ರಾಗ ಕಾಂಬೋಧಿ  ಏಕತಾಳ

ನಿಲ್ಲದೆಲ್ಲ ಲೋಕ ಚರಿಪ | ಚಲ್ವ ಮೌನಿವರನೇ ||
ಇಲ್ಲೀಗೀಗ ಬಂದ ಪರಿಯ | ಸೊಲ್ಲಿಸೀಗೆನ್ನೊಡನೇ      || ೧ ||

ವಲ್ಲಭನೈತರಲು ನಿನ್ನ | ಕೊಲ್ಲ ದುಳಿಯನವನೂ ||
ಇಲ್ಲವಿದಕೆ ಸಂಶಯವು | ನಿಲ್ಲದೊರೆ ಬಂದುದನೂ      || ೨ ||

ತಡವಮಾಡದೀಗ ಬೇಗ | ನುಡಿವುದೇನ್ನೊಳೆನುತಾ ||
ಜಡಜನೇತ್ರೆ ಪೇಳೆ ಮೌನಿ | ಯೊಡನೆ ಪೇಳ್ದ ನಗುತಾ || ೩ ||

ಹರಿಯು ಪೇಳ್ದ ಮಾತ ನಿನ್ನೊ | ಳೊರೆಯಲೆನುತ ನಾನೂ ||
ಭರದಿ ಬಂದೆ ನಿನ್ನ ಬಳಿಗೆ | ಹರಿಣಾಕ್ಷಿ ಕೇಳದನೂ      || ೪ ||

ಅರುಹಿದೇ ನಾ ನಿನಗೆ ತನ್ನೊ | ಳುರಗಶಯನ ಪೇಳ್ದಾ ||
ಪರಿಯ ಮರೆಯ ಬೇಡೆನುತ್ತ | ಸುರಮುನೀಂದ್ರ ತೆರಳ್ದಾ        || ೫ ||

ರಾಗ ಸೌರಾಷ್ಟ್ರ  ತ್ರಿವುಡೆತಾಳ

ಧರಣಿಪತಿ ನೀ ಲಾಲಿಸಿತ್ತಲು | ಸುರಮುನಿಪ ನಾರದನು ತೆರಳಲು |
ದುರುಳ ದಾನವ ಬಂದು ಕೂಡಿದ | ತರುಣಿಯಳನೂ   || ೧ ||

ಹರಿಯ ನಾಮವ ಸ್ಮರಿಸುತೀರ್ದಳು | ವರನು ಬೆರೆಯುವ ಕಾಲಕಾವರ |
ಹರಿಣ ಲೋಚನೆ ಗರ್ಭವಾಂತಳು | ಸುರರು ನಲಿಯೇ || ೨ ||

ತುಂಬಿದುದು ನವಮಾಸ ಬಳಿಕಾ | ಕುಂಬುಕಂಠಿನಿ ಶುಭ ಮುಹುರ್ತದೊ |
ಳೆಂಬುದೇನಣುಗನನು ಪಡೆದಳು | ಸಂಭ್ರಮದೊಳೂ  || ೩ ||

ಜನಿಸಿದರ್ಭಕ ಹರಿಭಕತನೆಂ | ದೆನುವ ಪರಿಯರಿತಮರರಲರಿನ |
ಘನಮಳೆಯ ಸುರಿಸಿದರು ಧರಣಿಗೆ | ವಿನಯದಿಂದಾ  || ೪ ||

ಭಾಮಿನಿ

ಪುತ್ರ ಜನಿಸಿದನೀಗಲೆನಗೆಂ |
ದರ್ತಿಯಲಿ ಸುರಪಾದಿ ದಿವಿಜರ |
ಮೊತ್ತವತ್ತಿ ಘೋಷದಲಿ ಸುರಿಸಿದರರರೆ ಹೂಮಳೆಯಾ ||
ಚಿತ್ರವಲ್ಲಿದ್ದು ನೋಡಲವದಿರು |
ಭೃತ್ಯರದರಿಂದೆನಗೆ ಮಾನವ |
ನಿತ್ತರೆನುತೈತಂದು ಕಂಡನು ಜನಿಸಿದರ್ಭಕನಾ        || ೧ ||

