ಕನ್ನಡ ಹೋಳೀಸಾಹಿತ್ಯ ಗಾತ್ರಸೂತ್ರಗಳ ದೃಷ್ಟಿಯಿಂದ ಭವ್ಯವಾಗಿ ಬೆಳೆದಿದೆ. ಅದರಲ್ಲಿ ವೈವಿಧ್ಯವಿದೆ, ವೈಶಿಷ್ಟವಿದೆ. ಜನಪದ ಸಾಹಿತ್ಯದಲ್ಲಿ ಇಷ್ಟೊಂದು ಹುಲುಸಾಗಿ ಬಂದ ಬೆಳೆ ಮತ್ತೊಂದಿಲ್ಲವೆಂದು ನಮ್ಮ ಭಾವನೆ. ಈ ಸಾಹಿತ್ಯ ಪ್ರಕಾರದಲ್ಲಿ ‘ನೂರು ಸ್ವರ, ಊರು ತೆರ; ಒಂದೊಂದು ಅತಿಮಧುರ’ ಎನ್ನುವ ಹಾಗೆ ಜೀವನದ ಸಾರ ಸಾರಾಯವನ್ನು ಕಾಣತ್ತೇವೆ, ತೋಡಿ ಹಾಡುಗಳ ಮೋಡಿ ಇದರಲ್ಲಿರುವುದರಿಂದ ಶ್ರೋತೃಗಳ ಮನಸ್ಸು ಮಂತ್ರಮುಗ್ಧವಾಗಿ ನಿಲ್ಲಬಲ್ಲುದು. ಜನಪದ ಭಂಡಾರ ತುಂಬಿ ಸೂಸಲು ಈ ಹಾಡಿನ ನಿಧಿ ಸಹಾಯ ಮಾಡಿದೆ. ಕಾಮನಾಟದ ಉತ್ಸವದಲ್ಲಿ, ಉತ್ಸಾಹದಲ್ಲಿ ಗಂಡು ಹೆಣ್ಣು ತಾಳಕುಟ್ಟಿ, ದನಿಗೂಡಿಸಿ, ತೋಂ ತನನ ಹಾಡಿದಾಗಲೇ ಹೋಳೀಸಾಹಿತ್ಯ ಮೂಡಿ ಮೊಳಗಿದೆ. ಸ್ವಾಭಾವಿಕವಾದ ವ್ಯಕ್ತಿಯ ಸೊಲ್ಲು ಭಾವಾವೇಶಕ್ಕೆ ಬಗ್ಗಿ-ನುಗ್ಗಿ ಬರುವಾಗ ಈ ಧಾಟಿಯಲ್ಲಿಯೇ ಬರಬೇಕೆಂಬ ನಿಯಮವೂ ಇಲ್ಲ. ಬಂಧನವೂ ಇಲ್ಲ. ಛಂದಶ್ಯಾಸ್ತ್ರವನ್ನು ಮುಂದಿಟ್ಟುಕೊಂಡು ಅದು ಹುಟ್ಟಿಲ್ಲ, ಬೆಳೆದಿಲ್ಲ. ಯಾಕೆಂದರೆ ಅದು ಜನಪದದ ಸೊಲ್ಲು; ಹೊರಬಂದ ಮೇಲೆ ತಿಳಿಯುತ್ತದೆ ಅದರ ಧಾಟಿಪಾಟಿ ರಾಗರತಿ ಕುಣಿಯುವಾಗ ಅದು ಹಾಗೆ, ಇದು ಹೀಗೆ-ಎನ್ನುವ ಮಾತು ಎಲ್ಲಿಂದ ಬರಬೇಕು? ಮೂಲದಲ್ಲಿದ್ದುದು ಮಣ್ಣು, ಮಣ್ಣಿನಿಂದ ಮಡಕೆ. ಪ್ರಕೃತದಿಂದ ಸುಕೃತಕ್ಕೆ ಸರಿಯುವ ಏರ್ಪಾಡು ಅದು. ಚಿನ್ನದ ಗಟ್ಟಿಯ ಅವ್ಯಕ್ತ ಸ್ಥಿತಿಯಲ್ಲಿ ಎಲ್ಲ ಆಭರಣಗಳೂ ಇರುತ್ತವೆ. ಅವಕ್ಕೆ ವಿಶಿಷ್ಟ ರೂಪ ಸಿಕ್ಕಾಗ ಆಭರಣವಾಗಿ ಕಾಣಿಸುತ್ತವೆ. ಪ್ರತಿಯೊಂದು ಆಭರಣಕ್ಕೂ ಒಂದೊಂದು ಹೆಸರು ಬರುವುದು ಹಿಂದುಗಡೆ. ಈ ಮಾತು ಜನಪದ ಸೊಲ್ಲಿಗೆ ಸಲ್ಲುವ ಮಾತು.

ಕಾವ್ಯ ಮೊದಲು ಹುಟ್ಟುತ್ತದೆ, ನಂತರ ಶಾಸ್ತ್ರ ಬೆಳೆಯುತ್ತದೆ. ಹೆಸರಿಟ್ಟು ಯಾರೂ ಕೂಸು ಹಡೆಯುವುದಿಲ್ಲ; ಹುಟ್ಟಿದ ಮೇಲೆ ಹೆಸರಿಡುವುದು ಪದ್ಧತಿ. ಜನಪದವಾಣಿ ಹುಟ್ಟಿ ಹೊರ ಬಂದ ಮೇಲೆ ಶಾಸ್ತ್ರಕಾರ ಇದು ಈ ಛಂದಸ್ಸು, ಇದು ಈ ಮಟ್ಟು-ಎಂದು ಗುರುತಿಸುತ್ತಾನೆ. ಅವನ ಅಳತೆಗೋಲನ್ನು ಅರಿತ ನಾವು ಇದು ತ್ರಿಪದಿ ಎನ್ನುತ್ತೇವೆ; ಅದು ಪಿರಿಯಕ್ಕರ ಅಲ್ಲವೆ? ಎಂದು ಕೇಳುತ್ತೇವೆ. ಈ ಹಾಡು ಧಾಟಿಯಲ್ಲಿ ವಿಚಿತ್ರವಾಗಿದೆ, ಯಾವದೋ ಒಂದು ಲಾವಣಿಯ ಮಟ್ಟವಿರಬೇಕೆಂದು ಊಹಿಸುತ್ತೇವೆ. ಎಲ್ಲ ಹಾಡುಪಾಡುಗಳಿಗೆ ಶಾಸ್ತ್ರಕಾರ ನಿಯಮ ಹೇಳಿರುವನೆಂದು ಭಾವಿಸುವಂತಿಲ್ಲ. ಹೇಳಹೆಸರಿಲ್ಲದೆ ಇದ್ದ ಅನೇಕ ಧಾಟಿಗಳು ಇನ್ನೂ ಹಾಗೇ ಇವೆ. ಹೋಳೀಹಾಡಿಗೂ ದುಂದುಮೆಪದಕ್ಕೂ ಯಾವ ಛಂದೋಗ್ರಂಥದಲ್ಲಿ ನಿಯಮಗಳಿವೆ? ಹೀಗೆ ಹೆಸರು ಇಲ್ಲದೆ ಹೆಸರುವಾಸಿಯಾದುದು ಹೋಳೀ ಸಾಹಿತ್ಯ. ದುಂದುಮೆಪದ ಜನಪದ ರಾಗರಾಸಿಯಲ್ಲಿ ಒಂದು ಭಾಗ, ಮಹತ್ವದ ಭಾಗ, ಅದರ ನೆಲೆಬೆಲೆ ಕಟ್ಟಲು ಆ ಸಾಹಿತ್ಯದ ಅಳತೆ, ತೂಕ ಮೊದಲು ಆಗಬೇಕು.

ಹೋಳೀ ಸಾಹಿತ್ಯ ಸಾಮಾನ್ಯವಾಗಿ ಮೂರು ವಿಧದಲ್ಲಿ ಗೋಚರವಾಗುತ್ತದೆ;

೧. ಹೋಳೀಹಾಡು

೨. ದುಂದುಮೆಪದ

೩. ಬಿಡಿನುಡಿ.

ಬಿಡಿನುಡಿಯಾಗಿ ತ್ರಿಪದಿಯ ವೇಷತೊಟ್ಟು ಸಂದರ್ಭನುಸಾರವಾಗಿ ಧುಮುಕುವ ಸಾಹಿತ್ಯ ಸಾಕಷ್ಟಿದೆ. ಶೃಂಗಾರದ ಜುಳುಕು ಈ  ಬಗೆಯ ಸಾಹಿತ್ಯದ ಆಳ, ಎತ್ತರ, ಬಿತ್ತರಗಳಲ್ಲಿ ಮೈಗೊಂಡು ಬರುವುದನ್ನು ಕಾಣುತ್ತೇವೆ, ಅಲ್ಲಿ ಕಥೆ ಇಲ್ಲ; ಸನ್ನಿವೇಶ ಚಿತ್ರವಿಲ್ಲ. ಕಾಮನ ವಿಷಯದಲ್ಲಿ ಹೊಳೆದ ಯಾವುದೋ ಒಂದು ಭಾವ ಇಲ್ಲಿ ಗುಣಗಾಡುತ್ತದೆ. ಮಿಂಚು ಮಿಂಚಿದಲ್ಲಿಯೇ ಮಾಯವಾಗುವಂತೆ ಅದರ ಕಾರ್ಯ ಕ್ಷಣಿಕ. ಇಂತಹ ಬಿಡಿನುಡಿಗಳ ಕೂಡುನುಡಿಯಾಗುವ ಕಾಲ ಎಂದು ಬರುವುದೋ ಕಾದುನೋಡಬೇಕು.

ಹೋಳೀಹಾಡು ಕಥನಕಾವ್ಯವಾಗಿ, ಶೃಂಗಾರ ವೀರಗಳ ರಸದೂಟೆಯಾಗಿ ಹರಿಯುವ ಒಂದು ವಿಶಿಷ್ಟ ಸಾಹಿತ್ಯ ಪ್ರಕಾರ. ಶೃಂಗಾರದ ಭಕ್ತರಿಗೆ ಅಲ್ಲಿ ರಸ ಪ್ರಸಾದವಿದೆಯೆಂದು ಬೇರೆ ಹೇಳಬೇಕಾಗಿಲ್ಲ. ಈ ಸಾಹಿತ್ಯದ ಸವಿಯನ್ನು ಜೀವನ ಜೋಕಾಲಿಯ ಓದುಗರು ಈಗಾಗಲೇ ಸವಿದಿದ್ದಾರೆ. ಅದನ್ನು ಕುರಿತು ಮಾತು ಮುಂದುವರಿಸುವುದು ಇಲ್ಲಿ ಅವಶ್ಯವೆನಿಸದು.

ಹೋಳೀಹಾಡು ಮತ್ತು ದುಂದುಮೆಪದ ಹೋಳೀಸಾಹಿತ್ಯದ ಎರಡು ಪ್ರಮುಖ ಅಂಗಗಳಾದರೂ ಅವೆರಡೂ ಅವಳೀ ಮಕ್ಕಳು ಇದ್ದಂತೆ. ಹೊರ ನೋಟಕ್ಕೆ ಅವೆರಡೂ ಒಂದೇ ಬಗೆಯಾಗಿ ಕಂಡರೂ ಅವುಗಳಲ್ಲಿ ಹುದುಗಿರುವ ಒಳ ದನಿ ಅವನ್ನು ಬೇರ್ಪಡಿಸಿ ಇಡುತ್ತದೆ. ಅವುಗಳ ಗತಿ ಭಿನ್ನಭಿನ್ನವಾಗುತ್ತದೆ. ಹಾಡಿಸಿ ನೋಡಿದಾಗ ಅವುಗಳ ಒಳಗುಟ್ಟು ತಿಳಿಯಬಲ್ಲುದು. ಹೋಳೀಹಾಡು ರಗಳೆಯಂತೆ ಒಂದೇ ಸವನೆ ಓಡುತ್ತದೆ. ಆದರೆ ದುಂದುಮೆಪದದ ಓಟವೇ ಬೇರೆ; ಪದಪದಕ್ಕೂ ಒಂದೊಂದು ಹೊಸಭಂಗಿಯನ್ನು ಅದು ಪ್ರಕಟಿಸಬಲ್ಲುದು. ಅದಕ್ಕೆ ದಿಮ್ಮು ಎಂದು ಕರೆಯುತ್ತಾರೆ. ದಿಮ್ಮು ಆಗಾಗ ತನ್ನ ಗತಿಯನ್ನು ಬದಲಿಸುತ್ತದೆ. ಅದರ ತಾಳ-ತಾನಗಳಿಗೆ ಹೊಂದಿಕೊಂಡು ದುಂದುಮೆಪದ ಒಡನುಡಿಯಬೇಕಾಗುವುದು. ಅಲ್ಲಿಯೇ ದುಂದುಮೆಯ ವೈಶಿಷ್ಟ್ಯ ಒಡೆದು ಕಾಣುವುದು. ಆಗ ಮಾತ್ರ ಅದು ಹೋಳೀಹಾಡಿಗಿಂತ ಭಿನ್ನವಾದುದೆಂದು ಅರಿಯಬಹುದಾಗಿದೆ.

