ಭಾಮಿನಿ
ಬಾಲನೆಂದುದ ಕೇಳುತೆಲೆಯೆಲೆ |
ಖೂಳ ತನಗಿಂದಿನಲಿ ನೀತಿಯ |
ಪೇಳಬಂದೆಯ ಬದುಕಿ ಸಾಕಿನ್ನಧಿಕ ಬಗುಳದಿರೂ |
ಸೀಳುವೆನು ನಿನ್ನೊಡಲನೀ ಕರ |
ವಾಲದಿಂದೆನುತೆದ್ದು ಮುಂದಕೆ |
ಕಾಲಿಡಲು ದನುಜೇಂದ್ರ ಗೆರಗುತಲೆಂದಳವನರಸೀ || ೧ ||
ರಾಗ ಸಾರಂಗ ಅಷ್ಟತಾಳ
ದಮ್ಮಯ್ಯ ಕೊಲ್ಲದಿರೀ | ಕಂದಯ್ಯನ |ನೊಮ್ಮೆಗೆ ಸೈರಿಸಿರೀ ||
ಸುಮ್ಮನೀ ಪರಿಯದು | ಷ್ಕರ್ಮವ ಗೈದರೆ | ನೆಮ್ಮುವುದಪಕೀರ್ತಿ | ನಿಮ್ಮನೆ ನಮ್ಮಾಣೆ || ೧ ||
ಚಿಕ್ಕವ ನೋಡೀತನೂ | ಯೇನೆಂದರು | ಲೆಕ್ಕಿಸಬೇಡದರ ||
ಮಕ್ಕಳಾಟಿಕೆಯ ಕಂ | ಡಕ್ಕರಗೊಳ್ಳದೆ | ಕಕ್ಕಸ ಕಾರ್ಸುವೇ | ತಕ್ಕೆ ಗೈಯುವೆ ಪ್ರೀಯ || ೨ ||
ಆದರಿನ್ನೊಮ್ಮಿವನಾ | ಕಳುಹಿಬೇಗ | ಕ್ರೋಧ ತೊರೆದು ಮಗನಾ |
ಮೋದದಿ ಗುರುಗೃಹ | ಕಾದರಿಸುತ ತಕ್ಕ | ಹಾದಿಗೆ ಬಹ ನೋಡಿ | ಬಾಧಿಪುದನು ಬಿಡಿ || ೩ ||
ಕಂದಪದ್ಯ
ವನಿತೆಯ ಮಾತಂ ಕೇಳ್ದಾ |
ದನುಜಾಧಿಪನಂದು ಗುರುವ ಕರೆಸುತ್ತಾಗಂ |
ತನುಜನನವಗೊಪ್ಪಿಸಲವ |
ವಿನಯದಿ ಕರೆತಂದನೊಡನೆ ಬಾಲನ ಮಠಕಂ || ೧ ||
ಭಾಮಿನಿ
ಗುರುವರೇಣ್ಯನು ಖಳನ ಭೀತಿಗೆ
ಕರೆತರುತ ಬಾಲಕನ ಮತ್ತಾ
ಬರೆಯುತಿಹುದಿನ್ನಾದರೊರದಂತೆನುತ ವಿನಯದಲೀ
ಬರೆದು ಮೇಲ್ಪಂಕ್ತಿಯನು ಬಳಿಕ
ಲ್ಲಿರುವ ಸುತರೊಡನುಸುರಿ ಬೇಗದಿ
ತೆರಳಿದನು ನಿಜ ಗೃಹದ ಕಾರ್ಯ ನಿವೃತ್ತಿಗೆಂದೆನುತಾ || ೧ ||
ರಾಗ ಭೈರವಿ ಝಂಪೆತಾಳ
ಪೊಡವಿಪತಿ ಕೇಳಯ್ಯ | ನುಡಿವುತಿಂತು ವುಪಾಧ್ಯ |
ನಡೆಯೆ ತನ್ನಯ ಗೃಹಕೆ | ನುಡಿಯಲೇನಿತ್ತಾ || ೧ ||
ತರಳರೆಲ್ಲರು ಹರಿಯ | ಸ್ಮರಿಪವನ ನುಡಿಸಲೆಂ |
ದಿರದೆ ಹತ್ತಿರಕೆ ಬಂ | ದೊರೆದರಿಂತೆಂದೂ || ೨ ||
ಏನಯ್ಯ ದೈತ್ಯೇಂದ್ರ | ಸೂನು ನಿನ್ನಯ ಮನದೊ |
ಳೇನ ಗ್ರಹಿಸಿಹೆ ಬಾಯೊ | ಳೇನೆಂಬೆ ಪೇಳೂ || ೩ ||
ಆಡಲೆಳೆದರು ಬಾರೆ | ನೋಡಿದರೆ ಮಾತಾಡೆ |
ಬೇಡವೆಂದರೆಯು ಕೊಂ | ಡಾಡುತಿಹೆ ಹರಿಯಾ || ೪ ||
ಅಚ್ಚುತನ ನೆನವ ಘನ | ಹುಚ್ಚು ಹಿಡಿಯಿತೆ ನಿನಗೆ |
ಸಚ್ಚರಿತ ನೀನೈಸೆ | ನಿಶ್ಚಯವ ಪೇಳು || ೫ ||
ಭಾಮಿನಿ
ತಂದೆ ತಾಯಾಚಾರ್ಯ ನಿನ್ನಯ |
ಬಂಧು ಬಳಗಗಳೇ ನೋಡೈ |
ಕಂದನೆಂದೊರೆಯುತಿರೆ ಕೇಳದೆ ಶ್ರೀವರನ ಪದವಾ |
ಕಂದನೆಂದೊರೆಯುತಿರೆ ಕೇಳದೆ ಶ್ರೀವರನ ಪದವಾ |
ಒಂದು ನಿಮಿಷವು ತೊರೆಯದತ್ಯಾ |
ನಂದದಿಂದಲಿ ಭಜಿಪೆ ನಿನಗದ |
ರಿಂದ ದೊರಕಿದುದೇನೆನುತ್ತಿಂತೆಂದರಾ ಬಳಿಕಾ || ೧ ||
