. ರತಿಕಲ್ಯಾಣ

ಕವಿ ವಿಚಾರ :

ಹಟ್ಟಿಯಂಗಡಿ ರಾಮಭಟ್ಟ. ಕಾಲ ಸುಮಾರು ೧೬೭೪. ಇವರು ಕುಂದಾಪುರ ತಾಲೂಕಿನ ಬಸರೂರು ಸಮೀಪದ ಹಟ್ಟಿಯಂಗಡಿಯವರು. ತಮ್ಮ ಪ್ರಸಂಗಗಳಲ್ಲಿ ಸ್ಥಳ ದೇವತೆ ಗೋಷ್ಠಪುರಪತಿ ಲೋಕನಾಥನನ್ನು ಸ್ತುತಿಸಿದ್ದಾರೆ. ತಮ್ಮ ಊರನ್ನುವ್ರಜಪುರ, ಗೋಷ್ಟಪುರವೆಂದೆಲ್ಲ ಕರೆದುಕೊಂಡಿದ್ದಾರೆ. ತಂದೆ ಸೂರ ಭಟ್ಟರೆಂದು ಗುರು ಸೂರಿ ದೀಕ್ಷಿತನೆಂದೂ ತಮ್ಮ ‘ಕಂಸವಧೆ’ ಪ್ರಸಂಗದಲ್ಲಿ ತಿಳಿಸಿರುವರಂತೆ. ಇವರ ಪರಮಾರ್ಥ ಗುರು ಶಂಕರಯ್ಯ. ಈ ಕವಿಗೆ ಕಾವ್ಯ ಪ್ರವೃತ್ತಿಯ ಜೊತೆಗೆ ಪರಮಾರ್ಥ ಪ್ರವೃತ್ತಿಯೂ ಸೇರಿದ್ದು ಜನ ಇವರನ್ನು ಸಾಧು, ಸತ್ಪುರುಷನಂತೆ ಕಾಣುತ್ತಿದ್ದರೆಂದು ಡಾ.ಕಾರಂತರು ತಮ್ಮ ಯಕ್ಷಗಾನ ಬಯಲಾಟದಲ್ಲಿ ಬರೆದಿದ್ದಾರೆ. ಈ ಕವಿಯ ಲವಕುಶರ ಕಾಳಗ (ಪಟದ ಸಂಧಿ), ದ್ರೌಪದಿ ಸ್ವಯಂವರ, ಅತಿಕಾಯಕಾಳಗ, ಸುಭದ್ರಾಪರಿಣಯ, ಧ್ರುವಚರಿತ್ರೆ, ರತಿಕಲ್ಯಾಣ ಇವು ಅಚ್ಚಾಗಿರುವ ಪ್ರಸಂಗಗಳು. ಕಂಸವಧೆ, ಗಿರಿಜಾವಿಲಾಸ, ದ್ರೌಪದೀ ಪ್ರತಾಪ, ದ್ರೌಪದಿವಸ್ತ್ರಾಪಹರಣ, ಇಂದ್ರಜಿತುಕಾಳಗ, ಸೇತುಮಾಧವ, ರಾಜಸೂಯ ಯಾಗ – ಮುಂತಾದ ಅಮುದ್ರಿತ ಪ್ರಸಂಗಗಳನ್ನೂ ಬರೆದಿದ್ದಾರೆ.

ಕಥಾಸಾರ :

ತಮ್ಮ ಮಗ ಮನ್ಮಥನಿಗೆ ಇನ್ನೂ ಮದುವೆ ಮಾಡಿಲ್ಲವೆಂದು ಕೃಷ್ಣನನ್ನು ರುಕ್ಮಿಣಿ ಆಕ್ಷೇಪಿಸಿದಾಗ, ಕೃಷ್ಣ ಇನ್ನು ಎಂಟು ದಿನದಲ್ಲಿ ಕನ್ಯೆಯನ್ನು ಹುಡುಕಿ ವಿವಾಹ ರಚಿಸುವದಾಗಿ ಹೇಳುವನು. ಅದಾಗದಿದ್ದಲ್ಲಿ ತಾನು ಸಖಿಯರೊಂದಿಗೆ ಅವನನ್ನು ತೊರೆದು ಹೋಗುವದಾಗಿ ರುಕ್ಮಿಣಿ ಶಪಥಗೈಯುವಳು. ಆರು ದಿನಗಳು ಕಳೆದರೂ ತನ್ನಿಂದ ಈ ಕೆಲಸ ಆಗದೆನಿಸಿದಾಗ ಕೃಷ್ಣ ದ್ರೌಪದಿಯನ್ನು ನೆನೆಯುವನು. ಅರ್ಜುನನೊಂದಿಗೆ ಮಲಗಿದ್ದ ಆಕೆ ರಾತ್ರಿಯಲ್ಲಿಯೇ ಅಣ್ಣನಲ್ಲಿಗೆ ಬಂದು, ಅವನ ಕಷ್ಟವನ್ನರಿತು ತಕ್ಷಣ ಕಾರ್ಯಪ್ರವೃತ್ತಳಾಗಿ ಕಮಲಾವತಿ ಪಟ್ಟಣಕ್ಕೆ ತೆರಳುವಳು. ಅಲ್ಲಿನ ಕಮಲಭೂಪನಲ್ಲಿ ಅವನ ಮಗಳು ರತಿಯನ್ನು ತನ್ನಣ್ಣನ ಮಗನಿಗಾಗಿ ಕೇಳುವಳು. ಹಾಗೂ ಮರುದಿನವೇ ಮದುವೆ ಮಾಡಿಕೊಡುವಂತೆ ಒಪ್ಪಿಸುವಳು. ಹಿಂತಿರುಗಿ ಬಂದು, ದಿಬ್ಬಣ ತೆಗೆದುಕೊಂಡು ಕಮಲಾವತಿಗೆ ಮರುದಿನವೇ ಹೋಗುವಂತೆ ಯಾದವರಿಗೆ ತಿಳಿಸಿ, ಅರ್ಜುನನಲ್ಲಿಗೆ ಹಿಂತಿರುಗುವಳು. ಅಲ್ಲಿ ಆಕೆ ಅರ್ಜುನನಿಂದ  ಅಗ್ನಿ ಪರೀಕ್ಷೆಗೆ ಒಳಗಾಗಬೇಕಾಗುವದು. ಗರುಡನ ಮೂಲಕ ಕೃಷ್ಣನ ಆಮಂತ್ರಣವನ್ನು ಪಡೆದು ಯಾದವರೆಲ್ಲಾ ಕಮಲಾಪುರ ಪಟ್ಟಣಕ್ಕೆ ಹೋಗುತ್ತಿರುವಾಗ ಮೇಘಸ್ತನಿ, ಮೇಘಾಸುರ ರಕ್ಕಸರು, ಅವರನ್ನೆಲ್ಲಾ ಅಡ್ಡಗಟ್ಟಿ ಕೃಷ್ಣನಿಂದ ಹತರಾಗುವರು. ಇತ್ತ ಮಾದ್ರೇಶನ ಮಗ ಕೌಂಡ್ಲಿಕನು ಚಾರರಿಂದ ರತಿಯ ವಿವಾಹದ ವಿಷಯ ತಿಳಿದು, ಮಾವನ ಮಗಳನ್ನು ತನಗೆ ಕೊಡದೆ ಬೇರೆಯವಗೆ ಮದುವೆ ಮಾಡುತ್ತಿರುವದನ್ನು ವಿರೋಧಿಸುತ್ತಾನೆ. ಹಾಗೂ ಕಮಲಭೂಪನ ಮೇಲೆ ಯುದ್ಧ ಮಾಡುತ್ತಾನೆ. ಅವನೊಡನೆ ಕೃಷ್ಣ, ಬಲರಾಮ, ಭೀಮ ಮುಂತಾಗಿ ಎಲ್ಲರೂ ಹೋರಾಡಿ ಸೋಲುತ್ತಾರೆ. ಕೊನೆಗೆ ದ್ರೌಪದಿ ರೋಷದಿಂದ ಚಂಡಿ ಅವತಾರತಾಳಿ ಕೌಂಡ್ಲಿಕನನ್ನು ಕೊಲ್ಲುತ್ತಾಳೆ. ಹೀಗೆ ಶಕ್ತಿ ಸ್ವರೂಪಿಯಾದ ದ್ರೌಪದಿಯ ಸಾಹಸದಿಂದಾಗಿ ರತಿಕಲ್ಯಾಣ ಯಶಸ್ವಿಯಾಗುತ್ತದೆ.

ವೈಶಿಷ್ಟ್ಯಗಳು :

ಸಂಪೂರ್ಣ ಕಲ್ಪಿತ ವಸ್ತುವಿನಿಂದ ಕೂಡಿದ ಪ್ರಸಂಗ. ದ್ರೌಪದಿಯು ಶಕ್ತಿಯ ಅವತಾರವೆಂಬ ಕಲ್ಪನೆಯ ಹಿನ್ನೆಲೆಯಲ್ಲಿ ಜನಜನಿತವಾದ, ಶಾಕ್ತೇಯ ಪಂಥದ ಪ್ರಭಾವದಿಂದ ಮೂಡಿಬಂದಿರಬಹುದಾದ ಕಥಾವಸ್ತು. ಚಂಡಿಯ ರಮ್ಯಾದ್ಭುತವಾದ ರೂಪಗಳು, ಯುದ್ಧಗಳು ಮುಂತಾಗಿ ರಂಗದಲ್ಲಿ ಆಕರ್ಷಕವೆನಿಸುವ ಅಂಶಗಳೆಲ್ಲ ಇರುವುದರಿಂದ ಆಟದಲ್ಲಿ ಪ್ರಯೋಗಕ್ಕೆ ಬಳಕೆಯಾಗುತ್ತಿರುವ ಪ್ರಸಂಗ.

 

. ದ್ರೌಪದೀ ಪ್ರತಾಪ

ಕವಿ ವಿಚಾರ :

ಕವಿ ಕಡಂದಲೆ ಬಿ. ರಾಮರಾವ್. ಕಾಲ ೨೦ನೇ ಶತಮಾನ. ಇವರು ಕಾರ್ಕಳ ತಾಲೂಕಿನ ಕಡಂದಲೆಯವರು. ಉಡುಪಿಯ ಪಾವಂಜೆ ಗುರುರಾಯರ ಶ್ರೀಮನ್ಮಧ್ವ ಸಿದ್ಧಾಂತ ಗ್ರಂಥಾಲಯದಲ್ಲಿ ಪ್ರಸಂಗ ಪ್ರತಿಗಳ ಪರಿಶೀಲನೆ, ಸಂಪಾದನೆ ನಡೆಸುತ್ತಿದ್ದ ಪಂಡಿತರು. ಇವರು ದ್ರೌಪದೀಪ್ರತಾಪ, ಗಯೋಪಾಖ್ಯಾನ, ಪಾದುಕಾಪಟ್ಟಾಭಿಷೇಕ ಪ್ರಸಂಗಗಳನ್ನು ಬರೆದಿರುವರು. ಕಾರ್ತವೀರ್ಯಾರ್ಜುನ ಪ್ರಸಂಗವೂ ಇವರ ಹೆಸರಿನಲ್ಲಿದೆ. ಆದರೆ ಅದರಲ್ಲಿ ಬೇರೆ ಬೇರೆ ಪ್ರಸಂಗಗಳ ಪದ್ಯಗಳು ಹೆಚ್ಚಾಗಿವೆ ಎನ್ನಲಾಗಿದೆ.

ಕಥಾಸಾರ :