ದುಂದುಮೆಪದಕ್ಕೆ ದುಮ್‌ದುಮ್ ಎಂದು ನುಡಿಯುವ ದಿಮ್ಮು ಬೇಕೇ ಬೇಕು. ಹೋಳೀಹಾಡಿಗೆ ಅದರ ಅಗತ್ಯವಿಲ್ಲ. ದಿಮ್ಮು ಒಂದು ತೊಗಲವಾದ್ಯ. ಹಳ್ಳಿಗರು ಇಂದಿಗೂ ಅದನ್ನು ಮೋಜುಮಜಲುಗಳಲ್ಲಿ ಬಾರಿಸುತ್ತಾರೆ. ಕರಡಿ ಮಜಲಂತೂ ಅದಿಲ್ಲದೆ ನಡೆಯದು, ದುಮ್, ದಿಮ್ ಎಂಬುವು ಅನುಕರಣವಾಚಕ ಸದ್ದುಗಳು. ಆ ಶಬ್ದಗಳಿಂಲೇ ದಿಮ್ಮು ಎನ್ನುವುದು ಹೆಸರಾಗಿದೆ. ಮೇಲಾಗಿ ಈ ವಾದ್ಯ ವಿಶೇಷವೇ ದುಂದುಮೆಯನ್ನು ಹೋಳೀಹಾಡಿನಿಂದ ಬೇರ್ಪಡಿಸುತ್ತದೆ. ಇಷ್ಟೇ ಅಲ್ಲ; ಅದು ಆ ಹಾಡಿಗೆ ದುಂದುಮೆ ಎಂದು ಹೆಸರನ್ನೂ ತಂದು ಕೊಟ್ಟಿದೆ.

ಹೋಳೀಹಬ್ಬ ವಸಂತೋತ್ಸವ ಒಂದು ಅಂಗ. ಆ ಸಮಯದಲ್ಲಿ ಹೋಳೀಸಾಹಿತ್ಯ ಪ್ರಕಟವಾಗುವುದು. ಆಗ ದುಂದುಮೆಯ ಸೊಲ್ಲು ಹಳ್ಳಿಹಳ್ಳಿಗಳಲ್ಲಿ ಕೇಳಬರುವುದು. ಸಂಸ್ಕೃತ ಸಾಹಿತ್ಯದಲ್ಲಿ ಚಚ್ಚರಿ ಎನ್ನುವ ಗೀತಪ್ರಕಾರವೊಂದಿದೆ. ವಸಂತ ಕಾಲದಲ್ಲಿ ಹೇಳುವ ಹಾಡೆಂದು ಅದನ್ನು ಪಂಡಿತರು ಗುರುತಿಸಿದ್ದಾರೆ. ಆದರೆ ಅದನ್ನು ಯಾವರೀತಿ ಹಾಡುತ್ತಿದ್ದರೆಂಬುದು ಸ್ಪಷ್ಟವಾಗಿ ತಿಳಿಯದು. ಆ ಚಚ್ಚರಿಗೀತಕ್ಕೂ ಹೋಳೀಹಾಡಿಗೂ ಏನಾದರೂ ಸಂಬಂಧ ಇರಬಹುದು; ಇರಲಿಕ್ಕಿಲ್ಲ. ಗೊತ್ತಿಲ್ಲದುದನ್ನು ಊಹಿಸಿ ಹೇಳುವುದು ಸರಿಯಲ್ಲ. ಹೋಳೀಹಾಡು, ದುಂದುಮೆಪದಗಳು ಮಾತ್ರ ಕನ್ನಡದ ಸ್ವಂತ ಆಸ್ತಿಯೆಂಬುದೇ ನಮ್ಮ ಮತ.

ಜನಪದ ಸಾಹಿತ್ಯ ಯಾವಾಗಲೂ ತೋಂಡಿ ಸಾಹಿತ್ಯ. ಬಾಯಿಯಿಂದ ಕಿವಿಗೆ ಕಿವಿಯಿಂದ ಬಾಯಿಗೆ ಓಡಾಡುವುದೇ ಅದರ ಕಾರ್ಯ. ಇಂತಹ ಸಾಹಿತ್ಯಕ್ಕೆ ಹಿಂದಿನ ಕಾಲದಲ್ಲಿ ಬರೆವಣಿಗೆ ಪಡೆಯುವ ಭಾಗ್ಯವಿದ್ದಿಲ್ಲ. ಪರಿಸ್ಥಿತಿ ಹೀಗಿರುವಾಗ ಅದರ ಮೂಲವನ್ನು ಕಂಡು ಹಿಡಿಯಲು ಆಧಾರ ಹೇಗೆ ಸಿಗಬೇಕು? ಆದರೂ ದುಂದುಮೆಪದಗಳು ಹನ್ನೆರಡನೆಯ ಶತಮಾದಲ್ಲಿ ಪ್ರಾರದಲ್ಲಿದ್ದುವೆಂಬುದಕ್ಕೆ ಅಲ್ಪಸ್ವಲ್ಪ ಆಧಾರ ದೊರೆಯುತ್ತದೆ. ಶಿವಶರಣರು ತಮ್ಮ ಧರ್ಮಪ್ರಚಾರಕ್ಕಾಗಿ  ದುಂದುಮೆಪದಗಳನ್ನು ಬಳಸಿದುದು ತಳಿದು ಬಂದಿದೆ. ಜನತೆಯ ಮಟ್ಟವನ್ನು ಅರಿತು, ಅವರ ಮನವನ್ನು ಸೆರೆಹಿಡಿಯುವ ಸಾಹಿತ್ಯದ ಮೂಲಕ ಪ್ರಾರ ಮಾಡಿದರೆ ತತ್ವಪ್ರಸಾರಕ್ಕೆ ಅನುಕೂಲವೆಂದು ಅವರು ಬಗೆದಿರಬೇಕು. ಆದ್ದರಿಂದ ದುಂದುಮೆಯನ್ನು ಧರ್ಮತತ್ವಗಳಿಗೆ ಮಾಧ್ಯಮ ಮಾಡಿಕೊಂಡಿರಬೇಕೆನಿಸುತ್ತದೆ. ಶರಣರು ರಿಸಿದ ‘ಕಲಿಕಾಲಹೋಳಿ’ ಯೊಂದು ಅಂತಹ ಹಾಡಾಗಿದೆ. ಅದರ ಪಲ್ಲವನ್ನು ಓದಿಯೇ ಅದೊಂದು ದುಂದುಮೆಪದವೆಂದು ನಿರ್ಧರಿಸಬಹುದು.

ದುಂ‌ದುಮೆಯೆಂದೆಂದು ಪಾಡಿರಿ ಜಾಣಾ
ದುಂದುಮೆ ಬಸವಂತನ ಹಬ್ಬ | ದುಂದುಮೆ ||

ಇಡೀ ಹಾಡನ್ನು ನೋಡಿದರೆ ದುಂದುಮೆಯ ಲಕ್ಷಣಗಳು ಅದರಲ್ಲಿರುವುದನ್ನು ಅರಿಯುತ್ತೇವೆ. ಇದರ ಮೇಲಿಂದ ದುಂದುಮೆಪದದ ಪ್ರಾಚೀನತೆ ತೀರ ಹಿಂದಕ್ಕೆ ಸರಿಯುತ್ತದೆ. ಜನಪದದಲ್ಲಿ ರೂಢವಾಗಿದ್ದ ಈ ಸಾಹಿತ್ಯ ಹನ್ನೆರಡನೆಯ ಶತಮಾನಕ್ಕಿಂತಲೂ ಮೊದಲೇ ಇರಬೇಕೆನಿಸುತ್ತದೆ. ಹಾಗೆ ಹೇಳು ಹೆಚ್ಚಿನ ಆಧಾರ ಇನ್ನೂ ಸಿಗಬೇಕು.

ವಿಜಯನಗರದ  ದೊರೆ, ಪ್ರೌಢದೇವರಾಯನ ಕಾಲದಲ್ಲಿ ವೀರಶೈವಧರ್ಮಕ್ಕೆ ನವಚೈತನ್ಯ ಉಂಟಾಯಿತು. ನೂರೊಂದು ವಿರಕ್ತರು ಆ ಕಾಲದಲ್ಲಿ ಅವತರಿಸಿ ಧರ್ಮ, ತತ್ವ, ಸಂಸ್ಕೃತಿಗಳ ಸಂವರ್ಧನೆಗೆ ಮನಮುಟ್ಟಿ ದುಡಿದರು. ಅವರಲ್ಲೊಬ್ಬನಾಗಿದ್ದ ಕರಸ್ಥಲದ ನಾಗಿದೇವನ ಸಾಹಿತ್ಯ ಸೇವೆ ದೊಡ್ಡದು. ಅವನು ಅನೇಕ ಕಾಲಜ್ಞಾನದ ಹಾಡುಗಳನ್ನು ಕಿಸಿದ್ದಾನೆ. ಆ ಹಾಡು ದುಂದುಮೆಯ ಪದಗಳಾಗಿರುವುದು ಗಮನಾರ್ಹ ಸಂಗತಿ. ಒಂದು ಹಾಡಿನ ಪಲ್ಲ ಹೀಗಿದೆ:

ದಿಮ್ಮಿಸಲೆನ್ನಿರೊ ನಮ್ಮವರೆಲ್ಲ ದಿಮ್ಮಿಸಲೆನ್ನಿರೊ
ದಿಮ್ಮಿಸಲೆಂದು ಬಂದೀವಿ ಸತ್ಯವುಳ್ಳ ಶರಣರೆಲ್ಲ ||

ಈ ಪಲ್ಲದಲ್ಲಿ ಬಂದಿರುವ ‘‌ದಿಮ್ಮಿಸು’ ಎನ್ನುವ ಪದ ಪ್ರಸ್ತುತದಲ್ಲಿ ಮುಖ್ಯವಾದುದು. ದಿಮ್ಮು+ಇಸು=ದಿಮ್ಮಿಸು ಎಂದರೆ ‘ಡಂಗುರ ಸಾರು’ ಎಂದು ಅರ್ಥ ಕೊಡುತ್ತದೆ. ಇಂದಿಗೂ ಹಳ್ಳಿಗಳಲ್ಲಿ ಸಾರ್ವಜನಿಕ ಹೇಳಿಕೆ ನೀಡುವಾಗ ದಿಮ್ಮು ಬಳಸುತ್ತಾರೆ ಇಂತಹ ದಿಮ್ಮಿನೊಡನೆ ಕೇಳಿಸುವ ಹಾಡು ದುಂದುಮೆ ಪದ. ಈ ಬಗೆಯ ಹಾಡುಗಳು ಕಿತ್ತೂರು ಸಂಸ್ಥಾನದ ಕಾಲದಲ್ಲಿ ಹೆಚ್ಚಾಗಿ ಹುಟ್ಟಿಕೊಂಡಿವೆ ಹೋಳೀಹಾಡುಗಳನ್ನೂ ದುಂದುಮೆಪದಗಳನ್ನೂ ಹಾಡುವುದು, ಕೇಳುವುದು ಈಗೀಗ ಕಡಿಮೆಯಾಗತೊಡಗಿದೆ. ಇನ್ನು ಕೆಲಕಾಲದಲ್ಲಿ ಈ ಬಗೆಯ ಸಾಹಿತ್ಯ ನಶಿಸಿ ಹೋಗುವ ಲಕ್ಷಣಗಳೂ ಕಾಣತೊಡಗಿವೆ. ನಮ್ಮ ಸಂಗ್ರಹದಲ್ಲಿ ದುಂದುಮೆಪದಗಳು ಸಾಕಷ್ಟವೆ. ಎಲ್ಲವನ್ನೂ ಅಚ್ಚುಹಾಕುವುದು ನಮ್ಮ ಗುರಿಯಲ್ಲ. ಮಾದರಿಗಾಗಿ ಕೆಲವನ್ನು  ಇಲ್ಲಿ ಸಂಗ್ರಹಿಸಲಾಗಿದೆ. ಒಂಬತ್ತು ದುಂದುಮೆ ಪದ ‘ಜೀವನ ಜೋಕಾಲಿ’ಯಲ್ಲಿ ತೂಗಿರುವುದನ್ನು ನೋಡಿ, ಈ ಸಾಹಿತ್ಯದ ನೆಲೆ ಬೆಲೆಯನ್ನು ಅರಿತರೆ ಸಂಗ್ರಹಕಾರರ ಶ್ರಮ ಸಾರ್ಥಕವಾಗಬಲ್ಲುದು.

ಕುಂದಗೋಳ ಬಸವಲಿಂಗ: ಈ ಕವಿ ಧಾರವಾಡ ಜಿಲ್ಲೆಯ ಕುಂದಗೋಳ ಗ್ರಾಮದವನು. ಈತ ಆಶು ಕವಿಯಾಗಿದ್ದು ಅನೇಕ ಹೋಳೀಹಾಡುಗಳನ್ನೂ ದುಂದುಮೆಪದಗಳನ್ನೂ ಬರೆದಿದ್ದಾನೆ. ಈತನಿಂದ ರಚಿತವಾದ ಆದಯ್ಯ, ಪುರಾತನರ ಪೂಜೆ, ಹುಬ್ಬಳ್ಳಿ ಮಂಗ ಮತ್ತು ಶ್ರೀಕೃಷ್ಣಲೀಲೆ- ಎಂಬ ನಾಲ್ಕು ದುಂದುಮೆಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಈ ಹಾಡುಗಳು ಒಂದೊಂದು ದೃಷ್ಟಿಯಿಂದ ವಿಶಿಷ್ಟವಾಗಿವೆ. ವಸ್ತು, ಪಾತ್ರ, ತಂತ್ರ, ಶೈಲಿ-ಯಾವ ದೃಷ್ಟಿಯಿಂದ ನೋಡಿದರೂ ಈ ಕವಿಯ ದುಂದುಮೆಪದಗಳು ಪರಿಪೂರ್ಣವಾಗಿರುವುದನ್ನು ಅರಿಯಬಹುದು.

