ಜೀವ ವಿಕಾಸದ ಘಟ್ಟಗಳಲ್ಲಿ ಮಾನವನ ಅಸ್ತಿತ್ವ ಅತ್ಯಂತ ಪ್ರಮುಖವಾದುದಾಗಿದೆ. ಮಾನವ ಮತ್ತು ನಿಸರ್ಗಗಳ ಸಂಪರ್ಕ ಗಾಢವಾಗುತ್ತ ಬೆಳೆದಂತೆಲ್ಲ ನಿಸರ್ಗದ ಎಲ್ಲ ಘಟನೆಗಳು ಬೆರಗು ಮೂಡಿಸಿದವು. ಧಿಮ್ಮೆಂದು ಸಿಡಿಯುವ ಜ್ವಾಲಾಮುಖಿ, ದಕ್ಕಿದ್ದನ್ನು ಕೊಚ್ಚಿ ಸೆಳೆದೊಯ್ಯುವ ಭೀಕರ ಪ್ರವಾಹ, ಇದಕ್ಕಿದ್ದಂತೆ ಮೂಡುವ ಸೂರ್ಯ ಮತ್ತು ಕವಿಯುವ ಗಾಢ ಕತ್ತಲೆ ಇತ್ಯಾದಿಗಳು ಯಾವುದೇ ಆದಿಮ ಗುಂಪಿನ ವ್ಯಕ್ತಿಯ ಭಯ ವಿಸ್ಮಯಗಳಾಗಿ ಸೀಮಿತವಾಗದೇ ಇಡೀ ವೃಂದದ ಸಾಮೂಹಿಕ ಅನುಭವಗಳಿಗೆ ಕಾರಣವಾಗುತ್ತವೆ. ಇಂಥ ಅನುಭವಗಳು ಕೇವಲ ಅವರ ಭಾವನಾ ಪ್ರಪಂಚಕ್ಕೆ ನಿರ್ದಿಷ್ಟಗೊಳ್ಳದೆ, ಅನಿಯಂತ್ರಿತ ಶಕ್ತಿಗಳ ಅದ್ಭುತ, ಅಮಾಯಕ ಭಯೋತ್ಪಾದಕ ಕಲ್ಪನೆಗಳಿಗೆ ಪ್ರೇರಣೆಯನ್ನು ಒದಗಿಸುತ್ತವೆ.

ಅಗೋಚರ ಶಕ್ತಿಗಳು ಮೂರ್ತರೂಪಗೊಳ್ಳುವ ಕಾರಣವಾಗಿ ಬೆಂಕಿಯ ಮೂರ್ತೀಕರಣದಲ್ಲಿ ಅಗ್ನಿದೇವತೆ, ಬೆಳಕಿನ ಮೂರ್ತೀಕರಣದಲ್ಲಿ ಸೂರ್ಯದೇವ, ಕೃಷಿ ಕಾರ್ಯಗಳ ಹಿನ್ನೆಲೆಯಲ್ಲಿ ಭೂಮಿ, ಭೂದೇವಿ, ಭೂಮಿತಾಯಿ, ಗೋಮಾತೆ, ಬಿರುಗಾಳಿ ಧಾರಾಕಾರ ಮಳೆಗಳು ವರುಣ, ಇಂದ್ರ ಮುಂತಾದ ದೇವತೆಗಳ ಸೃಷ್ಟಿಗೆ ಕಾರಣವಾದವು. ಈ ದೈವೀಶಕ್ತಿಗಳು ವ್ಯಷ್ಟಿ ಮತ್ತು ಸಮಷ್ಟಿಗಳ ಹಿತರಕ್ಷಣೆ ಮಾಡಬೇಕು ಹಾಗೂ ಸುಖ ಸಮೃದ್ಧಿಯನ್ನು ಕರುಣಿಸಬೇಕೆಂಬ ಹಿನ್ನೆಲೆಯಲ್ಲಿ ಅವುಗಳ ಅರ್ಚನೆ, ನೇಮ, ಸ್ತುತಿಗಳು ಪ್ರಾರಂಭವಾದವು !!…….ಎಳ್ಳು ಜೀರಿಗೆ ಬೆಳೆಯುವ ಭೂಮಿ ತಾಯಿಯ ಎದ್ದೊಂದು ಗಳಿಗೆ ನೆನೆದೇನು ಎಂದು ಸ್ತುತಿ ಮಾಡಲು ಪ್ರಾರಂಭವಾಯಿತು. ಜನಪದರ ಅಗಣಿತ ಆಚರಣೆಗಳಲ್ಲಿ ಪ್ರಧಾನವಾಗಿ ಸ್ತುತಿ ಕಂಡು ಬರುತ್ತದೆ. ದೈವೀಶಕ್ತಿಗಳ ಕೃಪೆಯನ್ನೂ ಕೋರುವುದು ಇಲ್ಲಿಯ ಮುಖ್ಯ ಉದ್ದೇಶವಾಗಿದೆ.

ಹಬ್ಬ ಎನ್ನುವ ಪದ ಮೂಲತಃ ಪರ್ವ ಶಬ್ಧದ ತದ್ಭವರೂಪವಾಗಿದೆ. ನಮ್ಮ ಜನಾಂಗಿಕ ಜೀವನದ ನಿರ್ದಿಷ್ಟ ಕಾಲದ ಆಚರಣೆ-ಉತ್ಸವಕ್ಕೆ ಸಂಕೇತವಾಗಿರುವುದುಂಟು. ಪರ್ವ ಎಂದರೆ ಕಾಲ ವಿಭಜನೆ ಎಂದು ಅರ್ಥ. ತಿಂಗಳ ಮೊದಲ ಅರ್ಧಾವಧಿಯೊಳಗೆ ಚಂದ್ರನಲ್ಲಿ ಉಂಟಾಗುವ ನಾಲ್ಕು ಬದಲಾವಣೆಗಳ ಕಾಲ. ವಿಶೇಷತಃ ಎಂಟನೆಯ ಮತ್ತು ಹದಿನಾಲ್ಕನೆಯ ದಿನ. ಮಾನವನ ಬಯಕೆ ಅಥವಾ ಇಚ್ಛೆಯ ಸಂಕಲ್ಪ, ವ್ರತ, ಆ ಇಚ್ಛೆಯ ಪೂರ್ಣತೆಗಾಗಿ ಒಂದು ನಿರ್ದಿಷ್ಟ ಅವಧಿಯಲ್ಲಿ ಕೈಕೊಳ್ಳುವ ಆಚರಣೆಗಳ ರೂಢಿ ಉತ್ಸವಗಳೇ ಹಬ್ಬ : ಹೀಗಾಗಿ ಆಚರಣೆ ಮತ್ತು ಹಬ್ಬಗಳಿಗೆ ಬೇರ್ಪಡಿಸಲಾರದ ಸಂಬಂಧವಿದೆ. ಶಿಲಾಪೂರ್ವ ಮಾನವ, ನಾಗರಿಕತೆಯ ಬೆಳೆದಂತೆಲ್ಲ ಇಂದಿನ ಸ್ಥಿತಿಗೆ ತಲುಪಿದೆ. ನಮ್ಮ ಜನಾಂಗದ ಜೀವನ ವಿಕಾಸಗೊಳ್ಳುತ್ತ ಬಂದುದೇ ಒಂದು ರೋಚಕವಾದ ಸಾಹಸಮಯ ಸಂಗತಿಯಾಗಿದೆ.

ಆದಿ ಮಾನವನಿಂದ ಮೊದಲುಗೊಂಡು ಕಾಲಾನುಕ್ರಮದಲ್ಲಿ ಬೆಳೆದು ಬಂದ ಬೇಟೆ, ಗಡ್ಡೆ-ಗೆಣಸುಗಳ ಸಂಗ್ರಹ, ಒಂದೆಡೆ ನೆಲೆನಿಂತು ಕೃಷಿಗೆ ತೊಡಗಿದುದು, ಕಲಿಕೆಯ ವಿಧಾನ, ಅರ್ಚನೆ-ಆರಾಧನೆ, ಭಾವಾಭಿವ್ಯಕ್ತಿಯ ವಿವಿಧ ಮಾಧ್ಯಮಗಳನ್ನು ಕಂಡುಕೊಳ್ಳುವಿಕೆ ಮಾನವನ ಒಟ್ಟು ಸಂಸ್ಕೃತಿ ಸ್ವರೂಪ ರಚನೆಯ ಆಧಾರ ಸ್ತಂಭಗಳಾಗಿ ನಿಂತಿವೆ. ಮನುಷ್ಯನ ಅಸ್ತಿತ್ವದ ವಿವಿಧ ಹಂತಗಳು ಅವನ ಸಾಂಸ್ಕೃತಿಕ ಬೆಳವಣಿಗೆಯ ಜೊತೆಗೆ ಒಪ್ಪಂದ ಮಾಡಿಕೊಳ್ಳುತ್ತ ಪರಿವರ್ತನೆಗೆ ಒಳಗು ಮಾಡಿಕೊಳ್ಳುತ್ತ ಬಂದಿರುವ ಕಥೆಯೇ ಇತಿಹಾಸ ಪೂರ್ವಕಾಲದ ವಿಕಾಸದ ಕಥೆಯಾಗಿದೆ.

ಮಾನವನ ನಂಬಿಕೆ, ಆಚರಣೆ, ಶ್ರದ್ಧೆ ಹಾಗೂ ಹಬ್ಬಗಳು ಮಾನವನ ಸಂಸ್ಕೃತಿಯ ವಿಕಾಸವನ್ನು ಶೋಧಿಸುವಲ್ಲಿ ಆಧಾರ ಸಾಮಗ್ರಿಗಳನ್ನು ಒದಗಿಸುತ್ತವೆ. ಹೀಗಾಗಿ ಮಾನವ ಸಂಸ್ಕೃತಿಯ ಅಧ್ಯಯನದಲ್ಲಿ ಹಬ್ಬಗಳಿಗೆ ವಿಶೇಷ ಮಹತ್ವವಿದೆ.

ನಮ್ಮ ಭಾರತ ದೇಶವು ಅನೇಕ ಧರ್ಮಗಳ ನೆಲೆವೀಡಾಗಿದೆ. ಅನೇಕತೆಯಲ್ಲಿ ಏಕತೆಯನ್ನು ಮೆರೆಯುವುದು ನಮ್ಮ ದೇಶದ ವೈಶಿಷ್ಟ್ಯವಾಗಿದೆ. ಹೀಗಾಗಿ ಇಲ್ಲಿ ಅನೇಕ ಧರ್ಮಗಳಿಗೆ ಸಂಬಂಧಿಸಿದ ವಿವಿಧ ಬಗೆಯ ಹಬ್ಬಗಳು ಮತ್ತು ಜಾತ್ರೆಗಳು ಆಚರಣೆಯಲ್ಲಿವೆ. ಹಬ್ಬಗಳಲ್ಲಿ ಸಾರ್ವತ್ರಿಕವಾಗಿ ಆಚರಿಸುವ ಮತ್ತು ಆಯಾ ಗ್ರಾಮಗಳು ಸೀಮಿತವಾಗಿ ಆಚರಿಸುವ ಎರಡು ಬಗೆಯ ಸಂಪ್ರದಾಯಗಳು ಕಂಡು ಬರುತ್ತವೆ. ಆದರೆ ಈ ಎರಡೂ ಬಗೆಯ ಹಬ್ಬಗಳ ಉದ್ದೇಶ ಮಾತ್ರ ಒಂದೇ ಆಗಿದ್ದು ಅದು ಸಾಮಾಜಿಕ  ಕಲ್ಯಾಣವೇ ಆಗಿದೆ. ಹಿಂದೂಗಳಲ್ಲಿ ಸಾರ್ವತ್ರಿಕವಾಗಿ ಉಗಾದಿ, ಮಣ್ಣಿತ್ತಿನ ಅಮಾವಾಸ್ಯೆ, ನಾಗರಪಂಚಮಿ, ಜೋಕುಮಾರ, ಗೌರಿ-ಗಣೇಶ, ಮಹಾನವಮಿ, ದೀಪಾವಳಿ, ಹೋಳಿ ಮುಂತಾದ ಹಬ್ಬಗಳನ್ನು ವೈಶಿಷ್ಟ್ಯಪೂರ್ಣವಾಗಿ ಆಚರಿಸುವುದುಂಟು. ಗ್ರಾಮದ ಜನರೆಲ್ಲ ಸೇರಿ ಆಚರಿಸುವ ಹಬ್ಬಗಳು ಆಯಾ ಗ್ರಾಮಗಳಲ್ಲಿ ನೆಲೆನಿಂತಿರುವ ಮಾರಮ್ಮ, ದುರ್ಗಮ್ಮ, ಮಾಯಮ್ಮ, ಮಾಸ್ತಮ್ಮ, ಲಕ್ಕಮ್ಮ, ಪೋಚಮ್ಮ, ಕಾಳಮ್ಮ, ಎಲ್ಲಮ್ಮ, ಬಸವೇಶ್ವರ, ಹನುಮಂತ ಮುಂತಾದ ದೇವತೆಗಳ ಹಬ್ಬ, ಉತ್ಸವ ಜಾತ್ರೆಗಳನ್ನು ಆಚರಿಸುತ್ತಾರೆ. ಗ್ರಾಮದೇವತೆಗಳ ಹಬ್ಬಗಳಲ್ಲಿ ಆಯಾ ಗ್ರಾಮಗಳ ಸಂಪ್ರದಾಯಕ್ಕೆ ಸಂಬಂಧಿಸಿದಂತೆ ವಿಭಿನ್ನವಾಗಿ ಮತ್ತು ವೈಶಿಷ್ಟ್ಯಪೂರ್ಣವಾಗಿ ಆಚರಣೆಗಳಿರುವುದು ಕಂಡು ಬರುತ್ತದೆ.

