ಹೋಳೀಹಾಡು

ಹೋಳೀಹಾಡು ಹೋಳೀ ಸಾಹಿತ್ಯದ ಒಂದು ವಿಶಿಷ್ಟ ಪ್ರಕಾರ. ಸಾಮಾನ್ಯವಾಗಿ ಹೋಳೀಹಾಡು ಮತ್ತು ದುಂದುಮೆಪದಗಳು ಒಂದೇ ರೆಂಬೆಗೆ ಬಿಟ್ಟ ಎರಡು ಹೂಗಳು ಈ ಹಾಡುಗಳನ್ನು ಹೇಳುವವರು ಗಂಡಸರೇ ಹೊರತು ಹೆಂಗಸರಲ್ಲ. ಹೆಂಗಸರು ಹೋಳೀಹಾಡು ಹೇಳುವರಾದರೂ ಅವು ಹೆಚ್ಚಾಗಿ ತ್ರಿಪದಿಯಲ್ಲಿರುತ್ತವೆ. ಗಂಡಸರಿಗೆ ಮೀಸಲಾದ ಈ ಹಾಡುಗಳನ್ನು ಕಾಮನ ಮುಂದೆ ನಿಂತು ಬೆಳ್ಳಬೆಳೆತನಕ ಹಾಡುವರು. ಶೃಂಗಾರವೇ ಈ ಹಾಡುಗಳ ಒಡಲು, ಆತ್ಮ. ಹೆಣ್ಣನ್ನು ವರ್ಣಿಸಿ ಹಲ್ಲು ಕಿಸಿಯುವುದೇ ಗಂಡಿನ ಸ್ವಭಾವ. ಹಾಡುಗಾರರು ಎಷ್ಟೋ ಸಲ ಶೃಂಗಾರ ಭರಿತ ಪೌರಾಣೀಕ, ಐತಿಹಾಸಿಕ ಮತ್ತು ಸಾಮಾಜಿಕ ಕಥೆಗಳನ್ನು ಬಣ್ಣಿಸುವುದುಂಟು. ಎಷ್ಟು ಬಣ್ಣಿಸಿದರೂ ಕವಿಗೆ ತೃಪ್ತಿ ಇಲ್ಲ; ಕೇಳುವ ಜನರಿಗೂ ಬೇಸರವಿಲ್ಲ; ಒಂದೊಂದು ಹಾಡನ್ನು ನೂರು ಸಲ ಕೇಳಿದರೂ ಇನ್ನೊಮ್ಮೆ ಅದನ್ನೇ ಕೇಳುವ ಆಸೆ.

ಹೋಳೀಹಾಡುಗಳನ್ನು ಕಟ್ಟುವವರು ಪ್ರತಿಭಾವಂತ ಹಳ್ಳಿಗರು. ಅವರು ಕಟ್ಟಿದ ಹಾಡುಗಳನ್ನು ಧಾಟಿಯನ್ನರಿತ ಗಮಕಿಗಳು ಸರಾಗವಾಗಿ ಹಾಡುತ್ತಾರೆ. ನಿಶ್ಯಬ್ದವಾದ ರಾತ್ರಿಯಲ್ಲಿ ಕೋಚು ಎತ್ತಿ ಪಂಚಮಸ್ವರದಲ್ಲಿ ಇಂತಹ ಇಂಪಾದ ಹಾಡುಗಳನ್ನು ಬರೆದವರು ಪಂಡಿತರೇನೂ ಅಲ್ಲ; ಅವರಿಗಿರುವ ಅಕ್ಷರಜ್ಞಾನವೂ ಅಷ್ಟಕಷ್ಟೆ!

ಬಾಳ ವಿಧದಿಂದ ಹೋಳಿಪದದಿಂದ ಕೇಳು ಮುದದಿಂದ
ಪೇಳ್ವೆ ತುರುವಿ ಗಿರೀಶನ ದಯದಿಂದಲಿ !

ಹೀಗೆಂದು ಹಾಡಿರುವ ಕವಿ ಶಿವನ ಪ್ರಸಾದದಿಂದ ಕವಿತೆಯನ್ನು ಕಟ್ಟಿರುವೆನೆಂದೂ ಅಂತಹ ಪಾಂಡಿತ್ಯ ತನ್ನಲಿಲ್ಲವೆಂದೂ ಹೇಳಿದ್ದಾನೆ. ಆದರೂ ತನ್ನ ಕವಿತೆ ಛಂದೋ ನಿಯಮಕ್ಕೆ ಅನುಗುಣವಾಗಿ ಇದೆಯೆಂದು ಅವನು ಹೇಳಿಕೊಂಡಿದ್ದಾನೆ:

ಗುರು ಲಘು ಗಣ ನೇಮಂಗಳ್
ವರ ಪ್ರಾಸ ಲಕ್ಷಣ ಅಡಿಗಳ್ ತಪ್ಪಾಗಿರಲ್
ನೆರೆ ಜಾಣರು ತಿದ್ದೆ ನಿಮಗೆ
ಸುರಲೋಕದ ಪದವಿಯನೀವ ತುರುವಿ ಗಿರಿಶಂ
ಎಂದು ಹಾಡಿನ ಕೊನೆಯಲ್ಲಿ ಹೇಳಿ ತನ್ನ ವಿನಯವನ್ನೂ ಮೆರೆದಿದ್ದಾನೆ. ಇಂತಹ ಅನೇಕ ಕವಿಗಳು ಉತ್ತರ ಕರ್ನಾಟಕದಲ್ಲಿ ಆಗಾಗ ಆಗಿಹೋಗಿದ್ದಾರೆ. ಅವರಲ್ಲಿ ಕೆಲವರು ಬರೆದ ಹಾಡುಗಳು ನಮಗೆ ದೊರೆತವು. ಈ ಸಂಗ್ರಹದಲ್ಲಿ ಏಳು ಹಾಡುಗಳನ್ನು ಮಾತ್ರ ಸಂಗ್ರಹಿಸಿ, ಸಂಶೋಧಿಸಿ, ಪ್ರಕಟಿಸುವ ಸಾಹಸ ಮಾಡಿದ್ದೇವೆ. ಮಿಕ್ಕುಳಿದುವು ಹಾಗೇ ಉಳಿದಿವೆ. ಒಟ್ಟು ನಾಲ್ಕು ಜನ ಕವಿಗಳು ಬರೆದ ಏಳು ಹಾಡುಗಳು ಕೆಳಗಿನಂತಿವೆ :

೧. ಕುಂದಗೋಳ ಬಸಲಿಂಗ :       ಕೃಷ್ಣಗೊಲ್ಲತಿ
ವೀರ ಅಭಿಮನ್ಯು
ಕೃಷ್ಣಾರ್ಜುನರ ಕಾಳಗ

೨. ತುರುವಿ ಗಿರೀಶನ ಶಿಷ್ಯ : ಮಲುಹಣ

೩. ಉಜ್ಜಯಿನಿ ಮರುಳಸಿದ್ದನ ಬಾಲಕ : ಕಾಮಿನೀ ಶೃಂಗಾರ ಬಾಣಾಸುರ

೪. ಗೋಕಾವಿ ಸಿದ್ಧಸೇವಕ : ದೀರ ಕುಮಾರರಾಮ

ಕುಂದಗೋಳ ಬಸಲಿಂಗ

ಈತನ ಕಾಲ ೧೯ನೆಯ ಶತಮಾನದ ಅಂತ್ಯಭಾಗ. ಈತನು ಧಾರವಾಡ ಜಿಲ್ಲೆಯ ಕುಂದಗೋಳ ಗ್ರಾಮದವರು. ಹೆಚ್ಚು ಸಂಶೋಧನೆ ಮಾಡಿದರೆ ಈತನ ನಿಶ್ಚಿತ ಕಾಲ ತಿಳಿಯಬಹುದಾಗಿದೆ. ಹೆಚ್ಚು ಸಂಶೋಧನೆ ಮಾಡಿದರೆ ಈತನ ನಿಶ್ಚಿತ ಕಾಲ ತಿಳಿಯಬಹುದಾಗಿದೆ. ಈತನು ತನ್ನ ಮೂರು ಹಾಡುಗಳ ಅಂತ್ಯದಲ್ಲಿ ’ಕುಂದಗೋಳ ಶ್ರೀಗುರುಸಖ’ ಶ್ರೀ ಕುಂದಗೋಳ ಅಸಮಾಕ್ಷ ಗುರುಪಾದ ಕರುಣದಲ್ಲಿ. ಬಸಲಿಂಗ ರಚಿಸಿದ ಮತ್ತು ವರ ಕುಂದಗೋಳದ ತವೆ ಗುರುಕರುಣದಿಂದು ಸುರ್ದೆ ಸಾರವನು ಎಂದು ಹೇಳಿಕೊಂಡಿದ್ದಾನೆ. ಕವಿಯ ಹೆಸರು ಬಸವಲಿಂಗ’ ಅವನ ಸ್ಥಳ ಕುಂದಗೋಳ. ಈತನ ಗುರು ಅಸಮಾಕ್ಷ ಇದ್ದಿರಬಹುದು. ಗುರುಪಾದ ಕರುಣೆಯೇ ಈ ಕವಿಗೆ ಸ್ಫೂರ್ತಿ ನೀಡಿದೆ.  ಈ ಕವಿ ಹುಬ್ಬಳ್ಳಿ, ಸಂಶಿ ಊರುಗಳಿಗೆ ಭೇಟಿ ನೀಡಿದುದು ಈತನ ಹಾಡುಗಳಿಂದಲೇ ತಿಳಿದು ಬರುತ್ತದೆ. ಈತನು ತುರ್ತುಕವಿ. ಯಾವುದೇ ಸನ್ನಿವೇಶವಿದ್ದರೂ ತತ್ ಕ್ಷಣವೇ ಹಾಡು ಹೇಳುವ ಉದ್ದಾಮ ಜನಪದ ಕವಿ. ಈತ ಕೃಷ್ಣಾರ್ಜುನರ ಕಾಳಗ ಈ ಹಾಡಿನಲ್ಲಿ :