ರಾಗ ಕೇದಾರಗೌಳ ಝಂಪೆತಾಳ
ಹುಟ್ಟಿದೊಡನೆಲೆ ಬಾಲನೇ | ಬರಿದಾಗಿ | ಹುಟ್ಟಿಸಿದ ತಂದೆಯೊಡನೇ |
ದಿಟ್ಟತನ ತೊರಿಸುವದೂ | ಸರಿಯೆ ಬಿಡು | ಕೆಟ್ಟು ಪೋಗುವೆ ದಿಟವಿದೂ || ೧ ||
ಕಪ್ಪುಮಯ್ಯವನೆಂದರೇ | ಕಡಲೊಳಡ | ಗಿಪ್ಪನವ ಯೋಚಿಸಿದರೇ |
ಅಪ್ಪುದೇನವನಿಂದಲೀ | ಕೇಳು ನಿ | ನ್ನಪ್ಪನಲ್ಪನೆ ಜಗದಲೀ || ೨ ||
ಹರಿಯನೇ ಭಜಿಸಬೇಕೂ | ಎಂಬ ಮನ | ದಿರವಬಿಡುಛಲವು ಸಾಕೂ |
ಗುರುವೆಂದ ತೆರದೊಳೀಗಾ | ನೀ ಬರೆವು | ತಿರುವುದೆನಲೊರೆದನಾಗಾ || ೩ ||
ರಾಗ ಮಧ್ಯಮಾವತಿ ಏಕತಾಳ
ಕೇಳಿ ಬಾಲಕರಿಂದೆನ್ನ ನುಡಿಯಾ | ಪೇಳುವೆನೀಗೆನ್ನ ಮನಸಿನ ಪರಿಯಾ || ಕೇಳಿ || ಪಲ್ಲ ||
ಜನಿಸಿದಾಗಳೆ ಕೋಪಗೊಂಡು ಮಜ್ಜನಕನು | ತನಯನಾದೆನಗೆರಡೆಣಿಸಿದನೂ ||
ಚಿನುಮಯನೊಲುಮೆಯೊಳಿಂದಿನ ತನಕ ನಾ | ತನುವಿಡಿದಿಳೆಯೊಳು
ಬದುಕೀರ್ಪೆನಯ್ಯಾ || ಕೇಳಿ || ೧ ||
ನಳಿನಾಕ್ಷನೊಲಿದು ಕಾಪಾಡಿದಡವಗಾರು | ಮುಳಿದೇನ ಮಾಳ್ಪರು ಜಗತಿಯಲೀ ||
ಕೊಲುವರೆ ಕಾವರೆ ಬಾಧ್ಯನಾತನು ಗುಟ್ಟು | ತಿಳಿಯದೇತಕೆ ಪರಿಹಾಸ್ಯ
ಮಾಡುವಿರೀ || ಕೇಳಿ || ೨ ||
ಇಂದೊ ನಾಳೆಯೊ ಮತ್ತಿನ್ನೀಗಲೊ ನಾಡದೊ | ಯೆಂದು ಬಪ್ಪುದು ಮೃತ್ಯುವೆಂಬುದನೂ ||
ಮುಂದಿನಾಗಮವನ್ನು ಬಲ್ಲವರ್ಯಾರು ಮು | ಕುಂದ ಧ್ಯಾನದಿ
ಭಯವಿಲ್ಲನಿಶ್ಚಯವೂ || ಕೇಳಿ || ೩ ||
ಭಾಮಿನಿ
ಕಂದ ಕೇಳಾವಾಗಲಾದರು
ಬಂದರೇನೈ ಮರಣ ಸತ್ತವ |
ಬಂದು ಜನಿಸನೆ ಮತ್ತೆ ಭೂಮಿಯೊಳುದಿಸಿ ಸಾಯುವದೂ |
ದಂದುಗದ ಸ್ಥಿತಿ ಯಾದರರುಹದ |
ರಿಂದವೇನೆಂಬುದನು ಬೇಗೆಮ |
ಗೆಂದು ಬಾಲರು ಕೇಳೆ ನಸುನಗುತೆಂದ ಪ್ರಹ್ಲಾದಾ || ೧ ||
ರಾಗ ಕೇತಾರಗೌಳ ಅಷ್ಟತಾಳ
ತರಳರೆಲ್ಲರು ಕೇಳಿರರುಹುವೆ ನಿಮ್ಮೊಳು | ನರಜನ್ಮ ದುಸ್ಥಿತಿಯಾ ||
ಬರೆಯಲಿಕಸದಳ ತಿಳಿದುದ ನಿಮ್ಮೊಡ | ನರುಹುವೆನಾ ಪರಿಯಾ || ೧ ||
ಸತಿಯು ಪುಷ್ಪಿಣಿಯಾಗಿ ಮಿಂದೈದನೆಯದಿನ | ಪತಿ ಬಂದು ಭೋಗಿಸಲ್ಕೇ ||
ಪ್ರಥಮದಿಂದ್ರಿಯ ಗರ್ಭದೊಳು ಸೇರಿ ಬಸುರ ತಾ | ಳುತ ಮತ್ತೆ ದಿನದಿನಕೇ || ೨ ||
ತಿಂಗಳೇರುತ ಬರೆ ಮಲ ಮೂತ್ರ ಕೃಮಿಗಳಿಂ | ದಂಗನೆಯುದರದಲೀ ||
ಭಂಗಬಡುತ ಶಿಶುವಿರುತೀರ್ಪ ಘನತರ | ಸಂಗತಿಯೇನೆನ್ನಲೀ || ೩ ||
ನಾರಿ ಭೋಜನದೊಳು ತಿನುತಿರೆ ಹುಳಿವುಪ್ಪು | ಕಾರದೊಡವೆಯದರಾ ||
ಘೋರ ತಾಪಗಳಿಂದ ಕಳೆಯುವ ತಿಂಗಳು | ಮೂರಾರ ನಾ ಕುವರಾ || ೪ ||
ಭಾಮಿನಿ
ಬಲಿದು ಬಸುರಿಂದಿಳಿದು ಬಪ್ಪರೆ |