ಈ ಹಬ್ಬ ಮತ್ತು ಜಾತ್ರೆಗಳು ಮಾನವನು ತನ್ನ ಅವಿಶ್ರಾಂತವಾದ ದುಡಿಮೆಯ ನಡುವೆ ಬಿಡುವು ಮಾಡಿಕೊಂಡು ಎಲ್ಲರೊಡನೆ ಸಂತೋಷದಿಂದ ಕೂಡಿ ಬಾಳಲು ಸಹಕಾರಿಯಾಗಿದೆ. ಕುಟುಂಬಗಳು ಬೆಳೆದು ದೊಡ್ಡವುಗಳಾಗಿ, ವಿಭಜನೆಗೊಂಡು ಬದುಕಿನ ಅನಿವಾರ್ಯತೆಗಳಿಂದಾಗಿ ದೂರ ದೂರ ಚದುರಿ ಹೋದ ಬಂಧು ಬಾಂಧವರು, ಸಂಬಂಧಿಕರು, ಹಬ್ಬದ ನೆಪದಲ್ಲಿ ಆಗಾಗ್ಗೆ ಒಂದೆಡೆ ಕಲೆತು ಪರಸ್ಪರ ಕಷ್ಟ ಸುಖ ಸಂತೋಷಗಳನ್ನು ಹಂಚಿಕೊಳ್ಳಲು ಇವು ತುಂಬ ಸಹಾಯಕವಾಗಿವೆ. ದೇವ-ದೇವತೆಗಳನ್ನು ಪೂಜಿಸುವುದರಿಂದ ವ್ಯಕ್ತಿಗೆ, ಗ್ರಾಮಕ್ಕೆ ಹಾಗೂ ನಾಡಿಗೆ ಸುಖಸಮೃದ್ಧಿಯಾಗುತ್ತದೆಂಬ ನಂಬಿಕೆ ಹಬ್ಬ ಮತ್ತು ಜಾತ್ರೆಗಳು ಅವಿರತವಾಗಿ ಮುಂದುವರಿದುಕೊಂಡು ಬರಲು ಕಾರಣವಾಗಿದೆ.

ಹಬ್ಬಗಳನ್ನು ಆಚರಿಸುವಾಗ ಗ್ರಾಮದ ಬೇರೆ ಬೇರೆ ಜಾತಿ ಕಸಬುಗಳ ಜನರೆಲ್ಲರೂ ಭಾಗವಹಿಸಲು ಸಾಧ್ಯವಾಗುತ್ತದೆ. ಆಯಾ ಜಾತಿಯ ಹಾಗೂ ಕಸಬುಗಳ ಜನರು ತಮ್ಮದೇ ಆದ ಚಾಜಗಳನ್ನು ಸಲ್ಲಿಸುವುದರಿಂದ ಪರಸ್ಪರ ಸಂಬಂಧ ನವೀಕರಣಗೊಳ್ಳುತ್ತದೆ. ಅಲ್ಲದೆ ಗ್ರಾಮದ ರಸ್ತೆ, ಒಳಚರಂಡಿಗಳು ಶುಚಿಗೊಳ್ಳುವ ಮೂಲಕ ಗ್ರಾಮದ ನೈರ್ಮಲ್ಯೀಕರಣಕ್ಕೆ ಸಹಾಯಕವಾಗುತ್ತದೆ. ಮನೆಗಳಿಗೆ ಸುಣ್ಣ ಬಣ್ಣಗಳನ್ನು ಸಾರಿಸಿ ವ್ಯವಸ್ಥೆ ಮಾಡುವುದರಿಂದ ಮನೆಗಳ ನವೀಕರಣಕ್ಕೆ ಪ್ರೇರಣೆಯು ಒದಗಿ ಬರುತ್ತದೆ. ಈ ಸುಣ್ಣ ಬಣ್ಣಗಳಿಂದ ಕ್ರಿಮಿಕೀಟಗಳು ನಾಶವಾಗಿ ಮನೆ ಮಂದಿಯ ಹಾಗೂ ಊರ ಜನರ ಆರೋಗ್ಯ ಕಾಪಾಡಿಕೊಳ್ಳಲು ಸಹಾಯಕಾರಿಯಾಗುತ್ತದೆ.

ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ಕೆಲವು ವಿಶಿಷ್ಟ ಸಂಪ್ರದಾಯಗಳಿರುತ್ತವೆ. ಸಂಪ್ರದಾಯಗಳ ಕ್ರಿಯಾವಿಧಿಗಳ ಸಂದರ್ಭದಲ್ಲಿ ಹಾಡುಗಳು ಪ್ರಮುಖ ಪಾತ್ರವಹಿಸುತ್ತವೆ. ಮನುಷ್ಯ ಮೊದಲು ಅಭಿವ್ಯಕ್ತಿಯನ್ನು ನೀಡಿದ್ದು ಹಾಡಿನ ಮೂಲಕವೇ ಆಗಿದೆ. ಹೀಗಾಗಿ ದೇವದೇವತೆಗಳನ್ನು ತೃಪ್ತಿಪಡಿಸಲು ಕೆಲವು ವಿಶಿಷ್ಟ ಆಚರಣೆಗಳನ್ನು ಮಾಡುವಂತೆ ಸ್ತುತಿಯನ್ನು ಕೂಡ ಮಾಡಲಾಗುತ್ತದೆ. ಆ ಮೂಲಕವಾಗಿ ದೇವರನ್ನು ಪ್ರಸನ್ನಗೊಳಿಸಬಹುದೆಂಬ ಭಾವನೆಯಿದೆ. ಹೀಗೆ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ಸ್ತುತಿ, ಮಂಗಳಾಚರಣೆಯ ಹಾಡುಗಳೊಂದಿಗೆ ಹಬ್ಬಗಳ ಆಚರಣೆಗೆ ಸಂಬಂಧಿಸಿದ ಹಾಡುಗಳುಂಟು. ಜನಪದ ಸಾಹಿತ್ಯ ಹಾಗೂ ಸಂಸ್ಕೃತಿಯಲ್ಲಿ ಇವುಗಳಿಗೆ ವಿಶಿಷ್ಟವಾದ ಮಹತ್ವವಿದೆ. ಆದ್ದರಿಂದ
ಪ್ರೊ॥ದೇವೇಂದ್ರ ಸತ್ಯಾರ್ಥಿಯವರು ಜಾನಪದ ಗೀತೆಗಳು ನಮ್ಮ ದೇಶದ ಘನವಾದ ಸೊತ್ತು. ಭಾರತದ ಸಾಂಸ್ಕೃತಿಕ ಪರಂಪರೆಯ ಬಹುಮಟ್ಟಿನ ತಿರುಳು ಇವುಗಳಲ್ಲಿ ಹುದುಗಿದೆ. ಭಾರತದ ಲಕ್ಷಾಂತರ ಜನರಿಗೆ ಬಾಗಿಲುಗಳನ್ನು ತೆರೆದಿಟ್ಟ ಕಾವ್ಯ ಮತ್ತು ಸಂಗೀತ ಮಹಾ ದೇವಾಲಯಗಳಿವು. ಇವು ಜನತೆಯ ಹೃದಯದಿಂದ ಉಕ್ಕಿ ಬಂದ ನುಡಿಗಳಾದ್ದರಿಂದ ಅವುಗಳಲ್ಲಿ ಭಾರತದ ಹಳ್ಳಿಗಾಡಿನ ಜೀವನದ ನೋವು-ನಲಿವುಗಳನ್ನು ನಾವು ಅನುಭವಿಸುತ್ತೇವೆ. ನಿತ್ಯ ಜೀವನದ ಅವಶ್ಯಕತೆಗಳನ್ನು ದೊರಕಿಸಿಕೊಳ್ಳುವುದಕ್ಕೆ ಒಂದೇ ಸಮನೆ ದುಡಿಯುವ ಸಾಮಾನ್ಯ ಜನತೆಯ ನಿಕಟ ಸಂಪರ್ಕ ಇವುಗಳಿಂದ ನಮಗೆ ಉಂಟಾಗುತ್ತದೆ ಎಂದಿದ್ದಾರೆ. ಹೀಗೆ ಒಂದು ದೇಶದ ಅಮೂಲ್ಯ ಸಂಪತ್ತಾಗಿರುವ ಇವು ಸಾಂಸ್ಕೃತಿಕ ತವನಿಧಿಗಳಾಗಿವೆ. ಇವುಗಳ ಸಂಗ್ರಹ ಹಾಗೂ ಅಧ್ಯಯನದಿಂದಾಗಿ ಒಂದು ದೇಶದ ಸಂಸ್ಕೃತಿಯ ವಿಕಾಸವನ್ನು ಗುರುತಿಸಿಕೊಳ್ಳುವುದರ ಜೊತೆಗೆ ಸಾಂಸ್ಕೃತಿಕ ಮೌಲ್ಯಗಳನ್ನು ಅರಿತುಕೊಳ್ಳಬಹುದಾಗಿದೆ. ಆದ್ದರಿಂದಾಗಿಯೇ ರವೀಂದ್ರನಾಥ ಠಾಕೂರ ಅವರು ಜಾನಪದ ಗೀತಗಳು ಜನತೆಯ ಮನಸ್ಸು ಮತ್ತು ಹೃದಯವನ್ನು ತಿಳಿಯಲು ನಮಗೆ ಸಹಾಯಕಾರಿಯಾಗಿವೆ. ಬೇರೆ ಬೇರೆ ಪ್ರದೇಶದ ಹಳ್ಳಿಯ ಹಾಡುಗಳಲ್ಲಿ ಕಂಡು ಬರುವ ಸಮಾನ ಗುಣಗಳಿಂದ ಭಾರತದಾದ್ಯಂತವೂ ಮಾನವ ಸ್ವಭಾವದ ವೈವಿಧ್ಯತೆಯಲ್ಲಿರುವ ಏಕತೆಯನ್ನು ನಾವು ನೋಡುತ್ತೇವೆ. ಎಲ್ಲ ದೇಶಗಳ ಲೋಕ ಗೀತೆಗಳನ್ನು ಸಂಗ್ರಹಿಸಿ ತೌಲನಿಕವಾಗಿ ಅಧ್ಯಯನ ಮಾಡಿದಲ್ಲಿ ಎಲ್ಲ ಮಾನವ ಕುಲಕ್ಕೂ ಸಮಾನಾವಾದ ಮನಸ್ಸು ಹೃದಯಗಳು ಅವುಗಳಲ್ಲಿ ಅಡಗಿರುವುದನ್ನು ಕಾಣಬಹುದಾಗಿದೆ ಎಂದಿದ್ದಾರೆ.