ಆದಯ್ಯ ದುಂದುಮೆಯಲ್ಲಿ ಆದಯ್ಯನ ಶಿವಭಕ್ತಿ ನಿಷ್ಠೆಯ ತವರುಮನೆಯಾಗಿ ಬಂದಿದೆ. ರಾಘವಾಂಕನ ಆದಯ್ಯನ ಪುರಾಣವನ್ನು ಕವಿ ಪುರಾಣಿಕರಿಂದ ಕೇಳಿ ತಿಳಿದಿರಬೇಕು. ಅದನ್ನೇ ತನ್ನ ದುಂದುಮೆಪದದಲ್ಲಿ ವಿವರಿಸಿದ್ದಾನೆ. ಸೌರಾಷ್ಟ್ರದಿಂದ ಕರ್ನಾಟಕಕ್ಕೆ ವ್ಯಾಪಾರಕ್ಕೆಂದು ಬರುತ್ತಾನೆ ಆದಯ್ಯ. ಆತ ಸೋಮೇಶ್ವರ ಮಹಾಭಕ್ತ. ಲಿಂಗಪೂಜೆ ಮಾಡದೆ ಅವನು ಊಟ ಮಾಡಲಾರ. ಸಂಚಾರ ಮಾಡುತ್ತ ಕೊನೆಗೆ ಪುಲಿಗೆರೆಗೆ ಬರುತ್ತಾನೆ. ಅಲ್ಲಿಯೇ ನಾಲ್ಕಾರು ದಿವಸ ಬಿಡಾರ ಹೂಡುತ್ತಾನೆ. ಮನೆಮನೆಗೆ ಹೋಗಿ ಸರಕು ಮಾರುವುದೇ ಅವನ ವ್ಯವಹಾರ. ಆ ವೇಳೆಯಲ್ಲಿ ತಪ್ಪೋ ಒಳಿತೋ, ಶಿವನೇ ಬಲ್ಲ! ಆ ಊರ ಜೈನಮನೆತನದ ಕನ್ಯೆ ಪದ್ಮಾವತಿ ಕಣ್ಣಿಗೆ ಬೀಳುತ್ತಾಳೆ. ಒಬ್ಬರನ್ನೊಬ್ಬರು ಕಂಡು ಮೋಹಪಾಶದಲ್ಲಿ ಬಂಧಿಸಲ್ಪಡುತ್ತಾರೆ. ಕಾಮನ ಕೈಚಳಕ ಅವರಿಬ್ಬರನ್ನು ಒಂದುಗೂಡಿಸುತ್ತದೆ. ದೇಹದ ಹಸಿವು ಕುಗ್ಗುತ್ತಲೇ ಆದಯ್ಯನಿಗೆ ಅರಿವು ಬರುತ್ತದೆ. ಪದ್ಮಾವತಿ ಜೈನಳೆಂಬುದು ತಿಳಿದಾಗ ಆದಯ್ಯ ಮಮ್ಮಲ ಮರುಗುತ್ತಾನೆ. ಶೈವನಿಗೂ ಜೈನಕನ್ಯೆಗೂ ಸಂಬಂಧ ಬೆಳೆಯುವುದು ಶಾಸ್ತ್ರ ಸಮ್ಮತವಲ್ಲವೆಂಬುದು ಆದಯ್ಯನಿಗೆ ಹೊಳೆಯುತ್ತದೆ. ಆದರೆ ಪದ್ಮಾವತಿ ಆದಯ್ಯನನ್ನು ಬಿಡಲಾರಳು. ಮದುವೆಯಾಗಲು ಆತುರ ಪಡುತ್ತಾಳೆ ಕೊನೆಗೆ ಆದಯ್ಯ ಯೋಚಿಸಿ ನೋಡಿ, ಪದ್ಮಾವತಿಗೆ ಲಿಂಗದೇಕ್ಷೆ ಮಾಡಿಸಿ ಮದುವೆಯಾಗುತ್ತಾನೆ. ಅವರೀರ್ವರೂ ಸುಖದಿಂದ ಬಾಳುವಾಗ ಒಂದು ಅಘಟಿತ ಘಟನೆ ನಡೆಯುತ್ತದೆ. ಅದು ಆದಯ್ಯನ ಜೀವನದಲ್ಲಿ ಒಂದು ಹೊಸ ತಿರುವು ತಂದುಕೊಡುತ್ತದೆ.

ಒಂದು ದಿನ, ಆದಯ್ಯ ಕೆಲವು ಶಿವಭಕ್ತರಿಗೆ ಪ್ರಸಾದಕ್ಕೆ ಬರಬೇಕೆಂದು ತಿಳಿಸಿದ್ದಾನೆ. ಪದ್ಮಾವತಿ ಅಡುತೆಯ ಕಾರ್ಯದಲ್ಲಿ ನಿರತಳಾಗುವಳು. ಆದಯ್ಯ ಶಿವಭಕ್ತರನ್ನು ಕರೆತರಲು ಅವರಿದ್ದಲ್ಲಿಗೆ ಹೋಗುತ್ತಾನೆ. ಇತ್ತ ಧರ್ಮ ಕರ್ಮವಶಾತ್ ಆದಯ್ಯನ ಮಾವ ಜಿನಮುನಿಗಳಿಗೆ ಔತಣಕೊಟ್ಟು ಚರಿಗೆಗೆ ಬರಲು ತಿಳಿಸಿದ್ದಾನೆ. ಅವರ ಸಂಖ್ಯೆ ದೊಡ್ಡದು. ಮನೆಯಲ್ಲಿ ಮಾಡಿದ ಅಡುಗೆ ಸಾಲದು. ಆಗ ಆದಯ್ಯ ಮಾವನು ಪದ್ಮಾವತಿ ಮಾಡಿದ ಅಡುಗೆಯನ್ನು ಬಲತ್ಕಾರದಿಂದ ಒಯ್ದು ಮುನಿಗಳಿಗೆ ತೃಪ್ತಿಬಡಿಸುತ್ತಾನೆ. ಅಷ್ಟರಲ್ಲಿ ಆದಯ್ಯನ ಅತಿಥಿಗಳು ಮನೆಗೆ ಬರುತ್ತಾರೆ. ಮನೆಯಲ್ಲಿ ಊಟಕ್ಕೆ ಏನೇನೂ ಉಳಿದಿಲ್ಲ. ಪದ್ಮಾವತಿ ನಡೆದ ಸಂಗತಿಯನ್ನು ತನ್ನ ಗಂಡನಿಗೆ ತಿಳಿಸುತ್ತಾಳೆ. ಆದಯ್ಯನ ಸಿಟ್ಟು ತಲೆಗೇರುತ್ತದೆ. ಆಗ ಮಾಡುವುದೇನು? ಶಿವಭಕ್ತರಿಗೆ ಹಣ್ಣುಹಾಲು ಕೊಟ್ಟು ತೃಪ್ತಪಡಿಸಿ ಕಳಿಸುವನು. ತಾನು ಮಾತ್ರ ಊಟವಿಲ್ಲದೆ ಮುಸುಕು ಹಾಕಿಕೊಂಡು ಮಲಗಿಬಿಡುವನು. ಯಾರು ತಿಳಿಹೇಳಿದರೂ ಆದಯ್ಯನು ಜುಪ್ಪೆನ್ನುವುದಿಲ್ಲ. ಆಗ ಸುಮ್ಮನಿರಬಾರದೆ? ಪದ್ಮಾವತಿಯ ತಂದೆ ” ಈ ಮಹಾಪುರುಷ ಸೌರಾಷ್ಟ್ರದ ಸೋಮೇಶ್ವರನನ್ನು ಪುಲಿಗೆರೆಯಲ್ಲಿ ಪ್ರತಿಷ್ಠಾಪಿಸಿಯೇ ಊಟ ಮಾಡುತ್ತಾನೆ”-ಎಂದು ಕಟಕಿ-ನುಡಿಯಾಡುವನು. ಈ ಮಾತು ಆದಯ್ಯನ ಶಿವಭಕ್ತಿನಿಷ್ಠೆಗೆ ಆಹ್ವಾನವೆನ್ನುವಂತೆ ಕೇಳಿಬರುವುದು.

ಆದಯ್ಯ ಸೋಮೇಶ್ವರನನ್ನು ಕರೆತರಲು ಸೌರಾಷ್ಟ್ರಕ್ಕೆ ಹೊರಟು ನಿಲ್ಲುತ್ತಾನೆ. ತಾನು ಪುಲಿಗೆರೆಗೆ ಬಂದ ದಿನವೇ ತನ್ನ ಊಟವೆಂದು ಪ್ರತಿಜ್ಞೆ  ಮಡುವನು. ಶಿವನು ಬಾರದಿದ್ದರೆ ತನ್ನ ಪ್ರಾಣ ಶಿವನಿಗರ್ಪಿತವೆಂದು ಸಾರಿ ಹೇಳುವುದು ಪದ್ಮಾವತಿಯೂ ಸಾಮಾನ್ಯ ಸ್ತ್ರೀಯಲ್ಲ. ವೀರಶರಣನ ಕೈಹಿಡಿದ ವೀರ ಮಹಿಳೆ! ಅವಳು ಹೇಳುವ ಮಾತು ಕೇಳಿದವರ ಹೃದಯದಲ್ಲಿ ಮಿಂಚಿನ ಸಂಚಾರ ಉಂಟುಮಾಡಬಲ್ಲುದು. ತನ್ನ ಗಂಡ ಆದಯ್ಯ ಸೋಮೇಶ್ವರನನ್ನು ಪುಲಿಗೆರೆಯಲ್ಲಿ ಸ್ಥಾಪಿಸುವವರೆಗೆ ಹನಿ ನೀರನ್ನೂ ಕುಡಿಯೆನೆಂದು ಹೇಳಿ, ತನ್ನ ಗಂಡನಿಗೆ ‘ಸೋಮೇಶ್ವರ ಬಾರದಿರೆ ನೀನೂ ಬರಬೇಡ’ ಎಂದು ಅವನ ತಲೆಯ ಮೇಲೆ ಶೇಷೆ ಹಾಕುತ್ತಾಳೆ. ಸತಿ-ಪತಿಗಳಿಗೊಂದಾದ ಭಕ್ತಿ ಶಿವನನ್ನು ಒಲಿಸದೆ ಇದ್ದೀತೆ?

ಆದಯ್ಯ ಸೋಮೇಶ್ವರನನ್ನು ತಂದು ಬಸದಿಯೊಳಗಿನ ಜಿನಬಿಂಬವನ್ನು ಕಿತ್ತೊಗೆದು ಪ್ರತಿಷ್ಠಾಪಿಸುವನು. ಶೈವರಿಗೂ ಜೈನರಿಗೂ ಕಾಳಗ ನಡೆದು ಆದಯ್ಯ ಗೆಲ್ಲುತ್ತಾನೆ.

ಈ ಕಥೆಯನ್ನೇ ಕುಂದಗೋಳ ಬಸವಲಿಂಗ ಆದಯ್ಯದುಂದುಮೆ ಮಾಡಿದ್ದಾನೆ. ಮೂಲದಲ್ಲಿ ಬರುವ ಪರಮತ ವಿಡಂಬನೆ ದುಂದುಮೆಯಲ್ಲಿ ಬಂದಿಲ್ಲ. ಜನಸಾಮಾನ್ಯರಿಗೆ ಯಾವುದು ಬೇಕೋ ಅದನ್ನು ಮಾತ್ರ ಸ್ವೀಕರಿಸಿದ್ದಾನೆ. ತನ್ನ  ಕಾವ್ಯ ಕಾಮನಾಟದ ಪದವೆಂದು ಸ್ಪಷ್ಟಗೊಳಿಸಿ ಹಾಡಿಗೆ ಇತಿಶ್ರೀ ಹಾಕಿದ್ದಾನೆ. ಕಥಾವಸ್ತು ಹಾಲಿನಂತೆ, ಶೈಲಿ ಬೆಲ್ಲದ ಕೆಸರಂತೆ! ಹಾಲುಬೆಲ್ಲದ ಸವಿಯ ಬಲ್ಲವರು ‘ಆದಯ್ಯ ದುಂದುಮೆ’ ಕೇಳಿ ಆನಂದಿಸಬಹುದು.

