ಕಾಮ – ಪ್ರೇಮ

ಕಾಮಪ್ರೇಮಗಳ ಸಂಬಂಧ ಅನ್ಯೋನ್ಯವಾಗಿದ್ದು ಅವೆರಡೂ ಒಂದಕ್ಕೊಂದು ಪೂರಕವಾಗಿ ಬೆಳೆದುಬಂದಿವೆ. ಕಾಮಪ್ರೇಮವಿಲ್ಲದ ಜೀವಿಯೇ ಜಗತ್ತಿನಲ್ಲಿಲ್ಲ. ಕಾಮ ವಿರಹದ ಕುಲುಮೆಯಲ್ಲಿ ಬೆಂದಾಗ ಪ್ರೇಮವಾಗಿ ನಿಲ್ಲುವುದು. ಕಾಮವು ಜೀವಿಯ ಸಹಜ ಪ್ರವೃತ್ತಿ. ಅದು ದೇಹದ ಹಸಿವೆ, ಮನದ ಬೇಡಿಕೆ. ಅದು ದೇವನಲ್ಲುಂಟು; ದೇವ ನಿರ್ಮಿತ ಸೃಷ್ಟಿಯಲ್ಲುಂಟು. ಬ್ರಹ್ಮಸೃಷ್ಟಿಗೆ ಕಾಮವೇ ಮೂಲ. ಅದು ಅನಾದಿ, ಅವಿನಾಶಿ, ದೇವಕಾಮ ಇಲ್ಲದೆ ಹೋಗಿದ್ದರೆ ತ್ರಿಮೂರ್ತಿಗಳ ಉದ್ಭವವೂ ಅಸಾಧ್ಯವಾಗಬಹುದಾಗಿತ್ತು. ಕಾಮನಿಂದ ಕಾಮ ಬೆಳೆಯಿತು. ಕಾಮ ಮೂಡಿದಲ್ಲಿ ನೂತನ ಸೃಷ್ಟಿ ಉದ್ಭವಿಸಿತು. ಅದೇ ಚೊಚ್ಚಲ ಸೃಷ್ಟಿಗೆ ಆದಿ, ಪುರುಷ ಪ್ರಕೃತಿಗಳನ್ನು ಹೊಂದಿ ಬೆಸೆಯುವುದೇ ಕಾಮದ ಕಾರ್ಯ. ಕಾಮವೊಂದು ಆಂತರಿಕ ಇಚ್ಛೆ. ಬಹಿರಂಗದ ಸ್ವೇಚ್ಛೆ. ಸೃಷ್ಟಿಕರ್ತನ ಮನದಲ್ಲಿ ಮೊದಲು ಮೂಡಿದ್ದೇ ದೇವಕಾಮ. ಬ್ರಹ್ಮಸೃಷ್ಟಿ ಅನಂತಕಾಲ ಬಾಳಬೇಕಲ್ಲವೇ ಅದಕ್ಕೆಂದೇ ದೇವಕಾಮ ಕಾಮದೇವನಾಗಿ ಬ್ರಹ್ಮಸೃಷ್ಟಿಗೆ ಇಳಿದನು, ಅಮರವಾಗಿ ಮೆರೆದನು.

ಕಾಮ ವಿರಹತಾಪದಲ್ಲಿ ಕುದ್ದು ಬೆಂದಾಗ ಶುದ್ಧ ಪ್ರೇಮ ಎನಿಸಿಕೊಳ್ಳುವುದು ಸಹಜ.ಕಾಮಕ್ಕೆ ಕಣ್ಣಿಲ್ಲ. ತಲೆಯಂತೂ ಮೊದಲೇ ಇಲ್ಲ. ಪ್ರೇಮಕ್ಕೆ ಮಾತ್ರ ಕಣ್ಣು ತಲೆಗಳೆರಡೂ ಇದ್ದು ಸಾರಾಸಾರ ವಿಚಾರವನ್ನು ಅದು ಮಾಡಬಲ್ಲದು. ಕಾಮ ತಾಮಸಕ್ಕೆ ತವರು; ಪ್ರೇಮ ಸಾತ್ವಿಕಕ್ಕೆ ಇನ್ನೊಂದು ಹೆಸರು. ಈ ಸಾತ್ವಿಕ ಪ್ರೇಮವೇ ಭಕ್ತಿಗೆ ಉಸಿರು. ಶುದ್ಧಭಕ್ತಿಯ ಬಲದಿಂದ ಮಾನವ ದೇವನಾಗಬಲ್ಲ. ಉಳಿದ ಪ್ರಾಣಿಪ್ರಪಂಚದಲ್ಲಿ ಕಾಮ ಕಾಮವಾಗಿಯೇ ಉಳಿಯುತ್ತದೆ. ಅದಕ್ಕೆ ಬುದ್ಧಿಯ ಸಾನೆ ಸಿಗದು, ವೃದ್ಧಿಯ ದಾರಿ ತೋಚದು. ಇದೆಲ್ಲ ಕಾಮಪ್ರೇಮಗಳಲ್ಲಿ ಅಡಗಿರುವ ಅದ್ಭುತ.

ಕಾಮಕಲ್ಪನೆ

ತ್ರಿಮೂರ್ತಿಗಳ ಉದ್ಭವಕ್ಕೆ ದೇವರದೇವನ ಕಾಮವೇ ಕಾರಣ. ಬ್ರಹ್ಮ ವಿಷ್ಣು ಮಹೇಶ್ವರರು ಲೋಕವನ್ನು ಸೃಷ್ಟಿಸುವ, ಪಾಲಿಸುವ, ಲಯಗೊಳಿಸುವ ದೇವರೆಂದು ಶಾಸ್ತ್ರ ತರ್ಕ ಹೂಡಿತು; ಪುರಾಣ ಕಥೆಕಟ್ಟಿ ಹೇಳಿತು. ಬ್ರಹ್ಮನಿಂದ ಚರಾಚರ ಸೃಷ್ಟಿ ನಡೆದರೆ ಅದನ್ನು ಪಾಲಿಸುವ ಭಾರ ವಿಷ್ಣುವಿನದಾಯಿತು. ಸೃಷ್ಟಿಗೆ  ಮಿತಿ ಇಲ್ಲವಾದರೆ ಲೋಕದ ಗತಿಯೆಂತು? ಅದಕ್ಕಾಗಿ ಶಿವನು ಲಯಕಾರಿಯಾಗಿ ನಿಂತ. ಲೋಕದಾಟ ತಾಳಮೇಳಗೂಡಿ ಮುನ್ನಡೆಯುವಲ್ಲಿ ತ್ರಿಮೂರ್ತಿಗಳು ವಹಿಸುವ ಪಾತ್ರ ಲಯಬದ್ಧವಾಗಿದೆ. ವ್ಯಷ್ಟಿಯಲ್ಲಿ  ಸಮಷ್ಟಿ ಬೆರೆತಾಗಲೇ ಪರಿಪೂರ್ಣತೆಗೆ ಪೂರ್ಣವಿರಾಮ. ಸೃಷ್ಟಿ ಮತ್ತು ಲಯ ಕಷ್ಟದಾಯಕ ಕಾರ್ಯಗಳಲ್ಲ. ಲೋಕಪಾಲನೆಯ ಕಾರ್ಯ ಮಾತ್ರ ಗಡುಚಾದುದು. ಆ ಕಾರ್ಯವನ್ನು ಪೂರೈಸುವ ಭಾರ ವಿಷ್ಣುವಿನ ಪಾಲಿಗೆ. ಆತನ ಕಾಮ ನಿತ್ಯವಾದಾಗಲೇ ಸೃಷ್ಟಿಯ ಉಳಿಮೆ. ಅದಕ್ಕಾಗಿಯೇ ಕಾಮದೇವ ವಿಷ್ಣುವಿಗೆ ಮಗನಾಗಿ, ರತಿಗೆ ಮದುಮಗನಾಗಿ ಎದೆಸೆಟಿಸಿ ನಿಲ್ಲಬೇಕಾಯಿತು. ಆ ಕಾಮನ  ಉಪಟಳ ಹೇಳತೀರದು. ಜೀವಿಗಳ ಮನದಲ್ಲಿ ಹೊಕ್ಕು ತೊತ್ತಳದುಳಿದು ಗಂಡು ಹೆಣ್ಣಿನ ಸಮಾಗಮಕ್ಕೆ ಕಾರಣವಾಗಬಲ್ಲವ ಕಾಮ. ಅಂತಹ ಪ್ರಚಂಡನನ್ನು ಮಣಿಸಬಲ್ಲ ಪುಂಡನಾರು? ಶಿವನು ಕಾಮವನ್ನು ಸುಟ್ಟು ಕಾಮಾರಿಯೆನಿಸಿಕೊಂಡ. ಕಾಮದಹನದ ಕಥೆ ಭಾರತದಲ್ಲಿ ಬಹಳ ಪ್ರಸಿದ್ಧವಾಗಿದೆ. ಶೈವಪುರಾಣಗಳಲ್ಲಂತೂ ಅದಕ್ಕೆ ಇಲ್ಲದ ಅಢ್ಯಃ ಅದೊಂದು ಶಿವಲೀಲೆ.

ದಾಕ್ಷಾಯಣಿ

ದಕ್ಷಬ್ರಹ್ಮ ಅನೇಕ ಹೆಣ್ಣುಮಕ್ಕಳ ತಂದೆ.  ದೇವಾನು ದೇವತೆಗಳಿಗೆ  ಹೆಣ್ಣು ಕೊಟ್ಟು ಹಿರಿಯ ದೇವರನ್ನೆಲ್ಲ ಅಳಿಯರನ್ನಾಗಿ ಮಾಡಿಕೊಂಡ ಕೀರ್ತಿ ಅವನಿಗಿದೆ. ದಾಕ್ಷಾಯಿಣಿ ಅವನ ನಚ್ಚಿನ ಪುತ್ರಿ. ಅವಳು ಶಿವನ ಕೈಹಿಡಿದು ಶಿವೆಯಾದಳು. ಹೀಗೆ ದೇವಾನುದೇವರನ್ನೆಲ್ಲ ಅಳಿಯರನ್ನಾಗಿ ಮಾಡಿಕೊಂಡ ದಕ್ಷಬ್ರಹ್ಮನಿಗೆ ಅಹಂಕಾರ ಬಂತು. ಅಳಿಯಂದಿರಿಂದ ಮನ್ನಣೆ ಪಡೆಯಬೇಕೆಂಬ ಗೀಳು ಹಿಡಿಯಿತು. ಎಲ್ಲ ಅಳಿಯರನ್ನು ಸಂದರ್ಶಿಸಿ ಮಾನಮರ್ಯಾದೆ ಹೊಂದಿ ಮೈಯುಬ್ಬಿದ ದಕ್ಷ ಶಿವನಲ್ಲಿಗೂ ಬಂದ. ಆ ಸಮಯದಲ್ಲಿ ಶಿವಶಿವೆಯರು ಒಡ್ಡೋಲಗದಲ್ಲಿ ಕುಳಿತಿದ್ದರು. ಅಹಂಕಾರಿಯಾದ ದಕ್ಷ ಸೊಕ್ಕಿದ ಎಕ್ಕಲನಂತೆ ಶಿವನ ಎದುರಿಗೆ ಬಂದು ನಿಂತ. ಮಾವನ ಸೊಕ್ಕನ್ನು ಮುರಿಯಬೇಕೆಂದ ಶಿವನು ಎದುರಿನಲ್ಲಿ ನಿಂತ ದಕ್ಷನನ್ನು ಹೊರಳಿ ಸಹ ನೋಡಲಿಲ್ಲ; ಬಾಯೆಂದು ಮುಂದಕ್ಕೆ ಕರೆಯಲಿಲ್ಲ. ಗಂಡನೇ ಸುಮ್ಮನಿದ್ದಾಗ ತಂದೆಯನ್ನು ಮಾತಾಡಿಸುವುದು ಗೌಣವೆಂದು ಶಿವೆಯೂ ಸುಮ್ಮನಿದ್ದಳು. ಮನೆಯ ಬಾಗಿಲಿಗೆ ಬಂದವರನ್ನು ಮಾತಾಡಿಸದ ಶಿವಶಿವೆಯರಿಗೆ ಸೊಕ್ಕು ಬಂದಿದೆ. ಆ ಸೊಕ್ಕನ್ನು ಮುರಿಯಲೇಬೇಕೆಂದು ದಕ್ಷಬ್ರಹ್ಮ ಹಾಗೆಯೇ ಮರಳಿ ಬಂದ. ಶಿವನ ಸೊಕ್ಕನ್ನು ಮುರಿಯಲೆಂದೇ ಒಂದು ಮಹಾಯಜ್ಞವನ್ನು ಪ್ರಾರಂಭಿಸಿದ.