ಜನಪದ ಹಾಡುಗಳ ಪ್ರಪಂಚ ಬಹು ವ್ಯಾಪಕವೂ, ವೈವಿಧ್ಯಮಯವೂ ಆಗಿದೆ. ಜಾನಪದರು ತಮ್ಮ ಎಲ್ಲ ಬಗೆಯ ಚಟುವಟಿಕೆಗಳ ಸಂದರ್ಭದಲ್ಲಿ ಹಾಡುಗಳನ್ನು ಹಾಡುವುದುಂಟು. ತಾವು ಮಾಡುತ್ತಿರುವ ಕೆಲಸದ ಶ್ರಮದ ಅರಿವು ತಮಗಾಗದಿರಲೆಂಬ ಕಾರಣದಿಂದಾಗಿ ಹಾಡುಗಳು ಅವರಿಂದ ಸಹಜವಾಗಿಯೇ ಸೃಷ್ಟಿಯಾಗುತ್ತವೆ. ಮನೋರಂಜನೆಯ ಉದ್ದೇಶದ ಹಿನ್ನೆಲೆಯಿಂದಾಗಿಯೂ ಅಪಾರ ಸಂಖ್ಯೆಯ ಹಾಡುಗಳು ರೂಪುದಾಳಿವೆ. ದೇವತೆಗಳ ಸಂತೃಪ್ತಿಗಾಗಿ ಮಾಡುವ ಹಬ್ಬ ಹರಿದಿನಗಳ ಆಚರಣೆಯ ಸಂದರ್ಭದಲ್ಲಿಯೂ ವೈವಿಧ್ಯಮಯವಾದ ಹಾಡುಗಳು ಮೈದಾಳಿವೆ. ಈ ಹಾಡುಗಳಲ್ಲಿ ಜನಪದರ ಭಾವನೆ, ಆಲೋಚನೆ, ಸೃಜನ ಸಾಮರ್ಥ್ಯ ಹಾಗೂ ಜಾನಪದ ಸಂಸ್ಕೃತಿಯ ಮೌಲ್ಯಗಳು ಅಭಿವ್ಯಕ್ತಿಯನ್ನು ಕಂಡಿವೆ. ಹೀಗಾಗಿ ಇವುಗಳ ಸಂಗ್ರಹ ಹಾಗೂ ಅಧ್ಯಯನವು ಮಹತ್ವಪೂರ್ಣವಾಗಿದೆ. ಈ ಹಾಡುಗಳನ್ನು ಹಾಡುವ ಸಂದರ್ಭದೊಂದಿಗೆ ಅವುಗಳ ಸ್ವರೂಪ, ಲಕ್ಷಣ, ವೈವಿಧ್ಯತೆ, ವೈಶಿಷ್ಟ್ಯ ಮತ್ತು ಮಹತ್ವಗಳನ್ನು ಸ್ಥೂಲವಾಗಿ ಗುರುತಿಸುವ ಪ್ರಯತ್ನವೂ ಇಲ್ಲಿದೆ.

ಹಬ್ಬದ ಹಾಡುಗಳು ಸಂಪುಟ-1ರಲ್ಲಿ ಯುಗಾದಿ, ಮಣ್ಣೆತ್ತಿನ ಅಮವಾಸ್ಯೆ, ನಾಗರಪಂಚಮಿ, ಜೋಕುಮಾರ, ಮಹಾನವಮಿ, ದೀಪಾವಳಿ ಹಾಗೂ ಶೀಗಿ ಹಬ್ಬದ ಹಾಡುಗಳನ್ನು ಸಂಗ್ರಹಿಸಲಾಗಿದೆ. ಪ್ರಸ್ತುತ ಸಂಪುಟ-2ರಲ್ಲಿ ಗೌರಿಹಬ್ಬ, ಯಳ್ಳ ಅಮವಾಸ್ಯೆ, ಶಿವರಾತ್ರಿ ಹಾಗೂ ಹೋಳಿಹಬ್ಬಗಳಿಗೆ ಸಂಬಂಧಿಸಿದ ಹಾಡುಗಳನ್ನು ಸಂಗ್ರಹಿಸಲಾಗಿದೆ. ಹೀಗಾಗಿ ಇಲ್ಲಿ ಈ ಹಬ್ಬದ ಹಾಡುಗಳನ್ನು ಹಾಡುವ ಸಂದರ್ಭ, ಅವುಗಳ ವಸ್ತು, ಸ್ವರೂಪ, ಲಕ್ಷಣ, ವೈಶಿಷ್ಟ್ಯ ಹಾಗೂ ಮಹತ್ವಗಳನ್ನು ಸ್ಥೂಲವಾಗಿ ವಿವರಿಸಲಾಗಿದೆ.

ಸೀಗಿ ಹುಣ್ಣಿಮೆಗೆ ಸೀಗವ್ವನ ಹಬ್ಬವನ್ನು ಆಚರಿಸಿದರೆ, ಗೌರಿ ಹುಣ್ಣಿಮೆಗೆ ಜಾನಪದರು ಶಕ್ತಿಯ ಪ್ರತೀಕವಾಗಿ ಗೌರಮ್ಮನ ಹಬ್ಬವನ್ನು ಆಚರಿಸುತ್ತಾರೆ. ಇದನ್ನು ಸುಗ್ಗಿಯ ಹಬ್ಬವೆಂತಲೂ ಕರೆಯುವುದುಂಟು. ಈ ಹುಣ್ಣಿಮೆಯಂದು ಕುಂಬಾರನ ಮನೆಯಿಂದ ಮಣ್ಣಿನ ಗುಪ್ಪೆಯಾಕಾರದ ಮೂರ್ತಿಯನ್ನು ತಂದು ಪೂಜಿಸಿದರೆ, ಕೆಲವು ಕಡೆಗಳಲ್ಲಿ ಯುವತಿಯರು ಕೆರೆಗೋ, ಹೊಳೆಗೋ, ಹೋಗಿ ಅಲ್ಲಿಂದಲೇ ಸ್ವಲ್ಪ ದೊಡ್ಡ ಆಕಾರದ ಗೌರಿಯಾಕೃತಿಯನ್ನು ಮಾಡಿಕೊಂಡು ಬರುತ್ತಾರೆ. ಇನ್ನೂ ಕೆಲವು ಕಡೆಗಳಲ್ಲಿ ಯುವತಿಯರು ಓಣಿಯ ಹೆಣ್ಣು ಮಕ್ಕಳು ಸೇರಿ ಕುಂಬಾರ ಅಥವಾ ಜೀನಗಾರರ ಮನೆಗಳಿಗೆ ಹೋಗಿ ಅಲ್ಲಿ ತಯಾರಿಸಿರುವ ಗೌರಮ್ಮನ ಮೂರ್ತಿಯನ್ನು ಊದುತ್ತ, ಬಾರಿಸುತ್ತ, ಹಾಡುಗಳನ್ನು ಹಾಡುತ್ತ ಹೊತ್ತು ತರುತ್ತಾರೆ. ಒಂದೊಂದು ಓಣಿಯ ನಿಗದಿಪಡಿಸಲಾದ ಕಟ್ಟೆಯ ಮೇಲೆ ಕೂಡ್ರಿಸುತ್ತಾರೆ. ಕೆಲವು ಕಡೆಗಳಲ್ಲಿ ಈಶ್ವರನ ದೇವಸ್ಥಾನದಲ್ಲಿ ಕೂಡಿಸುವುದುಂಟು. ಹೂ, ಕಾಯಿ, ಹಣ್ಣು ಪತ್ರೆಯಿಂದ ಅಲಂಕಾರಗೊಳಿಸುತ್ತಾರೆ. ವಿಶೇಷವಾಗಿ ಅವರಿ, ಕಾರೆಳ್ಳು, ಚಂಡು ಹೂಗಳಿಂದ ಅಲಂಕೃತಗೊಳಿಸುತ್ತಾರೆ. ಗೌರಿಗೆ ದಿನಾಲು ಒಂದೊಂದು ತರಹದ ಆರತಿಯನ್ನೆತ್ತಿ ಹೂವುಗಳನ್ನೇರಿಸುತ್ತಾರೆ. ಸಿಹಿ ಇರುವ ಅಡುಗೆ ಮಾಡಿ ಗೌರಮ್ಮನಿಗೆ  ಎಡೆ ಹಿಡಿದು ನೈವೇದ್ಯ ಸಲ್ಲಿಸುವುದುಂಟು. ಪ್ರತಿದಿನ ಸಂಜೆ ಓಣಿಯ ಹೆಣ್ಣು ಮಕ್ಕಳು ಸೇರಿ ಆರತಿ ಮಾಡುತ್ತ-

 

                       ಕಣಕದಾರುತಿ ಮಾಡೇನ ಗೌರಿ
ಭಾಳದೀವಿಗೆ ಹಚ್ಚೇನಗೌರಿ
ಹಾರೂರಾಡುದು ಹಾದಿ ಬೀದ್ಯಾಗ
ಸೆಟ್ಟರಾಡುದು ಪಟ್ಟಣ ಸಾಲ್ಯಾಗ
ನಾವಾಡೂದು ಗೌರೀ ಹುಣ್ಣಿಮ್ಯಾಗ
ಏಕದಾರೂತೆ ಗೌರಿಗೆ ಬೆಳಾಗೀದಾರರುತಿ

 

ಹಾಡುತ್ತಾರೆ. ದಿನಾಲು ಬೇರೆ ಬೇರೆ ಆರತಿಯನ್ನು ಮಾಡಿ ಪೂಜಿಸುತ್ತಾರೆ. ಗೌರಿಯು ಮನೆಯ ಮಗಳೆಂದು ತಿಳಿದು ವರುಷಕ್ಕೊಮ್ಮೆ ಕರೆಯಿಸಿ, ಆದರದಿಂದ ಹಸಿರುಬಳೆ, ಕುಂಕುಮ, ಅರಿಷಿಣ ಪತ್ತಲ ಮೊದಲಾದ ಮಂಗಳಕರ ವಸ್ತುಗಳನ್ನು, ಕೊರಳಿಗೆ ಬಂಗಾರದ ಒಡವೆಗಳನ್ನು ಹಾಕಿ ಭಕ್ತ್ತಿ ಭಾವದಿಂದ ಪೂಜಿಸುವುದು ವಿಶೇಷವಾಗಿದೆ.

ಆರತಿಯ ಹಾಡುಗಳೊಂದಿಗೆ,

 

ಬಂಗಾರ ಹೆಣ್ಣೂಲಾ ಬೆನ್ನೀಗೆ ಬಡಿಯೂತ
ಅಲ್ಲಿ ನಮ್ಮ ಗೌರಾ ಪಗಡ್ಯಾಡೆಸೋ
ಅಲ್ಲಿ ನಮ್ಮ ಗೌರಾ ಪಗಡ್ಯಾಡಿದರಾಡಲಿ
ಬಲ್ಲಿದ್ದ ಶಿವಾ ಮನಸೋತ ಸೋ
ಬಲ್ಲಿದ್ದ ರಾಮಾ ಮನಸೋತರ ಸೋಲಲಿ
ಹರಳಾಕಿದ ಮಂಚಾಲಿಕಿ ಲಿಕಿ ಸೋಎಂದು

 

ಅನೇಕ ಬಗೆಯ ಹಾಡುಗಳನ್ನು ಹಾಡಿ ಸಂತೋಷಪಡುತ್ತಾರೆ. ಸಣ್ಣ ಮಕ್ಕಳೂ ಕೂಡ ತಮ್ಮ ತೊದಲು ನುಡಿಗಳಿಂದ

 

ಗೌರಿ, ಗೌರಿ ಗಾಣಾ ಗೌರಿ
ಮ್ಯಾಣಾ ಗೌರಿಕುಳ್ಳಿ ಗೌರಿ
ಕುಡಕಿ ಗೌರಿ
ಕುಂಕುಮ ಗೌರಿ
ಅವರಿಯಂತ ಅಣ್ಣನ ಕೋಡ ಅಣ್ಣನ ಕೋಡ
ತೊಗರಿಯಂತ ತಮ್ಮನಕೋಡ ತಮ್ಮನ ಕೋಡ

 

ಎಂದು ಗೌರಿಯ ಸ್ತುತಿ ಮಾಡುವುದುಂಟು.

ಐದು ದಿವಸಗಲ್ಲಿ ಗೌರಿಗೆ ಮಾಡಬೇಕಾದ ಶಾಸ್ತ್ರಗಳೆಲ್ಲ ಮುಗಿಯುತ್ತವೆ. ಒಂದು ದಿನ ಉಡಿ ತುಂಬಿ ಗೌರಿಯನ್ನು ಗಂಡನ ಮನೆಗೆ ಕಳುಹಿಸುತ್ತಾರೆ. ಆಗ ಉಡಿ ತುಂಬುವ ಹಾಡುಗಳನ್ನು ಹಾಡುತ್ತಾರೆ. ಅಲ್ಲದೆ ಗಂಗೆಯನ್ನು ಶಿವ ಮದುವೆಯಾಗಿರುವ, ಅದನ್ನು ಕೇಳಿದ ಗೌರಿಸಿಟ್ಟಿಗೆದ್ದ್ದು, ಗಂಗೆಯೊಂದಿಗೆ ಸವತಿ ಮಾತ್ಸರ್ಯದಿಂದ ವಾದ-ಸಂವಾದಕ್ಕಿಳಿಯುವ, ಗೌರಿಯು ಗಣಪನನ್ನು ಹೆರುವ, ಶಿವನ ಮನೆಗೆ ಅವಳನ್ನು ಸಂಭ್ರಮದಿಂದ ಕಳುಹಿಸಿಕೊಡುವ ಮುಂತಾದ ಕೌಟುಂಬಿಕ ಹಾಗೂ ಶೃಂಗಾರ ವಿಷಯಗಳಿಗೆ ಸಂಬಂಧಿಸಿದ ಹಾಡುಗಳನ್ನು ಹಾಡುತ್ತಾರೆ. ಅವುಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ.

ಒಂದು ದಿನ ಗಂಗೆಯು ಶಿವನ ಜೊತೆಗೆ ಜಗಳವಾಡಿ ಮಾಯವಾಗುವಳು. ಅವಳ ಸುಳಿವು ಯಾರಿಗೂ ತಿಳಿಯಲಿಲ್ಲ. ಆಗ ಸಮೀಪದಲ್ಲಿಯೇ ಹುಲ್ಲು ಮೇಯುತ್ತಿದ್ದ ಕತ್ತೆಯೊಂದು ಪಾತಾಳ ಲೋಕದಲ್ಲಿ ಆಳದ ಮರದ ಬುಡದಲ್ಲಿ ಗಂಗೆ ಅಡಗಿರುವಳೆಂದು ಅರಚಿತಂತೆ. ಅಡಗಿ ಕುಳಿತಿದ್ದ ಗಂಗೆಗೆ ಸಿಟ್ಟು ಬಂದು, ಪಾತಾಳ ಲೋಕದಿಂದ ಹೊರಬಂದು ಕತ್ತೆಯ ಮೂಗನ್ನು ಸೀಳಿದಳೆಂದು ಜನಪದರು ನಂಬಿರುವುದನ್ನು ಒಂದು ಹಾಡು ಅಭಿವ್ಯಕ್ತಪಡಿಸುತ್ತದೆ. ಅಂದಿನಿಂದ ಕತ್ತೆಯ ಮೂಗಿನ ಸೆಂಬೆಗಳು ಹರಿದು ಜೋತಾಡುತ್ತಿವೆ ಎಂಬ ಸ್ವಾರಸ್ಯದ ಘಟನೆಯು ಹಾಡಿನಲ್ಲಿ ವ್ಯಕ್ತವಾಗಿರುವುದುಂಟು.

 

ಮೇಲ ಲೋಕ ಹುಡುಕಿ, ನಡುವಿನ ಲೋಕ ಹುಡುಕಿ
ಪಾತಾಳ ಲೋಕಕ ಇಳಿದಾರ /
ಎಲ್ಲೆಲ್ಲಿ ಹುಡುಕಿದರ ಸಿರಿಗಂಗಿ ಸಿಗವಳ್ಳ
ಆಲದ ಮರದಾಗ ಅಡಗ್ಯಾಳ

 

                                ಅಲ್ಲೊಂದು ಒರ್ತ್ಯಾಗಿ, ಸುತ್ತೆಲ್ಲ ಹಸುರಾಗಿ
ಹಸುರಾಗ ನಿಂತು ಒದರೀತ / ಹಿರಿಗತ್ತಿ
ಸಿರಿಗಂಗಿ ಇಲ್ಲಿ ಅಡಗ್ಯಾಳ
ಆಲದ ಮರಬಿಟ್ಟು, ಹೊರಗ ಹರಿದಾಳ ಗಂಗಿ
ಕತ್ತೆಯ ಮೂಗು ಸೀಳ್ಯಾಳ

                                ನೆನೆಯಕ್ಕಿ ನೆನೆಗಡಲೆ ಗೊನೆಯ ಬಾಳೆಯಹಣ್ಣು
ತನುವೇರಿದಡರಿ ಬಿಳಿಯಲೆ ತಗೊಂಡು
ಗಂಗವ್ನ ಪೂಜೆಗೈದಾರ

 

ಇಂತಹ ಸಂವಾದದ ಹಾಡುಗಳನ್ನು ಹೆಣ್ಣು ಮಕ್ಕಳು ರಾತ್ರಿಯಿಡೀ ಹಾಡಿ ನಲಿಯುತ್ತಾರೆ. ಇಂಥ ಹಾಡುಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ.

ಗಂಗೀ ಗೌರಿಯರ ಸಂವಾದದ ವಿಷಯವನ್ನು ಕುರಿತು ತರುಳ ಚರಪತಿ ಕವಿಯು ಗಂಗೀ ಗೌರಿ ಸಂವಾದ ಎಂಬ ಹಾಡುಗಬ್ಬವನ್ನು ರಚಿಸಿರುವುದುಂಟು. ಈ ಹಾಡುಗಬ್ಬವನ್ನು ಕೂಡ ಇಲ್ಲಿ ಸಂಗ್ರಹಿಸಲಾಗಿದೆ. ಈ ಕಥೆಯು ಜನಸಾಮಾನ್ಯರ ಅನುಭವದ ಕಥೆಯಾಗಿದೆ. ಗಂಗಿ ಗೌರಿಯರು ದೇವಲೋಕದವರಿದ್ದರೂ ಕೂಡ ಕಾವ್ಯವನ್ನು ಓದುತ್ತ, ಕೇಳುತ್ತ ಹೋದಂತೆ ಅವರು ನಮ್ಮವರೇ ಆಗಿ ಬಿಡುತ್ತಾರೆ. ಅವರು ಜಗಳಾಡುವುದಂತೂ ನಮಗೆಲ್ಲ ಚಿರಪರಿಚಿತದಂತೆಯೇ ಇದೆ. ಇಬ್ಬರು ಹೆಂಡಿರನ್ನು ಮಾಡಿಕೊಂಡವನ ಮನೆಯಲ್ಲಿ ನಡೆಯುವ ನಿತ್ಯ ಕಲಹ ; ಸವತಿ ಮಕ್ಕಳಾದ ಗಂಗೆ ಗೌರಿಯರು ನಿತ್ಯ ಜೀವನದಿಂದ ಎತ್ತಿಕೊಂಡಿರುವ ಪಾತ್ರಗಳಾಗಿ ತೋರುತ್ತವೆ. ಇವರು ರಕ್ತ ಮಾಂಸದಿಂದ ಕೂಡಿರುವ ಜೀವಂತ ಪಾತ್ರಗಳಾಗಿ ಮಾತನಾಡುತ್ತಾರೆ. ಈ ಕಾವ್ಯದ ಜೀವಾಳ ಶೃಂಗಾರ ರಸವಾಗಿದೆ. ಶಿವ ಗಂಗೆಯರ ಸಂಭಾಷಣೆಯಲ್ಲಿ ಶೃಂಗಾರ ರಸದ ಝಳುಕಿದೆ. ಹೀಗಾಗಿ ಇದೊಂದು ಶೃಂಗಾರ ರಸದ ಮಡುವಾಗಿ ಕಂಗೊಳಿಸಿದೆ.

ಗಂಗೀ ಗೌರಿಯರ ನಡುವೆ ನಡೆಯುವ ಸಂವಾದದ ಶೈಲಿಯು ಸರಳವಾಗಿದ್ದು, ಹೃದಯಂಗಮವಾಗಿರುವುದುಂಟು. ಜನಪದದ ಶೈಲಿ ಇಲ್ಲಿ ತುಂಬ ಚೆಲ್ಲುವರಿದಿದೆ. ಜನತೆಯ ಆಡುನುಡಿ, ಪಡೆನುಡಿ, ನಾಣ್ಣುಡಿಗಳು ಅತ್ಯಂತ ಸಹಜವಾಗಿ ಈ ಕಾವ್ಯದಲ್ಲಿ ಬೆರೆತುಕೊಂಡು ಬಂದಿವೆ. ಉದಾಹರಣೆಗಾಗಿ ಕೆಲವೊಂದನ್ನು ಇಲ್ಲಿ ಅವಲೋಕಿಸಬಹುದು.

1)           ಪರದೇಸಿ ಮುನಿ ಕೇಳು ತಿರಿದುಂಬ ಜೋಗಿನೀ
ಪರಸತಿಯರ ನೋಡ ಸಲ್ಲ
ವಿರಸಮಾತುಗಳಿಂದ ಸರಸವಾಡಲು
ಸಿರಸವನುಳಿಹಿಕೊ ಜೋಗಿ

2)           ಪಿಡಿ ನಡುವಿನ ಬಾಲೆ ನುಡಿ ಗಿಳಿ ಕೋಗಿಲೆ
ಸಡಗರ ರೂಪ ಸಂಪನ್ನೆ
ಅಡವಿಯ ಮೃಗಸಿಂಹ ಕೆಡವಿಕೊಂದಾವೆ ನಿನ್ನ
ಒಡೆಯಾನ ಮಾಡಿಕೊ ಎನ್ನ

         3)   ಮಿಂಡಿ ನೀ ಹರೆಯಾದ ಹೆಣ್ಣೆ ಪ್ರಾಯದ
ಗಂಡರಿಲ್ಲದ ಜೀವ ಸಲ್ಲ

         4)   ಅನ್ನ ದೈವವೆ ದೈವ ಇನ್ನೂ ದೈವಗಳಿಲ್ಲ
ಕುನ್ನಿ ಮಾನವ ಕೇಳಲೊ

 

ಗಂಗೀ ಗೌರಿ ಸಂವಾದದ ಈ ಕಾವ್ಯವು ಬೆದಂಡೆ ಗಬ್ಬದ ಎಲ್ಲ ಲಕ್ಷಣಗಳನ್ನು ಒಳಗೊಂಡ ಒಂದು ಉತ್ತಮ ಹಾಡುಗಬ್ಬವಾಗಿದೆ. ಕಂದಪದ್ಯದೊಂದಿಗೆ ಇಲ್ಲಿ ಸಾಂಗತ್ಯ, ಸುವ್ವಿಹಾಡು, ಒರಳಕ್ಕೀಯ ಪದ, ಜೋಗಿಪದ, ಜೋಗುಳ ಪದ, ಮಂಗಳಾರತಿಯ ಪದಗಳು ಅಂದರೆ, ಜನಪದ ಮಟ್ಟುಗಳು ಬಳಕೆಯಾಗಿವೆ. ಈ ಬಗೆಯ ಬೆದಂಡೆ ರೂಪದ ಹಾಡುಗಬ್ಬ ಕನ್ನಡದಲ್ಲಿ ದೊರೆತಿರುವುದು ಇದು ಮೊದಲನೆಯದಾಗಿದೆ. ಹೀಗಾಗಿ ಇದೊಂದು ಅತ್ಯಂತ ಮಹತ್ವದ ಕಾವ್ಯವಾಗಿರುವುದರಿಂದ ಇಲ್ಲಿ ಅದನ್ನು ಸಂಗ್ರಹಿಸಲಾಗಿದೆ.

