ಕ್ಷಗಾನ ಇಂದು ತನ್ನ ವ್ಯಾಪ್ತಿ ವಿಸ್ತಾರಗಳನ್ನು ಪಡೆದುಕೊಂಡು ಒಂದು ಸಶಕ್ತ ರಂಗಮಾಧ್ಯಮವಾಗಿ ನಮ್ಮ ಮುಂದೆ ಕಂಗೊಳಿಸುತ್ತಿರುವುದು ಹೆಮ್ಮೆಯ ವಿಚಾರ. ಕಲಾವಿದರು, ವಿದ್ವಾಂಸರು, ಪ್ರೇಕ್ಷಕರು, ಪ್ರಯೋಗಶೀಲರು, ಅಭಿಮಾನಿಗಳು, ಕಲಾವಿಮರ್ಶಕರು ಹೇಗೆ ಈ ರಂಗ ಭೂಮಿಯ ಶಿಲ್ಪವನ್ನು ಕಡೆಯುತ್ತ ಹೋದರೋ, ಹಾಗೇ ಅನ್ಯರಂಗಭೂಮಿಯ ಅಧ್ಯಯನ, ಪ್ರಭಾವ, ಪರಿಸರಗಳೂ ತನ್ನದೇ ಆದ ಕೊಡುಗೆ ನೀಡಿದ್ದನ್ನು ಗುರುತಿಸಬಹುದು. ಈ ಪ್ರಕ್ರಿಯೆ ರಂಗ ಭೂಮಿಯಿರಲಿ, ಸಾಹಿತ್ಯವಿರಲಿ, ಎಲ್ಲ ಸೃಜನಶೀಲ ಮಾಧ್ಯಮಗಳಿಗೂ ಅನಿವಾರ್ಯ ಕೂಡಾ. ಹೀಗೆ ರಂಗಭೂಮಿ ತನ್ನ ಪಾತ್ರವನ್ನು ವಿಸ್ತರಿಸಿಕೊಂಡು ಮುನ್ನಡೆಯುತ್ತ ಹಲವು ಇತಿಹಾಸಗಳನ್ನು ನಿರ್ಮಿಸುತ್ತ, ನಿಯಮಗಳನ್ನು ರೂಪಿಸುತ್ತ ಸಾಗುವುದು, ಕೆಲವನ್ನು ಕೈಬಿಟ್ಟು ಕೆಲವನ್ನು ಬಚ್ಚಿಟ್ಟು, ಕೆಲವನ್ನು ಮುನ್ನಡೆಗೆ ಎಡೆಮಾಡಿಕೊಳ್ಳುವುದನ್ನು ಕೂಡಾ ಸೂಕ್ಷ್ಮಾಧ್ಯಯನದಿಂದ ಕಂಡುಬರುವ ಸತ್ಯ. ಯಕ್ಷಗಾನ ಇಂದು ಇಡೀ ರಾಷ್ಟ್ರದಲ್ಲಿ ಗುರುತಿಸಿಕೊಂಡು, ಹೊಸ ನಿರೀಕ್ಷೆಗಳನ್ನು ಹುಟ್ಟುಹಾಕುತ್ತ ಸಾಗುತ್ತಿರುವುದು ಪ್ರಸಕ್ತ ವಿದ್ಯಮಾನಗಳಲ್ಲಿ ಪ್ರಮುಖ ಅಂಶ. ಯಕ್ಷಗಾನವನ್ನು ನೋಡುವುದಕ್ಕೆ, ಆಸ್ವಾದಿಸುವುದಕ್ಕೆ ಹೆಚ್ಚು ಹೆಚ್ಚು ಭಿನ್ನ ವಲಯಗಳು ಮುನ್ನುಗ್ಗುತ್ತಿರುವುದನ್ನು ಇಂದು ಕಾಣಬಹುದು. ಅಂತೆಯೇ ಅದರ ಮೌಲ್ಯ, ಸತ್ವಸಾರಗಳ ಪರಾಮರ್ಶೆ, ಯಕ್ಷಗಾನದ ನೈಜ್ಯ ಶಕ್ತಿಯ ಅನ್ವೇಷಣೆ, ಸವಾಲುಗಳು ಕೂಡಾ ಗಮನ ಸೆಳೆಯುವ ಆಯಾಮವಾಗಿದೆ. ಯಕ್ಷಗಾನದ ಬೆಳವಣಿಗೆಗೆ, ಅಧ್ಯಯನಕ್ಕೆ ವಿಶ್ವವಿದ್ಯಾನಿಲಯಗಳೂ, ಸರಕಾರ, ಸರಕಾರೇತರ ಸಂಘ ಸಂಸ್ಥೆಗಳೂ, ಕಲಾ ಪೋಷಕರೂ ಮುಂದೆ ಬರುತ್ತಿರುವುದು ಸಂತಸದ ಸಂಗತಿಯಾಗಿದೆ.

