ಕರ್ನಾಟಕ ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಶ್ಲಾಘ್ಯ ಉಪಕ್ರಮವಾದ ಜಾನಪದ ಸಂಪುಟ ಸರಣಿ ಯೋಜನೆಯಡಿ ಸಿದ್ಧಪಡಿಸಲಾದ ಹತ್ತು ಯಕ್ಷಗಾನ ಸಂಪುಟಗಳಲ್ಲಿ ಪ್ರಸ್ತುತ ಸಂಪುಟವೂ ಒಂದು.  ಈ ಸಂಪುಟದ ಸಂಪಾದಕನ ನೆಲೆಯಲ್ಲಿ ಕೆಲವು ಮಾತುಗಳು.

ಇಲ್ಲಿ, ಅಜಪುರ (ಬ್ರಹ್ಮಾವರ) ವಿಷ್ಣುಕವಿಯ ವಿರಾಟಪರ್ವ, ದೇವಿದಾಸನ ಕೃಷ್ಣ ಸಂಧಾನ – ಭೀಷ್ಮಪರ್ವ, ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ಭೀಷ್ಮಾರ್ಜುನ, ದೇವಿದಾಸನ ಅಭಿಮನ್ಯು ಕಾಳಗ-ಸೈಂಧವ ವಧೆ, ಉಡುಪಿ ರಾಜಗೋಪಾಲಾಚಾರ್ಯ ರಚಿತ ದ್ರೋಣಪರ್ವ, ಪಾಂಡೇಶ್ವರ ವೆಂಕಟ ಕವಿಯ ಕರ್ಣಾರ್ಜುನ, ಗೆರೆಸೊಪ್ಪೆ ಶಾಂತಪ್ಪಯ್ಯನ ಕರ್ಣಪರ್ವ, ಅಜ್ಞಾತ ಕವಿ ವಿರಚಿತ ಗದಾಪರ್ವ ಮತ್ತು ಕೆ.ಪಿ. ವೆಂಕಟಪ್ಪಶೆಟ್ಟರ ಸಾಹಸಭೀಮ ವಿಜಯ-ಹೀಗೆ ಒಂಬತ್ತು ಯಕ್ಷಗಾನ ಪ್ರಸಂಗಗಳು ಸಂಕಲಿತವಾಗಿದ್ದು, ಮಹಾಭಾರತ ಕಥೆಯ ವಿರಾಟಪರ್ವ, ಉದ್ಯೋಗ ಪರ್ವ ಮತ್ತು ಯುದ್ಧ ಪಂಚಕದ ಕಥಾವಸ್ತುಗಳನ್ನು ಒಳಗೊಂಡಿವೆ.  ಇವೆಲ್ಲವೂ ಯಕ್ಷಗಾನ ಕ್ಷೇತ್ರದಲ್ಲಿ ಪ್ರಸಿದ್ಧವಾದ ಕೃತಿಗಳಾಗಿದ್ದು, ರಂಗದಲ್ಲಿ ಅಸಂಖ್ಯ ಪ್ರದರ್ಶನಗಳ ಮೂಲಕ  ಜನಪ್ರಿಯವಾಗಿವೆ.  ಈ ಪೈಕಿ ಒಂದೆರಡನ್ನು ಬಿಟ್ಟರೆ, ಉಳಿದೆಲ್ಲ ಪ್ರಸಂಗಗಳು ಕಲಾವಿದರಿಗೆ, ಬಳಕೆಯ ಬಾಯಿಪಾಠ ಪ್ರಸಂಗಗಳಾಗಿವೆ.

ಯಕ್ಷಗಾನ ಸಾಹಿತ್ಯ :

ಕನ್ನಡ ಸಾಹಿತ್ಯದ ಒಂದು ವಿಶಿಷ್ಟವಾದ ಮತ್ತು ಸಮೃದ್ಧವಾದ ವಿಭಾಗ ಯಕ್ಷಗಾನ ಸಾಹಿತ್ಯ. ಇದು ಮೂರು ವಿಧ.

ವಿವಿಧ ಕಥೆಗಳನ್ನು ಹಾಡುಗಬ್ಬಗಳಾಗಿ ನಿರೂಪಿಸುವ ಯಕ್ಷಗಾನಗಳು ಅರ್ಥಾತ್ ಪ್ರಸಂಗ ಕಾವ್ಯ ಸಾಹಿತ್ಯವೊಂದು. ಈ ಕೃತಿಗಳ ಸ್ಥೂಲವಾದ ಆಧಾರದಲ್ಲಿ ರಂಗದಲ್ಲಿ ನಿರ್ಮಿತವಾಗುವ ಅರ್ಥಗಾರಿಕೆಯೆಂಬ ವಾಚಿಕಾಭಿನಯ ಸಾಹಿತ್ಯವೊಂದು. ಯಕ್ಷಗಾನಕ್ಕೆ ಸಂಬಂಧಿಸಿದ ಸಂಶೋಧನೆ, ವಿಮರ್ಶೆಗಳುಳ್ಳ ಯಕ್ಷಗಾನ ವಿಮರ್ಶಾ ಸಾಹಿತ್ಯಭಾಗ ಇನ್ನೊಂದು, ಹೀಗೆ ಮೂರು ಪ್ರಕಾರ.  ಈ ಮೂರು ಪ್ರಕಾರಗಳು ಗಾತ್ರದಲ್ಲೂ, ಗುಣದಲ್ಲೂ ಸಮೃದ್ಧವಾಗಿದ್ದು, ಉನ್ನತ ವಾಙ್ಮಯ ಸಿದ್ಧಿಗಳಾಗಿ ಮಹತ್ತ್ವದ್ದಾಗಿವೆ.

ಪ್ರಕಟಿತ, ಅಪ್ರಕಟಿತ ಯಕ್ಷಗಾನ ಪ್ರಸಂಗಗಳ ಒಟ್ಟು ಸಂಖ್ಯೆ ಎರಡು ಸಾವಿರದಷ್ಟಿದೆ. ಪ್ರತಿಯೊಂದು ಪ್ರಸಂಗದಲ್ಲಿ ಸರಾಸರಿ ಕನಿಷ್ಠ ಇನ್ನೂರ ಐವತ್ತು ಪದ್ಯಗಳಿವೆ ಎಂದಿಟ್ಟುಕೊಂಡರೂ, ಒಟ್ಟು ಐದು ಲಕ್ಷ ಪದ್ಯಗಳಷ್ಟು ಇದೆ ಕನ್ನಡದ ಯಕ್ಷಗಾನ ಪದ್ಯ ಸಾಹಿತ್ಯ ! ಈಗಲೂ ಈ ಸಂಖ್ಯೆ ವೇಗದಿಂದ ಬೆಳೆಯುತ್ತಿದ್ದು, ದೊಡ್ಡ ಸಂಖ್ಯೆಯಲ್ಲಿ ಪ್ರಸಂಗಗಳ ರಚನೆ ಆಗುತ್ತಿದೆ.  ಈ ಪ್ರಸಂಗಗಳ ಕಥೆ , ಕಥಾ ವಸ್ತುಗಳ ವ್ಯಾಪ್ತಿಯೂ ದೊಡ್ಡದು, ಪೌರಾಣಿಕ, ಜಾನಪದೀಯ, ಕಾಲ್ಪನಿಕ, ಐತಿಹಾಸಿಕ, ಕಾದಂಬರಿ ಆಧಾರಿತ, ಅಣಕ, ಸಾಂಕೇತಿಕ ಚಲನಚಿತ್ರ ಆಧಾರಿತ, ಸಮಕಾಲೀನ – ಹೀಗೆ ಹಲವು ವಸ್ತುಗಳು, ಹಲವು ಬಣ್ಣ ಬೆಡಗುಗಳಿಂದ ಕೂಡಿ ಪ್ರಸಂಗಗಳಾಗಿ ಬಂದಿವೆ.  ಸಾಕಷ್ಟು  ಗಟ್ಟಿಕಾಳೂ, ಬೇಕಷ್ಟು ಜೊಳ್ಳೂ ಇವೆ. ಎಂತಿದ್ದರೂ ಜೀವಂತಿಕೆ, ವಿಪುಲತೆಗಳು ಆಶ್ಚರ್ಯಕರವಾಗಿವೆ.

ಯಕ್ಷಗಾನ ಪ್ರದರ್ಶನಗಳ ಅರ್ಥವೆಂಬ ಮಾತುಗಾರಿಕೆಯು, ಒಂದು ಅಸಾಧಾರಣ ಪ್ರಕಾರ. ಅದು ಸಾಧಿಸಿದ ವಿಸ್ತಾರವೂ, ಎತ್ತರವೂ,  ಯಾವುದೇ ಸಾಹಿತ್ಯ ವಾಙ್ಮಯ ಪ್ರಕಾರಗಳ ಪರಮೋಚ್ಚ ಸೃಜನಾತ್ಮಕ ಕೃತಿಗಳ ಜೊತೆ ಹೋಲಿಸಬಹುದಾದ ಅಂಶಗಳಿಂದ ಕೂಡಿದೆ. ಯಕ್ಷಗಾನದ ಮಾತು. ಕನ್ನಡಿಗರು ಹೆಮ್ಮೆಪಡುವ ಮಾತು. ವಿಮರ್ಶಾ ಪ್ರಕಾರದಲ್ಲೂ ಅನೇಕ ಗಣ್ಯ ಕೃತಿಗಳೂ, ಬರಹಗಳೂ ಬಂದಿದ್ದು ಕೃತಿಯ ವಿವಿಧ ಅಂಗೋಪಾಂಗಗಳ – ಸಂಗೀತ, ವೇಷ, ನೃತ್ಯ, ಮಾತು, ಪ್ರಸಂಗ, ರಂಗವಿಧಾನ, ಛಂದಸ್ಸು, ಸಂಘಟನೆ, ಮೊದಲಾದವುಗಳ –  ಬಿಡಿ ಯಾ ಇಡಿ ಪರಿಶೀಲನೆಯನ್ನು ಸಮರ್ಥವಾಗಿ ನಡೆಸಿವೆ.

ಯಕ್ಷಗಾನಯಕ್ಷಗಾನ ಪ್ರಸಂಗ :

ಯಕ್ಷಗಾನವೆಂಬುದು ಈಗ ನಾವು ಬಳಸುವಂತೆ, ಒಟ್ಟು  ಒಂದು ಕಲೆಯ, ರಂಗಭೂಮಿಯ ಹೆಸರು. ಆದರೆ ಮೂಲತಃ ಇದೊಂದು ಸಾಹಿತ್ಯ ಪ್ರಕಾರದ  ಹೆಸರು.  ತೆಲುಗು, ಕನ್ನಡ, ತಮಿಳು, ಮಲಯಾಳಂ, ಮರಾಠಿ ಭಾಷೆಗಳಲ್ಲಿ ಈ ಪ್ರಕಾರ ಇದ್ದು, ತೆಲುಗು, ಕನ್ನಡ, ತಮಿಳುಗಳ ಯಕ್ಷಗಾನ ರಚನೆಗಳು ಸುಮಾರಾಗಿ ಒಂದೇ ತೆರನಾಗಿವೆ.  ಯಕ್ಷಗಾನವೆಂದೇ ಈ ಪ್ರಕಾರಕ್ಕೆ ಮೂರೂ ಭಾಷೆಗಳಲ್ಲಿ ಹೆಸರು. ಈ ಸಾಹಿತ್ಯ ಕೃತಿಗಳನ್ನು ಆಧರಿಸಿ ನಡೆಯುವ ಪ್ರದರ್ಶನಕ್ಕೆ ಆಟ, ಬಯಲಾಟ, ದಶಾವತಾರ ಆಟ, ಕೇಳಿಕೆ, ಕಲಾಪ ನಾಟಕಂ, ಕೂತ್ತು, ಭಾಗವತಂ, ಭಾಗವತರಾಟ, ಭಾಗವತ ಮೇಳ ಮೊದಲಾದ ಬೇರೆ ಬೇರೆ ಹೆಸರುಗಳು. ಯಕ್ಷಗಾನವೆಂಬುದು ಸಾಹಿತ್ಯ ಪ್ರಕಾರದ ಹೆಸರೆಂಬುದಕ್ಕೆ – ಯಕ್ಷಗಾನ ವ ರಚಿಪೆ, ಯಕ್ಷಗಾನದಿ ಪೇಳ್ವೆ ಎಂಬ ಕವಿಗಳ ಮಾತುಗಳೂ, ಯಕ್ಷಗಾನ ಕೃಷ್ಣಸಂಧಾನ, ಯಕ್ಷಗಾನ ಗಿರಿಜಾಕಲ್ಯಾಣ – ಮೊದಲಾಗಿರುವ ಕೃತಿಗಳ ಹೆಸರುಗಳೂ ದೃಷ್ಟಾಂತ. ಇರಲಿ, ಅಂತೂ – ಸಾಹಿತ್ಯ ಪ್ರಕಾರದ ಹೆಸರೇ, ರಂಗದ ಹೆಸರಾಗಿ ರೂಢಿಗೆ ಬಂದಾಗ, ಸಾಹಿತ್ಯ ಕೃತಿಗಳಿಗೆ ಯಕ್ಷಗಾನ ಪ್ರಸಂಗ ಎಂಬ ಹೆಸರು ಬಳಕೆಯಾಯಿತು. ಪ್ರಸಂಗ ಎಂಬುದನ್ನೆ ಕಥಾ ಪ್ರಸಂಗ, ಆಖ್ಯಾನ, ಎಂದೂ ಕೆಲವೆಡೆ ಹೇಳುತ್ತಾರೆ.  ಈಗ ಈ ಬಗೆಯ, ಪದ-ಪದ್ಯಮಯವಾದ ರಚನೆಗಳಿಗೆ ಪ್ರಸಂಗವೆಂಬ ನಾಮಧೇಯವೆ ವ್ಯಾಪಕವಾಗಿ ಸ್ವೀಕೃತವಾಗಿದೆ.

ಯಕ್ಷಗಾನ (ಆಟ ಮತ್ತು ಅದರ ಸಾಹಿತ್ಯ)ಕ್ಕೆ ಕನ್ನಡದಲ್ಲಿ ಆರೇಳು ಶತಮಾನಗಳ ಇತಿಹಾಸವಿದೆ.  ಯಶೋಧರ ಚರಿತೆಯಲ್ಲಿ ಬರುವ ಕೇಳಿಕೆ ಯ ಪ್ರಸ್ತಾವ (ಉಲ್ಲೇಖ : ಕುಕ್ಕಿಲ ಕೃಷ್ಣಭಟ್ಟರು : ಕುಕ್ಕಿಲ ಸಂಪುಟ) ವೇ ಈ ಪೈಕಿ ಪ್ರಾಚೀನ.  ಕೇಳಿಕೆಯು ನಾವೆನ್ನುವ ಆಟ, ಅಥವಾ ಈಗಿನ ರೂಢಿಯ ಯಕ್ಷಗಾನ ಪ್ರದರ್ಶನ. ೧೫೦೦ರ ಸುಮಾರಿಗೆ ಬಿಜಾಪುರದ ಆದಿಲ್ ಶಾಹಿ ಆಸ್ಥಾನಕ್ಕೆ ಶಿರಸಿ ಸೋದೆಯ ಯಕ್ಷಗಾನ ಮೇಳವು ಭೇಟಿನೀಡಿತ್ತೆನ್ನುವ ವಿಚಾರ (ಡಾ. ಜಿ.ಎಸ್. ಭಟ್ ಮೈಸೂರು ಇವರ  ಮಾಹಿತಿ), ಪುರಂದರದಾಸರು (ಸು. ಕ್ರಿ.೧೫೫೦) ರಚಿಸಿದ ಅನಸೂಯಾ ಚರಿತ್ರೆ ಯಕ್ಷಗಾನ, ಇವುಗಳಿಂದ ಆಗಲೇ ಈ ಪ್ರಕಾರ ಪ್ರಸಿದ್ಧವಾಗಿದ್ದುದು ಖಚಿತ. ಯಕ್ಷಗಾನಗಳ ಮೊದಲ ಪ್ರಮುಖ ಕವಿ ಪಾರ್ತಿಸುಬ್ಬ (ಸು.ಕ್ರಿ. ೧೬೦೦) ನು ಸಮಗ್ರ ರಾಮಾಯಣವನ್ನು ಯಕ್ಷಗಾನ ರೂಪದಲ್ಲಿ ಬರೆಯಬೇಕಿದ್ದರೆ, ಆ ಪ್ರಕಾರವು ಆಗಲೇ ಸ್ಥಾಪಿತ ಪ್ರಕಾರವಾಗಿತ್ತೆಂಬುದೂ ಸ್ಪಷ್ಟ.

ಯಕ್ಷಗಾನವೂ, ತತ್ಸಮಾನವಾದ ಇತರ ಹಲವು ಭಾಷೆಗಳ ಪೌರಾಣಿಕ ಕಥನ ಕಾವ್ಯಗಳೂ ಸುಮಾರು ಹದಿನೆರಡನೆಯ ಶತಮಾನದಿಂದ ಉತ್ಕರ್ಷಕ್ಕೆ ಬಂದ ವೈಷ್ಣವ ಭಕ್ತಿ ಸಂಪ್ರದಾಯದ ಫಲಿತಗಳು,  ಸಾಧನಗಳು. ಯಕ್ಷ್ – ಪೂಜಾಯಾಂ ಎಂಬುದರಿಂದ, ಇವು ದೇವಾಲಯಗಳಲ್ಲಿ ಬಳಕೆಗಿದ್ದ ಪೂಜಾ ಪ್ರಬಂಧಗಳು.  ಇವು ಬಹುಶಃ ಮೊದಲು ವಾಚನ, ಗಾಯನಗಳಿಗಾಗಿ ರಚಿತವಾದ ಸೇವಾ ಪ್ರಬಂಧಗಳು. ಇವುಗಳಲ್ಲಿ ನಾಟಕೀಯತೆ ಇದ್ದರೂ, ರಚನಾ ಸ್ವರೂಪ ಕಥನವೇ. ಅಂದಿನಿಂದ ಇಂದಿನವರೆಗೂ ಯಕ್ಷಗಾನಗಳು ( ಎಂದರೆ ಪ್ರಸಂಗಗಳು) ಇರುವುದು, ಕಥೆಯನ್ನು ಮೂರನೆಯವನ (ಅಂದರೆ ಪ್ರಥಮ ಪುರುಷ) ನಿರೂಪಣೆಯಾಗಿ ಹೊರತು, ನಾಟಕ ಕೃತಿಯಾಗಿ ಅಲ್ಲ. ಕಾಲಕ್ರಮದಲ್ಲಿ ಇವು ಪ್ರದರ್ಶನಗಳಿಗೆ ಅಳವಡಿಸಲ್ಪಟ್ಟವು.  ಆ ಬಳಿಕ ಅದಕ್ಕಾಗಿಯೆ ರಚಿತವಾಗಲಾರಂಭಿಸಿದುವು.

