ಮಾನವ ತನ್ನ ಬದುಕಿಗೆ ಬೇಕಾದ ಅಗತ್ಯ ಅನುಕೂಲಗಳನ್ನು ವ್ಯವಸ್ಥಿತವಾಗಿ ರೂಪಿಸಿಕೊಂಡಿದ್ದಾನೆ, ತನ್ನ ಶಾಂತಿ ಸಮಾಧಾನವನ್ನು ಧ್ಯಾನದ ಮುಖಾಂತರ ಕಂಡುಕೊಂಡ. ಧ್ಯಾನದ ಹಿನ್ನೆಲೆಯಲ್ಲಿ ಏಕಾಗ್ರತೆಯನ್ನು ಸಂಪೂರ್ಣ ಸಾಧಿಸಲು ಭಜನೆ ಮಾಧ್ಯಮವನ್ನು ಸಮಪರ್ಕವಾಗಿ ಬಳಸಿಕೊಂಡ. ಅಧ್ಯಾತ್ಮದ ಮಾರ್ಗ ಮನುಷ್ಯನನ್ನು ಅತಿಯಾಶೆಯಿಂದ ಮುಕ್ತಿಯನ್ನು ಪಡೆಯಲು ಬದುಕಿನ ನಶ್ವರತೆ ಬಗೆಗೆ ಲವಲೇಶವೂ ದೋಷ ಬರದ ಹಾಗೆ ಭೋದಿಸಿತು. ಆಬಾಲವೃದ್ಧರಾದಿಯಾಗಿ ಭಜನೆ, ಭಕ್ತಿಗೀತೆ, ದೇವರನಾಮ ಹೀಗೆ ದೇವರ ಸ್ಮರಣೆ ಮಾಡುವುದರಿಂದ ಮಾನಸಿಕ ನೆಮ್ಮದಿ ಖಂಡಿತ ಎಂಬುದನ್ನು ಸ್ಪಷ್ಟವಾಗಿ ತಿಳಿಯುತ್ತಾ ಹೋದಂತೆ, ಭಜನೆಯಲ್ಲಿನ ಏಕತಾನತೆಯನ್ನು ಹೋಗಲಾಡಿಸಿಕೊಂಡು ವೈವಿಧ್ಯತೆಯ ಕಡೆಗೆ ಗೀತೆಗಳ ಸಂಚಲನವಾಯಿತು. ಜನಪದ ಸಾಹಿತ್ಯದ ಭಕ್ತಿ ತುಂಬಿದ ತ್ರಿಪದಿಗಳು ಕೂಡ ಈ ಸಾಲಿಗೆ ಸೇರುತ್ತವೆ. ಯಾವುದೇ ಸಂದರ್ಭದ ಆಧ್ಯಾತ್ಮಿಕ ದೇವತಾಗೀತೆಗಳು, ಭಜನೆ ಪದಗಳು ಎಂಬಂತೆ ಮೇಲ್ನೋಟಕ್ಕೆ ಕಾಣಿಸಿಕೊಂಡರೂ ಭಜನೆ ಪದಗಳಿಗೆ ತನ್ನದೇ ಆದ ವಿಶಿಷ್ಟತೆ ಇದೆ. ಒಂದು ರೀತಿ ಅರ್ಪಣಾ ಮನೋಭಾವದ ತ್ಯಾಗಗೀತೆಗಳಾಗಿ ಕಂಡು ಬರುತ್ತವೆ. ಬುದ್ಧನ ತತ್ವದಂತೆ ಅತಿ ಆಶೆಯೇ ನಮ್ಮೆಲ್ಲಾ ಕಷ್ಟಕಾರ್ಪಣ್ಯಗಳಿಗೂ ಹೊಣೆಯಾಗುತ್ತದೆ ಎಂಬ ಸಂದೇಶವಿರುತ್ತದೆ. ಪ್ರತಿ ಗ್ರಾಮಗಳಲ್ಲಿ ಭಜನಾ ತಂಡಗಳು ಈ ಕಾರಣಕ್ಕಾಗಿಯೇ ಹುಟ್ಟಿಕೊಂಡಿದ್ದವು ಎನಿಸುತ್ತದೆ. ಇಂದು ನಾಗರೀಕತೆಯ ಅಗ್ನಿಯಿಂದಾಗಿ ಅವು ಬೆಂದು