ಮರುಳ ಸಿದ್ದನ ಬಾಲಕ

ಉಜ್ಜಯನಿಯ ಮರುಳಸಿದ್ಧನ ಬಾಲಕ ಎಂದುಕೊಂಡ ಈ ಕವಿಯ ಹೆಸರು ಗೊತ್ತಿಲ್ಲ. ಇವನು ಹೋಳೀಹಾಡುಗಳನ್ನು ಬರೆಯುವಲ್ಲಿ ಪ್ರಸಿದ್ಧ. ಇವನು ಹೇಳಿದ ಎರಡು ಹಾಡುಗಳನ್ನು ಮಾತ್ರ ಸಂಗ್ರಹಿಸಿದ್ದೇವೆ. ಮೊದಲನೆಯದು ಕಾಮಿನೀ ಶೃಂಗಾರ. ಇದನ್ನು ಶ್ರೀ ಗುರುವರ ವಿರೂಪಾಕ್ಷನ ದಯದಿಂದ ಬರೆದೆನೆಂದು ಹೇಳಿಕೊಂಡಿದ್ದಾನೆ. ಈತನು ಬಳ್ಳಾರಿ ಜಿಲ್ಲೆಗೆ ಸೇರಿದವನೆಂದು ಹೇಳಲು ಅಡ್ಡಿಯಿಲ್ಲ.

ಭೂಮಿಯೊಳಗೆ ಸ್ಮರರಾಣಿಯಂತಿರುವ ಯಾವಳೋ ಒಬ್ಬ ಕಾಮಿನಿಯ ಶೃಂಗಾರವರ್ಣನೆ ಇಲ್ಲಿ ಹಾಡಿಗೆ ವಸ್ತುವಾಗಿದೆ. ಅವಳ ಅಂಗಾಂಗ ವರ್ಣನೆಯನ್ನು ಮನೋಹರವಾಗಿ ಹೇಳಿದ ಈ ಕವಿ ಶೃಂಗಾರವನ್ನು ತಾಮಸಗುಣವಳಿದು ಪರಿಣಾಮ ದೃಷ್ಟಿಯಿಂದ ಅರಿಯಬೇಕೆಂದು ಪ್ರಾರ್ಥಿಸಿಕೊಂಡು ಹಾಡು ಮುಂದುವರಿಸಿದ್ದಾನೆ.

ಎಷ್ಟಂತ ಹೇಳಲಿ ಪಟ್ಟಪಟ್ಟಾವಳಿ
ಉಟ್ಟಾಳು ಚಂದ್ರಕಾಳಿಯ ಸೀರೆಯ | ಆಗ
ತೊಟ್ಟಾಳು ಕುಪ್ಪಸ ಜರತಾರಿಯ | ಫಣಿ
ಗಿಟ್ಟಾಳು ಕುಂಕುಮದ ರೇಖೆಯ | ಮತ್ತೆ
ಕಟ್ಟಾಣಿ ಕರಿಮಣಿ ಮುತ್ತಿನ ಸರಗಿಯ
ಒಟ್ಟಾಗಿ ಕೊರಳೊಳಗಿಟ್ಟಾಳ ಭರತಿ || ೧

[1]

ಹಳ್ಳಿಯ ಹೆಂಗಸರು ಇಟ್ಟುಕೊಳ್ಳುವ ಅಲಂಕಾರದ ಹೆಸರುಗಳ ಪಟ್ಟಿಯೇ ಇಲ್ಲಿ ಬಂದಿದೆ. ನವನಾಗರಿಕತೆಯ ಇಂದಿನ ಕಾಲದಲ್ಲಿ ಅವು ಹೇಳಹೆಸರಿಲ್ಲದಂತೆ ಮಾಯವಾಗತೊಡಗಿದೆ. ಗ್ರಾಮೀಣರ ಅಲಂಕಾರದ ಅಭ್ಯಾಸಿಗಳು ಇತ್ತ ಗಮನ ಹರಿಸುವುದೊಳಿತು. ಸರ್ವಾಲಂಕಾರ ಮಾಡಿಕೊಂಡು ಸೊಕ್ಕಿದಾನೆಯ ತೆರದಿ ಸಂದತಿಯು ಗಕ್ಕನೆ ಓಣಿಯಲ್ಲಿ ಸುಳಿದಾಗ ಜನರು ಕಕ್ಕುಲತೆಯಿಂದ ಬೆನ್ನು ಹತ್ತಿದರಂತೆ. ಇನ್ನುಳಿದವರ ಗತಿಯೇನು? ಅವಳ…

ನುಡಿಗೇಳಿ ಗಿಳಿಗಳು ಗಿಡಗಳ ಸೇರ‍್ಯಾವು
ಕುಡಿಹುಬ್ಬ ಕಾಣುತ ಮನ್ಮಥನು | ಕೈಯೊ
ಳ್ಪಿಡಿದುದನು ಬೆನ್ನೋಳಿರಿಸಿದನು | ಆಕಿ
ಅಡಿಗಾವಿ ನಾಚಿ ಹಾರಿತು ಮಡನ | ಬಲು
ಬಡನಡುವನು ಕಂಡು ನಾಚುತ ಸಿಂಹವು
ಬಿಡದಿರಲಾರದೆ ಅಡವಿಯ ಸೇರಿತು || ೨[2]

ದಂತವ ಕಂಡು ದಾಳಿಂಬರ ನಾಚಿ ಚಿಂತೆಯಿಂದ ಬಾಯ ಬಿಟ್ಟಿತಂತೆ | ವಲ್ಲಭೆಯ ನೋಟಕ್ಕೆ ಹುಲ್ಲೆ ನಾಚಿ ಅಡವಿಯ ಸೇರಿತಂತೆ | ರಾಜವದನೆ ಮೋಜಿನಿಂದ ಬಾಜಾರದಲ್ಲಿ ಸುಳಿದರೆ ಕಡುಜಾಣರಾದ ವ್ಯಾಪಾರಿಗಳ ಬಾಯಿ ತವಡುಗಟ್ಟಿತು. ಚಿನಿವಾರ, ಬಳಗಾರ, ಸೆಟ್ಟಿಸಾವಕಾರರು ಎದೆಗೆಟ್ಟು ಹದಗೆಟ್ಟು ಹೋದರಂತೆ, ಅವರ ಸ್ಥಿತಿಕಂಡು ನಗದವರೂ ನಗೆಬಹುದಾಗಿದೆ. ಕೊನೆಗೊಬ್ಬ ಮೋಜುಗಾರ ಅವಳನ್ನು ತರುಬಿ ಎಲ್ಲಿಗೆ ಹೋಗುವಿ ಎಂದು ಕೇಳಿದ. ಅವಳು ಕೊಟ್ಟ ಉತ್ತರ ಹೀಗೆ :

ಹುಡುಗತನದ ಬುದ್ಧಿ ಬಿಡು ಪರಮಡದೇರ
ನಡುಪ್ಯಾಟಿಯೊಳು ಬಂದು ತಗರುಬುವರೆ | ಇಂಥ
ಬೆಡಗಿನ ಬುದ್ಧಿ ಕಲಿಯುವರೆ | ಎನ್ನ
ಒಡಹುಟ್ಟಿದಣ್ಣಗಳ್ ಕೇಳಿದರೆ | ನಿನ್ನ
ಕಡಿದು ಹಾಕುವರೆನ್ನ ಗೊಡವಿಯ ಬಿಡು ನಿನ್ನ
ಮಡದಿಯೊಳಗೆ ಸುಖಬಡು ಹೋಗೋ ಮೂಢಾ || ೧[3]

ಅವನು ಬಿಡದಪ್ಪ | ಇವಳು ಕೊಡದವ್ವ !! ಅವರ ವಾದವಿವಾದ ಬೆಳೆದು ನಿಲ್ಲುತ್ತದೆ; ಹೆಣ್ಣಿಗಾಡಿ ಕೆಟ್ಟವರ ಉದಾಹರಣೆ ಅವಳು ಕೊಟ್ಟರೆ ಹೆಣ್ಣಿಗಾಡಿ ಸುಖಪಟ್ಟವರ ಹೆಸರನ್ನು ಈತ ಹೇಳುತ್ತಾನೆ. ಕೊನೆಗೆ ಗೆದ್ದವರಾರು? ಆ ಸಖಿನಲ್ಲನಾಡಿದ ನುಡಿಗೆ ಮುಗುಳ್ನಕ್ಕು ಉಲ್ಲಾಸದಿಂದ ಅವನ ಕೈಹಿಡಿಯುತ್ತಾಳೆ.  ಅವನನ್ನು ತನ್ನ ಮನೆಗೆ ಕರೆದು ತಂದು ಉಪಚರಿಸಿ, ಉಪರತಿ  ನೀಡಿ ಕಳಿಸುತ್ತಾಳೆ.  ಈ ಗುರುಪಯೋಧರಿ ಮಾಡಿದ ಕಥೆಯನ್ನು ಬಣ್ಣಿಸಿದವ ತಾನೆಂದು ಹೇಳಿ ಕವಿ ಹಾಡನ್ನು ಮುಗಿಸುತ್ತಾನೆ. ಇಲ್ಲಿ ಹರಿದಿರುವ ಶೃಂಗಾರ ಕೇಳುವವನ ಮೈಯಲ್ಲಿ ನವಿರೆಬ್ಬಿಸದೆ ಬಿಡದು.

ಬಾಣಾಸುರನ ಕಥೆಯನ್ನು ಹೋಳೀಪದ ಮಾಡಿದವ ಉಜ್ಜಯನಿಯ ಮರುಳಸಿದ್ದನ ಬಾಲಕ. ಶಿವಸ್ತುತಿ ಮಾಡಿ ಗಣಪಶಾರದೆಯನ್ನು ನೆನೆದು ಕಥೆ ಪ್ರಾರಂಭಿಸುತ್ತಾನೆ. ಬಾಣಾಸುರನು ರಾಜರಿಗೆ ರಾಜನಾಗಿ ಶ್ರೋಣಿತಪುರವನ್ನು ಆಳುತ್ತಿದ್ದ. ಅವನೊಬ್ಬ ಮಹಾಶಿವಭಕ್ತ. ಹರಪೂಜೆ ಮಾಡಿ ಶಿವನಿಂದ ವರವನ್ನು ಪಡೆಯುವ ಶಕ್ತಿ ಅವನದಾಗಿತ್ತು.  ಒಂದು ದಿನ, ಬಾಣಾಸುರ ಶಿವನನ್ನು ತದೇಕ ಭಕ್ತಿಯಿಂದ ಧ್ಯಾನಿಸಿ, ಪ್ರತ್ಯಕ್ಷ ಮಾಡಿಕೊಂಡು ಯಾವ ವೈರಿಯಿಂದಲೂ ತನಗೆ ಮರಣಬಾರದಂತೆ ವರವ ದಯಪಾಲಿಸೆಂದು ಬೇಡಿಕೊಂಡನು. ಹಾಗೆಯೇ ಆಗಲೆಂದು ಶಿವ ವರವನ್ನು ಕೊಡುತ್ತಲೇ ತನ್ನ ಮನದಲ್ಲಿ ಇವನ ಗರ್ವನಾಶ ಮಾಡುವುದಾಗಿ ನಿಶ್ಚಯಿಸಿದನು.

