‘ಅಪ್ರಮಾಣ ಕೂಡಲಸಂಗಮದೇವ’ ಎಂಬ ಅಂಕಿತವನ್ನು ಹೊಂದಿದ ವಚನಗಳು ‘ಬಾಲಸಂಗಯ್ಯನ ವಚನಗಳೆಂ’ದು ರೂಢಿಯಲ್ಲಿ ಪ್ರಸಿದ್ಧವಾಗಿವೆ. ಈ ವಚನಗಳ ಹಸ್ತಪ್ರತಿಯೊಂದರ ಆದಿಯಲ್ಲಿ ‘ಬಾಲಸಂಗಯ್ಯನ ವಚನಗಳು’ ಎಂದು ಹೇಳಿರುವದೇ ಈ ರೂಢಿಯ ನುಡಿಗೆ ಮೂಲಾಧಾರ. ಈತನು ತನ್ನ ಕೃತಿಯಲ್ಲಿ ಎಲ್ಲೂ ತನ್ನ ಹೆಸರನ್ನು ಹೇಳಿಕೊಂಡಿಲ್ಲ. ಅನ್ಯರೂ ಈ ವಿಷಯದ ಮಾತೆತ್ತಿಲ್ಲ. ನಾವು ರೂಢಿಯ ಮಾತನ್ನೇ ನಂಬಿ ಈ ವಚನಕೃತಿಗೆ ‘ಬಾಲಸಂಗಯ್ಯನ ವಚನಗಳು’ ಎಂದು ಕರೆದಿದ್ದೇವೆ.

ವೀರಶೈವ ಸಾಹಿತ್ಯದಲ್ಲಿ ಬಾಲಸಂಗಯ್ಯ ಎನ್ನುವ ಹೆಸರಿನವರು ಈಗ ತಿಳಿದ ಮಟ್ಟಿಗೆ ಮೂವರಿದ್ದಾರೆ :

(೧) ಬಸವಣ್ಣನವರ ಏಕಮೇವ ಪುತ್ರ, ಬಾಲಸಂಗಯ್ಯ.

(೨) ವಚನಕಾರ ಬಾಲಸಂಗಣ್ಣ

(೩) ಬೋಳಬಸವೇಶ್ವರರ ಶಿಷ್ಯ ಬಾಲಸಂಗಯ್ಯ.

ಮೊದಲನೆಯವನಾದ ಬಾಲಸಂಗಯ್ಯ ಕಲ್ಯಾಣದ ಬಸವಣ್ಣನವರ ಮಗ. ಇವನು ಚಿಕ್ಕವಯಸ್ಸಿನಲ್ಲಿಯೇ ಲಿಂಗೈಕ್ಯನಾದ. ಅವನು ವಚನಗಳನ್ನು ಬರೆದನೋ ಇಲ್ಲವೋ ಹೇಳಲಿಕ್ಕೆ ಆಧಾರವಿಲ್ಲ. ಆದರೂ ಕೆಲಪಂಡಿತರು ಪ್ರಸ್ತುತಕೃತಿಯಲ್ಲಿ ಬಂದಿರುವ ವಚನಗಳನ್ನು ಬರೆದವನು ಈತನೇ ಎಂದು ಊಹಿಸಿದ್ದಾರೆ. ಇತ್ತೀಚಿನ ಸಂಶೋಧನೆಯಿಂದ ಇದೊಂದು ಊಹೆಯೇ ಹೊರತು ಸತ್ಯಸಂಗತಿಯಲ್ಲವೆಂಬುದು ತಿಳಿದಿದೆ.

ಎರಡನೆಯದಾಗಿ, ಸಕಲಪುರಾತನರ ವಚನಗಳ ಕಟ್ಟಿನಲ್ಲಿ ಬಾಲಸಂಗಣ್ಣನೆಂಬ ವಚನಕಾರನ ಹೆಸರು ಬಂದಿದೆ. ಈತನು ಬರೆದ ಆರು ವಚನಗಳು ಈ ಕಟ್ಟಿನಲ್ಲಿ ಸಂಗ್ರಹಿಸಲಾಗಿದೆ. ಈ ವಚನಗಳ ಅಂಕಿತ ‘ಕಮಠೇಶ್ವರಲಿಂಗ’ ಎಂದಿರುವದರಿಂದ ಈತನು ‘ಅಪ್ರಮಾಣ ಕೂಡಲಸಂಗಮದೇವ’ ಎಂಬ ಅಂಕಿತವುಳ್ಳ ವಚನಕಾರನಿಂದ ಭಿನ್ನನೆಂಬುದು ಸುಸ್ಪಷ್ಟ.

ಇನ್ನು ಮೂರನೆಯ ಬಾಲಸಂಗಯ್ಯ. ಇವನು ಬೋಳಬಸವೇಶ್ವರರ ಶಿಷ್ಯ. ಈ ವಿಷಯವನ್ನು ಅವನು ತನ್ನ ವಚನವೊಂದರಲ್ಲಿ ಸ್ಪಷ್ಟವಾಗಿ ಹೇಳಿಕೊಂಡಿರುವನು.

