ಸಣ್ಣಾಟ ಉತ್ತರ ಕರ್ನಾಟಕದಲ್ಲಿ ಪ್ರಚಾರದಲ್ಲಿರುವ ಒಂದು ಜನಪದ ರಂಗಪ್ರಕಾರವಾಗಿದೆ. ಸಣ್ಣಾಟವೆಂದರೆ ಸಣ್ಣದಾದ, ಸರಳವಾದ ಆಟ (ರಂಗಪ್ರದರ್ಶನ) ಎಂದು ಅರ್ಥ. ಮೂಡಲಪಾಯ ಬಯಲಾಟಕ್ಕೆ ಉತ್ತರ ಕರ್ನಾಟಕದಲ್ಲಿ ದೊಡ್ಡಾಟ ಎಂಬ ಹೆಸರಿದೆ. ಆರ್ಭಟದ ಕುಣಿತ, ಭವ್ಯ ರಂಗಸಜ್ಜಿಕೆ, ಭರ್ಜರಿಯಾದ ವೇಷಭೂಷಣಗಳಿಂದಾಗಿ ಮೂಡಲಪಾಯ ದೊಡ್ಡಪ್ರದರ್ಶನವೆನಿಸಿ ದೊಡ್ಡಾಟವಾಯಿತು. ಈ ದೊಡ್ಡಾಟಕ್ಕೆ ಸಂವಾದಿಯಾಗಿ ಸರಳ ರಂಗ ಸಜ್ಜಿಕೆ, ಸಾದಾ ವೇಷಭೂಷಣ, ಲಘು ಕುಣಿತಗಳನ್ನೊಳಗೊಂಡ ರಂಗಪ್ರದರ್ಶನವು ಸಣ್ಣದಾಗಿ ಕಂಡು ಸಣ್ಣಾಟವೆನಿಸಿತು.

ಸಣ್ಣಾಟದ ಮೊದಲಿನ ಹೆಸರು ಡಪ್ಪಿನಾಟ. ಇದು ತುಂಬಾ ಅರ್ಥಪೂರ್ಣವಾದ ಹೆಸರು. ಫಾರಸಿಶಬ್ದ ಡಫ್ದಿಂದ ಡಪ್ಪು ಬಂದಿದೆ. ಚಿಕ್ಕ ತಮ್ಮಟೆ : ಹಲಗೆ : ತಪ್ಪಡಿ ಆಕಾರದ ಡಪ್ಪು ಒಂದು ಸರಳ ಚರ್ಮವಾದ್ಯ. ಡಪ್ಪನ್ನೂ ಹಾಡಿಗೆ ಪಕ್ಕವಾದ್ಯವಾಗಿ ಬಾರಿಸುತ್ತ ಆಡುವ ಆಟ (ರಂಗಪ್ರದರ್ಶನ) ಡಪ್ಪಿನಾಟವೆನಿಸಿತು. ಈ ಆಟದ ದೃತ್ ಗತಿಯ ಧಾಟಿಗಳಿಗೆ ಡಪ್ಪು ಅತ್ಯಂತ ಸೂಕ್ತವಾದ ಪಕ್ಕವಾದ್ಯ. ಇಲ್ಲಿಯ ಹಾಡುಗಳಿಗೆ ತಬಲಾ ಮೃದಂಗಗಳನ್ನು ಪಕ್ಕವಾದ್ಯವಾಗಿ ಬಳಸಿದರೆ ಹೊಂದಾಣಿಕೆಯಾಗುವುದಿಲ್ಲ. ಈ ಹಾಡುಗಳಿಗೆ ಡಪ್ಪು ಮಾತ್ರ ಹೊಂದುವಂಥದು. ಡಪ್ಪಿನಾಟದ ಪ್ರದರ್ಶನದಲ್ಲಿ ಸಂಭಾಷಣೆಗಳಿಗಿಂತ ಹಾಡುಗಳ ಪ್ರಮಾಣವೇ ಹೆಚ್ಚು. ಆ ಹಾಡುಗಳಿಗೆಲ್ಲ ಡಪ್ಪಿನಪಕ್ಕವಾದ್ಯದ ನುಡಿತ. ಡಪ್ಪುವಾದನ ಹಾಡನ್ನು ಹಿಂದೆ ಸರಿಸಿ ಅನುರಣಗೊಳ್ಳುವುದು ಸಾಮಾನ್ಯ. ಹೀಗಾಗಿ ಒಟ್ಟಾರೆ ಪ್ರದರ್ಶನ ಡಪ್ಪುಮಯವಾಗಿರುತ್ತದೆ. ಆದ್ದರಿಂದ ಈ ರಂಗಪ್ರಕಾರಕ್ಕೆ ಡಪ್ಪಿನಾಟ ಎಂಬ ಹೆಸರು ಬಂದಿತು. ಡಪ್ಪು ಬಾರಿಸುವ ಕಲಾವಿದನು ಪಾತ್ರಧಾರಿಗಳ ಅಭಿನಯ ಕುಣಿತಗಳಿಗೆ ತಕ್ಕಂತೆ ಬಾಗಿ ಬಳುಕಿ ಡಪ್ಪು ಬಾರಿಸುತ್ತ ಸ್ಟೇಜಿನ ತುಂಬ ಸಂಚರಿಸುವುದರಿಂದ ಅವನು ಒಬ್ಬ ಮಾಮೂಲಿ ಪಕ್ಕವಾದ್ಯಗಾರನಾಗಿರದೆ ಆಟದ ಪಾತ್ರಗಳಂತೆ ಪ್ರೇಕ್ಷಕರನ್ನು ಆಕರ್ಷಿಸುತ್ತಾನೆ. ಒಂದು ರಂಗಪ್ರಕಾರವು ಒಂದು ವಾದ್ಯದ ಮೂಲಕ ಗುರುತಿಸಲ್ಪಡುತ್ತಿರುವುದು ಅಪರೂಪದ ಉದಾಹರಣೆಯಾಗಿದೆ.

19ನೇ ಶತಮಾನದಲ್ಲಿ ಉತ್ತರಾರ್ಧದಲ್ಲಿ ಉತ್ತರಕರ್ನಾಟಕದಲ್ಲಿ ಉತ್ಸಾಹದ ಪುನರುಜ್ಜೀವನದ ಹೊಸಗಾಳಿ ಬೀಸಿತು. ಅದರ ಪರಿಣಾಮದಿಂದಾಗಿ ಅನೇಕ ಜನಪದ ಕಲಾಪ್ರಕಾರಗಳು ರೂಢಿಗೆ ಬಂದವು. ಅಂಥವುಗಳಲ್ಲಿ ತಪ್ಪಿನಾಟ/ಸಣ್ಣಾಟವೂ ಒಂದು. 1860ರಷ್ಟೊತ್ತಿಗೆ ಸಣ್ಣಾಟ ಪ್ರಕಾರ ಹುಟ್ಟುಕೊಂಡು ಎರಡು ದಶಕಗಳ ಅವಧಿಯಲ್ಲಿ ಅದು ತನ್ನ ನೆಲೆ ಕಂಡುಕೊಂಡಿತ್ತು. ನಾಲ್ಕಾರು ಸಣ್ಣಾಟಗಳು ಜನಪ್ರಿಯವಾಗಿದ್ದವು. 1900ರಷ್ಟೊತ್ತಿಗೆ ಸಣ್ಣಾಟವು ಗಮನಾರ್ಹವಾಗಿ ಬೆಳೆದುನಿಂತು ಗ್ರಾಮೀಣ ಬದುಕಿನ ಅವಿಭಾಜ್ಯ ಅಂಗವಾಗಿತ್ತು.

ಸಣ್ಣಾಟ ರೂಪುಗೊಳ್ಳಲು ಸ್ಥಳೀಯ ದಾಸರಾಟ ಮತ್ತು ಪಕ್ಕದ ಮಹಾರಾಷ್ಟ್ರದ ತಮಾಷಾ ಬಹಳಷ್ಟು ಕಾರಣವಾಗಿವೆ. ದಾಸರಾಟದ ಸ್ವಚ್ಛಂದತೆ ಮತ್ತು ರಂಗಪ್ರಜ್ಞೆಗಳು ತಮಾಷಾದ ಹಾಡು ಕುಣಿತಗಳು ಸಣ್ಣಾಟದಲ್ಲಿ ನೇರ ಪ್ರವೇಶ ಪಡೆದವು. ದಾಸರಾಟದ ನಟಿಯಾದ ಚಿಮಣಾ ಸಣ್ಣಾಟದ ಸ್ಟೇಜಿನ ಮೇಲೆಯೂ ವಿಜೃಂಭಿಸಿದಳು. ಅವೆರಡು ರಂಗಪ್ರಕಾರಗಳ ನಿರೂಪಣಾ ತಂತ್ರ, ಮಾತುಗಾರಿಕೆಯ ಶೈಲಿ, ಹಿಮ್ಮೇಳಗಳನ್ನು ಸಣ್ಣಾಟ ಧಾರಾಳವಾಗಿ ಸ್ವೀಕರಿಸಿಯೂ ಸಣ್ಣಾಟ ತಾನೊಂದು ಸ್ವತಂತ್ರ ರಂಗಪ್ರಕಾರವಾಗಿ ಬೆಳೆಯಿತು.