ಬಸವಳಿಯುತ್ತಾ ಬಂದಿವೆ. ಇತ್ತೀಚೆಗೆ ಕಡಿಮೆಯೆಂದೇ ಹೇಳಬಹುದು. ಆದರೆ ಸತ್ವದ ಮಿಂಚು ಇಂದಿಗೂ ಸಂಚಲನವಾಗುತ್ತಲೇ ಬಂದಿದೆ. ಧನುರ್ಮಾಸದ ತಿಂಗಳು ಅಂದರೆ ಡಿಸೆಂಬರ್ ಹದಿನಾರು (೧೬ ರಿಂದ ೧೫) ಜನವರಿ ಹದಿನೈದರವರೆಗೆ ಒಂದು ತಿಂಗಳ ಕಾಲ ಅನೇಕ ಹಳ್ಳಿಗಳಲ್ಲಿ ಭಜನೆಯ ಗಾಯನದಿಂದ ಬೆಳಕು ಹರಿಯುತ್ತದೆ. ಬಾಲ್ಯದಲ್ಲಿ ನಮ್ಮ ಹಳ್ಳಿಯಲ್ಲಿ ನಾನು ಕೂಡ ಮೈಕೊರೆಯುವ ಚಳಿಯಲ್ಲಿ ಮುಖ ಕೈಕಾಲು ತೊಳೆದು ಭಜನೆ ತಂಡವನ್ನು ಸೇರಿ ಹಾರ‍್ಮೋನಿಯಂ, ತಾಳ, ದಮ್ಮಡಿಯ ದನಿಗಳಿಗೆ ದನಿಗೂಡಿಸುತ್ತಿದ್ದೆ. ಒಂದು ಭಕ್ತಿಗೀತೆ ಮುಗಿದ ತಕ್ಷಣವೇ ಗೋವಿಂದನ್ನಿಕ್ಕುವುದು ಪರಿಪಾಟ. ಮತ್ತೆ ಹೊಸ ಪದ. ಒಂದೊಂದು ವೇಳೆ  ಚಲನಚಿತ್ರ ಗೀತೆಯು ತತ್ವಪದ ಅಥವಾ ಭಜನೆಯ ಹಾಡಿನೊಡನೆ ರೂಪುತಳೆಯುತ್ತಿತ್ತು. ಉದಾ: “”ರಾಮನ ಅವತಾರ ರಘುಕುಲ ಸೋಮನ ಅವತಾರ” ಎಂಬ ಗೀತೆ ಹಾಗೂ “”ಈ ದೇಹದಿಂದ ದೂರನಾದೆ ಏಕೆ ಆತ್ಮನೆ, ಈ ಸಾವು ನ್ಯಾಯವೇ…..” ಇತ್ಯಾದಿ ಆಧ್ಯಾತ್ಮದ ಸಾರವುಳ್ಳ ಹಾಡುಗಳು ಕೂಡ ಭಜನೆಗಳಾಗುತ್ತಿದ್ದವು. ಆದರೆ ಹೆಚ್ಚಿನಂಶ ಬದುಕಿನ ನಶ್ವರತೆಯನ್ನು ಕುರಿತೇ ಹೇಳುವ ಹಾಡುಗಳು ಭಜನೆ ಸ್ವರೂಪದ್ದು ಎಂಬುದು ನಾವು ಕಂಡುಕೊಂಡ ರೀತಿಯದಾದರೆ ದೇವರ ಮುಂದೆಯೇ ಕುಳಿತು ದೇವರನಾಮವನ್ನು ಹಾಡುವ ರೀತಿಯೂ ಭಜನೆ ಪದಗಳಿಗೆ ಹೊಂದಿಕೆಯಾಗುತ್ತವೆ. ಕೆಲವು ವಿಷಾದ ಮಾತುಗಳು ಸಂಬಂಧ ಕುರಿತದ್ದಾಗಿ ಅವು ಕೂಡ ಹಾಡಾಗಿ ಗಾನಪಾತ್ರೆಗೆ ಸುರಿದುಕೊಳ್ಳಲು ಬಹುದು. ಉದಾಹರಣೆಗೆ :

