ಸ್ತಬ್ದಯಮುನೆ ಭಗ್ನ ಮುರಳಿ
ನಿಡುಸುಯ್ಯುವ ಕಾನನ,
ಉದುರಿ ಬಿದ್ದ ನವಿಲು ಗರಿ
ಬಿರುಗಾಳಿಯ ರೋದನ.

ಇಲ್ಲ, ಎಲ್ಲಿ ಹುಡುಕಿದರೂ
ಅವನ ಹೆಜ್ಜೆ ನೆಲದಲಿ
ಯಾರ ಎದೆಯ ನೆನಪಿನಲ್ಲು
ಉಳಿಯಲಿಲ್ಲ ಕೊಳಲುಲಿ.

ಹಳೆ ನೆನಪಿನ ಪ್ರೇತದಂತೆ
ಬಿದ್ದಿದೆ ಗೋವರ್ಧನ
ವೃಂದಾವನ ಕುಂಜಗಳಲಿ
ತರಗೆಲೆಗಳ ಕ್ರಂದನ.

ಕಾಳಿಂದಿಯ ಮಡುವಿನಲ್ಲಿ
ಮತ್ತೆ ನಾಗಸಂತತಿ
ಈ ನೀರಿಗೆ ಹಾತೊರೆದರೆ
ವಿಷಪಾನವೆ ನಿನಗೆ ಗತಿ !