ಮಳೆಗಾಲ ಮುಗಿದು ಚಳಿಗಾಲ ಆರಂಭವಾಗುವ ಸಂಧಿಕಾಲದಲ್ಲಿ ಎಳ್ಳಮವಾಸ್ಯೆ ಬರುತ್ತದೆ. ಈ ಅಮವಾಸ್ಯೆಯ ದಿವಸದಂದು ರೈತರು ತಮ್ಮ ಹೊಲದ ಬೆಳೆಸು ಹುಲುಸಾಗಲೆಂದು ಭೂದೇವಿಗೆ ಸಂಪ್ರೀತಗೊಳಿಸಲು, ಭಕ್ಷ್ಯ ಭೋಜನದ ನೈವೇದ್ಯವನ್ನು ಅರ್ಪಿಸುತ್ತಾರೆ. ಇದಕ್ಕೆ ಚರಗ ಚೆಲ್ಲಾಡುವುದು ಅಥವಾ ಸೂರಾಡುವುದು ಎಂದು ಕರೆಯುತ್ತಾರೆ. ಮುಂಗಾರು ಬೆಳೆಗಳಿಗೆ ಶೀಗಿ ಹುಣ್ಣಿಮೆಯೆಂದು ಕರೆಯುತ್ತಾರೆ. ಮುಂಗಾರು ಬೆಳೆಗಳಿಗೆ ಶೀಗಿ ಹುಣ್ಣಿಮೆಯೆಂದು ಚರಗ ಚೆಲ್ಲಾಡಿದರೆ ಹಿಂಗಾರು ಬೆಳೆಗಳಿಗೆ ಈ ಅಮಾವಾಸ್ಯೆಯೆಂದು ಚೆಲ್ಲುತ್ತಾರೆ. ಅಮವಾಸ್ಯೆಯ ಮೊದಲದಿನದಂದು ಹೆಣ್ಣು ಮಕ್ಕಳು ವಿವಿಧ ತಿಂಡಿ-ತಿನಿಸುಗಳನ್ನು ಮಾಡಲು ತೊಡಗುತ್ತಾರೆ. ಭೂಮಿಯಲ್ಲಿ ಬೆಳೆದ ಅನೇಕ ತರಹದ ಕಾಯಿಪಲ್ಲೆ-ತರಕಾರಿಗಳನ್ನು ಸೇರಿಸಿ ವಿಶಿಷ್ಟ ಭೋಜ್ಯಗಳನ್ನು ಏರ್ಪಡಿಸುತ್ತಾರೆ. ಹೀಗೆ ಸಿದ್ಧತೆ ಮಾಡಿಕೊಳ್ಳುವುದಕ್ಕೆ ಕಾಯಿಪಲ್ಯ ಸೋಸುವುದು ಎಂದು ಕರೆಯುತ್ತಾರೆ. ಇಡೀ ರಾತ್ರಿ ಹೆಣ್ಣು ಮಕ್ಕಳು ಭಕ್ಷ್ಯ ಭೋಜ್ಯಗಳನ್ನು ತಯಾರಿಸುತ್ತಾರೆ. ಸಜ್ಜಿರೊಟ್ಟಿಗೆ ಎಳ್ಳು ಬೆರೆಸಿ, ಅರಿಷಿಣ ಪುಡಿ ಸೇರಿಸಿ ವಿಶೇಷವಾಗಿ ರೊಟ್ಟಿ ತಯಾರಿಸುತ್ತಾರೆ. ಚಪಾತಿ, ಕರಿಗಡಬು, ಕರ್ಚಿಕಾಯಿ, ಎಳ್ಳು, ಹೋಳಿಗೆ, ಶೇಂಗಾ ಹೋಳಿಗೆ, ಹೂರಣ ಹೋಳಿಗೆ, ಹಪ್ಪಳ, ಸಂಡಿಗೆ, ಬದನೆಕಾಯಿ, ಉಪ್ಪಿನಕಾಯಿ, ಮೊಳಕೆಯೊಡೆದ ಹಸಿರುಕಾಳು, ಕಡ್ಲಿಕಾಳು ಪಲ್ಯ, ಮೊಸರು ಚಟ್ನಿ ಮುಂತಾದ ರುಚಿ ರುಚಿಯಾದ ಭೋಜನದ ತಿನಿಸುಗಳನ್ನು ತಯಾರಿಸುತ್ತಾರೆ. ಮುಂಜಾನೆ ಅತಿ ಸಂಭ್ರಮದಿಂದ ಮನೆಮಂದಿಯೆಲ್ಲ ಎತ್ತಿನ ಬಂಡಿಯನ್ನು ಕಟ್ಟಿಕೊಂಡು ಹೊಲಕ್ಕೆ ಹೋಗುತ್ತಾರೆ.

ಹೊಲದಲ್ಲಿರುವ ಬನ್ನಿಗಿಡದ ಬುಡದಲ್ಲಾಗಲಿ, ಇಲ್ಲವೆ ಬೆಳೆದ ಫಸಲಿನಲ್ಲಾಗಲಿ ಐದು ಕಲ್ಲುಗಳನ್ನು ಆರಿಸಿಕೊಂಡು ಅವುಗಳನ್ನು ನೀರಿನಿಂದ ತೊಳೆದು ಸಾಲಾಗಿ ಇಟ್ಟು ವಿಭೂತಿ, ಕುಂಕುಮ ಹಚ್ಚಿ, ಪಣತಿಯಲ್ಲಿ ಎಣ್ಣೆದೀಪ ಬೆಳಗುತ್ತಾರೆ. ಐದು ಕಲ್ಲುಗಳ ಮಧ್ಯದಲ್ಲಿ ಮಣ್ಣಿನ ಹೆಂಟಿಯನ್ನು ಇಡುತ್ತಾರೆ. ಇದಕ್ಕೆ ಕೊಂತ್ಯಮ್ಮ (ಕುಂತಿ) ಎಂದು ಕರೆಯುವುದುಂಟು. ಉಳಿದವರು ಪಾಂಡವರಾಗಿದ್ದಾರೆ. ಈ ಪಂಚ ಪಾಂಡವರಿಗೆ ಕೊಂತಿಯೊಂದಿಗೆ ಪೂಜೆ ಸಲ್ಲಿಸಿ ಯಕ್ಕಿಯ ಗಿಡದ ಎಲೆಯಲ್ಲಿ ಎಡೆಯನ್ನು ಅರ್ಪಿಸುತ್ತಾರೆ. ಹೀಗೆ ಎಡೆ ಅರ್ಪಿಸಿದ ನಂತರ ಉಳಿದ ನೈವೇದ್ಯವನ್ನು ಬೆಳೆದ ಫಸಲಿನ ನಾಲ್ಕೂ ದಿಕ್ಕುಗಳಿಗೆ ಹೋಗಿ ಹುಲ್ಲುಲ್ಲೋ……ಹುಲ್ಲುಲ್ಲೋ ಎಂದು ಹೇಳುತ್ತ ಚರಗ ಚೆಲ್ಲುತ್ತಾರೆ. ನಂತರ ಮನೆ ಮಂದಿ, ಆಪ್ತರು ಹಾಗೂ ನೆರೆಹೊರೆಯ ಹೊಲದ ಜನರೆಲ್ಲರೂ ಸೇರಿ ಸಂತೋಷದಿಂದ ಊಟ ಮಾಡುತ್ತಾರೆ. ಸಾಯಂಕಾಲ ಮನೆಗೆ ಬರುವಾಗ ತಮ್ಮ ತಮ್ಮ ಹೊಲಗಳಲ್ಲಿ ಬೆಳೆದಿರುವ ಫಸಲಿನ ಕೆಲವು ಸಸಿಗಳನ್ನು ಕಿತ್ತುಕೊಂಡು ಬರುತ್ತಾರೆ.

ಎಳ್ಳಮಾಸಿ ಹಬ್ಬದ ಸಂದರ್ಭದಲ್ಲಿ ತರಕಾರಿ ಕಾಯಿಪಲ್ಯ ಸೋಸುವ ಸಿದ್ಧಪಡಿಸುವ ಸಂದರ್ಭದಲ್ಲಿ ಮಹಿಳೆಯರು ಹಾಡುವ ಹಾಡು ಹಾಗೂ ಶೃಂಗಾರ ರಸಕ್ಕೆ ಸಂಬಂಧಿಸಿದ ಹಾಡುಗಳನ್ನು ಹಾಡುತ್ತಾರೆ. ಅವುಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ.

ಮಾಘ ಮಾಸದ ಬಹುಳ ಚತುದರ್ಶಿಯಂದು ಶಿವರಾತ್ರಿ ಅಮವಾಸ್ಯೆಯು ಬರುತ್ತದೆ. ಇದಕ್ಕೆ ಮಹಾಶಿವರಾತ್ರಿಯಂದು ಜನಪದರು ಭಾವಿಸಿದ್ದೂ ಅಂದು ಶಿವನಿಗೆ ವಿಶೇಷ ಪೂಜೆಯನ್ನು ಸಲ್ಲಿಸುತ್ತಾರೆ.

ಅಂತೆಯೇ ಅವರು :

ಬೇಡ ಬೇಟೆಗೆ ಹೋಗಿ, ಬಿಲ್ವ ಪತ್ತರಿಕೊಯ್ದ
ಬೇಡ ಕನ್ನಯ್ಯ ಶಿವಪೂಜೆ  ಮಾಡಿದರ
ನಾಡೊಳಗೆ ನೋಡು ಶಿವರಾತ್ರಿ ಎಂದು
ಶಿವರಾತ್ರಿಯ ಮಹತ್ವವನ್ನು ಅರಿತಿದ್ದಾರೆ.

ಅಮವಾಸ್ಯೆಯ ಮುನ್ನಾದಿನವನ್ನು ಶಿವಯೋಗವೆಂದು ಕರೆದು ಅಂದು ಪರಂಜ್ಯೋತಿ ಶಿವನ ಆರಾಧನೆ ಮಾಡುತ್ತಾರೆ. ಪರಶಿವನ ಆರಾಧನೆಗೆ ಮಹಾಶಿವರಾತ್ರಿಯು ಬಹು ಪ್ರಶಸ್ತವಾದ ದಿನವೆಂದು ಭಾವಿಸಲಾಗಿದೆ.

ಮನುಷ್ಯನಿಗೆ ಎಂಥ ಕಷ್ಟ ಬಂದರೂ ಶಿವ ಎಂಬ ಶಬ್ದವನ್ನು ಜಪಿಸುವುದರಿಂದ ಎಲ್ಲ ಬಗೆಯ ಕಷ್ಟಗಳು ದೂರವಾಗುತ್ತವೆಂದು ಜನಪದರು ನಂಬಿದ್ದಾರೆ. ಅದ್ದರಿಂದಾಗಿಯೋ ಶಿವಧ್ಯಾನವನ್ನು ಮಾಡಿ ಸದ್ಗತಿ ಕಂಡ ಶಿವಶರಣರ ನಿದರ್ಶನಗಳನ್ನು ನೆನಪಿಗೆ ತಂದುಕೊಳ್ಳುತ್ತಾರೆ. ಶಿವರಾತ್ರಿಯ ದಿವಸ ನಾಲ್ಕು ಯಾಮಗಳಲ್ಲಿ ರುದ್ರಾಭಿಷೇಕ ಮಾಡುವುದರಿಂದ ನಾಲ್ಕು ವೇದಗಳಷ್ಟೇ ಫಲ ಪ್ರಾಪ್ತವಾಗುತ್ತದೆಂದು ಜನಪದರು ನಂಬಿದ್ದಾರೆ. ಅಂತೆಯೇ ಶಿವರಾತ್ರಿಯ ಅಮವಾಸ್ಯೆಯಂದು ಪೂಜೆ, ಅರ್ಚನೆಗಳನ್ನು ಮಾಡುತ್ತ ಭಕ್ತಿ ಪೂರ್ವಕವಾಗಿ ಶಿವಸ್ತುತಿಯನ್ನು, ಶಿವ ಮಹಿಮೆಯನ್ನು ಕುರಿತು ಭಜನೆ ಮಾಡುತ್ತಾರಲ್ಲದೆ ಅನೇಕ ಹಾಡುಗಳನ್ನು ಹಾಡುತ್ತಾರೆ.