“ಶಿವಶಕ್ತಿ ರಹಿತವಾದ ಪ್ರಣವವು ಹದಿನಾಱನೆಯ ಪ್ರಣವವೆಂದು ನಿರಾಮಯಾತೀತಾಗಮದಲ್ಲಿ ಪಾರ್ವತಾದೇವಿಯರಿಗೆ ಶಿವನು ನಿರೂಪಿಸಿದನೆಂದು ಸದ್ಗುರು ಸ್ವಾಮಿ ಶಿಷ್ಯಂಗೆ ನಿರೂಪಿಸಿದನು :

ಶ್ರೀ ಶ್ರೀ ಶ್ರೀಮದ್ಗುರು ಬೋಳಬಸವೇಶ್ವರಾಯ ನಮ |
ಶ್ರೀನಿರಂಜನ ಪ್ರಣವದುತ್ಪತ್ಯ :
….      ….      ….      ….      ….      ….
….      ….      ….      ….      ….      ….
ನಿಃಕಲಾತೀತಾಗಮದಲ್ಲಿ ನಾಲ್ವತ್ತು ಪ್ರಣವವೆಂದು ಶಿವನು
ಪಾರ್ವತಾದೇವಿಯರಿಗೆ ನಿರೂಪಿಸಿದನೆಂದು ಸದ್ಗುರುಸ್ವಾಮಿ
ಶಿಷ್ಯಂಗೆ ನಿರೂಪಿಸಿದ ಪ್ರಣವಸ್ಥಲದ ವಚನ ಸಮಾಪ್ತ.
ಮಂಗಲಮಹಾ ಶ್ರೀ ಶ್ರೀ.”

[1]

ಈ ವಚನದಲ್ಲಿ ಹೇಳಿರುವಂತೆ ಶ್ರೀ ಬೋಳಬಸವೇಶ್ವರನೇ ಸದ್ಗುರುಸ್ವಾಮಿ; ಅವರ ಶಿಷ್ಯನೇ ಅಪ್ರಮಾಣ ಕೂಡಲಸಂಗಮದೇವ ಅಂಕಿತದ ವಚನಕಾರ. ಬಾಲಸಂಗಯ್ಯ ಈ ಹೇಳಿಕೆಗೆ ವಚನಮಧ್ಯದಲ್ಲಿ

ಶ್ರೀ ಶ್ರೀ ಶ್ರೀಮದ್ಗುರು ಬೋಳಬಸವೇಶ್ವರಾಯ ನಮ

ಎಂದು ಹೇಳಿ ತನ್ನ ಭಕ್ತಿನಿಷ್ಠೆಯನ್ನು ವ್ಯಕ್ತಪಡಿಸಿದುದು ಪುಷ್ಟಿಯನ್ನು ಕೊಡುತ್ತದೆ. ಇದರ ಮೇಲಿಂದ ಬಾಲಸಂಗಯ್ಯನು ಬೋಳಬಸವೇಶ್ವರರ ಶಿಷ್ಯನೆಂಬುದು ಸ್ಪಷ್ಟವಾಗುತ್ತದೆ.

ಶ್ರೀ ತೋಂಟದ ಶಿದ್ಧಲಿಂಗಶಿವಯೋಗಿಗಳು ಮಹಾಮಹಿಮಾಪುರುಷರು. ಇವರು ಪ್ರಭುದೇವರ ಅಪರಾವತಾರಿಗಳೆಂದು ಪರಿಗಣಿತರಾದವರು. ಅವರನ್ನು ಷಟ್‌ಸ್ಥಲಜ್ಞಾನಪ್ರಭಾಪುಂಜರಂಜಿತರೆಂದು ಬಣ್ಣಿಸಲಾಗಿದೆ. ಹದಿನೈದನೆಯ ಶತಮಾನದಲ್ಲಿ ಖಿಲವಾಗುತ್ತಿರುವ ವೀರಶೈವ ಧರ್ಮವನ್ನು ಉದ್ಧರಿಸಲು ಅವರು ಅವತರಿಸಿ ಬಂದವರು. ಏಳುನೂರಾವೊಂದು ವಿರಕ್ತರೊಡದೆ ದೇಶದಾದ್ಯಂತ ಸಂಚರಿಸಿ ಜನತೆಯಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸಿದವರು. ಅವರ ಶಿಷ್ಯಪರಂಪರೆ ಅನೂಚಾನವಾಗಿ ಇಂದಿನವರೆಗೂ ನಡೆದುಬಂದಿದೆ. ಶ್ರೀ ತೋಂಟದ ಸಿದ್ಧಲಿಂಗ ಶಿವಯೋಗಿಗಳು ಪ್ರಭುಪರಂಪರೆಯ ಶೂನ್ಯಸಿಂಹಾಸನವನ್ನೇರಿ ಲೋಕೋದ್ಧಾರ ಕಾರ್ಯವೆಸಗಿದರು. ಇವರ ಕರಕಮಲಸಂಜಾತರಾಗಿ, ಪಟ್ಟದ ಶಿಷ್ಯರಾಗಿ ಮೆರೆದವರು ಶ್ರೀ ಬೋಳಬಸವೇಶ್ವರರು. ಅವರು ತೋಂಟದ ಸಿದ್ಧಲಿಂಗಶಿವಯೋಗಿಗಳ ತರುವಾಯ ಶೂನ್ಯ ಪೀಠಕ್ಕೆ ಅಧಿಕಾರಿಗಳಾಗಿ ಮೆರೆದರು. ಅವರ ಶಿಷ್ಯಸಂಖ್ಯೆ ಅಗಣಿತ. ಅದರಲ್ಲಿ ಒಬ್ಬ ನಾದವನು ಬಾಲಸಂಗಯ್ಯ. ಅವನ ವಚನಗಳೇ ಇಲ್ಲಿ ‘ಬಾಲಸಂಗಯ್ಯನ ವಚನಗಳು’ ಎಂದು ಪ್ರಕಟವಾಗಿವೆ.