ರಾಗ ಭೈರವಿ  ಝಂಪೆತಾಳ

ಧರಣಿಪಿತ ಕೇಳಿಂತು | ತರಳನನು ಕಂಡಸುರ |
ಧರಿಸಿದನು ಮನದೊಳಗೆ | ಪರಮ ಹರುಷವನೂ      || ೧ ||

ಪ್ರೀತಿಯಿಂದಾ ಮೇಲೆ | ಯಾತುಧಾನನು ತನ್ನ |
ಜಾತನಿಂಗೆಸಗಿದನು | ಜಾತಕರ್ಮವನೂ     || ೨ ||

ಅಂದ ಚಂದದೊಳೆನ್ನ | ಕಂದಗೆಣೆ ಯಾರದರಿ |
ನಿಂದಿವಗೆ ಪ್ರಹ್ಲಾದ | ನೆಂದು ಪೆಸರಿಡುವೇ    || ೩ ||

ಎನುತಂತು ಕರೆದವನ | ವಿನಯದಲಿ ಸಲಹುತ್ತ |
ಘನ ಹರುಷದಿಂದೀರ್ದ | ಲೆನುವೆನೇನದನೂ || ೪ ||

ಭಾಮಿನಿ

ಎಲೆ ಪರೀಕ್ಷಿತ ಕೇಳು ಬಳಿಕಾ |
ಖಳವರೇಣ್ಯನ ಗೃಹದಿ ಬಾಲನು |
ಬೆಳವುತತ್ತಿತ್ತೋಡುತಾಡುತ ನಗುತ ನರ್ತಿಸುತಾ ||
ಸಲೆ ಸುಖದೊಳಿರಲವಗೆ ಬಂದುದು |
ತಿಳುಹಲೇನೈದನೆಯ ವತ್ಸರ |
ತಿಳಿದಿದನು ದನುಜೇಂದ್ರ ಗುರುವನು ಕರೆಸುತಿಂತೆಂದಾ        || ೧ ||

ರಾಗ ಮಧುಮಾಧವಿ ಏಕತಾಳ

ಗುರುರಾಯ ಲಾಲಿಸು ನಾನೆಂಬ ಮಾತಾ | ಅರುಹುವೆ ನಿನ್ನೊಡನೆಲೆ ವಿಪ್ರನಾಥ ||
ಹರನೊಲುಮೆಯೊಳತಿ ಸುಗುಣನಾಗಿರುವಾತ | ತರಳ ಪ್ರಹ್ಲಾದಗೆ ಕಲಿಸು ಬರಹವಾ        || ೧ ||

ವರುಷವೆಷ್ಟೆಂಬೆಯ ಬಂತೀಗಲೈದೂ | ಕರೆದೊದು ಕಲಿಸಯ್ಯ ವಿದ್ಯವನೊಲಿದೂ ||
ಮರೆಯದಿರೀ ಮಾತನೆಂದು ಬಾಲಕನಾ | ಗುರುವರಗೊಪ್ಪಿಸೆ ಕರೆದೊದನವನಾ   || ೨ ||

ವಾರ್ಧಿಕ

ಆನೆಪುರದರಸ ಕೇಳ್ ಗುರುವರಂ ಬಾಲಕನ |
ತಾನೆ ಕಟಿಯೊಳಗಿಟ್ಟು ಕರೆತಂದು ಶುಭದಿನದೊ |
ಳಾನೆಮುಖ ಮಹಿಮಗಂ ಭಕ್ಷ ಭೋಜ್ಯವನಿತ್ತು ವಿನಯದಿ ಸತ್ಕರಿಸುತಾ ||
ದಾನವನ ಸೂನುವಂ ತೆಗೆದು ತೊಡೆಯೊಳಗಿಟ್ಟು |
ಶ್ರೀನಿವಾಸನ ಸಖನ ವರ ದಿವ್ಯ ನಾಮವಂ |
ಸಾನು ರಾಗದಿ ಬರೆಸಲೆಂದೆನುತ ದ್ವಿಜವರಂ ನಿಶ್ಚೈಸಿದಂ ಮನದೊಳೂ  || ೧ ||

ರಾಗ ಕೇದಾರಗೌಳ  ಅಷ್ಟತಾಳ

ಫಾಲಲೋಚನನ ಸುನಾಮವ ಗುರುವರ | ಮೇಲು ಪಂಕ್ಷಿಯ ಬರೆದೂ ||
ಬಾಲಕ ನೀನಿದ ಬರೆ ಯೆನೆ ಶ್ರೀಲಕ್ಷ್ಮಿ | ಲೋಲನೆನ್ನುತ ಬರೆದಾ || ೧ ||

