾಳಿ ಹೀಗೆ ನಾನಾ ರೂಪತೊಟ್ಟು ರಾಕ್ಷಸರನ್ನು ಸದೆಬಡೆದ ಸನ್ನಿವೇಶಗಳನ್ನು ಕಾಣಬಹುದು. ಏಳುಕೊಳ್ಳದ ಎಲ್ಲಮ್ಮನನ್ನೇ ಅವು ಗಮನದಲ್ಲಿಟ್ಟಿಲ್ಲ. ಇವಳೂ ಪಾರ್ವತಿಯ ಸಂಕಲ್ಪದಿಂದ ಹುಟ್ಟಿ ಬಂದವಳೆಂದು ಅವು ವಿವರಣೆ ನೀಡುತ್ತವೆ.

ಜಾನಪದ ಎಲ್ಲಮ್ಮ :

ಜಾನಪದದ ಹಾಡುಗಳಲ್ಲಿ, ಕಥೆಗಳಲ್ಲಿ, ಭಕ್ತ ಹೇಳಿಕೆಗಳಲ್ಲಿ ಏಳುಕೊಳ್ಳದ ಎಲ್ಲಮ್ಮನ ಕಥೆ ಹೆಚ್ಚು ವೈವಿಧ್ಯಮಯವಾಗಿ ರಂಜಕವಾಗಿ ಬಂದಿದೆ. ಪುರಾಣ ಕಥೆಯನ್ನು ಅವರು ಒಪ್ಪುವುದಲ್ಲದೆ ಅದರಿಂದ ಭಿನ್ನವಾದ ಎಲ್ಲಮ್ಮನ ಚರಿತ್ರೆಯನ್ನು ಹೆಣೆದಿದ್ದಾರೆ. ಒಂದೊಂದು ಕಥೆ ಒಂದು ತರ. ಕೆಲವಕ್ಕೆ ಆಧಾರ ಕಡಮೆ. ಅವೆಲ್ಲವನ್ನು ವಿವರಿಸಿ ಹೇಳುವುದು ಇಲ್ಲಿ ಅಪ್ರಸ್ತುತ. ಬಿಡಿಬಿಡಿಯಾಗಿ ಹೇಳಿದರೆ ಸ್ಥಳದ ಅಭಾವ. ಆದ್ದರಿಂದ ಅವುಗಳ ಸಾರವನ್ನು ಇಲ್ಲಿ ಕೊಡಲಾಗುವುದು. ಜೋಗತಿಯ ಹಾಡುಗಳಲ್ಲಿ ಕೆಲವು ಕಥೆಗಳಿರುವುದರಿಂದ ಅವುಗಳನ್ನು ಓದುಗರು ಅರಿಯಬಲ್ಲರು.

ರೇಣುಕರಾಜನ ಮಗಳಾದ ರೇಣುಕೆ ಉಗ್ರ ತಪಸ್ವಿಯಾದ ಜಮದಗ್ನಿ ಋಷಿಯನ್ನು ಮದುವೆಯಾಗಿ ನಿಯಮಬದ್ಧವಾದ ಸಂಸಾರ ಜೀನವನ್ನು ನಡೆಸಿಕೊಂಡು ಬಂದಳು. ಎಲ್ಲಮ್ಮ ಮಹಾಪತಿವ್ರತೆಯೆಂದು ಸರ್ವರೂ ಹೊಗಳಿದರು. ಆ ಪಾತಿವ್ರತ್ಯ ಮಹಿಮೆಯಿಂದ ಹಾವಿನ ಸಿಂಬಿಯ ಮೇಲೆ ಉಸುಕಿನ ಕೊಡವನ್ನು ಹೊತ್ತು ನೀರು ತರುತ್ತಿದ್ದಳು. ಒಂದು ದಿನ ಅವಳು ನೀರಿಗೆ ಹೋಗಿ, ಸಖಿಯರೊಡನೆ ಆಟವಾಡುತ್ತ ನದಿಯ ದಂಡೆಯಲ್ಲಿ ಕೆಲಕಾಲ ಕಳೆದಳು. ತನ್ನ ನಿತ್ಯ ಪೂಜಾ ಕಾರ್ಯಕ್ಕೆ ಅಡ್ಡಿಯಾಯಿತೆಂದು ಸಿಟ್ಟಿಗೆದ್ದ ಜಮದಗ್ನಿಯು ಅವಳಿಗೆ ಶಾಪಕೊಟ್ಟು ಆಶ್ರಮದಿಂದ ಹೊರಗೆ ಹಾಕಿದನು. ಎಲ್ಲಮ್ಮನಿಗೆ ದುಃಖವೆನಿಸಿತು. ಅವಳು ಏಳುಕೊಳ್ಳಗಳಲ್ಲಿ ಸುತ್ತಾಡಿಕೊಂಡು ಏಕಾಂಗಿಯಾಗಿ ಕಷ್ಟ ಅನುಭವಿಸಿದಳು. ಪತಿಯ ಶಾಪದಿಂದ ಅವಳಿಗೆ ತೊನ್ನು ರೋಗಹತ್ತಿತು.  ದೇಹ ಕುರೂಪವಾಗಿ ತೋರಿತು. ಹಾಗೆಯೇ ಕೊಳ್ಳದಿಂದ ಕೊಳ್ಳಕ್ಕೆ ಸುತ್ತಾಡುತ್ತ ಮನದ ಭಾರವನ್ನು ಹೊತ್ತು ಜೋಗುಳಬಾವಿಗೆ ಬಂದಳು. ಅಲ್ಲಿ ಸತ್ಯವ್ವನ ದರ್ಶನವಾಯಿತು. ಅಲ್ಲಿ ಎಕ್ಕಯ್ಯ, ಜೋಗಯ್ಯರೆಂಬ ಇಬ್ಬರು ಸಿದ್ಧರಿದ್ದರು; ಅವರು ಮಹಾಸಿದ್ಧಿ ಪುರುಷರು. ಅವರು ಎಲ್ಲಮ್ಮನನ್ನು ಕನಿಕರ ದೃಷ್ಟಿಯಿಂದ ನೋಡಿ, ಅಲ್ಲಿಯೇ ಇರುವ ಬಾವಿಯ ನೀರಿನಲ್ಲಿ ಸ್ನಾನ ಮಾಡಿದರೆ ನಿನ್ನ ರೋಗ ವಾಸಿಯಾಗುವುದೆಂದು ಉಪದೇಶಿಸಿದರು. ಹಾಗೆ ಮಾಡಲು ಎಲ್ಲಮ್ಮನ ರೋಗ ನಾಶವಾಯಿತು. ಸತ್ಯಮ್ಮ ಹೇಳಿದಂತೆ ಎಲ್ಲಮ್ಮ ಪುನಃ ಜಮದಗ್ನಿಯ ಬಳಿಗೆ ಹೋಗಿ ಪತಿಸೇವೆಯಲ್ಲಿ ನಿರತಳಾದಳು. ಎಲ್ಲಮ್ಮ ಸ್ನಾನ ಮಾಡಿದ ಬಾವಿ ಜೋಗಳ ಬಾವಿ ಎನಿಸಿಕೊಂಡು ಪವಿತ್ರ ತೀರ್ಥವಾಯಿತು. ಎಕ್ಕಯ್ಯ ಜೋಗಯ್ಯರ ಕೀರ್ತಿ ಅಜರಾಮರವೆನಿಸಿತು. ಸತ್ಯವ್ವ ಸತ್ಯವಂತಳಾಗಿ ಲೋಕಪ್ರಖ್ಯಾತಳೆನಿಸಿದಳು.

ಎಲ್ಲಮ್ಮನ ಮದುವೆ :

ಎಲ್ಲಮ್ಮ ಜಮದಗ್ನಿಯ ಹೆಂಡತಿಯೆಂಬುದನ್ನು ಪುರಾಣಗಳೂ ಜನಪದ ಕಥೆ ಹಾಡುಗಳೂ ಒಪ್ಪುತ್ತವೆ. ಆದರೆ ಅವಳು ಜಮದಗ್ನಿಯ ಮದುವೆಯಾದ ರೀತಿ ಭಿನ್ನವೆಂದು ಸಾರುತ್ತದೆ. ಇವರಿಬ್ಬರ ಮದುವೆ ಶಾಸ್ತ್ರೋಕ್ತವಾಗಿ ನಡೆಯಿತೆಂದು ಕೆಲವರ ಮತ. ಈ ಮಾತಿಗೆ ಪುರಾಣಗಳು ಪುಷ್ಟಿ ನೀಡುತ್ತವೆ. ಆದರೆ ಜನಪದ ಹಾಡುಗಳು ತದ್ವಿರುದ್ಧ ಹೇಳುತ್ತವೆ. ಜನಪದದ ನಂಬಿಕೆ ಹೀಗೆ : ಜಮದಗ್ನಿಯ ತೇಜಸ್ಸಿಗೆ ಮರುಳಾದ ಎಲ್ಲಮ್ಮ ಅವನನ್ನೇ ಮದುವೆಯಾಗುವೆನೆಂದು ಹಟ ಮಾಡಿದಳಂತೆ. ಈ ಮದುವೆಗೆ ಜನಸಮ್ಮತಿ ಇರಲಿಲ್ಲ. ಆಗ ಎಲ್ಲಮ್ಮನು ಜಮದಗ್ನಿಯನ್ನು ಕೂಡಿಕೊಂಡಳೆಂದು ಒಂದು ಹಾಡಿನಲ್ಲಿ ಬಂದಿದೆ. ಒಮ್ಮೆ ಎಲ್ಲಮ್ಮ ಸಮುದ್ರ ಸ್ನಾನಕ್ಕೆ ಹೋದಳು; ಅದೇ ಸಮಯದಲ್ಲಿ ಜಮದಗ್ನಿ ಋಷಿ ಸ್ನಾನಕ್ಕೆಂದು ಬಂದಿದ್ದನು. ಇಬ್ಬರೂ ಅನತಿ ದೂರದಲ್ಲಿಯೇ ಸ್ನಾನ ಮಾಡುತ್ತಿದ್ದರು. ಆದರೆ ಒಬ್ಬರಿಗೊಬ್ಬರು ಕಾಣುತ್ತಿರಲಿಲ್ಲ. ಸ್ನಾನದ ಸಮಯದಲ್ಲಿ ರೇಣುಕೆ ಮುಡಿದಿದ್ದ ಮರುಗ, ಜವನ, ಪುನಗಗಳ ಕಂಪು ತಂಗಾಳಿಯಲ್ಲಿ ತೇಲಿ ಜಮದಗ್ನಿಯ ಮೂಗಿಗೆ ತಾಕಿತು. ಇಂಥ ಸುವಾಸನೆ ಯಾವ ಕನ್ನಿಕೆಯಿಂದ ಬಂದಿರಬೇಕು ಎಂದು ಜಮದಗ್ನಿ ಯೋಚಿಸಿದನು. ಅವನ ಮೈ ಬೆವರು ಸಮುದ್ರದ ನೀರಲ್ಲಿ ಬಿದ್ದು, ಹೂವಿನಂತೆ ಅರಳಿ ತೇಲಿಬಂದು ರೇಣುಕೆಯ ದೇಹಕ್ಕೆ ತಗುಲಿತು. ಆಗ ಅವಳು ಗರ್ಭವತಿಯಾದಳು. ಕಾಲ ಗತಿಸಿತು, ಸಮಾಜದ ಬಾಹಿರಳಾದ ರೇಣುಕೆ ಕಾಡು ಮೇಡುಗಳನ್ನು ಸುತ್ತುತ್ತ ಜೋಗುಳ ಬಾವಿಯ ಸತ್ಯವ್ವನಲ್ಲಿಗೆ ಬಂದಳು. ಆಗ ಅವಳು ತುಂಬಾ ಗರ್ಭಿಣಿ, ಅವಳ ಬಾಣಂತಿತನದ ಭಾರವನ್ನು ಸತ್ಯವ್ವ ಹೊತ್ತಳು’; ಪರಶುರಾಮ ರೇಣುಕೆಯ ಉದರದಲ್ಲಿ ಹುಟ್ಟಿಬಂದ. ಮಗು ಮಹಾತೇಜಸ್ವಿಯಾಗಿ ಬೆಳೆಯತೊಡಗಿದ. ಆಗ ಅವನಿಗೆ ತನ್ನ ತಂದೆಯ ಬಗೆಗೆ ತಿಳಿದುಕೊಳ್ಳುವ ತವಕ. ಅದಕ್ಕೆ ಉತ್ತರ ಸಿಗದ ಪರಿಸ್ಥಿತಿ.