ಶ್ರೀ ತೋಂಟದ ಸಿದ್ಧಲಿಂಗಶಿವಯೋಗಿಗಳ ಕಾಲ ಕ್ರಿ. ಶ. ೧೪೭೦. ಅವರ ತರುವಾಯ ಬೋಳಬಸವೇಶ್ವರರು ಅವರ ಪೀಠಕ್ಕೆ ಸ್ವಾಮಿಯಾಗಿ ಬಂದಿರುವದರಿಂದಲೂ ಅವರು ವಯೋವೃದ್ಧರಾಗ ತಮ್ಮ ಎಪ್ಪತ್ತನೆಯ ವರ್ಷದಲ್ಲಿ ಲಿಂಗೈಕ್ಯರಾದುದರಿಂದಲೂ ಅವರ ಶಿಷ್ಯನಾದ ಬಾಲಸಂಗಯ್ಯನು ಕ್ರಿ. ಶ. ೧೮೨೫ರ ಸುಮಾರಿಗೆ ಇರಬೇಕೆಂಬುದು ಅನಿವಾರ್ಯ. ಈ ಬಾಲಸಂಗಯ್ಯನು ಶ್ರೀ ಬೋಳಬಸವೇಶ್ವರರಿಂದ ದೀಕ್ಷೆಯನ್ನು ಪಡೆದದ್ದೇನೋ ನಿಜ. ಆದರೆ ಅವನ ಸ್ಥಳ, ಮಠ, ಪೀಠ ಕುರಿತು ಸಧ್ಯಕ್ಕೆ ಏನನ್ನೂ ಹೇಳಲು ಆಧಾರ ಇಲ್ಲ.

ಬಾಲಸಂಗಯ್ಯನ ವಚನಗಳಲ್ಲಿ ಗುರುಶಿಷ್ಯ ಸಂಬಂಧವನ್ನು ಬಿತ್ತರಿಸುವ ವಚನಗಳು ಬಾಲಸಂಗಯ್ಯನಿಗೂ ಗುರು ಬೋಳಬಸವೇಶ್ವರರಿಗೂ ಸಂಬಂಧ ಪಟ್ಟಂತೆ ರಚಿತವಾಗಿವೆ.

ಲಿಂಗವಿರಹಿತ ಯೋಗವು ನಿಷ್ಫಲವಾದುದೆಂಬ ಮೂಲಭೂತ ಅಭಿಪ್ರಾಯದಿಂದ ಈ ವಚನಕಾರನು ತನ್ನ ವಚನರಚನೆಗೆ ತೊಡಗುತ್ತಾನೆ. ಗುರುಕಾರುಣ್ಯವಿಲ್ಲದೆ, ಲಿಂಗದೀಕ್ಷೆಯಾಗದೆ ಶಿವಪಥ ದೊರೆಯಲಾರದು. ಬಾಲಸಂಗಯ್ಯನು ಪದ್ಧತಿಯ ಪ್ರಕಾರ ವೀರಶೈವ ಲಿಂಗದೀಕ್ಷೆಯನ್ನು ಪಡೆದಿದ್ದರೂ ಜಂಗಮದೀಕ್ಷೆ ಅವನಿಗೆ ಆಗಿರಲಿಲ್ಲ; ಅದಕ್ಕಾಗಿಯೇ ಆತನು ಗುರು ಬೋಳಬಸವೇಶ್ವರರನ್ನು ಆಶ್ರಯಿಸಿರಬೇಕು ಎನ್ನುವದು ಒಂದು. ಬಾಲಸಂಗಯ್ಯ ಮೊದಲು ಭವಿಯಾಗಿದ್ದು ನಂತರ ಗುರುವಿನ ಪ್ರಭಾವಕ್ಕೆ ಒಳಗಾಗಿ ಮೊದಲು ಲಿಂಗದೀಕ್ಷೆ, ನಂತರ ಜಂಗಮದೀಕ್ಷೆ ಎರಡನ್ನೂ ಪಡೆದಿರಬೇಕು ಎನ್ನುವದು ಇನ್ನೊಂದು. ಇದರಲ್ಲಿ ಮೊದಲನೆಯದಕ್ಕಿಂತಲೂ ಎರಡನೆಯ ಕಾರಣವೇ ಸತ್ಯವೆನ್ನುವದಕ್ಕೆ ಅವನ ವಚನಗಳಲ್ಲಿ ಆಧಾರ ದೊರೆಯುತ್ತದೆ :