ಓಂ ನಂಃ ಶಿವನೆಂದು ನೀ ಬರೆ ಎನಲಾಗ | ಓಂ ನಮೋ ನಾರಾಯಣಾ |
ಜಾನಕಿವಲ್ಲಭನೆನುತಲಿ ಬರೆದನಾ | ಚಿಣ್ಣ ನಾನೆಂಬುದೇನೂ     || ೨ ||

ಹಾಗಲ್ಲ ಮಗುವೆ ಕೇಳ್ ನಾಗಭೂಷಣನೆಂದು | ಬೇಗದಿ ಬರೆ ಯೆನ್ನಲೂ ||
ನಾಗಶಯನನೆಂದು ಬರೆದನು ಬಾಲಕ | ನಾಗತಿ ತೋಷದೊಳು         || ೩ ||

ಚಾರು ಬಾಲಕನೆ ಕೇಳ್ ಮರಾರಿ ಎನುತಲಿ | ಭೋರನೆ ಬರೆ ಎನ್ನಲೂ ||
ಮಾರಜನಕನೆಂದು ಬರೆದ ನಗುತ ಸುಕು | ಮಾರ ಸರಾಗದೊಳೂ       || ೪ ||

ತರವಲ್ಲ ಪಂಥವೆನ್ನೊಡನೆ ಬೇಗದಲಿ ಶಂಕರನೆಂದು ಬರೆ ಯೆಂದರೇ ||
ಸರಸಿರುಹಾಕ್ಷ ಮಾಧವನೆಂದು ಬರೆದನಾ ತರಳ ನಗುತಲರರೇ          || ೫ ||

ರಾಗ ಸೌರಾಷ್ಟ್ರ  ತ್ರಿವುಡೆತಾಳ

ನೋಡಿದನು ಪ್ರಹ್ಲಾದ ಬರೆವ ಸ | ಗಾಡಿಕೆಯ ಗುರುವರನು ಮನದಲಿ
ಮಾಡಿದನು ನಿಶ್ಚಯವ ಕುಲಕಿವ | ಕೇಡಿ ಯೆನುತಾ    || ೧ ||

ತುಂಬಲಿಲ್ಲೀಗೈದು ವತ್ಸರ | ವೆಂಬುದೇನದರೊಳಗೆ ಶಿವಶಿವ |
ಎಂಬುದನು ಬಿಟ್ಟರರೆ ಹರಿಹರಿ | ಎಂಬನಲ್ಲಾ || ೨ ||

ತರಳ ಕೇಳ್ ನಾ ಪೇಳಿದಂದದಿ | ಬರೆಯದಿರಲೀಗೊಂಟಿ ಕಾಲಲಿ |
ಭರದಿ ನಿಲಿಸುವೆ ಹರಹರೆನ್ನು ತ | ಬರೆಯೊ ಎನಲೂ   || ೩ ||

ಮತ್ತು ಮತ್ತಾ ಹರಿಯ ನಾಮವ | ನರ್ತಿಯಲಿ ಬರೆವುತ್ತ ಲೋದುತ |
ಸ್ವಸ್ಥದಿಂದಿರೆ ಕಾಣುತಿದರನು | ಪೃಥ್ವಿಯಮರಾ         || ೪ ||

ಎತ್ತಿರೋ ಕೋದಂಡಕೀತನ | ನಿತ್ತ ತನ್ನಿರೊ ಕಸೆಯ ಕೋಲನು |
ಒತ್ತಿ ಕುಳಿಸಿ ಪರೆಂಗಿ ಮಣೆಯೊಳ್ | ನುತ್ತ ನುಡಿದಾ    || ೫ ||

ತರಳನಿನ್ನಾದರೆಯು ಬರೆ ಹರ | ಹರ ಹರೆಂದೆನೆ ಬರೆದ ಹರಿಹರಿ |
ಹರಿ ಯೆನುತ ಬಾಲಕನು ತಾನತಿ | ಹರುಷದಿಂದಾ    || ೬ ||