ಕರ್ನಾಟಕದ ನೆಲದಲ್ಲಿ ಸತ್ವ ಮತ್ತು ಶಕ್ತಿಯನ್ನು ತುಂಬಿಕೊಂಡು ಯಕ್ಷಗಾನದಂತೆ, ಮೂಡಲಪಾಯ, ಕೇಳಿಕೆ, ಗಟ್ಟದಕೋರೆ ಯಕ್ಷಗಾನ, ದೊಡ್ಡಾಟ, ಸಣ್ಣಾಟ, ಮುಂತಾದ ರಂಗ ಪ್ರಕಾರಗಳು ಕೂಡಾ ಬೆಳೆಯುವ ತವಕದಲ್ಲಿರುವುದು ಸಂತೋಷ ಪಡಬೇಕಾದ ಸಂಗತಿ. ಅನೇಕ ಜನಪದೀಯ ಅಂಶಗಳನ್ನು, ನೃತ್ಯ, ಸಂಗೀತ, ಅಭಿವ್ಯಕ್ತಿಯ ವಿಧಾನಗಳನ್ನು ಬಳಸಿಕೊಂಡು, ಬೆಳದು ತನ್ನದೇ ಆದ ಅಸ್ತಿತ್ವವನ್ನು, ನೆಲೆಯನ್ನು ಗಟ್ಟಿಮಾಡಿಕೊಂಡಿರುವ ಎಲ್ಲ ರಂಗ ಪ್ರಕಾರಗಳೂ, ಕರ್ನಾಟಕದ ಪಾರಂಪರಿಕ ರಂಗಭೂಮಿಯ ಪ್ರತಿನಿಧಿಗಳೆ. ಇವುಗಳಿಗೆ ಸಿಗಬೇಕಾದ ಪ್ರಚಾರ-ಪ್ರಸಿದ್ಧಿಗಳು ದೊರಕದಿದ್ದರೂ, ಸತ್ವಸಾರಗಳಿಂದ ತುಂಬಿರುವ ಈ ಪ್ರಕಾರಗಳು ಮುಂದೆ ಉಜ್ವಲ ಭವಿಷ್ಯ ಹೊಂದಲು ಸಾಧ್ಯವಿದೆ. ಆ ಕುರಿತು ಪ್ರಯತ್ನ ನಡೆಯಬೇಕಾಗಿದೆ ಅಷ್ಟೆ.  ಹೀಗೆ ಇಂತಹ ಸಮೃದ್ಧ ರಂಗ ಪರಂಪರೆಯನ್ನು ಕನ್ನಡನಾಡಿನ ಒಡಲಿನಲ್ಲಿ ಬೆಳಸಿ, ಉಳಿಸುವ ಈ ಆಶಯಕ್ಕೆ ಪೂರಕವಾದ ವಾತಾವರಣ ಕೂಡ ಮುಖ್ಯವಾದದ್ದು.

ಯಕ್ಷಗಾನ ಸಾಹಿತ್ಯದ ಕುರಿತು ಇಂದು ನಾವು ಗಂಭೀರವಾದ ಚಿಂತನೆ ಮಾಡಬೇಕಾದ ಅನಿವಾರ್ಯತೆ ಇದೆ. ಅದಕ್ಕೂ ಮಿಗಿಲಾಗಿ ಈ ಸಾಹಿತ್ಯದ ಶಕ್ತಿ, ಅರಿವು, ತನ್ನತನ, ಇವುಗಳ ಪರಿಚಯ ಕನ್ನಡ ನಾಡಿನಾದ್ಯಂತ ಆಗಬೇಕಾಗಿದೆ. ಯಕ್ಷಗಾನ ಸಾಹಿತ್ಯದ ಮೇಲೆ ಕುಮಾರವ್ಯಾಸ, ರನ್ನ, ಪಂಪ ಮುಂತಾದ ಕನ್ನಡದ ಆಧಾರ ಸ್ಥಂಭರೆನಿಸಿದ ಕವಿಗಳ ಪ್ರಭಾವ ನಿಚ್ಚಳವಾಗಿದೆ. ಅಲ್ಲದೇ ತೊರವೆ ರಾಮಾಯಣ, ಕೌಶಿಕ ರಾಮಾಯಣ, ದಾಸಸಾಹಿತ್ಯದ ಪ್ರಭೆಯೂ ಅದಕ್ಕಿದೆ. ಈ ದೃಷ್ಟಿಯಿಂದ ಯಕ್ಷಗಾನ ಸಾಹಿತ್ಯ ಅಥವಾ ಪ್ರಸಂಗ ಅಧ್ಯಯನ, ಕನ್ನಡದ ಸಾಹಿತ್ಯ ಶಕ್ತಿಯ ವಿಸ್ತರಣೆಯೇ ಎನ್ನಬಹುದು. ಅಲ್ಲದೇ ಛಂದಸ್ಸು, ಗಾದೆಗಳು, ಜಾನಪದದ ನಂಬಿಕೆಗಳು, ಸಾಮಾಜಿಕ ಸಾಮರಸ್ಯದ ಕಲ್ಪನೆ, ಜನಜೀವದ ಸೂಕ್ಷ್ಮ ತುಮುಲಗಳು, ಯಕ್ಷಗಾನ ಸಾಹಿತ್ಯದಲ್ಲಿ ಹೇರಳವಾಗಿರುವುದರಿಂದ ಈ ಸಾಹಿತ್ಯ ಪ್ರಕಾರವನ್ನು ಕನ್ನಡ ಜನತೆಯ ಮುಂದಿಡಬೇಕಾದ ಅವಕಾಶವೂ ಅಗತ್ಯವಾಗಿ ಬೇಕಾಗಿದೆ.

ಈ ಹಿನ್ನೆಲೆಯಲ್ಲಿ ಕರಾವಳಿ, ಮಲೆನಾಡಿನಲ್ಲಿ ದಟ್ಟದಾಗಿ ಪಸರಿಸಿರುವ ಯಕ್ಷಗಾನದ ಹತ್ತು ಹಲವು ಪ್ರಮುಖ ಕೆಲಸಗಳು ಬಹುಮುಖ್ಯವೆನಿಸಿವೆ. ಪ್ರಸಂಗ ಸಾಹಿತ್ಯ ಪ್ರಕಟಣೆ ಇದೀಗ ಆರಂಭವಾಗಿರುವುದು ಶ್ಲಾಘನೀಯ ಪ್ರಯತ್ನಗಳಲ್ಲಿ ಗಮನಾರ್ಹವಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆರಂಭಿಸಿರುವ ಸಮಗ್ರ ಜಾನಪದ ಮತ್ತು ಯಕ್ಷಗಾನ ಸಾಹಿತ್ಯ ಸಂಪುಟಗಳ ಪ್ರಕಟಣೆ ಒಂದು ಅರ್ಥಪೂರ್ಣ ಹಾಗೂ ಅತ್ಯಂತ ಪ್ರಯೋಜನಕಾರಿ ಯೋಜನೆ ಎಂಬುದು ನನ್ನ ಬಲವಾದ ನಂಬಿಕೆಯಾಗಿದೆ.

