ಯಕ್ಷಗಾನ ಬಯಲಾಟವು ವೇಷಗಾರಿಕೆ, ಗಾನ, ನೃತ್ಯ, ಮಾತುಗಾರಿಕೆ ಮತ್ತು ಅಭಿನಯಗಳಿಂದ ಕಥಾನಕಗಳನ್ನು ನಿರೂಪಿಸಿ ಪ್ರೇಕ್ಷಕರಲ್ಲಿ ಸಾತ್ವ್ತಿಕ ಪ್ರವೃತ್ತಿಯನ್ನು ಜಾಗೃತಿಗೊಳಿಸುವ ಉದ್ದೇಶಗೊಂಡ ಒಂದು ಸಂರ್ಕೀಣವಾದ ರಂಗಸಂಪ್ರದಾಯ. ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಪ್ರತ್ಯೇಕ ಹೆಸರುಗಳಿಂದ ಈ ರಂಗಭೂಮಿ ಹಬ್ಬಿದೆ. ಕನ್ನಡನಾಡಿನ ಸುತ್ತಮುತ್ತಲಿನ ಇತರ ಭಾಷಾ ಪ್ರಾಂತ್ಯಗಳಲ್ಲೂ ಭಿನ್ನ ಭಿನ್ನ ನಾಮರೂಪಗಳಲ್ಲಿ ಇಂಥದೇ ರಂಗಕಲೆಗಳ ಅಸ್ತಿತ್ವವನ್ನು ಕಾಣಬಹುದು.

ಕರಾವಳಿ ಕನ್ನಡ ಜಿಲ್ಲೆಗಳು ಮತ್ತು ಅವುಗಳಿಗೆ ತಾಗಿಕೊಂಡಿರುವ ಮಲೆನಾಡ ಜಿಲ್ಲೆಗಳಲ್ಲಿ ಈ ರಂಗಭೂಮಿಯನ್ನು ಯಕ್ಷಗಾನ ಎಂದು ಗುರುತಿಸಲಾಗುತ್ತಿದೆ. ಹೆಚ್ಚಾಗಿ ದೇವಸ್ಥಾನಮೂಲವಾದ ರಂಗ ಸಂಪ್ರದಾಯವಿದು. ಆದರೆ ಇದರ ಪ್ರದರ್ಶನ ಮಾತ್ರ ದೇವಾಲಯಗಳ ಹೊರಗಡೆಯೆ ಆಗುವಂಥದು. ದೇವಾಲಯದ ಒಳಗೆ ಕಾಣಿಸುವಂಥ ಕಟ್ಟು-ಚಿಟ್ಟು, ಅಂತಸ್ತು ಇತ್ಯಾದಿ ಯಕ್ಷಗಾನ ಪ್ರದರ್ಶನದಲ್ಲಾಗಲಿ, ಪ್ರದರ್ಶಕರಲ್ಲಾಗಲಿ ಕಾಣಿಸುವುದಿಲ್ಲ. ಇಲ್ಲಿ ಭಕ್ತಿಗೇ ಅಗ್ರಮನ್ನಣೆ.

ಯಕ್ಷಗಾನ ರಂಗಭೂಮಿಗೆ ಅಳವಟ್ಟಿರುವ ಸಾಹಿತ್ಯ, ಸಂಗೀತ, ನೃತ್ಯ, ಚಿತ್ರಗಳಿಗೆ ಅವುಗಳದೇ ಆದ ಪಾರಂಪರಿಕ ವಿನ್ಯಾಸ ಕ್ರಮಗಳಿವೆ. ಈ ರಂಗದಲ್ಲಿ ನಿರೂಪಣೆಗೊಳ್ಳುವ ಕಥಾನಕದ ಲಿಖಿತ ಆಕರಕ್ಕೆ ಹೆಸರು ಪ್ರಸಂಗ. ರಂಗಶಾಸ್ತ್ರದಲ್ಲಿ ಕೃತಿಯನ್ನು ಆಧಿಕಾರಿಕ ಮತ್ತು ಪ್ರಾಸಂಗಿಕ ಎಂದು ವಿಭಾಗಿಸುವ ಕ್ರಮವಿದೆ. ಒಬ್ಬ ನಾಯಕನನ್ನು ಕೇಂದ್ರ ಬಿಂದುವಾಗಿ ಮಾಡಿಕೊಂಡು ನಡೆಸುವ ಕಥಾನಕ ಆಧಿಕಾರಿಕ. ಪೋಷಕಪಾತ್ರಗಳು ಅಥವಾ ಕಥಾನಕಗಳನ್ನು ನಿರೂಪಿಸುವಂಥವು ಪ್ರಾಸಂಗಿಕ ಕೃತಿಗಳು. ಈ ನಿರ್ವಚನಕ್ಕೂ ಯಕ್ಷಗಾನದ ಪ್ರಸಂಗ ಎಂಬ ಹೆಸರಿಗೂ ಸಾಮ್ಯ ಇರುವುದನ್ನು ಕಾಣಬಲ್ಲೆವು.

ನಡುಗನ್ನಡ ಎನ್ನಬಹುದಾದ ಭಾಷೆಯಲ್ಲಿ ರಚಿತವಾದ, ಕುಣಿತಕ್ಕೊದಗುವ ಪದಗಳ ನಿಬಂಧವೇ ಯಕ್ಷಗಾನ ಪ್ರಸಂಗ. ಪದಗಳನ್ನು ಯುಕ್ತ ರಾಗ-ತಾಳಗಳೊಂದಿಗೆ ಹಾಡುತ್ತ ಕಥಾನಿರೂಪಣೆಯನ್ನು ಅಭಿನಯದ ಗತಿಯನ್ನು ನಡೆಸಿಕೊಡುವವನೇ ಭಾಗವತ. ಪದಗಳು ದ್ರಾವಿಡ ಛಂದಸ್ಸಿನ ನೆಲಗಟ್ಟಿನಲ್ಲಿ ವೈವಿಧ್ಯಮಯ ಲಯ, ಗತಿವಿನ್ಯಾಸಗಳೊಂದಿಗೆ ರಚನೆಗೊಂಡವುಗಳಾಗಿವೆ. ಕಥಾನಿರೂಪಣೆಯ ಜತೆಯಲ್ಲಿ ವೇಷಧಾರಿಗೆ ಸಂಭಾಷಣೆ ಬೆಳೆಸಲು ಬೇಕಾದ ಸಾಮಗ್ರಿಗಳನ್ನು ಪ್ರಸಂಗ ಒದಗಿಸುತ್ತದೆ. ಕರಾವಳಿ, ಮಲೆನಾಡುಗಳ ಯಕ್ಷಗಾನ ಪಾತ್ರಧಾರಿಯ ಸಂಭಾಷಣೆ ಲಿಖಿತವಲ್ಲ. ಆಶು ವಿಧಾನದಲ್ಲಿ ಬೆಳೆಯುವಂಥದು. ಈ ಪ್ರಸಂಗಗಳನ್ನು ಆಧರಿಸಿ ಆಟದಲ್ಲಿ ಮಾತ್ರವಲ್ಲ. ತಾಳಮದ್ದಳೆ ಎಂಬ ವಾಚಿಕ ರಂಗಭೂಮಿಯಲ್ಲೂ ಬಲು ಸೊಗಸಾದ ಸಂಭಾಷಣೆಯನ್ನು ಬೆಳೆಸಿ, ಕಥೆ ಮಾತ್ರವಲ್ಲ ಸಂಸ್ಕೃತಿಯ ದರ್ಶನ ಮಾಡಿಕೊಡುವ ಪದ್ಧತಿ ಇದೆ.

ರಾಮಾಯಣ, ಮಹಾಭಾರತ, ಭಾಗವತ ಮತ್ತು ಪುರಾಣಗಳಿಂದ ಮಾತ್ರವಲ್ಲ, ವೀರಶೈವ, ಜೈನಪುರಾಣಗಳಿಂದಲೂ ವಸ್ತುಗಳನ್ನು ಯಕ್ಷಗಾನ ಪ್ರಸಂಗಗಳು ಪಡೆದುಕೊಂಡಿವೆ. ತುಳುನಾಡಿನ ಜಾನಪದವೀರರ ಕತೆಗಳು ಯಕ್ಷಗಾನದ ಕಥಾನಕಗಳಾಗಿವೆ. ಹಲವು ಭಕ್ತರ, ಜನಪದ ಮಹಿಮಾನ್ವಿತರ ಚರಿತ್ರೆಗಳೂ, ಸ್ಥಳಮಾಹಾತ್ಮ್ಯಗಳೂ ಪ್ರಸಂಗಗಳಾಗಿವೆ. ರಾಜರು, ಪಂಡಿತರು, ಭಾಗವತರು, ವೇಷಧಾರಿಗಳು, ಜನಸಾಮಾನ್ಯರು, ವಿರಕ್ತರು ಹೀಗೆ ವಿವಿಧ ಸಂಸ್ಕಾರವಲಯಗಳ ವ್ಯಕ್ತಿಗಳು ಯಕ್ಷಗಾನ ಪ್ರಸಂಗರಚನೆ ಮಾಡಿದ್ದಾರೆ. ಹೀಗೆ ರಚನೆಗೊಂಡಿರುವ ಕೃತಿಗಳು ಎರಡು ಸಾವಿರಕ್ಕೂ ಮೇಲ್ಪಟ್ಟು ಇವೆ. ಈಗಲೂ ಹೊಸ ಪ್ರಸಂಗಗಳು ವಿವಿಧ ಆಶಯಗಳೊಂದಿಗೆ ಮತ್ತು ರಂಗ ಆಧುನಿಕ ಕಾಲವನ್ನು ಎದುರಿಸುತ್ತಿರುವ ಪ್ರಶ್ನೆಗಳನ್ನು ಉತ್ತರಿಸುವ ಉದ್ದೇಶದೊಂದಿಗೆ ರಚನೆಗೊಳ್ಳುತ್ತಲೆ ಇವೆ.

ಯಕ್ಷಗಾನ ಪ್ರಸಂಗದಲ್ಲಿ ವಿವಿಧ ರಾಗತಾಳಗಳ ಪದಗಳಲ್ಲದೆ ಭಾಮಿನಿ, ವಾರ್ಧಕ, ಶರ ಮೊದಲಾದ ಷಟ್ಪದಿಗಳು ದ್ವಿಪದಿ, ಸಾಂಗತ್ಯ, ಸೀಸಪದ್ಯ, ರಗಳೆ, ವಿವಿಧ ವರ್ಣವೃತ್ತಗಳು ಮೊದಲಾದ ಛಂದೋಪ್ರಕಾರಗಳೂ, ಚೂರ್ಣಿಕೆ, ವಚನಗಳೂ ಯಥೋಚಿತವಾಗಿ ಕಾಣಿಸಿಕೊಳ್ಳುತ್ತವೆ. ಕೃತಿಯ ಪ್ರಾರಂಭ, ಬೆಳವಣಿಗೆಗೆ, ಮುಕ್ತಾಯಗಳಿಗೆ ಸಂಬಂಧಪಟ್ಟು ವ್ಯವಸ್ಥಿತವಾದ ಕ್ರಮಗಳೂ ಇವೆ, ಅನೇಕ ರಂಗ ಕ್ರಮಗಳು ಮತ್ತು ಅವುಗಳಿಗಾಗಿ ಬಳಸುವ ಕಟ್ಟುಕಟ್ಟಲೆಯ ಪದಗಳು ಪ್ರತ್ಯೇಕವಾಗಿ ಇವೆ. ಅವು ಪ್ರಸಂಗದಲ್ಲಿ ಕಾಣಿಸಿಕೊಳ್ಳವು. ಉದಾಹರಣೆಗೆ ರಾಮ, ಕೃಷ್ಣ, ದೇವೇಂದ್ರ, ದಶರಥ ಮೊದಲಾದವರ ಒಡ್ಡೋಲಗಕ್ಕೆ ಪದ್ಧತಿಯ ಪದಗಳನ್ನು ಹೇಳಿ ಕುಣಿಸಲು ಇರುತ್ತದೆ. ಒಡ್ಡೋಲಗದಲ್ಲಿ ಪರ್ಯವಸಾನಗೊಳ್ಳುವ ಪೂರ್ವರಂಗದ ಪ್ರಯೋಗಕ್ಕೆಬೇಕಾದ ಪದಗಳು, ಸಭಾಲಕ್ಷಣ, ಎಂಬ ಪ್ರತ್ಯೇಕ ಗ್ರಂಥದಲ್ಲಿ ಇವೆ.

ಯಕ್ಷಗಾನ ಪ್ರಸಂಗ ರಚನೆಯ ಧೋರಣೆಯಲ್ಲಿ ಸರಳತೆಗೆ ಬಹುವಾದ ಆದ್ಯತೆ ಇದೆ. ಗಾನಕ್ರಿಯೆಯಲ್ಲಿ ಪದ ಕಿವಿಗೆ ತಟ್ಟುತ್ತಲೆ ಅರ್ಥವಾಗಬೇಕು. ಚರಣದ ತುಣುಕುಗಳು ಮುಗಿಯುತ್ತಬಂದಂತೆ ಪದದ ಆಶಯ ಅಷ್ಟಷ್ಟಾಗಿ ತಿಳಿಯುತ್ತಲೆ ಹೋಗಬೇಕು. ಅನ್ವಯ ಮಾಡಿಕೊಂಡು ಅರ್ಥಮಾಡಿಕೊಳ್ಳುವ ಕ್ಲಿಷ್ಟತೆ ಯಕ್ಷಗಾನ ಕವಿಗಳು ಹೋಗುವಲ್ಲಿ ಇರಲಾರದು. ಅಲಂಕಾರಕ್ಕಿಂತ ರಸಪ್ರತೀತಿಗೆ ಇಲ್ಲಿ ಆದ್ಯತೆ. ಹಾಗೆಂದು ಅಲಂಕಾರವನ್ನು ನಿರಾಕರಿಸಬೇಕೆಂದು ಅವರಿಗನಿಸದು. ಪರಿಕರಾಲಂಕಾರ (ಅಲಂಕಾರಃ ಪರಿಕರಃ ಸಾಭಿಪ್ರಾಯೇ ವಿಶೇಷಣೇ) ಯಕ್ಷಗಾನ ಪದರಚನೆಯ ಜೀವಾಳ ಎನ್ನಬೇಕು. ಅಂಥ ಅರ್ಥಗರ್ಭಿತ ವಿಶೇಷಣಗಳಿಂದ ಧ್ವನಿಪೂರ್ಣವಾಗಿ ರಸವು ಒಸರುವುದನ್ನು ಕಾಣಬಹುದು.

ಸಾಹಿತ್ಯದ ರುಚಿಯರಿಯಲು ಒಂದೆರಡು ಉದಾಹರಣೆಗಳನ್ನು ಪರಿಶೀಲಿಸಬಹುದು. ರಾಮನಿಗೆ ಪಟ್ಟಾಭಿಷೇಕ ನಡೆಸುವ ನಿರ್ಧಾರ ಕ್ಷಿಪ್ರಗತಿಯಲ್ಲಿ ಆಗುತ್ತದೆ. ಕೈಕೇಯಿಗೆ ಅದು ಮಂಥರೆಯಿಂದ ತಿಳಿಯುತ್ತದೆ. ಮಂಥರೆ ತಿಳಿಸುವಾಗ ಎಷ್ಟೊಂದು ನಾಜೂಕಾಗಿ ನಿರ್ವಹಿಸುತ್ತಾಳೆ ? ಆಕೆ ಹೇಳುತ್ತಾಳೆ – ಬಾಲೆ ಕೇಳ್ ಪೂಮಾಲೆ, ಚಾರುಶೀಲೆ ಇಂದು ನಿನ್ನ ಕಾಂತ, ಭೂಲೋಕವ ರಾಮನಿಗೆ ಪಾಲಿಸಬೇಕೆಂದು ಹೀಗೆ. ಮಂತ್ರಿ ವಸಿಷ್ಠರ ಕೂಡೆ ಅಂತರಂಗದಿ ಮಾತಾಡೆ ನಿಂತು ಕೇಳಿರುವೆ ನಾ ಮಾತ. ಅರಮನೆಯ ಗೋಡೆಗೂ ಕಿವಿ ಇರುತ್ತದೆ ಎನ್ನುವುದುಂಟಲ್ಲ ? ಕೇಳಿದ್ದನ್ನು ಹೇಳುವಾಗಲೂ ನೀ ಹೂವಿನ ಮಾಲೆಹಾಗೆ ಪರಿಮಳಿಸುವವರೆಗೆ ಹೂವು ಮುಡಿಗೆಬೇಕು. ಬಾಡಿದಾಗ ಕಿತ್ತು ಎಸೆಯುವುದೇ. ಇದನ್ನೇ ಕೈಕೆಯ ಪಾಲಿಗೆ ಮಾಡಿರುವುದೆಂದು ಮಂಥರೆ ಹೇಳುವಲ್ಲಿ ವಕ್ರೋಕ್ತಿ ಅಸಾಧಾರಣವಾದದ್ದು. ಮಂಥರೆಯ ಈ ಚಾಡಿ ಮಾತಿಗೆ ಸಿಟ್ಟಿಗೆದ್ದ ಕೈಕೇಯಿ ಆ ದಾಸಿಯನ್ನು ಮುದಿಗೂಗೆ ಎನ್ನುತ್ತಾಳೆ. ಈ ಹೋಲಿಕೆಯಿಂದ ಹೊರಡುವ ಅರ್ಥವತ್ತತೆಯನ್ನು ಗಮನಿಸುವ. ಅಂಧಕಾರ ಕವಿದಾಗ ಲೋಕವಿಡೀ ಇನ್ನು ಯಾವಾಗ ಬೆಳಗಾಗಲಿಲ್ಲ ಎಂದುಕೊಂಡರೆ, ಗೂಗೆ (ಗೂಬೆ) ಮಾತ್ರ ಕತ್ತಲೆಯೆ ದೀರ್ಘವಾಗಲಿ ಎಂದು ಹಾರಯಿಸುವುದಿದೆಯಂತೆ. ಲೋಕವಿಡೀ ರಾಮನ ಪಟ್ಟಾಭಿಷೇಕವನ್ನು ಹಂಬಲಿಸುವಾಗ ಇವಳು ಮಾತ್ರ ರಾಮನಿಗೆ ಅಧಿಕಾರ ಬರಕೂಡದೆಂದು ಹಾರಯಿಸುತ್ತಾಳೆ ಎಂಬ ಧ್ವನಿ ಇಲ್ಲಿದೆ. ಪಟ್ಟಾಭಿಷೇಕ ಮುಹೂರ್ತ ಸಮೀಪಿಸುತ್ತಿರುವಂತೆ ಪನ್ನೀರ ರಾಮನಿಗೆ ಪಂಕಜಾಕ್ಷಿಯರೆರೆದು ಚಿನ್ನಗಳನ್ನು ತೊಡಿಸಿದರು, ಯಾರಿಗೆ ? ಚಿನ್ಮಯಾತ್ಮಕೆಗೆ. ಮುಹೂರ್ತಕ್ಕೆ ಸರಿಯಾಗಿ ತಾಯಿ ಕೈಕೇಯಿ ಬಾರದಿರುವುದನ್ನು ಗಮನಿಸಿ ರಾಮ ತಂದೆಯಲ್ಲಿ ಯಾಕೆ ಭರತನ ಮಾತೆ ಈ ಕಡೆಗೆ ಬರಲಿಲ್ಲ? ಎಂದು ಕೇಳಿದುದರಲ್ಲಿ ವಾಚ್ಯಾರ್ಥಕ್ಕಿಂತ ಹೆಚ್ಚಿನದಾದ ತಿರುಳು ಇದೆ. ದಶರಥ, ಕೈಕೇಯಿ ಸಂವಾದದ ರೀತಿ ಗಮನಾರ್ಹ. ಎಲ್ಲವ ನಿನ್ನೊಡನೆ ಪೇಳ್ವೆ ಕಲ್ಯಾಣಾಂಗ ಕೇಳು ಎಂದು ಎರಡು ವರಗಳನ್ನು ತೀರಿಸಲು ಇರುವುದನ್ನು ನೆನಪಿಸಿದ ಕೈಕೇಯಿಗೆ ದಶರಥ, ಅಂತರಂಗ ಶುದ್ಧವಾಗಿ ಬೇಡಿಕೊ, ನಾ ಕೊಟ್ಟೆ ಎನ್ನುತ್ತಾನೆ. ಅಂತರಂಗಶುದ್ಧಿಗೂ ಕೈಕೆಯಿಯ ಸಂಚಿಗೂ ಎಷ್ಟು ಗಾವುದ ದೂರ ? ದಶರಥನ ಅಳಿವಿನ ವಾರ್ತೆಗೆ ಸೀತೆ ದುಃಖಿಸುವ ರೀತಿ, ಇನ್ನಾರೆನ್ನನು ಗುಣದಲಿ ಮನ್ನಿಸಿ ಮನ್ನಿಸಿ ಕರೆವರು, ಕಣ್ಣಲಿ ಕಾಣದೆ ಹೋಯಿತೆ ಪುಣ್ಯವೆ ಹಾ ವಿಧಿಯೆ ? ಮನಸ್ಸನ್ನು ಕಲಕುವಂಥದ್ದು. ಕಣ್ಣಲ್ಲಿ ಕಾಣದೆ ಹೋದದ್ದು ಕೇವಲ ದಶರಥನಲ್ಲ, ಅದು ತನ್ನ ಮಾತ್ರವಲ್ಲ ಅಯೋಧ್ಯೆಯ ಎಲ್ಲರ ಪಾಲಿನ ಪುಣ್ಯ. ವಾಲ್ಮೀಕಿಯಾದರೂ ರಾಮನನ್ನು ಬಣ್ಣಿಸುವಾಗ ಗುಣದಲ್ಲಿ ದಶರಥನಿಗೆ ಸಮಾನ ಎಂದಿರುವುದು ಇಲ್ಲಿ ಸ್ಮರಣಾರ್ಹ. ಉನ್ನತ ಚೇತನದ ಚರಿತ್ರೆಯ ನಿರೂಪಣೆ ಜನಸಾಮಾನ್ಯರ ಆಡುಮಾತಿನಿಂದಲೇ ಆಗುವುದು ಈ ಸಾಹಿತ್ಯದ ವಿಲಕ್ಷಣತೆ.