ಭೂರಮ್ಯವಾದಂಥ ಭ್ರೂಲತಪುರ ಸ್ಥಿರ
ಗಾರ ಪುಣ್ಯಸ್ಥರೆಂದೆನಿಸುವರು | ಮಾಕು
ಮಾರನ ಚೆಲ್ವಿಕೆ ಮರೆಸುವರು  | ಮತ್ವಿ
ಚಾರಿಸಲ್ ಕುಶಲರಿರುತಿಹರು | ನಾಮ
ಚಾರು ಕೆಂಚೇಂದ್ರನನುಜ ಸ್ಥಿರಸೌಖ್ಯಸಂ
ಪೂರದಿಂದಿರುವರು ಮನವಪೇಕ್ಷಿಸಲು || ೧

[1]

ಭ್ರೂಲತಪುರ ಇಂದಿನ ಹುಬ್ಬಳ್ಳಿಗೆ ಇಟ್ಟಿರುವ ಸಂಸ್ಕೃತ ಹೆಸರು. ಈ ಊರಲ್ಲಿ ಕಾಮನಂತೆ ಚಲುವನಾದ. ಕುಶಲಮತಿಯಾದ. ಪುಣ್ಯಸ್ಥನಾದ ಕೆಂಚೇಂದ್ರನು ತನ್ನ ತಮ್ಮನೊಡನೆ ಸುಖದಿಂದ ಬಾಳುತ್ತಿದ್ದನಂತೆ. ಅವರ ಮನೆಗೆ ಈ ಬಸವಲಿಂಗ ಕವಿ ಆಗಾಗ ದರ್ಶನವೀಯುತ್ತಿದ್ದ. ಒಂದು ದಿನ ಈ ಅಣ್ಣತಮ್ಮಂದಿರು ಕೃಷ್ಣಾರ್ಜುನರ ಕಾಳಗದ ಕಥೆ ಮನೋಹರವಾದ ಕಥೆ; ಅದನ್ನು ಹಾಡು ಮಾಡಿ ಹೇಳೆಂದು ಕವಿಗೆ ಸೂಚಿಸಿದರು. ಅದನ್ನೇ ಮನದಂದು ಈ ಕವಿ ಹೋಳೀ ಹಾಡೊಂದನ್ನು ಕಟ್ಟಿ ಹಾಡಿ ತೋರಿಸಿದನಂತೆ. ಕೆಂಚೇಂದ್ರನಿಂದ ಬಹುತರವಾಗಿ ಮಾನ ಮರ್ಯಾದೆ ಪಡೆದಿರಬೇಕು ಬಸವಲಿಂಗ ಕವಿ ! ಆದ್ದರಿಂದ ದಾನಿಗಳ ಹೆಸರು ಚಿರಸ್ಥಾಯಿಯಾಗುವಂತೆ ಈ ಲಾವಣಿಯ ಅಂತ್ಯದಲ್ಲಿ ಅಪ್ರಾಸಂಗಿಕವೆನಿಸಿದರೂ ಚಿಂತೆಯಿಲ್ಲ; ಅವರ ಮನೆತನವನ್ನೆ ಕುರಿತು ನಾಲ್ಕು ನುಡಿ ಹೇಳಿದ್ದಾನೆ.

ಹುಬ್ಬಳ್ಳಿಯ ಶಹರದಲ್ಲಿ ಮಾಲ್ಗತ್ತಿಯವರ ಮನೆ ಪ್ರಸಿದ್ಧವಾದುದು. ಅದೊಂದು ಸಾಲ್ಮಳಿಗೆಗಳಿಂದ ಶೋಭಿಸುವ ಮಾಲಿನ ಮನೆ. ಈ ಮನೆಯ ಒಡೆಯ ತಿಮ್ಮೇಂದ್ರ; ಅವನ ಹೆಂಡತಿ ಮಾಜವ್ವ. ಈ ದಂಪತಿಗಳ ಉದರದಲ್ಲಿ ರವಿಶಶಿಗಳಂತಿರುವ ಕೆಂಚೇಂದ್ರ ಮತ್ತು ಅವನ ತಮ್ಮ ಜನಿಸಿ, ದೊಡ್ಡವರಾಗಿ ಜಗದೊಳಗೆ ಕುಶಲಗುಣಾಢ್ಯ ಎನಿಸಿದರು. ಇವರ ಮನೆಯಲ್ಲಿ ಕವಿ ಬಸವಲಿಂಗ ಬಹುದಿವಸವಿದ್ದು ಕೃಷ್ಣಾರ್ಜುನರ ಕಾಳಗದ ಹೋಳೀಹಾಡು ಹೇಳಿ ಮನೆಯವರಿಗೆ ಸಂತೋಷ ಉಂಟುಮಾಡಿದನಂತೆ. ಮುಂದಿನ ವಿಷಯ ತಿಳಿಯುವುದಿಲ್ಲ. ಇದೇ ರೀತಿ ಸಂಶಿಯಲ್ಲಿ ನಡೆದ ಮಹಾಸ್ವಾಮಿಗಳ ಅಡ್ಡಪಲ್ಲಕ್ಕಿ ಮಹೋತ್ಸವವನ್ನು ಕುರಿತು ಒಂದು ಸುಂದರವಾದ ಹಾಡು ಬರೆದದ್ದೂ ಉಂಟು. ಇದರ ಮೇಲಿಂದ ಕವಿ ಕುಂದಗೋಳದಲ್ಲಿದ್ದರೂ ಸುತ್ತಮುತ್ತಲಿನ ಹತ್ತು ಹರದಾರಿಯಲ್ಲಿ ಸುತ್ತಾಡಿ, ಜಾತ್ರೆ ಹಬ್ಬ ವಿಜೃಂಭಣೆಯಿಂದ ಜರುಗಿದಲ್ಲಿಗೆ ಹೋಗಿ ಹಾಡುಹಾಡಿ ಜನಮನವನ್ನು ತಣಿಸುತ್ತಿರಬೇಕು. ಈ ಕವಿಯು ರಚಿಸಿದ ಅನೇಕ ಹಾಡುಗಳನ್ನು ಹೋಳೀಹುಣ್ಣಿವೆಯಲ್ಲಿ ಸಾಕಷ್ಟು ಹಾಡಿಕೊಳ್ಳುವುದು ರೂಢಿಯಲ್ಲಿದೆ. ಕೆಲವು ದುಂದುಮೆ ಹಾಡುಗಳನ್ನೂ ಈತ ರಚಿಸಿದ್ದಾನೆ. ಈ ಕವಿಯ ಎಲ್ಲ ಹಾಡುಗಳನ್ನು ಸಂಗ್ರಹಿಸಿದರೆ ಒಂದು ಉದ್ಗ್ರಂಥವಾಗಬಹುದು. ಇದು ಅಗತ್ಯ ನಡೆಯಬೇಕಾದ ಕೆಲಸ.

ಕೃಷ್ಣಗೊಲ್ಲತಿಯರ ಸನ್ನಿವೇಶ ಸಾಹಿತ್ಯ ಪ್ರಪಂಚದಲ್ಲಿಯೇ ಪ್ರಸಿದ್ಧವಾದುದು. ಕೃಷ್ಣ ಗೊಲ್ಲತಿಯರನ್ನು ಕಾಡಿ, ಹಾಲ್ಮೊಸರು ಸೂರೆ ಮಾಡಿ ಚಪಲ ಚೇಷ್ಟೆ ಮಾಡುವುದು ರೂಢಿ. ಮಧುರಾಪುರದ ನಾರಿಯರಿಗಂತೂ ಅವನ ತೊಂದರೆ ತಪ್ಪಿದ್ದಲ್ಲ. ಅವರನ್ನು ಕಾಡಿಸಿ ಪೀಡಿಸಿ, ಕೊನೆಗೊಮ್ಮೆ ನದಿಯ ದಡದಲ್ಲಿ ಅವರು ಸ್ನಾನ ಮಾಡುತ್ತಿದ್ದಾಗ ಅವರ ಬಟ್ಟೆಬರೆಗಳನ್ನು ಕದ್ದೊಯ್ದು ಗಿಡವೇರಿ ಕೂಡ್ರುತ್ತಾನೆ ಶ್ರೀಕೃಷ್ಣ. ಇದೊಂದು ಶೃಂಗಾರ ಚೇಷ್ಟೆಯ ಮಾದರಿ., ಕೊನೆಗೆ ಗೊಲ್ಲತಿಯರು ಮೊರೆಯಿಟ್ಟಾಗ ಬಟ್ಟೆಗಳನ್ನು ತಿರುಗಿ ಕೊಟ್ಟು ಅವರ ಮಾನಕಾಯ್ದ ದೇವನೂ ಶ್ರೀಕೃಷ್ಣನೇ !