ಭಾರತಯುದ್ಧದ ನಂತರದಲ್ಲಿ ಧರ್ಮಜಾದಿಗಳು ಕುಶಲದಿಂದ ರಾಜ್ಯಭಾರಗೈಯುತ್ತಿರುವಾಗ, ಒಮ್ಮೆ ಕುರುಕ್ಷೇತ್ರದರಣವನ್ನು ಗೆದ್ದವರು ಯಾರೆಂಬ ಪ್ರಶ್ನೆ ಉದ್ಭವಿಸುತ್ತದೆ. ಅರ್ಜುನ ಮತ್ತು ಭೀಮರು ತಾನು-ತಾನೆಂದು ಪರಸ್ಪರರಲ್ಲಿ ಕಾದಾಡತೊಡಗುವರು. ಆಗ ಅಲ್ಲಿಗೆ  ಬಂದ ನಾರದರು ಈ ವಿಷಯದ ಇತ್ಯರ್ಥಕ್ಕಾಗಿ ಅವರಿಬ್ಬರನ್ನೂ ಹರಿಯಲ್ಲಿಗೆ ಕರೆದೊಯ್ದರು. ಆತನು ತಾನು ಸಾರಥಿಯ ಕೆಲಸ ಮಾಡುತ್ತಿದ್ದ ಕಾರಣ ಸರಿಯಾಗಿ ಗಮನಿಸಿಲ್ಲವಾದ್ದರಿಂದ ಈ ಪ್ರಶ್ನೆಗೆ ಉತ್ತರಿಸಲಾರೆನೆಂದು ಅವರನ್ನು ಕುರುಕ್ಷೇತ್ರದಲ್ಲಿ ಬಿದ್ದುಕೊಂಡಿದ್ದ ಬಬ್ರುಸೇನನ ರುಂಡದಬಳಿಗೊಯ್ದನು. ಆ ರುಂಡವನ್ನು ಕೇಳಲಾಗಿ ತಾನು ರಣರಂಗದಲ್ಲೆಲ್ಲ ಶತ್ರುಗಳನ್ನು ಬಡಿಯುತ್ತಿದ್ದ ಚಕ್ರ ಮತ್ತು ಚಂಡಿಗಳನ್ನು ಕಂಡಿದ್ದು  ಎನ್ನುವುದು. ಇದರಿಂದ ಭೀಮ ಕುಪಿತನಾಗುವನು. ತಿರುಗಿ ಬಂದ ಭೀಮಾರ್ಜುನರು ಪುನಃ ಬಡಿದಾಡುವರು. ಭೀಮನು ಸೋತು, ನಾರದರು ಸಮಸಪ್ತಕರ ಮಕ್ಕಳಾದ ಸೋಮವರ್ಮ ಮತ್ತು ಚಂದ್ರವರ್ಮರನ್ನು ಭೀಮನ ನೆರವಿಗೆ ಕರೆದು ತರುವರು. ತಮ್ಮ ತಂದೆಯನ್ನು ಕೊಂದ ಅರ್ಜುನನ ಮೇಲಿನ ಸೇಡು ತೀರಿಸಿಕೊಳ್ಳಲು  ಇದು ಒಳ್ಳೆಯ ಅವಕಾಶವೆಂದು ಬಂದ ಸೋದರರು ಅರ್ಜುನನೊಂದಿಗೆ ಯುದ್ಧ ಮಾಡಿಹತರಾಗುವರು. ಪುನಃ ಭೀಮನು ಅರ್ಜುನನೊಡನೆ ಕಾದಿ ಕೈಸೋಲಲು ದ್ರೌಪದಿಯನ್ನು ತನ್ನ ನೆರವಿಗೆ ಕರೆಯುವನು. ಅವಳು ಬಂದು ಪಾರ್ಥನಿಗೆ ಇದಿರಾಗಿ ಕಾದಾಡಲಾಗಿ ಅವಳ ಬಿಲ್ಲ ಬಲ್ಮೆಗೆ ಬೆರಗಾಗಿ ಹನುಮನನ್ನು ನೆನೆಯುವನು. ರಣದಲ್ಲಿ ಕೃಷ್ಣೆಯ ಪ್ರತಾಪವನ್ನು ಕಂಡ ಹನುಮ “ನಾರಿಯಲ್ಲಿವಳಾದಿಶಿವೆಯಾಗಿಹಳು’’ ಎಂದು ತೆರಳುವನು. ಪಾರ್ಥನು ಹರಿಯನ್ನು ಧ್ಯಾನಿಸಿ ತನ್ನ ಪತ್ನಿ ಸೌಭದ್ರೆಯನ್ನು ಕರೆಯಿಸುವನು. ವೀರಾವೇಶದಿಂದ ಬಂದ ಸೌಭದ್ರೆ ದ್ರೌಪದಿಯೊಂದಿಗೆ ಕಾದಿಬೀಳುವಳು. ಆಕೆ ನಿರಂತರವಾಗಿ ಹರಿಯನ್ನು ಧ್ಯಾನಿಸಲಾಗಿ ಅಲ್ಲಿಗೆ ಬಂದ ನಾರದ ಕೃಷ್ಣನಿಗೆ ವಿಷಯ ತಿಳಿಸುವನು. ಕೃಷ್ಣನು ತನ್ನಣ್ಣ ಬಲರಾಮನಿಗೆ ಪರಿಸ್ಥಿತಿಯನ್ನು ವಿವರಿಸಿ, ಕೃತವರ್ಮ, ಮನ್ಮಥ, ಅನಿರುದ್ಧ, ಸಾಂಬ, ಸಾತ್ಯಕಿ ಮುಂತಾದ ಯಾದವರ ಸೇನೆಯೊಂದಿಗೆ ಬಲರಾಮನು ಸುಭದ್ರೆಯ ನೆರವಿಗೆ ಹೋಗುವಂತೆ ಮಾಡುವನು. ಅವರೆಲ್ಲಾ ದ್ರೌಪದಿಯೊಂದಿಗೆ ಕಾದಿ ಸೋತು ಬೀಳುವರು. ಇದರಿಂದ ಬೆದರಿದ ಹರಿಯು ಶಿವನನ್ನು ಕರೆಯುವನು. ಶಂಕರನು ಕಾತ್ಯಾಯಿನಿಯೊಂದಿಗೆ ಆಗಮಿಸಿ ನಡೆದ ವಿಚಿತ್ರವನ್ನು ಗಮನಿಸಿ ಪ್ರಮಥ ಗಣಗಳನ್ನು ಕರೆಯಿಸಿ ಯುದ್ಧಕ್ಕೆ ಕಳುಹುವನು. ಅವರೆಲ್ಲಾ ಸೋತುಹೋಗಲು ಕೊನೆಯಲ್ಲಿ ಪಾರ್ವತಿಯನ್ನು ಕರೆಯುವನು. ಶಿವೆ-ಶಕ್ತಿಯರ ನಡುವೆ ಚಂಡಿ ಮತ್ತು ಕಾಳಿಯರ ಪ್ರತ್ಯಕ್ಷ ಅವತಾರ ಸ್ವರೂಪಗಳಲ್ಲಿಯೇ ಯುದ್ಧ ನಡೆಯುತ್ತದೆ. ಈ ಭಯಂಕರ ಕಾಳಗವನ್ನು ನಾರದ ಬಂದು ನಿಲ್ಲಿಸುವನು. ಅವರೆಲ್ಲರ ವಿವಿಧ ಅವತಾರ ವಿಚಾರಗಳನ್ನು ವಿವರಿಸಿ ಕುರುಕ್ಷೇತ್ರರಣದಲ್ಲಿ ಕೃಷ್ಣನ ಚಕ್ರವೂ ದ್ರೌಪದಿಯಚಂಡಿಯವತಾರವೂ ಸೇರಿ ಜಯಸಾಧ್ಯವಾಯಿತು ಎಂದು ನಿರ್ಣಯ ತಿಳಿಸುವನು.

ವೈಶಿಷ್ಟ್ಯಗಳು :

ಶಾಕ್ತೇಯ ಪಂಥದ ಪ್ರಭಾವದಲ್ಲಿ , ದ್ರೌಪದಿಯು ಶಕ್ತಿಯ ಅವತಾರವಾದ ಚಂಡಿಸ್ವರೂಪಿಣಿಯೆಂಬ ನಂಬಿಗೆಯ ನೆಲೆಯಲ್ಲಿ ರಚಿತವಾದ ಪ್ರಸಂಗವಿದು. ಸಂಸ್ಕೃತ  ಭೂಯಿಷ್ಠತೆಯಿಂದಾಗಿ ಅಲ್ಲಲ್ಲಿ ಕ್ಲಿಷ್ಟ ರಚನೆಗಳಿದ್ದರೂ ಕಿವಿಗಿಂಪಾಗುವ ರಾಗದಪದ್ಯಗಳೂ ಆಕರ್ಷಕವಾದ ರಚನೆಗಳೂ ಪ್ರಸಂಗದಲ್ಲಿವೆ. ಕವಿತನ್ನ ಕಾಲದಲ್ಲಿ ಹೊಸತಾಗಿ ಬಳಕೆಗೆ ಬಂದಿದ್ದ ಉರ್ದು-ಫಾರಸಿ ಪದಗಳನ್ನು (ಉದಾ : ವಾವ್ಹಾ, ಠೀಕು, ಪೂತುರೇ) ತನ್ನದೇ ಆದ ಅಚ್ಚ ಕನ್ನಡ ಸಮಾಸ ಪದಗಳನ್ನೂ (ಉದಾ : ಮೋಡ ಬಣ್ಣನ) ಬಳಸಿ ವೈಶಿಷ್ಟ್ಯ ಮೆರೆದಿದ್ದಾನೆ. ಸ್ತ್ರೀಪಾತ್ರದ ಸಾಹಸ ಮೆರೆಯುವ ಈ ಪ್ರಸಂಗ ಮೇಳಗಳಲ್ಲಿ ತುಂಬಾ ಪ್ರಯೋಗಗಳನ್ನು ಕಂಡಿದೆ.

 

. ಕನಕಾಂಗಿ ಕಲ್ಯಾಣ

ಕವಿ ವಿಚಾರ :

ಕವಿ ನಿತ್ಯಾನಂದ ಅವಧೂತರು. ಇವರ ಕಾಲವನ್ನು ಡಾ. ಶಿವರಾಮ ಕಾರಂತರು ಕ್ರಿ.ಶ.೧೬೮೩ ಎಂದು ಲೆಕ್ಕ ಹಾಕಿದ್ದಾರೆ. ಇವರು ಚಿದಾನಂದ ಅವಧೂತರನ್ನು ತನ್ನ ಪರಮ ಗುರು ಎಂದು ನೆನೆದಿದ್ದಾರೆ. ಡಾ.ಶಿವರಾಮ ಕಾರಂತರು ಇವರ ಕುರಿತು ಹೀಗೆ ಬರೆದಿದ್ದಾರೆ. “ಕನಕಾಂಗಿ ಕಲ್ಯಾಣವನ್ನು ಬರೆದಾತ ನಿತ್ಯಾನಂದ ಅವಧೂತನೆಂಬ ವಿರಕ್ತ. ಈ ಕವಿಯ ೨೦ ಪದ್ಯಗಳಲ್ಲಿ ದ್ರೌಪದಿ ಮತ್ತು ಭಾನುಮತಿಯರ ನಡುವೆ ನಡೆದ ಒಂದು ಸಂಭಾಷಣೆಯನ್ನು ರಚಿಸಿದ್ದಾರೆ. ಇವರು ಅನೇಕ ಬಗೆಯ ಪದ್ಯ ರಚನೆಗಳನ್ನು ಮಾಡಿರುವರಾದರೂ ಅವರದು ಪಳಗಿದ ಭಾಷೆಯಲ್ಲ”.

ಕಥಾಸಾರಂಶ :

ಬಲರಾಮನ ಮಗಳಾದ ಕನಕಾಂಗಿಯನ್ನು ಅವನ ತಂಗಿ ಸೌಭದ್ರೆ ತನ್ನ ಮಗ ಅಭಿಮನ್ಯುವಿಗೆ ಮದುವೆ ಮಾಡಿ ಕೊಡುವಂತೆ ಕೇಳಿದಾಗ, ಅದಕ್ಕೊಪ್ಪದ ಬಲರಾಮ ಕೌರವನ ಮಗನಾದ ಲಕ್ಷಣನಿಗೆ ಅವಳನ್ನು ವಿವಾಹಗೈಯುವದಾಗಿ ತಿಳಿಸುವನು. ಹಾಗೂ ದುರ್ಯೋಧನನಿಗೆ ಅದನ್ನು ತಿಳಿಸಿ, ಒಪ್ಪಿಗೆ ಪಡೆಯುವನು, ನಿರಾಶಳಾದ ಸೌಭದ್ರೆ ಕೃಷ್ಣನಲ್ಲಿ ಈ ಕುರಿತು ಮಾತನಾಡಿದಾಗ ಅವನು ಅವಳಿಗೆ ಧೈರ್ಯ ಹೇಳುವನು. ನಂತರ ಅವಳು ಅಭಿಮನ್ಯುವಿಗೆ ವಿಷಯ ತಿಳಿಸಿದಾಗ ಅವನು ಕನಕಾಂಗಿಯನ್ನು ಗೆದ್ದು ತರುವ ಉದ್ದೇಶದಿಂದ ರಥವೇರಿ ದ್ವಾರಕೆಗಾಗಿ ತಾಯಿಯೊಂದಿಗೆ ಹೊರಡುವನು. ದಾರಿಯಲ್ಲಿ ಘಟೋತ್ಕಚನು ಅವರನ್ನು ಅಡ್ಡಗಟ್ಟಿ. ಯುದ್ಧಮಾಡಿ ಸೋಲಿಸುವನು. ಕೊನೆಗೆ ಅಭಿಮನ್ಯು ತನ್ನ ತಮ್ಮನೆಂದು ತಿಳಿದ ಮೇಲೆ ತಾನೂ ಅವನ ಬೆಂಬಲಕ್ಕೆ ಹೊರಡುವನು. ಅವರೆಲ್ಲಾ ಕೃಷ್ಣನಲ್ಲಿಗೆ ಹೋಗಿ ಅವನ ಸೂಚನೆಯಂತೆ ಘಟೋತ್ಕಚನ ಶಕ್ತಿಯಿಂದ ಮಾಯಾ ದಿಬ್ಬಣವನ್ನು ಸೃಷ್ಟಿಸುವರು. ಮಾಯೆಯಿಂದ ಕನಕಾಂಗಿಯನ್ನು ಧರ್ಮಜನಿದ್ದಲ್ಲಿಗೆ ಸಾಗಿಸುವರು. ನಂತರ ನಿಜವಾದ ಕೌರವರ ದಿಬ್ಬಣ ಬಂದಾಗ ಯಾದವರು ಅಚ್ಚರಿಗೊಳ್ಳುವರು. ಕರ್ಣ, ಘಟೋತ್ಕಚ, ಬಲರಾಮ, ದುರ್ಯೋಧನರ ಮಧ್ಯೆ ಕಾಳಗ ನಡೆಯುವದು. ನಂತರ ಪಾಂಡವರು ಬಂದು ಬಲರಾಮನಲ್ಲಿ ಕನ್ಯೆಯನ್ನು ಯಾಚಿಸಿದಾಗ, ಬಲರಾಮನು ಅವರ ಕೃತ್ಯವನ್ನು ಟೀಕಿಸುವನು. ಕೃಷ್ಣನು ಬಂದು ಬಲರಾಮನನ್ನು ಸಾಂತ್ವನಗೊಳಿಸುವನು. ನಾರದರು ಪ್ರವೇಶಿಸಿ, ಎಲ್ಲರನ್ನು ಸಮಾಧಾನಗೊಳಿಸುವರು. ಅಭಿಮನ್ಯು-ಕನಕಾಂಗಿಯರ ವಿವಾಹ ನಿಶ್ಚಯವಾಗುವುದು. ವಿವಾಹ ಸಮಾರಂಭಕ್ಕೆ ಕೌರವರನ್ನು ಕರೆಯಬೇಕೆಂದು ಧರ್ಮರಾಜನು ಒತ್ತಾಯಿಸುವನು. ನಕುಲನು ಈ ಕಾರ್ಯಕ್ಕಾಗಿ ಕೌರವನ ಆಸ್ಥಾನಕ್ಕೆ ಹೋಗಿ, ಕೋಪಗೊಂಡ ದುರ್ಯೋಧನನೊಂದಿಗೆ ಮಾತಿನ ಕಾಳಗ ಮಾಡಿಕೊಂಡು ಹಿಂದಿರುಗುವನು. ಅಂತೆಯೇ ದ್ರೌಪದಿಯು ಭಾನುಮತಿಯನ್ನು ಆಮಂತ್ರಿಸಹೋಗಿ ಸುದೀರ್ಘವಾದ ವ್ಯಂಗ್ಯ ಕಟಕಿಗಳ ವಿನಿಮಯ ನಡೆಸಿ ಬರುವಳು. ಕೊನೆಯಲ್ಲಿ ಅಭಿಮನ್ಯು-ಕನಕಾಂಗಿಯರ ವಿವಾಹ ನೆರವೇರುವದು.

ವೈಶಿಷ್ಟ್ಯಗಳು :

ಕಾಲ್ಪನಿಕ ಕಥೆ ಇದಾಗಿದೆ. ವೀರ ರಸಕ್ಕೆ ಇಲ್ಲಿ ಪ್ರಾಧಾನ್ಯವಿರುವುದರಿಂದ ಪ್ರದರ್ಶನಗಳಲ್ಲಿ ಹೆಚ್ಚು ಯಶಸ್ಸು ಪಡೆದಿದೆ. ಕೌರವರ-ಪಾಂಡವರ ಭಾವ ಪ್ರಪಂಚದ ಹಲವು ಮುಖಗಳನ್ನು ಕಲ್ಪಿಸಿಕೊಂಡು ರಚಿಸಿದ ಕಥೆಯಿದು. ಸಂಪ್ರದಾಯದ ಹಾಡುಗಳಲ್ಲಿಯೂ ಈ ಕಥೆಯ ಕುಡಿಗಳನ್ನು ಕಾಣಬಹುದು. ಲೋಕ ನಿರೀಕ್ಷಣೆ, ಜನಪದ ಬದುಕಿನ ಯಥಾರ್ಥ ಚಿತ್ರಣ ಇಲ್ಲಿ ಪರಿಣಾಮಕಾರಿಯಾಗಿದೆ.