ಸಣ್ಣಾಟದ ಬೆಳವಣಿಗೆಯಲ್ಲಿ ಎರಡು ಘಟ್ಟಗಳಿವೆ. ಆರಂಭದಿಂದ ಅಂದರೆ 1860ರಿಂದ 1920ರವರೆಗೆ ಪ್ರಥಮ ಘಟ್ಟ. 1920ರಿಂದೀಚೆಗೆ ದ್ವಿತೀಯಘಟ್ಟ. ಪ್ರಥಮಘಟ್ಟದ ಸಣ್ಣಾಟಗಳು ಗೀತನಾಟಕಗಳು. ಅವುಗಳ ಪಠ್ಯವೆಂದರೆ ಹಾಡುಗಳು ಮಾತ್ರ. ಹಾಡಿನ ಭಾವವನ್ನನುಸರಿಸಿ ಆಶು ಸಂಭಾಷಣೆಗಳಿರುತ್ತವೆ ಹಾಡುಗಳ ಪ್ರಮಾಣವೇ ಹೆಚ್ಚಿರುವುದರಿಂದ ಹಾಡುಗಳೊಂದಿಗೆ ಕುಣಿತ ಅತ್ಯವಶ್ಯಕವಾಗಿ ಇದ್ದೇ ಇರುತ್ತದೆ. ಕುಣಿತಕ್ಕೆ ಉತ್ತೇಜನಕೊಡುವ ಡಪ್ಪಿನ ವಾದನ ಆಕರ್ಷಕವಾಗಿರುತ್ತದೆ. ದ್ವಿತೀಯ ಘಟ್ಟದ ಸಣ್ಣಾಟಗಳು ಕಂಪನಿ ನಾಟಕಗಳ ಕೆಲವು ಅಂಶಗಳನ್ನು ಸ್ವೀಕರಿಸಿದವು. ಖಚಿತವಾದ ಲಿಖಿತ ಸಂಭಾಷಣೆಗಳು ಸೇರಿಸಲ್ಪಟ್ಟವು. ಹಾಡುಗಳಶೈಲಿ ಬದಲಾಯಿತು. ಅದಕ್ಕೆ ತಕ್ಕಂತೆ ಪಕ್ಕವಾದ್ಯ ಡಪ್ಪಿನ ಸ್ಥಾನವನ್ನು ತಬಲಾ ಆಕ್ರಮಿಸೀತು. ನಿರುದ್ದಿಶ್ಯ ಕಥಾ ನಿರೂಪಣೆಯ ಬದಲಾಗಿ ವೇದಾಂತ ನೀತಿ ಧರ್ಮಗಳು ಪ್ರಧಾನವೆನಿಸಿದವು.

ಒಂದು ಶತಮಾನದ ಅವಧಿಯಲ್ಲಿ ಸುಮಾರು ಇನ್ನೂರು ಸಣ್ಣಾಟಗಳು ರಚನೆಗೊಂಡಿವೆ. ಇವುಗಳ ಕರ್ತೃಗಳು ಅಷ್ಟಿಷ್ಟು ಓದಿಕೊಂಡ ವಿದ್ಯಾವಂತರು. ಆರಂಭದ ಸಣ್ಣಾಟಗಳು ಸಾಮಾಜಿಕ ವಸ್ತುವನ್ನು ಬಳಸಿಕೊಂಡವು. ನಂತರದ ಕಾಲಾವಧಿಯಲ್ಲಿ ಕಥಾವಸ್ತುವಿನ ಆಯ್ಕೆಯಲ್ಲಿ ಧಾರಾಳತನ ವೈವಿಧ್ಯತೆಗಳು ಕಂಡುಬಂದವು. ವೈವಿಧ್ಯತೆಯ ಅಪೇಕ್ಷೆ ಮತ್ತು ಹೊಸತನದ ಹುಮ್ಮಸ್ಸುಗಳ ಕಾರಣದಿಂದಾಗಿ ಸಣ್ಣಾಟದ ಕವಿಗಳು ಎಲ್ಲತರದ ಕತೆಗಳನ್ನು ಸ್ವೀಕರಿಸಿದರು. ಕಥಾವಸ್ತುವನ್ನಾಧರಿಸಿ ಸಣ್ಣಾಟಗಳನ್ನು ಹೀಗೆ ವರ್ಗೀಕರಿಸಬಹುದಾಗಿದೆ.

1. ಸಾಮಾಜಿಕ : ಸಂಗ್ಯಾಬಾಳ್ಯಾ, ಕಟ್ಟೀಚೆನ್ನ, ರೂಪಸೇನ, ಸತ್ಯಶೀಲಾ, ಸಾವುಕಾರನ ಆಟ, ಮಾನಿಂಗಸೆಟ್ಟಿ, ಕಡ್ಲಿಮಟ್ಟೆ ಸ್ನೇಶನ್ ಮಾಸ್ತರ, ದುಂಡ್ಯಾ ಮೋದಿನ್.

2. ಭಕ್ತರ ಕತೆಗಳು : ತಿರುನೀಲಕಂಠ, ಕಾಳಿದಾಸ, ಅಲ್ಲಮಪ್ರಭು, ಕಣ್ಣಪ್ಪ, ಕನಕದಾಸ, ಗೋರಾಕುಂಬಾರ, ಅಕ್ಕಮಹಾದೇವಿ, ತುಕಾರಾಮ, ಕಬೀರದಾಸ.

3. ಪೌರಾಣಿಕ ಕತೆಗಳು : ಅನಸೂಯಾ, ಸತ್ಯವಾನ ಸಾವಿತ್ರಿ, ಹರಿಶ್ಚಂದ್ರ, ಭಕ್ತಪ್ರಹ್ಲಾದ, ವಿಶ್ವಾಮಿತ್ರ, ರುಕ್ಮಿಣಿ ಸ್ವಯಂವರ.

4. ಜನಪದ ಕತೆಗಳು : ಬಸವಂತ ಬಲವಂತ, ರಾಧಾನಾಟ ಮಗದಮಾಸೂರ ಕೆಂಚಮ್ಮ, ಧರ್ಮದೇವತೆ, ಸೋಮಶೇಖರ : ಚಿತ್ರಶೇಖರ, ಮದನಸುಂದರಿ ನೀಲಕಂಠರಾಜ.

5. ಐತಿಹಾಸಿಕ ಕತೆಗಳು : ಸಂಗೊಳ್ಳಿರಾಯಣ್ಣ, ಬಸವೇಶ್ವರ, ಕಿತ್ತೂರ ಚೆನ್ನಮ್ಮ, ಧರ್ಮ ಸಾಮ್ರಾಜ್ಯ.

ಸಣ್ಣಾಟದ ಸ್ವರೂಪ ಮೂಲತಃ ಸಾಮಾಜಿಕ ವಸ್ತುವಿನ ನಿರೂಪಣೆಗೆ ಹೊಂದುವಂಥದು. ಬರುಬರುತ್ತ ಅದರ ಸ್ವರೂಪದಲ್ಲಿ ಬದಲಾವಣೆಗಳುಂಟಾಗಿ ಅದು ಏನೆಲ್ಲವನ್ನು ಒಳಗೊಳ್ಳುವ ಆಕಾರ ಪಡೆಯಿತು. ಸಣ್ಣಾಟದ ಈ ಸ್ವಚ್ಛಂದಗುಣ ಅದರ ವೈಶಿಷ್ಟ್ಯವಾಗಿದೆ. ಸರಳಧಾಟಿಯ ಹಾಡುಗಳು, ನೇರ ಸಂಭಾಷಣೆಗಳು, ನಿರ್ಬಂಧವಿಲ್ಲದ ಅಭಿನಯಶೈಲಿ, ಸರಳ ವೇಷಭೂಷಣ ಇವುಗಳಿಂದಾಗಿ ಸಣ್ಣಾಟದ ಸ್ಟೇಜಿನ ಮೇಲೆ ಎಂಥದೇ ಕತೆಯನ್ನು ಯಾವುದೇ ವಿಷಯವನ್ನು ನಿರೂಪಿಸಬಹುದಾಗಿದೆ.