ಈ ಕೃಷ್ಣಗೊಲ್ಲತಿಯರ ಸನ್ನಿವೇಶವನ್ನೇ ತನ್ನ ಹೋಳೀಹಾಡಿಗೆ ವಸ್ತುವಾಗಿ ಇಟ್ಟುಕೊಂಡು ಬಸವಲಿಂಗ ಕವಿ ಬಹಳ ಮನೋಹರವಾಗಿ ರಚಿಸಿದ್ದಾನೆ. ಪ್ರಾಸಬದ್ಧ ಶೈಲಿಯಲ್ಲಿ ಮೂಡಿಬರುವ ಒಂದೊಂದು ಚಿತ್ರ ಓದುಗನ ಮನವನ್ನು ಬಿಗಿದು ನಿಲ್ಲಿಸುತ್ತದೆ. ಹಾಡಿನ ಪ್ರಾರಂಭದಲ್ಲಿ ಬರುವ ಸರಸ್ವತಿ ವರ್ಣನೆ ಹೀಗೆ :

ವಾಣಿಯ ವರದ ಕಲ್ಯಾಣಿಯ ಘನತರ
ವೀಣೆಯ ಕಡುಚೆಲ್ವ ಪಾಣಿಯಳ | ಸುಖ
ಶ್ರೇಣಿಯ ಅತಿ ಮೃದುವಾಣಿಯಳ | ಫಣಿ

ವೇಣಿಯ ಕರಚೆಲ್ವ ಜಾಣಿಯಳ | ಸುಪ್ರ
ವೀಣೆಯ ಬ್ರಹ್ಮನ ರಾಣಿಯ ಅತಿವಿದ್ಯ
ತ್ರಾಣಿಯ ಬಿಡದಿಂಥ ಚೂಣಿಯ ಪೊಗಳ್ವೆ || ೧[2]

ಈ ವರ್ಣನೆ ಯಾವ ಮಹಾಕವಿಯ ವರ್ಣನೆಗೂ ಕಡಮೆಯಾಗಿಲ್ಲ. ಅನಕ್ಷರಸ್ಥನಾದ ಜನಪದ ಕವಿ ಇಷ್ಟೊಂದು ಬಂಧುರವಾಗಿ ಬರೆಯುವುದು ಸಾಧ್ಯವೇ? ಎಂದು ಕೇಳಬಹುದಾಗಿದೆ. ಅಂಥವರಿಗೆ ಸಮಾಧಾನದ ಉತ್ತರವೊಂದುಂಟು. ಹಿಂದಿನ ಕಾಲದಲ್ಲಿ ಷಟ್ಪದಿಯಲ್ಲಿ ರಚಿತವಾದ ಪುರಾಣಗಳನ್ನು ತಿಂಗಳುಗಟ್ಟಲೆ ಹೇಳುವುದೂ ಕೇಳುವುದೂ ರೂಢಿಯಲ್ಲಿತ್ತು. ಪ್ರತಿಭಾವಂತ ಜನಪದರು ಕೇಳುಕೇಳುವುದರಲ್ಲಿಯೇ ಪುರಾಣಶೈಲಿಯನ್ನೂ ಮನಕ್ಕೆ ತಂದುಕೊಂಡು ಅದರಂತೆ ತಾವೂ ಪದ್ಯಹೆಣೆಯುವುದು ಸ್ವಾಭಾವಿಕ. ಪ್ರತಿಭೆಯ ಮೋಡಿಗೆ ಯಾವುದು ಅಸಾಧ್ಯ?

ಬಸವಲಿಂಗ ಕವಿ ಇಡೀ ಹಾಡನ್ನೇ ಬಹುಸುಂದರವಾಗಿ ಹೆಣೆದಿದ್ದಾನೆ. ಗುರುವಿನ ಬಲದಿಂದ ಬಂದ ಕಾವ್ಯ ತನ್ನದೆಂದು ಆತನ ನಿರ್ಧಾರ. ಮಧುರಾಪುರಕ್ಕೆ ಹಾಲ್ಮೊಸರು ಮಾರಲು ಬಂದ ಗೊಲ್ಲತಿಯರು ಸಾಮಾನ್ಯ ಸ್ತ್ರೀಯರಲ್ಲ ಅಲಂಕಾರ ಮಾಡಿಕೊಂಡು ಮತ್ತೇಭರದಂತೆ ನಡೆಯುವ ಈ ಸುಂದರಿಯರು ಮಧುರಾಪುರಕ್ಕೆ ಬರುವ ರೀತಿಯನ್ನೇ ನೋಡಿರಿ :

ಬಾಲೇರು ಮದನನುಕೂಲೇರು ಯೌವನ
ಕಾಲೇರು ಕನಕಕಪೋಲೆಯರು | ಸುವಿ
ಶಾಲೇರು ಚಂಪಕಮಾಲೆಯರು | ಸ್ಮರ
ನೀಲೇರು ಕಂರ್ಪಸಾಲೆಯರು | ರತಿ
ಗಾಲೇರು ಘನತನ ಲೋಲೇರು ಮೋಹನ್ನ
ಚಾಲೇರು ಸತಿಶಿರೋಮಣಿಗಳು ಬರಲು || ೧[3]

ಈ ಹಾಡಿನ ಪದಪದ್ಯಗಳಲ್ಲಿ ಶೃಂಗಾರ ತುಂಬಿ ಬಂದಿದೆ. ಒಂದೊಂದು ಪದ್ಯ ಶೃಂಗಾರರಸದಿಂದ ತುಂಬಿದ ಗಿಂಡಿಯಾಗಿದೆ. ಒಮ್ಮೊಮ್ಮೆ ಶೃಂಗಾರ ಅತಿಯಾಯಿತು ಎನಿಸುವಂತೆ ವರ್ಣನೆ ಬರುವುದನ್ನೂ ಅರಿಯುತ್ತೇವೆ. ಅಶ್ಲೀಲವೇ ಈ ಹಾಡಾಗಿದ್ದರೆ ಇದನ್ನೇಕೆ ಕೇಳಬೇಕೆಂದು ಮುಖಮುರಿದುಕೊಳ್ಳುವವರೂ ಸಿಗಬಹುದು. ಇದು ಹೋಳಿಯ ಹಾಡೆಂಬುದನ್ನು ಅವರು ಮರೆಯಬಾರದು.

ಶೃಂಗಾರ ತುಂಬಿ ತುಳುಕಿದರೂ ಅದು ಭಕ್ತಿಯಲ್ಲಿ ಪರ್ಯವಸನ ಹೊಂದುವುದನ್ನು ಕೊನೆಯಲ್ಲಿ ಕಂಡಾಗ ನಾವು ಕವಿಯ ಚಾತುರ್ಯಕ್ಕೆ ಬೆರಗಾಗುತ್ತೇವೆ. ಮಧುರ ಭಕ್ತಿಯ ಪರಿಣಾಮ ಕೇಳುವವರಲ್ಲಿ ಉಂಟಾಗದಿರದು. ಗಿಡದಡಿಯಲ್ಲಿ ಬತ್ತಲಾಗಿ ನಿಂತ ಗೋಪಿಯರು ಶ್ರೀ ಕೃಷ್ಣ ಪರಮಾತ್ಮನಿಗೆ ಮರೆಹೊಕ್ಕು ತಮ್ಮನ್ನು ಕಾಯಬೇಕೆಂದು ಕೇಳಿಕೊಳ್ಳುವುದು ಹೀಗೆ :

ದುರುಳ ದುಶ್ಯಾಸನನು ನೆರೆದ ಸಭೆಯೊಳಗೆ
ತರುಣಿ ದ್ರೌಪತಿ ಸೀರಿ ಸೆಳೆವುತಿರೇ | ಕಂಡು
ಪರಿವಾರ ಜನರೆಲ್ಲ ಮರುಗುತಿರೇ | ಕೃಷ್ಣ
ಪೊರೆಯೊ ಪೊರೆಯೊ ಎಂದು ಸ್ಮರಿಸುತಿರೇ | ಅಂದು
ಪೊರೆಯಲಿಲ್ಲವೆ ದೇವ ಪರವರ ದಯಾಳು ನೀನು
ಕರುಣದಿ ಕಾಯೋ ಮಾನವೆಂದೆನುತ || ೨[4]

ಎಂದು ನಾರೇರು ಸ್ತುತಿವಾಕ್ಯ ಸುರಿಸುತಿರೆ, ಮನ ಸೂರ್ಯಗುವಂದದಿ ಪರಿವುತಿರೆ ಪರಮಾತ್ಮ, ಶ್ರೀ ಗುರುಸುಖ ಭೂರುಹನಿಳಿದು ನೀರೆಯರ ರಕ್ಷಿಸಿದ

ಈ  ಹಾಡು ಗಾತ್ರದಲ್ಲಿ ಸಣ್ಣದಿದ್ದರೂ ಸೂತ್ರಬದ್ಧವಾಗಿದೆ. ಹೋಳಿ ಹಾಡಿನ ಮಾದರಿಗೆ ಮಾದರಿಯಾಗಿದೆ. ಶೈಲಿಯಂತೂ ಸುಮಧುರ ಸುಂದರ; ಅಲ್ಲಲ್ಲಿ ದ್ವಿರುಕ್ತಿದೋಷ ಇದೆಯೆನ್ನಬಹುದಾದರೂ ಹಾಲಿನ ಸೋರೆಯಲ್ಲಿ ಅಳಿನೀರು ಕೂಡಿದರೆ ಕೆಡಕೆಷ್ಟು?