ಘಳಿಗೆ ಮೊದಲಿನುಪದ್ರ ಶಿಶುವಿನ |
ಕಳಕಳವ ನಾನೇ ಪೇಳುವೆ ಬಳಿಕ ಬಾಲಕನೂ ||
ತಿಳಿದೆ ತಿಳಿದೆನು ಜನನ ಮರಣದ |
ಹೊಲಸನಾರೆನು ಬರಿದೆ ತನ್ನನು |
ಕೊಲಲು ಬೇಡೆಂದೆನುತ ಜನಿಸುವ ಧರೆಗೆ ಕಿರಿದಾಗೀ || ೧ ||
ರಾಗ ಸಾಂಗತ್ಯ ರೂಪಕತಾಳ
ಅಣಿಗರೆಲ್ಲರು ಕೇಳಿ ಶಿಶುವಾಗಿರಲು ಪುಟ್ಟಿ | ಮನಸಿನೊಳಿದ್ದುದನ್ಯರೊಳೂ ||
ಎನುವರೆ ತೀರದೆ ಮರುಗುತ್ತ ಹೊರಳುತ್ತ | ಲೆಣಿಸುತ್ತಲಿಹನು ಚಿತ್ತದೊಳೂ || ೧ ||
ತರಳನು ಹಸಿದೆನೆಂದೆನ್ನಲಿಕರಿಯದೆ | ಕರ ಚರಣದ ಬೆರಳುಗಳಾ ||
ಇರಿಸುತ್ತ ಬಾಯೊಳಗಿರುವನು ಸುಮ್ಮನೆ | ತರಳರರಿತಿರೆ ಕಷ್ಟಗಳಾ || ೨ ||
ಮಲಗಿದಲ್ಲಿಂದೇಳಲಾರದಿನ್ನಲ್ಲಿಯೆ | ಮಲ ಮೂತ್ರಗಳ ವಿಸರ್ಜಿಸುತಾ ||
ಮಲಗುತದರ ಮೇಲೆ ಹೊಲಸೆಂದು ತಿಳಿಯದೆ | ಕಳೆವನು ದಿನವ ಯೋಚಿಸುತಾ || ೩ ||
ಯೌವನ ಬರಲತಿ ಜವ್ವನೆಯರ ಕಂಡು | ವಾವ್ವಾರೆ ಬನ್ನಿರೆಂದೆನುತಾ ||
ಭಾವಿಸದೊಂದನು ದುರಿತಕಂಜದೆ ಮತ್ತಾ | ಭಾವಕಿಯರನು ನಂಬಿಸುತಾ || ೪ ||
ತಾ ಕಾಡುತಲವರೊಡನಾಡುತ ಮಧುರ ಮಾ | ತಾಡುತ್ತ ನಿರತ ಭೋಗಿಸುತಾ ||
ಕೇಡು ಮುಂದೆನಗುಂಟು ಬೇಡಿದೆಂದೆಣಿಸನು | ನೋಡಿರೆಂದು ಮತ್ತೆ ನಗುತ್ತಾ || ೫ ||
ಭಾಮಿನಿ
ತೆರಳರೆಲ್ಲರು ಕೇಳಿ ನರನಿಗೆ |
ಜರೆನರೆಯು ಬಂದೊದಗಲಾಗಳು |
ತರಳರೆಲ್ಲರು ಕಂಡು ಹೀಯಾಳಿಪರು ನಿಂದಿಪರೂ |
ತರುಣಿ ಬಾ ಬಾರೆಂದು ಕರೆದರೆ |
ಬರೆ ಸಮಯವೀಗಿಲ್ಲವೆಂಬಳು |
ಬರಿದೆ ಕೂಗುವಿರ್ಯಾತಕೆಂಬಳು ನುಡಿವಳತಿ ಮಾತಾ || ೧ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಮತ್ತೆ ಪುತ್ರರ ಕರೆದು ಕೈಹಿಡಿ | ದೆತ್ತಿರೆಂದೆನೆ ಕೇಳಿ ಬಾಲರು |
ಮೃತ್ಯುವ್ಯಾತಕೆ ಬಾರದೀತಗೆ | ನುತ್ತ ಗಜರೀ || ೧ ||
ನಾರುವುದು ನಿಮ್ಮಯ ಶರೀರವಿ | ದಾರು ಬರುವರು ನಿಮ್ಮ ಹತ್ತಿರ |
ವೂರಿಕೊಳ್ಳುತ ಕೋಲ ಬೀಳದೆ | ಸಾರಿ ಹೊರಗೇ || ೨ ||
ಬಳಿಕ ಕೋಲನು ಕಾಣದಂದದಿ | ನಲಿವ ಬಾಲಕರೊಯ್ಯೆ ತನ್ನಯ |
ಲಲನೆಯನು ಕರದೆಂದರೆಂಬನು | ಹಲವು ಮಾತಾ || ೩ ||
ಹಶುವಿನಲಿ ನಾ ಸಾವೆ ಬಡಿಸೆಲೆ | ಸೊಸೆಯೆ ಬೇಗದೊಳೆನಲು ಕೇಳುತ |
ಶಿಶುಗಳುಣ್ಣದ ಮುನ್ನ ನಿಮಗೇನ್ | ಹಶುವೆನುವಳೂ || ೪ ||
ವಾರ್ಧಿಕ
ಮತ್ತೆ ಮರಣದ ಕಾಲ ಬಂದೊದಗೆ ಮಾನವಗೆ |
ಬತ್ತಿತವಯವ ಶ್ವಾಸಕಾಸಗಳ ಘನತರದ |
ಮುತ್ತಿಗೆಯೊಳಳವಳಿದು ಬೆಂಡಾಗಿ ಬೆರಗಾಗಿ ಬಳಿಕೊಂದು ದಿವಸ ತಾನೂ ||