ಗೀತನಾಟಕಗಳಾಗಿರುವ ಪ್ರಥಮ ಘಟ್ಟದ ಸಣ್ಣಾಟಗಳು ಸಮೃದ್ಧ ಹಾಡುಕುಣಿತಗಳಿಂದಾಗಿ ಲವಲವಿಕೆಯ ಪ್ರದರ್ಶನಗಳಾಗಿವೆ. ಆರಂಭದಲ್ಲಿ ಗಣಪತಿ ಸರಸ್ವತಿಯರ ಪ್ರಾರ್ಥನೆ ಸಾಮಾನ್ಯ. ನಂತರ ಹಾಡಿನ ರೂಪದಲ್ಲಿಯೇ ಪ್ರೇಕ್ಷಕರಿಗೆ ಮನವಿ : ಕುಳಿತಿರುವ ಪ್ರೇಕ್ಷಕರು ಗದ್ದಲಮಾಡದೆ ನಮ್ಮ ಆಟ ನೋಡಿರಿ ನಿಮ್ಮ ಪ್ರೀತಿಯ ಭರವಸೆಯಿಂದ ನಮ್ಮ ಸಭಾಕಂಪನ ದೂರಮಾಡಿರಿ. ನಾವು ನಿಮಗೆ ಇಂದು ….. ಕತೆ ಮಾಡಿ ತೋರಿಸುತ್ತೇವೆ ….. : ಹೀಗೆ ನಂತರ ನೇರವಾಗಿ ಕಥಾಪ್ರಸಂಗ ಪ್ರಾರಂಭವಾಗುತ್ತದೆ. ಸಣ್ಣಾಟದಲ್ಲಿ ಸೂತ್ರಧಾರನಿರುವುದಿಲ್ಲ. ಮೇಳದವರು ಹಾಡುತ್ತಾರೆ. ಪೂರ್ವಸೂಚನೆಯಂತ ಪಾತ್ರಗಳ ಪ್ರವೇಶ. ಅಭಿನಯ : ಕುಣಿತ : ನಿರ್ಗಮನ.

ಪ್ರಥಮ ಘಟ್ಟದ ಸಣ್ಣಾಟದ ಹಾಡುಗಳು ಆಕರ್ಷಕವಾಗಿರುತ್ತವೆ. ದೃತ್ ಗತಿಯ ರಭಸದ ಧಾಟಿಗಳು ಚೇತೋಹಾರಿಯಾಗಿರುತ್ತವೆ. ಧಾಟಿಗಳನ್ನು ಗಮನದಲ್ಲಿಟ್ಟುಕೊಂಡು ಹಾಡುಗಳನ್ನು ರಚಿಸಿಸಿರುವುದರಿಂದ ಹಾಡುಗಾರಿಕೆಯಲ್ಲಿ ಅವು ಎಂದಿಗೂ ಸೋಲುವುದಿಲ್ಲ. ಆಡುಮಾತನ್ನೇ ಹಾಡಿನಮಟ್ಟಕ್ಕೇರಿಸಿರುವುದು ಸಾಮಾನ್ಯ. ಮಾತು ಹಾಡಿನ ರೂಪದಲ್ಲಿ ಪ್ರಕಟವಾದಾಗ ಅದಕ್ಕೆ ಒಂದು ರೀತಿಯ ಸೊಗಸು ತಾನೇ ತಾನಾಗಿ ಪ್ರಾಪ್ತವಾಗುವುದು. ಇನ್ನು ಕೆಲವು ಹಾಡುಗಳಲ್ಲಿರುವ ಕಾವ್ಯಾತ್ಮಕಗುಣ ಗಮನಾರ್ಹವಾದುದು. ತರುಣಿ ಹೆಂಡತಿಯನ್ನು ಲಕ್ಷಿಸದೆ ವ್ಯಾಪಾರಕ್ಕಾಗಿ ಪರ ಊರಿಗೆ ಹೊರಟಿರುವ ಗಂಡನಿಗೆ ಹೆಂಡತಿ ಹೇಳುತ್ತಾಳೆ :

ಮೂರಂತಸ್ತ ಮನಿಮಾರಾ
ಯಾರ್ಯಾರ ಸುಳವಿಲ್ಲಾ
ನಾರಿ ನಾ ಒಬ್ಬವಳು
ಇರುವ ದಿವಸಲ್ಲಾ
ಒಂದೂ ಹಡದಿಲ್ಲೊ ಪ್ರಿಯಾ
ಕಂದಿಲ್ಲೊ ಎನ್ನದ್ಯಾಯಾ (ದೇಹಾ)
ಬಂದಿರುವುದು ಒಳ್ಳೆ ಒಗರಾ
ಹರೇದ ಭಾರಾ
(ಸಂಗ್ಯಾಬಾಳ್ಯಾ)

ತಾನು ಯೌವನದ ಭಾರ ತಾಳಲಾರೆ. ದೊಡ್ಡಮನೆಯಲ್ಲಿ ಒಬ್ಬಳೇ ಏಕಾಂತದ ಹಿಂಸೆ ಅನುಭವಿಸಲಾರೆ. ಬಸಿರು : ಹೆರಿಗೆಗಳಿಂದ ಶಿಥಿಲಗೊಳ್ಳದ ತನ್ನ ದೇಹ ಭೋಗ ವಿಲಾಸಕ್ಕಾಗಿ ತಹತಹಗೊಳ್ಳುತ್ತಿದೆ ಎಂದು ಮುಂತಾಗಿ ಹೇಳುವಲ್ಲಿ ಧ್ವನಿಪೂರ್ಣವಾದ ನಿವೇದನೆಯಿದೆ. ಪ್ರಿಯತಮನನ್ನು ಪ್ರಥಮ ಸಲ ಶಯ್ಯೆಗೆ ಆಹ್ವಾನಿಸುತ್ತ

ನಡಿ ನಡಿ ಅಲಯಕ್ಕೆ ಸಂಗ್ಯಾನೀ
ತಡವು ಮಾಡುವುದೇಕೇ ಸಂಗ್ಯಾನೀ

ಸಣ್ಣಕ್ಕಿ ಶ್ಯಾವಿಗಿ ಗುಳಿಗಿ
ಮಾಡಿ ಇಟ್ಟೇನ ಅಡಿಗಿ

ಊಟಾ ಮಾಡೋಣು ಕೂಡಿ ನಡಿನಡಿ
ತಡವು ಮಾಡುವದ್ಯಾಕೇ ಸಂಗ್ಯಾ ನೀ

ಹಾಕಿದ್ಹಾಂಗ ಹಾಲಿಗಿ ಹೆಪ್ಪಾ
ಕಣ್ಣಿಗಿ ಬಂದೀತ ಜೊಂಪಾ

ಶಯನ ಮಾಡೋಣು ಕೂಡಿ ನಡಿ ನಡಿ
ತಡವು ಮಾಡುವದ್ಯಾಕೇ ಸಂಗ್ಯಾ ನೀ

ಪ್ರಣಯದ ಉತ್ಕಟತೆ ಮತ್ತು ಸಂಭೋಗಾ ನಂತರ ಮೈಮರೆವುಗಳು ಇಲ್ಲಿ ಅರ್ಥಪೂರ್ಣವಾಗಿ ನಿರೂಪಿಸಲ್ಪಟ್ಟಿವೆ.