ಕುಂದಗೋಳದ ಬಸವಲಿಂಗನಿಗೆ ಮಹಾಭಾರತದ ಕಥೆಗಳಲ್ಲಿ ಹೆಚ್ಚು ಆಸಕ್ತಿ ಇರಬೇಕು. ಎಂತಲೇ ವೀರ ಆಭಿಮನ್ಯು ಮತ್ತು ಕೃಷ್ಣಾರ್ಜುನರ ಕಾಳಗ ಈ ಸನ್ನಿವೇಶಗಳನ್ನು ತನ್ನ ಹಾಡುಗಳಿಗೆ ವಸ್ತುವಾಗಿ ಆರಿಸಿಕೊಂಡಿದ್ದಾನೆ. ಅವೆರಡನ್ನೂ ಮನದುಂಬಿ ಹಾಡಿದ್ದಾನೆ. ವೀರ ಅಭಿಮನ್ಯುವಿನ ಕಥೆ ಸರ್ವರಿಗೂ ಪ್ರಿಯವಾದುದು, ದ್ರೋಣಪರ್ವಕ್ಕೆ ಬೆಲೆ ಬಂದಿರುವುದು ಈ ಕಥೆಯಿಂದಲೇ ಎಂದು ಧೈರ್ಯವಾಗಿ ಹೇಳಬಹುದು. ಈ ಚಿಕ್ಕ ಮಗುವಿನ ಸಾಹಸದ ಕಥೆ ಮುದುಕರಿಗೂ ಉತ್ಸಾಹ ನೀಡಬಲ್ಲುದು. ಕನ್ನಡಿಗರಿಗಂತೂ ಈ ಕಥೆ ಅಚ್ಚುಮೆಚ್ಚಿನದು. ಇದಕ್ಕೆ ಕಾರಣ ಇಲ್ಲದಿಲ್ಲ. ಅಭಿಮನ್ಯು ವಿರಾಟರಾಜನ ಮಗಳ ಮಗನಲ್ಲವೆ? ಶರೀರ ಸಂಬಂಧದ ಅಭಿಮಾನ ಯಾರಿಗೆ ಇಲ್ಲ? ಅದಕ್ಕೆಂದೇ ಕನ್ನಡಿಗರಿಗೆ ವೀರಬಾಲಕನ ಶೌರ್ಯಧೈರ್ಯ ತಮ್ಮದೇ ಎನಿಸಿದರೆ ತಪ್ಪೇನು?

ವೀರ ಅಭಿಮನ್ಯು, ಹೋಳೀಹಾಡು ಬರಿ ಹಾಡಲ್ಲ; ಅದು ರಸಭರಿತವಾದ ಹಾಡುಗಬ್ಬ. ವೀರರಸ ಕರುಣರಸಗಳ ಸಂಗಮವನ್ನೇ ಅಲ್ಲಿ ಕಾಣಬಹುದು. ದ್ರೋಣಪರ್ವದ ಸಾರವನ್ನೇ ಹೀರಿ, ಅದನ್ನೂ ಮೀರಿ ವರ್ಣಿಸುವುದನ್ನು ರಸಿಕರು ಅರಿಯಬಹುದು. ಬಸವಲಿಂಗ ಕವಿ ಈ ವಿಸ್ತಾರವಾದ ಕಥೆಯನ್ನು ಸಂಗ್ರಹಿಸುವ ಬಗೆ ಹೀಗಿದೆ :

ಕ್ಷಿತಿಪತಿ ಕೇಳ್ ಚಕ್ರವ್ಯೂಹದೊಳಭಿಮನ್ಯು
ಅತಿರಮ್ಯಯುದ್ಧವ ಮಾಡಿದನು | ಬಹು
ಖತಿಯಿಂದೆ ಶಿರವ ಚಂಡಾಡಿದನು | ಅಲ್ಲೆ
ಹತವಾಗಿ ಮುಕ್ತಿಯ ಕೂಡಿದನು | ಜಯ
ದ್ರತ ಮಸ್ತಕ ನರಹರಿಯ ಎಚ್ಚನುಯೆಂದು
ಯತಿರಾಯ ಪೇಳಿದ ಹಿತದಿ ಭೂವರಗೆ | ೧[5]

ಕಥೆ ಪ್ರಾರಂಭಿಸುವ ರೀತಿ ಕುಮಾರವ್ಯಾಸಭಾರತವನ್ನು ನೆನಪಿಗೆ ತಾರದೆ ಇರದು. ಈ ಕಥೆಗೆ ಕರ್ಣಾಟ ಭಾರತ ಆಧಾರವಾಗಿರಲೂ ಸಾಕು. ದ್ರೋಣನಿಗೆ ಪಟ್ಟಗಟ್ಟಿದ ಸಂದರ್ಭದಿಂದ ಹಿಡಿದು ಜಯದ್ರಥನ ಮರಣದವರೆಗೆ ಹಾಡು ಕುಡಿಚಾಚಿ ಪಸರಿಸುತ್ತದೆ. ಪ್ರತಿಯೊಂದು ಸಂಗತಿ ವಿವರ ವಿವರವಾಗಿ ಬಂದಿದೆ ಇಲ್ಲಿ. ಧರ್ಮ ನಂದನವನ್ನು ಸೆರೆಹಿಡಿದು ತರುವ ಶಕ್ತಿಯುಳ್ಳವರನ್ನು ನಾ ಕಾಣೆನೆಂದು ದುರ್ಯೋಧನ ಚಿಂತಿಸಿದಾಗ, ದ್ರೋಣ ನಾನಿದ್ದೇನೆಂದು ಆರ್ಭಟಿಸಿ ಚಕ್ರವ್ಯೂಹ ನಿರ್ಮಿಸಲು ಮನಸಸು ಮಾಡುತ್ತಾನೆ. ವ್ಯೂಹ ಪೂರ್ಣವಾದೊಡನೆ ಅರ್ಜುನನಿಗೆ ಯುದ್ಧದ ಆಹ್ವಾನ ಹೋಗುತ್ತದೆ. ಯುದ್ಧ ಭೂಮಿಯಲ್ಲಿ ಸನ್ನದ್ಧರಾಗಿ ಹೋರಾಡುತ್ತಿದ್ದ ಅರ್ಜುನನು ಶ್ರೀಕೃಷ್ಣನ ಅಭಿಮತ ಕೇಳುತ್ತಾನೆ. ಚಕ್ರವ್ಯೂಹದಲ್ಲಿ ನಿಂತು ಯುದ್ಧ ಮಾಡಲು ಅಭಿಮನ್ಯು ಸಮರ್ಥನಿದ್ದಾಗ, ನಿನಗೇಕೆ ಆ ಚಿಂತೆ  ಎಂದು ಕೃಷ್ಣ ಅರ್ಜುನನನ್ನು ನಿಲ್ಲಿಸುತ್ತಾನೆ. ಅಳಿಯನಿರಲು ಮುಂದೆ ತನಗೆ ಉಳಿವಿಲ್ಲ ಎಂಬುದು ಕೃಷ್ಣನ ಸ್ವಾರ್ಥಪರ ವಿಚಾರ. ಧರ್ಮಾದಿಗಳಿಗೆ ವ್ಯೂಹಯುದ್ಧ ಹೊಸದು; ಅಭಿಮನ್ಯು ಮಾತ್ರ ವ್ಯೂಹ ಪ್ರವೇಶಿಸಬಲ್ಲ; ಆದರೆ ಅಲ್ಲಿಂದ ಹೊರಗೆ ಬರುವ ವಿದ್ಯೆ ಅವನಿಗೆ ತಿಳಿದಿಲ್ಲ. ಮುಂದೇನು ಗತಿಯೆಂದು ಧರ್ಮರಾಯ ಚಿಂತೆಯಲ್ಲಿರಲು ಅಭಿಮನ್ಯು ಮುಂದೆ ಬಂದು ’ ದೊಡ್ಡಪ್ಪಾ, ನಾನಿಲ್ಲವೆ? ಅಪ್ಪಣೆ ಕೊಡು’ ಎಂದು ಬಿನ್ನವಿಸುವನು. ಅಸಮ ಸಂಗರಕ್ಕೆ ಹಸುಳೆಯನ್ನು ಕಳುಹಲು ಧರ್ಮಜ ಒಪ್ಪಲಾರ; ಆಗ ಅಭಿಮನ್ಯು ’ ತಂದೆ, ಸರ್ಪ ಗರುಡನನ್ನು ಕೆಣಕಿ ತಾ ಬಾಳುವದೆ? ಅಪ್ಪಣೆ ಕೊಡು’ ಯೆಂದು ನುಡಿವ ಒಂದೊಂದು ಮಾತು ಕೆಚ್ಚಿನ ಕಿಡಿಯಂತೆ ಪುಟನೆಗೆದು ಬರುತ್ತದೆ. ನಿರ್ವಾಹವಿಲ್ಲದೆ ಧರ್ಮರಾಯ ಯುದ್ಧಕ್ಕೆ ಹೋಗಲು ವೀರಕುಮಾರನಿಗೆ ಅಪ್ಪಣೆ ಕೊಡುತ್ತಾನೆ. ಈ ಕೃತಿ ಯಾರ ಮನಸ್ಸಿಗೂ ಸರಿಬರಲಿಲ್ಲ. ಅಭಿಮನ್ಯು ಅಪ್ಪಣೆ ಸಿಕ್ಕೊಡನೆ ಹಿರಿಯರನ್ನು ಬೀಳ್ಕೊಂಡು,

ಬಿಗಿದು ಗಂಡುಡುಗೆಯ ಖಡ್ಗ ಕಠಾರಿಯ
ಮಿಗಿಲಾದ ಘಂಟೆಯ ನಾದವನು | ಕಟ್ಟಿ
ಅಗರು ಕಸ್ತೂರಿ ಗಂಧ ಲೇಪವನು | ಆಗ
ಸೊಗಸಿಂದ ಧರಿಸಿದ ಬಿರಿದವನು | ಝಗ
ಝಗಿಪ ರತ್ನದ ತೇರು ಕನಕ ಸತ್ತಿಗೆಯಿಂದ
ಹೊಗಲನುವಾದನಾಹವಕಭಿಮನ್ಯು || ೧[6]