 

. ಕಲಾವತಿ ಪರಿಣಯ

ಕವಿ ವಿಚಾರ :

ಕವಿ ಜಾಣ ಮಂಜಪ್ಪ, ಕೆರೆಕೊಪ್ಪ.  ಕಾಲ : ೧೯೦೨-೧೯೮೮. ಸಾಗರ ತಾಲೂಕು ಬೇಳೂರಿನಲ್ಲಿ ಹುಟ್ಟಿದವರು. ಬಾಲ್ಯದಿಂದಲೂ ಬೆಳೆದು ಬಂದ ಪರಿಸರದಿಂದಾಗಿ ಯಕ್ಷಗನದಲ್ಲಿ ಆಸಕ್ತಿ. “ಜಾಣ’’ ಎಂದೇ ಹೆಸರು ಪಡೆದ ಅಸಾಧಾರಣ ಪ್ರತಿಭಾವಂತರ ಮನೆಯಲ್ಲಿ ಹುಟ್ಟಿದ ಇವರು

ಸ್ವತಃ ಬುದ್ಧಿವಂತರೂ, ಸಾಹಸಿಗಳೂ ಹಾಗೂ ಕುಶಲಕರ್ಮಿಗಳೂ ಆಗಿದ್ದರು. ಗ್ರಾಮೀಣ ಪರಿಸರದಲ್ಲಿದ್ದು, ಹೊಸ ಹೊಸ ಪ್ರಯೋಗಗಳನ್ನು ನಡೆಸಿ ಅನೇಕ ಹೊಸ ವಿಷಯಗಳನ್ನು ಕಂಡು ಹಿಡಿದರು. ಕೃಷಿಯಲ್ಲಿ ಹಾಗೂ ವೈವಿಧ್ಯಪೂರ್ಣ ಪೀಠೋಪಕರಣಗಳ ತಯಾರಿಕೆಯಲ್ಲಿ ತಮ್ಮ ವಿಶೇಷ ಪರಿಣತಿಯನ್ನು ಸಾಧಿಸಿದರು. ಯಾವುದನ್ನೂ ಶಾಲಾ ತರಬೇತಿಯಿಂದ ಕಲಿಯದಿದ್ದರೂ ಹಲವು ಕ್ಷೇತ್ರಗಳಲ್ಲಿ ತಜ್ಞತೆ ಪಡೆದಿದ್ದರು. ಕಾನೂನು ತಜ್ಞರಾಗಿ ಸುತ್ತಲಿನವರಿಗೆ ಮಾರ್ಗದರ್ಶನ ಮಾಡುತ್ತಿದ್ದವರು. ಹಳೆಯ ಕಾಲದ ದಸ್ತಾವೇಜುಗಳ ಬರವಣಿಗೆಯಲ್ಲಿ ಹೆಸರು ವಾಸಿಯಾಗಿದ್ದರು. ಉತ್ತಮ ವಾಗ್ಮಿಯಾಗಿಯೂ ಖ್ಯಾತಿವೆತ್ತಿದ್ದರು. ಇವರು ಬರೆದ ಯಕ್ಷಗಾನ ಪ್ರಸಂಗಗಳು – ಕಲಾವತಿ ಪರಿಣಯ, ಚಂದ್ರಗುಪ್ತ, ಚಾಣಕ್ಯ, ಶ್ರೀಕೃಷ್ಣ ವಿವಾಹ, ಸುದರ್ಶನ ಮಾಗಧ ಪರಾಜಯ, ಶೀಲವತಿ ಸುದರ್ಶನ.

ಕಥಾಸಾರಂಶ :

ಮಂಜುಭಾಷಿಣಿಯೆಂಬ ವಿದ್ಯಾಧರೆ ಬ್ರಹ್ಮನಿಂದ ಶಾಪಪಡೆದು ವೀರಾವತಿ ನಗರದಲ್ಲಿ ನಿಶಾಚರಿಯಾಗಿ ಜನಿಸಿ, ಜನರನ್ನೆಲ್ಲ ತಿಂದು ತೇಗುತ್ತಿರುತ್ತಾಳೆ. ಅರಸು ಕುವಲಯನು ಇದರಿಂದಾಗಿ ವ್ಯಥಿತನಾಗಿರಲು ಆಕಾಶವಾಣಿಯೊಂದು, “ಈ ರಕ್ಕಸಿಯನ್ನು ಕೊಲ್ಲುವವರಿಗೆ ನಿನ್ನ ಪುತ್ರಿ ಕಲಾವತಿಯನ್ನು ಮದುವೆ ಮಾಡಿಕೊಡು” ಎನ್ನುತ್ತದೆ. ಅಂತೆಯೇ ಚಾರರು ದೇಶ ವಿದೇಶಗಳಲ್ಲಿ ಇದನ್ನು ಅರುಹುತ್ತಿರಲಾಗಿ ಕಾಶ್ಮೀರ ದೇಶದ ದೊರೆ ವೀರಸೇನ ಈ ಪತ್ರನೋಡಿ ಕ್ರುದ್ಧನಾಗಿ ಹಿಂದೆ ಈ ಭೂಪನು ತನ್ನ ಅಗ್ರಜೆಯ ವಿವಾಹದಲ್ಲಿಯೂ ಇಂತಹ ಪಣವಿಟ್ಟು ಕೊನೆಗೆ ರಕ್ಕಸನೊಬ್ಬನಿಗೆ ಅವಳನ್ನು ಕೊಟ್ಟಿರುವನು. ‘ಅವನಿಗೆ ಬುದ್ಧಿ ಕಲಿಸಲೇಬೇಕು’ ಎಂದು ಸಂಕಲ್ಪಿಸಿ ಯುದ್ಧಕ್ಕೆ ಹೊರಟು ಕುವಲಯನೊಂದಿಗೆ ಕಾದಾಡುವನು.

ಇತ್ತ ಲೀಲಾವತಿಯ ಅರಸು ಬ್ರಹದ್ರಥ ದೊರೆಯು ಘಂಟಾಕಂಠ ಋಷಿ ಹಾಗೂ ಅವನ ಶಿಷ್ಯ ಉಲ್ಕಲರಿಗೆ ನೀಡಿದ ಒಳ್ಳೆಯ ಸತ್ಕಾರದಿಂದಾಗಿ ಋಷಿಯಿಂದ ಶಿವನ ಖಡ್ಗ ಮತ್ತು ಮುಕ್ತಾಹಾರಗಳನ್ನು ಪಡೆಯುವನು. ಆ ಸಮಯಕ್ಕೆ ಆತನಿಗೆ ಕಲಾವತಿಯೆಂಬ ಕನ್ಯೆಯ ವಿವಾಹ ವಿಚಾರ. ವೀರಸೇನ ಮತ್ತು ಕುವಲಯರ ಯುದ್ಧ ಸಮಾಚಾರಗಳು ತಿಳಿಯುತ್ತದೆ. ತಕ್ಷಣ ಅವನು ಕುವಲಯನ ಕಷ್ಟಗಳನ್ನು ಪರಿಹರಿಸಿ ಅವನ ಕನ್ಯೆಯನ್ನು ವರಿಸುವ ನಿಶ್ಚಯದೊಂದಿಗೆ ಹೊರಡುವನು. ಹೋಗುವ ಮೊದಲು ಮುನಿ ಕೊಟ್ಟ ಹಾರಧರಿಸಿ ಖೇಚರ ಮಾರ್ಗದಿಂದ ಹೋಗಿ ಕಲಾವತಿಯನ್ನು ಕಂಡು ಮೋಹಿತನಾಗಿ ಅವಳಲ್ಲಿ ಪ್ರಣಯ ಭಿಕ್ಷೆ ಬೇಡುವನು. ಆದರೆ ಆಕೆ ಪಣದ ವಿಚಾರ ತಿಳಿಸಿ ರಕ್ಕಸಿಯರನ್ನು ಸಂಹರಿಸಿ, ತನ್ನನ್ನು ವಿವಾಹವಾಗುವ ಅಗತ್ಯವನ್ನು ಅರುಹುವಳು. ಇದರಿಂದ ಭಂಗಿತನಾದ ಬ್ರಹದ್ರಥನು ಕುಪಿತನಾಗಿ “ನಿನ್ನನ್ನು ವಿವಾಹವಾಗಿ, ನಿನ್ನ ಸಂಯೋಗವನ್ನು ತೊರೆದು ಬನ್ನಕ್ಕೆ ಗುರಿ ಮಾಡುವೆನು” ಎಂದು ಶಪಥಗೈಯುತ್ತಾನೆ. ಅವಳು ಪರಿಪರಿಯಾಗಿ ಬೇಡಿದರೂ ಕೇಳದೆ ಹೋಗಿ ರಕ್ಕಸಿಯನ್ನು ಕೊಂದು ಆಕೆಯನ್ನು ವರಿಸುವನು. ವಿವಾಹ ನಂತರ  ಆಕೆಯ ಅಪೂರ್ವವಾದ ಸೊಬಗು, ಲಾವಣ್ಯಗಳಿಂದ ಮೋಹಿತನಾದರೂ ತನ್ನ ಪಣವನ್ನು ನೆನೆಸಿಕೊಂಡು ರಾತ್ರಿಯಲ್ಲಿಯೇ ಆಕೆಯನ್ನು ತೊರೆದು ತನ್ನ ರಾಜ್ಯಕ್ಕೆ ಮರುಳುವನು.  ಇದರಿಂದ ದುಃಖಿತೆಯಾದ ಕಲಾವತಿಗೆ, ಬ್ರಹದ್ರಥನಿಂದ ಕೊಲ್ಲಲ್ಪಟ್ಟು, ತನ್ನ ರಕ್ಕಸ ರೂಪ ಪರಿಹರಿಸಿಕೊಂಡಿದ್ದ ಮಹೋದರಿ ಕಾಣಿಸಿಕೊಳ್ಳುವಳು. ಆಕೆಯು ಕಲಾವತಿಗೆ, ಧರಿಸಿದಾಗ ರೂಪು ಬದಲಾಗುವಂತಹ ಹಾರವೊಂದನ್ನು ನೀಡುವಳು. ಕಲಾವತಿಯು ಆ ಹಾರ ಧರಿಸಿ ಮದನ ಮಂಜರಿಯಾಗಿ ಬ್ರಹದೃಥನಲ್ಲಿಗೆ ಹೋಗಿ ಅವನಿಂದ ಮೋಹಿಸಲ್ಪಟ್ಟು ತನಗೆ ಜನಿಸುವ ಮಗನಿಗೆ ರಾಜ್ಯ ಪದವಿ ನೀಡಬೇಕೆಂಬ ಶರತ್ತಿನೊಂದಿಗೆ ಅವನೊಂದಿಗೆ ಗಾಂಧರ್ವ ವಿವಾಹವಾಗಿ ಗರ್ಭವತಿಯಾಗುವಳು. ನಂತರ ತನ್ನ ತಂದೆಯ ನೆನಪಾಗಿ ಅರಸನಿಂದ ಅಪ್ಪಣೆ ಪಡೆದು, ಹೋಗುವಾಗ ಪಟ್ಟದ ಕತ್ತಿಯನ್ನೂ, ಮುದ್ರೆಯುಂಗುರವನ್ನೂ ಪಡೆದು ಹೋಗುವಳು. ತವರಿನಲ್ಲಿಯೇ ಮಗ ಕುಂಡಲಶ್ರವನು ಜನಿಸುವನು. ಬೆಳೆಯುತ್ತಿರುವ ಬಾಲಕನು ತನ್ನ ತಂದೆ ಯಾರೆಂದು ಪ್ರಶ್ನಿಸಿದಾಗ ಪೂರ್ವವಿಚಾರನ್ನೆಲ್ಲಾ ತಿಳಿಸುವಳು. ಆಗ ಕುಂಡಲಶ್ರವನು ಸೈನ್ಯದೊಂದಿಗೆ ಬ್ರಹದ್ರಥನಲ್ಲಿ ಯುದ್ಧಕ್ಕೆ ಹೋಗಿ ಅವನನ್ನು ಸೋಲಿಸಿ ಹೆಡೆಮುರಿಗೆ ಕಟ್ಟಿ ತಾಯಿಯಲ್ಲಿಗೆ ತಂದು ತಾಯಿಯ ಪ್ರತಿಜ್ಞೆಯನ್ನು ನೆರವೇರಿಸುವನು. ಕಲಾವತಿ ಪತಿಗೆ ನಮಸ್ಕರಿಸಿ ಅವಳ ಪ್ರತಿಜ್ಞೆಯನ್ನು ನೆನಪಿಸಿ, ಅವನಿಂದ ತಂದಿದ್ದ ಖಡ್ಗ, ಮುದ್ರೆಯುಂಗುರಗಳ ಕುರುಹು ತೋರಿಸಲಾಗಿ – ‘ಮದನ ಮಂಜರಿಯೇ ಕಲಾವತಿಯು’ ಎಂಬ ವಿಷಯ ತಿಳಿಯುವದು. ಮಾತ್ರವಲ್ಲ ಅಶರಿರವಾಣಿಯೊಂದು ಮೊಳಗಿ “ಭಾಷೆ ತೀರಿದ ಮೇಲೆ ಕಲಾವತಿ ದೋಷರಹಿತಳೆಂದು” ಹೇಳುವದು. ಬ್ರಹದ್ರಥನು ಸತಿಸುತರನ್ನು ಸ್ವೀಕರಿಸಿ ಮಗನಿಗೆ ಯುವರಾಜ್ಯಾಭಿಷೇಕ ನೆಡೆಸಿ ಸುಖದಿಂದಿದ್ದನು.

ವೈಶಿಷ್ಟ್ಯಗಳು :

ಮಾಯಾರೂಪು, ಆಕಾಶಗಮನ ಮುಂತಾದ ರಮ್ಯ ಕಲ್ಪನೆಗಳಿಂದ ಕೂಡಿದ, ರಕ್ಕಸ ಮುಂತಾದ ಬಣ್ಣದ ವೇಷಗಳಿಗೆ ಅವಕಾಶವಿರುವ, ಕಾಲ್ಪನಿಕ ಕಥೆಯ ಪ್ರಸಂಗವಿದು. ಪದ್ಯಗಳಲ್ಲಿ ಪ್ರೌಢಭಾಷಾ ಪ್ರಯೋಗಗಳಿದ್ದರೂ ಹಾಡಿಗೆ ಒಗ್ಗುವ ಗುಣ ಹಾಗೂ ಜನಪ್ರಿಯ ರಾಗಗಳು ಪ್ರಸಂಗವನ್ನು ಆಕರ್ಷಕಗೊಳಿಸಿವೆ.