ಸತ್ತಪಂ ತಿಳಿದಿರೇ ಕಷ್ಟವಲ್ಲವೆ ಬಹಳ |
ಸತ್ತುದಿಸಿ ಪುಟ್ಟಿ ಸಾಯುವ ಕಾರ್ಯವದರಿಂದ |
ಪುತ್ರರಿರ ಕೇಳಿನ್ನು ಜನಿಸದಿಹುದೇ ಲೇಸು ಮನದಿ ಯೋಚಿಸಿರೆಂದನೂ || ೧ ||
ಭಾಮಿನಿ
ಇಂದೆ ತನ್ನನು ಜನಕ ಕೊಲಬೇ |
ಕೆಂದು ಕಷ್ಟವನೀವ ಸಮಯದಿ |
ನೊಂದನೆನುತುರೆ ಕಾಯ್ದ ಲಕ್ಷ್ಮೀರಮಣ ಕರುಣದಲೀ ||
ಕುಂದದತಿ ಭಕ್ತಿಯಲಿ ಬಹಳಾ |
ನಂದದಲಿ ಭಜಿಸುತ್ತಲಿರಲು ಮು |
ಕುಂದ ನಿಮ್ಮಿಪ್ಸಿತವ ಕೈಗೂಡಿಸುವ ಸುಲಭದೊಳೂ || ೧ ||
ಭಾಮಿನಿ
ಮಾತು ಸಾಕೆಲವೆಲವೊ ನಿನ್ನಯ |
ನೀತಿವಚನಗಳಂತಿರಲಿ ಸಾ |
ಕ್ಷಾತ ತೋರೀ ಕಂಭದೊಳಗಾ ವಿಷ್ಣುವೆಂಬವನಾ ||
ಮಾತನಾಡಿಸಿ ಕೆಡಿಸಲ್ಯಾತ |
ಕ್ಕೀತತೂಕ್ಷಣ ತೋರದಿದ್ದರೆ |
ಜಾತಕದ ಫಲ ತೀರಿತೆನುತೆದ್ದೊದದ ಕಂಭವನೂ || ೧ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಧರಣಿಪತಿ ಕೇಳಿಂತು ಕಂಬವ | ದುರುಳನೊದೆಯಲು ಕುವವ ಲಕ್ಷ್ಮೀ |
ವರನೆ ಸಲಹೀ ಸ್ತಂಭದಿಂದಲಿ | ಭರದಿ ಜನಿಸೀ || ೧ ||
ನುಡಿವುತೀ ಪರಿ ತರಳನಿರೆ ಖಳ | ನೊಡನೆ ಪೇಳಿದ ನಿನ್ನ ತಲೆಯನು |
ಹೊಡವೆ ನೀಗಳೆ ಬಂದು ತಡೆಯಲಿ ಕಡಲಶಯನಾ || ೨ ||
ಒರೆವುತಿಂತೆರಡನೆಗೆ ಕಂಭವ | ನೆರಗಲದರಲಿ ಪ್ರಳಯಕಾಲದ |
ಬರಸಿಡಿಲಿನಬ್ಬರವು ಕೇಳಿಸಿ | ತೊರೆಯಲೇನೂ || ೩ ||
ಪೊಡವಿ ಬಿರಿದುದೊ ಮೇರು ಧರಣಿಂ | ಗುಡಿದು ಬಿದ್ದು ದೊ ಬಹಳ ಘೋಷದ |
ಲೊಡೆದುದೋ ಬ್ರಹ್ಮಾಂಡವೆಂದಡಿ | ಗಡಿಗೆ ಸುರರೂ || ೪ ||
ಒರೆವುತಿರುತಿರೆ ದುರುಳ ಕಂಭದಿ | ಮೊರೆವ ಧ್ವನಿಯಾಲಿಸುತಿದೇನ |
ಚ್ಚರಿಯೆನುತ ತಲೆದೂಗುತಿದ್ದನು | ಬೆರಗಿನಿಂದಾ || ೫ ||
ಗರುಡವಾಹನನತ್ತ ಭಕತನು | ವರದ ಮಾತನು ಸಲಿಸಬೇಕೆಂ |
ದಿರದೆ ಮನ ಮಾಡಿದನು ನಾನದ | ನರುಹಲೇನೂ || ೬ ||
ಭಾಮಿನಿ
ಹೊಳೆದುದಗ್ರಸ್ತಂಭ ಮಿಗೆ ಥಳ |
ಥಳಿಪ ಸೂರ್ಯ ಸಹಸ್ರ ದೀಪ್ತಿಯ |
ತಳೆದುದೋ ಯೆಂಬಂತೆ ಕಣ್ಣಾಲಿಗಳು ಕೋರವಿಸೇ ||
ಚಿಳಿಚಿಳಿಲು ಚಿಟಿಚಿಟಿಲು ಘುಳುಘುಳು |
ಘುಳು ನಿನಾದವು ಕೇಳುತಿರಲಾ |
ಜ್ವಲಿಪ ಕಂಭವನೊದೆದು ನರಹರಿಯಾಗಿ ಹೊರವಂಟಾ || ೧ ||
ವಾರ್ಧಿಕ
ಎಲ ಎಲ ಇದೇನೇನು ಮೃಗವಲ್ಲ ನರನಲ್ಲ |
ಹೊಲಬುಗೆಟ್ಟಿಹ ಪ್ರಾಣಿಯೆನುತ ಖಳನೀಕ್ಷಿಸುತ |
ಹಲುಮೊರವುತಿರುತಿರಲು ವೀರ ನರ ಹರಿಯಾಗ ಕಂಡು ಬೆರಗಪ್ಪಂದದೀ ||
ಬೆಳೆವುತಿರುತಿರೆ ಖಳನ ಕಣುಗಳುರೆ ಕೋರವಿಸೆ |
ಚಳೆಯದಲಿ ಬಳಿಕಸುರ ಹುಲುಮೃಗವೆ ಬಾರಿತ್ತ |