ಸಂಶಿಯಲ್ಲಿ ನಡೆದ ಅರುವತ್ಮೂರು ಪುರಾತನರ ಪೂಜೆಯೇ‘ಪುರಾತನರ ಪೂಜೆ’. ಇದು ಕಥೆಯಲ್ಲ; ಸರ್ವರೂ ಕಂಡಮಾತು. ಬಸವಲಿಂಗಕವಿ ಸ್ವಾಮಿಗಳ ಮೆರವಣಿಗೆಯನ್ನೂ ಪುರಾತನರ ಪೂಜೆಯನ್ನೂ ಕಣ್ಣಾರೆ ಕಂಡು ಕೂತಮೆಟ್ಟಿನ ಮೇಲೆ ದುಂದುಮೆಪದ ಕಟ್ಟಿದ್ದಾನೆ ಸಂಶಿಯ ಪ್ರಮುಖ ವ್ಯಕ್ತಿಗಳ ಹೆಸರು ಈ ಪದದಲ್ಲಿ ಬಂದಿರುವುದೊಂದು ವೈಶಿಷ್ಟ್ಯ. ಇಲ್ಲಿ ಬಂದಿರುವ ವರ್ಣನೆ ಹೃದ್ಯವಾಗಿದೆ. ಕವಿಯ ವಾಣಿ ಹಾಡಿನುದ್ದಕ್ಕೂ ನಿರರ್ಗಳವಾಗಿ ಹರಿದಿದೆ. ಆದರೂ ಕವಿ ತನ್ನ ವಿನಯವನ್ನೇ ಮೆರೆಯುತ್ತ

“ಬಿಂದು ವ್ಯಂಜನ ಅಡಿನೇಮ ಪ್ರಾಸಗಳನು
ಒಂದರಿತವನಲ್ಲ ಕಂದನನು | ಇದ
ಕೊಂದಡಿ ಪ್ರಾಸಗಳ್ ಬಿದ್ದುದನು | ಮುದ್ದು
ಕುಂದಗೊಳದ ಗುರುಬಸವಲಿಂಸಾಧ್ಯನ
ಕಂದನ ಜರಿಯದೆ ತಿದ್ದಿವೋದುವುದು ||”

ಎಂದು ಹೇಳಿಕೊಂಡಿದ್ದಾನೆ. ಕಲಿತವರಲ್ಲಿ ನಾಗರಿಕತೆ ತೋರಬಹುದು. ಆದರೆ ಕಲಿಯದವರಲ್ಲಿ ಸಂಸ್ಕೃತಿ ನೆಲೆನಿಂತಿರುವುದನ್ನು ಅರಿಯಬಹುದು. ಈ ಮಾತಿನ ರಹಸ್ಯವನ್ನು ಬಸವಲಿಂಗ ಕವಿಯ ‘ಪುರಾತನರ ಪೂಜೆ’ಯನ್ನೋದಿ ಮನನ ಮಾಡಿಕೊಳ್ಳಬಹುದಾಗಿದೆ.

ಹುಬ್ಬಳ್ಳಿಮಂಗ ದುಂದುಮೆ ಬಹು ಪ್ರಸಿದ್ಧವಾದುದು. ಮಾನವ ಮಂಗನ ಮಗ. ಮಂಗತನ ಅವನ ಸಹಜ ಸ್ವಭಾವ. ಕವಿ ಬಸವಲಿಂಗ ಪ್ರತಿಯೊಬ್ಬ ಮಾನವನಲ್ಲಿ ಮಂಗತನ ಮನೆಮಾಡಿಕೊಂಡುದನ್ನು ಅರಿತಿದ್ದಾನೆ. ಅ ಪ್ರತಿಭೆಗೆ ಅದರ ಒಳಮರ್ಮ ಹೊಳೆದಿದೆ. ಅದನ್ನೇ ದುಂದುಮೆಯ ರೂಪದಲ್ಲಿ ಆತ ಬಣ್ಣಿಸಿದ್ದಾನೆ ಇದೊಂದು ವಿಡಂಬನೆ. ತಿಳಿದವರಿಗೆ ಚುಚ್ಚುತ್ತದೆ; ತಿಳಿಯದವರಿಗೆ ನಗೆ ಬರಿಸುತ್ತದೆ. ಹುಬ್ಬಳ್ಳಿಯ ಮನೆಮನೆಗಳಲ್ಲಿ ಹಾದಿ ಬೀದಿಗಳಲ್ಲಿ ಇಂತಹ ಮಾನವ ಮಂಗಗಳು ತುಂಬಿಕೊಂಡಿವೆ. ಅವರ ಮಂಗತನವನ್ನು ಕೊಂಕು ಮಾತಿನಲ್ಲಿ ತುಂಬಿ, ಕವಿ ದುಂದುವೆ ಹಾಡಿದ್ದಾನೆ. ಈ ಪದವನ್ನು ಓದಿ ಇಲ್ಲವೆ ಕೇಳಿ ಆನಂದಿಸಬೇಕು. ಹಾಗೆ ಮಾಡಿದಾಗ, ‘ಹೌದಲೇ ಹುಬ್ಬಳ್ಳಿ’ ಎನ್ನುವ ರುಜುವಾತು ಕೇಳದವನ ಬಾಯಿಂದ ಬಾರದೆ ಇರದು.

ಶ್ರೀಕೃಷ್ಣಲೀಲೆ ಬಸವಲಿಂಗ ಕವಿಯ ನಚ್ಚಿನ ಹಾಡು. ಶ್ರೀ ಕೃಷ್ಣ ಗೊಲ್ಲತಿಯರ ಗೋಳುಹೊಯ್ದುದು ಪುರಾಣ ಪ್ರಸಿದ್ಧ. ಅವನದು ಸಾಯೆಸರಸ. ಗೊಲ್ಲತಿಯರು ಸ್ನಾನ ಮಾಡುತ್ತಿದ್ದಾಗ ಅವರ ಬಟ್ಟೆಬರೆಗಳನ್ನು ಗಂಟುಕಟ್ಟಿ ಮರದ ಮೇಲಿಟ್ಟು ನಕ್ಕ ಕೃಷ್ಣ ಅವರಿಗೆ ಮುಕ್ತಿಯನ್ನೇ ನೀಡಿದ. ಈ ಹಾಡು ಹೋಳೀ ಹಾಡಿನ ಧಾಟಿಗೂ ದುಂದುಮೆ ಧಾಟಿಗೂ ಸಮವಾಗಿ ಹೊಂದಿಕೊಳ್ಳುತ್ತದೆ. ದುಂದುಮೆ ಮತ್ತು ಹೋಳೀಹಾಡುಗಳ ಪರಸ್ಪರ ಸಂಬಂಧ ಹೊಳೆಯಲೆಂದೇ ಈ ಹಾಡನ್ನು ಈ ಸಂಗ್ರಹದಲ್ಲಿಯೂ ಹಾಕಲಾಗಿದೆ. ವಿಮರ್ಶಕರು ಇದನ್ನೋದಿ ಹೋಳೀಸಾಹಿತ್ಯದ ಮರ್ಮವನ್ನು ಅರಿತರೆ ಸಾಕು.

ಚನ್ನಬಸವ: ನುಲಿಯ ಚಂದಯ್ಯನ ದುಂದುವೆಯನ್ನು ಹಾಡಿದವ ಚನ್ನಬಸವ. ಅವನ ಸ್ಥಳ ತಿಳಿದಿಲ್ಲ. ಆತನು ಜಸವೆತ್ತ ಕರ್ಪುರೇಶನ ಕರುಣದಿಂದ ಈ ದುಂದುಮೆ ರಚಿಸಿರುವುದಾಗಿ ಹೇಳಿಕೊಂಡಿದ್ದಾನೆ. ಅವನು ಹೇಳಿದ ದುಂದುಮೆ ಚಿಕ್ಕದಾದರೂ ಚೊಕ್ಕವಾಗಿದೆ. ಶೈಲಿ ಬಂಧುರವಾಗಿದ್ದು ಕೇಳಲು ಮನೋಹರವಾಗಿದೆ.

ನುಲಿಯ ಚಂದಯ್ಯ ಒಬ್ಬ ಮಹಾಶರಣ. ಆತ ಕಲ್ಯಾಣದಲ್ಲಿದ್ದ ಬಸವಾದಿ ಪ್ರಮಥರ ಒಡನಾಡಿ. ಮೆದಿಹುಲ್ಲನ್ನು ತಂದು ನುಲಿಯನ್ನು ಹೊಸೆದು ಮಾರುವುದೇ ಅವನ ಕಾಯಕ. ಬಂದ ಹಣದಿಂದ ಚರತತಿಗೆ ಪ್ರಸಾದ ಮಾಡಿಸಿ, ಶೇಷ ಪ್ರಸಾದ ಪ್ರಭುವಿನ ಬರುವಿಕೆಗೆ ಕಾದುನಿಂತ ಜಂಗಮಪ್ರೇಮಿ.

ಒಂದು ದಿನ. ಚಂದಯ್ಯ ಕೆರೆಯಲ್ಲಿ ಮೆದಿಹುಲ್ಲನ್ನು ಕೊಯ್ಯುತ್ತಿದ್ದಾಗ ಆತನ ಉರದ ಲಿಂಗ ಸಡಿಲಿ ನೀರೊಳಗೆ ಬಿತ್ತು. ಇದೇ ತಕ್ಕ ಸಮಯವೆಂದು ಬಗೆದ ಶಿವನು ಚಂದಯ್ಯನ ಕಾಯಕ ಪರೀಕ್ಷೆಗಾಗಿ ಓಡಿ ಬಂದ. ಕಾಯಕದಲ್ಲಿ ನಿರತನಾದ ಚಂದಯ್ಯನಿಗೆ ಬಿದ್ದ ಲಿಂಗವನ್ನು ಎತ್ತಿಕೊಳ್ಳಲು ಸಮಯವಿರಲಿಲ್ಲ.‘ಬೇಕಾದರೆ ನೀನೇ ನೀರು ಬಿಟ್ಟು ಬಾ, ಇಲ್ಲದಿರೆ ಅಲ್ಲಿಯೇ ಇರು’ -ಎಂದು ಹೇಳಿ ಕಾಯಕಕ್ಕೆ ಡೆದ. ಕಾಯಕದಲ್ಲಿ ತೊಡಗಿದ ಶರಣನು ಲಿಂಗಜಂಗಮವನ್ನಾದರೂ ಮರೆಯಬೇಕೆಂಬುದು ಕಾಯಕತತ್ವ. ನೀರಲ್ಲಿ ಬಿದ್ದ ಲಿಂಗದೇವನಿಗೆ ಶರಣನನ್ನು ಬಿಟ್ಟಿರುವುದು ಅಸಾಧ್ಯವೆನಿಸಿತು; ಮನದಲ್ಲಿ ತಳಮಳವಾಯಿತು. ಹೇಗಾದರೂ ಮಾಡಿ ಶಿವಶರಣರ ಸೇವೆ ಮಾಡಬೇಕೆಂಬುದು ಲಿಂಗದೇವನ ಅಪೇಕ್ಷೆ. ಆಗ ಅವನು ಪುರುಷ ವೇಷ ಗೊಟ್ಟು ಕೆರೆಯಿಂದ ಹೊರಗೆ ಬಂದು “ಏಕೆ ಚಂದಯ್ಯ, ನನ್ನನ್ನು ಇಲ್ಲಿಯೇ ಬಿಟ್ಟು ನೀನೊಬ್ಬನೇ ಹೋಗುವುದು ಉಚಿತವೆ? ಲಿಂಗಾಂಗಸಮರಸ ಅಂಗಲಿಂಗ ಒಂದಾದಾಗಲೇ ಅಲ್ಲವೆ? ತಿಳಿದು ನೋಡು”-ಎಂದನು. ಆಗ ಚಂದಯ್ಯ “ವಿಶ್ವವ್ಯಾಪಿಯಾದ ಲಿಂಗಯ್ಯ ನೀರಲ್ಲಿ ಮುಳುಗುವುದು ಅಂದರೇನು? ಅಂಥವನನ್ನು ಪೂಜಿಸಿದರೆ ಬರು ಫಲವೇನು? ನಾನೊಲ್ಲೆ ಅವನನ್ನು; ಬೇಕಾದರೆ ವರವನ್ನು ಬೇಡುವ ಇನ್ನ್ಯಾವನನ್ನೋ ಕೂಡು. ನನಗೀಗ ಸಮಯವಿಲ್ಲ, ಜಂಗಮ ದಾಸೋಹಕ್ಕೆ ತಡವಾಗುವುದು” ಎಂದು ಹೇಳಿ ಹೊರಟು ಹೋಗುವನು. ಆಗ ಶಿವನು ಅವನ ಬೆನ್ನು ಹತ್ತಿ ಜಗ್ಗಿ ನಿಲ್ಲಿಸಿದರೆ ಚಂದಯ್ಯ ‘ಯಾಕೆ ಮಡುವಿಲಿ ಬಿದ್ದಿ? ಯಾಕೆ ಬೆನ್ನಲಿ ಬಂದಿ? ನನ್ನನ್ನೇಕೆ ಕಾಡುವಿ? ಆಚೆಗೆ ನಡೆ’ ಎಂದ. “ಏನೇ ಇರಲಿ ನನ್ನನ್ನು ಧಿಕ್ಕರಿಸಿ ಕೈಬಿಡಬೇಡ. ಇಬ್ಬರೂ ಏಕಾಕಿಯಾಗಿ ಬಾಳೋಣ”ಎಂದು ಶಿವ ಸೆರಗೊಡ್ಡಿ ಬೇಡಿಕೊಂಡ. ತಿರಾಯತರಿಲ್ಲದೆ ನ್ಯಾಯ ಮುಗಿಯದು. ಅಷ್ಟರಲ್ಲಿ ಮಡಿವಾಳಮಾಚಿತಂದೆ ಅವರಿದ್ದಲ್ಲಿಗೆ ಬಂದ. ಶಿವನು ನಡೆದ ಸಂಗತಿಯನ್ನು ಆತನಿಗೆ ತಿಳುಹಿದ. ಮಡಿವಾಳಯ್ಯ ಚಂದಯ್ಯನಲ್ಲಿ ಪರಿಪರಿಯಾಗಿ ಬೇಡಿಕೊಂಡು ಅವರಿಬ್ಬರನ್ನೂ ಕೂಡಿಸಿ ತನ್ನ ಮನೆಗೆ ಹೋದ.