ನಾಡಿಧಾರಣೆ, ವಾಯುಧಾರಣೆ, ಅಮೃತಧಾರಣೆ
ಅಗ್ನಿಧಾರಣೆ, ಆಧಾರಧಾರಣೆಯೆಂಬ ಪಂಚಧಾರಣೆಯಮಾಡಿ
ತನ್ನಿಂದ ತಾನೇ ತಿಳಿದು, ಇನ್ನು ಆತ್ಮಯೋಗಿಯಾಗಿರಬಾರದೆಂದು
ಭ್ರಮರವು ಸದ್ವಾಸನೆಯುಳ್ಳ ಪುಷ್ಪವ ಹೇಂಗೆ ಅರಸುವವು ಹಾಂಗೆ
ಆ ಆತ್ಮಯೋಗಿ ಸದ್ಗುರುವನರಸಿ ಕಂಡು
ಅವರ ಕಾರುಣ್ಯವ ಪಡೆವೆನೆಂದು ಬಹನು ಕಾಣಾ ಅಪ್ರಮಾಣ ಕೂಡಲಸಂಗಮದೇವಾ.[2]

ಈ ಮೇಲಿನ ವಚನದಲ್ಲಿರುವ ಆತ್ಮಯೋಗಿ ಭವಿಯೆಂಬುದು ಸತ್ಯ. ಅವನು ಸದ್ಗುರು ಸ್ವಾಮಿಯ ಸನ್ನಿಧಾನಕ್ಕೆ ಬಂದು,

ಆ ಆತ್ಮಯೋಗಿ ಸದ್ಗುರುಸ್ವಾಮಿಯ ಕಂಡು
ಆ ಸದ್ಗುರುಸ್ವಾಮಿಯ ಚರಣಕ್ಕೆ ದೀರ್ಘದಂಡ ನಮಸ್ಕಾರಮಂ ಮಾಡಿ
ತಾನು ಭವಿಯಾಗಿರಬಾರದೆಂದು
ಅಂಗದ ಮೇಲೆ ಲಿಂಗಪ್ರತಿಷ್ಠೆಯ ಮಾಡಬೇಕೆಂದು ಬಿನ್ನೈಸಲು
ಆ ಶಿಷ್ಯನ ಬಿನ್ನಹವಂ ಕೈಕೊಂಡು
ತನ್ನ ನಿಜಕರಯುಗಲದಲ್ಲಿ ಹಣೆಯ ಹಿಡಿದೆತ್ತಿದನು ನೋಡಾ ಅಪ್ರಮಾಣ ಕೂಡಲಸಂಗಮದೇವಾ[3] |

ಹೀಗೆ ಶಿಷ್ಯನಿಗೆ ಸದ್ಗುರುವಿನಿಂದ ಲಿಂಗದೀಕ್ಷೆಯಾಗುವ ರೀತಿಯಿದು.

ಇನ್ನು ಆ ಶಿಷ್ಯನ ಮಾಂಸಪಿಂಡದ ಕಳೆದು ಮಂತ್ರಪಿಂಡದ ಮಾಡುವ ಕ್ರಮವೆಂತೆಂದಡೆ :

ಏಕಭೂಕ್ತೂಪವಾಸಂಗಳ ಮಾಡಿಸಿ,
ಪಂಚಗವ್ಯಮಂ ಕೊಟ್ಟು, ಗಣತಿಂಥಿಣಿಗೆ ದಂಡಪ್ರಣಾಮಂ ಮಾಡಿಸಿ
ದಶವಾಯುಶುದ್ಧ, ಅಷ್ಟತನುಶುದ್ಧ ಆತ್ಮಶುದ್ಧಮಂ ಮಾಡಿ
ಇಂದ್ರಿಯ ಲಿಖಿತಮಂ ತೊಡೆದು, ಶಿವಲಿಖಿತಮಂ ಲಿಖಿಸಿ
ವಿಭೂತಿಪಟ್ಟನ ಕಟ್ಟಿ, ಸ್ಥಾನಸ್ಥಾನದಲ್ಲಿ ರುದ್ರಾಕ್ಷಿಯಂ ಧರಿಸಿ,
ಕಳಶಾಭಿಷೇಕಮಂ ಮಾಡಿ,
ಆ ಶಿಷ್ಯನ ಮಸ್ತಕದ ಮೇಲೆ ತನ್ನ ಹಸ್ತಕಮಲವನಿರಿಸಿ
ಬ್ರಹ್ಮರಂಧ್ರದ ಚಿತ್ಕಲಾ ಪ್ರಭಾಲಿಂಗಮಂ ತೆಗೆದು ಧ್ಯಾನಿಸಿ
ಆ ಶಿಷ್ಯನ ಹಸ್ತವ ಪಂಚಾಮೃತದಲ್ಲಿ ಪ್ರಕ್ಷಾಲಿಸಿ
ಅಂಗದ ಮೇಲೆ ಲಿಂಗಪ್ರತಿಷ್ಠೆಯಂ ಮಾಡಿ
ಕರ್ಣಧ್ವಾರದಲ್ಲಿ ಮೂಲ ಮಂತ್ರವ ತುಂಬಿ ಕೃತಾರ್ಥನ ಮಾಡಿದನು.
ಧನ್ಯನಾದೆನಯ್ಯಾ, ಎನ್ನ ಸದ್ಗುರುಸ್ವಾಮಿ, ಧನ್ಯನಾದೆನಯ್ಯಾ ಅಪ್ರಮಾಣ ಕೂಡಲಸಂಗಮದೇವಾ.[4]

