ಇದು ಭಾಷೆಯನ್ನು ಕುರಿತ ವಿಶ್ವಕೋಶ. ಭಾಷೆ ನಮ್ಮ ಅಸ್ತಿತ್ವದೊಡನೆ ಬೆರೆತಿರುವ ಬಗೆಯನ್ನು ನೆನೆದರೆ ಬೆರಗಾಗುತ್ತದೆ. ನಮ್ಮ ಅತಿ ಸಾಮಾನ್ಯ ವ್ಯವಹಾರಗಳಿಂದ ಹಿಡಿದು ಅಮೂರ್ತವೂ ಅತಿಗಹನವೂ ಆದ ನೆಲೆಗಳವರೆಗೆ ಭಾಷೆಯ ವ್ಯಾಪ್ತಿಯಿದೆ. ವ್ಯಕ್ತಿಗತವಾದ ನೂರಾರು ವ್ಯವಹಾರಗಳಿರಲಿ ಸಾಮಾಜಿಕವಾದ ಘಟನೆಗಳಿರಲಿ ಎಲ್ಲ ಕಡೆಯೂ ಭಾಷೆಗೆ ಒಂದಲ್ಲ ಒಂದು ಪಾತ್ರವಿದೆ. ಕೆಲವೆಡೆ ಅದು ಸಾಧನವಾದರೆ ಮತ್ತೆ ಕೆಲವೆಡೆ ಅದೇ ಗುರಿ. ಕೆಲವೊಮ್ಮೆ ಅದು ಸಂಗತಿಯೊಂದರ ಸೂಚಕ ಮತ್ತೆ ಕೆಲವೊಮ್ಮೆ ಸಂಗತಿಗೆ ಅದೇ ಪ್ರೇರಕ. ಹೀಗೆ ನಮ್ಮೊಡನೆ ಇರುವ ಭಾಷೆಯ ಈ ವ್ಯಾಪಕ ಸ್ವರೂಪವನ್ನು ಅರಿಯುವುದು ಅವಶ್ಯ.

ಭಾಷೆ ನಮ್ಮೊಡನೆ ಇದೆ. ನಮಗೆ ಗೊತ್ತಿರುವ ಕೆಲವು ಭಾಷೆಗಳಿವೆ. ನಮಗೆ ಗೊತ್ತಿಲ್ಲದ ಸಾವಿರಾರು ಭಾಷೆಗಳಿವೆ. ಮಾನವ ಜನಾಂಗ ಹೀಗೆ ಹಲವು ಭಾಷಾ ಸಮುದಾಯಗಳ ಸಂಯೋಜನೆಯಾಗಿದೆ. ಕೆಲವು ಭಾಷೆಗಳನ್ನು ಆಡುವ ಕೋಟಿಗಟ್ಟಲೆ ಜನರಿದ್ದಾರೆ. ವಿಶ್ವದ ಬಹುಭಾಗಗಳಲ್ಲಿ ಅಂಥ ಭಾಷೆಗಳ ನುಡಿ ಕೇಳಿಸುತ್ತದೆ. ಮತ್ತೆ ಕೆಲವು ಭಾಷೆಗಳನ್ನು ಆಡುವವರ ಸಂಖ್ಯೆ ಒಂದು ನೂರನ್ನೂ ದಾಟುವುದಿಲ್ಲ. ಅವರು ಕೆಲವು ಚದರ ಮೈಲಿ ಪ್ರದೇಶದಾಚೆಗಿನ ಜಗತ್ತನ್ನೇ ಕಂಡಿಲ್ಲ. ಆ ಭಾಷೆ ಇನ್ನೆಷ್ಟು ಸಾವಿರವರ್ಷ ಕಳೆದರೂ ದೂರದ ನಾಡುಗಳಿಗೆ ತಲುಪಲಾರದು. ದಿನಗಳೆದಂತೆ ಆ ಭಾಷಿಕರೊಡನೆ ಆ ಭಾಷೆಯೂ ಅಳಿಯುವ ಸಾಧ್ಯತೆಯಿದೆ. ಕೆಲವು ಭಾಷೆಗಳು ಎಲ್ಲ ವಲಯಗಳಲ್ಲಿ ಸಮೃದ್ಧವಾಗಿ ಬಳಕೆಯಾಗುತ್ತವೆ. ಆ ಭಾಷೆಯೊಡನೆ ಸಾಮಾಜಿಕ ಅಂತಸ್ತೂ ನಂಟು ಬೆಳೆಸಿರುತ್ತದೆ. ಮತ್ತೆ ಕೆಲವು ಭಾಷೆಗಳು ಪಿಸುಗುಡುವ ಭಾಷೆಗಳು, ಅಷ್ಟಿಷ್ಟು ಕಡೆ ಹೇಗೋ ಬಳಕೆಯಾಗಿ ಜೀವ ಹಿಡಿದುಕೊಂಡಿವೆ.