ಇಂತು ಚಕ್ರವ್ಯೂಹವನ್ನು ಭೇದಿಸಲು ಹೊರಟ ಅಭಿಮನ್ಯುವಿನ ಉತ್ಸಾಹವನ್ನು ಕವಿಯ ಮಾತುಗಳಲ್ಲಿಯೇ ಕೇಳಬೇಕು. ಜಯದ್ರಥ ಕರ್ಣಾದಿಗಳು ವ್ಯೂಹಮಧ್ಯದಲ್ಲಿ ನಿಂತು ಆರ್ಭಟಿಸುವುದನ್ನು ಕಂಡು ಅಭಿಮನ್ಯು ಅಂಜದೆ ಒಳಗೆ ಪ್ರವೇಶಿಸುತ್ತಾನೆ. ಬಾಣಗಳ ಸುರಿಮಳೆಗೆರೆದು ವೈರಿ ಸಮೂಹವನ್ನು ನಾಶ ಮಾಡುತ್ತಾನೆ. ವೈರಿಗಳು ಮೋಸಗಾರರೆಂಬುದು ಆ ಹಸುಳೆಗೆ ಹೇಗೆ ಹೊಳೆಯಬೇಕು? ಹಿಂದಿನಿಂದ ಬಂದು ಕರ್ಣ ಅಭಿಮನ್ಯುವಿನ ಕರಗಳೆರಡನ್ನೂ ಕತ್ತರಿಸುತ್ತಾನೆ. ಕರ ಇಲ್ಲದಿದ್ದರೇನು? ಮುಂಡವಿಲ್ಲವೆ? ಎಂದು ಕೇಳಿ, ಆರ್ಭಟಿಸುತ್ತ ವೈರಿಸೈನ್ಯದೊಡನೆ ಹೋರಾಡುವ ಕುಮಾರ ವೀರನಲ್ಲದೆ ಮತ್ತಾರು? ಪಾಪ! ಅಸಹಾಯಕನಾದ ಕುಮಾರ ಮೇಲೆ ಕೌರವವೀರರೆಲ್ಲರು ಮುಗಿಬಿದ್ದು ಅವನನ್ನು ಕೊಲ್ಲುತ್ತಾರೆ.

ವೀರವರನ ಅಂತ್ಯ ಹೀಗಾಗಬೇಕೆ?

ಬಿಗಿದ ಹುಬ್ಬಿನ ಗಂಟು ತೆಗೆದ ಕಂಗಳ ಮುಖ
ಹೊಗರು ತಿದ್ದಿದ ಮೀಸಿ ಕುಣಿವುತಲಿ | ಚೆಲ್ವ
ಬೊಗರೆ ಗಡ್ಡದ ಭಾವ ಎಸೆವುತಲಿ | ಆಗ
ಜಿಗಿದಂಥ ರಕ್ತ ಜೋರಿಡುವುತಲಿ | ಸಲೆ
ನೆಗೆದ ರೋಮಗಳಿಂದ ತುರುಗಿದ ಬಾನದಿ
ಮಗುವು ಮಡಿದನಾಗ ಶಸ್ತ್ರಶಯನದಲಿ || ೧[7]

ಹಿಂಡು ಹಾವುಗಳು ಸೇರಿ ಗರುಡನ ಮರಿಯನ್ನು ಕೊಂದಂತಾಯಿತೆಂದು ವೀರವರನ ಮರಣಕ್ಕೆ ಕವಿ ಮರುಗಿದ್ದಾನೆ. ಅಭಿಮನ್ಯುವಿನ ಮರಣವಾರ್ತೆ ಪಾಂಡವರಿಗೆ ಸಿಡಿಲು ಬಡೆದಷ್ಟು ನೋವನ್ನುಂಟು ಮಾಡುತ್ತದೆ. ಸುಭದ್ರೆಯ ದುಃಖವಂತೂ ಮೇರೆದಪ್ಪಿ ಹರಿಯಿತು; ಆಗ ’ಉರಿಯ ತಾಗಿದ ಎಳೆಬಾಳೆಯಂದದಿ ನಾರಿ ಕರಗಿದಳಾಕ್ಷಣ ಕಂಡು ಸೌಭದ್ರಿ ’ ಅವಳ ಹೊಟ್ಟೆಯುರಿ ಭುಗಿಲೆಂದು ಪ್ರಜ್ವಲಿಸುತ್ತದೆ. ಅವಳು ಹಾಡಿಕೊಂಡು ಅಳುವ ಸನ್ನಿವೇಶ ಕಣ್ಣೀರಿನ ಕಾಲುವೆಯಾಗಿದೆ. ವೀರರಸ ಮುಗಿದು ಕರಣರಸ ಧಾರಾಕಾರವಾಗಿ ಹರಿಯುವ ಹೊತ್ತಿಗೆ ಅರ್ಜುನ ಅಲ್ಲಿಗೆ ಬರುತ್ತಾನೆ. ಅವನಲ್ಲಿ ವೀರ, ಕರುಣ ಒಮ್ಮೆಲೆ ಮಡುಗಟ್ಟಿ ನಿಂತಂತೆ ಕೋಪಾಟೋಪವೂ ಉದ್ಭವಿಸುತ್ತದೆ.  ಆಗಲೇ ಪಾರ್ಥ ಪ್ರತಿಜ್ಞೆ: ಜಯದ್ರಥನ ರುಂಡ ಅಂದು ಸೂರ್ಯಾಸ್ತದೊಳಗಾಗಿ ಉರುಳಲೇಬೇಕು. ಶ್ರೀಕೃಷ್ಣನ ನೆರವು ಇದ್ದ ಅರ್ಜುನನಿಗೆ ಅದಾವುದು ಅಸಾಧ್ಯ. ಹೋಳೀಹಾಡು ಮುಗಿಯುತ್ತದೆ. ಮುಗಿದರೂ ಮಗುದೊಮ್ಮೆ ಅದನ್ನು ಕೇಳುವ ಹಂಬಲ ಉಂಟಾಗುತ್ತದೆ.

’ವೀರ ಅಭಿಮನ್ಯು, ಹೋಳೀಹಾಡು ನಿಜವಾಗಿಯೂ ಜನಪದಸಾಹಿತ್ಯದಲ್ಲಿ ಹಿರಿಯ ಸ್ಥಾನವನ್ನು ಗಳಿಸಬಲ್ಲುದು.

ಬಸವಲಿಂಗ ಕವಿಯ ಮತ್ತೊಂದು ಹಾಡು  ಕೃಷ್ಣಾರ್ಜುನರ ಕಾಳಗ, ಇದು ಜನಪದದಲ್ಲಿ ಬಹು ಕಾಲದಿಂದಲೂ ಪ್ರಸಿದ್ಧವಾದುದು. ಹಳ್ಳಿಗರು ಈ ಕಥೆಯನ್ನು ಬಯಲಾಟವಾಡಿ ಪ್ರಚುರಗೊಳಿಸುತ್ತ ಬಂದಿದ್ದಾರೆ. ಈ ಕಥೆಯನ್ನೇ ಹೋಳಿಹಾಡಿನ ರೂಪದಲ್ಲಿ ಹೇಳೆಂದು ಹುಬ್ಬಳ್ಳಿಯಲ್ಲಿರುವ ಕೆಂಚೇಂದ್ರ ಮಾಲ್ಗತ್ತಿ ಅವರು ಕೇಳಿದಾಗ ಕವಿ ಭಾವಾವೇಶದಿಂದ ಹಾಡಿಕೊಂಡಿದ್ದಾನೆ. ಕವಿಯ ಶೈಲಿ ಇಲ್ಲಿಯೂ ಪಳಗಿ ಬಂದಿರುವುದನ್ನು ಅರಿಯುತ್ತೇವೆ.

ಕೃಷ್ಣಾರ್ಜುನರು ಸರ್ವರೂ ಅರಿತಂತೆ ಪರಮ ಗುರುಶಿಷ್ಯರು. ಇವರೂ ಕಾದಾಡುವ ಪ್ರಸಂಗ ಬಂತೆ? ಎಂದು ಕುತೂಹಲದಿಂದ ಕೇಳುವ ಜನರೂ ಇದ್ದಾರೆ. ಹೌದು; ಅವರಿಬ್ಬರೂ ಕಾದಾಡಿ ಕೊನೆಗೆ ಕೂಡಿ ಬಾಳಿದರೆಂದು ಹೇಳುವ ಕಥೆಯಿದೆ.

