ಜೀವ ವಿಕಾಸದ ಘಟ್ಟಗಳಲ್ಲಿ ಮಾನವನ ಅಸ್ತಿತ್ವ ಅತ್ಯಂತ ಪ್ರಮುಖವಾದುದಾಗಿದೆ. ಮಾನವ ಮತ್ತು ನಿಸರ್ಗಗಳ ಸಂಪರ್ಕ ಗಾಢವಾಗುತ್ತ ಬೆಳೆದಂತೆಲ್ಲ, ನಿಸರ್ಗದ ಎಲ್ಲ ಘಟನೆಗಳು ಬೆರಗು ಮೂಡಿಸಿದವು. ಧಿಮ್ಮೆಂದು ಸಿಡಿಯುವ ಜ್ವಾಲಾಮುಖಿ, ದಕ್ಕಿದ್ದನ್ನು ಕೊಚ್ಚಿ ಸೆಳೆದೊಯ್ಯುವ ಭೀಕರ ಪ್ರವಾಹ, ಇದ್ದಕ್ಕಿದ್ದಂತೆ ಮೂಡುವ ಸೂರ್ಯ ಮತ್ತು ಕವಿಯುವ ಗಾಢ ಕತ್ತಲೆ ಇತ್ಯಾದಿಗಳು ಯಾವುದೇ ಆದಿಮ ಗುಂಪಿನ ವ್ಯತ್ಯಾಯ ಭಯ ವಿಸ್ಮಯಗಳಾಗಿ ಸೀಮಿತವಾಗದೇ ಇಡೀ ವೃಂದದ ಸಾಮೂಹಿಕ ಅನುಭವಗಳಿಗೆ ಕಾರಣವಾಗುತ್ತವೆ. ಇಂಥ ಅನುಭವಗಳು ಕೇವಲ ಅವರ ಭಾವನಾ ಪ್ರಪಂಚಕ್ಕೆ ನಿರ್ದಿಷ್ಟ ಗೊಳ್ಳದೆ, ಅನಿಯಂತ್ರಿತ ಶಕ್ತಿಗಳ ಅದ್ಭುತ, ಅಮಾಯಕ ಭಯೋತ್ಪಾದಕ ಕಲ್ಪನೆಗಳಿಗೆ ಪ್ರೇರಣೆಯನ್ನು ಒದಗಿಸುತ್ತವೆ.

ಅಗೋಚರ ಶಕ್ತಿಗಳು ಮೂರ್ತರೂಪಗೊಳ್ಳುವ ಕಾರಣವಾಗಿ ಬೆಂಕಿಯ ಮೂರ್ತೀಕರಣದಲ್ಲಿ ಅಗ್ನಿದೇವತೆ, ಬೆಳಕಿನ ಮೂರ್ತೀಕರಣದಲ್ಲಿ ಸೂರ್ಯದೇವ, ಕೃಷಿಕಾರ್ಯಗಳ ಹಿನ್ನೆಲೆಯಲ್ಲಿ ಭೂಮಿ, ಭೂದೇವಿ, ಭೂಮಿತಾಯಿ, ಗೋಮಾತೆ, ಬಿರುಗಾಳಿ, ಧಾರಾಕಾರ ಮಳೆಗಳು, ವರುಣ, ಇಂದ್ರ ಮುಂತಾದ ದೇವತೆಗಳ ಸೃಷ್ಟಿಗೆ ಕಾರಣವಾದವು. ಈ ದೈವಿಶಕ್ತಿಗಳು, ವ್ಯಷ್ಟಿ ಮತ್ತು ಸಮಷ್ಟಿಗಳ ಹಿತರಕ್ಷಣೆ ಮಾಡಬೇಕು ಹಾಗೂ ಸುಖ ಸಮೃದ್ಧಿಯನ್ನು ಕರುಣಿಸಬೇಕೆಂಬ ಹಿನ್ನೆಲೆಯಲ್ಲಿ ಅವುಗಳ ಅರ್ಚನೆ, ನೇಮ, ಸ್ತುತಿಗಳು ಪ್ರಾರಂಭವಾದವು. …….ಎಳ್ಳು ಜೀರಿಗೆ ಬೆಳೆಯುವ ಭೂಮಿತಾಯಿಯ ಎದ್ದೊಂದು ಗಳಿಗೆ ನೆನೆದೇನು ಎಂದು ಸ್ತುತಿ ಮಾಡಲು ಪ್ರಾರಂಭವಾಯಿತು. ಜನಪದರ ಅಗಣಿತ ಆಚರಣೆಗಳಲ್ಲಿ ಪ್ರಧಾನವಾಗಿ ಸ್ತುತಿ ಕಂಡು ಬರುತ್ತದೆ. ದೈವಿಶಕ್ತಿಗಳ ಕೃಪೆಯನ್ನು ಕೋರುವುದು ಇಲ್ಲಿಯ ಮುಖ್ಯ ಉದ್ದೇಶವಾಗಿದೆ.

ಹಬ್ಬ ಎನ್ನುವ ಪದ ಮೂಲತಃ ಪರ್ವ ಶಬ್ದದ ತದ್ಭವರೂಪವಾಗಿದೆ. ನಮ್ಮ ಜನಾಂಗಿಕ ಜೀವನದ ನಿರ್ದಿಷ್ಟ ಕಾಲದ ಆಚರಣೆ-ಉತ್ಸವಕ್ಕೆ ಸಂಕೇತವಾಗಿರುವುದುಂಟು. ಪರ್ವ ಎಂದರೆ ಕಾಲವಿಭಜನೆ ಎಂದು ಅರ್ಥ. ತಿಂಗಳ ಮೊದಲ ಅರ್ಧಾವಧಿಯೊಳಗೆ ಚಂದ್ರನಲ್ಲಿ ಉಂಟಾಗುವ ನಾಲ್ಕು ಬದಲಾವಣೆಗಳ ಕಾಲ. ವಿಶೇಷತಃ ಎಂಟನೆಯ ಮತ್ತು ಹದಿನಾಲ್ಕನೆಯ ದಿನ. ಮಾನವನ ಬಯಕೆ ಅಥವಾ ಇಚ್ಛೆಯ ಸಂಕಲ್ಪ ವ್ರತ, ಆ ಇಚ್ಛೆಯ ಪೂರ್ಣತೆಗಾಗಿ ಒಂದು ನಿರ್ದಿಷ್ಟ ಅವಧಿಯಲ್ಲಿ ಕೈಕೊಳ್ಳುವ ಆಚರಣೆಗಳ ರೂಢಿ ಉತ್ಸವಗಳೇ ಹಬ್ಬ. ಹೀಗಾಗಿ ಆಚರಣೆ ಮತ್ತು ಹಬ್ಬಗಳಿಗೆ ಬೇರ್ಪಡಿಸಲಾರದ ಸಂಬಂಧವಿದೆ. ಶಿಲಾಪೂರ್ವ ಮಾನವ, ನಾಗರಿಕತೆಯ ಜೀವ ವಿಕಾಸಗೊಳ್ಳುತ್ತ ಬಂದುದೇ ಒಂದು ರೋಚಕವಾದ ಸಾಹಸಮಯ ಸಂಗತಿಯಾಗಿದೆ.

ಆದಿಮಾನವನಿಂದ ಮೊದಲುಗೊಂಡು ಕಾಲಾನುಕ್ರಮದಲ್ಲಿ ಬೆಳೆದು ಬಂದ ಬೇಟೆ, ಗಡ್ಡೆ-ಗೆಣಸುಗಳ ಸಂಗ್ರಹ, ಒಂದೆಡೆ ನೆಲೆನಿಂತು ಕೃಷಿಗೆ ತೊಡಗಿದುದು, ಕಲಿಕೆಯ ವಿಧಾನ, ಅರ್ಚನೆ-ಆರಾಧನೆ, ಭಾವಾಭಿವ್ಯಕ್ತಿಯ ವಿವಿಧ ಮಾಧ್ಯಮಗಳನ್ನು ಕಂಡುಕೊಳ್ಳುವಿಕೆ. ಮಾನವನ ಒಟ್ಟು ಸಂಸ್ಕೃತಿ ಸ್ವರೂಪ ರಚನೆಯ ಆಧಾರ ಸ್ತಂಭಗಳಾಗಿ ನಿಂತಿವೆ. ಮನುಷ್ಯನ ಅಸ್ತಿತ್ವದ ವಿವಿಧ ಹಂತಗಳು ಅವನ ಸಾಂಸ್ಕೃತಿಕ ಬೆಳವಣಿಗೆಯ ಜೊತೆಗೆ ಒಪ್ಪಂದ ಮಾಡಿಕೊಳ್ಳುತ್ತ ಪರಿವರ್ತನೆಗೆ ಒಳಗು ಮಾಡಿಕೊಳ್ಳುತ್ತ ಬಂದಿರುವ ಕಥೆಯೇ ಇತಿಹಾಸ ಪೂರ್ವಕಾಲದ ವಿಕಾಸದ ಕಥೆಯಾಗಿದೆ.

ಮಾನವನ ನಂಬಿಕೆ, ಆಚರಣೆ, ಶ್ರದ್ಧೆ ಹಾಗೂ ಹಬ್ಬಗಳು ಮಾನವ ಸಂಸ್ಕೃತಿಯ ವಿಕಾಸವನ್ನು ಶೋಧಿಸುವಲ್ಲಿ ಆಧಾರಸಾಮಗ್ರಿಗಳನ್ನು ಒದಗಿಸುತ್ತವೆ. ಹೀಗಾಗಿ ಮಾನವ ಸಂಸ್ಕೃತಿಯ ಅಧ್ಯಯನದಲ್ಲಿ ಹಬ್ಬಗಳಿಗೆ ವಿಶೇಷ ಮಹತ್ವವಿದೆ.

ನಮ್ಮ ಭಾರತ ದೇಶವು ಅನೇಕ ಧರ್ಮಗಳ ನೆಲೆವೀಡಾಗಿದೆ. ಅನೇಕತೆಯಲ್ಲಿ ಏಕತೆಯನ್ನು ಮೆರೆಯುವುದು ನಮ್ಮ ದೇಶದ ವೈಶಿಷ್ಟ್ಯವಾಗಿದೆ. ಹೀಗಾಗಿ ಇಲ್ಲಿ ಅನೇಕ ಧರ್ಮಗಳಿಗೆ ಸಂಬಂಧಿಸಿದ ವಿವಿಧ ಬಗೆಯ ಹಬ್ಬಗಳು ಮತ್ತು ಜಾತ್ರೆಗಳು ಆಚರಣೆಯಲ್ಲಿವೆ. ಹಬ್ಬಗಳಲ್ಲಿ ಸಾರ್ವತ್ರಿಕವಾಗಿ ಆಚರಿಸುವ ಮತ್ತು ಆಯಾ ಗ್ರಾಮಗಳು ಸೀಮಿತವಾಗಿ ಆಚರಿಸುವ ಎರಡು ಬಗೆಯ ಸಂಪ್ರದಾಯಗಳು ಕಂಡುಬರುತ್ತವೆ. ಆದರೆ ಈ ಎರಡೂ ಬಗೆಯ ಹಬ್ಬಗಳ ಉದ್ವೇಗ ಮಾತ್ರ ಒಂದೇ ಆಗಿದ್ದು ಅದು ಸಾಮಾಜಿಕ ಕಲ್ಯಾಣವೇ ಆಗಿದೆ. ಹಿಂದೂಗಳಲ್ಲಿ ಸಾರ್ವತ್ರಿಕವಾಗಿ ಉಗಾದಿ, ಮಣ್ಣೆತ್ತಿನ ಅಮಾವಾಸ್ಯೆ, ನಾಗರಪಂಚಮಿ, ಜೋಕುಮಾರ, ಗೌರಿ-ಗಣೇಶ, ಮಹಾನವಮಿ, ದೀಪಾವಳಿ, ಹೋಳಿ ಮುಂತಾದ ಹಬ್ಬಗಳನ್ನು ವೈಶಿಷ್ಟ್ಯಪೂರ್ಣವಾಗಿ ಆಚರಿಸುವುದುಂಟು. ಗ್ರಾಮದ ಜನರೆಲ್ಲ ಸೇರಿ ಆಚರಿಸುವ ಹಬ್ಬಗಳು ಆಯಾ ಗ್ರಾಮಗಳಲ್ಲಿ ನೆಲೆ ನಿಂತಿರುವ ಮಾರಮ್ಮ, ದುರ್ಗಮ್ಮ, ಮಾಯಮ್ಮ, ಮಾಸ್ತಮ್ಮ, ಲಕ್ಕಮ್ಮ, ಪೋಚಮ್ಮ, ಕಾಳಮ್ಮ, ಎಲ್ಲಮ್ಮ, ಬಸವೇಶ್ವರ, ಹನುಮಂತ ಮುಂತಾದ ದೇವತೆಗಳ ಹಬ್ಬ, ಉತ್ಸವ, ಜಾತ್ರೆಗಳನ್ನು ಆಚರಿಸುತ್ತಾರೆ. ಗ್ರಾಮದೇವತೆಗಳ ಹಬ್ಬಗಳಲ್ಲಿ ಆಯಾ ಗ್ರಾಮಗಳ ಸಂಪ್ರದಾಯಕ್ಕೆ ಸಂಬಂಧಿಸಿದಂತೆ ವಿಭಿನ್ನವಾಗಿ ಮತ್ತು ವೈಶಿಷ್ಟ್ಯಪೂರ್ಣವಾಗಿ ಆಚರಣೆಗಳಿರುವುದು ಕಂಡುಬರುತ್ತದೆ.