ವೀರಶೈವದಲ್ಲಿ ಸೋಮಾರಿಗಳಿಗೆ ಸ್ಥಾನವಿಲ್ಲ. ಪ್ರತಿಯೊಬ್ಬನೂ ಏನಾದರೊಂದು ಕಾಯಕ ಮಾಡಲೇಬೇಕು. ಅದಕ್ಕೆ ಅನುಗುಣವಾಗಿ ಚಂದಯ್ಯನ ಮನೆಯಲ್ಲಿದ್ದ ಶಿವನು ಮೆದಿಯ ಕಾಯಕ ಮಾಡತೊಡಗಿದ. ಹುಲ್ಲುತಂದು ನುಲಿಹೊಸೆದು, ಊರಲ್ಲಿ ತಿರುಗಾಡಿ ನ್ಯಾಯಬೆಲೆಗೆ ನುಲಿ ಮಾರಿ ಜಂಗಮದಾಸೋಹಕ್ಕೆ ನೆರವಾದ. ಒಮ್ಮೆ ಶಿವನು ನುಲಿ ಮಾರಲು ಕಲ್ಯಾಣದ ಬೀದಿಬೀದಿಗಳಲ್ಲಿ ಪರಿದಾಡಿದ. ಕೊಳ್ಳುವವರು ಇಲ್ಲದ್ದಕ್ಕಾಗಿ ನೊಂದುಕೊಂಡ. ಆಗ ಬಸವಣ್ಣನವರ  ದೃಷ್ಟಿ ಅವನ ಮೇಲೆ ಬಿತ್ತು. ‘ನೀನು ಯಾರು?’ಎಂದು ಬಸವಣ್ಣನವರು ವಿಚಾರಿಸಿದರೆ ಶಿವನು ಕೊಟ್ಟ ಉತ್ತರವಿದು: ‘ಉತ್ತರದೇಶದ ಕಾನನದಲ್ಲಿ ಶಿವಪುರವೆಂಬ ಹಳ್ಳಿ ಇದೆ. ಅದೇ ನನ್ನೂರು, ಆ ಊರ ಗೌಡ-ಕರಣಿಕರು ತಲೆ ಇಲ್ಲದವರು, ಅವಿಚರಿಗಳು. ನನ್ನ ತಂದೆತಾಯಿಗಳು ಹುಲಿಬಾಯಿಗೆ ತುತ್ತಾದರು. ನಿರ್ಲಕ್ಷ್ಯರಾಗಿ ವರ್ತಿಸಿದರು. ಅನಾಥನಾದ ನನ್ನನ್ನು ಶರಣೆ ಅಮ್ಮವ್ವೆ ತನ್ನ ಮನೆಗೆ ಕರೆದೊಯ್ದು ಜೋಪಾನ ಮಾಡಿದಳು. ಕಂಡವರು ಕೂಳುಹಾಕಿ ದೊಡ್ಡವನನ್ನಾಗಿ ಮಾಡಿದರು. ನನಗೆ ಯೌವನ ಬಂತು. ಮದುವೆಯ ಆಸೆಯಿಂದ ಸದ್ಭಕ್ತ ಚಂದಯ್ಯನ ಮನೆಯಲ್ಲಿ ಜೀತಕ್ಕೆ ನಿಂತೆ. ಮುದುಕನ ಸ್ವಭಾವ ಬಹು ಚುರುಕು; ಸತ್ತರೂ ನೀರು ಬಿಡದ ಹರಕನಾತ. ಎಷ್ಟು ದುಡಿದರೂ ಮೈಮೇಲೆ ಒಂದು ತುಣುಕು ಬಟ್ಟೆ ನೀಡ. ಒಂದು ದಿನ, ಕೆರೆಯ ಮಡುವಿನಲ್ಲಿ ಹುಲ್ಲು ಕೊಯ್ಯುತ್ತಿದ್ದಾಗ ನನ್ನನ್ನು ನೀರಲ್ಲಿ ನೂಕಿಬಿಟ್ಟ.’ ಅವನ ಮಾತುಕೇಳಿ ಬಸವಣ್ಣನವರು-“ಶರಣರ ಸೇವೆ ಮಾಡಿದರೆ ಸಂಸಾರದ ಪರಿಭವ ಹರಿದು ಮುಕ್ತಿಯಾಗದೆ ಇರದು. ಆದ್ದರಿಂದ ನೀನು ಶರಣರ  ಸೇವೆಯನ್ನು ಬಿಡಬೇಡ. ಪ್ರತಿನಿತ್ಯದಲ್ಲಿ ನುಲಿ ಹೊಸೆದು ಮಾರಿ ಐದು ಹಾಗವನು ಚಂದಯ್ಯನಿಗೆ ನೀಡುತ್ತ ನನ್ನ ಮನೆಯಲ್ಲಿ ಸುಖವಾಗಿ ಇರಬಹುದು” ಎಂದು ತಿಳಿಸಿದರು. ಶಿವನಿಗೆ ಆ ಮಾತು ಸನ್ಮತವೆನಿಸಿತು, ಕಾಯಕದಲ್ಲಿ ನಿರತನಾದ.

ಒಮ್ಮೆ ಬಸವಣ್ಣನವರು ಶಿವನ ಕೈಯಲ್ಲಿ ಐದು ಹಾಗದ ಬದಲು ಸಾಸಿರ ಹೊನ್ನು ನೀಡಿದರು; ಬಹುತರವಾಗಿ ಅವರು ಚಂದಯ್ಯನ ಪರೀಕ್ಷೆಗಾಗಿ ಹಾಗೆ ಮಾಡಿರಬೇಕು ಎನಿಸುತ್ತದೆ. ಮುಗ್ಧಶಿವ ಆ ಹಣವನ್ನು ತಂದು ಶಿವಧ್ಯಾನದಲ್ಲಿ ನಿರತನಾದ ಚಂದಯ್ಯ ಸಿಟ್ಟುಬೆಂಕಿಯಾದ; “ಯಾರ ಮನೆಗೆ ಕನ್ನಹಾಕಿ ಈ ಹಣ ತಂದೆ?” ಎಂದು ಗದರಿಸಿದ. ಶಿವನು ದೈನ್ಯದಿಂದ, ‘ಬಸವಣ್ಣನಿಗೆ ನುಲಿಮಾರಿ ಬಂದ ಹಣವಿದು’ ಎಂದು ಕೈಮುಗಿದ ಚಂದಯ್ಯ ಕಾಯಕನಿಷ್ಠೆ ವರ್ಣನಾತೀತವಾದುದು. ನ್ಯಾಯಬೆಲೆಗೆ ನುಲಿ ಮಾರುವುದೇ ಕಾಯಕದ ಮೂಲೋದ್ದೇಶ. ಅದನ್ನು ಮೀರಿ ಹೆ‌ಚ್ಚಿನ ಹಣವನ್ನು ತಂದ ತನ್ನ ಸೇವಕನನ್ನು ಚಂದಯ್ಯ ಕ್ಷಮಿಸಲಿಲ್ಲ. ಆ ಹಣವನ್ನು ಬಸವಣ್ಣನಿಗೆ  ತಿರುಗಿಸಿಕೊಟ್ಟು ನುಲಿಯನ್ನು ತರಬೇಕೆಂದು ಶಿವನಿಗೆ  ಅಜ್ಞೆ ಮಾಡಿದ.

ಶಿವನು ಬಸವನಲ್ಲಿ ಬಂದು ನಡೆದುದನ್ನೆಲ್ಲ ತಿಳಿಸಿ. ಬಸವಣ್ಣನವರು ಗದಗದನೆ ನಡುಗಿದರು. ಶರಣರ ಕೋಪತಾಪ ಪ್ರಾಣಕ್ಕೆ  ಭಯವೆಂದು ಬಗೆದು ಬಸವಣ್ಣನವರು ಅ ವಿಷಯನ್ನು ಚನ್ನಬಸವಣ್ಣನಿಗೆ ತಿಳಿಸಿದರು. ಸರ್ವರೂ ಕೂಡಿ ಶರಣರ ಮಹಿಮೆಯನ್ನು ಕೊಂಡಾಡಿದರು. ನುಲಿಯಚಂದಯ್ಯ ಶರಣರ ಮಧ್ಯದಲ್ಲಿದ್ದ ಪ್ರಭುದೇವರನ್ನು ಪೂಜುಸಿ, ಪಾದೋದಕ ಪಡೆದು ಅದನ್ನು ಮೆದಿಯ ಮೇಲೆ ಸಿಂಪಡಿಸಿದನು. ಮೆದಿಯೆಲ್ಲ ಬಂಗಾರವಾಗಿ ಪರಿಣಮಿಸಿತು. ಆ ಚೋದ್ಯವನ್ನು ಕಂಡ ಶರಣರು ಚಂದಯ್ಯನ ಸ್ತುತಿಮಾಡಿದರು. ಅಲ್ಲಿಯೇ ನಿಂತಿದ್ದ ಶಿವನು ತನ್ನ ನಿಜರೂಪದೋರಿ ಚಂದಯ್ಯನನ್ನು ಕೈಲಾಸಕ್ಕೆ ಕೊಂಡೊಯ್ದು ಇಲ್ಲಿಗೆ ದುಂದುಮೆ ಮಂಗಳ ಹಾಡುತ್ತದೆ.

ನುಲಿಯಚಂದಯ್ಯನ ಕಥೆ ವೀರಶೈವ ಪುರಾಣಗಳಲ್ಲಿ  ಬಹು ಪ್ರಸಿದ್ಧವಾಗಿದೆ. ಅಲ್ಲಿರುವ ಚಂದಯ್ಯನ ಕಥೆಗೂ ದುಂದುಮೆಯ ಕಥೆಗೂ ದುಂದುಮೆಯ ಕಥೆಗೂ ವ್ಯತ್ಯಾಸವಿದ್ದುದನ್ನು ಗಮನಿಸಬೇಕು. ಜನಪದ ಕವಿಯ ದೃಷ್ಟಿ ಭಿನ್ನವಾಗಿರುವುದೇ ಅದಕ್ಕೆ ಕಾರಣ.

ನವಿಲುಗುಂದ ಬಸವಲಿಂಗ: ‘ಕೀಚಕವಧೆ’ಯ ಕರ್ತೃ ನವಿಲುಗುಂದದ ಬಸವಲಿಂಗ. ತಾನು ನವಿಲುಗುಂದದ ಪಂಚಗೃಹ ಹಿರೇಮಠದ ಪಟ್ಟದ ಚರಮೂರ್ತಿಸ್ವಾಮಿಗಳ ಶಿಷ್ಯನೆಂದು ಹೇಳಿಕೊಂಡಿದ್ದಾನೆ. ವಿರಾಟಪರ್ವದ ಕಥೆ ಮಹಾಭಾರತದಲ್ಲಿ ಪ್ರಸಿದ್ಧವಾದುದು. ಅದನ್ನು ಕೇಳದ ಕನ್ನಡಿಗರೇ ಇಲ್ಲ. ಆ ಕಥೆಯನ್ನೇ ಆಧಾರವಾಗಿಟ್ಟುಕೊಂಡು ರಚಿತವಾದ ಈ ದುಂದುಮೆ ಕೇಳಲು ರಸವತ್ತಾಗಿದೆ.

ಪಾಂಡವರು ಹನ್ನೆರಡು ವರ್ಷ ವನವಾಸವನ್ನು ಮುಗಿಸಿದ್ದಾರೆ. ಒಂದು ವರ್ಷದ ಅಜ್ಞಾತವಾಸವನ್ನು ಇನ್ನು ಮುಂದೆ ಕಳೆಯಬೇಕಾಗಿದೆ. ಆಗ ಅವರು ತಮ್ಮ ಅಸ್ತ್ರಗಳನ್ನು ಬನ್ನೀವೃಕ್ಷದ ಮೇಲೆ ಮುಚ್ಚಿಟ್ಟು ವೇಷ ಬದಲಿಸಿಕೊಂಡು ವಿರಾಟನ ಅರಮನೆಯಲ್ಲಿ ಊಳಿಗದ ಆಳಾಗುವರು . ಭೀಮನಿಗೆ ಬಾಣಸದ ಕೆಲಸ, ದ್ರೌಪದಿಗೆ ವಿರಾಟನ ಮಡದಿಯಾದ ಸುಧೀಷ್ಣೆಯ ಸೇವೆ, ಮಿಕ್ಕವರಿಗೂ ಒಂದೊಂದು ಕಾರ್ಯ. ದಿನಗಳು ಉರುಳುತ್ತವೆ. ಅಜ್ಞಾತವಾಸ ಸ್ವಲ್ಪದಿನಗಳಲ್ಲಿಯೇ ಮುಗಿಯ ಬಂದಿದೆ. ಸುಧೀಷ್ಣೆಯ ತಮ್ಮ ಕೀಚಕ ಮಹಾಕಾಮಿ. ಅವನು ದ್ರೌಪದಿಯನ್ನು ಕಂಡು ಮೋಹಗೊಳ್ಳುವನು. ಅವಳನ್ನು ಸೆರೆಹಿಡಿಯಲು ತವಕಿಸುತ್ತಾನೆ. ತನ್ನ ಅಕ್ಕನಿಗೆ ಹೇಳಿ ತನ್ನ ಮನದ ಇಚ್ಛೆಯನ್ನು ಪೂರೈಸಿಕೊಳ್ಳಲು ಯತ್ನಿಸುವನು. ಪರಸ್ತ್ರೀ ಸಂಗ ಸರಿಯಲ್ಲವೆಂದು ಅವಳು ಹೇಳಿದರೂ ಕೇಳುವುದಿಲ್ಲ. ದ್ರೌಪದಿಯನ್ನು ಕಾಡಲು ಯತ್ನಿಸುವನು. ದ್ರೌಪದಿಗೆ ದಿಕ್ಕುತೋಚದಂತಾಗಿ ತನ್ನ ಗಂಡಂದಿರನ್ನು ಬಂದ ಕುತ್ತದಿಂದ ಪಾರುಮಾಡಲು ಬೇಡಿಕೊಳ್ಳವಳು.