ಆಂಗಿಕ, ವಾಚಿಕ, ಆಹಾರ್ಯ, ಸಾತ್ವಿಕಾಭಿನಯದಿಂದೊಡಗೂಡಿದ (Total theatre) ಸಮಗ್ರ ಸಂಪ್ರದಾಯಿಕ ರಂಗಭೂಮಿಯಾದ ಯಕ್ಷಗಾನದ ಅಂಗೋಪಾಂಗಗಳಲ್ಲಿ, ಅಡಕಗೊಂಡ ಸಾಹಿತ್ಯ ಶಕ್ತಿಯ ಕುರಿತು ಕನ್ನಡ ಸಾರಸ್ವತ ಲೋಕ ಇನ್ನೂ ಕಣ್ಣು ತೆರೆಯದಿರುವದು ವಿಷಾದನೀಯ. ಈ ಹಿಂದೆ ಈ ಸಾಹಿತ್ಯದ ಛಂದಸ್ಸು, ರೂಪರೇಖೆಗಳ ಕುರಿತು ಶ್ರೀ ಟಿ. ಕೇಶವ ಭಟ್, ಶ್ರೀ ಕ.ಪ್ರ. ಸೀತಾರಾಮ ಕೇದಿಲಾಯ, ಶ್ರೀ ಎಂ. ರಾಜಗೋಪಾಲಾಚಾರ್ಯ, ಪ್ರೊ. ಅಮೃತ ಸೋಮೇಶ್ವರ, ಡಾ. ಶೀಮಂತೂರು ನಾರಾಯಣ ಶೆಟ್ಟಿ, ಡಾ. ವಸಂನ್ತ ಭಾರದ್ವಾಜ ಕಬ್ಬಿನಾಲೆ, ಮುಂತಾದವರು ಈಗಾಗಲೇ ಸಾಕಷ್ಟು ಗಹನವೂ, ಗಮನಾರ್ಹವೂ ಆದ ಕೆಲಸ ಮಾಡಿದ್ದಾರೆ. ಡಾ. ವಸಂನ್ತ ಭಾರದ್ವಾಜರ ಯಕ್ಷಗಾನ ಛಂದಸ್ಸು ಪ್ರಬಂಧ ಮಂಡನೆಯಾಗಿದೆ. ಡಾ. ಪಾದೇಕಲ್ಲು ವಿಷ್ಣು ಭಟ್ ಇವರ ಭಾಗವತ ಯಕ್ಷಗಾನ  ಪ್ರಸಂಗಗಳು, ಡಾ. ಎಸ್.ಡಿ. ಹೆಗಡೆ ಹೊನ್ನಾವರ ಇವರ ಯ್ಷಕಗಾನದಲ್ಲಿ ರಾಮಾಯಣ ಪ್ರಸಂಗ ಪ್ರಬಂಧ, ಡಾ. ಆನಂದರಾಮ ಉಪಾಧ್ಯಾಯರ ಯಕ್ಷಗಾನ ರಾಮಾಯಣ ಪ್ರಸಂಗಗಳು ಸಂಶೋಧನಾಗ್ರಂಥ, ಹೀಗೆ ಹತ್ತು ಹಲವು ಮುಖದಲ್ಲಿ ಪ್ರಬುದ್ಧ ಹಾಗೂ ಶಕ್ತಿಯುತವಾದ ಅಧ್ಯಯನ, ವಿಶ್ಲೇಷಣೆ ನಡೆದಿದೆ. ಆದರೂ ಕೂಡಾ ಇದು ಸಮಗ್ರ ಕನ್ನಡ ಸಾಹಿತ್ಯ ಪರಂಪರೆ, ಚರಿತ್ರೆ, ಮೌಲ್ಯಮಾಪನಗಳ ಕ್ಷೇತ್ರಗಳಲ್ಲಿ ಪಡೆಯಬೇಕಾದ ಮನ್ನೆ ಪಡೆದಿಲ್ಲ ಎಂಬ ಕೊರಗು ಹೆಚ್ಚಿನ ವಿದ್ವಾಂಸರಲ್ಲಿ ಇರುವುದು ಸಹಜವೇ ಆಗಿದೆ.