ಹೊಟ್ಟೇಲಿ ಹುಟ್ಟಿದ ಮಕ್ಕಳೇ ಇಲ್ಲದ ಮೇಲೆ
ಮೊಮ್ಮಕ್ಕಳು ಯಾರಿಗಯ್ಯ……

ಎಂಬ ಅನೇಕ ವಿಧದ ವಿಷಾದದ ಭಾವ ಅದರೊಡನೆ ಭಕ್ತಿಭಾವವು ಸೇರಿಕೊಂಡು ನುಡಿಮುತ್ತುಗಳಾಗಿ ಭಜನೆಯ ತುಣುಕಾಗಿವೆ.

ಉದಾ: ಮಾತಾಡ್ ಮಾತಾಡ್ ಲಿಂಗವೇ…….
ಹಾಸೀಗೆ ಹಾಸಿದ್ದೆ ಲಿಂಗವೇ ಪರಂ ಜ್ಯೋತಿಯನ್ಹಚ್ಚಿದ್ದೆ ಲಿಂಗವೇ
ಹಾಸೀಗೆ ತಕ್ಕ ಪುರುಷನಿಲ್ಲದೆ ಮೇಲೆ ಪರದೇಶಿ ನಾನಾದೆ ಲಿಂಗವೇ

ಇಂಥ ಒಗಟಿನೋಪಾದಿಯ ಪರಕಾಯಪ್ರವೇಶದಂತಹ ವಿಧವೆಯ ತೆರನಾದ ನೋವು ತೋಡಿಕೊಳ್ಳುವ ಭಜನೆ ರೀತಿಯ ಹಾಡಾದರೂ ಇದರಲ್ಲಿ ಒಗಟಿನ ಸಂಭಾಷಣೆಯಿದೆ ಅದೂ ದೇವರ ಜೊತೆಯಲ್ಲಿ ಮಿನುಗುವ ಸಂಬಂಧವಾಗಿ ನಮಗೆ ಕಂಡು ಬರುತ್ತದೆ. ಇಂತಹದೆ ಮುಕ್ತಿಮೋಕ್ಷ ದಿಕ್ಕನ್ನು ನೋಡುವ ಭಜನೆ ಹೀಗಿದೆ :

ವಂದನಂ ಗುರು ವೀರನೇ ವಂದನಂ ಸುಖಸಾರನೇ
ಬಂದಮೋಕ್ಷಗಳೆಂಬೊ ಎರಡರ ಸಂದು ತೋರಿದ
ಧೀರನೆ || ಪಲ್ಲವಿ ||

ಎಷ್ಟೋ ಭಜನೆಯ ಗೀತೆಗಳು ಪುನರಾವರ್ತನೆಯಾಗಿರುವುದುಂಟು. ಸಾಂದರ್ಭಿಕ ಹಾಗೂ ಪ್ರಾದೇಶಿಕತೆಯ ವ್ಯತ್ಯಾಸಗಳಿಂದಾಗಿ ಉಳಿಸಿಕೊಂಡಿದ್ದೇನೆ. ಈ ಭಜನೆಗಳ ಗುಂಪಿನಲ್ಲಿ ಚಿತ್ರದುರ್ಗ ಜಿಲ್ಲೆಯ ಭಾಗದ ಒಂದು ಭಜನೆ ಉದಾ:

ಪಲ್ಲವಿಯಲ್ಲಿ, “”ಸತಿಗೆ ಸ್ವತಂತ್ರವ ಕೊಡದಿರಣ್ಣ ನೀನು
ಮತಿಗೆಟ್ಟು ಬಾಯಿ ಬಾಯಿ ಬಿಡದಿರೊ….”

ಎಂಬ ಗೀತೆಯ ವಿನ್ಯಾಸ ಸತಿಗೆ ನ್ಯಾಯ ಕೊಡುವಂಥದ್ದಾಗಿಲ್ಲದಿದ್ದರೂ ಅವರವರ ಮನಸ್ಥಿತಿ ಒಂದು ಅಂತ್ಯದ ಮಟ್ಟಕ್ಕೆ ತಿರುಗಿ ಬದುಕಿನ ಸಂಕಷ್ಟ ಎದುರಿಸಲಾರದೆ ಹತಾಶ ಸ್ಥಿತಿಯು ಇದಾಗಿರಬಹುದು. ಇಂಥ ಅನೇಕ ವೈರುಧ್ಯ ನೀತಿಯ ಭಜನೆಗಳನ್ನು ನಾನು ಸಂಗ್ರಹಕಾರ್ಯದಲ್ಲಿ ಕಂಡಿದ್ದೇನೆ. ಕೆಲವನ್ನು ವರ್ಜ್ಯ ಎನಿಸಿದ್ದವನ್ನು ಕೈಬಿಟ್ಟಿದ್ದೇನೆ. ಭಜನೆಗಳ ಸಾರ ವೈವಿಧ್ಯದಲ್ಲಿ ಈ ಕೃತಿಯಲ್ಲೂ ಕೂಡ ಅಪರೂಪದ ಭಜನೆಗಳು ಸೇರ್ಪಡೆಯಾಗಿರುವುದು ಒಂದು ಅಪೂರ್ವ ಸಂಗಮವೇ ಸರಿ. ಬಹುಶಃ ಮುಂದಿನ ದಿನಗಳಲ್ಲಿ ಭಜನೆಗಳನ್ನು ಕುರಿತ ಅಧ್ಯಯನದ ಒಳತೋಟಿಯ ವಿಕ್ರಮಗಳನ್ನು ರೇಖಿಸಲು ಈ ಸಂಪುಟ ಹೆಚ್ಚು ಪ್ರಯೋಜನಕಾರಿಯಾದರೆ ಶ್ರಮದ ಕಾರ್ಯಕ್ಕೆ ಒಂದು ಸಾರ್ಥಕತೆ ದೊರೆತಂತಾಗುತ್ತದೆ. ಇನ್ನೂ ಎಷ್ಟೋ ಭಜನೆಗಳಿಗೆ ವ್ಯಾಖ್ಯಾನಿಸುವ ಅಗತ್ಯವಿದ್ದರೂ ಅವುಗಳಿಗೆ ಓದಿನಲ್ಲೇ ಪೂರ್ಣತೆ ಲಭ್ಯವಾಗುವುದರಲ್ಲಿ ಅನುಮಾನವಿಲ್ಲ. ಪುನರಾವರ್ತನೆಯಾದರೂ ರಾಗ, ಮಟ್ಟು, ಲಯ, ತಾಳ ಕೆಲವೊಮ್ಮೆ ಭಿನ್ನತೆಯ ಉಯ್ಯಾಲೆಯಲ್ಲಿ ತೂಗುವುದರಿಂದ ಒಂದು ಸೊಬಗಾಗಿಯೇ ನಾನಾಭಾವದ ಅಲೆಯಲ್ಲಿ ಭಜನೆಗಳ ಆಳವನ್ನು ಅಳೆಯಬಹುದು ಎಂಬುದನ್ನು ವಿಶ್ಲೇಷಿಸಲು ಸಾಧ್ಯವಾಗುತ್ತದೆ.