ಕೊಲುವೆನೀಕ್ಷಣವೆಂದು ಗದೆಯೊಳಪ್ಪಳಿಸಿದಂ ನರಸಿಂಹನಂ ಬೆದರದೇ || ೧ ||
ರಾಗ ಮಾರವಿ ಏಕತಾಳ
ಸೃಷ್ಟಿಪ ಕೇಳೀ ಪರಿಯಲಿ ದನುಜ ಘ | ರಟ್ಟಿನ ಗದೆಯಿಂದಾ ||
ದುಷ್ಟನಪ್ಪಳಿಸಲು ಕಂಡುರೆ ಕೋಪದಿ | ತಟ್ಟನೆ ಗೋವಿಂದಾ || ೧||
ಒದೆದರೆ ಕೈಯ್ಯನು ಬಿದ್ದುದು ಧರಣಿಗೆ | ಗದೆಯು ಸಿಡಿದು ಬಳಿಕಾ ||
ಬದಲೊಂದೆತ್ನದಿ ಪಿಡಿದನು ದೈತ್ಯನ | ಬೆದರದೆ ಸ್ಮರಜನಕಾ || ೨ ||
ದನುಜನ ಕೊಲುವರೆ ಸಮಯವಿದೆನುತಾ | ದನುಜಗೆ ಧುರಗೈವಾ ||
ಮನವನು ನಿಧನವ ಗೊಳಿಸಿದ ಚಿನುಮಯ | ನೆನಲೇನದರನುವಾ || ೩ ||
ಮತ್ತಾದಿತ್ಯನಸ್ತಮಯದೊಳಫಹರ | ದೈತ್ಯನನೆಳದೊದೂ ||
ಬಿತ್ತರದರಮನೆಯೆದುರಿನ ಬಾಗಿಲ | ಹೊಸ್ತಿಲೊಳ್ಕುಳ್ಳೀರ್ದೂ || ೪ ||
ಕರನಖದಿಂದಮರಾರಿಯ ಜಠರವ | ಭರದಿಂ ಸೀಳ್ದೊಡನೇ ||
ಕರುಳಮಾಲೆಯ ತಾ ಧರಿಸಿದ ಕೊರಳಲಿ | ನರಹರಿ ಕೇಳ್ ನೃಪನೇ || ೫ ||
ವಾರ್ಧಿಕ
ನರಹರಿಯು ತಾನಿಂತು ದಾನವನ ಸಂಹರಿಸಿ |
ಕರುಳಮಾಲೆಯ ಕೊರಳೊಳಾಂತರೆಯು ಕೋಪಮಂ |
ತೊರೆಯದತ್ಯುಗ್ರದಿಂದಿರಲದರ ತಾಪದಿಂದೀರೇಳು ಲೋಕಮೈದೇ |
ಪರಿಭವಕೆ ಸಲಲಖಿಳ ಸುರವರರು ಬೆಂಡಾಗಿ |
ತರಹರಿಸದತಿ ನೊಂದು ನೆರದೊಡನೆ ವೊಂದಾಗಿ |
ಯೆರಗಿ ಸಾಷ್ಟಾಂಗದಿಂದಿರೆದೆದ್ದು ಕೈಮುಗಿದು ಸ್ತುತಿಗೈದರಾ ಹರಿಯನೂ || ೧ ||
ರಾಗ ಶಹನ ಏಕತಾಳ
ತ್ರಾಹಿ ಸಾರಸದಳಲೋಚನಾ | ತ್ರಾಹಿ | ತ್ರಾಹಿ ನಿರಘ ತಾರ್ಕ್ಷ್ಯ ವಾಹನಾ |
ತ್ರಾಹಿ ನಿಗಮನುತ | ತ್ರಾಹಿ ಬೊಮ್ಮನಪಿತ | ತ್ರಾಹಿ ನಿತ್ಯಾನಂದ | ತ್ರಾಹಿ ಗೋವಿಂದಾ || ತ್ರಾಹಿ || ೧ ||
ಜಾತರಹಿತ ಪುರುಷೋತ್ತುಮಾ | ಜಗ | ನ್ನಾಥ ಮುಕುಂದ ನಿತ್ಯಾತುಮಾ ||
ಭೂತಭಾವನತೀತ ನಿರಂಜನ | ಖ್ಯಾತ ದುರಿತಹರ | ಶ್ರೀತರುಣೀವರ || ತ್ರಾಹಿ || ೨ ||
ಕರುಣಸಾಗರ ಮಧುಸೂದನಾ | ಕರಿ | ವರದ ಶಾಶ್ವತ ಶತ್ರು ಭಂಜನಾ ||
ಮರೆಹೊಕ್ಕವರ ಕಾವ | ಶರಣರಿಷ್ಟವನೀವ | ಉರಗಶಯನ ಜಗ | ದ್ಭರಿತ ಜನಾರ್ದನ || ತ್ರಾಹಿ || ೩ ||
ರಾಗ ಕೇತಾರಗೌಳ ಅಷ್ಟತಾಳ
ಧರಣೀಶ ಲಾಲಿಸೀಪರಿಯಿಂದ ದಿವಿಜರು | ಯೆರಗಿ ಸಂಸ್ತುತಿಸುತಿರೇ ||
ಹರಿಯ ಕೋಪದ ಶಿಖಿ ಬಿಡದೆ ಬೆನ್ನಟ್ಟಲು | ಸುರವರರೆಲ್ಲರರೇ || ೧ ||
ಯಾರಿಗೆ ಪೇಳ್ವುದೀ ದೂರನೆನುತ ಸುರ | ವಾರ ಬೊಬ್ಬಿಡುತಲಿರೇ ||
ಸಾರಸಾನನನೆಂದ ಪಾಲಾಬ್ಧಿಜಾತೆ ಶ್ರೀ | ವೀರನಾರಾಯಣಿಗೇ || ೨ ||
ಒರೆದರಾಕೆಯು ತನ್ನ ಹರಣದೊಲ್ಲಭಗತಿ | ಹರುಷದೊಳರಿಕೆ ಗೈದೂ ||