ಪ್ರಥಮ ಘಟ್ಟದ ಸಣ್ಣಾಟಗಳಲ್ಲಿ ಹಾಡುಗಳೇ ಪ್ರಧಾನವಾಗಿರುವುದರಿಂದ ಹಾಡುಗಳೊಂದಿಗೆ ಕುಣಿತ ಅನಿವಾರ್ಯವೆನಿಸಿದೆ. ಸರಳ ಲೆಕ್ಕಾಚಾರದ ಮೂರ್ನಾಲ್ಕು ವಿಧದ ಕುಣಿತಗಳನ್ನು ಎಲ್ಲ ಪಾತ್ರಧಾರಿಗಳೂ ಕುಣಿಯುತ್ತಾರೆ. ಹಾಡಿನ ಮೊದಲ ಸಾಲನ್ನು ಹಿಮ್ಮೇಳದವರು ಹಾಡುವಾಗ ಅದರ ಭಾವಾಭಿನಯವಿರುತ್ತದೆ. ಹಿಮ್ಮೇಳದೊಂದಿಗೆ ಪಾತ್ರಧಾರಿ ತಾನೂ ದನಿಗೂಡಿಸುವುದುಂಟು. ಅದೇ ಸಾಲನ್ನು ಹಿಮ್ಮೇಳದವರು ರಿಪೀಟ್ ಮಾಡುವ ಅವಧಿಯನ್ನು ಕುಣಿತಕ್ಕೆ ಬಳಸಲಾಗುವುದು. ಹೀಗೆ ಹಾಡುಕುಣಿತ, ಹಾಡುಕುಣಿತಗಳು ನಿರಂತರವಾಗಿ ಸಾಗುವುದರಿಂದ ಏಕತಾನತ ಗೋಚರಿಸಿದರೂ ಅದೊಂದು ಬಗೆಯ ಆಕರ್ಷಕ ವಾತಾವರಣ ನಿರ್ಮಿಸುತ್ತದೆ. ಹಾಡು ಕುಣಿತ ಮುಗಿದಮೇಲೆ ಸಂಭಾಷಣೆ. ಇಲ್ಲಿ ಮಾತುಗಾರಿಕೆಗೆ ಗೌಣಸ್ಥಾನ. ಹಾಡಿನ ಭಾವಾರ್ಥದಂತಹ ತುಂಡು ತುಂಡು ಮಾತುಗಳನ್ನು ಪಾತ್ರಧಾರಿ ಒಪ್ಪಿಸುವುದುಂಟು. ಕತೆಯ ಚಾಲನೆಗೆ ಪೂರಕವೆನಿಸುವ ಸ್ವತಂತ್ರ ಸಂಭಾಷಣೆಗಳೂ ಇರುತ್ತವೆ. ಆದರೆ ಅವುಗಳ ಪ್ರಮಾಣ ತೀರಾ ಕಡಿಮೆ. ಈ ಮಾತುಗಾರಿಕೆ ಮೂಲ ಪಠ್ಯದಲ್ಲಿರುವುದಿಲ್ಲ. ಪಾತ್ರಧಾರಿ ಸ್ಟೇಜಿನ ಮೇಲೆ ಸನ್ನಿವೇಶದ ನಾಟಕೀಕರಣಕ್ಕಾಗಿ ಹೇಳುವ ಆಶು ಸಂಭಾಷಣೆಗಳಿವು. ಪ್ರತಿಭಾವಂತ ಪಾತ್ರಧಾರಿಗಳು ಹೇಳುವ ಆಶು ಸಂಭಾಷಣೆಗಳಲ್ಲಿ ಸ್ಪಷ್ಟತೆ ಅರ್ಥವಂತಿಕೆಗಳಿರುತ್ತವೆ. ಎಲ್ಲ ಪಾತ್ರಧಾರಿಗಳಿಗೆ ಇದು ಸಾಧ್ಯವಾಗುವುದಿಲ್ಲ. ಪ್ರತಿಭಾವಂತರು ಹೇಳುವ ಮಾತುಗಳನ್ನು ಇತರರು ಕೇಳಿ ಕೇಳಿ ನೆನಪಿನಲ್ಲಿಟ್ಟುಕೊಂಡು ಅನುಕರಿಸಿ ಒಪ್ಪಿಸುವುದುಂಟು. ಹೀಗಾಗಿ ಬರುಬರುತ್ತ ಆಶು ಸಂಭಾಷಣೆಗಳು ಸಿದ್ಧಸಂಭಾಷಣೆಗಳಾದವು. ಹಸ್ತಪ್ರತಿ ಬರೆದುಕೊಳ್ಳುವವರು ಮೂಲಪಠ್ಯದ ಹಾಡುಗಳ ಮಧ್ಯೆ ಈ ಸಿದ್ಧಸಂಭಾಷಣೆಗಳನ್ನು ಸೇರಿಸಿ ಬರೆದುದರಿಂದ ಇಂದಿನ ಹಸ್ತಪ್ರತಿಗಳು ನಾಟಕದ ಪ್ರತಿಗಳಂತಾಗಿದೆ. ಇಲ್ಲಿ ಗಮನಿಸಬೇಕಾದ ಅಂಶವಾವುದೆಂದರೆ ಇಂದಿನ ರಂಗಪ್ರತಿಯ ಕರ್ತೃಗಳು ಇಬ್ಬರು. ಮೂಲ ಪಠ್ಯದ ಕವಿಯೊಬ್ಬನಾದರೆ, ಪರಂಪರೆಯಾಗಿ ಆಶು ಸಂಭಾಷಣೆಗಳನ್ನು ಸೃಷ್ಟಿಸಿ ಹೆಣೆದು ಸ್ಥಿರಗೊಳಿಸಿರುವ ಪಾತ್ರಧಾರಿಗಳು ಎರಡನೆಯವರು.

ಸಣ್ಣಾಟ ಪರಂಪರೆಗೆ ನಾಂದಿ ಹಾಡಿದ ಪ್ರಥಮ ಘಟ್ಟದ ಅತ್ಯಂತ ಜನಪ್ರಿಯ ಕೃತಿಯೆಂದರೆ ಸಂಗ್ಯಾಬಾಳ್ಯಾ. ಸದ್ಯಕ್ಕೆ ಇದೇ ಪ್ರಥಮ ಸಣ್ಣಾಟವೆನಿಸಿದೆ. ಬೆಳಗಾಂ ಜಿಲ್ಲೆಯ ಬೈಲಹೊಂಗಲದಲ್ಲಿ 1860ರ ಸುಮಾರಿಗೆ ನಡೆದ ನೈಜಘಟನೆಯನ್ನಾಧರಿಸಿ ಇದು ರಚನೆಗೊಂಡಿದೆ. ಇದನ್ನು ರಚಿಸಿದವನು ಬೈಲಹೊಂಗಲಕ್ಕೆ ಸಮೀಪದಲ್ಲಿರುವ ಬೈಲವಾಡ ಗ್ರಾಮದ ರಾಯಪ್ಪ ಪತ್ತಾರ್ ಮಾಸ್ತರ್ ಎಂಬ ಕವಿ. ಸಂಗ್ಯಾಬಾಳ್ಯಾ ಇಬ್ಬರೂ ಪ್ರಾಣಸ್ನೇಹಿತರು. ಈರ್ಯಾ ಅದೇ ಊರಿನ ಶ್ರೀಮಂತ ವ್ಯಾಪಾರಿ. ಅವನ ತರುಣ ಹೆಂಡಿತಿ ಗಂಗಿ ಅತ್ಯಂತ ಚಲುವೆ. ಹಾಗೂ ಗಂಡನಿಂದ ದಾಂಪತ್ಯ ಸುಖಕಾಣದ ಅತೃಪ್ತಗೃಹಿಣಿ. ಅವಳನ್ನು ಸಂಗ್ಯಾ ಒಲಿಸಿಕೊಳ್ಳುತ್ತಾನೆ. ಗಂಗಿ : ಸಂಗ್ಯಾರ ಅನೈತಿಕ ಸಂಬಂಧ ಊರ ತುಂಬ ಸುದ್ದಿಯಾದಾಗ ಕೋಪಗೊಂಡ ಈರ್ಯಾ ಸಂಗ್ಯಾನನ್ನು ಕೊಲೆಮಾಡಿ ಸೇಡು ತೀರಿಸಿಕೊಳ್ಳುವನು. ಘಟನೆ ನಡೆದ ತಾಜಾ ಸಂದರ್ಭದಲ್ಲಿ ಸಂಗ್ಯಾಬಾಳ್ಯಾ ಸಣ್ಣಾಟ ರಚನೆಗೊಂಡದ್ದರಿಂದ ಜನರಿಗೆ ತುಂಬಾ ಆಕರ್ಷಕವೆನಿಸಿ ವ್ಯಾಪಕ ಪ್ರಚಾರ ಪಡೆದುಕೊಂಡಿತು. ಇದರಷ್ಟು ಪ್ರಚಾರಗೊಂಡ ಸಣ್ಣಾಟ ಮತ್ತೊಂದಿಲ್ಲ. ತನ್ನ ಭೌಗೋಲಿಕ ಗಡಿಯನ್ನು ದಾಟಿ ಕರ್ನಾಟಕದ ತುಂಬ ಹರಡಿಕೊಂಡು ಅಲ್ಲಲ್ಲಿಯ ಪ್ರಾದೇಶಿಕ ಲಕ್ಷಣಗಳನ್ನು ಮೈಗೂಡಿಸಿಕೊಂಡು ಸಂಗ್ಯಾಬಾಳ್ಯಾ ಜನಪ್ರಿಯವಾಗಿದೆ. ಎಪ್ಪತ್ತರ ದಶಕದಲ್ಲಿ ಹವ್ಯಾಸಿ ರಂಗಭೂಮಿಯ ಕಲಾವಿದರು ಇದನ್ನು ಪ್ರಯೋಗಿಸಿದಾಗ ಜಡಗೊಂಡಿದ್ದ ಸಮಕಾಲೀನಹವ್ಯಾಸಿ ರಂಗಪ್ರಪಂಚದಲ್ಲಿ ಇದು ಹೊಸ ಕಂಪನವನ್ನುಂಟುಮಾಡಿತು. ಕಾವ್ಯಾತ್ಮಕವಾದ ಹಾಡು ಮಾತುಗಳು. ಪಾತ್ರಗಳ ಸಂಕೀರ್ಣಗುಣಸ್ವಭಾವ, ಹಾದರ : ಪ್ರಣಯ : ಹಿಂಸೆ : ಸೇಡು ಮೊದಲಾದ ಮನುಷ್ಯನ ಮೂಲಪ್ರವೃತ್ತಿಗಳ ಉದ್ದೀಪನೆ – ಈ ಎಲ್ಲ ಕಾರಣಗಳಿಂದಾಗಿ ಸಂಗ್ಯಾಬಾಳ್ಯಾ ನಿತ್ಯನೂತನವಾಗಿದೆ.