ಇಲ್ಲಿ ಬೆರಗನ್ನು ಉಂಟುಮಾಡುವ ಅಂಶವೆಂದರೆ ಕನ್ನಡದ ಪಾರಂಪರಿಕ ಛಂದಸ್ಸಿನಲ್ಲಿ ಗಾನ, ನರ್ತನಗಳಿಗಾಗಿ ಮಾಡಿರುವ ಅಪರಿಮಿತವಾದ ಪ್ರಯೋಗ. ಶಬ್ದಗಳ ಅಕ್ಷರಗಳು ಸರಿಯುವ ಪರಿಯಿಂದಲೆ ತಾಳದ ಆಯ ನಿರ್ಣಯವಾಗುತ್ತದೆ. ಲಭ್ಯ ಛಂದಸ್ಸಿನ ಚೌಕಟ್ಟಿನಲ್ಲಿ, ನವೀನಗತಿ ಸೌಂದರ‍್ಯವನ್ನು ತರಲು ಮಾಡಿದ ಯತ್ನ ಅಗಾಧವಾದದ್ದು. ಆಧುನಿಕ ಕನ್ನಡದ ವಾಕ್ಯರಚನಾ ವೈವಿಧ್ಯದ ಬೇರುಗಳನ್ನು ಯಕ್ಷಗಾನ ಪ್ರಸಂಗ ಸಾಹಿತ್ಯದಲ್ಲಿ ಕಾಣಬಲ್ಲೆವು.

ಯಕ್ಷಗಾನದಲ್ಲಿ ಹೆಚ್ಚಾಗಿ ಇರುವುದು ದಕ್ಷಿಣಾದಿ ಸಂಗೀತ ಪದ್ಧತಿಯಲ್ಲಿ ಕಂಡು ಬರುವ ಸುಳಾದಿ ಸಪ್ತತಾಳಗಳೇ. ಅವುಗಳನ್ನು ಸಮರ್ಪಕವಾಗಿ ಬಿಂಬಿಸುವ ಪದ್ಧತಿ ಯಕ್ಷಗಾನದಲ್ಲಿ ಉಳಿದುಬಂದಿದೆ. ರಸಭಾವಗಳಿಗೆ ಅನುಸಾರವಾಗಿ ಕವಿಗಳು ತಾಳಗಳನ್ನು ಆಯುವುದೂ ಸಂಗೀತಶಾಸ್ತ್ರಜ್ಞರ ಗಮನಸೆಳೆಯದೆ ಬಿಡದು. ವೀರರಸ ಎಂದರೆ ಅದೂ ಭೀಕರಾಕೃತಿಯವರು ಎಂದ ಮೇಲೆ ಅಲ್ಲಿ ಮಟ್ಟೆತಾಳ (ಖಂಡಮಠ್ಯ) ಬರಲೇಬೇಕು. ಭಾನು ತನುಜ ಭಳಿರೆಯನುಜ ಬಂದೆಯಾ ಮಮ ಎಂದು ಯುದ್ಧಕ್ಕೆ ಬಂದ ಸುಗ್ರೀವನಲ್ಲಿ ವಾಲಿ ಕೇಳುತ್ತಾನೆ. ಗಂಭೀರ ಸನ್ನಿವೇಶದ, ಒಡ್ಡೋಲಗದ ಬಳಿಕದ ಪೀಠಿಕೆಗೆ, ಪದ ಹೆಚ್ಚಾಗಿ ಝಂಪೆ (ಮಿಶ್ರಝಂಪೆ)ಯಲ್ಲೆ ಇರುತ್ತದೆ. ಯುವಪಾತ್ರಗಳ ವೀರಾವೇಶಕ್ಕೆ ತ್ವರಿತ ಅಷ್ಟತಾಳ, ಹಿರಿಯರ ಗಂಭೀರ ಸಿಟ್ಟಿನ ಪ್ರದರ್ಶನಕ್ಕೆ ತ್ವರಿತ ತ್ರಿವುಡೆ ಅಥವಾ ತ್ವರಿತ ಝಂಪೆ ಇತ್ಯಾದಿ ಆಯ್ಕೆ ಗಮನಾರ್ಹ. ಅನೇಕ ರಾಗಗಳ ಪ್ರಾಚೀನ ಹೆಸರುಗಳು ಯಕ್ಷಗಾನ ಪ್ರಸಂಗಗಳಲ್ಲಿ ನಮೂದುಗೊಂಡಿವೆ. ಹೆಚ್ಚಾಗಿ ಮಧ್ಯ ಮತ್ತು ತಾರಾರ್ಧ ಸಪ್ತಕಗಳಲ್ಲೆ ಸಂಚರಿಸುವ ಯಕ್ಷಗಾನದ ಪಾರಂಪರಿಕ ಗಾನರೀತಿಯಲ್ಲಿ ಸ್ವರಗಳ ಈ ವ್ಯಾಪ್ತಿಯಲ್ಲಿ, ಶಕ್ತಿಶಾಲಿಯಾಗಿ ಕಾಣಿಸುವ ರಾಗಗಳಿಗೆ ಹೆಚ್ಚಿನ ಪ್ರಾಚುರ್ಯವಿದೆ. ದಕ್ಷಿಣಾದಿ ಸಂಗೀತದ ಪರಂಪರೆಯಂತೆ ಸಾಹಿತ್ಯ ಮತ್ತು ಸಂಗೀತ (ಮಾತು-ಧಾತು) ಸಮಪ್ರಾಧಾನ್ಯ ಹೊಂದಿಕೊಂಡಿರುವ ಗೀತ ಸಂಪ್ರದಾಯ ಯಕ್ಷಗಾನದ್ದು.

ಪ್ರಸ್ತುತ ಸಂಪುಟದಲ್ಲಿ ರಾಮಾಯಣದ ಕಥಾನಕಗಳಿಗೆ ಸಂಬಂಧಿಸಿದ ನಾಲ್ವರು ಕೃತಿಕಾರರ ಹನ್ನೆರಡು ಪ್ರಸಂಗಗಳನ್ನು ಅಳವಡಿಸಿದೆ. ಕುಂಬಳೆ ಕಣಿಪುರದ ಪಾರ್ತಿಸುಬ್ಬನ ಎಂಟು ಪ್ರಸಂಗಗಳು, ಬಲಿಪ ನಾರಾಯಣ ಭಾಗವತರ ಎರಡು ಪ್ರಸಂಗಗಳು, ಗೇರೆಸೊಪ್ಪೆ ಶಾಂತಪ್ಪಯ್ಯ ಮತ್ತು ಸಾರಡ್ಕ ಶಂಭಟ್ಟರ ತಲಾ ಒಂದು ಪ್ರಸಂಗಗಳು ಇಲ್ಲಿವೆ.

ಪಾರ್ತಿಸುಬ್ಬನ ಪುತ್ರಕಾಮೇಷ್ಟಿ, ಸೀತಾಕಲ್ಯಾಣ, ಪಟ್ಟಾಭಿಷೇಕ, ಪಂಚವಟಿ, ಸೀತಾಪಹಾರ ವಾಲಿಸಂಹಾರ (ವಾಲಿ ಸುಗ್ರೀವರ ಕಾಳಗ), ಸೇತುಬಂಧನ ಮತ್ತು ಅಂಗದ ಸಂಧಾನ ಪ್ರಸಂಗಗಳನ್ನು ಜೋಡಿಸಿದೆ. ರಾಮಾಯಣದಲ್ಲಿ ಬರುವ ಹಲವು ಪಾತ್ರಗಳಿಗೆ ಸಂಬಂಧಿಸಿದ ಕಥೆಗಳನ್ನು ನಿರೂಪಿಸುವ ಉದ್ದೇಶ ಬಲಿಪ ನಾರಾಯಣ ಭಾಗವತರ ಅಹಲ್ಯಾಶಾಪ ಮತ್ತು ವಾನರಾಭ್ಯುದಯ ಪ್ರಸಂಗಗಳಿಗೆ ಇದೆ. ದಶರಥನ ಹಿನ್ನೆಲೆಗೆ ಹೆಚ್ಚು ಒತ್ತುಕೊಟ್ಟು ರಚನೆಯಾಗಿರುವಂಥವು ಗೇರೆಸೊಪ್ಪೆ ಶಾಂತಪ್ಪಯ್ಯನ ಪುತ್ರಕಾಮೇಷ್ಟಿ- ಸೀತಾಸ್ವಯಂವರ ಮತ್ತು ಸಾರಡ್ಕ ಶಂಭಟ್ಟರ ದಶರಥೋತ್ಪತ್ತಿ ಸುಮಿತ್ರಾ ಸ್ವಯಂವರ.

ಪಾರ್ತಿಸುಬ್ಬನ ಪ್ರಸಂಗಗಳು :

ಕವಿ ವಿಚಾರ

ಪುತ್ರಕಾಮೇಷ್ಟಿ ಮೊದಲಾದ ರಾಮಾಯಣದ ಸುಮಾರು ಹತ್ತು ಪ್ರಸಂಗಗಳು, ಕುಶಲವರ ಕಾಳಗ ಎಂಬ ಉತ್ತರ ಕಾಂಡಕ್ಕೆ ಸಂಬಂಧಿಸಿದ ಪ್ರಸಂಗ, ಶ್ರೀಕೃಷ್ಣ ಚರಿತೆ ಎಂಬ ಭಾಗವತದ ಪ್ರಸಂಗ ಹಾಗೂ ಐರಾವತ (ಗಜನೋಂಪಿ) ಎಂಬ ಭಾರತಕ್ಕೆ ಸಂಬಂಧಿಸಿದ ಪ್ರಸಂಗಗಳನ್ನು ರಚಿಸಿದವನು ಕುಂಬಳೆ (ಕಾಸರಗೋಡು ತಾಲೂಕಿನ) ಕಣಿಪುರದ ಕವಿ ಪಾರ್ತಿಸುಬ್ಬನೆಂಬುದು ಬಹುಕಾಲದಿಂದ ಪ್ರತೀತವಾಗಿರುವ ವಿಚಾರವಾಗಿದೆ. ಈತನ ಪಟ್ಟಾಭಿಷೇಕ ಪ್ರಸಂಗದಲ್ಲಿ ಈ ಕೆಳಗಿನ ವೃತ್ತವಿದೆ.

ಧಾತ್ರೀಗುತ್ತಮ ಕಣ್ವನಾಮ ಪುರದೀ ನಿಂತಿರ್ದ ಶ್ರೀಕೃಷ್ಣನಾ ತತ್ಪಾದಾಂಬುಜ ದಿವ್ಯನಾಮವರದಿಂದೀ ಪಾರ್ವತೀನಂದನಂ |
ಬತ್ತೀಸಾಕೃತಿತಾಳರಾಗವಿಧದಿಂ ರಾಮಾಯಣಂ ಪೇಳ್ವುದಾ
ಭಕ್ತಿಧ್ಯಾನದಿ ಕೇಳ್ದುಪುಣ್ಯಕಥೆಯಂ ಸಂತೋಷಮಂ ಮಾಳ್ಪುದು ||

ಈ ಕವಿಯು ಕುಂಬಳೆಯ ಕಣ್ವನಾಮಪುರ (ಕಣಿಪುರ)ದವನೆಂದು, ಅಲ್ಲಿನ ಪ್ರಸಿದ್ಧ ಶ್ರೀಕೃಷ್ಣದೇವರ ಭಕ್ತನೆಂದು ಮತ್ತು ಪಾರ್ವತಿ (ಪಾರ್ತಿ)ಯ ಮಗ ಎಂದು ತಿಳಿಯುತ್ತದೆ, ಪಾರ್ತಿಸುಬ್ಬನ ಬಗೆಗಿರುವ ಜನಶ್ರುತಿಯೂ ಅವನ ಸ್ಥಳ ಕುಂಬಳೆ ಎಂಬುದನ್ನು ಬೆಂಬಲಿಸುತ್ತದೆ. ದೇವಸ್ಥಾನದಲ್ಲಿ ದೇವದಾಸಿ ಪದ್ಧತಿಯ ನೃತ್ಯಾರಾಧನೆ ಪುನರುತ್ಥಾನಗೊಂಡ ವಿಜಯನಗರದ ಸಾಮ್ರಾಜ್ಯದ ವೈಭವದ ಕಾಲದಲ್ಲೆ ಪಾರ್ತಿಸುಬ್ಬನಂಥ ಪ್ರತಿಭೆ ಕಾಣಿಸಿಕೊಂಡಿರುವುದು. ಈ ಕವಿ ಕಥಕಳಿಯ (ರಾಮನಾಟ್ಟದ) ಕೃತಿಗಳನ್ನಲ್ಲದೆ ತೊರವೆ ರಾಮಾಯಣ, ಚಾಟುವಿಠಲನ ಕನ್ನಡ ಭಾಗವತ, ಲಕ್ಷ್ಮೀಶನ ಜೈಮಿನಿ ಭಾರತ, ಗದುಗ ಭಾರತ ಇತ್ಯಾದಿಗಳನ್ನು ಚೆನ್ನಾಗಿ ಪಠಿಸಿದವನೆಂಬುದು ಇವನ ರಾಮಾಯಣ ಪ್ರಸಂಗಗಳು, ಶ್ರೀಕೃಷ್ಣ ಚರಿತೆ, ಕುಶಲವರ ಕಾಳಗ ಮತ್ತು ಐರಾವತ ಪ್ರಸಂಗಗಳಲ್ಲಿರುವ ಛಾಯೆಗಳಿಂದ ತಿಳಿಯುತ್ತದೆ, ಜತೆಗೆ ಸ್ವತಂತ್ರ ಪ್ರತಿಭೆಯೂ ಇವನಲ್ಲಿ ಧಾರಾಳ ಕಾಣಬಹುದು. ಇವನು ಭಾಸನ ಸಂಸ್ಕೃತ ನಾಟಕಗಳಿಂದಲೂ ಪ್ರಭಾವಿತನಿರಬೇಕೆಂದೂ ತುಲನೆಯಿಂದ ತಿಳಿದುಬಂದಿದೆ.

ಈತನ ಕಾಲದ ವಿಚಾರವಾಗಿ ಬೇರೆ ಬೇರೆ ವಿದ್ವಾಂಸರು ಬೇರೆ ಬೇರೆ ಕಾಲಗಳನ್ನು ಸೂಚಿಸಿದ್ದಾರೆ. ಪ್ರಕೃತ ಶ್ರೀ ಕುಕ್ಕಿಲ ಕೃಷ್ಣ ಭಟ್ಟರು ತಮ್ಮ ಪಾರ್ತಿಸುಬ್ಬನ ಯಕ್ಷಗಾನಗಳು ಎಂಬ ಗ್ರಂಥದಲ್ಲಿ ಸಪ್ರಮಾಣವಾಗಿ ಕಾಣಿಸಿದ ಕ್ರಿ.ಶ. ೧೫೯೦-೧೬೨೦ ಎಂಬ ಕೃತಿ ರಚನಾಕಾಲವನ್ನು ಒಪ್ಪಬಹುದಾಗಿದೆ.

ಕಾವ್ಯಶೈಲಿಯ ನೆಲೆಬೆಲೆ

ಅವನ ಎಲ್ಲ ಹಾಡುಗಳೂ ಲಲಿತ ಪದಮಿಳಿತವಾಗಿದೆ. ಕ್ಲಿಷ್ಟತೆಗೂ ಈತನಿಗೂ ಗಾವುದಕ್ಕಿಂತಲೂ ದೂರ. ಪ್ರಾಸಕ್ಕಾಗಿ ಸಲ್ಲದ ನುಡಿಗಳನ್ನು ತುರುಕುವುದೆಂಬುದು ಅವನು ಹೋದ ದಾರಿಯಲ್ಲಿಲ್ಲ. …. ಹದಕ್ಕೆ ಮಾಗಿದ ದ್ರಾಕ್ಷೆಯನ್ನು ಬಾಯೊಳಗಿಟ್ಟ ಹಾಗೆ ಪದಗಿದಗಳೆಲ್ಲ ತಮಗೆ ತಾವೇ ಭೇದವಾಗಿ ಕುತೂಹಲಿತವಾದ ಭಾವನೆಯು ಗಂಟಲಿನೊಳಗೆ ನುಸುಳಿಬಿಡುತ್ತವೆ (ಪಂಡಿತ ಮುಳಿಯ ತಿಮ್ಮಪ್ಪಯ್ಯನವರ ಪಾರ್ತಿಸುಬ್ಬ ಗ್ರಂಥ ೧೯೪೫).

ಲಘುವಿನ, ಬಿಗುವಿನ, ಲಲಿತವಾದ ವಕ್ರವಾದ ತರಂಗಿತ ಪದ್ಯರಚನೆಯ ಬಗೆ ಅವನಿಗೆ ಸ್ವಾಭಾವಿಕವಾಗಿ ಬಂದಿದೆ…… ಹಾಡುವುದಕ್ಕೆ ಹೇಗೋ ಕುಣಿಯುವುದಕ್ಕೂ ಬೇಕಾದ ಅರ್ಥಪೂರ್ಣ ತರಂಗಿತತೆ ಹೆಚ್ಚಿನ ಹಾಡುಗಳಲ್ಲಿ ಕಾಣಿಸುತ್ತದೆ. (ಡಾ.ಕೆ. ಶಿವರಾಮಕಾರಂತರ ಯಕ್ಷಗಾನ ಬಯಲಾಟ ೧೯೬೩).

ಅವನು ಬರೆದಿರುವ ಪ್ರಸಂಗಗಳು ಶ್ರೀಮಂತವೂ ಸುಂದರವೂ ಆದುವು.  ಅವನ ಐರಾವತದ ಭಾಷೆ ತೀರ ಸರಳವೂ, ನೇರವೂ ಅಂತಃಸ್ಪರ್ಶಿಯೂ ಆದದ್ದು. ಆತ ತನ್ನ ಪ್ರಸಂಗಗಳಲ್ಲಿ ಬಳಸಿದ ಹಾಡಿನ ಧಾಟಿಗಳು ಮಾನವ ಸಹಜ ಸುಖದುಃಖಾದಿ ಭಾವಗಳನ್ನು ಬಹಳ ಸುಂದರವಾಗಿ ಗೀತರೂಪದಲ್ಲಿ ಪ್ರಕಟಿಸುತ್ತವೆ. ಆತನಿಗೆ ಪ್ರೌಢವಾದ ಭಾಷೆಯ ಅರಿವು ಇಲ್ಲವೆಂದಿಲ್ಲ. ಅವನದು ಹಿತಮಿತವಾದ ಸರಳ ಸುಂದರ ಭಾಷೆ (ಡಾ.ಕೆ.ಶಿವರಾಮ ಕಾರಂತ – ಯಕ್ಷಗಾನ ೧೯೭೪).

ಪಾರ್ತಿಸುಬ್ಬನ ಶೈಲಿಯೆಂದರೆ ನಾವು ನೀವು ಪಡಸಾಲೆಯಲ್ಲಿ ಕುಳಿತು ಪಟ್ಟಾಂಗ ಹೊಡೆಯುವ ರೀತಿಯದು (ಗೋವಿಂದ ಪೈ ನವಭಾರತ – ೧೯೫೬).