ಯಜ್ಞಸಿದ್ಧತೆ ಭರದಿಂದ ನಡೆಯಿತು. ವಿಷ್ಣುವಿಗೆ ಯಜ್ಞದಲ್ಲಿ ಅಗ್ರಪೂಜೆ ಸಲ್ಲಿಸಬೇಕೆಂದು ನಿರ್ಧರಿಸಿ ಸರ್ವ ದೇವಾನುದೇವತೆಗಳಿಗೂ ಮನುಮುನಿಗಳಿಗೂ ಆಮಂತ್ರಣ ನೀಡಿದ. ಯಜ್ಞ ಪ್ರಾರಂಭವಾಯಿತು. ಮಹಾಶಿವಭಕ್ತರಾದ  ದಧೀಚಿ ಮುನಿಯು ಆಮಂತ್ರಿತನಾಗಿ ಬಂದು ಯಜ್ಞವೇದಿಕೆಯ ಮೇಲೆ ಶಿವನಿಲ್ಲದುದನ್ನು ಕಂಡು ಮನದಲ್ಲಿ ಕುಪಿತನಾದನು. ಶಿವನಿಲ್ಲದ ಯಜ್ಞ ಅಜ್ಞರ ಆಡಂಬರವೆಂದು ಘಂಟಾಘೋಷವಾಗಿ ಹೇಳಿದನು. ದಕ್ಷಬ್ರಹ್ಮನಿಗೆ ಆ ಮಾತುಕೇಳಿ ಸಿಟ್ಟು ಬಂತು; ಶಿವನನ್ನು ಮನಬಂದಂತೆ ನಿಂದಿಸತೊಡಗಿದ. ಆಗ ದಧೀಚಿ ’ಶಿವನಿಲ್ಲದ ಯಜ್ಞ ಕಾರ್ಯಕ್ಕೆ ಬಂದವರಲ್ಲಿ ಶಿವಜ್ಞಾನ ಅಳಿಯಲಿ’ ಎಂದು ಶಾಪಕೊಟ್ಟು ಹಿಂದಿರುಗಿದ.

ದಕ್ಷನ ಯಜ್ಞವಾರ್ತೆ ನಾರದನ ಮುಖಾಂತರ ಶಿವನಿಗೆ ತಲುಪಿತು. ಅರಗಿನ ಕುದುರೆಯ ಮೇಲೆ ಉರಿಯ ಸವಾರಿ ನಡೆದಿದೆಯೆಂದು ಶಿವ ನಕ್ಕುಬಿಟ್ಟ. ಆ ವಾರ್ತೆ ದಾಕ್ಷಾಯಣಿಯ ಮನಸ್ಸಿನ ಮೇಲೆ ಬರೆ ಎಳೆಯಿತು. ತಂದೆ ಅಜ್ಞಾನಕ್ಕಾಗಿ ಸಿಟ್ಟೂ ಬಂತು; ಆಗ ಅವಳು ತಾನೇ ಹೋಗಿ, ದಾರೀಬಿಟ್ಟ ತನ್ನ ತಂದೆಗೆ ಬುದ್ಧಿಹೇಳಬೇಕೆನಿಸಿತು. ತವರಿಗೆ ಹೋಗಿ ಬರಲು ಗಂಡನ ಅಪ್ಪಣೆ ಕೇಳಿದಳು. ಶಿವನು ದಾಕ್ಷಾಯಣಿಗೆ ಪರಿಪರಿಯಾಗಿ ಬುದ್ಧಿ ಹೇಳಿ ’ನೀನು ನಿನ್ನ ತಂದೆ ಇದ್ದಲ್ಲಿಗೆ ಹೋದರೆ ಅಪಮಾನಕ್ಕೆ ಗುರಿಯಾಗುವಿ, ಹೋಗಬೇಡ’ ಎಂದು ಗಟ್ಟಿಯಾಗಿ ಹೇಳಿದ. ತಂದೆಯ ಮನೆಗೆ ಹೋಗುವುದಕ್ಕೆ ಏತರ ಅಪಮಾನ? ಎಂದುಕೊಂಡು ಅಲ್ಲಿಗೆ ಯೋಗುವುದಕ್ಕೆ ಅಪ್ಪಣೆ ಕೊಡಬೇಕೆಂದು ದಾಕ್ಷಾಯಣಿ ಹಟ ಹಿಡಿದಳು. ಮುಂದಾಗುವುದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ’ ಎಂದುಕೊಂಡು ನಂದಿಯ ಜೊತೆಗೆ ದಾಕ್ಷಾಯಣಿಯನ್ನು ಕಳಿಸಿಕೊಟ್ಟ ಶಿವ.

ದಾಕ್ಷಾಯಣಿ ತಂದೆಯ ಯಜ್ಞಮಂಟಪಕ್ಕೆ ಬಂದಳು. ತಂದೆ ಎದುರಿಗೆ ಬಂದರೂ ಮಗಳನ್ನು ಮಾತಾಡಿಸಲಿಲ್ಲ. ಆದರೂ ಅವಳು ಅಪಮಾನವನ್ನು ನುಂಗಿಕೊಂಡು ’ತಂದೆಯೇ ಶಿವನಿಲ್ಲದ ಯಾಗ ಯಾಗವೇ? ಬುದ್ಧಿ ಇಲ್ಲದವರ ಹಾಗೆ ವರ್ತಿಸಬೇಡ; ತಿಳಿದು ನೋಡೆ’ಂದು ತಂದೆ ಪರಿಪರಿಯಾಗಿ ಬೇಡಿಕೊಂಡಳು. ಶಿವ ಎನ್ನುವ ಶಬ್ದ ಕಿವಿಗೆ ಬಿದ್ದಾಕ್ಷಣವೇ ದಕ್ಷನ ಕೋಪ ಭುಗಿಲೆಂದು ಕೋಡಿವರಿದು ಹರಿಯಿತು. ಸಿಟ್ಟಿನ ಭರದಲ್ಲಿ ಶಿವನಿಂದೆ ಮಾಡತೊಡಗಿದ’ ತಿರುಕನೂ ಮಸಣ ಗಾಹಿಯೂ ಗೊರವನೂ ಎನಿಸಿಕೊಂಡ ಆ ಶಿವ ನನಗೆ ಸರಿಸಮಾನನೆ?” ಎಂದು ಹಲವು ವಿಧದಲ್ಲಿ ಶಿವನಿಂದೆಯನ್ನು ಮುಂದುವರಿಸಿದ. ದಾಕ್ಷಾಯಣಿ ಶಿವನಿಂದೆಯನ್ನು ಕೇಳಲಾರದೆ ’ದಕ್ಷ ಸಂಬಂಧಕಾಯ’ ಸಾಕೆಂದು ಅದೇ ಯಜ್ಞ ಕುಂಡದಲ್ಲಿ ಹಾರಿಕೊಂಡು ದೇಹನೀಗಿದಳು. ತಾನು ಈ ಮೊದಲೇ ಹಿಮಾಲಯ ರಾಜನ ಪತ್ನಿಯಾದ ಮೇನಕೆಗೆ ಕೊಟ್ಟ ವರವನ್ನು ಪಾಲಿಸಲು ಅವಳ ಉದರದಲ್ಲಿ ಹೊಕ್ಕು ಲೋಕಕ್ಕವತರಿಸಿ ಪಾರ್ವತಿ ಎಂದು ಬೆಳೆಯತೊಡಗಿದಳು. ದಕ್ಷನ ಯಜ್ಞಕ್ಕೆ ಆಹುತಿಯಾದ ದಾಕ್ಷಾಯಣಿ ಸಾಮಾನ್ಯಳಲ್ಲ; ಶಿವನ ಅರ್ಧಾಂಗಿ. ಚಲದ ಲಲನೆ;  ಬಲ್ಪಿನ ಭಾವಕಿ. ಜನ್ಮಜನ್ಮದಲ್ಲಿಯೂ ಶಿವನೇ ತನ್ನ ಗಂಡನಾಗಿರಬೇಕೆನ್ನುವ ಧೀರೆ.

ದಾಕ್ಷಾಯಣಿ ಕಾಯವಳಿದ ವಾರ್ತೆ ಶಿವನ ಕಿವಿಗೆ ಮುಟ್ಟುತ್ತಲೇ ಅವನ ಕೋಪ ಭುಗಿಲೆಂದು ಪ್ರಜ್ವಲಿಸಿತು. ಶಿವನು ತನ್ನ ಉರಿಗಣ್ಣನ್ನು ತೆರೆದ. ಧರಣಿ ಧಗಧಗನೆ ಉರಿಯುವಂತಾಯಿತು. ಆ ಮಹಾದೇವನ ಕೋಪದಿಂದ ಹೊರಟ ಧೂಮದಲ್ಲಿ ವೀರಭದ್ರ ಮೈದೋರಿದ. ಶಿವನ ಅಪ್ಪಣೆಯಂತೆ ಅವನು ಆರ್ಭಟಿಸುತ್ತ ದಕ್ಷಯಜ್ಞವನ್ನು ಸೂರೈಗೈದ. ದಕ್ಷಯಜ್ಞಕ್ಕೆ ಕೊನೆಯ ತೆರೆ ಎಳೆಯಿತು.