ಈ ಹಬ್ಬ ಮತ್ತು ಜಾತ್ರೆಗಳು ಮಾನವನು ತನ್ನ ಅವಿಶ್ರಾಂತವಾದ ದುಡಿಮೆಯ ನಡುವೆ ಬಿಡುವು ಮಾಡಿಕೊಂಡು ಎಲ್ಲರೊಡನೆ ಸಂತೋಷದಿಂದ ಕೂಡಿ ಬಾಳಲು ಸಹಕಾರಿಯಾಗಿವೆ. ಕುಟುಂಬಗಳು ಬೆಳೆದು ದೊಡ್ಡವುಗಳಾಗಿ, ವಿಭಜನೆಗೊಂಡು ಬದುಕಿನ ಅನಿವಾರ್ಯತೆಗಳಿಂದಾಗಿ ದೂರ ದೂರ ಚದುರಿ ಹೋದ ಬಂಧು ಬಾಂಧವರು, ಸಂಬಂಧಿಕರು, ಹಬ್ಬದ ನೆಪದಲ್ಲಿ ಆಗಾಗ್ಗೆ ಒಂದೆಡೆ ಕಲೆತು ಪರಸ್ಪರ ಕಷ್ಟ ಸುಖ ಸಂತೋಷಗಳನ್ನು ಹಂಚಿಕೊಳ್ಳಲು ಇವು ತುಂಬ ಸಹಾಯಕವಾಗಿವೆ. ದೇವ-ದೇವತೆಗಳನ್ನು ಪೂಜಿಸುವುದರಿಂದ ವ್ಯಕ್ತಿಗೆ, ಗ್ರಾಮಕ್ಕೆ ಹಾಗೂ ನಾಡಿಗೆ ಸುಖ ಸಮೃದ್ಧಿಯಾಗುತ್ತದೆಂಬ ನಂಬಿಕೆಗಳು ಹಬ್ಬ ಮತ್ತು ಜಾತ್ರೆಗಳು ಅವಿರತವಾಗಿ ಮುಂದುವರಿದುಕೊಂಡು ಬರಲು ಕಾರಣವಾಗಿವೆ.

ಹಬ್ಬಗಳನ್ನು ಆಚರಿಸುವಾಗ ಗ್ರಾಮದ ಬೇರೆ ಬೇರೆ ಜಾತಿ ಕಸಬುಗಳ ಜನರೆಲ್ಲರೂ ಭಾಗವಹಿಸಲು ಸಾಧ್ಯವಾಗುತ್ತಿದೆ. ಆಯಾ ಜಾತಿಯ ಹಾಗೂ ಕಸಬುಗಳ ಜನರು ತಮ್ಮದೇ ಆದ ಚಾಜಗಳನ್ನು ಸಲ್ಲಿಸುವುದರಿಂದ ಪರಸ್ಪರ ಸಂಬಂಧ ನವೀಕರಣಗೊಳ್ಳುತ್ತದೆ. ಅಲ್ಲದೆ ಗ್ರಾಮದ ರಸ್ತೆ, ಒಳಚರಂಡಿಗಳು ಶುಚಿಗೊಳ್ಳುವ ಮೂಲಕ ಗ್ರಾಮದ ನೈರ್ಮಲ್ಯೀಕರಣಕ್ಕೆ ಸಹಾಯಕವಾಗುತ್ತದೆ. ಮನೆಗಳಿಗೆ ಸುಣ್ಣ ಬಣ್ಣಗಳನ್ನು ಸಾರಿಸಿ ವ್ಯವಸ್ಥೆ ಮಾಡುವುದರಿಂದ ಮನೆಗಳ ನವೀಕರಣಕ್ಕೆ ಪ್ರೇರಣೆಯು ಒದಗಿ ಬರುತ್ತದೆ. ಈ ಸುಣ್ಣ ಬಣ್ಣಗಳಿಂದ ಕ್ರಿಮಿಕೀಟಗಳು ನಾಶವಾಗಿ ಮನೆಮಂದಿಯ ಹಾಗೂ ಊರ ಜನರ ಆರೋಗ್ಯ ಕಾಪಾಡಿಕೊಳ್ಳಲು ಸಹಾಯಕಾರಿಯಾಗುತ್ತದೆ.

ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ಕೆಲವು ವಿಶಿಷ್ಟ ಸಂಪ್ರದಾಯಗಳಿರುತ್ತವೆ. ಸಂಪ್ರದಾಯಗಳ ಕ್ರಿಯಾದಿಗಳ ಸಂದರ್ಭದಲ್ಲಿ ಹಾಡುಗಳು ಪ್ರಮುಖ ಪಾತ್ರ ವಹಿಸುತ್ತವೆ. ಮನುಷ್ಯ ಮೊದಲು ಅಭಿವ್ಯಕ್ತಿಯನ್ನು ನೀಡಿದ್ದು ಹಾಡಿನ ಮೂಲಕವೇ ಆಗಿದೆ. ಹೀಗಾಗಿ ದೇವದೇವತೆಗಳನ್ನು ತೃಪ್ತಿಪಡಿಸಲು ಕೆಲವು ವಿಶೇಷ ಆಚರಣೆಗಳನ್ನು ಮಾಡುವಂತೆ ಸ್ತುತಿಯನ್ನು ಕೂಡ ಮಾಡಲಾಗುತ್ತದೆ. ಆ ಮೂಲಕವಾಗಿ ದೇವರನ್ನು ಪ್ರಸನ್ನಗೊಳಿಸಬಹುದೆಂಬ ಭಾವನೆಯಿದೆ. ಹೀಗೆ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ಸ್ತುತಿ, ಮಂಗಳಾಚರಣೆಯ ಹಾಡುಗಳೊಂದಿಗೆ ಹಬ್ಬಗಳ ಆಚರಣೆಗೆ ಸಂಬಂಧಿಸಿದ ಹಾಡುಗಳುಂಟು. ಜನಪದ ಸಾಹಿತ್ಯ ಹಾಗೂ ಸಂಸ್ಕೃತಿಯಲ್ಲಿ ಇವುಗಳಿಗೆ ವಿಶಿಷ್ಟವಾದ ಮಹತ್ವವಿದೆ. ಆದ್ದರಿಂದಾಗಿಯೇ ಪ್ರೊ. ದೇವೇಂದ್ರ ಸತ್ಯಾರ್ಥಿಯವರು ಜಾನಪದ ಗೀತೆಗಳು ನಮ್ಮ ದೇಶದ ಘನವಾದ ಸ್ವತ್ತು. ಭಾರತದ ಸಾಂಸ್ಕೃತಿಕ ಪರಂಪರೆಯ ಬಹುಮಟ್ಟಿನ ತಿರುಳು ಇವುಗಳಲ್ಲಿ ಹುದುಗಿದೆ. ಭಾರತದ ಲಕ್ಷಾಂತರ ಜನರಿಗೆ ಬಾಗಿಲುಗಳನ್ನು ತೆರೆದಿಟ್ಟ ಕಾವ್ಯ ಮತ್ತು ಸಂಗೀತದ ಮಹಾದೇವಾಲಯಗಳಿವು. ಇವು ಜನತೆಯ ಹೃದಯದಿಂದ ಉಕ್ಕಿಬಂದ ನುಡಿಗಳಾದ್ದರಿಂದ ಅವುಗಳಲ್ಲಿ ಭಾರತದ ಹಳ್ಳಿಗಾಡಿನ ಜೀವನದ ನೋವು-ನಲಿವುಗಳನ್ನು ನಾವು ಅನುಭವಿಸುತ್ತೇವೆ. ನಿತ್ಯಜೀವನದ ಅವಶ್ಯಕತೆಗಳನ್ನು ದೊರಕಿಸಿಕೊಳ್ಳುವುದಕ್ಕೆ ಒಂದೇ ಸಮನೆ ದುಡಿಯುವ ಸಾಮಾನ್ಯ ಜನತೆಯ ನಿಕಟ ಸಂಪರ್ಕ, ಇವುಗಳಿಂದ ನಮಗೆ ಉಂಟಾಗುತ್ತದೆ ಎಂದಿದ್ದಾರೆ. ಹೀಗೆ ಒಂದು ದೇಶದ ಅಮೂಲ್ಯ ಸಂಪತ್ತಾಗಿರುವ ಇವು ಸಂಸ್ಕೃತಿಯ ತವನಿಧಿಗಳಾಗಿವೆ. ಇವುಗಳ ಸಂಗ್ರಹ ಹಾಗೂ ಅಧ್ಯಯನದಿಂದಾಗಿ ಒಂದು ದೇಶದ ಸಂಸ್ಕೃತಿಯ ವಿಕಾಸವನ್ನು ಗುರುತಿಸಿಕೊಳ್ಳುವುದರ ಜೊತೆಗೆ ಸಾಂಸ್ಕೃತಿಕ ಮೌಲ್ಯಗಳನ್ನು ಅರಿತುಕೊಳ್ಳಬಹುದಾಗಿದೆ. ಅದ್ದರಿಂದಾಗಿಯೇ ರವೀಂದ್ರನಾಥ ಠಾಕೂರ ಅವರು ಜಾನಪದ ಗೀತೆಗಳು ಜನತೆಯ ಮನಸ್ಸು ಮತ್ತು ಹೃದಯವನ್ನು ತಿಳಿಯಲು ನಮಗೆ ಸಹಾಯಕಾರಿಯಾಗಿವೆ. ಬೇರೆ ಬೇರೆ ಪ್ರದೇಶದ ಹಳ್ಳಿಯ ಹಾಡುಗಳಲ್ಲಿ ಕಂಡುಬರುವ ಸಮಾನ ಗುಣಗಳಿಂದ ಭಾರತದಾದ್ಯಂತವೂ ಮಾನವ ಸ್ವಭಾವದ ವೈವಿಧ್ಯತೆಯಲ್ಲಿರುವ ಏಕತೆಯನ್ನು ನಾವು ನೋಡುತ್ತೇವೆ. ಎಲ್ಲ ದೇಶಗಳ ಲೋಕ ಗೀತೆಗಳನ್ನು ಸಂಗ್ರಹಿಸಿ ತೌಲನಿಕವಾಗಿ ಅಧ್ಯಯನ ಮಾಡಿದಲ್ಲಿ ಎಲ್ಲ ಮಾನವ ಕುಲಕ್ಕೂ ಸಾಮಾನ್ಯವಾದ ಮನಸ್ಸು ಹೃದಯಗಳು ಅವುಗಳಲ್ಲಿ ಅಡಗಿರುವುದನ್ನು ಕಾಣಬಹುದಾಗಿದೆ ಎಂದಿದ್ದಾರೆ.