ಯಕ್ಷಗಾನ ಪ್ರಸಂಗದ ಪದವೊಂದರ ರಚನೆಯ ಹಿಂದೆ ಮುಖ್ಯವಾಗಿ ಮೂರು ನೋಟಗಳು ಇರುತ್ತವೆ. ಒಂದು -ಪದ ಕೇಳ್ಮೆಗೆ ಹಿತಕರವಾದ ಶಬ್ದಜೋಡಣೆ ಹೊಂದಿ ರಸಭಾವಗಳನ್ನು ವ್ಯಂಜಿಸುವ ಸಾಮರ್ಥ್ಯಪಡೆಯುವುದು. ಎರಡು – ಅದು ರಾಗ, ತಾಳಗಳಿಗೆ ನಿಬದ್ಧವಾಗಿದ್ದು ವೇಷಗಳನ್ನು ವಿವಿಧ ಲಯಗತಿಗಳೊಂದಿಗೆ ಕುಣಿಸಲು ಸಮರ್ಥವಾಗುವುದು. ಮೂರು – ಪಾತ್ರಧಾರಿಗಳು ಆಶು ಸಂಭಾಷಣೆಯನ್ನು ಹೊಸೆಯುವಲ್ಲಿ ಪ್ರೇರಣೆ ನೀಡುವಂಥ ಸಾಮಗ್ರಿಯನ್ನು ಸಾಕಷ್ಟು ಪ್ರಮಾಣದಲ್ಲಿ ಪದದ ಕಿರಿದು ಚೌಕಟ್ಟಿನೊಳಗೆ ತುಂಬಿಸುವುದು. ಈ ಮೂರನ್ನು ಒಂದಕ್ಕಿಂತ ಒಂದು ಹೆಚ್ಚೆನ್ನುವಂತೆ ತುಂಬಿಕೊಂಡು ಪರಿಪೂರ್ಣತೆಯ ಮಟ್ಟಕ್ಕೆ ಏರಿದವುಗಳು ಪಾರ್ತಿಸುಬ್ಬನ ರಾಮಾಯಣದ ಕೃತಿಗಳು. ಅವನ ಪದಗಳು ತಿಳಿನೀರಿನ ತಳದಂತೆ, ಅರ್ಥ ಆಳವಾದುದಾರೂ, ನಮಗೆ ಎಟಕುವಷ್ಟು ಹತ್ತಿರವಾಗಿ ಕಾಣಿಸಿಕೊಳ್ಳುತ್ತದೆ.

ಜನಸಾಮಾನ್ಯರ ನಿತ್ಯಜೀವನದಲ್ಲಿ ಬರುವ ನುಡಿಕಟ್ಟುಗಳು, ಗಾದೆ ಮಾತುಗಳನ್ನು ಹೆಚ್ಚಾಗಿ ತುಂಬಿಕೊಂಡು ಸುಬ್ಬನು ತನ್ನ ನಿರೂಪಣೆಯನ್ನು ಪುಷ್ಟಿಗೊಳಿಸುತ್ತಾನೆ. ನಗೆಗೇಡು ಮಾಡಿದಿರಲ್ಲ, ಹೊತ್ತದ್ದು ಮೀಸೆಯೇ? ಹೊತ್ತದ್ದು ಮೊಲೆಯೆ? ಉಟ್ಟದ್ದು ಸೀರೆಯೆ?, ಏನು ಹೊಡೆಯಿತು ಮಾರಿ ?, ಪೋಗುವೆ ದಮ್ಮಯ್ಯ, ಅಡಿಗೆ ಊಟಗಳೆಂಬ ಗೊಡವೆಯು ನಮಗಿಲ್ಲ, ಕೆಟ್ಟ ಮೇಲೆ ಬುದ್ಧಿ, ಗಂಟು ಕಟ್ಟಿಕೊ ಸೆರಗಿನಲಿ, ಹೆಣ್ಣು ಜನ್ಮವೆ ಸಾಕು, ರಕ್ತಮದದಿಂದ ಕೊಡದಿಪ್ಪೆಯಾ ? ಗಂಡಸುತನ ನೋಡಿದೆ, ಇವೆಲ್ಲ ಜನಸಾಮಾನ್ಯರ ನಿತ್ಯ ಬಳಕೆಯಲ್ಲಿ ಕಿವಿಗೆ ಬೀಳುವ ನುಡಿಕಟ್ಟುಗಳಲ್ಲವೆ? ಇಂಥವು ಸುಬ್ಬನ ಪದದ ಚೌಕಟ್ಟಿನೊಳಗೆ ಕುಳಿತಾಗ ವಿಶೇಷ ಅರ್ಥಪ್ರಕಾಶವನ್ನು ಪಡೆಯುತ್ತವೆ.

ಯಕ್ಷಗಾನ ಪ್ರಸಂಗಗಳ ರಸನಿರೂಪಣೆಯಲ್ಲಿ ಏಕತಾನತೆ ಇರದು. ವೀರ, ಅದ್ಭುತ, ಕರುಣ, ಶಾಂತ ಇತ್ಯಾದಿಗಳಲ್ಲಿ ಒಂದು ಸಮತೋಲನದ ದಾರಿ ಪ್ರಸಂಗ ರಚನೆಯಲ್ಲಿ ಅಥವಾ ಕಥೆ-ಸನ್ನಿವೇಶಗಳ ಸಂಯೋಜನೆಯಲ್ಲಿ ಕಾಣಿಸುತ್ತದೆ. ನಳಚರಿತ್ರೆಯೊಂದನ್ನು ಬಿಟ್ಟರೆ ಲಕ್ಷ್ಮಣಾನ್ವಿತವಾದ ಶೃಂಗಾರರಸ ಯಕ್ಷಗಾನ ಪ್ರಸಂಗಗಳಲ್ಲಿ ಕಾಣಲಾರೆವು. ಆದರೆ ಶೃಂಗಾರ ರಸಾಭಾಸ ಮಾತ್ರ ವಿಪುಲವಾಗಿ ಪ್ರಸಂಗ ಸಾಹಿತ್ಯದಲ್ಲಿ ಕಂಡು ಬರುತ್ತದೆ. ಧರ್ಮನೀತಿಗಳನ್ನು ಬಿಡದೆ ಮಾಡುವ ಪುರುಷಪ್ರಯತ್ನಕ್ಕೆ ದೈವಸಹಾಯ ಇರುತ್ತದೆಂದು ಬಿಂಬಿಸುವುದು ಹೆಚ್ಚಿನ ಪ್ರಸಂಗಗಳ ಉದ್ದೇಶ. ವೀರಭಕ್ತಿಗೆ ಮನ್ನಣೆ ಇದ್ದ ಯುಗದ ರಚನೆಗಳು ಇವಾಗಿವೆ. ಮಡಿದೇ ಮೋಕ್ಷ ಎಂಬ ಕಲ್ಪನೆಯನ್ನು ಹೆಚ್ಚಾಗಿ ಈ ರಚನೆಗಳು ಬೆಟ್ಟು ಮಾಡುತ್ತವೆ. ಇವೆಲ್ಲ ಆ ಯುಗದ ನಂಬಿಕೆಯ ಮಾತು. ಈ ನೆಲಗಟ್ಟಿನ ಮೇಲೆಯೆ ಅನಂತರದ ಕವಿಗಳೂ ಪ್ರಸಂಗಗಳನ್ನು ರಚಿಸಿರುವುದು. ಭಾರತೀಯ ಪುರಾಣಗಳ ಕಥಾವಾಹಿನಿಯಲ್ಲಿ ಒಳಗೊಂಡಿರುವ ಆಶಯವನ್ನೆ ಯಕ್ಷಗಾನದ ಕವಿಗಳೂ ಸ್ವೀಕರಿಸಿರುವುದು. ಆದರೂ ಸಾರ್ವಕಾಲಿಕ ನೆಲೆ ಬೆಲೆಯ ಆಶಯ ರೂಪಣೆಯ ಸಾಧ್ಯತೆ ಈ ಪ್ರಸಂಗರಚನೆಗಳಲ್ಲಿ ಧಾರಾಳ ಇದೆ.

ಬಲಿಪ ನಾರಾಯಣ ಭಾಗವತರ ಕೃತಿಗಳು

ಕವಿ, ಕಾವ್ಯವಿಚಾರ : ಕಾಸರಗೋಡು ತಾಲೂಕಿನ ಪಡ್ರೆ ಗ್ರಾಮದಲ್ಲಿ ಕರ‍್ಹಾಡ ಬ್ರಾಹ್ಮಣ ಕುಲದಲ್ಲಿ ೧೮೮೯ರ ವಿರೋಧಿ ಸಂವತ್ಸರದಲ್ಲಿ ಜನಿಸಿದ ಬಲಿಪನಾರಾಯಣ ಭಾಗವತರು ಆಧುನಿಕ ಶಾಲಾ ವಿದ್ಯಾಭ್ಯಾಸವಿಲ್ಲದೆಯೂ ಕನ್ನಡ ಭಾಷಾ ಸಾಹಿತ್ಯದಲ್ಲಿ, ಛಂದಸ್ಸಿನಲ್ಲಿ ಮತ್ತು ಸಂಗೀತದಲ್ಲಿ ಅಪಾರ ವಿದ್ವತ್ತನ್ನು ಗಳಿಸಿಕೊಂಡ, ಅತ್ಯಂತ ಪ್ರಭಾವಿ ಭಾಗವತರಾಗಿ ಇಪ್ಪತ್ತನೆ ಶತಮಾನದ ಪೂರ್ವಾರ್ಧದಲ್ಲಿ ಯಕ್ಷಗಾನ ರಂಗವನ್ನು ಆಳಿದವರು. ಪಾಟಾಳಿ ಶಂಕರಭಾಗವತರು (ಬಣ್ಣದ ಗಾಂಧಿ ಮಾಲಿಂಗ ಅವರ ಅಜ್ಜ) ಮತ್ತು ಕೂಡ್ಲು ಸುಬ್ರಾಯ ಶ್ಯಾನುಭಾಗ ಭಾಗವತರಿಂದ ಕ್ರಮವತ್ತಾಗಿ ಯಕ್ಷಗಾನ ಸಂಗೀತವನ್ನು ಅಭ್ಯಾಸ ಮಾಡಿದ ಬಲಿಪ ಭಾಗವತರು ೧೯೬೬ (ನವೆಂಬರ್) ರಲ್ಲಿ ನಿಧನರಾಗುವವರೆಗೆ ತೆಂಕು ತಿಟ್ಟಿನ ಯಕ್ಷಗಾನ ಹಾಡುಗಾರಿಕೆಗೆ ಮಾದರಿಯಾಗಿದ್ದವರು. ಅವರು ಯಕ್ಷಗಾನದ ಪರಿಪೂರ್ಣ ಕಲಾವಿದರಾಗಿದ್ದರು. ಅಂದರೆ ಪ್ರಸಂಗ – ಹಾಡುಗಾರಿಕೆಗಳ ಮೇಲೆ ಮಾತ್ರವಲ್ಲ ಮದ್ದಳೆ ವಾದನ, ಚೆಂಡೆವಾದನ, ಹೆಜ್ಜೆಗಾರಿಕೆ ಮತ್ತು ಸಮಸ್ತ ರಂಗ ಪರಂಪರೆಗಳ ಬಗೆಗೆ ಅಧಿಕೃತವಾಗಿ ಹೇಳಬಲ್ಲವರಾಗಿದ್ದರು. ಅವರಿದ್ದ ಆಟದಲ್ಲಾಗಲಿ, ಕೂಟದಲ್ಲಾಗಲಿ ಕ್ರಮಗೇಡು ಉಂಟಾಗಲಾರದೆಂಬ ಛಾತಿ ಅವರದಾಗಿತ್ತು. ಅವರು ಯಕ್ಷಗಾನ ರಂಗದ ಮಟ್ಟಿಗೆ ಬಲಿಪ (ತುಳುವಿನಲ್ಲಿ ಹುಲಿ) ರೇ ಆಗಿದ್ದರು. ಅವರು ಆಶುಕವಿಯಾಗಿದ್ದರು. ಸೂಕ್ಷ್ಮಗ್ರಾಹಿ ವೇಷಧಾರಿಗೆ ಹೆಚ್ಚಿನ ಅಭಿನಯದ ಅವಕಾಶ ಮಾಡಿಕೊಡಲು ಅಲ್ಲೆ ಸುಂದರವಾದ ಪದವನ್ನು ಹಾಡುತ್ತಲೇ ರಚಿಸಿಕೊಡುತ್ತಿದ್ದರು. ಹಾಡುಗಾರಿಕೆಯಲ್ಲಿ ಬಹುವಾದ ಪ್ರಯೋಗಶೀಲತೆಯನ್ನು ಮೆರೆದ ಪ್ರಸಂಗಕರ್ತ ಅವರು.

ಅವರು ಇಪ್ಪತ್ತು ಪ್ರಸಂಗಗಳನ್ನು ಬರೆದಿದ್ದಾರೆ. ಅವುಗಳಲ್ಲಿ ರಾಮಾಯಣಕ್ಕೆ ಸಂಬಂಧಿಸಿದ ಎರಡು ಪ್ರಸಂಗಗಳನ್ನು – ಅಹಲ್ಯಾ ಶಾಪ ಮತ್ತು ವಾನರಾಭ್ಯುದಯ – ಇಲ್ಲಿ ಜೋಡಿಸಿದೆ. ಅವರ ಉಳಿದ ಪ್ರಸಂಗಗಳೆಂದರೆ – ಬ್ರಹ್ಮಕಪಾಲ, ಪ್ರಹ್ಲಾದ ಚರಿತ್ರೆ, ಶಶಿಪ್ರಭಾ ಪರಿಣಯ, ದೇವೀ ಮಹಾತ್ಮೆ, ಶಕುಂತಲಾ ಪರಿಣಯ, ಪದ್ಮಾವತೀ ಕಲ್ಯಾಣ, ಕಚದೇವಯಾನಿ, ಚಂದ್ರಹಾಸ, ಗದಾಪರ್ವ, ಸಮುದ್ರ ಮಥನ, ಜಲಂಧರ ಕಾಳಗ, ರುಕ್ಮಿಣೀ ಸ್ವಯಂವರ, ನರಕಾಸುರವಧೆ, ಗರುಡಗರ್ವಭಂಗ, ಕೃಷ್ಣಾರ್ಜುನಕಾಳಗ, ಉಷಾ ಪರಿಣಯ, ವೀರವರ್ಮಕಾಳಗ, ಸಿಂಹಧ್ವಜಕಾಳಗ.

ಬಲಿಪ ಭಾಗವತರ ಕೃತಿಗಳ ಕುರಿತು ಶ್ರೀ ಮಂಜೇಶ್ವರ ಗೋವಿಂದ ಪೈಯವರು ಹೇಳಿದ ಮಾತು ಇದು- ಶ್ರೀ ಬಲಿಪ ನಾಯಾಯಣ ಭಾಗವತರೆಂದರೆ ಕಳೆದ ಎಷ್ಟೋ ವರ್ಷಗಳಿಂದ ತಮ್ಮ ಜಾಗಟೆಯ ಬಾಜನೆಗೆ ಎಷ್ಟೋ ಯಕ್ಷಗಾನ ಪ್ರಸಂಗಗಳನ್ನು ಹಾಡಿ ಆಡಿಸಿರುವ ವಯೋವೃದ್ಧರು. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಯಕ್ಷಗಾನ ಕಲೆಯಲ್ಲಿ ಅವರೆಂದರೆ ಎತ್ತಿದ ಕೈ. ಈ ಜಿಲ್ಲೆಯಲ್ಲಿ ಅವರನ್ನು ಕಂಡಿಲ್ಲದ, ಕೇಳಿಲ್ಲದ ಯಕ್ಷಗಾನ ಪ್ರೇಮಿಗಳು ಇರುವರಾದರೆ ತೀರ ಕಡಿಮೆ. ಅವರ ಹೆಸರನ್ನು ಅರಿಯದವರೆಂದರೆ ಪ್ರಾಯಶಃ ನಾಸ್ತಿ ಎನ್ನಬಹುದು. ಹೀಗಾಗಿ ಈ ಪ್ರಸಂಗಗಳು ಅಂಥವರೊಬ್ಬ ಯಕ್ಷಗಾನ ವಿಶಾರದರ ಕೃತಿಗಳೆಂಬುದರಿಂದ ಅವು ಉತ್ತಮವಾಗಿರಲೇಬೇಕು (ಯಕ್ಷಗಾನ ಕಲಾತಪಸ್ವಿ ಸಂಸ್ಮರಣ ಗ್ರಂಥ).

ಬಲಿಪರ ರಚನೆ ಯಕ್ಷಗಾನ ಮಾರ್ಗದಂತೆ ತಿಳಿನುಡಿಯೇ. ಅವರ ರಚನೆಗಳ ಸಂಗೀತಮೌಲ್ಯ ಮೇಲ್ಮಟ್ಟದ್ದು. ಲಯದ ನಾಟ್ಯಕ್ಕೆ ಅಡಿಗಡಿಗೆ ಅನುವು ನೀಡುವ ಪದಪ್ರಯೋಗ ಅವರದು. ಭಾಷಾಶೈಲಿಯಂತು ತುಂಬ ಪರಿಷ್ಕಾರಯುತವಾದದ್ದು.

ಗೇರೆಸೊಪ್ಪೆ ಶಾಂತಪ್ಪಯ್ಯನ ರಚನೆ

ಕವಿಕಾವ್ಯವಿಚಾರ : ಗೇರೆಸೊಪ್ಪೆ ಶಾಂತಪ್ಪಯ್ಯ ಉತ್ತರ ಕನ್ನಡ ಜಿಲ್ಲೆಯ ಗೇರೆಸೊಪ್ಪೆ ಮೂಲದ ಆದರೆ ಮಂಗಳೂರಿನಲ್ಲಿ ನೆಲೆಸಿದ್ದ ಸಾರಸ್ವತ ಬ್ರಾಹ್ಮಣ ಕುಲದ ಯಕ್ಷಗಾನ ಕವಿ. ಈತ ಮಂಗಳೂರಿನಲ್ಲಿ ಕ್ರಿ.ಶ. ೧೮೪೦ – ೭೦ರ ವೇಳೆಗೆ ನ್ಯಾಯಾಧೀಶನೂ ಆಗಿದ್ದ. ಮಂಗಳೂರನ್ನು ಇವನು ಕ್ಷೇಮಪುರ ಎಂದು ಗುರುತಿಸಿದ್ದಾನೆ. ಇವನ ಕೃತಿಗಳು ಪುತ್ರಕಾಮೇಷ್ಟಿ-ಸೀತಾಸ್ವಯಂವರ ಮತ್ತು ಕರ್ಣಪರ್ವ, ಪಾರ್ತಿಸುಬ್ಬನ ಪುತ್ರಕಾಮೇಷ್ಟಿಯ ಜನಪ್ರಿಯತೆಗೆ ಸಾಟಿಯಾಗಲು ಶಾಂತಪ್ಪಯ್ಯನ ಪುತ್ರಕಾಮೇಷ್ಟಿಗೆ ಸಾಧ್ಯವಾಗಲಿಲ್ಲ. ಹಾಗಾಗಿ ಇದರ ಮುದ್ರಿತ ಪ್ರತಿ ಕಣ್ಣಿಗೆ ಕಾಣಿಸಿದ್ದು ದುರ್ಲಭ. ಆದರೆ ಕರ್ಣಪರ್ವ ಮಾತ್ರ ವೀರ-ಕರುಣ ರಸಗಳ ಮನೋಜ್ಞ ನಿಧಿಯಾಗಿದೆ. ಇದರಲ್ಲಿ ಬರುವ ಶಲ್ಯ-ಕರ್ಣ ಉಪಾಲಂಭವಾಗಲಿ, ಶಿಬಿರದಲ್ಲಿ ಧರ್ಮರಾಜ – ಅರ್ಜುನ ವಿರಸವಾಗಲಿ, ದುಃಶಾಸನ ವಧೆಯ ಭಾಗವಾಗಲಿ, ಅಂತಿಮವಾಗಿ ಕರ್ಣಾರ್ಜುನ ಯುದ್ಧ ಭಾಗವಾಗಲಿ ಅತ್ಯಂತ ಚೇತೋಹಾರಿಯಾದ ರಂಗಾನುಭವ ನೀಡುವಂಥದ್ದೇ. ಇದಕ್ಕೆ ತೆಂಕುತಿಟ್ಟಿನ ಆಟದ ಪದ್ಧತಿಯಲ್ಲಿ ಅನೇಕ ವಿಶಿಷ್ಟ ಪ್ರಯೋಗಕ್ರಮಗಳಿವೆ. ಪರಿಕರಾಲಂಕಾರ ಸಮೃದ್ಧವಾಗಿ ಬಳಸಿದ ಕೃತಿಗಳು ಶಾಂತಪ್ಪಯ್ಯನದು.

ಸುಬ್ಬನ ಕೃತಿಯಲ್ಲಿ ಇಲ್ಲದ ಶಂಬರಾಸುರನ ಜತೆಗಿನ ದಶರಥನ ಯುದ್ಧದ ಪ್ರಕರಣ ಮತ್ತು ಕೈಕೇಯಿಗೆ ಎರಡು ವರಗಳನ್ನು ನೀಡಿ ನ್ಯಾಸವಾಗಿ ಇರಿಸುವ ಕಥೆ ಶಾಂತಪ್ಪಯ್ಯನ ಕೃತಿಯಲ್ಲಿದೆ.