ಈ ಪ್ರಸಂಗಗಳಲ್ಲಿ ಕಂದ, ಭಾಮಿನಿ, ವಾರ್ಧಕ ಮೊದಲಾದ ಪದ್ಯ ಜಾತಿಗಳೂ, ಹಲವು ವೃತ್ತ ಜಾತಿಗಳೂ, ಸಾಂಗತ್ಯಗಳೂ ಅನೇಕ ವಿಧದ ಪದ್ಯ ಜಾತಿಗಳೂ ಸೇರಿರುತ್ತವೆ.  ವೃತ್ತ, ಕಂದ, ಷಟ್ಪದಿಗಳು, ವಿತಾಲಗಾನಕ್ಕೂ, ಪದಗಳೆಂಬ ಹಾಡುಗಳು ಸತಾಲವಾಗಿಯೂ ಪ್ರಯೋಗವಾಗುವುವು.  ಈ ಕನ್ನಡ ಯಕ್ಷಗಾನ ಪ್ರಸಂಗಗಳಲ್ಲಿ ಸುಮಾರು ಇನ್ನೂರರಷ್ಟು ವಿವಿಧ ಛಂದೋ ಬಂಧಗಳೂ, ಐನೂರರಷ್ಟು ಹಾಡುವ ಮಟ್ಟುಗಳೂ*  ಇವೆಯೆಂದು ಸಂಶೋಧಕರು ಗುರುತಿಸಿದ್ದಾರೆ. (ಡಾ. ಎನ್. ನಾರಾಯಣಶೆಟ್ಟಿ, ಡಾ. ಕಬ್ಬಿನಾಲೆ ವಸಂತಭಾರಧ್ವಾಜ, ಶ್ರೀ ಹೊಸ್ತೋಟ ಮಂಜುನಾಥ ಭಾಗವತ ಇವರ ಶೋಧನೆಗಳು) ಯಕ್ಷಗಾನಗಳು ಕನ್ನಡ ಛಂದಸ್ಸುಗಳ, ಮಟ್ಟುಗಳ ನಿಧಿಯಂತಿವೆ.  ಎರಡು ಪ್ರಾಸಗಳ ಚಿಕ್ಕ ಪದದಿಂದ ತೊಡಗಿ, ಹತ್ತಿಪ್ಪತ್ತು ಸಾಲುಗಳ ದೀರ್ಘವಾದ ಹಾಡುಗಳೂ ಇವೆ.  ಹೆಚ್ಚಿನ ಪ್ರಸಂಗಗಳು, ಸರಳವಾದ, ಪರಿಣಾಮಕಾರಿಯಾದ ಭಾಷೆಯಲ್ಲಿ ರಚಿತವಾಗಿವೆ.

ಈ ಪ್ರಸಂಗ ಕಾವ್ಯಗಳು ಪ್ರದರ್ಶನಕ್ಕೆ ಆಧಾರ. ಇವುಗಳ ಹಾಡುಗಳನ್ನು ಅನುಸರಿಸಿ ಆಟ (ವೇಷ ನೃತ್ಯಸಹಿತ) ಮತ್ತು ಕೂಟ (ಅರ್ಥಾತ್ ತಾಳಮದ್ದಳೆ ಎಂಬ ವೇಷರಹಿತ, ಬೈಠಕ್ ರೂಪದ ಪ್ರದರ್ಶನ) ಗಳು ಸಾಗುವುವು.  ಆಟದಲ್ಲಿ ಭಾಗವತನೆಂಬ ಹಾಡುಗಾರನು  ಪ್ರಸಂಗಗಳ ಪದ್ಯಗಳನ್ನು, ಚೆಂಡೆ ಮದ್ದಲೆಗಳೆಂಬ ವಾದ್ಯಗಳ ಹಿಮ್ಮೇಳದ ನೆರವಿನೊಂದಿಗೆ ಹಾಡುತ್ತಿದ್ದಂತೆ ನೃತ್ಯ ಅಭಿನಯಗಳು ಸಾಗುತ್ತವೆ.  ಪ್ರತಿ ಪದ್ಯದ ಬಳಿಕ, ಅದನ್ನಾಧರಿಸಿ ರಂಗದಲ್ಲಿ ಮಾತಿನ ನಾಟಕ ಪಾತ್ರಧಾರಿಗಳಿಂದ ಆಶುಭಾಷಣವಾಗಿ ರಚಿಸಲ್ಪಡುತ್ತದೆ.

ಪ್ರಸಂಗ ಗುಣ

ಯಕ್ಷಗಾನಗಳಲ್ಲಿರುವ ಕಥಾಭಾಗ ಮತ್ತು ಅದರ ರಚನಾ ರೂಪಕ್ಕೆ ಪ್ರಸಂಗ ಎಂದು ಹೆಸರು.  ಇದು ಸ್ವಾರಸ್ಯಕರ. ಪ್ರಸಂಗವೆಂದರೆ, ಸನ್ನಿವೇಶ, ಸಂದರ್ಭ, ಘಟನೆ ಎಂದು ಅರ್ಥವಷ್ಟೆ. ಯಾವುದೇ ರಂಗಭೂಮಿಯು ಆಯ್ದುಕೊಳ್ಳುವುದು ಒಂದು ವಿಶಿಷ್ಟ ಪ್ರಸಂಗವನ್ನು ಯಾ ಘಟನೆಯನ್ನು ಹೊರತು ವ್ಯಕ್ತಿಗಳ ಜೀವನ ಚರಿತ್ರೆಯನ್ನಲ್ಲ.  ಯಕ್ಷಗಾನ ಕವಿಗಳು ಒಂದು ವಿಶಿಷ್ಟ ಪ್ರಕರಣವನ್ನು (ಗಂಗೆ-ಗೌರಿ ಸಂವಾದ, ಗರುಡಗರ್ವ ಭಂಗ, ಸಮುದ್ರ ಮಥನ ಹೀಗೆ) ಇಡಿಯಾಗಿ ಒಂದು ಕಾವ್ಯವನ್ನು ಯಾ ಕಾವ್ಯಭಾಗವನ್ನು (ಉದಾ : ಕರ್ಣಪರ್ವ, ಕೃಷ್ಣಾರ್ಜುನ ಇತ್ಯಾದಿ) ಆರಿಸಿಕೊಳ್ಳುತ್ತಾರೆ.  ಇತ್ತೀಚೆಗೆ ವ್ಯಕ್ತಿಜೀವನ ಆಧಾರಿತ ಸಮಗ್ರ ಪ್ರಸಂಗಗಳೂ ರಚನೆಯಾಗಿವೆ ಉದಾ : ಭೌಮಾಸುರ, ಮಗಧೇಂದ್ರ, ಸಮಗ್ರರಾವಣ, ಕಡುಗಲಿ ಕೌರವ ಮೊದಲಾದುವು.

ಯಕ್ಷಗಾನ ಪ್ರಸಂಗವೆಂಬುದು ಹೇಗೆ ಇದ್ದರೆ ಚೆನ್ನು, ಅದರಲ್ಲಿ ಅಪೇಕ್ಷಿತವಾದ ಗುಣಗಳು ಯಾವುವು ಎಂಬುದನ್ನು ಒಂದಿಷ್ಟು ನೋಡಬಹುದು.  ಈ ಕುರಿತು ಎರಡು ಅಭಿಪ್ರಾಯಗಳನ್ನು ಇಲ್ಲಿ ಉದ್ಧರಿಸಿದೆ.

…… ಇವುಗಳೊಳಗೆ ತುಂಬಿದ ಜೀವಭಾವಗಳು ಹೇಗಿವೆ ಎಂಬುದೇ ಸಾಹಿತ್ಯಕ್ಕೆ ಸಂಬಂಧಪಡುವ ಮುಖ್ಯ ಪ್ರಶ್ನೆ.  ಅದನ್ನು ಚರ್ಚಿಸುವಾಗ ಒಂದು ವಿಷಯವನ್ನಂತು ಮರೆಯಲೇ ಕೂಡದು.  ಇವನ್ನು ಹೇಳಿದ ಕವಿಗಳು ಜಾನಪದ ಕವಿಗಳು. ಹೆಚ್ಚಾಗಿ ವಿದ್ವಾಂಸರಲ್ಲ.  ಆದರೂ ಲೋಕಾನುಭವ ಚೆನ್ನಾಗಿದ್ದು…. ತಮ್ಮಂತಿರುವ ಜನಸಾಮಾನ್ಯರಿಗಾಗಿ ಬರೆದರು.  ಜನರಿಗೆ ತಿಳಿಯುವಂಥ ಭಾಷೆಯಲ್ಲಿ ಬರೆದರು.  ಅದೇನೇ ಗೀತನಾಟಕಗಳಲ್ಲಿರಬೇಕಾದ ಮುಖ್ಯ ಗುಣ.  ಹಾಡುಗಬ್ಬಗಳಲ್ಲಿ ಒಮ್ಮೆ ಕೇಳಿದ ಮಾತ್ರಕ್ಕೆ ಅದು ಅರ್ಥವಾಗದೆ ಹೋದರೆ, ಹಾಡಿನ ಸೊಬಗೇ ವ್ಯರ್ಥವಾಗುತ್ತದೆ……. ವಿರಾಮದಲ್ಲಿ ಕುಳಿತು ಮೆಲುಕಾಡಿ ಆನಂದಿಸಬಹುದಾದ ಸಾಹಿತ್ಯದ ರೀತಿಯಾಗಲಿ, ಕಾವ್ಯ ಚಮತ್ಕಾರಗಳಾಗಲಿ ಗೀತನಾಟಕಗಳಿಗೆ ಒಪ್ಪಿದ್ದಲ್ಲ (ಶಿವರಾಮ ಕಾರಂತ, ಯಕ್ಷಗಾನ ಬಯಲಾಟ ೧೩೫-೧೩೬).

…… ಇದು ರಂಗಸಾಹಿತ್ಯವಾಗಿರುವುದರಿಂದ ಅದನ್ನು ನೋಡುವ, ವಿಶ್ಲೇಷಿಸುವ ದೃಷ್ಟಿಯಿಂದ ಕಾವ್ಯದಂತಹ ಸ್ವತಂತ್ರ ಸಾಹಿತ್ಯಪ್ರಕಾರಗಳನ್ನು ವಿವೇಚಿಸುವ ದೃಷ್ಟಿಯಿಂದ ಭಿನ್ನವಾಗಿರಬೇಕಾಗುತ್ತದೆ. ನಾಟಕ, ಗೀತನಾಟಕ, ನೃತ್ಯನಾಟಕ, ಕಥನಕವನ – ಈ ನಾಲ್ಕರ ಒಂದು ಪಾಕವೆಂಬಂತೆ ಪ್ರಸಂಗವು ರೂಪಿತವಾಗುತ್ತದೆ.  ಗೀತನಾಟಕ, ನೃತ್ಯನಾಟಕಗಳಿಗಿಂತ ಭಿನ್ನವಾದ ಆಯಾಮವೊಂದು ಪ್ರಸಂಗಕ್ಕಿದೆ.  ಪ್ರಸಂಗದ ಪದ್ಯಗಳಿಗೆ ಪಾತ್ರಧಾರಿಯು ಅರ್ಥವನ್ನು (ಅಂದರೆ ಮಾತುಗಳನ್ನು ತಾನೇ ರಚಿಸಿ, ಅಥವಾ ಮೂಡಲಪಾಯದಲ್ಲಿರುವಂತೆ ಸಿದ್ಧಪಡಿಸಿ ಬಾಯಿಪಾಠಮಾಡಿ) ಹೇಳುವುದಕ್ಕೆ ಇರುವುದರಿಂದ, ಪ್ರಸಂಗವು ಗೀತ ನೃತ್ಯಗಳಿಗಷ್ಟೆ ಅನುವು ಅವಕಾಶಗಳನ್ನು ಕಲ್ಪಿಸಿದರೆ ಸಾಲದು. ಅಷ್ಟನ್ನು ಒದಗಿಸುವುದರ ಜತೆಗೆಯೆ ಅದು ಅರ್ಥಗಾರಿಕೆಗೆ ದ್ರವ್ಯವನ್ನು ಒದಗಿಸಬೇಕು. (ಎಂ. ಪ್ರಭಾಕರ ಜೋಶಿ, ಕೇದಗೆ, ೧೯೮೬ : ೨೯)

ಗೇಯಪ್ರಬಂಧಗಳಾದ ಯಕ್ಷಗಾನ ಪ್ರಸಂಗಗಳಲ್ಲಿ – ಸ್ವಾರಸ್ಯಪೂರ್ಣ ಸರಳತೆ, ಗಾನ ನೃತ್ಯಗಳಿಗೆ ಆನುಕೂಲ್ಯ, ಉಕ್ತಿ ಸೌಂದರ್ಯ, ಛಂದೋಬಂಧ, ತಾಳಗಳ ಔಚಿತ್ಯ ಪೂರ್ಣ ವೈವಿಧ್ಯ, ಪಾತ್ರ ಪ್ರವೇಶ, ಸಂವಾದಗಳಿಗೆ ಒದಗುವ ರಚನೆ, ಯಕ್ಷಗಾನದ ಪಾತ್ರ ವೈವಿಧ್ಯಕ್ಕೆ ಆಸ್ಪದ, ಯೋಗ್ಯ ಆಶಯ ವಸ್ತು , ಹದವಾದ ವೇಗ, ನಾಟಕೀಯಗುಣ, ಅರ್ಥಗಾರಿಕೆಗೆ ಇಂಬು ನೀಡುವ ಅರ್ಥಪ್ರಸವಕ್ಷಮತೆ, ಒಟ್ಟು ರಚನೆಯ ಅಚ್ಚುಕಟ್ಟುತನ, ರಂಗಾನುಕೂಲ್ಯ – ಇವುಗಳು ನಿರೀಕ್ಷಿತ. ಈ ಪೈಕಿ ಹೆಚ್ಚಿನವು ಇದ್ದರೆ – (ಅಂದರೆ ಎಲ್ಲವೂ ಸಂಭಾವ್ಯವಲ್ಲ. ಕೆಲವು, ಕತೆಗಳ ಕಾರಣದಿಂದಲೂ ನಿರೀಕ್ಷಿತವಲ್ಲ) – ಆ ಪ್ರಸಂಗವು ಯಶಸ್ವಿ ಅನ್ನಬಹುದು.  ನಮ್ಮ ಅನೇಕ ಪ್ರಸಂಗಗಳಲ್ಲಿ ಈ ಗುಣಗಳನ್ನು ಕವಿಗಳು ಚೆನ್ನಾಗಿ ಅಳವಡಿಸಿ ಉಚ್ಚಮಟ್ಟದ ಗೀತ ಪ್ರಬಂಧಗಳನ್ನು ರಚಿಸಿದ್ದಾರೆ.  ಹಲವು ಬಗೆಯ ಪ್ರಾಯೋಗಿಕತೆಗಳನ್ನೂ ತೋರಿಸಿದ್ದಾರೆ.

ಪ್ರಸಕ್ತ ಸಂಪುಟದಲ್ಲಿ ಅಳವಟ್ಟಿರುವ ಪ್ರಸಂಗಗಳಲ್ಲಿ ಇಂತಹ ಹಲವು ಅಂಶಗಳನ್ನು ಕಾಣುತ್ತೇವೆ.  ಆಧುನಿಕ ಯುಗದಲ್ಲಿ, ಅಂದರೆ ಸುಮಾರು, ಕ್ರಿ. ೧೯೫೦ರ ಬಳಿಕ ಯಕ್ಷಗಾನ ಪ್ರಸಂಗ ಸಾಹಿತ್ಯವು ಹೊಸ ಹೊಸ ದಾರಿಗಳಲ್ಲಿ ಸಾಗುತ್ತಿದ್ದು, ಶ್ರೇಷ್ಠವೆನ್ನಬಹುದಾದ ಅನೇಕ ಕೃತಿಗಳು ಈ ಯುಗದಲ್ಲೂ ರಚಿತವಾಗಿವೆ.  ಒಟ್ಟಿನಲ್ಲಿ ಯಕ್ಷಗಾನ ಪ್ರಸಂಗ ಸಾಹಿತ್ಯವು ಚಲನಶೀಲವೂ, ವಿಸ್ತಾರಮುಖಿಯೂ ಆಗಿ ಸಾಗಿಬಂದಿದೆ.

ಪ್ರಸ್ತುತ ಸಂಪುಟ

ಈಗ ಈ ಸಂಪುಟದಲ್ಲಿ ಸಂಕಲಿಕವಾದ ಒಂಬತ್ತು ಪ್ರಸಂಗಗಳ ಕಥೆ, ಕವಿ ಕಾವ್ಯ ವಿಚಾರಗಳನ್ನು ಸಂಕ್ಷಿಪ್ತ ದಿಗ್ದರ್ಶನ ಮಾತ್ರವಾಗಿ ನೋಡೋಣ.

. ವಿರಾಟ ಪರ್ವ : ಮಹಾಭಾರತದ ವಿರಾಟಪರ್ವದ ಕಥಾನಕವನ್ನು ಒಳಗೊಂಡ ಈ ಪ್ರಸಂಗವು ಬ್ರಹ್ಮಾವರದ ವಿಷ್ಣು ಕವಿಯದು.  ಕೃತಿಯ ಕೊನೆಯಲ್ಲಿ ಕವಿಯೆ.. ಪೆಸರ್ವಡೆದ ರಾಮಾತ್ಮಜಂ ವಿಷ್ಣುವೆಂಬಣುಗನು… ಎಂದು ಹೇಳಿ……. ಅಜಪುರವಾಸಂ ಈಶಂ ಗಜಚರ್ಮಾಂಬರನೆ ಹರನೆ ರಕ್ಷಿಸು ಎಮ್ಮಂ… ಎಂಬ ಸ್ತುತಿಸಿದ್ದಾನೆ. ಪ್ರಸಿದ್ಧಿಯಿಂದಲೂ ಇದು ಬ್ರಹ್ಮಾವರ ವಿಷ್ಣು ಕವಿಯದೆಂದೆ ಜನಶ್ರುತಿ. ಕವಿಯನ್ನು ವಿಷ್ಣು ಭಾಗವತನೆಂದು ಪ್ರಕಾಶಕರಾದ ಪಾವಂಜೆ ಗುರುರಾಯರು ಉಲ್ಲೇಖಿಸಿರುವುದರಿಂದ ಕವಿಯು ಯಕ್ಷಗಾನ ಭಾಗವತನಾಗಿರಬಹುದು.

ಪ್ರಸಂಗದಲ್ಲಿ ಎರಡು ಸಂಧಿಗಳಿವೆ – ಕೀಚಕವಧೆ ಮತ್ತು ಉತ್ತರ ಗೋಗ್ರಹಣ. ರಚನೆಯು ಕಥಾಸರಣಿಯಲ್ಲೂ, ಪದ ಪ್ರಯೋಗಗಳಲ್ಲೂ ಕುಮಾರವ್ಯಾಸ ಭಾರತದ ವಿರಾಟ ಪರ್ವವನ್ನು ಅನುಸರಿಸಿದೆ. ಈ ಕವಿಯ ಕಾಲವು ಸು. ಕ್ರಿ. ೧೮೦೦.