ಜನಪದ ಹಾಡುಗಳ ಪ್ರಪಂಚ ಬಹು ವ್ಯಾಪಕವೂ, ವೈವಿಧ್ಯಮಯವೂ ಆಗಿದೆ. ಜಾನಪದರು ತಮ್ಮ ಎಲ್ಲ ಬಗೆಯ ಚಟುವಟಿಕೆಗಳ ಸಂದರ್ಭದಲ್ಲಿ ಹಾಡುಗಳನ್ನು ಹಾಡುವುದುಂಟು. ತಾವು ಮಾಡುತ್ತಿರುವ ಕೆಲಸದ ಶ್ರಮದ ಅರಿವು ತಮಗಾಗದಿರಲೆಂಬ ಕಾರಣದಿಂದಾಗಿ ಹಾಡುಗಳು ಅವರಿಂದ ಸಹಜವಾಗಿಯೇ ಸೃಷ್ಟಿಯಾಗಿರುವಂತೆಯೇ, ಮನೋರಂಜನೆಯ ಉದ್ದೇಶದಿಂದಾಗಿಯೆ, ಅಪಾರ ಸಂಖ್ಯೆಯ ಹಾಡುಗಳು ರೂಪುತಾಳಿವೆ. ದೇವತೆಗಳ ಸಂತೃಪ್ತಿಗಾಗಿ ಮಾಡುವ ಹಬ್ಬ ಹರಿದಿನಗಳ ಆಚರಣೆಗಳ ಸಂದರ್ಭದಲ್ಲಿಯೂ ವೈವಿಧ್ಯಮಯವಾದ ಹಾಡುಗಳು ಮೈದಾಳಿವೆ. ಈ ಹಾಡುಗಳು ಜನಪದರ ಭಾವನೆ, ಆಲೋಚನೆ, ಸೃಜನ ಸಾಮರ್ಥ್ಯಗಳೊಂದಿಗೆ ಜಾನಪದ ಸಂಸ್ಕೃತಿಯ ಮೌಲ್ಯಗಳನ್ನು ಅಭಿವ್ಯಕ್ತಿಸುತ್ತವೆ. ಹೀಗಾಗಿ ಇವುಗಳ ಸಂಗ್ರಹ ಹಾಗೂ ಅಧ್ಯಯನವು ಮಹತ್ವಪೂರ್ಣವಾಗಿದೆ. ಈ ಹಾಡುಗಳು ಹಾಡಲ್ಪಡುವ ಸಂದರ್ಭದೊಂದಿಗೆ ಅವುಗಳ ಸ್ವರೂಪ, ವೈವಿಧ್ಯತೆ ಹಾಗೂ ಮಹತ್ವಗಳನ್ನು ಸ್ಥೂಲವಾಗಿ ಗುರುತಿಸುವ ಪ್ರಯತ್ನ ಇಲ್ಲಿದೆ.

ಸಾರ್ವತ್ರಿಕ ಹಬ್ಬಗಳಲ್ಲಿ ಯುಗಾದಿ ಹಬ್ಬವು ಪ್ರಮುಖವಾಗಿದೆ. ಯುಗದ ಆರಂಭವೇ ಯುಗಾದಿ ಆಗಿದೆ. ಪಾಲ್ಗುಣ ಮಾಸ ಮುಗಿದು ಅಮಾವಾಸ್ಯೆಯ ಮಾರನೆಯ ದಿನ ಬರುವ ಚೈತ್ರಮಾಸದ ಶುಭೋದಯದ ದಿನವೇ ಯುಗಾದಿ. ಇದು ವಸಂತ ಋತುವಿನ ಆರಂಭವೂ ಹೌದು. ಹೊಸ ಚಿಗುರು ಹೂವು, ಮೊಗ್ಗುಗಳಿಂದ ಕಂಗೊಳಿಸುವ ನಯನ ಮನೋಹರವಾದ ರಮಣೀಯ ಸೌಂದರ್ಯದ ರಥದಲ್ಲಿ ಕೋಗಿಲೆಯ ಇಂಪಾದ ಸ್ವರದ ಕಹಳೆಯೊಂದಿಗೆ ಯುಗಾದಿ ಬಿಜಯ ಮಾಡುವುದುಂಟು.

ಜನಪದರ ಬದುಕಿನಲ್ಲಿ ಯುಗಾದಿಯ ವೈಶಿಷ್ಟ್ಯಪೂರ್ಣ ಆಚರಣೆಯಿದೆ. ಮನೆಯನ್ನು ಸಾರಿಸಿ, ಮಾವಿನ ಸೊಪ್ಪಿನಿಂದ ಮನೆಯ ಹೆಬ್ಬಾಗಿಲಿಗೆ ತೋರಣಕಟ್ಟಿ ನಡುವೆ ಬೇವಿನ ಸೊಪ್ಪನ್ನು ಸೇರಿಸಿ ಶೃಂಗರಿಸಲಾಗುತ್ತದೆ. ಬೇವಿನ ಸೊಪ್ಪಿನಿಂದ ಕ್ರಿಮಿಕೀಟಗಳು ಇಲ್ಲವಾಗುತ್ತವೆ. ಬೇವು-ಬೆಲ್ಲದ ಸೇವನೆ, ಹೋಳಿಗೆ ಊಟ, ಕೃಷಿಯ ಉಳುಮೆಯ ಪ್ರಾರಂಭೋತ್ಸವ, ಬರುವ ವರ್ಷದ ಫಲಾಫಲಗಳಿಗಾಗಿ ಜ್ಯೋತಿಷ್ಯ ಕೇಳುವಿಕೆ, ಶಾಂವಿಗೆ, ಗುಳಿಗೆ ಊಟ, ವಿನೋದ ಕ್ರೀಡೆಗಳು, ವರ್ಷದ ತೊಡಕು ಯುಗಾದಿಯ ವಿಶೇಷ ಆಚರಣೆಗಳಾಗಿವೆ.

ಊರಾಗ ಉಗಾದಿ ಉಂಡ್ಹೋಗ ಅಣ್ಣಯ್ಯ
ಶಾವೀಗಿ
ಆಗಿ ಗುಳಗ್ಯಾಗಿಮ್ಯಾಲೀನ
ಬಾನ
ಬಸಿಯೋದು ತಡವಿಲ್ಲ

ಎಂದು ತನ್ನ ಅಣ್ಣನಿಗೆ ಸಿಹಿ ಊಟ ಬಡಿಸುವುದರೊಂದಿಗೆ ಹೊಸ ವರ್ಷವು ಸುಖ ಸಂತೋಷಗಳನ್ನು ತರುವಂತಾಗಲೆಂಬ ಆಶಯದೊಂದಿಗೆ ಯುಗಾದಿಯು ಆಚರಿಸಲ್ಪಡುತ್ತದೆ.

ಭಾರತ ಹಳ್ಳಿಗಳ ದೇಶ. ಕೃಷಿ ನಮ್ಮ ದೇಶದ ಆರ್ಥಿಕ ಬೆನ್ನಲುವು. ಈ ಕೃಷಿಗೆ ಆಧಾರ ಭೂದೇವಿ. ಭೂದೇವಿಯ ಉಳುಮೆಗೆ ಸಹಾಯಕ ಬಸವ ಅಂದರೆ ಎತ್ತು. ಅಂತೆಯೇ ರೈತರು, ತಮ್ಮ ಕೃಷಿಗೆ ಬೆನ್ನಲುಬಾಗಿ ನಿಂತಿರುವ ಎತ್ತನ್ನು ಕೃತಜ್ಞತಾಭಾವನೆಯಿಂದ ಪೂಜಿಸುತ್ತಾರೆ. ಈ ಪೂಜೆಯು ಮಣ್ಣೆತ್ತಿನ ಅಮಾವಾಸ್ಯೆ ಹಬ್ಬದಲ್ಲಿ ಸಂಭ್ರಮದಿಂದ ನಡೆಯುತ್ತದೆ. ಹಬ್ಬದ ದಿನ ಮುಂಜಾನೆ ಊರಿನ ಮುಂದಿನ ಕೆರೆಹಳ್ಳ, ಹೊಳೆಯಿಂದ ಜಿಗುಟಾದ ಕರಿಯಮಣ್ಣನ್ನು ತಂದು ಎರಡು ಎತ್ತುಗಳನ್ನು ಊರ ಮಕ್ಕಳೆಲ್ಲರೂ ಸೇರಿ ತಯಾರಿಸುತ್ತಾರೆ. ಎತ್ತನ್ನು ಹಸಿಮಣೆಯ ಮೇಲೆ ಇಲ್ಲವೆ ದೇವರ ಜಗಲಿಯ ಮೇಲಿಟ್ಟು ವಿಧಿವತ್ತಾಗಿ ಪೂಜೆಗೈಯುತ್ತಾರೆ. ಕರಿಗಡಬು, ಕಾಯಿಪಲ್ಲೆ ತಯಾರಿಸಿ, ನೈವೇದ್ಯವನ್ನು ಕೊಡಲಾಗುತ್ತದೆ. ಕೆಲವು ಕಡೆಗಳಲ್ಲಿ ಎರಡು ಎತ್ತುಗಳಲ್ಲಿ ಒಂದನ್ನು ಸಾರ್ವಜನಿಕ ಸ್ಥಳಗಳಲ್ಲಿ ಕೆರೆ, ಹೊಳೆ, ಹಳ್ಳಗಳಲ್ಲಿ ನೀರಿಗೆ ಹಾಕಿ ವಿಸರ್ಜಿಸುತ್ತಾರೆ. ಕೆಲವು ಗ್ರಾಮಗಳಲ್ಲಿ ಊರಿನ ಹಿರಿಯ ಮಠದಲ್ಲಿ ಮಣ್ಣಿನ ಬಸವನನ್ನು ಇರಿಸಿ ಊರಿನ ಹೆಣ್ಣು ಮಕ್ಕಳೆಲ್ಲರೂ ಒಂದೆಡೆ ಸೇರಿ ಆರತಿ ಮಾಡುತ್ತಾ ಆಚರಣೆಗೆ ಸಂಬಂಧಿಸಿದಂತೆ

ಉದ್ದೀನ ಕಾಳ್ಹಂಗ ತಿದ್ಯಾರ ನಮ್ಮ ಬಸವಯ್ನ
ಉದ್ದ
ನಮ್ಮಲ್ಲಿ ಇಪರೀತ ಕೋಲ
ಉದ್ದ ನಮ್ಮಲ್ಲಿ ಇಪರೀತ ನಮ್ಮ ಬಸವಯ್ನ
ತಿದ್ಯಾರ
ಕಲ್ಯಾಣದ ಮಠದಾಗ ಕೋಲ

ಎಂದು ಹಾಡುಗಳನ್ನು ಹಾಡುತ್ತಾರೆ. ಜನಪದ ಗರತಿಯರ ನಾಲಿಗೆಯ ಮೇಲೆ ನಲಿಯುತ್ತವೆ ಈ ಬಗೆಯ ಹಾಡುಗಳು ಕಣ್ಮರೆಯಾಗುತ್ತಿವೆ. ಈಗಾಗಲೇ ದಾಖಲಾಗಿರುವ ಕೆಲವು ಹಾಡುಗಳನ್ನು ಪ್ರಸ್ತುತ ಗ್ರಂಥದಲ್ಲಿ ಸಂಗ್ರಹಿಸಲಾಗಿದೆ.

ಕೃಷಿ ಸಂಸ್ಕೃತಿಯ ಅಂಗವಾಗಿ ಬರುವ ದೇವತೆಗಳು ಗ್ರಾಮ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತು ನಿಂತಿರುವುದಾಗಿ ಜನಪದರು ನಂಬಿದ್ದಾರೆ. ಅಂತೆಯೇ ಜೇಷ್ಠ ಬಹುಳ ಅಮಾವ್ಯಾಸೆಯಲ್ಲಿ ಮಣ್ಣಿನ ಬಸವನನ್ನು ಪೂಜಿಸುವಂತೆ ಆಷಾಢ ಮಾಸದಲ್ಲಿ ಗುಳ್ಳವ್ವನನ್ನು, ಶ್ರಾವಣ ಮಾಸದಲ್ಲಿ ಹುತ್ತಪ್ಪ ಇಲ್ಲವೆ ನಾಗದೇವನನ್ನು ಪೂಜಿಸುತ್ತಾರೆ.