ಯಕ್ಷಗಾನ ಪ್ರಸಂಗ ಸಾಹಿತ್ಯದ ಮೊತ್ತಮೊದಲ ಕೃತಿ ರಾಮ ಪುತ್ರ ವಿಷ್ಣು ಎಂಬಾತ ಬರೆದ ವೀರಾಟಪರ್ವ ಮತ್ತು ಬಾಣಾಸುರ ಕಾಳಗ ಎಂದು ಡಾ॥ಶಿವರಾಮ ಕಾರಂತರು ತಮ್ಮ ಯಕ್ಷಗಾನ (ಪುಟ 142) ಕೃತಿಯಲ್ಲಿ ಹೇಳಿದ್ದಾರೆ. ಆದರೆ ಉ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಪ್ರೋ ಎಂ.ಎ. ಹೆಗಡೆಯವರು ಸಂಪಾದಿಸಿದ ಆದಿಪರ್ವ ಎಂಬ ಪ್ರಸಂಗ ಡಾ॥ಕಾರಂತರು ಊಹಿಸಿದ ಕಾಲಕ್ಕಿಂತ ನೂರಾರು ವರ್ಷ ಹಿಂದಿನ ಪ್ರಸಂಗವಾಗಿರಬೇಕೆಂದು ಸಮರ್ಥವಾದ ಮಂಡಿಸಿದ್ದಾರೆ. ಏನೇ ಇದ್ದರೂ ಸುಮಾರು 14 ಮತ್ತು 15ನೇ ಶತಮಾನದಿಂದ ಲಭ್ಯವಾದ ಪ್ರಸಂಗರಚನೆಯ ಕಾಯಕ ಇಂದಿನವರೆಗೆ ಸುಮಾರು ಸಾವಿರಕ್ಕೂ ಮಿಕ್ಕಿ ಬೆಳದಿದೆ ! ರಚನೆಗಳಲ್ಲಿ ಸಾಹಿತ್ತಿಕಮೌಲ್ಯ, ರಂಗ ಗುಣ, ಮುಂತಾದ ಅಂಶಗಳನ್ನು ಚನ್ನಾಗಿ ದುಡಿಸಿಕೊಂಡು, ರಂಗಭೂಮಿಗೆ ಪೂರಕವಾಗಿ ಬೆಳೆದುಬಂದಿದೆ. ಪಾರ್ತೀಸುಬ್ಬ, ಹಟ್ಟಿಯಂಗಡಿ ರಾಮ ಭಟ್ಟ, ಮುಂತಾದ ಘನವೇತ್ತ ಕವಿಗಳಿಗೆ ಸಮನಾದ ಸೃಷ್ಟಿಯನ್ನು ಮಾಡಿ ಈ ರಂಗಭೂಮಿಯನ್ನು ಬೆಳೆಸಿದ ಹಲವು ಮಹನೀಯರ ಕೊಡುಗೆಯನ್ನು ಮರೆಯುವಂತಿಲ್ಲ.

ಯಕ್ಷಗಾನ ಪ್ರಸಂಗಗಳು ಹಲವು ಪ್ರಶ್ನೆಯನ್ನು ಹುಟ್ಟು ಹಾಕಿವೆ. ಆರಂಭದಲ್ಲಿ ಅದು ಗಾನಪ್ರಬಂಧ ಮಾತ್ರವಾಗಿತ್ತೇ ? ಅಥವಾ ರಂಗಭೂಮಿಗಾಗಿಯೇ ಬರೆಯಲ್ಪಟ್ಟಿದ್ದೆ ? (ನಾಟ್ಯಪ್ರಬಂಧವೇ?) ಎಂಬಂತಹ ತಾತ್ವಿಕ ಪ್ರಶ್ನೆ ಹಾಗೂ ಕೆಲವು ವ್ಯಾವಹಾರಿಕ ಸಮಸ್ಯೆಗಳನ್ನೂ, ಈಗ ಗಮನಿಸಬೇಕು. ತಾತ್ವಿಕವಾಗಿ ಇದಕ್ಕೆ ಮುಖ್ಯ ಪ್ರೇರಣೆ ಎಂದರೆ, ಯಕ್ಷಗಾನ  ಪ್ರಸಂಗಗಳಲ್ಲಿ  ಅಲ್ಲಲ್ಲಿ ಕವಿ ಪದ್ಯಗಳು. ಹೆಚ್ಚಿನ  ಯಕ್ಷಗಾನ ವಿಮರ್ಶಕರ ಪ್ರಕಾರ ಈ ಕವಿಪದ್ಯಗಳು ಪಾತ್ರದ ಪರಕಾಯ  ಪ್ರವೇಶವನ್ನು ಭಂಗಿಸಿ, ಹೊರನಿಂತ ಕಲ್ಪನೆಯನ್ನು ತರುತ್ತದೆ ಎಂಬುದಾಗಿದೆ.

ಉದಾಹರಣೆಗೆ ಸುಭದ್ರಾ ಕಲ್ಯಾಣದಲ್ಲಿ

ನರನಿಂತು ಮಳೆಗೆ ಮೈಸರಿಸಿ ನಡನಡುಗುತ್ತ
ಹರಿ ಮುರಾಂತಕ ಎನ್ನುತಿರಲು
ಅರಿದಿತ್ತ ಮುರಹರನು  ತರುಣಿಯರ ಮೇಳದ
ಲ್ಲಿರಲು ತನ್ನಲಿ ನಕ್ಕನಾಗ  

ಎಂಬ ಈ ಕವಿ ಪದ್ಯದ ಮೂಲಕ ಒಂದು ದೃಶ್ಯವನ್ನು ಮತ್ತು ಪಾತ್ರದ ಸ್ವಭಾವ, ಚಲನೆ, ಚರ್ಯೆಗಳನ್ನು ಭಾಗವತ ವಿವರಿಸುತ್ತಾನೆ. ನನ್ನ ದೃಷ್ಠಿಯಲ್ಲಿ ಇದು ಯಾವುದೇ ತೊಡಕನ್ನು ಅಥವಾ ರಸಭಂಗವನ್ನು ಮಾಡಲಾರದು. ಬದಲಾಗಿ ಇದು ಯಕ್ಷಗಾನದ ಒಂದು ತಾಂತ್ರಿಕತೆಯಾಗಿದೆ. ಅಥವಾ ರಂಗತಂತ್ರವಾಗಿದೆ. ಅಲ್ಲದೆ ಇಂತಹ ಪದ್ಯಗಳು ಸನ್ನಿವೇಷದಿಂದ ಮುಂದಕ್ಕೆ ದಾಟಲು ಕವಿಗೆ, ಕಥೆಗೆ ನಟನೆಗೆ ಅನಿವಾರ್ಯ ಕೂಡಾ.

ಭಾರತೀಯ ಅನ್ಯರಂಗ ಪರಂಪರೆಯಲ್ಲೂ ಇಂತಹ ಉದಾಹರಣೆಗಳು ನಮಗೆ ಸಿಗುತ್ತದೆ.