ಭಾಮಿನಿ

ಧರಣಿಪತಿ ಕೇಳಣುಗನಾಟವ |
ಗುರುವರನು ಕಾಣುತ್ತ ಬಾಲನ |
ಕರೆದು ನಿಜಮನೆಗೈದಿ ಭೋಜನ ಗೈದು ವಿನಯದಲೀ ||
ಬರಲುಬೇಕತಿ ಬೇಗದಿಂದೆನೆ |
ಪೊರಟು ಮಠದಿಂದೊಯ್ಯನೊಯ್ಯನೆ |
ಬರುವ ಕಂದನ ಕಂಡು ಕರೆದಿಂತೆಂದ ಪಿತನೊಲಿದೂ  || ೧ ||

ರಾಗ ಕೇದಾರಗೌಳ  ಝಂಪೆತಾಳ

ಕಂದ ಬಾಬಾರಿತ್ತಲೂ | ನೀ ಬೇಗ | ಬಂದುದೇನುಸುರೀಗಲೂ |
ಎಂದರೇನು ಗುರುಗಳೂ | ನಸುನಗುತ | ನಿಂದಿರುವದೇಕೆ ಪೇಳು        || ೧ ||

ಏನ ಕಲಿಸಿದರು ನಿನಗೇ | ಗುರುವರ್ಯ | ನೀನೇನ ಕಲಿತೆ ಕಡೆಗೇ |
ಸಾನುರಾಗದಿ ಕಲಿತುದಾ | ಪೇಳೆನಲು | ತಾನೊಡನೆ ನಗುತ ನುಡಿದಾ  || ೨ ||

ಹರನೆಂದು ಬರೆ ಯೆನುತಲೀ | ಮೇಲ್ಪಂಕ್ತಿ | ಗುರು ಬರೆಯೆ ನಾ ಮುದದಲೀ |
ಹರಿಯೆಂದು ಬರೆದೆನಯ್ಯಾ | ಎಂದೆನುತ | ಹರುಷದಲಿ ಮುಗಿದ ಕೈಯ್ಯಾ          || ೩ ||

ಹರಿಯೆಂದು ಬರೆದುದಹುದೇ | ಎನ್ನೊಡನೆ ಒರೆಯದಿರು ಹುಸಿಯ ಬರಿದೇ |
ಸರುವಥಾಡೆನು ಸುಳ್ಳನೂ | ಹರಿಯೆಂದೆ | ಬರೆದೆನೆಂದನು ಬಾಲನೂ    || ೪ ||

ಭಾಮಿನಿ

ಹರಹರೀ ಬಾಲಕೆಗೆ ಹರಿ ಯೆಂ |
ದೊರೆಯಲೆಂದವರಾರು ಪರಿಕಿಸೆ |
ಸುರರ ಕೃತಕವಿದೆನುತ ಕಾಣುವುದಾದರಾತ್ಮಜಗೇ ||

ಆರುಹಬೇಕದರಿಂದ ನೀತಿಯ |
ತರಳನೆನುತೊಡನಾಗ ದಾನವ |
ರೆರೆಯ ಕಂದನನಪ್ಪಿ ಮುದ್ದಿ ಸುತೆಂದ ವಿನಯದಲೀ   || ೧ ||

ರಾಗ ಶಂಕರಾಭರಣ  ಏಕತಾಳ

ಚಿಣ್ಣ ಲಾಲಿಸಿಂತ ಮಾತ | ನೆನ್ನೊಳಾಡಬೇಡ ಹರಿಯು |
ನಿನ್ನ ಕಿರಿಯ ಪಿತನ ಕೊಂಡ | ದುರ್ನೀತಿಯುತನೂ    || ೧ ||

ದುಷ್ಟನನ್ನು ಕೊಂದುದೇನು | ಕೆಟ್ಟದಾತ ಜಗಕೆ ಶ್ರೀ ಮ |
ದ್ವಿಷ್ಟು ಗೈಯ್ಯನನ್ಯಾಯವ | ನೆಷ್ಟಕೂ ಕೇಳೂ || ೨ ||

ತರಳ ಕೇಳು ಹರಿಯು ದೈತ್ಯ | ರರಿಯೆನುತ್ತ ಪೊಗಳುತಿಹುದು |
ನಿರತ ವೇದ ತತಿಗಳಿದರ | ನರಿತುದಿಲ್ಲವೇ   || ೩ ||

ದುರುಳರಿಂಗೆ ಹರಿಯು ಶತ್ರು | ಖರೆಯು ದುಷ್ಟರಾಗಿ ದಿತಿಜ |
ರಿರುವರದರಿಂ ವೇದವಿಂತು | ಒರೆದರೇನಾತೂ        || ೪ ||