ಗುಳ್ಳವ್ವನ ಹಬ್ಬದ ಆಚರಣೆಯು ವೈವಿಧ್ಯಪೂರ್ಣವಾಗಿದೆ. ಆಷಾಢದ ಮೊದಲ ಮಂಗಳವಾರ ಹೆಣ್ಣು ಮಕ್ಕಳೆಲ್ಲ ಗುಂಪು ಕಟ್ಟಿಕೊಂಡು ತಿಂಡಿ ತಿನಿಸಿನೊಂದಿಗೆ ಸಮೀಪದ ಕೆರೆಗೆ ಇಲ್ಲವೆ ಹೊಳೆ-ಹಳ್ಳದ ದಂಡೆಗೆ ಹೋಗಿ ತಾವು ತಂದಿರುವ ತಿನಿಸುಗಳನ್ನೆಲ್ಲ ಸೇರಿಸಿ ಪಂಕ್ತಿಭೋಜನ ಮಾಡುತ್ತಾರೆ. ಇದಕ್ಕೆ ಅಲ್ಲಿ ಕೇರಿ ಎಂದು ಕರೆಯುತ್ತಾರೆ. ತಿಂಡಿ ತಿನಿಸುಗಳನ್ನು ತಿಂದ ನಂತರ ಮಣ್ಣನ್ನು ಅಗೆದು ಊರಿಗೆ ಬರುತ್ತಾರೆ. ತಾವು ತಂದ ಮಣ್ಣನ್ನೂ ಹದ ಮಾಡಿ ಚೌಕಾಕಾರದ ಪೀಠದ ಮೇಲೆ ಮಣ್ಣಿನ ಮುದ್ರೆಯನ್ನಿಡುತ್ತಾರೆ. ಮೊದಲ ಮಂಗಳವಾರ ಲಿಂಗಾಕಾರದ ಗುಳ್ಳವ್ವ, ಎರಡನೆಯ ಮಂಗಳವಾರ ಗುಡಿಯಾಕಾರದ ಗುಳ್ಳವ್ವ, ಮೂರನೆಯ ಮಂಗಳವಾರ ಕಟ್ಟೆಯಾಕಾರದ ಗುಳ್ಳವ್ವ, ನಾಲ್ಕನೆಯ ಮಂಗಳವಾರ ನವಿಲಾಕಾರದ ಗುಳ್ಳವ್ವನ ಮೂರ್ತಿಮಾಡಿ ಪೂಜಿಸುವ ಸಂಪ್ರದಾಯವಿದೆ. ಇನ್ನೂ ಕೆಲವು ಕಡೆ ಗುಳ್ಳವ್ವನ ಗೋಪುರಮಾಡಿ ಶೃಂಗರಿಸಿ ಪೂಜೆ ಮಾಡುವುದುಂಟು. ಸಾರ್ವಜನಿಕ ಗುಳ್ಳವ್ವನ ಪೂಜೆಯಲ್ಲಿ ಊರಿನ ಎಲ್ಲ ಹೆಣ್ಣು ಮಕ್ಕಳು ಭಾಗವಹಿಸುವುದುಂಟು, ಗಂಡಸರು ಅವರಿಗೆ ನೆರವು ಮಾತ್ರ ನೀಡುತ್ತಾರೆ. ಕೆಲವು ಗ್ರಾಮಗಳಲ್ಲಿ ಗೋಪುರದ ಒಳಗಡೆ ಬಸವನ ಮೂರ್ತಿ ಮಾಡಿಟ್ಟು ಪೂಜಿಸಲಾಗುತ್ತದೆ. ಊರ ಮಹಿಳೆಯರೆಲ್ಲ ಸೇರಿಕೊಂಡು ಗುಳ್ಳವ್ವನ ಆಚರಣೆಗೆ ಸಂಬಂಧಿಸಿದ ಹಾಡುಗಳನ್ನು ಹಾಡುತ್ತ ಮನೆಮನೆಗೆ ಹೋಗಿ ಆರತಿ ಮಾಡುತ್ತಾರೆ. ಗುಳ್ಳವ್ವನನ್ನು ಪೂಜಿಸುವಾಗ ಜೊತೆಯಲ್ಲಿ ಇರುವ ಬಸವನ ವಿಗ್ರಹವೂ ಪೂಜೆಗೊಳ್ಳುವುದುಂಟು. ಗುಳ್ಳವ್ವನನ್ನು ತಯಾರಿಸುವ, ಪೂಜಿಸುವ, ನಾಮಸ್ಮರಣೆ ಮಾಡುವ, ಬಸವಣ್ಣನನ್ನು ಪೂಜಿಸುವ ಆಚರಣೆಗಳಿಗೆ ಸಂಬಂಧಿಸಿ ಹಾಡುಗಳನ್ನು ಗರತಿಯರು ಹಾಡುತ್ತಾರೆ. ಅಂಥ ಸಾಹಿತ್ಯ ಇಂದು ನಮ್ಮಿಂದ ದೂರವಾಗುತ್ತಿದೆ. ಲಭ್ಯವಾಗಿರುವ, ದಾಖಲಾಗಿರುವ ಪ್ರಸ್ತುತ ಆಚರಣೆಗೆ ಸಂಬಂಧಿಸಿದ ಹಾಡುಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ.

ಗುಳ್ಳವ್ವನ ಹಬ್ಬ ಪೂರ್ಣಗೊಂಡ ಕೆಲವೇ ದಿವಸಗಳ ನಂತರ ನಾಗರ ಪಂಚಮಿಯ ಹಬ್ಬ ಬರುತ್ತದೆ. ಮಣ್ಣು ಪೂಜೆಯ ಹೆಸರಿನಲ್ಲಿ ವ್ಯಕ್ತವಾಗುವ ದೇವತೆ ಹುತ್ತಪ್ಪ. ಹೊಸದಾಗಿ ಆ ವರ್ಷ ಮದುವೆಯಾಗಿ ಗಂಡನ ಮನೆಗೆ ಹೋಗಿರುವ ಹೆಣ್ಣು ಮಕ್ಕಳನ್ನು ಕರೆತರಬೇಕೆಂಬ ನಂಬಿಕೆ ಜನಪದರಲ್ಲಿದೆ. ಆಷಾಢಮಾಸದಲ್ಲಿ ಅತ್ತೆ-ಸೊಸೆ ಕೂಡಿರಬಾರದು. ಹೆಣ್ಣು ಗಂಡನ ಮನೆಯಲ್ಲಿ ಇರಬಾರದು. ನಾಗಣ್ಣನಿಗೆ ಹಾಲೆರೆಯಲು ಹೆಣ್ಣು ಮಕ್ಕಳು ಬೇಕೆಂಬ ಐತಿಹ್ಯ ಇದಕ್ಕೆ ಕಾರಣವಾಗಿದೆ.

ನಾಗರ ಪಂಚಮಿಯು ಮೂರು ದಿವಸದ ಹಬ್ಬವಾಗಿದೆ. ಮೊದಲನೆಯ ದಿನ ನಾಗರರೊಟ್ಟಿ ಪಂಚಮಿ, ಎರಡನೆಯದಿನ ನಾಗಚೌತಿ ಹಾಗೂ ಮೂರನೆಯ ದಿನ ನಾಗರ ಪಂಚಮಿಯೆಂದು ಆಚರಿಸಲಾಗುತ್ತದೆ.

ಅಮಾವಾಸ್ಯೆಯ ದಿವಸ ಹೆಣ್ಣು ಮಕ್ಕಳು ತಮ್ಮ ಸಮಸ್ತ ಬಳಗದೊಂದಿಗೆ ಹಣತೆ ಪೂಜೆ ಮಾಡುವುದುಂಟು. ಮಾರನೆಯ ದಿವಸ ನಾಗಚೌತಿ ನಾಗನನ್ನು ಭಯಭಕ್ತಿಯಿಂದ ಪೂಜಿಸುವ ದಿನ. ಮನೆ ಮಂದಿ ಸ್ನಾನಮಾಡಿ, ಹೊಸಬಟ್ಟೆಯುಟ್ಟು ಹಬ್ಬವನ್ನು ಆಚರಿಸುತ್ತಾರೆ. ಹುತ್ತದ ಪೂಜೆ, ನಾಗಪ್ಪನ ವಿಗ್ರಹ ತಯಾರಿಸಿ ಪ್ರತಿಷ್ಠಾಪಿಸುವಿಕೆ, ಅದಕ್ಕೆ ಶೃಂಗಾರ ಮಾಡುವುದು, ವಿವಿಧ ಭಕ್ಷ್ಯ ಭೋಜ್ಯಗಳಿಂದ ಎಡೆ ಇಡುವುದು, ಆರತಿ ಮಾಡುವುದು, ಹೂವು ಕಾಯಿ ಅರ್ಪಿಸುವುದನ್ನು ಮಾಡುತ್ತಾರೆ. ಹಾಗೆ ಮಾಡುವಾಗ

ಅರಳಿಟ್ಟು ತಂಬಿಟ್ಟು ಮಾಡಿದ ಎಳ್ಳುಂಡಿ
ದಳ್ಳೂರಿ
ಕಣ್ಣ ಹಣಿಯವನಕೊರಳಾಗ
ನಾಗ
ನಿನಗೆಡಿಯೋ ಕೈ ಮುಗಿದು

ಎಂದು ಹಾಡುತ್ತಾರೆ. ಮಾರನೆಯ ದಿನ ನಾಗಪಂಚಮಿಯನ್ನು ಆಚರಿಸುವುದುಂಟು. ಇದಕ್ಕೆ ಹುತ್ತ ಮುರಿಯುವುದೆಂದು ಕರೆಯುವರು. ಅಂದು ನಾಗಪ್ಪನ ಪೂಜೆಯನ್ನು ಸಾಮೂಹಿಕವಾಗಿ ಆಚರಿಸುತ್ತಾರೆ. ಗೆಳತಿಯರೆಲ್ಲ ಸೇರಿ ಸುಖ ಸಂತೋಷಗಳನ್ನು ಹಂಚಿಕೊಳ್ಳುವುದರೊಂದಿಗೆ ತಮ್ಮ ಕಷ್ಟ ಕಾರ್ಪಣ್ಯಗಳನ್ನು ಬಿಚ್ಚಿಡುತ್ತಾರೆ. ಉಯ್ಯಲೆಯಾಡುತ್ತಾ ಸಂತೋಷಪಡುವುದುಂಟು. ನಂತರದ ದಿನ ಕೆರೆಕಟ್ಟುವುದರೊಂದಿಗೆ ಹಬ್ಬವು ಪೂರ್ಣಗೊಳ್ಳುತ್ತದೆ.

ಬೀದರ ಜಿಲ್ಲೆಯಲ್ಲಿ ನಾಗರ ಪಂಚಮಿಯನ್ನು ವಿಶಿಷ್ಟವಾಗಿ ಆಚರಿಸುವುದುಂಟು. ಹಬ್ಬಕ್ಕಾಗಿ ತವರೂರಿಗೆ ಬಂದಿರುವ ಮಹಿಳೆಯರು ಹಾಗೂ ಊರಿನ ಮಹಿಳೆಯರು, ಕೋರು ಹುಡುಗಿಯರು ಸೇರಿಕೊಂಡು ಹುತ್ತಿನ ಮಣ್ಣನ್ನು ತಂದು ಮೀಸಲು ನೀರಿನಲ್ಲಿ ಹದಮಾಡಿ, ತಲೆ, ಕೈಕಾಲು, ಮೂಗು, ಹೊಟ್ಟೆ ಹೀಗೆ ಎಲ್ಲ ಅಂಗಾಂಗಗಳಿರುವ ಶಿರೋಳ ಶೆಟ್ಟಿಯ ಮೂರ್ತಿಯನ್ನು ತಯಾರಿಸುತ್ತಾರೆ. ಈ ಮೂರ್ತಿಗೆ ಕುಂಕುಮ, ಅರಿಶಿಣಗಳನ್ನು ಹಚ್ಚಿ, ಅಲಂಕರಣಗೊಳಿಸಿ, ದೀಪ ಧೂಪ, ನೈವೇದ್ಯಗಳಿಂದ ಪೂಜಿಸುತ್ತಾರೆ. ಈ ಶಿರೋಳಶೆಟ್ಟಿಯ ಪೂಜೆಯಿಂದ ಬಂಜೆಯರಿಗೆ ಮಕ್ಕಳಾಗುತ್ತವೆಂಬ ನಂಬಿಕೆ ಮಹಿಳೆಯರಲ್ಲಿದೆ. ಶಿರೋಳಶೆಟ್ಟಿಯ ಆಚರಣೆಯು ವಿಜಾಪುರ ಭಾಗದಲ್ಲಿ ಆಚರಿಸುವ ಜೋಕುಮಾರನ ಆಚರಣೆಯನ್ನು ಹೋಲುತ್ತದೆ.