ಕಥಾಸಾರ : ಸ್ತುತಿ. ವನವಾಸದ ಅವಧಿ ಮುಗಿದು ಪಾಂಡವರು ತಮ್ಮೊಳಗೆ ಸಮಾಲೋಚಿಸಿ, ಆಯುಧಗಳನ್ನು ಬನ್ನಿ ಮರದಲ್ಲಿಟ್ಟು ಮಾರುವೇಷಗಳಿಂದ ವಿರಾಟನಗರವನ್ನು ಪ್ರವೇಶಿಸಿ ವಿವಿಧ ಉದ್ಯೋಗಗಳಲ್ಲಿ ನೇಮಿತರಾಗುವರು.  ಅಲ್ಲಿ ವಿರಾಟನ ರಾಣಿಯ ಸೈರಂಧ್ರಿಯಾಗಿದ್ದ ದ್ರೌಪದಿಗೆ ವಿರಾಟನ ಭಾವನೆಂಟನಾದ ಕೀಚಕನ ಬಾಧೆ, ರಾಣಿಯ ಇಕ್ಕಟ್ಟು, ದ್ರೌಪದಿಯ ದುಃಖ, ಭೀಮನ ಸಮಾಧಾನ, ಉಪಾಯಾಂತರದಿಂದ ನಾಟ್ಯ ಮಂದಿರಕ್ಕೆ ಕೀಚಕನು ಬರುವಂತೆ ಮಾಡಿ ಆತನ ವಧೆ.

ಕೀಚಕನಿಂದ ದ್ರೌಪದಿಯ ವರ್ಣನೆ :

ಇವಳ್ಯಾವ ಲೋಕದ ಸತಿಯೋ | ಮತ್ತೀ |
ಯುವತಿಯ ಪಡೆದವಳೇನ್ ಪುಣ್ಯವತಿಯೋ |
ರತಿಯ ಸೌಂದರ‍್ಯವಂತಿರಲಿ | ಸುರ |
ಸತಿಯರ ಸೊಬಗು ತಾನಾಚೆಯೊಳಿರಲಿ |
ಪೃಥಿವಿಯೊಳಿನಿತು ರೂಪಿಲ್ಲ | ದ್ರುಪದ |
ಸುತೆಯ ಕಂಡರಿವೆ ಪರಿಯಂದವೆಲ್ಲ    || ||

ಹಂತದ ಮೂರು ಪದ್ಯಗಳು, ಸಹಜ ಸರಳ ಸುಂದರ ಗೀತರಚನೆಯ ಮಾದರಿಗಳಂತಿದ್ದು ಯಕ್ಷಗಾನದ ಉತ್ತಮ ಪದ್ಯಗಳಲ್ಲಿ ಗಣನೆಗೆ ಬರುತ್ತವೆ.

ವೇಷಧಾರಿಯಾಗಿ ಮಲಗಿದ್ದ ಭೀಮನು ಕೀಚಕನಿಗೊರೆದ ನುಡಿ :

ಉಳಿದ ನಾರಿಯರಂದ | ವಲ್ಲೆನ್ನ ಬಗೆ ಬೇರೆ
ಇಳೆಯೊಳೆನಗೆ ಸೋ | ಲದವರಿಲ್ಲ ನರರು ||       ||೧||

. ಕೃಷ್ಣ ಸಂಧಾನ (ಭೀಷ್ಮಪರ್ವ ಸಹಿತ) : ಕವಿ ದಾಸ ಅಥವಾ ದೇವಿದಾಸನಿಂದ ರಚಿತವಾದ ಈ ಪ್ರಸಂಗವು ಯಕ್ಷಗಾನದ ಅತ್ಯಂತ ಪ್ರಸಿದ್ಧ ಪ್ರಸಂಗಗಳಲ್ಲಿ ಒಂದು. ಮಹಾಭಾರತದ ಉದ್ಯೋಗ ಪರ್ವ ಮತ್ತು ಭೀಷ್ಮಪರ್ವಗಳನ್ನು ಒಳಗೊಂಡ  ಆಖ್ಯಾನ. ಕೃಷ್ಣ ಸಂಧಾನವು ವಿಸ್ತೃತ ಪ್ರಸಂಗ, ಭೀಷ್ಮಪರ್ವವು ಅದರ ಅನುಬಂಧದಂತಿರುವ ಸಂಕ್ಷಿಪ್ತ ಪ್ರಸಂಗ. ಕವಿಯು ಇಲ್ಲಿ ಎರಡು ಬಗೆಯ ಪ್ರಸಂಗಗಳ ರಚನೆಯ ಒಂದು ಪ್ರಯೋಗವನ್ನು ಪ್ರಸ್ತುತಪಡಿಸಿರುವಂತಿದೆ.

ಈ ಕೃತಿಯ ಕವಿ ದೇವಿದಾಸನ ಕಾಲ ಸು.ಕ್ರಿ.೧೮೦೦ (ಪ್ರಸಂಗದ ವಿಸ್ತೃತ ಅಧ್ಯಯನ : ಕೃಷ್ಣಸಂಧಾನ ಪ್ರಸಂಗ ಮತ್ತು ಪ್ರಯೋಗ : ಮಹಾಪ್ರಬಂಧ, ಎಂ. ಪ್ರಭಾಕರ ಜೋಶಿ ೧೯೯೯) ಈತನು ದೇವೀ ಮಹಾತ್ಮೆ, ಗಿರಿಜಾಕಲ್ಯಾಣ, ಚಿತ್ರಸೇನಕಾಳಗ, ದ್ರೌಪದೀ ಕಲ್ಯಾಣ ಮತ್ತು ಅಭಿಮನ್ಯು ಕಾಳಗ ( ಈ ಸಂಪುಟದಲ್ಲಿ ಸೇರಿದೆ) ಗಳನ್ನೂ ಬರೆದಿದ್ದು ಯಕ್ಷಗಾನದ ಓರ್ವ ಪ್ರಮುಖ ಕವಿಯೆನಿಸಿದ್ದಾನೆ.

ಈ ಕೃತಿಯು ಕುಮಾರವ್ಯಾಸಭಾರತದ ಉದ್ಯೋಗಪರ್ವ, ಭೀಷ್ಮಪರ್ವಗಳ ಸರಳೀಕೃತ ಸಂಕ್ಷಿಪ್ತ ಪ್ರಸಂಗೀಕರಣ.  ಪರಮ ದೇವ ಕವಿಯ ತುರಂಗ ಭಾರತ (೧೭೭೮) ದ ಪ್ರಭಾವವೂ ಇದ್ದಂತಿದೆ.

ಈ ಪ್ರಸಂಗವು ಆಟ, ಕೂಟಗರಳೆರಡರಲ್ಲೂ ಬಹುಕಾಲದಿಂದ ಪ್ರಯುಕ್ತವಾಗಿದ್ದರೂ, ಕೃಷ್ಣಸಂಧಾನ ಭಾಗವು ತಾಳಮದ್ದಳೆಗಳಲ್ಲೂ, ಭೀಷ್ಮಪರ್ವ ಭಾಗವು ಆಟಗಳಲ್ಲೂ ಹೆಚ್ಚು ಪ್ರಸಿದ್ಧ. ಕೃಷ್ಣಸಂಧಾನವು,  ನಿಸ್ಸಂದೇಹವಾಗಿಯೂ, ತಾಳಮದ್ದಳೆ  ಕಲಾರೂಪದ ಅತಿಮುಖ್ಯ ಆಖ್ಯಾನ. ಮಾತುಗಾರಿಕೆಯ ವಿವಿಧ ವಿನ್ಯಾಸಗಳಿಗೆ ಇದರಲ್ಲಿ ವಿಪುಲ ಅವಕಾಶಗಳಿದ್ದು, ಆರಂಭಿಕ ಅಧ್ಯಯನಕ್ಕೂ, ಪ್ರೌಢಿಮೆಗೂ ಈ ಪ್ರಸಂಗವು ಮೌಲಿಕ ಪ್ರಸಂಗಗಳಲ್ಲಿ ಒಂದೆನಿಸಿದೆ.

ಕೀಚಕ ವಧೆಯ ಸುದ್ದಿ ತಿಳಿದ ದುರ‍್ಯೋಧನನಿಂದ, ಸುಶರ‍್ಮಾದಿ ಸಂಶಪ್ತಕರ ನೆರವಿನಿಂದ ವಿರಾಟರಾಜನ ರಾಜ್ಯಕ್ಕೆ ಆಕ್ರಮಣ, ಗೋಗ್ರಹಣ. ಮಾರು ವೇಷದ ಭೀಮನಿಂದ ಸುಶರ‍್ಮನ ಸೋಲು. ಉತ್ತರ ದಿಕ್ಕಿನಲ್ಲಿ ಪುನಃ ಗೋವುಗಳ ಅಪಹಾರ. ಈ ಸುದ್ದಿ ತಿಳಿದ ವಿರಾಟಪುತ್ರ). ಉತ್ತರಕುಮಾರನಿಂದ ಪೌರುಷವಾಣಿ. ನಾಟ್ಯ ಗುರುವಾಗಿದ್ದ ಬೃಹನ್ನಳೆ (ಅರ್ಜುನ) ಉಪಾಯದಿಂದ, ಉತ್ತರನ ಸಾರಥಿಯಾಗಿ ಬಂದು ಆತನನ್ನು ರಣರಂಗಕ್ಕೊಯ್ಯುವುದು. ಉತ್ತರನ ಹೇಡಿತನ, ಅರ್ಜುನನಿಂದ ನಿಜಬೋಧೆ. ಆ ಬಳಿಕ ಯುದ್ಧದಲ್ಲಿ ಉತ್ತರನ ಸಾರಥ್ಯದಲ್ಲಿ ಯುದ್ಧ. ಅರ್ಜುನನಿಂದ ಕೌರವಸೇನೆಯ ಪರಾಭವ, ಗೋವಿಮೋಚನೆ, ಪಾಂಡವರಿಂದ ವಿರಾಟನಿಗೆ ನಿಜ ದರ್ಶನ. ಮಂಗಲ – ಇಷ್ಟು ಕಥಾಸಾರ.

ವಿರಾಟಪರ್ವ ಕಥಾನಕದ ಮೇಲೆ ಇರುವ ಪ್ರಸಂಗ ಬಹುಶಃ ಇದೊಂದೆ. ಯಕ್ಷಗಾನದ ಅತ್ಯುತ್ತಮ ಕೃತಿಗಳಲ್ಲಿ ಒಂದಾಗಿರುವ ಇದು, ಕುಮಾರವ್ಯಾಸನನ್ನು ಅನುಸರಿಸಿಯೂ, ತನ್ನದಾದ ಪುನಾರಚನೆಯ ಕ್ರಮದಲ್ಲಿದ್ದು ಉತ್ತಮ ಗೀತಗುಣವನ್ನು ಹೊಂದಿದೆ. ಹಲವು ಕವಿಗಳಂತೆ, ವಿರಾಟಪರ್ವದ ಕರ್ತೃವೂ, ಕುಮಾರವ್ಯಾಸನ ಪ್ರೌಢಕಾವ್ಯದ ಶೈಲಿಯನ್ನು ಸರಳೀಕರಿಸಿ, ಅದರ ಭಾವವನ್ನು  ಪ್ರಸಂಗೀಕರಿಸಿದುದು ಶ್ಲಾಘ್ಯವಾಗಿದೆ.  ಪದ್ಯ ಬಂಧಗಳಲ್ಲಿ ವೈವಿಧ್ಯವಿದೆ.  ಸಂಕೀರ್ಣತೆ ಅಥವಾ ಬೇಕೆಂದೇ ತಂದ ಕೃತಕತೆಗಳಿಲ್ಲ.  ಹಾಡುವಿಕೆಗೆ ಸಹಜವಾಗಿ ಹೊಂದುವ ಪದಗಳಿಂದ ತುಂಬಿದ ಈ ಕೃತಿ, ರಂಗದಲ್ಲಿ ಬಹಳ ಯಶಸ್ವಿಯಾಗಿರುವ, ಈಗಲೂ ಜನಪ್ರಿಯವಾಗಿರುವ ಪ್ರಸಂಗ.

ವಿಷ್ಣು ಕವಿಯ ಸರಳ ಕಾವ್ಯ ಸೌಂದರ್ಯಕ್ಕೆ ಕೆಲವು ಉದಾಹರಣೆಗಳು :

ಅಜ್ಞಾತ ಕಾಲದಲ್ಲಿ ಭೀಮನಿಗೆ ಆಯುಧಗಳನ್ನು ನೀಡದಿರಿ ಎಂದು ಧರ್ಮರಾಜನು ದೇವತೆಗಳಲ್ಲಿ ಪ್ರಾರ್ಥಿಸಿದಾಗ ಭೀಮನ ಕೋಪ

ಸೋದರರೊಳಗಾನಲ್ಲಾ | ದು | ರ‍್ಯೋಧನ ನಾನಾದೆನಲ್ಲಾ

ಸ್ವಭಾವೋಕ್ತಿಯ ಸರಳ ಸೌಂದರ್ಯಕ್ಕೆ ಕೆಲವು ಉದಾಹರಣೆ :

ಕೃಷ್ಣನು ಕೌರವನೊಡನೆ ಹೇಳುವ ಮಾತು –

ಅಡವಿಗಟ್ಟಿದರೇನು ಸಹಜಾತರೆಂದೆಂಬ |
ಒಡಲುರಿ ತಾನಡಗುವುದೆ |
ಕಡುಹಿತದಲಿ ನೀವನ್ಯೋನ್ಯರಾದರೆ ಬಲು |
ಬೆಡಗು ರಂಜಿಪುದು ರಾಜ್ಯದಲಿ ||

ಕೃಷ್ಣನು ಅರ್ಜುನ ಸಾರಥಿಯಾದ ಸಂದರ್ಭದಲ್ಲಿ ಕವಿಯ ನುಡಿ :

ಅರಸ ಕೇಳ್ ಬ್ರಹ್ಮಾಂಡ ಕೋಟಿಯ
ಧರಿಸಿ ಗರ್ಭದಿ ಮೆರೆವ ಚಿನ್ಮಯ
ನರಗೆ ಸಾರಥಿಯಾದ ಮೇಲುಳಿದವರ ಪಾಡೇನು ||
ಹರಹರಾ ಮನುಜಾತರಲಿ ಸಿತ
ತುರಗ ತಾನಿನ್ನೇಸು ಧನ್ಯನೊ
ಶರಣರಲಿ ಮಗುಳೆಂತು ದಯವೋ ಭಕ್ತವತ್ಸಲಗೆ ||

ಧರ್ಮರಾಜನ ಧನ್ಯತಾಭಾವ

ದೇವನೀ ಚಿತ್ತೈಸಿದೇನಯ್ಯ ನಿನ್ನ |
ಸೇವಕರ್ಮೇಲಾಯ್ತೆ ಪೂರ್ಣ ಕಾರುಣ್ಯ |
ನಾವೆ ಧನ್ಯರು ನಮಗಿನ್ನಾವ ಭವದ |
ನೋವಿಲ್ಲವೆನಲೆಂದ ಸಾಮಜವರದ ||

ಭೀಷ್ಮನಲ್ಲಿ ಧರ್ಮರಾಜನ ಬಿನ್ನಹ

ನೀವು ನಮ್ಮಲಿ ಮುನಿದುನಿಂದರೆ |
ನಾವು ಬದುಕುವುದುಂಟೆ ನಮಗಿ |

ನ್ನಾವ ಗತಿಯೆಂದಳಲುತಿರೆ |
ತ್ತಾವಿವೇಕಿಯು ನುಡಿದನು ||
ಪೊಡವಿ ಲಾಭಕೆ ನಿಮ್ಮ ಧುರದಲಿ |
ಮಡುಹಿ ಸಿರಿತನವಾಳ್ವ ತನುವಿದ |
ಸುಡಲಿ ವಿಪಿನಕೆ ನಮಗನುಜ್ಞೆಯ
ಕೊಡಿಸಿರೆಂದ ||
ಕಾದಿರಲೈ ಸುರಜಾಲಾ | ನಾ | ನೊಯ್ದರೆ ತಡೆಯಲಿ ಕಾಲ ||

ದ್ರೌಪದಿಯ ಎಚ್ಚರಿಕೆಗೆ ಕೀಚಕನ ಸರಳ ತಿರಸ್ಕಾರ :

ತೆಗೆಯೆ ನಿನ್ನ ರಮಣರ್ ಗಿಮಣರ್ ಬಗೆವನಲ್ಲ ನಾನು |
ಜಗದೊಳಧಿಕ ವೀರನೆಂಬುದ ಸುಗುಣೆಯರಿಯೆ ನೀನು ||

ಈ ಪ್ರಸಂಗದ ಜನಪ್ರಿಯತೆಗೆ ಪ್ರಸಂಗದ ಯೋಗ್ಯತೆಯಷ್ಟೆ ಅದರ ವಸ್ತವೂ ಕಾರಣ. ಭಾರತೇ ಸಾರಮುದ್ಯೋಗಃ- ಎಂಬುದು ಪ್ರಸಿದ್ಧ ಪ್ರಾಚೀನ ವಚನ. ಉದ್ಯೋಗಪರ್ವವು ಮಹಾಭಾರತದ ಕೇಂದ್ರ ಸ್ಥಾನದಲ್ಲಿದ್ದು ಹಿಂದಿನ ಘಟನೆಗಳಿಗೂ ಯುದ್ಧಕ್ಕೂ ಮಧ್ಯದಲ್ಲಿ ಸಮಾಲೋಚನ ಪರ್ವದಂತಿದೆ.  ಇಲ್ಲಿ ಬರುವ ಕೃಷ್ಣನ ಪಾತ್ರದ ಮಹತ್ತ್ವ, ಪಾಂಡವ ಕೌರವರ ವಿವಾದದ ವಿವಿಧ ಕೋನಗಳ ವಿವೇಚನೆ, ವಿವಿಧ ಸಮಾಲೋಚನೆಗಳು, ಕೌಟುಂಬಿಕ ಆಶಯಗಳು, ಸಂಧಾನ-ಸಂಗ್ರಾಮ ಆಶಯಗಳ ಸಂಘರ್ಷ, ವಿದುರನ ಭಕ್ತಿ, ಭೀಮ ದ್ರೌಪದೀ ಸಂವಾದದ ವಿಶಿಷ್ಟ ಸ್ವರೂಪ, ಕೃಷ್ಣ ಕೌರವ ಸಂವಾದ – ಮುಂತಾದ ಅಂಶಗಳಿಂದ ಇದು ಸಾಮಾಜಿಕರಿಗೆ ಆಪ್ತವಾಗಿದೆ.  ಹೀಗಾಗಿ – ಸಾಮಾನ್ಯವಾಗಿ ಪ್ರದರ್ಶನದ ಆಕರ್ಷಕ ಅಂಶಗಳೆನಿಸಿದ ಶೃಂಗಾರ, ಯುದ್ಧ, ಜಲಕೇಳಿ, ಹಾಸ್ಯ, ಬೇಟೆ, ನೃತ್ಯ ಪ್ರಾಧಾನ್ಯ, ರಾಕ್ಷಸ ಪಾತ್ರಗಳ ಅಬ್ಬರಗಳು ಇಲ್ಲದ, ನಾಟಕೀಯ ತಿರುವುಗಳಿಲ್ಲದ ಸರಳಗತಿಯ ಈ ಪ್ರಸಂಗವು, ಪ್ರತ್ಯೇಕತೆಯನ್ನೂ, ತನ್ನ ವಸ್ತುವಿನ ಗಟ್ಟಿತನವನ್ನೂ ಶಕ್ತಿಯನ್ನಾಗಿ ಹೊಂದಿದೆ.