ಪಾರ್ವತಿ

ಇತ್ತ ಮೇನೆ ಪರ್ವತರಾಜರ ಉದರದಲ್ಲಿ ಜನಿಸಿದ ಪಾರ್ವತಿ ದಿನಕ್ಕೊಂದು ಚಂದಾಗಿ ಬಿದಿಗೆಯ ಚಂದ್ರನಂತೆ ಬೆಳೆಯತೊಡಗಿದಳು. ಅವಳ ಸೌಂದರ್ಯವನ್ನು ಕಂಡು ಚಂದ್ರ ಕಳೆಗಟ್ಟಿದ, ಬೆಳದಿಂಗಳು ಪಸರಿಸಿತು. ಕಾಮನಿಗೆ ಬಲ ಬಂದಿತು. ಶಿವನ ವಾಮಭಾಗವು ಪುಳಕಿತವಾಯಿತು. ಗಿರಿಜೆ ಹುಟ್ಟುತ್ತಲೇ ಶಿವಭಕ್ತೆ; ಬೆಳೆಯುತ್ತಲೇ ಶಿವಪೂಜಾನುರಕ್ತೆ. ಅವಳ ಬಾಲಲೀಲೆಯೇ ಶಿವಲೀಲೆ, ಯೌವನವೇ ಶೈವನಿಧಿ. ಬೆಳೆದ ಮಗಳಿಗೆ ವರನಾರೆಂದು ತಂದೆ ತಾಯಿ ಚಿಂತಿಸತೊಡಗಿದರು. ಅವರು ಈ ರೀತಿ ಚಿಂತಿಸುತ್ತಿರುವಾಗಲೇ ನಾರದನ ಆಗಮನವಾಯಿತು. ಅತಿಥಿಗೆ ಆದರೋಪಚಾರ ನಡೆಯಿತು. ಉಭಯ ಕುಶಲೋಪರಿ ಮುಗಿಯುತ್ತಲೇ ಗಿರಿಜೆಯ ಮದುವೆಯ ಪ್ರಸ್ತಾಪ ಬಂತು. ಆಗ ನಾರದಮುನಿ ಅವಳು ಜಗನ್ಮಾತೆಯೆಂದೂ ಶಿವನನ್ನೇ ಗಂಡನನ್ನಾಗಿ ಮಾಡಿಕೊಳ್ಳುವ ವೀರಸತಿಯೆಂದೂ ಹೇಳಿ, ಶಿವನಿದ್ದಲ್ಲಿಗೆ ಅವಳನ್ನು ಕಳಿಸಬೇಕೆಂದು ಪರ್ವತರಾಜನಿಗೆ ತಿಳಿಸಿದನು.

ದಾಕ್ಷಾಯಣಿಯ ದೇಹವಳಿದ ಮೇಲೆ ಶಿವನು ವೀರವೈರಾಗ್ಯವನ್ನು ಹೊಂದಿ ಹೇಮಕೂಟ ಪರ್ವತದಲ್ಲಿ ತಪಶ್ಚರ್ಯ ಮಾಡತೊಡಗಿದ್ದಾನೆ. ಆಗ ಪರ್ವತರಾಜನು ತನ್ನ ನೆಚ್ಚಿನ ಪುತ್ರಿಯಾದ ಪಾರ್ವತಿಯನ್ನು ಜಯವಿಜಯರೊಂದಿಗೆ ಜೊತೆಮಾಡಿ ಶಿವನು ತಪಸ್ಸು ಮಾಡುತ್ತಿದ್ದ ಪಂಪಾಕ್ಷೇತ್ರಕ್ಕೆ ಕಳಿಸುತ್ತಾನೆ.

ತುಂಗಭದ್ರಾ ತೀರದಲ್ಲಿರುವ ಹಂಪೆ ಒಂದು ಪುಣ್ಯಕ್ಷೇತ್ರ. ಅಲ್ಲಿಯೇ ಹೇಮಗಿರಿ ಆಕಾಶವನ್ನು ಚುಂಬಿಸುವಂತೆ ಎತ್ತರವಾಗಿ ಬಿತ್ತರವಾಗಿ ನಿಂತಿದೆ. ಶಿವನು ತಪಶ್ಚರ್ಯ ಮಾಡುತ್ತಿರುವುದು ಈ ಪರ್ವತ ಶಿಖರದಲ್ಲಿ. ಪಾರ್ವತಿ ಈ ಪರ್ವತವನ್ನು ದೂರದಿಂದಲೇ ಕಂಡು ನಮಸ್ಕರಿಸುತ್ತಾಳೆ. ಅವಳ ದೃಷ್ಟಿಯಲ್ಲಿ ಶಿವನಿದ್ದ ಸ್ಥಾನವೂ ಪವಿತ್ರವಾದುದು. ಆ ಸ್ಥಾನದಲ್ಲಿ ನಂದೀಶ್ವರನ ಕಾವಲು ಇದೆ. ಶಿವನಿಗೆ ತಪೋಭಂಗವಾಗದಂತೆ ನೋಡಿಕೊಳ್ಳುವುದೇ ಆತನ ಕಾರ್ಯ. ಆತನು ಗಿರಿಜೆಯನ್ನು ಕಂಡೊಡನೆ ಹರ್ಷಪುಲಕಿತನಾಗುತ್ತಾನೆ. ಮಹಾತಾಯಿಯಾದ ಪಾರ್ವತಿಯನ್ನು ಭಯಭಕ್ತಿಯಿಂದ ಸ್ವಾಗತಿಸಿ ಅವಳನ್ನು ಒಳಗೆ ಕರೆದೊಯ್ಯುತ್ತಾನೆ. ಕೋಟಿ ಸೂರ್ಯರ ಪ್ರಕಾಶವನ್ನು ಮೀರಿದ ಪ್ರಭಾವಲಯದಲ್ಲಿ ನಿಶ್ಚಲ ಮನಸ್ಕನಾದ ಪಂಪಾ ವಿರೂಪಾಕ್ಷನು ತಪಸ್ಸಿಗೆ ಕುಳಿತುದನ್ನು ಕಾಣುತ್ತಾರೆ. ಆಗ ಪಾರ್ವತಿ ಅತ್ಯಂತ ಹರ್ಷಿತಳಾಗಿ ತನ್ನ ಹೃದಯೇಶ್ವರನ ದರ್ಶನ ಮಾತ್ರದಲ್ಲಿ ಶೃಂಗಾರಭಕ್ತಿಭಾವನೆಯನ್ನು ತಾಳಿ ಶಿವನಿಗೆ ನಮಸ್ಕರಿಸುತ್ತಾಳೆ. ಶಿವನು ಅಚಲ ಸಮಾಧಿಯಲ್ಲಿದ್ದಾನೆ. ಪಾರ್ವತಿಯನ್ನು ಆತ ಕಣ್ದೆರೆದು ಸಹ ನೋಡಲಿಲ್ಲ. ಆಗ ಗಿರಿಜೆ ತನ್ನ ಸಖಿಯರನ್ನುದ್ದೇಶಿಸಿ  ’ಶಿವನು ಜ್ಞಾನಕ್ಕೆ ಒಲಿಯಲಾರ; ಅವನನ್ನು ಒಲಿಸಲು ಸಾತ್ವಿಕ ಭಕ್ತಿಯೇ ಬೇಕು’ ಮುಂತಾಗಿ ಹೇಳಿ ಶಿವಪೂಜೆಗಾಗಿ ಸಿದ್ಧತೆ ಮಾಡಲು ತಿಳಿಸುತ್ತಾಳೆ.

ಪಾರ್ವತಿಯ ಶಿವಪೂಜೆ ವಿಜೃಂಭಣೆಯಿಂದ ನಡೆಯುತ್ತದೆ. ಪೂಜಾ ಸಾಮಗ್ರಿಗಳನ್ನೊಳಗೊಂಡು ಅವಳು ಸಾವಕಾಶವಾಗಿ ಶಿವನ ಬಳಿಗೆ ಬಂದು, ತನ್ನನ್ನು ಹಗಲಿರುಳೂ ಕಾಡಿಸಿದ ಕಾಮನ ಬಾಣಗಲಿವು ಎನ್ನುವಂತೆ ಪುಷ್ಪಗಳನ್ನು ಅವನ ಚರಣಾರ ವಿಂದದಲ್ಲಿ ಅರ್ಪಿಸಿದಳು. ತನ್ನ ಕಣ್ಣಿಂದ ಉದುರುವ ಆನಂದಾಶ್ರುಗಳಿಂದ ಶಿವನ ಪಾದ ತೊಳೆದಳು. ಧೂಪವನ್ನು ಬೆಳಗಿ ಆರತಿಯನ್ನೆತ್ತಿದಳು. ತನ್ನ ಭಕ್ತಿಯನ್ನೇ ನೈವೇದ್ಯ ಮಾಡಿದಳು. ಶಿವನ ಪ್ರತಿಯೊಂದು ಅಂಗವನ್ನು ನೆಟ್ಟದಿಟ್ಟಿಯಿಂದ ನೋಡಿ ತನ್ನ ಪ್ರೇಮಭಕ್ತಿಯನ್ನು ವ್ಯಕ್ತಪಡಿಸಿದಳು. ಈ ರೀತಿಯಲ್ಲಿ ಶಿವನನ್ನು ಪೂಜಿಸುವುದು ಅವಳ ನಿತ್ಯದ ಕಾಯಕವಾಯಿತು.

ಇತ್ತ ತಾರಕಾಸುರನೆಂಬ ರಾಕ್ಷಸನು ತಾನು ಪಡೆದ ವರಗಳ ಬಲದಿಂದ ಲೋಕವನ್ನೇ ಅಲ್ಲಾಡಿಸತೊಡಗಿದನು. ಜನರು ಅವನ ಉಪಟಳವನ್ನು ಸೈರಿಸಲಾರದೆ ವಿಷ್ಣು ಇಂದ್ರಾದಿಗಳ  ಮೊರೆ ಹೊಕ್ಕರು. ಅವರೇನು ಮಾಡಬಲ್ಲರು? ತಾರಕಾಸುರನನ್ನು ಕೊಲ್ಲುವುದು ಯಾರಿಂದಲೂ ಸಾಧ್ಯವಿಲ್ಲ. ಶಿವನ ಉದರದಲ್ಲಿ ಜನಿಸುವ ಷಣ್ಮುಖನಿಂದ ಈ ತಾಕರನ ಕೊಲೆಯಾಗಬಲ್ಲದು. ಆದ್ದರಿಂದ ಷಣ್ಮುಖ ಜನಿಸುವುದು ಅಗತ್ಯವಾಗಿದೆ. ಶಿವನು ಸಮಾಧಿಯಿಂದ ಎಚ್ಚತ್ತು ಪಾರ್ವತಿಯೊಡನೆ ಒಂದು ಗೂಡಿದಾಗಲೇ ಷಣ್ಮುಖ ಮನಿಸಿ ತಾರಕನನ್ನು ಕೊಲ್ಲುವನು – ಹೀಗೆ ವಿಚಾರ ಮಾಡುತ್ತ ದೇವಾನುದೇವತೆಗಳು ಕೈ ಹೊತ್ತು ಕುಳಿತರು. ಶಿವನು ಸಮಾಧಿಯಿಂದ ಏಳುವ ಬಗೆಯೆಂತು? ಅವನನ್ನು ಎಬ್ಬಿಸುವ ಕಲಿಯಾದರೂ ಯಾರು? ಎಂದು ಒಬ್ಬರನ್ನೊಬ್ಬರು ಕೇಳುವಷ್ಟರಲ್ಲಿಯೇ ’ಕಾಮನಿಂದಲೇ ಈ ಕಾರ್ಯ ಸಾಧ್ಯ’ ಎನ್ನುವ ಉತ್ತರ ಬಂತು. ವಿಷ್ಣುವಿನ  ಅಪ್ಪಣೆಯಂತೆ ಕಾಮದೇವನು ತನ್ನ ಸೈನ್ಯಸಮೇತ ಶಿವನಿದ್ದ ಹೇಮಕೂಟಕ್ಕೆ ದಂಡೆತ್ತಿ ಬಂದನು.

