ಕರ್ನಾಟಕದ ವಿಶ್ವವಿದ್ಯಾಲಯ ಪ್ರಾರಂಭವಾಗಿ ೪೩ ವರ್ಷಗಳಾಗಿವೆ. ಕನ್ನಡ ಅಧ್ಯಯನ ಪೀಠದ ಜಾನಪದ ಸಮ್ಮೇಳನ ಪ್ರಾರಂಭವಾಗಿ ಇಲ್ಲಿಗೆ ೨೦ ವರ್ಷಗಳು ಸಂದಿವೆ. ಯಾವುದೇ ಸಂಸ್ಥೆ ಈ ರೀತಿ ನಿರಂತರವಾಗಿ ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡು ಅದನ್ನು ನಡೆಸಿಕೊಂಡು ಬಂದಾಗ ಅದಕ್ಕೆ ಹೆಮ್ಮೆ ಅನಿಸುತ್ತದೆ. ೧೯೭೩ರಲ್ಲಿ ಪ್ರಥಮ ಜಾನಪದ ಸಮ್ಮೇಳನದ ಕಾರ್ಯಸಿದ್ಧತೆ ನಡೆದಾಗ ನಾನು ಎಂ.ಎ. ಪ್ರಥಮ ವರ್ಷದ ವಿದ್ಯಾರ್ಥಿ ಆಗಿದ್ದೆ. ಆಗ ರಾತ್ರಿಯೆಲ್ಲ ನನ್ನ ವಿಭಾಗದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಸಮ್ಮೇಳನದ ಯಶಸ್ವಿಗಾಗಿ ದುಡಿಯುತ್ತಿದ್ದುದನ್ನು ಕಂಡ ನನಗೆ ಒಂದು ರೀತಿಯ ಆಶ್ಚರ್ಯ ಹಾಗೂ ಸಂತಸ. ಡಾ. ಶಿವರಾಮ ಕಾರಂತರ ಅಧ್ಯಕ್ಷತೆಯಲ್ಲಿ ಪ್ರಥಮ ಜಾನಪದ ಸಮ್ಮೇಳನ ಯಶಸ್ವಿಯಾಗಿ ಮುಗಿದಾಗ ಎಲ್ಲರ ಮನಸ್ಸಿನಲ್ಲಿಯೂ ಒಂದು ರೀತಿಯ ಧನ್ಯತೆಯ ಭಾವ ಮೂಡಿತ್ತು. ಆಮೇಲೆ ಕಳೆದ ಎರಡು ದಶಕಗಳಲ್ಲಿ ಎಷ್ಟೋ ಸಮ್ಮೇಳನಗಳು ನಡೆದಿವೆ, ಎಷ್ಟೆಲ್ಲ ಕೆಲಸ ಆಗಿದೆ, ಎಷ್ಟೆಲ್ಲ ಜನ ದುಡಿದಿದ್ದಾರೆ ಎಂಬುದನ್ನು ನೆನದರೇ ಆಶ್ಚರ್ಯವಾಗುತ್ತದೆ. ಆದರೆ ನಮ್ಮ ಸಾಧನೆಯನ್ನು, ನಮ್ಮ ದುಡಿಮೆಯನ್ನು ನಾವು ಸರಿಯಾಗಿ ಪ್ರಚಾರ ಮಾಡಲಿಲ್ಲವೆಂಬ ಭಾವನೆ ಸದಾ ನನ್ನನ್ನು ಕಾಡುತ್ತದೆ.

ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿ ಹುಟ್ಟಿ ಈಗ ಕೇವಲ ಒಂದು ದಶಕಮಾತ್ರ ಸಂದಿದೆ. ಇದರ ಎರಡರಷ್ಟು ವಯಸ್ಸಿನ ನಮ್ಮ ಸಮ್ಮೇಳನದ ಸಾಧನೆಯ ಬಗ್ಗೆ ಎರಡು ಮಾತುಗಳನ್ನು ಹೇಳಿದರೆ ತಪ್ಪಾಗಲಾರದು. ಈಗಾಗಲೇ ಕರ್ನಾಟಕದ ಹಿರಿಯ ಕಿರಿಯ ಜಾನಪದ ವಿದ್ವಾಂಸರನ್ನು ಆಮಂತ್ರಿಸಿ ಅವರ ವಿಚಾರಧಾರೆಗಳನ್ನು ದಾಖಲಿಸಲಾಗಿದೆ. ಈ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿರುವ ವಿದ್ವಾಂಸರನ್ನು ಗುರುತಿಸಿ ಅವರಿಗೆ ಅಧ್ಯಕ್ಷ ಪದವಿ ನೀಡಿ ಗೌರವಿಸಲಾಗಿದೆ.