ಈ ವಚನದ ಕೊನೆಯಲ್ಲಿ ಬರುವ ‘ಧನ್ಯನಾದೆನಯ್ಯಾ’ ಎಂಬ ಮಾತನ್ನು ಅವಲೋಕಿಸಿದರೆ ಈ ವಚನಗಳನ್ನು ಬರೆದ ಬಾಲಸಂಗಯ್ಯನೇ ಶಿಷ್ಯನೆಂಬ ಮಾತು ದೃಢಪಡುವದು. ಈ ಮಾತು ಸತ್ಯವೇ ಆದಲ್ಲಿ ವಚನಕಾರನ ಜೀವನದ ಒಂದು ಹಂತವನ್ನು ತರ್ಕಿಸಬಹುದು.

ವಚನಕಾರನಾದ ಬಾಲಸಂಗಯ್ಯನು ಮೊದಲು ಲಿಂಗವಿರಹಿತ ಆತ್ಮಯೋಗಿಯಾಗಿದ್ದು, ಹಿಂದುಗಡೆ ವೀರಶೈವದಲ್ಲಿ ಅಪೂರ್ವವಾದುದನ್ನು ಕಂಡು ಬೋಳ ಬಸವೇಶ್ವರನಿದ್ದಲ್ಲಿಗೆ ಬಂದು ಲಿಂಗದೀಕ್ಷೆ ಪಡೆದಿರಬಹುದು; ಆ ಮೇಲೆ ಅವರಿಂದಲೇ ಜಂಗಮದೀಕ್ಷೆ ಹೊಂದಿರಲೂ ಸಾಧ್ಯವಿದೆ. ಶ್ರೀ ಬೋಳಬಸವೇಶ್ವರನ ಪ್ರಭಾವ ದೊಡ್ಡದು. ಅವನ ಅನುಗ್ರ ಬಲದಿಂದ ಮುಕ್ತರಾದವರು ಸಾವಿರಾರು ಜನ. ಅಂಥವರಲ್ಲಿ ಬಾಲಸಂಗಯ್ಯನೂ ಒಬ್ಬನೆಂದು ಸಹಜವಾಗಿ ನುಡಿದರೆ ಮುಗಿಯದು. ಆತ್ಮಯೋಗಿಯೊಬ್ಬನು ತನ್ನ ಮೂಲ ನಂಬಿಕೆಯನ್ನು ಅಲ್ಲಗಳೆದು ವೀರಶೈವಕ್ಕೆ ಮತಾಂತರ ಹೊಂದಿರಬೇಕಾದರೆ ವೀರಶೈವತತ್ವ ಆತನ ಮೇಲೆ ಪ್ರಭಾವಬೀರಿರಬೇಕು. ಎರಡನೆಯದಾಗಿ ಶ್ರೀ ಬೋಳಬಸವೇಶ್ವರರ ಮಹಿಮಾಪೂರ್ಣ ಕೃಪಾದೃಷ್ಟಿಗೆ ಅವನು ಒಳಗಾಗಿರಬೇಕು. ಏನೇ ಇರಲಿ; ಬಾಲಸಂಗಯ್ಯನು ವೀರಶೈವವನ್ನು ಅಂಗೀಕರಿಸಿರುವದು ಸ್ಪಷ್ಟವಾಗಿದೆ.