ಕಾಮ ದಹನ

ಕಾಮದೇವನು ಹೇಮಕೂಟಕ್ಕೆ ಬರುತ್ತಲೇ ಪಾರ್ವತಿಯು ಶಿವನ ಪೂಜೆಗೆ ನಡೆದುದನ್ನು ಕಂಡನು. ಅವಳ ಸಹಾಯವನ್ನು ಯಾಚಿಸಿ ತಾನು ಕೈಕೊಂಡ ಕಾರ್ಯವನ್ನು ನಿವೇದಿಸಿದನು. ಕಾಗೆ ಕೂಡ್ರುವುದಕ್ಕೂ ಟೊಂಗೆ ಮುರಿಯುವದಕ್ಕೂ ಸಮಾನ ಎನ್ನುವಂತೆ ಪಾರ್ವತಿಗೆ ಹೊರಗಿನ ಸಹಾಯ ಸಂಪದ ದೊರೆತು ತನ್ನ ಕಾರ್ಯವೂ ಸಂಗಮವೆನಿಸಿತು. ಆಗ ಅವಳು ಕಾಮನಿಗೆ ಚಿಂತೆ ಬೇಡವೆಂದು ಹೇಳಿ ಅವನನ್ನು ಪ್ರಚೋದಿಸಿದಳು. ಶಿವಪೂಜೆಯನ್ನು ತಾನು ಮಾಡುತ್ತಿರುವಾಗಲೇ ನೀನು ಎದುರಿಗೆ ನಿಂತು ಶಿವನ ಮೇಲೆ ಬಾಣ ಹೂಡೆಂದು ಕಿವಿಮಾತು ಹೇಳಿದಳು. ನಿತ್ಯದಂತೆ ಶಿವನ ಪೂಜೆಗೆ ಅಣಿಯಾದಳು. ಶೃಂಗಾರವೇ ಕೋಡಿ ವಡೆದಂತೆ, ಲಾವಣ್ಯವೇ ಪುರುಷಾಕಾರವನ್ನು ಪಡೆದಂತೆ ಕಾಣುತ್ತಿದ್ದ ಕಾಮದೇವನು ಸರ‍್ರನೆ ಬಾಣವೊಂದನ್ನೆಳೆದು ಶಿವನೆಡೆಗೆ ಬಿಟ್ಟನು. ಶಿವನು ಅಲುಗಾಡಲಿಲ್ಲ. ಆಗ ಪಾರ್ವತಿ ಶಿವನ ಸರ್ವಾಂಗವನ್ನೂ ನೆಟ್ಟದಿಟ್ಟಿಯಿಂದ ನೋಡತೊಡಗಿದಳು; ಕಾಮನು ತನ್ನ ಪಂಚಬಾಣಗಳನ್ನು ಒಂದರ ಹಿಂದೊಂದು ಬಿಡತೊಡಗಿದನು. ಪಾರ್ವತಿಯ ಶೃಂಗಾರದೃಷ್ಟಿ ಕಾಮಬಾಣದೊಡನೆ ಬೆರತಾಗ ಕೇಳುವದೇನು? ಶಿವನ ನಿರ್ವಿಕಾರ ಸಮಾಧಿಯಲ್ಲಿ ಮೆಲ್ಲನೇ ಮಮತೆ ಸುಳಿಯಿತು. ಮೈತಿಳಿದು ಕಣ್ದೆರೆದು ನೋಡಿದ; ಎದುರಿಗೆ ರತಿಯೊಡನೆ ಕಾಮ ನಿಂತಿದ್ದ. ಅವನನ್ನು ಕಂಡೊಡನೆ ಕೋಪ ಉಕ್ಕೇರಿತು. ಅವನ ಹಣೆಗಣ್ಣು ತಾನೇ ತೆರೆಯಿತು. ಶಿವನ ಕೋಪವೇ ಹೆಪ್ಪುಗಟ್ಟಿದ ಉರಿಗಣ್ಣಿನಿಂದ ಜ್ವಾಲೆ ಹೊರಬಿದ್ದು ಕಾಮನನ್ನು ಆಕ್ರಮಿಸಿತು. ಅವನನ್ನು ಸುಟ್ಟು ಭಸ್ಮಮಾಡಿತು. ಶಿವನು ಕೋಪದಿಂದ ಮೇಲೆದ್ದು ಆ ಭಸ್ಮವನ್ನು ಕಾಲಿನಿಂದ ತುಳಿದು, ಎದುರಿಗಿದ್ದ ಗಿರಿಜೆಯನ್ನು ಕಣ್ಣೆತ್ತಿ ನೋಡದೆ ಅಂತರ್ಧಾನನಾದನು.

ಕಾಮನನ್ನು ಕಳೆದುಕೊಂಡ ರತಿಯ ದುಃಖ ಕೋಡಿವೊಡೆದು ಹರಿಯುವದನ್ನು ನೋಡಿ, ಚಲದ ಲಲನೆಯೆನಿಸಿದ ಪಾರ್ವತಿ ಅವಳಿಗೆ ಧೈರ್ಯಹೇಳಿ ಅಘೋರ ತಪಸ್ಸು ಮಾಡಿ ಶಿವನನ್ನೊಲಿಸಿಕೊಂಡಳು. ಕಾಮನನ್ನು ಶಿವನಿಂದ ಪಡೆದು ರತಿಯ ಮಾಂಗಲ್ಯ ಕಾಪಾಡಿದಳು. ಶಿವನ ಕೈಹಿಡಿದು ಶಿವೆ ಷಣ್ಮುಖನನ್ನು ಪಡೆದಳು. ಲೋಕಕಂಟಕ ದೂರಾಯಿತು. ಇದೆಲ್ಲ ಕಾಮದಹನದ ಹಿನ್ನೆಲೆ. ಪುರಾಣ ಕವಿಗಳು ಈ ಕಥೆಗಳನ್ನು ಸ್ವಾರಸ್ಯಮಯವಾಗಿ ವರ್ಣಿಸುತ್ತ ಬಂದುದನ್ನು ಅರಿಯಬಹುದು.

ಹೋಳಿಯ ಹಬ್ಬ

ಹೋಳಿಯ ಹಬ್ಬ ಕಾಮದಹನದ ಸಂಕೇತವಾಗಿ ನಡೆದುಬಂದಿದೆ. ಹೋಳಿಯ ಹುಣ್ಣಿಮೆಯ ದಿನ ಈ ಹಬ್ಬವನ್ನು ಆಚರಿಸುವರು. ಈ ಹುಣ್ಣಿಮೆ ಬರುವುದು ಫಾಲ್ಗುಣಮಾಸದ ಮಧ್ಯದಲ್ಲಿ. ಈ ಮಾಸಕ್ಕೆ ವಸಂತಮಾಸವೆಂದು ಕರೆಯುವುದುಂಟು. ಹೀಗಾಗಿ ಹೋಳಿಯ ಹಬ್ಬ ವಸಂತೋತ್ಸವವೆಂದೂ ಪ್ರಸಿದ್ಧಿ ಪಡೆದಿದೆ. ಈ ಸಮಯದಲ್ಲಿ ಸಾಕಷ್ಟು ಬಿಸಿಲು.ಉಷ್ಣ ಸಮಯದಲ್ಲಿ ಜೀವಿಗಳ ಕಾಮಕ್ರೀಡೆ ಸ್ವಾಭಾವಿಕವಾಗಿ ಬೆಳೆಯುವುದೆಂದು ವಿಜ್ಞಾನಿಗಳು ಗುರುತಿಸಿದ್ದಾರೆ. ಈ ಸಮಯಕ್ಕೆ ಮುಂಗಾರಿಯ ಸುಗ್ಗಿ ಮುಗಿದಿರುತ್ತದೆ. ಋತುರಾಜನ ಆಗಮನಕ್ಕಾಗಿ ಹಕ್ಕಿಗಳು ಹಿಗ್ಗಿ ಕೂಗಾಡುತ್ತವೆ. ವೃಕ್ಷಗಳು ಚಿಗುರೊಡೆದು ತಳಿರಗೊಂಚಲಿಂದ ತೂಗಾಡುತ್ತ ಪೂತು ಕಾತು ಮಕರಂದ ರಸವನ್ನು ಹೊರಸೂಸುತ್ತವೆ. ಭ್ರಮರಗಳ ಗುಂಜಾರವ ಪ್ರಕೃತಿಯಲ್ಲಿ ನನಿನಾಗೊಳ್ಳುತ್ತವೆ. ಪ್ರಕೃತಿಯ ಜೀವನಾಡಿಯಲ್ಲಿ ನವಚೈತನ್ಯ ಚಿಮ್ಮುತ್ತದೆ. ಎಲ್ಲೆಡೆಯಲ್ಲಿ ಚೆಲುವಿನ ಮಿಂಚು ಸೂಸುತ್ತದೆ. ವಿಧುಹಾಸ ಮಧುಮಾಸಕ್ಕೆ ಕಳೆ ನೀಡುವುದು. ರತಿಕಾಮರ ರತಿ ಕ್ರೀಡೆಗೆ ರಸದೋಕುಳಿ ಎರಚುವ ಈ ಶೃಂಗಾರಮಾಸದಲ್ಲಿ ಕಾಮದಹನ ನಡೆಯುತ್ತದೆ.

ಧ್ವನಿಪೂರ್ಣವಾದ ಕಾಮದಹನದ ಕಥೆ ಪುರಾಣ ಪ್ರಸಿದ್ಧವಾದುದು. ಸ್ಕಂದ ಪುರಾಣ, ಶಿವಪುರಾಣ, ಕುಮಾರಸಂಭವ ಮುಂತಾದ ಸಂಸ್ಕೃತ ಗ್ರಂಥಗಳಲ್ಲಿ ಕಾಮದಹನ ವರ್ಣನೆ ಬಹುರಮ್ಯವಾಗಿ ಬಂದಿದೆ. ಕನ್ನಡದಲ್ಲಿ ಗಿರಿಜಾಕಲ್ಯಾಣ. ಚಿನ್ನ ಬಸವಪುರಾಣ ಮೊದಲಾದ ಗ್ರಂಥಗಳಲ್ಲಿ ಈ ವರ್ಣನೆಗೆ ಒಳ್ಳೆಯ ಅವಕಾಶ ದೊರತಿದೆ. ಕವಿಗಳು ತಮ್ಮ ಕಾವ್ಯಗಳಲ್ಲಿ ಕಾಮದಹನ ಪ್ರಸಂಗವಿಲ್ಲದಿದ್ದರೂ ವಸಂತೋತ್ಸವದ ನೆವದಲ್ಲಿ ಜಲ ಕೇಳೀ ವರ್ಣನೆ, ಸೂಳಿಗೇರೆಯ ವರ್ಣನೆಗಳನ್ನು ತಂದು ಸಂಭೋಗಶೃಂಗಾರವನ್ನು ಸೂರೆಗೊಂಡುದನ್ನು ರಸಿಕರು ಅರಿಯಬಹುದು.