ಈ ಹಿಂದೆ ನನ್ನ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದೆ – ಮುಂದುವರಿದಂತೆ ನನ್ನ ಸೋದರಮಾವನ ಕಂಠಸಿರಿ ಭಜನೆಯ ಲಹರಿಯನ್ನು ನಾನು ಅಪ್ಪಿ ಒಪ್ಪಿಕೊಳ್ಳಲು ಪ್ರೇರೇಪಿಸಿತ್ತು. ನನ್ನ ಗೆಳತಿ ರಮಾಳ ಜೊತೆ ನಮ್ಮ ಮಾವನವರ ಮುಂಚೂಣಿಯಲ್ಲಿ ನಮ್ಮ ಭಜನೆ ತಂಡ ಊರಿನ ಬೀದಿ ಬೀದಿಗಳಲ್ಲಿ ತನ್ಮಯತೆಯಿಂದ ಹಾಡುತ್ತಾ ಸಂಚಾರ ಮಾಡುತ್ತಿದ್ದ ದಿನಗಳು ನೆನಪಾದರೆ ರೋಮಾಂಚನ. ಹೆಣ್ಣು ಮಕ್ಕಳನ್ನು ಹಾಗೆ ಸುತ್ತಲು ಸಾರ್ವಜನಿಕವಾಗಿ ಹಾಡಲು ಬಿಡದಿರುವ ಕಾಲಘಟ್ಟದಲ್ಲಿ ಮಾವನವರ ನೇತೃತ್ವ ಹಾಗೂ ಕೃಪೆ ನಮ್ಮೀರ್ವರನ್ನು ಹಾರ‍್ಮೋನಿಯಂ ಜೊತೆ ಸಂಕೋಚ ಬಿಟ್ಟು ಭಜನೆ ಮಾಡಲು ಅವಕಾಶವಿತ್ತ ತಾಯಿ ತಂದೆಯರನ್ನು ಈಕ್ಷಣ ನೆನೆಯದಿರಲಾರೆ. ಲೋಕಜ್ಞಾನ ಕುಳಿತಲ್ಲಿ ಲಭ್ಯವಾಗುವುದಿಲ್ಲ ಎಂಬರಿವು ನನಗೀಗ ತಿಳಿಯುತ್ತಿದೆ. ಭಜನೆಯ ನಂತರ ಅಲ್ಲಿ ಕೊಡ ಮಾಡುತ್ತಿದ್ದ ಚರ್ಪು (ಪೊಂಗಲ್) ಒಂದು “ಮಿದಿಕೆ’ಗಾಗಿ ಪ್ರಯಾಸಪಡುತ್ತಿದ್ದುದು ಭಜನೆ ಮಾಡಿ ಮಾಡಿ ಇವರ ಕಂಠ ಸುಸ್ತಾಗಿದೆ ಇವರಿಗೆ ಎರಡು “ಪತಿ’ (ಬಾರಿ) ಕೊಡಿ ಎನ್ನುತ್ತಿದ್ದರು. ಆ ಪ್ರಸಾದವನ್ನು ಆ ದಿನದಂದು ಇಮ್ಮಡಿ ಸಂತೋಷದಿಂದ ತಿನ್ನುತ್ತಿದ್ದೆವು. ಬೀದಿ ಬೀದಿ ಅಲೆದಾಟ ಮಾಡುವಾಗ ಪ್ರತೀ ಮನೆಯಿಂದ ಎರಡೆರಡು ಗಂಧದಕಡ್ಡಿ ಹಾಗೂ ಒಂದೆರಡು ಚಮಚ ಎಣ್ಣೆ ಅಥವಾ ಅನುಕೂಲಸ್ಥಿತಿಯವರು ಒಂದು ಮಿಳ್ಳೆ (ಒಂದು ಸೊಲಿಗೆ) ಯಲ್ಲಿ ಎಣ್ಣೆ ತಂದು (ಗರುಡಗಂಭಕ್ಕೆ) ಹಾಕುತ್ತಿದ್ದರು. ಭಜನೆ ಮಾಡುವಾಗ ಅತಿಕತ್ತಲು ಇದ್ದು ಬೀದಿ ಕಾಣಲೆಂದೇ ಬತ್ತಿಯನ್ನು ಢಾಳಾಗಿ ಉರಿಸುವ ಪರಿಪಾಠವಿತ್ತು. ಅದರಂತೆ ಮುಂದೆ ಹೋಗುವವನು ಸೊಂಟಕ್ಕೆ ಚೌಕವನ್ನು ಕಟ್ಟಿಕೊಂಡು ಅದನ್ನು ಬಹುಭಕ್ತಿಯಿಂದ ಎತ್ತಿಹಿಡಿದು ನಡೆಯುತ್ತಿದ್ದ. ಮನೆ ಮನೆ ಬಾಗಿಲಲ್ಲಿ ಅದನ್ನು ಇಟ್ಟಾಗ ಅದಕ್ಕೆ ತಂದು ಮನೆಮಂದಿ ಎಣ್ಣೆ ಸುರಿಯುತ್ತಿದ್ದರು. ಅದು ಕಬ್ಬಿಣದಿಂದ ಚೌಕಾಕಾರವಾಗಿ ಮಾಡಿದ್ದು ಮೂರ‍್ನಾಲ್ಕು ಅಡಿ ಎತ್ತರವುಳ್ಳದು, ಕೆಲವು ಚಿತ್ತಾರವೂ ಇರುತ್ತಿತು. ಆ ದೊಡ್ಡ ನಾಲ್ಕು ದಿಕ್ಕಿನ ತಟ್ಟೆಯಲ್ಲಿ ಎಣ್ಣೆ ತುಂಬಿದ್ದರೆ ಮತ್ತೊಬ್ಬನ ಕೈಯಲ್ಲಿ ಎಣ್ಣೆ ತಪ್ಪಲೆ ಅಥವಾ ಡಬ್ಬವಿರುತ್ತಿತ್ತು. ದೇವಸ್ಥಾನದ ದೀಪಗಳಿಗೆ ಉರಿಯುವ ಎಣ್ಣೆ ಈ ರೀತಿ ಸಂಗ್ರಹವಾಗುತ್ತಿತ್ತು. ಅಳ್ಳಟ್ಟಿದ ಮನೆಯಲ್ಲಿ, ಎಣ್ಣೆಗಾಗಿ (ಕೈಯೆಣ್ಣೆ) ಬೇಯಿಸಿದ ಮನೆಯಲ್ಲಿ ಹೊಸ ಎಣ್ಣೆಯನ್ನು ದೇವರಿಗೆ, ಭಜನೆ ಗರುಡಗಂಭದ ದೀಪಕ್ಕೆ ಎಂದು ಅತೀ ಶ್ರದ್ಧೆಯಿಂದ ಒಂದು ಪಾವಿಗೂ (೧/೪ ಲೀಟರ್‌ಗಿಂತ ಸ್ವಲ್ಪ ಹೆಚ್ಚು) ಅಧಿಕ ಎಣ್ಣೆಯನ್ನು ನೀಡುತ್ತಿದ್ದರು. ಅಲ್ಲದೆ ಕೆಲವು ಮನೆಗಳ ಬಾಗಿಲಲ್ಲಿ ಅವರ ಮನೆಯಲ್ಲಿ ಅಧಿಕವಾಗಿ ಎಳ್ಳು ಬೆಳೆದಿದ್ದರೆ, “ಚರ್ಪು’ ಎಂದು ಬೆಲ್ಲ ಸೇರಿಸಿ ಮಾಡಿದ “ಸೂಸ್ಲು’ ಅನ್ನು ಭಜನೆ ತಂಡಕ್ಕೆ ಹಂಚುತ್ತಿದ್ದರು. ಭಜನೆ ಸಂಗ್ರಹ ಕಾರ‍್ಯದಲ್ಲಿ ನನಗೆ ಬರೀ ಅಚ್ಚಿನಮನೆ ಗೀತೆಗಳು ನನ್ನ ನೆರವಿಗೆ ಬರಲಿಲ್ಲ. ಮತ್ತೊಮ್ಮೆ ಮಗದೊಮ್ಮೆ ರಜಾದಿನಗಳಲ್ಲಿ ಕ್ಷೇತ್ರಕಾರ‍್ಯದಲ್ಲಿ ತೊಡಗಿದ ಕಾರಣ ವೈವಿಧ್ಯ ಹಾಗೂ ವಿಶಿಷ್ಟ ಎನ್ನುವಷ್ಟು ಗೀತೆಗಳನ್ನು ನಾನು ಸಂಗ್ರಹಿಸಲು ಸಾಧ್ಯವಾಯಿತು. ಇವೆಲ್ಲ ಸುಲಭವಾಗಿ ಈ ದಿನಗಳಲ್ಲಿ ಲಭ್ಯವಾಗುವುದಿಲ್ಲ ಎಂಬ ಅರಿವು ಎಲ್ಲರಿಗೂ ಇದೇ. ಆದರೂ ಕಠಿಣ ಪರಿಶ್ರಮದಿಂದ ಬೀದಿ ಅಲೆದ ಆ ದಿನಗಳು, ಊರೂರು ಅಲೆದ ಈ ದಿನಗಳು, ಜಾನಪದ ಅಕಾಡೆಮಿ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಆಕಾಂಕ್ಷೆಯಿಂದ ಈ ಉದ್ದೇಶ ಸಾರ್ಥಕವಾದರಷ್ಟೇ ನಾನು ಹರ್ಷಿಸುತ್ತೇನೆ.