ಕರ್ನಾಟಕದ ಜಾನಪದ ಅಧ್ಯಯನಕ್ಕೆ ಸಂಬಂಧಿಸಿದಂತೆ ೨೦ ವರ್ಷಗಳಲ್ಲಿ ಅನೇಕ ಪ್ರಕಾರಗಳನ್ನು ಗುರುತಿಸಿ ಅಧ್ಯಯನ ಮಾಡಲಾಗಿದೆ. ಜಾನಪದ ಕಥೆ, ಬಯಲಾಟ, ಲಾವಣಿ, ಗೀಗಿಪದ, ವಾದ್ಯ, ಜಾನಪದ ವೃತ್ತಿಕಾರರು, ಆಯಗಾರರು, ಸ್ತ್ರೀಪುರುಷ ದೇವತೆಗಳು, ಹಬ್ಬಗಳು, ಮೈಲಾರಲಿಂಗ, ಎಲ್ಲಮ್ಮ, ತೊಗಲುಗೊಂಬೆಯಾಟ, ಆಕಾಶ ಜಾನಪದ, ವಸತಿ ಜಾನಪದ, ಸಸ್ಯ, ಪ್ರಾಣಿ ಖನಿಜ ಜಾನಪದ, ಜನಾಂಗಿಕ ಅಧ್ಯಯನ ಹೀಗೆ ಹಲವಾರು ವಿಷಯಗಳನ್ನು ಕುರಿತು ಸಮ್ಮೇಳನಗಳನ್ನು ನಡೆಸಲಾಗಿದೆ. ಈ ವಿಷಯಗಳಿಗೆ ಸಂಬಂಧಿಸಿದಂತೆ ‘ಜಾನಪದ ಸಾಹಿತ್ಯ ದರ್ಶನ’ ಎಂಬ ಮಾಲೆಯಲ್ಲಿ ನಮ್ಮ ವಿಶ್ವವಿದ್ಯಾಲಯ ಗ್ರಂಥಗಳನ್ನು ಪ್ರಕಟಿಸಿದೆ. ಈ ಗ್ರಂಥಗಳು ಜಾನಪದ ಅಧ್ಯಯನದ ಬಹು ಮುಖ್ಯ ಆಕರ ಗ್ರಂಥಗಳಾಗಿವೆ.

ಈ ಸಮ್ಮೇಳನಗಳ ಮತ್ತೊಂದು ಮಹತ್ವದ ಸಾಧನೆ ಎಂದರೆ ಕರ್ನಾಟಕದ ಅನೇಕ ಕಲಾವಿದರನ್ನು ಕರೆದು ಅವರ ಕಲೆಗಳನ್ನು ಪ್ರದರ್ಶಿಸಿರುವುದು. ಕಳೆದ ಎರಡು ದಶಕಗಳಲ್ಲಿ ಕರ್ನಾಟಕದ ಅನೇಕ ಕಲೆಗಳನ್ನು, ಕಲಾವಿದರನ್ನು ಹತ್ತಿರದಿಂದ ನೋಡುವ ಅವಕಾಶ ಲಭ್ಯವಾಗಿದೆ. ಮೈಸೂರಿನ ಕಂಸಾಳೆ ಮಹಾದೇವಯ್ಯ, ತಿಕೋಟದ ಗೌರವ್ವ,ಮಾದರ, ಫಕೀರವ್ವ, ಗುಡಿಸಾಗರ, ಸಿಂಹ ನೃತ್ಯದ ಹಾಸ್ಯಗಾರ, ಸಂಗ್ಯಾಬಾಳ್ಯಾ, ಶ್ರೀ ಕೃಷ್ಣಪಾರಿಜಾತದ ದೇಶಪಾಂಡೆ ಮುಂತಾದ ಕಲಾವಿದರನ್ನು ನೋಡುವ ಅಪೂರ್ವ ಅವಕಾಶ ನಮಗೆ ದೊರೆತಿದೆ. ಅದಕ್ಕಾಗಿ ವಿಶ್ವವಿದ್ಯಾಲಯಕ್ಕೆ ಋಣಿಯಾಗಿದ್ದೇವೆ. ‘ಜನಪದ ಆಹಾರ ಪಾನೀಯಗಳು’-ಎಂಬುದು ಈ ಸಮ್ಮೇಳನದ ವಿಷಯ. ಜಾನಪದ ಅಧ್ಯಯನ ದೃಷ್ಟಿಯಿಂದ ಬಹಳ ಮಹತ್ವವಾದ ಈ ಸಮ್ಮೇಳನದಲ್ಲಿ ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾದ ಆಹಾರದ ಬಗ್ಗೆ ವಿವರವಾಗಿ ಚರ್ಚೆಯಾಗಿದೆ. ಆಹಾರ ಪದ್ಧತಿ ಹಾಗೂ ಜನಾಂಗದ ಆರ್ಥಿಕ ವ್ಯವಸ್ಥೆಗೆ ನಿಕಟವಾದ ಸಂಬಂಧ ಇದೆ. ಆಹಾರದ ಸ್ವರೂಪ ಆಚರಣೆ, ನಂಬಿಕೆಗಳಿಗೆ ಸಂಬಂಧಿಸಿದಂತೆ ಅನೇಕ ಆಚರಣೆಗಳಿವೆ. ಪ್ರಾದೇಶಿಕ ನೆಲೆಯಲ್ಲಿ ರೂಪಗೊಂಡಿರುವ ಆಹಾರ ಪಾನೀಯ, ತಿಂಡಿ, ತಿನಿಸುಗಳಿಗೆ ಸಂಬಂಧಿಸಿದ ಅನೇಕ ವಿಚಾರಗಳು ಇಲ್ಲಿ ಚರ್ಚೆಯಾಗಿವೆ.