ನಿರ್ವಿಕಲ್ಪ ಸಮಾಧಿಯಲ್ಲಿ ಸ್ಥಾಣುವಾಗಿ ಕುಳಿತ ಶಿವನನ್ನು ಗಿರಿಜೆ ಮೊದಮೊದಲು ಸಕಾಮಭಕ್ತಿಯಿಂದ ಪೂಜಿಸಿದಳು. ಅವನ ಮನವನ್ನು ಸೂರೆಗೊಳ್ಳಲು ತನ್ನ ರೂಪು ಯೌವನಗಳ ಪ್ರದರ್ಶನ ಮಾಡಿದಳು. ಅವಳ ಮನೋರಥವನ್ನು ಈಡೇರಿಸಲು ಬಂದ ಕಾಮ ಶಿವನ ಉರಿಗಣ್ಣಿಗೆ ಬಲಿಯಾದ. ರತಿ ಗೋಳೋ ಎಂದು ಅತ್ತಳು. ಪಾರ್ವತಿಗೆ ದಿಕ್ಕು ತೋಚದಂತಾಗಿರಬೇಕು. ಅವಳಿಗೆ ಮುಖ ಭಂಗವಾಯಿತು. ಕಗ್ಗತ್ತಲೆಯಲ್ಲಿ ಮಿಂಚು ಹೊಳೆದಂತೆ ಮಂದವಾದ ಅವಳ ಮನದಲ್ಲಿ ಸುಬುದ್ಧಿ ಸೂಸಿತು. ಶಿವನು ಸಕಾಮಭಕ್ತಿಗೆ ಒಲಿಯನೆಂದು ತಿಳಿದು, ಶಿವನನ್ನು ಕುರಿತು ಉಗ್ರ ತಪಸ್ಸು ಮಾಡಿದಳು. ಆ ತಪದ ಅಗ್ನಿಕುಂಡದಲ್ಲಿ ಅವಳ ಕಾಮನೆಗಳು ಸುಟ್ಟುಸುಣ್ಣದಂತಾದವು. ಅವಳು ಅಂತರಂಗ ಬಹಿರಂಗಗಳೆರಡರಲ್ಲಿ ಶುದ್ಧಳಾಗಿ ಅಪರಂಜಿಯಂತೆ ಶೋಭಿಸಿದಳು. ಅಂತಹ ಪರಿಶುದ್ಧೆಯನ್ನು ಶಿವ ಮಮತೆಯಿಂದ ಎತ್ತಿಕೊಂಡ. ಇದೆಲ್ಲ ಶಿವನನ್ನು ಒಲಿಸುವ ಪರಿ. ಕುರುಡು ಕಾಮದಿಂದ ಅತೃಪ್ತಿ, ಅಧೋಗತಿಃ ಪರಿಶುದ್ಧ ಪ್ರೇಮದಿಂದ ಮನಶ್ಯಾಂತಿ, ಊರ್ಧ್ವಗತಿ.

ಪ್ರಣವ ಸ್ವರೂಪಿಯಾದ ಶಿವನನ್ನು ಒಲಿಸಿಕೊಳ್ಳಲು ಪ್ರತಿಯೊಬ್ಬನು ತನ್ನ ಆಶೆಯಾಮಿಷೆಗಳನ್ನು ಸುಟ್ಟು ಹಾಕಬೇಕು. ರೂಪು, ಯೌವನ, ಸಿರಿ, ಸಂಪತ್ತುಗಳನ್ನು ಅಲ್ಲಗೆಳೆಯಬೇಕು. ಕಾಮವನ್ನು ಸುಟ್ಟು ಅದರ ಬೂದಿಯಲ್ಲಿ ಪ್ರೇಮದ ಹೊನ್ನಬೆಳೆಯನ್ನು ಬೆಳೆಯಬೇಕು. ಆಗ ಮಾತ್ರ ಮಾರಕಶಕ್ತಿಯಳಿದು ಲೋಕ ಕಲ್ಯಾಣವಾಗುವುದು. ಇದೇ ಕಾಮದಹನದ ರಹಸ್ಯಾರ್ಥ. ಕೇವಲ ತೋರಿಕೆಗೆ ಕಾಮದಹನ ಮಾಡಿದರೆ ಆಗುವುದೇನು? ಹುತ್ತಕ್ಕೆ ಹೊಡೆದರೆ ಹಾವು ಸಹಾಯಬಲ್ಲುದೆ? ಕಾಮನನ್ನು ಅಂತರ್ಮುಖಿಗಳಾಗಿ ನಿಗ್ರಹದ ಅಗ್ನಿಕುಂಡದಲ್ಲಿ ದಹಿಸಬೇಕು. ಅದು ನಿಜವಾದ ಕಾಮದಹನ. ಇದರ ಮರ್ಮವರಿಯದ ಮಾನವರು ವರ್ಷಕ್ಕೊಮ್ಮೆ ಕಾಮದಹನ ಮಾಡುತ್ತಲೇ ಬಂದಿದ್ದಾರೆ. ಅವರು ಕಾಮನನ್ನು ಸುಡುವುದಿಲ್ಲ. ಕುಳ್ಳುಕಟ್ಟಿಗೆ ಕೂಡುಹಾಕಿ ಬಣಿವೆ ಒಟ್ಟಿ ಅದನ್ನೇ ಸುಡುತ್ತಾರೆ. ಇವರು ಸುಡುವುದು ಕಾಮನನ್ನಲ್ಲ; ಉರಿಹಚ್ಚುವ ಸೌದೆಯನ್ನು, ಕಾಮನನ್ನು ಸುಡದೆ ಸುಟ್ಟೆವೆಂದು ಹೇಳಿ, ಹೋಳೀಯ ನೆವದಲ್ಲಿ ಕೆಂಪು ಓಕಳಿಯ  ಬದಲು ಸುಡುಗಾಡ ಸುಣ್ಣವನ್ನು ಪರಸ್ಪರ ಮುಖಕ್ಕೆ ತಿಕ್ಕಿಕೊಂಡು ತಿರುಗಾಡುವುದು ಇಂದಿನವರಿಗೆ ಓಕಳಿಯಾಗಿದೆ. ಓಕಳಿಯಾಡುತ್ತಲೇ ಹೊಯ್ಕೊಂಡರೆ ಹೊಯ್ಕೊಂಡ ಬಾಯಿ ಕಾಣುವುದೇನು? ಮಣ್ಣುಮುಸಿ ! ಹೊಯ್ಕೊಂಡ  ಬಾಯಿಗೆ ಹೋಳಿಗೆ ಎನ್ನುವ ಮಾತು ತಿರುವುಮುರುವಾಗಿದೆ.

ಸಶಾಸ್ತ್ರೀಯ ಹೋಳಿಯನ್ನು ಕುರಿತು ಒಬ್ಬ ಜಾನಪದ ಕವಿ ಹೀಗೆ ಹಾಡಿದ್ದಾನೆ :

ಕಾಮನ ಸುಡುವುದು ಇದು ಹೀಗಲ್ಲ
ಕಾಮನ ಶಿವ ಸುಟ್ಟರವ ಸಾಯಲಿಲ್ಲ
ಕಾಮ ಸುಡುವ ಮೂರು ಲೋಕವನೆಲ್ಲ
ಕಾಮರವಿಯು ಭವ ತಾರಕಾಗಬಲ್ಲ

ಕಾಮಣ್ಣ ಸುಡಲಿಲ್ಲ ಕುರುಳ್ಮಣ್ಣ ಸುಟ್ಟಿ
ಕಾಮನ ಬಿಡಲಿಲ್ಲ ನೀ ಕಣಗೆಟ್ಟಿ
ಕಾಮ ಮಾಡಿದ ಲೋಕಕೆ ಮೂರಾಬಟ್ಟಿ
ಕಾಮಣ್ಣ ಗೆಲಿದರೆ ಅವ ಬಲುಗಟ್ಟಿ

ಹೋಳಿಯ ಆಚರಣೆ

ಕಾಮದಹನದ ಹಬ್ಬ ಶೈವರ ಹಬ್ಬ. ಶಿವನು ಕಾಮನನ್ನು ಸುಟ್ಟ ಸಂಕೇತವಾಗಿ ಈ ಹಬ್ಬವನ್ನು ಆಚರಿಸಲು ಮೊದಲು ಅವರು ಪ್ರಾರಂಭಿಸಿರಬೇಕು. ನಂತರ ಇತರ ಮತೀಯರೂ ಇದರಲ್ಲಿ ಪಾಲುಗೊಂಡಿರಬೇಕು. ಒಟ್ಟಿನಲ್ಲಿ ಇದೊಂದು ಭಾರತೀಯರ ಹಬ್ಬವಾಗಿ ನಿಂತುದನ್ನು ಅರಿಯುತ್ತೇವೆ. ಈ ಸಂಪ್ರದಾಯವು ಭಾರತದ ಎಲ್ಲ ಭಾಗಗಳಲ್ಲಿಯೂ ಕಂಡು ಬರುತ್ತದೆ. ಆಚರಣೆಯ ವಿಧಾನಗಳು ಮಾತ್ರ ಪ್ರಾದೇಶಿಕವಾಗಿ ಭಿನ್ನಭಿನ್ನವಾಗಿದೆ. ಇದೊಂದು ಗಂಡು ಮಕ್ಕಳ ಹಬ್ಬ. ಹುಡುಗರಿಂದ ಹಿಡಿದು ಮುದುಕರವರೆಗೂ ಪ್ರತಿಯೊಬ್ಬರೂ ಈ ಹಬ್ಬದಲ್ಲಿ ಪಾಲುಗೊಳ್ಳುತ್ತಾನೆ. ಹೃದಯದಲ್ಲಿ ಹುದುಗಿದ್ದ ಕಾಮವನ್ನು ಹೊರಗೆಳೆದು, ಅದರ ಅಸಹ್ಯದ ರೂಪವನ್ನು ಚಿತ್ರಿಸಿ, ಅದನ್ನು ಸುಟ್ಟುಹಾಕುವ ರೀತಿಯನ್ನು ಈ ಹಬ್ಬದಲ್ಲಿ ಅರಿಯಬಹುದು.