ಪ್ರಥಮ ಘಟ್ಟದ ಸಣ್ಣಾಟಗಳಲ್ಲಿ ಸಂಗ್ಯಾಬಾಳ್ಯಾದ ನಂತರದ ಸ್ಥಾನ ರಾಧಾನಾಟಕ್ಕೆ. ಮಹಾರಾಷ್ಟ್ರದ ತಮಾಷಾದ ಪ್ರೇರಣೆಯಿಂದ ಹುಟ್ಟಿಕೊಂಡಿರುವ ಜನಪದ ನಾಟಕವಿದು. ಸ್ಥಳೀಯ ದಾಸರಾಟದ ಬಹಳಷ್ಟು ಅಂಶಗಳು ಇದರಲ್ಲಿ ಬೆರೆತಿವೆ. ಚಿಮಣಾ – ಗಲಪೋಜಿ ನಾಯಕಿ ನಾಯಕರು. ಗಲಪೋಜಿ ಗೃಹಿಣಿ ಚಿಮಣಗಳಲ್ಲಿ ಅನುರಕ್ತನಾಗಿ ಗೆಳೆತನ ಯಾಚಿಸುತ್ತಾನೆ. ಅವಳು ನಿರಾಕರಿಸುವಳು. ಅವನ ಸ್ನೇಹಿತ ಸಖಾರಾಮ್ ತಾತ್ಯಾ ಸಹಕಾರಿಯಾಗಿರುತ್ತಾನೆ. ಈ ಪಾತ್ರಗಳ ಹೆಸರುಗಳೇ ಇದು ತಮಾಷಾ ಮೂಲದಿಂದ ಬಂದುದೆಂಬುದನ್ನು ತಿಳಿಸುತ್ತವೆ. ಅಲ್ಲದೆ ಹಾಡಿನ ಧಾಟಿಗಳು ಮಾತುಗಳು ತಮಾಷಾದ ಅನುಕರಣೆಯಾಗಿವೆ. ಹೀಗಿರುವುದರಿಂದ ರಾಧಾನಾಟ ತಮಾಷಾದ ಕನ್ನಡ ಆವೃತ್ತಿಯಾಗಿದೆ. ಇದು ಹೆಸರಿಗೆ ರಾಧಾನಾಟ. ಇಲ್ಲಿ ರಾಧೆಯ ಪಾತ್ರವೇ ಇಲ್ಲ. ಪೂರ್ವರಂಗದಲ್ಲಿರುವ ಗೊಲ್ಲತಿ ಪಾತ್ರ ಮಾತ್ರ ರಾಧೆಯ ಪ್ರತಿಬಿಂಬವಾಗಿದೆ. ಆಟದ ನಾಯಕಿಯ ಹೆಸರು ಚಿಮಣಾ. ಇದು ಮೊದಲಿನಿಂದ ಹೀಗೇ ಇದೆಯೋ ಅಥವಾ ನಂತರದ ಪರಿವರ್ತನೆಯೋ ಹೇಳಲಿಕ್ಕಾಗದು.

ರೂಪಸೇನ ಅಥವಾ ಸಿಪಾಯಿ ಆಟ ರಾಮಸಿಂಗ ಎಂಬ ಸಿಪಾಯಿಯ ಜೀವನದ ಸುತ್ತ ಹೆಣೆದ ಕತೆ. ರಾಮಸಿಂಗ ನೌಕರಿಗಾಗಿ ಪರ ಊರಿಗೆ ಹೋಗಾದ ಅಲ್ಲಿ ಕಮಲಾಕ್ಷಿ ಎಂಬ ವೇಶ್ಯೆಯ ಮೋಹದಲ್ಲಿ ಸಿಲುಕಿಕೊಳ್ಳುವನು. ಅವನ ಹೆಂಡತಿ ಜಯಾವತಿಗೆ ಚಿಂತೆಯಾಗುತ್ತದೆ. ಮಗ ರೂಪಸೇನ ತಂದೆಯನ್ನು ಹುಡುಕಿಕೊಂಡು ಹೋಗಿ ಅವನನ್ನು ವೇಶ್ಯೆಯ ಮೋಹಬಂಧನದಿಂದ ಬಿಡಿಸಿಕೊಂಡು ಕರೆತರುತ್ತಾನೆ. ಕಡ್ಲಿಮಟ್ಟಿ ಸ್ಟೇಶನ್ ಮಾಸ್ತರ್ ಒಂದು ನೈಜ ಘಟನೆಯನ್ನಾಧರಿಸಿದ ಸಣ್ಣಾಟ. ಬಾಗಲಕೋಟೆ ಸಮೀಪದ ಕಡ್ಲಿಮಟ್ಟೆ ರೇಲ್ವೆಸ್ಟೇಶನ್ನಿನಲ್ಲಿ ಅಸಹಾಯಕಳಾದ ಕಾಶಿಬಾಯಿವಸ್ತಿ ಮಾಡಿರುತ್ತಾಳೆ. ಸ್ಟೇಶನ್ ಮಾಸ್ತರ್ ಅವಳ ಮೇಲೆ ಮೋಹಗೊಂಡು ಏಕಾಂತ ಸುಖಕ್ಕೆ ಒತ್ತಾಯಿಸುತ್ತಾನೆ. ಅವಳು ಉಪಾಯದಿಂದ ಕೋಣೆಯಿಂದ ಹೊರಗೆ ಹೋಗಿ ಹೊರಗಿನ ಬಾಗಿಲ ಚಿಲಕ ಹಾಕಿಕೊಳ್ಳುವಳು. ಒಳಗೆ ಬಂಧಿಯಾದ ಸ್ಟೇಶನ್ ಮಾಸ್ತರ್ ಅವಳ ಎಳೆಗೂಸನ್ನು ಕೊಲ್ಲುವ ಬೆದರಿಕೆ ಹಾಕಿದಿರೂ ಅವಳು ಶೀಲ ಕಳೆದುಕೊಳ್ಳಲು ಒಪ್ಪುವುದಿಲ್ಲ. ಕೂಸನ್ನು ಬಲಿನೀಡಿ ತನ್ನ ಪಾತಿವ್ರತ್ಯವನ್ನುಳಿಸಿಕೊಂಡ ಧೀರೆ ಕಾಶಿಬಾಯಿ ಜನರ ಮೆಚ್ಚುಗೆ ಗಳಿಸುತ್ತಾಳೆ.

ಪ್ರಥಮ ಘಟ್ಟದ ಸಣ್ಣಾಟಗಳ ಸಂಗೀತ ಅಚ್ಚಜಾನಪದವಾದುದು. ಹೆಚ್ಚಾಗಿ ಸಪ್ತಕದ ಪೂರ್ವಾರ್ಧದಲ್ಲಿ ಸಂಚರಿಸುವ ಸ್ವರವಿನ್ಯಾಸದ ಧಾಟಿಗಳು ಸರಳ ಮತ್ತು ಸುಂದರ. ಹಿಮ್ಮೇಳದಲ್ಲಿ ನಾಲ್ಕಾರುಜನ ಇರುತ್ತಾರೆ. ಇಬ್ಬರು ಮುಂದೆ ಹಾಡಿದರೆ ಉಳಿದವರು ಅದನ್ನು ರಿಪೀಟ್ ಮಾಡುತ್ತಾರೆ. ಎಲ್ಲರ ಕೈಯ್ಯಲ್ಲಿ ತಾಳಗಳಿರುತ್ತವೆ. ಈ ಮೊದಲು ವಿವರಿಸಿರುವಂತೆ ಹಾಡಿನ ಪಕ್ಕ ವಾದ್ಯ ಡಪ್ಪು ಇಡೀ ಪ್ರದರ್ಶನವನ್ನು ಆಕ್ರಮಿಸಿಕೊಂಡಿರುತ್ತದೆ. ಪ್ರತಿಹಾಡಿನ ಆರಂಭ ಮತ್ತು ಮುಕ್ತಾಯದಲ್ಲಿ ಬರುವ ಲಘು ಮುಕ್ತಾಯಗಳು ಇಲ್ಲಿಯ ಹಾಡುಗಳಿಗೆ ಆಕರ್ಷಕ ಸ್ವರೂಪ ತಂದುಕೊಟ್ಟಿವೆ. ಮೊದಲು ಶ್ರುತಿಗೆ ಪುಂಗಿ ಎಂಬ ಗಾಳಿವಾದ್ಯ ಬಳಸುತ್ತಿದ್ದರು. ನಂತರ ಹಾರ್ಮೋನಿಯಂ ಸಣ್ಣಾಟದ ಅಟ್ಟ (ಸ್ಟೇಜ್) ಏರಿತು. ಮೊದಮೊದಲು ಕೇವಲ ಶ್ರುತಿಗಾಗಿ ಬಾರಿಸುತ್ತಿದ್ದ ಹಾರ್ಮೋನಿಯಂ ನಂತರ ಹಾಡಿನ ಜೊತೆಗೆ ಪಕ್ಕವಾದ್ಯವಾಗಿ ಬಳಸಲ್ಪಡತೊಡಗಿತು. ಈ ಪ್ರಥಮ ಘಟ್ಟದ ಸಣ್ಣಾಟದ ಹಾಡುಗಳಿಗೆ ಹಾರ್ಮೋನಿಯಂ ಪಕ್ಕವಾದ್ಯ ಅವಶ್ಯವೇನಲ್ಲ. ಆದರೆ ಅದನ್ನು ಅನಿವಾರ್ಯವಾಗಿಸಿಕೊಂಡರು.