ಭಾಷೆಗೂ ಭೌಗೋಳಿಕ ವಲಯ, ರಾಜಕೀಯ, ಜನಾಂಗ, ಸಮಾಜರಚನೆ, ಅಭಿವೃದ್ದಿ ಮಾದರಿ ಇವೆಲ್ಲವುಗಳಿಗೂ ವಿಚಿತ್ರ ಬಗೆಯ ನಂಟಿದೆ. ನಾಡುಗಳು ತಮ್ಮದೇ ಆದ ಒಂದು ಭಾಷೆಯನ್ನು ಅಧಿಕೃತವೆಂದು ಘೋಷಿಸಿಕೊಳ್ಳುತ್ತವೆ. ರಾಜಕೀಯ ಪರಿವರ್ತನೆಗಳು ಭಾಷೆಯ ಸ್ಥಾನಮಾನಗಳಲ್ಲೂ ಪಲ್ಲಟವನ್ನು ತರುತ್ತವೆ. ಚರಿತ್ರಕಾರರು ಒಂದೊಂದು ಜನಾಂಗದೊಡನೆ ಕೆಲವು ಭಾಷೆಗಳನ್ನು ಜೋಡಿಸಿ ನೋಡಿದ್ದಾರೆ. ಅಧಿಕಾರ, ಅಂತಸ್ತು, ಲಿಂಗಭೇದ, ವಯೋಮಾನ, ಪ್ರಾದೇಶಿಕತೆ, ಶಿಕ್ಷಣ ಇವೆಲ್ಲವೂ ಭಾಷೆಯಲ್ಲೂ ವಿಕಲ್ಪಗಳನ್ನು ಸೃಷ್ಟಿಸಿವೆ.

ಇವೆಲ್ಲದರ ಜತೆಗೆ ನಮ್ಮೆಲ್ಲರಿಗೂ ಭಾಷೆಯ ಬಗ್ಗೆ ಏನೋ ಗೊತ್ತಿದೆ. ನಮ್ಮ ಭಾಷೆ ಗಂಡು ಭಾಷೆ ಎನ್ನುತ್ತೇವೆ, ಮತ್ತೊಂದು ಭಾಷೆಯನ್ನು ಸಂಗೀತದಂತೆ ಇದೆ ಎನ್ನುತ್ತೇವೆ. ಕೆಲವು ಕಡೆ ನಮ್ಮ ಭಾಷೆ ಬಳಸಲು ಹಿಂಜರಿಯುತ್ತೇವೆ. ಭಾಷೆ ಕುರಿತು ಭಾಷೆಯಲ್ಲೇ ಮಾತಾಡುತ್ತೇವೆ; ಜಗಳವಾಡುತ್ತೇವೆ. ಭಾಷೆಯನ್ನು ಬಿಟ್ಟು ಮೌನವನ್ನು ಆಶ್ರಯಿಸಲು ಯೋಚಿಸುತ್ತೇವೆ. ಹೀಗೆ ಜೀವನಾವರ್ತಗಳಲ್ಲಿ ಭಾಷೆ ಬಗೆಬಗೆಯಾಗಿ ಹೆಣೆದುಕೊಂಡಿದೆ. ಎಲ್ಲ ದೇಶಕಾಲಗಳಲ್ಲೂ ಭಾಷೆಯೆಂಬ ಈ ಸಂಸ್ಕೃತಿ ಸಾಧನದ ಸ್ವರೂಪವನ್ನು ಕಂಡುಕೊಳ್ಳಲು ಅರಿತವರು ಯತ್ನಿಸಿದ್ದಾರೆ. ಅದರ ಮೂಲಚೂಲಗಳನ್ನು ಶೋಧಿಸಲು ಹವಣಿಸಿದ್ದಾರೆ. ಭಾಷೆಯ ವಿಕಲ್ಪಗಳನ್ನು ನಿರಾಕರಿಸಿ ಅದರ ಆದರ್ಶಸ್ತರವನ್ನು ಎತ್ತಿ ಹಿಡಿಯುವ ವಿಶ್ಲೇಷಣಾ ತಂತ್ರಗಳನ್ನು ರೂಪಿಸಿದ್ದಾರೆ. ಮತ್ತೆ ಕೆಲವು ತಾತ್ವಿಕರು ಮಾನವರ ಮುಖ್ಯ ಹುಡುಕಾಟವಾದ ಪರಮಸತ್ಯಕ್ಕೂ ಭಾಷೆಗೂ ಇರುವ ಸಂಬಂಧವನ್ನು ತಿಳಿಯಲು ತೊಡಗಿದ್ದಾರೆ. ಭಾಷೆಯ ಶಬ್ದ ಮತ್ತು ಅರ್ಥದ ನೆಲೆಗಳ ವಿಘಟನೆ ಅಥವಾ ಸಂಯೋಜನೆಗಳ ಸಮಸ್ಯೆಗಳನ್ನು, ಪರಸ್ಪರ ತಾರತಮ್ಯವನ್ನು ಚರ್ಚಿಸಿದ್ದಾರೆ. ಇದು ಭಾಷೆಯನ್ನು ಕುರಿತು ಇನ್ನೊಂದು ಲೋಕ.