ಕಥಾಸಾರ : ಸ್ತುತಿ, ಪಾಂಡವರ ಒಡ್ಡೋಲಗ, ದ್ರುಪದ ಪುರೋಹಿತ ದೌತ್ಯ, ದ್ವಾರಕೆಯಲ್ಲಿ ಕೃಷ್ಣನೊಂದಿಗೆ ದುರ‍್ಯೋಧನ, ಅರ್ಜುನರಿಂದ ಸಹಾಯಯಾಚನೆ, ಸುರಭಿ ಪ್ರಕರಣದಿಂದಾಗಿ ಬಲರಾಮನ ತೀರ್ಥಯಾತ್ರೆ. ಕೃಷ್ಣನ ಪಾರ್ಥಸಾರಥ್ಯ ಸ್ವೀಕಾರ. ಪಾಂಡವರಲ್ಲಿ ಆಗಮನ. ದುರ‍್ಯೋಧನನಿಗೆ ಗುರುಗಳ ನೀತಿ ಉಪದೇಶ. ಕರ್ಣನ ಕೋಲಾಹಲ. ಸಂಜಯ ದೌತ್ಯ, ಪಾಂಡವರ ಉತ್ತರ. ಧೃತರಾಷ್ಟ್ರನಿಗೆ  ಸನತ್ಕುಮಾರನ ಉಪದೇಶ. ಪಾಂಡವ ಕೃಷ್ಣರ ಸಮಾಲೋಚನೆ. ಭೀಮ, ದ್ರೌಪದೀ ಸಂವಾದ. ಪುನಃ ಸಮಾಲೋಚನೆ. ಕೃಷ್ಣನ ಪ್ರಯಾಣ, ವಿದುರಾತಿಥ್ಯ. ಕೃಷ್ಣನಿಂದ ಸಭಾ ಪ್ರವೇಶ, ಸಿಂಹಾಸನ ಭಂಗ, ದೌತ್ಯ-ಕೃಷ್ಣ ಕೌರವ ಸಂವಾದ, ವಿಶ್ವರೂಪ ದರ್ಶನ, ಭಾನುಮತಿ ನೀತಿ. ಕೌರವನ ಆತ್ಮನಿವೇದನ ಭಾಷಣ, ಕೃಷ್ಣನಿಂದ ಕರ್ಣಭೇದ. ಪಾಂಡವರಿಗೆ ಸಂಧಾನದ ವರದಿ, ಯುದ್ಧ ಸಿದ್ಧತೆ. ಭೀಷ್ಮ ಸೇನಾಧಿಪತ್ಯ, ಕರ್ಣನ ಶಸ್ತ್ರತ್ಯಾಗ, ಗೀತೋಪದೇಶ, ಯುದ್ಧ, ಚಕ್ರಗ್ರಹಣ, ಭೀಷ್ಮನಿಂದ ಕೃಷ್ಣಸ್ತುತಿ, ಪಾಂಡವರಿಂದ ಶಿಬಿರದಲ್ಲಿ ಭೀಷ್ಮನ ಭೇಟಿ. ಭೀಷ್ಮನ ಪತನ, ಶರಮಂಚ ಶಯನ. ಮಂಗಲ – ಇಷ್ಟು ಪ್ರಸಂಗ ಸಂಕ್ಷೇಪ.

ಪ್ರಸಂಗವು ಸರಳವೂ, ಅಭಿವ್ಯಕ್ತಿಯಲ್ಲಿ ಪರಿಷ್ಕೃತವೂ ಆಗಿದೆ. ಸಂಕ್ಷೇಪ ಮತ್ತು ಸ್ವಭಾವೋಕ್ತಿ ಈ ಕಾವ್ಯದ ಹೆಗ್ಗುರುತುಗಳು.  ಪದಬಂಧಗಳ ಭಾವವು ನಾಜೂಕಾಗಿದ್ದು, ಹಾಡುಗಾರಿಕೆಗೆ ತುಂಬ ಒಗ್ಗುತ್ತದೆ.  ಛಂದೋವೈವಿಧ್ಯ ಹದವಾಗಿದೆ. ಕೃಷ್ಣಸಂಧಾನದ ಒಟ್ಟುರೂಪವು ರಂಗದ ಅಳವಡಿಕೆಗೆ ಅಷ್ಟು ಅನುಕೂಲವಾಗಿಲ್ಲ. ಕರ್ಣಭೇದದ ಭಾಗ ತೀರ ಸಾಮಾನ್ಯವಾಗಿದೆ.  ಭೀಷ್ಮಪರ್ವ ಭಾಗವು ರಂಗ ದೃಷ್ಟಿಯಿಂದ ಹೆಚ್ಚು ಅನುಕೂಲಕರವಾಗಿದೆ. ಕಥೆಯ ನಡೆ ಮೊನಚಾಗಿದೆ.

ಯಕ್ಷಗಾನ ವಲಯದಲ್ಲಿ ಜನಜನಿತವಾಗಿದ್ದು ಮನೆ ಮನೆಯಲ್ಲಿ ಗುನುಗುನಿಸುವ ಪದಗಳು ಈ ಪ್ರಸಂಗದವು.  ಉತ್ತಮವಾದ ಪದ್ಯ ಹಲವನ್ನೂ ಉದ್ಧರಿಸಬಹುದಾದರೂ, ಕೆಲವನ್ನೂ ಮಾತ್ರ ಇಲ್ಲಿ ಸೂಚಿಸಿದೆ :

ಭಾವಗಳನ್ನು ಇನ್ನಷ್ಟು ಪರಿಣಾಮಕಾರವಾಗಿ ಹೇಳಲು ಅಸಾಧ್ಯವೆಂಬಷ್ಟು ಆರ್ದ್ರತೆ ಸರಳ ಪದ್ಯಗಳಲ್ಲಿ ಅಡಕವಾಗಿವೆ.

ಗೀತ ಸೌಂದರ‍್ಯ, ಅರ್ಥಗೌರವಗಳಿಗೆ ದೃಷ್ಟಾಂತವಾಗಿ ಕೆಲವು ತುಣುಕುಗಳು.

ಧರಣಿಗೋಸುಗ ನೀವು ನಿಜ ಸೋದರರು ಹಳಚುವಿರೇಕೆ…..
ವನವೇ ಸೌಖ್ಯ ರಣದಿ ಸೋಲ್ವುದರಿಂದ
ಕೆಡಿಸದಿರಿ ಕಾರ‍್ಯವನು ರೋಷವ | ಬಿಡಿರಿಗುಣ ಮುಂದಿರ್ಪುದು
ಕೋಮಲಾಂಗಿ ಕೇಳೇ | ಮದಗಜ | ಗಾಮಿನಿ ಪಾಂಚಾಲೆ…..
ಏನಯ್ಯ ಪವನಜನೆ | ಕೌರವರಿಗೆ ನಾನೆ ದುರ್ಜನಳಾದೆನೆ |…..
ಮರುಗುತ್ತ ಭೀಮನ ಕೊರಳಪ್ಪಿನಯನದ
ಶರದೊಳಂಗವ ತೊಳೆದು |
ವರಭಾಷೆಗಳ ತೀರ್ಚದಿರೆ ಪ್ರಾಣವಿಡಿಯೆನೆಂ
ಬರಸಿಗೆ ಮಗುಳೆಂದನು ||

ಪರದೇಸಿಗಳಿಗ್ಯಾಕೆ ಬವರ ಭೂಪರೊಳು..
ದೊರೆತನ ಸುಡಲಿನ್ನು ಬಡತನವೆನಗಕ್ಕು |
ಕುರುರಾಯ ಸುಖಿಯೆಂದು ಕೇಳ್ದರೆ ಸಾಕು ||
ನೀಮಾಡಿದಪರಾಧವ | ಕ್ಷಮಿಸುತಾ
ರಾಮದಲಿ ತಾಳ್ದದಣುವ
ತಾಮರೆತು ನಿನ್ನೊಳಿಂದು | ಕೂಡಿರ್ಪ |
ರಾ ಮಹಿಮರೆನಲೆಂದನು ||

ಪೊಡವಿಗೋಸುಗ ಬಳಗ ಸಹಿತಲಿ ನಡೆಯಬೇಡ ಕೃತಾಂತನಲ್ಲಿಗೆ….
ವರಪಾಂಡು ಸುತರೊಳಿಂದು | ಸಂಗರಬೇಡ
ಸೆರಗೊಡ್ಡಿ ಬೇಡುವೆನು ||….

ಶ್ರೀ ಕೃಷ್ಣನ ಚಕ್ರಗ್ರಹಣ ಪ್ರಸಂಗದಲ್ಲಿ ಭೀಷ್ಮನು

ಹೇಳುವ  –          ಶ್ರೀಮನೋಹರ ಸ್ವಾಮಿ ಪರಾಕು
                        ಪ್ರೇಮದೊಳೆನ್ನಯ ಮಾತ ಲಾಲಿಸಬೇಕು….

ಎಂದು ಆರಂಭವಾಗುವ ಮೂರು ಪದ್ಯಗಳಂತೂ ಭಾವ, ಭಾಷೆ, ಪದ ಬಂಧದ ಅಂದಗಳ ಒಟ್ಟಂದದ ಅತಿ ಸುಂದರ ದೃಷ್ಟಾಂತಗಳಾಗಿವೆ. ಇವು ಯಕ್ಷಗಾನ ಪದ್ಯ ರತ್ನಗಳಾಗಿವೆ.

– ಕವಿಯು ಆಕರವೊಂದನ್ನು (ಗದುಗು ಭಾರತದ ಭೀಷ್ಮಪರ್ವ) ಕತೆಯ ಮೈಗೆಡಿಸದೆ ಎಷ್ಟು ಸೊಗಸಾಗಿ ಒಂದು ಗೀತ ಪ್ರಬಂಧವಾಗಿ ಬರೆಯಬಹುದು ಎಂಬುದಕ್ಕೂ ಭೀಷ್ಮಪರ್ವ ಪ್ರಸಂಗವೊಂದು ಉದಾಹರಣೆ.

. ಭೀಷ್ಮಾರ್ಜುನ ಕಾಳಗ : ತಾಳಮದ್ದಳೆಯ ಪ್ರಸಂಗವೆಂದೆ ಪ್ರಖ್ಯಾತವಾಗಿರುವ ಈ ಕೃತಿಯು ಬಹಳಷ್ಟು ಜನಪ್ರಿಯ, ಪ್ರಚಲಿತ. ಇದರ ಕವಿ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿಗಳು (ಸು. ೧೮೭೦-೧೯೪೫) ವಿದ್ವಾಂಸರು. ಕಲಾವಿದರೂ ಆಗಿದ್ದವರು. ತೀರ್ಥಹಳ್ಳಿ ಬಳಿಯ ಹಲಸಿನಹಳ್ಳಿಯವರು, (ಪನಸಾಪುರ)

ಪರಮ ತುಂಗಾತೀರ ಪನಸಾ | ಪುರದ ನಾಗೇಂದ್ರಾಖ್ಯತನುಜನು |
ನರಹರಿಯ ನಾಮಕನು ಗೆಯ್ದಿಹ | ಕೃತಿಗಳಿದನು ||

ಎಂದು ಪ್ರಸಂಗದಲ್ಲಿ ತಿಳಿಸಿದ್ದಾರೆ.

ಶಾಸ್ತ್ರಿಗಳು ಓರ್ವ ಪ್ರಮುಖ ಪ್ರಸಂಗಕವಿ. ಇಪ್ಪತ್ತಕ್ಕೂ ಮಿಕ್ಕ ಕೃತಿಗಳನ್ನು ನೀಡಿದ್ದು, ಇವೆಲ್ಲವೂ ರಂಗದಲ್ಲಿ ಮೆರೆದ ಕೃತಿಗಳು, ಈಗಲೂ ಬಳಕೆಯಲ್ಲಿವೆ.

ಈ ಕೃತಿಗೆ ಆಕರ ವ್ಯಾಸ ಭಾರತದ ಭೀಷ್ಮಪರ್ವ. ಜೊತೆಗೆ ಕೃತಿಕಾರನ ಸ್ವಂತ ಕಲ್ಪನೆಯ ಸನ್ನಿವೇಶಗಳಿವೆ. ಗದುಗು ಭಾರತದ ಋಣ ಸ್ವಲ್ಪಮಾತ್ರ ಇದೆ.

ಪ್ರಸಂಗ ಸಾರ : ಸ್ತುತಿ. ಪಾಂಡವರ ಒಡ್ಡೋಲಗ, ಧರ್ಮರಾಜನು ಯುದ್ಧದ ಬಗ್ಗೆ ವ್ಯಥಿಸುವುದು, ಸೋದರರ ಅಸಮಾಧಾನ. ಕೃಷ್ಣ ಧರ್ಮರಾಜ ಸಂವಾದ. ಯುದ್ಧ ಸಿದ್ಧತೆ, ಭೀಷ್ಮ ದುರ‍್ಯೋಧನ ಸಂವಾದ, ಭೀಷ್ಮ ಸೇನಾ ಪಟ್ಟ. ಯುದ್ಧ ಸಿದ್ಧತೆ, ಧರ್ಮರಾಜನು ಪ್ರತಿಪಕ್ಷದ ಹಿರಿಯರಿಂದ ಆಶೀರ್ವಾದ ಪಡೆಯುವುದು. ಗೀತೋಪದೇಶ. ಕೌರವ ಧೃಷ್ಟದ್ಯುಮ್ನ, ಭೀಮ, ಭಗದತ್ತ, ಘಟೋತ್ಕಚ, ಅಭಿಮನ್ಯು ಇರಾವಂತ, ಶಲ್ಯ ಮೊದಲಾದವರ ಯುದ್ಧಗಳು.

ಭೀಷ್ಮ ಕೃಷ್ಣರಿಗೆ ಕರ್ಮ, ಕರ್ತವ್ಯಗಳ ಕುರಿತ ಸಂವಾದ. ಉಭಯರ ಪ್ರತಿಜ್ಞೆ. ಭೀಷ್ಮಾರ್ಜುನರ ಯುದ್ಧ. ಚಕ್ರಗ್ರಹಣ, ಭೀಷ್ಮನಿಂದ ಶ್ರೀಕೃಷ್ಣಸ್ತುತಿ, ಪಾಂಡವರಿಂದ ಭೀಷ್ಮನ ಶಿಬಿರ ಪ್ರವೇಶ. ಯುದ್ಧಗಳು. ಶಿಖಂಡಿ ಪ್ರವೇಶ. ಭೀಷ್ಮನ ಶರಶಯನ. ಕರ್ಣ, ಭೀಷ್ಮ ಸಂವಾದ. ಭೀಷ್ಮನ ಶರತಲ್ಪಯೋಗ. ಮಂಗಲ.

ಸರಳವಾದ ಸಲೀಸಿನ ಶೈಲಿ, ಅಪ್ರಯತ್ನ ಪ್ರಾಸ, ಶಬ್ದ ಜೋಡಣೆಗಳುಳ್ಳದ್ದು ಈ ಪ್ರಸಂಗ, ಛಂದೋವೈವಿಧ್ಯ ಮಿತ ಆದರೂ ಔಚಿತ್ಯವರಿತು ಪ್ರಯುಕ್ತವಾಗಿದೆ. ಶಾಸ್ತ್ರಿಗಳ ಇತರ ಪ್ರಸಂಗಗಳ ಹಾಗೆ ಇದು ಕೂಡ, ಪಾತ್ರಗಳ ಸಂವಾದಕ್ಕೊದಗುವ ರೀತಿಯಲ್ಲಿ ರೂಪಿತವಾಗಿದೆ. ಒಂದು ಸ್ತ್ರೀ ಪಾತ್ರವೂ ಇಲ್ಲ (ಇದಕ್ಕೆ ಕಥೆಯ ರೂಪ ಕಾರಣ) ದ ಪ್ರಸಂಗ ಬಹುಶಃ ಇದೊಂದೆ.

ಆರಂಭದಲ್ಲಿ ಧರ್ಮರಾಜನ ಚಿಂತೆ, ಕೃಷ್ಣನ ಯುದ್ಧ ಪ್ರೋತ್ಸಾಹದ ಸನ್ನಿವೇಶವಿದೆ. ಸೇನಾಧಿಪತ್ಯ ಸನ್ನಿವೇಶದಲ್ಲಿ ಭೀಷ್ಮ ಕೌರವರೊಳಗೆ ಸುದೀರ್ಘ ಸಂವಾದವಿದೆ. ಕರ್ಮಬಂಧನವೆಂದು ಪ್ರಸಿದ್ಧವಾಗಿ, ತಾಳಮದ್ದಳೆ ರಂಗದ ಒಂದು ಮುಖ್ಯ ಘಟ್ಟವೆನಿಸಿರುವ ಕೃಷ್ಣ-ಭೀಷ್ಮ ಸಂವಾದವಿದೆ. ಈ ಮೂರೂ ಕವಿಯ ಕಲ್ಪನೆಗಳಾಗಿದ್ದು, ಮೂರೂ ಸೊಗಸಾಗಿವೆ. ಭೀಷ್ಮಪರ್ವದ ಕತೆಯನ್ನು ಆಧರಿಸಿ ಒಂದು ಸ್ವತಂತ್ರ ಖಂಡಕಾವ್ಯವನ್ನು ರಚಿಸಿದಂತೆ ಹಿಂದಿನ ಕತೆಯ ಸಿಂಹಾವಲೋಕನಕ್ಕೂ ಅಲ್ಲಲ್ಲಿ ಅವಕಾಶಗಳೊದಗಿಸಿದೆ ಈ ರಚನೆ. ಯುದ್ಧದ ಪದ್ಯಗಳಲ್ಲಿ ಕೆಲವು ಅನವಶ್ಯ ಮತ್ತು ನೀರಸವೆನಿಸದಿರುವುದಿಲ್ಲ.