ಹೋಳಿಯು ಹೋಳೀಹುಣ್ಣಿವೆಯಿಂದ ಯುಗಾದಿಯ ಅಮವಾಸ್ಯೆಯವರೆಗೆ ಹದಿನೈದು ದಿವಸ ನಡೆಯುವ ಹಬ್ಬ. ಕೆಲವು ಕಡೆಗಳಲ್ಲಿ ಹೋಳೀಹುಣ್ಣಿವೆಗೆ ಹತ್ತುದಿನ ಮೊದಲು ಒಕ್ಕಲು ಮಕ್ಕಳು ಸುಗ್ಗಿಯ ಕುಣಿತದೊಂದಿಗೆ ಈ ಹಬ್ಬವನ್ನು ಪ್ರಾರಂಭಿಸುತ್ತಾರೆ. ಅಂದರೆ ಸುಗ್ಗಿಯ ಹಿಗ್ಗಿನ ತುದಿಯೇ ಈ ಹಬ್ಬವೆಂದು ಅವರ ಭಾವನೆ. ನಿಜವಾದ ಹಬ್ಬ ಹುಣ್ಣಿವೆಯ ದಿವಸವೇ ಪ್ರಾರಂಭವಾಗುವುದು. ಅಂದಿನ ಮೃಷ್ಟಾನ್ನ ಹೋಳಿಗೆ; ಪ್ರತಿಯೊಂದು ಮನೆಯ ಅಂಗಳದಲ್ಲಿ ಒಂದು ಕುಣಿ ತೋಡುತ್ತಾರೆ. ಅದು ಒಂದು ಪೂಟು ಉದ್ದ ಒಂದು ಫೂಟು ಅಗಲ ಇರುವುದು. ಆಳ ಮಾತ್ರ ಒಂದು ಫೂಟಿಗಿಂತ ಹೆಚ್ಚಾಗಿರುವುದಿಲ್ಲ. ಆ ಕುಣಿಯ ಉತ್ತರದ ಗೋಡೆಯಲ್ಲಿ ಒಂದು ಸಣ್ಣ ಮಾಡಮಾಡಿ ಅದರಲ್ಲಿ ಪಣತಿಯೊಂದನ್ನು ಇಟ್ಟು ದೀಪ ಹಚ್ಚುವರು. ಕುಣಿಯ ಮಧ್ಯದಲ್ಲಿ ಒಂದು ಸಣ್ಣ ಬೆನಕವನ್ನು ನಿಲ್ಲಿಸುವರು. ಅದು ಕಾಮನ ಪ್ರತಿಕೃತಿಯಾಗಿರಬೇಕು. ಕೆಲವರು ಕಾಗದದ ಕಾಮನನ್ನು ಮಾಡಿ ಆ ಕುಣಿಯಲ್ಲಿ ಇರಿಸುವುದೂ ಉಂಟು. ಅಂದು ಮಧ್ಯಾಹ್ನದ ಹೊತ್ತಿಗೆ  ಅದರಲ್ಲಿ ಕುಳ್ಳುಕಟ್ಟಿಗೆ ಹಾಕಿ. ಮೇಲೊಂದು ಹೋಳಿಗೆಯನ್ನಿಟ್ಟು ಬೆಂಕಿ ಇಡುತ್ತಾರೆ. ಕಾಮ ಸುಡುವುದನ್ನೂ ಕಂಡು ದೊಡ್ಡವರೂ ಸಣ್ಣವರೂ ಕೂಡಿ ಹೊಯ್ಕೊಳ್ಳುತ್ತಾರೆ. ಆ ಮೇಲೆ ಮನೆಯವರೆಲ್ಲ ಹೋಳಿಗೆಯ ಊಟಮಾಡಿ ನಲಿದಾಡುವರು. ಇದು ಮನೆಮನೆಯಲ್ಲಿ ಮಾಡುವ ಹೋಳಿಯ ಆಚರಣೆ, ಇಷ್ಟರಿಂದಲೇ ಅವರಿಗೆ ತೃಪ್ತಿ ಇಲ್ಲ. ಸಾರ್ವಜನಿಕವಾಗಿ ಒಬ್ಬ ಕಾಮನನ್ನು ಕೂಡ್ರಿಸುವ ಪರಿಪಾಟ ಕೆಲವು ಕಡೆಗಳಲ್ಲಿದೆ, ಅದನ್ನು ಸಾರ್ವಜನಿಕ ಕಾಮನೆಂದು ಕರೆಯುವುದಂಟು.

ಹೋಳಿಯ ಹುಣ್ಣಿವೆಯ ದಿವಸ ರತಿಯನ್ನೊಳಗೊಂಡ ಕಾಮನ ಸುಂದರ ಮೂರ್ತಿಯೊಂದನ್ನು ತಂದು, ಊರ ಮಧ್ಯದಲ್ಲಿರುವ ಕಾಮನ ಕಟ್ಟೆಯ ಮೇಲೆ ಅಂದವಾಗಿ ಕೂಡ್ರಿಸುತ್ತಾರೆ. ಕಟ್ಟೆಗೊಂದು ಹಂದರಹಾಕಿ, ಅದನ್ನು ತಳಿರು ತೋರಣಗಳಿಂದ ಶೃಂಗರಿಸುತ್ತಾರೆ. ನಿಜವಾಗಿಯೂ ಅದೊಂದು ಸುಂದರ ಮಂಟಪ. ಅದರ ವೆಚ್ಚವನ್ನು ಪೂರೈಸಲು ಊರವರೆಲ್ಲ ವಂತಿಗೆ ನೀಡುವುದು ವಾಡಿಕೆ. ಕೆಲವು ಭಾಗದಲ್ಲಿ ಕಾಮನ ಹಬ್ಬಕ್ಕೆ ರಾಜಾಶ್ರಯ ಬರುವುದುಂಟು. ಅಂದು ಮಂಟಪದ ತುಂಬಾ ಮಕ್ಕಳುಮರಿ ನೆರೆದು ಆನಂದದಿಂದ ನಲಿದಾಡುವರು. ಕಾಮನ ಮುಂದೆ ಮಂಗಲವಾದ್ಯ ಬಾರಿಸುವುದು ಸದಾ ಹಗಲಿರುಳು ನಡೆಯುತ್ತದೆ. ಕಾಮನ ಹಬ್ಬದಲ್ಲಿ ಬಡಿಯುವ ಮುಖ್ಯವಾದ್ಯವೆಂದರೆ ಹಲಗೆ. ಸಣ್ಣದೊಡ್ಡ ಹಲಗೆಗಳನ್ನು ಹಿಡಿದು ಬಾರಿಸುವ ಹುಡುಗರನ್ನು ಎಲ್ಲೆಡೆ ಕಾಣುತ್ತೇವೆ. ಇದು ಶಿವನ ಮೇಲೆ ದಂಡೆತ್ತಿ ಬಂದ ಕಾಮನ ಯುದ್ಧ ಸನ್ನಾಹವನ್ನು ಸೂಚಿಸುತ್ತದೆ. ಹಲಗೆಯ ಬಡಿತಕ್ಕೆ ಕಿವಿಯಲ್ಲಿ ಚೀತ್ಕಾರ ಧ್ವನಿ ತುಂಬಿತುಳುಕುತ್ತದೆ. ಅಷ್ಟೊಂದು ಉತ್ಸಾಹದ ಹಬ್ಬ ಹೋಳಿಯ ಹಬ್ಬ.

ಸಾರ್ವಜನಿಕ ಕಾಮನನ್ನು ಸಾಮಾನ್ಯವಾಗಿ ಹುಣ್ಣಿವೆಯ ದಿನ ಮಧ್ಯಾಹ್ನಕ್ಕೆ ಮಂಟಪದಲ್ಲಿ ಕೂಡ್ರಿಸುವರು. ಕಾಮನ ತೊಡೆಯ ಮೇಲೆ ರತಿ ಕೂತಿರುತ್ತಾಳೆ. ಕಾಮನಷ್ಟೇ ರತಿಯೂ ಸುಂದರಳು. ಸುಂದರ ಗಂಡಸನ್ನು  ಕಾಮನಿಗೂ ಸುಂದರ ಸ್ತ್ರೀಯನ್ನು ರತಿಗೂ ಹೋಲಿಸುವುದು ನಮ್ಮ ಕಾವ್ಯಗಳಲ್ಲಿ ಕವಿಸಮಯವಾಗಿಬಿಟ್ಟಿದೆ. ಇಂತಹ ಸುಂದರ ಕಾಮರತಿಯರನ್ನು ಕಾಣಲು ಊರ ಜನರು ತಂಡ ತಂಡವಾಗಿ ಬರುತ್ತಾರೆ; ನೋಡಿ ಆನಂದ ಪಡುತ್ತಾರೆ. ಅಂದು ಸಂಜೆ  ೭ ಗಂಟೆಯ ಸುಮಾರಿಗೆ ಕಾಮನ ಮೆರವಣಿಗೆ ನಡೆಯುತ್ತದೆ. ನಾಲ್ಕೆತ್ತಿನ ಬಂಡಿಯ ಮೇಲೆ ಕಾಮನನ್ನು ಕೂಡ್ರಿಸಿ, ಅಲಂಕರಿಸಿ ಮೋಜುಮಜಲು ಮಾಡುವುದು ಉತ್ತರ ಕರ್ನಾಟಕದಲ್ಲಿ ಬಹುಕಾಲದಿಂದ ಸಾಗಿ ಬಂದ ಸಂಪ್ರದಾಯ. ಬಂಡಿಯ ಮುಂದೆ ಊರ ಜನರೆಲ್ಲ ಸಾಲುಸಾಲಾಗಿ ನಿಂತು ಕೈಯಲ್ಲಿ ಹಲಗೆ ಹಿಡಿದು ಗುಣಿಯಿಂದ ಬಾರಿಸುತ್ತ ಕುಣಿದಾಡುತ್ತಾರೆ. ಅವರಿಗೆ ಹರಳೆಣ್ಣೆಯನ್ನು ಇಲ್ಲವೆ ಸೀಮೆ ಎಣ್ಣೆಯನ್ನು ಹಾಕಿ ಹೊತ್ತಿಸಿದ ಕುಳ್ಳಿನ ಬೆಂಕಿಯ ಬೆಳಕು ದಾರಿದೀಪವಾಗುತ್ತದೆ. ನೂರಾರು ಹಿಲಾಲುಗಳ ಬೆಳಕು, ಸಾವಿರಾರು ಹಲಗೆಗಳ ಬಡಿತ, ಸಾಮೂಹಿಕ ಹೆಜ್ಜೆಯ ಕುಣಿತ, ನಡುನಡುವೆ ಸಿಳ್ಳು ಹೊಡೆದು ಕೇಕೆ ಹಾಕುವುದು ನಡೆದೇ ಇರುತ್ತದೆ. ಅದನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಕಾಮದೇವನು ಸೈನ್ಯಸಮೇತನಾಗಿ ಶಿವನ ಮೇಲೆ ದಂಡೆತ್ತಿ ನಡೆದ ದೃಶ್ಯ ಕಣ್ಣಿಗೆ ಕಟ್ಟಿದಂತಾಗುವುದು.