ಹುಡುಗ ಪರಶುರಾಮ ಮಹಾತುಂಟ, ಗೋಲಿಗುಂಡು ಚಿಣಿಪಣಿ ಆಟಗಳಲ್ಲಿಯೇ ಅವನ ಮನಸ್ಸು. ಒಂದು ದಿನ, ಅನೇಕ ಜನ ಹೆಂಗಳೆಯರು ಹೊಳೆಗೆ ಹೋಗಿ, ತುಂಬಿದ ಕೊಡ ತಲೆಯ ಮೇಲಿಟ್ಟುಕೊಂಡು ಮನೆಗೆ ಮರಳಿ ಬರುತ್ತಿದ್ದರು. ತುಂಟ ಪರಶುರಾಮ ದಾರಿಯಲ್ಲಿ ನಿಂತಿದ್ದ ಅವನು ಸುಮ್ಮನಿರದೆ ಗೋಲಿಯೊಂದರಿಂದ ಒಬ್ಬಳು ಹೊತ್ತು ತರುತ್ತಿದ್ದ ಕೊಡಕ್ಕೆ ಗುರಿಯಿಟ್ಟು ಹೊಡೆದ. ಕೊಡ ಒಡೆದು ನೀರು ಚೆಲ್ಲಾಪಿಲ್ಲಿಯಾಗಿ ಹರಿಯಿತು. ಅವಳು ಪರಶುರಾಮನ ಮೇಲೆ ಸಿಟ್ಟಿಗೆದ್ದು ’ತಂದೆಯಿಲ್ಲದ ಮೂಳ, ಇವನ ಉರಿತವೆಷ್ಟು’ ಎಂದು ಸಾಪಳಿಸಿದಳು. ’ತಂದೆಯಿಲ್ಲದ ಮೂಳ’ ಎಂದ ಮಾತು ಪರಶುರಾಮನ ಮನಕ್ಕೆ ತಾಕಿ, ಅವನ ತಲೆ ಕೆಳಗಾಗುವಂತೆ ಮಾಡಿತು. ಪರಶುರಾಮ ತನ್ನ ತಾಯಿ ಇದ್ದಲ್ಲಿಗೆ ಓಡುತ್ತ ಬಂದ. ತನ್ನ ತಂದೆಯನ್ನು ತೋರಿಸೆಂದು ದುಂಬಾಲ ಬಿದ್ದ. ಅವಳ ಪಾತಿವ್ರತ್ಯವನ್ನೇ ಶಂಕಿಸಿ ಪ್ರಶ್ನೆ ಹಾಕತೊಡಗಿದ. ಎಲ್ಲಮ್ಮನಿಗೆ ದಿಕ್ಕು ತೋಚದಂತಾಯಿತು. ಆಗ ಅವಳು ”ನಿನ್ನನ್ನು ಹೂ ಸೋಂಕಿ ಹಡೆದಿರುವೆ’ ಎಂದು ನಿಜ ಹೇಳಿದರೆ ಅವನಿಗೆ ಸಮ್ಮತವಿಲ್ಲ. ಆಗ ಅವನು ’ಅದು ನಿಜವಿದ್ರೆ ಹೂ ಸೋಂಕಿ ನನಗೆ ತಮ್ಮನನ್ನೋ ತಂಗಿಯನ್ನೋ ಹಡೆದುಕೊಡು’ ಎಂದು ಸವಾಲು ಹಾಕಿದ. ಆ ಸವಾಲಿಗೆ ಎಲ್ಲಮ್ಮ ಉತ್ತರ ಕೊಡಲೇಬೇಕು; ಇಲ್ಲದಿದ್ದರೆ ಅವನು ಬಿಟ್ಟಪ್ಪನಲ್ಲ. ಆಗ ಅವಳು ’ನಿನ್ನನ್ನು ದೇವರ ಪುಣ್ಯದಿಂದ ಹಡೆದೆ’ ಎಂದು ಉತ್ತರಿಸಿದಳು. ಪರಶುರಾಮ ಅವಳ ಮಾತಿಗೆ ಒಪ್ಪಲಿಲ್ಲ. ತಿಳಿದವನು ಕಟ್ಟುಕತೆಗೆ ಬೆಲೆಕೊಡಬಲ್ಲನೆ? ಆಗ ಅವನು ತನ್ನ ತಾಯಿ ಗರತಿಯಲ್ಲವೆಂದು ಸಾರಿ ಅವಳಿಗೆ ಇಲ್ಲದ ತೊಂದರೆ ಕೊಡುತ್ತ ಬಂದ. ಅವನ ಕಾಟವನ್ನು ತಾಳಲಾರದೆ ಅವಳು ಸಮಗಾರನ ಬಾವಿಯಲ್ಲಿ ಅವಿತುಕೊಂಡರೂ ಆತ ಬಿಡಲಿಲ್ಲ. ಕಿರುಕುಳ ಕೊಡತೊಡಗಿದ. ಅದನ್ನು ತಾಳಲಾರದೆ’ ಮಗನೆ, ನಿನ್ನ ಸೊಲ್ಲು ಕೇಳುವದು ನನಗೆ ಬೇಡ’ ಎಂದು ಶಾಪ ಕೊಡುತ್ತಾಳೆ. ಹೀಗಿರುವುದರಿಂದಲೇ ಪರಶುರಾಮನ ಗುಡಿಯಲ್ಲಿ ನಿಂತು ಮಾತಾಡಿದ್ದು ಎಲ್ಲಮ್ಮನ ಗುಡಿಯಲ್ಲಿದ್ದವರಿಗೆ ಕೇಳಿಸದು. ಎರಡು ಗುಡಿಗಳು ಸಮೀಪವಿರುವುದರಿಂದ ಕೇಳಿಸುವುದು ಸಾಧ್ಯವಿದೆ. ಆದರೂ ಎಲ್ಲಮ್ಮನ ಗುಡಿಯಲ್ಲಿದ್ದವರ ಸೊಲ್ಲು ಪರಶುರಾಮನ ಗುಡಿಯಲ್ಲಿದ್ದವರಿಗೂ ಕೇಳಿಸದು. ಹೀಗಾಗಿ ಆ ತಾಯಿ ಮಕ್ಕಳ ಸೊಲ್ಲು ಪರಸ್ಪರ ಅಡಗಿದೆಯೆಂಬುದಕ್ಕೆ ನಿದರ್ಶನವೆನ್ನಬಹುದೆ? ಭಕ್ತರು ಮಾತ್ರ ನಂಬುತ್ತಾರೆ.

ಉಭಯ ಸಂಕಟ! ಉಭಯರಿಗೂ ಸಂಕಟ! ತನ್ನ ಗಂಡ ಯಾರೆಂಬುದು ಎಲ್ಲಮ್ಮನಿಗೆ ತಿಳಿಯದು; ತನ್ನ ತಂದೆ ಯಾರೆಂಬುದು ಪರಶುರಾಮನಿಗೂ ಹೊಳೆಯದು. ಇಂತಹ ದುರ್ಧುರ ಸಮಯದಲ್ಲಿ ನಾರದನು ಇವರಿಬ್ಬರನ್ನೂ ಜಮದಗ್ನಿ ಇದ್ದಲ್ಲಿಗೆ ಕರೆದೊಯ್ದು ಅವರ ಸಂದೇಹವನ್ನು ಪರಿಹರಿಸುವನು. ಶಿವನ ಅನುಗ್ರಹದಿಂದ ಜಮದಗ್ನಿ ಎಲ್ಲಮ್ಮರ ಉದರದಲ್ಲಿ ಹುಟ್ಟಿದವನು ಪರಶುರಾಮನೆಂದು ಹೇಳುವನು. ಆಗ ಪರಶುರಾಮನಲ್ಲಿ ಜ್ಞಾನೋದಯವಾಗುವುದು. ತನ್ನ ತಾಯಿಗೆ ಸುಮ್ಮನೆ ಅಪವಾದ ಕೊಟ್ಟೆನೆಂದು ಪಶ್ಚಾತ್ತಾಪ ಪಡುವನು. ಆದ್ದರಿಂದಲೇ ಎಲ್ಲಮ್ಮನ ಗುಡಿಯ ಸಮೀಪದಲ್ಲಿರುವ ಪರಶುರಾಮನು ಕೈಯಲ್ಲಿ ಚೌಡಿಕೆ ಹಿಡಿದು ಅವಳ ಸ್ತುತಿ ಮಾಡುತ್ತಿರುವುದನ್ನು ಕಾಣಬಹುದು. ಮುಂದೆ ಕೆಲಕಾಲ, ಎಲ್ಲಮ್ಮ ಮತ್ತು ಜಮದಗ್ನಿ ದಂಪತಿಗಳು ಸುಖವಾಗಿದ್ದರು.