ಬಾಣಾಸುರನ ಪ್ರೀತಿಯ ಪುತ್ರಿ ಉಷೆ, ಪ್ರಾಯ, ರೂಪು, ಗುಣಂಗಳಲ್ಲಿ ಹಿರಿಯಳು. ಅವಳ ಮನದ ಏಕಮೇವ ಆಸೆಯೆಂದರೆ ತನಗೊಬ್ಬ ಉತ್ತಮ ವರ ದೊರೆಯಲೆಂಬುದು. ಅದನ್ನು ಈಡೇರಿಸಿಕೊಳ್ಳಲು ತನ್ನ ನೆಚ್ಚಿನ ಗೆಳತಿ ಚಿತ್ರರೇಖೆಯನ್ನು ಕರೆದುಕೊಂಡು ಅಡವಿಗೆ ನಡೆದು ಗೌರೀಪೂಜೆ ಮಾಡಿವಳು. ಅವಳ ಪೂಜೆಗೆ ಸಂಪ್ರೀತಳಾದ ಗೌರಿ ಉಷೆಯ ಮನದ ಇಂಗಿತವನ್ನು ಅರಿತು, ’ಫಾಲ್ಗುಣ ಶುದ್ಧ ವರದಶಮಿಯ ದಿನ ಮಧ್ಯರಾತ್ರಿಗೆ ನಿನ್ನ ಕನಸಿನಲ್ಲಿ ಒಬ್ಬ ಪುರುಷ ಬಂದು ನಿನ್ನನ್ನು ವರಿಸುತ್ತಾನೆ. ಅವನ ಗುರುತು ಮರೆಯಬೇಡ ; ನೀನು ನಿಶ್ಚಿಂತಳಾಗಿರು’ ಎಂದು ಹೇಳಿ ಮಾಯವಾದಳು.  ಉಷೆ ಸಂತಸಗೊಂಡು ಆ ದಿನ ಬರುವದನ್ನೇ ಹಾರೈಸುತ್ತ ಕುಳಿತಳು. ಕೊನೆಗೊಮ್ಮೆ ಆ ದಿನ ಬಂತು. ಗೌರಿ ಹೇಳಿದ ಮಾತು ದಿಟವಾಯಿತು. ಇಂದುವದನೆಯ ಕನಸಿನಲ್ಲಿ ಕಂದರ್ಪನಂದನ ಕಾಣಿಸಿಕೊಂಡ. ಇಬ್ಬರೂ ಕೂಡಿ ನಲಿದಾಡಿದರು.  ಕನಸು ಒಡೆಯಿತು. ಸ್ಮರಕಂದ ಕಣ್ಣೆದುರು ಇದ್ದಿಲ್ಲ. ಆಗ ಅವಳಿಗೆ ವಿರಹಸಂತಾಪ ಹೆಚ್ಚಾಗತೊಡಗಿತು. ಅವಳನ್ನು ಚಿತ್ರರೇಖೆ ಹಲವು ವಿಧದಲ್ಲಿ ಸಮಾಧಾನ ಪಡಿಸಲು ಯತ್ನಿಸಿದಳು. ಅದೆಲ್ಲ ವ್ಯರ್ಥವಾಯಿತು. ಕನಸಿನಲ್ಲಿ ಕಂಡ ನಲ್ಲನು ಬಾರದಿರೆ ನಾನಿರಲಾರೆನೆಂದು ಉಷೆ ಬೋರಾಡಿ ಅತ್ತಳು. ಚಿತ್ರರೇಖೆ ಬಲುಜಾಣೆ. ಸರ್ವಲೋಕದ ಪುರುಷರ ಚೆಲ್ವಿಕೆಯನ್ನು ಚಿತ್ರದಲ್ಲಿ ರೂಪಿಸಿ ಗೆಳತಿಗೆ ತೋರಿಸಿದಳು. ಒಬ್ಬೊಬ್ಬನಿಗೆ ಆತನ ಹೆಸರಿಟ್ಟು ಕರೆದಳು. ಕಾಮಪುತ್ರನ ಚಿತ್ರ ತೋರಿಸಿದಾಗ ಉಷೆ ಹರ್ಷದಿಂದ ಕಳೆಯೇರಿದಳು. ಹರಿಯ ಮೊಮ್ಮಗನಾದ ಅನಿರುದ್ದನೇ ತನ್ನ ಗೆಳತಿಯ ಕನಸಿನಲ್ಲಿ ಬಂದ ಪುರುಷನೆಂಬುದು ಅವಳಿಗೆ ನಿಶ್ಚಯವಾಯಿತು. ಚಿತ್ರರೇಖೆ ಆ ಕ್ಷಣವೇ ಉಷೆಯ ಚಿತ್ರವನ್ನು ಹಲಗೆಯ ಮೇಲೆ ಬರೆದು, ಅದನ್ನು ಬಗಲಲ್ಲಿಟ್ಟುಕೊಂಡು ಅನಿರುದ್ದನಲ್ಲಿಗೆ ಬಂದು ತೋರಿಸಿದಳು. ಆ ಚಿತ್ರವನ್ನು ಕಂಡೊಡನೆ ಅನಿರುದ್ಧ ಜಿಗಿದಾಡಿದ; ಅದನ್ನು ಕೈಯಲ್ಲಿ ಹಿಡಿದು ಪರಿಪರಿಯಲ್ಲಿ ಮೋಹ ಮಾಡಿದ; ಉಷೆ ಇದ್ದಲ್ಲಿಗೆ ತನ್ನನ್ನು ಕರೆದೊಯ್ಯಲು ಚಿತ್ರರೇಖೆಗೆ ಅಂಗಲಾಚಿ ಬೇಡಿಕೊಂಡ. ಚಿತ್ರರೇಖೆ ತಡಮಾಡದೆ ಅವನನ್ನು ಕರೆದು ತಂದು ಉಷೆಯ ಸಾನ್ನಿಧ್ಯದಲ್ಲಿ ಇರಿಸಿದಳು. ನಲ್ಲನಲ್ಲೆಯವರಿಗೆ ಸ್ವರ್ಗ ಭೂಮಿಗಿಳಿದಂತೆ ಭಾಸವಾಯಿತು.

ಜಗಳಗಂಟ ನಾರದನಿಗೆ ಇಂತಹ ಸುಸಂಧಿ ಸಿಕ್ಕರೆ ಸುಮ್ಮನಿದ್ದಾನೆಯೆ? ಅವನು ಬಾಣಾಸುರನಲ್ಲಿಗೆ ಓಡಿ ಬಂದು ’ಬಾಣನೆ, ನಿನ್ನ ಭಾಗ್ಯಕ್ಕೆ ಎಣೆಯಿಲ್ಲ; ಈ ಮೂರು ಲೋಕಗಳಲ್ಲಿ ನಿನ್ನಂತಹ ಶೂರ ಮತ್ತೊಬ್ಬನಿಲ್ಲ. ಆದರೆ ದುರ್ದೈವಿ ನೀನು; ನಿನ್ನ ಮಗಳಾದ ಉಷೆ ಒಬ್ಬ ವಿಟನೊಡನೆ ಬೆರೆತು ಸರಸಸಲ್ಲಾಪದಲ್ಲಿದ್ದಾಳೆ’ ಎಂದು ಸುಮ್ಮನಾದ. ನಾರದನಾಡಿದ ಮಾತು ಬಾಣಾಸುರನ ಮರ್ಮಕ್ಕೆ ಚುಚ್ಚಿತು. ಕೋಪ ಭುಗಿಲೆಂದು ಪ್ರಜ್ವಲಿಸಿತು. ಕೂಡಲೆ ಆತ ತನ್ನ ಮಂತ್ರಿಯನ್ನು ಕರೆದು ನಿಜ ಸಂಗತಿಯನ್ನು ತಿಳಿದು ಬರಲು ಅಟ್ಟಿದ. ಸತ್ಯಸಂಗತಿ ಸುಳ್ಳಾದೀತೆ? ಉರಿಯನ್ನೇ ಉಗುಳುತ್ತ ಬಾಣಾಸುರ ಸ್ಮರಕಂದನ ಮೇಲೆ ಕೋಪಿಸಿದ; ಅವನ ರುಂಡವನ್ನು ಖಂಡರಿಸಲು ಮಂತ್ರಿಗೆ ಅಪ್ಪಣೆಕೊಟ್ಟ. ಅಲ್ಲಿಯೇ ಇದ್ದ ನಾರದನು ಬಾಣನಿಗೆ ’ಮರುಳೆ, ನಿನ್ನ ತರುಳೆಯ ನಲ್ಲನನ್ನು ಕೊಲ್ಲಿಸುವುದೆ? ಅವರಿಬ್ಬರ ಮದುವೆ ಮಾಡು; ಇಲ್ಲದಿರೆ ಹರಿಯ ಹಾವಳಿ ನಿನ್ನ ಮೇಲಾಗುವುದು ನಿಶ್ಚಿತ’ ಎಂದು ಬುದ್ಧಿವಾದ ಮಾಡಿದ. ಆದರೆ ಬಾಣ ಅವನ ಮಾತಿಗೆ ಒಪ್ಪಲಿಲ್ಲ. ಅನಿರುದ್ಧ ಉಷೆಯರು ಅಳಿಯಲೇಬೇಕು, ಪ್ರಸಂಗ ಬಂದರೆ ಹರಿಯ ಹರಣಕ್ಕೂಪೂರ್ಣ ವಿರಾಮ’ ಎಂದು ಕರಕರ ಹಲ್ಲು ಕಡೆದ.

ಇಷ್ಟರಲ್ಲಿಯೇ ನಾರದ ಹರಿಯಲ್ಲಿಗೆ ಬಂದ. ಇದ್ದ ಸಂಗತಿಯನ್ನು ತಿಳಿಸಿ, ಆತನನ್ನು ಯುದ್ಧಕ್ಕೆ ಹುರಿದುಂಬಿಸಿದ. ಬಾಣನಿಗೂ ಹರಿಗೂ ಯುದ್ಧ ಪ್ರಾರಂಭವಾಯಿತು. ಅತುಲಪರಾಕ್ರಮದಿಂದ ಇಬ್ಬರೂ ಹೋರಾಡಿದರು. ಶ್ರೀಹರಿ ಉರಿದೆದ್ದು ಕೈಯಲ್ಲಿ ಚಕ್ರ ಹಿಡಿದು ಬಾಣಾಸುರನ ಮೇಲೆ ಎಸೆದ. ಬಾಣನ ಕರಗಳು ಕತ್ತರಿಸತೊಡಗಿದವು. ಇನ್ನೆರಡು ಕೈ ಉಳಿದಿರುವಾಗ ಜಾಣ ನಾರದ ಬಾಣನ ಕೈ ಹಿಡಿದ; ಶ್ರೀಹರಿಗೆ ಸನ್ನೆ ಮಾಡಿದ. ಅವರಿಬ್ಬರ ನಡುವೆ ಬೀಗತನ ಆಗಲೆಂದು ಶಿವನಾಣೆ ಇಟ್ಟ. ಉಷೆ ಅನಿರುದ್ಧರ ಮದುವೆ ಸಾಂಗವಾಗಿ ನೆರವೇರಿತು. ಬಾಣನ ಗರ್ವ ಕೆಳಗಿಳಿಯಿತು. ಈ ಹೋಳೀಹಾಡಿನಲ್ಲಿ ಶೃಂಗಾರ ವೀರರಸಗಳು ಸಮ ಪ್ರಮಾಣದಲ್ಲಿ ಹರಿದಿರುವುದನ್ನು ಅರಿಯಬಹುದಾಗಿದೆ.

ಗುರುವರ ಸಿದ್ಧಸೇವಕ

ಗೋಕಾವಿ ಬೆಳಗಾವಿ ಜಿಲ್ಲೆಯ ಗಂಡುಮೆಟ್ಟು. ಕನ್ನಡ ಸಂಸ್ಕೃತಿಯ ನೆಲೆಗಟ್ಟು.  ಆ ನಾಡು ಅನೇಕ ಜನಪದ ಕವಿಗಳಿಗೆ ಜನ್ಮಕೊಟ್ಟು ಪುನೀತವಾಗಿದೆ. ಗುರುವರ ಸಿದ್ಧಸೇವಕ ಆ ಕವಿಗಳಲ್ಲಿ ಒಬ್ಬನಾಗಿದ್ದು  ಪ್ರತಿಭೆಯ ಬಲದಿಂದ ಒಳ್ಳೆಯ ಹಾಡುಗಳನ್ನು ರಚಿಸಿದ್ದಾನೆ. ’ಧೀರ ಕುಮಾರರಾಮ’ ಎಂಬ ಹೋಳೀಹಾಡನ್ನು ಈ ಕವಿಯೇ ಹೇಳಿದ್ದಾನೆ. ಕುಮಾರರಾಮ ಕನ್ನಡ ಗಂಡುಗಲಿ; ಅವನನ್ನು ಕವಿಗಳು ಹಲವು ರೀತಿಯಲ್ಲಿ ಹಾಡಿಹರಿಸಿದ್ದಾರೆ. ಬಯಲಾಟ, ನಾಟಕ, ಕಾವ್ಯ,ಲಾವಣಿ, ತ್ರಿಪದಿ ಹೀಗೆ ಅವನ ಚರಿತೆ ನಾಡಿನುದ್ದಕ್ಕೂ ಹಬ್ಬಿದೆ. ಗುರುವರ ಸಿದ್ಧ ಸೇವಕ ಯಾವುದೋ ಕಾರ್ಯಕ್ಕಾಗಿ ಮಹಾಲಿಂಗಪುರಕ್ಕೆ ಹೋಗಿ ಅಲ್ಲಿ ವಸ್ತಿ ಮಾಡಿದ. ಬೆಳಗಾಗುವವರೆಗೆ ಕುಮಾರರಾಮನ ಆಟ ನೋಡಿದ ಮರುದಿನ ಆ ಕಥೆಯನ್ನೇ ವಸ್ತುವಾಗಿಟ್ಟುಕೊಂಡು ಈ ಹೋಳೀಹಾಡನ್ನು ಬರೆದೆನೆಂದು ಕವಿಯೇ ಹೇಳಿಕೊಂಡಿದ್ದಾನೆ. ಹೀಗಿದ್ದಾಗ ಈ ಜನಪದ ಕವಿಯ ಕವಿತಾಶಕ್ತಿ ಸ್ವಯಂಪೂರ್ಣವೆಂಬುದು ಸ್ಪಷ್ಟವಾಗುತ್ತದೆ.