ಊರವರೆಲ್ಲ ಮೆರವಣಿಗೆ ನೋಡಲು ಬಂದ ಸಮಯವನ್ನು ಸಾಧಿಸಿ ಅನೇಕ ಪುಂಡಜನರು ಕುಳ್ಳು ಕುಟ್ಟಿಗೆ ಕದ್ದು ತಂದು, ಕಾಮನನ್ನು ಕೂಡ್ರಿಸಿದ ಚಪ್ಪರದ ಮುಂದೆ ರಾಶಿರಾಶಿಯಾಗಿ ಒಟ್ಟುವ ಕಾರ್ಯದಲ್ಲಿ ನಿರತರಾಗುತ್ತಾರೆ. ಕೈಗೆ ಸಿಕ್ಕ ಕಟ್ಟಿಗೆಗಳನ್ನು ತರುವಾಗ ಬೈಸಿಕೊಳ್ಳುವುದೂ ಬಡಿಸಿಕೊಳ್ಳುವುದೂ ನಡೆದೇ ಇರುತ್ತದೆ. ಕಾಮನ ಮೆರವಣಿಗೆ ಊರ ಬೀದಿಗಳಲ್ಲಿ ಹರಿದಾಡಿ ತಿರುಗಿ ಕಾಮನ ಕಟ್ಟೆಗೆ ಬಂದಾಗ ಮಧ್ಯರಾತ್ರಿ ಮುಗಿದು ಬೆಳ್ಳಿ ಮೂಡುವ ಸಮಯ ಆದರೂ ಆಗಬಹುದು ಆ ಸಮಯದಲ್ಲಿ ಹಸಿಬಿದಿರಿನ ಕಂಭವೊಂದನ್ನು ನೆಟ್ಟು ಅದರ ತುದಿಗೆ ಬಾಸಿಂಗ ಕಟ್ಟುತ್ತಾರೆ. ಕಂಭದ ಸುತ್ತಲೂ ಕದ್ದ ಕಟ್ಟಿಗೆ ಕುಳ್ಳನ್ನು ಒಟ್ಟಿ, ಅದರ ಮೇಲೆ ಬಂಡಿಯಲ್ಲಿರುವ ಕಾಮನನ್ನು ತೆಗೆದು ಇಡುತ್ತಾರೆ. ಕಾಮನನ್ನು ಪೂಜಿಸಿ ಕಾಯಿ ಒಡೆಯುತ್ತಾರೆ. ಕಾಮನ ಜೀವನದಲ್ಲಿ ಈ ಸನ್ನಿವೇಶ ಮಸಣವೂ ಹೌದು. ಮದುವೆಯೂ ಹೌದು. ಕಾಮನ ದೇಹ ಸುಟ್ಟರೂ ಅವನು ನಿರ್ದೇಹಿಯಾಗಿ ಇರಬಲ್ಲ; ಶಿವನು ಹಾಗೆ ಕರಣಿದೋರಿದ್ದಾನೆ. ಕಾಮ ಉರಿಯುತ್ತಿರುವಾಗಲೇ ರತಿಯ ಮಾಂಗಲ್ಯ ಭದ್ರವಾಗಬೇಕು. ಆದರೆ ದ್ಯೋತಕವಾಗಿಯೇ ಚಿತೆಯ ಮಧ್ಯದ ಕಂಭ ಹಂದರಗಂಬವಾಗಿ ಅದಕ್ಕೆ ಕಟ್ಟಿದ ಬಾಸಿಂಗ ಕಾಮನ ಮದುವೆಯ ಸಂಕೇತವಾಗಿ ಇರುವುದನ್ನು ಮರೆಯಲಾಗದು.

ಕಾಮನ ಚಿತೆ ಉರಿಯಲಾರಂಭಿಸುತ್ತದೆ. ಊರ ಗೌಡರು ಕೋಳಿಯೊಂದನ್ನು ತಂದು ಚಿತೆಯ ಈಚೆಗೆ ನಿಂತು ಆಚೆಗೆ ತೂರುತ್ತಾರೆ. ಆಚೆಗೆ ನಿಂತಿದ್ದ ಹೊಲೆಮಾದರು ಆ ಕೋಳೀಯನ್ನು ಎತ್ತಿಕೊಂಡು ಕೇರಿಗೆ ಹೋಗುವುದುಂಟು. ಹೀಗೇಕೆ ಮಾಡುವರೆಂದು ಯಾರೂ ಹೇಳೂವವರಿಲ್ಲ. ಸಂಪ್ರದಾಯಬದ್ಧ ಜನತೆ ಮಾಡಿದ್ದೇ ನಿಯಮ; ಆಡಿದ್ದೇ ಶಾಸ್ತ್ರ. ಕಟ್ಟಿಗೆಯ ರಾಶಿ ಸುಟ್ಟು ಬೂದಿಯಾಗುವವರೆಗೆ ಹೊಯ್ಕೊಂಡು ಜಿಗಿದಾಡುವುದೇ ನೆಲೆದವರ ಕೆಲಸ. ಕೊನೆ ಕೊನೆಗೆ ಕಾಮನ ತಲೆಯೊಡೆದು, ಕೆಂಡವನ್ನು ಕೆದರಿ, ಬೂದಿಯನ್ನು ಸೂರೆ ಮಾಡಿ ಜನರು ಕೇಕೆ ಹಾಕುವುದುಂಟು, ಇದನ್ನು ಮಾಡುವವರು ಶಿವಗಣವಲ್ಲದೆ ಮತ್ತಾರು? ಬೆಳಗಾಗುತ್ತಲೇ ಕಾಮನ ಬೆಂಕಿಯನ್ನು ಒಯ್ದು ಸುಮಂಗಲೆಯರು ತಂತಮ್ಮ ಮನೆಯ ಒಲೆಯನ್ನು ಹೊತ್ತಿಸಿ ಹೋಳಿಗೆ ಮಾಡುವುದು ರೂಢಿಯಲ್ಲಿದೆ. ಕಾಮನ ಬೆಂಕಿಯಲ್ಲಿ ತೆಂಗು, ಗೆಣಸು, ಕಡಲೆಕಾಯಿ ಸುಟ್ಟು ತಿಂದರೆ ಹಲ್ಲು ಗಟ್ಟಿಯಾಗುತ್ತವೆಂದು ಭಾವಿಸುವವರೂ ಸಾಕಷ್ಟಿದ್ದಾರೆ. ಕಾಮನನ್ನು ಸುಟ್ಟ ಶಿವಗಣಂಗಳು ಉಪವಾಸ ಮುರಿವ ರೀತಿ ಇದಾಗಿರಬೇಕಲ್ಲವೇ? ಹೀಗೆ ಕಾಮದಹನ ಮುಗಿಯುತ್ತದೆ.

ಕಾಮದನ ಮುಗಿದೊಡನೆ ಓಕಳಿ ಪ್ರಾರಂಭವಾಗುವುದು. ಹುಣ್ಣಿವೆಯ ಮರುದಿನ ಮಧ್ಯಾಹ್ನದವರೆಗೆ ಜನರು ಕೈಯಲ್ಲಿ ಜೀಕಳಿ ಹಿಡಿದುಕೊಂಡು ಒಬ್ಬರ ಮೇಲೊಬ್ಬರು ಕೆಂಪು ಬಣ್ಣ ಉಗ್ಗುವುದೇ ಓಕಳಿಯಾಟ. ಓಕಳಿ ವಸಂತಮಾಸದ ಕುರುಹು.  ಶೃಂಗಾರಮಾಸದ ಅರಿವು. ಜನರು ಬಣ್ಣ ಉಗ್ಗಿ, ಉಗ್ಗಿಸಿಕೊಂಡು ನಕ್ಕು ನಲಿದಾಡುವುದು ರೂಢಿಯಾಗಿದೆ. ಇತ್ತಿತ್ತಲಾಗಿ ರಾಡಿ, ಹೊಲಸು ಬಣ್ಣ ತಿಕ್ಕಿ ಜನರಿಗೆ ತೊಂದರೆ ಕೊಡುವುದು ಓಕಳಿಯಾಗಿದೆ. ಕೆಲವು ಕಡೆಗಳಲ್ಲಿ ಓಕಳಿ ರಂಗಪಂಚಮಿಯವರೆಗೆ ನಡೆಯುತ್ತದೆ. ಈ ಐದೂ ದಿನ, ಜನರು ಓಕಳಿಯಾಡುವರು, ಬಂಡಿಯ ಮೇಲೆ ಬಣ್ಣದ ಹಂಡೆಗಳನ್ನು ಹೇರಿ ಕಂಡವರಿಗೆಲ್ಲ ಬಣ್ಣ ಹಾಕುತ್ತಾರೆ. ಮಜಲು ಮಾಡುತ್ತಾರೆ. ವಿವಿಧ ರೀತಿಯಲ್ಲಿ ಸೋಗು ಹಾಕಿಕೊಂಡು ಕುಣಿದಾಡುತ್ತಾರೆ.  ಜನರಿಗೆ ಇದೊಂದು ಸೊಗಸಿನ ಸುಗ್ಗಿ. ಕೆಲವು ಕಡೆ ಹೆಂಗಸರೂ ಈ ಓಕಳಿಯಾಟದಲ್ಲಿ ಭಾಗವಹಿಸುತ್ತಾರೆ. ಅಶ್ಲೀಲ ಹಾಡುಗಳನ್ನು ಹಾಡಿ, ತಮ್ಮ ಅಂತರಂಗದ ಹೊಲಸನ್ನು ಹೊರಗೆಡಹಿ, ಮೂಲಮಾನವರಂತೆ ಮನಬಂದ ಹಾಗೆ ವರ್ತಿಸುತ್ತಾರೆ. ಇವರೆಲ್ಲ ಸಂಪ್ರದಾಯ ಶರಣರು. ನಾಗರಿಕರಿಗೆ ಇದು ಮನಸ್ಸಿಗೆ ಬಾರದು. ಕಾಲಾಯ ತಸ್ಮೈ ನಮಃ |

ಶೃಂಗಾರ ಸಾಹಿತ್ಯ

ವಸಂತಮಾಸ ಶೃಂಗಾರಮಾಸ. ಹೋಳೀಹುಣ್ಣಿವೆಯಿಂದ ಯುಗಾದಿಯ ಪ್ರಥಮ ದಿನದವರೆಗೆ ಶೃಂಗಾರಸಾಹಿತ್ಯ ಪ್ರಕಟವಾಗುವ ಕಾಲ. ಈ ಕಾಲಾವಧಿಯಲ್ಲಿ ಜನಪದ ಸಾಹಿತ್ಯ ಸಮ್ಮೇಳನವೇ ನಡೆಯುತ್ತದೆಂದು ಹೇಳಬಹುದು. ಹಳ್ಳಿಹಳ್ಳಿಯಲ್ಲಿ ಸಾಹಿತ್ಯೋತ್ಸವ. ಕಾಮನ ಕಟ್ಟೆಯೇ ಸಾಹಿತ್ಯವೇದಿಕೆ. ಹಾಡುವದೆಲ್ಲ ಹೋಳಿಯ ಹಾಡು – ಶೃಂಗಾರದ ಹಾಡು. ಬೆಳ್ಳಬೆಳತನಕ ಈ ಹಾಡು ಕೇಳಿ ಬರುತ್ತವೆ. ಕಾಮನಲ್ಲಿ ಸಂಭೋಗಶೃಂಗಾರ, ರತಿಯಲ್ಲಿ ವಿಪ್ರಲಂಭಶೃಂಗಾರ. ಕಾಮರತಿಯರು ಈ ಎರಡೂ ಶೃಂಗಾರ ಪ್ರಕಾರಗಳಿಗೆ ಮಾದರಿ. ಅವರನ್ನು ಕುರಿತು ಸಾಕಷ್ಟು ಸಾಹಿತ್ಯ ನಮ್ಮ ಜಾನಪದದಲ್ಲಿ ಹುಟ್ಟಿ ಬೆಳೆದು ಬಂದಿದೆ. ಕಾಮರತಿಯರು ಬರಿ ದೇವಲೋಕದಲ್ಲಿಲ್ಲ. ಅಂಥವರು ಎಲ್ಲೆಲ್ಲಿಯೂ ಇದ್ದಾರೆ. ಜಾನಪದ ಜೀವನದಲ್ಲಿ ಹಾಸುಹೊಕ್ಕಾಗಿ ತುಂಬಿದ್ದಾರೆ. ರಸಿಕತನ ಸುಳಿಸುಖವೆನಿಸಿದ ವಿಟರೂ ಸೂಳೆಯರೂ ಶೃಂಗಾರದ ಭಕ್ತರು. ದೇವದಾಸಿಯರು, ಹೊಲತಿಯರು, ಬಸವಿಯರು ಶೃಂಗಾರದ ಸೊಬಗಿನವರು; ಅವರ ನುಡಿ ನಡೆಯುವಂತೆ; ನಡೆ ನುಡಿಯಂತೆ, ಅಂಥವರು ಜನಪದ ಸಾಹಿತ್ಯ ಸೇವೆಗೆ ತಮ್ಮ ಕಾಣಿಕೆ ಸಲ್ಲಿಸಲು ಮುಂದೆ ಬಂದಿದ್ದಾರೆ. ಅದರಿಂದ ಜನಪದಕ್ಕೆ ಜಯವಾಗಿದೆ. ಜನ ಬದುಕಲು ಮಾರ್ಗವಾಗಿದೆ.