ಸಣ್ಣಾಟದ ದ್ವಿತೀಯ ಘಟ್ಟ ಪ್ರಾರಂಭವಾದದ್ದು 1920ರಲ್ಲಿ. ಇದು ಗೀತನಾಟಕದ ರೂಪದಲ್ಲಿದ್ದ ಪ್ರಥಮ ಘಟ್ಟದ ಸಣ್ಣಾಟ ಮತ್ತು ಕಂಪನಿ ನಾಟಕಗಳ ಮಧ್ಯದ ಒಂದು ಸಮನ್ವಯ ಪ್ರಕಾರ. ಅಷ್ಟೊತ್ತಿಗಾಗಲೆ ನಗರ ಪಟ್ಟಣಗಳಲ್ಲಿ ಕ್ಯಾಂಪ್ ಮಾಡಿ ತಮ್ಮ ಪ್ರದರ್ಶನಗಳಿಂದ ಜನಮನಗೆದ್ದಿದ್ದ ಕಂಪೆನಿ ನಾಟಕಗಳು ಹಳ್ಳಿಯ ಪ್ರೇಕ್ಷಕರಿಗೂ ಹೊಸ ರುಚಿ ನೀಡಿದ್ದವು. ಈ ನಾಟಕಗಳ ಸಂಭಾಷಣೆ ಮತ್ತು ಹಾಡಿನ ಧಾಟಿಗಳು ಹಳ್ಳಿಗರಿಗೆ ಹೊಸ ಅನುಭವ ನೀಡಿದ್ದು ಸಹಜ. ನಾಟಕಗಳ ಗ್ರಾಂಥಿಕ ಸ್ವರೂಪ ಅನಕ್ಷರಸ್ಥ ಹಳ್ಳಿಗರಿಗೆ ವಿಶೇಷ ಆಕರ್ಷಣೆಯೆನಿಸಿತು. ಆದರ್ಶಪ್ರಾಯವೆನಿಸಿತು. ಇದಿಷ್ಟು ಹಿನ್ನಲೆಯಲ್ಲಿ ಅವತರಿಸಿದ ಹೊಸತರದ ಸಣ್ಣಾಟ ಎರಡನೆಯ ಘಟ್ಟವನ್ನು ಪ್ರಾರಂಭಿಸಿತು.

ಬೆಳಗಾಂವಿ ಜಿಲ್ಲೆಯ ಕಾದ್ರೊಳ್ಳಿ ಗ್ರಾಮದ ನೀಲಕಂಠಪ್ಪ ಈ ಎರಡನೆಯ ಘಟ್ಟದ ಪ್ರವರ್ತಕ. ನೀಲಕಂಠಪ್ಪ ತನ್ನ ಹದಿಹರಯದಲ್ಲಿ ಒಂದು ನಾಟಕ ಕಂಪನಿಯಲ್ಲಿದ್ದ. ನಾಟಕದ ಲಿಖಿತ ಸಂಭಾಷಣೆ : ಹಾಡುಗಳು ಅವನ ಮನಸೆಳೆದವು. ಹೀಗೆ ನಾಟಕದಿಂದ ಪ್ರೇರಣೆ ಪಡೆದ ನೀಲಕಂಠಪ್ಪನು ಚಲಾವಣೆಯಲ್ಲಿದ್ದ ಸಣ್ಣಾಟಕ್ಕೆ ನಾಟಕದ ಅಂಶಗಳನ್ನು ಸೇರಿಸಿ ಕಸಿಮಾಡಿ ಹೊಸ ಪ್ರಕಾರವೊಂದನ್ನು ಸೃಷ್ಟಿಸಿದ. ಲಿಖಿತ ಸಂಭಾಷಣೆಗಳು ಮತ್ತು ಶಿಷ್ಟಶೈಲಿಯನ್ನಾಧರಿಸಿ ಹಾಡಿನ ಧಾಟಿಗಳು ಇವು ಸೇರಿಸಲ್ಪಟ್ಟ ನಾಟಕದ ಅಂಶಗಳು. ಪ್ರಥಮ ಘಟ್ಟದ ಸಣ್ಣಾಟಗಳ ಅನಿರ್ಬಂಧಿತ ಆಶು ಸಂಭಾಷಣೆಗಳಿಗಿಂತ ಹೊಸತರದ ಲಿಖಿತ ಮತ್ತು ತರ್ಕಬದ್ಧ ಸಂಭಾಷಣೆಗಳು ಹಳ್ಳಿಗರಿಗೆ ಆಕರ್ಷಕವೆನಿಸಿದವು.

ನೀಲಕಂಠಪ್ಪನ ಮೊದಲ ರಚನೆ ತಿರುನೀಲಕಂಠ ಎಂಬ ಸಣ್ಣಾಟ ದ್ವಿತೀಯ ಘಟ್ಟವನ್ನು ಉದ್ಘಾಟಿಸಿತು. ತನ್ನ ಅಭಿಜಾತಗುಣಗಳಿಂದಾಗಿ ಅದು ಕೂಡಲೇ ಜನಪ್ರಿಯವಾಯಿತು. ಜನರು ಅದನ್ನು ನೀಲಕಂಠನ ಆಟ ಎಂದು ಕರೆದರು. ಕರ್ತೃ ನೀಲಕಂಠಪ್ಪ ಕಾದ್ರೊಳ್ಳಿ ಗ್ರಾಮದವನಾದುದರಿಂದ ಅದು ಕಾದ್ರೊಳ್ಳಿ ಆಟ ಎಂದು ಪ್ರಚಾರಗೊಂಡಿತು. ನೀಲಕಂಠಪ್ಪನೊಂದಿಗೆ ಎರಡನೆಯ ಘಟ್ಟದ ಸಣ್ಣಾಟ ಪರಂಪರೆಯನ್ನು ಗಟ್ಟಿಗೊಳಿಸಿದವನು ಅದೇ ಬೆಳಗಾಂವಿ ಜಿಲ್ಲೆಯ ಹಣ್ಣಿಕೇರಿ ಗ್ರಾಮದ ಶಿವಾನಂದ ಕವಿ. ಇವನು ರಚಿಸಿದ ನಿಜಗುಣ ಶಿವಯೋಗಿ, ಮಾಯಿ ಆಟ, (ಅಲ್ಲಮಪ್ರಭು), ಉಡುತಡಿ ಮಹಾದೇವಿ ಮೊದಲಾದ ಸಣ್ಣಾಟಗಳು ತುಂಬಾ ಜನಪ್ರಿಯವಾದವು.

ಕೇವಲ ಕಥಾನಿರೂಪಣೆಯ ಉದ್ದೇಶ ಹೊಂದಿದ್ದ ಪ್ರಥಮಘಟ್ಟದ ಸಣ್ಣಾಟಗಳಿಗಿಂತ ದ್ವಿತೀಯ ಘಟ್ಟದ ಸಣ್ಣಾಟಗಳು ಕಥಾವಸ್ತುವಿನ ನಿರ್ವಹಣೆಯಲ್ಲಿ ಭಿನ್ನಮಾರ್ಗ ಅನುಸರಿಸಿದವು. ತಾತ್ವಿಕ ಚರ್ಚೆ ಈ ಸಣ್ಣಾಟಗಳ ಮುಖ್ಯ ಲಕ್ಷಣವಾಯಿತು. ಸಂಸಾರದ ನಿಸ್ಸಾರತೆ, ಲೌಕಿಕ ಜೀವನದ ನಿಷ್ಪಲತೆ, ವೇದಾಂತ ತತ್ವಗಳು, ನೀತಿ : ಧರ್ಮಗಳು ಇಲ್ಲಿ ದೀರ್ಘವಾಗಿ ಚರ್ಚಿಸಲ್ಪಟ್ಟವು. ಇಷ್ಟೊತ್ತಿಗೆ ಜನಪ್ರಿಯವಾಗಿದ್ದ ಹರದೇಸಿ : ನಾಗೇಸಿ ಲಾವಣಿ ಸಂಪ್ರದಾಯ ಈ ಸಣ್ಣಾಟಗಳಿಗೆ ಪ್ರೇರಣೆ ನೀಡಿತು. ಇದರ ಪ್ರಭಾವವೆಂಬಂತೆ ಅಲ್ಲಮಪ್ರಭು ಸಣ್ಣಾಟದಲ್ಲಿ ಅಲ್ಲಮ : ಮಾಯೆಯ ನಡುವಿನ ದೀರ್ಘಚರ್ಚೆ, ನಿಜಗುಣ ಶಿವಯೋಗಿಯಲ್ಲಿ ನಿಜಗುಣ – ಪ್ರಮಿಲಾ (ವೇಶ್ಯೆ) ಇವರ ಮಧ್ಯದ ತಾರ್ಕಿಕ ಸಂಭಾಷಣೆ ಪ್ರಧಾನವೆನಿಸಿದವು. ಒಂದು ರಂಗಕೃತಿಯಲ್ಲಿ ಇಂಥವು ಪಡೆದುಕೊಂಡ ಮಹತ್ವದ ಸ್ಥಾನದ ಔಚಿತ್ಯವೇನೇ ಇರಲಿ, ಹಳ್ಳಿಯ ಪ್ರೇಕ್ಷಕರು ಇವನ್ನೆಲ್ಲ ಆಸಕ್ತಿಯಿಂದ ಸ್ವೀಕರಿಸಿ ಖುಷಿಪಟ್ಟದ್ದು ನಿಜ. ಐತಿಹಾಸಿಕ ವ್ಯಕ್ತಿಗಳಾದ ಅಲ್ಲಮ, ಅಕ್ಕಮಹಾದೇವಿ, ನಿಜಗುಣರನ್ನು ಈ ಕವಿಗಳು ಪರಿಭಾವಿಸಿದ ಕ್ರಮ ವಿಶೇಷವಾಗಿದೆ.ಅವರ ಜೀವನ ವೃತ್ತಾಂತಗಳನ್ನು ಜಾನಪದೀಕರಣಗೊಳಿಸಿ ಅನೇಕ ಸ್ವಕಲ್ಪಿತ ಪವಾಡಗಳಿಂದ ರಂಜನೀಯಗೊಳಿಸಿದ್ದಾರೆ.