ಕುಮ್ಮಟನಗರದ ದೊರೆ ಕಂಪಿಲರಾಯ. ಆತನಿಗೆ ಇಬ್ಬರು ಹೆಂಡಂದಿರು; ಹರಿಯಾಲಮ್ಮ ಅವನ ಪಟ್ಟದ ರಾಣಿ; ರತ್ನಾಜಿ ಅವನ ಒಲವಿನ ಚಲುವೆ. ಕಂಪಿಲರಾಯ ರತ್ನಾಜಿಯನ್ನು ಸುಂದರ ಮಾಲೊಂದರಲ್ಲಿ ಇಟ್ಟು ಸಲಹುತ್ತಿದ್ದ. ಹರಿಯಾಲಮ್ಮನ ಹಿರಿಯಣ್ಣ ಬೈಚಪ್ಪ ಕಂಪಿಲರಾಯನ ನಂಬಿಗೆಯ ಮಂತ್ರಿ, ರಾಜನಿಗೆ ಸಕಲ ಸಂಪತ್ತು ಇದೆ. ಹೀಗೆ ವೈಭವಪೂರ್ಣವಾಗಿ ದೊರೆ ರಾಜ್ಯವಾಳುತ್ತಿರಲು ಜಂಗಮನೊಬ್ಬ ಬಂದು ಸರ್ವರಿಗೂ ಮಂಗಳಾಶೀರ್ವಾದ ಮಾಡುತ್ತಾನೆ. ಚಂದ್ರನಲ್ಲಿ ಕಳಂಕವಿರುವಂತೆ ಸಂಪತ್ತಿನ ತೇಜಃಪುಂಜದಲ್ಲಿರುವ ರಾಜನಿಗೆ ಮಕ್ಕಳಿಲ್ಲದ ಕಪ್ಪು ಅಂಟಿದೆಯೆಂದು ಭಾವಿಸಿ ಅರಸನಿಗೆ ಒಂದು ಮಾವಿನ ಹಣ್ಣು ಆಶೀರ್ವದಿಸಿ, ಇದನ್ನು ನಿನ್ನ ರಾಣಿಗೆ ಕೊಡುಯೆಂದು ಹೇಳಿ ಹೊರಟುಹೋಗುತ್ತಾನೆ. ಹರಿಯಾಲಮ್ಮ ಆ ಹಣ್ಣು ತಿಂದು ತೊಗಟೆ, ಗೊಪ್ಪ ಒಗೆದುಬಿಡುತ್ತಾಳೆ. ಅವಳ ದಾಸಿ ರುಚಿಯ ಆಸೆಗೆ ತೊಗಟೆಯನ್ನು ತಿನ್ನುತ್ತಾಳೆ; ಕುದುರೆ ಗೊಪ್ಪವನ್ನು ನುಂಗುತ್ತದೆ, ಹರಿಯಾಲಮ್ಮ, ದಾಸಿ ಮತ್ತು ಕುದುರೆ ಮೂವರೂ ಗರ್ಭಧರಿಸಿ ಸಂತಾನ ಹೊಂದುವರು. ಹರಿಯಾಲಮ್ಮನು ಪಡೆದ ಶಿಶುವೇ ಕುಮಾರರಾಮ; ದಾಸಿಯ ಪುತ್ರನಿಗೆ ಹೋಲ್ಕಿಯರಾಮ ಎಂದು ಕರೆಯುತ್ತಾರೆ. ಕುಮಾರರಾಮ ಮತ್ತು ಹೋಲ್ಕಿಯರಾಮ ರೂಪದಲ್ಲಿ ಒಂದೇ ಬಗೆಯಾಗಿರುವುದೇ ಇದಕ್ಕೆ ಕಾರಣ. ಕುದುರೆಯ ಮರಿಗೆ ಬೊಲ್ಲ ಎಂದು ಹೆಸರಾಗುವುದು. ಈ ಮೂರು ಜೀವಿಗಳು ಬೆಳೆದು ದೊಡ್ಡದಾಗುತ್ತವೆ. ಯೌವನ ಕಾಲಿರಿಸುತ್ತದೆ. ಬೊಲ್ಲನನ್ನು ಹಿಡಿಯುವುದೇ ಕಠಿಣವಾಗಿದೆ. ಅದು ಅಂತರಲೆ ಹಾರುತ್ತದೆ; ಅಲಕ್ಕನೆ ಜಿಗಿಯುತ್ತದೆ. ಯಾರ ಕೈಗೂ ಸಿಗದಂತೆ ಓಡುತ್ತದೆ. ಅದನ್ನು ಕಂಡರೆ ಎಂಥವರಿಗೂ ಭಯ; ಆದರೆ ಕುಮಾರರಾಮ ಹೇಳಿದಂತೆ ಮಾತ್ರ ಅದು ಕೇಳುವುದು.

ರಾಮದ್ವಯರ ಮದುವೆ ವಿಜೃಂಭಣೆಯಿಂದ ನಡೆಯುತ್ತದೆ. ಬೈಚಪ್ಪ ಮಂತ್ರಿಯ ಮಗಳಾದ ರಾಮಲದೇವಿ ಕುಮಾರಾಮನ ಮಡದಿಯಾಗುತ್ತಾಳೆ. ಹೋಲ್ಕಿರಾಮ  ಪದ್ಮಿನಿಯೊಡನೆ ಲಗ್ನವಾಗುತ್ತಾನೆ. ಅವರೆಲ್ಲರೂ ಸುಖದಿಂದ ಬಾಳುವರು. ಕುಮಾರರಾಮ ವೀರ, ಧೀರ, ಪರನಾರೀ ಸಹೋದರ ಆ ಕ್ಷತ್ರಿಯ ಕುಮಾರನಿಗೆ ಆಟವೆಂದರೆ ಚಿನ್ನಾಟ !

ಎಲ್ಲ ವಿದ್ಯೆಯೊಳಗೆ ಬಲ್ಲಿದನೆನಿಸಿದ
ಬಿಲ್ಲು ದಾಂಡೆ ಪಟಗಳ ತಿರುವುವನು | ಒಳ್ಳೆ
ಬಲ್ಲಿದ ಮಹಾಯುದ್ಧ ಮಾಡುವನು | ಗರಡಿ
ಯಲ್ಲಿ ಜೋರು ನಿತ್ಯ ತೆಗೆಯುವನು | ತನ್ನ
ಬಲ್ಲಿದ ಎಪ್ಪತ್ತೇಳು ಮಾನ್ಯರ ಕೂಡುತ
ನಿಲ್ಲದೆ ಎಲ್ಲಿ ಬೇಕಾದಲ್ಲಾಡುವನು || ೧[4]

ತನ್ನ ನೆಚ್ಚಿನ ಕುದುರೆಯನ್ನೇರಿ ಹೊಳೆಯ ನೀರಿನಲ್ಲಿ ಆಟವಾಡುವುದು ಕುಮಾರರಾಮನಿಗೆ ಮೆಚ್ಚಿನ ವಿಷಯ.

ದಿನಗಳು ಉರುಳುತ್ತವೆ. ಚಾರುಚನ್ನಿಗ ಹೋಲ್ಕಿರಾಮನ ಮಡದಿ ಪದ್ಮಿನಿ ಮಗುವಿನ ತಾಯಿ ಆಗುತ್ತಾಳೆ. ಎಲ್ಲರಿಗೂ ಹರ್ಷ. ಅವಳ ಸಂತೋಷಕ್ಕಂತೂ ಮಿತಿಯೇ ಇಲ್ಲ. ಹೀಗೆ ಪುತ್ರೋತ್ಸವದಲ್ಲಿದ್ದ ಪದ್ಮಿನಿಗೆ ಅವಳ ಗೆಳತಿಯರು ವೃತ್ತಾಂತವೊಂದನ್ನು ಹೇಳುತ್ತಾರೆ. ಕುಮಾರರಾಮ ನದಿಯ ತೀರದಲ್ಲಿ ನಲಿದಾಡುತ್ತಿದ್ದಾಗ ತನ್ನ ಗೆಳೆಯನಾದ ಕಾಟಣ್ಣನನ್ನು ಕರೆದು, ’ತೋರಮುತ್ತಿನ ಚೆಂಡು ಆಡೋಣ, ಬಾ’ ಎಂದನು. ಕಾಟಣ್ಣ ’ಮುತ್ತಿನ ಚೆಂಡಾಡುವುದು ತರವಲ್ಲ’ ಹಿರಿಯರು ಆ ಚೆಂಡಾಡಿ  ಕೆಟ್ಟು ಹೋದರು’ ಎಂದು ಬುದ್ಧಿವಾದ ಹೇಳಿದನು. ಕುಮಾರರಾಮನಿಗೆ ಅವನ ಮಾತಾ ಹಿಡಿಸಲಿಲ್ಲ. ಮನೆಗೆ ಓಡಿಹೋಗಿ ತನ್ನ ತಾಯಿಯಾದ ಹರಿಯಾಲಿದೇವಿಯ ಕಾಲಿಗೆರಗಿ ಮುತ್ತಿನ ಚೆಂಡು ಕೊಡಬೇಕೆಂದು ದುಂಬಾಲ  ಬಿದ್ದನು. ತಾಯಿ ಪರಿಪರಿಯಾಗಿ ಹೇಳಿದಳು; ಆ ಚೆಂಡು ಜಗಲಿಯ ಮೇಲಿಟ್ಟು ಪೂಜೆಯಾಗುವ ಚೆಂಡು. ಅದನ್ನಾಡಿದರೆ ಕೇಡೆಂದಳು; ಮಗು ಹಿಡಿದ ಪಟ್ಟು ಬಿಡಲಿಲ್ಲ. ಆ ಚೆಂಡು ಆಡಲೇಬೇಕೆಂದು ಹಟತೊಟ್ಟ. ಮುತ್ತ್ಯಾ ಮುಮ್ಮಡಿಸಿಂಗ ಈ ಚೆಂಡನ್ನೇ ಆಡಿ ಸತ್ತು ಹೋದುದನ್ನು ವಿವರಿಸಿ. ಅದೊಂದನ್ನು ಬಿಟ್ಟು ಬೇಕಾದುದನ್ನು ಬೇಡೆಂದು ಬೇಡಿಕೊಂಡಳು. ಆ ಚೆಂಡಾಡಿದವರು ಪರನಾರೀ ಸಂಗಕ್ಕೆಳಸಿ ಹಾಳಾಗುವರೆಂದು ತಿಳಿ ಹೇಳಿದಳು. ಕುಮಾರರಾಮ ತನ್ನ ತಾಯಿಗೆ ’ಚೆಂಡು ಕೊಡದಿದ್ದರೆ ಹರನಾಣೆ’ ಎಂದ. ಈಗ ತಾಯಿ ಏನು ಮಾಡಬೇಕು? ’ಹರನಾಣೆ ಕೊಟ್ಟ ಮಗನೆ, ನಿನಗೆ ಹರನೇ ಗತಿ’ ಎಂದಾಡಿ ಮುತ್ತಿನ ಚೆಂಡನ್ನು ಮನಸೂ ಮನಸಿಲ್ಲದೆ ಕೊಟ್ಟಳು. ಚೆಂಡು ಸಿಗುವುದೇ ತಡ; ಪುಟಚೆಂಡಿನಂತೆ ಜಿಗಿಯುತ್ತ ಕುಮಾರರಾಮ ಮನೆಯಂಗಳಕ್ಕೆ ಇಳಿದ. ಗೆಳೆಯರನ್ನೆಲ್ಲ ಕರೆದು ಚೆಂಡಿನಾಟಕ್ಕೆ ಹುರಿದುಂಬಿಸಿದ. ರತ್ನಾಜಿಯ ಅರಮನೆಯ ಅಂಗಳ ಅವರಿಗೆ ಆಡುಂಬೊಲವಾಯಿತು. ಆಟ ಭರದಿಂದ ಸಾಗಿತು.