ಈ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದವರು ನಾಡಿನ ಹೆಸರಾಂತ ಜಾನಪದ ವಿದ್ವಾಂಸರಾದ ಡಾ. ಬಿ. ಎ. ವಿವೇಕ ರೈ ಅವರು. ವೈಜ್ಞಾನಿಕ ದೃಷ್ಟಿಕೋನವನ್ನು ಹೊಂದಿರುವ ಡಾ. ರೈ ಅವರು ಪ್ರಪಂಚದ ಹೆಸರಾಂತ ಜಾನಪದ ವಿದ್ವಾಂಸರ ಸಂಪರ್ಕವನ್ನಿಟ್ಟುಕೊಂಡಿದ್ದಾರೆ. ವಿದೇಶಗಳಲ್ಲಿ ಸಂಚರಿಸಿರುವ ಇವರು ಜಾನಪದದ ಬಗೆಗೆ ಅಧಿಕೃತವಾಗಿ ಮಾತನಾಡಬಲ್ಲ ವಿದ್ವಾಂಸರಾಗಿದ್ದಾರೆ.

ಈ ಸಮ್ಮೇಳನದ ಕಾರ್ಯಯೋಜನೆಗೆ ಸ್ಫೂರ್ತಿ ನೀಡಿ ಉದಾರ ಧನಸಹಾಯ ಮಾಡಿದ ಮಾನ್ಯ ಕುಲಪತಿ ಡಾ. ಎಸ್. ರಾಮೇಗೌಡ ಅವರಿಗೂ, ಈ ಸಂಪುಟದ ಪ್ರಕಟಣೆಗೆ ಪ್ರೋತ್ಸಾಹ ನೀಡಿದ ಇಂದಿನ ಕುಲಪತಿಗಳಾದ ಡಾ. ಎ. ಎಂ. ಪಠಾನ್ ಅವರಿಗೂ ಕನ್ನಡ ಅಧ್ಯಯನ ಪೀಠದ ಅಧ್ಯಕ್ಷರಾದ ಡಾ. ಬಿ. ಬಿ. ಹಿಂಗಮಿರೆ ಅವರಿಗೂ, ಈ ಸಮ್ಮೇಳನದ ಕಾರ್ಯದರ್ಶಿಗಳಾಗಿ ನನ್ನೊಡನೆ ಕೆಲಸಮಾಡಿದ ಡಾ. ಬಿ. ವ್ಹಿ. ಯಕ್ಕುಂಡಿಮಠ ಹಾಗೂ ಡಾ. ಆರ್. ಎಸ್. ಹಿರೇಮಠ ಹಾಗೂ ನನ್ನ ವಿಭಾಗದ ಪ್ರಧ್ಯಾಪಕ ಮಿತ್ರರ ನೆರವನ್ನು ಕೃತಜ್ಞತೆಯಿಂದ ನೆನೆಯುತ್ತೇನೆ. ಈ ಸಮ್ಮೇಳನದಲ್ಲಿ ಭಾಗವಹಿಸಿದ ನಾಡಿನ ಹಲವಾರು ವಿದ್ವಾಂಸ ಮಿತ್ರರನ್ನೂ ನಾನು ಪ್ರೀತಿಯಿಂದ ನೆನೆಯುತ್ತೇನೆ.

ಎಚ್. ಎಂ. ಮಹೇಶ್ವರಯ್ಯ
ಕಾರ್ಯಾಧ್ಯಕ್ಷ
೨೦ನೇ ಅಖಿಲ ಕರ್ನಾಟಕ ಜಾನಪದ ಸಮ್ಮೇಳನ