 

. ರತ್ನಾವತಿ ಕಲ್ಯಾಣ

ಕವಿ ವಿಚಾರ :

ಕವಿ ಮುದ್ದಣ (ನಂದಳಿಕೆ ಲಕ್ಷ್ಮೀನಾರಾಯಣಪ್ಪ) ಕಾಲ : ೧೮೬೯-೧೯೦೧. ಹೊಸಗನ್ನಡದ ಮುಂಗೋಳಿಯೆಂದು ಕರೆಸಿಕೊಂಡಿರುವ ನಂದಳಿಕೆ ಲಕ್ಷ್ಮೀನಾರಾಯಣಪ್ಪನ ಕಾವ್ಯನಾಮ – ಮುದ್ದಣ. ಪಾಟಾಳಿ ತಿಮ್ಮಪ್ಪಯ್ಯ ಹಾಗೂ ಮಹಾಲಕ್ಷ್ಮಮ್ಮನವರ ಮಗ. ಬಾಲ್ಯದಿಂದಲೇ ಈತನಿಗೆ ಯಕ್ಷಗಾನದ ನಂಟು, ಪ್ರಾಸ-ಅನುಪ್ರಾಸ, ಗೆಜ್ಜೆನಾದಗಳ ಗುಂಗು ಹಿಡಿದಿತ್ತು. ಉಡುಪಿಯ ಹೈಸ್ಕೂಲಿನಲ್ಲಿ ವ್ಯಾಯಾಮ ಶಿಕ್ಷಕನಾಗಿ ಸೇರಿದಾಗ ಅಲ್ಲಿ ಶಿಕ್ಷಕರಾಗಿದ್ದ ಮಳಲಿ ಸುಬ್ಬರಾಯರನ್ನು ತನ್ನ ಸಾಹಿತ್ಯ ಗುರುಗಳನ್ನಾಗಿ ಭಾವಿಸಿದ. ಅವರ ಮಾರ್ಗದರ್ಶನದಲ್ಲಿ ಸಾಹಿತ್ಯ ರಚನೆ ಆರಂಭಿಸಿದ. ರತ್ನಾವಳಿ ಕಲ್ಯಾಣದಲ್ಲಿ ಅವರನ್ನು “ವಿದ್ಯಾನಿಧಿಗಳೆನಿಸುವ ಸುಬ್ಬರಾಯರ ಪದಸಹಾಯದಿ ಬರೆದ ಗುರುವೆಂಬುದನು ಬಗೆದೂ” ಎಂದು ನೆನೆಸಿಕೊಂಡಿದ್ದಾನೆ. ರತ್ನಾವತಿ ಕಲ್ಯಾಣ, ಕುಮಾರ ವಿಜಯ – ಎಂಬ ಎರಡು ಯಕ್ಷಗಾನ ಪ್ರಸಂಗಗಳನ್ನು ಅದ್ಭುತ ರಾಮಾಯಣ, ಪಾದುಕಾ ಪಟ್ಟಾಭಿಷೇಕ ಹಾಗೂ ರಾಮಾಶ್ವಮೇಧಗಳೆಂಬ ಮೂರು ಅಪೂರ್ವ ಸಾಹಿತ್ಯಕ ಕೃತಿಗಳನ್ನು ರಚಿಸಿದ್ದಾನೆ.

ಪಾತ್ರಗಳು :

ದೃಢವರ್ಮ, ನಾರದ, ದ್ವಾರಪಾಲಕರು, ಸೌರಂಭ, ರತ್ನಾವಳಿ, ದೃಢವರ್ಮನ ಮಂತ್ರಿ, ವಿಪ್ರರು, ಭದ್ರಸೇನ, ಚಿತ್ರಧ್ವಜ, ಚಿತ್ರಧ್ವಜನ ತಾಯಿ, ವಿಂದ್ಯಾಧಿಪ (ಪುಳಿಂದರಾಜ) ವತ್ಸಾಖ್ಯ, ವಿದ್ಯುಲ್ಲೋಚನ, ಕಂಚುಕಿಗಳು.

ಕಥಾ ಸಾರಂಶ :

ವಂಗದೇಶಾಧಿಪತಿ ದೃಢವರ್ಮ ದಂಪತಿಗಳಿಗೆ ಮಕ್ಕಳಿಲ್ಲದ ಚಿಂತೆಯಲ್ಲಿದ್ದಾಗ, ನಾರದರು ಬಂದು ಕೊಟ್ಟ ಮಾವಿನಹಣ್ಣನ್ನು ತಿಂದು ರಾಣಿ ಸೌರಂಭೆ ಗರ್ಭವತಿಯಾಗುವಳು. ಜನಿಸಿದ ಸುಂದರವಾದ ಹೆಣ್ಣು ಮಗುವಿಗೆ ರತ್ನಾವತಿಯೆಂದು ಹೆಸರಿಸುವರು. ಪ್ರಾಪ್ತ ವಯಸ್ಕಳಾದ ಕುವರಿಗೆ ವಿವಾಹ ಮಾಡಲು ಯೋಚಿಸಿ, ವತ್ಸಾಖ್ಯನೆಂಬ ಅರಸನಿಗೆ ಕೊಡಲು ನಿರ್ಧರಿಸುವರು. ಅತ್ತ ಕಳಿಂಗ ರಾಜ ಭದ್ರಸೇನನಲ್ಲಿಗೆ ಬಂದ ವಿಪ್ರರು ರತ್ನಾವತಿಯ ಚೆಲುವನ್ನು ಅವನಲ್ಲಿ ಬಣ್ಣಿಸಿ ಅವಳು ವಿವಾಹಯೋಗ್ಯಳಾಗಿರುವುದನ್ನು ತಿಳಿಸುವರು. ಇದನ್ನು ಕೇಳಿದ ಭದ್ರಸೇನನು ಮಂತ್ರಿಯನ್ನು ಕರೆಸಿ ಕಂಚುಕಿಗಳ ಮೂಲಕ ಕಾಣಿಕೆಗಳೊಂದಿಗೆ ಕನ್ಯೆಯನ್ನು ಬಯಸಿ ಪತ್ರವನ್ನು ದೃಡವರ್ಮನಿಗೆ ಕಳಿಸುವನು. ಇದಕ್ಕೆ ದೃಢವರ್ಮನು ವಿನಯದಿಂದ ಉತ್ತರಿಸಿ ತನ್ನ ಮಗಳನ್ನು ವತ್ಸರಾಜನಿಗೆ ಕೊಡಲು ನಿರ್ಧರಿಸಿರುವುದನ್ನು ತಿಳಿಸವನು. ಇದರಿಂದ ಭದ್ರಸೇನನು ಕೋಪಗೊಂಡಾಗ ಅವನ ಸಚಿವನ ಮಗ ಚಿತ್ರಧ್ವಜನು ತಾಯಿಯ ಅಪ್ಪಣೆ ಪಡೆದು, ತಾನೇ ಕನ್ಯೆಯನ್ನು ತರುವುದಾಗಿ ತಿಳಿಸಿ ಹೊರಡುವನು. ಧೃಡವರ್ಮ ಹಾಗೂ ಚಿತ್ರಧ್ವಜರ ನಡುವೆ ಭೀಕರ ಕಾಳಗವಾಗಿ ಧೃಡವರ್ಮನಿಗೆ ಸೋಲಾಗ ತೊಡಗುವುದು. ವ್ಯಥೆಯಲ್ಲಿದ್ದ ಅವನಿಗೆ ಅವನ ಮಿತ್ರ ವಿಂದ್ಯಾಧಿಪ ಕಳಿಂಗ ರಾಜನು ಸಹಾಯಮಾಡಲಾಗಿ ಅವರು ಚಿತ್ರಧ್ವಜನನ್ನು ಬಂಧಿಸುವರು. ಆಗ ಭದ್ರಸೇನನು ಸೇನೆಯೊಂದಿಗೆ ಬಂದು ಘನಘೋರ ಕಾಳಗ ಮಾಡಿ ಅವರನ್ನು ಸೋಲಿಸುವನು. ಚಿತ್ರಧ್ವಜನ ಸೆರೆ ಬಿಡಿಸಿ ಅವನನ್ನು ಊರಿಗೆ ಮರುಳುವಂತೆ ತಿಳಿಸಿ, ತಾನು ದೃಢವರ್ಮನ ಅರಮನೆಯನ್ನು ಹೊಕ್ಕು ಅಲ್ಲಿ ಮಲಗಿದ ರತ್ನಾವತಿಯನ್ನು ಕಾಣುವನು. ಅವಳ ಅಪ್ರತಿಮ ಸೌಂದರ್ಯಕ್ಕೆ ಮಾರು ಹೋಗಿ ಆ ರಾತ್ರಿಯಲ್ಲಿಯೇ ಅವಳು ಮಲಗಿರುವಂತೆಯೇ ಮಂಚ ಸಹಿತವಾಗಿ ಎತ್ತಿಕೊಂಡು ತನ್ನ ರಾಜ್ಯಕ್ಕೆ ಹೊರಡುವನು. ದಾರಿಯಲ್ಲಿ ವಿದ್ಯಲ್ಲೋಚನನೆಂಬ ರಾಕ್ಷಸನು ಇವರ ಮೇಲೆರಗಿ ಭದ್ರಸೇನನನ್ನು ಕೊಂದು ರತ್ನಾವತಿಯನ್ನು ತನ್ನ ಮನೆಗೊಯ್ದು ಇರಿಸುವನು. ಹಾಗೂ ತನ್ನನ್ನು ಆಕೆ ಒಲಿಯಲು ಒಂದು ವಾರದ ಗಡವು ನೀಡುವನು. ಅಷ್ಟರಲ್ಲಿ ಆ ಕಾಡಿಗೆ ಬೇಟೆಯಾಡುತ್ತ ಬಂದ ವತ್ಸಾಖ್ಯನು ಅನುಪಮವಾದ ಗೃಹವೊಂದನ್ನು ಅಲ್ಲಿ ಕಂಡು, ಬೆರಗಾಗಿ, ಅದನ್ನು ಪ್ರವೇಶಿಸುವನು. ಅಲ್ಲಿ ಒಬ್ಬಳೇ ಇದ್ದ ರತ್ನಾವತಿಯನ್ನು ಕಂಡು ಮಾತನಾಡಿಸಲಾಗಿ, ಅವಳು ತನಗಾಗಿಯೇ ನಿಶ್ಚೈಸಲ್ಪಟ್ಟವಳೆಂದು ತಿಳಿದು, ಸಂತುಷ್ಟನಾಗಿ ಅವಳನ್ನು ಕರೆದುಕೊಂಡು ಹೊರಡುವಷ್ಟರಲ್ಲಿ ಹೊರಗೆ ಹೋಗಿದ್ದ ವಿದ್ಯುಲ್ಲೋಚನ ಬಂದು ಅವರನ್ನು ತಡೆಯುವನು. ವತ್ಸಾಖ್ಯನು ಅವನನ್ನು ಕೊಂದು ದೃಢವರ್ಮನಲ್ಲಿಗೆ ಹೋಗಿ ರತ್ನಾವತಿಯನ್ನು ವಿದ್ಯುಕ್ತವಾಗಿ ವಿವಾಹ ಮಾಡಿಕೊಳ್ಳುವನು.

ವೈಶಿಷ್ಟ್ಯಗಳು :

ಸಂಸ್ಕೃತ ರತ್ನಾವಳೀ ನಾಟಕದ ಆಧಾರದ ಮೇಲೆ ಈ ಪ್ರಸಂಗವನ್ನು ಬರೆಯಲಾಗಿದೆ. ಇವನ ಎರಡನೆಯ ಯಕ್ಷಗಾನ ಪ್ರಸಂಗ ಕುಮಾರ ವಿಜಯವು ಸಾಹಿತ್ಯಕವಾಗಿ ಉತ್ತಮವಾಗಿದ್ದರೂ ರಂಗ ಪ್ರಯೋಗದ ದೃಷ್ಟಿಯಿಂದ ರತ್ನಾವತಿ ಕಲ್ಯಾಣವೇ ಹೆಚ್ಚು ಜನಪ್ರಿಯವಾಗಿದೆ. ಕುಮಾರ ವಿಜಯವು ಪ್ರೌಢಿಮೆಯಿಂದ ಕೂಡಿದ್ದು, ಹಾಡುಗಳಿಗೆ ಹೊಸ ಹೊಸ ಮಟ್ಟುಗಳು ದೊರಕಿವೆಯಾದರೂ ರತ್ನಾವತಿ ಕಲ್ಯಾಣದಲ್ಲಿ ಲಾಲಿತ್ಯ ಹಾಗೂ ರಮ್ಯವಾದ ಕಥೆಯಿರುವುದರಿಂದ ಇದು ಆಟಕ್ಕೆ ಹೆಚ್ಚು ಬಳಕೆಯಾಗಿದೆ.

 

. ಯೋಗಿನೀ ಕಲ್ಯಾಣ

ಕವಿ ವಿಚಾರ :

ಅದ್ಯಪಾಡಿ ರಾಮಕೃಷ್ಣಯ್ಯ. ಕಾಲ : ೧೮೫೦-೧೯೩೦. ಇವರು ಮಂಗಳೂರು ಸಮೀಪದ ಬಜಪೆಯ ಅದ್ಯಪಾಡಿಯ ಆದಿನಾಥೇಶ್ವರನ ಭಕ್ತರು. ಆ ದೇವಾಲಯದ ಅರ್ಚಕ ಕುಟುಂಬಕ್ಕೆ ಸೇರಿದ, ಸ್ಥಾನಿಕ ಬ್ರಾಹ್ಮಣ ವರ್ಗದ ವೆಂಕಟರಮಣನ ಪುತ್ರನೆಂದು ಹೇಳಿಕೊಂಡಿರುವರು. ಅವರ ಕೃತಿಗಳು ವಾಮನ ಚರಿತ್ರೆ, ವ್ರತ್ರಾಸುರ ಕಾಳಗ, ಭದ್ರಾಯು ಚರಿತ್ರೆ, ಮಾರ್ಕಾಂಡೇಯ ಚರಿತ್ರೆ.