ಮತ್ತೊಂದು ಕಥೆ : ಮಹಾತಪಸ್ವಿಯಾದ ಜಮದಗ್ನಿಗೆ ಇನ್ನೂ ಉಗ್ರವಾದ ತಪಸ್ಸನ್ನು ಮಾಡಿ ಮಹಿಮಾವಂತನಾಗಬೇಕೆಂಬ ಬಯಕೆ ಬಲವಂತವಾಯಿತು. ಆಗ ಅವನು ಯಾರಿಗೂ ತಿಳಿಯದ ಒಂದು ಸ್ಥಳಕ್ಕೆ ಹೋಗಬೇಕೆಂದು ನಿಶ್ಚಯಿಸಿ, ತಾನು ಹೋದ ವಿಷಯವನ್ನು ಯಾರಿಗೂ ಹೇಳಬಾರದೆಂದು ಎಲ್ಲಮ್ಮನಿಗೆ ಕಟ್ಟಪ್ಪಣೆ ಮಾಡಿ ಹೊರಟು ಹೋದನು. ಎಲ್ಲಮ್ಮ ಜಮದಗ್ನಿಯ ಮೂರ್ತಿಯೊಂದನ್ನು ಮಾಡಿ ಪೂಜಿಸುತ್ತ ಕುಳಿತಳು. ಆಗ ಅವಳು ತುಂಬಾ ಬಸುರಿ. ಅತ್ತಿತ್ತ ಅಲೆದಾಡಿ ಸತ್ಯವ್ವನ ಆಶ್ರಯದಲ್ಲಿ ಪರಶುರಾಮನನ್ನು ಹಡೆದು ದೊಡ್ಡವನನ್ನಾಗಿ ಮಾಡಿದಳು. ಪರಶುರಾಮನಿಗೆ ತಿಳುವಳಿಕೆ ಬಂದೊಡನೆ ತನ್ನ ತಂದೆಯನ್ನು ತೋರೆಂದು ತಾಯಿಯನ್ನು ಪೀಡಿಸತೊಡಗಿದ. ಜಮದಗ್ನಿಯ ಮೂರ್ತಿಯನ್ನು ತೋರಿಸಿ, ಇವನೇ ನಿನ್ನ ತಂದೆಯೆಂದು ಸಮಾಧಾನ ಹೇಳಹೋದಳು. ಅವನು ಆ ಮಾತನ್ನು ನಂಬಲಿಲ್ಲ. ’ತನ್ನ ಪತಿದೇವ ಸತ್ತು ಹೋದ; ಇದೇ ಅವನ ಪ್ರತೀಕ; ಎಂದು ಆ ಮೂರ್ತಿಯನ್ನು ತೋರಿಸಿದಳು. ಅದಕ್ಕೆ ಪರಶುರಾಮನು ತನ್ನ ತಂದೆ ತೀರಿಕೊಂಡರೆ ’ನೀನು ಕೈಯಲ್ಲಿ ಬಳೆ ಏಕೆ ಇಟ್ಟುಕೊಂಡಿರುವೆ? ಎಂದು ಪ್ರಶ್ನಿಸಿದ. ಎಲ್ಲಮ್ಮನಿಗೆ ಯಾವುದೂ ತೋಚದಾಯಿತು. ತನ್ನ ಬಳೆಗಳನ್ನು ಒಡೆದು ಹಾಕಿದಳು. ಆ ದಿನ ಹೊಸ್ತಿಲ ಹುಣ್ಣಿಮೆ, ಎಲ್ಲಮ್ಮ ವಿಧವೆಯಾದ ದಿನ. ಅದರ ನೆನಪಿಗಾಗಿ ಜೋಗತಿಯರು ಎಲ್ಲಮ್ಮನ ದೇವಸ್ಥಾನಕ್ಕೆ ಹೋಗಿ, ಅವಳ ಪ್ರೀತ್ಯರ್ಥವಾಗಿ ತಾವೂ ಬಳೆ ಒಡೆದುಕೊಂಡು ಬರುವುದು ರೂಢಿಯಾಗಿದೆ. ಅದಕ್ಕೆ ರಂಡೆ ಹುಣ್ಣಿಮೆಯೆಂದು ಕರೆಯುವರು. ಮುಂದೆ ಒಂದು ತಿಂಗಳಿಗೆ ಜಮದಗ್ನಿ ತಪಶ್ಚರ್ಯ ಮುಗಿಸಿಕೊಂಡು ಮನೆಗೆ ತಿರುಗಿ ಬಂದ. ಅಂದು ಭಾರತ ಹುಣ್ಣಿಮೆ ಎಲ್ಲಮ್ಮ ಗಂಡನನ್ನು ಕಂಡೊಡನೆ ಮುತ್ತೈದೆಯಾದಳು. ಗೊಡಚಿಯ ವೀರಣ್ಣ ಅಂದು ಎಲ್ಲಮ್ಮ ನಿಗೆ ಬಳೆ, ಕುಂಕುಮ, ಹೊಸ ಸೀರೆ ಕಳಿಸಿಕೊಟ್ಟ. ಅವನ್ನು ಧರಿಸಿಕೊಂಡ ಎಲ್ಲಮ್ಮ ಕುಂಕುಮ ಸೌಭಾಗ್ಯವತಿಯಾದಳು. ಆ ಹುಣ್ಣಿಮೆಗೆ ಮುತ್ತೈದೆ ಹುಣ್ಣಿಮೆಯೆಂದು ಹೆಸರಾಯಿತು.  ಅಂದು ಜೋಗತಿಯರು ಪುನಃ ದೇವಸ್ಥಾನಕ್ಕೆ ಬಂದು ಕುಂಕುಮ ಧರಿಸಿಕೊಂಡು ಬಳೆ ಇಡಿಸಿಕೊಂಡು ನಿತ್ಯ ಮುತ್ತೈದೆಯರಾಗುವರು. ಅಂದು ಎಲ್ಲಮ್ಮನ ಉತ್ಸವ ಅತಿ ವೈಭವದಿಂದ ನೆರವೇರುವುದು ಈ ಕಥೆಗೂ ಪುರಾಣೋಕ್ತ ಕಥೆಗೂ ಸಂಬಂಧವನ್ನು ಕಲ್ಪಿಸಿಕೊಳ್ಳಲು ಅವಕಾಶ ಉಂಟು.

ಎಲ್ಲಮ್ಮ ಆದಿಶಕ್ತಿಯ ಪರಮಾವತಾರ; ಅವಳು ಕೈಲಾಸದಲ್ಲಿರುವ ಪರಶಿವನ ಕುಡಿಹುಬ್ಬಿನ ಬೆವರಿನಿಂದ ಜನಿಸಿದಳು. ಪಾರ್ವತಿಯ ಅಪ್ಪಣೆಯ ಮೇರೆಗೆ ಲೋಕ ಕಲ್ಯಾಣಕ್ಕಾಗಿ ಭೂಮಿಯಲ್ಲಿ ಅವತರಿಸಿದಳು. ಅವಳು ಶಿವಪುತ್ರಿಯಾದುದರಿಂದ ಗೊಡಚಿಯ ವೀರಣ್ಣನ ತಂಗಿಯೆಂದು ಭಕ್ತರು ಭಾವಿಸಿದ್ದಾರೆ. ಎಲ್ಲಮ್ಮ ಮೊದಲು ಬಂದದ್ದು ಏಳುಕೊಳ್ಳಕ್ಕೆ. ಅಲ್ಲಿಯೇ ನಿಂತು ಉಗ್ರ ತಪಸ್ಸು ಮಾಡಿ ಮಹಾಮಹಿಮಾವಂತಳಾದಳು. ಜಮದಗ್ನಿ ಋಷಿಯನ್ನು ಮದುವೆಯಾಗಿ ಉತ್ತಮ ಗೃಹಿಣಿಯಾದಳು. ಕಾರ್ತಿವೀರ್ಯನು ಬೇಟೆಗೆಂದು ಬಂದು, ಜಮದಗ್ನಿಯ ಬಳಿಯಿದ್ದ ಕಾಮಧೇನುವನ್ನು ಕಂಡು, ಅದನ್ನು ದೊರಕಿಸಲು ಪ್ರಯತ್ನಪಟ್ಟ, ಜಮದಗ್ನಿ ಅದನ್ನು ಕೊಡಲು ಒಪ್ಪಲಿಲ್ಲ. ಆಗ ಕಾರ್ತಿವೀರ್ಯನು ಜಮದಗ್ನಿಯನ್ನು ಕೊಂದು ಕಾಮಧೇನುವನ್ನು ತೆಗೆದುಕೊಂಡು ಹೋದ. ಅಂದು ಹುಣ್ಣಿಮೆ.  ಅದೇ ರಂಡೆ ಹುಣ್ಣಿಮೆ. ಈ ವಾರ್ತೆಯನ್ನು ಕೇಳಿದ ಪರಶುರಾಮನು ಕಾರ್ತಿವೀರ್ಯನ ರಾಜಧಾನಿಗೆ ಹೋಗಿ, ತನ್ನ ತಂದೆಯನ್ನು ಕೊಂದ ಕಾರ್ತಿವೀರ್ಯನನ್ನು ಕೊಂದು, ಅವನ ರಕ್ತದಿಂದ ಜಮದಗ್ನಿಯ ದೇಹಕ್ಕೆ ಲೇಪಿಸಿದ; ಜಮದಗ್ನಿಗೆ ಜೀವ ಬಂತು. ಎಲ್ಲಮ್ಮ ಮುತ್ತೈದೆಯಾದಳು. ಅಂದು ಭಾರತ ಹುಣ್ಣಿಮೆ, ಅದೇ ಮುತ್ತೈದೆಯೆಂದು ಪ್ರಸಿದ್ಧವಾಗಿದೆ.