ನೋಡುತ್ತ ಹೋದರೆ ಭಾಷೆಯದೊಂದು ವಿರಾಟ್‌ಲೋಕ. ತಜ್ಞರು ತಮ್ಮದೇ ಆದ ಉದ್ದೇಶಗಳಿಂದ ರೂಪುಗೊಂಡ ಸಿದ್ಧಾಂತಗಳಿಗನ್ವಯವಾಗಿ ಈ ಲೋಕವನ್ನು ಅರಿಯಲು ತೊಡಗಿದ್ದಾರೆ. ಅವರ ಹುಡುಕಾಟ ಮುಗಿಯುವಂತೆ ತೋರದು. ಅಲ್ಲದೆ ವಿವಿಧ ಸೈದ್ಧಾಂತಿಕ ತೊಡಕುಗಳು ಅವರ ಶೋಧಗಳನ್ನು ಜಟಿಲಗೊಳಿಸುತ್ತ ನಡೆದಿವೆ. ಎಲ್ಲ ವೈಜ್ಞಾನಿಕ ಶೋಧಗಳೂ ವಸ್ತುನಿಷ್ಠವೆಂಬಂತೆ ತೋರಿದರೂ ಅವುಗಳ ಹಿಂದೆ ಸಾಂಸ್ಕೃತಿಕ ರಾಜಕೀಯ ನೆಲೆಯೊಂದು ಇದ್ದೇ ಇರುವುದಷ್ಟೆ. ಈ ನೆಲೆಗಳಿಂದ ತಜ್ಞರ ಶೋಧಗಳು ಪ್ರಭಾವಗೊಂಡಿವೆ. ಅದರ ಚರ್ಚೆ ಇಲ್ಲಿ ಬೇಡ.

ಆದರೆ ತಜ್ಞರಲ್ಲದವರಿಗೂ ಭಾಷೆಯ ಲೋಕದ ಪರಿಚಯ ಅವಶ್ಯ. ಅವರ ಕುತೂಹಲ ಕೇವಲ ಮಾಹಿತಿ ಸಂಗ್ರಹಕ್ಕೆ ಮಾತ್ರ ಸೀಮಿತವಾಗುವಂತಿಲ್ಲ. ಈ ಪರಿಚಯದಿಂದ ಭಾಷೆಯನ್ನು ಕುರಿತ ಅವರ ತಿಳುವಳಿಕೆಯಲ್ಲಿ ಅಷ್ಟಿಷ್ಟು ಪಲ್ಲಟವಾಗುವುದೂ ಅವಶ್ಯ. ಈ ಕೋಶವನ್ನು ರೂಪಿಸುವಾಗ ಈ ಉದ್ದೇಶವನ್ನು ಗಮನದಲ್ಲಿರಿಸಿಕೊಳ್ಳಲಾಗಿದೆ.