ಕೃಷ್ಣ-ಬಲರಾಮ ದ್ವಾರಕೆಯಲ್ಲಿ ರಾಜ್ಯವಾಳುತ್ತಿದ್ದ ಸಮಯದಲ್ಲಿ ಒಮ್ಮೆ ಬೇಟೆಗೆ ಹೋಗಿದ್ದ ಕೃಷ್ಣನಿಗೆ, ಮರವೊಂದರ ಕೊಂಬೆಯಲ್ಲಿ ಹೆಣ್ಣು ಶಿಶುವೊಂದು ದೊರೆಯುತ್ತದೆ. ಅದನ್ನು ತಂದು ಬಲರಾಮನಿಗೆ ಪೋಷಣೆಗಾಗಿ ನೀಡಲಾಗಿ, ಅವನು ಕುಲಗೋತ್ರ ತಿಳಿಯದ ಶಿಶುವನ್ನು ಸ್ವೀಕರಿಸಲು ನಿರಾಕರಿಸುವನು. ಆ ಸಮಯಕ್ಕೆ ಅಲ್ಲಿಗೆ ಬಂದ ನಾರದರು, ಈ ಶಿಶುವು ಯೋಗಿ ಭಾರದ್ವಾಜ ಹಾಗೂ ತಿಲೋತ್ತಮೆಯರ ಕೂಸೆಂದು, ಇದನ್ನು ಪೋಷಿಸಿದರೆ ನಿಮಗೆ ಒಳಿತಾಗುವದೆಂದೂ ತಿಳಿಸುವರು. ಅಂತೆಯೇ, ಯೋಗಿನಿ ಎಂದು ಹೆಸರಿಟ್ಟು ಅದನ್ನು ಬೆಳೆಸುವನು. ವಿವಾಹ ಯೋಗ್ಯ ವಯಸ್ಕಳಾದಾಗ ಅವಳನ್ನು ಕಾಶ್ಮಿರೇಶ ಕೌಂಡ್ಲಿಕನಿಗೆ ಕೊಟ್ಟು ಮದುವೆ ಮಾಡಲು ನಿರ್ಧರಿಸಿ ಅವನಿಗೆ ಪತ್ರ ಕಳಿಸುವನು ಹಾಗೂ ಅವನ ಒಪ್ಪಿಗೆ ಪಡೆಯುವನು. ಆದರೆ ಬಲಶಾಲಿಯಾಗಿದ್ದರೂ ದುಷ್ಟನಾದ ಕೌಂಡ್ಲಿಕನಿಗೆ ಯೋಗಿನಿಯನ್ನು ಕೊಡುವುದು ಕೃಷ್ಣನಿಗೆ ಸರಿಯೆನಿಸುವುದಿಲ್ಲ. ಹಾಗಾಗಿ ಅವನು ನಾರದನನ್ನು ಸ್ಮರಿಸಿ, ಬರಿಸಿ, ಅವನೊಂದಿಗೆ ಸಮಾಲೋಚಿಸಿ, ಯೋಗಿನಿಯನ್ನು ಗಣಪತಿಗೆ ಕೊಟ್ಟು ವಿವಾಹಗೈಯ್ಯುವುದೇ ಸರಿಯೆಂದು ಅವರಿಬ್ಬರೂ ನಿರ್ಣಯಿಸುವರು ಹಾಗೂ ನಾರದರನ್ನು ರಜತಾದ್ರಿಗೆ ಕಳುಹಿಸುವರು. ನಾರದರಿಂದ ವಿಚಾರ ತಿಳಿದು ಮಗನ ವಿವಾಹಕ್ಕಾಗಿ ಕಾತರಗೊಂಡ ಪಾರ್ವತಿ ಶಿವನಿಗೆ ಇದನ್ನು ತಿಳಿಸಲಾಗಿ, ಭಕ್ತರನ್ನುದ್ದರಿಸುವ ಕಾರ್ಯದಲ್ಲಿ ಮಗ್ನನಾಗಿದ್ದ ಅವನು ತನ್ನ ಪ್ರಮಥ ಗಣಗಳೊಂದಿಗೆ, ನಂದಿ, ಭ್ರಂಗಿ, ವೀರಭದ್ರ, ಸ್ಕಂದರು ಸಹಿತ ಗಣಪತಿಯ ದಿಬ್ಬಣಕೊಂಡು ಹೋಗಲು ತಿಳಿಸುವನು. ಅತ್ತ ಕೌಂಡ್ಲಿಕನು ಸಹ, ಸೈಂಧವ, ಶಿಶುಪಾಲರುಗಳೊಡನೆ ತ್ವರಿತದಿಂದ ಹೊರಡುವನು. ಅವನ ದಿಬ್ಬಣ ದ್ವಾರಕೆಯನ್ನು ತಲುಪುವುದರೊಳಗೆ, ಅಲ್ಲಿ ಬಂದು ಬೀಡು ಬಿಟ್ಟಿದ್ದ ಗಿರಿಸುತೆ ಮೊದಲು ಕೃಷ್ಣನಲ್ಲಿಗೆ ಹೋಗಿ, ತನಗೆ ಅವನ ಸಹಾಯವಿರುವುದನ್ನು ತಿಳಿದು, ನಂದಿಯನ್ನು ಬಲರಾಮನಲ್ಲಿಗೆ ಕಳುಹುವಳು. ಅವನಿಂದ ಮುಖಭಂಗಿತನಾಗಿ ಗಣಪತಿಯ ನಿಂದನೆಯನ್ನು ಕೇಳಿಬಂದ ನಂದಿಯು ತಿಳಿಸಿದ ವಾರ್ತೆಯಿಂದ ನಿರಾಶಳಾದ ಉಮೆ ಕನ್ಯೆಯನ್ನು  ತರಲು ವೀರಭದ್ರನಿಗೆ ತಿಳಿಸುವಳು. ಅಷ್ಟರಲ್ಲಿ ಅಲ್ಲಿಗೆ ಬಂದ ಕೌಡ್ಲಿಕನ ದಿಬ್ಬಣವನ್ನು ಸಂಭ್ರಮದಿಂದ ಉಪಚರಿಸುತ್ತಿದ್ದ ಬಲರಾಮನಲ್ಲಿಗೆ ಪಾರ್ವತಿ ತಾನೇ ಹೋಗಿ ಅವನಿಂದ ನಿಂದೆಗೆ ಒಳಗಾಗುವಳು. ಕ್ರುದ್ಧಳಾದ ಶಿವೆ-ಯಾದವರನ್ನು ಸಾಯಿಸದೆ ನೂಕಿಸೋಲಿಸುವಂತೆ ವೀರಭದ್ರಾದಿಗಳಿಗೆ ತಿಳಿಸುವಳು. ಯುದ್ಧಕ್ಕೆ ಬಲರಾಮನ ಮಗ ಸಾಂಬನು ಎದುರಾಗುವನು. ಬಲನ ಹಲ, ಮುಸಲಗಳನ್ನು ಉಮೆ ಕಡಿದಾಗ, ಅವಳನ್ನು ಹಿಡಿದು ತರುವಂತೆ ಹರಿಗೆ ಹೇಳುವನು.  ಹರಿಯು ಅಣ್ಣನಿಗೆ ಮಾಡಿದ ಉಪದೇಶವು ವ್ಯರ್ಥವಾಗಿ ಕೃಷ್ಣ ಸತ್ಯಭಾಮೆಯೊಂದಿಗೆ ಬಂದು, ಪಾರ್ವತಿ-ಸತ್ಯಭಾಮೆಯರ ನಡುವೆ ಯುದ್ಧ ಮಸಗುವದು. ಕೌಂಡ್ಲಿಕನೂ ಯುದ್ಧ ಮಾಡುವನು. ಪಾರ್ವತಿ ಸೋತು ಬಿದ್ದಾಗ ಗಣಪತಿಯೇ ಧನುಶರಗಳನ್ನು ಹಿಡಿದು, ಕಾದಿ ಸೋತು ಬೀಳುವನು. ಪಾರ್ವತಿ ಪುನಃ ಕಾದಾಟ ಮಾಡಿ ಬೀಳುವಳು. ಬಲರಾಮ ಸಂತಸದಿಂದ ವಿವಾಹದ ಸಿದ್ಧತೆಯಲ್ಲಿದ್ದಾಗ ನಾಗಭೂಷಣನು ಆಗಮಿಸಿ, ಕೌಂಡ್ಲಿಕನನ್ನು ಸೋಲಿಸಿ, ಕೊಂದ ನಂತರ, ಹರಿ-ಹರರ ನಡುವೆ, ಶಿವ ಬಲರಾಮರ ನಡುವೆ ಯುದ್ಧ ನಡೆದು ಶಿವನೇ ಗೆದ್ದು, ಶ್ರೀಹರಿಯ ಮಾತಿನಂತೆ ಗಣಪತಿಯ ಜೊತೆ ಯೋಗಿನಿಯ ಕಲ್ಯಾಣವಾಗುವದು.

ಸ್ಕಂದ ಪುರಾಣದ ಕಥೆಯ ಆಧಾರದ ಮೇಲೆ ರಚಿತವಾದ ಪ್ರಸಂಗ. ಆಡುಮಾತಿನ ಪದಗಳನ್ನು ವಿಪುಲವಾಗಿ ಬಳಸಲಾಗಿದೆ.

 

. ಚಂದ್ರಾವಳೀ ಪ್ರಸಂಗ

ಕವಿ ವಿಚಾರ :

ಧ್ವಜಪುರದ ನಾಗಪ್ಪಯ್ಯ. ಇವನ ಕಾಲ ಕ್ರಿ.ಶ.೧೭೦೩. ಈತನ ಪ್ರಸಂಗಗಳಲ್ಲಿ ಕೋಟಿಲಿಂಗೇಶ್ವರನ ಸ್ತುತಿಯಿದ್ದು, ಡಾ.ಶಿವರಾಮ ಕಾರಂತರು ಇವನು ಕೋಟೇಶ್ವರದವನೆಂದು ಗುರುತಿಸಿದ್ದಾರೆ. ಇವನು ತನ್ನನ್ನು ನಾರಾಯಣಾರ್ಯನೆಂಬ ವಿಪ್ರನ ಮಗನೆಂದು ಹೇಳಿಕೊಂಡಿದ್ದಾನೆ. ಚಂದ್ರಾವಳೀ ವಿಲಾಸ, ಘಟೋತ್ಕಚನ ಕಾಳಗ, ಸೌಗಂಧಿಕ ಹರಣ ಮತ್ತು ಜಟಾಸುರ ವಧೆ ಹಾಗೂ ನಳ ಚರಿತ್ರೆ ಇವು ಈ ಕವಿ ಬರೆದಿರುವ ಪ್ರಸಂಗಗಳು.

ಕಥಾ ಸಾರಾಂಶ :

ಕೃಷ್ಣನ ಪ್ರೇಯಸಿ ರಾಧೆಯ ತಂಗಿ ಚಂದ್ರಾವಳಿಯನ್ನು ಚಂದಗೋಪನಿಗೆ ಕೊಟ್ಟು ಮದುವೆ ಮಾಡಿರುತ್ತಾರೆ. ಶ್ರೀ ಕೃಷ್ಣನ ರಸಿಕ ಲೀಲೆಗಳಿಗೆ ಊರ ಹೆಣ್ಣುಗಳೆಲ್ಲ ಬಲಿಯಾಗುತ್ತಿರುವ ಕಾರಣ, ಚಂದಗೋಪನು ಚಂದ್ರಾವಳಿಯೊಡನೆ ದೂರದ ಸಿಂಧುಗ್ರಾಮದಲ್ಲಿ ಮನೆ ಮಾಡಿರುವನು. ತವರಿನಲ್ಲಿ ಕೆಲ ದಿನ ಕಳೆಯಲು ಬಂದ ಚಂದ್ರಾವಳಿಯ ಮೇಲೆ ಕೃಷ್ಣನ ಕಣ್ಣು ಬಿದ್ದು ಅವಳನ್ನು ವಶಪಡಿಸಿಕೊಳ್ಳಲು ಯತ್ನಿಸುತ್ತಾನೆ. ಇದರಿಂದ ಬೆದರಿದ ಚಂದ್ರಾವಳಿ, ಊರಿಗೆ ಮರಳಿ ಕೆಲದಿನಗಳ ಬಳಿಕ ಅಕ್ಕ ರಾಧೆಯನ್ನು ಕಾಣಲು ಆಸೆ ಪಟ್ಟು ಮನೆಗೆ ಬಂದಿದ್ದ ಒಬ್ಬ ವಿಪ್ರನ ಮೂಲಕ ಅವಳಿಗೆ ಹೇಳಿ ಕಳುಹಿಸುತ್ತಾಳೆ. ಆದರೆ ಆ ವಿಪ್ರನು ರಾಧೆಯ ಮನೆಗೆ ತಲುಪುವ ಮೊದಲೇ ಕೃಷ್ಣ ಅವನನ್ನು ಸಂಧಿಸಿ ವಿಷಯ ತಿಳಿದು ರಾಧೆ ಮನೆಯಲ್ಲಿ ಇಲ್ಲ ಎಂದು ಅವನನ್ನು ಸಾಗ ಹಾಕುತ್ತಾನೆ ಮತ್ತು ತಾನೇ ರಾಧೆಯಂತೆ ರೂಪ ಧರಿಸಿ ಚಂದ್ರಾವಳಿಯಲ್ಲಿಗೆ ಬರುತ್ತಾನೆ. ಹಾಗೇ ಹೋಗಿ ರಾತ್ರಿಯನ್ನು ಅವಳೊಂದಿಗೆ ಕಳೆಯುವನು. ಅವಳಿಗೆ ತನ್ನ ನಿಜ ರೂಪ ತೋರಿಸಿ ಅವಳನ್ನು ತನ್ನ ಕಡೆ ಒಲಿಸಿಕೊಂಡು, ತನ್ನ ಚಕ್ರವನ್ನು ಬಳಸಿ ಅಂದಿನ ರಾತ್ರಿಯು ಐದು ದಿನಗಳವರೆಗೆ ಮುಂದುವರೆಯುವಂತೆ ಮಾಡಿ ಅವಳೊಂದಿಗೆ ಸಂತೋಷದಿಂದ ಇರುತ್ತಾನೆ. ನಾರದನು ನಂದಗೋಪನಲ್ಲಿಗೆ ಹೋಗಿ ಕೃಷ್ಣನ  ಲೀಲೆಯ ಈ ವಿಚಾರವನ್ನು ತಿಳಿಸಿದಾಗ ಕ್ರುದ್ಧನಾದ ಆತ ಚಾರಕರೊಂದಿಗೆ ರಾಧೆಯನ್ನು ಸಿಂಧು ಗ್ರಾಮಕ್ಕೆ ಕಳಿಸುವನು. ಅವರೆಲ್ಲ ಬಂದಾಗ ಚಂದ್ರಾವಳಿಯೊಂದಿಗೆ ಕೋಣೆಯಲ್ಲಿರುವವಳು ರಾಧೆಯಲ್ಲೆಂಬುದು ತಿಳಿಯುವುದು. ಚಂದಗೋಪನಿಗೆ ಕೃಷ್ಣನು ಮಾಡಿದ ಮೋಸದ ವಿಚಾರ ತಿಳಿದು ಅವನು ಚಂದ್ರಾವಳಿಯನ್ನು ಬಾಯಿಗೆಬಂದಂತೆ ಬೈಯುತ್ತಾ ಹೊಡೆಯುತ್ತಾ ಆಕೆಯನ್ನು ಸಾಯಿಸಲು ಖಡ್ಗವೆತ್ತುವನು. ರಾಧೆಯು ಅದನ್ನು ತಡೆದಾಗ, ಕಟ್ಟಿಗೆಗಳನ್ನು ಒಟ್ಟಿ ಬೆಂಕಿ ಹಚ್ಚಿ ಅದರೊಂದಿಗೆ ಚಂದ್ರಾವಳಿಯನ್ನು ಕಟ್ಟಿ ಎಸೆಯುವನು. ತಂಗಿಯ ಸ್ಥಿತಿಗೆ ಮರುಗಿ ರಾಧೆಯೂ ಬೆಂಕಿಯಲ್ಲಿ ಧುಮುಕಿದಳು. ಆಗ ಶಂಖಚಕ್ರಧಾರಿಯಾದ ಕೃಷ್ಣನು ಎಡ-ಬಲಗಳಲ್ಲಿ ರಾಧೆ-ಚಂದ್ರಾವಳಿಯರೊಂದಿಗೆ ಪ್ರತ್ಯಕ್ಷನಾಗುವನು. ಚಂದಗೋಪನಿಗೆ ಪರಮಾತ್ಮ ಸ್ವರೂಪ ದರ್ಶನವಾಗಿ ಶರಣಾಗುವನು.