ರೇಣುಕೆ ಆದಿಶಕ್ತಿ, ಅಗ್ನಿಹಸ್ತೆ, ಪಾರ್ವತಿಯ ಅಂಶ, ಚಂಡಿ ಚಾಮುಂಡಿ. ಅವಳು ಒಲಿದರೆ ನಾರಿ, ಮುನಿದರೆ ಮಾರಿ. ಆ ತಾಯಿ ಕಾಡಿ ಬೇಡುತ್ತಾಳೆ; ಬೇಡಿದ್ದನ್ನು ನೀಡಿದರೆ ಕಾಪಾಡುತ್ತಾಳೆ. ಅವಳೊಡಿದ್ದ ಭಕ್ತಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಯಾವ ಕೊರತೆಯೂ ಆಗಲಾರದು. ತನ್ನನ್ನು ಭಕ್ತಿಯಿಂದ ಆರಾಧಿಸಿಕೊಟ್ಟ ಕಷ್ಟವನ್ನೆಲ್ಲ ಸಹಿಸಿಕೊಂಡ ಭಕ್ತರಿಗೆ ಸಕಲ ಇಷ್ಟಾರ್ಥಗಳನ್ನು ಕರುಣಿಸುವಲೆಂದು ಜನಕೋಟಿಯ ನಂಬಿಗೆ. ಅವಳು ದುಷ್ಟರನ್ನು ಶಿಕ್ಷಿಸಿ, ಶಿಷ್ಯರನ್ನು ರಕ್ಷಿಸುವದಕ್ಕಾಗಿಯೇ ಭೂಲೋಕಕ್ಕೆ ಅವತರಿಸಿ ಬಂದಳೆಂದು ತಿಳಿದವರು ಹೇಳುತ್ತಾರೆ. ಅಣಕವಾಡಿದವರ ಮೊಣಕಾಲು ಮುರಿಯುವಳಂತೆ; ನಿಂದೆ ಮಾಡಿದವರ ಮನೆ ಹಾಳು ಮಾಡುವಳಂತೆ! ಎಲ್ಲಮ್ಮ ಕೈಲಾಸದಿಂದ ಭೂಲೋಕಕ್ಕೆ ಬಂದು ಏಳುಕೊಳ್ಳದಲ್ಲಿ ನೆಲೆಸಿದಾಗ, ಅಲ್ಲಿದ್ದ ಏಳು ಜನ ಸಿದ್ಧರು ಅವಳಿಗೆ ತೊಂದರೆ ಕೊಡ ಹತ್ತಿದ್ದರು. ಆಗ ಅವರನ್ನು ಎಲ್ಲಮ್ಮ ಸಂಪೂರ್ಣವಾಗಿ ಸದೆಬಡಿದು ಮೆಟ್ಟಿ ತುಳಿದಳು. ಅವರಲ್ಲಿ ಒಬ್ಬ ಸಿದ್ಧನು ಅವಳಿಗೆ ಶರಣಾಗತನಾದ. ಅವನನ್ನು ಮನ್ನಿಸಿ ತನ್ನ ಗುಡಿಯ ಕಾವಲುಗಾರನನ್ನಾಗಿ ಮಾಡಿಕೊಂಡಿದ್ದಾಳೆಂದು ಅನೇಕರ ನಂಬಿಕೆಯಾಗಿದೆ. ಎಲ್ಲಮ್ಮ ಶುಕ್ರವಾರದ ಶುಭದೇವಿಯೆಂದೂ ಮಂಗಳವಾರದ ಮಾಯಾಕಾರತಿಯೆಂದೂ ಭಕ್ತರು ಕೊಂಡಾಡುತ್ತಾರೆ. ಅವಳು ಕೃತಾಯುಗದಲ್ಲಿ ಆದಿಶಕ್ತಿ ರೂಪ ತಳೆದಳು! ತ್ರೇತಾಯುಗದಲ್ಲಿ ಸೀತೆಯಾಗಿ ಮೆರೆದಳು ದ್ವಾಪರ ಯುಗದಲ್ಲಿ ದ್ರೌಪದಿಯೆನಿಸಿಕೊಂಡಳು. ಅವಳೇ ಕಲಿಯುಗದಲ್ಲಿ ಏಳುಕೊಳ್ಳದ ಎಲ್ಲಮ್ಮ ಎಂದು ಪ್ರಖ್ಯಾತಿ ಪಡೆದಿದ್ದಾಳೆ. ಹೀಗೆ ಜೋಗತಿಯರು ಹಾಡುವುದನ್ನು ಕೇಳಬಹುದು.

ಎಲ್ಲಮ್ಮನ ಪವಾಡಗಳು ಅನಂತ ಒಬ್ಬೊಬ್ಬರು ಒಂದು ಪವಾಡ ಹೇಳುತ್ತಾರೆ. ಅವೆಲ್ಲ ಎಲ್ಲಮ್ಮನ ಮಹಿಮಾತಿಶಯವನ್ನು ಬಣ್ಣಿಸುತ್ತವೆ. ಒಂದೆರಡನ್ನು ಇಲ್ಲಿ ಕೊಡಬಹುದು. ಸವದತ್ತಿಯಲ್ಲಿ ಒಬ್ಬ ಶ್ರೀಮಂತ ಒಕ್ಕಲಿಗನಿದ್ದ ಅವನೊಬ್ಬ ಮಹಾಲೋಭೀ, ಕೈಯೆತ್ತಿ ದಾನ ಮಾಡಿದವನಲ್ಲ. ಒಂದು ವರ್ಷ, ದೇವಿಯ ಶಾಪದಿಂದಲೋ ಏನೋ, ಮಳೆ ಬರಲಿಲ್ಲ. ಬೆಳೆಬಾರದ್ದರಿಂದ ಜನ ಕೂಳು ಕೂಳು ಎಂದರು. ಆಗ ಆ ಶ್ರೀಮಂತ ರೈತ ಕೂಡಲೇ ಮಳೆ ತರಿಸಿ, ಬೆಳೆ ಬರುವಂತೆ ಮಾಡಿದರೆ ಒಂದು ಪಡಿ ಜೋಳವನ್ನು ಎಲ್ಲಮ್ಮನಿಗೆ ಸಲ್ಲಿಸುವನೆಂದು ಹರಕೆ ಹೊತ್ತ. ಎಲ್ಲಮ್ಮನ ದಯದಿಂದ ಮಳೆ ಬಂದು, ಬೆಳೆ ಸಮೃದ್ಧವಾಯಿತು. ಹರಕೆಯ ಪಡಿಜೋಳವನ್ನು ಆ ರೈತ ಕೂಡಲೇ ಇಲ್ಲ. ಅವನ ಸತ್ವ ಪರೀಕ್ಷೆಗಾಗಿ ಎಲ್ಲಮ್ಮ ಸಾಮಾನ್ಯ ವೇಷ ಧರಿಸಿ ಅವನ ಕಣಕ್ಕೆ ಹೋಗಿ ಭಿಕ್ಷೆ ಬೇಡಿದಳು. ರೈತನ ಕೈ ಏಳಲಿಲ್ಲ. ನೀಡುವುದರ ಬದಲು ಎಲ್ಲಮ್ಮನನ್ನು ಹೊಡೆದು ಓಡಿಸಿದ. ಎಲ್ಲಮ್ಮ ಮುಂದೆ ಸಾಗಿ ಅವನ ಹೊಲದಲ್ಲಿದ್ದ ನಾಲ್ಕು ಬದನೆಕಾಯಿ, ಉಳ್ಳೇಗಡ್ಡಿ, ಹಸಿಮೆಣಸಿನಕಾಯಿ ಹರಿದು ಕೊಂಡಳು. ಅವಳನ್ನು ನೋಡಿ ಆ ರೈತ ’ಕಳ್ಳಿ, ಕಳ್ಳಿ ಎಂದು ಬೆನ್ನು ಹತ್ತಿದ. ಆಗ ಎಲ್ಲಮ್ಮ ಓಡಿಹೋಗಿ ಸಮೀಪದ ಕೇರಿಯಲ್ಲಿದ್ದ ಮಾದರ ಮಾತಂಗಿಯ ಮನೆಯಲ್ಲಿ ಅಡಗಿಕೊಂಡಳು. ತಾನು ಇಲ್ಲಿದ್ದ ಸುದ್ದಿ ಹೇಳಬೇಡ’ ಎಂದು ಮಾತಂಗಿಯನ್ನು ಕೇಳಿಕೊಂಡಳು. ತಾ ರೈತ ಮಾತಂಗಿಯ ಮನೆಗೆ ಬಂದು ಆ ಕಳ್ಳಿಯನ್ನು ಎಲ್ಲಿ ಬಚ್ಚಿಟ್ಟಿರುವಿ? ಎಂದು ಅವಳನ್ನು ಮೈತುಂಬಾ ಥಳಿಸಿದ. ಆಗ ಎಲ್ಲಮ್ಮ ಹೊರಗೆ ಬಂದು, ನಿರಪರಾಧಿಯನ್ನು ಹೊಡೆದ ನಿನಗೆ ರೋಗಬರಲಿ’ ಎಂದು ಶಾಪ ಕೊಟ್ಟಳು. ತನಗೆ ಆಶ್ರಯವಿತ್ತ ಮಾತಂಗಿಯನ್ನು ಕರೆದೊಯ್ದು ತನ್ನ ಸಮೀಪದಲ್ಲಿಯೇ ಇರಿಸಿಕೊಂಡು, ’ನನ್ನ ಎಡೆ ಮೊದಲು ನಿನಗೆ ಸಲ್ಲಲಿ’ ಎಂದು ಆಶೀರ್ವಾದ ಮಾಡಿ ಅವಳನ್ನು ಕಾಪಾಡಿದಳು. ಆದ್ದರಿಂದಲೇ ಎಲ್ಲಮ್ಮನ ದರ್ಶನಕ್ಕೆ ಬರುವ ಭಕ್ತರು ಮೊದಲು ಮಾತಂಗಿಯ ಗುಡಿಗೆ ಹೋಗಿ, ಮೊದಲ ಬುತ್ತಿಯನ್ನು ಎಡೆ ಮಾಡುತ್ತಾರೆ. ಮಾತಂಗಿಯ ಪಡಲಿಗೆಯೆಂದು ಮೊದಲು ಅವಳಿಗೆ ಪಡಲಿಗೆ ಅರ್ಪಿಸುವರು. ಎಲ್ಲಮ್ಮನ ಪಡಗಲಿಗೆಯಲ್ಲಿ ಬದನೆಕಾಯಿ, ಉಳ್ಳೆಗಡ್ಡಿ, ಹಸಿಮೆಣಸಿನಕಾಯಿ ತಪ್ಪದೆ ಇಡುವರು. ಇಷ್ಟೊಂದು ಪ್ರಾಧಾನ್ಯ ಬಂದಿದೆ ಮಾತಂಗಿಗೆ. ಅವಳು ಎಲ್ಲಮ್ಮನ ನಿಸ್ಸೀಮ ಭಕ್ತಳು. ಇತ್ತ ಹರಕೆ ಪೂರೈಸದೆ ಮಾತಂಗಿಯನ್ನು ಬಡಿದ ರೈತನಿಗೆ ಕುಷ್ಟರೋಗ ಅಂಟಿಕೊಂಡಿತು. ಅದು ಎಲ್ಲಮ್ಮನ ಶಾಪವೆಂದು ಬಗೆದು, ಅವಳಲ್ಲಿ ಬಿದ್ದು ಬೇಡಿಕೊಂಡು ಚೌಡಕಿ, ಬಳೆ, ಬಿಳಿಸೀರಿ ಧರಿಸಿಕೊಂಡು ಜೋಗಪ್ಪನಾಗಿ ಅವಳ ಸೇವೆಯಲ್ಲಿ ನಿರತನಾದ; ಅವನ ರೋಗ ಸಾವಕಾಶವಾಗಿ ವಾಸಿಯಾಯಿತು. ಅವನ ಇಡೀ ಮನೆತನವೇ ಎಲ್ಲಮ್ಮದೇವಿಯ ಭಕ್ತರಾದರು ಇದೊಂದು ಎಲ್ಲಮ್ಮನ ಮಹಿಮೆ.