ಒಂದು ನಾಟ್ಯ ಪರಂಪರೆಗೆ ಬೇಕಾದ, ಪಾತ್ರ ಪ್ರವೇಶ, ಆಗಮನ-ನಿರ್ಗಮನಗಳ ಸೂಚನೆ, ರಾಗ ತಾಳಗಳ ನಿರ್ದೇಶನ, ಇವೆಲ್ಲ ಅಂತರ್ಗತವಾಗಿರುವ ಪ್ರಸಂಗಗಳು ಹೆಚ್ಚು ರಂಗ ಧರ್ಮವನ್ನೆ ಪ್ರಕಟಿಸುತ್ತವೆ ಎಂದು ನನ್ನ ಅಭಿಪ್ರಾಯ. ಯಕ್ಷಗಾನದ ಅತ್ಯಂತ ಯಶಸ್ವೀ ರಂಗ ಪ್ರಯೋಗಗಳೂ ಇಂದು ಸಣ್ಣಪುಟ್ಟ ಬದಲಾವಣೆ ಮಾಡಿಕೊಂಡು ಕೂ ಪ್ರಸಂಗದ ನಿರ್ದೇಶನದಂತೆ ಯಶಸ್ವೀ ಪ್ರದರ್ಶನ ನಡೆಸುತ್ತಿರುವುದನ್ನು ನಾವಿಂದು ಕಾಣಬಹುದು.

ಹೆಚ್ಚಿನ ಪ್ರಸಂಗಗಳಲ್ಲಿ ರಂಗಕ್ಕೆ ಒಗ್ಗದ ಪದ್ಯಗಳಿವೆ. ಅನಗತ್ಯವಾಗಿ ಬೆಳದ ಸಂವಾದಗಳಿವೆ. ಅಭಿನಯಿಸುವುದಕ್ಕೆ ಬಾರದ ರಚನೆಗಳಿವೆ. ಆದರೆ ಇದೆಲ್ಲ ಕವಿಗಳ ದೋಷ ಇರಬಹುದು ಅಥವಾ ಕಾಲದ ಪ್ರಭಾವವಾಗಿರಬಹುದು. ಕಾಲಾಂತರದಲ್ಲಿ ಗುಣ ದೋಷವಾಗಿ, ದೋಷ ಗುಣವಾಗಿ ಕಾಣುವುದುಂಟು. ಇಡೀ ರಾತ್ರಿಯನ್ನ ಲಕ್ಷದಲ್ಲಿಟ್ಟುಕೊಂಡು ಬರೆದ ಪ್ರಸಂಗಗಳು, ಕಾಲಮಿತಿಯ ಇಂದಿನ ದಿನಗಳಲ್ಲಿ ಅನೇಕ ತೊಡಕನ್ನು ಸೃಷ್ಟಿಸಿರಬಹುದು. ವೇಗ, ಮನೋಭಾವ, ಪರಿಸರದ ಪ್ರಭಾವಗಳು ಸಹ ಪ್ರಸಂಗದ ಪ್ರದರ್ಶನದ ಮೇಲೆ ಘಾಢ ಪರಿಣಾಮ ತರುವುದನ್ನ ಗಮನಿಸಬಹುದು. ಅದಕ್ಕೆ ತಕ್ಕಂತೆ ಬದಲಾವಣೆ, ಸುಧಾರಣೆ ತರುವುದು ನಮ್ಮ ಅಗತ್ಯಕ್ಕಾಗಿ ಅನಿವಾರ್ಯ. ವಿದ್ವಾಂಸರು, ಕಲಾತಜ್ಞರು ಈ ನಿಟ್ಟಿನಲ್ಲಿ ಆಳವಾದ ಚರ್ಚೆ ಮತ್ತು ಒಳನೋಟ ಹರಿಸಬಹುದಾಗಿದೆ.

ಯಕ್ಷಗಾನ ಪ್ರಸಂಗಗಳಲ್ಲಿ ಇಂದು ಆಧುನಿಕ ವಿಷಯಗಳನ್ನು ಪ್ರಸ್ತುತ ಪಡಿಸುವ ಪ್ರಯತ್ನ ಕೂಡಾ ನಡೆದಿದೆ. ಇಂಥವು ಅನಗತ್ಯ ಎಂಬುದಕ್ಕಿಂತ ಯಕ್ಷರಂಗ
ಮಾಧ್ಯಮಕ್ಕೆ ಹೊಂದುವ ಹಾಗೆ ಇವುಗಳ ರಚನೆ, ಪ್ರದರ್ಶನ ಇದ್ದರೆ, ರಂಗರಸಭಂಗವಾಗದಿರುವಂತಿದ್ದರೆ ಯಾವ ವಿಷಯವೂ ವಸ್ತು ವಾಗಬಲ್ಲದು. ಯಕ್ಷಗಾನ ಅಂಥಹ ಸ್ಥಿತಿಸ್ಥಾಪಕತ್ವ (Elasticity) ಹೊಂದಿರುವ ಮಾಧ್ಯಮವಾದ್ದರಿಂದ ಇದು ಸಾಧ್ಯವಾಗಬಲ್ಲದು. ಹೀಗೆ ಯಕ್ಷಗಾನ ಪ್ರಸಂಗ ಇಂದು ಒಂದು ವಿಸ್ತಾರವಾದ ಹರಹನ್ನ ಪಡೆದು, ಅಧ್ಯಯನ, ವಿಮರ್ಶೆಗಳ ಬೆಳಕಿನಲ್ಲಿ ಬೆಳೆಯಬೇಕಾದ ಸಾಹಿತ್ಯ ಪ್ರಕಾರವಾಗಿದೆ ಎಂಬುದು ನನ್ನ ಖಚಿತ ನಂಬಿಕೆಯಾಗಿದೆ.