ಭೀಮ ಮಾತ್ರ ಅವಳ ಕೊರಗನ್ನು ಕೇಳುತ್ತಾನೆ. ಕೀಚಕನನ್ನು ಕೊಂದು ಮಡದಿಯ ತೊಂದರೆಯನ್ನು ನಿವಾರಿಸಲು ವಚನ ಕೊಡುತ್ತಾನೆ. ಅವರಿಬ್ಬರೂ ಕೂಡಿ ತಂತ್ರವೊಂದನ್ನು ಹೂಡುತ್ತಾರೆ. ದ್ರೌಪದಿ ನಗುನಗುತ್ತ ಹೋಗಿ ಕೀಚಕನಿಗೆ ಕಿವಿಮಾತು ಹೇಳುವಳು. ಅಂದಿನ ರಾತ್ರಿ ಗರಡೀಮನೆಯಲ್ಲಿ ಕೂಡಲು ಅಡ್ಡಿಯಿಲ್ಲವೆಂದು ಸವಿಮಾತು ಆಡುವಳು. ಕೀಚಕನಿಗೆ ಆಗ ಇಲ್ಲದ ಸಂತೋಷ. ದ್ರೌಪದಿ ಹೇಳಿದ ಮೇರೆಗೆ ಕೀಚಕನು ಗರಡೀಮನೆಯಲ್ಲಿ ಕೂತು ದಾರಿ ಕಾಯುವನು. ಭೀಮಸೇನ ಕಾಮಿನೀವೇಷವನ್ನು ಧರಿಸಿ ಬಂದು ಕೀಚಕನನ್ನು ಕೊಲ್ಲುತ್ತಾನೆ. ಇಲ್ಲಿಗೆ ದುಂದುಮೆ ನಿಲ್ಲುತ್ತದೆ.

ದುಂದುಮೆಪದ ಜನಪದ ಸತ್ವವನ್ನು ಕಳೆದುಕೊಳ್ಳಬಾರದು. ಕೀಚಕ ವಧೆಯಲ್ಲಿ ಈ ಮಾತು ಸಾರ್ಥಕವಾಗಿದೆ. ಒಟ್ಟಿನಲ್ಲಿ, ಈ ಹಾಡಿನ ಶೈಲಿ ಸಾಮಾನ್ಯವಾದರೂ ಪಾತ್ರ ಚಿತ್ರಣ ಮನಂಬುಗುವಂತೆ ಬಂದಿದೆಯೆಂಬುದನ್ನು ಮರೆಯಲಾಗದು.

ಗುರುಶಾಂತವೀರಣ್ಣ: ಕೀತ್ತೂರದುಂದುಮೆಯನ್ನು ರಚಿಸಿದ ಕವಿ ಗುರು ಶಾಂತವೀರಣ್ಣ. ಇವನು ಕಿತ್ತೂರು ನಾಡಿನವನು. ಮಲ್ಲಸರ್ಜದೊರೆ ರಾಜ್ಯವಾಳುತ್ತಿದ್ದಾಗ ಈತ ಜೀವಿಸಿದ್ದ. ಸಂಸ್ಥಾನದ ವೈಭವವನ್ನು ಈತ ಕಣ್ಣಾರೆ ಕಂಡಿದ್ದಾನೆ. ಕಿತ್ತೂರವೈಭವ ಘನತೆಯ ಶಿಖರಕ್ಕೆ ಮುಟ್ಟಿದುದು ಮಲ್ಲಸರ್ಜನ ಆಳಿಕೆಯಲ್ಲಿ. ಅವನು ಮಹಾಶೂರನಾಗಿದ್ದ; ವೈರಿಗಳಿಗೆ ಜುಮ್ಮೆನ್ನಲಿಲ್ಲ. ಆದರೆ ಅವನ ಕಾಲವೆಲ್ಲ ಹೋರಾಟದಲ್ಲಿಯೇ ಕಳೆದುಹೋಯಿತು. ಇವನ ಉಪಟಳವನ್ನು ಸಹಿಸದ ಪೇಶ್ವೆಯವರು ಈತನನ್ನು ಸೆರೆಹಿಡಿದು ಪುಣೆಯಲ್ಲಿ ಬಂಧಿಸಿಟ್ಟರು. ಸ್ವಾಭಿಮಾನಿಯಾದ ಮಲ್ಲಸರ್ಜದೊರೆ ಕೂಳುನೀರು ತೊರೆದು ಕಿತ್ತೂರನ್ನೇ ನೆನೆಯುತ್ತ, ಬಂಧನದಲ್ಲಿಯೇ ಬಳಲುತ್ತ ರೋಗಪೀಡಿತನಾದ. ರೋಗ ಉಲ್ಬಣಗೊಂಡು ಕ್ಷಯಕ್ಕೆ ಎಳೆಯಿತು. ಮರಣ ಸಮೀಪಿಸಿದಾಗ ಪೇಶ್ವೆಯವರು ಅವನನ್ನು ಕೈಬಿಟ್ಟರು. ಕಿತ್ತೂರನ್ನು ಇನ್ನೂ ಮುಟ್ಟಿರಲಿಲ್ಲ, ತನ್ನ ಕುಲದೈವವನ್ನು ಕಂಡು ಅರಮನೆಗೆ ಬರುವಷ್ಟರಲ್ಲಿಯೆ ಆತನ ಪ್ರಾಣಪಕ್ಷಿ ಹಾರಿಹೋಯಿತು. ಇಡೀ ಸಂಸ್ಥಾನವೇ ದುಃಖಸಾಗರದಲ್ಲಿ ಮುಳುಗಿತು. ಅವನ ನೆಚ್ಚಿನ ಮಡದಿ ವೀರರಾಣಿ ಚೆನ್ನಮ್ಮ ರಾಜ್ಯಸೂತ್ರಗಳನ್ನು ಹಿಡಿದು ನಡೆಸಬೇಕಾಯಿತು. ಇಷ್ಟು ಕಥೆಯನ್ನು ಆಧಾರವಾಗಿಟ್ಟುಕೊಂಡು ಕವಿ ದುಂದುಮೆ ಹಾಡಿದ್ದಾನೆ. ಹಾಡಿನ ಒಡಲಲ್ಲಿ ತುಂಬಿರುವ ಒಂದೊಂದು ಶಬ್ದ ದೇಶಾಭಿಮಾನದ ನೀರಲ್ಲಿ ಅದ್ದಿ ತೆಗೆದ ಮುತ್ತಿನಂತೆ ಇವೆ. ಸ್ವದೇಶಾಭಿಮಾನವನ್ನು ಕುದುರಿಸುವ  ಈ ದುಂದುಮೆಪದ ಸರಳ ಶೈಲಿಯಲ್ಲಿದ್ದು ಹೃದಯಂಗಮವಾಗಿದೆ.

ಮಾಗಡಿ ಬಸವ: ಈತ ಕಿತ್ತೂರ ಸಂಸ್ಥಾನದ ಆಸ್ಥಾನ ಕವಿ. ಈತ ಅನೇಕ ಹೋಳೀಹಾಡು, ದುಂದುಮೆಪದಗಳನ್ನು ಬರೆದಿರುವುದಾಗಿ ತಿಳಿದುಬಂದಿದೆ. ಈತನ ಊರು ಶಿರಹಟ್ಟಿ ತಾಲೂಕಿನಲ್ಲಿರುವ ಮಾಗಡಿ. ಆದ್ದರಿಂದಲೇ ಈತನಿಗೆ ಮಾಗಡಿಬಸವ ಎಂದು ಹೆಸರು ಬಂದಿದೆ.

ಮಲ್ಲಸರ್ಜದೊರೆ ತೀರಿಕೊಂಡ. ಆತನಿಗೆ ಮಕ್ಕಳಿದ್ದಿಲ್ಲವಾದ್ದರಿಂದ ರಾಣಿ ಚನ್ನಮ್ಮ ತನ್ನ ದೇಶಗತಿಯು ಮುಂದುವರಿಯಲೆಂದು ದತ್ತಕ ಮಗನನ್ನು ಪಡೆದು ಗಾದೆಯ ಮೇಲೆ ಕೂಡ್ರಿಸಿ ತಾನೇ ರಾಜ್ಯಭಾರ ವಹಿಸಿಕೊಂಡಳು. ಇದು ಬ್ರಿಟಿಶರ ಮನಸ್ಸಿಗೆ ಬರಲಿಲ್ಲ. ಸಂಸ್ಥಾನದ ಅಧಿಕಾರಿಗಳಲ್ಲಿ ಒಡಕು ಹುಟ್ಟಿಸಿ ದತ್ತಕ ಪ್ರಕರಣ ಕಾಯ್ದೆಶೀರ ನಡೆದಿಲ್ಲವೆಂದು ಸಾರಿದರು. ವಾರಸಾ ಇಲ್ಲದ ಕಿತ್ತೂರು ತಮ್ಮದೆಂದು ವಾದಿಸತೊಡಗಿದರು. ಇದು ಸಂಸ್ಥಾನವನ್ನು ನುಂಗುವ ಒಳಸಂಚೆಂದು ಅರಿತ ರಾಣಿ ಚನ್ನಮ್ಮ ಬ್ರಿಟಿಷರ ಮೇಲೆ ಯುದ್ಧ ಸಾರಿದಳು. ಹಕ್ಕಿಗಾಗಿ ಹೋರಾಟ ನಡೆಸಿದಳು. ಸ್ವಾಭಿಮಾನ, ಸ್ವಾತಂತ್ರ್ಯಾಭಿಮಾನ, ದೇಶಾಭಿಮಾನ, ಇವೆಲ್ಲ ಗಟ್ಟಿಗೊಂಡಂತೆ ಇದ್ದ ಚನ್ನಮ್ಮ ಬ್ರಿಟಿಶ ಗುಂಡಿಗೆ ಬೆದರದೆ ಕುದುರೆಯನ್ನೇರಿ ಯುದ್ಧ ಮಾಡಿದಳು. ಕಿತ್ತೂರ ಪ್ರಜೆಗಳ ಶೌರ್ಯ ಧೈರ್ಯ ಹೊಗಳುವಂತಹದು. ಕಂಪನಿ ಸರಕಾರ ಚನ್ನಮ್ಮನ ವೀರವಾಣಿಗೆ ಬೆದರಿಹೋಯಿತು. ಯುದ್ಧದಲ್ಲಿ ಥ್ಯಾಕರೆ ಸತ್ತುಹೋದ.

ಹೊರಗಿರುವ ಶತ್ರುಗಳಿಗಿಂತ ಒಳಗಿರುವ ಶತ್ರುಗಳು ಮಹಾದುಷ್ಟರು ಕೆಲವರು ಬ್ರಿಟಿಶರ ಆಶೆ ಆಮಿಷಗಳಿಗೆ ಒಳಗಾಗಿ ಕಿತ್ತೂರ ಸಂಸ್ಥಾನವನ್ನೇ ಬುಡ ಮೇಲು ಮಾಡುವ ಕಾರ್ಯ ನಡೆಸಿದರು. ಮದ್ದುಗುಂಡಿಗೆ ಎಣ್ಣೆ ಸುರುವಿ ದೇಶ ದ್ರೋಹಕ್ಕೆ ಕಳಸವಿಟ್ಟರು. ಉಪ್ಪು ಉಂಡ ಮನೆಗೆ ಎರಡು ಬಗೆದ ದ್ರೋಹಿಗಳವರು; ಮಾಡುವದೇನು? ಕಿತ್ತೂರ ದುರ್ದೈವ!