ಬಾಲಸಂಗಯ್ಯ ಆದ್ವಿತೀಯ ಪಂಡಿತ; ಸರ್ವ ಧರ್ಮಶಾಸ್ತ್ರ, ಪುರಾಣ, ವೇದ, ಉಪನಿಷತ್ತುಗಳನ್ನು ಅಭ್ಯಾಸ ಮಾಡಿದ್ದಲ್ಲದೆ ಆಗಮಗಳನ್ನೆಲ್ಲ ಅರೆದು ಕುಡಿದವನೆಂದರೆ ಅತಿಶಯೋಕ್ತಿಯಾಗಲಾರದು. ಅವನು ಸಂದರ್ಭಾನುಸಾರವಾಗಿ ಉದ್ಧರಿಸುವ ಆಗಮೋಕ್ತಿಗಳು ಈ ಮಾತಿಗೆ ನಿದರ್ಶನವಾಗಿವೆ. ಆತ್ಮಯೋಗಿಗೆ ಪರತತ್ವವನ್ನು ಅರಿಯಲು ಬಹುಕಾಲ ಬೇಕಿಲ್ಲ. ವೀರಶೈವವನ್ನು ಅಲ್ಪಕಾಲದಲ್ಲಿಯೇ ಅರಿತುಕೊಂಡು ಅದನ್ನು ಸಶಾಸ್ತ್ರೀಯವಾಗಿ ವಚನಗಳಲ್ಲಿ ಹೇಳಿದುದನ್ನು ನೋಡಿದರೆ ಆತನ ನಿಶಿತಮತಿ, ಕುಶಲ ಬುದ್ಧಿ ಅದ್ವಿತೀಯವೆನಿಸದೆ ಇರವು. ವೀರಶೈವ ತತ್ವವನ್ನು ಇಷ್ಟೊಂದು ಕ್ರಮಬದ್ಧವಾಗಿ, ಸಾಧಾರವಾಗಿ ನಿರೂಪಿಸಿದ ವಚನಗ್ರಂಥಗಳು ವಿರಳ. ಆದರೆ ಈ ಕೃತಿ ಆ ಕೊರತೆಯನ್ನು ತುಂಬಿ ಕೊಡುವಲ್ಲಿ ದೊಡ್ಡ ಕಾರ್ಯಮಾಡಿದೆಯೆಂದು ಹೇಳಬಹುದು.

ಬಾಲಸಂಗಯ್ಯನು ಉಭಯಭಾಷಾವಿಶಾರದ. ಕನ್ನಡದಲ್ಲಿಯೂ ಸಂಸ್ಕೃತದಲ್ಲಿಯೂ ಅವನಿಗೆ ಸಾಕಷ್ಟು ಪಾಂಡಿತ್ಯವಿದೆ. ವಚನಶಾಸ್ತ್ರವನ್ನು ಓದಿ ಮನನ ಮಾಡಿಕೊಂಡಿರುವದರ ಜೊತೆಗೆ ವೇದಾಗಮ ಉಪನಿಷತ್ತುಗಳಲ್ಲಿ ಪರಿಣಿತನಾಗಿದ್ದಾನೆ. ವಚನಗಳ ಮಧ್ಯದಲ್ಲಿ ಅವನು ಕೊಟ್ಟ ಸಂಸ್ಕೃತ ಅವತರಣಿಕೆಗಳೇ ಈ ಹೇಳಿಕೆಗೆ ಮುಖ್ಯಾಧಾರ. ಈ ವಚನಕಾರನ ದೃಷ್ಟಿ ಮುಖ್ಯವಾಗಿ ವಚನಶಾಸ್ತ್ರದ ಮೇಲೆ ನಿಂತಿದೆ. ದೃಷ್ಟಿಯಂತೆ ಸೃಷ್ಟಿ. ಯಾವದೇ ವಿಷಯ ಹೇಳಿದರೂ ಅದನ್ನು ಸೋದಾಹರಣವಾಗಿ ನಿರೂಪಿಸುತ್ತದೆ ಅವನ ಶಾಸ್ತ್ರೀಯ ಬುದ್ಧಿ. ನಿಜವಾಗಿ ನೋಡಿದರೆ ಬಾಲಸಂಗಯ್ಯನ ವಚನಗಳು ವೀರಶೈವ ಷಟ್‌ಸ್ಥಲಶಾಸ್ತ್ರಕ್ಕೆ ಶಬ್ದಕೋಶವೆನಿಸುವಂತೆ ನಿರ್ಮಿತವಾಗಿವೆ. ಯಾವ ವಿಷಯ ತಿಳಿಯಬೇಕಾದರೂ ಈ ವಚನಕೋಶವನ್ನು ತೆರೆದುನೋಡಬಹುದಾಗಿದೆ. ಅಷ್ಟೊಂದು ಸಶಾಸ್ತ್ರೀಯವಾಗಿದೆ ಈ ವಚನಗ್ರಂಥ.

ಸಾಮಾನ್ಯವಾಗಿ ವಚನಸಾಹಿತ್ಯ ಶಾಸ್ತ್ರವೂ ಹೌದು; ಕಾವ್ಯವೂ ಹೌದು ಎನ್ನುವಂತೆ ರಚಿತವಾಗಿರುವದುಂಟು. ಬಸವಣ್ಣ, ಅಕ್ಕಮಹಾದೇವಿ ಮುಂತಾದ ವಚನಕಾರರ ವಚನಗಳಲ್ಲಿ ಕಾವ್ಯಾಂಶಪ್ರಧಾನವಾಗಿದ್ದುದನ್ನು ಅರಿಯುತ್ತೇವೆ. ಮಿಕ್ಕವರ ವಚನಗಳಲ್ಲಿ ಕಾವ್ಯಾಂಶಕ್ಕಿಂತಲೂ ಶಾಸ್ತ್ರಾಂಶವೇ ಹೆಚ್ಚು. ಆದರೆ ಬಾಲಸಂಗಯ್ಯನ ವಚನಗಳಲ್ಲಿ ಭಾವಕ್ಕೆ ಇಂಬಿಲ್ಲ; ಹೇಳಿದುದೆಲ್ಲ ಶಾಸ್ತ್ರವೇ. ಆದ್ದರಿಂದ ಈ ಕೃತಿಯನ್ನು ಶುದ್ಧ ವಚನಶಾಸ್ತ್ರವೆಂದು ಹೇಳಿದರೆ ತಪ್ಪಾಗದು.