ಭಗವದ್ಗೀತೆಯನ್ನು ಇಪ್ಪತ್ತೊಂದು ಪದ್ಯಗಳಲ್ಲಿ ಸಂಗ್ರಹಿಸಿ ಒಂದು ಬಗೆಯಲ್ಲಿ ಪುನಾರಚಿಸಿರುವ ಕವಿ, ಅರ್ಜುನ ವಿಷಾದಕ್ಕೆ  ಉತ್ತರವಾಗಿ, ಗೀತೆಯಲ್ಲಿ ಇಲ್ಲದ ವಿಚಾರವಾದ ಕೌರವರು ಅನ್ಯಾಯಗಾರರು ಆದುದರಿಂದ ವಧಾರ್ಹರು ಎಂಬುದನ್ನು ಹೀಗೆ ಅಳವಡಿಸಿದ್ದಾರೆ.

ಅರಗಿನಾಲಯ ಗೆಯ್ದನು | ಎಲೆ ಪಾರ್ಥ | ಬೆರೆಸಿಮೆಲಿಸಿದ ವಿಷವನು |
ತರುಣಿಮಾನವ ಕಳೆದನು | ಧರೆಸೆಳೆದು | ಧುರಕೆ ಬಂದಿದಿರಾದನು            || ||

ಇದು ಕವಿಯ ಸೂಕ್ಷ್ಮಜ್ಞತೆಗೆ ಉದಾಹರಣೆ.

ಭೀಷ್ಮಸೇನಾಧಿಕಾರಕ್ಕೆ ಕರ್ಣನ ಆಕ್ಷೇಪ ಮತ್ತು ಬಹಿಷ್ಕಾರಗಳನ್ನು ಕವಿ ಜಾಣ್ಮೆಯಿಂದ ಬಿಟ್ಟಿದ್ದು, ಅದರ ಉಲ್ಲೇಖ ಮಾತ್ರ ಮುಂದಿನ ಸನ್ನಿವೇಶವೊಂದರಲ್ಲಿ ಬಂದಿದೆ. ಶರತಲ್ಪ ಪ್ರಕರಣದಲ್ಲಿ ಭೀಷ್ಮ-ಕರ್ಣ ಸಂವಾದವು ಭಾವಪೂರ್ಣವಾಗಿದ್ದು, ಈ ವಿವರಗಳು ಕವಿಯ ಒಲವನ್ನು ಸ್ಪಷ್ಟವಾಗಿ ಸೂಚಿಸುತ್ತವೆ.

ಪ್ರಸಂಗದ ಕೆಲವು ಭಾವಪೂರ್ಣವಾದ ಪದ್ಯಗಳು :

ಒಂದೇ ವಂಶಾವಳಿಯೊಳು ಪುಟ್ಟಿ ದುಷ್ಕರ್ಮ
ಬಂಧದಿ ಬಿಗಿವಡೆದು |
ಬಂಧುಬಾಂಧವ ಗುರುಹಿರಿಯರೊಳ್ ಕಲಹವ
ತಂದನು ಕೌರವನು ||    (ಧರ್ಮರಾಜನ ವ್ಯಥೆ)

ಧರೆಯ ಸಾಮದಿ ಕೊಡನು ಸಂಗರ | ವಿರಚಿಸುವುದೆಂದೆನುತ ಚಿನ್ಮಯ
ಗರುಹಿ ಕಳುಹಿದೆ ನೀನು ಮುಂದಣ | ಪರಿಯನರಿಯದೆ ತರಳನೆ || 
(ಭೀಷ್ಮ ದುರ‍್ಯೋಧನ ಸಂವಾದ)

ಸ್ಥಿರವಿದಾರಿಗೆ ಕೌರವ | ಗರ್ವಿಸಬೇಡ | ಬರಿದೆಯಸ್ಥಿರಭೋಗವ ||   (ಅದೇ)
ತರಳ ಕೇಳೆಲೊ ಕರುಣವೆಂತಾದಡಾಗಿರಲಿ | ಹಿರಿಯವನು
ಭೀಷ್ಮ ಬಾಳಿರ್ದು 

ಧುರವಗೈಸಿದನೆಂಬ ನಿಂದೆಗಳು ಬರುತಿಹುದು | ಕುರುರಾಯ
ತ್ಯಜಿಸೀಗ ಛಲವ ||  (ಅದೇ)

ಅರಿಗಳ ಜಯಿಸುವ ತೆರದಿ | ತವ | ತರಳರೊಳ್ ನೀವ್‌ದಯದಿ |
ಪರಸುವುದುಚಿತದಿ ಹಿರಿಯರೊಳಸ್ತ್ರವ | ಧರಿಸಿ ಮಾರ್ಮಲೆವುದ
ಕ್ಷಮಿಸುವುದೀಗಳು
(ಭೀಷ್ಮರಲ್ಲಿ ಧರ್ಮರಾಜನ ವಿನಂತಿ)

ಅರ್ಥ, ಅಭಿನಯಗಳೆರಡಕ್ಕೂ ಒದಗುವ ಪದ್ಯಗಳ ಉದಾಹರಣೆ –

ಧರಿಸಿದೆಯ ಮತ್ಸ್ಯಾದಿ ರೂಪುಗಳ ನೋಡೀಗ |
ನರನ ಸಾರಥಿಯಾದ ವಿಧಿಯನೇನೆಂಬೆ ||
ಕುರುಪತಿಯ ದುಷ್ಕರ್ಮವೇಕೆ ನಿಂದಿಪುದೀಗ |
ಧರೆ ಚತುರ್ದಶ ಪೊರೆವ ಮಹಿಮಗಿಂತಾಗೆ ||
(ಭೀಷ್ಮನು ಕೃಷ್ಣನಲ್ಲಿ ಮಂಡಿಸುವ ಜಿಜ್ಞಾಸೆ)

ಇದೇ ರೀತಿಯಲ್ಲಿ ಭೀಷ್ಮಾರ್ಜುನ ಸಂವಾದ, ಭೀಷ್ಮನ ಕೃಷ್ಣಸ್ತವ ಮೊದಲಾದೆಡೆಗಳಲ್ಲೂ ಪದಬಂಧ, ಅರ್ಥದ ನಿಬಿಡತೆ, ಅಭಿನಯ ಪೋಷಕ ಪ್ರಯೋಗಗಳನ್ನು ನೋಡಬಹುದು.

ಕರ್ಣ ಭೀಷ್ಮ ಸಂವಾದದ ಏಳು ಪದ್ಯಗಳು, ಒಂದು ಸೊಗಸಾದ ಸಂವಾದವಾಗಿದೆ ;

ಇಂತಹ ಓರ್ವ ಸಮರ್ಥ ಕವಿಯು – ರಾಜರಾಜೇಶಿ, ಪಾಲಾಂಬುಧಿಶಯನ, ತ್ರಿಪುರೇಶಿ, – ಮೊದಲಾದ ಪದಗಳನ್ನು ಬಳಸಿರುವುದು ವಿಚಿತ್ರವಾಗಿದೆ.

ಭೀಷ್ಮಾರ್ಜುನವು ಮಾತುಗಾರಿಕೆಯಿಂದ ಬೆಳೆದು ನಿಂತಿರುವ ಪ್ರಸಂಗ. ತಾಳಮದ್ದಳೆ ರಸಿಕರಿಗೆ ಪ್ರಿಯವಾದ ಪ್ರಸಂಗ. ಇದರಲ್ಲಿ ಪಾಂಡವ ಕೌರವ ವಿವಾದದ ಚರ್ಚೆ, ಭಕ್ತಿ, ಆಧ್ಯಾತ್ಮ, ಭಾವನಾತ್ಮಕತೆಗಳು ಮೇಳೈಸಿವೆ.

 . ಅಭಿಮನ್ಯು ಕಾಳಗಸೈಂಧವ ವಧೆ :

ಇದು ಯಕ್ಷಗಾನದ ಎಲ್ಲ  ತಿಟ್ಟುಗಳಲ್ಲಿ ಬಳಕೆ ಇರುವ, ಬಹು ಪ್ರಸಿದ್ಧ ಪ್ರಸಂಗ, ವಿಶೇಷವಾಗಿ ಪೂರ್ವಾರ್ಧವಾದ ಅಭಿಮನ್ಯುಕಾಳಗವು ರಂಗದಲ್ಲಿ ಅಸಂಖ್ಯ ಪ್ರದರ್ಶನಗಳನ್ನು ಕಂಡಿದೆ. ಇದಕ್ಕೆ ಅದರ ವಸ್ತು ಮತ್ತು ಪ್ರಸಂಗದ ಯೋಗ್ಯತೆ ಎರಡೂ ಕಾರಣವಾಗಿವೆ.

ಪ್ರಸಂಗ ಕವಿ ಈಗಾಗಲೇ ಪ್ರಸ್ತಾವಿಸಿದ ದೇವಿದಾಸ (ಸ. ಕ್ರಿ. ೧೮೦೦). ಕಥಾನಕವು  ಗದುಗು ಭಾರತದ ಸಂಕ್ಷಿಪ್ತ ಪ್ರಸಂಗೀಕರಣವಾಗಿದೆ.  ಅಭಿಮನ್ಯು ಕಾಳಗ, ಸೈಂಧವ ವಧೆ ಎಂಬ ಎರಡು  ಸಂಧಿಗಳಿವೆ.

ಪ್ರಸಂಗ ಸಾರ : ದುರ‍್ಯೋಧನನ ಚಿಂತೆ, ದ್ರೋಣರಿಂದ ಧೈರ‍್ಯವಾಕ್ಯ, ಚಕ್ರವ್ಯೂಹ ರಚನೆ, ಅರ್ಜುನನಿಗೆ ಸಂಶಪ್ತಕರಿಂದ ಆಹ್ವಾನ. ಚಕ್ರವ್ಯೂಹದ ಕುರಿತು ಧರ್ಮಜನ ಚಿಂತೆ. ಅಭಿಮನ್ಯುವಿನ ಪ್ರವೇಶ, ವೀರವಚನ, ಧರ್ಮಜನಿಂದ ಅನುಮತಿ ನಿರಾಕರಣ, ಕೊನೆಗೆ ಒಪ್ಪಿಗೆ, ಸುಭದ್ರೆಯ ದುಃಖ, ಅಭಿಮನ್ಯುವಿನ ವೀರವಾಣಿ. ಯುದ್ಧರಂಗ ಪ್ರವೇಶ, ದ್ರೋಣ, ಕರ್ಣ, ಶಲ್ಯ, ದುಶ್ಶಾಸನರೊಂದಿಗೆ ಅಭಿಮನ್ಯುವಿನ ಪ್ರಚಂಡ ಯುದ್ಧ, ಕೌರವ ಪಡೆಯ ಪರಾಭವ, ದ್ರೋಣ ಸೂಚನೆಯಂತೆ ಕರ್ಣನಿಂದ ಅಭಿಮನ್ಯುವಿಗೆ ಪರಾಙ್ಮುಖಾಘಾತ, ನೆರವಿಗೆ ಬಂದ ಭೀಮಾದಿಗಳಿಗೆ ಜಯದ್ರಥನಿಂದ ತಡೆ. ಘೋರಯುದ್ಧದಲ್ಲಿ ಅಭಿಮನ್ಯು ವಿಕ್ರಮ, ದುಶ್ಯಾಸನ ಸುತನಿಂದ ಅಭಿಮನ್ಯುವಧೆ, ಕಾಳ್ಗಿಚ್ಚು ಉರಿದು ನಿಲುವಂತೆ ಅಭಿಮನ್ಯುವಿನ ವೀರಶಯನ.

ಪಾಂಡವ ಪಕ್ಷದಲ್ಲಿ ದುಃಖ, ಗೋಳು, ವೇದವ್ಯಾಸ, ಕೃಷ್ಣರಿಂದ ಸಮಾಧಾನ, ಸೈಂಧವವಧೆಗೆ ಅರ್ಜುನನ ಶಪಥ. ಭಯಗೊಂಡ ಸೈಂಧವನಿಗೆ ದ್ರೋಣರ ವ್ಯೂಹರಕ್ಷೆ, ಯುದ್ಧಗಳು. ಹರಿಯ ಮಾಯದಿಂದ ಹಗಲು ಕತ್ತಲೆಯಾಗಿ ಸೈಂಧವಧೆ. ಕೌರವಪಡೆಯ ಚಿಂತೆ, ಪಾಂಡವರಿಗೆ ಜಯ, ಮಂಗಲ.

ವೀರ ರೌದ್ರ, ಕರುಣಾರಸ ಪ್ರಧಾನವಾದ ಈ ಪ್ರಸಂಗದಲ್ಲಿ ಸನ್ನಿವೇಶ ವೈವಿಧ್ಯ, ರಂಗೋಚಿತ ದೃಶ್ಯಾವಳಿ, ಪಾತ್ರ ವೈವಿಧ್ಯಗಳಿದ್ದು, ಯಕ್ಷಗಾನ ರಸಿಕರು ನೋಡಿ ದಣಿಯದ ಪ್ರಸಂಗವೆನಿಸಿದೆ. ಸಂದರ್ಭೋಚಿತವಾದ ಪದ್ಯಗಳು, ಛಂದಸ್ಸು, ಪದ್ಯ ಸಂಖ್ಯೆಗಳಿಂದ ಕೂಡಿದ್ದು, ರಂಗದ ನಡೆಗೆ ಚೆನ್ನಾಗಿ ಒದಗುತ್ತದೆ. ರಚನೆ ಸರಳವಾಗಿ ಶಕ್ತಿಶಾಲಿಯಾಗಿದ್ದು, ಅಚ್ಚುಕಟ್ಟಾಗಿದೆ.

ದೃಷ್ಟಾಂತವಾಗಿ ಕೆಲವು ಪದ್ಯಗಳು

ಯುಧಿಷ್ಠಿರನಲ್ಲಿ ಅಭಿಮನ್ಯುವಿನ ವೀರವಾಣಿ –

ಬೊಪ್ಪನೆ ಬಿಡುಬಿಡು ಚಿಂತೆಯ ರಿಪುಗಳ |
ಸೊಪ್ಪರಿವೆನು ಬಿಡದೆ |
ತಪ್ಪದೆ ಚಕ್ರವ್ಯೂಹವ ತೆಗೆದಾ |
ನೊಪ್ಪಿಸುವೆನು ಯಮಗೆ ||

ಮಾರಿಗೆ ಹಬ್ಬವ ಮಾಡುವ ಕೌರವ
ವೀರರ ತಲೆಗಡಿದು |
ಸೂರೆಗೊಂಬೆ ನಿಮಿಷಾರ್ಧದಿ ದುರ್ಗವ
ಪೌರುಷ ನೋಡೆಂದ ||

ಸುಭದ್ರೆಯ ದುಃಖ

ಏತಕಿಂತು ಬುದ್ಧಿ ಬಂತು | ಕಂದ ಕಂದ | ನಿನಗೆ
ಪ್ರೀತಿಯೇನೋ ಮರಣದೊಸಗೆ | ಕಂದ ಕಂದ ||
ರೀತಿಯಲ್ಲ ಪೋಪುದಿಂದು ಕಂದಕಂದ | ಎನ್ನ |
ಘಾತಿಸಿ ನೀ ರಣಕೆ ಪೋಗು | ಕಂದ ಕಂದ |

ಕಾಂಭೋಜಿ ಏಕತಾಳ ಬಂಧದ ಈ ಪದವು, ಮೂರು ಮಾತ್ರೆಯ ವರಣದೊಂದಿಗೆ ಭಾವಪುಷ್ಟಿಯಿಂದ ಹಾಡಲು ಒದಗುವಂತಹದು.

ಅಭಿಮನ್ಯು ಸುಭದ್ರೆಯನ್ನು ಬೀಳ್ಗೊಂಡು ಹೊರಡುವುದು

ಸುರಿವಕಂಬನಿಯನ್ನು ಸೆರಗಿಂ |
ದೊರೆಸಿ ಜನನಿಯ ಪಾದರಜವನು |
ಶಿರದೊಳಾಂತಾ ಪಾರ್ಥನಂದನ |
ಪೊರಟ ಧುರಕೆ ||

ಅಭಿಮನ್ಯುವನ್ನು ದುರ‍್ಯೋಧನನು ಮಾತಾಡಿಸುವ ರೀತಿ

ಭಳಿರೆ ಪಾರ್ಥನಣುಗ ನಿನ್ನ | ಬಲುಹಿಗಿನ್ನು  ಸರಿಯದಾರು
ಹಲವರೇತಕೊಬ್ಬ ಸಾಕು ಕುಲಕೆ ರತ್ನನು |
ಲುಗುಣನು ಕೃತಾರ್ಥನಾದ | ನೊಲಿದು ನಿನ್ನ ಪಡೆದ ಬಗೆಯೊ |
ಳಲಸದೆಂದ ಕೌರವೇಂದ್ರ | ತಲೆಯ ತೂಗುತ ||

ಅಭಿಮನ್ಯುವಿನ ಮರಣದ ಶಯ್ಯೆಯ ಸ್ಥಿತಿ

ಕಾಳಗಿಚ್ಚೆದ್ದು ಛಡಾಳಿಸಿ ನಿಲುವಂತೆ | ಬಾಲಕನಸ್ತ್ರತಲ್ಪದಲಿ
ತೋಳದಿಂಬಿನೊಳಿರೆ ಕೌರವಾತ್ಮಜರಂದು | ಕಾಲೆಡೆಯಲಿ ಕೆಡೆದಿರಲು ||

. ದ್ರೋಣಪರ್ವ :

ಈ ಪ್ರಸಂಗವು ಹೆಚ್ಚು ಬಳಕೆಯಲ್ಲಿಲ್ಲದ ಕೃತಿ. ಇದರಲ್ಲಿ ಸೈಂಧವ ವಧಾನಂತರದ ದ್ರೋಣಪರ್ವದ ಕಥೆಯಿದೆ.  ಇದರ ಕರ್ತೃ ಉಡುಪಿ ರಾಜಗೋಪಾಲಾಚಾರ‍್ಯ. ಕಾಲ ಸು. ೧೯೦೦. ಉಡುಪಿ ಸೋದೆ ಮಠದಲ್ಲಿ ಉದ್ಯೋಗದಲ್ಲಿದ್ದ ವಿದ್ವಾಂಸರು, ಬಹುಶಃ ಅರ್ಥದಾರಿಯೂ ಆಗಿದ್ದವರು.

ಈ ಜಗದಿ ಗುರುರಾಜ ಸೇವಕ | ರಾಜಗೋಪಾಲಾಖ್ಯ ಎಂದು ತನ್ನ ಬಗೆಗೆ ತಿಳಿಸಿದ್ದಾರೆ.

