ಅಯ್ಯೊ ನನ್ನ ದೇಶವೇ
ಏನಾಗಿದೆ ನಿನಗೆ?
ಯಾಕೆ ಹೀಗೆ ಹೊಯ್ದಾಡುವೆ
ಅಸ್ವಸ್ಥತೆಯೊಳಗೆ ?

ದೀಪದಂಥ ಕಣ್ಣತುಂಬ
ಬೆಂಕಿಯುರಿವುದೇತಕೆ?
ಹಾಲಾಹಲ ತುಂಬಿತೇಕೆ
ಹಾಲಿನಂಥ ಹೃದಯಕೆ ?

ಪಾಚಿಗಟ್ಟಿ ನಾರುತಿರುವು-
ವೇಕೆ ನಿನ್ನ ನದಿಗಳು ?
ಹಸುರಿಲ್ಲದೆ ಬರಡಾಗಿವೆ
ವನ-ಪರ್ವತ ನೆಲೆಗಳು.

ತೊಂಡುಗೂಳಿ ತುಳಿಯುತಲಿವೆ
ಬೆಳೆದ ಹೊಲದ ಹಸುರನು
ಇಲಿ-ಹೆಗ್ಗಣ ಮುಕ್ಕುತಲಿವೆ
ಹಳೆ ಪಣತದ ಕಾಳನು.

ಬೆಂಕಿ-ನೆತ್ತರಾಟದಲ್ಲಿ
ತಾಮಸಗಳ ಆರ್ಭಟ
ಹರಿದು ಚಿಂದಿಯಾಗುತಲಿದೆ
-ನಮ್ಮ ನಾಡ ಭೂಪಟ