ದ್ವಿತೀಯ ಘಟ್ಟದ ಸಣ್ಣಾಟಗಳ ಸಂಗೀತ ಸ್ವಲ್ಪ ಶಿಷ್ಟವೆನಿಸುವಂಥದು. ಕಂಪನಿ ನಾಟಕಗಳ ಸಂಗೀತದ ಪ್ರಭಾವವೇ ಇದಕ್ಕೆ ಕಾರಣ. ನಾಟಕದ ಹಾಡುಗಳಂತೆ ನಿರ್ದಿಷ್ಟರಾಗಗಳನ್ನಾಧರಿಸಿದ ಧಾಟಿಗಳಲ್ಲದಿದ್ದರೂ ಇವುಗಳಲ್ಲಿ ರಾಗಗಳ ಛಾಯೆಯನ್ನೂ ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಕೇವಲ ಶ್ರುತಿಗಾಗಿ ಸಣ್ಣಾಟದ ಸ್ಟೇಜ್ ಏರಿದ ಹಾರ್ಮೋನಿಯಂ ಬರುಬರುತ್ತ ಪಕ್ಕವಾದ್ಯವಾಗಿ ಬಾರಿಸಲ್ಪಡಲಾರಂಭಿಸಿತು. ಹಾರ್ಮೋನಿಯಂ ಕಲಾವಿದರು ಪರಿಣತರಾದಂತೆ ಹಾಡಿನ ಮಧ್ಯದಲ್ಲಿ ಮುಕ್ತಾಯದಲ್ಲಿ ಒಂದಿಷ್ಟು ಹೊತ್ತು ರಂಜನೀಯವಾಗಿ ಹಾರ್ಮೋನಿಯಂ ನುಡಿಸುವ ಪರಂಪರೆದ್ವಿತೀಯ ಘಟ್ಟದಲ್ಲಿ ಪ್ರಾರಂಭವಾಯಿತು. ಈ ಹೊಸತರದ ಹಾಡುಗಳ ಲಯಕ್ಕೆ ಡಪ್ಪು ಹೊಂದಲಾರದೆಂಬ ತಿಳುವಳಿಕೆ ಕಲಾವಿದರಿಗೆ ಇದ್ದುದರಿಂದ ಡಪ್ಪಿನ ಸ್ಥಾನವನ್ನು ತಬಲಾ ಆಕ್ರಮಿಸಿಕೊಂಡಿತು.

1960ರ ದಶಕದಲ್ಲಿ ದ್ವಿತೀಯ ಘಟ್ಟದ ಸಣ್ಣಾಟ ಪರಂಪರೆಯಲ್ಲಿ ಹೊಸಬೆಳವಣಿಗೆಯೊಂದು ಗೋಚರಿಸಿತು. ಈ ಸಣ್ಣಾಟ ಆರಂಭದಲ್ಲಿ ವೃತ್ತಿರಂಗಭೂಮಿಯ ನಾಟಕಗಳಿಂದ ಪ್ರೇರಣೆ ಪಡೆದುದು ನಿಜ. ಆದರೆ ಈಗ ಆ ನಾಟಕಗಳನ್ನೇ ನೇರವಾಗಿ ಸ್ವೀಕರಿಸಿ ತನ್ನ ಚೌಕಟ್ಟಿಗೆ ಅವಳಡಿಸಿಕೊಂಡು ಹೊಸ ಪ್ರಕಾರವೊಂದನ್ನು ಸೃಷ್ಟಿಸಿತು. ಇಷ್ಟೊತ್ತಿಗೆ ಹೇಮರೆಡ್ಡಿಮಲ್ಲಮ್ಮ ಎಂಬ ಕಂಪನಿ ನಾಟಕ ಬಹಳ ಜನಪ್ರಿಯವಾಗಿತ್ತು. ನಲವಡಿ ಶ್ರೀಕಂಠಶಾಸ್ತ್ರಿಗಳು : ಒಂದು ಪುಟ್ಟ ಪುರಾಣಕತೆಗೆ ವಿಪುಲ ಪವಾಡಗಳನ್ನು ಸಾಮಾಜಿಕ ವಿಡಂಬನೆಯನ್ನು ಸೇರಿಸಿ ಜನಪದ ಕತೆಯ ಸ್ವರೂಪಕೊಟ್ಟು ಈ ನಾಟಕ ರಚಿಸಿದ್ದಾರೆ. ಭಾವುಕ ಪ್ರೇಕ್ಷಕರಿಗೆ ಮಲ್ಲಮ್ಮನ ಮುಗ್ಧಭಕ್ತಿ ಮತ್ತು ಪತಿವ್ರತಾ ಧರ್ಮಾಚರಣೆಗಳು ಬಹಳ ಆಕರ್ಷಕವೆನಿಸಿದವು. ಡಾ. ಮಲ್ಲಿಕಾರ್ಜುನ ಮನ್ಸೂರ ಅವರು ಈ ನಾಟಕದ ಹಾಡುಗಳಿಗೆ ಧಾಟಿ ಕೂಡ್ರಿಸಿದ್ದೊಂದು ವಿಶೇಷ. ಮಲ್ಲಮ್ಮ ನಾಟಕ ಪ್ರದರ್ಶಿಸಲು ಉತ್ಸುಕರಾದ ಹಳ್ಳಿಯ ಕಲಾವಿದರಿಗೆ ಅದರ ಶಾಸ್ತ್ರೀಯ ಶೈಲಿಯ ಹಾಡುಗಳು ಭಾರವೆನಿಸಿದವು. ಆಗ ಹಾಡುಗಳನ್ನು ಸಣ್ಣಾಟದ ಮಾದರಿಗೆ ಪರಿವರ್ತಿಸಿ ಸಂಭಾಷಣೆಗಳನ್ನು ಅಷ್ಟಿಷ್ಟು ಬದಲಾಯಿಸಿದ ಹೊಸದಾದ ಮಲ್ಲಮ್ಮ ಸಣ್ಣಾಟ ರಚಿಸಿದರು. ಮಲ್ಲಮ್ಮನ ನಾಟಕ ಮಲ್ಲಮ್ಮನ ಆಟವಾಗಿ ಅಲ್ಪಾವಧಿಯಲ್ಲಿ ಜನಜನಿತವಾಯಿತು. ನಂತರ ಮಲ್ಲಮ್ಮನನ್ನು ಅನುಕರಿಸಿ ಇದೇ ಶೈಲಿಯಲ್ಲಿ ಅನೇಕ ಸಾಮಾಜಿಕ ಕಂಪನಿ ನಾಟಕಗಳು ಆಟಗಳಾಗಿ ಹೊಸರೂಪ ಪಡೆದವು.