“”ಏನ್‌ಕೊಡ ಏನ್‌ಕೊಡನ ಹುಬ್ಬಳ್ಳಿ ಮಠ ಏನ್‌ಕೊಡ
ಏನ್‌ಕೊಡನ ತಿಕ್ಕಿಲ್ಲ ತೀಡಿಲ್ಲ ತಳ ತಳ ಹೊಳೆಯುವ ಕೊಡ
ಕಂಚುಂದಲ್ಲ ತಾಮ್ರದಲ್ಲ ಮಿರಿ ಮಿರಿ ಮಿಂಚುವ ಕೊಡ
ಏನ್‌ಕೊಡ ಏನ್‌ಕೊಡನ || ೨ ||

ಇತ್ಯಾದಿ ಈ ಗೀತೆ ಮುಂದುವರೆಯುತ್ತದೆ. ಬದುಕನ್ನು ಬೆಳಗಿನೋಪಾದಿಯಲ್ಲಿ ಸೃಷ್ಟಿಸಿದ ಈ ಗೀತೆ ಜ್ಞಾನಮುಖಿಯಾಗಿ ಹರಡಿಕೊಂಡು ನಮ್ಮ ಮನೆಸೂರೆಗೊಳ್ಳುತ್ತದೆ. ಹಾಗೆಯೇ ಜೀವನದಲ್ಲಿ ಎಂತೆಂಥ ಮಜಲುಗಳಿಗವೆ ಎಂಬುದಕ್ಕೆ

“”ನೀನ್ಯಾಕೆ ಹೇಗಾಡ್ತಿ ತಮ್ಮ ಯಾಕೆ ಹೊಡೆದಾಡ್ತಿ ತಮ್ಮ” …..

ಎಂಬ ಭಜನೆ “”ಒಂದು ದಿನ ಹೋಗುತೈತಿ ಕಣ್ಮುಚ್ಚಿ ಮೇಲ್ ಮಣ್ಣುಮುಚ್ಚಿ” – ಎಂದು ಕೊನೆಗೊಳ್ಳುವಲ್ಲಿ ಸಂಬಂಧದ ಕೊಂಡಿಗಳು ಹೇಗೆ ಕಳಚಿಕೊಳ್ಳುತ್ತವೆ. ಯಾತರಿಂದ ಅಂಟಿಕೊಳ್ಳುತ್ತವೆ ಎಂಬ ಸತ್ಯವನ್ನು ಸ್ಪಷ್ಟವಾಗಿ ಭಜನೆ ಹಾಡುಗಳು ಪ್ರತಿಬಿಂಬಿಸುತ್ತವೆ ಹಾಗೂ ಪ್ರತಿಪಾದಿಸುತ್ತವೆ. ಸತ್ಯದ ನೆಲೆಯಲ್ಲಿ ಬದುಕನ್ನು ಸಾಗಿಸಬೇಕು ಎಂಬ ದಿವ್ಯ ಸಂದೇಶವನ್ನು ನಿರಂತರವಾಗಿ ಸಾರಿ ಸಾರಿ ಹೇಳುವ ಭಜನೆಗಳ ಅಧ್ಯಯನ ಅಂತರರಾಷ್ಟ್ರೀಯ ಮಾದರಿಯಲ್ಲಿ ತುರ್ತಾಗಿ ನಡೆಯುವ ಅಗತ್ಯವಿದೆ.