ಈ ವಿಷಯ ವಿಶ್ವಕೋಶ ರಚನೆಯಲ್ಲಿ ಡೇವಿಡ್ ಕ್ರಿಸ್ಟಲ್ ಅವರ ‘ದ ಕೇಂಬ್ರಿಡ್ಜ್ ಎನ್‌ಸೈಕ್ಲೋಪಿಡಿಯಾ ಆಫ್ ಲಾಂಗ್ವೇಜ್’ (1987) ಕೃತಿಯನ್ನು ಮಾದರಿಯಾಗಿ ಇರಿಸಿಕೊಂಡಿದೆ. ಈ ಗ್ರಂಥವೀಗ ಪರಿಷ್ಕೃತಗೊಂಡು ಮರುಮುದ್ರಣವನ್ನು ಕಂಡಿದೆ. ಹಾಗೆ ನೋಡಿದರೆ ಭಾಷೆ ಕುರಿತ ವಿಶ್ವಕೋಶಗಳ ಸಂಖ್ಯೆ ಬೆರಳೆಣಿಕೆಯಷ್ಟಿದೆ. ವಿಲಿಯಂ ಬ್ರೈಟ್ ಅವರು ಸಂಪಾದಿಸದ ನಾಲ್ಕು ಸಂಪುಟಗಳ ‘ಇಂಟರ್‌ನ್ಯಾಷನಲ್ ಎನ್‌ಸೈಕ್ಲೋಪಿಡಿಯಾ ಆಫ್ ಲಿಂಗ್ವಿಸ್ಟಿಕ್ಸ್’ (1992) ಮತ್ತು ಆರ್.ಈ. ಆಶರ್ ಅವರು ಸಂಪಾದಿಸಿದ ಹತ್ತು ಸಂಪುಟಗಳ ‘ಎನ್‌ಸೈಕ್ಲೋಪಿಡಿಯಾ ಆಫ್ ಲಾಂಗ್ವೇಜ್ ಅಂಡ್ ಲಿಂಗ್ವಿಸ್ಟಿಕ್ಸ್’ (1993) ಮತ್ತು ಫ್ರೆಡರಿಕ್ ಜಡ್. ನ್ಯೂಮೆಯರ್ ಅವರು ಸಂಪಾದಿಸಿದ ‘ಲಿಂಗ್ವಿಸ್ಟಿಕ್ಸ್, ದಿ ಕೇಂಬ್ರಿಡ್ಜ್ ಸರ್ವೆ’ (1988), ಮತ್ತು ಎನ್. ಈ. ಕಾಲೆಂಜ್ ಅವರು ಸಂಪಾದಿಸಿದ ‘ಅನ್ ಎನ್‌ಸೈಕ್ಲೋಪಿಡಿಯಾ ಆಫ್ ಲಾಂಗ್ವೇಜ್’ (1989) ಇವಷ್ಟೇ ಈಗ ಲಭ್ಯ. ಸಾಮಾನ್ಯ ವಿಶ್ವಕೋಶದಲ್ಲಿ ಭಾಷೆ ಕುರಿತು ಮಾಹಿತಿ ಲಭ್ಯವಾಗುವುದು ಅವಶ್ಯ. ಕ್ರಿಸ್ಟಲ್ ಅವರನ್ನು ಹೊರತುಪಡಿಸಿ ಮೇಲೆ ಹೇಳಿದ ಕೋಶಗಳು ಭಾಷಾಶಾಸ್ತ್ರದ ನೆಲೆಗೆ ಹೆಚ್ಚು ಒತ್ತು ನೀಡುತ್ತವೆ. ಕ್ರಿಸ್ಟಲ್ ಕೋಶ ಮುಖ್ಯವಾಗಿ ಸಾಮಾನ್ಯ ಓದುಗರನ್ನು ಗಮನದಲ್ಲಿ ಇಟ್ಟುಕೊಂಡಿದೆ. ತಜ್ಞರ ವಿಷಯ ಮಂಡನೆಯೂ ತಜ್ಞರಿಗಾಗಿ ಆಗಿರದೆ ವಿಷಯ ಪ್ರವೇಶವನ್ನು ಬಯಸುವವರಿಗಾಗಿ ತಕ್ಕಂತಿದೆ.