ಸೀತೆಯ ವಿವಾಹದ ವೇಳೆ ಊಟ ಮಾಡಿ ಕೈ ತೊಳೆಯಲು ಬರುತ್ತಿದ್ದ ಬಡಕಲು ವೃದ್ಧ ಬ್ರಾಹ್ಮಣನ ಕಟಿಸೂತ್ರದಿಂದ ಕೌಪೀನವನ್ನು ಸೆಳೆದು, ನಗ್ನಗೊಳಿಸಿ ಮಂಥರೆ ನಗುವುದು, ಈ ಅವಮಾನವನ್ನು ರಾಮನಿಗೆ ತಿಳಿಸಿದಾಗ, ಆತ ಮಂಥರೆಯನ್ನು ಎಳೆತರಿಸಿ ಶಾಸ್ತಿಮಾಡುವುದು, ಅದಕ್ಕೆ ಪ್ರತೀಕಾರ ಮಾಡುವುದಾಗಿ ಮಂಥರೆ ಶಪಥ ತೊಡುವುದು ಇತ್ಯಾದಿ ಹೊಸತನ ಶಾಂತಪ್ಪಯ್ಯನ ಕೃತಿಯಲ್ಲಿದೆ. ಸೀತಾಸ್ವಯಂವರಕ್ಕೆ ಬರುವ ಬ್ರಾಹ್ಮಣರಲ್ಲಿ ಹಿಂದೂಸ್ತಾನಿ, ಮಹಾರಾಷ್ಟ್ರ, ದೇಶಸ್ಥ, ತುಳುವ, ಹೈಗ ಮತ್ತು ಕೊಂಕಣ ವಿಪ್ರರಿದ್ದು ಅವರೆಲ್ಲ ತಮ್ಮ ಮಾತೃಭಾಷೆಗಳಲ್ಲೆ ಮಾತನಾಡುವ ಕುತೂಹಲಭರಿತ ಪದಗಳು ಈ ಪ್ರಸಂಗದಲ್ಲಿವೆ.

ಸಾರಡ್ಕ ಶಂಭಟ್ಟರ ಕೃತಿ

ಕವಿಕಾವ್ಯವಿಚಾರ : ದಶರಥೋತ್ಪತ್ತಿ ; ಸುಮಿತ್ರಾ ಸ್ವಯಂವರದ ಕವಿ ಸಾರಡ್ಕದ ಶಂಭಟ್ಟರು ಎಂದು ತಿಳಿಯಲಾಗಿದೆ. ಅವರ ಕಾಲವನ್ನು ೧೮೬೩ರ ಆಚೆ ಈಚೆಯಾಗಿ ಗ್ರಹಿಸಲಾಗಿದೆ. ಛಂದಸ್ಸಿನಲ್ಲಿ ಅಪಾರ ಪ್ರಯೋಗವನ್ನು ಇವರೂ ಮಾಡಿದ್ದಾರೆ. ಉದಾಹರಣೆಗೆ : ಸುರುಟಿ ಏಕತಾಳದ ಪದ ಭಿನ್ನ ರೂಪ ಪಡೆದುದನ್ನು ಇಲ್ಲಿ ಗಮನಿಸಬಹುದು – ಸಿಕ್ಕಿದೆ ಭೂಪನೆ ನೀ | ಬಲು | ಫಕ್ಕನೆ ತನ್ನೊಡನೇ ಸೊಕ್ಕಿನೊಳ್ಳಿಯನ | ತಿಕ್ಕಿದೆನೆಂಬೊಂ | ದಕ್ಕರಕಿಂದಿಲಿ | ರಕ್ಕಸಮಾಯ್ತೈ || ಘನಹೋಯ್ತೈ| ದಣಿವಾಯ್ತೈ|| ಕೊನೆಯಲ್ಲಿರುವ ಎರಡು ಮುಡಿಗಳು ಶಂಭಟ್ಟರದೇ ಪ್ರಯೋಗ.

ಈ ಕೃತಿಯಲ್ಲಿರುವ ಕೌಸಲ್ಯೆಯ ವಿವಾಹ, ರಾವಣನಿಂದ ಕೌಸಲ್ಯೆಯ ಅಪಹರಣ, ಪೆಟ್ಟಿಗೆಯಲ್ಲಿ ಹಾಕಿ ತಿಮಿಂಗಿಲಕ್ಕೆ ಕೊಡುವುದು, ಬೆಸ್ತರಿಂದ ಹಿಡಿಯಲ್ಪಟ್ಟ ತಿಮಿಂಗಿಲದ ಬಾಯಲ್ಲಿದ್ದ ಪೆಟ್ಟಿಗೆಯಲ್ಲಿದ್ದ ಕೌಸಲ್ಯೆಯನ್ನು ವರುಣ ದಶರಥನಿಗೆ ಮರಳಿಸುವುದು, ಕೌಸಲ್ಯೆಯನ್ನು ದಶರಥನಿಗೀಯಬಾರದೆಂದು ಸೋದರಳಿಯನು ಮಾವನೊಂದಿಗೆ ಹೋರಾಡುವುದು. ಶಂಬರಾಸುರನಕಾಳಗ, ಅದರಲ್ಲಿ ರಥದ ಕೀಲುಜಾರಿದಾಗ ಕೈಕೇಯಿ ಕೈಯ ಬಳೆಯನ್ನು ಕೀಲಾಗಿ ಒತ್ತಿ, ಯುದ್ಧದಲ್ಲಿ ದಶರಥ ಗೆಲ್ಲುವ ಹಾಗೆ ಮಾಡುವುದು, ವರ ನೀಡಿಕೆ – ನ್ಯಾಸ ಇತ್ಯಾದಿ ಪ್ರಕರಣಗಳು ಯಕ್ಷಗಾನದ ಶಿಕ್ಷಾರ್ಥಿಗಳಿಗೆ ಉಪಕರಿಸುತ್ತವೆ. ಕತೆಯ ಹರಹನ್ನು ಹೇಳುವುದೇ ಈ ಕೃತಿಯ ಮುಖ್ಯ ಲಕ್ಷ್ಯ.

ಕಥಾ ಸಾರಾಂಶ

ಪಾರ್ತಿಸುಬ್ಬನ ಕೃತಿಗಳು

ಪುತ್ರಕಾಮೇಷ್ಟಿ – ಸೀತಾಕಲ್ಯಾಣ : ಅಯೋಧ್ಯೆಯನ್ನಾಳುತ್ತಿದ್ದ ಸೂರ್ಯವಂಶದ ಅರಸನಾದ ದಶರಥನಿಗೆ ಕೌಸಲ್ಯೆ, ಕೈಕೇಯಿ, ಸುಮಿತ್ರೆಯರೆಂಬ ಮೂವರು ರಾಣಿಯರು. ಬಹುಕಾಲದವರೆಗೆ ಪುತ್ರ ಸಂತತಿ ಇಲ್ಲದಾಗ ವಸಿಷ್ಠಮುನಿಯ ಉಪದೇಶದಂತೆ ಋಷ್ಯಶೃಂಗ ಮಹರ್ಷಿಯ ನೇತೃತ್ವದಲ್ಲಿ ಪುತ್ರಕಾಮೇಷ್ಟಿಯಾಗ ನಡೆಯುತ್ತದೆ. ವಿಧಾತನನ್ನು ಮುಂದಿಟ್ಟುಕೊಂಡು ಇಂದ್ರಾದಿ ದೇವತೆಗಳು ಕ್ಷೀರಸಾಗರಶಾಯಿಯಾದ ಮಹಾವಿಷ್ಣುವಿನ ಬಳಿಗೆ ಹೋಗಿ, ತಮಗೆ ಅತೀವ ಬಾಧೆಯನ್ನು ಕೊಡುತ್ತಿರುವ ರಾವಣಾದಿ ದುಷ್ಟರಾಕ್ಷಸರನ್ನು ಸಂಹರಿಸಿ ಅನುಗ್ರಹಿಸಬೇಕೆಂದು ಬಿನ್ನವಿಸಿಕೊಳ್ಳುತ್ತಾರೆ. ತಾನು ದಶರಥನ ಮಗನಾಗಿ ಜನಿಸಿ ರಾವಣಾದಿ ಖಳರನ್ನು ಸಂಹರಿಸುವುದಾಗಿ ಹೇಳಿ ಮಹಾವಿಷ್ಣು ದೇವತೆಗಳನ್ನು ಸಮಾಧಾನಪಡಿಸುತ್ತಾನೆ.

ಪುತ್ರಕಾಮೇಷ್ಟಿಯ ಯಜ್ಞಕುಂಡದಿಂದ ಉದಿಸಿಬಂದ ಯಜ್ಞೇಶ್ವರನು ದಶರಥನಿಗೆ ದೇವತೆಗಳು ಕೊಟ್ಟ ಪಾಯಸವನ್ನು ನೀಡುತ್ತಾನೆ. ಆ ಪಾಯಸವನ್ನು ಸ್ವೀಕರಿಸಿದ ರಾಣಿಯರು ಗರ್ಭವತಿಯರಾಗುತ್ತಾರೆ. ಕೌಸಲ್ಯೆಯಲ್ಲಿ ರಾಮನೂ, ಕೈಕೇಯಿಯಲ್ಲಿ ಭರತನೂ, ಸುಮಿತ್ರೆಯಲ್ಲಿ ಲಕ್ಷ್ಮಣ-ಶತ್ರುಘ್ನರೂ ಜನಿಸುತ್ತಾರೆ.

ನಾಲ್ವರೂ ಮಕ್ಕಳು ಗುರು ವಸಿಷ್ಠರಲ್ಲಿ ವಿದ್ಯಾಭ್ಯಾಸ ಗಳಿಸುತ್ತಾರೆ. ವಿಶ್ವಾಮಿತ್ರ ಮಹರ್ಷಿ ಯಾಗವೊಂದಕ್ಕೆ ಆಗುವ ರಾಕ್ಷಸರ ಉಪಟಳ ಪರಿಹಾರಕ್ಕಾಗಿ ರಾಮಲಕ್ಷ್ಮಣರನ್ನು ಕೊಟ್ಟುಕಳುಹಿಸಲು ಅಪೇಕ್ಷಿಸುತ್ತಾನೆ. ವಸಿಷ್ಠ ಮಹರ್ಷಿಯ ಮಾತಿನ ಮೇರೆಗೆ ದಶರಥ ರಾಮಲಕ್ಷ್ಮಣರನ್ನು ಕಳುಹಿ ಕೊಡುತ್ತಾನೆ. ಅವರಿಗೆ ವಿಶ್ವಾಮಿತ್ರರಿಂದ ಅಪೂರ್ವವಾದ ಅಸ್ತ್ರಗಳ ಲಾಭವಾಗುತ್ತದೆ.

ಯಾಗಕಂಟಕರಾದ ತಾಟಕೆ ಎಂಬ ರಾಕ್ಷಸಿ, ಆಕೆಯ ಪುತ್ರ ಸುಬಾಹು ಇವರು ರಾಮನ ಬಾಣದಿಂದ ಹತರಾಗುತ್ತಾರೆ. ತಾಟಕೆಯ ಇನ್ನೊಬ್ಬ ಮಗ ಮಾರೀಚ ದ್ವೀಪಾಂತರಕ್ಕೆ ತಳ್ಳಿ ಹೋಗುತ್ತಾನೆ. ವಿಶ್ವಾಮಿತ್ರನ ಯಾಗ ಸಾಂಗವಾಗಿ ನೆರವೇರುತ್ತದೆ, ಮಿಥಿಲೆಯಿಂದ ಜನಕರಾಜನ ದೂತ ಬಂದು ವಿಶ್ವಾಮಿತ್ರನನ್ನು ಕಂಡು ಮಿಥಿಲೆಗೆ ಬರಲು ಕರೆ ಕೊಡುತ್ತಾನೆ. ಗೌತಮ ಮುನಿಯ ಆಶ್ರಮದಲ್ಲಿ ರಾಮನ ಚರಣಸ್ಪರ್ಶವಾಗುತ್ತಲೆ ಕಲ್ಲಾಗಿ ಬಿದ್ದುಕೊಂಡಿದ್ದ ಅಹಲ್ಯೆ ಪೂರ್ವರೂಪಕ್ಕೆ ಮರಳುತ್ತಾಳೆ. ಗೌತಮ ಮಹರ್ಷಿ ರಾಮನನ್ನು ಸ್ತುತಿಸಿ ಅಹಲ್ಯೆಯನ್ನು ಸ್ವೀಕರಿಸುತ್ತಾನೆ.

ಮಿಥಿಲೆಗೆ ತಲುಪಿದಾಗ ಅಲ್ಲಿ ಸೀತಾಸ್ವಯಂವರ ನಡೆಯುತ್ತದೆ. ರಾವಣನ ಸಹಿತ ಎಲ್ಲ ವೀರರು ಶಿವಧನುಸ್ಸನ್ನು ಎತ್ತಲು ವಿಫಲರಾದಾಗ ರಾಮನು ಲೀಲಾಜಾಲವಾಗಿ ಬಿಲ್ಲನೆತ್ತಿ ಹೆದೆಯೇರಿಸಲು ಬಾಗಿಸಿದಾಗ ಅದು ಮುರಿದುಹೋಗುತ್ತದೆ, ಸೀತೆ ರಾಮನ ಕೊರಳಿಗೆ ವರಣಮಾಲಿಕೆಯನ್ನು ಹಾಕುತ್ತಾಳೆ. ದಶರಥ ಮಹಾರಾಜನನ್ನು ಮಿಥಿಲೆಗೆ ಕರೆಸುತ್ತಾರೆ. ರಾಮ-ಸೀತೆ, ಲಕ್ಷ್ಮಣ-ಊರ್ಮಿಳೆ, ಭರತ-ಮಾಂಡವಿ, ಶತ್ರುಘ್ನ-ಶ್ರುತಕೀರ್ತಿ ಇವರ ವಿವಾಹ ನಡೆಯುತ್ತದೆ. ಅಯೋಧ್ಯೆಗೆ ಎಲ್ಲರೂ ಮರಳುವಾಗ ಇದಿರಾದ ಪರಶುರಾಮನ ಗರ್ವಭಂಗ ಮಾಡಿ ರಾಮನು ಸರ್ವಮಾನ್ಯನಾಗುತ್ತಾನೆ.

ಪಟ್ಟಾಭಿಷೇಕ : ತಾನು ವೃದ್ಧನಾದೆನೆಂದು ಕಂಡುಕೊಂಡ ದಶರಥ ತನ್ನ ಉತ್ತರಾಧಿಕಾರಿಯಾಗಿ ರಾಮನಿಗೆ ಪಟ್ಟಾಭಿಷೇಕ ಮಾಡಲು ಹೊರಡುತ್ತಾನೆ. ಮಂತ್ರಿ, ಪುರೋಹಿತರೊಂದಿಗೆ ಸಮಾಲೋಚನೆ ಗೈದು ದಶರಥ ಸ್ವೀಕರಿಸಿದ ನಿರ್ಣಯವನ್ನು ಮಂಥರೆ ಕೈಕೆಗೆ ಹೇಳಿ, ಭರತನಿಗೆ ಪಟ್ಟಾಭಿಷೇಕವಾಗಬೇಕೆಂದೂ ಈ ಹಿಂದೆ ಕೇಳಲು ಉಳಿದಿರುವ ಎರಡು ವರಗಳ ಮೂಲಕ ಇದನ್ನು ಸಾಧಿಸಬೇಕೆಂದೂ ದುರ್ಬೋಧನೆ ಕೊಡುತ್ತಾಳೆ. ಈ ವೇಳೆಗೆ ಭರತ, ಶತ್ರುಘ್ನರು ಕೇಕಯ ರಾಜ್ಯದಲ್ಲಿ ಇರುತ್ತಾರೆ.

ಪಟ್ಟಾಭಿಷೇಕದ ಸಡಗರದ ನಡುವೆ ದಶರಥ ಭೂಪತಿ ತನ್ನನ್ನು ಕಾಣಬೇಕೆಂದು ಹೇಳಿ ಕಳುಹಿಸಿ ಕೈಕೇಯಿ ತನ್ನ ಬೇಡಿಕೆಯನ್ನು ಪತಿಯ ಮುಂದೆ ಇರಿಸುತ್ತಾಳೆ. ದಶರಥನ ವಿಲಾಪ, ಪ್ರಲಾಪ ಯಾವುದೂ ಕೈಕೆಯ ಮನಸ್ಸನ್ನು ಮೆತ್ತಗೆ ಮಾಡಲಿಲ್ಲ. ವಿಷಯವರಿತ ರಾಮನು ವಚನಪಾಲನೆಯ ಮಹತ್ತ್ವವನ್ನು ಎತ್ತಿಹಿಡಿದು, ದಶರಥನಿಗೆ ಧೈರ್ಯದ ಮಾತನ್ನು ಹೇಳಿ, ತಾನು ವನವಾಸಕ್ಕೆ ಹೊರಡಲು ಅಣಿಯಾಗುತ್ತಾನೆ. ತಾಯಿಗೆ ಸಮಾಧಾನ ಹೇಳಿ, ವನವಾಸದಲ್ಲಿ ತಾವೂ ಜತೆಗಿರುವುದಾಗಿ ಹಠಹಿಡಿದ ಸೀತೆ, ಲಕ್ಷ್ಮಣರನ್ನು ಒಡಗೊಂಡು ರಾಮನು ಗುಹನ ನೆರವಿನಿಂದ ಗಂಗಾನದಿಯನ್ನು ದಾಟಿ, ಭಾರದ್ವಾಜ ಮಹರ್ಷಿಯ ಉಪದೇಶದಂತೆ, ಚಿತ್ರಕೂಟದಲ್ಲಿ ನೆಲೆಯಾಗುತ್ತಾನೆ.

ಪುತ್ರನ ಅಗಲಿಕೆಯಿಂದ ಕಂಗೆಟ್ಟು ಶಕ್ತಿಗುಂದಿದ ದಶರಥ ಭರತನನ್ನು ಕರೆಸಲು ಹೇಳುತ್ತಾನೆ. ಆದರೆ ಭರತನು ತಲುಪುವುದರೊಳಗೆ ದಶರಥ ಕೊನೆಯುಸಿರನ್ನೆಳೆದಿರುತ್ತಾನೆ. ವಿಚಿತ್ರವಾಗಿ ತ್ವರೆಯಿಂದ ಕರೆಸಲ್ಪಟ್ಟ ಭರತ ಎಲ್ಲ ದುರ್ಘಟನೆಗಳ ವಿವರವನ್ನರಿತು, ಇದಕ್ಕೆಲ್ಲ ಕಾರಣಳಾದ ತನ್ನ ತಾಯಿಯ ಕೊರಳರಿಯಲು ಹೊರಡುತ್ತಾನೆ. ವಸಿಷ್ಠರ ಸಾಂತ್ವನದಲ್ಲಿ ಸಮಾಧಾನಗೊಂಡು, ರಾಮನನ್ನು ಅಯೋಧ್ಯೆಗೆ ಬರಮಾಡಿಕೊಳ್ಳುವ ಸಂಕಲ್ಪದೊಂದಿಗೆ ಭರತನೂ ಇತರ ಎಲ್ಲರೂ ಚಿತ್ರಕೂಟಕ್ಕೆ ಹೋಗುತ್ತಾರೆ.

ರಾಮನು ತಂದೆಯಿತ್ತಿರುವ ವಚನದ ಪಾಲನೆ ಎಲ್ಲಕ್ಕೂ ಮಿಗಿಲಾದುದೆಂದು ತಿಳಿಸಿ, ಭರತನ ಕೋರಿಕೆಯಂತೆ ಪಾದುಕೆಯನ್ನು ಕೊಟ್ಟು ಹದಿನಾಲ್ಕು ವರ್ಷಗಳ ಗಡುವು ತೀರಿದ ಮರುದಿವಸ ತಾನು ಅಯೋಧ್ಯೆಯಲ್ಲಿ ಇರುವುದಾಗಿ ಮಾತುಕೊಟ್ಟು, ಕಳುಹಿಸುತ್ತಾನೆ.

ಪಂಚವಟಿ : ಪದೇ ಪದೇ ಅಯೋಧ್ಯೆಯಿಂದ ಜನರು ಬಂದಾರೆಂದು ರಾಮನು ತನ್ನ ಬಿಡದಿಯನ್ನು ರಾಕ್ಷಸಪೀಡಿತವಾದ ದಂಡಕಾರಣ್ಯಕ್ಕೆ ಸ್ಥಳಾಂತರಿಸುತ್ತಾನೆ. ಅಲ್ಲಿನ ಋಷಿಗಳಿಗೆ ರಾಕ್ಷಸಬಾಧೆಯನ್ನು ನಿವಾರಿಸುವ ಭರವಸೆ ನೀಡುತ್ತಾನೆ.