ಓರಂಗಲ್ಲಿನ ಪ್ರತಾಪರುದ್ರ ಒಬ್ಬ ದೊಡ್ಡ ರಾಜ. ರಾಜ್ಯಮದ ಅವನ ತಲೆಗೇರಿತ್ತು. ಒಮ್ಮೆ ಅವನು ಎಲ್ಲಮ್ಮನನ್ನೂ ಜೋಗತಿಯನ್ನೂ ತಿರಸ್ಕರಿಸಿ ಮಾತಾಡಿದ. ಅಹಂಕಾರಿಗಳನ್ನು ಮುರಿಯದೆ ಬಿಡಳು ಎಲ್ಲಮ್ಮ. ಅವಳು ಮುಪ್ಪಿನ ಜೋಗತಿಯ ವೇಷ ಹೊತ್ತು, ಹಡಲಿಗೆ ಕೈಯಲ್ಲಿ ಹಿಡಿದು, ಪ್ರತಾಪರುದ್ರನ ಅರಮನೆಯ ಬಾಗಿಲದಲ್ಲಿ ನಿಂತು ಭಿಕ್ಷೆ ಬೇಡಿದಳು. ಇದು ಪ್ರತಾಪರುದ್ರನಿಗೆ ಗೊತ್ತಾಯಿತು. ಅವನು ದರ್ಪದಿಂದ ಎಲ್ಲಮ್ಮನನ್ನು ಓಡಿಸಿಬಿಟ್ಟ. ಅವಳನ್ನು ಎಳೆದು ತಂದು ಅರಮನೆಯ ಕಂಬಕ್ಕೆ ಕಟ್ಟಲು ತನ್ನ ಸೇವಕರಿಗೆ ಆಜ್ಞೆ ಮಾಡಿದ. ಅವಳು ಸೇವಕರಿಗೆ ಸಿಗಬಹುದೆ? ಅವರು ಹುಡುಕಿಕೊಂಡು ಬರುವಷ್ಟರಲ್ಲಿ ವೇಷ ಬದಲಿಸಿಕೊಂಡು ವಿಭೂತಿ ಮಾರುವವಳಂತೆ ಕಾಣಿಸಿಕೊಂಡಳು. ಪುನಃ ಅವನ ಅರಮನೆಯ ಸಮೀಪದಲ್ಲಿಯೇ ಸುಳಿದಳು. ಆಗ ರಾಜನು ಅವಳನ್ನು ಕರೆದು ಅವಳು ತಂದೆ ವಿಭೂತಿಯ ಮೇಲ ಕಣ್ಣಿಟ್ಟು ನಾಲ್ಕೈದು ವಿಭೂತಿಯ ಘಟ್ಟಗಳನ್ನು ಬೇಡಿದ. ಒಂದೆರಡನ್ನು ಅವಳ ಕೈಯಿಂದ ತೆಗೆದುಕೊಂಡ, ರಾಜನ ಮೈ ಜುಮ್ಮೆಂದಿತು. ಎಲ್ಲಮ್ಮ ಹೊರಟು ಹೋದಳು. ಕೆಲವು ದಿನ ಕರೆದಿರಲಿಲ್ಲ. ರಾಜನಿಗೆ ಒಂದು ಉಲ್ಬಣರೋಗ ಸೇರಿತು. ಇದು ಎಲ್ಲಮ್ಮನನ್ನು ತಿರಸ್ಕರಿಸಿದ್ದರರ ಪರಿಣಾಮವೆಂದು ಬಗೆದು ಪಶ್ಚಾತ್ತಾಪ ಪಡತೊಡಗಿದ. ಆ ಸಮಯದಲ್ಲಿ ಎಲ್ಲಮ್ಮ ಜೋಗತಿಯ ವೇಷದಲ್ಲಿ ಅವನ  ಅರಮನೆಗೆ ಹೋಗಿ, ಈ ರೋಗದಿಂದ  ನೀನು ಮುಕ್ತ ನಾಗಬೇಕಾದರೆ ಏಳುಕೊಳ್ಳದ ಎಲ್ಲಮ್ಮನ ಸೇವೆ ಮಾಡು, ಜೋಗಪ್ಪನ ವೇಷ ತೊಟ್ಟು ವರ್ಷಕ್ಕೊಮ್ಮೆಯಾದರೂ ಗುಡ್ಡಕ್ಕೆ ಹೋಗು’ ಎಂದು ಉಪದೇಶ ಮಾಡಿದಳು. ಆ ಪ್ರಕಾರ ನಡೆದುಕೊಳ್ಳಲು ಅರಸನ ರೋಗ ವಾಸಿಯಾಯಿತು. ಈ ವಿಷಯವನ್ನು ಜೋಗತಿಯರು ತಮ್ಮ ಹಾಡುಗಳಲ್ಲಿ ಹೇಳಿಕೊಳ್ಳುತ್ತಾರೆ.

ಹೀಗೆ ಸೊಕ್ಕಿಗೆ ಬಂದವರನ್ನು ಕಾಡಿ, ಅವರನ್ನು ಪರೀಕ್ಷೆಗೆ ಒಡ್ಡಿ ಸೊಕ್ಕು ಮುರಿದಳೆಂದೂ ಹೇಳುವ ಅನೇಕ ಕಥೆಗಳೂ ಹಾಡುಗಳೂ ಕೇಳಿ ಬರುತ್ತವೆ. ಮಡಿವಾಳ ಮಾಚಯ್ಯ, ಬಂಕಾಪುರದ ಮಾಧುರಾಯ, ಮಾಲಗಾರ ನಾಗಶೆಟ್ಟಿ ಒಬ್ಬರೇ ಇಬ್ಬರೇ ನೂರಾರು, ಸಹಸ್ರಾರು ಜನರನ್ನು ಶಿಕ್ಷಿಸಿ ತನ್ನ ಭಕ್ತರನ್ನಾಗಿ ಮಾಡಿಕೊಂಡ ಉದಾಹರಣೆಗಳಿವೆ. ಇವಳ ಮಹಿಮೆಗೆ ಮಾರು ಹೋದವರು ಎಲ್ಲಮ್ಮನನ್ನು ಮಾಟಗಾರ್ತಿ, ಮಾಯಗಾರ್ತಿಯೆಂದು ಬಣ್ಣಿಸುವರು. ಎಲ್ಲಮ್ಮ ಕಠೋರಳಾದರೂ ಹೂವಿನಷ್ಟು ಮೃದುವಾಗಿರುವಳೆಂದು ಭಕ್ತರ ಹೇಳಿಕೆ. ಎಲ್ಲಮ್ಮನ ಭಕ್ತರು ಕರ್ನಾಟಕ, ಮಹಾರಾಷ್ಟ್ರಗಳಲ್ಲಿ ಹೆಚ್ಚಾಗಿದ್ದಾರೆ. ಉಳಿದ ಕಡೆಯಿಂದಲೂ ಬರುವುದುಂಟು; ಅವರ ಸಂಖ್ಯೆ ಕಡಮೆ’ ಎಂದು ಹೊಸಭಕ್ತರು ಗುಡ್ಡಕ್ಕೆ ಬರುವುದಿಲ್ಲವೋ ಅಂದು ನಾನಿಲ್ಲಿ ಇರುವುದಿಲ್ಲ’ ಎಂದು ಎಲ್ಲಮ್ಮ ನುಡಿದಿರುವಳಂತೆ. ಪ್ರತಿದಿವಸ, ಭಕ್ತರು ಅಲ್ಲಿಗೇ ಬಂದೇ ಬರುತ್ತಾರೆ. ಪ್ರತಿ ಮಂಗಳವಾರ, ಶುಕ್ರವಾರ ಬರುವ ಭಕ್ತರ ಸಂಖ್ಯೆ ದೊಡ್ಡದು. ಹುಣ್ಣಿಮೆಯ ದಿವಸ ಆ ಸಂಖ್ಯೆ ಮಿತಿಮೀರುತ್ತದೆ. ಎಲ್ಲಮ್ಮನ ಪರಸಿ ಹನ್ನೆರಡು ತಿಂಗಳೂ ಕೂಡುತ್ತದೆ. ಭಾರತ ಹುಣ್ಣಿಮೆಯೆಂದು ನಡೆಯುವ ಜಾತ್ರೆ ಬಹುದೊಡ್ಡದು.  ಗುಡ್ಡದ ತುಂಬ ಭಕ್ತರೇ ಕಾಣಿಸಿಕೊಳ್ಳುವರು. ಆಗ ದೇವಿಯ ದರ್ಶನವಾಗುವುದೇ ಕಠಿಣ, ಅಷ್ಟೊಂದು ಜನಸಂದಣಿ! ಈ ದೇವಿಯ ಭಕ್ತರು ಯಾವ ಕುಲ, ಮತ, ಪಂಗಡಗಳನ್ನು ಎಣಿದರು. ಸರ್ವಮತೀಯರೂ ಎಲ್ಲಮ್ಮನ ಭಕ್ತರಾಗಿರುವುದು ಚೋದ್ಯ. ಭಕ್ತಿಯ ಆವೇಶಕ್ಕೆ ಮತ ಧರ್ಮಗಳ ಕಟ್ಟುನಿಟ್ಟು ಇಲ್ಲವೆಂದೇ ಹೇಳಬಹುದು. ಎಲ್ಲಮ್ಮ ನಿಜವಾಗಿಯೂ ಭಕ್ತ ಕೋಟಿಯ ಕುಲದೇವತೆ.