ರತ್ನಾಜಿ ಆಟ ನೋಡುತ್ತ ನಿಲ್ಲಬೇಕೆ? ಆಟಗಾರರ ಗುಂಪು ದೊಡ್ಡದು. ರುದ್ರ, ಇಮ್ಮಡಿ ಜಟ್ಟಿಂಗ, ಸೋಯಣ್ಣ, ಕಾಟಣ್ಣ, ಲಿಂಗಣ್ಣ, ಹೋಲ್ಕಿಯ ರಾಮ ಎಲ್ಲರೂ ಆಡುತ್ತಿದ್ದಾರೆ. ಇವರಿಗೆಲ್ಲ ಹಿರಿಯ ಹುದ್ದರಿ ಕುಮಾರರಾಮ. ಅವನನ್ನು ನೋಡಿದಾಕ್ಷಣವೇ ರತ್ನಾಜಿಯ ಮನದಲ್ಲಿ ಏನೇನೋ ಬಯಕೆ. ತಾರಾಮಂಡಲದ ನಡುವೆ ತೋರುವ ಚಂದ್ರಮ ಯಾರಿಗೆ ಹರ್ಷ ನೀಡುವುದಿಲ್ಲ? ರತ್ನಾಜಿ ಕುಮಾರ ರಾಮನಿಗೆ ಮನಸೋತಳು; ಮೈಸೋಲುವದೊಂದೇ ಬಾಕಿ. ಅವರಾಡುವ ಚೆಂಡು ಪುಟಿದು ನನ್ನ ಮನೆಯಲ್ಲಿ ಬಿದ್ದರೆ ಸಾಕು. ಹಂಪೆಯ ವಿರೂಪಾಕ್ಷನಿಗೆ ದಿಂಡರಕಿ ಹಾಕುವೆನೆಂದು ಬೇಡಿಕೊಂಡಳು. ವಿಧಿಯ ಆಟ! ಕುಮಾರರಾಮ  ಹೊಡೆದ ಚೆಂಡು ರತ್ನಾಜಿಯ ಬಾಗಲಿಗೆ ಬಡಿದು ನಡುಮನೆಗೆ ಓಡಿತು. ಚೆಂಡನ್ನು ಬೇಡಿ ತರುವವರು ಯಾರು? ಕಾಟಣ್ಣ ಬೇಡಿದರೆ ಅವಳು ಕೊಡಲಿಲ್ಲ. ಕುಮಾರರಾಮನೇ ಬಂದು ಕೇಳಿದರೆ ನೋಡುವೆನೆಂದಳು.  ನಿರ್ವಾಹವಿಲ್ಲದೆ ಅವನೇ ರತ್ನಾಜಿಯ ಬಳಿಗೆ ಬಂದ. ಮೀನು ಕಣ್ಮುಂದೆ ಸುಳಿದಾಗ ಬಲೆಬೀಸುವ ಅಂಬಿಗನಂತೆ ರತ್ನಾಜಿ ಮೋಹಜಾಲ ಬೀಸಿದಳು. ತಾಯಿ ಮಗನನ್ನು ಮೋಹಿಸಿದ್ದು ಎಲ್ಲಾದರುಂಟೆ? ಹಾಗೆ ಮಾಡುವುದು ನರಕಕ್ಕೆ ದಾರಿ ಎಂದು ರಾಮ ಹೇಳಿದ. ರತಿಪತಿ ಸಮರಕ್ಕೆ ಯಾವ ಸತಿಯಾದರೂ ಸರಿಯೇ. ರತಿಭೋಗ ಸಮರದ ಇರಿತ ಎಂದಳು ರತ್ನಾಜಿ. ಕಾಮ ಕುರುಡು ಎಂಬ ಮಾತನ್ನೇ ದಿಟಮಾಡಿ ತೋರಿಸುವಂತೆ ರತ್ನಾಜಿ ಕುಮಾರರಾಮನನ್ನು ಬಲತ್ಕಾರದಿಂದ ಅಪ್ಪುವುದರಲ್ಲಿದ್ದಳು. ಕುಮಾರ ಕೈಕೊಸರಿಕೊಂಡು ಅವಳ ಬಲೆಯಿಂದ ಪಾರಾದ’ ಹೊರಗೆ ಓಡಿಬಂದು ಗೆಳೆಯರನ್ನು ಕೂಡಿದ. ಆಗ ಅವಳು ತನಗೆ ಮನಸೋಲದ ರಾಮನನ್ನು ಕೊಲ್ಲಿಸದೆ ಹೋದರೆ ತಾನು ರತ್ನಾಜಿಯೇ ಅಲ್ಲವೆಂದು ಪಂಥ ಮಾಡಿದಳು.

ರತ್ನಾಜಿಗೆ ಯುಕ್ತಿಯೊಂದು ಹೊಳೆಯಿತು ತನ್ನ ಉಗುರಿನಿಂದ ತನ್ನ ಮೈಯನ್ನೇ ಚೂರಿಕೊಂಡು ಗೀರುಗಾಯ ಮಾಡಿಕೊಂಡಳು. ತನ್ನ ಬಳೆಗಳನ್ನು ತಾನೇ ಒಡೆದುಕೊಂಡಳು. ಮುಡಿಬಿಚ್ಚಿ ನೆಲಕ್ಕೆ ಹಾಸಿ ಮಲಗಿಕೊಂಡಳು. ಕಂಪಿಲರಾಯ ಅದೇ ಆಗ ಬೇಟೆಯಾಡಿ ಬಂದಿದ್ದ. ರತ್ನಾಜಿಯ ಇರುವಿಕೆ ಅವನಿಗೆ ವೇದ್ಯವಾಯಿತು. ಸಿಡಿಮಿಡಿಗೊಂಡ; ಕಣ್ಣಿನಿಂದ ಕಿಡಿಕಿಡಿ ಕಾರಿದ. ನಿನಗೆ ಅವಮಾನ ಮಾಡಿದವನ ರುಂಡ ಈಗಲೇ ಹಾರಿಸುವೆನೆಂದು ರತ್ನಾಜಿಗೆ ವಚನಕೊಟ್ಟ. ಅವಳಿಗೆ ಒಳ್ಳೆ ಸುಸಂಧಿ ಸಿಕ್ಕಿತು:

ಏನು ಹೇಳಲಿ ನಾಥ ಮಾನಹಾನಿಯ ನಾನು
ತಾನು ಮೈಮೇಲಿ ಏರಿ ಬಂದ | ರಾಮ
ಗ್ಯಾನವೇಟಿಲ್ಲದೆ ಕಾಮಕೆಂಡ | ಎಳೆದ
ಸ್ವಾನ ಒಲ್ಲೆ ನಾನೆನಲು ಮೈಚೂರಿದ | ನಾಥ
ತಾನೆ ಚಲುವೆನೆಂದು ಮೇಲೆ ಬಂದ ನೀರೆ ಬಾ
ನೀನೆ ಕಾಮಾಟ ಕೊನೆಯೂಟಕೆಂದ || ೧[5]

ಚೆಂಡಿನ ನೆಪಮಾಡಿಕೊಂಡು ಮನೆಯೊಳಗೆ ಪ್ರವೇಶಿಸಿ,  ಚೆಲ್ವಿಕೆಗೆ ಮನಸೋತು  ನನ್ನ ಪಾತಿವ್ರತ್ಯ ಹಾಳು ಮಾಡಬಂದ. ಇಂತಹ ನೀಚನ ರುಂಡ ಹಾರಿಸಿ ನನ್ನ ಹಣೆಗೆ ರಕ್ತದ ತಿಲಕ ಇಟ್ಟಾಗಲೇ ಮನಶ್ಯಾಂತಿ ಎಂದು ಬೋರಾಡಿ ಅಳತೊಡಗಿದಳು.  ಅತಿ ಕೋಪ ಮತಿಭ್ರಷ್ಟತೆಗೆ ಮೂಲ.  ಕೋಪೋದ್ರಿಕ್ತನಾದ ದೊರೆ ಬೈಚಪ್ಪ ಮಂತ್ರಿಯನ್ನು ಕರೆದು, ರಾಮನ ತಲೆ ಹೊಡಿಸಲು ಕಟ್ಟಪ್ಪಣೆ ಮಾಡಿದ. ’ಸತಿಯರ ಕೃತಕವ ಅರಿಯದಲೆ ಒಮ್ಮೆಲೆ ಮತಿಗೆಟ್ಟು ತಲೆ ಹೊಡಿಸಬಹುದೆ?’ ಎಂದು ಮಂತ್ರಿ ಕೇಳಿದರೆ ದೊರೆ ಸಿಟ್ಟಾಗಿ ’ಮಂತ್ರೀಶನೆ, ನನ್ನ ಅಪ್ಪಣೆ ಮೀರಿದರೆ ನಿನ್ನ ತಲೆ ಉರುಳೀತು. ಜೋಕೆ’ ಎಂದನು. ಬೈಚಪ್ಪನಿಗೆ ದಿಕ್ಕು ತೋಚದಂತಾಯಿತು. ತನ್ನ ಕೈಯಾರೆ ನಿರಪರಾಧಿಯಾದ ರಾಮನನ್ನು ಕೊಲ್ಲಿಸುವುದೇ? ಎಂದು ಕಳವಳ ಪಟ್ಟ. ವಿಧಿವಿಲಾಸಕ್ಕಾಗಿ ನೀಳವಾದ ಉಸಿರು ಹಾಕಿದ.