ನಾಗರ ಪಂಚಮಿಯ ಆಚರಣೆಯ ಸಂದರ್ಭದಲ್ಲಿ ಬೀದರ ಭಾಗದಲ್ಲಿ ಮಹಿಳೆಯರು ಹಬ್ಬದ 15-20 ದಿವಸಗಳಿಂದ ಮೊದಲುಗೊಂಡು ಹಬ್ಬದವರೆಗೆ ಕೆಲವು ವಿಶಿಷ್ಟ ಹಾಡುಗಳನ್ನು ಹಾಡುತ್ತಾರೆ. ಇವುಗಳಿಗೆ ಭೂತಾಯಿ ಹಾಡುಗಳೆಂದು ಕರೆಯಲಾಗುತ್ತದೆ. ರಾತ್ರಿ ಬೆಳದಿಂಗಳಲ್ಲಿ ಗ್ರಾಮದ ಮಹಿಳೆಯರೆಲ್ಲರೂ ಒಂದು ಗೊತ್ತಾದ ಮನೆಯ ಮುಂದೆ ಇಲ್ಲವೆ ದೇವಾಲಯದ ಎದುರುಗಡೆಯಲ್ಲಿ ಸೇರುತ್ತಾರೆ. ಒಬ್ಬರ ಕೈಯನ್ನು ಇನ್ನೊಬ್ಬರು ಹಿಡಿದುಕೊಂಡು ವೃತ್ತಾಕಾರದಲ್ಲಿ ಸೇರುತ್ತಾರೆ. ಇಂತಿಷ್ಟೆ ಮಹಿಳೆಯರು ಇರಬೇಕೆಂದೇನೂ ಇಲ್ಲ, ಆದರೆ ಸಮಸಂಖ್ಯೆಯಲ್ಲಿ ಮಾತ್ರ ಇರಬೇಕು. ಹೀಗೆ ವರ್ತುಲಾಕಾರವನ್ನು ಕಟ್ಟಿಕೊಂಡು ಕೈಗಳನ್ನು ಮುಂದೆ ಹಿಂದೆ ಮಾಡುತ್ತಾ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ವಿಷಯಗಳನ್ನು ಒಳಗೊಂಡಿರುವ ಹಾಡುಗಳನ್ನು ಹಾಡುತ್ತಾರೆ. ಇಬ್ಬರು ಮಹಿಳೆಯರು ಮುಮ್ಮೇಳವಾಗಿ ಹಾಡಿದರೆ ಉಳಿದವರು ಹಿಮ್ಮೇಳವಾಗಿ ಹಾಡುತ್ತಾರೆ. ಹಾಡಿನ ಪ್ರತಿ ಸೊಲ್ಲಿನ ಕೊನೆಗೆ ಕೋಲೆನ್ನ ಕೋಲೆ, ರನ್ನದ ಕೋಲೆನ್ನ ಕೋಲೆ, ಯೇ ಹೂವಿನ ಕೋಲೆನ್ನಕೋಲ ಎಂದು ಹೇಳುತ್ತಾರೆ. ಆದರೆ ಕೋಲನ್ನು ಬಡಿಯುವುದಿಲ್ಲ. ಉದಾಹರಣೆಗಾಗಿ ದ್ರೌಪದಿಯ ಹಾಡಿನ ಚರಣವನ್ನು ಉದಾಹರಣೆಗಾಗಿ ನೋಡಬಹುದು.

ಕಲಕಲ ನಗಬ್ಯಾಡ ಕೈ ಚಪ್ಪಾಳೆ ಬಡಿಬ್ಯಾಡ
ಎಚ್ಚರಿಕೆ
ಇರಲಿ ಮನದಾಗ ರನ್ನದ ಕೋಲೆನ್ನ ಕೋಲೆ
ಯೇ
ಹೂವಿನ ಕೋಲೆನ್ನ ಕೋಲ

ಜನಪದರ ಬದುಕಿನ ರೀತಿ, ನೀತಿ, ನಂಬಿಕೆ, ಆದರ್ಶ, ಆಲೋಚನೆ, ಕಲ್ಪನೆ ಮುಂತಾದ ಅಂಶಗಳಿಗೆ ಈ ಹಾಡುಗಳು ಕನ್ನಡಿ ಹಿಡಿಯುತ್ತವೆ. ಬೀದರ ಭಾಗದ ಜನಪದ ಸಂಸ್ಕೃತಿಯ ಸಾಮಾಜಿಕ, ಧಾರ್ಮಿಕ ಹಾಗೂ ಪೌರಾಣಿಕ ಪ್ರಜ್ಞೆಯ ಚಿತ್ರಣವನ್ನು ನೀಡುವುದರ ಜೊತೆಗೆ ಇತಿಹಾಸದ ಪುನರ್ ರಚನೆಯಲ್ಲಿ ಮಹತ್ವದ ಆಕರಗಳನ್ನು ಒದಗಿಸುತ್ತವೆ. ಈ ವಿಶಿಷ್ಟವಾದ ಹಾಡುಗಳಿಗೆ ಸಂಬಂಧಿಸಿದಂತೆ ಕೆಲವು ಸಂಪಾದನಾ ಗ್ರಂಥಗಳು ಹೊರಬಂದಿದ್ದು, ಅವುಗಳಲ್ಲಿಯ ಹಾಡುಗಳನ್ನು ಪ್ರಸ್ತುತ ಗ್ರಂಥದಲ್ಲಿ ಸಂಗ್ರಹಿಸಲಾಗಿದೆ.

ಜೋಕುಮಾರನ ಹಬ್ಬವು ಉತ್ತರ ಕರ್ನಾಟಕದಲ್ಲಿ ಒಂದು ಮುಖ್ಯವಾದ ಸಾಂಪ್ರದಾಯಿಕ ಹಬ್ಬವಾಗಿದೆ. ಈ ಹಬ್ಬಕ್ಕೆ ಅನಂತಹುಣ್ಣಿಮೆ ಅಥವಾ ಜೋಕುಮಾರನ ಹುಣ್ಣಿಮೆ ಎಂದು ಕರೆಯುವುದುಂಟು. ಏಳು ದಿವಸಗಳವರೆಗೆ ಆಚರಿಸಲ್ಪಡುವ ಜೋಕುಮಾರನ ಪೂಜೆಯ ಸ್ಥಳ ಭೂಮಿ. ಗಂಗಾ ಮತಸ್ಥರು ಇವನ ಆರಾಧಕರಾಗಿದ್ದಾರೆ. ಬಿದರಿನ ಬುಟ್ಟಿಯಲ್ಲಿ ಹೊತ್ತುಕೊಂಡು ಮನೆಮನೆಗೆ ಹೋಗಿ ಕಾಣಿಕೆ ಸಂಗ್ರಹಿಸುವ ಸಂಪ್ರದಾಯ ಕೆಲವು ಕಡೆಗಳಲ್ಲಿ ಕಂಡು ಬರುತ್ತದೆ. ಜೋಕುಮಾರನ ಆರಾಧನೆಯಿಂದ ಮಳೆ ಬೆಳೆಗಳ ಸಮೃದ್ಧಿಯಾಗುತ್ತದೆ ಅಲ್ಲದೆ ಬಂಜೆಯರಿಗೆ ಮಕ್ಕಳಾಗುತ್ತವೆಂಬ ನಂಬಿಕೆಗಳು ಜನಪದರಲ್ಲಿ ಇಂದಿಗೂ ಉಳಿದುಕೊಂಡು ಬಂದಿರುವುದು ಕಂಡು ಬರುತ್ತದೆ.

ಜೋಕ ಋಷಿ ಹಾಗೂ ಮಾರಿಯ ಮಗನಾದ ಜೋಕುಮಾರನು ತನ್ನ ತಂದೆಯನ್ನು ಹುಡುಕುತ್ತ ಸಾಗಿರುವಾಗ ಗಂಗಾಮತಸ್ಥರ ತರುಣಿ ಸುಶರ್ಣಿಕೆ ಎನ್ನುವವಳಿಗೆ ಸೋಲುತ್ತಾನೆ. ಅವಳನ್ನು ಕಾಡಿಸಿ ಪೀಡಿಸುತ್ತಿರುವಾಗ ಮಡಿವಾಳನು ಅವನನ್ನು ಕೊಲ್ಲುತ್ತಾನೆ. ಮಾರಿಯ ಸಂಪರ್ಕದಿಂದ ಜೋಕುಮಾರನ ಶಾಪವು ಮುಕ್ತಾಯವಾಗುತ್ತದೆ.

ಒಕ್ಕಲಗೇರ‌್ಯಾಗ ಹೊಕ್ಕಾಗ ನನ್ನ ಕೊಮರ
ಚಕ್ಕರಗಣ್ಣ
ತಿರವುತಜೋಕುಮಾರ
ಒಕ್ಕಲಗೇರಹೆಣ್ಣ
ನನಗೆಂದ

ಎಂದು ಜೋಕುಮಾರನ ಹುಟ್ಟು, ಸ್ವರೂಪ, ಮಹತ್ವ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಅನೇಕ ಹಾಡುಗಳು ಜನಪದರ ನಾಲಿಗೆಯ ಮೇಲಿವೆ. ಇಂದು ಆಧುನಿಕತೆಯ ಪ್ರಭಾವದಿಂದಾಗಿ ಆಚರಣೆ ತನ್ನ ಮಹತ್ವವನ್ನು ಕಳೆದುಕೊಳ್ಳುತ್ತಿರುವುದರಿಂದ ಆಚರಣೆಯ ಭಾಗವಾಗಿರುವ ಸಾಹಿತ್ಯ ಕೂಡ ಕಣ್ಮರೆ ಯಾಗುತ್ತಿದೆ. ಆದಾಗ್ಯೂ ಅಲ್ಲಲ್ಲಿ ಕೆಲವು ಲೇಖಕರು ಹಬ್ಬ ಆಚರಣೆಗೆ ಪೂರಕವಾಗಿ ಸಂಗ್ರಹಿಸಿರುವ ಸಾಹಿತ್ಯ ಲಭ್ಯವಾಗುವುದುಂಟು. ಅಂಥ ಸಾಹಿತ್ಯವನ್ನು ಪ್ರಸ್ತುತ ಗ್ರಂಥದಲ್ಲಿ ಸಂಗ್ರಹಿಸಿ ಕೊಡುವ ಪ್ರಯತ್ನವನ್ನು ಮಾಡಲಾಗಿದೆ.

ಭಾರತದ ವಿವಿಧ ಭಾಗಗಳಲ್ಲಿ ಆಚರಿಸಲ್ಪಡುವ ಬನ್ನಿಹಬ್ಬವು ಕರ್ನಾಟಕ ಸಂಸ್ಕೃತಿಯಲ್ಲಿ ವಿಶೇಷ ಮಹತ್ವವನ್ನು ಪಡೆದಿದೆ. ನವರಾತ್ರಿ, ಮಹಾನವಮಿ, ವಿಜಯದಶಮಿ, ದಸರಾ, ನಾಡಹಬ್ಬವೆಂದು ಕರೆಯಲ್ಪಡುವ ಈ ಹಬ್ಬವು ಉತ್ತರ ಭಾರತದ ಕೆಲವೆಡೆ ಶ್ರೀರಾಮ ನವರಾತ್ರಿಯೆಂದು ಆಚರಿಸಲ್ಪಡುತ್ತದೆ. ರಾವಣನ ಮೇಲೆ ರಾಮನ ವಿಜಯ, ಅಜ್ಞಾನದ ಮೇಲೆ ಜ್ಞಾನದ ವಿಜಯ, ಕತ್ತಲೆಯ ಮೇಲೆ ಬೆಳಕಿನ ಯಶಸ್ಸಿನ ಸಂಕೇತವಾಗಿ ಆಚರಿಸುವುದುಂಟು.

ಶಮೀವೃಕ್ಷ ಅಂದರೆ ಬನ್ನಿಗಿಡ. ಬನ್ನಿಗಿಡದ ಎಲೆಗಳು ಬಂಗಾರಕ್ಕೆ ಸಮಾನವೆಂತಲೂ, ವಿಜಯದ ಸಂಕೇತವೆಂತಲೂ ಪುರಾಣಗಳಲ್ಲಿ ಉಲ್ಲೇಖವಿರುವುದರಿಂದ ಬನ್ನಿಮರವನ್ನು ಪೂಜಿಸಿ ಅದರ ಎಲೆಗಳನ್ನು ಮುಡಿಯುವುದು ಪವಿತ್ರ ಕಾರ್ಯವೆಂದು ಭಾವಿಸಿ ಬನ್ನಿಹಬ್ಬವನ್ನು ಆಚರಿಸುತ್ತ ಬಂದಿರುವುದು ರೂಢಿಯಲ್ಲಿದೆ. ಪಾಂಡವರಂತೆ ಶ್ರೀರಾಮನು ರಾವಣನನ್ನು ಸಂಹರಿಸಿ ಬನ್ನಿಮರಕ್ಕೆ ಪೂಜೆ ಗೈದನಂತೆ, ಆ ಕಾರಣವಾಗಿ ಬನ್ನಿಗಿಡದ ಪೂಜೆ ಮಾಡಲಾಗುತ್ತದೆ. ಪಾಂಡವರು ವನವಾಸಕ್ಕೆ ಹೋಗುವಾಗ ತಮ್ಮ ಶಸ್ತ್ರಾಸ್ತ್ರಗಳನ್ನು ಬನ್ನಿ ಗಿಡಕ್ಕೆ ತೂಗುಹಾಕಿ ಹೋದರಂತೆ. ಬನ್ನಿಗಿಡದಲ್ಲಿ ಮಹಾಕಾಳಿ ವಾಸವಾಗಿದ್ದು ಆಕೆ ಅವುಗಳ ರಕ್ಷಕಳಾಗಿದ್ದಳು. ವನವಾಸ ಪೂರ್ಣಗೊಂಡಾಗ ಪಾಂಡವರು ಮರಳಿ ಬಂದು ಬನ್ನಿಗಿಡಕ್ಕೆ ಮಹಾಕಾಳಿಗೆ ಪೂಜೆಗೈದು ತಮ್ಮ ಶಸ್ತ್ರಾಸ್ತ್ರಗಳನ್ನು ಮರಳಿ ಪಡೆದರೆಂಬ ನಂಬಿಕೆ ಜನಪದರಲ್ಲಿದೆ. ಅಂತೆಯೇ ಈ ಸಂಗತಿಯನ್ನು ಬಿಂಬಿಸುವ

ಬನ್ನಿಯ ಗಿಡದಾಗ ಬಾಣ ಇಟ್ಟೀವಿ ತಾಯಿ
ಯಾರೂ
ಬಂದರೂ ಕೊಡಬೇಡಹಡದವ್ವ
ಅರ್ಜುನ
ಬಂದರ ಕೊಡಬೇಕ

ಇಂಥ ಹಾಡುಗಳು ಜನಪದರ ಬಾಯಿಯಲ್ಲಿವೆ. ಬನ್ನಿಗಿಡದ ಮಹತ್ವವನ್ನರಿತ ಅವರು ಈ ಬಗೆಯ ಅನೇಕ ಹಾಡುಗಳನ್ನು ಪೌರಾಣಿಕ ನೆಲೆಯಿಂದ ಕಟ್ಟಿಕೊಂಡಿದ್ದಾರೆ. ಬನ್ನಿಗಿಡದ ಮಹತ್ವ ಕುರಿತಾದ ಆ ಹಾಡುಗಳಲ್ಲಿ ಕೋಲಾಟದ ಹಾಡುಗಳು ಕೂಡ ಸ್ಥಾನ ಪಡೆದಿವೆ. ಈ ಬಗೆಯ ಹಾಡನ್ನು ಪ್ರಸ್ತುತ ಸಂಕಲನದಲ್ಲಿ ಸಂಗ್ರಹಿಸಲಾಗಿದೆ.