ಜೋಗಪ್ಪ ಜೋಗಪ್ಪ:

’ಜೋಗ’ ಎನ್ನುವ ಶಬ್ದವು ಸಂಸ್ಕೃತ ’ಯೋಗ’ ಪದದ ತದ್ಭವ. ಈ ಜೋಗ ಶಬ್ದದಿಂದಲೇ ಜೋಗಿ, ಜೋಗಿತಿ ಎನ್ನುವ ಪದಗಳು ಹುಟ್ಟಿವೆ. ಎಲ್ಲಮ್ಮನ ಸೇವೆಯನ್ನೇ ಒಂದು ಯೋಗವನ್ನಾಗಿ ಆಚರಿಸುವವರು ಜೋಗಿ, ಜೋಗಿತಿಯರು ಇವರು ಎಲ್ಲಮ್ಮನಲ್ಲಿ ಅಪಾರವಾದ ಭಕ್ತಿಯನ್ನಿಟ್ಟು, ಅವಳ ಮಹಿಮೆಯನ್ನೇ ಹಾಡುತ್ತ, ತಮ್ಮ ಚಾರಿತ್ರ‍್ಯಕ್ಕೆ ಕುಂದು ತಂದುಕೊಳ್ಳದೆ ಜೀವಿಸುವುದೇ ಇವರ ಜೀವನದುಸಿರು. ಇಂತಹ ಯೋಗಾಸಾಧಕರು ದೊರೆಯುವುದು ವಿರಳ. ನೂರಕ್ಕೊಬ್ಬ ಭಕ್ತ. ಸಾವಿರಕ್ಕೊಬ್ಬ ಜೋಗಿ. ವೇಷ ಧರಿಸಿದವರೆಲ್ಲರೂ ಯೋಗಿ,  ಯೋಗಿನಿಯರು ಆಗಲಾರರು. ಎಲ್ಲಮ್ಮನ ಭಕ್ತರಾದ ಜೋಗಪ್ಪ, ಜೋಗವ್ವ ಮೊದಮೊದಲು ತಮ್ಮ ಯೋಗ ಬಲದಿಂದ ಮಹಾಮಹಿಮರಾಗಿರಬೇಕು. ಈಗ ಕಾಲ ಬದಲಾಗಿದೆ ಭಕ್ತಿಯ ಸ್ಥಾನದಲ್ಲಿ ವೇಷ ನಿಲ್ಲುತ್ತ ನಡೆದಿದೆ. ಯೋಗದ ಹೆಸರಿನಲ್ಲಿ ಭಿಕ್ಷುಕ ವೃತ್ತಿ ತಾಂಡವವಾಡುತ್ತಿದೆ. ಹಿಂದಿನ ಕಾಲದ ಜೋಗಪ್ಪ, ಜೋಗವ್ವ ನೀಡಿದರೂ ಭಿಕ್ಷೆ ಹಿಡಿಯದ ಮಹಿಮರು ಇಂದು ವೇಷಧಾರಿಗಳಾಗಿ ನೀಡದಿದ್ದರೂ ಕಾಡಿ ಪಡೆಯುವ ಮಾನವರು, ಭಕ್ತಿ ವೃತ್ತಿಯಾಗಿ ಪರಿಣಮಿಸಿದರೆ ಆಗುವ ಹಾಡು ಇದೇ.

ಹೆಂಗಸರ ವೇಷದಲ್ಲಿರುವ ಗಂಡಸು ಜೋಗಪ್ಪ, ಸೀರೆಯುಟ್ಟು ಕುಪ್ಪಸತೊಟ್ಟು, ಅಲಂಕಾರವಿಟ್ಟು, ಜಡೆಬಿಟ್ಟು ಎಲ್ಲಮ್ಮನನ್ನು ಸ್ತುತಿಸುತ್ತ ಭಿಕ್ಷೆ ಬೇಡುವುದು ಜೋಗಪ್ಪನ ವೃತ್ತಿ. ಕಾಲಲ್ಲಿ ಗೆಜ್ಜೆ ಕಟ್ಟಿ. ಕುತ್ತಿಗೆಯಲ್ಲಿ ಕವಡೆಯ ಸರ ಧರಿಸಿ, ಹಣೆಗೆ ಭಂಡಾರ ಬಳಿದುಕೊಂಡು ಜಗ ಹೊತ್ತು ಕುಣಿಯುವರು ಅವನ ಪ್ರವೃತ್ತಿ ಹಾಡಿಗೆ ತಕ್ಕ ಕುಣಿತ; ಕುಣಿತಕ್ಕೆ ಸರಿಯಾಗಿ ಮೈಮಣಿತ, ಹಾಡಿದ್ದೇ ಹಾಡಿದ್ದು; ಕುಣಿದದ್ದೇ ಕುಣಿದಿದ್ದು. ಈ ಸಮಯದಲ್ಲಿ ಅವನಿಗೆ ಭಾವಾವೇಶ ಹೆಚ್ಚು. ಮೈಯಲ್ಲಿ ನಂಬಿಗೆ. ದೇವಿ ಮಾಯಕಾರತಿ; ಗಂಡನ್ನು ಹೆಣ್ಣಾಗಿ ಆಡಿ ಕುಣಿಸಬಲ್ಲಲೆಂದು ಬಿಳಿಸೀರೆಯುಟ್ಟು, ಕವಡೆಯ ಸರ ಧರಿಸಿ, ಭಂಡಾರದ ಚೀಲವನ್ನು ಬಗಲಲ್ಲಿ ತೂಗು ಹಾಕಿಕೊಂಡು ಎಲ್ಲಮ್ಮನ ಮಹಿಮೆಗಳನ್ನು ಹಾಡುವರು. ಚೌಡಿಕೆ, ತಾಳ, ಕುಡುಹು ಇವರು ನುಡಿಸುವ ಪಕ್ಕವಾದ್ಯಗಳು. ಜೋಗ ಹಾಕಿಸಿಕೊಂಡು ದೇವಿಯ ಸೇವೆ ಮಾಡುತ್ತ ಕಾಲಕಳೆಯುವರು. ಜೋಗಪ್ಪ ಜೋಗವ್ವ – ಮೇಳವಾಗಿ ಬಾಳು ಸಾಗಿಸುವುದು ರೂಢಿಯಾಗಿದೆ.

ಜೋಗಪ್ಪ, ಜೋಗವ್ವ ವ್ರತನಿಯಮವುಳ್ಳವರು. ಅವರು ಈ ವ್ರತಗಳನ್ನು ಕೈಕೊಳ್ಳಲು ದೇವಿಯ ಪ್ರೇರಣೆಯೇ ಕಾರಣವೆಂದು ಅವರು ಹೇಳುತ್ತಾರೆ. ಜೋಗಪ್ಪನ  ತಲೆಯ ಮೇಲೆ ದೇವಿಯ ಪ್ರತೀಕದ ತುಂಬಿದ ಕೊಡ ಇರುವುದು. ಜೋಗವ್ವನ ಕೈಯಲ್ಲಿ ಚೌರಿ ಇರುವುದು. ದೇವಿಯ ಸೇವೆ ಮಾಡುವುದೇ ಅವರ ಜೀವನದ ಗುರಿ. ಜೋಗಪ್ಪ – ಜೋಗವ್ವ ಆಗಲು ಇಂಥವನೇ ಇರಬೇಕೆಂದು ನಿಯಮವಿಲ್ಲ. ಯಾರು ಬೇಕಾದರೂ ಈ ವ್ರತ ಹಿಡಿಯಬಹುದು. ಅದಕ್ಕೆ ವಯಸ್ಸಿನ ನಿರ್ಬಂಧವೂ ಇಲ್ಲ. ಕೆಲವರು ಹುಟ್ಟಿನಿಂದಲೇ ಈ ವ್ರತಹಿಡಿದು ಜೋಗಪ್ಪ, ಜೋಗವ್ವ ಆಗಬಹುದು. ಅವರು ಮದುವೆಗೆ ಆಸೆ ಮಾಡುವುದಿಲ್ಲ. ದೇವಿಯ ಸೇವೆಯೊಂದೇ ಅವರ ಇಹದ ಬಾಳು. ಇನ್ನು ಕೆಲವರು ಮದುವೆಯಾಗಿ, ಸಂಸಾರಕ್ಕೆ ಬೇಸತ್ತು, ಜಗ ಹೊತ್ತು ದೇವಿಯ ಕಡೆಗೆ ತಿರುಗುವರು. ವೈರಾಗ್ಯ ಯಾವ ಕಾಲಕ್ಕೆ ಬರುವುದೋ ಹೇಳಬರುವಂತಿಲ್ಲ. ವೇಸಿಯರು, ಘಂಟಿಂಗರು ಸಹ ತಮ್ಮ ಹೇಸಿ ಕಾರ್ಯಕ್ಕೆ ನಾಚಿ ಹಿಂದುಗಡೆಯಲ್ಲಿ  ಜೋಗಪ್ಪ, ಜೋಗವ್ವ ಆದದ್ದೂ ಉಂಟು. ’ಸೂಳೆ ಮುಪ್ಪಾಗಿ ಜೋಗಿತಿಯಾದಳು’ ಎನ್ನುವ ಗಾದೆ ಇವರನ್ನು ಕಂಡೇ ಹುಟ್ಟಿತೋ ಏನೋ! ಏನೇ ಇದ್ದರೂ ಎಲ್ಲಮ್ಮನ ಭಕ್ತರು ಈ ಜೋಗಪ್ಪ,  ಜೋಗವ್ವಗಳಿಗೆ ಹೆಚ್ಚು ಮನ್ನಣೆ ಕೊಡುತ್ತಾರೆ. ಅವರಿಗೆ ಭಿಕ್ಷೆ ನೀಡಿ ಸಾಕಿ ಸಲಹುತ್ತಾರೆ. ಅವರೇ ದೇವಿಯ ಪ್ರತಿನಿಧಿಗಳೆಂದು ಭಾವಿಸುವುದೂ ಉಂಟು. ನಂಬಿಕೆ ಇರುವಲ್ಲಿ ಅಪನಂಬಿಕೆಗೆ ಎಡೆ ಇಲ್ಲ.