ಯುದ್ಧದಲ್ಲಿ ಪೆಟ್ಟುತಿಂದ ಕುಂಪನಿ ಸರಕಾರ ಸುಮ್ಮನೆ ಕೂಡ್ರಲಿಲ್ಲ; ಸುಸಜ್ಜಿತ ಸೈನ್ಯದೊಂದಿಗೆ ಹೊತ್ತುನೋಡಿ ಕಿತ್ತೂರಿಗೆ ಮುತ್ತಿಗೆ ಹಾಕಿತು. ಚನ್ನಮ್ಮನ ಕಾರ್ಯ ಮಣ್ಣು ಗೂಡುವಂತೆ ಹೋರಾಡಿತು. ಕಿತ್ತೂರ ಸೈನ್ಯ ದಿಕ್ಕು ಪಾಲಾಯಿತು. ಬ್ರಿಟಿಶರು ಚನ್ನಮ್ಮನನ್ನು ಬಂಧಿಸಿ ಬೈಲಹೊಂಗಲದಲ್ಲಿಟ್ಟರು. ಇದು ಕಿತ್ತೂರ ಸಂಸ್ಥಾನದ ಕಣ್ಣೀರಿನ ಕಥೆ. ಈ ಕದನಗೀತೆಯನ್ನು ದುಂದುಮೆಯ ಧಾಟಿಯಲ್ಲಿ ಹಾಡಿ, ಕಿತ್ತೂರ ಸ್ವಾಂತಂತ್ರ್ಯದ ಹೋರಾಟವನ್ನು ಅಜರಾಮರವಾಗಿ ಮಾಡಿದ ಶ್ರೇಯಸ್ಸು ಮಾಗಡಿಬಸವನಿಗೆ ಸಲ್ಲಬೇಕು. ಕನ್ನಡ ನಾಡು ನುಡಿಯ ಅಭಿಮಾನ ಈ ಜನಪದಗೀತೆಯಲ್ಲಿ ಮೂಡಿರುವುದನ್ನು ಅರಿಯಬಹುದು.

ಮುನಿಪುರದ ಪ್ರಭುವಿನ ಶಿಷ್ಯ: ಶಿವನಾಮದಿಂದ ಸವೆದೀತು ಪಾಪ! — ಈ ದುಂದುಮೆಯನ್ನು ಬರೆದ ಕವಿಯ ನಿಜನಾಮ ತಿಳಿಯದು. ಆತ ದಕ್ಷಿಣಕಾಶಿಯೆನಿಸಿದ ಪಂಪಾಕ್ಷೇತ್ರದ ಪಶ್ಚಿಮಕ್ಕಿರುವ ಮುನಿಪುರದಲ್ಲಿ ಇದ್ದನಂತೆ. ಪ್ರಭುವಿನ ಕರುಣದಿಂದ ಈ ಕೃತಿ ರಚಿಸಿರುವೆನೆಂದು ತಾನೇ ಕೊನೆಯಲ್ಲಿ ಹೇಳಿಕೊಂಡಿದ್ದಾನೆ.

ಜನಪದದಲ್ಲಿ ಕರ್ಮದ ಮಾತು ಬೇರುಬಿಟ್ಟಿದೆ. ಪಾಪ-ಪುಣ್ಯಗಳ ಮೇಲೆಯೇ ಅವರು ತಮ್ಮ ಜೀವನಕ್ರಮವನ್ನು ಅರಿಯುತ್ತಾರೆ. ತಾನು ಮಾಡಿದ ಕರ್ಮ ತನ್ನ ಬೆನ್ನಬಿಡದೆಂಬುದು ಅವರ ದೃಢನಂಬಿಕೆ. ಈ ನಂಬಿಕೆ ಬಲವಾಗಿರುವುದರಿಂದಲೇ ಅನ್ಯಾಯ ಅನೀತಿಗಳಿಗೆ ಅವರು ಅಂಜುತ್ತಾರೆ, ಅಳುಕುತ್ತಾರೆ. ಪಾಪ ಮಾಡಿದವನಿಗೆ ನಾಯಕನರಕ ತಪ್ಪದೆಂದು ನಂಬಿ ಆ ನರಕದ ಕಲ್ಪನೆಯನ್ನು ವಿಸ್ತರಿಸಿ ಹೇಳಿ, ಜನತೆಯಲ್ಲಿ ಸದ್ಧರ್ಮ, ಸುನೀತ, ಸೂಳ್ನುಡಿ ಹೆಚ್ಚುವಂತೆ ಮಾಡುವರು. ಈ ಕಲ್ಪನೆಯ ಹಿನ್ನಲೆಯಲ್ಲಿ ಹುಟ್ಟು ಗುರುಡಿಯ ದುಂದುಮೆ ಹುಟ್ಟಿ ಕೊಂಡಿದೆ. ಇದು ನೀತಿಯನ್ನು ಜನತೆಯಲ್ಲಿ ಬಿತ್ತಿಬೆಳೆಸುವ ಒಂದು ದೊಡ್ಡ ಪಾತ್ರವನ್ನು ಆಡಬಲ್ಲುದು.

ಹುಟ್ಟುಗುರುಡಿಯ ಕಥೆ ಕಾಲ್ಪನಿಕವಾದುದು. ಕೈಕಾದೇಶದ ಕನಕಾವತೀ ಪಟ್ಟಣ. ಆ ನಗರದಲ್ಲಿ ಕುಲಹದಿನೆಂಟು ಜಾತಿಯ ಜನರಿದ್ದಾರೆ. ಅವರ ಮಧ್ಯದಲ್ಲಿ ದಾನವನೆಂಬ ಬ್ರಾಹ್ಮಣ ಸೌಮಿನಿಯೆಂಬ ತನ್ನ ಸತಿಯೊಡನೆ ಸುಖದಿಂದ ಇರುತ್ತಿರಲು ಅವರಿಗೊಂದು ಕನ್ಯಾರತ್ನ ಜನಿಸಿತು. ಮಗಳು ಯೌವನಕ್ಕೆ ಬರುತ್ತಲೇ ತಂದೆತಾಯಿ ಅವಳಿಗೆ ಮದುವೆ ಮಾಡಿದರು. ಪೂರ್ವಜನ್ಮದ ಕರ್ಮವೆನ್ನುವಂತೆ ಕೆಲವು ಕಾಲ ಗತಿಸಲು ಆ ಹುಡುಗಿ ವಿಧವೆಯಾದಳು. ಕಾಮನ ಅಂಡಲೆಯಿಂದ ಬಳಲಿಬೆಂಡಾದಳು. ಪರಪುರುಷ ಸಂಗಕ್ಕೆ ಅವಳ ಮನವೆಳಸಿತು. ಹಾದರವೇ ಅವಳ ನಿತ್ಯಕಾರ್ಯವಾಗಿ ಗರ್ಭಧರಿಸಿದಳು. ತಂದೆತಾಯಿ ಮಾನಕ್ಕೆ ಅಂಜಿ ಮಗಳನ್ನು ಮನೆಬಿಟ್ಟು ದೂಡಿದರು. ಅವಳು ದಾರಿತೋಚದೆ ಊರು ಬಿಟ್ಟು ಅಡವಿಯಲ್ಲಿ ನಡೆದಾಗ ಅವಳಿಗೊಬ್ಬ ಬೇಡ ಕೂಡಿದ. ಇಬ್ಬರೂ ಜೊತೆಯಾಗಿ ಬಾಳತೊಡಗಿದರು. ಅವರಿಗೆ ನಾಲ್ಕಾರು ಮಕ್ಕಳಾದವು. ಬೇಡನ ಸಹವಾಸದಿಂದ ಕಚ್ಚುವುದು ಕುಡಿಯುವುದು ಅವಳ ನಿತ್ಯ ಜೀವನವಾಯಿತು. ಒಮ್ಮೆ ತನ್ನ ಗಂಡ ಪರವೂರಿಗೆ ಹೋದಾಗ ಮಾಂಸದೂಟಕ್ಕಾಗಿ ಮನೆಯಲ್ಲಿರುವ ಆಕಳ ಕರುವನ್ನೇ ಕೊಂದು ತಿಂದಳು. ಕರು ಹುಲಿಬಾಯಿಗೆ ತುತ್ತಾಯಿತೆಂದು ಸುದ್ದಿ ಹಬ್ಬಿಸಿದಳು. ಮಹಾಪಾಪಿಯಾದ ಅವಳು ಅಂದು ರಾತ್ರಿ ಮಲಗಿಕೊಂಡಾಗ ಅವಳ ಪ್ರಾಣಪಕ್ಷಿ ಹಾರಿಹೋಯಿತು. ಯಮದೂತರು ಬಂದು ಅವಳನ್ನು ಯಮಲೋಕಕ್ಕೆ ಎಳೆದೊಯ್ದರು.

ಯಮನಗರಿಯಲ್ಲಿ ಪ್ರತಿಯೊಬ್ಬರ ಪಾಪ-ಪುಣ್ಯಗಳ ವಿಚಾರ ಆಗಲೇಬೇಕು. ಇಂತಹ ಪಾಪ ಮಾಡಿದವನಿಗೆ ಇಂತಿಂತಹ ದಂಡನೆಯೆಂದು ಅಲ್ಲಿ ತೀರ್ಮಾನವಾಗಿ, ಮಾಡಿದವರು ಉಣ್ಣುತ್ತಾರೆ ಮಣಿಯಂಥ ಕಡಬು. ಆ ರೀತಿ ಆ ಹೆಣ್ಣು ಮಗಳಿಗೂ ದಂಡನೆ ಮಾಡಿ ಭೂಮಿಯಲ್ಲಿ ಪುನ: ಹುಟ್ಟುವಂತೆ ಅವಳಿಗೆ ಯಮದೇವ ಆಜ್ಞೆ ಮಾಡಿದ. ಮರುಜನ್ಮದಲ್ಲಿ ಅವಳು ಒಮ್ಮೆಯಾದರೂ ಶಿವನಾಮ ಉಚ್ಚರಿಸಿದರೆ ಅವಳ ಪಾಪ ಪರಿಹಾರವಾಗುವುದೆಂದು ತೀರ್ಮಾನ ಮಾಡಿದ.

ಆ ಪಾಪಿ ಭೂಲೋಕಕ್ಕೆ ಬಂದು ಅಂತ್ಯಜರ ಉದರದಲ್ಲಿ ಜನಿಸುವಳು. ಹುಟ್ಟುತ್ತಲೇ ಅವಳು ಕುರುಡಿ. ಈ ಹುಟ್ಟುಗುರುಡಿ ಹುಟ್ಟಿದ ದಿನವೇ ತಂದೆ ತಾಯಿ ಸತ್ತುಹೋದರು. ಹಿಂದಣ ಜನ್ಮದ ಅವಳ ಪಾಪ ಈ ಜನ್ಮದಲ್ಲಿಯೂ ಬಿಡದೆ ಕಾಡತೊಡಗಿತು. ಅಣ್ಣ ತಮ್ಮಂದಿರು ಅವಳನ್ನು ಮನೆಬಿಟ್ಟು ಓಡಿಸಿದರು. ಬೀದಿಯಲ್ಲಿ ಅಲೆಯುವ ಈ ಕುರುಡಿಗೆ ಕುಷ್ಟರೋಗ ಬಡೆಯಿತು. ಮುಂದೆ ಶಿವರಾತ್ರಿ ಸಮಯ; ಕುರುಡಿಯ ಬಾಳು ಹಸನಾಗುವ ಕಾಲ ಬಂದಂತೆ ಗೋಕರ್ಣದ ಮಹಾಬಳೇಶ್ವರನ ಜಾತ್ರೆ ಬಂತು. ಮಾತಂಗಿ ಎನ್ನುವ ಭಿಕ್ಷುಕಿಯೊಬ್ಬಳು ಗೋಕರ್ಣಕ್ಕೆ ನಡೆದಿದ್ದಳು. ಈ ಹುಟ್ಟುಗುರುಡಿಯನ್ನು ಕಂಡು ಅವಳಿಗೆ ಕನಿಕರವೆನಿಸಿತು. ಕೈಯಲ್ಲಿ ಕೋಲುಕೊಟ್ಟು ಅವಳನ್ನೂ ಕರೆದೊಯ್ದಳು. ಗೋಕರ್ಣ ಕಂಡರೂ ಆ ಕುರುಡಿಯ ಪಾಪ ತೀರಲಿಲ್ಲ. ರಕ್ತ ಮಾಂಸ ಕೀವು ಹೊರಬಿದ್ದು ಹರಿಯುವ ಅವಳ ದೇಹ ಜನರಿಗೆ ಓಕರಿಕೆಯನ್ನುಂಟುಮಾಡಿತು. ಅವಳ ಬಾಯಿಂದ “ಶಿವ ಶಿವ” – ಎನ್ನುವ ಶಬ್ದ ಹೊರಬರತೊಡಗಿತು. ನಂಬಿ ಕರೆದಡೆ ಓ ಎನ್ನನೇ ಶಿವನು?