ಜನಪದರು ಆಚರಿಸುವ ಹಬ್ಬಗಳಲ್ಲಿ ದೀಪಾವಳಿಗೆ ವಿಶೇಷ ಮಹತ್ವವಿದೆ. ಅಶ್ವಿನಿ ಮತ್ತು ಕಾರ್ತೀಕ ಮಾಸಗಳೆರಡರ ಕಕ್ಷೆಯಲ್ಲಿ ಬರುವ ಈ ಹಬ್ಬವು ನೀರು ತುಂಬುವ ಹಬ್ಬ, ನರಕ ಚತುದರ್ಶಿ, ಲಕ್ಷ್ಮೀಪೂಜೆ ಹಾಗೂ ವರ್ಷದ ತೊಡಕು ಎಂದು ಮೂರು ದಿವಸಗಳವರೆಗೆ ಆಚರಿಸಲ್ಪಡುತ್ತದೆ. ಭರಮದೇವನು ಹಟ್ಟಿಯ ಪಾಲಕನೆಂದು ಅವನ ಪೂಜೆಯನ್ನು ಮಾಡುವುದರಿಂದ ಹಟ್ಟಿಹಬ್ಬವೆಂತಲೂ ಕರೆಯುವುದುಂಟು. ಗೋಪೂಜೆಯೆಂದು ದನಕರುಗಳನ್ನು ನಾನಾ ರೀತಿಯಲ್ಲಿ ಶೃಂಗರಿಸಿ, ನೈವೇದ್ಯ ಕೊಟ್ಟು ಪೂಜಿಸುತ್ತಾರೆ. ಸಂಜೆಯ ಸಮಯದಲ್ಲಿ ಗೊಲ್ಲಕವ್ವನನ್ನು ಪೂಜಿಸುತ್ತಾರೆ. ಮರುದಿನ ನರಕಚತುದರ್ಶಿಯ ಆಚರಣೆಯುಂಟು. ಹೆಣ್ಣು ಮಕ್ಕಳು ಗಂಡು ಮಕ್ಕಳಿಗೆ ಆರತಿಯನ್ನು ಬೆಳಗುತ್ತಾರೆ. ಲಕ್ಷ್ಮೀಪೂಜೆ ಮಾಡುತ್ತಾರೆ. ಬಲಿಪಾಡ್ಯಮಿಯೆಂದು ಬಲಿಚಕ್ರವರ್ತಿಯನ್ನು ಆಚರಿಸಲಾಗುವುದು. ಅಮಾವಾಸ್ಯೆಯ ದಿವಸ ದೀವಳಿಗೆಯ ದಂಡುಗಳು ವಿವಿಧ ಬಗೆಯ ಗೀತ ಮೇಳಗಳೊಂದಿಗೆ ಜ್ಯೋತಿಯನ್ನು ಬೆಳಗುತ್ತವೆ. ಈ ಸಂಪ್ರದಾಯ ಮಲೆನಾಡಿನಲ್ಲಿ ವೈಶಿಷ್ಟ್ಯಪೂರ್ಣವಾಗಿ ಕಂಡುಬರುತ್ತದೆ. ಹಾಡು ಕುಣಿತಗಳೊಂದಿಗೆ ಈ ಮೇಳವು ಪ್ರಧಾನಪಾತ್ರ ವಹಿಸುತ್ತದೆ. ಈ ಮೇಳದ ಹಾಡುಗಳ ವಸ್ತು ಬಹು ವೈವಿಧ್ಯಪೂರ್ಣವಾಗಿರುತ್ತದೆ. ಈ ಹಾಡುಗಳಲ್ಲಿ ಒರಟುತನ, ಕಾಮ, ಪ್ರೇಮಗಳ ಸಲ್ಲಾಪ, ಕುಚೋದ್ಯಗಳು ಕಂಡು ಬರುತ್ತವೆ. ಭಾಗವಂತಿಕೆ ಮೇಳ, ಅಂಟಿಕೆ-ಪಂಟಿಕೆ ಮೇಳ, ಪಂಜಿನ ಮೇಳ, ಪೀಡೆಯ ಹಾಡುಗಳ ಮೇಳ ಅಥವಾ ಆಣಿಪೀಣಿ ಹಾಡಿನ ಮೇಳ ಮುಖ್ಯವಾದವುಗಳಾಗಿವೆ. ಭಾಗವಂತಿಕೆ ಮೇಳವು ಮಂಡ್ಯ, ತುಮಕೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಬರುತ್ತದೆ. ಈ ಮೇಳದವರು ಪಾನ, ಬಾವುಗಳನ್ನು ತೆಗೆದುಕೊಂಡು ಊರಾಡಲು ಹೊರಡುತ್ತಾರೆ. ಇವರನ್ನು ದೀವಳಿಗೆಯ ದಂಡು ಎಂತಲೂ ಕರೆಯುವುದುಂಟು. ಈ ಮೇಳದವರು ವಿಷ್ಣುವಿನ ಮಹಿಮೆಯನ್ನು ಕುರಿತು ಅನೇಕ ಬಗೆಯ ಹಾಡುಗಳನ್ನು ಹಾಡುತ್ತ ಊರೂರಿಗೆ ಹೋಗುತ್ತಾರೆ. ಅಲ್ಲಿ ಹಾಡುಗಳನ್ನು ಹಾಡಿ ಊರವರಿಂದ ಕಾಣಿಕೆಯನ್ನು ಪ್ರತಿಯಾಗಿ ಪಡೆಯುತ್ತಾರೆ.

ಅಂಟಿಕೆ-ಪಂಟಿಕೆ ಸಂಪ್ರದಾಯವು ಮಲೆನಾಡಿನಲ್ಲಿ ಕಂಡುಬರುತ್ತದೆ. ಇದನ್ನು ಜ್ಯೋತಿ ನೀಡುವುದೆಂದೂ, ದೀಪ ಕೊಡುವುದೆಂದೂ ಕರೆಯುವುದುಂಟು. ರಾತ್ರಿ ವೇಳೆಯಲ್ಲಿ ಹುಡುಗರೆಲ್ಲಾ ಗುಂಪಾಗಿ ದೇವಸ್ಥಾನದಲ್ಲಿ ಮೊದಲು ಪೂಜೆ ಸಲ್ಲಿಸಿ, ಜ್ಯೋತಿ ಹೊತ್ತಿಸಿಕೊಂಡು ಮನೆ ಮನೆಗೆ ಹೋಗಿದೀಪೋಳಿಗೆನ್ನಿರೋ ನಮ್ಮೂರ ಭೂತಾಗೆ
ದೀಪೋಳಿಗೆನ್ನಿರೋ
ದೀಪೋಳಿಗೆ

ಎಂದು ಹಾಡುತ್ತ ಜ್ಯೋತಿಯನ್ನು ನೀಡುತ್ತಾರೆ. ಪ್ರತಿ ಮನೆಯ ಗರತಿ ಆ ಜ್ಯೋತಿಯಿಂದ ತಮ್ಮ ಮನೆಯ ದೀಪ ಹಚ್ಚಿಕೊಂಡು ಪ್ರತಿಯಾಗಿ ದಂಡಿಗೆ ದವಸ ಧಾನ್ಯಗಳನ್ನು ಕಾಣಿಕೆಯಾಗಿ ನೀಡುತ್ತಾಳೆ. ಹೀಗೆ ಇಡೀ ಊರಿಗೆ ಜ್ಯೋತಿಯನ್ನು ನೀಡಿದ ದಂಡು ದೊಡ್ಡ ತಂಡದಲ್ಲಿ ನೆರೆಯ ಊರುಗಳಿಗೆ ಹೊರಡುತ್ತದೆ. ಕೊನೆಯ ದಿವಸ ದೇವಸ್ಥಾನದಲ್ಲಿ ಅಡಿಗೆ ಮಾಡಿ ಎಲ್ಲರೂ ಸಹಭೋಜನ ಮಾಡುವುದರೊಂದಿಗೆ ಎಲ್ಲರೂ ತಮ್ಮ ಮನೆ ಸೇರುತ್ತಾರೆ.

ಉತ್ತರ ಕರ್ನಾಟಕದಲ್ಲಿ ಪೀಡೆಯ ಹಾಡುಗಳು ಅಥವಾ ಆಣಿ-ಪೀಣಿ ಹಾಡುಗಳು ಈ ಸಂದರ್ಭದಲ್ಲಿ ಕಂಡು ಬರುವುದುಂಟು. ಜೋಳದ ದಂಟು ಇಲ್ಲವೆ ಬೇವಿನ ಗರಿಗಳಿಂದ ಗೂಡು ಕಟ್ಟಿಕೊಂಡು ಹುಡುಗರು ಹಾಡುತ್ತ ಬರುತ್ತಾರೆ. ಶುಭ, ಕೃತಜ್ಞತೆ, ಉತ್ಸಾಹ, ಗೌರವ ಮುಂತಾದ ಭಾವನೆಗಳು ಈ ಹಾಡುಗಳಲ್ಲಿರುತ್ತವೆ. ದನಗಳ ಪೀಡೆಯ ನಿವಾರಣೆಯ ಉದ್ದೇಶ ಇಲ್ಲಿರುವುದರಿಂದ ಇವುಗಳಿಗೆ ಪೀಡೆಯ ಹಾಡುಗಳೆಂದು ಕರೆಯಲಾಗಿದೆ. ಉದಾಹರಣೆಗಾಗಿ ಒಂದು ಹಾಡನ್ನು ಇಲ್ಲಿ ನೋಡಬಹುದು.

ಹೊತ್ತ ಹೊಯ್ತು ಲಾಲೂ ಕತ್ತಲಾಯ್ತು ಲಾಲೂ
ಹನ್ನೆಡೆತ್ತಿನ
ಬಾಲಾ
ಬಾಲದ
ಮ್ಯಾಲ ಭಂಡಿ
ಭಂಡಿ
ಮ್ಯಾಲ ನವಲ
ನವಲ
ಪುಚ್ಚ ಒಯ್ಯೆ
ಚೂಲಿ
ಖೋಡಿಗಿ ಹಚ್ಚೆ
ನಾಚಿಕೆ
ಬಂತೋಮಾವಾ
ಮಾವನ
ಕುಂಡ್ಯಾಗ ಮ್ಯಾಣ
ಮ್ಯಾಣ
ತೆಗಿ ಜಾಣ
ಜಾಣಿ
ಕಾಲಾಗ ಫಿಲ್ಯಾ
ಫಿಲ್ಯಾ
ಪೀರಗರಿಗಿ ಗಾದ್ಯಾಗ ಹಾಯ್ಕಂಡ ದೆಂಗಿ
ಆಣಿ
ಪೀಣಿ ಜಾಂದೊ ಸೇರ ಬೊಬ್ಬರಿ ಬಿಕಾಜ್ಯೋ

ಈ ಹಾಡು ನವದಂಪತಿಗಳಿಗೆ ಸಂಬಂಧಿಸಿದ್ದಾಗಿದೆ. ಅಂದರೆ ಅಣಿಪೀಣಿ ಹಾಡುಗಳು ಕೇವಲ ದನಗಳಿಗೆ ಮಾತ್ರ ಸಂಬಂಧಿಸಿದವುಗಳಾಗಿರದೆ ಬೇರೆ ಬೇರೆ ವಿಷಯವನ್ನು ಕೂಡ ಇವು ಸೇರಿಸಿ ಕೊಂಡಿರುವುದುಂಟು. ಈ ಹಾಡುಗಳು ಸಾಂದರ್ಭಿಕವಾದ ಲಕ್ಷ್ಯಚಿತ್ರಗಳಿಂದ ಕೂಡಿದವುಗಳಾಗಿರುತ್ತವೆ. ಇಲ್ಲಿ ಹೋಲಿಕೆ, ವರ್ಣನೆ, ಪ್ರಶ್ನೋತ್ತರ ಹಾಗೂ ಜರಿಯುವಿಕೆಗಳು ಪ್ರಾಧಾನ್ಯತೆಯನ್ನು ಪಡೆದು ಕೊಂಡಿರುತ್ತವೆ.