ಉತ್ತರ ಕರ್ನಾಟಕದಲ್ಲಿ ಜೋಗಪ್ಪ ಜೋಗವ್ವ ಇಲ್ಲದ ಊರೇ ಇಲ್ಲವೆನ್ನುವಷ್ಟರ ಮಟ್ಟಿಗೆ ಅವರ ವ್ಯಾಪ್ತಿ. ಅವರು ಯಾವಾಗಲೂ ಮೇಳ ಕಟ್ಟಿಕೊಂಡೇ ಇರಬೇಕೆಂದು ನಿಯಮವಿಲ್ಲ. ದೇವಿಯ ಮೂರ್ತಿಯನ್ನು ತಲೆಯ ಮೇಲೆ ಹೊತ್ತು ಹಡ್ಡಲಿಗೆಯನ್ನು ಕೈಯಲ್ಲಿ ಹಿಡಿದು ವ್ಯಕ್ತಿಗತವಾಗಿ ಭಿಕ್ಷೆಗೆ ಹೊರಡುವದೂ ಉಂಟು. ದೇವಿಯ ಮೂರ್ತಿಯನ್ನು ಒಂದು ತುಂಬಿದ ಕೊಡಕ್ಕೆ ಕಟ್ಟಿ, ತಲೆಯ ಮೇಲಿಟ್ಟುಕೊಂಡು ಭಿಕ್ಷೆಗೆ ಅಲೆದಾಡುವುದು ಒಂದು ಗುಂಪು; ದೇವಿಯ ಮೂರ್ತಿಯನ್ನು ಕೆರಸೆಯ ಬುಟ್ಟಿಯಲ್ಲಿಟ್ಟು ಅಲಂಕರಿಸಿ, ತಲೆಯ ಮೇಲೆ ಹೊತ್ತು ಭಕ್ತರ ಬಳಿಗೆ ಹೋಗುವವರದು ಇನ್ನೊಂದು ಗುಂಪು ಅವರು ಯಾವ ರೀತಿಯಿಂದ ದೇವರನ್ನು ಹೊತ್ತರೂ ದೇವಿ ದೇವಿಯೇ! ಅವರು ಮನೆಯ ಮುಂದೆ ನಿಂತು ಭಿಕ್ಷೆ ಕೇಳುವಾಗ ’ ಎಕ್ಕಲಿಗೋ ಜೋಗವ್ವ’ ಎನ್ನುವರು. ಇವರೆಲ್ಲ ಎಲ್ಲಮ್ಮನ ಒಕ್ಕಲು. ಇವರು ಎಲ್ಲಮ್ಮನ ಭಯದಿಂದಲೋ ಭಕ್ತಿಯಿಂದಲೋ ಯಾವ ಕಾರಣಕ್ಕಾಗಿಯೋ ಜೋಗಪ್ಪ ಜೋಗವ್ವ ಎನಿಸಿಕೊಂಡಿದ್ದಾರೆ. ಬೇಡಿ ತಿನ್ನುವುದನ್ನೇ ತಮ್ಮ ವೃತ್ತಿಯೆಂದು ಭಾವಿಸಿದ್ದಾರೆ. ಅವರಷ್ಟೇ ಎಲ್ಲಮ್ಮನ ಭಕ್ತರೆಂದು ಭಾವಿಸಬೇಕಿಲ್ಲ. ಅವಳ ಭಕ್ತರು ನಾಡಿನ ತುಂಬಾ ಇದ್ದಾರೆ; ದೇವಿಯನ್ನು ಭಯಭಕ್ತಿಯಿಂದ ಪೂಜಿಸುತ್ತಾರೆ.

ವರ್ಷದಲ್ಲಿ ಹನ್ನೆರಡು ತಿಂಗಳೂ ಎಲ್ಲಮ್ಮನ ಜಾತ್ರೆ. ಆಗಾಗ ಅವಳ ದರ್ಶನಕ್ಕೆ ಹೋಗುವವರೂ ಉಂಟು. ಕೆಲವರಿಗೆ ಆಗಲಿಕ್ಕಿಲ್ಲ. ಆದರೆ ಭಾರತ ಹುಣ್ಣಿಮೆಯ ಜಾತ್ರೆಗೆ ಭಕ್ತರೆಲ್ಲ ತಪ್ಪದೆ ಬರುತ್ತಾರೆ. ಆ ಜಾತ್ರೆಗಾಗಿ ದಿನಗಟ್ಟಲೆ ಸಂವರಣೆ, ಹುಣ್ಣಿಮೆ ಮುಂದಿದ್ದಾಗಲೇ ಪ್ರಯಾಣ. ಬಂಡಿ ಹೂಡಿಕೊಂಡು, ಬಂಧು ಬಳಗವನ್ನು ಕೂಡಿಕೊಂಡು, ಜೋಗಪ್ಪ ಜೋಗವ್ವನ ಮೇಳ ಹೊರಡಿಸಿಕೊಂಡು ಮೋಜುಮಜಲು ಮಾಡುತ್ತ, ಹೊತ್ತು ಮುಳುಗಿದಲ್ಲಿ ವಸ್ತಿ ಮಾಡುತ್ತ, ಬುತ್ತಿಯ ಗಂಟನ್ನು ಸವೆಸುತ್ತ, ಹುಣ್ಣಿಮೆಯ ಹೊತ್ತಿಗೆ ಗುಡ್ಡದಲ್ಲಿ ನೆರೆಯುತ್ತಾರೆ. ಒಂದೊಂದು ಊರ ಭಕ್ತರದು ಒಂದೊಂದು ಗುಂಪು. ಗುಡ್ಡದ ತುಂಬಾ ಭಕ್ತರು, ದೇವಿಯ ದರ್ಶನವೇ ಅವರಿಗೊಂದು ಪುಣ್ಯ ಲಾಭ. ಭಕ್ತರು ದೇವಿಯ ದರ್ಶನಕ್ಕೆ ಬರುವಾಗ, ತಿರುಗಿ ಹೋಗುವಾಗ ದೇವಿಯ ನಾಮಸ್ಮರಣೆ ಮಾಡುವುದೊಂದು ವೈಶಿಷ್ಟ್ಯ. ಎಲ್ಲರೂ ಸೇರಿ ಒಕ್ಕೊರಲಿನಿಂದ ಹೀಗೆ ಹೇಳುವರು :

ಎಲ್ಲಮ್ಮ ನಿನ್ನ ಪಾದಕ ಉಧೋ ಉಧೋ ಉಧೋ
ಮಂಗಳವಾರ ಮಾಯಕಾರತಿ ಉಧೋ ಉಧೋ ಉಧೋ
ಶುಕ್ರವಾರದ ಶುಭದೇವಿ ನಿನ ಪಾದಕ ಉಧೋ ಉಧೋ
ಗಚ್ಚಿನ ಗುಡಿಯ ದೇವಿ ನಿನ ಪಾದಕ ಉಧೋ ಉಧೋ
ಅರಿಸಿನ ಹೊಂಡದ ಸರಸಿ ನಿನ ಪಾದಕ ಉಧೋ ಉಧೋ
ಜೋಗುಳ ಬಾವಿ ಸತ್ಯವ್ವ, ನಿನ ಪಾದಕ ಉಧೋ ಉಧೋ
ತಂಗಿ ಮಾತಂಗಿ ನಿನ ಪಾದಕ ಉಧೋ ಉಧೋ ಉಧೋ
ಪರಶುರಾಮ ನಿನ ಪಾದಕ ಉಧೋ ಉಧೋ ಉಧೋ
ಜಮದಗ್ನಿ ನಿನ ಪಾದಕ ಉಧೋ ಉಧೋ ಉಧೋ
ಭೈರಿ ಜೋಗಿ ನಿನ ಪಾದಕ ಉಧೋ ಉಧೋ ಉಧೋ
ಏಳುಕೊಳ್ಳದೆಲ್ಲಮ್ಮ ನಿನ ಪಾದಕ ಉಧೋ ಉಧೋ ಉಧೋ
ರೇವಣಸಿದ್ಧ ನಿನ ಪಾದಕ ಉಧೋ ಉಧೋ ಉಧೋ
ಬಾಗಲ ಭರಮಪ್ಪ ನಿನ ಪಾದಕ ಉಧೋ ಉಧೋ
ಉಧೋ ಉಧೋ ಉಧೋ ಉಧೋ

 

ಜೋಗತಿ ಹಾಡು:

ಜನಪದ ಸಾಹಿತ್ಯದಲ್ಲಿ  ಹಾಡು ಒಂದು ವಿಶಿಷ್ಟ ಪ್ರಕಾರ. ಅದರಲ್ಲಿಯೂ ಭಕ್ತಿಯ ಹಾಡುಗಳದೇ ಒಂದು ವೈಶಿಷ್ಟ್ಯ. ತಮ್ಮ ಬದುಕಿಗೆ ಆಸರವಾದ ದೇವರ ಮಹಿಮೆಗಳನ್ನು ಭಕ್ತರು ಹಾಡಿ ಆನಂದಪಟ್ಟಿದ್ದಾರೆ. ಇಂತಹ ಹಾಡುಗಳಲ್ಲಿ ಪರಿಶುದ್ಧವಾದ, ಶ್ರದ್ಧಾನ್ವಿತವಾದ, ಭಕ್ತಿಭರಿತವಾದ ಜನಪದ ಹೃದಯ ಅರಳಿರುತ್ತದೆ. ದೇವರ ಲೀಲೆಗಳನ್ನು ಬಣ್ಣಿಸುವುದರಲ್ಲಿಯೇ ಅವರಿಗೆ ಆತ್ಮತೃಪ್ತಿ. ಹಾಗೆ ಹೇಳಿದ ಹಾಡುಗಳನ್ನು ಕೇಳಿದವರಿಗೂ ಮನ ತೃಪ್ತಿ. ಈ ಬಗೆಯ ಭಕ್ತಿಭರಿತ  ಹಾಡುಗಳು ನಮ್ಮ ನಾಡಿನಲ್ಲಿ ಸಾಕಷ್ಟು ದೊರೆಯುತ್ತವೆ. ಈ ಸಾಲಿನಲ್ಲಿ ನಿಲ್ಲಬಲ್ಲ ಶಕ್ತಿ ಜೋಗತಿಯ ಹಾಡುಗಳಲ್ಲಿದೆ. ಗರತಿಯರು ಎಲ್ಲಮ್ಮನನ್ನು ಕುರಿತು ಹೇಳಿದ ಹಾಡುಗಳು ಇದ್ದರೂ ಅವು ಗಾತ್ರದಲ್ಲಿ ಕಡಿಮೆ ಹಾಡಿನ ಬಣವೆಗೆ ತೆಲಿಪೆಂಡಿ ಇಟ್ಟವರು ಜೋಗತಿಯರೇ ಎನ್ನಬೇಕು. ಮೇಳಕಟ್ಟಿಕೊಂಡು ಹಾಡುವ, ಹಾಡಿನ ರಾಗಕ್ಕೆ ಅನುಗುಣವಾಗಿ ವಾದ್ಯ ಬಾರಿಸುವ, ನಾದದ ಪೆಟ್ಟಿಗೆ ಸರಿಯಾಗಿ ಕುಣಿಯುವ ಈ ಜೋಗತಿಯರು ಹಾಡಿನ ಹೊಳೆಯನ್ನೇ ಹರಿಸಿದ್ದಾರೆ. ಒಂದು ಮೇಳದ ಹಾಡುಗಳು ಇನ್ನೊಂದು ಮೇಳದಲ್ಲಿ ಇರುವುದಿಲ್ಲ. ಹೊಸ ಹೊಸ ಹಾಡುಗಳೇ ಅವರಲ್ಲಿರುತ್ತವೆ. ತಾನ, ತಾಳ, ಲಯವನ್ನೊಳಗೊಂಡ ಈ ಹಾಡುಗಳನ್ನು ಹೇಳುವ ಧಾಟಿಯೇ ಒಂದು ತೆರ. ಚೌಡಿಕೆ – ಕುಡುಗಳ ಸಮ್ಮಿಶ್ರ ನಾದದಲ್ಲಿ  ಜೋಗತಿಯರ ಸ್ವರವಿತಾನ ಗಂಭೀರವಾಗಿ ಮಿಡಿಯುತ್ತದೆ; ಕಿವಿಗೆ ನಾದಮಾಧುರ್ಯವನ್ನು ಮುಟ್ಟಿಸುತ್ತದೆ. ಮನಕ್ಕೆ ಶಾಂತಿಯನ್ನು ಒದಗಿಸುತ್ತದೆ. ಈ ಹಾಡುಗಳಲ್ಲಿ ಅಲೆ ಅಲೆಯಾಗಿ ತೇಲಿ ಬರುವುದು ಭಕ್ತಿಯ ಝರಿ. ಹಾಡಿಗೆ ತಕ್ಕ ಕುಣಿತವಿರುವುದರಿಂದ ನೋಡುವುದಕ್ಕೂ ಕೇಳುವುದಕ್ಕೂ ಮೇಳ ಉಂಟಾಗುವುದು. ರಸಸೃಷ್ಟಿಗೆ ಇಂಬು ಗೊಡುವುದು. ಅದೊಂದು ಕಲೆಯ ರಸದೂಟ.