ತಿರುಗುವ ಭಜನೆ ತಂಡಗಳ ವೈಖರಿ ಒಂದು ತೆರನಾದರೆ, ಸಾವಾದವರ ಮನೆ ಮುಂದೆ ಬೆಳಗಾನ ಹಾಡುವ ಭಜನೆಯ ತಿರುಳು ಅದ್ಭುತ ವಿಸ್ಮಯಕಾರಿ. ಭಜನಾ ಮೇಳಗಳು ನಡೆಯುತ್ತಿರುವ ಈ ಸಂದರ್ಭಗಳಲ್ಲಿ ಈ ಪ್ರಕಾರಕ್ಕೆ ಒಂದು ಭದ್ರವಾದ ಚೌಕಟ್ಟಿನ ನೆಲೆಯನ್ನು ಒದಗಿಸಿದರೆ ಈ ಭಜನಾ ಸಂಪುಟವೂ ಸಾರ್ಥಕವಾಗುತ್ತದೆ. ಇನ್ನು ಮತ್ತೊಂದು ತೆರನಾದ ಭಜನೆಯ ಸ್ವರೂಪವನ್ನು ಕಾಣಬಹುದು. ಅನೇಕ ಬಾಬಾ ಮಂದಿರಗಳು, ರಾಮ ಮಂದಿರಗಳು, ಕೃಷ್ಣ ಮಂದಿರಗಳು ಜೊತೆಗೆ ಆಶ್ರಮಗಳಲ್ಲಿ ವಿಶಿಷ್ಟ ಬಗೆಯ ಭಜನೆಗಳನ್ನು ನಾವು ಕಾಣುತ್ತೇವೆ. ರಾಮಭಜನೆ – ಕೃಷ್ಣಭಜನೆ. ಭಜನೆ ಎಂದರೆ “ಧ್ಯಾನ’ ಎಂದರ್ಥ. ಅಂದರೆ ರಾಮಧ್ಯಾನ ಇತ್ಯಾದಿ ದೇವರ ಹೆಸರುಗಳಲ್ಲಿ ಧ್ಯಾನಸ್ಥರಾಗಿ ಮಾನಸಿಕ ನೆಮ್ಮದಿ ಕಂಡುಕೊಳ್ಳುವುದರ ಜೊತೆಗೆ ಆರೋಗ್ಯ ಲಭ್ಯವಾಗುವುದರಲ್ಲಿ ಎರಡು ಮಾತಿಲ್ಲ ಎಂಬ ಅನೇಕ ತಜ್ಞರ ನುಡಿ ಮುತ್ತಿಗೆ ನನ್ನದೊಂದು ಒಕ್ಕಣಿಯ ಸಕ್ಕರೆ ಹೀಗಿದೆ. ದೇವನಿದ್ದಾನೋ ಇಲ್ಲವೋ ಗೊತ್ತಿಲ್ಲ. ಆದರೆ ಯಾವುದೋ ಒಂದು ಉತ್ತಮ ಶಕ್ತಿಸ್ವರೂಪಿ ಪ್ರಕೃತಿದೇವಿಯಿಂದ ನಮಗೆ ಸತ್ಯದ ಪ್ರತಿರೂಪವಾಗಿ ಗೋಚರವಾಗುವುದರಿಂದ ಮಾನವ ಧ್ಯಾನದಷ್ಟೊತ್ತಿನ ತನಕ ಒಳ್ಳೆಯ ಆಲೋಚನೆ ಒಳ್ಳೆಯ ನಡತೆಯ ಬಗೆಗೆ ಅವನ ಮನಸ್ಸು ನೆಲೆಸುವುದಾದರೆ ಖಂಡಿತವಾಗಿಯೂ ಈ ಭಜನೆಗಳು ಸಾರ್ಥಕತೆಯನ್ನು ಪಡೆಯುತ್ತವೆ.

ಇಂಥ ಬೃಹತ್ ಸಂಪುಟಗಳನ್ನು ಹೊರತರುವ ಯೋಜನೆ ಅಡಿ ಪ್ರಮುಖವಾದ ಅಧ್ಯಕ್ಷ ಸ್ಥಾನವನ್ನು ವಹಿಸಿರುವ ಪ್ರೊ. ಹಿ.ಶಿ. ರಾಮಚಂದ್ರೇ ಗೌಡ ಅವರನ್ನು ನನ್ನ ಕೆಲಸದ ಪ್ರಗತಿಯ ಬಗೆಗೆ ಆಗಾಗ ಸಂರ್ಪಕಿಸಿದಾಗ ಅವರು ವೈವಿಧ್ಯತೆಗೆ ಅವಕಾಶವಿರಲಿ ಎಂದು ಸೂಚಿಸಿ ಉತ್ತಮ ಸಲಹೆ ಸಹಕಾರಗಳನ್ನು ನೀಡಿ ಉಪಕರಿಸಿದ್ದಾರೆ. ಅವರಿಗೆ ನನ್ನ ಗೌರವಪೂರ್ವಕ ಕೃತಜ್ಞತೆಗಳು ಸಲ್ಲಬೇಕು. ಕ್ರಿಶ್ಚಿಯನ್ ಭಜನೆಗಳನ್ನು (ಪ್ರಾರ್ಥನಾ ಗೀತೆಗಳು) ಸಂಗ್ರಹಿಸಬಹುದು ಎಂದಾಗ ನಾನು ಎಲ್ಲಾ ಧರ್ಮಗಳು ಹೇಳುವುದು ಒಂದೇ ಸತ್ಯದ ತಿರುಳು, ಆದ್ದರಿಂದ ಈ ಸಂಪುಟ ವಿಶಿಷ್ಟ ರೂಪದ್ದಾಗಿ ಹೊರಹೊಮ್ಮಲು ಅನ್ಯಧರ್ಮ ಎಂದು ಭಾವಿಸದೆ ಪರಸ್ಪರ ಪೂರಕಭಾವದಿಂದ ಇಲ್ಲಿ ಸಂಗ್ರಹಿಸಿ ಕೊಟ್ಟಿರುತ್ತೇನೆ. ಈ ಸಂಗ್ರಹಕ್ಕೆ ಆಸಕ್ತಿ ವಹಿಸಿ ಕ್ರಿಶ್ಚಿಯನ್ ಗೀತೆಗಳಲ್ಲಿ ಕೆಲವನ್ನು ತಾವೇ ಸ್ವತಃ ಬರೆದುಕೊಟ್ಟು ಸಹಕರಿಸಿದ ಶ್ರೀಮತಿ ಸತ್ಯಪ್ರೇಮ (ಬೆಂಗಳೂರು) ಇವರಿಗೆ ನನ್ನ ಧನ್ಯವಾದಗಳು. ತತ್ವಪದ ಹಾಡುಗಾರ್ತಿ ಶ್ರೀಮತಿ ಮರಿಸಿದ್ದಮ್ಮ ಮೈಸೂರು. ಹಾಗೂ ಕ್ಯಾತನಹಳ್ಳಿ ಶ್ರೀ ತುಳಸಿಗೋವಿಂದೇಗೌಡರಿಗೆ ಧನ್ಯವಾದಗಳು. ಕನ್ನಡ ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ  ಶ್ರೀ ಕಾ.ತ. ಚಕ್ಕಣ್ಣ ಅವರಿಗೆ ಮತ್ತು ಈ ಯೋಜನೆಯ ಎಲ್ಲಾ ಗಣ್ಯ ಸದಸ್ಯರುಗಳಿಗೆ ನನ್ನ ಅನಂತಾನಂತ ವಂದನೆಗಳು.