ಪ್ರಸಂಗ ಸಾರ : ಸೈಂಧವ ವಧೆಯ ಬಳಿಕ ಪಾಂಡವರ ಒಡ್ಡೋಲಗ. ದುರ‍್ಯೋಧನನ ಚಿಂತೆ, ದ್ರೋಣನ ಅಭಯ ವಚನ, ದುರ‍್ಯೋಧನನ ಆಕ್ಷೇಪ, ದ್ರೋಣ ಪ್ರತಿಜ್ಞೆ, ಅರ್ಜುನ ಸುಭದ್ರೆ ಸಂವಾದ. ದ್ರೋಣಾರ್ಜುನ ಯುದ್ಧ. ಕೃಷ್ಣ-ದ್ರೋಣ ಸಂವಾದ. ಪುನಃ ಯುದ್ಧ, ಕರ್ಣನ ವೀರವಚನ, ಕರ್ಣಾರ್ಜುಯುದ್ಧ. ಘಟೋತ್ಕಚನ ಪ್ರವೇಶ, ಮಾಯಾಯುದ್ಧ, ಮಾರುವೇಷದಿಂದ ಕೌರವನಾಗಿ, ದ್ರೋಣನಾಗಿ, ಮೋಹಿಸುವುದು, ಕೌರವ-ಕರ್ಣ ವಿವಾದ, ಅಶ್ವತ್ಥಾಮನಿಂದ ಪರಿಹಾರ, ಮಾಯಾ ಯುದ್ಧ, ಕರ್ಣನ ಶಕ್ತ್ಯಾಯುಧದಿಂದ ಘಟ್ಕೋತ್ಕಚವಧೆ.

ಎರಡನೆಯ ಸಂಧಿಯಲ್ಲಿ – ಕರ್ಣಾರ್ಜುನ ಸಮರ. ದ್ರೋಣನಿಂದ ವಿರಾಟನ ವಧೆ, ದ್ರುಪದ ವಧೆ, ಸಪ್ತರ್ಷಿಗಳಿಂದ ದ್ರೋಣನಿಗೆ ಉಪದೇಶ. ಪಾಂಚಾಲರ ಯುದ್ಧ, ಅಶ್ವತ್ಥಾಮ ಗಜ ವಧೆ, ಭೀಮ-ದ್ರೋಣ ಕಾದಾಟ, ದ್ರೋಣಾರ್ಜುನ ಯುದ್ಧ, ದೃಷ್ಟದ್ಯುಮ್ನನ ಯುದ್ಧ, ಧರ್ಮರಾಜ ವಚನದಿಂದ ದ್ರೋಣನ ಚಿಂತೆ, ಜೀವನಾವಲೋಕನ, ದ್ರೋಣರ ದೇಹತ್ಯಾಗ, ದೃಷ್ಟದ್ಯುಮ್ನನಿಂದ ದ್ರೋಣ ಕಾಯ ಖಂಡನ. ದೃಷ್ಯದ್ಯುಮ್ನ ಅರ್ಜುನರ ವಿವಾದ, ಸಾತ್ಯಕಿ ದೃಷ್ಟದ್ಯುಮ್ನ ಕಲಹ, ಭೀಮನಿಂದ ಸಮಾಧಾನ ವಚನ, ಸಂಧಿ, ಕೃಪ ಅಶ್ವತ್ಥಾಮರ ಆಗಮನ. ಅರ್ಜುನ ಅಶ್ವತ್ಥಾಮ ಯುದ್ಧ. ನಾರಾಯಣಾಸ್ತ್ರ ಪ್ರಯೋಗ. ಕೃಷ್ಣನ ಉಪಾಯದಿಂದ ನಿವಾರಣ, ಅಶ್ವತ್ಥಾಮನ ಯುದ್ಧ ತ್ಯಾಗ. ವ್ಯಾಸೋಪದೇಶ. ಪಾಂಡವರ ವಿಜಯೋತ್ಸವ. ಮಂಗಲ.

ಇದು ವಿಶಿಷ್ಟ ಪ್ರಸಂಗ. ವ್ಯಾಸಭಾರತವನ್ನು ಆಶ್ರಯಿಸಿದ್ದು, ಘಟೋತ್ಕಚನು ವೇಷಾಂತರಗಳಿಂದ ಕೌರವಸೇನೆಯಲ್ಲಿ ಗೊಂದಲವನ್ನು ಹುಟ್ಟಿಸುವ ಪ್ರಕರಣ ಬೇರಾವುದೋ ಆಕರವನ್ನು ಆಧರಿಸಿದೆ. ಭಾಷೆಯು ಶಿಷ್ಟವೂ, ಗಂಭಿರವೂ ಆಗಿದ್ದರೂ, ಪದಪ್ರಯೋಗ ಪದ್ಯಬಂಧ ಸಲೀಸಾಗಿಲ್ಲ, ತುಸು ಕೃತಕವಾಗಿದೆ. ರಚನಾ ವೈಶಿಷ್ಟ್ಯದಿಂದಲೂ, ಭಾರತಯುದ್ಧದ ಸಮಗ್ರ ಕಥೆ ಈ ಸಂಪುಟದಲ್ಲಿ ಅಳವಡಿಸ ಬೇಕೆಂಬುದಕ್ಕಾಗಿಯೂ ಈ ಪ್ರಸಂಗವನ್ನು ಸೇರಿಸಿದೆ.

ಯುದ್ಧ ತುಸು ಹೆಚ್ಚಾಗಿ ಇದ್ದರೂ, ರಂಗಕ್ಕೆ ಬೇಕಾದ ವಸ್ತುವಿನ ಘನತೆ, ರಸಪರಿಪೋಷಣೆ ಈ ಕೃತಿಯಲ್ಲಿದೆ. ಮುಖ್ಯವಾದ ಕೆಲವು ಪದ್ಯ ಸಂದರ್ಭಗಳು :

ದ್ರೋಣಾರ್ಜುನ ಸಂವಾದ :

ಬಲ್ಲೆ ಬಲ್ಲೆ ನಿನ್ನ ಸರಳ ನಿಲ್ಲು ಪಾರ್ಥನೆ | ಹುಲ್ಲು ವಿಪ್ರನೆಂತಲೆಣಿಸಬೇಡ ಸುಮ್ಮನೆ |
ನಿಲ್ಲು ಶರದಸವಿಯ ನೋಡಲಿಲ್ಲವೇನೆಲಾ | ಬಿಲ್ಲವಿದ್ಯೆ ಗುರುಗಳೆಂದು ಮರೆತೆಯೇ ಭಲಾ ||
ಸರಳ ಸವಿಯನೋಡಲಿಕ್ಕೆ ತರಳನಲ್ಲವೆ | ಗರಳಕೊಟ್ಟ ದುರುಳ ಭೂಪ ನರುಹನಲ್ಲವೆ |
ಗುರುಗಳೆಂಬ ಭಾವ ತಳೆದು ಶರವಪಿಡಿಯದೆ | ಚರಣಪಿಡಿದು ಬೇಡಿದಾಗ ಮರೆತಿರಲ್ಲವೆ ||

ಕೃಷ್ಣನಲ್ಲಿ ದ್ರೋಣನ ಪ್ರಶ್ನೆ :

ನರನ ಸಾರಥಿಯಾಗಿ ಸರ್ವರ | ಧುರದಿ ಕೊಲಿಸುವುದಾವನೀತಿಯು
ಶರಣರಲಿ ನೀಚೋಚ್ಛ ಭಾವವು | ಮೆರೆವುದೇನೈ ||
ಭಕ್ತನಲ್ಲವೆ ನಿನಗೆ ನಾ ಪರ | ಮಾತ್ಮ ನೀನಾಗಿರಲು ಶಿಷ್ಟರ
ಪೊತ್ತವನು ತಾನೆಂಬ ಬಿರುದುಗ | ಳೆತ್ತ | ತೆಗೆದೆ ||

ಅಂತ್ಯಕಾಲದಲ್ಲಿ ದ್ರೋಣನ ಒಳಗುದಿ :

ಬಡತನದೊಳಾತ್ಮಜಗೆ ಕ್ಷೀರವ | ಕೊಡಲು ದಾರಿದ್ರ್ಯದಲಿ ಗೋವ್ಗಳ
ಹುಡುಕುತಲಿ ಬರೆ ಹಸ್ತಿನಾಪುರದ ಬಳಿಗೆಂದು
ಪೊಡವಿಪತಿ ಧೃತರಾಷ್ಟ್ರ ಭೀಷ್ಮರು | ನಡತೆಗಳ ನೋಡುತಲಿ ತನ್ನಯ
ಹುಡುಗನಿಗೆ ಕ್ಷೀರಾನ್ನ ಮೋದದಿ | ಕೊಡುತ ಸಲಹಿದರು ||

ಇಲ್ಲಿ ದ್ರೋಣನ ಧರ್ಮಸಂಕಟ, ಅಸಹಾಯಕತೆ, ನಿಷ್ಠೆ, ಕಿಂಕರ್ತವ್ಯತೆಗಳನ್ನು ಚಿತ್ರಿಸಲು ಅವಕಾಶವಿದೆ.

. ಕರ್ಣಾರ್ಜುನರ ಕಾಳಗ :

ಇದು ಯಕ್ಷಗಾನದ ಬಡಗುತಿಟ್ಟಿನ ಅತ್ಯಂತ ಪ್ರಸಿದ್ಧ ಪ್ರಸಂಗಳಲ್ಲಿ ಒಂದು. ಪ್ರಸಂಗ ರಚನೆಯಲ್ಲಿ ತೆಂಕು, ಬಡಗು ವಿಧಾನಗಳಿಲ್ಲವಾದರೂ, ಬಳಕೆಯಲ್ಲಿ ಒಂದೊಂದು ಕಾವ್ಯ ಒಂದೊಂದು ಕಡೆ ರೂಢಿಯಿದೆಇದು ಪ್ರಯೋಗ ಪರಂಪರೆಯಲ್ಲಿ, ರಂಗಕೃತಿಯಲ್ಲಿ ಪ್ರೌಢವಾದ ಎತ್ತರಕ್ಕೆ ಏರಿದ ಕಥಾನಕ. ಕರ್ಣನ ಪಾತ್ರವೂ ಅರ್ಥಧಾರಿ / ವೇಷಧಾರಿಯ ಒಂದು ನಿಕಷ, ಕಥೆ ಭಾರತದ ಕರ್ಣಪರ್ವದ್ದು.

ಪ್ರಸಂಗದ ಕರ್ತೃ ಪಾಂಡೇಶ್ವರ ವೆಂಕಟ, ಕಾಲ ಸು.ಕ್ರಿ. ೧೭೫೦.

ತೆರದಿಂದುತ್ತಮ ಕಥೆಯಂ |
ಕೋಟದ ಸೀಮೆಯ ಪಾಂಡೇಶ್ವರದಾ |
ಮಾತೆಯು ಪುಟ್ಟಮ್ಮನವರ
ದ್ವಿತೀಯ ಜಾತ ಬಾಲ ವೆಂಕಟ ವರ್ಣಿಸಿದಂ

ಎಂದು ಕವಿ ಹೇಳಿಕೊಂಡಿರುತ್ತಾನೆ.  ಪ್ರಸಂಗವು ಪೂರ್ತಿಯಾಗಿ ಗದುಗು ಭಾರತವನ್ನು ಅನುಸರಿಸಿ ರಚಿತವಾಗಿದ್ದು, ಅಭಿಜಾತ ಕಾವ್ಯದ ಪ್ರಸಂಗೀಕರಣವು ಯಶಸ್ವಿಯಾಗಿರುವ ಒಂದು ಉತ್ತಮ ದೃಷ್ಟಾಂತವು ಈ ಕೃತಿ.

ನಟರಿಗೂ, ಭಾಗವತರಿಗೂ, ರಸಿಕರಿಗೂ ಮೆಚ್ಚಿನ ಪ್ರಸಂಗಗಳಲ್ಲಿ ಒಂದಾಗಿದ್ದು, ಭಾಗವತಿಕೆ ಕಲಿಕೆಯ ಪ್ರಸಂಗಗಳಲ್ಲೂ ಮುಖ್ಯವೆನಿಸಿದೆ.

ಪ್ರಸಂಗಸಾರ : ದ್ರೋಣವಧಾನಂತರ ಪಾಂಡವರ ಓಲಗ. ಜಯದ ಸಂತಸ. ದುರ‍್ಯೋಧನನ ಸಭೆ, ದ್ರೋಣಮರಣ ವಾರ್ತೆ, ಚಿಂತೆ, ಕರ್ಣನಿಗೆ ಸೇನಾಪತಿತ್ವ ಅಭಿಷೇಕ. ಯುದ್ಧದಾರಂಭ, ಭೀಮನಿಂದ ಕ್ಷೇಮಧೂರ್ತನ ವಧೆ.  ಧರ್ಮರಾಜನಿಂದ ದುರ‍್ಯೋಧನನ ಪರಾಭವ, ಶಿಬಿರದಲ್ಲಿ  ಕೌರವನ ಚಿಂತೆ, ಕರ್ಣನಿಂದ ಶಲ್ಯನ ಸಾರಥ್ಯದ ಪ್ರಸ್ತಾವ, ಮತ್ತು ಅದಕ್ಕೆ ಹೇತುವಾದ ಪರಶುರಾಮ ಶಾಪದ ಕಥನ, ಕೌರವ ಶಲ್ಯ ಸಂವಾದ, ಶಲ್ಯನ ಕ್ರೋಧ, ಕೌರವನ ಸಮಾಧಾನ, ಶಲ್ಯನಿಂದ ಸಾರಥ್ಯ ಸ್ವೀಕಾರ. ಮರುದಿನ ಕರ್ಣನ ರಣರಂಗ ಪ್ರವೇಶ, ವೀರವಚನ, ಶಲ್ಯ ಕರ್ಣರ ಉಪಾಲಂಭ, ಕೌರವನಿಂದ ಸಂಧಿ, ಸಂಶಪ್ತಕರ ಪ್ರವೇಶ. ದ್ರೌಪದಿಗೆ ಕೃಷ್ಣನಿಂದ ಅಭಯಪ್ರದಾನ. ಕರ್ಣ ಧರ್ಮರಾಜ ಯುದ್ಧ, ಧರ್ಮಜನ ಸೋಲು, ಶಿಬಿರಪ್ರವೇಶ, ಕೃಷ್ಣಾರ್ಜುನರ ಆಗಮನ. ಗಾಂಡೀವನಿಂದೆಗೆ ಅರ್ಜುನನ ಕೋಪ. ಕೃಷ್ಣನಿಂದ ಪ್ರತ್ಯಾಮ್ನಾಯ ರೂಪದಿಂದ ಅರ್ಜುನನ ಪ್ರತಿಜ್ಞೆಯ ರಕ್ಷಣೆ, ಸಮಾಧಾನ, ಭೀಮನಿಂದ ದುಶ್ಯಾಸನ  ವಧೆ, ವೇಣೀಸಂಹಾರ, ಕರ್ಣ ಪುತ್ರ ವೃಷಸೇನನ ಅರ್ಜುನನಿಂದ ಮರಣ, ಕರ್ಣನ ದುಃಖ, ಪ್ರತಿಜ್ಞೆ, ಕರ್ಣಾರ್ಜುನ ಯುದ್ಧ, ಸರ್ಪಾಸ್ತ್ರ ಪ್ರಕರಣ, ಶಲ್ಯನಿಂದ ಸಾರಥ್ಯತ್ಯಾಗ, ಅರ್ಜುನನ ಕರುಣೆ, ಕೃಷ್ಣನ ಪ್ರಚೋದನೆ, ಕರ್ಣನ ಶೋಕ, ಕುಂಡಲದಾನ. ಕರ್ಣ ದುರಂತ. ಪಾಂಡವ ವಿಜಯ.

ಶಲ್ಯಸಾರಥ್ಯ, ಶಿಬಿರ ಪ್ರಕರಣ, ದುಶ್ಯಾಸನ ವಧೆ, ಕರ್ಣಾವಸಾನ ಎಂಬ ನಾಲ್ಕು ಘಟ್ಟಗಳಿರುವ ಈ ಪ್ರಸಂಗವು ಆಟ ಕೂಟಗಳಲ್ಲಿ ಪ್ರಸಿದ್ಧ, ಮಾತು, ರಂಗ ವಿಧಾನಗಳಿಗೆ, ಅವಕಾಶವಿರುವ, ಕರ್ಣನ ವ್ಯಕ್ತಿತ್ವದಿಂದ ಜನಜನಿತ ಕಥಾನಕವುಳ್ಳ ಆಖ್ಯಾನ. ರಚನೆ ಒಳ್ಳೆಯ ಮಟ್ಟದಲ್ಲಿದೆ.

ಕೆಲವು ಪ್ರಮುಖ ಸಂದರ್ಭಗಳು, ಪದ್ಯಗಳು : ಕರ್ಣನು ಧರ್ಮರಾಜನನ್ನು ವಿಚಾರಿಸುವುದು

ಸಿಕ್ಕಿದೆಯಾ ಧರ್ಮರಾಯ | ನಮ | ಗಕ್ಕರವಾಯ್ತು ಕಾಣಯ್ಯ |
ರಕ್ಕಸಾರಿಯ ಕೈಯ ಪಂಜರದರಗಿಣಿ | ಘಕ್ಕನೆ ಹಾರಿ ಬಂದೆನ್ನ ಕೈಯೊಳಗಿಂದು ||
ನದಿಯೊಳು ಸ್ನಾನವ ರಚಿಸಿ | ಬಹು | ವಿಧ ಜಪಗಳನನುಕರಿಸಿ…….
ಹಲವು ಶಾಸ್ತ್ರಂಗಳನರಿತು | ಎನ್ನ | ನೆಲೆಯರಿಯದೆ ಮೆಯ್ಯಮರೆತು…..

ಈ ಪದ್ಯಗಳು ಹಾಡುಗಾರಿಕೆಗೂ, ಅನ್ಯೋಕ್ತಿಯ ಅರ್ಥಸೃಷ್ಟಿಗೂ ಒದಗುವಂತಹವು.

ಇದೇ ರೀತಿ

            ಕೊಂದನೇ | ಭೀಮ | ಕೊಂದನೇ(ದ್ರೌಪದಿ)

            ಕುರುರಾಯ ಕೇಳೆನ್ನ ಮಾತ (ಅಶ್ವತ್ಥಾಮ ನೀತಿ)

            ಏನಯ್ಯ ಶಲ್ಯ ಭೂಪ | ನಿನ್ನಂಗವಿ | ದೇನಯ್ಯ ಮದನ ರೂಪ (ಶಲ್ಯ-ಕೃಷ್ಣಸಂವಾದ)

ಯಾದವೋತ್ತಮ ಲಾಲಿಸಿ ಕೇಳು | | ರಾಧೇಯನಾರೆಂಬ ನಿಜವನು ಪೇಳು \

                        (ಅರ್ಜುನನ ಅಂತರಂಗ ನಿವೇದನೆ)

ಶಿವ ಶಿವ ಸಮರದೊಳು ಕೈಸೋತೆನಲ್ಲ(ಕರ್ಣನ ಶೋಕ) ಪದ್ಯಗಳು ಬುಲುಸೊಗಸಾದ ಗೀತರಚನೆಗಳು. ಹಾಡುಗಾರರ ಅಚ್ಚುಮೆಚ್ಚಿನ ಪದಗಳು.