ವೈಶಿಷ್ಟ್ಯಗಳು :

ಭಾಗವತವನ್ನಾಧರಿಸಿದ ಕಾಲ್ಪನಿಕ ಕಥೆ. ಹಳ್ಳಿಯ ಹಾಡುಗಳಲ್ಲಿ, ಜನಪದ ಕಥೆಗಳಲ್ಲಿ ಈ ಬಗೆಯ ಕಥೆಗಳಿದ್ದು ಅದನ್ನು ಬಳಸಿರಬಹುದು. ಈ ಪ್ರಸಂಗದ ಪದ್ಯಗಳು ತುಂಬಾ ಸರಳ ಹಾಗೂ ಲಲಿತವಾದ ಉತ್ತಮ ಶೈಲಿಯನ್ನು ಹೊಂದಿದೆ. ಭಾಮಿನಿ, ವಾರ್ಧಕದಂತಹ ಛಂದಸ್ಸಿನ ವಿವಿಧ ರೂಪಗಳಂತೆಯೇ ಹಲವು ಹಳೆಯ ರಾಗಗಳ ಪದ್ಯಗಳೂ ಇವೆ. ದೇಶೀ ಪದಗಳ ಬಳಕೆ ವಿಫುಲವಾಗಿದೆ. ಕಾಳಗವೇ ಇಲ್ಲದ ಶೃಂಗಾರ ಪ್ರಧಾನವಾದ ಪ್ರಸಂಗ. ಡಾ. ಶಿವರಾಮ ಕಾರಂತರು “ಇಲ್ಲಿನ ಗೀತ ಸಮುದಾಯ ಎಲ್ಲ ಬಗೆಯ ಶೃಂಗಾರಕ್ಕೆ ಒದಗಬಲ್ಲ ತರಂಗ ಬದ್ಧ ಪ್ರಬಂಧಗಳೆಂದು ನನಗನಿಸುತ್ತದೆ” ಎಂದಿದ್ದಾರೆ. ದಕ್ಷಿಣೋತ್ತರ ಕನ್ನಡದಲ್ಲೆಲ್ಲ ಪ್ರಸಿದ್ಧವಾಗಿರುವ ಈ ಪ್ರಸಂಗ ಪ್ರಯೋಗಗಳಲ್ಲಿ ಜನಪ್ರಿಯವಾಗಿದೆ.

 

೮. ಲವಕುಶರ ಕಾಳಗ (ಪಟದ ಸಂಧಿ)

ಕಥಾ ಸಾರಾಂಶ :

ರಾವಣವಧೆಯ ನಂತರದಲ್ಲಿ ಸಾಕೇತದಲ್ಲಿ ಸೀತೆಯೊಂದಿಗೆ ಸುಖವಾಗಿದ್ದ ರಾಮನು ಕಾಡಿಗೆ ಹೋದಾಗ – ಅಲ್ಲಿ ಶೂರ್ಪನಖಿ ಅವನನ್ನು ನೋಡುತ್ತಾಳೆ. ತಕ್ಷಣ ಅವಳ ಹಿಂದಿನ ಸೇಡು ಭುಗಿಲ್ಲೆಂದು ಮರುಕಳಿಸಿ ಅವನ ಕುಟುಂಬವನ್ನು ಯಾತನೆಗೆ ಒಳಪಡಿಸಲು ನಿರ್ಧರಿಸುತ್ತಾಳೆ. ಅಂತೆಯೆ ಮಾಯಾವೃದ್ಧೆಯಾಗಿ ಯೋಗಿನಿಯಂತೆ ರೂಪುತೊಟ್ಟು ಸೀತೆಯಲ್ಲಿಗೆ ಹೋಗಿ ಅವಳಿಂದ ತೀರಿಹೋದ ರಾವಣನ ಚಿತ್ರಬರೆದು ಕೊಡುವಂತೆ ಕೋರುತ್ತಾಳೆ. ಸೀತೆಯು ತಾನು ಕಂಡ ರಾವಣನ ಅಂಗುಷ್ಠವನ್ನು ಮಾತ್ರ ಬರೆದುಕೊಡಲು, ಆ ಚಿತ್ರವನ್ನು – ತಾನೇ ಪೂರ್ತಿಗೊಳಿಸಿಕೊಂಡು ಸೀತೆಯನ್ನು ಒತ್ತಾಯಿಸಿ ಆ ಚಿತ್ರಕ್ಕೆ ಜೀವ ತುಂಬಿಸಿ ಅದು ಲಕ್ಷ್ಮಣನಿಂದಲ್ಲದೆ ಬೇರಾರಿಂದಲೂ ಸಾಯದಂತೆ ವರಪಡೆದಳು. ಮಾತ್ರವಲ್ಲ, ಪಟವನ್ನು ಸೀತೆಯಲ್ಲಿಯೇ ಬಿಟ್ಟು ಹೊರಡುವಳು. ಇದರಿಂದ ಭಯಗೊಂಡ ಸೀತೆ ಪಟವನ್ನು ತನ್ನ ಹಾಸಿಗೆಯಡಿಯಲ್ಲಿ ಬಚ್ಚಿಡುವಳು. ಬೇಟೆಯಿಂದ ಹಿಂದಿರುಗಿದ ರಾಮ ಆ ಚಿತ್ರವನ್ನು ಕಂಡು ಕ್ರುದ್ಧನಾಗಿ ಸೀತೆಯನ್ನು ಶಂಕಿಸಿ ಅವಳನ್ನು ಕಾಡಿಗೊಯ್ದು ಅವಳ ತಲೆ ಕಡಿದು ಬರುವಂತೆ ಲಕ್ಷ್ಮಣನಿಗೆ ಅಪ್ಪಣೆ ಮಾಡುವನು. ಲಕ್ಷ್ಮಣನು ಅಣ್ಣನ ಆಜ್ಞೆಯನ್ನು ನೆರವೇರಿಸಲೋಸುಗ ಖಡ್ಗವನ್ನೆತ್ತಿದಾಗ ಆ ಖಡ್ಗದ ಹೊಳಪಿನಲ್ಲಿ ಸೀತೆಯ ಗರ್ಭದ ಪಿಂಡವು ಪ್ರತಿಬಿಂಬವಾಗಿ ಅದನ್ನು ಕಂಡು ಬೆದರಿ, ಅವಳನ್ನು ಕೊಲ್ಲದೆ ಕಾಡಿನಲ್ಲಿಯೇ ಬಿಟ್ಟು ಬರುವನು. ಹಾಗೂ ರಾಮನಿಗೆ ಕೊಂದು ಬಂದೆನೆಂದು ಹೇಳುವನು. ಇತ್ತ ಶಿವ-ಪಾರ್ವತಿಯರ ಸೂಚನೆಯಂತೆ ನಾರದರು ಸೀತೆಯನ್ನು ವಾಲ್ಮೀಕಿ ಮುನಿಗಳ ಆಶ್ರಮ ಸೇರುವಂತೆ ಮಾಡುತ್ತಾರೆ. ಅಲ್ಲಿ ಲವನಿಗೆ ಜನ್ಮ ನೀಡಿದ ಸೀತೆ, ಒಂದು ದಿನ ನದಿ ಸ್ನಾನಕ್ಕಾಗಿ ಹೋದವಳು ಅಲ್ಲಿ ತನ್ನ ಮರಿಯೊಂದಿಗಿರುವ ಮಂಗವನ್ನು ಕಂಡು ಮಗುವಿನ ಕುರಿತಾದ ಮೋಹ- ಕಾಳಜಿಗಳು ಹೆಚ್ಚಾಗಿ ತಿರುಗಿ ಬಂದು ಮಗುವನ್ನು ತೆಗೆದುಕೊಂಡು ನದೀತೀರಕ್ಕೆ ಹೋಗುತ್ತಾಳೆ. ಇತ್ತ ತೊಟ್ಟಿಲಲ್ಲಿ ಶಿಶುವನ್ನು ಕಾಣದ ವಾಲ್ಮೀಕಿ ಮುನಿಗಳು ಏನೋ ಅನಾಹುತವಾಗಿದೆ ಎಂದು ಭಾವಿಸಿ ಅದರ ಪರಿಣಾಮ ಸೀತೆಯ ಮೇಲೆ ಘೋರವಾದೀತೆಂದು ಊಹಿಸಿ ದರ್ಭೆಯೊಂದನ್ನು ಮಂತ್ರಿಸಿ ಶಿಶುವೊಂದನ್ನು ಸೃಷ್ಟಿಸಿ ತೊಟ್ಟಿಲಲ್ಲಿಡುವರು. ಅವನೇ ಕುಶನೆಂದು ಹೆಸರಾಗುವನು. ಕಾಡಿನಲ್ಲಿ ಬೇಟೆಯಾಡುತ್ತಿದ್ದ ಲವ-ಕುಶರನ್ನು ಕಂಡ ಶೂರ್ಪನಖಿ ಅವರ ನಾಶಕ್ಕಾಗಿ ಯೋಚಿಸಿ ವಿಭೀಷಣನನ್ನು  ಅವರೊಂದಿಗೆ ಯುದ್ಧಕ್ಕೆ ಕಳಿಸುವಳು. ಮೊದಲು ಅವರೊಂದಿಗೆ ಕಾದಿದ ಅವನು, ಅವರು ತನಗೆ ಪೂಜ್ಯರಾದ ಸೀತಾದೇವಿಯ ಮಕ್ಕಳೆಂದು ತಿಳಿದಾಗ ಯುದ್ಧ ಬಿಟ್ಟು ಮರಳಿ ಹೋಗುತ್ತಾನೆ. ನಿರಾಶಳಾದ ಶೂರ್ಪನಖಿ ಕೊರವಂಜಿಯ ವೇಶತೊಟ್ಟು ರಾಮನಲ್ಲಿಗೆ ಹೋಗಿ ಕಾಡಿನಲ್ಲಿರುವ ಮಕ್ಕಳಿಬ್ಬರನ್ನು ಕೊಂದರೆ ರಾಜ್ಯಕ್ಕೆ ಒಳಿತಾಗುವದೆಂದು ಕಣಿ ಹೇಳುವಳು. ನಂಬಿದ ರಾಮನು ಮಕ್ಕಳನ್ನು ಕರೆತರಲು ಲಕ್ಷ್ಮಣನನ್ನು ಕಳಿಸುವನು. ಅವನು ಲವನನ್ನು ಹಿಡಿದು ತರುವನು. ಕುಶನು ಭರತ, ಶತ್ರುಘ್ನರೊಂದಿಗೆ ಕಾದಾಡುವನು ಹಾಗೂ ಸೀತೆಕೊಟ್ಟ ಮುದ್ರೆಯುಂಗುರವನ್ನು ತೆಗೆದುಕೊಂಡು ಬಂದು ಸೀತೆಯ ಸಖಿ ಚಂದ್ರಮತಿಗೆ ನೀಡಿದಾಗ ಆಕೆ ಅದರ ಸಹಾಯದಿಂದ ಬಂಧನದಲ್ಲಿದ್ದ ಲವ ಮುಕ್ತನಾಗುವಂತೆ ಮಾಡುವಳು. ಲವನೊಂದಿಗೆ ಸ್ವತಃ ರಾಮನೇ ಯುದ್ಧ ಮಾಡುವನು. ಈ ಮಧ್ಯೆ ಚಂದ್ರಮತಿ ತಂದೆ-ಮಕ್ಕಳ ಸಂಬಂಧದ ವಿಚಾರವನ್ನು ಕೌಸಲ್ಯೆಗರುಹಿದಾಗ ಆಕೆ ಲಕ್ಷ್ಮಣನೊಂದಿಗೆ ರಾಮನಲ್ಲಿಗೆ ಬಂದು ಯುದ್ಧವನ್ನು ನಿಲ್ಲಿಸುವಳು. ತಂದೆ-ಮಕ್ಕಳು ಒಂದಾಗುವರು ಹಾಗೂ ಸೀತೆಯನ್ನು ಕರೆತಂದು ಸುಖವಾಗಿರುವರು.

ವೈಶಿಷ್ಟ್ಯಗಳು  :

ಇದೊಂದು ವಿಶಿಷ್ಟ ಪ್ರಸಂಗ. ಜನಪದ ಕತೆಯೊಂದನ್ನು ಆಧರಿಸಿ, ಹೊಸ ಪ್ರಸಂಗವನ್ನು ಕವಿ ಇಲ್ಲಿ ಹೆಣೆದಿದ್ದಾರೆ. ಕುಶಜನನದಂತಹ ಸಂಗತಿಯನ್ನು ಆನಂದರಾಮಾಯಣದಿಂದ ಪಡೆದಿರಬಹುದು.  ಇಲ್ಲಿ ಸೀತಾಪರಿತ್ಯಾಗಕ್ಕೆ ಅಗಸನ ಪ್ರಸಂಗ ಕಾರಣವಾಗಿರದೇ ಶೂರ್ಪನಖಿಯ ಹಳೆಯ ಸೇಡಿನ ಮುಂದುವರಿಕೆಯೇ ಕಾರಣವಾಗಿದೆ.  ಶೂರ್ಪನಖಿಯ ವಿವಿಧ ರೂಪಗಳು, ಮಾಯಾತಂತ್ರಗಳು, ಯುದ್ಧಗಳು – ಮುಂತಾದವುಗಳಿಂದ ರಮ್ಯಾದ್ಭುತ ಲೋಕ ನಿರ್ಮಾಣವಾಗುತ್ತದೆ. ಸಾಕಷ್ಟು ಪ್ರಯೋಗಗಳನ್ನು ಕಂಡಿರುವ ಪ್ರಸಂಗವಿದು.