ರಾವಣನ ಸಹೋದರಿ ಶೂರ್ಪಣಖೆ ರಾಮನಲ್ಲೂ, ಲಕ್ಷ್ಮಣನಲ್ಲೂ ಪ್ರಣಯಭಿಕ್ಷೆ ಯಾಚಿಸುತ್ತಾಳೆ. ರಾಮನ ಸೂಚನೆ ಮೇರೆಗೆ ಲಕ್ಷ್ಮಣ ಆಕೆಯ ಮೂಗು ಮೊಲೆಗಳನ್ನು ಕತ್ತರಿಸುತ್ತಾನೆ. ಕೆರಳಿದ ಜನಸ್ಥಾನನಿವಾಸಿಗಳಾದ ಖರ, ದೂಷಣ, ತ್ರಿಶಿರ ಮೊದಲಾದ ರಾಕ್ಷಸನಾಯಕರಿಂದ ಕೂಡಿದ ಅಸುರ ಸೇನೆಯನ್ನು ರಾಮ ಸಂಹರಿಸುತ್ತಾನೆ.

ಸೀತಾಪಹಾರ : ಅವಮಾನಿತಳಾದ ಶೂರ್ಪಣಖೆ ಲಂಕೆಗೆ ಬಂದು ಅಣ್ಣನಾದ ರಾವಣನಲ್ಲಿ ತನಗಾದ ಪರಿಭವವನ್ನು ಹೇಳಿಕೊಳ್ಳುತ್ತಾಳೆ. ರಾಮ, ಲಕ್ಷ್ಮಣರಿಂದ ಜನಸ್ಥಾನದ ರಾಕ್ಷಸವೀರರು ಹತರಾದರೆಂದೂ, ರಾಮನ ಪತ್ನಿ ಸೀತೆ ಅತ್ಯಂತ ಸುಂದರಿಯಾಗಿದ್ದು ಆಕೆಯನ್ನು ಕದ್ದು ತಂದು ನಿನ್ನ ಸತಿಯನ್ನಾಗಿ ಮಾಡಿಕೊಳ್ಳಬೇಕೆಂದೂ ಹೇಳುತ್ತಾಳೆ.

ಸೀತೆಯ ಸೌಂದರ್ಯದ ಕುರಿತಾಗಿ ಶೂರ್ಪಣಖೆಯ ವರ್ಣನೆಯಿಂದಲೂ, ರಾಮಲಕ್ಷ್ಮಣರಿಂದ ಅಸುರಕುಲಕ್ಕಾದ ಪರಿಭವದಿಂದಲೂ, ಮನಸ್ಸು ಕಲುಷಿತಗೊಂಡ ರಾವಣ, ಮಂಡೋದರಿಯ ಹಿತವಚನವನ್ನು ತಳ್ಳಿ, ಮಾರೀಚನಲ್ಲಿಗೆ ಬಂದು, ಬೆದರಿಸಿ ಸೀತೆಯ ಮುಂದೆ ಕಾಂಚನಮೃಗವಾಗಿ ಕುಣಿಯಲು ಕಳುಹಿಸುತ್ತಾನೆ. ಸೀತೆಯ ಆಗ್ರಹಕ್ಕಾಗಿ ರಾಮ ಕಾಂಚನಮೃಗದ ಬೆಂಬತ್ತಿ ಬಾಣ ಪ್ರಯೋಗಿಸಿದಾಗ, ಹಾ ಸೀತೆ, ಹಾ ಲಕ್ಷ್ಮಣಾ ಎಂಬ ಕೂಗಿನೊಂದಿಗೆ ಮಾರೀಚ ಪ್ರಾಣಬಿಡುತ್ತಾನೆ. ಆ ಕೂಗಿನಿಂದ ಭಯಪಟ್ಟ ಸೀತೆ ಲಕ್ಷ್ಮಣನನ್ನು ನಿಂದಿಸಿ ರಾಮನನ್ನು ಹುಡುಕಲು ಕಳುಹಿಸುತ್ತಾಳೆ. ಆ ವೇಳೆಗೆ ಕಾವಿಬಟ್ಟೆಯನ್ನುಟ್ಟು ಸಂನ್ಯಾಸಿ ವೇಷ ಧರಿಸಿದ ರಾವಣ, ಸೀತೆಗೆ ಭರವಸೆ ಬರುವ ಮಾತುಗಳನ್ನಾಡಿ, ಭಿಕ್ಷೆ ನೀಡಲು ಲಕ್ಷ್ಮಣ ರೇಖೆ ದಾಟಿ ಹೊರಬರುವಂತೆ ಮಾಡುತ್ತಾನೆ. ಹೊರಬರುತ್ತಲೆ ಆಕೆಯನ್ನು ಹಿಡಿದು ರಥಕ್ಕೇರಿಸಿಕೊಂಡು ಆಕಾಶಮಾರ್ಗದಲ್ಲಿ ಹೋಗುವಾಗ ಪಕ್ಷಿರಾಜ ಜಟಾಯು ತಡೆಯುತ್ತಾನೆ. ಮೋಸದಿಂದ ಜಟಾಯುವಿನ ರೆಕ್ಕೆ ಕಡಿದು ಹಾಕಿ ರಾವಣ ಸೀತೆಯೊಂದಿಗೆ ಲಂಕೆಗೆ ತಲುಪುತ್ತಾನೆ.

ಲಕ್ಷ್ಮಣನಿಂದ ವಿಷಯ ತಿಳಿದ ರಾಮ ಪರ್ಣಶಾಲೆಗೆ ಮರಳಿ ಸೀತೆ ಅಪಹೃತಳಾದುದನ್ನು ಮನವರಿತು ಆಕೆಯನ್ನು ಹುಡುಕುತ್ತ ಬರುವಾಗ ಜಟಾಯುವಿನಿಂದ ರಾವಣನ ಕೈವಾಡ ತಿಳಿಯುತ್ತದೆ. ಹುಡುಕುತ್ತ ಮುಂಬರಿದಾಗ ಶೂರ್ಪಣಖೆಯ ಮಗಳಾದ ಅಯೋಮುಖಿ ಎಂಬ ರಕ್ಕಸಿ ಇವರನ್ನು ತಿನ್ನಲು ಯತ್ನಿಸಿದಾಗ ಲಕ್ಷ್ಮಣನು ಅವಳ ಮೂಗು ಮೊಲೆಗಳನ್ನು ಕತ್ತರಿಸುತ್ತಾನೆ. ಕಬಂಧ ಮೋಕ್ಷ, ಶಬರಿ ಸಮಾಗಮದ ಬಳಿಕ ರಾಮ ಲಕ್ಷ್ಮಣರು ಪಂಪಾಸರೋವರದ ಬಳಿಗೆ ಬರುತ್ತಾರೆ.

ವಾಲಿ ಸಂಹಾರ : ರಾಮ-ಲಕ್ಷ್ಮಣರ ಬಗೆಗೆ ಕುತೂಹಲಿಯಾದ ಸುಗ್ರೀವ ಹನುಮಂತನನ್ನು ಮಾರುವೇಷದಲ್ಲಿ ಅವರೆಡೆಗೆ ಕಳುಹಿಸುತ್ತಾನೆ. ರಾಮ ದರ್ಶನದಿಂದ ತನ್ನಲ್ಲಿ ಸುಪ್ತವಾಗಿದ್ದ ಮಾಹಾತ್ಮ್ಯವನ್ನು ಮರಳಿ ಪಡೆದುಕೊಂಡ ಹನುಮಂತ ಅವರನ್ನು ಸುಗ್ರೀವನಲ್ಲಿಗೆ ಕರೆತಂದು ಸಖ್ಯಮಾಡಿಸುತ್ತಾನೆ.

ಸುಗ್ರೀವ ರಾಮನಲ್ಲಿ ತನಗೆ ಅಣ್ಣನಾದ ವಾಲಿಯಿಂದಾದ ಅನ್ಯಾಯವನ್ನು ಬಿನ್ನವಿಸುತ್ತಾನೆ. ವಾಲಿಯನ್ನು ಸಂಹರಿಸಿ ಅವನು ಬಲಾತ್ಕಾರವಾಗಿ ಹಿಡಿದಿಟ್ಟುಕೊಂಡಿದ್ದ ಸುಗ್ರೀವನ ಪತ್ನಿ ರುಮೆಯನ್ನು ದೊರಕಿಸಿಕೊಡುವುದಾಗಿ ರಾಮ ಭರವಸೆ ಕೊಡುತ್ತಾನೆ.

ವಾಲಿ – ಸುಗ್ರೀವರ ನಡುವೆ ಎರಡು ಯುದ್ಧಗಳಾಗುತ್ತವೆ. ಮೊದಲ ಯುದ್ಧದಲ್ಲಿ ರೂಪ ಸಾಮ್ಯದಿಂದ ವಾಲಿಯಾರು, ಸುಗ್ರೀವ ಯಾರೆಂದು ಗುರುತಿಸಲಾರದೆ ರಾಮ ಬಾಣವೆಸೆಯಲು ಹಿಂಜರಿಯುತ್ತಾನೆ. ಗುರುತಿನ ಮಾಲಿಕೆ ಧರಿಸಿ ಎರಡನೆ ಯುದ್ಧಕ್ಕೆ ಸುಗ್ರೀವ ಹೋದಾಗ, ರಾಮ ಬಾಣಬಿಟ್ಟು ವಾಲಿಯನ್ನು ಕೆಡಹುತ್ತಾನೆ. ಮೊದಲು ಬಹಳವಾಗಿ ನಿಂದಿಸಿದರೂ ಅನಂತರ ರಾಮನ ಮಾತುಗಳನ್ನು ಕೇಳಿ, ಆತನ ನಿಜವೇನೆಂದು ಮನವರಿತುಕೊಂಡು ಮೋಕ್ಷವನ್ನು ಕರುಣಿಸಲು ಪ್ರಾರ್ಥಿಸುತ್ತಾನೆ. ಈ ಪ್ರಸಂಗ ವಿಲಾಪದೊಂದಿಗೆ ಕರುಣರಸದಲ್ಲಿ ಕೊನೆಗೊಳ್ಳುವುದಾದರೂ ರಾಮನ ಅಭಯ ಸನ್ನಿವೇಶಕ್ಕೆ ಶಾಂತಿಯ ಸ್ಪರ್ಶವನ್ನು ಮಾಡಿಕೊಡುತ್ತದೆ.

ಉಂಗುರಸಂಧಿ : ಕಿಷ್ಕಿಂಧೆಯ ಪ್ರಸ್ರವಣ ಪರ್ವತದಲ್ಲಿ ಮಳೆಗಾಲವನ್ನು ಕಳೆದ ರಾಮ ಲಕ್ಷ್ಮಣರು ಸುಗ್ರೀವನ ಕಪಿಪಾಳ್ಯವನ್ನು ಸೀತಾನ್ವೇಷಣೆಗಾಗಿ ಪಡೆಯುತ್ತಾರೆ. ಕಪಿಸೇನೆ ನಾಲ್ಕು ವಿಭಾಗವಾಗಿ ನಾಲ್ಕು ದಿಕ್ಕುಗಳಿಗೆ ಹೋಗುತ್ತದೆ. ದಕ್ಷಿಣಕ್ಕೆ ಹೊರಟ ದಂಡಿನಲ್ಲಿರುವ ಹನುಮಂತನಿಗೆ ರಾಮ ಕೆಲವು ರಹಸ್ಯಗಳನ್ನು ಹೇಳಿ, ತನ್ನ ಮುದ್ರೆಯುಂಗುರವನ್ನು ಕೊಡುತ್ತಾನೆ.

ಜಾಂಬವ, ಅಂಗದ ಮೊದಲಾದವರಿದ್ದ ಹನುಮಂತನ ಕಪಿಪಾಳ್ಯ ಸ್ವಯಂಪ್ರಭೆಯ ಗರ್ವಭಂಗ ಮಾಡಿ ದಕ್ಷಿಣ ಸಮುದ್ರ ತೀರದಲ್ಲಿ ಸಮುದ್ರಲಂಘನ ಮಾಡಬೇಕೆಂದು ತೀರ್ಮಾನಿಸುತ್ತದೆ. ಸಂಪಾತಿ ತೋರಿದ ದಿಕ್ಕನ್ನು ಗುರಿಮಾಡಿ ಸಮುದ್ರ ಲಂಘಿಸಲು ಜಾಂಬವಂತ ಹನುಮಂತನನ್ನು ಪ್ರೇರಿಸುತ್ತಾನೆ. ಹನುಮಂತ ಹಾರಿದ ವೇಗ ಹೆಚ್ಚಿ ಲಂಕೆಯನ್ನು ಮೀರಿ ಏಳುನೂರು ಯೋಜನ ದೂರವಿರುವ ತೃಣಬಿಂದು ಮಹರ್ಷಿಯ ಆಶ್ರಮಕ್ಕೆ ತಲುಪುತ್ತಾನೆ. ಮಹರ್ಷಿಯೊಡ್ಡಿದ ಪರೀಕ್ಷೆ ಉತ್ತರಿಸಿ, ಆತನು ತೋರಿದ ದಿಕ್ಕಿನೆಡೆಗೆ ಹಾರಿ, ಹನುಮಂತ ಲಂಕಾದುರ್ಗವನ್ನು ಸೇರುತ್ತಾನೆ.

ದುರ್ಗದ ರಕ್ಷಣೆಯಲ್ಲಿದ್ದ ಲಂಕಿಣಿಯನ್ನು ಭಂಗಿಸಿ, ಲಂಕಾನಗರವನ್ನು ಸೂಕ್ಷ್ಮರೂಪದಿಂದ ಸಂಚರಿಸಿ ನೋಡಿದ ಹನುಮಂತನಿಗೆ ಅರಮನೆಯಲ್ಲಿ ರಾವಣ ಮಲಗಿರುವುದು ಕಾಣಿಸುತ್ತದೆ. ಅವನೊಂದಿಗಿರುವ ಮಂಡೋದರಿಯನ್ನು ಸೀತೆಯೆಂದು ಭ್ರಮಿಸಿದರೂ, ಪರಾಂಬರಿಸಿ ಸೀತೆಯಲ್ಲವೆಂದು ಖಚಿತಪಡಿಸಿಕೊಂಡು, ಕೋಟೆಯ ಹೊರಕ್ಕೆ ಬಂದು, ಅಶೋಕವನದಲ್ಲಿ ಶಿಂಶುಪಾವೃಕ್ಷದಡಿಯಲ್ಲಿ ಸೀತೆಯಿರುವುದನ್ನು ಕಾಣುತ್ತಾನೆ.

ಸ್ವಲ್ಪ ಹೊತ್ತಿನಲ್ಲಿ ರಾವಣನು ಅಸುರಸ್ತ್ರೀ ಗಡಣದೊಂದಿಗೆ ಅಶೋಕವನಕ್ಕೆ ಬಂದು ಸೀತೆಯನ್ನು ತನ್ನ ರಾಣಿಯಾಗಲು ಒತ್ತಾಯಿಸುತ್ತಾನೆ. ಸೀತೆಯ ನಿಂದನೆ, ಭರ್ತ್ಸನೆಗೆ ಸಿಟ್ಟಾಗಿ ಆಕೆಯನ್ನು ಕಡಿಯಲು ಮುಂದಾದಾಗ ಮಂಡೋದರಿ ತಡೆದು ಅರಮನೆಗೆ ಕರೆದೊಯ್ಯುತ್ತಾಳೆ. ಇದೆಲ್ಲವನ್ನು ಕಂಡು ಸೀತೆಯ ಪರಿಶುದ್ಧತೆಯನ್ನು ಮನವರಿತ ಹನುಮಂತ ಮರದಿಂದ ಇಳಿದು ತನ್ನ ಪರಿಚಯ ಹೇಳಿಕೊಂಡು, ಇದೂ ರಾಕ್ಷಸರ ಕಪಟ ವಿಲಾಸವೆಂಬ ಸೀತೆಯ ಸಂದೇಹವು ದೂರಗೊಳ್ಳಲು, ಹಲವು ರಹಸ್ಯಗಳನ್ನು ತಿಳಿಸಿದ್ದಲ್ಲದೆ ರಾಮನ ಮುದ್ರೆಯುಂಗುರವನ್ನು ಹಸ್ತಾಂತರಿಸುತ್ತಾನೆ. ಇವನು ರಾಮದೂತನೆಂಬುದು ಖಚಿತವಾದೊಡನೆ ಅಂತರಾಳದಿಂದ ರಾಮಲಕ್ಷ್ಮಣರ ಬಗೆಗೆ ಕೇಳತೊಡಗಿದ ಸೀತೆ, ಅವರು ತನ್ನನ್ನು ಬಿಡಿಸುವರೇ ಎಂದು ಕಾತರದಿಂದ ಕೇಳುತ್ತಾಳೆ. ತನ್ನ ಕುರುಹನ್ನು ರಾಮನಿಗೆ ತೋರಿಸುವುದಕ್ಕಾಗಿ ಚೂಡಾಮಣಿಯನ್ನು ಹನುಮಂತನ ಕೈಯಲ್ಲಿಡುತ್ತಾಳೆ. ಇನ್ನು ಎಂಟೇ ದಿನಗಳಲ್ಲಿ ರಾಮನ ದಂಡು ಲಂಕೆಯಲ್ಲಿರುತ್ತದೆಂದೂ, ರಾವಣನ ಸಂಹಾರವಾಗಿ, ಸೀತೆಯ ವಿಮೋಚನೆಯಾಗುತ್ತದೆಂದೂ ಹನುಮಂತ ಭರವಸೆ ಕೊಡುತ್ತಾನೆ.

ಅನಂತರ ಹನುಮಂತ ರಾವಣನ ಉಪವನವನ್ನು ಧ್ವಂಸ ಮಾಡಿ, ಇದಿರಿಸಿದ ರಾಕ್ಷಸ ವೀರರನ್ನು ಮರ್ದಿಸಿ, ರಾವಣನನ್ನು ಕಂಡು ಜರೆಯುವ ತವಕದಿಂದ, ಇಂದ್ರಜಿತುವಿನ ಎದುರು ಸೋತಂತೆ ನಟಿಸಿ, ಸೆರೆಸಿಕ್ಕ. ರಾವಣನ ಆಸ್ಥಾನದಲ್ಲಿ ಆತನನ್ನು ಜರೆದು, ತನ್ನ ಬಾಲವನ್ನು ಸುಡಲು ಮಾಡಿದ ಯತ್ನವನ್ನು ಅನುಕೂಲವನ್ನಾಗಿ ಮಾಡಿಕೊಂಡು ಲಂಕಾಪಟ್ಟಣವನ್ನು ಉರಿಸಿ, ಕಡಲಲ್ಲಿ ಬಾಲದ ಬಟ್ಟೆಯ ಬೆಂಕಿಯನ್ನಾರಿಸಿ ಒಂದೇ ನೆಗೆತದಲ್ಲಿ ಉತ್ತರದಲ್ಲಿರುವ ರಾಮ, ಲಕ್ಷ್ಮಣರಲ್ಲಿಗೆ ತಲುಪಿ, ಎಲ್ಲವನ್ನು ನಿವೇದಿಸಿ, ಸೀತೆಯ ಕುರುಹಾಗಿ ಚೂಡಾಮಣಿಯನ್ನು ಒಪ್ಪಿಸುತ್ತಾನೆ.

ಸೇತುಬಂಧನ : ರಾಮಲಕ್ಷ್ಮಣರು ಸುಗ್ರೀವ ಮತ್ತು ಕಪಿಪಾಳ್ಯಗಳೊಂದಿಗೆ ದಕ್ಷಿಣ ಸಮುದ್ರ ತೀರವನ್ನು ಸೇರುತ್ತಾರೆ. ಈ ವಾರ್ತೆಯನ್ನು ಪಡೆದ ರಾವಣ ಲಂಕೆಯ ಕೋಟೆ ಕೊತ್ತಲಗಳನ್ನು ಬಲಪಡಿಸುತ್ತಾನೆ. ರಾಮನೊಂದಿಗೆ ಯುದ್ಧಕ್ಕೆ ಸನ್ನಾಹ ಮಾಡುತ್ತಿರುವುದಾಗಿ ತಿಳಿದು ವಿಭೀಷಣ ಅಣ್ಣನಾದ ರಾವಣನಿಗೆ ನೀತಿ ಹೇಳಿ, ಸೀತೆಯನ್ನು ರಾಮನಿಗೆ ಒಪ್ಪಿಸಲು ಒತ್ತಾಯಿಸುತ್ತಾನೆ. ಸಿಟ್ಟಿಗೆದ್ದ ರಾವಣ ವಿಭೀಷಣನನ್ನು ನಿಂದಿಸಿ ಲಂಕೆಯಿಂದ ಹೊರಗಟ್ಟುತ್ತಾನೆ. ತಾಯಿಗೆ ಇದನ್ನು ತಿಳಿಸಿ ವಿಭೀಷಣ ರಾಮನಲ್ಲಿ ಶರಣು ಹೊಂದುತ್ತಾನೆ. ವರುಣನನ್ನು ಒಲಿಸಿ ಅವನ ಸಲಹೆಯಂತೆ ವಿಶ್ವಕರ್ಮನ ಮಗನಾದ ನಳನನ್ನು ಕರೆಸಿಕೊಂಡು ಅವನ ನೇತೃತ್ವದಲ್ಲಿ ಕಪಿಗಳು ಕಿತ್ತುತಂದುಕೊಟ್ಟ ಪರ್ವತಗಳನ್ನು ಸಮುದ್ರಕ್ಕೆ ಹಾಕಿ ಸೇತುವನ್ನು ಮಾಡುತ್ತಾರೆ. ಪರ್ವತಗಳನ್ನು ಕಿತ್ತು ತರುವಲ್ಲಿ ಕಪಿನಾಯಕರು ನಡೆಸುವ ಸಾಹಸದ ಅದ್ಭುತವಾದ ನಿರೂಪಣೆ ಈ ಪ್ರಸಂಗದಲ್ಲಿದೆ.