 . ಕರ್ಣ ಪರ್ವ :

ಇದು ಕರ್ಣಾರ್ಜುನದಂತೆಯೆ ಪ್ರಖ್ಯಾತ ಪ್ರಸಂಗ. ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ ಇದು ಬಳಕೆಯಲ್ಲಿದೆ. ಇದು ಕವಿ ಗೇರುಸೊಪ್ಪೆ ಸಾಂತಪ್ಪಯ್ಯನ ರಚನೆ. ಕಾಲ ಸು. ೧೮೮೦. ಮಂಗಳೂರಲ್ಲಿ  ನ್ಯಾಯಾಧಿಕಾರಿಯಾಗಿದ್ದವರು. ಪ್ರಸಂಗವು ಮೇಲೆ ಹೇಳಿದ ಕರ್ಣಾರ್ಜುನದಂತೆ, ಕುಮಾರವ್ಯಾಸ ಭಾರತದ ಪ್ರಸಂಗೀಕರಣ. ಒಳ್ಳೆಯ ಪದ್ಯಗಳಿಂದ, ಛಂದೋವೈವಿಧ್ಯದಿಂದ ಕೂಡಿದ್ದು ಗಾಯನಕ್ಕೂ, ರಂಗಕ್ಕೂ ಅನುಕೂಲವಾಗಿದೆ.

ಈ ಪ್ರಸಂಗದಲ್ಲಿ – ಕರ್ಣನ ಪೂರ್ವ ವೃತ್ತಾಂತದ ಸಂದರ್ಭದ ಚಿತ್ತವಿಸು ಕುರುಕುಲಾಂಬುಧಿ – ಎಂಬ ಆರು ಪದ್ಯಗಳು. ಕರ್ಣನಿಗೆ ಶಲ್ಯನ ಸೂಚನೆಯ ಎಲೆಭಾನುಜಾತ ಕೇಳಸ್ತ್ರದ ಮಹಿಮೆ ಎಂಬ ಎರಡು ಪದ್ಯಗಳು, ಕರ್ಣನ ಶೋಕದ ಶಿವ ಶಿವ ಸಮರದೊಳು ಕೈಸೋತೆನಲ್ಲ ಎಂಬಲ್ಲಿ ನಾಲ್ಕು ಪದ್ಯಗಳು, ಪಾಂಡೇಶ್ವರ ವೆಂಕಟನ ಪ್ರಸಂಗದ ಪದ್ಯಗಳೇ ಆಗಿವೆ ಎಂಬುದು ವಿಶೇಷ. ಸಮರ್ಥ ಕವಿಯಾದ ಶಾಂತಪ್ಪಯ್ಯ ಈ ಸನ್ನಿವೇಶಗಳಿಗೆ, ಇನ್ನೊಬ್ಬ ಕವಿಯ ಪದ್ಯಗಳನ್ನು ತದ್ವತ್ತಾಗಿ ಎತ್ತಿಕೊಂಡದ್ದೂ ವಿಚಿತ್ರವೇ.

ಕೆಲವು ಹೃದ್ಯ ಪದ್ಯಗಳು

ಖತಿಯಿದೇನೈ ಮಾವ ನೀನೇಗತಿಯೆನುತ ನಾ ಬಂದಡೆ…  (ಕೌರವನ ವಿನಂತಿ)
ಕಲಿ ಕರ್ಣನೆಂದನೀ | ದಳನಿಕಾಯದೊಳೆನಗೆ | ಫಲುಗುಣನ ಕುರುಹುಗಳ
(ಕರ್ಣನ ವೀರಭಾಷಣ)   
ವಿಜಯೊನೊಡನಾಹವದೊಳಿದಿರಾಗಿ ಪಾರ್ಥನೊಳ್… (ಅದೇ)

ಈ ಪದ್ಯ ಸರಣಿಗಳು ಬಲು ಸುಂದರ.

ಧರ್ಮರಾಜನನ್ನು ಕೃಷ್ಣನು ಸಂತೈಸುವ ಸರಳ ಪದ್ಯದ ಅಸಾಧಾರಣ ಭಾವಸ್ರೋತವನ್ನು ನೋಡಿ

ಸಮಯದಲಿ ಬಂದು ಲಕ್ಷ್ಮಿನಿ |
ವಾಸ ಹತ್ತಿರ ಕುಳಿತು ಭೂಪನ |
ತಾ ಸರಾಗದೊಳಮೃತ ಹಸ್ತದಿ ತನುವ ತಡವರಿಸಿ ||
ಏಸು ನೊಂದೈ ತಂದೆ ನಿನ್ನನು |
ಘಾಸಿ ಮಾಡಿದರೇ ಕಠೋರರು
ಮೋಸದವರವರೆಂದು ಕಂಬನಿದುಂಬಿದನು ಕೃಷ್ಣ ||

ಸದಾ ನಗುವ ಕೃಷ್ಣನಿಗೂ ಕಂಬನಿ ! ಈ ಪದ್ಯದಲ್ಲಿ ಈ ಪ್ರಸಂಗದ ಕವಿ ಕುಮಾರವ್ಯಾಸನ ಮಟ್ಟಕ್ಕೆ ಹೋಗಿದ್ದಾನೆ. ಈ ಪ್ರಕರಣವಿಡೀ ರಸಾರ್ದ್ರವಾಗಿ ಉಚಿತ ಪದ್ಯಗಳಿಂದ ಚಿತ್ರಿತವಾಗಿದೆ.

ಕರ್ಣಾರ್ಜುನ ಸಂವಾದದ

ಎಲವೊ ಸೂತನ ಮಗನೇ |… ಎಂಬ ನಾಲ್ಕು ಪದ್ಯಗಳಲ್ಲಿ, ಕವಿಯು ವಿವರಗಳಿಗೆ ಹೋಗದೆ, ಸೂಚಕತೆಯನ್ನು ಬಳಸಿ ಅರ್ಥಪ್ರಸವವನ್ನು ಸಾಧಿಸಿದ್ದಾನೆ.

 . ಗದಾ ಪರ್ವ :

ತುಂಬಾ ಪ್ರಸಿದ್ಧ ಮತ್ತು ಯಶಸ್ವೀ ಪ್ರಸಂಗ. ಅಜ್ಞಾತ ಕವಿ ಕರ್ತೃಕ. ಪ್ರಸಂಗದ ಆರಂಭದಲ್ಲೂ ಸ್ತುತಿಸಿ ಕೊನೆಯಲ್ಲಿ ಕವಿಯು

ವಿಠಲಪುರ ಪಂಚಲಿಂಗೇಶ ನಿರತ ರಕ್ಷಿಪನು

ಎಂದು ಹೇಳಿರುವುದರಿಂದ, ಬಂಟ್ವಾಳ ತಾಲೂಕಿನ ವಿಟ್ಲ ಪ್ರದೇಶದವನಿರಬಹುದು. ಮಂಗಲದಲ್ಲಿ ಶೃಂಗಪುರೇಶನ ಸ್ತುತಿಯೂ ಇದೆ.  ಪ್ರಸಂಗದ ನಡೆಯು ಗದುಗು ಭಾರತಕ್ಕೆ ಅನುಸಾರವಾಗಿದ್ದು, ಶಲ್ಯಪರ್ವ, ಗದಾಪರ್ವಗಳೆರಡರ ಕತೆಯನ್ನೊಳಗೊಂಡಿದೆ. ಕಲುಷಗಾಮಿನಿ, ಜಗಳಗ್ರಂಥಿ,  ಕರಂಡಕಾಸುರರ ಕತೆ, ಬೇರೆ ಆಕರದ್ದು.

ಪ್ರಸಂಗ ಸಾರ :

ಶಲ್ಯನಿಗೆ ಸೇನಾನಾಯಕತ್ವ, ಪ್ರತಿಭಟನಾಗಿ ಧರ್ಮರಾಜನ ಪ್ರವೇಶ. ಯುದ್ಧಾರಂಭ, ಧರ್ಮರಾಜನಿಂದ ಶಲ್ಯವಧೆ, ದುರ‍್ಯೋಧನನಿಂದ ಯುದ್ಧ ಮುಂದುವರಿಕೆ.  ಭೀಮ ಕೌರವರ ಯುದ್ಧ, ಕೌರವನ ಪರಾಭವ. ಸಂಶಪ್ತಕ – ಭೀಮರಯುದ್ಧ. ಸಂಶಪ್ತಕರ ಸೋದರಿಯರಾದ ಕಲುಷಗಾಮಿನಿ, ಜಗಳಗ್ರಂಥಿಯರ ಪ್ರವೇಶ. ಹನುಮಂತನಿಂದ ಅವರ ವಧೆ. ಸಂಶಪ್ತಕರ ಅಳಿಯನಾದ ಕರಂಡಕಾಸುರ ಅರ್ಜುನರಯುದ್ಧ. ಹನುಮಂತನಿಂದ ಕರಂಡಕಾಸುರನ ವಧೆ.

ದುರ‍್ಯೋಧನನ ದುಃಖ. ಸಂಜಯನ ಆಗಮನ ದುರ‍್ಯೋಧನ ಸಂಜಯ ಸಂವಾದ, ಕೌರವನ ದ್ವೈಪಾಯನ ಸರೋವರ  ಪ್ರವೇಶ. ಅಶ್ವತ್ಥಾಮನಿಂದ ಕೌರವನಿಗೆ ಪ್ರಚೋದನೆ. ಕೌರವನ ತಿರಸ್ಕಾರ. ದುರ‍್ಯೋಧನನನ್ನು ಕಾಣಲಾಗದೆ ಧರ್ಮರಾಜನ ದುಃಖ. ಕಿರಾತ ದೂತರ ಮೂಲಕ ಭೀಮನಿಗೆ ದುರ‍್ಯೋಧನನ ಸುಳಿವು. ಪಾಂಡವರೂ ಕೃಷ್ಣನೂ ಸರೋವರದೆಡೆಗೆ ಬಂದು, ಕೌರವನನ್ನು ಜರೆಯುವುದು. ತಡಿಗಡರಿದ ಕೌರವನಿಂದ ಪಂಥಾಹ್ವಾನ, ಬಲರಾಮನ ಆಗಮನ. ಭೀಮ ದುರ‍್ಯೋಧನರ ಗದಾಯುದ್ಧ, ಜರೆದಾಟ, ದುರ‍್ಯೋಧನನ ಪತನ, ಭೀಮನಿಂದ ದುರ‍್ಯೋಧನನ ದಂತಭಂಗ, ಮುಕುಟಭಂಗ, ಬಲರಾಮನ ಕೋಪ, ಕೃಷ್ಣನಿಂದ ಸಾಂತ್ವನ, ಅಶ್ವತ್ಥಾಮನ ರೌದ್ರ, ಪಾಂಡವಸೇನಾ ಸಂಹಾರ, ಉಪಪಾಂಡವರ ಕೊಲೆ, ದ್ರೌಪದಿಯ ದುಃಖ, ಅಶ್ವತ್ಥಾಮನ ತೃಣಾಸ್ತ್ರ ಪ್ರಯೋಗ, ಕೃಷ್ಣನಿಂದ ಉಪಶಮನ, ಧೃತರಾಷ್ಟ್ರಾಲಿಂಗನ. ಭೀಮ ವಿಗ್ರಹ  ಭಂಜನ, ಧರ್ಮರಾಜನ ಪಟ್ಟಾಭಿಷೇಕ.

ಸಮಗ್ರ ಶಲ್ಯ ಗದಾಪರ್ವಗಳ ಕತೆಯನ್ನು ಸೊಗಸಾಗಿ, ಒಳ್ಳೆಯ ಭಾಷೆ, ಭಾವಪ್ರವಣ ಶೈಲಿಯಲ್ಲಿ ವಿವಿಧ ರೀತಿಯ ಪದ್ಯಗಳಲ್ಲಿ ರಚಿಸಿದ ಕವಿಯ ಪ್ರಸಂಗರಚನಾ ಸಾಮರ್ಥ್ಯ ಮೇಲ್ಮಟ್ಟದ್ದು. ರಂಗದಲ್ಲಿ ಪ್ರಯೋಗದ ದೀರ್ಘ ಇತಿಹಾಸವುಳ್ಳ ಕೃತಿಯಿದು. ತಾಳಮದ್ದಳೆಯಲ್ಲೂ ಪ್ರಮುಖ ಪ್ರಸಂಗ. ಇದರ ಕವಿ ಯಾರೆಂದು ತಿಳಿಯದಿರುವುದು ಖೇದಕರ.

ಸನ್ನಿವೇಶ ಚಿತ್ರಾಣದಲ್ಲಿ ಕವಿಗಿರುವ ಹಿಡಿತಕ್ಕೆ ಧರ್ಮರಾಜನ ರಣರಂಗ ಪ್ರವೇಶ, ಹನುಮಂತನ ಯುದ್ಧ ಪ್ರಕರಣ, ಕರಂಡಕಾಸುರ ವೃತ್ತಾಂತ, ಸಂಜಯ ಕೌರವ ಸಂವಾದ, ಪಾಂಡವರ ಮೂದಲೆ,  ಗದಾಯುದ್ಧದ ಸಂವಾದಗಳು, ಮೂದಲಿಕೆಗಳು ಮೊದಲಾದ ಎಲ್ಲೆಡೆಗಳಲ್ಲಿ ಉದಾಹರಣೆಗಳನ್ನು ಕಾಣುತ್ತೇವೆ. ಗದುಗು ಭಾರತದ ಸನ್ನಿವೇಶಗಳನ್ನು ಪ್ರಸಂಗದಲ್ಲಿ, ಓರಣವಾಗಿ ಸಂಕ್ಷೇಪಿಸಿ ಪುನಾರಚಿಸಿ, ರಂಗಕ್ಕೊಪ್ಪುವಂತೆ ಕೆಲವು ವಿಷಯಗಳನ್ನು ಹಿಂದೆ ಮುಂದೆ ಮಾಡಿರುವುದೂ, ಹ್ರಸ್ವ, ಲೋಪಗೊಳಿಸಿದ್ದೂ ಉಚಿತವಾಗಿದೆ. ಈ ಕವಿಯು ಈರ್ವರು ರಕ್ಕಸಿಯರನ್ನೂ, ಕರಂಡಾಸುರನನ್ನೂ ಕತೆಗೆ ಅಳವಡಿಸಿ ಬಣ್ಣದ ವೇಷ (ರಾಕ್ಷಸ)ಕ್ಕೆ ಅವಕಾಶ ಕಲ್ಪಿಸಿದ್ದಾನೆ.  ಸನ್ನಿವೇಶಗಳ ಆನುಪೂರ್ವಿ, ತಾರತಮ್ಯ ಕಲ್ಪನೆ ಕೆಲವಡೆ ಚೆನ್ನಾಗಿದೆ. ಸೌಪ್ತಿಕ ಪರ್ವ (ಅಶ್ವತ್ಥಾಮ ಕೋಲಾಹಲ) ದ ಭಾಗ ಅಷ್ಟು ಸಶಕ್ತವಾಗಿ ಬಂದಿಲ್ಲ.  ಆಕರದ ಸೂಚನೆಗಳಲ್ಲಿ ಕವಿಯು ಕೆಲವೆಡೆ ವಿಭಿನ್ನ ರೀತಿಯಲ್ಲಿ ಬೆಳೆಸಿದ್ದಾನೆ – ಉದಾ :  ದುರ‍್ಯೋಧನನು ಪಾಂಡವರನ್ನು ಆಹ್ವಾನಿಸುವುದು, ಬಿದ್ದ ಭೀಮನನ್ನು ಹೀಯಾಳಿಸುವ ಸಂದರ್ಭ ಇತ್ಯಾದಿ.

ಗದಾಪರ್ವ ಪ್ರಸಂಗದ ಕೆಲವು ಸುಂದರ ಪದ್ಯ ಸರಣಿಗಳು –

ಮರುತಸಂಭವನಿಂತು ಮೂದಲಿಸಿ ಬರುತಿರಲು

ಪೇಳಲೇನದ ಛತ್ರ ಚಾಮರಾದಿಗಳ ಬೀಳುಗೊಟ್ಟುರೆ ದುಗುಡದಿಂದ (ಕೌರವನ ಏಕಾಂಗಿತನ)

ಪೊಡವಿಪಾಲಕ ಭಾಗ್ಯದಾಯಕ ನುಡಿಯದೆಲ್ಲಿಗೆ ನಡೆವೆ ಮೆಲ್ಲಗೆ | (ಸಂಜಯನ ಕಕ್ಕುಲತೆ)

ತಂದೆಗತಿ ಧೈರ‍್ಯವನು ತಾರತಮ್ಯದಿ ಪೇಳು…….. (ದುರ‍್ಯೋಧನನ ಎಚ್ಚರಿಕೆ)

ನಿನ್ನಯ ಬಲುಹೇನು | ಮಾರುತಿಯನ್ನು ನಿರೀಕ್ಷಿಪೆನು …. (ಕೌರವನ ಮೂದಲೆ )

ನೋಡಿರಿ ಧರ್ಮಜ ಫಲುಗುಣಾದಿಗಳು……. (ಭೀಮನನ್ನು ಹಿಯಾಳಿಸುವುದು)

ಭೂಪ ಏನಾಯ್ತು ಪ್ರತಾಪ…. | ಯಾರಿಲ್ಲದೆ ಪಾಪ |

ಇಲ್ಲೆಲ್ಲ ಸಂದೊರ್ಭೋಚಿತ, ರಸೋತ್ಕಟವಾದ ಪದ್ಯ ರಚನೆಯನ್ನು ಕಾಣುತ್ತೇವೆ.

 . ಸಾಹಸ ಭೀಮ ವಿಜಯ : (ಗದಾಯುದ್ಧ)

ಯಕ್ಷಗಾನ ಪ್ರಸಂಗ ಸಾಹಿತ್ಯದಲ್ಲಿ ಇದು, ತನ್ನ ಆಕರದ ಕಾರಣದಿಂದಲೂ, ರಚನಾ ವಿಶೇಷದಿಂದಲೂ, ವಿಭಿನ್ನ ರೀತಿಯ ಕೃತಿ. ಹೀಗಾಗಿಯೇ ಇದನ್ನು ಪ್ರಸ್ತುತ ಸಂಪುಟದಲ್ಲಿ ಅಳವಡಿಸಿದೆ.

ಇದರ ಕವಿ ಕೆ.ಪಿ. ವೆಂಕಪ್ಪಶೆಟ್ಟರು, ಪಕೀರ ಶೆಟ್ಟರೆಂದೂ ಪ್ರಸಿದ್ಧರು. ಇವರ ಕಾಲ : ೧೮೮೫ – ೧೯೫೫. ಇವರು ಯಕ್ಷಗಾನ ತಾಳಮದ್ದಳೆಯ ಅಗ್ರಗಣ್ಯ ಅರ್ಥದಾರಿಗಳಾಗಿ ಪ್ರಸಿದ್ಧರಾದವರು.

೧೯೨೦-೧೯೫೫ರ ಅವಧಿಯಲ್ಲಿ ಜರಗಿದ ತಾಳಮದ್ದಲೆ ರಂಗದ ನವೋದಯದ ಅಗ್ರಣಿಗಳು.