ಬಾಲಸಂಗಯ್ಯನ ವಚನಗಳ ಗದ್ಯ ಹಳಗನ್ನಡದ್ದೂ ಅಲ್ಲ, ನಡುಗನ್ನಡದ್ದೂ ಅಲ್ಲ, ಸಮ್ಮಿಶ್ರಜಾತಿಯದು. ಹದಿನಾರನೆಯ ಶತಮಾನದ ಹೊತ್ತಿಗೆ ಗದ್ಯದ ಗತಿ ಆಗಲೇ ಭಿನ್ನಸ್ವರೂಪ ತಳೆದಿತ್ತೆಂಬುದನ್ನು ಈ ವಚನಗಳನ್ನೋದಿ ಅರಿಯಬಹುದಾಗಿದೆ ಕೆಲವು ಪ್ರಯೋಗಗಳು ವಿಚಿತ್ರವೆನಿಸಿದರೂ ಜೀವಂತ ಭಾಷೆಯ ಕುರುಹು ಅಲ್ಲಿ ಮೈದೋರಿದುದನ್ನು ಅರಿಯಬಹುದು. ನಾವು ಭಾಷೆಯನ್ನು ಬಳಸುವದು ವಿಷಯ ನಿರೂಪಣೆಗಾಗಿ. ತಿಳಿಯುವಂತೆ ತಿಳಿಸಿ ಹೇಳುವದೇ ಭಾಷೆಯ ಮುಖ್ಯ ಕಾರ್ಯ. ಆ ಸಾಮರ್ಥ್ಯ ಬಾಲಸಂಗಯ್ಯನ ಭಾಷೆಯಲ್ಲಿರುವದನ್ನು ಓದುಗ ಅರಿಯದೆ ಇರಲಾರ.

ಬಾಲಸಂಗಯ್ಯ ಶೀಲಕ್ಕೆ ಪ್ರಾಧಾನ್ಯಕೊಟ್ಟಂತಿದೆ. ನಡೆಯಂತೆ ನುಡಿ, ಆಚಾರದಂತೆ ವಿಚಾರ ಇರದವರನ್ನು ಆತ ಮೆಚ್ಚಲಾರ. ಭಕ್ತನ ಶೀಲವನ್ನು ಬಿತ್ತರಿಸುವ ಕೆಳಗಣ ವಚನವು ಮಹತ್ವದ್ದಾಗಿದೆ :

ಪರಸ್ತ್ರೀ ಪರಾರ್ಥ ಪರಾನ್ನಕ್ಕೆ ಸುಳಿವ ಅಣ್ಣಗಳು ನೀವು ಕೇಳಿರೆ !
ಪರಸ್ತ್ರೀಗೆ ಚಕ್ಷುದಗ್ಧವಾಗಿರಬೇಕು ಕೇಳಿರಣ್ಣಾ.
ಪರಾರ್ಥಕ್ಕೆ ಹಸ್ತ ದಗ್ಧವಾಗಿರಬೇಕು ಕೇಳಿರಣ್ಣಾ.
ಪರಾನ್ನಕ್ಕೆ ಜಿಹ್ವೆ ದಗ್ದವಾಗಿರಬೇಕು ಕೇಳಿರಣ್ಣಾ.
ನಿಂದೆ ಸ್ತುತಿಗೆ ಕಿವುಡನಾಗಿರಬೇಕು ಕೇಳಿರಣ್ಣಾ.
ಬಯಲುಬ್ರಹ್ಮವ ನುಡಿವ ತರ್ಕಿಗಳ ಕಂಡಡೆ
ಮಾಗಿಯ ಕೋಗಿಲೆಯಂತೆ ಮೂಗನಾಗಿರಬೇಕು ಶರಣ ಕೇಳಿರಣ್ಣಾ
ಇವರಿಂಗೆ ಭವನಾಸ್ತಿ ನೋಡಾ ಅಪ್ರಮಾಣ ಕೂಡಲಸಂಗಮದೇವ.[5]

ಕಪಟವೇಷಧಾರಿಗಳನ್ನು ಈತನು ಕಟುವಾಗಿ ಟೀಕಿಸುತ್ತಾನೆ:

ಪರಧನ ಪರಸ್ತ್ರೀ, ಪರಾನ್ನದಾಸೆಯ ಬಿಡದೆ
ನಿಂದೆ ಸ್ತುತಿಗಳೆರಡು ಸಮವಾಗಿದೆ
ಮಾಗಿಯ ಕೋಗಿಲೆಯಂತೆ ಮೂಗನಾಗಿರಲಱಿಯದೆ
ಬಯಲ ಬ್ರಹ್ಮವ ನುಡಿವ ತರ್ಕಿಗಳ ಕೂಡೆ ತರ್ಕವ ಮಾಡಿ
ಶರಣನೆಂದು ಸುಳಿದಡೆ ಪಂಚಮಹಾಪಾತಕ ನೋಡಾ ಅಪ್ರಮಾಣ ಕೂಡಲಸಂಗಮದೇವ[6]

ಮೇಲಿನ ಎರಡೂ ವಚನಗಳಲ್ಲಿ ಇರುವ ವಿಷಯ ಒಂದೇ. ಆದರೆ ಅದನ್ನು ಮನಂಬುಗುವಂತೆ ಹೇಳುವ ರೀತಿ ಬೇರೆ ಬೇರೆ. ವಿಷಯ ಮನದಟ್ಟಾಗಲು ಇಂತಹ ಭಿನ್ನಶೈಲಿ ಇರಬೇಕೆಂದು ಬಾಲಸಂಗಯ್ಯ ಭಾವಿಸಿರಬೇಕು.

ಬೆಡಗು ಹೇಳುವದು ವಚನಕಾರರ ವೈಶಿಷ್ಟ್ಯ. ಅನಿರ್ವಚನೀಯವಾದುದನ್ನು ತಿಳಿಸಲು ಬೆಡಗು ಬಲಿಷ್ಠವಾದುದು. ಇದನ್ನರಿತ ವಚನಕಾರರು ಬೆಡಗಿನ ವಚನಗಳನ್ನು ರಚಿಸಿದ್ದಾರೆ. ಬಾಲಸಂಗಯ್ಯನ ಬೆಡಗಿನ ವಚನಗಳೂ ಹೃದಯಂಗಮವಾಗಿವೆ:

ಬಣ್ಣವಿಲ್ಲದ ಪಕ್ಷಿ ಬಯಲ ತತ್ತಿಯನಿಕ್ಕಿತ್ತು ನೋಡಾ.
ಆ ಬಯಲ ತತ್ತಿಗೆ ತುಪ್ಪಳು ಬಾರದೆ
ಹದಿನಾಲ್ಕು ಗಿಣಿಗಳ ಕೂಡಿಯಾಡಿತ್ತು.
ಆ ಬಯಲು ತತ್ತಿಗೆ ಪಕ್ಕಬಂದು ಹಾರಿ
ನಮ್ಮ ಅಪ್ರಮಾಣ ಕೂಡಲಸಂಗನ ಕೂಡಿತ್ತು.[7]

ಒಟ್ಟಿನಲ್ಲಿ, ಬಾಲಸಂಗಯ್ಯನ ವಚನಗಳು ಶಾಸ್ತ್ರಸಮ್ಮತವಾಗಿವೆ, ನೀತಿ ಪ್ರಧಾನವಾಗಿವೆ, ತತ್ವಪ್ರಭೋಧಕವಾಗಿವೆ. ಷಟ್‌ಸ್ಥಲಶಾಸ್ತ್ರವನ್ನು ಅರಿತುಕೊಳ್ಳುವ ಜಿಜ್ಞಾಸುಗಳಿಗೆ ಈ ಕೃತಿ ದಾರಿದೀಪವಾಗಿ ನಿಲ್ಲಬಲ್ಲ ಶಕ್ತಿಯನ್ನು ಪಡೆದಿದೆ. ಇಂತಹ ಮಹತ್ವವುಳ್ಳ ಈ ಕೃತಿಯನ್ನು ಸಹೃದಯರು ಆದರದಿಂದ ಬರಮಾಡಿಕೊಳ್ಳುವರೆಂದು ಹಾರೈಸುತ್ತೇವೆ.

ಎಂ. ಎಸ್. ಸುಂಕಾಪುರ
ಸಂಪಾದಕರು
ಕನ್ನಡ ಅಧ್ಯಯನಪೀಠ
೧೫-೭-೧೯೭೬


[1]      ಬಾಲಸಂಗಯ್ಯನ ವಚನಗಳು-೩೨೦

[2]      ಬಾಲಸಂಗಯ್ಯನ ವಚನಗಳು-೪೯

[3]      ಬಾಲಸಂಗಯ್ಯನ ವಚನಗಳು-೫೦

[4]     ಬಾಲಸಂಗಯ್ಯನ ವಚನಗಳು-೫೧.

[5]     ಬಾಲಸಂಗಯ್ಯನ ವಚನಗಳು-.-೫೧೧

[6]     ಬಾಲಸಂಗಯ್ಯನ ವಚನಗಳು-.-೫೧೨

[7]     ಬಾಲಸಂಗಯ್ಯನ ವಚನಗಳು-.-೫೧೪