ಕುಮಾರರಾಮನ ತಲೆಹೊಡಿಯುವ ಸುದ್ದಿ ಹರಿಯಾಲದೇವಿಗೆ ತಿಳಿಯಿತು. ಅವಳ ದುಃಖ ಹೇಳತೀರದು. ಅವಳ ತಲೆಯ ಮೇಲೆ ಆಕಾಶವೇ ಕಳಚಿಬಿದ್ದಂತಾಯಿತು. ಕುಮಾರರಾಮನ ಮಡದಿ ಅಲ್ಲೇ ಇದ್ದವಳು ಹರಿಯಾಲಮ್ಮನ ಅರ್ತಸ್ವರಕ್ಕೆ ತನ್ನ ರೋದನ ಧ್ವನಿಯನ್ನು ಬೆರೆಸಿದಳು’ ರಾಮನನ್ನು ಅಪ್ಪಿಕೊಂಡು ಹೌಹಾರಿ ಅಳತೊಡಗಿದರು. ಅವರ ಅಳಲು ಕಣ್ಣೀರ ಕೋಡಿಯಾಯಿತು ಕಂಪಿಲರಾಜನ ಪ್ರಜೆಗಳು ಕಣ್ಣೀರ ಕುಂಡದಲ್ಲಿ ಮುಳುಗಿಹೋದರು. ರಾಮನ ರುಂಡ ಉರುಳುವ ವೇಳೆ ಸಮೀಪಿಸಿತು. ಬೈಚಪ್ಪಮಂತ್ರಿ ರಾಮನನ್ನು ಉದ್ದೇಶಿಸಿ, ’ಮಗು, ಇಂಥ ಅಪರಾಧ ಮಾಡಬಹುದೆ?’ ಎಂದು ಕೇಳಿದ.  ಅದಕ್ಕೆ ರಾಮನೆಂದ: ನಿರಪರಾಧಿಗೂ ಮರಣದಂಡನೆ ಆಗಬಲ್ಲದೆಂಬುದನ್ನು ಲೋಕವರಿಯಲಿ: ಹೊಡೆ, ಹಿಡಿ ಖಡ್ಗ – ಆಗ ಸಖಿಯರು ’ತಾಯಿ, ನಡೆದುದನ್ನೆಲ್ಲ ನಾವು ವರ್ಣಿಸಲು ಸಮರ್ಥರಲ್ಲ. ಆ ಹೊತ್ತಿಗೆ ನಿನ್ನ ಪತಿ ಹೋಲ್ಕಿಯ ರಾಮ ಅಲ್ಲಿಗೆ ಓಡಿಬಂದ. ಕುಮಾರ ರಾಮನ ಪಾದಕ್ಕೆರಗಿ ನಡೆದುಹೋದುದನ್ನೆಲ್ಲ ಅರಿತುಕೊಂಡ. ರಾಮನಿಗೆ ಬಂದ ಹರಲಿಯನ್ನು ನೆನೆದು, ತನ್ನನ್ನೇ ತಾನು ಹಳಿದುಕೊಂಡ. ಅಣ್ಣನ ರುಂಡದ ಬದಲು ತನ್ನ ರುಂಡವನ್ನೇ ಕೊಡುವುದಕ್ಕೆ ಸಿದ್ಧನಾದ’ ಕುಮಾರರಾಮನು ವಿಧಿ ತನ್ನನ್ನು ಈ ಸ್ಥಿತಿಗೆ ತಂದಿತೆಂದು ಹೇಳಿ, ಪಾಲಿಗೆ ಬಂದುದನ್ನು ತಾನೇ ಉಣ್ಣುವುದು ಲೇಸೆಂದನು. ಹೋಲ್ಕಿರಾಮ ಏನೇ ಹೇಳಿದರೂ ಕೇಳಲಿಲ್ಲ. ’ಅಣ್ಣನ ತಲೆಗೆ ಬದಲು ನನ್ನ ತಲೆ ಹಾರಲೇಬೇಕು; ಮಂತ್ರೀಶಾ, ನೀನು ನನ್ನ ತಲೆ ಕಡಿಯದಿದ್ದರೆ ನಿನಗೆ ಹರನಾಣೆ’ ಎಂದನು. ನಿರ್ವಾಹವಿಲ್ಲದೆ ಮಂತ್ರಿ ಆ ಕಾರ್ಯ ಮಾಡಿ ಬಿಟ್ಟ.

ಗಂಡ ಮಡಿದುದನ್ನು ಕೇಳಿ ಪದ್ಮಿನಿ ನೆಲಕ್ಕುರುಳಿದಳು. ತನ್ನ ತಲೆಯನ್ನೇ ನೆಲಕ್ಕೆ ಕುಟ್ಟಿಕೊಂಡಳು. ಮುಂದಿರುವ ಕಂಬಕ್ಕೆ ಹಾಯ್ದಳು. ಅವಳ ದುಃಖ ಮೇರೆಮೀರಿತು. ಬುದ್ಧಿ ಭ್ರಮೆಯಾಯಿತು. ಹುಚ್ಚಿಯಂತೆ ಮಾಡುವ ಪದ್ಮಿನಿ ’ಈ ಕೂಸಿನ ಕಾಲ್ಗುಣವೇ ಕೆಟ್ಟದಿದೆ, ಇದು ಹುಟ್ಟಿ ನನ್ನ ಗಂಡನ ಪ್ರಾಣ ತೆಗೆದುಬಿಟ್ಟಿತು’ ಎಂದು ತನ್ನ ಕೂಸನ್ನು ಕಟ್ಟೆಯ ಕಲ್ಲಿಗೆ ಅಪ್ಪಳಿಸಿದಳು. ಕೂಸಿನ ತಲೆ ಒಡೆಯಿತು. ದುಃಖದ ಮೇಲೆ ದುಃಖ, ಬರಿಯ ಮೇಲೆ ಬರಿ. ಅವಳ ಪ್ರಲಾಪ ಇಮ್ಮಡಿಸಿತು. ತನ್ನ ಗಂಡನ ಸಾವಿಗೆ ಕಾರಣನಾದ ಬೈಚಪ್ಪ ಮಂತ್ರಿಯ ಮೇಲೆ ಕಿಡಿಕಿಡಿ ಕಾರತೊಡಗಿದಳು. ಅಳುವ ಕೂಸನ್ನು ಉಡಿಯಲ್ಲಿ ಕಟ್ಟಿಕೊಂಡು  ಅವನಿದ್ದಲ್ಲಿಗೆ ನಡೆದಳು.

ಇತ್ತ ಚೈಚಪ್ಪಮಂತ್ರಿ ಕುಮಾರನನ್ನು ಎಲ್ಲಿಯೋ ಅಡವಿಯಲ್ಲಿ ಬಚ್ಚಿಟ್ಟು, ಅವನಿಗೆ ಅನ್ನಪಾನಾದಿಯ ವ್ಯವಸ್ಥೆ ಮಾಡಿ,  ಹೋಲ್ಕಿರಾಮನ ತಲೆ ತಂದು ರತ್ನಾಜಿಗೆ ಒಪ್ಪಿಸುತ್ತಾನೆ. ಹೋಲ್ಕಿಯ ರಾಮನ ಶಿರಸ್ಸೂ ಕುಮಾರರಾಮನ ಶಿರಸ್ಸೂ ರೂಪದಲ್ಲಿ ಒಂದೇ. ಅದನ್ನು ಕಂಡು ರತ್ನಾಜಿ ಕುಮಾರರಾಮ ಸತ್ತುಹೋದನೆಂದು ಆನಂದಪಟ್ಟಳು. ಬೈಚಪ್ಪ ತನ್ನ ಮನೆಗೆ ಬರುವುದೇ ತಡ. ಬಾಗಿಲಲ್ಲಿ ಪದ್ಮಿನಿ ಅಳುತ್ತ ನಿಂತಿದ್ದಾಳೆ.  ಮಂತ್ರಿಯ ಮನ ಇಬ್ಭಾಗವಾಗುವುದು. ಅವಳಿಗೆ ಸಮಾಧಾನ ಹೇಳುವುದು ಎಂತು? ಎಂದು ಯೋಚಿಸುತ್ತಿದ್ದಾಗ ’ರಾಮದ್ವಯರನ್ನು ಕೊಲ್ಲಿಸುವಲ್ಲಿ ಧರ್ಮವೇನಿದು ಮಂತ್ರಿ?’ ಎಂದು ಅವಳು ಕೇಳಿದರೆ, ಹೇಳಿದ ಉತ್ತರವಿದು:

ಬಿಡು ತಂಗಿ ಶೋಕವ ಪೊಡವಿಯೊಳು ರಾಮನ
ಹೊಡೆವ ಸಮಯಕೆ ನಿನ್ನ ವಲ್ಲಭನು | ಬಂದು
ಹಿಡಿದನು ಎನ್ನ ಮುಂಗೈಗಳನು | ಅಣ್ಣ
ನುಡಿಬ್ಯಾಡ ನೀನೆಂದು ಆಡಿದನು | ಎನ್ನ
ಹೊಡಿಯೆಂಬು ಮಾತಿಗೆ ಬಿಡದೆ ಹೇಳಿದೆನು ತಂಗೆವ್ವ
ಮೃಡನಾಣಿ ಹಾಕಲು ಹೊಡಿಸಿದೆನವ್ವಾ || ೧[6]

ಶಿವನಾಣೆಯೆದಾಗ ನನಗೆ ಸ್ವಾತಂತ್ರ್ಯ ಉಳಿಯಲಿಲ್ಲ. ನಿನ್ನ ಗಂಡ ಕುಮಾರರಾಮನ ಕೂಡ ತಲೆಕೊಟ್ಟ: ಮಾಡಬೇಕಾದುದೇನು? ’ಲೇಸು ಮಾಡಿದಿ ಮಂತ್ರಿ ಈಶನು ನಿನಗೊಲಿಯುವನು: ನನ್ನನ್ನೂ ಈ ಕೂಸನ್ನು ಹತಿಸು. ಇರುವ ಚಿಂತೆ ನನಗಿನ್ನು ಸಾಕು’ ಎಂದಳು ಪದ್ಮಿನಿ. ಅವಳ ನಿರ್ಧಾರದ ನುಡಿಯನ್ನು ಕೇಳೀ ಕಾದ ಹಂಚಿನ ಮೇಲೆ ದೋಸೆಯನ್ನು ಹೊಯ್ದಂತೆ ಮಂತ್ರಿಯ ಮನ ಚುರ್ರೆಂದಿತು. ಅವಳಿಗೆ ಪರಿಪರಿಯಿಂದ  ತಿಳಿಹೇಳಿ ’ತಂಗಿ, ಪರಮ ಹರುಷದಿಂದ ನಿನ್ನಲ್ಲಿಗೆ ನಾ ಬರುವೆ; ಸಮಾಧಾನ ಹೊಂದು; ಎಂದು ಹೇಳಿ ಹೊರಟು ಹೋದ. ಇಲ್ಲಿಗೆ ಹಾಡು ಮುಗಿಯುತ್ತದೆ. ಅಭಿಜಾತ ಸಾಹಿತ್ಯದಲ್ಲಿ ಬರುವ ಕುಮಾರರಾಮನ ಕಥೆ ಈ ಕಥೆಯಿಂದ ಭಿನ್ನವಾಗಿದೆ. ಕುಮಾರರಾಮನು ವೈರಿಗಳೊಡನೆ ಹೋರಾಡಿ ರಾಜ್ಯಕ್ಕೆ ಬಂದಿರುವ ಕುತ್ತನ್ನು ಹೋಗಲಾಡಿಸಿದ ಕಥೆ ಇಲ್ಲಿ ಬಂದಿಲ್ಲ. ಕಥೆ ಏನೇ ಇರಲಿ; ಎಷ್ಟೇ ಇರಲಿ. ಕಥಾತಂತ್ರ ಮಾತ್ರ ನೂತನವಾಗಿದೆ. ಇಲ್ಲಿ ಶೃಂಗಾರವಿದೆ, ಹಾದರದ ಹುಳುಕು ಜಳಕ್ಕಾಡಿದೆ. ಕರಣರಸಕ್ಕೆ ದೊಡ್ಡ ಸ್ಥಾನ ಸಿಕ್ಕಿದೆ. ಶೈಲಿಯ ಸೊಬಗು ಹಂದರಕ್ಕೆ ಮಲ್ಲಿಗೆಯ ಬಳ್ಳಿ ಹಚ್ಚಿದಂತೆ ಇಂಬಿಟ್ಟು ಮನೋಹರವಾಗಿದೆ.

ಹೋಳಿಯ ಉದ್ದೇಶ

ಈ ಹೋಳೀಹಾಡುಗಳನ್ನು ಬರೆದ ಜನಪದ ಕವಿಗಳು ಹೆಚ್ಚು ಓದಿದವರಲ್ಲ; ಸರ್ವರೊಳೊಂದೊಂದು ನುಡಿಗಲಿತು ಜಾಣರಾಗಿದ್ದಾರೆ.  ಇಂತಹವರನ್ನು ಕಂಡೇ ನೃಪತುಂಗ ’ಕುರಿತೋರದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್’ ಎಂದು ಹೇಳಿರಬೇಕು. ಪುರಾಣಪ್ರವಚನ ಕೇಳಿ ತಮ್ಮ ಅನುಭವದ ಎಲ್ಲೆಯನ್ನು ಇವರು ವಿಸ್ತರಿಸಿಕೊಂಡಿದ್ದಾರೆ. ಸಹಜ ಪ್ರತಿಭೆಗೆ ಸ್ವಾನುಭವ ಬೆರೆತರೆ ಕಾವ್ಯ ಮೂಡುವುದಕ್ಕೆ ತಡವಾಗುವುದಿಲ್ಲ. ಜನಪದರ ಬಾಯಿಯಿಂದ ಸರಾಗವಾಗಿ ಹರಿದು ಬಂದಿದೆ ಜನತೆಯ ಕಾವ್ಯ. ಈ ಸಂಗ್ರಹದಲ್ಲಿ ಬಂದ ಹಾಡುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಮೇಲಿನ ಮಾತು ಸತ್ಯವೆನಿಸಬಹುದು.