(ಅರ್ಕುಳ ಸುಬ್ರಾಯಾಚಾರ‍್ಯ, ಪೊಳಲಿ ಶಂಕರನಾರಾಯಣ ಶಾಸ್ತ್ರಿ, ನಾರಾಯಣಕಿಲ್ಲೆ, ಕೀರಿಕ್ಕಾಡು ವಿಷ್ಣುಭಟ್, ಕುಬಣೂರು ಬಾಲಕೃಷ್ಣರಾವ್, ಬಡಕ್ಕಿಲ ವೆಂಕಟರಮಣ ಭಟ್, ಬಿ. ರಂಗಪ್ಪಯ್ಯ – ಮೊದಲಾದವರು ಈ ನವೋದಯದ ಇತರ ಪ್ರಮುಖರು) ಶೆಟ್ಟರು ಯಕ್ಷಗಾನದ ಭಾಗವತಿಕೆ, ವಾದನ, ಪ್ರಸಂಗರಚನೆ ಎಂಬ ವಿವಿಧ ಅಂಗಗಳಲ್ಲಿ ಪರಿಣತರಾಗಿದ್ದರು. ವಿಶಾಲ ಶಿಷ್ಯವರ್ಗ ಅವರಿಗಿದ್ದಿತು. ಆಯುರ‍್ವೇದ ವೈದ್ಯರಾಗಿಯೂ ಪ್ರಸಿದ್ಧರು. ರಾಜಸಿಂಹ, ಭರತೇಶ ವೈಭವ ಮೊದಲಾದ ಪ್ರಸಂಗಗಳನ್ನೂ ಇವರು ಬರೆದಿದ್ದಾರೆ.ಶ್ರೀ ವೆಂಕಪ್ಪಶೆಟ್ಟರಿಗೆ ಹಳಗನ್ನಡ ಕಾವ್ಯಗಳಲ್ಲಿ ವಿಶೇಷವಾದ ಒಲವು. ಅದರ ಫಲವೇ ಈ ಕೃತಿ. ಇದು ಕವಿ ರನ್ನನ ಸಾಹಸ ಭೀಮ ವಿಜಯದ ಪ್ರಸಂಗೀಕರಣ, ಅಭಿಜಾತ ಸಂಸ್ಕೃತ ನಾಟಕಗಳ ಸಂಪ್ರದಾಯದಂತೆ ಇದನ್ನು ಸಂಧಿ (ಅಂಕ) ಗಳಾಗಿ ವಿಂಗಡಿಸಿ ಬರೆದು, ಮುಖ, ಪ್ರತಿಮುಖ, ಗರ್ಭ, ಅವಮರ್ಶ, ನಿರ್ವಹಣವೆಂಬ ಐದು ಸಂಧಿಗಳಾಗಿ ರಚಿಸಿದ್ದಾರೆ. ಪ್ರಸಂಗದ ಆರಂಭದಲ್ಲೂ, ಕೊನೆಯಲ್ಲೂ ಕವಿಯ ಇಷ್ಟದೇವನಾದ ಕಣ್ವಪುರ (ಕುಂಬಳೆ) ಗೋಪಾಲಕೃಷ್ಣನ ಸ್ತುತಿಯಿದೆ.

ಪ್ರಸಂಗಸಾರ : ಪಾಂಡವರ ಒಡ್ಡೋಲಗ – ಭೀಮನ ಪ್ರತಿಜ್ಞೆ, ಭೀಮ ದ್ರೌಪದೀ ಸಂವಾದ, ಭೀಮನ ಸಂಕಲ್ಪ ಕಥನ. ದುರ‍್ಯೋಧನ ಸಂಜಯ ಸಂವಾದ. ಪೂರ್ವ ಪ್ರಸಂಗಗಳ ವಿಮರ್ಶೆ ಸಂಜಯನೀತಿ ದುರ‍್ಯೋಧನ ತಿರಸ್ಕಾರ, ಧೃತರಾಷ್ಟ್ರ ಗಾಂಧಾರಿಯರ ದುಃಖ. ಸಂಜಯನ ಸಾಂತ್ವನ ದುರ‍್ಯೋಧನನಿಗೆ  ತಂದೆ ತಾಯಿಯರ ಉಪದೇಶ. ದುರ‍್ಯೋಧನನ ನಿರಾಕರಣ.

ರಣರಂಗದಲ್ಲಿ ಕೌರವ – ಮರುಳ್ಗಳ ಸಂವಾದ. ಅಭಿಮನ್ಯು, ದುಶ್ಯಾಸನ, ಕರ್ಣರ ಬಗೆಗೆ ಕೌರವನ ದುಃಖ, ಭೀಷ್ಮರ ಭೇಟಿ. ಉಪದೇಶ, ತಿರಸ್ಕಾರ. ಸರೋವರ ಪ್ರವೇಶಕ್ಕೆ ಸಲಹೆ ಸ್ವೀಕಾರ.

ಧರ್ಮರಾಯ-ಕೃಷ್ಣಸಂವಾದ. ಯುದ್ಧ ವಿಮರ್ಶೆ ಗಾಂಧಾರಿ-ಭೀಮಸಂವಾದ, ಬಿರುನುಡಿಗಳು, ಕಿರಾತರಿಂದ ಭೀಮನಿಗೆ ಕೌರವನ ವಾರ್ತೆ. ಧರ್ಮರಾಜನಿಗೆ ಭೀಮನಿಂದ ವಿಚಾರ ತಿಳಿಸುವಿಕೆ.  ಕೃಷ್ಣ ಸಹಿತ ಪಾಂಡವರು ಕೊಳದ ಬಳಿಬಂದು, ಮೂದಲಿಸುವುದು, ಭೀಮನ ಮೂದಲಿಗೆ ಕೌರವನ ಹೊರಡುವಿಕೆ,  ಭೀಮ ಕೌರವ ಸಂವಾದ ಗದಾಯುದ್ಧನಿರ್ಣಯ, ಬಲರಾಮನ ಆಗಮನ, ಆಕ್ಷೇಪ. ಕೃಷ್ಣ ಬಲರಾಮ ಸಂವಾದ.

ಗದಾಯುದ್ಧಾರಂಭ, ಪರಸ್ಪರ ಮೂದಲಿಕೆ ಭೀಮನ ಪತನ. ಕೌರವನ ಅಟ್ಟಹಾಸ. ಭೀಮನ ಚೇತರಿಕೆ, ಊರುಭಂಗ. ಬಲರಾಮನ ಕೋಪ, ಕೃಷ್ಣನ ಸಮಾಧಾನ, ಬಲರಾಮನ ನಿರ್ಗಮನ, ದ್ರೌಪದಿಯ ಹರ್ಷ. ವೇಣೀಸಂಹಾರ.

ಅಶ್ವತ್ಥಾಮನ ಪ್ರವೇಶ, ಅಶ್ವತ್ಥಾಮ – ಲಕ್ಷ್ಮೀ ಸಂವಾದ, ಲಕ್ಷ್ಮೀ ನಿರ್ಗಮನಕ್ಕೆ ಅಶ್ವತ್ಥಾಮನ ಆಕ್ಷೇಪ, ಪ್ರತ್ಯುತ್ತರ, ಕೌರವ ಅಶ್ವತ್ಥಾಮ ಸಂವಾದ. ಶಿಬಿರದಲ್ಲಿ ಅಶ್ವತ್ಥಾಮನ ಕೋಲಾಹಲ, ಉಪಪಾಂಡವರ ವಧೆ, ದುರ‍್ಯೋಧನನ ಆಕ್ಷೇಪ.

ಭೀಮಸೇನನಿಗೆ ಪಟ್ಟಾಭಿಷೇಕ. ಮಂಗಲ.

ಕವಿಯು ರನ್ನನ ಕಾವ್ಯವನ್ನು ಪ್ರಸಂಗಕ್ಕೆ ಆಕರವಾಗಿಸಿದ್ದು ಪ್ರಸಂಗ ಸಾಹಿತ್ಯದಲ್ಲಿ ಒಂದು ಹೊಸ ವಿಧಾನ, ಮಾರ್ಗದರ್ಶಿ ಉಪಕ್ರಮ. ಪ್ರಸಂಗದ ಭಾಷೆ ನಿರ್ದುಷ್ಟವಾಗಿದ್ದು, ರನ್ನನ ಕಾವ್ಯದ ಸೊಗಸು ಆದಷ್ಟು ಸರಳವಾಗಿ ಓದುಗರಿಗೆ ಸಿಗುವಂತೆ, ಕೆಲವೆಡೆ ಅದೇ ಪದ ಪ್ರಯೋಗಗಳನ್ನು ಅಳವಡಿಸಿ ಬರೆಯಲಾಗಿದೆ. ಛಂದೋಬಂಧಗಳ ಆಯ್ಕೆ ಬಳಕೆ ವೈವಿಧ್ಯಯುತವಾಗಿದೆ. ರಸೋಚಿತವಾಗಿದೆ. ಆದರೆ ಪದ್ಯಗಳ ಭಾಷೆ, ಶೈಲಿ ಸಾಮಾನ್ಯ ಪ್ರಸಂಗ ಸಾಹಿತ್ಯದಂತೆ ಸರಳವಾಗಿ, ಸಲೀಸಾಗಿ ಇಲ್ಲ. ಪ್ರೌಢ ಮತ್ತು ಬಿಗಿತದಿಂದ ಕೂಡಿದೆ.

ಉದಾ : ಬಿಡಲಾರದೆ ನಿನ್ನಡಿಯಂ | ಪೊಡಮಟ್ಟುರು ಭಕ್ತಿಯೊಳ್ನುತಿಸುವರ್ಗೆಂದುಂ
ಕುಡುಮೆಯ ಕೊಡುಗೈ ನೀಡುವ | ….
ಅಮೃತಕರಕುಲಸೋಮನಲ್ಲಿಗೆವಿಮಲ ಸುರಕುಜ ಸಮರ
ಸಾಹಸ | ಸಮಿತಭೂಭುಜ
ನಿನ್ನಂತೆ ನಿಜ ಭುಜದೆ ಮುನ್ನಾಂತರಾರಿಲ್ಲ | ಪೊನ್ನಾಯ್ತು
ಅರಿಗಿಂಬಾಯ್ತಳಿವಾದುದು | ಮರುತ್ಸುತಂಗರ್ಜುನಾದಿಗಳುಳಿದ ಮೂರ್ತಿ

ಕವಿಯು ಅರ್ಥದಾರಿಯಾದುದರಿಂದ, ಪ್ರಸಂಗವು ಮುಖ್ಯವಾಗಿ ಮಾತುಗಾರಿಕೆಗೆ ವಿಷಯವನ್ನು  ಒದಗಿಸುವ ಹಾಗೆ, ವಿಷಯಗಳು ಒತ್ತೊತ್ತಾಗಿ ಬರುವಂತೆ ರಚಿಸಿರುವುದು ಕಾಣುತ್ತದೆ.

ಪ್ರಸಂಗದ ಕೆಲವು ವಿಶಿಷ್ಟ ಪದ್ಯಗಳು :

ಆವನ ಚಿತ್ಪ್ರಭಾವಳಿಯ ತೇಜದೊಳೀ ಭುವನಂಗಳಾವಗಂ
ಭಾವತರಂಗದೊಳ್ನೆಲಸಲೂರ್ಜಿತ ಶಕ್ತಿಯನಿತ್ತ ಕೃಷ್ಣನಂ
ಪಟ್ಟದಾನೆಯನೇರಿ ವಿಭವದಿ | ನೆಟ್ಟನೆತ್ತಿರ್ದದವಳ ಛತ್ರದ
ಮಟ್ಟಕೆಸೆಯುವ ಶುಭ್ರಚಾಮರ | ದೊಟ್ಟಿಗೈತಹ ಭಾಗ್ಯವಾ | ಬಿಟ್ಟೆಯೇನೈ
(ಕೌರವನಲ್ಲಿ ಭೀಷ್ಮರ ನುಡಿ)

ಸದ್ದಿದಿಲ್ಲ ಎದ್ದು ಬಾರ | ಗೆದ್ದನೆನ್ನ ಬದ್ಧವೈರಿಗೆ
ವೊದ್ದಲೇಕೆ ಮುದ್ದೆಗೂಳ | ಮೆದ್ದಬೇಕು ಕುನ್ನಿಗೆ
(ಬಿದ್ದ ಭೀಮನಿಗೆ ಕೌರವನ ಜರೆತ)

ಸಂಪಾದನ ವಿಧಾನ

ಈ ಸಂಪುಟದಲ್ಲಿರುವ ಒಂಬತ್ತು ಪ್ರಸಂಗಗಳಲ್ಲಿ ಎಂಟು ಪ್ರಸಂಗಗಳು ಉಡುಪಿಯ ಪಾವಂಜೆ ಗುರುರಾವ್ ಎಂಡ್ ಸನ್ಸ್‌ರವರ ಶ್ರೀಮನ್ಮಧ್ವ ಸಿದ್ಧಾಂತ ಗ್ರಂಥಾಲಯದ ಪ್ರತಿಗಳನ್ನು ಆಧರಿಸಿದ್ದು, ಅತ್ಯವಶ್ಯವಿರುವಲ್ಲಿ ಸಂಪಾದಕನ ಅನುಭವದ ಆಧಾರದಲ್ಲಿ, ಪರಿಷ್ಕರಿಸಿದ್ದು, ಮೂಲದ ಮುದ್ರಣ ದೋಷ, ಅಕ್ಷರಲೋಪಾದಿಗಳನ್ನು ಸರಿಪಡಿಸಿದೆ. ಕೊನೆಯದಾದ ಸಾಹಸಭೀಮ ವಿಜಯವು, ಉಡುಪಿಯ ದಿ| ಹೊನ್ನಯ್ಯಶೆಟ್ಟರ ನವಭಾರತ ಪುಸ್ತಕ ಭಂಡಾರ (ನವಯುಗ ಪ್ರೆಸ್) ದವರಿಂದ ೧೯೫೧ರಲ್ಲಿ ಪ್ರಕಟಿತವಾದ ಪ್ರತಿ.

ದಿ. ಪಾವಂಜೆ ಗುರುರಾವ್ ಮತ್ತು ಅವರ ಬಳಿಕ ಅವರ ಪುತ್ರರಾದ ಸೇತು ಮಾಧವರಾಯರು ಯಕ್ಷಗಾನ ಪ್ರಸಂಗ ಸಾಹಿತ್ಯ ಪ್ರಕಾಶನದಲ್ಲಿ ಮಾಡಿದ ಸೇವೆಯು ಅನುಪಮವಾದದು, ಸದಾ ಸ್ಮರಣಿಯವಾದುದು. ಅವರ ಆಸಕ್ತಿಯಿಂದಲೆ, ಲಾಭಕರವಲ್ಲವಾದರೂ ಪ್ರಸಂಗ ಪ್ರಕಾಶನವನ್ನು ಅವರು ನಡೆಸಿದರು. ಸುಮಾರು ಐವತ್ತು ಪ್ರಸಂಗಗಳು ಉತ್ತಮ ಪ್ರತಿಗಳಾಗಿ ಪ್ರಕಾಶಿತವಾದುವು. ಅವರ ಪ್ರಕಾಶನಕ್ಕೆ ಕಾಲಕಾಲದಲ್ಲಿ,

ದಿ| ಬೈಂದೂರು ಬಾಡಶೇಷಭಟ್ಟರು, ಕವಿ, ಕಲಾವಿದರಾದ ದಿ | ಕಡಂದಲೆ ರಾಮರಾಯರು ಮತ್ತು ಶ್ರೀ ಮಟ್ಟಿ ಸುಬ್ಬರಾಯರು (ಕೊಟೆ ಸುಬ್ಬರಾಯರು) ಸಂಪಾದನ ಕಾರ‍್ಯದಲ್ಲಿ ನೆರವಿತ್ತವರು.

ಈ ಸಂಪುಟದಲ್ಲಿ ಬಳಸಿದ ಪ್ರತಿಗಳ ವಿವರ  :

ವಿರಾಟಪರ್ವ       ೧೯೮೫
ಕೃಷ್ಣಸಂಧಾನ      ೧೯೪೯
ಭೀಷ್ಮಾರ್ಜುನರ ಕಾಳಗ    ೧೯೬೨
ಅಭಿಮನ್ಯು ಕಾಳಗ-ಸೈಂಧವ ವಧೆ   ೧೯೫೬
ದ್ರೋಣಪರ್ವ      ೧೯೫೧
ಕರ್ಣಾರ್ಜುನ ಕಾಳಗ        ೧೯೮೪
ಕರ್ಣಪರ್ವ          ೧೯೫೭
ಗದಾಪರ್ವ         ೧೯೬೭
ಸಾಹಸಭೀಮ ವಿಜಯ       ೧೯೫೧

ಮುದ್ರಣದಲ್ಲಿ ಛಂದೋರೂಪವು ಕಾಣುವಂತೆಯೂ, ಸ್ಥಳ ಉಳಿತಾಯವಾಗುವಂತೆಯೂ ಸಾಲುಗಳನ್ನು ರೂಪಿಸಿದೆ.

ಅರಿಕೆನೆನವರಿಕೆ

ಈ ಪ್ರಸಂಗಗಳನ್ನು ರಚಿಸಿದ ಕವಿಗಳ ಪುಣ್ಯಸ್ಮರಣೆಗೆ ಆದರದ ನಮನಗಳು. ಪ್ರಕಾಶಕರಿಗೆ ಉಪಕಾರ  ಸ್ಮರಣೆ.

ಈ ಸಂಪುಟ ಸರಣಿಯ ಸತ್ಕಾರ್ಯದಲ್ಲಿ ಭಾಗಿಯಾಗುವ ಅವಕಾಶಕ್ಕಾಗಿ ಕನ್ನಡ ಸಂಸ್ಕೃತಿ ಇಲಾಖೆಗೆ, ಪ್ರಧಾನ ಸಂಪಾದಕರಿಗೆ ಮತ್ತು ಪರಿಶೀಲಕರಿಗೆ ಕೃತಜ್ಞತೆಗಳು.

ಸಲಹೆ  ಸೂಚನೆ,  ಸಹಕಾರಗಳಿಗಾಗಿ  ಡಾ.  ಕೆ.  ಚಿನ್ನಪ್ಪಗೌಡ,  ಡಾ.  ಪಾದೆಕಲ್ಲು  ವಿಷ್ಣುಭಟ್ಟ, ಪ್ರೊ. ಅಮೃತಸೋಮೇಶ್ವರ, ಡಾ.ಕೆ. ಪದ್ಮನಾಭ ಕೇಕುಣ್ಣಾಯ ಮತ್ತು ಸೇರಾಜೆ ಸೀತಾರಾಮ ಭಟ್, ಇವರಿಗೆ ಆಭಾರಿಯಾಗಿದ್ದೇನೆ.

ನ್ಯೂನಾತಿರೇಕಗಳಿದ್ದಲ್ಲಿ ಅಭಿಜ್ಞರು ಮನ್ನಿಸಿ ತಿಳಿಸಬೇಕಾಗಿ ಅರಿಕೆ.

ಡಾ.ಎಂ. ಪ್ರಭಾಕರ ಜೋಶಿ