ಅಂಗದ ಸಂಧಾನ : ರಾಮ-ಲಕ್ಷ್ಮಣರು, ಸುಗ್ರೀವ, ವಿಭೀಷಣ ಮತ್ತು ಕಪಿಕಟಕ ಸೇತುವೆಯನ್ನು ದಾಟಿ ಲಂಕಾದ್ವೀಪ ಸೇರುತ್ತಾರೆ. ರಾವಣನು ಶತ್ರುಪಾಳಯದ ಕಾರ್ಯಾಚರಣೆಯ ವಿಧಾನ ತಿಳಿದು ಬರಲು ಶುಕ-ಸಾರಣರೆಂಬ ಇಬ್ಬರು ಗೂಢಚರರನ್ನು ಅಟ್ಟುತ್ತಾನೆ. ಗಿಳಿಗಳಾಗಿ ಸುಳಿದಾಡುತ್ತಿದ್ದ ಇವರ ರಹಸ್ಯವರಿತ ಅಂಗದ ಇಬ್ಬರನ್ನೂ ಬಂಧಿಸಿ ರಾಮನ ಮುಂದೆ ತಂದು ನಿಲ್ಲಿಸುತ್ತಾನೆ. ರಾಮನು ಅವರನ್ನು ಮನ್ನಿಸಿ ಮಾತನಾಡುತ್ತಾನೆ. ಅವರಾದರೂ ರಾವಣನ ನಿಲುಮೆಯನ್ನು ಸಮರ್ಥಿಸಿ ಮಾತನಾಡುತ್ತಾರೆ. ಅವರ ಪ್ರಾಮಾಣಿಕತೆಗೆ ಮೆಚ್ಚಿ ಉಡುಗೊರೆ ಕೊಟ್ಟು ರಾಮ ಪಟ್ಟಣಕ್ಕೆ ಕಳುಹಿಸಿಕೊಡುತ್ತಾನೆ. ಅವರಾದರೂ ರಾವಣನಲ್ಲಿಗೆ ಬಂದು ರಾಮ ಲಕ್ಷ್ಮಣರ ಮತ್ತು ಕಪಿನಾಯಕರ ಸಾಮರ್ಥ್ಯ ವೈಭವಗಳನ್ನು ಬಣ್ಣಿಸುತ್ತಾರೆ. ಅದಕ್ಕೆ ರಾವಣ ಸಿಟ್ಟಾಗುತ್ತಾನೆ ಮತ್ತು ಕೋಟೆಯ ಮೇಲೆ ನಿಂತು ತನ್ನ ಹೆಗ್ಗಳಿಕೆಯನ್ನು ಕೊಚ್ಚಿಕೊಳ್ಳುತ್ತಾನೆ. ಆಗ ರಾಮನು ತನ್ನ ಶಸ್ತ್ರ ವಿದ್ಯಾಕೌಶಲದೊಂದಿಗೆ ಎಚ್ಚರಿಕೆ ನೀಡಲೆಂಬಂತೆ ಬಾಣವೊಂದನ್ನು ಬಿಟ್ಟು ರಾವಣನ ಬೆಳ್ಗೊಡೆಯನ್ನು ತುಂಡರಿಸುತ್ತಾನೆ. ಸುಗ್ರೀವ ಒಂದೇ ನೆಗೆತದಲ್ಲಿ ರಾವಣನ ಕಿರೀಟವನ್ನು ಕಿತ್ತು ತರುತ್ತಾನೆ. ರಾವಣನು ಇನ್ನಾದರೂ ದಾರಿಗೆ ಬಂದು ಸೀತೆಯನ್ನು ಮರಳಿಸಿದರೆ, ತಾನು ಬಂದಹಾಗೆ ಹಿಂದೆ ಹೋಗುವುದಾಗಿ ತಿಳಿಸಿ ಸಂಧಾನ ನಡೆಸಲು ಒಬ್ಬನನ್ನು ಕಳುಹಿಸೆಂದು ಸುಗ್ರೀವನಿಗೆ ತಿಳಿಸುತ್ತಾನೆ. ಸುಗ್ರೀವ ಈ ಮಹತ್ತ್ವದ ಕೆಲಸಕ್ಕೆ ಅಂಗದನನ್ನು ಆಯುತ್ತಾನೆ. ಅಂಗದ ರಾವಣನ ಆಸ್ಥಾನ ಪ್ರವೇಶಿಸಿ ರಾವಣ ಯಾರು ಎಂದು ಕೇಳುತ್ತಾನೆ. ಪ್ರಹಸ್ತ ಅಂಗದನನ್ನು ಮಾತನಾಡಿಸಿ ಅವನ ಮೇಲೆ ರಾಜನೀತಿಯ ಹಲವು ಉಪಾಯಗಳನ್ನು ಪ್ರಯೋಗಿಸುತ್ತಾನೆ. ಕೊನೆಗೂ ರಾವಣನನ್ನು ತೋರಿಸಿದಾಗ ಅವನನ್ನು ಜರೆದು ಸೀತೆಯನ್ನು ಮರಳಿಸದಿದ್ದರೆ ಕೇಡಾದೀತೆಂದು ಎಚ್ಚರಿಸುತ್ತಾನೆ. ಕೆರಳಿದ ರಾವಣ ರಾಕ್ಷಸರಿಂದ ಹೊಡೆಸಿದಾಗ, ಕ್ರೋಧದಿಂದ ಅಂಗದ ಇದಿರಾದವರನ್ನೆಲ್ಲ ಸಂಹರಿಸುತ್ತ, ಆನೆ, ಕುದುರೆಗಳನ್ನು ಕೋಟೆಯ ಹೊರಕ್ಕೆ ಎಸೆಯುತ್ತಾನೆ. ಅಪಾಯದ ಸುಳಿವು ಸಿಕ್ಕ ರಾಮ ಹನುಮಂತನನ್ನು ಕಳುಹಿಸುತ್ತಾನೆ. ಹನುಮಂತ ಅಂಗದನ ರಕ್ಷಣೆಗೆ ಹೋಗಿ, ರಾವಣನಿಗೆ ಕೊನೆಯೆಚ್ಚರಿಕೆ ಕೊಟ್ಟು, ಅಂಗದನೊಂದಿಗೆ ಹಿಂದಿರುಗುತ್ತಾನೆ.

ಅನಂತರ ಯುದ್ಧ ಆರಂಭವಾಗುತ್ತದೆ. ರಾವಣನ ಹೊಡೆತಕ್ಕೆ ಸಿಕ್ಕಿ ಲಕ್ಷ್ಮಣ ಮೂರ್ಚ್ಛಾಗತನಾಗುತ್ತಾನೆ. ರಾಮನ ಶಸ್ತ್ರಾಘಾತದಲ್ಲಿ ರಾವಣ ವಿವಸ್ತ್ರನಾಗಿ ನಾಚಿ ಹಿಮ್ಮೆಟ್ಟುತ್ತಾನೆ.

ಬಲಿಪ ಭಾಗವತರ ಕೃತಿಗಳು

ಅಹಲ್ಯಾ ಶಾಪ : ಬ್ರಹ್ಮನ ಸೃಷ್ಟಿಕಾರ‍್ಯದಲ್ಲಿ ಒಮ್ಮೆ ಅಪ್ರತಿಮ ರೂಪಸಿಯೊಬ್ಬಳು ಸೃಷ್ಟಿಯಾದಳು. ಅವಳೇ ಅಹಲ್ಯೆ. ಅವಳನ್ನು ಅಸಾಮಾನ್ಯ ಸಾಧಕರಿಗೇ ಕೊಡಬೇಕು ಎಂದು ವಿಧಾತನಿಗನಿಸಿತು. ಮುಹೂರ್ತವೊಂದರೊಳಗೆ ಇಳೆಯನ್ನು ಪ್ರದಕ್ಷಿಣೆಗೈದು ಬರುವವನಿಗೆ ಈ ಕನ್ಯೆ ಎಂದು ನಿಶ್ಚಯಿಸಿದನು.

ನಾರದ ದೇವೇಂದ್ರನನ್ನು ಸಮೀಪಿಸಿ ಅಹಲ್ಯೆಯಂಥ ಕನ್ಯಾರತ್ನ ಪಡೆಯಲು ನೀನೇ ಅರ್ಹ ಎಂದು ಹೇಳುತ್ತಾನೆ. ಸತ್ಯಲೋಕಕ್ಕೆ ಹೋದ ದೇವೇಂದ್ರ ವಿಧಾತನಲ್ಲಿ ಕನ್ಯೆಯನ್ನು ಕೊಡೆನ್ನಲು ಪಣದ ವಿಚಾರ ತಿಳಿಸುವನು. ಅದೇನು ತನಗೆ ದೊಡ್ಡದೆಂದು ಭೂಪ್ರದಕ್ಷಿಣೆ ಸಂಕಲ್ಪಿಸಿ ಹೊರಡುತ್ತಾನೆ.

ಇತ್ತ ನಾರದನು ಗೌತಮ ಮುನಿಯೆಡೆಗೆ ಬಂದು ಅಹಲ್ಯೆ ನಿನಗೆ ತಕ್ಕ ಸತಿಯೆಂದೂ ವಿಧಾತನಲ್ಲಿ ಕೇಳೆಂದೂ ಒತ್ತಾಯಿಸುತ್ತಾನೆ. ಗೌತಮನಿಗೂ ವಿಧಾತನದು ಅದೇ ಪಣದ ಮಾತು. ಗೌತಮ ಒಡನೆಯೆ ಕಮಂಡಲದಿಂದ ಮಂತ್ರೋದಕ ಪ್ರೋಕ್ಷಿಸಿದಾಗ ಗರ್ಭಧರಿಸಿದ ಕಪಿಲೆ ದನ ಕಾಣಿಸಿಕೊಳ್ಳುತ್ತದೆ. ಆ ದನಕ್ಕೆ ಒಂದು ಪ್ರದಕ್ಷಿಣೆಗೈದು ಗೌತಮ ಬ್ರಹ್ಮನಲ್ಲಿ ಕನ್ಯೆಯನ್ನು ಕೊಡೆಂದನು. ಧೇನುವಿಗೆ ಹಾಕಿದ ಪ್ರದಕ್ಷಿಣೆ ಭೂಮಿಗೆ ಹಾಕಿದ ಪ್ರದಕ್ಷಿಣೆಗೆ ಸಮನೆಂದು ಅಂಗೀಕರಿಸಿದ ವಿಧಾತ ಅಹಲ್ಯೆಯನ್ನು ಗೌತಮನಿಗೆ ಸತಿಯಾಗಿ ನೀಡಿದ.

ನವ ವಧೂ-ವರರು ನಿರ್ಗಮಿಸುತ್ತಲೆ ದೇವೇಂದ್ರ ಭೂ ಪ್ರದಕ್ಷಿಣೆ ಮುಗಿಸಿ ಬಂದ. ಬ್ರಹ್ಮ ನಡೆದುದನ್ನು ತಿಳಿಸಿದ. ಇಂದ್ರನಿಗೆ ಸಿಟ್ಟು ನೆತ್ತಿಗೇರಿತು. ದೇವಬಲದೊಂದಿಗೆ ಬ್ರಹ್ಮನೊಂದಿಗೆ ಯುದ್ಧ ಸಾರಿದ. ಬ್ರಹ್ಮದಂಡದೆದುರು ಪುರಂದರನ ಆಟ ಸಾಗಲಿಲ್ಲ.

ದಿಕ್ಪಾಲಕರ ಬೆಂಬಲದೊಂದಿಗೆ ಅಹಲ್ಯೆಯ ಸಂಗ ಪಡೆದೇ ಸಿದ್ಧ ಎಂದು ತೀರ್ಮಾನಿಸಿ ದೇವೇಂದ್ರ ಅವಧಿಗೆ ಮುನ್ನವೆ ಬೆಳಗಾಯಿತೆಂಬ ಭ್ರಾಂತಿ ಹುಟ್ಟಿಸಿ ಗೌತಮನನ್ನು ನದೀ ತೀರಕ್ಕೆ ಸಾಗಹಾಕುತ್ತಾನೆ. ಗೌತಮನ ರೂಪಧರಿಸಿ ಆಶ್ರಮದ ಒಳಹೊಕ್ಕು ಅಹಲ್ಯೆಯನ್ನು ವಶಪಡಿಸಿಕೊಳ್ಳುತ್ತಾನೆ. ಗೌತಮ ಗಲಿಬಿಲಿಗೊಂಡು ಆಶ್ರಮಕ್ಕೆ ಮರಳಿದಾಗ ಒಳಗೊಬ್ಬ ಇರುವುದು ಗೊತ್ತಾಗುತ್ತದೆ. ಗೌತಮ ಕುದಿದು ಕೆಂಡವಾಗುತ್ತಾನೆ. ಅಹಲ್ಯೆ ಕಲ್ಲಾಗಿ ಬಿದ್ದುಕೊಂಡಿರೆಂದು ಶಾಪ ಕೊಡುತ್ತಾನೆ. ಇಂದ್ರನಿಗೆ ಮೈಯಲ್ಲೆಲ್ಲ ಯೋನಿಗಳಾಗಲಿ ಎಂದು ಶಪಿಸುತ್ತಾನೆ. ಇಬ್ಬರೂ ಅಂಗಲಾಚಿದಾಗ, ಅಹಲ್ಯೆಗೆ ರಾಮನ ಚರಣ ಸ್ಪರ್ಶದಲ್ಲಿ ಶಾಪ ವಿಮೋಚನೆ ಎಂದ. ಇಂದ್ರನ ಯೋನಿಗಳು ಇತರರಿಗೆ ಕಣ್ಣುಗಳಂತೆ ಕಾಣಲಿ ಎಂದು ಪ್ರತಿಶಾಪವಿತ್ತ. ಆದರೆ ಇಂದ್ರನಿಗೆ ಅನ್ಯಾಯವೆಸಗಲು ಬೆಂಬಲವಾದ ದೇವತೆಗಳಲ್ಲಿ ಅಗ್ನಿಗೆ ಸರ್ವಭಕ್ಷಕನಾಗೆಂದೂ, ಮರುತನಿಗೆ ಎಲ್ಲೂ ನಿಲ್ಲದೆ ಚಲಿಸುತ್ತಲೆ ಇರೆಂದೂ, ವರುಣನಿಗೆ ಉಲ್ಲಾಸವಡಗಿ ಕಂಪಿಸುತ್ತಿರು ಎಂದೂ ಶಪಿಸಿದ. ಹೀಗೆ ನಾರದನ ಬಯಕೆಯಂತೆ ದೇವೇಂದ್ರ ಮತ್ತು ದೇವತೆಗಳ ಗರ್ವಾಪಹಾರವಾಗುತ್ತದೆ.

ವಾನರಾಭ್ಯುದಯ : ಸೃಷ್ಟಿಕಾರ್ಯದಲ್ಲಿದ್ದ ಬ್ರಹ್ಮದೇವನು ಕಮಂಡಲದ ಜಲವನ್ನು ಪ್ರೋಕ್ಷಿಸಿದಾಗ ಅದ್ಭುತ ಚೇತನವೊಂದು ಉದಿಸಿಬಂತು. ಬ್ರಹ್ಮನ ಪ್ರೋಕ್ಷಣೆಯಲ್ಲಿ ಜ್ಞಾನಗಳಿಸಿದ ಆತನಿಗೆ ಋಕ್ಷ ಎಂಬ ಹೆಸರಾಯಿತು. ಹಿಂದೆ ಕಿಷ್ಕಿ ಎಂಬ ವಾನರರಾಜ ಪಾಲಿಸಿದ ಕಿಷ್ಕಿಂಧೆಗೆ ನೀನಿನ್ನು ಅರಸ ಎಂದು ವಿಧಾತ ನೇಮಿಸಿದ. ಜಾಂಬವನು ಅವನ ಮಂತ್ರಿಯೆಂದೂ ನೇಮಿಸಿದ.

ಸಂತಾನಾರ್ಥಿಯಾಗಿ ಋಕ್ಷ ಪಂಪಾತೀರದಲ್ಲಿ ಶಿವನನ್ನು ಕುರಿತು ತಪಸ್ಸು ಆರಂಭಿಸುತ್ತಾನೆ. ಶಿವ ಪ್ರತ್ಯಕ್ಷನಾಗಲಿಲ್ಲವೆಂದು ಮರುದಿವಸ ಸ್ನಾನಕ್ಕಾಗಿ ಸರೋವರವೊಂದಕ್ಕೆ ಇಳಿದು ಮೇಲಕ್ಕೆ ಏರಿದಾಗ ಋಕ್ಷನಿಗೆ ಹೆಣ್ತನ ಪ್ರಾಪ್ತಿಸಿತ್ತು. ಅಷ್ಟರಲ್ಲಿ ಶಿವಪೂಜೆಗಾಗಿ ಅಲ್ಲಿಗೆ ಬಂದ ದೇವೇಂದ್ರ ಆಕೆಯ ರೂಪಕ್ಕೆ ಮನಸೋತು ಆ ವಾನರಿಯ ಬಾಲದ ಕಡೆಯಿಂದ ಮಗುವೊಂದು ಜನಿಸಲು ಕಾರಣನಾಗುತ್ತಾನೆ. ಹಾಗೆಯೆ ಸೂರ‍್ಯದೇವ ಆಕೆಯ ಗ್ರೀವದಲ್ಲಿ ಶಿಶು ಗಳಿಸುತ್ತಾನೆ. ಹೀಗೆ ಜನಿಸಿದ ಇಂದ್ರಕುಮಾರನೇ ವಾಲಿ. ಸೂರ‍್ಯ ನಂದನನೇ ಸುಗ್ರೀವ. ಆದರೆ ತನಗಾದ ಸ್ಥಿತಿಗಾಗಿ ಕಳವಳಗೊಂಡು ಪ್ರಾಣತ್ಯಾಗ ಮಾಡುವುದಾಗಿ ತಿಳಿಗೊಳಕ್ಕೆ ಧುಮುಕಿದಾಗ ಋಕ್ಷ ತನ್ನ ಮೊದಲಿನ ಧ್ಯಾನಾಸಕ್ತ ಪುರುಷನ ರೂಪವನ್ನು ಮರಳಿ ಪಡೆದುಕೊಳ್ಳುತ್ತಾನೆ.