ಭಾಗವಂತಿಕೆ ಮೇಳ, ಅಂಟಿಕೆ ಪಂಟಿಕೆ ಹಾಗೂ ಆಣಿ ಪೀಣಿ ಹಾಡುಗಳನ್ನು ಈಗಾಗಲೇ ಸಂಕಲನ ರೂಪದಲ್ಲಿ ಲೇಖಕರು ಪ್ರಕಟಿಸಿದ್ದಾರೆ. ಅವುಗಳನ್ನು ಪ್ರಸ್ತುತ ಸಂಕಲನದಲ್ಲಿ ಸಂಗ್ರಹಿಸಿ ಕೊಡಲಾಗಿದೆ.

ಜನಪದರಲ್ಲಿ ಶಕ್ತಿ ಆರಾಧನೆಯು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಭೂಮಿಪೂಜೆಯೆಂದು ಸೀಗಿಯನ್ನು ಪೂಜಿಸಿದರೆ, ಶಕ್ತಿ ಪೂಜೆಯಿಂದ ಗೌರಿಯನ್ನು ಆರಾಧಿಸುತ್ತಾರೆ. ಇವೆರಡೂ ಹಬ್ಬಗಳ ಆಚರಣೆಗಳಲ್ಲಿ ವೈವಿಧ್ಯತೆಯಿದ್ದರೂ ಸಾಹಿತ್ಯದಲ್ಲಿ ಸಾಮ್ಯತೆಯು ಕಂಡುಬರುತ್ತದೆ.

ಸೀಗಿ ಹುಣ್ಣಿಮೆಯ ದಿವಸ ಯುವತಿಯರು, ಮುತ್ತೈದೆಯರು ಸೇರಿ ಕುಂಬಾರ ತಯಾರಿಸಿದ ಮಣ್ಣಿನ ಸೀಗವ್ವನ ಎರಡು ಮೂರ್ತಿಗಳನ್ನು ತರುತ್ತಾರೆ. ಇವು ಮಣ್ಣಿನಿಂದ ಮಾಡಿದ ಗೋಪುರವಾಗಿ ಅಡಕಲ್ಲು ಗಡಿಗೆ ಏರಿಸಿದಂತೆ ಐದರಿಂದ ಒಂಬತ್ತು ಮಜಲುಗಳಿರುತ್ತವೆ. ಇವುಗಳನ್ನು ಒಂದು ಕಾಲುಮಣೆಯ ಮೇಲಿಟ್ಟುಕೊಂಡು ಅಥವಾ ಆರತಿಯ ತಟ್ಟೆಯಲ್ಲಿಟ್ಟುಕೊಂಡೋ ಸಂಪ್ರದಾಯದ ಹಾಡುಗಳನ್ನು ಹಾಡುತ್ತ ಮನೆಗೆ ತರುತ್ತಾರೆ. ಇದು ಸೀಗಿ ಹುಣ್ಣಿಮೆ ಇನ್ನೂ ಐದು ದಿವಸವಿರುವ ಪೂರ್ವದಲ್ಲಿ ಸೀಗವ್ವನನ್ನು ತರುವ ಸಂಪ್ರದಾಯವಾಗಿದೆ.

ಸೀಗಿ ಹುಣ್ಣಿಮೆಯವರೆಗಿನ ಐದು ದಿವಸಗಳಲ್ಲಿ ಸಾಯಂಕಾಲದಿಂದ ಮಧ್ಯರಾತ್ರಿಯವರೆಗೂ ಯುವತಿಯರು ಓಣಿಯಲ್ಲಿ ಸೀಗಪ್ಪ ಕೂಡಿಸಿದ ಮನೆಗಳಿಗೆ ಹೋಗಿ ಹಾಡುಗಳನ್ನು ಹಾಡುತ್ತಾರೆ. ಈ ಹಾಡುಗಳು ಸೀಗವ್ವ ಅಂದರೆ ಗೌರೀ-ಪಾರ್ವತಿಗೆ ಸಂಬಂಧಿಸಿದವುಗಳಾಗಿರುತ್ತವೆ.

ಸೀಗವ್ವವನ್ನು ಒಕ್ಕಲಿಗರು ಮಾತ್ರ ಕೂಡಿಸುತ್ತಾರೆ. ಕೆಲವೆಡೆಗಳಲ್ಲಿ ಇದನ್ನು ಸೀಗಿಗೌರಿ ಹಬ್ಬವೆಂತಲೂ, ಹೆಚ್ಚಾಗಿ ಅಂದರೆ ಹಿರಿದಾದ ಸುಗ್ಗಿ ಎಂತಲೂ ಇನ್ನು ಕೆಲವು ಕಡೆ ಕೌಮುದಿ ಮಹೋತ್ಸವ ಎಂತಲೂ ಕರೆಯುವುದುಂಟು. ಸೀಗಿ ಹಬ್ಬ ಒಕ್ಕಲಿಗರಿಗೆ ಸಂಬಂಧಿಸಿರುವುದರಿಂದ ಇದು ಭೂಮಿಪೂಜೆಯ ಹಿನ್ನೆಲೆಯ ಆಚರಣೆಯನ್ನು ಹೊಂದಿದೆ. ಚರಗ ಚೆಲ್ಲುವುದು ಇಲ್ಲಿಯ ಪ್ರಮುಖವಾದ ಆಚರಣೆಯಾಗಿದೆ. ಭೂಮಿತಾಯಿಗೆ ಬಂಕೀ ಅಂದರೆ ಬಯಕೆಯ ಊಟ ಕೊಡುವುದು ಇಲ್ಲಿಯ ಮುಖ್ಯ ಉದ್ದೇಶ. ಈ ಹುಣ್ಣಿಮೆಗೆ ನೆಲದಾಯಿ ಫಲವತಿಯಾಗಿ ನಲಿಯುತ್ತಿರುತ್ತಾಳೆ. ಕಾರಣ ಫಲದಾಯಿಗೆ ಉಣಿಸುವ ಬಯಕೆಯ ಊಟವೇ ಸೀಗಿ ಹುಣ್ಣಿಮೆಯ ಹಬ್ಬವು. ಹುಣ್ಣಿಮೆಯ ಮೊದಲಿನ ಐದು ದಿನಗಳ ಕಾಲ ಹೆಣ್ಣುಮಕ್ಕಳು ಆರತಿ ಮಾಡಿ ಸಂಪ್ರದಾಯದ ಹಾಡುಗಳನ್ನು ಹಾಡುತ್ತಾರೆ. ಹುಣ್ಣಿಮೆಯ ದಿವಸ ಹೊಸದಾಗಿ ಬೆಳೆದ ಧಾನ್ಯಗಳಿಂದ ತಯಾರಿಸಿದ ಅಡಿಗೆ ಮಾಡಿ ಹೊಲಗಳಿಗೆ ತೆಗೆದುಕೊಂಡು ಹೋಗಿ ಬೆಳೆದ ಫಸಲಿನಲ್ಲಿ ಪಂಚಪಾಂಡವರು ಮತ್ತು ಕೊಂತಿ (ಕುಂತಿ)ಯನ್ನು ಕೂಡಿಸಿ ಪೂಜೆಸಲ್ಲಿಸುತ್ತಾರೆ. ನೈವೇದ್ಯ ತೋರಿ ಫಸಲಿನ ತುಂಬೆಲ್ಲ ಚರಗ ಚೆಲ್ಲುತ್ತಾರೆ. ನೆಲದಾಯಿಗೆ ಬಯಕೆಯ ಊಟ ಕೊಡುವ ಕೃತಜ್ಞಾಪೂರ್ವಕವಾದ ಉದಾತ್ತ ಸಂಸ್ಕಾರವು ಇಲ್ಲಿ ಕಂಡು ಬರುತ್ತದೆ.

ಬೀದರ ಜಿಲ್ಲೆಯಲ್ಲಿ ಶೀಗಿ ಹಬ್ಬದ ಆಚರಣೆ ತನ್ನದೇ ಆದ ವೈಶಿಷ್ಟ್ಯಗಳನ್ನು ಹೊಂದಿದೆ. ಇಲ್ಲಿ ಶೀಗಿ ಹುಣ್ಣಿಮೆಗೆ ಆಡುವುದು, ಹಾಡುವುದು ಕೊನೆಗೊಳ್ಳುವುದರಿಂದ ಶೀಗಿಆಟ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಮಹಾನವಮಿಯಿಂದ ಶೀಗಿ ಹುಣ್ಣಿಮೆಯತನಕ ನಡುವಿನ ಆರೇಳು ದಿವಸಗಳವರೆಗೆ ಶೀಗಿ ಆಚರಣೆಯನ್ನು ಮಾಡುತ್ತಾರೆ. ಆ ನವಮಿ ಸಂಜೆ ಏಳು ಗಂಟೆಯಿಂದ ರಾತ್ರಿ ಹತ್ತು ಗಂಟೆಯ ನಡುವಿನ ಅವಧಿಯಲ್ಲಿ ಹೆಣ್ಣು ಮಕ್ಕಳು ತಮಗನುಕೂಲವಿದ್ದಂತೆ, ತಮಗೆ ಬೇಕಾದಷ್ಟು ಸಮಯದವರೆಗೆ ಶೀಗಿ ಆಡುವುದುಂಟು. ಶೀಗಿ ಆಡುವ ಈ ಗುಂಪು ಗ್ರಾಮದ ಎಲ್ಲರ ಮನೆ ಮನೆಗೆ ಹೋಗಿ ಅವರ ಮನೆಯ ಮುಂದೆ ಆಡುತ್ತ ವಿಭಿನ್ನ ಪ್ರಕಾರದ ಹಾಡುಗಳನ್ನು ಹಾಡುತ್ತಾರೆ. ಪಾರ್ವತಿ, ಬಸವಣ್ಣ, ಎತ್ತು-ಬಿತ್ತು, ಬೆಳೆ, ಗಂಗೀ-ಗೌರಿ ಸಂವಾದ ಹೀಗೆ ಅನೇಕ ಬಗೆಯ ವಸ್ತುವನ್ನು ಈ ಹಾಡುಗಳು ಹೊಂದಿರುತ್ತವೆ. ಅಲ್ಲದೆ ಈ ಹಾಡುಗಳು ಛಂದೋ ವೈವಿಧ್ಯದಿಂದಲೂ ಕೂಡಿದ್ದಾಗಿವೆ. ಗಂಗೆಗೆ ಸಂಬಂಧಿಸಿದ ಗಂಗಮ್ಮನ ಧಡಿ ಹಾಡಿನ ಒಂದು ನುಡಿಯನ್ನು ಇಲ್ಲಿ ಉದಾಹರಣೆಗಾಗಿ ನೋಡಬಹುದು.

ಐದ ಚುಕ್ಕ ಬೆಂಡೆಗೆ ಹೂವಾ ತುಂಬುತ ತಳಕುತ
ಘಂದದ
ಮಡವ ಹುಳಕುತಕೋಲೆ
ಘಂದು
ಅದ ಮಡವ ಝಳಕೆ ಜಾಳಿನಿದರಡಿ
ಹೀಂಗೇ
ನಡಿರಯ್ಯ ಧಡಿದೊಳಗೆ ಕೋಲೆ
ನಮಗೆಲ್ಲಿ
ಜಡಿದೋಳೂ ನಮಗೆಲ್ಲಿ ಧಡಿದೋಳು
ಗಂಗಮ್ಮ
ಧಡಿಲಿ ಸೆಳಮಂಚಕೋಲೆ
ಗಂಗಮ್ಮ
ಧಡಿಲಿ ಸೆಳಮಂಚಕೋಲೆ

ಇಲ್ಲಿ ಕೋಲೆ ಎಂಬ ಪದಪ್ರಯೋಗವಿದೆಯಷ್ಟೇ ಹೊರತು ಮಹಿಳೆಯರು ಕೋಲುಗಳನ್ನು ಹಿಡಿಯುವುದಿಲ್ಲ, ಬಡಿಯುವುದಿಲ್ಲ. ಹಾಡಿನ ಲಯಕ್ಕಾಗಿ ಮಾತ್ರ ಈ ಪದವನ್ನು ಬಳಸಿರುವುದು ಗಮನಿಸಬೇಕಾದ ಸಂಗತಿಯಾಗಿದೆ.