ಮೆರೆವ ಕೋಪವ ಪರಿಹರಿಸದಿರಳು ಧೈರ್ಯ | ಧರಿಸಿರೆಲ್ಲರು ನೀವಿಂದೂ || ೩ ||
ಎಂದುದ ಕೇಳ್ದಾಗ ಬೊಮ್ಮನ ಕೂಡುತಾ | ನಂದದಿ ಸುರವರರೂ ||
ಬಂದರು ಕ್ಷೀರಾಬ್ಧಿಗೊಂದಾಗಿ ಬಳಿಕಲ್ಲಿ | ಇಂದಿರೆಯನು ಕಂಡರೂ || ೪ ||
ರಾಗ ಕಾಂಬೋಧಿ ಝಂಪೆತಾಳ
ಕಂಡಾಕ್ಷಣದಿ ರಮೆಯ | ರುಂಡಮಾಲಾದಿ ಸುರ | ತಂಡ ಘೇಯೆನುತ ಕೊಂಡಾಡೀ ||
ದಿಂಡುಗೆಡದಿರೆ ಬಾಲ | ಚಂಡಕರಕಿರಣೆ ಭಯ | ಗೊಂಡು ಕೇಳಿದಳು ಮುದಗೂಡೀ || ೧ ||
ಏನಿದೇನಾಶ್ಚರ್ಯ | ಸ್ಥಾಣಿ ಮೊದಲಾದ ವೈ | ಮಾನಿಕರು ಕೂಗಲಿಂದಿನಿತೂ ||
ಹಾನಿ ಯಾರಿಂದಾಯಿ | ತೆಂಬುದನು ನುಡಿಯಿರದ | ಸಾನುರಾಗದಲಿ ತಿಳಿದನಿತೂ || ೨ ||
ಇಂದಿರೆಯ ನುಡಿಯನರ | ವಿಂದ ಸಂಭವ ಕೇಳ್ದು | ಚಂದದಿಂ ಕೈಯ್ಯ ಜೋಡಿಸು ತಾ ||
ಕುಂದಕುಡ್ಮಲರದನೆ | ಲಾಲಿಪುದು ನಮಗೀಗ | ಬಂದ ಪರಿಭವ ವೆಂದನಳುತಾ || ೩ ||
ರಾಗ ನೀಲಾಂಬರಿಗೌಳ ಏಕತಾಳ
ಎನ ಪೇಳಲಯ್ಯೊ ನಾವು | ಮುದ್ದು ತಾಯೇ | ನಿಮ್ಮ | ಪ್ರಾಣನಾಥ ಗೈದ
ಪರಿಯ ಮುದ್ದು ತಾಯೇ ||
ಶೋಣಿತಾಪುರಾಧಿಪತಿಯು | ಮುದ್ದು ತಾಯೇ | ತನ್ನ | ಸೂನುವನ್ನು
ಭಂಗಪಡಿಸೆ | ಮುದ್ದು ತಾಯೇ || ೧ ||
ಹರಿಯು ಕಂಭದಿಂದ ಜನಿಸಿ | ಮುದ್ದು ತಾಯೇ | ಮತ್ತಾ | ದುರುಳನನ್ನು
ಶೀಳಿ ನಖದಿ | ಮುದ್ದು ತಾಯೇ ||
ಕರುಳಮಾಲೆಯನ್ನು ತಾನು | ಮುದ್ದು ತಾಯೆ | ತನ್ನ | ಕೊರಳೊಳಿರದೆ
ಧರಿಸಿ ಮತ್ತೆ ಮುದ್ದು ತಾಯೇ || ೨ ||
ಬಿಡದೆ ಕೋಪವನ್ನು ಹರಿಯು | ಮುದ್ದು ತಾಯೇ | ವ್ಯರ್ಥ | ಸುಡುವನೀಗ
ಮೂರು ಜಗವ | ಮುದ್ದು ತಾಯೇ ||
ತಡೆಯದದರಿಂ ಬಂದೆ ನಾವು | ಮುದ್ದು ತಾಯೇ | ವರನ | ನೊಡಬಡಿಸಿ
ಬಿಡಿಸು ಖತಿಯ | ಮುದ್ದು ತಾಯೇ || ೩ ||
ಭಾಮಿನಿ
ಮಾತೆ ನೀ ಹೊರತಾ ಖಳಾರಿಯ |
ನೂತನದ ಕೋಪವನು ತಣಿಸುವ |
ನಾಥರನು ನಾ ಕಾಣೆ ನೀ ದಯಗೈವುತದರಿಂದಾ ||
ಪ್ರೀತನೆಡೆಗೈದೀಗ ಘನ ಸಂ |
ಪ್ರೀತಿಯಿಂದೀ ಜಗವ ಸಲಹೆನ |
ಲಾತತೂಕ್ಷಣ ಬಂದು ಕಂಡಳು ವೀರ ನರಹರಿಯಾ || ೧ ||
ರಾಗ ಸಾಂಗತ್ಯ ರೂಪಕತಾಳ
ಧರಣೀಶ ಕೇಳಿಂತು ಸರಸಿಜಮಂದಿರೆ | ನರಹರಿಯನು ಕಾಣುತೊಡನೇ ||
ಹರಣದೊಲ್ಲಭನೀತನಲ್ಲೆಂದು ಪೋದಳು | ಭರದಿಂದಲೆದ್ದಿಂದುವದನೇ || ೧ ||
ಜಡಜಸದ್ಮೆಯು ಪೋಗಲೊಡನೆ ವಿಬುಧರೆಲ್ಲ | ಕಡು ಭಯಗೊಂಡು ಬಾಲನೊಳೂ ||
ನುಡಿದರು ನೀನೆ ನಿನ್ನೊಡೆಯಗುಸುರಿ ಜಗ | ದಡರ ನಿಧನಗೊಳಿಸೆನಲೂ || ೨ ||