ಅಷ್ಟರಲ್ಲಿ ಶಿವ ಪ್ರತ್ಯಕ್ಷನಾಗಿ ಇವರನ್ನು ಸಲಹೆಂದೂ ನಿನ್ನ ಪ್ರಿಯತಮೆಯಾದ ಋಕ್ಷಿಯಲ್ಲಿ ಕುವರಿಯೊಬ್ಬಳು ಹುಟ್ಟುವಳೆಂದೂ ಅವಳಲ್ಲಿ ಲೋಕೋತ್ತರ ವಿಷ್ಣು ಭಕ್ತನೋರ್ವ ಉದಿಸುವನೆಂದೂ ಹರಸುತ್ತಾನೆ. ಅದರಂತೆ ಜನಿಸಿದವಳೇ ಅಂಜನಾದೇವಿ. ಇವಳಿಗೆ ಯೌವನವು ಕೂಡಿ ಬರಲು ವಾನರ ವೀರನಾದ ಕೇಸರಿಗೆ ಮದುವೆ ಮಾಡಿಕೊಡುತ್ತಾನೆ. ಈ ನವವಧೂವರರು ಫಲಪುಷ್ಪಭರಿತ ಕಾಂತಾರದಲ್ಲಿ ವಿಹರಿಸುತ್ತ ಬಗೆ ಬಗೆಯ ರೂಪಗಳನ್ನು ಧರಿಸಿ ಸ್ಮರಹತಿಗೆ ಉಪಶಮನ ಮಾಡಿಕೊಳ್ಳುತ್ತ ಲತಾಕುಂಜವೊಂದರಲ್ಲಿ ಮಲಗಿ ದಣಿವಾರಿಸುತ್ತಿದ್ದಾಗ, ವಾಯುದೇವನು ಅಂಜನೆಯಲ್ಲಿ ಅನುರಕ್ತನಾಗಿ ಸಿದ್ಧ ಯೋಗವಿಧಾನದಲ್ಲಿ ಆಕೆಯನ್ನು ಸೇರಿ ಮಾರುತಿಯ ಹುಟ್ಟಿಗೆ ಕಾರಣನಾದನು. ತತ್‌ಕ್ಷಣ ಹುಟ್ಟಿಬಂದು ತನ್ನನ್ನು ಎಬ್ಬಿಸಿದ ಮಗುವನ್ನು ಕಂಡ ಅಂಜನೆ ಅಚ್ಚರಿ, ಸಂಭ್ರಮಗಳಿಂದ ಮುದ್ದಿಸಿ ಫಲಗಳನ್ನು ತಂದುಕೊಡುವುದಾಗಿ ಹೇಳಿ ಕಾಡನ್ನು ಸುತ್ತತೊಡಗಿದಳು. ಅಷ್ಟರಲ್ಲಿ ಸೂರ‍್ಯನು ಕೆಂಪಗೆ ಕಾಣಿಸಿಕೊಂಡಾಗ ಅದು ಹಣ್ಣೆಂದು ಭ್ರಮಿಸಿ ಅದರೆಡೆಗೆ ನೆಗೆದ. ತನ್ನನ್ನು ಈ ವಾನರ ತಿನ್ನಬರುತ್ತಾನೆಂದು ಹೆದರಿ ಸೂರ್ಯ ದೇವೇಂದ್ರನಿಗೆ ದೂರುಕೊಟ್ಟ. ಇಂದ್ರ ವಜ್ರಾಯುಧದಿಂದ ಮಾರುತಿಯ ಕೆನ್ನೆಗೆ ಬೀಸಿದ. ಪ್ರಾಣವಡಗಿ ಬಾಲಕ ಧರೆಗೆ ಬಿದ್ದ. ವಾಯು ಹಿಮಾಲಯದ ಗಹ್ವರದಲ್ಲಿ ಅಡಗಿ ಸಿಟ್ಟು ತೋರ್ಪಡಿಸಿದಾಗ, ಎಲ್ಲ ದೇವತೆಗಳೂ ತ್ರಿಮೂರ್ತಿಗಳೂ ಬಾಲಕನೆಡೆಗೆ ಬಂದು ಅವನನ್ನು ಬದುಕಿಸಿ ವಿವಿಧ ವರಗಳಿಂದ ಅವನನ್ನು ದೈವೀ ವ್ಯಕ್ತಿಯನ್ನಾಗಿ ಮಾಡುತ್ತಾರೆ. ವಾಯು ಪ್ರಸನ್ನನಾಗಿ ಲೋಕದಲ್ಲಿ ಪಸರಿಸುತ್ತಾನೆ. ಬಾಲಕನ ಅತಿಶಕ್ತಿ,ಎಳಸುತನದಲ್ಲಿ ಅದರ ಪ್ರಯೋಗವನ್ನು ಕಂಡು ಮುನಿಗಳು ಅವನಿಗೆ ಸ್ವಸಾಮರ್ಥ್ಯದ ಅರಿವಾಗದಿರಲೆಂದು ಹೇಳುತ್ತಾರೆ.

ತಾಯಿ ಅಂಜನೆ ಅವನಿಗೆ ಕುಂಡಲವೊಂದನ್ನು ಕಿವಿಗೆ ತೊಡಿಸಿ ಇದರ ಗುರುತು ಹಿಡಿಯುವವನೇ ನಿನ್ನ ಸ್ವಾಮಿ, ರಾಮಾವತಾರದಲ್ಲಿ ಶ್ರೀಹರಿ ಬಂದಾಗ ಆತ ಯಾರಿಗೂ ಕಾಣಿಸದ ಕರ್ಣಕುಂಡಲವನ್ನು ಕಂಡುಕೊಳ್ಳುತ್ತಾನೆ. ಆಗ ನಿನಗೆ ಸ್ವಸಾಮರ್ಥ್ಯ ಪುನಃ ಲಭ್ಯವಾಗುತ್ತದೆ ಎನ್ನುತ್ತಾಳೆ.

ಇತ್ತ ಮಹಿಷಾಸುರನ ಪುತ್ರನಾದ ದುಂದುಭಿಯ ಮಗ ಮಾಯಾವಿ ಇಂದ್ರನನ್ನು ಯುದ್ಧದಲ್ಲಿ ಸೋಲಿಸಿ ದೇವಲೋಕದಿಂದ ಹೊರಗೋಡಿಸುತ್ತಾನೆ. ಭೂಲೋಕಕ್ಕೆ ಬರುತ್ತ ಋಕ್ಷನ ಉದ್ಯಾನಕ್ಕೆ ರಥ ಇಳಿದಾಗ, ಅಲ್ಲಿ ಮಾಯಾವಿ ಅಂಜನೆಯನ್ನು ಕಂಡು ಆಕೆಯನ್ನು ಬಯಸುತ್ತಾನೆ. ವಿರೋಧಿಸಿದ ಅಂಜನೆಯನ್ನು ಹಿಡಿದೊಯ್ಯುವಾಗ ಕೇಸರಿ ಇದಿರಾಗುತ್ತಾನೆ. ಹೋರಾಟದಲ್ಲಿ ಕೇಸರಿ ಮೂರ್ಛೆಗೆ ಸರಿಯುತ್ತಾನೆ. ಅಂಜನೆಯ ಕೂಗು ಕೇಳಿ ಸುಗ್ರೀವ ಮತ್ತು ವಾಲಿ ಧಾವಿಸಿ ಬರುತ್ತಾರೆ. ವಾಲಿಯ ಹೊಡೆತದಿಂದ ಮಾಯಾವಿ ಮೂರ್ಛಿತನಾಗುತ್ತಾನೆ. ವಾಲಿ ಅಂಜನೆಯನ್ನು ಕೇಸರಿಯ ವಶಕ್ಕೆ ಕೊಡುತ್ತಾನೆ.

ಪ್ರಜ್ಞೆ ತಿಳಿದ ಮಾಯಾವಿ ಮತ್ತೆ ವಾಲಿಯನ್ನೆದುರಿಸಿ ಕತ್ತಲಲ್ಲಿ ತನಗೆ ಗೆಲವು ಸುಲಭವೆಂದು ಗುಹೆಯೊಂದನ್ನು ಹೊಗುತ್ತಾನೆ. ತಾನು ರಾಕ್ಷಸನನ್ನು ವಧಿಸಿ ಬರುವವರೆಗೆ ಹೊರಗೆ ಕಾಯು ಎಂದು ಸುಗ್ರೀವನಲ್ಲಿ ಹೇಳಿ ವಾಲಿ ಗುಹೆಯನ್ನು ಪ್ರವೇಶಿಸುತ್ತಾನೆ. ಕತ್ತಲಲ್ಲಿ ಘೋರ ಕಾದಾಟವುಂಟಾಗುತ್ತದೆ. ದುಷ್ಟರು ಸಾಯುವಾಗಲೂ ಅಪಕಾರವನ್ನೆ ಮಾಡುವರೆಂಬಂತೆ, ಪ್ರಾಣ ಬಿಡುತ್ತ ಮಾಯಾವಿ, ಹಾ ತಮ್ಮ ಸುಗ್ರೀವ ಉಳಿವಿಲ್ಲ ಎನ್ನುತ್ತಾನೆ. ಇದು ಹೊರಗೆ ಕಾದಿದ್ದ ಸುಗ್ರೀವನಿಗೆ ಕೇಳಿ ವಾಲಿ ಪ್ರಾಣಬಿಟ್ಟನೆಂದು ತಿಳಿಯುತ್ತಾನೆ. ಇನ್ನು ರಾಕ್ಷಸ ಹೊರಬಾರದಿರಲೆಂದು ಬಿಲದ ದ್ವಾರಕ್ಕೆ ಪರ್ವತವೊಂದನ್ನು ಕಿತ್ತು ಜಡಿದು ಮುಚ್ಚಿಬಿಡುತ್ತಾನೆ. ದುಃಖದೊಂದಿಗೆ ಮರಳಿ ಎಲ್ಲವನ್ನೂ ಜಾಂಬವಾದಿಗಳಿಗೆ ಹೇಳುತ್ತಾನೆ. ಅವರ ಅಭಿಮತದಂತೆ, ರುಮೆ-ತಾರೆ ಸಹಿತ ವಾಲಿಯ ಸಮಸ್ತ ಅಧಿಕಾರವನ್ನು ತಾನೆ ವಹಿಸಿಕೊಳ್ಳುತ್ತಾನೆ.

ಬಿಲದಲ್ಲಿ ದ್ವಾರವನ್ನು ಹುಡುಕುತ್ತ ಕೊನೆಗೂ ಬಂಧಿಸಿದ ದ್ವಾರವನ್ನು ನೂಕಿ ಬಿಡಿಸಿ ಹೊರಬಂದ ವಾಲಿ ಸಿಟ್ಟಿನಿಂದ ಕುದಿದು ಒಂದೆ ನೆಗೆತದಲ್ಲಿ ಸುಗ್ರೀವನ ಬಳಿ ಸೇರಿ ರುಮೆ, ತಾರೆಯರೊಂದಿಗಿರುವುದನ್ನು ಕಂಡು, ಬೆಂಕಿಗೆ ತುಪ್ಪ ಸುರಿದಂತೆ, ಉರಿದು ಸುಗ್ರೀವನನ್ನು ಹೊಡೆದು ಓಡಿಸುತ್ತಾನೆ. ರುಮೆಯನ್ನು ತಾರೆಯೊಂದಿಗೆ ತನ್ನ ಬಳಿ ಉಳಿಸಿಕೊಳ್ಳುತ್ತಾನೆ. ನೀತಿ ಹೇಳಿದ ಜಾಂಬವಾದಿಗಳನ್ನು ಜರೆಯುತ್ತಾನೆ.

ಮಾಯಾವಿ ಅಳಿದ ವಾರ್ತೆಗೆ ಕಿಡಿಕಿಡಿಯಾದ ಆತನ ತಂದೆ ದುಂದುಭಿ ಇಂದ್ರನಲ್ಲಿಗೆ ಹೋಗಿ ಬೆದರಿಸಿ, ಯಾರಿಂದ ವಧೆಯಾಯಿತೆಂದು ಕೇಳಿದಾಗ, ಹಿಮವಂತನಿಗೆ ಮಾತ್ರ ಅದು ತಿಳಿಯುವುದೆಂದನು. ಹಿಮವಂತ ಸಮುದ್ರರಾಜನನ್ನೂ ಸಮುದ್ರ ಸೂರ್ಯನನ್ನೂ ತೋರಿದಾಗ, ಸೂರ‍್ಯ ಮಾಯಾವಿಯ ಅಳಿವು ವಾಲಿಯಿಂದಾದುದನ್ನು ತಿಳಿಸುತ್ತಾನೆ. ದುಂದುಭಿ ಕಿಷ್ಕಂಧೆಗೆ ಧಾವಿಸಿ ಬರುತ್ತಾನೆ. ದುಂದುಭಿ-ವಾಲಿಯರ ಸಮರದಲ್ಲಿ ನೆಲ ನಡುಗುತ್ತದೆ. ಕೊನೆಗೂ ಅವನ ತಲೆಯ ಕೋಡುಗಳನ್ನು ಹಿಡಿದು ತಿರುಗಿ ಬೀಸಿ ಎಸೆದಾಗ ಅವನ ರಕ್ತವು ಮತಂಗಾಶ್ರಮಕ್ಕೆ ಬೀಳುವುದು. ದುಂದುಭಿ ಮಡಿದರೂ, ಮತಂಗ ಮುನಿ ಸಿಟ್ಟಾಗಿ, ಯಾರಿಂದ ರಕ್ತ ಋಷ್ಯಮೂಕದ ಮತಂಗಾಶ್ರಮಕ್ಕೆ ಬಿತ್ತೊ, ಅವನು ಇಲ್ಲಿಗೆ ಪ್ರವೇಶಿಸಿದರೆ ಸಾವಿಗೀಡಾಗಲೆಂದು ಶಪಿಸುತ್ತಾನೆ. ಹೀಗೆ ಮುಂದೆ ಸುಗ್ರೀವನಿಗೆ ಋಷ್ಯಮೂಕ ಪರ್ವತ ಸುರಕ್ಷಿತವಾಗುತ್ತದೆ. ತನ್ನನ್ನು ಕೆಣಕಲು ಬಂದ ರಾವಣನನ್ನು ಕಂಕುಳಲ್ಲಿ ಅಮುಕಿ ಹಿಡಿದು ವಾಲಿ ಸಪ್ತಸಾಗರಗಳಿಗೆ ಲಂಘಿಸಿ, ಬಳಲಿಸಿ ತನ್ನ ಮಗ ಅಂಗದನ ತೊಟ್ಟಿಲ ಸರಪಣಿಗೆ ಆಟಿಕೆ ಗೊಂಬೆಯಾಗಿ ಕಟ್ಟುತ್ತಾನೆ. ಪೌಲಸ್ತ್ಯನ ಮಾತಿಗಾಗಿ ರಾವಣನ ಬಿಡುಗಡೆಯಾಗುತ್ತದೆ.

ಗೇರೆಸೊಪ್ಪೆ ಶಾಂತಪ್ಪಯ್ಯನ ಕೃತಿ

ಪುತ್ರಕಾಮೇಷ್ಟಿ – ಸೀತಾಸ್ವಯಂವರ : ಕಥೆ ದಶರಥನಿಗೆ ದೇವಲೋಕದ ದೂತರ ಮೂಲಕ ಶಂಬರಾಸುರ ವಧೆಗೆ ಆಹ್ವಾನ ನೀಡುವಲ್ಲಿ ತೊಡಗುತ್ತದೆ. ದಶರಥ ಕೈಕೆಯೊಂದಿಗೆ ದೇವಲೋಕಕ್ಕೆ ಹೋಗುತ್ತಾನೆ. ಶಂಬರಾಸುರನೊಡನೆ ಉಗ್ರ ಕದನವಾಗುತ್ತದೆ. ಶಂಬರ ಕಾಲಕೇಯರ ಪುರಕ್ಕೆ ಸರಿಯುತ್ತಾನೆ. ದಶರಥ ಅಲ್ಲಿಗೂ ಬೆನ್ನಟ್ಟುತ್ತಾನೆ. ಅಲ್ಲಿ ಭೀಕರ ಅಂಧಕಾರ ಕವಿದು ದಶರಥ ಕಂಗೆಡುತ್ತಾನೆ. ಆಗ ಪಕ್ಷಿರಾಜ ಸಂಪಾತಿ ತನ್ನ ರೆಕ್ಕೆಗಳನ್ನೆತ್ತಿ ರತ್ನಪ್ರಭೆ ಹರಿಸಿ ಬೆಳಗಿಸುತ್ತಾನೆ. ಯುದ್ಧ ಸಾಗುತ್ತಿರುವಂತೆ ದಶರಥನ ರಥದ ಕೀಲು ಕಳಚುತ್ತದೆ. ಒಡನೆ ಕೈಕೇಯಿ ತನ್ನ ಕೈ ಕಂಕಣ, ಕಡಗಗಳಿಂದ ಕೀಲು ತೂರಿ ಪತಿಯು ಯುದ್ಧ ನಿರಾತಂಕಗೊಳಿಸುತ್ತಾಳೆ. ಶಂಬರ ನಿರ್ನಾಮವಾಗುತ್ತಾನೆ. ಪತ್ನಿಯ ಸಹಾಯಕ್ಕೆ ಹರುಷಗೊಂಡ ದಶರಥ ಎರಡು ವರಗಳನ್ನು ನೀಡುತ್ತಾನೆ. ಬೇಕಾದಾಗ ತಾನು ಕೇಳಿಕೊಳ್ಳುವೆ ಎಂದು ಕೈಕೇಯಿ ಅನ್ನುತ್ತಾಳೆ.

ರಾವಣನ ಉಪಟಳ ಸಹಿಸಲಾರದೆ ದೇವತೆಗಳು ಮಹಾವಿಷ್ಣುವಿನ ಮರೆಹೊಗುತ್ತಾರೆ. ವಿಷ್ಣು ತಾನು ದಶರಥನಿಗೆ ಮಗನಾಗಿ ಜನಿಸಿ ರಾಕ್ಷಸಬಾಧೆ ತೊಲಗಿಸುವುದಾಗಿ ಭರವಸೆ ನೀಡುತ್ತಾನೆ. ಮಾಯೆ ಮಂಥರೆಯಾಗಿ ದಶರಥನ ರಾಣೀವಾಸವನ್ನು ಸೇರುತ್ತಾಳೆ. ದೇವತೆಗಳು ವಾನರವಂಶದಲ್ಲಿ ಹುಟ್ಟಿ ಬರುತ್ತಾರೆ. ಮೃಗಬೇಟೆಗೆ ಹೋದ ದಶರಥನಿಗೆ ಶ್ರಮಣನ ಶಾಪವುಂಟಾಗುತ್ತದೆ. ಬಹುಕಾಲ ಸಂತತಿ ಕಾಣದ ದಶರಥನಿಗೆ ಆ ಶಾಪ ಅನುಗ್ರಹವೆಂದೇ ತೋರುತ್ತದೆ.

ವಸಿಷ್ಠನ ಆದೇಶದಂತೆ ಋಷ್ಯಶೃಂಗನ ನೇತೃತ್ವದಲ್ಲಿ ದಶರಥನ ಪುತ್ರಕಾಮೇಷ್ಟಿ ನಡೆಯುತ್ತದೆ. ಮೊದಲು ಅಶ್ವಮೇಧ ಯಾಗ ನಡೆಯುತ್ತದೆ. ಯಜ್ಞದಿಂದ ದೇವತೆಗಳಿಗೆ ತೃಪ್ತಿಯಾಗುತ್ತದೆ. ದಶರಥನ ರಾಣಿಯರು ಗರ್ಭವತಿಯರಾಗುತ್ತಾರೆ. ಕೌಸಲ್ಯೆಗೆ ರಾಮನೂ, ಕೈಕೆಯಿಗೆ ಭರತನೂ, ಸುಮಿತ್ರೆಗೆ ಅವಳಿ ಮಕ್ಕಳಾದ ಲಕ್ಷ್ಮಣ-ಶತ್ರುಘ್ನರೂ ಜನಿಸುತ್ತಾರೆ. ವಸಿಷ್ಠಾಶ್ರಮದಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸವಾಗುತ್ತದೆ.

ವಿಶ್ವಾಮಿತ್ರ ಮಹರ್ಷಿ ಬಂದು ಯಾಗಕ್ಕೆ ಆಗುವ ರಾಕ್ಷಸರ ಉಪಟಳ ನೀಗಲು ರಾಮ ಲಕ್ಷ್ಮಣರನ್ನು ಕೊಟ್ಟು ಕಳುಹಿಸಲು ಕೇಳುತ್ತಾನೆ. ಒಲ್ಲದ ಮನಸ್ಸಿನ ದಶರಥ ವಸಿಷ್ಠನ ಹೇಳಿಕೆಯಂತೆ ಕಳುಹಿಸುತ್ತಾನೆ. ವಿಶ್ವಾಮಿತ್ರರಿಂದ ಇವರಿಗೆ ಮಂತ್ರಾಸ್ತ್ರಗಳ ಪ್ರದಾನವಾಗುತ್ತದೆ. ರಾಮನಿಂದ ತಾಟಕೆ, ಸುಬಾಹುಗಳ ವಧೆಯಾಗುತ್ತದೆ. ಕಟಪ ದ್ವಿಜರೂಪದಲ್ಲಿ ಬಂದ ಮಾರೀಚ ವಿಶ್ವಾಮಿತ್ರನಿಂದ ಗುರುತಿಸಲ್ಪಟ್ಟು, ರಾಮನ ಅನಿಲಶರಕ್ಕೆ ಸಿಕ್ಕಿ ದ್ವೀಪಾಂತರಕ್ಕೆ ತಳ್ಳಿಹೋಗುತ್ತಾನೆ. ವಿಶ್ವಾಮಿತ್ರನ ಯಾಗ ಸಾಂಗವಾಗಿ ನಡೆಯುತ್ತದೆ.

ಮಿಥೆಲೆಯ ಜನಕಮಹಾರಾಜ ಯಾಗಕ್ಕಾಗಿ ನೆಲಗೀರಿದಾಗ ರತ್ನಖಚಿತ ಪೆಟ್ಟಿಗೆ ನೇಗಿಲಿಗೆಸಿಕ್ಕಿ ಮೇಲೇಳುತ್ತದೆ. ಅದರಲ್ಲಿ ಸೀತೆ ಇದ್ದಳು. ಅವಳನ್ನು ತನ್ನ ಕುವರಿಯಾಗಿ ಆತ ಪಾಲಿಸುತ್ತಾನೆ. ಯಾಗಕ್ಕೆ ಬರಲು ಜನಕಮಹಾರಾಜ ವಿಶ್ವಾಮಿತ್ರರಿಗೆ ಕರೆಕಳುಹಿಸುತ್ತಾನೆ. ಮಿಥಿಲೆಗೆ ಹೋಗುವ ದಾರಿಯಾಗಿ ವಿಶ್ವಾಮಿತ್ರರೊಂದಿಗಿದ್ದ ರಾಮನ ಚರಣಸ್ಪರ್ಶದಿಂದ ಕಲ್ಲಾಗಿದ್ದ ಅಹಲ್ಯೆ ಪೂರ್ವರೂಪ ಹೊಂದುತ್ತಾಳೆ. ಗೌತಮ ಋಷಿ ರಾಮನನ್ನು ಸ್ತುತಿಸಿ ಅಹಲ್ಯೆಯನ್ನು ಸ್ವೀಕರಿಸುತ್ತಾನೆ.