ಕನ್ನಡದಲ್ಲಿ ಈ ಕೋಶವನ್ನು ಸಿದ್ಧಪಡಿಸಲು ಯೋಜಿಸಿದಾಗ ಕ್ರಿಸ್ಟಲ್ ಉದ್ದೇಶದಂತೆ ಅದರ ವಿನ್ಯಾಸ ಕೂಡ ಮಾದರಿಯಾಗಬಹುದೆಂದು ತೋರಿತು. ಹಾಗಾಗಿ ಅದನ್ನು ಇಲ್ಲಿ ಬಹುಮಟ್ಟಿಗೆ ಅನುಸರಿಸಿದೆ. ಕೆಲವು ಕಡೆಗಳಲ್ಲಿ ಬದಲಾವಣೆ ಕೂಡ ಮಾಡಲಾಗಿದೆ. ಇದು ಕನ್ನಡದಲ್ಲಿ ಸಿದ್ಧಪಡಿಸುತ್ತಿರುವ ಕೋಶವಾದ್ದರಿಂದ ಕನ್ನಡದಲ್ಲಿ ನಡೆದ ಭಾಷಾ ಚಿಂತನೆಯ ಪರಿಚಯ ನೀಡುವ ಲೇಖನವೊಂದು ಸೇರಿದೆ. ಭಾಷಾಂಶಗಳ ಪರಿಚಯ ನೀಡುವಾಗ ಕ್ರಿಸ್ಟಲ್ ಕೋಶ ಸಹಜವಾಗಿಯೇ ಇಂಡೋಯುರೋಪಿಯನ್ ಭಾಷಾವಂಶಕ್ಕೆ ಹೆಚ್ಚಿನ ಮನ್ನಣೆ ನೀಡಿದೆ. ನಾವು ಭಾರತದ ಭಾಷೆಗಳ ಮತ್ತು ದ್ರಾವಿಡ ಭಾಷೆಗಳ ಪರಿಚಯಕ್ಕೆ ಅವಕಾಶ ಕಲ್ಪಿಸಿಕೊಂಡೆವು.