ಇಲ್ಲಿ ಶೀಗಿ ಆಡುವುದೆಂದರೆ ಪ್ರತಿಯೊಬ್ಬ ಹೆಣ್ಣುಮಗಳು ಶೀಗಿ ಆಚರಣೆಯ ಆರೇಳು ದಿವಸಗಳ ಕಾಲ ತನ್ನ ಮನೆಯ ಬಾಗಿಲಿಗೆ ಇಲ್ಲವೇ ಆವರಣದ ತುದಿಗೆ ಶೀಗಿ ಬಳಿದು ಅಲ್ಲಿಯೇ ಶೀಗಿ ಆಡುತ್ತಾರೆ. ಅಂದರೆ ಮನೆಯಲ್ಲಿ ಹಣತೆ (ದೀಪ) ಹಚ್ಚಿಟ್ಟು, ಕುಕ್ಕೆನ ಹೂವು, ಕಾರಳದಹೂವು ಮುಂತಾದವುಗಳಿಂದ ಶೃಂಗಾರಗೊಳಿಸುತ್ತಾರೆ. ಅಲ್ಲದೆ ಆಚರಣೆಯ ಮೊದಲನೆಯ ದಿನ ಚುಕ್ಕಿ ಚಂದ್ರರ ವಿನ್ಯಾಸವನ್ನು ಬಳಿಯುತ್ತಾಳೆ. ಎರಡನೆಯ ದಿನ ಗಂಗಿ-ಗೌರಿಯ ವಿನ್ಯಾಸ, ಮೂರನೆಯ ದಿನ ಬಾಳೆಗಿಡ ಅಥವಾ ಕುಂಬಳಹೂವಿನ ಚಿತ್ರ ಬಿಡಿಸುವುದುಂಟು. ನಾಲ್ಕನೆಯ ದಿನ ಕಬ್ಬಿನ ತೋಟ ಹಾಗೂ ಅದನ್ನು ಕಾಯುವ ಕಾವಲುಗಾರ ಮನುಷ್ಯ ಇಲ್ಲವೇ ಬಾಳೆಗಿಡವನ್ನು ಬಿಡಿಸುತ್ತಾರೆ. ಐದನೆಯ ದಿನ ಹನುಮಂತದೇವರು ಇಲ್ಲವೇ ಒಂದು ಹೂವನ್ನು ಇಳಿಸುವುದುಂಟು. ಆರನೆಯ ದಿನ ಏಳು ಸುತ್ತಿನ ಕೋಟೆಯನ್ನು ಬಿಡಿಸುವರು. ಏಳನೆಯ ದಿನ ಶೀಗಿ ಹುಣ್ಣಿಮೆಯಾಗಿದ್ದು ಅಂದು ತಮಗೆ ಬೇಕಾದ ಯಾವುದೋ ಒಂದು ವಿನ್ಯಾಸವನ್ನು ಇಳಿಸುವರು. ಹೀಗೆ ಆರೇಳು ದಿವಸಗಳ ಕಾಲ ವಿಭಿನ್ನವಾದ ಚಿತ್ರಗಳನ್ನು ಬಿಡುಸುವುದಕ್ಕೆ ಶೀಗಿ ಆಡುವುದು ಎಂದು ಕರೆಯಲಾಗುತ್ತದೆ. ಈ ಚಿತ್ರಗಳು ಸಾಂಕೇತಿಕವಾಗಿದ್ದು, ಸೃಷ್ಟಿಯ ಊಗಮ ಹಾಗೂ ಮಾನವ ಸಂಸ್ಕೃತಿಯ ವಿಕಾಸವನ್ನು ಧ್ವನಿಸುತ್ತವೆ.

ಈ ಹಾಡುಗಳನ್ನು ಹಾಡುವಾಗ ಯಾವುದೇ ವಾದ್ಯಪರಿಕರಗಳನ್ನು ಬಳಸುವುದಿಲ್ಲ ಆದರೆ ಕೋಲೆ, ಕೋಲೆನ್ನ ಕೋಲೆ, ಕೋಲ ನೀರೆ ಮುಂತಾದ ನುಡಿಯ ಕೊನೆಗೆ ರಾಗ ಎಳೆಯುವುದುಂಟು. ಆದರೆ ಕೈಯಲ್ಲಿ ಕೋಲನ್ನು ಹಿಡಿಯುವುದಿಲ್ಲ ಹಾಗೂ ಬಡಿಯುವುದಿಲ್ಲ. ಈ ಬಗೆಯ ಪದ ಪ್ರಯೋಗಗಳು ಪ್ರಾಯಶಃ ಹಾಡಿನ ಧಾಟಿ, ರಾಗ, ಪಲ್ಲವಿ, ಏರು-ಇಳಿವುಗಳ ಅನುಕೂಲಕ್ಕಾಗಿರಬಹುದು. ಇಲ್ಲವೇ ಈ ಮೊದಲು ಹಾಡುವಾಗ ಕೋಲುಗಳನ್ನು ಬಳಸುತ್ತಿರಬಹುದೆಂಬ ತರ್ಕಕ್ಕೆ ಎಡೆಮಾಡಿ ಕೊಡುತ್ತದೆ.

ಹೀಗೆ ಬೀದರ ಜಿಲ್ಲೆಯಲ್ಲಿ ಶೀಗಿ ಹಬ್ಬದ ಆಚರಣೆಯು ಆಡು ಮತ್ತು ಹಾಡುಗಳಿಗೆ ಕೂಡಿದ್ದಾಗಿದ್ದು ತನ್ನದೇ ಆದ ವೈಶಿಷ್ಟ್ಯಗಳಿಂದ ಕೂಡಿದೆ. ಈ ಸಂದರ್ಭದಲ್ಲಿ ಹಾಡುವ ವಿಭಿನ್ನ ಬಗೆಯ ಹಾಡುಗಳನ್ನು ಇಲ್ಲಿ ಸಂಗ್ರಹಿಸಿ ಕೊಡಲಾಗಿದೆ.

ಪ್ರಸ್ತುತ ಸಂಕಲನದಲ್ಲಿ ಈಗಾಗಲೇ ವಿದ್ವಾಂಸರು ಸಂಗ್ರಹಿಸಿ ಪ್ರಕಟಿಸುವ ಬಿಡಿ ಹಾಡುಗಳು, ಕಥನ ಗೀತೆಗಳು ಹಾಗೂ ದುಂದುಮೆ ಪದಗಳನ್ನು ಸಂಗ್ರಹಿಸಲಾಗಿದೆ.

ಪ್ರಸ್ತುತ ಸಂಕಲನದಲ್ಲಿ ಹಿಂದೂಗಳಲ್ಲಿ ಆಚರಣೆಯಲ್ಲಿರುವ ಹಬ್ಬಗಳಿಗೆ ಸಂಬಂಧಿಸಿದ ಜನಪದ ಹಾಡುಗಳನ್ನು ಸಂಗ್ರಹಿಸಲಾಗಿದೆ. ಈಗಾಗಲೇ ಸಂಪಾದನೆ ಮಾಡಿ ಪ್ರಕಟಿಸಿರುವ ವಿದ್ವಾಂಸರಕೃತಿಗಳಲ್ಲಿಯ ಹಾಡುಗಳನ್ನು ಸಂಗ್ರಹಿಸಿ ವೈಜ್ಞಾನಿಕವಾದ ವಿಭಾಗ ಕ್ರಮಕ್ಕೆ ಒಳಪಡಿಸಿ ಅವುಗಳನ್ನು ಇಲ್ಲಿ ಕೊಡಲಾಗಿದೆ. ಅನುಬಂಧದಲ್ಲಿ ಆಧಾರ ಗ್ರಂಥಗಳ ಭಾಗದಲ್ಲಿ ಸಂಪಾದನಾ ಕೃತಿಗಳ ಪಟ್ಟಿಯನ್ನು ನೀಡಲಾಗಿದ್ದು, ಅವುಗಳಿಂದ ಹಾಡುಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಆ ಸಂಪಾದಕರಿಗೆಲ್ಲ ನಾನು ಋಣಿಯಾಗಿದ್ದೇನೆ. ಅಲ್ಲದೆ ಬಿಡಿ ಬಿಡಿಯಾಗಿ ಕೆಲವು ಹಾಡುಗಳನ್ನು ಬೇರೆ ಬೇರೆ ಗ್ರಂಥಗಳಿಂದಲೂ ಆರಿಸಿಕೊಳ್ಳಲಾಗಿದೆ. ಅಂತಹ ಕೃತಿಗಳನ್ನು ಸಹಾಯಕ ಗ್ರಂಥಗಳ ಭಾಗದಲ್ಲಿ ಕಾಣಿಸಲಾಗಿದೆ. ಅವರಿಗೂ ಕೂಡ ನಾನು ಋಣಿಯಾಗಿದ್ದೇನೆ. ಈ ಮಹತ್ವಪೂರ್ಣ ಸಂಪಾದನಾ ಕಾರ್ಯವನ್ನು ನಿರ್ವಹಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿಜಕ್ಕೂ ಮೆಚ್ಚುಗೆಗೆ ಪಾತ್ರವಾಗಿದೆ. ಸಮಗ್ರ ಕನ್ನಡ ಜನಪದ ಸಾಹಿತ್ಯ ಸಂಪುಟ ಪ್ರಕಟಣಾ ಯೋಜನೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತ ಈ ಮಹತ್ವದ ಯೋಜನೆಯನ್ನು ಅರ್ಥಪೂರ್ಣಗೊಳಿಸುತ್ತಿರುವ ಡಾ. ಹಿ.ಶಿ. ರಾಮಚಂದ್ರೇಗೌಡ ಅವರಿಗೆ ಅನಂತ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ಪ್ರಸ್ತುತ ಹಬ್ಬದ ಹಾಡುಗಳು ಸಂಪುಟವನ್ನು ಅಚ್ಚು ಕಟ್ಟಾಗಿ ಹೊರಬರಲು ಅಮೂಲ್ಯವಾದ ಸಲಹೆ ಸೂಚನೆಗಳನ್ನು ನೀಡಿ, ಹಸ್ತಪ್ರತಿಯನ್ನು ಪರಿಶೀಲನೆ ಮಾಡಿರುವ ಡಾ. ಎಂ.ಎಸ್. ಲಠ್ಠೆ ಅವರಿಗೂ ಹಾಗೂ ಪ್ರಕಟಣಾ ಮಂಡಳಿಯ ಎಲ್ಲ ಸದಸ್ಯರಿಗೂ ನಾನು ತುಂಬ ಕೃತಜ್ಞನಾಗಿದ್ದೇನೆ. ಈ ಬೃಹತ್ ಸಂಪುಟ ಹೊರಬರಲು ಪರೋಕ್ಷವಾಗಿ ಅಪರೋಕ್ಷವಾಗಿ ಸಲಹೆ-ಸೂಚನೆಗಳನ್ನು ನೀಡಿದ, ಸಹಾಯ ಸಹಕಾರ ಮಾಡಿದ ಎಲ್ಲ ವಿದ್ವಾಂಸರಿಗೂ, ಸ್ನೇಹಿತರಿಗೂ ನಾನು ಉಪಕೃತನಾಗಿದ್ದೇನೆ. ಈ ಕೃತಿಯನ್ನು ಓದುಗರು ಮೆಚ್ಚಿಕೊಂಡಲ್ಲಿ ನನ್ನ ಶ್ರಮ ಸಾರ್ಥಕವೆಂದು ಭಾವಿಸುವೆ. ಕೊರತೆಗಳೇನಾದರೂ ಕಂಡು ಬಂದಲ್ಲಿ ಅದನ್ನು ಸೂಚಿಸಿದಲ್ಲಿ ತೆರೆದ ಹೃದಯದಿಂದ ಸ್ವಾಗತಿಸುತ್ತೇನೆ.

ಡಾ. ಡಿ.ಬಿ. ನಾಯಕ
ಸಂಪಾದಕರು