ಒಂದು ದಿನ, ಕೃಷ್ಣಬಲರಾಮರು ಯಮುನಾನದಿಯಲ್ಲಿ ಸ್ನಾನ ಮಾಡಿ ಸೂರ್ಯದೇವನಿಗೆ ಅರ್ಘ್ಯವನ್ನು ಅರ್ಪಿಸುತ್ತಿದ್ದಾಗ, ಆಕಾಶದಿಂದ ಜೊಲ್ಲು ಸುರಿದು ಸುರಿವಂತೆ ಮಾಡಿದ ವ್ಯಕ್ತಿ ಯಾವನೇ ಇರಲಿ, ಅವನನ್ನು ಎಂಟು ದಿನದೊಳಗಾಗಿ ಕೊಲ್ಲುತ್ತೇನೆಂದು ವಸುದೇವನ ಆಣೆಯಿಟ್ಟು ಪ್ರತಿಜ್ಞೆ ಮಾಡುತ್ತಾನೆ. ಕೊಲ್ಲದೆ ಹೋದಲ್ಲಿ ಇವನ ಸಾಕ್ಷಿಯಾಗಿ ಅಗ್ನಿಕುಂಡದಲ್ಲಿ ಹಾರಿ ಪ್ರಾಣಬಿಡುತ್ತೇನೆಂದು ಜೊಲ್ಲು ಸುರಿಯಿತೆಂದು ಆಕಾಶವಾಣಿ ತಿಳಿಸುತ್ತದೆ. ನಡೆದ ಪ್ರಮಾದಕ್ಕಾಗಿ ಮಾಡಬೇಕೆಂಬುದೇ ತಿಳಿಯದು. ಅವನು ಇಂದ್ರನಿಗೆ ಮೊರೆಯಿಡುತ್ತಾನೆ. ಕೊನೆಗೆ ಶಿವನಲ್ಲಿಗೆ ಹೋಗಿ ತನಗೆ ಜೀವದಾನ ಮಾಡೆಂದು ಸೆರಗೊಡ್ಡಿ ಬೇಡಿಕೊಳ್ಳುತ್ತಾನೆ. ಈ ಜಗಳದಲ್ಲಿ ಕೈ ಹಾಕುವುದು ಸರಿಯಲ್ಲವೆಂದು ಶಿವ ಮೌನತಾಳುತ್ತಾನೆ. ಗಯನ ಗೋಳನ್ನು ಕೇಳಿ ಮರುಕಗೊಂಡ ಪಾರ್ವತಿ ಅವನನ್ನು ನಾರದನಲ್ಲಿಗೆ ಕಳಿಸಿ ಪುಣ್ಯ ಕಟ್ಟಿಕೊಳ್ಳುತ್ತಾಳೆ. ಈ ಕೆಲಸ ಆದರೆ ನಾರದನಿಂದಲೇ ಆಗುತ್ತದೆ. ಉಳಿದವರಿಂದ ಅಸಾಧ್ಯವೆಂದು ಅವಳ ಕಲ್ಪನೆ.

ನಾರದನು ಲೋಕಸಂಚಾರಕ್ಕೆ ಹೊರಟ ಸಮಯ ಸಾಧಿಸಿ ಗಯ ಭೇಟಿಯಾಗುತ್ತಾನೆ. ತನ್ನ ಮನದಳಲನ್ನು ಅವನ ಮುಂದೆ ತೋಡಿಕೊಳ್ಳುವನು. ನಾರದನಿಗೆ ಬೇಕಾದುದು ಇಂತಹದೇ. ಆತನು ಲೆಕ್ಕಹಾಕಿ, ಮೊರೆಹೊಕ್ಕವರನ್ನು ಕಾಪಾಡುವ ಶಕ್ತಿಯುಳ್ಳವ ಅರ್ಜುನ; ಅವನಲ್ಲಿಗೆ ಹೋಗೆಂದು ಕಳಿಸುವನು. ಗಯನು ಪಾರ್ಥನಿದ್ದಲ್ಲಿಗೆ ಹೋಗಿ ಅವನ ಪಾದ ಹಿಡಿದು ಜೀವದಾನ ಬೇಡುವನು. ಗಯ ಅರ್ಜುನನಿಗೆ ತಿಳಿಸಿದ. ಪಾರ್ಥನ ತಲೆಯ ಮೇಲೆ ಕುಲಪರ್ವತ ಬಿದ್ದಂತಾಯಿತು. ಉಭಯ ಸಂಕಟ ಅವನನ್ನು ಆವರಿಸಿತು. ಪಾಂಡವರು ನಡೆದ ಅನಾಹುತಕ್ಕೆ ವಿಲಿವಿಲಿ ಒದ್ದಾಡಿದರು. ತಮ್ಮನ್ನು ಮೊದಲಿನಿಂದಲೂ ರಕ್ಷಿಸಿದ ಸರಸಿಜಾಕ್ಷನೊಡನೆ ಹೋರಾಡುವುದೂ ಕಷ್ಟ; ಗಯನನ್ನು ಕೈಬಿಡುವುದೂ ಕಷ್ಟ. ಆದುದಾಗಲಿ, ಗಯನ ರಕ್ಷಣೆ ತನ್ನದೆಂದು ನಿಶ್ಚಯ ಮಾಡಿದ ಪಾರ್ಥ.

ಇತ್ತ ನಾರದ ಕೃಷ್ಣನಲ್ಲಿಗೆ ಬಂದು, ಅರ್ಜುನನು ಗಯನ ಬೆನ್ನು ಕಟ್ಟಿ ಯುದ್ಧ ಮಾಡುವುದು ನಿಶ್ಚಿತವೆಂದು ತಿಳಿಸಿದನು. ಕೃಷ್ಣನ ಕೋಪ ಭುಗಿಲೆಂದು ಪ್ರಜ್ವಲಿಸಿತು. ಪಾಂಡವರು ತಾನು ಮಾಡಿದ ಉಪಕಾರಕ್ಕೆ ಅಪಕಾರ ಮಾಡಿದರೆಂದು ಆರ್ಭಟಿಸಿದ. ಸುಭದ್ರಾದೇವಿ ಮಾಡಿದ ಸಂಧಾನ ಪ್ರಯತ್ನ ವ್ಯರ್ಥವಾಯಿತು. ಪಾಂಡವರಿಗೂ ಯಾದವರಿಗೂ ವೈರ ಮಸೆಯಿತು. ಕೃಷ್ಣಾರ್ಜುನರು ಮದ್ದಾನೆಗಳಂತೆ ಒಬ್ಬರ ಮೇಲೊಬ್ಬರು ಬಿದ್ದು ಯುದ್ಧ ಮಾಡಿದರು. ಹಗ್ಗ ಹರಿಯಲಿಲ್ಲ. ಕೋಲು ಮುರಿಯಲಿಲ್ಲ. ಯುದ್ಧ ಮಾತ್ರ ನಿಲ್ಲಲಿಲ್ಲ. ಗಯನ ಸಲುವಾಗಿ ನರ ನಾರಾಯಣರು ಸತ್ತು ಸತ್ತುಳಿದರು. ಕೊನೆಗೆ ಶಿವ ಬಂದು ಇಬ್ಬರಿಗೂ ಬುದ್ಧಿ ಹೇಳಿ ಗಯನಿಗೆ ಪ್ರಾಣದಾನ ಮಾಡಿದ. ಇಲ್ಲಿಗೆ ಹಾಡು ಪಾಡಾಗಿ ಮುಗಿಯುತ್ತದೆ.

ಬಸವಲಿಂಗ ಕವಿ ಈ ಕಥೆಯನ್ನು ಬಣ್ಣ ಬಣ್ಣದ ಕುಂಚದಿಂದ ಚಿತ್ರ ಬರೆದಂತೆ ಶಬ್ದಗಳಲ್ಲಿ ಸುಂದರವಾಗಿ ಚಿತ್ರಿಸಿದ್ದಾನೆ. ಉಳಿದ ಹಾಡುಗಳಲ್ಲಿರುವ ಸ್ವಾರಸ್ಯ ಇದರಲ್ಲಿಯೂ ಬಂದಿದೆ. ಕೃಷ್ಣ ಮತ್ತು ಅರ್ಜುನರ ಮನಸ್ಸುಗಳಲ್ಲಿ ನಡೆವ ತುಮುಲ ಹೋರಾಟವನ್ನು ವಿಶ್ಲೇಷಿಸಿ ಅರಿಯಬಹುದಾಗಿದೆ.

ತುರುವಿ ಗಿರೀಶನ ಶಿಷ್ಯ

ಈ ಕವಿಯ ನಿಜನಾಮ ತಿಳಿಯದು. ತುರುವಿ ಗಿರೀಶನ ದಯದಿಂದ ತಾನು ’ಮಲುಹಣ ಹೋಳೀಹಾಡು’ ಬರೆದಿರುವುದಾಗಿ ಹೇಳಿಕೊಂಡಿದ್ದಾನೆ. ತುರುವಿ ಗಿರೀಶನನ್ನು ನೆನೆದು ಬರೆದಿರುವ ಸೋಬಾನ ಹಾಡು ಮತ್ತು ಚೌಪದನ ಪದ ನಮ್ಮ ಸಂಗ್ರಹದಲ್ಲಿ ಬಂದಿವೆ. ಹೆಚ್ಚಿಗೆ ಅಭ್ಯಾಸ ಮಾಡಿದರೆ ಅವನ ವಿಷಯ ಸಾದ್ಯಂತವಾಗಿ ತಿಳಿಯಬಹುದು. ಜನಪದ ಕವಿಚರಿತ್ರೆ ಅದನ್ನು ಹೇಳಬಹುದಾಗಿದೆ.  ಹೋಳೀಹಾಡಿನ ಸಂಗ್ರಹದಲ್ಲಿ ಮಲುಹಣ ಹಾಡನ್ನು ಮಾತ್ರ ಆರಿಸಿದ್ದೇವೆ. ಅವನ ಉಳಿದ ಹಾಡುಗಳನ್ನು ಅವಶ್ಯವೆನಿಸಿದರೆ ಪ್ರಕಟಿಸಲಾಗುವುದು. ಇವನ ಕಾವ್ಯಶಕ್ತಿ ದೊಡ್ಡದು. ಶೈಲಿ ಅದಕ್ಕಿಂತ ದೊಡ್ಡದು; ಈತನ ಹೆಸರನ್ನು ನಿಲ್ಲಿಸಲು ಮಲುಹಣನ ಹಾಡು ಒಂದೇ ಸಾಕೆನಿಸುತ್ತದೆ.