ಹೋಳಿಯ ಸಾಹಿತ್ಯ ವೈವಿಧ್ಯಪೂರ್ಣವಾದುದು. ಅದು ಲಾವಣಿಯಾಗಿ, ದುಂದುಮೆಯಾಗಿ, ತ್ರಿಪದಿಯಾಗಿ, ಕೋಲಾಟದ ಹಾಡಾಗಿ ಕನ್ನಡದ ವಿವಿಧ ಮಟ್ಟುಗಳಲ್ಲಿ ಬೆಳೆದುಬಂದಿದೆ. ತೋಡಿಹಾಡುಗಳಿಗಂತೂ ಲೆಕ್ಕವೇ ಇಲ್ಲ. ಹರದೇಸಿ ನಾಗೇಶಿ ಪಂಥಗಳು ಇಲ್ಲಿ ಸಾಕಷ್ಟು ಕಾರ್ಯ ಮಾಡಿದ್ದು ಕಂಡು ಬರುತ್ತದೆ. ಗಂಡು ಹೆಚ್ಚೋ ಹೆಣ್ಣು ಹೆಚ್ಚೋ ಎಂದು ವಾದಿಸುವುದು ಇವರ ಹಾಡಿನ ಸರಣಿ. ಇಂತಹ ಹೋಳೀ ಹಾಡುಗಳನ್ನು ಹಾಡುವವರು ಕೆಲವು ಕಡೆ ಮೇಳಗಳನ್ನೇ ಕುಟ್ಟಿ ಕೊಂಡದ್ದುಂಟು. ನನ್ನ ಅನುಭವಕ್ಕೆ ಬಂದಂತೆ ನಿಚ್ಚಣಿಕೆಯ ನಿಂಗಪ್ಪ, ಬೆಳಹೋಡದ ಬಸವ್ವ ಹಾಡುಗಾರಿಕೆಯಲ್ಲಿ ಪ್ರಸಿದ್ಧರಾದವರು. ಕೈಯಲ್ಲಿ ದಿಮ್ಮ ಹಿಡಿದು, ಚಿಟಿಕೆ ಹಾಕಿ ಸ್ವರ ಎತ್ತಿದರೆ ಹಳ್ಳಿಯ ಸಾಮಾನ್ಯರ ಮೈ ಜುಮ್ಮೆನ್ನುತ್ತಿತ್ತೋ ಏನೋ? ಕೇಕೆ ಹಾಕಿ ಹಾಡುವವರನ್ನು ಹುರಿದುಂಬಿಸುತ್ತಿದ್ದರು. ಗಂಡು ಹೆಣ್ಣು ಹೆಚ್ಚೆನ್ನುವ ಅವರ ಹಾಡುಗಳು ತರ್ಕಬದ್ಧವಾಗಿ ಶಾಸ್ತ್ರೋಕ್ತವಾಗಿ ಇದ್ದವು. ಸೃಷ್ಟಿಯ ಕ್ರಮವನ್ನು ಹಿಡಿದೇ ಶಾಸ್ತ್ರದ ಆಧಾರ ಕೊಟ್ಟು ಅವರು ಹಾಡುತ್ತಿದ್ದರು. ಬೆಳತನಕ ನಡೆಯುವ ಈ ಹಾಡುಗಳು ಮೊದಮೊದಲು ಶೃಂಗಾರಮಯವಾಗಿ ತತ್ವವನ್ನು ಬೋಧಿಸುತ್ತಿದ್ದವು. ಬೆಳಗು ಬಂದಂತೆ ಅವುಗಳ ಬಣ್ಣ ಬದಲಾಗುತ್ತಿತ್ತು. ಸಂಭೋಗಶೃಂಗಾರ, ವಿಪ್ರಲಂಭಶೃಂಗಾರದ ಕಟ್ಟುಮೀರಿರುವ ವಾಚ್ಯವಾದ ಅಶ್ಲೀಲಶೃಂಗಾರಕ್ಕೆ ಪ್ರಾಧಾನ್ಯ ದೊರೆತು ಸುಸಂಸ್ಕೃತರು ಕೇಳಬಾರದ ಹಾಡಿನ ಸುರಿಮಳೆ ಸುರಿಯಲು ಪ್ರಾರಂಭವಾಗುತ್ತಿತ್ತು. ಮರ್ಯಾದೆವಂತರು ಸಾವಕಾಶವಾಗಿ ಎದ್ದು ಮನೆಗೆ ಹೋಗುತ್ತಿದ್ದರು. ಮಾನಗೇಡಿ ಹುಡುಗರು ’ಹೌದಪಾ ಹೌದೋ’ ಎಂದು ಕೂಗಾಡುತ್ತ ಬೆಳಗಿನ ಹಾಡುಗಳನ್ನು ಕೇಳಲು ಆತುರರಾಗಿರುವುದು ಕಂಡು ಬರುತ್ತಿತ್ತು. ’ಭಿನ್ನರುಚಿಃ ಜನಸ್ಯ ಬಹುದಾಪ್ಯೇಕಂ ಸಮಾರಾಧನಂ’ ಎನ್ನುವ ಕವಿಯ ಮಾತು ಈ ಸಾಹಿತ್ಯಕ್ಕೂ ಅನ್ವಯಿಸುವುದು.

ಕೋಲಾಟವಾಡುತ್ತ ಹೋಳಿಯ ಹಾಡು ಹೇಳುವುದೂ ಜಾನಪದದಲ್ಲಿದೆ. ಅಲ್ಲಿ ಶೃಂಗಾರಮಯವಾದ ವಿವರಣಾತ್ಮಕವಾದ ಉದ್ದನ್ನ ಹಾಡುಗಳೇ ಹೆಚ್ಚಾಗಿ ಕೇಳಿಬರುತ್ತವೆ. ಹಿಂದೆ ನಡೆದು ಹೋದ ಯಾವುದೋ ಒಂದು ಚಿರಸ್ಮರಣೀಯ ಘಟನೆಯನ್ನು ಆಯ್ದುಕೊಂಡು ತಾಳಬದ್ಧವಾಗಿ ಈ ಹಾಡುಗಳನ್ನು ಹಾಡುತ್ತಾರೆ. ಕೋಲಿನ ಪೆಟ್ಟಿನ ತಾಳಕ್ಕೆ ಹೊಂದಿಕೊಂಡ ಏರಿಕೆಯ ಸಾಮೂಹಿಕ ಸ್ವರವು ಬೆಳದಿಂಗಳ ತಂಪಿನಲ್ಲಿ ಕಿವಿಗೆ ಇಂಪಾಗಿ ಕೇಳಿ ಬರುತ್ತದೆ; ಮನಕ್ಕೆ ಆಹ್ಲಾದ ನೀಡುತ್ತದೆ. ಹೀಗೆ ಸಾಮೂಹಿಕವಾಗಿ ಹಾಡುವ ಹಾಡುಗಳು ಸಾಕಷ್ಟಿವೆ. ಅವುಗಳ ಸಂಗ್ರಹ ಕಾರ್ಯ ಇನ್ನೂ ನಡೆಯದಿದ್ದುದಕ್ಕೆ ಕನ್ನಡಿಗರ ಆಲಸ್ಯವೇ ಕಾರಣ.

ತ್ರಿಪದಿಯಲ್ಲಂತೂ ಹೋಳಿಯ ಸಾಹಿತ್ಯ ಸಾಕಷ್ಟಿದೆ. ಹೋಳಿಯ ಹಬ್ಬದಲ್ಲೇ ಅವನ್ನೆಲ್ಲ ಹಾಡಬೇಕೆಂಬ ನಿಯಮವಿಲ್ಲ. ಗಂಡಸರು ಆಗಾಗ ಹೊಲದ ಕಾರ್ಯದಲ್ಲಿ ತೊಡಗಿದಾಗ, ಹಾಡುವ ಲಹರಿ ಉಂಟಾದಾಗ ಈ ತ್ರಿಪದಿಗಳ ಗಂಟು ಬಿಚ್ಚಿ ಒಂದೊಂದನ್ನೇ ಅನ್ಯರು ಕೇಳುವಂತೆ ನೀಡುವುದುಂಟು. ಈ ಬಗೆಯ ತ್ರಿಪದಿಯ ಸಾಹಿತ್ಯ ಹೊಲತಿಯರಲ್ಲಿ ಸಾಕಷ್ಟಿದ್ದುದು ಕಂಡು ಬಂದಿದೆ. ಮೆಟ್ಟಿಲು ಮೆಟ್ಟಿಲಾಗಿ ಏರಿಕೆಯ ಸ್ವರದಲ್ಲಿ ಆ ಹೆಂಗಸರು ಈ ಹೋಳಿಯ ತ್ರಿಪದಿಗಳನ್ನು ಸರಾಗವಾಗಿ ಹಾಡುತ್ತಾರೆ. ಇದರ ಜೊತೆಗೆ ದೇವದಾಸಿಯರು ಶೃಂಗಾರದ ಹಾಡುಗಳನ್ನು ಹೇಳುವುದು ವಾಡಿಕೆಯಲ್ಲಿದೆ. ಅದೆಲ್ಲ ಈಗ ಇದೆಯೋ ಇಲ್ಲವೋ ಗೊತ್ತಿಲ್ಲ. ಇಂತಹ ಸಾಹಿತ್ಯ ಹೊರ ಬಂದರೆ ಅದರ ಬೆಲೆ ಕಟ್ಟಬಹುದು. ಕೂಸು ಹುಟ್ಟುವ ಪೂರ್ವದಲ್ಲಿಯೇ ಕುಲಾಯಿ ಹೊಲೆಯುವುದು ನೆಟ್ಟಗಲ್ಲ. ಈ ಹೋಳೀ ಸಾಹಿತ್ಯದಲ್ಲಿ ’ಹೋಳೀಹಾಡು’ ಎನ್ನುವ ಸಾಹಿತ್ಯಪ್ರಕಾರವೊಂದು ನಮ್ಮ ಜನಪದದಲ್ಲಿ ಸಾಕಷ್ಟು ಬೆಳೆದು ಬಂದಿದೆ. ಅದರಿಂದ ಸ್ವಲ್ಪ ಭಿನ್ನ ಎನ್ನುವಂತೆ ದುಂದುಮೆ ಹಾಡುಗಳೂ ದೊರೆಯುತ್ತವೆ. ಈ ಕೃತಿಯಲ್ಲಿ ಬರಿ ಹೋಳಿಯ ಹಾಡುಗಳನ್ನು ಮಾತ್ರ ಆಯ್ದು ಸೇರಿಸಲಾಗಿದೆ. ಈ ಬಗೆಯ ಸಾಹಿತ್ಯ ಹುಡುಕಿದಷ್ಟು ಸಿಗುತ್ತಲಿದೆ. ಹುಡುಕುವ ಹವ್ಯಾಸ ನಮ್ಮಲ್ಲಿ ಬೆಳೆಯಬೇಕು.