ಸಂಗ್ಯಾಬಾಳ್ಯಾ, ರಾಧಾನಾಟ, ಅಲ್ಲಮಪ್ರಭು, ನಿಜಗುಣಶಿವಯೋಗಿ ಬಸವಂತ ಬಲವಂತ, ಕಡ್ಲಿಮಟ್ಟೆ ಸ್ಟೇಶನ್ ಮಾಸ್ಟರ್ ಮುಂತಾದವು ತಮ್ಮ ವೈಶಿಷ್ಟ್ಯ ಮತ್ತು ಆಕರ್ಷಣೆಯಿಂದಾಗಿ ಜನಪ್ರಿಯಗೊಂಡು ಸಣ್ಣಾಟ ಪರಂಪರೆಯನ್ನು ಸ್ಥಾಪಿಸಿದವು. ಇವುಗಳನ್ನು ಅನುಕರಿಸಿ ಸಣ್ಣಾಟಗಳು ಹುಟ್ಟಿಕೊಂಡವು. ಸಣ್ಣಾಟದ ಸ್ವಭಾವಕ್ಕೆ ಹೊಂದಲಾರದಂಥ ಐತಿಹಾಸಿಕ ಪ್ರಸಂಗಗಳೂ ಸಣ್ಣಾಟಗಳಾದವು. ಕಬೀರದಾಸ, ಬಸವೇಶ್ವರ ಮುಂತಾದವುಗಳನ್ನು ಇಲ್ಲಿ ಹೆಸರಿಸಬಹುದಾಗಿದೆ. ಸಣ್ಣಾಟದ ರೂಪ (ಫಾರ್ಮ್) ಎಷ್ಟೊಂದು ಮುಕ್ತ ಮತ್ತು ಹಗುರ ಎಂದರೆ, ಗುಲೇಬಕಾವಲಿ ಕತೆಯನ್ನು, ರುದ್ರಾಕ್ಷಿ ಮಹಿಮೆಯಂಥ ಪಕ್ಕಾ ಧಾರ್ಮಿಕ ವಿಷಯವನ್ನು, ಹರಿಶ್ಚಂದ್ರದಂಥ ಪುರಾಣ ಕತೆಯನ್ನು ತನ್ನ ಆಕಾರಕ್ಕೆ ಅಳವಡಿಸಿಕೊಂಡಿರುವುದುಂಟು. ವೈವಿಧ್ಯಮಯ ವಸ್ತುವನ್ನಾಧರಿಸಿ ನೂರಾರು ಸಣ್ಣಾಟಗಳು ರಚನೆಗೊಂಡಿವೆ. ಆದರೆ ಪ್ರಯೋಗ ಪರಂಪರೆಯಲ್ಲಿ ತಮ್ಮ ಸ್ಥಾನ ಉಳಿಸಿಕೊಂಡಥವು ಹತ್ತಿಪತ್ತು ಮಾತ್ರ.

ಸಣ್ಣಾಟದ ಹಾಸ್ಯಪಾತ್ರಗಳು ವಿಶಿಷ್ಟವಾಗಿವೆ. ದೂತಿ ಪಾತ್ರ ಪ್ರಥಮ ಘಟ್ಟದ ಸಣ್ಣಾಟಗಳಲ್ಲಿ ಸಾಮಾನ್ಯವಾಗಿದ್ದು ದ್ವಿತೀಯ ಘಟ್ಟಕ್ಕೂ ಮುಂದುವರೆಯಿತು. ಕೇವಲ ಸೇವಕಿಯಾಗಿರಬೇಕಾದ ದೂತಿ ಸೂತ್ರಧಾರ ಮತ್ತು ವಿದೂಷಕ ಇವರಿಬ್ಬರ ಕಾರ್ಯನಿರ್ವಹಿಸುವಳು. ದೂತಿ ಪಾತ್ರಧಾರಿ ಸ್ತ್ರೀವೇಷ ಹಾಕಿರುವುದಿಲ್ಲ.ಅವನಿಗೆ ಮೇಕಪ್ ಕೂಡ ಇರುವುದಿಲ್ಲ. ಒಂದು ದಡಿಧೋತರವನ್ನು ಸೀರೆಯ ಸರೆಗಿನಂತೆ ಹೊದ್ದುಕೊಂಡಿರುತ್ತಾನೆ. ಆಟ ಮುಂದುವರೆದಂತೆ ಅದನ್ನೂ ತೆಗೆದಿಡುವನು. ಮಾಮೂಲಿ ಪುರುಷ ವೇಷದಲ್ಲಿರುವ ಅವನನ್ನು ದೂತಿ ಎಂಬ ಸ್ತ್ರೀ ಎಂದು ಭಾವಿಸುವುದರಲ್ಲಿ ಪ್ರೇಕ್ಷಕರು ಗೊಂದಲುಗೊಳ್ಳುವುದಿಲ್ಲ. ದ್ವಿತೀಯ ಘಟ್ಟದ ಸಣ್ಣಾಟದಲ್ಲಿ ಲಾಲೂ (ಬೀಸೂ) ಎಂಬ ಹಾಸ್ಯಪಾತ್ರದ ಪ್ರವೇಶವಾಯಿತು. ನಪುಂಸಕನಾದ ಇವನು ವೇಶ್ಯೆಯರ ಮನೆಯ ಸೇವಕ ಈ ಪಾತ್ರವು ಮಲ್ಲಮ್ಮ ನಾಟಕದಲ್ಲಿರುವ ಇಂಥದೇ ಪಾತ್ರದ ಅನುಕರಣೆಯಾಗಿದೆ. ಬಿಗಿಯಾದ ಕಥಾಬಂಧದಲ್ಲಿ ಈ ಎರಡೂ ಹಾಸ್ಯಪಾತ್ರಗಳಿಗೆ ದೊರೆಯುವ ಅವಕಾಶ ತೀರಾ ಕಡಿಮೆ ಆಗಾಗ ಅಡಸೋಗುಗಳು ನೇರವಾಗಿ ಪ್ರವೇಶಿಸಿ ತೂಕಸಿಡುವ ಪ್ರೇಕ್ಷಕರನ್ನು ಎಚ್ಚರಿಸಿ ನಗಿಸಿ ಲವಲವಿಕೆಯ ವಾತಾವರಣವನ್ನು ನಿರ್ಮಿಸುತ್ತವೆ.

ಸಣ್ಣಾಟದ ಸ್ಟೇಜ್ ಚಿಕ್ಕದಿರುತ್ತದೆ. ಇದು ಸ್ಥಳೀಯ ಸಲಕರಣೆಗಳಿಂದ ನಿರ್ಮಿಸಿದ ಸರಳ ರಚನೆ. ಹಿಂಭಾಗಕ್ಕೆ ಒಂದು ಪರದೆ ಕಟ್ಟಿರುತ್ತಾರೆ. ಮೊದಲು ಹಿಲಾಲದ (ಪಂಜಿನ) ಬೆಳಕಿನಲ್ಲಿ ಪ್ರದರ್ಶನಗಳು ನಡೆಯುತ್ತಿದ್ದವು. ನಂತರ ಪೆಟ್ರೋಮ್ಯಾಕ್ಸ್ ಬಂದವು. ಈಗ ವಿದ್ಯುದ್ದೀಪಗಳ ಬಳಕೆ ಸಾಮಾನ್ಯವಾಗಿದೆ. ಎಲ್ಲ ಪಾತ್ರಗಳು ಮುಖಕ್ಕೆ ಬಣ್ಣ ಹಚ್ಚುಕೊಳ್ಳುತ್ತಾರೆ. ವೇಷಭೂಷಣ ಭರ್ಜರಿಯಾಗಿರುವುದಿಲ್ಲ. ದಿನನಿತ್ಯದ ಉಡಿಗೆಗಳಲ್ಲಿಯೇ ಸ್ವಲ್ಪ ಚೆನ್ನಾಗಿರುವ ಅಂಗಿಧೋತರ ಪೇಟಾ ಸೀರೆಗಳನ್ನು ಬಳಸಿಕೊಳ್ಳುತ್ತಾರೆ.

ಸಣ್ಣಾಟಗಳಲ್ಲಿ ಪಾತ್ರವಹಿಸುವ ವೃತ್ತಿನಟಿಯರ ಪರಂಪರೆಯೇ ಇದೆ. ಇವರಿಗೆ ಚಿಮಣಾಗಳೆಂದು ಹೆಸರು. ಇವರು ಸಾಮಾನ್ಯವಾಗಿ ದೇವದಾಸಿ ಹಿನ್ನಲೆಯಿಂದ ಬಂದವರು. ನಾಲ್ಕಾರು ಆಟಗಳ ನಾಯಕಿಪಾತ್ರದ ಹಾಡುಮಾತುಗಳನ್ನು ಕಲಿತಿರುತ್ತಾರೆ. ಹಳ್ಳಿ ಹಳ್ಳಿಗೆ ಹೋಗಿ ಅಲ್ಲಿಯ ಸ್ಥಳೀಯ ತಂಡದ ಪ್ರದರ್ಶನದಲ್ಲಿ ಪಾತ್ರವಹಿಸಿ ಸಂಭಾವನೆ ಪಡೆದುಕೊಂಡು ಬರುತ್ತಾರೆ.

: ಡಾ. ಬಸವರಾಜ ಮಲ್ಲಶೆಟ್ಟಿ