ಎಂದಪೇ ಮಾತಿಗೆ ಮಾತ | ಕಂದ ನಿನಗಿದೊಳ್ಳಿತೇ ಗೋ |
ಎಂದನನ್ನು ಸ್ಮರಿಸೆ ನಿನ್ನ | ಕೊಂದು ಬಿಡುವೆನೂ       || ೫ ||

ಕೊಂದರು ಸಾವೆನೆ ನಾನು | ಸಿಂಧುಶಯನನೊಲುಮೆಯಿಂದ |
ಬಂದುದೆಲ್ಲ ಬರಲಿ ಬಿಡೆ ಮು | ಕುಂದ ಸ್ಮರಣೆಯಾ     || ೬ ||

ಭಾಮಿನಿ

ಹಿಂದೆ ಹರಿಯನು ನೆನೆಯದುದರಿಂ |
ಬೆಂದು ಬೆಂದತಿ ಕರಗಿ ಭವದಲಿ |
ಬಂದು ಬಂದತಿ ಬಳಲಿರುವೆನಿನ್ನಾದರಚ್ಚುತನಾ |
ಚಂದದಲಿ ಭಜಿಸುತ್ತ ಕಡೆಗಾ |
ಮಂದರಾಧರನಮಲ ಪದವಿಯ |
ಹೊಂದಬೇಕೆಂಬಾಸೆ ಕೇಳದರಿಂದ ಬಿಡೆನವನಾ        || ೧ ||

ರಾಗ ಭೈರವಿ  ಅಷ್ಟತಾಳ

ತನಯನೆಂದುದ ಕೇಳುತಾ | ಕೋಪದೊಳೆದ್ದು | ದನುಜೇಂದ್ರ ಬೊಬ್ಬಿಡುತಾ |
ತನುಜಗೆ ವಿದ್ಯವ ಕಲಿಸಿದ ಕೋಣನ | ಘನ ಬೇಗ ಕರಿರೆನುತಾ  || ೧ ||

ಚರರ ಮೊಗವ ನೋಡಲೂ | ಚಾರಕರದ | ನರಿತತಿ ಶೀಘ್ರದೊಳೂ |
ಗುರುವನು ಕರೆತರಲವನೊಳಿಂತೆಂದನು | ದುರುಳನು ಕೋಪದೊಳೂ   || ೨ ||

ಹರಿಯೆನ್ನು ತೊರೆವನಲ್ಲಾ | ಎನ್ನಯ ಮುದ್ದು | ತರಳನದೇನು ಕಳ್ಳಾ |
ವರೆ ಬೇಗ ಹರನೆಂದು ಬರೆವರೆ ಕಲಿಸದೀ | ಪರಿ ಮೋಸ ಕೊಟ್ಟೆಯಲ್ಲಾ   || ೩ ||

ಬುದ್ಧಿಹೀನನೆ ಕಂದಗೇ | ನೀನೇ ಕೆಟ್ಟ | ವಿದ್ಯಮನೊರೆದ ಮೇಗೇ |
ಬದ್ಧವಾಗಿಯೆ ನಿನ್ನ ಕೊಲುವೆನೆಂದೆನೆ ಬಾಲ | ನೆದ್ದುಸುರಿದ ಪಿತಗೇ       || ೪ ||

ಭಾಮಿನಿ

ಹರುಷದಿಂದವಧರಿಸು ಪಿತ ನೀ |
ಬರಿದೆ ಗುರುವನು ಕೊಲ್ಲಬೇಡೆನ |
ಗೊರೆದುದಿಲ್ಲವ ಸರುವಥಾ ಹರಿಯೆಂದು ಬರೆಯುವರೇ ||
ದೊರಕಿತೆನಗೀ ಬುದ್ಧಿ ಪೂರ್ವದಿ |
ವಿರಚಿಸಿದ ಪುಣ್ಯಗಳ ಫಲದಿಂ |
ದರುಹಲರಿದೆನಗಧಕವೆನೆ ಖಳನೆಂದ ಕೋಪದಲೀ     || ೧ ||

ರಾಗ ಕಾಂಬೋಧಿ  ಝಂಪೆತಾಳ

ತರಳ ಗುಣಯುತನೆಂದು | ಹರುಷದಿಂದಿರಲೀಗ | ವರೆದ ಮಾತನು ಕೇಳನಿವನಾ |
ಶಿರವ ಕಡಿದವನಿಯಲಿ | ಹೊರಳಿಸುವೆನೆಂದೆನುತ | ಹರಿದು ಮುಂದೈತರಿಕವನಾ || ೧ ||