ನಾನು ಈಗಾಗಲೇ ಪ್ರಸ್ತಾಪಿಸಿದಂತೆ, ಈ ಮಹತ್ತರ ಕೆಲಸಕ್ಕಾಗಿ ಕರ್ನಾಟಕ ಸರಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನ ಎಲ್ಲ ಯಕ್ಷಗಾನ ಪ್ರಿಯರೂ ಅಭಿನಂದಿಸಬೇಕಾಗಿದೆ. ಈ ಸಂಪಾದನಾ ಸಂಪುಟ ಇಡೀ ಯಕ್ಷಗಾನದ ರಂಗಭೂಮಿಗೆ ಹಲವಾರು ರೀತಿಯಲ್ಲಿ ಪ್ರಯೋಜನ ನೀಡಬಲ್ಲದು. ಪ್ರಮುಖವಾಗಿ ಯಕ್ಷಗಾನದಲ್ಲಿ ಈಗ ಎಲ್ಲರೂ ಎದುರಿಸುತ್ತಿರುವ ಸಮಸ್ಯೆ ಎಂದರೆ ಪ್ರಸಂಗ ಪುಸ್ತಕದ ಅಲಭ್ಯತೆ. ತೀರಾ ಮೊದಲು ಬೆಂಗಳೂರು ಹಾಗೂ ಮೈಸೂರುಗಳಲ್ಲಿ ಮುದ್ರಣವಾಗುತ್ತಿದ್ದ ಪ್ರಸಂಗ ಪುಸ್ತಕಗಳು, ಕಾಲಾಂತರದಲ್ಲಿ ಅದು ಕಡಿಮೆಯಾಗಲು, ಅದನ್ನು ಪರಿಷ್ಕರಿಸಿ, ಅಂದವಾಗಿ ಮುದ್ರಿಸುವ ಹೊಣೆಗಾರಿಕೆಯನ್ನು ಉಡುಪಿಯ ಶ್ರೀಕೃಷ್ಣ ಮುದ್ರಣಾಲಯ ಕೈಗೆತ್ತಿಕೊಂಡು ನೂರಾರು ಪ್ರಸಂಗಗಳನ್ನು ಮುದ್ರಿಸಿದ್ದು ಈಗ ಇತಿಹಾಸ. ಈಗ ಅಲ್ಲಿಂದಲೂ ಹೊಸ ಮುದ್ರಣಗಳು ಬಂದ ಮಾಹಿತಿ ನನಗಿಲ್ಲ. ಆದರೆ ಬೆಂಗಳೂರು ಮತ್ತು ಮೈಸೂರಿನ ಹಾಗೂ ಉಡುಪಿಯ ಪ್ರಕಾಶಕರನ್ನು ಖಂಡಿತಾ ಕೃತಜ್ಞತೆಯಿಂದ ಸ್ಮರಿಸಬೇಕಾಗಿದೆ. ಇವರ ಪ್ರಯತ್ನ ಮತ್ತು ಕಲೆಯ ಮೇಲಿನ ಪ್ರೇಮದಿಂದ ಈ ರಂಗಭೂಮಿಗೆ ಪ್ರಸಂಗ ಪುಸ್ತಕದ ವಿಷಯದಲ್ಲಿ ಆದ ಉಪಕಾರ ಹಾಗೂ ಕೊಡುಗೆಯನ್ನು ಮರೆಯುವಂತಿಲ್ಲ.

ಪ್ರಸಂಗ ಸಾಹಿತ್ಯ 10 ಸಂಪುಟಗಳಲ್ಲಿ ಬರಲಿದ್ದು ಒಂದು ಸಂಪುಟಕ್ಕೆ ನನ್ನನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯ್ಕೆ ಮಾಡಿದ್ದಕ್ಕೆ ನಾನು ಅತ್ಯಂತ ಕೃತಜ್ಞನಾಗಿದ್ದೇನೆ. ಯಕ್ಷಗಾನಕ್ಕೆ ಸಿಕ್ಕಿದ ಅಪೂರ್ವ ಅವಕಾಶದಲ್ಲಿ ನನ್ನನ್ನು ತೊಡಗಿಸಿಕೊಳ್ಳಲು ಆಗಿರುವುದು ಹಾಗೂ ಈ ಕಾರಣದಿಂದ ಒಂದು ಅಧ್ಯಯನ ದೃಷ್ಟಿಯಲ್ಲಿ ಪ್ರಸಂಗ ಸಾಹಿತ್ಯವನ್ನು ನೋಡುವ ಅವಕಾಶ ದೊರಕಿದ್ದು ನನ್ನ ಭಾಗ್ಯವೆಂದೇ ಭಾವಿಸಿದ್ದೇನೆ.  ಘನ ಇಲಾಖೆಯ ಆಸಕ್ತಿ, ಅನೇಕ ಹಿರಿಯರ ಪ್ರೋತ್ಸಾಹ ನಾನೀ ಸಾಹಸಕ್ಕೆ ಇಳಿಯಲು ಅನುವು ಮಾಡಿಕೊಟ್ಟಿದೆ. ಮುಖ್ಯವಾಗಿ ಸಿದ್ದಾಪುರದ ಪ್ರೊ ಎಂ.ಎ. ಹೆಗಡೆಯವರ ಸಂಪೂರ್ಣ ಸಹಕಾರದಿಂದ ಇದು ನನಗೆ ಸಾಕಾರವಾಯ್ತು ಎಂದರೆ ತಪ್ಪಿಲ್ಲ. ಛಂದಸ್ಸು, ಭಾಷಾಸೌಂದರ್ಯ, ಪ್ರಸಂಗ ರಚನೆಗೆ ಸಂಬಂಧಿಸಿದ ಪ್ರಾಮುಖ್ಯ ಅಂಶಗಳನ್ನು ಅವರು ನನಗೆ ಮನವರಿಕೆ ಮಾಡಕೊಡದಿದ್ದರೆ, ಬಹುಷ ಈ ಕೆಲಸ ನನ್ನಿಂದ ಅಸಾಧ್ಯವಾಗುತ್ತಿತ್ತು. ಅಲ್ಲದೇ ಶ್ರೀ ಹೊಸ್ತೋಟ ಮಂಜುನಾಥ ಭಾಗವತರು ಕೂಡಾ ಈ ಸಂದರ್ಭದಲ್ಲಿ ನನ್ನ ಬೆನ್ನುತಟ್ಟಿ ಪ್ರೋತ್ಸಾಹಿಸಿ, ಸಮಾಲೋಚಿಸಿ, ಮಾರ್ಗದರ್ಶನ ಮಾಡಿದ್ದಾರೆ. ಅಶ್ವಮೇಧಯಾಗ ಪ್ರಸಂಗದಲ್ಲಿ ರಾಗ ತಾಳಗಳನ್ನು [ಮೂಲಪ್ರತಿಯಲ್ಲಿ ಇಲ್ಲದಿರುವೆಡೆ] ಅವರ ಸಹಾಯದಿಂದ ಸೇರಿಸಿದ್ದೇನೆ. ನಮ್ಮ ಮನೆಗೆ ಬಂದು ನನ್ನ ಸಂಪಾದನೆಂು ಕೆಲಸಕ್ಕೆ ಮಾರ್ಗದರ್ಶನ ಮಾಡಿದ್ದಾರೆ. ಈ ಇಬ್ಬರ ಸಹೃದಯತೆಗೆ, ಸಹಾಯಕ್ಕೆ ನಾನು ಸದಾ ಋಣಿಯಾಗಿದ್ದೇನೆ.