ಶಿವ ಪೂಜೆ ಮಾಡಿ ಕೊಕ್ಕಾಬುತ್ತಿ, ಕ್ವಾಡಾ ಬುತ್ತಿ ನಾಡಿಗೆಲ್ಲ ಒಂದೇ ಬತ್ತಿ ಎಂದು ಶಿವದೀಪ ಬೆಳಗುತ್ತಾರೆ. ಶಿವಸ್ತುತಿ ಹಾಗೂ ಶಿವ ಮಹಿಮೆಗೆ ಸಂಬಂಧಿಸಿದ ಹಾಡುಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಇವು ಜನಪದರ ಭಕ್ತಿಭಾವದ ಜೊತೆಗೆ, ಜನಪರ ಕಾಳಜಿಯನ್ನು ಅಭಿವ್ಯಕ್ತಿಸುತ್ತವೆ. ಶರಣರ ಬಗೆಗಿರುವ ಅನೇಕ ಅಂಶಗಳು ಇವುಗಳಲ್ಲಿ ನಿಹಿತವಾಗಿದ್ದು ಇವುಗಳ ಅಧ್ಯಯನದಿಂದ ಶರಣರ ಚರಿತ್ರೆಯನ್ನು ರೂಪಿಸುವಲ್ಲಿ ಸಹಯೋಗವನ್ನು ಪಡೆಯಬಹುದಾಗಿದೆ.

ಫಾಲ್ಗುಣ ಮಾಸದಲ್ಲಿ ಬರುವ ಹೋಳಿ ಹಬ್ಬವು ಜನಪದರಲ್ಲಿ ಮಹತ್ವದ ಹಬ್ಬಗಳಲ್ಲಿ ಒಂದಾಗಿದೆ. ವಸಂತೋತ್ಸವೆಂದು ಕರೆಯಲ್ಪಡುವ ಈ ಹಬ್ಬವು ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಕಾಮ ದಹನಕ್ಕೆ ಸಂಬಂಧಿಸಿದಂತೆ ಪುರಾಣ, ಮಹಾಭಾರತ, ಭಾಗವತ್ಗಳಲ್ಲಿ ಇದರ ಕಥೆಯು ಕಂಡು ಬರುತ್ತದೆ. ತಾರಕಾಸುರನ ಬಾಧೆ ಉಪಟಳಕ್ಕೆ ಬೇಸತ್ತ ದೇವ-ದೇವತೆಗಳು ಶಿವನಲ್ಲಿಗೆ ಮೊರೆ ಹೋಗಲು ಆಲೋಚಿಸುತ್ತಾರೆ. ಆದರೆ ಶಿವನು ಧ್ಯಾನಸ್ಥನಾಗಿರುವುದರಿಂದ ಚಿಂತಾಕ್ರಾಂತರಾಗುತ್ತಾರೆ. ದೇವ-ದೇವತೆಗಳ ಪ್ರಾರ್ಥನೆಯ ಮೇರೆಗೆ ಮನ್ಮಥನು ಧ್ಯಾನಸ್ಥ ಶಿವನ ತಪಸ್ಸನ್ನು ಭಗ್ನಗೊಳಿಸುತ್ತಾನೆ. ಶಿವನ ಹಣೆಗಣ್ಣಿನ ಉರಿಗೆ ಮನ್ಮಥನು ಸುಟ್ಟು ಬೂದಿಯಾದುದು. ರತಿ ಪ್ರಲಾಪಿಸುವುದು, ಸುಟ್ಟು ಹೋದ ಕಾಮನು ನೆನೆದಾಗ ಮನದಲ್ಲಿಯೇ ಇರುವುದಾಗಿ ಶಿವನು ಅಭಯ ಕೊಡುವುದು ಪುರಾಣ-ಕಾವ್ಯಗಳಲ್ಲಿಯ ಕಥೆ. ಆದರೆ ಜನಪದರು ಇದನ್ನು ರೂಪಾಂತರಗೊಳಿಸಿದ್ದಾರೆ. ಪಾರ್ವತಿ-ಮಹಾದೇವರು ಸಭೆಯಲ್ಲಿದ್ದಾಗ ಮಹಾದೇವನು ಪಾರೋತಿ ಹೇಳ ಚಲುವ್ಯಾರ? ಎಂದು ಪ್ರಶ್ನಿಸಿದಾಗ ಪಾರೋತಿ ತೀರ ಚೆಲುವನು ಕಾಮಣ್ಣ ಎಂದು ಉತ್ತರಿಸುತ್ತಾಳೆ. ಶಿವನು ತನ್ನನ್ನು ಮೀರಿ ಮನ್ಮಥನ ಹೆಸರು ಹೇಳಿದ್ದಕ್ಕಾಗಿ ಸಿಟ್ಟಿಗೆದ್ದು ಶಿವನು ಬಿಟ್ಟಾನೋ ಉರಿಗಣ್ಣ ಸುಟ್ಟು ಬೂದ್ಯಾದ ಕಾಮಣ್ಣ. ಇದನ್ನು ನೋಡಿದ ರತಿಯು ಹೊಟ್ಟೆ ಬಡಿದುಕೊಂಡು ಹೊರಳಾಡುತ್ತ ಅಳತೊಡಗುತ್ತಾಳೆ. ಅವಳ ರೋಧನವು ಇಡೀ ಸಭೆಯನ್ನು ಕಳವಳಗೊಳಿಸುತ್ತದೆ. ಪಾರ್ವತಿಯ ಕೋರಿಕೆಯ ಮೇರೆಗೆ ಮಹಾದೇವನು ಕಾಮನು ಕರೆದಾಗೆಲ್ಲ ಮೂಡಿ ಬರುತ್ತಾನೆ ಎಂದು ಅಭಯವನ್ನು ನೀಡಿದನು. ಮನ್ಮಥನಿಗೆ ಪುನರ್ಜನ್ಮ ಪ್ರಾಪ್ತವಾಯಿತು. ಇದರಿಂದಾಗಿ ಪಾರ್ವತಿ, ರತಿ ಹಾಗೂ ಅಲ್ಲಿ ನೆರೆದಿದ್ದ ದೇವ-ದೇವತೆಗಳಿಗೆ ಸಂತೋಷವೇ ಸಂತೋಷವಾಗುತ್ತದೆ. ಈ ಸಂತೋಷದ ಆಚರಣೆಯೇ ಜನಪದರ ಕಾಮನ ಹಬ್ಬವಾಗಿದೆ. ಈ ಹಬ್ಬದ ಆಚರಣೆಯನ್ನು ಕಾಮನ ಬದುಕಿನ ಕಥೆಯನ್ನು ಮತ್ತಷ್ಟು ಹಿಗ್ಗಿಸಿತು. ಕಾಮ ಇಡೀ ಜನಸಮುದಾಯದ ಹೃದಯ-ಮನಸ್ಸುಗಳಲ್ಲಿ ನೆಲೆ ನಿಲ್ಲುವಂತಾಯಿತು. ಕಾಮ ಗಂಡು ಹೆಣ್ಣಿನಲ್ಲಿ ಪ್ರೇಮವನ್ನು ಸ್ಥುರಿಸುವ ಜೀವಂತ ಸೆಲೆಯಾದ, ಮನುಷ್ಯ, ಪ್ರಾಣಿ, ಪಶು, ಪಕ್ಷಿ ಮುಂತಾದ ಅಖಿಲ ಜೀವ ಜಾಲಗಳಲ್ಲಿ ತರು, ಲತೆ, ಪುಷ್ಪಗಳಲ್ಲಿ ಚೈತನ್ಯ, ಉತ್ಸಾಹಗಳನ್ನು ಚಿಮ್ಮುವ ಪ್ರಚಂಡ ಶಕ್ತಿಯಾದ.

ಜನಪದ ಸಾಹಿತ್ಯದಲ್ಲಿ ಕಾಮನ ಹಬ್ಬಕ್ಕೆ ಸಂಬಂಧಿಸಿದ ಅಪಾರ ಸಾಹಿತ್ಯವಿದೆ. ಹಾಡು, ಲಾವಣಿ, ದುಂದುಮೆಪದಗಳು ಜನಪದ ಸಾಹಿತ್ಯದಲ್ಲಿ ವಿಶಿಷ್ಟವಾಗಿ ಕಂಡುಬರುತ್ತವೆ. ಹಳ್ಳಿಗಳಲ್ಲಿ ಕಾಮನಹಬ್ಬದ ಸಂದರ್ಭದಲ್ಲಿ ಈ ಹಾಡುಗಳನ್ನು ಇಂದಿಗೂ ಹಾಡುವುದು, ಕೇಳುವುದು ನಡೆದಿರುತ್ತದೆ. ಶೃಂಗಾರಭರಿತವಾದ ಹಾಡುಗಳೊಂದಿಗೆ ಕುಣಿದು ಕುಪ್ಪಳಿಸಿ ಮನಸ್ಸಿನ ಕಾಮೋದ್ರೇಕ ಭಾವನೆಗಳನ್ನು ಹೊರಹಾಕಿ ಮನಸ್ಸನ್ನು ಹಗುರ ಮಾಡಿಕೊಳ್ಳಲು ಇದೊಂದು ವಿಶೇಷವಾದ ಸಂದರ್ಭವಾಗಿದೆ. ಸುಗ್ಗಿಯ ನಂತರದ ಬಿಡುವಿನ ಈ ಸಮಯದಲ್ಲಿ ಹಾಡಿ, ಕುಣಿದು ದಣಿದ ಜೀವಕ್ಕೆ ನೆಮ್ಮದಿಯನ್ನು, ಸುಖ ಸಂತೋಷವನ್ನು ಪಡೆಯಲಾಗುತ್ತದೆ. ಹಲವು ಹೋಳಿಯ ಹಾಡುಗಳು ಅವಾಚ್ಯ ಹಾಗೂ ಅಶ್ಲೀಲವಾಗಿರುತ್ತದೆ. ಇವು ಮಾನವನ ಮೂಲ ಪ್ರವೃತ್ತಿಯನ್ನು ಸಂಕೇತಿಸುವ ಪ್ರಾಚೀನತೆಯ ಕೊಂಡಿಯಾಗಿ ಉಳಿದುಕೊಂಡಿರುವಂತೆ ತೋರತ್ತವೆ.

ಶಿವರಾತ್ರಿ ಅಮವಾಸ್ಯೆಯಿಂದ ಹಿಡಿದು ಹೋಳಿಹುಣ್ಣಿಮೆಯ ಆಚರಣೆಯವರೆಗೆ ಹದಿನೈದು ದಿವಸಗಳ ಕಾಲ ಶೃಂಗಾರ ರಸಕ್ಕೆ ಸಂಬಂಧಿಸಿದ ಗೀತೆಗಳೊಂದಿಗೆ ಅನೇಕ ಪ್ರಕಾರದ ಗೀತೆಗಳನ್ನು ಹಾಡಲಾಗುತ್ತದೆ.

                ಚಂದದ ಹೆಣ್ಣು ಕಂಡೆನಪ್ಪ,
ದೊರತಾಳೇನೊ ನನಗ ಇವಳ
ಜರದ ಸೆರಗಿಲೆ ಸಿಂಬಿಮಾಡಿ
ನೀರ ತರವಳೊ

                                ಕೋಗಿಲೆಯಂತ ಸ್ವರನಿಂದು
ಮೂಗ ಸಂಪಿಗಿ ತೆನಿಕಾಣ
ಭೋಗ ಸಂವಿ ತೋರಸ್ತೇನ ನೋಡ
ರುಚಿ ಹತ್ತದ ಮ್ಯಾಲ
ಹೋಗ ಅಂದರ ಹೋಗಕ್ಕಿಲ್ಲ ನೋಡ

ಇಂತಹ ಶೃಂಗಾರ ರಸಭರಿತವಾದ ಹಾಡುಗಳನ್ನು ಯುವಕರು ಹಾಡಿ ಸಂತೋಷಪಡುತ್ತಾರೆ.

ಹೋಳಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ಹಾಡುವ ಹಾಡುಗಳನ್ನು ಸಾಮಾನ್ಯವಾಗಿ ಮೂರು ಪ್ರಕಾರಗಳಲ್ಲಿ ವಿಂಗಡಿಸಬಹುದಾಗಿದೆ.

1.  ಬಿಡಿ ಹಾಡುಗಳು
2.  ಕಥನ ಗೀತೆಗಳು
3.  ದುಂದುಮೆ ಪದಗಳು

ಬಿಡಿ ಹಾಡುಗಳು-ನುಡಿಗಳು ಅಂದರೆ ಭಾವ ಪ್ರಧಾನವಾದ ಹಾಡುಗಳೆಂದು ಅರ್ಥ. ಹೋಲಿ ಅಂದರೆ ಹೋಲಿಕಾಳನ್ನು ಕುರಿತು, ಪ್ರೀತಿ, ಪ್ರೇಮವನ್ನು ಕುರಿತು ಅನೇಕ ಬಿಡಿ ಬಿಡಿಯಾದ ಹಾಡುಗಳನ್ನು ಈ ಸಂದರ್ಭದಲ್ಲಿ ಹಾಡುವುದುಂಟು. ಇಲ್ಲಿ ವಸ್ತುವಿಗಿಂತಲೂ ಭಾವವು ಪ್ರಧಾನವಾದ ಪಾತ್ರವನ್ನು ವಹಿಸುತ್ತದೆ. ಶೃಂಗಾರ ರಸ ಪ್ರಧಾನವಾದ ಇವು ಅತ್ಯಂತ ಆಕರ್ಷಕವಾಗಿರುತ್ತದೆ. ಜನಪದರು ತಮ್ಮ ಅಂತರಾಳದ ಮನದ ರತಿ ಭಾವವನ್ನು ಹೊರಹಾಕಿ ಮನಸ್ಸನ್ನು ಹಗುರ ಮಾಡಿಕೊಳ್ಳಲು ಇವು ಸಹಾಯಕವಾಗಿದೆ. ಮೇಲು ನೋಟದಲ್ಲಿ ಕೆಲವು ಹಾಡುಗಳು ಅಶ್ಲೀಲವಾಗಿ ಕಾಣುತ್ತವೆ. ಆದರೆ ಜನಪದರಲ್ಲಿ ಶ್ಲೀಲ-ಅಶ್ಲೀಲದ ಪ್ರಶ್ನೆಯೇ ಬರುವುದಿಲ್ಲ. ಅವರದು ಏನಿದ್ದರೂ ತೆರೆದ ಬದುಕು. ಹೀಗಾಗಿ ಈ ಸಂದರ್ಭದಲ್ಲಿ ಶೃಂಗಾರ ರಸಕ್ಕೆ ಸಂಬಂಧಿಸಿದ ಹಾಡುಗಳನ್ನು ಹಾಡಿ ಮನಸ್ಸನ್ನು ಮುದಗೊಳಿಸಿಕೊಳ್ಳುತ್ತಾರೆ. ಹೋಳಿ ಹಬ್ಬದ ಆಚರಣೆಯು ಅಂತಹ ಅವಕಾಶವನ್ನು ಜನಪದರಿಗೆ ಒದಗಿಸಿರುವುದು ಒಂದು ವಿಶೇಷವಾಗಿದೆ. ಈ ಸಂದರ್ಭದಲ್ಲಿ ಶೃಂಗಾರ ರಸವನ್ನು ಹೊರಸೂಸಿ ಮನಸ್ಸು ಹಗುರ ಮಾಡಿಕೊಳ್ಳಲು ಜನಪದರು ಅವಕಾಶವನ್ನು ಸೃಷ್ಟಿಸಿಕೊಂಡಿದ್ದಾರೆ. ಯಾವುದೇ ಬಗೆಯ ನಿರ್ಬಂಧಗಳು ಈ ಪ್ರಸಂಗದಲ್ಲಿ ಇರುವುದಿಲ್ಲ. ಅಂತೆಯೇ ಯುವಕರಿಂದ ಹಿಡಿದು, ವಯಸ್ಸಾದವರೆಲ್ಲರೂ ತಮ್ಮ ಮನಸ್ಸಿನಲ್ಲಿ ಓತಪ್ರೋತವಾಗಿ ಹರಿದು ಬರುವ ರತಿಭಾವವನ್ನು ಹಾಡುಗಳ ಮುಖಾಂತರ ಹೊರಹಾಕಿ ಬದುಕನ್ನು ಸವಿಯುತ್ತಾರೆ.

ಚಿಗರಿ ಮಾಟದ ಹೆಣ್ಣ
ಇದರೀಗಿ ಬಂದರ
ಬಾಣ ಬಡದಾಂಗಾತೊ ಎದಿಯಾಗ  ಎಂದು

ರತಿಭಾವವನ್ನು ಹೊರಹಾಕಿ ಆನಂದಪಡುತ್ತಾರೆ. ಶೃಂಗಾರದ ಜುಳುಕು ಇರುವ ಇಂತಹ ಅನೇಕ ಹಾಡುಗಳು ಈ ಸಂದರ್ಭದಲ್ಲಿ ತಾನೇ ತಾನಾಗಿ ಹೊರಹೊಮ್ಮುತ್ತವೆ. ಜನಪದರ ಆಶುಕವಿತ್ವಕ್ಕೆ ಇವು ತೋರು ಬೆರಳಾಗಿ ನಿಲ್ಲುತ್ತವೆ.

ಕಾಮ-ರತಿಯರನ್ನು ಕುರಿತಾಗಿ ಹಾಡುವ ಹಾಡುಗಳ ಸ್ಪರ್ಧೆಯೂ ನಡೆಯುವುದು ಒಂದು ವಿಶೇಷವಾದ ಸಂಗತಿಯಾಗಿದೆ.

ಕಾಮಣ್ನ ಕಟ್ಟುತಲಿ, ಗೊನೆಮುಳ್ಳ ಸುರಿಯುತಲಿ
ಸೀತಾಳ ಬಾವಿ ತೆಗೆಸುತಲಿ ನಮಕಾಮ
ಜೀತ ಹೋಗ್ಯಾನ ಶಿವನಲ್ಲಿ.

                ಕಾಮಣ್ಣನ ಹೆಂಡಂದಿರು ಕಾಡಿಗಣ್ಣೀನವರು
ಎಲ್ಲಿಗೆ ಹೋಗ್ಯಾರ ನಿಮ್ಮವರು  ಮ್ಯಾಲಿನ
ಚಕ್ರ ತರಲ್ಲಿ ಹೋಗ್ಯಾರ

                ನಿಂತಲ್ಲಿ ರಾಮಣ್ಣನ ಅಂಗಿಯ ಕಳಿಸ್ಯಾರ
ತಂಗಿದ್ದರೇಷ್ಟ ಮರಗೊಳ  ಕಾಮಣ್ಣನ
ತಾಯಿದ್ದರೆಷ್ಟು ಅಳುವಳ

                ರಾಮಣ್ಣನ ಬೂದ್ಯಾಗ ಟೆಂಗಿನ ಗಿಡ ಹುಟ್ಟಿ
ಟೊಂಗಿ ಟೊಂಗೆಲ್ಲಿ ಗಿಣಿ ಕುಂತ  ಮಾತ್ಯಾಡವ
ತಂಗಿ ನೀಲಮ್ಮನ ಕರಿತರ್ಯ

ಇಂತಹ ಹಾಡುಗಳು ಜನಪದರಲ್ಲಿ ಆಶುಕವಿತ್ವವನ್ನು ಸ್ಪುರಿಸುವುದರ ಜೊತೆಗೆ ಜನಪದ ಸಾಹಿತ್ಯವನ್ನು ಶ್ರೀಮಂತಗೊಳಿಸಲು ಸಹಾಯಕವಾಗಿವೆ.

ಹೋಳಿ ಹಾಡುಗಳಲ್ಲಿ ಕಥನರೂಪದ ಹಾಡುಗಳು ಕೂಡ ಉಂಟು. ಇಲ್ಲಿ ಶೃಂಗಾರ, ವೀರರಸಗಳಿಗೆ ಹೆಚ್ಚಿನ ಪ್ರಾಶಸ್ತ್ಯವಿದೆ. ಪೌರಾಣಿಕ, ಧಾರ್ಮಿಕ, ಐತಿಹಾಸಿಕ ಮುಂತಾದ ಕಥಾ ವಸ್ತುಗಳ ಹಿನ್ನೆಲೆಯಲ್ಲಿ ಇವು ರಚಿತವಾಗಿವೆ. ಶ್ರೀ ಕೃಷ್ಣ, ದಕ್ಷಬ್ರಹ್ಮ, ಅಭಿಮನ್ಯು, ಇಂದ್ರಜೀತು, ಬಾಣಾಸುರರೊಂದಿಗೆ ಧಾರ್ಮಿಕ, ಐತಿಹಾಸಿಕ ವ್ಯಕ್ತಿಗಳ ಬದುಕಿನ ಪ್ರಮುಖ ಘಟನೆಗಳ ಹಿನ್ನೆಲೆಯಲ್ಲಿ ರಚಿತವಾಗಿರುವ ಅನೇಕ ಹಾಡುಗಳು ಕೂಡ ಲಭ್ಯವಾಗುತ್ತವೆ.

ಹೋಳಿ ಹುಣ್ಣಿಮೆಯ ಮೂಲವನ್ನು ಕುರಿತ ಹೋಳಿ ಹುಣ್ಣಿಮೆಯ ಮೂಲ ಕಥೆ ಎಂಬ ಕಥನ ಗೀತೆಯಲ್ಲಿ ಹೋಳಿ ಹುಣ್ಣಿಮೆ ಹಬ್ಬದ ಪೌರಾಣಿಕ ಕಥೆಯಿದೆ. ಇದು ಜನಪದರ ಪೌರಾಣಿಕ ಪ್ರಜ್ಞೆಯ ಜೊತೆಗೆ ಅವರ ವಾಸ್ತವ ದೃಷ್ಟಿಕೋನವನ್ನು ಬಿಂಬಿಸುತ್ತದೆ. ಶಿವನ ಹಣೆಗಣ್ಣಿಗೆ ಆಹುತಿಯಾದ ಕಾಮನು ಶಿವನ ಕೃಪೆಯಿಂದ-

ಕಾಮಿನಿ ಕೇಳವ್ವ ನಿನ್ನ ನೇಮವಾದ ವಾಸನೆಯಿಂದ
ಭೂಮಿಯೊಳು ಹುಟ್ಟುವಿರಿ ಹೋಗು ಬ್ರಾಹ್ಮಣ ಜನ್ಮದಿ ನಿನ್ನ
ಸ್ವಾಮಿಯು ಹುಟ್ಟುವನವನು ಕಾಮಿಪನು ಹೊಲೆಯ ವೇಶ್ಯಾಗು
ತಾಮಸ ಗುಣದಲಿಂಥ ನಾಮವಾಯಿತೆನಗೆಂದು
ಭೂಮಿಯು ಮರುಗುತಾ ರಮಣೀಯ ಕರ್ಣಾಟಕದ
ಸೀಮೆಯೊಳು ಮುಖ್ಯವಾದ ಗ್ರಾಮದೊಳು ಕೃಷ್ಣಭಟ್ಟಾನೆಂಬಾ

ಹೀಗೆ ಬ್ರಾಹ್ಮಣರ ವಂಶದಲ್ಲಿ ಕೃಷ್ಣಭಟ್ಟನೆಂಬ ಕಾಮನು ಹುಟ್ಟಿ ಬರುವುದು, ರತಿಯು ಹೊಲೆಯರ ವಂಶದಲ್ಲಿ ಹೋಳಿ ಯೆಂಬ ಹೆಸರಿನ ಚೆಲುವೆಯಾಗಿ ಅವತರಿಸುವುದು ವಿಶಿಷ್ಟವಾದ ಸಂಗತಿಯಾಗಿದೆ.