ಹೋಳೀಹಾಡು ಒಂದು ವಿಶಿಷ್ಟ ಸಂದರ್ಭದಲ್ಲಿ, ವಿಶಿಷ್ಟ ರೀತಿಯಲ್ಲಿ ಹುಟ್ಟಿ ಬಂದ ಸಾಹಿತ್ಯವಾಗಿದೆ. ಕಾಮವನ್ನು ಸುಟ್ಟು ಅದನ್ನು ಪ್ರೇಮಕ್ಕೆ ತಿರುಗಿಸುವ ಸಂದರ್ಭ ಕಾಮದಹನ. ಈ ಸಮಯ ಬೇಸಿಗೆಯ ಸಮಯ, ಮಾನವನ ಕಾಮ ತುತ್ತ ತುದಿಗೇರುವ ಸಮಯ. ಕಾಮ ಜೀವಿಗೆ ಬೇಕು; ಆದರೆ ಅದು ಅತಿಯಾಗಬಾರದು. ಈ ಹೊಲಸು ಕಾಮವನ್ನು ಮನದಲ್ಲಿ ತುಂಬಿಕೊಂಡು ಇರುವುದು ಎಷ್ಟು ದಿವಸ? ಅದನ್ನು ಹೊರೆದೆಗೆದು ಬೇಗ ಸುಟ್ಟಷ್ಟು ಗುಣ, ವಾಂತಿಯಾದರೆ ದೇಹಕ್ಕೆ ಶಾಂತಿ. ಆದ್ದರಿಂದಲೇ ಮನದ ಹೊಲಸದನ್ನು ಹೊರದೆಗೆದು, ಕಾಮವನ್ನು ಅಲ್ಲಗೆಳೆದು, ಅದನ್ನು ಅವಾಚ್ಯ ಶಬ್ದಗಳಲ್ಲಿ ಮುಚ್ಚಿ, ಸುಟ್ಟು ಸೂರೆ ಮಾಡಿದರೆ ಲೋಕ ಕಲ್ಯಾಣ. ಈ ಹಿನ್ನೆಲೆಯಲ್ಲಿ ಹೋಳೀಹಾಡು ಹುಟ್ಟಿ ಬಂದಿವೆ; ಆನಂದ ತಂದಿವೆ.

ಹಾಡಿನ ದರುವು :

ಹೋಳೀಹಾಡು ಒಂದು ವಿಶಿಷ್ಟ ರೀತಿಯಲ್ಲಿ ರಚಿತವಾದ ಸಾಹಿತ್ಯ. ಅದಕ್ಕೊಂದು ವಿಶಿಷ್ಟ ರೀತಿಯ ಬರವಣಿಗೆ ಅಳವಟ್ಟಿದೆ. ಪ್ರತಿಯೊಂದು ಹಾಡಿನ ಪ್ರಾರಂಭದಲ್ಲಿ ಕವಿಯ ಇಷ್ಟದೇವತೆಯ ಸ್ತುತಿ ಬರುತ್ತದೆ. ಈ ಹಾಡುಗಳನ್ನು ರಚಿಸಿದವರು ಹೆಚ್ಚಾಗಿ ಶೈವರು. ಆದ್ದರಿಂದಲೇ ಪ್ರಾರಂಭದ ಪದ್ಯ ಶಿವಸ್ತುತಿಯಾಗಿ ಬರುವುದು ಸ್ವಾಭಾವಿಕ. ಆ ಮೇಲೆ ಗಣೇಶ ಸರಸ್ವತಿಯರ ಸ್ತುತಿ. ಇವರು ಜ್ಞಾನದಾಯಕ ದೇವರು; ಗಣೇಶನಂತೂ ವಿಘ್ನವಿನಾಶಕ. ಅವನನ್ನು ಸ್ತುತಿ ಮಾಡದೆ ಯಾವ ಜನಪದ ಕವಿಯೂ ತನ್ನ ಕೃತಿಯನ್ನು  ಪ್ರಾರಂಭಿಸುವುದಿಲ್ಲ. ಮಹಾಕವಿಗಳಂತೆ ಜನಪದ ಕವಿ ಉದ್ದುದ್ದ ವರ್ಣನೆ ಮಾಡುತ್ತ ನಿಲ್ಲುವುದಿಲ್ಲ. ಎರಡು ಮೂರು ಪದ್ಯಗಳಲ್ಲಿ ಗಣಸ್ತುತಿ ಮುಗಿದೇ ಹೋಗುತ್ತದೆ. ಆಮೇಲೆ ನೇರವಾಗಿ ತಾವು ಆಯ್ದುಕೊಂಡ ಕಥೆಯನ್ನು ಪ್ರಾರಂಭಿಸುತ್ತಾರೆ. ಮಹಾಕಾವ್ಯಗಳ ಪೀಠಿಕಾ ಸಂಧಿಯಲ್ಲಿ ಕಥಾವಸ್ತುವನ್ನು ಸೂಚಿಸುವ ಒಂದು ಪದ್ಯವಿರುವಂತೆ ಹೋಳೀಹಾಡಿನಲ್ಲಿಯ ಕಥಾ ಸೂಚನೆ ಬರುತ್ತದೆ. ಇಂತಹ ಕಥೆಯೇ ಈ ಹಾಡಿನಲ್ಲಿದೆಯೆಂಬುದು ಕೇಳುವವರಿಗೆ ತಿಳಿಯಬೇಕೆಂದು ಸೂಚನಾಪದ್ಯದ ಉದ್ದೇಶ.  ಕೆಲವು ಹಾಡುಗಾರರು ಈ ಕಥೆಯನ್ನು ಈತ ಇಂಥವನಿಗೆ ಹೇಳಿದ ಎನ್ನುವ ರೀತಿಯಲ್ಲಿ ಬರೆದುದನ್ನು ಅರಿಯುತ್ತೇವೆ. ಮಹಾಭಾರತ ಕಥೆಗಳನ್ನೇ ವಸ್ತುವಾಗಿ ಇಟ್ಟುಕೊಂಡ ಹಾಡುಗಾರರು ಹಾಗೆ ಮಾಡಿದ್ದುಂಟು. ಕುಮಾರವ್ಯಾಸಭಾರತ ಜೈಮಿನಿಭಾರತಗಳಲ್ಲಿರುವ ಈ ಪದ್ಧತಿ ಹೋಳೀಹಾಡಿಗೂ ಇಳಿದು ಬಂದಿರಬೇಕು. ಆ ಕಾವ್ಯಗಳು ಒಂದು ರೀತಿಯಲ್ಲಿ ಜನಪದದ ಮೇಲೆ ಮಾಡಿದ ಪರಿಣಾಮವೇ ಇದಕ್ಕೆ ಕಾರಣವೆಂದು ಹೇಳಬಹುದು.

ಹೋಳೀಹಾಡುಗಾರ ತಾನು ಆಯ್ದುಕೊಂಡ ಕಥೆಯ ಹಿನ್ನೆಲೆಯನ್ನು ಒಂದೆರಡು ಸಾಲುಗಳಲ್ಲಿ ಸೂಚಿಸಿ ಹಾಡು ಪ್ರಾರಂಭಿಸಿ ಬಿಡುತ್ತಾನೆ. ಕಥೆಗೆ ಸಹಜವಾದ ನಿರೂಪಣೆ ಕೊಡುವುದೇ ಕವಿಯ ಉದ್ದೇಶ. ಕಥೇ ಮುಂದೆ ಸಾಗಿದಂತೆ ಅಲ್ಲಿರುವ ಪಾತ್ರಗಳು ತಮ್ಮಷ್ಟಕ್ಕೆ ತಾವೇ ಮೈದುಂಬಿ ನಿಲ್ಲುತ್ತವೆ. ಸನ್ನಿವೇಶಕ್ಕೆ ಅವಶ್ಯವಿದ್ದಲ್ಲಿ ಆ ಪಾತ್ರಗಳೇ ಸಂಭಾಷಣೆ ಜರುಗಿಸುವುದುಂಟು. ಹೀಗಾಗಿ ಕಥೆಯ ಬೆಳವಣಿಗೆಯಲ್ಲಿ ಪಾತ್ರಪೋಷಣೆ ನಡೆಯುವುದು ಹಾಡಿನ ವೈಶಿಷ್ಟ್ಯವಾಗಿ ನಿಲ್ಲುವುದು. ಕಥೇ ಮುಕ್ತಾಯಕ್ಕೆ ಬಂದಂತೆ ಮನಸ್ಸಿನ ಮೇಲೆ ಒಳ್ಳೆಯ ಪರಿಣಾಮ ಉಂಟಾಗುವ ಹಾಗೆ ಈ ಹಾಡುಗಳ ರಚನೆ ಆಗಿರುವುದು ಇನ್ನೊಂದು ವೈಶಿಷ್ಟ್ಯ. ಕೊನೆಯಲ್ಲಿ ಕವಿ ತನ್ನ ಮುದ್ರಿತ ಹಾಕಿ ಹಾಡು ಮುಗಿಸುತ್ತಾನೆ. ಕವಿಯ ಊರು, ಗುರು, ಇಷ್ಟದೇವತೆಯ ಹೆಸರು ಇಲ್ಲಿ ಬರುವುದರಿಂದ ಕವಿ ಚರಿತೆಕಾರನಿಗೆ ಸಾಮಗ್ರಿ ದೊರೆಯಬಹುದಾಗಿದೆ.

ಹೋಳೀಹಾಡಿಗೆ ಇಂತಹ ಕಥೆಯೇ ಇರಬೇಕೆಂದು ನಿಯಮವಿಲ್ಲ. ರಾಮಾಯಣ ಮಹಾಭಾರತ ಕಥೆಯೇ ಆಗಬಹುದು; ಇಲ್ಲವೆ ಯಾವುದೋ ಒಬ್ಬ ಪುರಾಣ ಪುರುಷನ ಕಥೆ ಇರಬಹುದು; ಇಲ್ಲವೆ ಅದೊಂದು ಸನ್ನಿವೇಶದ ವರ್ಣನೆ ಆದರೂ ಆಗಬಹುದು. ಇಲ್ಲಿ ವಸ್ತು ಮುಖ್ಯವಲ್ಲ; ಹಾಡಿನ ರೀತಿ ಮಹತ್ವದ್ದು. ಹೋಳೀಹಾಡುಗಾರ ಅದರ ಮಸಲತ್ತು ತಿಳಿಯಬಲ್ಲ. ತನ್ನ ಹಾಡುಗಾರಿಕೆಯ ಮೋಡಿಯಲ್ಲಿ ಎಲ್ಲದನ್ನೂ ಬೆಳೆಸಿಕೊಂಡು ಹೋಗುತ್ತಾನೆ. ಜನ ತನ್ನ ಹಾಡು ಕೇಳಿ ಆನಂದ ಪಡೆಯಬೇಕೆಂಬುದೇ ಅವನ ಗುರಿ; ಆ ಗುರಿಸಾಧನೆಯಲ್ಲಿ ನೀತಿನಿಯಮವನ್ನೂ ಆತ ಮರೆಯುವುದಿಲ್ಲ. ಹಾಡು ಜನತೆಯನ್ನು ಬದುಕಿಸಬೇಕು. ಜನ ಬದುಕಲೆಂದೇ ಅವನು ಹಾಡಿಕೊಳ್ಳುವುದು. ಇದಕ್ಕನುಗುಣವಾಗಿ ಹೋಳೀಹಾಡಿನಲ್ಲಿ ಆನಂದದೊಡನೆ ನೀತಿಬೋಧೆಯೂ ಬಂದಿರುವುದನ್ನು ಅರಿಯಬಹುದು.