ತಡೆದೆಂದ ವಿಪ್ರ ಕೇ | ಳೊಡೆಯ ಕೋಡಗದ ತಲೆ | ಕಡಿವುದೇನ್ಘನವು ವೀರರಿಗೇ ||
ಹುಡುಗನನು ಕೊಲುವುದನು | ಬಿಡು ನಿನಗೆ ನಾನೊಂದ ನುಡಿವೆನೆಂದೆನುತಲಿಂತೆಂದಾ     || ೨ ||

ಚಿಣ್ಣನನು ಮರಳಿ ನೀ | ನಿನೊಮ್ಮೆ ಕಳುಹೀಗ ಮನ್ನಿಸುತ ವಿದ್ಯೆಬುದ್ಧಿಯನೂ ||
ಚೆನ್ನಾಗಿ ತಿಳುಹುವೆನು | ನಿನ್ನಾಣೆ ಯೆನೆ ಕಳುಹೆ | ನನ್ನಿಯಲಿ ಕರೆದೊದ ದ್ವಿಜನೂ || ೩ ||

ರಾಗ ಘಂಟಾರವ  ರೂಪಕತಾಳ

ಬಂದು ಗುರುವರಾ | ಮಠಕೆ ಶೀಘ್ರದೀ | ಕಂದನೊಡನವಾ | ನೆಂದ ಸಾಮದೀ ||
ಇಂದಿರೇಶನಾ | ತೊರೆಯಿನ್ನಾದರೂ | ವಂದಿಸುವೆನು ನಾ | ನಾದರೂ ಗುರೂ     || ೧ ||

ಹರಹರನ್ನುತಾ | ಬರೆಯೊ ಬಾಲನೇ ಹರಿಹರೀಯೆಂದೂ | ಬರೆದ ಬೇಗನೇ ||
ಗರುವವ್ಯಾತಕೋ | ಹುಡುಗ ಶಿವನೆಂದೂ | ಬರೆ ಯೆನಲ್ಕವಾ | ಬರೆದ ಹರಿಯೆಂದೂ        || ೨ ||

ಭಾಮಿನಿ

ಎಷ್ಟು ನಾ ಹೇಳಿದರು ಬಿಡೆ ನೀ |
ದುಷಟತನವನು ಬಾಲ ಹರಹರ |
ಕಟ್ಟೆ ನಾ ನಿಜವಾಗಿ ನಿನ್ನನು ಮರಳಿ ಕರೆತಂದೂ |
ಪೆಟ್ಟಿನಲಿ ನೀ ಸಾವೆ ನಿನ್ನನು |
ಪುಟ್ಟಿಸಿದ ಜನಕಂಗೆ ಪುನರಪಿ |
ಮುಟ್ಟಿಸುವೆನೆಂದೆನುತ ಕರೆತಂದೊಪ್ಪಿಸುತಲೆಂದಾ    || ೧ ||

ರಾಗ ಕಾಂಬೋಧಿ  ಅಷ್ಟತಾಳ

ನಿಶಿಚರಾಗ್ರಣಿಯೆ ಕೇಳಯ್ಯಾ | ನಿನ್ನ | ಶಿಶುವಿನ ತಳ್ಳಿ ಬೇಡಯ್ಯಾ ||
ಅಸುರೇಂದ್ರ ನಿನಗದ | ನುಸುರಲೇನಮರರ | ವಿಸರವು ನಗುವಂದ | ವೆಸಗಿದ ತಾನಿಂದೂ || ೧ ||

ವರೆದ ಮಾತನು ಕೇಳನಲ್ಲಾ | ಹರಿ | ಹರಿಯೆಂದು ಬರೆವ ಸುಳ್ಳಲ್ಲಾ ||
ಪರಮ ಪುರುಷನೆಂಬ | ಮರುಳುರೆ ಹಿಡಿದೀತ | ಬರೆಯನು ಸರ್ವಥಾ | ಹರನೆಂಬ ನಾಮವಾ        || ೨ ||