ಲೇಖನಗಳನ್ನು ಸಿದ್ಧಪಡಿಸಲು ಲೇಖಕರನ್ನು ಕೋರಿದಾಗ ಆಯಾ ವಿಷಯಗಳ ಬಗೆಗೆ ವಿವಿಧ ಲಭ್ಯ ಮೂಲಗಳ ಸಾಮಗ್ರಿಯ ಬೆರಳಚ್ಚು ಪ್ರತಿಗಳನ್ನು ನೀಡಿದೆವು. ಕ್ರಿಸ್ಟಲ್ ಕೋಶದ ಲೇಖನವನ್ನು ವಿಷಯ ವಿನ್ಯಾಸ ಮತ್ತು ಮಂಡನೆಗೆ ಮಾದರಿಯನ್ನಾಗಿ ಇರಿಸಿಕೊಳ್ಳಲು ಯೋಚಿಸಿದೆವು. ಲೇಖಕರು ವಿಷಯತಜ್ಞರು. ಅವರು ತಮ್ಮ ವಿಷಯ ಮಂಡನೆಗೆ ಸೂಕ್ತವೆನಿಸಿದ ಮಾದರಿಗಳನ್ನು ಆಯ್ದುಕೊಂಡಿದ್ದಾರೆ. ಒಟ್ಟು ಕೋಶದ ಚೌಕಟ್ಟಿಗೆ ಲೇಖನಗಳನ್ನು ಹೊಂದಿಸುವಾಗ ಅವರ ಲೇಖನದಲ್ಲಿ ಅವಶ್ಯವೆನಿಸಿದ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಹೀಗಿದ್ದರೂ ವಿಷಯ ನಿರೂಪಣೆಯಲ್ಲಿ ಎರಡು ಪ್ರಧಾನ ಶೈಲಿಗಳು ಈ ಲೇಖನಗಳಲ್ಲಿ ಇರುವುದನ್ನು ಗಮನಿಸಬಹುದು. ಇವುಗಳಲ್ಲಿ ಒಂದು ಬಗೆ, ವಿಷಯ ಮಂಡನೆ ಮಾಡುವಾಗ ಓದುವವರನ್ನು ಗಮನದಲ್ಲಿ ಇರಿಸಿಕೊಳ್ಳುವುದಿಲ್ಲ. ಯಾರನ್ನೂ ಉದ್ದೇಶಿಸದ ವಸ್ತುನಿಷ್ಠ ವಿಧಾನವದು. ಈ ಶೈಲಿ ಕನ್ನಡದ ಶಾಸ್ತ್ರಗ್ರಂಥಗಳಲ್ಲಿ ಬಳಕೆಯಲ್ಲಿದೆ. ಇನ್ನೊಂದು ಶೈಲಿ ವಿಷಯ ಮಂಡಿಸುವಾಗ ಓದುಗರನ್ನು ಗಮನದಲ್ಲಿರಿಸಿಕೊಳ್ಳುತ್ತದೆ. ಅವರನ್ನು ಒಪ್ಪಿಸುವ, ತಿಳಿಯ ಹೇಳುವ ವಿಧಾನವನ್ನು ಅನುಸರಿಸುತ್ತದೆ. ಹೀಗೆ ವಿಶ್ವಕೋಶದಲ್ಲಿ ಎರಡು ವಿಭಿನ್ನ ಶೈಲಿಗಳಿರುವುದು ಸರಿಯೇ ಎಂಬುದೊಂದು ಪ್ರಶ್ನೆಯಾಗಿದೆ. ಆದರೆ ಎಲ್ಲರೂ ಒಂದೇ ಶೈಲಿಯಲ್ಲಿ ಬರೆಯಬೇಕೆನ್ನುವುದು ಎಷ್ಟು ಸರಿ? ಕನ್ನಡದಲ್ಲಿ ಶಾಸ್ತ್ರ ವಿಷಯಗಳ ಮಂಡನೆಗೆ ಇದೇ ಸೂಕ್ತ ವಿಧಾನವೆಂಬುದು ನಿರ್ವಿವಾದವಾಗಿ ನಿಶ್ಚಿತವಾಗಿಲ್ಲವಷ್ಟೇ. ಆದ್ದರಿಂದ ಈ ಕೋಶದಲ್ಲಿ ಈ ಎರಡೂ ಶೈಲಿಗಳನ್ನು ಹಾಗೇ ಉಳಿಸಿಕೊಂಡಿದ್ದೇವೆ.

ಲೇಖನಗಳಲ್ಲಿ ವಿಷಯ ಸ್ಪಷ್ಟನೆಗಾಗಿ ಉದಾಹರಣೆಗಳನ್ನು ಕೊಡುವಾಗ ಬಹುಮಟ್ಟಿಗೆ ಕನ್ನಡದ ಸಂದರ್ಭವನ್ನು ಗಮನದಲ್ಲಿರಿಕೊಳ್ಳಲು ಸೂಚಿಸಿದ್ದೆವು. ಲಭ್ಯವಿರುವ ಕಡೆಗಳಲ್ಲಿ ಕನ್ನಡದ ನಿದರ್ಶನಗಳೇ ಇವೆ. ಆದರೆ ಕೆಲವು ವಲಯಗಳ ಭಾಷಾಮಾಹಿತಿ ಕನ್ನಡದಲ್ಲಿ ದೊರಕುವುದಿಲ್ಲ. ಏಕೆಂದರೆ ಹೆಚ್ಚಿನ ಅಧ್ಯಯನಗಳು ಇಲ್ಲಿ ನಡೆದಿಲ್ಲ. ಉದಾಹರಣೆಗೆ ಮಕ್ಕಳ ಕಲಿಕೆ, ಭಾಷೆಯ ಸಾಮಾಜಿಕತೆ, ಭಾಷೆಯ ಮನಶ್ಶಾಸ್ತ್ರೀಯ ನೆಲೆಗಳು ಇತ್ಯಾದಿ ವಲಯಗಳಲ್ಲಿ ಕನ್ನಡದ ನಿದರ್ಶನಗಳು ಸಿಗುವುದು ಕಡಿಮೆ. ಹಾಗಾಗಿ ಕೆಲವು ಲೇಖನಗಳು ಅನ್ಯಭಾಷೆಯ ನಿದರ್ಶನಗಳನ್ನೇ ಉಳಿಸಿಕೊಂಡಿವೆ. ಕೆಲವು ಲೇಖಕರು ತಮ್ಮ ಲೇಖನಗಳಿಗೆ ಅವಶ್ಯವಾದ ಪರಾಮರ್ಶ ಗ್ರಂಥಸೂಚಿಯನ್ನು ನೀಡಿದ್ದಾರಾದರೂ ಆ ಪಟ್ಟಿಯನ್ನು ಆಯಾ ಲೇಖನದ ಕೊನೆಯಲ್ಲಿ ಕೊಟ್ಟಿಲ್ಲ. ಆ ಎಲ್ಲ ಗ್ರಂಥಸೂಚಿಯನ್ನು ಒಟ್ಟಾಗಿಸಿ, ಇನ್ನೂ ಹೆಚ್ಚಿನ ಗ್ರಂಥಗಳನ್ನು ಸೇರಿಸಿ ಒಂದು ಸಮಗ್ರ ಗ್ರಂಥಸೂಚಿಯನ್ನು ಅನುಬಂಧವಾಗಿ ಒದಗಿಸಿದ್ದೇವೆ. ಅನುಬಂಧದಲ್ಲಿ ಜಗತ್ತಿನ ಭಾಷೆಗಳ ಒಂದು ಪಟ್ಟಿ ಇದೆ. ಜತೆಗೆ ಭಾರತದ ಭಾಷೆಗಳ ಪಟ್ಟಿಯೊಂದನ್ನು ಬೇರೆಯಾಗಿಯೇ ನೀಡಿದ್ದೇವೆ.