ಇನ್ನು ಕವಿ ವಿಚಾರವಾಗಿ ಡಾ ಪಾದೇಕಲ್ಲು ವಿಷ್ಣು ಭಟ್ಟರ ಸಹಕಾರ ಮನನೀಯ. ನಾನು ಬರೆದ ಕವಿ ಚರಿತ್ರೆ ಹೆಚ್ಚಿನದೆಲ್ಲ ಅವರ ಸಂಗ್ರಹದಿಂದ ಆಯ್ದ ವಿಚಾರಗಳು. ಅವರು ತಮ್ಮ ಮಹಾಪ್ರಬಂಧವನ್ನೇ ನನಗೆ ಓದಲು ಕೊಟ್ಟಿದ್ದು ಈ ಸಂದರ್ಭದಲ್ಲಿ ಬಹಳ ಅನುಕೂಲವಾಯ್ತು. ಹಾಗೇ ಡಾ ಎಸ್.ಡಿ. ಹೆಗಡೆ ಹೊನ್ನಾವರ ಇವರ ಮಹಾಪ್ರಬಂಧ ಮತ್ತು ಸಂಪಾದನೆಗೆ ಪ್ರಸಂಗ ಪುಸ್ತಕ ನೀಡಿದ್ದು ಉಪಕಾರವಾಗಿದೆ. ಡಾ ರಾಘವ ನಂಬಿಯಾರ್, ಡಾ ಚಿನ್ನಪ್ಪಗೌಡ, ಶ್ರೀ ಎಂ.ಎಲ್. ಸಾಮಗ, ಡಾ. ಎಂ. ಪ್ರಭಾಕರ ಜೋಶಿ ಮುಂತಾದವರ ಮಾರ್ಗದರ್ಶನ, ಸಲಹೆಗಳು ನನಗೆ ಬಹಳ ಅನುಕೂಲಿಸಿ ಬಂದಿದೆ. ಅಲ್ಲದೇ ಪ್ರಸಂಗ ಪುಸ್ತಕ ದೊರಕಿಸಿದ ಆತ್ಮೀಯ ಮಿತ್ರ ಹಾಗೂ ಉತ್ತಮ ಮದ್ದಲೆವಾದಕರಾದ ಶ್ರೀ ಎ.ಪಿ. ಪಾಠಕ್ ಕಾರ್ಕಳ, ಹಿರಿಯರಾದ ಡಾ ಶಾಲಿನಿ ರಘುನಾಥ ಧಾರವಾಡ, ಶ್ರೀ ಗಂಗಾಧರ ಶಾಸ್ತ್ರಿ ನಾಜಗಾರ, ಡಾ ಜಿ.ಎಸ್. ಭಟ್ಟ್ ಸಾಗರ, ಶ್ರೀ ನಾ. ಕಾರಂತ ಪೆರಾಜೆ ಇವರಿಗೆಲ್ಲ ನಾನು ಋಣಿಯಾಗಿದ್ದೇನೆ. ಪ್ರಸಂಗ ಪುಸ್ತಕದ ಪ್ರೂಫ್ ನೋಡುವುದು ಹಾಗೂ ಇನ್ನಿತರ ಕೆಲಸಗಳಲ್ಲಿ ನನಗೆ ಚೆನ್ನಾಗಿ ನೆರವಾಗಿ ಸಹಕರಿಸಿದ ನಮ್ಮ ಮಂಡಳಿಯ ಭಾಗವತರಾದ ಶ್ರೀ ಅನಂತ ಹೆಗಡೆ ದಂತಳಿಕೆ, ಕಲಾಕೇಂದ್ರದ  ವಿದ್ಯಾರ್ಥಿಗಳಾದ ಶ್ರೀ ಈಶ್ವರಭಟ್ಟ ಹಂಸಳ್ಳಿ, ರಾಘವೇಂದ್ರ ಹೆಗಡೆ ಇವರಿಗೆ ನಾನು ಕೃತಜ್ಞನಾಗಿದ್ದೇನೆ. ಅಂತೆಯೇ ನನ್ನ ತೀರ್ಥರೂಪರಾದ ಶ್ರೀ ಕೆರೆಮನೆ ಶಂಭು ಹೆಗಡೆಯವರಿಗೂ, ಹಿರಿಯ ವಿದ್ವಾಂಸರಾದ ಶ್ರೀ ಅಮೃತ ಸೋಮೇಶ್ವರರಿಗೂ ನಾನು ಅಭಾರಿಯಾಗಿದ್ದೇನೆ. ಈ ಸಂಪುಟವನ್ನು ಸಮಗ್ರವಾಗಿ ಪರಿಶೀಲಿಸಿ ಉಪಕರಿಸಿದ ಡಾ. ಕಬ್ಬಿನಾಲೆ ವಸಂತ ಭಾರದ್ವಾಜರಿಗೆ ನಾನು ಋಣಿಯಾಗಿದ್ದೇನೆ.