ವರ್ಣನೆಗಾಗಿಯೇ ವರ್ಣನೆ ಮಾಡುವದು ಜನಪದ ಸಾಹಿತ್ಯದಲ್ಲಿಯೇ ವಿರಳ. ಹೋಳೀಹಾಡಿನಲ್ಲಂತೂ ಪ್ರತ್ಯೇಕವಾಗಿ ವರ್ಣನೆ ಎಲ್ಲಿಯೂ  ಬರುವುದಿಲ್ಲ. ಸನ್ನಿವೇಶಕ್ಕೆ ಎಷ್ಟು ಬೇಕೊ ಅಷ್ಟು ಅವನು ವರ್ಣಿಸುತ್ತಾನೆ. ಪಾತ್ರದ ಬೆಳವಣಿಗೆಗೆ ಅವಶ್ಯವಾದ ವರ್ಣನೆಯನ್ನು ಆತ ಮಾಡುತ್ತಾನೆ. ಅದರಲ್ಲಿಯೂ ಶೃಂಗಾರ ವರ್ಣನೆಗೆ ಆತ ಹೆಚ್ಚು ಗಮನ ಕೊಡುತ್ತಾನೆ. ನೇರವಾಗಿ ಕಥೇ ಹೇಳುವುದೇ ಅವನ ಗುರಿಯಾದಾಗ ಬಯಲ ವರ್ಣನೆಗೆ ಅಲ್ಲಿ ಅವಕಾಶ ಸಿಗುವುದು ಸಾಧ್ಯವಿಲ್ಲ. ಮಾಡಲೇಬೇಕಾದ ವರ್ಣನೆಯನ್ನು ಹಿತಮಿತವಾಗಿ ಮನಂಬುಗುವಂತೆ ಮಾಡಿದ್ದು ಈ ಹಾಡುಗಳಲ್ಲಿ ಒಡೆದು ಕಾಣುತ್ತದೆ. ಒಮ್ಮೊಮ್ಮೆ ಈತ ಮಾಡುವ ವರ್ಣನೆ ಕೇಳುವವನಿಗೆ ಎಂದೂ ಬೇಸರ ತರುವುದಿಲ್ಲ; ಕೇಳುವ ಉತ್ಸಾಹವನ್ನು ಅದು ಇಮ್ಮಡಿಸಬಲ್ಲದು.

ಪಾತ್ರಗಳು ಜೀವಂತವಾಗಿದ್ದರೆ ಕಾವ್ಯದ ಸೊಗಸು ಹೆಚ್ಚುತ್ತದೆ. ಹೋಳೀಹಾಡಿನಲ್ಲಿ ಅನವಶ್ಯಕ ಪಾತ್ರಗಳು ಬರುವುದೇ ಕಡಮೆ. ಮುಖ್ಯ ಪಾತ್ರದ ಬೆನ್ನು ಹತ್ತಿಯೇ ಹಾಡುಗಾರ ಓಡುತ್ತಾನೆ.  ಪಾತ್ರದ ಆಗುಹೋಗುಗಳ ಕಡೆಗೆ ತನ್ನ ಸಂಪೂರ್ಣ ಗಮನ ಹರಿಬಿಡುತ್ತಾನೆ. ಈ ಹಾಡುಗಳಲ್ಲಿ ಬರುವ ಕುಮಾರರಾಮ, ವೀರ ಅಭಿಮನ್ಯು, ಮಲುಹಣ ಮೊದಲಾದ ಪಾತ್ರಗಳು ಜೀವಂತ ಪಾತ್ರಗಳು; ಮರೆತರೂ ಮರೆಯಲಾರದ ವ್ಯಕ್ತಿಗಳು, ಅವರವರ ಗುಣಗಳೇ ಅವರನ್ನು ಮೈದುಂಬಿಸುತ್ತವೆ ಜೀವಕ್ಕೆ ಸತ್ವವನ್ನು ಅಂಟಿಸುತ್ತವೆ. ಒಮ್ಮೊಮ್ಮೆ ಪಾತ್ರಗಳ ಬೆಳವಣಿಗೆಯೇ ಸನ್ನಿವೇಶವನ್ನು ಹಿಗ್ಗಿಸಿ, ಕಥೆಯ ಓಟಕ್ಕೆ ಮಾರ್ಗ ಮಾಡಿ ಕೊಡುವುದು ಸೂಕ್ಷ್ಮಮತಿಗಳಿಗೆ ಹೊಳೆಯದೇ ಇರದು.

ಹೋಳಿಯ ಹಾಡು ರಸಭರಿತವಾಗಿವೆ. ಇವುಗಳ ನರನಾಡಿಗಳಲ್ಲಿ ಹರಿಯುವ ಮುಖ್ಯರಸ ಶೃಂಗಾರ. ಶೃಂಗಾರದಲ್ಲಿ ಸಂಭೋಗಶೃಂಗಾರ. ಮತ್ತು ವಿಪ್ರಲಂಭ ಶೃಂಗಾರ ಎಂದು ಎರಡು ವಿಧ. ಈ ಎರಡೂ ಪ್ರಕಾರದ ಶೃಂಗಾರಗಳು ಈ ಹಾಡುಗಳಲ್ಲಿ ಸೂಸಿ ಹರಿಯುವುದನ್ನು ಕಾಣುತ್ತೇವೆ, ಶೃಂಗಾರ ವರ್ಣನೆಯ ಒಡಲಲ್ಲಿಯೇ ಹುಟ್ಟುವ ತಿಳಿಹಾಸ್ಯ ಕೆಲವು ಕಡೆ ಮಿಂಚಿದುದನ್ನು ಅರಿಯುತ್ತೇವೆ. ಮೊದಮೊದಲು ಶೃಂಗಾರ ರಸಕ್ಕೆ ಹೋಳಿ ಹಾಡುಗಳಲ್ಲಿ ಪ್ರಧಾನ ಪಟ್ಟವಿರಬೇಕು. ಬರುಬರುತ್ತ ಹಾಡುಗಾರರು ವೀರರಸ ಪ್ರಧಾನವಾದ ಕಥೆಗಳನ್ನು  ಆಯ್ದುಕೊಂಡು ಹಾಡು ರಚಿಸಲು ಮುಂದಾದಾಗ ವೀರ, ಕರುಣ ರಸಗಳಿಗೆ ಪ್ರಾಧಾನ್ಯ ಬಂದಿರಬೇಕೆನಿಸುತ್ತದೆ. ಈ ರಸಗಳು ಹೋಳೀಹಾಡುಗಳಲ್ಲಿ  ಸ್ವಚ್ಛಂದವಾಗಿ ಹರಿಯುವುದನ್ನು ನೋಡುತ್ತೇವೆ. ಇಷ್ಟೇ ಅಲ್ಲದೆ ಶರಣರ ಸಾಧುಸತ್ಪುರುಷರ ಚರಿತ್ರೆಗಳನ್ನು ಹೋಳೀಹಾಡುಗಳಲ್ಲಿ ಹೇಳಿದವರೂ ಕೆಲವರಿದ್ದಾರೆ. ಅಲ್ಲಿ ಭಕ್ತಿಗೆ ಪ್ರಧಾನ ಪಟ್ಟ. ಇನ್ನು ಕೆಲವು ಹಾಡುಗಳಲ್ಲಿ ಶೃಂಗಾರ ಅಶ್ಲೀಲತೆಯ ಅಂಚು ಮುಟ್ಟಿತೆನ್ನುವ ಸಂದರ್ಭದಲ್ಲಿ ಆ ಪ್ರವಾಹವನ್ನು ಭಕ್ತಿಯ ಸರೋವರಕ್ಕೆ ತಿರುಗಿಸಿದ್ದು ಕಾಣಸಿಗುತ್ತದೆ. ಕೃಷ್ಣ  – ಗೊಲ್ಲತಿ ಮಲುಹಣ – ಮಲುಹಣಿ ಈ ಹಾಡುಗಳನ್ನು ಅವಲೋಕಿಸಿದರೆ ಈ ಮಾತಿನ ಅರ್ಥ ಹೊಳೆಯ ಬಲ್ಲುದು. ಒಟ್ಟಿನಲ್ಲಿ, ಹೋಳೀಹಾಡು ಚೈತನ್ಯದ ಚಿಲುಮೆಯಾಗಿ, ರಸದ ಒರತೆಯಾಗಿ, ವಿವಿಧ ಭಾವಗಳ ತೆರೆಗಳ ಆಗರವಾಗಿ ನಿಂತಿರುವುದು ಪ್ರಕಾಶದಷ್ಟು ಸ್ಪಷ್ಟ.