ಕವಿ ಗುರುವಿಗೆ ವಂದಿಸಿ, ಗಣಪತಿ ಸರಸ್ವತಿಯರನ್ನು ಸ್ತುತಿಸಿ ಹಾಡು ಪ್ರಾರಂಭಿಸುತ್ತಾನೆ. ಮೊದಲಿಗೆ ಮಲುಹಣನ ಕಥೆಯ ಸಾರವನ್ನು ಹೀಗೆ ಹೇಳಿದ್ದಾನೆ :

ಮಲುಹಣೆಂಬುವ ವಿಪ್ರಕುಳವಾರ್ಧಿಚಂದ್ರನು
ಬಲುಭಾಗ್ಯದಲಿ ನಲಿನಲಿಯುತಲಿ | ಓರ್ವ
ಮಲುಹಣಿಯೆಂಬಳಿಗೊಲಿಯುತಲಿ | ಚಿಕ್ಕ
ಲಲನೆಯೊಡನೆ ಮೋಹ ಬಲಿಯುತಲಿ | ಬರ್
ಮೊಲೆಯಿಂದ | ಸರ್ವಕಲೆಯಿಂದ | ಅವಳೆಲೆಯಿಂದ
ಸಲೆ ಸುಖದಿಂದಿರ್ದು ಮಲಹರನೊಲಿಸಿ ಶ್ರೀ
ಚಲಕೈದ ಕಥೆಯನು ಒಲಿದು ಕೇಳುವುದು || ೧[8]

ಭಾರತೀಪುರದಲ್ಲಿ ಸುವರ್ಣಸೆಟ್ಟಿ ಎಂಬ ಹರದನೊಬ್ಬನಿದ್ದ. ಆತನಿಗೆ ಸಕಲ ಸಂಪತ್ತು ಕಾದು ಕೂತಿತ್ತು. ಯಾತಕ್ಕೂ ಕೊರತೆ ಇರಲಿಲ್ಲ. ಮಲುಹಣ ಈ ಸುವರ್ಣಸೆಟ್ಟಿಯ ಮಗ. ಆತ ಕಾಮನಂತೆ ಸುಂದರ. ಬ್ರಹಸ್ಪತಿಯಂತೆ ಸಕಲ ವಿದ್ಯಾಪ್ರವೀಣ. ಮಗನಿಗೆ ತನ್ನ ಸರ್ವಸ್ವವನ್ನೆಲ್ಲ ಕೊಟ್ಟು ಸೆಟ್ಟಿ ಸ್ವರ್ಗಸ್ಥನಾದ. ಮಲುಹಣ ಧರ್ಮಪರಾಯಣ; ಅವನು ಪರಮಾತ್ಮನನ್ನು ಪೂಜಿಸುತ್ತ ಯಾವಾಗಲೂ ಲಿಂಗಧ್ಯಾನದಲ್ಲಿ ಕಾಲ ಕಳೆಯುತ್ತ ಬಂದ. ಭಾರತೀಪುರದ ಸೂಳಿಗೇರಿ ಕಾಮನಾಟಕ್ಕೆ ಹೆಸರಾದುದು. ಆ ಕೇರಿಯಲ್ಲಿ ಎಲ್ಲರನ್ನೂ ಮೀರಿದವಳು ಪದ್ಮಾವತಿ. ಅವಳ ಮೋಹದ ಕುಮಾರಿಯೇ ಮಲುಹಣಿ. ಅವಳು ಸೂಲೆಯ ಸಂತಾನ. ಸಂಗೀತದ ತಾನವಿತಾನ; ಅವಳ ಸ್ವರ ಕೋಕಿಲರವ,ನೃತ್ಯ ಝಂಕಿಟಿತ. ಅವಳ ನೃತ್ಯಕ್ಕೆ ಮರುಳಾಗದ ಮಾನವರೇ ಇದ್ದಿಲ್ಲ. ಅವಳೊಬ್ಬಳು ಕಲಾವಿಶಾರದೆ.

ಮಲುಹಣ ಒಮ್ಮೆ ತಿರುಗಾಡುತ್ತ ಸೂಳಿಗೇರಿಯ ಬೀದಿಯಲ್ಲಿ ಸುಳಿದಾಘ ಮಲುಹಣಿ ಕುಣಿಯುವುದನ್ನು ಕಂಡ :

ಮರಿದುಂಬಿ ಸರಗೈದು ವರ ಇಕ್ಷುದಂಡಕೆ
ತಿರುಹನೇರಿಸಿ ಪಂಚಸ್ವರಗಳಿಂದ | ಕರ್ಣ
ಪರಿಯಂ ಬಿಗಿದು ಝಣತ್ಕರಗಳಿಂದ | ನೋಡಿ
ಸ್ಮರರಾಯನೆಚ್ಚನಬ್ಬರಗಳಿಂದ | ಎದೆ
ಕರಗುತ | ಕಂಡು ಸೊರಗುತ | ಮನ ಮರು | ಗುತ
ತರಹರಿಸದೆ ಕಾತರ ಹೆಚ್ಚಿ ಮಲುಹಣ
ಬೆರಗುವಟ್ಟನು ಮುದ್ದು ತರಳೆ ರನ್ನಳಿಗೆ || ೨[9]

ಮಲುಹಣನನ್ನು ಕಂಡ ಮೊದಲು ನೋಟದಲ್ಲಿಯೇ ಮಲುಹಣಿಯು ಮೋಹ ಮುಗ್ಧಳಾದಳು. ಮೈಮರೆದಳು. ಕಾಮ ಇದೇ ಸಮಯವನ್ನು ಕಾಯುತ್ತ ಕೂತಿದ್ದನೋ ಏನೋ? ಅವರಿಬ್ಬರೂ ಬೆರೆತು ಒಂದಾದರು.  ಅವರ ಕಾಮ ಕೇಳಿಗೆ ಇತಿಮಿತಿ ಇಲ್ಲದಾಯಿತು. ಮಲುಹಣ ಮನೆಮಾರು ತೊರೆದು ಸಕಲ ಸಂಪತ್ತನ್ನು ಅವಳಿಗೆ ಧಾರೆಯೆರೆದು ಅವಳ ಮನೆಯಲ್ಲಿಯೇ ಕಾಲೂರಿದ, ಅವರಿಬ್ಬರಲ್ಲಿಯೂ ಸಮರೂಪು, ಸಮಪ್ರಾಯ, ಸಮಜಾಣ್ಮೆ ಇದ್ದಾಗ ಕೇಳುವದೇನು? ಸಮಸುಖ ಸಮರತಿ ಸಮವಾಗಿ ಅನುದಿನದಲ್ಲಿ ಸಮರಸ ಸುಖವನ್ನು ಅನುಭವಿಸತೊಡಗಿದರು. ಜಲಕೇಳಿ ವನವಿಹಾರ ಅವರ ಜೀವನದ ಜೊತೆಗೆ ಒಡನಾಡಿಯಾದವು.

ಹೀಗೆ ಮಲಹಣ ಮಲುಹಣಿ ಸುಖದಿಂದ ಕಾಲಕಳೆಯುವಾಗ ಒಂದು ದಿನ, ಪದ್ಮಾವತಿ ಸುಖಜೀವನದಲ್ಲಿ ವಿಷಬೀಜ ಬಿತ್ತಲು ಮನಸ್ಸು ಮಾಡಿದಳು. ಮಗಳನ್ನು ಕರೆದು ಕುಲದ ಕಸಬನ್ನು ಅನುಸರಿಸಲು ಬುದ್ಧಿವಾದ ಮಾಡಿದಳು; ’ಇದ್ದವನನ್ನು ಎದ್ದೋಡಿಸಿ ಹಣವಿದ್ದ ಹೊಸಬನನ್ನು ಬರಮಾಡಿಕೊಳ್ಳುವುದು ಲೇಸು’ ಆದ್ದರಿಂದ ಮಲುಹಣನನ್ನು ಮನೆ ಬಿಡಿಸಿ ಅಟ್ಟೆಂದು ಕಿವಿಮಾತು ಹೇಳಿದಳು. ಸಾಮಾನ್ಯ ಸೂಳೆಯರ ನೀತಿಗೆ ಮಲುಹಣಿ ಸೊಪ್ಪುಹಾಕುವ ಹೆಣ್ಣಲ್ಲ. ಅವಳು ತನ್ನ ತಾಯಿಗೆ :

ಮಲುಹಣನೆನ್ನ ವಲ್ಲಭ ಮುದ್ದು ಚೆನ್ನಿಗ
ಚೆಲುವ ಸುಜಾಣನ ಬಿಡಬಲ್ಲೆನೆ | ಮತ್ತೆ
ಹುಲುಮನುಜರಿಗೆ ಚಿತ್ತವಿಡಬಲ್ಲೆನೆ | ಇಂಥ
ಕೆಲಬರ್ಗೆ ಸುರತವ ಕೊಡಬಲ್ಲೆನೆ | ಮುಂದೆ
ಫಲವೇನೆ | ಇದು ಗೆಲವೇನೆ | ನಿನ್ನ ಛಲ | ವೇನೆ
ಸುಲಲಿತಾಂಗನ ತೆಕ್ಕೆಯೊಳಗಿರ್ದ ಬಳಿಕ ಈ
ಹಲವು ಜಾತಿಗೆ ನಾನು ಒಲಿದು ಪೋಗುವೆನೆ || ೧[10]