ಎಂದುದ ಲಾಲಿಸಿ ಕುವರನು ತನಗಗಿ | ನೊಂದುದು ಜಗ ಮೂರೆಂದೆನುತಾ ||
ಬಂದು ಹತ್ತಿರೆ ನಿಲ್ಲುತಾ ನರಸಿಂಹನಿ | ಗೊಂದಿಸಿ ಸ್ತುತಿಗೈದ ಭಕತಾ || ೩ ||
ವಾರ್ಧಿಕ
ಜಯ ಜಯ ಜಗನ್ನಾಥ ವಿಖ್ಯಾತ ವಿಧಿತಾತ |
ಜಯ ಜಯ ಸರೋಜಾಕ್ಷ ಸುರಪಕ್ಷ ಖಳಶೀಕ್ಷ |
ಜಯ ಜಯಾಹವಧೀರ ಸಂಸಾರ ವರ ಪಾರವಾರ ಕಂಭಜ ಗಿರಿಧರಾ ||
ಜಯ ಜಯತು ವನಮಾಲ ಸುರಜಾಲ ಪರಿಪಾಲ |
ಜಯ ಜಯತು ಸುಚರಿತ್ರ ನುತಿಪಾತ್ರ ಸುಪವಿತ್ರ |
ಜಯ ಜಯತು ಶ್ರೀಕಾಂತ ನಿಶ್ಚಿಂತ ವೇದಾಂತವೇದ್ಯ ನರಹರಿ ಪಾಹಿಮಾಂ || ೧ ||
ಭಾಮಿನಿ
ಸನ್ನುತನೆ ಕೇಳೆನ್ನ ಬಹುಪರಿ |
ಬನ್ನಬಡಿಸಿದ ಯಾತುಧಾನವ |
ನಮ್ಮ ನೀ ಸಂಹರಿಸಿ ಕಾಯಿದೆ ನನ್ನ ಕರುಣದಲೀ ||
ನಿನ್ನ ಕೋಪದಿ ಜಗದಿ ಮೂರುರೆ |
ಕಣ್ಣ ಬಿಡುವುದು ಶ್ರೀಲಲಾಮನೆ |
ಯೆನ್ನ ಮೇಲತಿ ದಯವ ಬೀರುತ ಸಲಹು ವಿಶ್ವವನೂ || ೧ ||
ರಾಗ ಕಾಂಬೋಧಿ ಝಂಪೆತಾಳ
ಕಂದನೀ ಪರಿ ಬಹಳ ನೊಂದು ಬಿನ್ನೈಸುವದ | ನಿಂದಿರಾಧವನು ತಾ ಗ್ರಹಿಸೀ ||
ಅಂದೆಗಟ್ಟಿಹ ಪ್ರಾಣಿಗಳಿಗಭಯ ಪಾಲಿಸು | ತ್ತಂದ ಬಾಲನನು ತಕ್ಕೈಸೀ || ೧ ||
ಹುಚ್ಚು ದನುಜನು ನಿನ್ನ ದಣಿಸಿದನು ನೀನೆನ್ನ | ನಿಚ್ಚಟದ ಭಕುತಿಯಿಂದೊಲಿದೂ ||
ಮೆಚ್ಚಿಸಿದೆ ಬಾಲ ಮನದಿಚ್ಛೆಯೇನುಂಟದರ | ನುಚ್ಚರಿಸು ಕೊಡುವೆ ನಿನಗಿಂದೂ || ೨ ||
ನಿನ್ನ ಪೋಲುವ ಭಕತರಿನ್ನು ಯಾರೆನಗಿಲ್ಲ | ರನ್ನ ಕೇಳೆನ್ನ ಕೊರಳಾಣೇ ||
ಸನ್ನುತನೆ ಪೇಳೆನಲು ಕೇಳುತ್ತಲಾಗಲಾ | ಚನ್ನಿಗನೊಳಿಂತೆಂದನೊಡನೇ || ೩ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಶ್ರೀಮನೋಹರ ಲಾಲಿಸೆನ್ನಯ | ಕಾಮಿತವನಿನ್ನೇನ ಪೇಳಲಿ |
ಕಾಮಿಸಿದೆ ವೈಕುಂಠಪದವಿಯ | ಪ್ರೇಮದಿಂದಾ || ೧ ||
ಇತ್ತು ತನ್ನನು ಸಲಹಬೇಕೆನು | ತರ್ತಿಯಲಿ ಪೊಡವಂಟ ಬಾಲಗೆ |
ಮುತ್ತನೀವುತ್ತೆಂದ ಹರುಷದಿ | ಚಿತ್ತಜಯ್ಯಾ || ೨ ||
ಕೊಟ್ಟೆನೈ ಸಲೆ ಮಗನೆ ನೀ ಮನ | ಸಿಟ್ಟ ಪದವಿಯ ನಂಬು ನಿಶ್ಚಯ |
ಸೃಷ್ಟಿಯೊಳಗೀ ಶೋಣಿತಾಪುರ | ಪಟ್ಟವಾಳೀ || ೩ ||
ಬಳಿಕ ನೀ ಬಾರೆನಲು ಕೇಳುತ | ಖಳಕುಲಾರಿಯೊಳೆಂದ ಬಾಲಕ |
ನಿಳೆಯ ಸಕಲೈಶ್ವರ್ಯ ಭೋಗಕೆ | ವಲಿಯೆನೆಂದೂ || ೪ ||
ಆಗದಾಗದು ಮಗನೆ ಧರಣಿಯೊ | ಳಾಗುಭೋಗದ ದುಃಖ ಸುಖಗಳ |
ಭೋಗಿಸದೆ ಕೊಡೆನೆನ್ನ ಪದವಿಯ | ನೀಗ ನಿನಗೇ || ೫ ||
ಮಾತ ಬೇರೆನ್ನದಿರು ಜನಕನ | ಪ್ರೇತಕಾರ್ಯವ ನಡೆಸಿ ಬಾ ನಡೆ |
ಭೀತಿಗೊಳ್ಳದಿರೆಂದ ಮಾಯಾ | ತೀತನಪ್ಪೀ || ೬ ||