ಆ ಹೊತ್ತಿಗೆ ದೇವರಗುಡಿಯಿಂದ ಮರಳಿ ಬರುತ್ತಿದ್ದ ಭಕ್ತನೊಬ್ಬ ಇವಳ ಆರ್ತಸ್ವರ ಕೇಳಿ ಗಕ್ಕನೆ ನಿಂತ. ದಾನ ಕೊಡಬೇಕೆಂದರೆ ಅವನ ಕೈಯಲ್ಲಿ ಒಂದು ಕಾಸು ಸಹ ಇರಲಿಲ್ಲ. ಕಂಡೂ ಕಾಣದಂತೆ ಹೋಗಬಾರದೆನಿಸಿ ಪೂಜಾರಿ ಕೊಟ್ಟ ಹೂವಿನ ಎಸಳೊಂದನ್ನು ಅವಳ ಕೈಯಲ್ಲಿ ಚೆಲ್ಲಿ ಹೊರಟುಹೋದ. ಹಸಿದು ಹೊರಳಾಡುವ ಅವಳಿಗೆ ಆ ಹೂವಿನ ಎಸಳಿನಿಂದ ಆಗಬೇಕಾದುದೇನು? ಅವಳು ಸಿಟ್ಟಿನಿಂದ ಅದನ್ನು ಆ ಕಡೆಗೆ ಬೀಸಾಡಿದಳು. ಸಮೀಪದಲ್ಲಿಯೇ ಒಂದು ಶೂನ್ಯ ಲಿಂಗವಿದ್ದು ಅವಳೊಗೆದ ಹೂವಿನೆಸಳು ಆ ಲಿಂಗದ ತಲೆಯ ಮೇಲೆ ಬಿತ್ತು. ಸಂತೃಪ್ತನಾದ ಶಿವ ಅವಳಿಗೆ ಪ್ರತ್ಯಕ್ಷನಾಗಿ ಕೈಲಾಸಕ್ಕೆ ಕರೆದೊಯ್ದ. ಶಿವನಾಮದಿಂದ ಪಾಪನಾಶವಾಗುವುದೆಂದು ಹೇಳಿ, ಕವಿ ತನ್ನ ದುಂದುಮೆ ಮುಗಿಸಿದ್ದಾನೆ. ಈ ಕೃತಿಯ ಶೈಲಿ ಸರಳವಾಗಿದ್ದು ಕೇಳಲು ಮಧುರವಾಗಿದೆ.

ದುಂದುಮೆಗಳ ವಸ್ತುವನ್ನು ವಿವರಿಸಿದ್ದಾಯಿತು. ದುಂದುಮೆಗೆ ಯಾವುದೋ ಒಂದು ಕಥೆ ಇಲ್ಲವೆ ಸನ್ನಿವೇಶ, ವರ್ಣನೆ, ಅಗತ್ಯವೆಂಬುದು ಮನವರಿಕೆಯಾಯಿತು. ಹೋಳೀಹಾಡಿನಂತೆ ದುಂದುಮೆ ಯಾವಾಗಲೂ ಶೃಂಗಾರಕ್ಕೆ ಸೋತು ನಡೆಯದು. ಅದರಂತೆ ಅಶ್ಲೀಲಕ್ಕೂ ಎಳೆಯದು. ಯಾವ ರಸವಿದ್ದರೂ ಸರಿ; ದುಂದುಮೆಪದ ಹುಟ್ಟಬಲ್ಲದು. ವೀರಕ್ಕೆ ಮಾತ್ರ ಅದರಲ್ಲಿ ಹೆಚ್ಚಿನ ಪ್ರಾಶಸ್ತ್ಯ. ಮಿಕ್ಕ ರಸಗಳನ್ನೂ ಅದು ಹರಿಸಬಲ್ಲುದು. ಜನತೆಯಲ್ಲಿ ನೀತಿಯನ್ನು ಬಿತ್ತಲೆಂದೇ ಹುಟ್ಟಿದಂತಿದೆ ದುಂದುಮೆ.

ದುಂದುಮೆಯ ವೈಶಿಷ್ಟ್ಯವನ್ನು ನಾವು ಕಾಣುವುದು ಅದರ ಶೈಲಿಯಲ್ಲಿ. ಅದರ ಶೈಲಿ ವಿವಿಧ ರೀತಿಯಾಗಿ ಹರಿದುಬರುತ್ತದೆ. ಅದಕ್ಕೆ ಮೂಲಕಾರಣ ಆ ಹಾಡಿಗೆ ಹೊಂದಿಕೊಂಡು ಬರುವ ಪಕ್ಕವಾದ್ಯ. ದಿಮ್ಮು ನುಡಿದಂತೆ ದುಂದುಮೆ ಗತಿ ಬದಲಿಸಿಕೊಳ್ಳುತ್ತದೆ. ಒಮ್ಮೊಮ್ಮೆ ಹೋಳೀಹಾಡಿನ ಮಟ್ಟಕ್ಕೆ ಬಂದು, ಮಗದೊಮ್ಮೆ ಕೆಳಗಿಳಿದು, ವಿವಿಧ ಧಾಟಿಯನ್ನು ಅದು ಅಳವಡಿಸಿಕೊಳ್ಳುತ್ತದೆ. ಹೋಳೀ ಹಾಡನ್ನು ತುಂಬಿಹರಿಯುವ ನದಿಗೆ ಹೋಲಿಸಿದರೆ ದುಂದುಮೆಯನ್ನು ದಿಡುಗಿನ ಹಳ್ಳಕ್ಕೆ ಹೋಲಿಸಬಹುದು. ದುಂದುಮೆಗೆ ರಭಸ ಹೆಚ್ಚು. ಉತ್ಸಾಹವೇ ಅದರ ಜೀವ ಹೀಗಿರುವುದರಿಂದಲೇ ದುಂದುಮೆಯ ಹಾಡಿನ ನುಡಿ ಒಮ್ಮೊಮ್ಮೆ ಚೌಪದಿಯ ಚೌಕಿಗೆ ಬಂದು ನಿಲ್ಲುತ್ತದೆ. ಇದೊಂದು ಅಂಶಗಣದ ಮಟ್ಟು; ಶಿಥಿಲತೆ ಅದರ ಒಳಗುಟ್ಟು. ದುಂದುಮೆ ತಾಳಬದ್ಧವಾಗಿ ವಿವಿಧ ರಾಗಗಳಿಗೆ ಹೊಂದಿಕೊಳ್ಳುವುದರ ವೈಶಿಷ್ಟ್ಯ ಶಿಥಿಲತೆಗೆ ಹೆಸರಾದ ಅಂಶಗಣಗಳಲ್ಲಿಯೇ ಹುದುಗಿದೆ. ಹಾಡಿಕೆ ಬಲ್ಲವರಿಗೆ ಇದರ ಮರ್ಮ ಹೆಚ್ಚು ಸ್ಪಷ್ಟವಾಗಿ ಕಾಣುವುದು.

ದುಂದುಮೆಸಾಹಿತ್ಯ ಉತ್ತರಕರ್ನಾಟಕದಲ್ಲಿ ವಿಪುಲವಾಗಿದೆ. ಸಂಗ್ರಹ ಕಾರ್ಯ ಭರದಿಂದ ಸಾಗಬೇಕು. ವಿಲಂಬವಾದರೆ ಅದು ಕೈಗೆ ಸಿಗದೆಹೋಗಬಹುದಾಗಿದೆ. ಸಂಗ್ರಹಕಾರ್ಯ ಹೇಳುವಷ್ಟು ಸುಲಭವಲ್ಲ. ಸ್ವತಂತ್ರವಾಗಿ ಒಂದು ಉದ್ಗ್ರಂಥ ಬರೆಯಬಹುದು. ತಾಡವೋಲೆ ಗ್ರಂಥಗಳನ್ನು ಮುಂದಿಟ್ಟುಕೊಂಡು ಮಹಾಕೃತಿಯೊಂದನ್ನು ಸಂಪಾದಿಸಬಹುದು. ಆದರೆ ಜನಪದಸಾಹಿತ್ಯ ಸಂಗ್ರಹ ಕಾರ್ಯ ಹಗುರಾದುದಲ್ಲ. ಹೀಗೆ ಹಾಡುವವರ ಬಾಯಿಯಿಂದ ಒಂದೊಂದು ಪದ್ಯ ಬಿಡಿಸಿಕೊಳ್ಳುವುದೆಂದರೆ ಹುಲಿಯ ಬಾಯಲ್ಲಿರುವ ಚಿಗರೆಯ ಮರಿಯನ್ನು ತಿರುಗಿ ಪಡೆದಷ್ಟು ಕಷ್ಟ. ಕೆಲಸ ಕಷ್ಟದ್ದೆಂದು ಕೈಕಟ್ಟಿ ಕುಳಿತರೆ ಜನಪದ ಸಾಹಿತ್ಯ ಉಳಿಯುವದೆಂತು? ಬೆಳೆಯುವುದೆಂತು? ಎಷ್ಟೇ ಅಡ್ಡಿ ಆತಂಕ ಎದುರಾದರೂ ಧೈರ್ಯಗುಂದದೆ ಕಾರ್ಯ ನಿರ್ವಹಿಸಬೇಕಾಗಿದೆ. ಈ ಮಹಾತ್ಕಾರ್ಯದಲ್ಲಿ ಸಹಾಯ ಮಾಡಿದವರು ಸಾಕಷ್ಟು ಜನ. ಅವರಿಗೆಲ್ಲ ನಾವು ಋಣಿಯೆಂದರೆ ತೀರದು. ಈ ಕೃತಿಯ ಸಂಪಾದನೆ ನಡೆದಾಗ ನಮ್ಮ ಅಧ್ಯಯನ ಸಂಸ್ಥೆಯ ಸಹಾಯಕ ಸಂಶೋಧಕ ಶ್ರೀ ವೀರೇಶ ವಾಲಿ ಅವರು ’ಕಿತ್ತೂರ ದುಂದುಮೆ’ಯನ್ನು ಒದಗಿಸಿಕೊಟ್ಟರು. ಗುಲಬರ್ಗಾದಲ್ಲಿರುವ ಇನ್ನೊಬ್ಬ ಸಹಾಯಕ ಸಂಶೋಧಕ ಶ್ರೀ ಸಂಗಮೇಶ ಸವದತ್ತಿ ಮಠ ಅವರು ಯಲಬುರ್ಗಿಯ ಹೂಲಿಕಂಥಿ ಹಿರೇಮಠದ ಶ್ರೀಗಳವರಲ್ಲಿದ್ದ ಹುಟ್ಟು ಗುರುಡಿಯ ದುಂದುಮೆ ಪ್ರತಿಯನ್ನು ತಂದುಕೊಟ್ಟು ಸಂಪಾದನೆಯ ಕಾರ್ಯಕ್ಕೆ ನೆರವಾದರು. ಇವರಿಬ್ಬರನ್ನೂ ಈ ಪ್ರಸಂಗದಲ್ಲಿ ನೆನೆಯದೆ ಇರಲಾರೆ.

ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾಗಿರುವ ಡಾ. ಆರ್. ಸಿ. ಹಿರೇಮಠ ಎಂ.ಎ.ಪಿಎಚ್.ಡಿ. ಅವರು ಜನಪದದ ಅಧ್ಯಯನ, ಅಧ್ಯಾಪನ, ಹಾಗೂ ಸಂಶೋಧನೆಗಳಿಗೆ ಯತ್ನಮೀರಿ ಅನುಕೂಲತೆಮಾಡಿಕೊಡುತ್ತಿದ್ದಾರೆ. ಈಗಾಗಲೇ ಜನಪದದಲ್ಲಿ ಎಂ.ಎ. ಪದವಿಗಾಗಿ ಓದಲು ಅನುವು ಮಾಡಿದ್ದಾರೆ. ಅವರ ಸಹಾಯ ಸಲಹೆಗಳಿಗಾಗಿ ನಾವು ಋಣಿಯಾಗಿದ್ದೇವೆ. ಕುಲಸಚಿವರಾದ ಶ್ರೀ ಎಸ್. ಎಸ್. ಒಡೆಯರ ಎಂ.ಎ. ಎಲೆಲ್.ಬಿ. ಅವರು ಎಂದಿನಂತೆ ಜೀವನ ಜೋಕಾಲಿಯ ಏರಿಕೆಗೆ ಅಗತ್ಯವಾದುದನ್ನು ನೀಡುತ್ತಲಿದ್ದಾರೆ. ಅವರಿಗೂ ಋಣಿಯೆಂದು ಹೇಳಬಯಸುತ್ತೇವೆ.

ಕರ್ನಾಟಕ ವಿಶ್ವವಿದ್ಯಾಲಯದ ಪ್ರಕಟನ ವಿಭಾಗದ ನಿರ್ದೇಶಕರಾದ ಶ್ರೀ ಚನ್ನವೀರ ಕಣವಿಯವರು ಜೀವನ ಜೋಕಾಲಿಯ ಪ್ರಕಟನೆಗಳು ಅಂದವಾಗಿ ಬರುವಂತೆ ನೋಡಿಕೊಳ್ಳುತ್ತಿದ್ದಾರೆ. ಅವರಿಗೂ ಅಭಿನಂದನೆಗಳು.

ಧಾರವಾಡದ ಶಾರದಾ ಪ್ರೆಸ್ಸಿನ ಮಾಲಿಕರು ಈ ಕೃತಿಯನ್ನೂ ಅಂದವಾಗಿ ಮುದ್ರಿಸಿದ್ದಾರೆ. ಒಟ್ಟಿನಲ್ಲಿ ಸಂಪಾದನ ಕಾರ್ಯದಲ್ಲಿ ನೆರವಾದ ಸರ್ವರಿಗೂ ನಮ್ಮ ಅಭಿನಂದನೆಗಳು.

-ಎಂ.ಎಸ್.ಸುಂಕಾಪುರ
ಕನ್ನಡ ಅಧ್ಯಯನ ಪೀಠ
ಕರ್ನಾಟಕ ವಿಶ್ವವಿದ್ಯಾಲಯ
ಧಾರವಾಡ
೧೦-೧-೧೯೭೫