ಎಲ್ಲಕ್ಕಿಂತ ಹೆಚ್ಚು ಈ ಭಜನೆ ಸಾಹಿತ್ಯದಲ್ಲಿ ಆಸಕ್ತಿ ಮೂಡಲು ನನ್ನ ಸೋದರ ಮಾವನವರಾದ ದಿವಂಗತ ಶ್ರೀ ಗೌಡ್ನೋರ ಮರೀಗೌಡ ಅವರನ್ನು ಸ್ಮರಿಸಿಕೊಂಡು ಜೊತೆಗೆ ಕ್ಯಾತಹನಳ್ಳಿ ಭಜನಾ ತಂಡ ಚವರಸಿನ ಕೊಪ್ಲು, ಬ್ಯಾಟೆತಿಮ್ಮನ ಕೊಪ್ಪಲಿನ ಭಜನಾ ತಂಡ ಹಾಗೂ ಮಂಡ್ಯ ಜಿಲ್ಲೆ ಹಾಸನ  ಮತ್ತು ಮೈಸೂರಿನ ಸುತ್ತಮುತ್ತಣ ಎಲ್ಲಾ ಭಜನ ತಂಡಗಳಿಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸದಿರಲಾರೆ. ಒಂದಲ್ಲ, ಒಂದು ರೀತಿ ಈ ಎಲ್ಲಾ ಕೆಲಸಗಳಿಗೂ ಸಹಕಾರ ನೀಡಿದ ಸಹೋದರಿಯರಾದ ಶಕುಂತಲ ಹಾಗೂ ಮಂಜುಳ, ಭಾವ ನಾಗರಾಜ್ ಎನ್. ನನ್ನ ಪತಿ ಕೆ. ರಾಜಶೇಖರ್‌ರವರಿಗೆ ಕೃತಜ್ಞತೆಗಳು. ನನ್ನ ಮಕ್ಕಳಾದ ಎಂ.ಆರ್. ಅರ್ಪಿತ ಮತ್ತು ಎಂ.ಆರ್. ಹರ್ಷಿತ ಇವರೆಲ್ಲರಿಗೂ ನನ್ನ ಶುಭ ಹಾರೈಕೆಗಳು. ಎಲ್ಲಕ್ಕಿಂತ ಮಿಗಿಲಾಗಿ ಶ್ರೀ ಗಣಪತಿ ಸಚ್ಚಿದಾನಂದಾಶ್ರಮದ ಸ್ವಾಮಿ ಅವರಿಗೆ ನನ್ನ ಭಕ್ತಿಪೂರ್ವಕ ಪ್ರಣಾಮಗಳು. ಅವರ ಮಾತೃಶ್ರೀ ಅವರ ಭಜನೆ ಕೃತಿ, ಶ್ರೀಕೃಷ್ಣ ಜಯವನ್ನು ನನ್ನಿಂದ ಬಿಡುಗಡೆಗೊಳಿಸಿ, ನಾನು ಇನ್ನು ಹೆಚ್ಚು ತೊಡಗಿಸಿಕೊಳ್ಳಲು ಅವಕಾಶವಿತ್ತದ್ದಕ್ಕಾಗಿ ಅವರಿಗೆ ವಂದನೆಗಳು ಸಲ್ಲುತ್ತವೆ. ವಿನಯಪೂರ್ವಕವಾಗಿ ವಿಶ್ವಾಸದ,

ಡಾ. ಟಿ. ಜಯಲಕ್ಷ್ಮೀ ಸೀತಾಪುರ
ಅಧ್ಯಾಪಕರು
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ
ಮಾನಸ ಗಂಗೋತ್ರಿ
ಮೈಸೂರು – ೫೭೦ ೦೦೬