ಹಾಡಿನ ದರತಿ

ಹೋಳೀಹಾಡಿಗೆ ಒಂದು ಧಾಟಿ ಇದೆ. ತಾಳಮೇಳ ಇದೆ; ಏರಿಳಿತದ ಓಟವಿದೆ. ಪ್ರತಿಯೊಂದು ಹಾಡಿನಲ್ಲಿ ಇಪ್ಪತ್ತೈದರಿಂದ ಹಿಡಿದು ನೂರೈವತ್ತು ಪದ್ಯಗಳಿರಬಹುದಾಗಿದೆ. ಈ ಸಂಖ್ಯೆ ಕಥಾವಸ್ತುವಿನ ಆಳ, ಅಗಲಗಳನ್ನು ಅವಲಂಬಿಸಿ ಹಿಂದುಮುಂದೆ ಸರಿದಾಡುವುದುಂಟು. ಪ್ರತಿಯೊಂದು ಪದ್ಯ ಒಂದೊಂದು ಭಾವ ಬೀಜವನ್ನು ಬಿತ್ತಲು ತಕ್ಕ ಮಡಿಯಾಗಿದ್ದರೂ ಕೆಲವು ಕಡೆ ಒಂದು ಪದ್ಯದ ಭಾವದ ಹರವು ಮುಂದಿನ ಪದ್ಯಕ್ಕೂ ಜೀಕಬಹುದಾಗಿದೆ. ಭಾವಾವೇಶ ತೀವ್ರಗತಿಯಲ್ಲಿದ್ದರೆ ಪ್ರತಿಯೊಂದು ಪದ್ಯ ಆರು ಸಾಲಿನ ಚಿಕ್ಕಮಡಿಯಲ್ಲಿ ತುಂಬಿಕೊಳ್ಳುತ್ತದೆ. ಭಾವ ಹಿರಿದಾಗಿದ್ದರೆ ಪದ್ಯದ ಪಾದಸಂಖ್ಯೆ ಏಳಕ್ಕೆ ಏರುತ್ತದೆ. ಆ ಸಂದರ್ಭದಲ್ಲಿ ಐದನೆಯ ಪಾದದಲ್ಲಿ ಪ್ರಾಸಭರಿತ ಯತಿ ಲಯಬದ್ಧವಾಗಿ ಮೂರು ಕಡೆ ತೋರುತ್ತದೆ. ಮಲುಹಣನ ಹಾಡಿನಲ್ಲಿ ಈ ಚೋದ್ಯವನ್ನು ಕಾಣಬಹುದು. ಹೋಳೀಹಾಡಿನ ಮೊದಲಿನ ಎರಡು ಸಾಲು, ಕೊನೆಯ ಎರಡು ಸಾಲು ಎಳೆಯ ಹರವಿನಲ್ಲಿದ್ದರೂ ಮೂರು ನಾಲ್ಕು, ಅಕಸ್ಮಾತ್ ಐದನೆಯ ಸಾಲಿನ ಓಟ ಆಯಾ ಸಾಲಿನಲ್ಲಿ ಕೊನೆಗೆ ಮೂರು ಮಾತ್ರೆ ಇದ್ದಾಗ, ಗಕ್ಕನೆ ನಿಂತು, ಆ ಮೇಲೆ ಏರುಹತ್ತಿ ಜೋರಾಗಿ ಮೂರನೆಯ ಪಾದಕ್ಕೆ ಜಿಗಿದು ಬಿಡುತ್ತದೆ. ಇಲ್ಲಿದೆ ಹೋಳೀಹಾಡಿನ ದರತಿಯ ಚಮತ್ಕಾರ. ಈ ಹಾಡುಗಳಲ್ಲಿ ಪ್ರಾಸದ ಕಟ್ಟುನಿಟ್ಟು ಬಹಳ. ಆದಿ ಪ್ರಾಸವಂತೂ ಇರಲೇಬೇಕು; ತಪ್ಪಿದರೆ ದೋಷ, ಇಷ್ಟೇ ಅಲ್ಲದೆ, ಎರಡು ಮೂರು ಮತ್ತು ನಾಲ್ಕನೆಯ ಪಾದಗಳ ಕೊನೆಗೆ ಏರಿಕೆಯ ಮುರಿತದಲ್ಲಿಯೂ ಅಂತ್ಯಪ್ರಾಸವಿರಬೇಕು. ಅದನ್ನಂತೂ ತಪ್ಪಿಸಲೇಬಾರದು. ಇಷ್ಟೇ ಅಲ್ಲದೆ ಪದ್ಯ ಏಳು ಸಾಲಿನದಾಗಿದ್ದರೆ ಐದನೆಯ ಸಾಲಿನಲ್ಲಿ ಮೂರು ಕಡೆ ಯತಿ ತೋರಿಸಿ, ಯತಿಸ್ಥಾನದಲ್ಲಿ ಪುನಃ ಅನುಪ್ರಾಸವನ್ನು ಪಾಲಿಸಬೇಕು. ಇಷ್ಟೊಂದು ಪ್ರಾಸದ ಕಟ್ಟುನಿಟ್ಟು ಯಾವ ಕನ್ನಡ ಕಾವ್ಯದಲ್ಲಿಯೂ ಇದ್ದಂತಿಲ್ಲ. ಇಷ್ಟೊಂದು ನಿಯಮಗಳನ್ನು ಹಾಡುಗಾರ ಪಾಲಿಸಲೇಬೇಕು; ಅವರಂತೂ ಪಾಲಿಸುತ್ತಲೇ ಬಂದಿದ್ದಾರೆ. ಆದರೆ ಸಾಮಾನ್ಯ ಹಾಡುಗಾರ ಪ್ರಾಸದ ಕಡೆಗೆ ಕಣ್ಣಿಟ್ಟು ನಡೆವಾಗ, ಅರ್ಥದ ಗಾಂಭೀರ್ಯ ಕಾಯ್ದುಕೊಳ್ಳುವಲ್ಲಿ ಎಡವಿದ ಪ್ರಸಂಗಗಳನ್ನು ಕಾಣಬಹುದು. ಅಂತಹ ಪ್ರಸಂಗಗಳು ಅಲ್ಲೊಮ್ಮೆ ಇಲ್ಲೊಮ್ಮೆ ಬಂದಿರಬಹುದು. ಹಾಡುವವನ ಭಾವಾವೇಶದ ಸೆಳವಿನಲ್ಲಿ ಆ ತಪ್ಪುಗಳ ತೆಪ್ಪ ತೇಲಿಹೋಗುತ್ತದೆ. ಕೇಳುವವರಿಗೆ ಅದರಿಂದ ಆತಂಕವಿಲ್ಲ. ಭಾವಾಭಿವ್ಯಕ್ತಿ ಒಂದು ಸಾಲಿಗೆ ಮುಗಿಯದುಯ; ಮುಂದಿನ ಸಾಲಿಗೆ ಕೋಯೆನ್ನುತ್ತಿದ್ದಾಗ ತೊಂದರೆ ಎಲ್ಲಿ? ಒಟ್ಟಿನಲ್ಲಿ, ಹೋಳೀಹಾಡು ರಾಗದ ದರತಿಗೆ ಹೊಂದಿ, ಬೀಸುವ ಸುಳಿಗಾಳಿಯಂತೆ ಅಲೆಅಲೆಯಾಗಿ ಬಂದು ಕಿವಿಗೆ ಅಪ್ಪಳಿಸಿದರೆ ಕರ್ಣಾನಂದಕ್ಕೆ ಕುಂದು ಇಲ್ಲ; ಮನದಾನಂದಕ್ಕೆ ಕೊರತೆ ಇಲ್ಲ. ರಸಿಕ ಅನುಭವಿಸಿ ಅರಿಯಬೇಕು ಈ ಹಾಡುಗಳ ಆನಂದವನ್ನು; ಆಗ ತಿಳಿಯುತ್ತದೆ ಹಾಡಿನ ಇಂಗಿತ. ಸಾಹಿತ್ಯ ಅನುಭವ ವೇದ್ಯ; ಬು‌ದ್ಧಿಯ ಕಸರತ್ತೂ ಅನುಭವಕ್ಕೆ ತಿರುಗಬೇಕು; ಆಗಲೇ ಕಾವ್ಯದ ಸತ್ವ ತಿಳಿಯುತ್ತದೆ. ಈ ಬಗೆಯ ಸಾಹಿತ್ಯ ರಸಿಕರಿಗೆ ರಸದೂಟವಾಗಲೆಂದು ಶ್ರಮವಹಿಸಿ ಈ ಕಾರ್ಯಮಾಡಿದ್ದೇವೆ. ಉಂಡವರಿಗೆ ಆನಂದ ಆಗದೇ ಹೋದರೆ ಅಡುಗೆ ಮಾಡಿದವನ ತಪ್ಪು ಎದ್ದು ಕಂಡೀತು ಆದರೆ ಊಟ ಮಾಡುವವನ ನಾಲಗೆಯೇ ಕೆಟ್ಟಿದ್ದರೆ ಯಾರನ್ನು ದೂರಬೇಕು? ಜನಪದ ಸಾಹಿತ್ಯದಲ್ಲಿ ತಪ್ಪು ಇರಬಹುದು; ಆದರೆ ಅದು ರಸವತ್ತಾದ ಸಾಹಿತ್ಯವೇ ಅಲ್ಲವೆಂಬುದು ಧಾಷ್ಟ್ಯದ ಮಾತು. ಆ ನಿರ್ಣಯಕ್ಕೆ ಯಾರು ಹೊಣೆ? ಕವಿಯೆ? ರಸಿಕನೆ? ಯಾರೆಂಬುದನ್ನು ಅವರೇ ಅರಿಯಲಿ. ನಡೆವರು ಎಡವಬಹುದು; ಕುಳಿತವರು ಎಡವಲಾರರು.

ಹೋಳೀಹಾಡುಗಳನ್ನು ಸಂಗ್ರಹಿಸಿ, ಸಂಶೋಧಿಸಿ, ಪ್ರಕಟಿಸಿದ್ದೇವೆ. ಅದೆಲ್ಲ ನಮ್ಮ ಹುಚ್ಚು. ಒಳ್ಳೆಯ ಕಾರ್ಯಕ್ಕೆ ಹುಚ್ಚು ಹಿಡಿದರೆ ಕೆಡುಕಲ್ಲ. ಜನಪದ ಸಾಹಿತ್ಯವನ್ನು ಪ್ರಕಾಶಕ್ಕೆ ತರುವುದು ಕಷ್ಟದ ಕಾರ್ಯ. ಬಂಜೆ ಬೇನೆಯನ್ನು ಅರಿಯಳು. ಹಡೆದವಳಿಗೆ ಗೊತ್ತು ಆ ಶ್ರಮ. ಮಗುವಿನ ಮುಖ ನೋಡಿದಾಗ ಬಾಣತಿ ಅನುಭವಿಸಿದ ನೋವು ಮಾಯವಾಗುತ್ತದೆ. ಆ ಆನಂದವೇ ಆನಂದ. ಹೆರಿಗೆ ಸುಖಮಯವಾಗಲೆಂದು ಹರಿಸಿದವರೂ ಹಾರೈಸಿದವರೂ ನಮ್ಮವರೇ, ಅವರು ಜನಪದ ಸಾಹಿತ್ಯದ ಹಿತೈಷಿಗಳು. ಅವರನ್ನು ನೆನೆಯದಿದ್ದರೆ ಪ್ರಮಾದವಾದೀತು.  ಈ ಸಂಕಲನದಲ್ಲಿ ಬಂದಿರುವ ಹಾಡುಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ನೆರವಾದ ಶ್ರೀ ವಿಶ್ವನಾಥ, ತಿಪ್ಪಣ್ಣ ಶಾಸ್ತ್ರಿ ನರಗುಂದ ಅವರನ್ನು ಮರೆಯಲಾರೆ, ಅವರು ಇನ್ನೂ ನೆರವು ಕೊಡುತ್ತಲೇ ಇದ್ದಾರೆ. ಅವರಿಗೆ ವಂದನೆಗಳು.

ಈಗ ನಮ್ಮ ವಿಶ್ವವಿದ್ಯಾಲಯದ ಕುಲಪತಿ ಸ್ಥಾನದಲ್ಲಿರುವ ಡಾ. ಆರ್.ಸಿ. ಹಿರೇಮಠ ಅವರು ಕನ್ನಡದ ಬೆಳವಣಿಗೆಗಾಗಿ ಅವಿರತ ಪ್ರಯತ್ನ  ಮಾಡುತ್ತಲಿದ್ದಾರೆ. ಅಭಿಜಾತ ಸಾಹಿತ್ಯದಷ್ಟೇ ಪ್ರಬಲವಾದ ಜನಪದ ಸಾಹಿತ್ಯವನ್ನು ಉಳಿಸಿ ಬೆಳೆಸುವಲ್ಲಿ ಸಕಲರಿಗೂ ಪ್ರೋತ್ಸಾಹ ನೀಡುತ್ತಿದ್ದಾರೆ. ಅವರ ಪ್ರೋತ್ಸಾಹ ಬಲದಿಂದಲೇ  ’ ಜೀವನ ಜೋಕಾಲಿ’ ಗೆ ಜೂರಿ ಹೆಚ್ಚಾಗುತ್ತ ನಡೆದಿವೆ. ಹಾಗೆಯೇ ಕುಲಸಚಿವರಾದ ಶ್ರಿ ಎಸ್.ಎಸ್. ಒಡೆಯರ ಅವರು ಜನಪದ ಸಾಹಿತ್ಯದ ಆಗುಹೋಗುಗಳನ್ನು ಅಳೆದು ನೋಡಿ ನಮಗಿದ್ದ ತೊಂದರೆಗಳನ್ನು ನಿವಾರಿಸುತ್ತಲೇ ಬಂದಿದ್ದಾರೆ. ಈ ಉಭಯ ಮಹನೀಯರ ಪ್ರೋತ್ಸಾಹವನ್ನು ಇಲ್ಲಿ ಮರೆಯಲಾರೆ’.

ಪ್ರಕಟನ ವಿಭಾಗದ ನಿರ್ದೇಶಕರಾದ ಶ್ರೀ ಚೆನ್ನವೀರ ಕಣವಿ ಅವರು ಹಾಗೂ ಅವರ ಸಿಬ್ಬಂದಿಯವರು ’ಜೀವನ ಜೋಕಾಲಿ’ ಅಂದವಾಗುವಂತೆ ನೋಡಿಕೊಳ್ಳುತ್ತಿದ್ದಾರೆ.  ಅವರಿಗೂ ನಮಸ್ಕಾರ.

ಶ್ರೀ ಶಾರದಾ ಮುದ್ರಣಾಲಯದ ಒಡೆಯರು ಕೊಟ್ಟ ತೊಂದರೆಯನ್ನು ಸಹಿಸಿಕೊಂಡು ಈ ಕೃತಿಯನ್ನು ಅಂದವಾಗಿ ಮುದ್ರಿಸಿದ್ದಾರೆ. ಅವರಿಗೆ ಅಭಾರಿಯಾಗಿದ್ದೇವೆ.

ಎಂ. ಎಸ್. ಸುಂಕಾಪುರ

ಕನ್ನಡ ಅಧ್ಯಯನ ಪೀಠ
ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

 [1] ೧. ಕಾಮಿನೀಶೃಂಗಾರ : ಪ.೪.

[2] ೨.ಕಾಮಿನೀಶೃಂಗಾರ : ಪ.೧೨.

[3] ೧.ಕಾಮಿನೀಶೃಂಗಾರ : ಪ.೨೨

[4] ೧. ಧೀರಕುಮಾರ ರಾಮ : ಪ. ೧೬

[5] ೧. ಧೀರಕುಮಾರ ರಾಮ : ಪ. ೬೦

[6] ೧. ಧೀರಕುಮಾರ ರಾಮ : ಪ. ೧೨೫