ಜೋಗತಿಯ ಹಾಡುಗಳಲ್ಲಿ ಧಾಟಿ ಮಹತ್ವಪೂರ್ಣವಾದುದು. ಆ ಧಾಟಿಯನ್ನು ಹಿಡಿದು ಅವರು ಹೇಳಬೇಕಾದುದರಲ್ಲಿ ಬೇಕಾದ ವ್ಯತ್ಯಾಸ ಮಾಡಿಕೊಳ್ಳುವರು. ರಾಗ ರಸ ಪದ ಕಸ ಎನ್ನುವ ನುಡಿಯನ್ನು ಈ ಸಂದರ್ಭದಲ್ಲಿ ನೆನೆಯಬೇಕು. ಈ ಹಾಡುಗಳಲ್ಲಿ ಸಾಹಿತ್ಯಿಕ ಅಂಶ ಕಡಮೆಯೆಂದೇ ಹೇಳಬೇಕು. ವಿಷಯ ವೈವಿಧ್ಯವೂ ಅಷ್ಟಕಷ್ಟೆ. ಎಲ್ಲಮ್ಮ ಹಾಗೂ ಅವಳ ಪರಿವಾರವನ್ನು ಬಿಟ್ಟು, ಹಾಡಿನ ವಿಷಯ ಹೊರಗೆ ಹೋಗುವುದೇ ಇಲ್ಲ. ಸರಳವಾದ ನೇರ ನಿರೂಪಣೆಯೇ ಈ ಹಾಡುಗಳ ಜೀವಾಳ. ಪ್ರಾಸಾನುಪ್ರಾಸ ಕೆಲವು ಕಡೆಗೆ ತೋರಿಬರುವುದು. ಎಲ್ಲ ಹಾಡುಗಳು ಸಾಮಾನ್ಯವಾಗಿ ಅಂಶಗಣದ ಮೇಲೆ ಅವಲಂಬಿಸಿ ನಿರ್ಮಾಣಗೊಂಡಿವೆ. ಹಿಗ್ಗಿಸಿ ಕುಗ್ಗಿಸಿ ಹಾಡುವಲ್ಲಿ ಈ ಮಾತಿನ ಸತ್ಯವನ್ನು ಅರಿಯಬಹುದು. ನೂರು ತಪ್ಪುಗಳಿದ್ದರೂ ಇದೊಂದು ರಸವತ್ತಾದ ಹಾಡಿನ ಸಂಗ್ರಹ ಭಕ್ತರು ಈ ಕೃತಿಯನ್ನು ಸ್ವಾಗತಿಸುವರೆಂದು ಆಸೆ.

ಹಾಡುಗಳನ್ನು ಸಂಗ್ರಹಿಸುವ ಕಾರ್ಯ ನಿಜಕ್ಕೂ ಕಠಿಣವಾದುದು. ಅದರಲ್ಲಿಯೂ ಜೋಗತಿಯರ ಹಾಡುಗಳನ್ನು ಸಂಗ್ರಹಿಸುವುದು ಇನ್ನೂ ಕಷ್ಟಕರ. ಅವರು ಮನಸುಖರಾಯನ ಮಕ್ಕಳು, ಬೇಕಾದರೆ ಹಾಡುತ್ತಾರೆ; ಇಲ್ಲವಾದರೆ ಅರ್ಧಕ್ಕೆ ನಿಲ್ಲಿಸಿಬಿಡುತ್ತಾರೆ. ಅವರು ನಿರಕ್ಷರ ಕುಕ್ಷಿಗಳು, ಸ್ಪಷ್ಟ ಉಚ್ಛಾರವೂ ಕಡಮೆ. ಹೀಗಾಗಿ ಸಂಗ್ರಹಕಾರರು ತೊಂದರೆ ಅನುಭವಿಸುವುದು ಸತ್ಯ. ಆದರೂ ೧೯೭೫-೭೬ನೆಯ ಸಾಲಿನಲ್ಲಿ ಅಭ್ಯಾಸ ಮಾಡಿದ ಜನಪದ ಸಾಹಿತ್ಯದ ಎಂ.ಎ. (ಪ್ರಥಮ) ವಿದ್ಯಾರ್ಥಿಗಳು ಈ ಹಾಡುಗಳನ್ನು ಸಂಗ್ರಹಿಸಿದರು. ಅವರು ಕೂಡಿಸಿದ ಹಾಡುಗಳ ಸಂಖ್ಯೆ ಮಾತ್ರ ದೊಡ್ಡದು. ಆಯ್ದುಕೊಂಡುದು ಅಲ್ಪಭಾಗ. ರಾಸಿಯನ್ನು ತೂರಿದರೆ ಹೊಟ್ಟುಹಾರಿ ಗಟ್ಟಿಗಾಳು ಉಳಿಯುವುದು ಕಡಮೆ. ಹಾಗಾಗಿದೆ ಈ ಹಾಡಿನ ಸಂಗ್ರಹ. ಜೋಗತಿ ಹಾಡುಗಳನ್ನು ಸಂಗ್ರಹಿಸಿದ ವಿದ್ಯಾರ್ಥಿಗಳಿಗೂ ಹಾಡಿದ ಜೋಗತಿಯರಿಗೂ ನಮ್ಮ ಜನಪದ ಮಾಲೆ ಋಣಿಯಾಗಿದೆ.

ಜನಪದ ಸಾಹಿತ್ಯ ಪ್ರಕಟಣೆಗೆ ಸದಾ ಸಹಾಯ ಮಾಡುತ್ತಿರುವ ಕುಲಪತಿ ಡಾ. ಆರ‍್.ಸಿ. ಹಿರೇಮಠ ಅವರನ್ನೂ ಕುಲಸಚಿವ ಶ್ರೀ ಕೆ.ಪಿ..ಸುರೇಂದ್ರನಾಥ ಅವರನ್ನೂ ಈ ಸಂದರ್ಭದಲ್ಲಿ ನೆನೆಯಲು ಸಂತೋಷವೆನಿಸುತ್ತದೆ.

ಈ ಕೃತಿ ಹೊರಬರುವಲ್ಲಿ ಸಹಾಯಕ ಸಂಶೋಧಕರಾದ ಡಾ. ನಿಜಲಿಂಗಮ್ಮ ಕೊಪ್ಪಳ ಮತ್ತು ಶ್ರೀ ವೀರಣ್ಣ ರಾಜೂರ ಅವರು ಆಸ್ಥೆಯಿಂದ ಕಾರ್ಯನಿರ್ವಹಿಸಿದ್ದಾರೆ. ವ್ಯಾಸಂಗವಿಸ್ತರಣಃ ಪ್ರಕಟನ ವಿಭಾಗದ ನಿರ್ದೇಶಕರಾದ ಶ್ರೀ ಚನ್ನವೀರ ಕಣವಿ, ಉಪನಿರ್ದೇಶಕರಾದ ಶ್ರೀ ಎಸ್.ಬಿ. ನಾಯಕ ಅವರು ಆಸಕ್ತಿಯಿಂದ ತಮ್ಮ ಪಾಲಿನ ಕರ್ತವ್ಯ ಮಾಡಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ ಅಚ್ಚು ಕೂಟದಲ್ಲಿ ಕೃತಿ ಅಂದವಾಗಿ ಮುದ್ರಣವಾಗುವಂತೆ ಶ್ರೀ ಜಿ.ಬಿ. ಮನ್ವಾಚಾರಿ ಅವರು ನೋಡಿಕೊಂಡಿದ್ದಾರೆ. ಅವರ ಸಿಬ್ಬಂದಿ ಮನಮುಟ್ಟಿ ದುಡಿದಿದ್ದಾರೆ. ಅವರೆಲ್ಲರಿಗೂ ಜನಪದ ಮಾಲೆ ಋಣಿಯಾಗಿದೆ.

ಇತರ ಜನಪದ ಕೃತಿಗಳನ್ನು ಆಸ್ಥೆಯಿಂದ ಬರಮಾಡಿಕೊಂಡಂತೆ ರಸಿಕರು ಇದನ್ನೂ ಸ್ವೀಕರಿಸುವರೆಂದು ಆಶಿಸಲಾಗಿದೆ.

ಕನ್ನಡ ಅಧ್ಯಯನ ಪೀಠ
ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ
೧-೪-೧೯೭೭
ಎಂ.ಎಸ್. ಸುಂಕಾಪುರ[1] ಮಹಾಭಾರತ : ವನಪರ್ವ ೧೧೭

[2] ಭಾಗವತ : ೯-೧೫

[3] ಹರಿವಂಶ : ೧-೨೭

[4] ೪. ವಾಯುಪುರಾಣ : ೯೧

[5] ೧. ಮಹಾಭಾರತ : ಅನು. ೧೧೪

[6] ೨. ಮಹಾಭಾರತ : ಸಭಾಪರ್ಮ : ೪೮

 

[7] ೧. ಮಹಾಭಾರತ : ಶಾಂತಿಪರ್ವ : ೪೮

 

[8] ೨. ಮಹಾಭಾರತ : ಆದಿಪರ್ವ : ೨-೬೫ ರಿಂದ ೧೧೩

 

[9] ೩. ಹರಿವಂಶ : ೧-೪೧