 

. ರಾಧಾ ವಿಲಾಸ

ಕವಿ ವಿಚಾರ :

ಈ ಪ್ರಸಂಗವನ್ನು ಬರೆದ ಕವಿ ಮಟ್ಟಿ ವಾಸುದೇವ ಪ್ರಭು. ಭಾಗವತದ ಕಥೆಯನ್ನು ಆಧರಿಸಿ ಈ ಪ್ರಸಂಗವನ್ನು ರಚಿಸಿರುತ್ತಾರೆ. ಮುಂಬಯಿಯ ಪದವೀಧರ ಯಕ್ಷಗಾನ ಸಮಿತಿಯವರು ತಮ್ಮ ೮ನೇ ಸಂಪುಟದಲ್ಲಿ ಇದನ್ನು ಪ್ರಕಟಿಸಿರುತ್ತಾರೆ.

ಕಥಾ ಸಾರಾಂಶ :

ಶ್ರೀ ಕೃಷ್ಣ ಲೀಲೆಯನ್ನು ಚಿತ್ರಿಸುವ ಪ್ರಸಂಗವಿದು. ಜಾರ, ಚೋರನಾಗಿ ತನ್ನ ಅಟ್ಟುಳಿಯಿಂದ ಗೋಕುಲದ ನಾರಿಯರನ್ನೆಲ್ಲ ಪೀಡಿಸುತ್ತಿದ್ದ ಕೃಷ್ಣನ ಕುರಿತಾಗಿ ಗೋಪಿಕೆಯರೆಲ್ಲ ಬಂದು ಯಶೋದೆಯಲ್ಲಿ ದೂರು ಹೇಳಿದರೆ ಕೃಷ್ಣ ತನ್ನ ಮುದ್ದು ಮಾತುಗಳಿಂದ ಯಶೋದೆಯನ್ನು ಮರುಳು ಮಾಡಿ ತನ್ನ ಮೇಲೆ ಚಾಡಿ ಹೇಳುವ ಈ ಗೋಪಿಕೆಯರೂ ಹಾಗೂ ಅಣ್ಣ (ದಾಯಾದಿ) ಬಲರಾಮರೇ ತಪ್ಪಿತಸ್ಥರೆಂದು ತಿರುಗಿಸಿ ಹೇಳುವನು. ಗೋಪಿ ಚಾಡಿ ಹೇಳ ಬಂದವರನ್ನೇ ಗದರಿಸಿ ಕಳುಹುವಳು. ಮತ್ತೆ ದಾರಿಯಲ್ಲಿ ಎದುರಾದ ರಾಧೆಯನ್ನು ಮಾತಿನಿಂದ ಮರುಳು ಮಾಡಿ ಯಮುನಾ ತೀರದಲ್ಲಿ ಅವಳೊಂದಿಗೆ ರಮಿಸುವನು. ಅನಂತರದಲ್ಲಿ ರಾಧೆ ಕೃಷ್ಣನ ವಿರಹದಿಂದ ಪರಿತಪಿಸುವಳು. ಚಂದ್ರಾನನೆಯೊಬ್ಬಳನ್ನು ಕೃಷ್ಣನನ್ನು ಕರೆತರಲು ಕಳಿಸುವಳು. ಕೃಷ್ಣ ಅವಳೊಂದಿಗೂ ಕಾಮನಾಟವಾಡಿ ಕಳಿಸುವನು. ವಿಷಯ ತಿಳಿದ ರಾಧೆ ಮತ್ತಷ್ಟು ತಾಪ ಅನುಭವಿಸುವಳು. ಅವಳ ಕಷ್ಟವನ್ನರಿತ ನಾರದರು ಬಂದು ತಾನು ರಮಾಧವನನ್ನು ಕರೆತರುವೆನಂದು ವೃಂದಾವನಕ್ಕೆ ಸಾಗುವರು. ರಾಧೆಯ ವಿರಹಾವಸ್ಥೆಯನ್ನು ನಾರದರಿಂದ ತಿಳಿದ ಕೃಷ್ಣ ಅವಳಲ್ಲಿಗೆ ಹೋಗಿ ಅವಳಿಗೆ ಸಂತಸ ನೀಡುವನು. ಇತ್ತ ನಾರದರು ನಂದನ ಅರಮನೆಗೆ ಹೋಗಿ ಕೃಷ್ಣನ ಶೃಂಗಾರದಾಟಗಳ ವಿಚಾರ, ಹಾಗೂ ರಾಧೆಯೊಂದಿಗೆ ಆತನ ಸರಸದ ವಿಚಾರಗಳನ್ನು ಅರುಹುವರು. ಆಗ ಕೃಷ್ಣನನ್ನು ಕರೆದು ತರಲು ಚಾರರಿಗೆ ತಿಳಿಸಿ ಆ ಚಾರರಿಗೆ ಕೃಷ್ಣನತಾವನ್ನು ತೋರಿಸುವಂತೆ ನಾರದರನ್ನು ಕೇಳುವಳು. ಅವರೆಲ್ಲ ಕೂಡಿ ಯಮುನೆಯ ತೀರಕ್ಕೆ ನಡೆದರೆ ಅಲ್ಲಿ ರಾಧೆ ಮಾತ್ರವೇ ಇದ್ದು ಕೃಷ್ಣ ಅದೃಶ್ಯನಾಗಿ ಬಿಡುವನು. ಅವನಿಗಾಗಿ ಪರಿತಪಿಸುತ್ತಿದ್ದ ರಾಧೆಯಲ್ಲಿ ಕೃಷ್ಣನನ್ನು ಧ್ಯಾನಿಸುವಂತೆ ಆ ಚಾರರಿಗೆ ನಾರದರು ತಿಳಿಸುವರು. ಅವಳ ಭಕ್ತಿಯ ಕರೆಗೆ ಓ ಗೊಟ್ಟು ಪ್ರತ್ಯಕ್ಷನಾದ ಶ್ರೀ ಕೃಷ್ಣ “ಸೌಂದರಾಂಗಿಯೆ ನಡೆದರೆ ನಿನ್ನ ವಂದೇಕ್ಷಣ…. ಅಗಲಿ ನಿಂದಿರೆನೆನುತ” ಭಾಷೆಯನ್ನು ಕೊಟ್ಟು ಕಳಿಸಿ ತಾನು ನಾರದರೊಂದಿಗೆ ನಂದಗೋಕುಲಕ್ಕೆ ತೆರಳುವನು. ನಂದಯಶೋದೆಯರಿಗೆ ಆನಂದ ನೀಡುವನು.

ವೈಶಿಷ್ಟ್ಯಗಳು :

ಗಾತ್ರದಲ್ಲಿ ಚಿಕ್ಕದಾಗಿರುವ ಈ ಪ್ರಸಂಗದಲ್ಲಿ ಹರಿಯ ಶೃಂಗಾರ ಲೀಲೆಯ ಚಿತ್ರಣವಿದೆ, ಚಾರರ ಮಾತಿನಲ್ಲಿ ಅನ್ಯ ಭಾಷೆಯ ಪದಗಳು ಮಾತ್ರ ಇರದೆ ಮೂರು ಪದ್ಯಗಳನ್ನೂ ಬೇರೆ ಭಾಷೆಯಲ್ಲಿಯೇ ಬರೆಯಲಾಗಿದೆ.

 

೧೦. ಕೃಷ್ಣಾರ್ಜುನ ಕಾಳಗ

ಕವಿ ವಿಚಾರ :

ಈ ಪ್ರಸಂಗದ ಕವಿ ಹಳೆಮಕ್ಕಿ ರಾಮನೆಂಬುವನು. ಇವನು ಸಾಗರ ತಾಲೂಕು ಕರೂರು ಸೀಮೆಯ ಶರಾವತಿ ತೀರದ ಊರಿನವನು. ಇವನ ಕೃಷ್ಣಾರ್ಜುನ ಕಾಳಗದ ತಾಳೆಗರಿ ಪ್ರತಿಯ ಕಾಲ ೧೬೧೮. ಇದೇ ಕಥೆಯನ್ನಾಧರಿಸಿದ ಬೇರೆ ಮೂರು – ನಾಲ್ಕು ಪ್ರಸಂಗಗಳಿದ್ದು ಈ ರಾಮನ ಪ್ರಸಂಗ ಬಡಗುಮಟ್ಟು ಕೃಷ್ಣಾರ್ಜುನ ಕಾಳಗ ಎಂದು ಪ್ರಸಿದ್ಧಿ ಪಡೆದಿದೆ.

ಕಥಾ ಸಾರಾಂಶ :

ದ್ವಾರಕಾವತಿಯಲ್ಲಿ ಸುಖ-ಸಂಶೋಷದಿಂದಿದ್ದ ಶ್ರೀಕೃಷ್ಣನು ಒಂದು ದಿನ ಯಮುನಾ ನದಿಯ ದಡದಲ್ಲಿ ಸೂರ್ಯನಿಗೆ ಅರ್ಘ್ಯವನ್ನು ಕೊಡುವ ಸಮಯದಲ್ಲಿ ಆಕಾಶ ಮಾರ್ಗದಲ್ಲಿ ಸಂಚರಿಸುತ್ತಿದ್ದ ಗಯನೆಂಬ ಗಂಧರ್ವನ ಕುದುರೆಯ ಬೆವರು ಅವನ ಅಂಜಲಿಯಲ್ಲಿ ಬೀಳುವುದು. ಕೋಪಾವಿಷ್ಟನಾದ ಕೃಷ್ಣ ಎಂಟು ದಿನದೊಳಗೆ ಗಯನ ಶಿರಚ್ಛೇದಿಸುವುದಾಗಿ ಪ್ರತಿಜ್ಞೆ ಮಾಡುವನು. ಭಯಭೀತನಾದ ಗಯ ತನ್ನ ಪ್ರಾಣ ರಕ್ಷಣೆಗಾಗಿ ಮಹಾಶೇಷ, ಬ್ರಹ್ಮ, ದೇವೇಂದ್ರ, ಅಗ್ನಿಯರು, ನಿರುತಿ, ವರುಣ ವಾಯು ಮತ್ತು ಸೂರ್ಯ ಚಂದ್ರರಲ್ಲಿ ಬೇಡುವನು. ಯಾರಿಂದಲೂ ರಕ್ಷಣೆ ಸಿಗದಾಗ, ಪರಮೇಶ್ವರನನ್ನು ಪ್ರಾರ್ಥಿಸಿದಾಗಲೂ ನಿರಾಶೆಯಾಗುವುದು. ಆದರೆ ಪಾರ್ವತಿಯು ಕರುಣಿಪಟ್ಟು ನಾರದರನ್ನು ಕೇಳಲು ತಿಳಿಸುವಳು. ಅಂತೆಯೇ ನಾರದರ ಸಲಹೆಯಂತೆ ಅರ್ಜುನನಲ್ಲಿಗೆ ಹೋಗುವನು. ಅವನಿಗೆ ವಿಚಾರ ತಿಳಿಸದೆ ಅಭಯ ವಚನ ಪಡೆದು ನಂತರ ಘಟನೆ ವಿವರಿಸುವನು. ಇತ್ತ ಯಾದವರಿಂದ ಗಯನನ್ನು ಹುಡುಕಿಸಿ, ಕಾಣದೆ ಚಿಂತಿತನಾದ ಕೃಷ್ಣ ನಾರದರಿಂದ ಅವನು ಕಾಮ್ಯಕವನದಲ್ಲಿರುವ ವಿಚಾರ ತಿಳಿದು, ಸುಭದ್ರೆಯನ್ನು ಕರೆದು, ಅರ್ಜುನನಲ್ಲಿಗೆ ಹೋಗಿ ಗಯನನ್ನು ಬಿಡುವಂತೆ ತಿಳಿಸಲು ಹೇಳುವನು. ವಿವರ ತಿಳಿದ ಸುಭದ್ರೆ ತನ್ನ ಓಲೆಕಾಯುವಂತೆ ಕೃಷ್ಣನನ್ನು ಬೇಡಿದಾಗ, ರುಕ್ಮಿಣಿ ಮತ್ತು ಸುಭದ್ರೆಯರ ನಡುವೆ ಒಂದು ಲೋಕರೂಢಿಯ ಕಲಹವೇರ್ಪಡುವದು. ನಂತರ ಪತಿಯಲ್ಲಿಗೆ, ಅಭಿಮನ್ಯುವಿನೊಂದಿಗೆ ತೆರಳಿದ ಸುಭದ್ರೆಗೆ ಅರ್ಜುನನಿಂದ – ‘ಕೊಟ್ಟ ಮಾತಿಗೆ ತಪ್ಪದ’ ನಿರ್ಧಾರವೇ ದೊರೆಯುವದು. ಆಗ ಅಭಿಮನ್ಯುವು ಸಹ ಅದನ್ನೇ ಪ್ರತಿಪಾದಿಸುವನು. ಅಣ್ಣ ಕೃಷ್ಣನಲ್ಲಿಗೆ ಹೋಗಿ ಅರ್ಜುನನ ನಿರ್ಧಾರ ತಿಳಿಸಿದ ಸುಭದ್ರೆ ತನ್ನನ್ನು, ಅಭಿಮನ್ಯುವನ್ನು ನೋಡಿ ತನ್ನವರನ್ನು ಕಾಯಬೇಕೆಂದು ಬೇಡುವಳು. ಅವಳಿಗೆ ಅಭಯವಿತ್ತ ಕೃಷ್ಣ, ದಾರುಕನ ಮುಖಾಂತರ ಪಾಂಡವರಿಗೆ ಪತ್ರ ಕಳಿಸುವನು ಅದಕ್ಕೆ ಪ್ರತಿಯಾಗಿ ದಾರುಕನನ್ನು ಬಡಿದು ಕೊರಳಿಗೆ ಪತ್ರಕಟ್ಟಿ ಕಳಿಸಿದಾಗ ಯುದ್ಧ ನಿರ್ಧಾರವಾಗುವುದು. ದ್ರುಪದ, ಘಟೋತ್ಕಚರೂ ತಮ್ಮ ತಮ್ಮ ಸೇನೆಗಳೊಂದಿಗೆ ಬಂದು ಪಾಂಡವರ ಜೊತೆಗೂಡುವರು. ಕೌರವನೂ ಕರ್ಣ, ಶಕುನಿ, ಭೀಷ್ಮ ವಿದುರಾದಿಗಳೊಡನೆ ತಾನು ಪಾಂಡವರ ಸಹಾಯಕನೆಂದು ತೋರಿಸುವುದಕ್ಕಾಗಿ ಬಂದು ಸೇರುವನು. ಘೋರವಾದ ಯುದ್ಧ ನಡೆದಾಗ, ಅರ್ಜುನನು ಗಯನನ್ನು ತನ್ನ ಬತ್ತಳಿಕೆಯ ಒಳಗಿಟ್ಟು ಕಾದಾಡುವನು. ಭೀಕರ ಹೋರಾಟದ ನಡುವೆ ಕೃಷ್ಣನು ಬತ್ತಳಿಕೆಯ ಒಳಗಿರುವಂತೆಯೇ ಅರ್ಜುನನಿಗೆ ತಿಳಿಯದಂತೆ ಗಯನ ರುಂಡವನ್ನು ಕತ್ತರಿಸಿ ಬಿಡುವನು. ಕತ್ತಲು ಕವಿದಾಗ ಅರ್ಜುನನು ತಾನೇ ಗೆದ್ದೆನೆಂದು ಕೃಷ್ಣನಿಗೆ ಬೆಂಕಿಗೆ ಬೀಳಲು ಹೇಳುವನು. ಕೃಷ್ಣ ತಾನು ‘ಅಡಿ ತಪ್ಪಿದವನಲ್ಲ’ ವೆನ್ನುವನು. ಕೊನೆಗೆ ಬತ್ತಳಿಕೆ ತೆಗೆದಾಗ ಕೃಷ್ಣನ ಮೋಸ ಬಯಲಾಗುವುದು. ಅರ್ಜುನ-ಕೃಷ್ಣನನ್ನು ಜರೆಯುತ್ತ ಕೃಷ್ಣನನ್ನು ಸಂಹರಿಸಿಯೇ ತಾನು ಸಾಯುವೆನೆಂದು ಪಾಶುಪತಾಸ್ತ್ರವನ್ನು ತೆಗೆಯುವನು. ಕೃಷ್ಣನು ಶಾರ್ಙ್ಗವವನ್ನು ಧರಿಸುವನು. ಆಗ ದೇವತೆಗಳೆಲ್ಲ ಬಂದು ಕೃಷ್ಣಾರ್ಜುನರ ಕೋಪವನ್ನು ತಣಿಸುವರು. ಸತ್ತ ಗಯನನ್ನು ಪರಮೇಶ್ವರನು ಬದುಕಿಸುವನು. ಕೃಷ್ಣನ ಪ್ರತಿಜ್ಞೆಯೂ ತೀರಿ, ಅರ್ಜುನನ ಮಾತೂ ಉಳಿದು ಕೊನೆಗೆ ಮಂಗಲವಾಯಿತು.