ನಂತರ ಅವರಿಬ್ಬರಲ್ಲಿ ಪ್ರೇಮಾಂಕುರವಾಗುವುದು. ಸಮಾಜ ಅದಕ್ಕೆ ಅಡ್ಡಿಯನ್ನುಂಟು ಮಾಡುವುದು. ಕೊನೆಗೆ ಕಾಮನು ಸಾವನ್ನಪ್ಪುವುದು ಸಾಮಾಜಿಕವಾಗಿ ಸಂಘರ್ಷವನ್ನು ಎತ್ತಿ ತೋರಿಸುತ್ತದೆ.

ಕೃಷ್ಣನ ಹುಟ್ಟು, ಗೋಪಿಕಾ ಸ್ತ್ರೀಯರೊಂದಿಗಿನ ಅವನ ರಾಸಲೀಲೆಗೆ ಸಂಬಂಧಿಸಿದ ಕೃಷ್ಣನ ಹೋಳಿ ಪದ ವಿಶೇಷವಾಗಿ ಗಮನ ಸೆಳೆಯುವಂತಿದೆ.

ಹೋಳಿ ಹಾಡುಗಳಲ್ಲಿ ಸಾಮಾಜಿಕ ವಿಷಯಕ್ಕೆ ಸಂಬಂಧಿಸಿದ ಹಾಡುಗಳುಂಟು. ದೇವದಾಸಿ ಪದ, ಮೋಸ ಮಾಡಿದ ಹೆಣ್ಣು, ಕುಡುಕಗಂಡ ಇಂತಹ ವಿಷಯಗಳು ಜನಪದರ ದೈನಂದಿನ ಬದುಕಿನಲ್ಲಿ ಸಹಜವಾಗಿ ಕಂಡು ಬರುವ ಸಂಗತಿಗಳಾಗಿದ್ದು, ಇವುಗಳನ್ನು ಕುರಿತು ಅಭಿವ್ಯಕ್ತಿಯನ್ನು ಇಲ್ಲಿ ನೀಡಲಾಗಿದೆ.

ಹೋಳಿ ಆಚರಣೆಯ ಸಮಯದಲ್ಲಿ ದುಂದುಮೆ ಎಂಬ ತೊಗಲು ವಾದ್ಯದ ತಾಳ ತಾನಗಳಿಗೆ ಹೊಂದಿಕೊಂಡು ಹಾಡುವ ಹಾಡುಗಳನ್ನು ಹಾಡುತ್ತಾರೆ. ಇವುಗಳಿಗೆ ದುಂದುಮೆ ಪದಗಳೆಂದು ಕರೆಯುತ್ತಾರೆ. ಜನಪದ ಕವಿಗಳು ಇಂತಹ ಹಾಡುಗಳನ್ನು ರಚಿಸಿದ್ದಾರೆ. ಪೌರಾಣಿಕ, ಐತಿಹಾಸಿಕ, ಧಾರ್ಮಿಕ ಕಥಾ ವಸ್ತುಗಳು ಇಂತಹ ದುಂದುಮೆ ಹಾಡುಗಳಿಗೆ ಕಥಾವಸ್ತುವಾಗಿರುತ್ತವೆ. ಕಿತ್ತೂರಿನ ವೀರರಾಣಿ ಚೆನ್ನಮ್ಮ, ನುಲಿಯ ಚಂದಯ್ಯ, ಕೀಚಕ, ಆದಯ್ಯ ಮುಂತಾದ ಕಥಾ ವಸ್ತುವನ್ನು ಆಯ್ಕೆ ಮಾಡಿಕೊಂಡು ದುಂದುಮೆ ಪದಗಳನ್ನು ಜನಪದ ಕವಿಗಳು ರಚಿಸಿರುವುದುಂಟು.

ಹೀಗೆ ಪ್ರಸ್ತುತ ಸಂಕಲನದಲ್ಲಿ ಹಿಂದುಗಳಲ್ಲಿ ಆಚರಣೆಯಲ್ಲಿರುವ ಹಬ್ಬಗಳಿಗೆ ಸಂಬಂಧಿಸಿದ ಜನಪದ ಹಾಡುಗಳನ್ನು ಸಂಗ್ರಹಿಸಲಾಗಿದೆ. ಈಗಾಗಲೇ ಸಂಪಾದನೆ ಮಾಡಿ ಪ್ರಕಟಿಸಿರುವ ವಿದ್ವಾಂಸರ ಕೃತಿಗಳಲ್ಲಿಯ ಹಾಡುಗಳನ್ನು ಬಿಡಿ ಹಾಡುಗಳು, ಕಥನ ಗೀತೆಗಳು ಹಾಗು ದುಂದುಮೆ ಪದಗಳನ್ನು  ಸಂಗ್ರಹಿಸಿ ವೈಜ್ಞಾನಿಕವಾದ ವಿಭಾಗ ಕ್ರಮಕ್ಕೆ ಒಳಪಡಿಸಿ ಅವುಗಳನ್ನು ಇಲ್ಲಿ ಕೊಡಲಾಗಿದೆ.

ಆದಾವ ಜೋಳ ಉಳದಾವ ನಮ್ಮ ಹಾಡ
ಬೆರಳಾಗಿನ ಚಿನ್ಹದುಂಗರ ಸವದಾವ

ಎಂದು ಗರತಿ ಬೀಸುಕಲ್ಲು ಹಿಡಿದು ಹಾಡಿದಂತೆ, ಜನಪದರಲ್ಲಿ ಅಪಾರ ಸಂಖ್ಯೆಯಲ್ಲಿ ಹಾಡುಗಳಿವೆ. ಹಾಡಿನ ಕಣಜವೇ ಅವರಲ್ಲಿ ಅಡಗಿದೆ. ಹಬ್ಬದ ಹಾಡುಗಳಂತೂ ಅದೆಷ್ಟೋ ಪ್ರಮಾಣದಲ್ಲಿವೆ. ಹೀಗಾಗಿ ಇಲ್ಲಿ ಹಾಡುಗಳನ್ನು ಒಂದು ಸಂಪುಟದಲ್ಲಿ ಸೇರಿಸುವುದು ಕಷ್ಟವಾಗಿರುವುದರಿಂದ ಎರಡು ಸಂಪುಟಗಳಲ್ಲಿ ಅಂದರೆ ಹಬ್ಬದ ಹಾಡುಗಳು ಸಂಪುಟ-1 ಮತ್ತು ಹಬ್ಬ ಹಾಡುಗಳು ಸಂಪುಟ-2 ಎಂದು ಸಂಪಾದನೆ ಮಾಡಲಾಗಿದೆ. ಆದಾಗ್ಯೂ ಇನ್ನೊಂದು ಸಂಪುಟಕ್ಕೆ ಆಗುವಷ್ಟು ಹಾಡುಗಳು ಸಂಪಾದನೆಗಳಿಂದ ಹೊರಗುಳಿದಿವೆ. ಅನುಬಂಧದಲ್ಲಿ ಆಧಾರ ಗ್ರಂಥಗಳ ಭಾಗದಲ್ಲಿ ಸಂಪಾದನಾ ಕೃತಿಗಳ ಪಟ್ಟಿಯನ್ನು ಕೊಡಲಾಗಿದೆ. ಅವುಗಳಿಂದ ಹಾಡುಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಕಾರಣ ಆ ಸಂಪಾದಕರಿಗೆಲ್ಲ ನಾನು ಋಣಿಯಾಗಿದ್ದೇನೆ. ಅಲ್ಲದೆ ಬಿಡಿ ಬಿಡಿಯಾಗಿ ಕೆಲವು ಹಾಡುಗಳನ್ನು ಕೆಲವು ಗ್ರಂಥಗಳಿಂದ ಸಂಗ್ರಹಿಸಲಾಗಿದ್ದು, ಅವುಗಳನ್ನು ಕೂಡ ಇಲ್ಲಿ ಹೆಸರಿಸಲಾಗಿದೆ. ವಿಷಯಕ್ಕೆ ಪೂರಕವಾದ ಮಾಹಿತಿ ಸಂಗ್ರಹಿಸಲು ಕೆಲವು ಗ್ರಂಥಗಳ ಸಹಾಯವನ್ನು ಪಡೆಯಲಾಗಿದ್ದು ಅವುಗಳ ಪಟ್ಟಿಯನ್ನು ಸಹಾಯಕ ಗ್ರಂಥಗಳ ಪಟ್ಟಿಯಲ್ಲಿ ನೀಡಲಾಗಿದೆ. ಕಾರಣ ಆ ಗ್ರಂಥಗಳ ಲೇಖಕರಿಗೂ ಕೂಡ ನಾನು ಕೃತಜ್ಞನಾಗಿದ್ದೇನೆ. ಈ ಮಹತ್ವಪೂರ್ಣ ಸಂಪಾದನಾ ಸಂಪುಟವನ್ನು ಸಿದ್ಧಪಡಿಸಲು ಅಣಿಗೊಳಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿಜಕ್ಕೂ ಮೆಚ್ಚುಗೆಗೆ ಅರ್ಹವಾಗಿದೆ. ಕಾರಣ ನಿರ್ದೇಶಕರಿಗೂ ಹಾಗೂ ಉಳಿದೆಲ್ಲ ಅಧಿಕಾರಿಗಳಿಗೂ ಅನಂತ ವಂದನೆಗಳನ್ನು ಸಲ್ಲಿಸುತ್ತೇನೆ.

ಈ ಮಹತ್ವಪೂರ್ಣ ಸಮಗ್ರ ಕನ್ನಡ ಜನಪದ ಸಾಹಿತ್ಯ ಸಂಪುಟ ಯೋಜನೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತ, ಅದನ್ನು ಅರ್ಥಪೂರ್ಣಗೊಳಿಸುತ್ತಿರುವ ಡಾ॥ಹಿ.ಶಿ. ರಾಮಚಂದ್ರೇಗೌಡ ಅವರಿಗೆ ಅನಂತ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ಪ್ರಸ್ತುತ ಹಬ್ಬದ ಹಾಡುಗಳು ಸಂಪುಟ-2ನ್ನು ಅಚ್ಚುಕಟ್ಟಾಗಿ ಹೊರಬರಲು ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಿ, ಹಸ್ತಪ್ರತಿಯನ್ನು ಪರಿಶೀಲನೆ ಮಾಡಿ ಪ್ರೋತ್ಸಾಹಿಸಿದ ಗುರುಗಳಾದ ಡಾ.ಎಂ.ಎಸ್. ಲಠ್ಠೆ ಅವರಿಗೂ ಹಾಗೂ ಪ್ರಕಟಣಾ ಮಂಡಳಿಯ ಎಲ್ಲ ಸದಸ್ಯರಿಗೂ ನಾನು ಋಣಿಯಾಗಿದ್ದೇನೆ. ಈ ಬೃಹತ್ ಸಂಪುಟ ಹೊರಬರಲು ಪರೋಕ್ಷ ಹಾಗೂ ಅಪರೋಕ್ಷವಾಗಿ ಸಲಹೆ ಸೂಚನೆಗಳನ್ನು ನೀಡಿದ, ಸಹಾಯ ಸಹಕಾರ ಮಾಡಿದ ಎಲ್ಲ ವಿದ್ವಾಂಸರಿಗೂ, ಸ್ನೇಹಿತರಿಗೂ ನಾನು ಉಪಕೃತನಾಗಿದ್ದೇನೆ.

ಈ ಕೃತಿಯನ್ನು ಓದುಗರು ಮೆಚ್ಚಿಕೊಂಡಲ್ಲಿ ನನ್ನ ಶ್ರಮ ಸಾರ್ಥಕವೆಂದು ಭಾವಿಸುವೆ. ಕೊರತೆಗಳೇನಾದರೂ ಕಂಡು ಬಂದಲ್ಲಿ ಅದನ್ನು ಸೂಚಿಸಿದಲ್ಲಿ ತೆರೆದ ಹೃದಯದಿಂದ ಸ್ವಾಗತಿಸುತ್ತೇನೆ.

ಡಾಡಿ.ಬಿ. ನಾಯಕ