ವಿಷಯ ವಿಶ್ವಕೋಶವೆಂಬುದು ಒಂದು ನಿರಂತರ ಯೋಜನೆ. ಇದಕ್ಕೆ ಮೊದಲಿದೆ; ಕೊನೆಯಿಲ್ಲ. ಆದ್ದರಿಂದ ಈ ಕೋಶವು ಮೊದಲ ಯತ್ನವಾಗಿದ್ದು; ಬೆಳವಣಿಗೆಯನ್ನು, ನವೀಕರಣವನ್ನು ಸದಾ ಬಯಸುತ್ತದೆ. ಕನ್ನಡ ಓದುಗರಿಗೆ ಹೀಗೆ ಈ ಕೋಶ ಬೆಳೆಯಲು ನೆರವಾಗುವ ಸಲಹೆಗಳನ್ನು ನೀಡಬೇಕೆಂದು ಕೋರುತ್ತೇನೆ.

ಈ ಲೇಖನಗಳು ಬಹುಪಾಲು 1996-97ರ ಅವಧಿಯಲ್ಲಿ ಬರೆದವು. ಎಲ್ಲ ಲೇಖನಗಳೂ ಮುದ್ರಣಕ್ಕಾಗಿ ಹಿಂದೆಯೇ ಅಣಿಗೊಂಡಿದ್ದವು. ಕೆಲವು ಲೇಖನಗಳು 1981ರವರೆಗಿನ ಭಾರತೀಯ ಜನಗಣತಿಯ ಮಾಹಿತಿಯನ್ನು ಅವಲಂಬಿಸಿವೆ. 1991ರ ಜನಗಣತಿಯ ಮಾಹಿತಿಯನ್ನು ಪೂರಕವಾಗಿ ಅನುಬಂಧದಲ್ಲಿ ನೀಡಿದ್ದೇವೆ.