ಮಿಥಿಲೆಯಲ್ಲಿ ಶಿವಧನಸ್ಸನ್ನೆತ್ತಿ ಹೆದೆಯೇರಿಸಿದವರಿಗೆ ಸೀತೆಯನ್ನು ವಿವಾಹದಲ್ಲಿ ನೀಡುವುದಾಗಿ ಜನಕ ಸ್ವಯಂವರ ಏರ್ಪಡಿಸುತ್ತಾನೆ. ರಾವಣನು ಬಿಲ್ಲನ್ನೆತ್ತಲು ಶ್ರಮಿಸಿ ಬಿದ್ದು ಅವಮಾನಿತನಾಗಿ ನಿರ್ಗಮಿಸುತ್ತಾನೆ. ರಾಮ ಬಿಲ್ಲನ್ನೆತ್ತಿ ಬಾಗಿಸಿದಾಗ ಕಬ್ಬಿನ ಜಲ್ಲೆಯಂತೆ ಅದು ಮುರಿದು ಬೀಳುತ್ತದೆ. ಸೀತೆ ರಾಮನಿಗೆ ವರಣಮಾಲೆ ಇಕ್ಕುತ್ತಾಳೆ. ರಾಮ-ಸೀತೆ, ಭರತ-ಮಾಂಡವಿ, ಲಕ್ಷ್ಮಣ-ಊರ್ಮಿಳೆ, ಶತುಘ್ನ-ಶ್ರುತಕೀರ್ತಿ ವಿವಾಹೋತ್ಸವಕ್ಕೆ ಭೂಖಂಡದ ಎಲ್ಲೆಲ್ಲಿಂದ ವಿಪ್ರರು ಬರುತ್ತಾರೆ. ಹಿಂದೂಸ್ತಾನಿ, ಮರಾಠಿ, ತುಳು, ಕೊಂಕಣಿ, ಹೈಗ (ಕನ್ನಡ) ಭಾಷಿಗ ವಿಪ್ರರು ತಮ್ಮ ಮಾತೃಭಾಷೆಯಲ್ಲಿ ಮಾತನಾಡುತ್ತಾರೆ. ವೃದ್ಧ ವಿಪ್ರನೊಬ್ಬ ಉಂಡು ಕೈತೊಳೆಯಲು ಬರುವಾಗ ಮಂಥರೆ ಆತನ ಕೌಪೀನ ಸೆಳೆದು ಗೇಲಿ ಮಾಡಿ ರಾಮನಿಂದ ದಂಡಿಸಲ್ಪಡುತ್ತಾಳೆ. ಮಂಥರೆ ರಾಮನೊಂದಿಗೆ ಹಗೆಕಟ್ಟಿಕೊಳ್ಳುತ್ತಾಳೆ.
ದಶರಥ ಸಪರಿವಾರವಾಗಿ ಅಯೋಧ್ಯೆಗೆ ಮರಳುವಾಗ ಪರಶುರಾಮ ಅಡ್ಡಗಿಸುತ್ತಾನೆ. ರಾಮನಿಂದ ಅವನ ಗರ್ವಾಪಹಾರವಾಗುತ್ತದೆ.

ಸಾರಡ್ಕ ಶಂಭಟ್ಟರ ಕೃತಿಗಳು

ದಶರಥೋತ್ಪತ್ತಿ : ಸುಮಿತ್ರಾ ಸ್ವಯಂವರ : ಅಯೋಧ್ಯೆಯಲ್ಲಿ ಅಜಮಹಾರಾಜನ ರಾಜ್ಯಭಾರ. ನಾರದರ ಸಾಂತ್ವನದಿಂದ ಅವನಿಗೆ ಸಂತತಿಯಿಲ್ಲದ ಕೊರಗು ಪರಿಹಾರ. ಕಾಲಾಂತರದಲ್ಲಿ ಇಂದುಮತಿಯಲ್ಲಿ ದಶರಥನ ಜನನ. ಕೋಸಲ ರಾಜ ಪ್ರತೀಪನಿಗೆ ಮಗಳಾಗಿ ಕೌಸಲ್ಯೆ ಜನಿಸುತ್ತಾಳೆ. ಕೌಸಲ್ಯೆಯನ್ನು ದಶರಥನಿಗೆ ಕೊಟ್ಟು ವಿವಾಹ ನಡೆಸಲು ಪ್ರತೀಪ ನಿಶ್ಚಯಿಸುತ್ತಾನೆ. ಇದನ್ನು ಕೇಳಿ ಸಿಟ್ಟುಗೊಂಡ ಅವನ ಅಳಿಯ ಪಾಂಡ್ಯದೇಶದ ದೊರೆ ಚಂದ್ರಸೇನ ಪ್ರತೀಪನಲ್ಲಿ ಯುದ್ಧಕ್ಕೆ ನಿಲ್ಲುತ್ತಾನೆ, ಸೋಲುತ್ತಾನೆ. ದಶರಥ – ಕೌಸಲ್ಯೆಯರ ವಿವಾಹವಾಗುತ್ತದೆ.

ಚಂದ್ರಸೇನ ತನ್ನ ಗೆಳೆಯ ಕೃಷ್ಣ ಭೂಪನನ್ನು ಕಾಣಲು ವಂಗದೇಶಕ್ಕೆ ಬರುತ್ತಾನೆ. ಗೆಳೆಯನ ಪಕ್ಷ ಹಿಡಿದು ಕೃಷ್ಣಭೂಪ ಪ್ರತೀಪನಲ್ಲಿಗೆ ಯುದ್ಧಕ್ಕೆ ಹೋಗುತ್ತಾನೆ. ಪ್ರತೀಪ ಸೋತಾಗ ಅಜ ಮಹಾರಾಜ ಬಂದು ಕೃಷ್ಣಭೂಪನನ್ನು ಸದೆದು, ಪತೀಪನಿಗೆ ರಾಜ್ಯಾಧಿಕಾರ ಸ್ಥಿರಗೊಳಿಸುತ್ತಾನೆ. ಆದರೆ ಪ್ರತೀಪ ತನ್ನ ರಾಜ್ಯ (ಕೋಸಲ)ದ ಪಟ್ಟಾಧಿಕಾರವನ್ನು ಅಳಿಯ ದಶರಥನಿಗೆ ಬಳುವಳಿಯಾಗಿ ನೀಡುತ್ತಾನೆ. ಹೀಗೆ ದಶರಥ ಕೋಸಲೇಶನಾದ. ಅಜ ದಶರಥನಿಗೆ ಅಯೋಧ್ಯೆಯ ಪಟ್ಟಕಟ್ಟಿ ವಾನಪ್ರಸ್ಥಕ್ಕೆ ಸರಿಯುತ್ತಾನೆ. ಮಿತ್ರನ ಅಂತ್ಯದಿಂದ ದುಃಖತಪ್ತನಾದ ಚಂದ್ರಸೇನ ಶಿವನನ್ನು ಕುರಿತು ತಪವನ್ನಾಚರಿಸುತ್ತಾನೆ.

ಇತ್ತ ರಾವಣನಿಗೆ ಹರಿಯು ದಶರಥನ ಆತ್ಮಜನಾಗಿ ಹುಟ್ಟಿಬರುವ ವಿಚಾರ ಬ್ರಹ್ಮನಿಂದ ತಿಳಿಯುತ್ತದೆ. ರಾವಣ ಸೇನೆ ಕೂಡಿಸಿ ಅಯೋಧ್ಯೆಗೆ ದಂಡೆತ್ತಿ ಬಂದು ಯುದ್ಧದಲ್ಲಿ ದಶರಥನನ್ನು ಮೂರ್ಛೆಗೊಳಿಸಿ ಕೌಸಲ್ಯೆಯನ್ನು ವಶಪಡಿಸಿ ಲಂಕೆಗೆ ತರುತ್ತಾನೆ. ಅವಳನ್ನು ಪೆಟ್ಟಿಗೆಯೊಂದರಲ್ಲಿ ಬಂಧಿಸಿ ಅದನ್ನು ತಿಮಿಂಗಿಲದ ಬಾಯಿಗೆ ಹಾಕಿ ಸಮುದ್ರಕ್ಕೆ ಬಿಡುತ್ತಾನೆ.

ಕೇಕಯ ರಾಜ್ಯದ ಪದ್ಮಾಖ್ಯ ಭೂಪತಿಯ ಮಗಳು ಕೈಕೇಯಿ ವನಕೇಳಿಯಲ್ಲಿರುವಾಗ ಮೃಗ ಬೇಟೆಗಾಗಿ ಬಂದ ದಶರಥನಿಗೆ ಕಾಣಿಸಿಕೊಳ್ಳುತ್ತಾಳೆ. ಪರಸ್ಪರ ಅನುರಾಗ ಮೂಡುತ್ತದೆ. ಕೈಕೇಯಿ ತನ್ನನ್ನು ದಶರಥನಿಗೆ ವಿವಾಹ ಮಾಡಿಕೊಡೆಂದು ತಂದೆಯಲ್ಲಿ ಅರಿಕೆ ಮಾಡುತ್ತಾಳೆ. ವಿವಾಹವಾಗುತ್ತದೆ. ಉಪವನದಲ್ಲಿ ದಶರಥ- ಕೈಕೆ ವಿಹಾರದಲ್ಲಿರುವಾಗ ಹಂದಿಗೆ ಬಾಣ ಎಸೆದ ವಿಷಯದಲ್ಲಿ ತಾನು ತಾನೆಂದು ಕಿರಾತ ಚಿತ್ರಾಯುಧನಿಗೂ ದಶರಥನಿಗೂ ವಿವಾದ ಉಂಟಾಗುತ್ತದೆ. ಯುದ್ಧದಲ್ಲಿ ಶಬರವೀರ ಸಾಯುತ್ತಾನೆ.

ಚಂದ್ರಸೇನನ ತಪಸ್ಸಿಗೆ ಮೆಚ್ಚಿದ ಶಿವನು ಅವನ ಕೋರಿಕೆಯಂತೆ ಒಮ್ಮೆಗೆ ಅಯೋಧ್ಯೆಯರಸನನ್ನು ಸೋಲಿಸುವ ಸಾಮರ್ಥ್ಯವನ್ನು ಕರುಣಿಸುತ್ತಾನೆ. ಚಂದ್ರಸೇನನ ದಂಡು ಅಯೋಧ್ಯೆ ತಲುಪುತ್ತದೆ. ಯುದ್ಧದಲ್ಲಿ ದಶರಥ ಮೂರ್ಛಾಗತನಾಗುತ್ತಾನೆ. ಮತ್ತೆ ಪ್ರಜ್ಞೆ ತಿಳಿದಿದ್ದೆ ದಶರಥನ ಹೊಡೆತಕ್ಕೆ ಚಂದ್ರಸೇನನ ತಲೆಯುರುಳುತ್ತದೆ.

ಸಮುದ್ರದಲ್ಲಿ ತಿಮಿಂಗಿಲದ ಬಾಯಿಯಿಂದ ಜಾರಿದ ಕೌಸಲ್ಯೆಯಿದ್ದ ಪೆಟ್ಟಿಗೆ ಬಲೆಯಲ್ಲಿ ಬೆಸ್ತರಿಗೆ ದೊರೆತು ವರುಣನ ವಶವಾಗುತ್ತದ. ಪೆಟ್ಟಿಗೆ ತೆರೆದಾಗ ಕೌಸಲ್ಯೆ ತನಗೊದಗಿದ ಅವಸ್ಥೆಗಳನ್ನು ತಿಳಿಸುತ್ತಾಳೆ. ವರುಣ ಕೌಸಲ್ಯೆಯನ್ನು ದಂಡಿಗೆಗೆ ಏರಿಸಿ ಅಯೋಧ್ಯೆಗೆ ತಂದು ದಶರಥನಿಗೆ ಒಪ್ಪಿಸುತ್ತಾನೆ.

ಮಗಧ ದೇಶದ ಚಂದ್ರಭೂಪಾಲ ತನ್ನ ಪುತ್ರಿಯಾದ ಸುಮಿತ್ರೆಗೆ ಸ್ವಯಂವರ ಏರ್ಪಡಿಸುತ್ತಾನೆ. ಸುಮಿತ್ರೆ ದಶರಥನ ಕೊರಳಿಗೆ ಮಾಲೆ ಹಾಕುತ್ತಾಳೆ. ವಧುವಿಗಾಗಿ ಸ್ವಯಂವರ ಕ್ಷೇತ್ರದಲ್ಲಿ ಭೂಪಾಲರ ನಡುವೆ ಕದನವಾಗುತ್ತದೆ. ಅಲ್ಲಿಗೆ ಪರಶುರಾಮನ ಆಗಮನವಾಗುತ್ತದೆ. ಭೂಪಾಲರನ್ನೆಲ್ಲ ಕತ್ತರಿಸುತ್ತ ನುಗ್ಗಿದ ಪರಶುರಾಮ ದಶರಥ ವಿವಾಹ ವಿಧಿಯಲ್ಲಿದ್ದುದರಿಂದ ಅವನನ್ನು ಬಿಟ್ಟು ಹಿಂದಿರುಗುತ್ತಾನೆ.

ದೇವೇಂದ್ರನಿಗೆ ಶಂಬರಾಸುರನಲ್ಲಿ ಪರಾಜಯವಾಗುತ್ತದೆ. ಬ್ರಹ್ಮನ ಸಲಹೆಯಂತೆ ಇಂದ್ರ ಖಳಬಾಧೆ ನಿವಾರಿಸಿಕೊಡುವಂತೆ ಬಿನ್ನವಿಸಿ ದಶರಥನಲ್ಲಿಗೆ ಚಾರರನ್ನು ಅಟ್ಟುತ್ತಾನೆ. ದಶರಥ ಕೈಕೇಯಿ ಸಹಿತನಾಗಿ ದೇವಲೋಕ ಸೇರಿ ಶಂಬರನನ್ನು ಹೊಡೆದಾಗ ಆತ ಕಾಲಕೇಯರ ಪುರಕ್ಕೆ ಪಲಾಯನ ಮಾಡುತ್ತಾನೆ. ಅಲ್ಲಿಗೂ ಹೋಗಿ ಯುದ್ಧ ಮುಂದುವರಿಸಿದಾಗ, ರಕ್ಕಸರು ಮಾಯೆಯ ಅಂಧಕಾರ ಕವಿಸಿದಾಗ, ಅರುಣನ ಮಗನಾದ ಸಂಪಾತಿ ತನ್ನ ಬಲದ ರೆಕ್ಕೆಯೆತ್ತಿ ಪ್ರಕಾಶ ಉಂಟು ಮಾಡಿ ದಶರಥನಿಗೆ ನೆರವಾಗುತ್ತಾನೆ.

ದಶರಥನ ತೇರಿನ ಗಾಲಿಯ ಕೀಲುಜಾರಿದಾಗ ಕೈಕೇಯಿಯು ತನ್ನ ಕೈಯ ಕಡಗಗಳನ್ನು ತೂರಿಸಿ ಯುದ್ಧ ಮುಂದುವರಿಯಲು ಸಹಾಯ ಮಾಡುತ್ತಾಳೆ. ಶಂಬರವಧೆಯಾದಾಗ ಸತಿಯ ಸಹಾಯವನ್ನು ಮನದುಂಬಿ ಮೆಚ್ಚಿ ದಶರಥ ಎರಡು ವರಗಳನ್ನು ನೀಡುತ್ತಾನೆ. ತಾನು ಬೇಕಾದಾಗ ಅವುಗಳನ್ನು ಪಡೆದುಕೊಳ್ಳುವೆ ಎಂದು ಕೈಕೇಯಿ ಹೇಳುತ್ತಾಳೆ. ಇಂದ್ರ ದಶರಥ ಕೈಕೇಯಿಯರಿಗೆ ಪರಿಪರಿಯ ಉಪಚಾರವಿತ್ತು ಬೀಳ್ಗೊಡುತ್ತಾನೆ.

ಗ್ರಂಥಪಾಠ : ಪ್ರಕೃತ ಜನಜನಿತವಾದ ಪ್ರಸಂಗಗಳ ಪಾಠವನ್ನೆ ಸಂಪಾದನೆಯಲ್ಲಿ ಗಮನಿಸಲಾಗಿದೆ. ಮುಖ್ಯವಾಗಿ ಪಾವಂಜೆ ಗುರುರಾವ್ ಅಂಡ್ ಸನ್ಸ್ ಇವರ ಶ್ರೀಮನ್ಮಧ್ವಸಿದ್ಧಾಂತ ಗ್ರಂಥಾಲಯದಿಂದ ಪ್ರಕಟವಾದ ಪ್ರಸಂಗಗಳು, ವಿದ್ವಾಂಸ ಕುಕ್ಕಿಲ ಕೃಷ್ಣಭಟ್ಟರು ಸಂಪಾದಿಸಿದ ಪಾರ್ತಿಸುಬ್ಬನ ಯಕ್ಷಗಾನಗಳು, ಮಂಗಳೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ ಡಾ|| ವಿವೇಕ ರೈ ಅವರ ಸಂಪಾದಕತ್ವದಲ್ಲಿ ಹೊರತಂದ ಯಕ್ಷಗಾನ ಪ್ರಸಂಗ ಸಂಪುಟ ಮತ್ತು ಶ್ರೀ ಎಚ್. ಬಿ. ಎಲ್. ರಾವ್ ಅವರ ನೇತೃತ್ವದ ಮುಂಬಯಿಯ ಪದವೀಧರ ಯಕ್ಷಗಾನ ಸಮಿತಿ ಹೊರತಂದ ಪ್ರಸಂಗ ಸಂಪುಟಗಳಿಂದ ಈ ಪ್ರಸಂಗಗಳ ಪಾಠವನ್ನು ಸ್ವೀಕರಿಸಿದೆ. ಕೆಲವೆಡೆ ಸ್ಖಾಲಿತ್ಯ, ತ್ರುಟಿತತೆ ಆದಲ್ಲಿ ಆವರಣದೊಳಗೆ ಪಾದಪೂರಣವನ್ನು ಮಾಡಿದೆ, ಕೆಲವೆಡೆ ಮೂಲದಲ್ಲಿ ಕಾಣಿಸದ ರಾಗ ಸೂಚನೆಯನ್ನು ಛಂದಸ್ಸು, ತಾಳಗತಿಯ ಆಧಾರದಲ್ಲಿ ಸೂಚಿಸಿದೆ. ಇಲ್ಲಿನ ಪ್ರಸಂಗಗಳಲ್ಲಿ ಬರುವ ಚೌತಾಳ ಎಂಬ ಹೆಸರಿನ ತಾಳವು ೧೬ ಅಕ್ಷರಗಳ ೬+೪+೬ ವಿಭಜನೆಯೆಂದು ಒಂದು ಪಕ್ಷವೂ ೪ + ೪ + ೮ (ವಿಲೋಮ ಆದಿತಾಳ – ಝೊಂಪಟ) ಎಂದು ಇನ್ನೊಂದು ಪಕ್ಷವೂ ಇದೆ. ಎರಡನ್ನೂ ಸಮರ್ಥಿಸುವ ಹಾಗೆ ಜಾಗಟೆ ಪೆಟ್ಟುಗಳಿವೆ. ಕೆಲವು ಪಾಠಾಂತರಗಳನ್ನು ಆವರಣದ ಒಳಗೆ ಕೊಟ್ಟಿದೆ.

ಮುದ್ರಿತ ಪ್ರತಿಯಲ್ಲಿ ಕೊಡುವಾಗ ಪದಗಳನ್ನು ಬಿಡಿಯಾಗಿ, ಕನ್ನಡ ಪದ್ಯಗಳನ್ನು ನೀಡುವ ಪದ್ಧತಿಯನ್ನು ಅನುಸರಿಸಲಾಗಿದೆ. ಆದರೆ ಯಕ್ಷಗಾನ ಪದದ ಸಾಲುಗಳ ಶಿಸ್ತಿಗೆ ಭಂಗಬರಬಾರದೆಂಬ ಎಚ್ಚರಿಕೆಯನ್ನು ವಹಿಸಿದೆ. ಮುಖ್ಯವಾಗಿ ಓದು ಸುಗಮವೂ, ನಿರಾತಂಕವೂ ಆಗಬೇಕು, ಮುದ್ರಿತ ಹಾಳೆಯ ಒಪ್ಪ ಓರಣಕ್ಕೆ ತೊಂದರೆ ಆಗಬಾರದೆಂಬ ಕಾಳಜಿ ಇಲ್ಲಿದೆ.

ಡಾ|| ಕೆ. ಎಂ. ರಾಘವ ನಂಬಿಯಾರ್
ಸಂಪಾದಕರು