ವೈಶಿಷ್ಟ್ಯಗಳು :

ಇಲ್ಲಿ, ಮುಂದೆ ಕುರುಕ್ಷೇತ್ರವನ್ನೆದುರಿಸಲು ‘ಪಾರ್ಥನ ಶಕ್ತಿ ಸಾಮರ್ಥ್ಯಗಳೇನು’ ಎಂಬುದನ್ನು ಪರೀಕ್ಷಿಸಲು ಕೃಷ್ಣ ಹೂಡಿದ ಆಟವಿದೆಂಬ ಸೂಚನೆ ಎಲ್ಲಿಯೂ ಇಲ್ಲದಿರುವುದರಿಂದ ಪ್ರಸಂಗದುದ್ದಕ್ಕೂ ಕುತೂಹಲ, ಕಾತುರ, ಬೆರಗುಗಳು ಉಳಿದುಕೊಂಡು ಬರುತ್ತವೆ.

ಜಾನಪದ ಸಂವೇದನೆಯ ಮೂಲಸತ್ತ್ವವನ್ನು ಜೀವಾಳವಾಗಿಸಿಕೊಂಡ ಈ ಪ್ರಸಂಗವು ತನ್ನ ಸರಳತೆ, ಭಾವ ಪೂರ್ಣತೆಗಳಿಂದ ಜನಪ್ರಿಯತೆ ಪಡೆದಿದೆ. ಸಾಂಸಾರಿಕವಾದ ಭಾವತೀವ್ರತೆಗಳು ಕಲಹ, ಮುನಿಸುಗಳು ಯಥಾರ್ಥವಾಗಿ ಚಿತ್ರಿತವಾಗಿವೆ.

 

೧೧. ವೀರಮಣಿ ಕಾಳಗ

ಕವಿ ವಿಚಾರ :

ಹಲಸಿನಹಳ್ಳಿ ನರಸಿಂಹ ಶಾಸ್ತ್ರಿಗಳು, ಇವರು ೧೯೩೦ರವರೆಗೆ ಬದುಕಿದ್ದವರು. ೩೦ಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗಗಳನ್ನು ರಚಿಸಿ ಖ್ಯಾತಿ ಪಡೆದರು. “ವರತುಂಗಾ ದಕ್ಷಿಣಾಕುಲ…… ಉರಗೇಂದ್ರ ಶಾಸ್ತ್ರಿಯ ತರಳನು ನರಹರಿ ವಿರಚಿಸಿಹೆನು ತಿಳಿದಂತೆ” ಎಂದು ಕೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಹಲಸಿನಹಳ್ಳಿ ಗ್ರಾಮದ ನಾಗೇಂದ್ರ ಶಾಸ್ತ್ರಿಯ ಮಗ. ಭೀಷ್ಮೋತ್ಪತ್ತಿ, ಭೀಷ್ಮವಿಜಯ, ಭೀಷ್ಮಾರ್ಜುನ ಕಾಳಗ, ದೇವಯಾನಿ ಕಲ್ಯಾಣ, ಶಲ್ಯಪರ್ವ, ಚಂದ್ರಹಾಸ ಚರಿತೆ, ವಿದ್ಯುನ್ಮತಿ ಕಲ್ಯಾಣ, ಕೌಶಿಕಚರಿತ್ರೆ ಮುಂತಾದ ಪ್ರಸಂಗಗಳು ಬಹಳ ಪ್ರಸಿದ್ಧಿ ಪಡೆದಿದ್ದು ಪ್ರದರ್ಶನದಲ್ಲಿಯೂ ತುಂಬಾ ಹೆಸರುಗಳಿಸಿವೆ.

ಕಥಾ ಸಾರಾಂಶ :

ಈ ಪ್ರಸಂಗದಲ್ಲಿ ಎರಡು ಘಟನೆಗಳು ಸೇರ್ಪಡೆಯಾಗಿವೆ. ಮೊದಲನೆಯದು ಕುಮುದಿನಿಯ ಕಥೆ ರಾಮ – ರಾವಣ ಯುದ್ಧದ ನಂತರದಲ್ಲಿ ಶ್ರೀರಾಮನು ರಾವಣ ಕುಂಭಕರ್ಣಾಧಿಗಳ ಹತ್ಯಾದೋಶ ಪರಿಹಾರಕ್ಕಾಗಿ ವಶಿಷ್ಠರ ಮಾರ್ಗದರ್ಶನದಲ್ಲಿ ಅಶ್ವಮೇಧ ಯಾಗವನ್ನು ಕೈಗೊಳ್ಳಲು ನಿರ್ಧರಿಸುವನು. ಶತ್ರುಘ್ನ ಹಾಗೂ ಭರತನ ಮಗ ಪುಷ್ಕಳನ ಬೆಂಗಾವಲಿನಲ್ಲಿ ಯಜ್ಞಾಶ್ವವು  ಉತ್ತರದ ಕಡೆ ನಡೆಯುವುದು. ರಾಜರುಗಳಿಂದ ಕಾಣಿಕೆ ಸ್ವೀಕರಿಸುತ್ತಾ ಮುನ್ನಡೆದಿರುವಾಗ ಒಮ್ಮೆ ಇದ್ದಕ್ಕಿದಂತೆ ಯಮುನೆಯಲ್ಲಿ ಹೊಕ್ಕ ಹಯವು ಕಣ್ಣಿಗೆ ಕಾಣದಂತಾಗುವುದು. ದಿಕ್ಕು ಗಾಣದ ಶತ್ರುಘ್ನನು ನಾರದರನ್ನು ಸ್ಮರಿಸಲಾಗಿ ಅವರು ಬಂದು ಈ ನೀರಿನೊಳಗೆ ಮಾರಿಚನು ತನ್ನ ಮಗಳು ಕುಮುದಿನಿಗಾಗಿ ನಿರ್ಮಿಸಿದ ಭವ್ಯವಾದ ಪುರವಿರುವ ವಿಚಾರವನ್ನು ತಿಳಿಸುವರು. ಶ್ರೀರಾಮನ ಭಕ್ತೆಯಾದ ಕುಮುದಿನಿಯು ರಾಮನನ್ನು ಒಲಿಸಿಕೊಳ್ಳಲು ಸಾಧನೆಗೈಯುತ್ತಿರುವುದಾಗಿ ಅವಳೊಂದಿಗೆ ಪುರವನ್ನು ರಕ್ಷಿಸಲು ಮದನಾಕ್ಷಿ ತಾರಾವಳಿಯ ಸಹಸ್ರ ನಾರಿಯರೂ ಇರುವುದನ್ನು ಅರುಹುವನು. ತಕ್ಷಣ ಶತ್ರುಘ್ನನು ಸೈನ್ಯದೊಂದಿಗೆ ಹೋಗಿ ಕುದುರೆ ಕಟ್ಟಿದ ಮದನಾಕ್ಷಿ ತಾರಾವಳಿಯರನ್ನು ಸೋಲಿಸಿ ಕೊನೆಗೆ ಕುಮುದಿನಿಯ ಶ್ರೀರಾಮ  ಭಕ್ತಿಯನ್ನು ಮನಗಂಡು ಅವಳನ್ನು ಮುದ್ರೆಯುಂಗುರ ಕೊಟ್ಟು ಸಾಕೇತಕ್ಕೆ ಕಳುಹುವನು.

ಎರಡನೆಯದೇ ವೀರಮಣಿಯ ಕಥೆ – ಜ್ಯೋತಿರ್ಮೇಧ ಪುರದರಸು ವೀರಮಣಿ ಮಕ್ಕಳು ರುಕ್ಮಾಂಗದ ಮತ್ತು ಶುಭಾಂಗ. ಇವರಿಬ್ಬರೂ ಶತ್ರುಘ್ನನು ಬೆಂಗಾವಲಾಗಿರುವ ಯಜ್ಞಾಶ್ವವನ್ನು ಕಟ್ಟುವರು. ಶತ್ರುಘ್ನ ಅವರನ್ನು ಸೋಲಿಸಲಾಗಿ ಆ ಪುರದಲ್ಲಿ ಸುಸ್ಥಿರನಾಗಿದ್ದ ಶಿವನು ಶತ್ರುಘ್ನನಿಗೆದುರಾಗಿ ಅವನನ್ನು ಸೋಲಿಸುವನು. ಆಗ ಮಾರುತಿಯು ಪ್ರವೇಶಿಸಿ ಶಿವನೊಂದಿಗೆ ಭೀಕರವಾಗಿ ಹೋರಾಡುವನು. ಅವರಿಬ್ಬರ ಹೋರಾಟವು ಅಂತ್ಯಕಾಣದಾದಾಗ ಇನ್ನು ಸಾವಿರ ವರುಷವಾದರೂ ಯಾರಿಗೂ ಜಯಸಿಗದೆಂದು ಯೋಚಿಸಿದ ಈಶ್ವರನು ಹನುಮನೊಂದಿಗೆ ಮಾತನಾಡಿ ಅವನ ಶೌರ್ಯವನ್ನು ಹೊಗಳಿ ಯುದ್ಧನಿಲ್ಲಿಸುವದೇ ಒಳ್ಳೆಯದೆಂದು ಸೂಚಿಸುವನು. ಮಾರುತಿಯು ಸಂಜೀವಿನಿಯನ್ನು ತಂದು ಶತ್ರುಘ್ನರಾದಿಯಾಗಿ ತಮ್ಮ ಸೈನ್ಯವನ್ನು ಬದುಕಿಸಲು ವಿದ್ಯುಕ್ತನಾದಾಗ ಪರಮೇಶ್ವರನು ‘ನೀನು ವೀರಮಣಿಯ ಬಲವನ್ನು ಬದುಕಿಸದಿದ್ದರೆ ನಿನಗೆ ಯಜ್ಞಾಶ್ವವು ಸಿಗಲಾರ’ದೆಂದು ಹೇಳಿ ಎರಡೂ ಕಡೆಯ ಸೈನ್ಯವು ಸಜೀವಗೊಳ್ಳುವಂತೆ ಮಾಡುವನು.

ವೈಶಿಷ್ಟ್ಯಗಳು :

ಹಲವಾರು ಪ್ರಸಂಗಗಳನ್ನು ಬರೆದು ಪಳಗಿದ ಈ ಕವಿಯ ಭಾಷೆ ವಿಭಿನ್ನ ಸನ್ನಿವೇಶ ಸಂದರ್ಭಗಳಿಗೆ ತಕ್ಕಂತೆ ಇಲ್ಲಿ ಬಳಕೆಗೊಂಡಿದೆ. ದೂತ-ಚಾರಕ ಮುಂತಾದವರ ಮಾತುಗಳ ನಡುವೆ ಲಕ್ಡಿ, ಸಿಫಾಯ ಮುಂತಾದ ಉರ್ದು, ಹಿಂದೂಸ್ಥಾನಿ ಪದ ಪ್ರಯೋಗಗಳನ್ನು, ತಾತ್ವಿಕ ವಿಚಾರಗಳ ನಿರೂಪಣೆಯಿರುವಾಗ ಪ್ರೌಢವಾದ ಭಾಷೆಯನ್ನು ಪ್ರಯೋಗಿಸಲಾಗಿದೆ.

ಈ ವಿಶಿಷ್ಟ ಪ್ರಸಂಗಗಳ ಸಂಪುಟವನ್ನು ಸಿದ್ಧಪಡಿಸುವ ಅಪೂರ್ವ ಅವಕಾಶವನ್ನು

ನನಗೆ ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಾನಪದ ಮತ್ತು ಯಕ್ಷಗಾನ ಅಕಾಡೆಮಿ,

ಡಾ.ಹಿ.ಶಿ. ರಾಮಚಂದ್ರೇಗೌಡರು ಡಾ|| ಚಿನ್ನಪ್ಪ ಗೌಡರು ಇವರುಗಳಿಗೆ ಹಾಗೂ ಈ ಕೆಲಸದಲ್ಲಿ ನನಗೆ ಸಹಕಾರ ನೀಡಿದ ಶ್ರೀ ಶಂಭು ಹೆಗಡೆ ಕೆರೆಮನೆ. ಶ್ರೀ ವಿಷ್ಣು ಭಟ್ಟ ಪಾದೇಕಲ್ಲು, ಪ್ರಸಂಗಗಳನ್ನು ದೊರಕಿಸುವಲ್ಲಿ ಸಹಾಯ ಮಾಡಿದ ಡಾ|| ಎಂ.ಜಿ. ಹೆಗಡೆ, ಗಡಿಮನೆ ಪಟೇಲರು, ಶ್ರೀ ತಿಮ್ಮಪ್ಪ ಹೆಗಡೆ ಬಾಳೆಹದ್ದ,  ಶ್ರೀ ಸುಬ್ರಾಯ ಹೆಗಡೆ ಕೆರೆಕೊಪ್ಪ ಇವರಿಗೆಲ್ಲ ನನ್ನ ಧನ್ಯವಾದಗಳು.

ಡಾ|| ವಿಜಯನಳಿನಿ ರಮೇಶ್
ಶಿರಸಿ ಉ.ಕ.