ಎಂದಡಸ್ತು ಹಸಾದವೆನುತಾ | ತಂದೆಯೊಡಲನು ದಹಿಸಿ ನೆರೆ ವಿಧಿ |
ಯಿಂದಲೂರ್ಧ್ವಕ್ರಿಯೆಯ ವಿರಚಿಸಿ | ಚಂದದಿಂದಾ || ೭ ||
ಬಂದು ಚರಣದೊಳೆರಗಲೆತ್ತಿ ಮು | ಕುಂದನಪ್ಪಿ ದನಾತ್ಮಶರಣನ |
ನೆಂದಪೆನು ನಾನೇನ ಸುರಮುನಿ | ವೃಂದನಲಿಯೇ || ೮ ||
ಭಾಮಿನಿ
ತರಿಸಿ ಮಂಗಳ ವಸ್ತುಗಳ ಬಳಿ |
ಕಿರದೆ ಬಹುವಿಧ ವಾದ್ಯರವವಾ |
ವರಿಸೆ ದೆಸೆಗಳಿನಂಬರದೊಳಮರಾವಳಿಗಳುಲಿಯೇ ||
ಸರಸಿಜೋದ್ಭವ ಮುಖ್ಯ ಸುರಮುನಿ |
ವರರು ಸಹಿತಸುರಾರಿ ಪಟ್ಟವ |
ವಿರಚಿಸಿದ ನಾತ್ಮೈಕಶರಣಂಗೊಲಿದು ಕರುಣದಲೀ || ೧ ||
ವಾರ್ಧಿಕ
ಧರಣಿಪಿತ ಕಿವಿಗೊಟ್ಟು ಕೇಳಿಂತು ಶ್ರೀವರಂ |
ವರ ಶೋಣಿತಾ ಪುರದ ಪಟ್ಟಮಂ ಪ್ರಹ್ಲಾದ |
ಗಿರದೆ ವಿರಚಿಸಿ ನೀತಿ ಧರ್ಮಂಗಳನ್ನೊರೆದು ಸುರವರರು ಜಯವೆನುತಿರೇ ||
ತೆರಳಿದಂ ನಿಜಗತಿಗೆ ಬಳಿಕಿತ್ತಲಾ ಶರಣ |
ನಿರತ ಹರಿಚರಣಮಂ ಧ್ಯಾನಿಸುತ ಸೇವಿಸುತ |
ಧರೆಯನಾಳುತ್ತೀರ್ದನತಿ ವಿಭವದಿಂದದರನೇವೇಳ್ವೆನೆಂದ ಮುನಿಪಾ || ೧ ||
ರಾಗ ಮಧುಮಾಧವಿ ತ್ರಿವುಡೆತಾಳ
ಪೃಥ್ವಿಯೊಳು ವರ ಮಯ್ಯವಟಿಯೊಳ | ಗರ್ತಿಯಲಿ ನೆಲಸೀರ್ದ ವಿಶ್ವಾ |
ಮಿತ್ರ ಗೋತ್ರಜ ತಿಮ್ಮಯ್ಯನ | ಪುತ್ರ ವೆಂಕಟರಮಣನೂ || ಹರಿಯು ದಯದೀ || ೧ ||
ಪೇಳಿಸಿದ ತೆರದಿಂದ ರಚಿಸಿದ | ಶ್ರೀಲಲಾಮನ ಚರಿತವಿದರನು |
ಹಾಳು ಕವಿತೆಯಿದೆಂದು ಬೈಯದೆ | ಕೇಳಿದವರತಿ ಕರುಣದೀ || ಧರಣಿಯೊಳಗೇ || ೨ ||
ಮೆರಸಲವರನು ನಿರತ ವೆಂಕಟ | ಗಿರಿಯೊಡೆಯ ಶ್ರೀವೆಂಕಟೇಶನು |
ಪೊರೆಯಲೆನುತಲಿ ಬೇಡಿಕೊಳ್ಳುವೆ | ಹರಿಯನನುದಿನ ದೈನ್ಯದೀ || ಹರುಷದಿಂದಾ || ೩ ||
ಮಂಗಲ ಪದ
ರಾಗ ಅಹೇರಿ ಏಕತಾಳ
ಮಂಗಲಂ | ಜಯ | ಮಂಗಲಂ || ಪಲ್ಲ ||
ಕ್ರೀರಾಂಭೋನಿಧಿ ವಾಸನಿಗೇ | ಮಾರಜನಕನಿಗೆ ನಿರುಪಮಗೇ ||
ಸಾರಸನಾಭಗೆ | ವಾರಿಜನಯನಗೆ | ಶ್ರೀರಮೇಶನಿಗೆ ಶಾಶ್ವತಗೇ || ಮಂಗಲಂ || ೧ ||
ನಿತ್ಯಾನಂದಗೆ ನಿರವಯವಗೇ | ಮೃತ್ಯುವಿದೂರಗೆ ನರಹರಿಗೇ ||
ಭೃತ್ಯವತ್ಸಲನಿಗೆ | ಶತ್ರುಸಂಹಾರಗೆ | ನಿತ್ಯಾತುಮನಿಗೆ ಶ್ರೀಹರಿಗೇ || ಮಂಗಲಂ || ೨ ||
ಪಂಕಜಾನನಗೆ ಸುರನುತಗೇ | ಕಿಂಕರಜನನುತಿಪಾತ್ರನಿಗೇ ||
ಶಂಕರನಾಪ್ತಗೆ ಜಗದೊದ್ಧಾರಗೆ | ವೆಂಕಟರಮಣಗೆ ಭವಹರಗೇ || ಮಂಗಲಂ ||
ಮಂಗಲಂ | ಜಯ | ಮಂಗಲಂ || ೩ ||
ಯಕ್ಷಗಾನ ಪ್ರಹ್ಲಾದ ಚರಿತ್ರೆ ಸಂಪೂರ್ಣವು
|| ಶ್ರೀಕೃಷ್ನಾರ್ಪಣಮಸ್ತು ||
Leave A Comment