ಮರುಮುದ್ರಣದ ಹೊತ್ತಿನಲ್ಲಿ

2000ದಲ್ಲಿ ಪ್ರಕಟಗೊಂಡಿದ್ದ ಈ ಸಂಪುಟ ಈಗ ಮರುಮುದ್ರಣಗೊಳ್ಳುತ್ತಿದೆ. ಮೊದಲ ಕೆಲವು ಲೇಖನಗಳು ತಿದ್ದುಪಡಿಯಾಗಿವೆ. ಕೆಲವು ವಿಸ್ತಾರಗೊಂಡಿವೆ. ಹೊಸ ಲೇಖನಗಳು ಸೇರ್ಪಡೆಯಾಗಿವೆ. ಈ ಪರಿಷ್ಕರಣದಲ್ಲಿ ನೆರವಾದವರಿಗೆಲ್ಲ ವಂದನೆಗಳು. ಮರುಮುದ್ರಣದ ಅಗತ್ಯ ಕಂಡು ಕ್ರಮ ಕೈಗೊಂಡು ಉತ್ತೇಜಿಸಿದ ಮಾನ್ಯ ಕುಲಪತಿಯವರಾದ ಡಾ. ವಿವೇಕ ರೈಯವರಿಗೆ ಮತ್ತು ಈ ಮುದ್ರಣವನ್ನು ಆರಂಭಿಸಿದ ಪ್ರಸಾರಾಂಗದ ನಿರ್ದೇಶಕರಾದ ಡಾ. ಹಿ.ಚಿ. ಬೋರಲಿಂಗಯ್ಯನವರಿಗೆ ಮತ್ತು ಪೂರೈಸಿಕೊಟ್ಟ ಇಂದಿನ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರಿಗೆ ಮತ್ತು ಆಡಳಿತಾತ್ಮಕವಾಗಿ ನೆರವಾದ ಮಾನ್ಯ ಕುಲಸಚಿವರಾದ ಶ್ರೀ ವಿ. ಶಂಕರ್ ಅವರಿಗೆ ಸಂಪಾದಕ ಮಂಡಲಿಯು ತನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತಿದೆ. ತಾಂತ್ರಿಕ ನೆರವು ನೀಡಿದ ಶ್ರೀ ಬಿ. ಸುಜ್ಞಾನಮೂರ್ತಿಯವರಿಗೆ ನೆನಕೆಗಳು.

ಮೂರನೇ ಮುದ್ರಣದ ಸಂದರ್ಭದಲ್ಲಿ

ಹೆಚ್ಚು ಬದಲಾವಣೆಗಳಿಲ್ಲದೆ ಈ ಹೊತ್ತಿಗೆ ಮರಳಿ ಅಚ್ಚಾಗುತ್ತಿದೆ. ಓದಿದ ಹಲವರು ಇದು ಎಲ್ಲರಿಗೂ ಬೇಕಾದ ಹೊತ್ತಿಗೆಯೆಂದು ಹೇಳಿದ್ದಾರೆ. ಇನ್ನೂ ಬೆಳೆಸಿ ಬೇರೆ ಮಾದರಿಯಲ್ಲಿ ಈ ಕೋಶವನ್ನು ತಯಾರಿಸಬಹುದು. ಮುಂದೆ ಯಾರಾದರೂ ಆ ಕೆಲಸ ಮಾಡುವರೆ ಎಂಬದನ್ನು ಕಾಯ್ದು ನೋಡಬೇಕು. ಮರಳಿ ಅಚ್ಚಿಸಲು ಮುಂದಾದ ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ. ಎ. ಮುರಿಗೆಪ್ಪನವರಿಗೆ ಮತ್ತು ಮಾನ್ಯ ಕುಲಸಚಿವರಾದ ಡಾ. ಮಂಜುನಾಥ ಬೇವಿನಕಟ್ಟಿ, ಪ್ರಸಾರಾಂಗದ ನಿರ್ದೇಶಕರಾದ ಡಾ. ಎ. ಮೋಹನ ಕುಂಟಾರ್ ಮತ್ತು ಸಹಾಯಕ ನಿರ್ದೇಶಕರಾಗಿ ತಮ್ಮದೇ ಹೊತ್ತಿಗೆ ಎಂಬಂತೆ ಮೈದುಂಬಿ ಮಾತಾಡುವ ಶ್ರೀ ಬಿ. ಸುಜ್ಞಾನಮೂರ್ತಿಯವರಿಗೆ ನೆನಕೆಗಳು ಸಲ್ಲುತ್ತವೆ. ವಿಭಾಗದ ನನ್ನ ಕಿರಿಯ ಗೆಳೆಯರು ಈ ಮರು ಅಚ್ಚಿನ ಕಾಯಕದಲ್ಲಿ ದುಡಿದಿದ್ದಾರೆ. ಅವರಿಗೂ ನಮಸ್ಕರಗಳು.