ಈ ಸಂಪಾದನೆಯ ವಿಷಯದಲ್ಲಿ ಹೇಳಬೇಕಾದ ಕೊನೆಯ ಮಾತೆಂದರೆ ಕವಿ ಪರಿಚಯದ ಕುರಿತು. ಯಕ್ಷಗಾನ ಕವಿಗಳ ಕುರಿತು ಸಿಗುವ ಮಾಹಿತಿ ತೀರಾ ಕಡಿಮೆಯೇ. ಹಾಗಾಗಿ ನಾನೀಗ ಸಂಪಾದಿಸಿದ 12 ಪ್ರಸಂಗಗಳಲ್ಲಿ ನಿಖರವಾಗಿ ಪ್ರಸಂಗ ಕರ್ತರ ಹೆಸರು ತಿಳಿಯುವುದು ಒಂಬತ್ತು ಕವಿಗಳದ್ದು ಮಾತ್ರ. ಅದರಲ್ಲೂ ರಾವಣೋದ್ಭವ ಬರೆದ, ನಗಿರೆಯ ಸುಬ್ಬ, ಮಾರಿಮುಖನ ಕಾಳಗ ಬರೆದ ಕವಿ ಪರಮೇಶ್ವರ ಮೈರಾವಣ ಕಾಳಗ ಬರೆದ ಕೆಳದಿಯವೆಂಕಟ, ರಾವಣ ವಧೆಯ ಕರ್ತು ಕಾಸರಗೋಡು ಸುಬ್ರಾಯ ಇವರ ಕುರಿತಾದ ಮಾಹಿತಿ ಏನೂ ನನಗೆ ಲಭ್ಯವಾಗಲಿಲ್ಲ. ಇನ್ನು ಕಾಲನೇಮಿ ಕಾಳಗ, ಇಂದ್ರಜಿತು ಕಾಳಗ, ಅಶ್ವಮೇಧಯಾಗ ಇವುಗಳನ್ನು ಬರೆದ ಕವಿ ಯಾರೆಂದೇ ತಿಳಿದಿಲ್ಲ ! ಅಶ್ವಮೇಧಯಾಗ ಬರೆದ ಕವಿ ಮಂಗಲ ಪದ್ಯದಲ್ಲಿ ಕೆಕ್ಕಾರವಾಸಗೆ ರಕ್ಕಸಾಂತಕನಿಗೆ ಎಂದು ಹೇಳಿರುವುದರಿಂದ ಈತ ಉತ್ತರ ಕನ್ನಡದ ಹೊನ್ನಾವರ ತಾಲೂಕಿನ ಕೆಕ್ಕಾರಿನವನು ಎಂದು ತಿಳಿಯಬಹುದು. ಇದರ ಬಗ್ಗೆ ಮತ್ತೆ ಯಾವುದೇ ಉಲ್ಲೇಖವೂ ದೊರಕಲಿಲ್ಲ. ಹೀಗೆ ಅಜ್ಞಾತವಾಗಿರುವ ಕವಿಗಳ ಬಗ್ಗೆ ಮುಂದೆ ಪ್ರಯತ್ನಪಟ್ಟು ಮೂಲಚೂಲ ಶೋಧಿಸಬೇಕಾದ ಅಗತ್ಯ ಇದೆ. ಇದರಿಂದ ಈ ಅಮೂಲ್ಯ ಕೊಡುಗೆ ನೀಡಿದ ಅವರಿಗೆ ನಾವು ಕೃತಜ್ಞತೆ ಸಮರ್ಪಿಸಿದಂತಾಗುತ್ತದೆ.

ಹೆಚ್ಚಿನ ಆಸಕ್ತಿ, ಪ್ರೋತ್ಸಾಹ ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ಉಷಾಗಣೇಶ್, ನಿರ್ದೇಶಕ ಶ್ರೀ ಮುದ್ದುಮೋಹನ್ ಅವರಿಗೂ, ನಿರಂತರ ಈ ಕಾರ್ಯದಲ್ಲಿ ತೊಡಗಿಸಿಕೊಂಡ ಜಂಟಿ ನಿರ್ದೇಶಕ ಹಾಗೂ ಸಾಹಿತಿಗಳಾದ ಶ್ರೀ ಕಾ.ತ. ಚಿಕ್ಕಣ್ಣ ಮತ್ತು ಮಾನ್ಯ ರಜಿಸ್ಟ್ರಾರ್ ಶ್ರೀ ಎಂ. ಮುನಿರಾಜು, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಇವರಿಗೆಲ್ಲ ಅನಂತಾನಂತ ಧನ್ಯವಾದಗಳು. ಈ ಸಂಪುಟವನ್ನ ಅಂದವಾಗಿ ಮುದ್ರಿಸಿಕೊಟ್ಟ ಗೀತಾಂಜಲಿ ಗ್ರಾಫಿಕ್ಸ್‌ನ ಮಾಲೀಕರಾದ ನಾಗಸುಂದರ್ ಹಾಗೂ ಸಿಬ್ಬಂದಿರ್ಗದವರಿಗೆ ನಾನು ಆಭಾರಿಯಾಗಿದ್ದೇನೆ.

ಕೆರೆಮನೆ ಶಿವಾನಂದ ಹೆಗಡೆ