ಎಂಟು ಗಟ್ಟಿಯಾಗಿ ತನ್ನ ನಿರ್ಧಾರ ತಿಳಿಸುತ್ತಾಳೆ. ಅದಕ್ಕೆ ಆ ಚಂಡಿ ಪದ್ಮಾವತಿ ಏನು ಮಾಡಬೇಕು ; ಮಗಳನ್ನು ಒಂದು ಖೋಲಿಯಲ್ಲಿ ಹಾಕಿ ಬೀಗ ಜಡಿದು, ಮಲುಹಣನ ಕತ್ತಿಗೆ ಕೈಕೊಟ್ಟು ಅವನನ್ನು ಬೀದಿಗೆ ದಬ್ಬಿದಳು. ಮಲುಹಣನಿಗೆ ದಿಕ್ಕು ತಪ್ಪಿತು. ದಾರಿ ಸಿಕ್ಕತ್ತ ಸಾಗಿ ಅಡವಿಗೀಡಾದ. ಗಿಡದ ಅಡಿಯಲ್ಲಿ ಕುಳಿತು ಮಲುಹಣಿಯನ್ನೇ ನೆನೆಯುತ್ತ ದೆಸೆದೆಸೆಗೆ ಬಾಯ್ಬಿಟ್ಟ. ಮಲುಹಣಿ ಕಣ್ಮುಂದೆ ಸುಳಿದಂತಾಗಲು ’ಬಾಬಾ ನೀರೆ’ ಎನುತ ಬಯಲನ್ನೇ ಅಪ್ಪತೊಡಗಿದ. ವಿರಹ ತಂದ ಭ್ರಾಂತಿಯದು. ಅವನ ಅಂತರಂಗದಲ್ಲಿ ಬಹಿರಂಗದಲ್ಲಿ ಎಲ್ಲೆಲ್ಲೂ ಕತ್ತಲೆ. ಇವನ ಮನದ ಕತ್ತಲೆಯನ್ನು ಕಂಡೋ ಏನೋ ಸೂರ್ಯ ಪಡುವಣ ದಿಕ್ಕಿನಲ್ಲಿ ಮಾಯವಾದ. ಬಹುತರವಾಗಿ ಪರಮೇಶ್ವರನಿಗೆ ಮಲುಹಣನ ಸ್ಥಿತಿಯನ್ನು ಹೇಳಲಿಕ್ಕೆಂದೇ ಸೂರ್ಯದೇವ ಹೋಗಿರಬೇಕು,

ರಾತ್ರಿ ಪ್ರಾರಂಭವಾಯಿತು. ಮೂಡಣ ದಿಕ್ಕಿನಲ್ಲಿ ಚಂದ್ರ ಉದಯವಾದ. ಮಲುಹಣನ ಸ್ಥಿತಿಗತಿಯನ್ನರಿಯಲು ಆತ ಬಂದರೂ ಬಂದಿರಬೇಕು. ಹಿಟ್ಟು ಚಲ್ಲಿದಂತೆ ಸುತ್ತೆಲ್ಲ ಬೆಳದಿಂಗಳು ಪಸರಿಸಿತು; ಕಾಡುನಾಡುಗಳಲ್ಲಿ ಇಡಿಯಿತು, ಇಂತಹ ಬೆಳದಿಂಗಳಲ್ಲಿ ವಿರಹಿಗಳು ಇರುವುದೆಂತು? ಇತ್ತ ಮಲುಹಣ ವಿರಹತಾಪದಲ್ಲಿ ಬೆಂದು ಉರಿಯುವಂತೆ ಮಲಹಣಿಗೂ ಮನದಲ್ಲಿ ಸಂತಾಪ ಮೂಡಿತು. ಕಾಂತನಿಲ್ಲದ ಮನೆ ಅವಳಿಗೆ ಕಾಂತಾರವಾಗಿ ಪರಿಣಮಿಸಿತು. ತನ್ನ ನಲ್ಲ ಮುನಿದು ಹೋದನೆಂದು ಬಗೆದು ನೆಲದಲ್ಲಿ ಹೊರಳಾಡಿದಳು. ಅವಳ ದೂತಿಯರು ಮಾಡಿದ ಶೈತ್ಯೋಪಚಾರ ಉರಿಬಿಸಿಲೆನಿಸಿತು. ಚಿತ್ತದೊಲ್ಲಭ ಬಾರದೆ ಹೋದಲ್ಲಿ ತನ್ನ ಮತ್ತೊಬ್ಬ ಪುರುಷನನ್ನು ಕರೆದು ಮಗಳಿಗೆ ಒತ್ತೆಗೊಟ್ಟಳು. ಸಾಯುವುದರ ಮೇಲೆ ಮೇಯುವುದು ಬಿತ್ತಂತೆ ಎನ್ನುವ ಗಾದೆ ದಿಟವಾಯಿತು. ಆದರೆ ಪರ ಪುರುಷನಿಗೆ ಒಲಿಯುವ ಹೆಣ್ಣು ಮಲುಹಣಿಯಲ್ಲ.

ಆ ಸಮಯದಲ್ಲಿ ಮಲುಹಣ ತನ್ನ ದೇಹವನ್ನು ಎಳೆದುಕೊಂಡು ಊರೊಳಗೆ ಬರುವಾಗ, ಗೋಲಿಂಗನ ಗುಡಿಯು ಸಮೀಪಿಸುತ್ತದೆ. ಸ್ತ್ರೀಯೊಬ್ಬಳು ಇವನ ಮೈಮೇಲೆ ನೀರು ಸುರಿಯುತ್ತಾಳೆ. ಮಲುಹಣ ಶಿವಧೋ ಶಿವಧೋ ಎನ್ನುತ್ತಾನೆ. ಆ ನಾರಿ ಹರ್ಷದಳೆದು ವಿಜಯರಸನ ಗುಡಿಯಲ್ಲಿ ಅವನನ್ನು ಕರೆದು ತರುವಳು. ಮಲುಹಣ ಅವಳ ಮುಖವನ್ನೇ ನೋಡುತ್ತ ಶಿವಸ್ತುತಿ ಮಾಡತೊಡಗಿದ. ಅವರ ಅನನ್ಯ ಸ್ತುತಿಗೆ ಮೆಚ್ಚಿದ ಶಿವನು ಅವರಿಗೆ ಪ್ರತ್ಯಕ್ಷನಾಗಿ ಬೇಡಿದ ವರವನ್ನು ಕೊಡಲು ಸಿದ್ಧನಾದ. ಮಲುಹಣ ಮಲುಹಣಿಯರು ನೂರುವರ್ಷಕಾಲ ಭೂಲೋಕದಲ್ಲಿದ್ದು ಸುರತಸುಖವನ್ನು ಅನುಭವಿಸಿ ಕೈಲಾಸಕ್ಕೆ ಬರುವುದಾಗಿ ತಿಳಿಸುತ್ತಾರೆ. ಶಿವನು ಹಾಗೆಯೇ ಮಾಡಿರೆಂದು ಹೇಳಿ ಗಣಸಮೂಹದೊಡನೆ ಕೈಲಾಸಕ್ಕೆ ತೆರಳುವನು. ಇಲ್ಲಿಗೆ ಮಲುಹಣ ಶರಣನ ಹಾಡು ಮುಕ್ತಾಯಗೊಳ್ಳುವುದು.

ಮಲುಹಣ ಮಲುಹಣಿಯರ ಜೀವನವೇ ಶೃಂಗಾರಮಯವಾದುದು. ಸಂಭೋಗಶೃಂಗಾರಕ್ಕೂ ವಿಪ್ರಲಂಭಶೃಂಗಾರಕ್ಕೂ ಇಲ್ಲಿ ತುಂಬಾ ಅವಕಾಶವಿದೆ. ಆದ್ದರಿಂದಲೇ ಹಾಡುಗಾರ ಈ ಸನ್ನಿವೇಶವನ್ನು ಹೋಳೀಹಾಡಿಗೆ ವಸ್ತುವಾಗಿ ಸ್ವೀಕರಿಸಿರಬೇಕು. ಅಂತೂ ಈ ಹಾಡು ಯಾವ ದೃಷ್ಟಿಯಿಂದ ನೋಡಿದರೂ ಕಳಪೆಯಿಲ್ಲದ ರಸಬಾಳೆಯಂತೆ ರುಚಿಕಟ್ಟಾಗಿದ್ದುದು ಕಂಡು ಬರುತ್ತದೆ. ಈ ಹಾಡು ಯಾವ ಹಾಡುಗಬ್ಬಕ್ಕೂ ಕಡಮೆಯದಾಗಿಲ್ಲವೆಂದು ಹೇಳಬಹುದು. ಜೀವಂತತೆ ಈ ಹಾಡಿನ ವೈಶಿಷ್ಟ್ಯ.[1] ೧. ಕೃಷ್ಣಾರ್ಜುನರ ಕಾಳಗ ಪದ್ಯ ೨

[2] ೧. ಕೃಷ್ಣಗೊಲ್ಲತಿ : ಪ,೧

[3] ೧. ಕೃಷ್ಣಗೊಲ್ಲತಿ : ಪ, ೮

[4] ೨. ಕೃಷ್ಣಗೊಲ್ಲತಿ : ಪ, ೨೪

[5] ೧.ವೀರ ಅಭಿಮನ್ಯು – ಪ.೨

[6] ೧. ವೀರ ಅಭಿಮನ್ಯು – ಪ.೨೭

[7] ೧.ವೀರ ಅಭಿಮನ್ಯು – ಪ.೯೦

[8] ೧. ಮಲುಹಣ ಪ, ೫

[9] ೨. ಮಲುಹಣ ಪ, ೨೭

[10] ೧. ಮಲುಹಣ ಪ, ೪೫