ಹೊಡೆದರು ಟೊಣೆದರು ಕೇಳಾ | ಮತ್ತೂ | ಕಡಲಶಯನನೆಂಬ ಬಾಲಾ ||
ಕಡು ಕಷ್ಟ ಬಟ್ಟೆಷ್ಟು | ವೊಡಬಡಿಸಲು ನಿನ್ನ | ಹುಡುಗ ಕೇಳನು ದೈತ್ಯ | ರೊಡೆಯ ನಿಶ್ಚಯವಿದೂ     || ೩ ||

ಬಿಡಬೇಕೀ ಊರನೆನ್ನುವೆಯಾ | ಬಿಟ್ಟು | ನಡವೆನೀಗಲೆ ಮಹರಾಯಾ ||
ಬಡವಾದೆ ನಿನ್ನಯ | ಹುಡುಗನ ದೆಸೆಯಿಂದ | ಲೊಡೆದುದು ಗಂಟಲು ನುಡಿವುದಿನ್ನೇನದಾ  || ೪ ||

ಭಾಮಿನಿ

ಧೊರೆ ಪರೀಕ್ಷಿತ ಲಾಲಿಸೀ ಪರಿ |
ಗುರುವರನು ಬಿನ್ನೈಸೆ ನಿಶಿಚರ |
ತರಳನಾನವನು ನಿರೀಕ್ಷಿಸುತೀಗ ಭೂಸುರನೂ ||
ಒರೆದ ನುಡಿಯಿದು ಪುಸಿಯೊ ದಿಟವೋ |
ಭರದಿ ಪೇಳೆನೆ ವಿಪ್ರರೆಂಬರೆ |
ಸರುವಥಾ ಸಟೆಮಾತ ನಿಜವೆಂದೊರೆದ ಪ್ರಹ್ಲಾದಾ    || ೧ ||

ರಾಗ ಮಾರವಿ  ಏಕತಾಳ

ತರಳನ ನುಡಿಯನು ಕೇಳುತ ನಿಶಿಚರ | ಧರಿಸುತ ಕೋಪವನೂ |
ಕರೆದೊಡನಸುರರೊಳೆಂದನು ಬಾಲನೊ | ಳಿರಿಸದೆ ಕರುಣವನೂ        || ೧ ||

ಕೊಲ್ಲಿರಿ ಕೊಂಡೊದೀತನೆನಗೆ ಮಗ | ನಲ್ಲವೆಂದೊಪ್ಪಿಸಲೂ ||
ಹಲ್ಲನು ಕಡಿವುತಲೊದಾ ಕುವರನ | ಖುಲ್ಲರು ಬಳಿಕಿನೊಳೂ    || ೨ ||

ಹೊಡೆದಂಜಿಸಿದರು ತುಳಿದರು ಬೈದರು | ಕಡಿದರು ಸುರಗಿಯಲೀ ||
ನುಡಿಯುವದೇನಿದನರಿಯನರ್ಭಕ ಜಗ | ದೊಡೆಯನ ಕರುಣದಲೀ       || ೩ ||

ಎಸಗಿದರೇನನು ಮಡಿಯದೆ ಕಂದನು | ನಸು ನಗುತಿರೆ ಖಳರೂ ||
ಅಸುರಾಧಿಪಗಿದನೆಲ್ಲವ ಸಾಂಗದೊ | ಳುಸುರಿ ಸರಿದರವರೂ   || ೪ ||

ಭಾಮಿನಿ

ಧರಣಿಪಾಲಕ ಕೇಳು ದನುಜರು |
ತರಳನನು ಸಂಹರಿಸಲಾರದೆ |
ಮರಳಿ ಬಂದೊರೆದುದನು ಕೇಳುತ್ತಾಗ ದಾನವನೂ ||
ಹರಹರೇನಿದು ಚಿತ್ರ ವೆನುತಲಿ |
ಬರಿಸಿ ಫಣಿಸಂಕುಲವ ಬಾಲಗೆ |
ಭರದಿ ಕಚ್ಚಿಸಿ ಕೊಲುವೆನೆನು ತುರಗಗಳ ತರಲೊರೆದಾ         || ೧ ||

ರಾಗ ಸೌರಾಷ್ಟ್ರ  ತ್ರಿವುಡೆತಾಳ

ಚಂದದಿಂದವಧರಿಸು ನೃಪ ಖಳ | ನೆಂದೊಡನೆ ಫಣಿಕುಲವನಸುರರು |
ತಂದರೆಂಬುದನರಿದವರೊಳಿಂ | ತೆಂದ ದಿತಿಜಾ       || ೧ ||

ಕಾಲ ಸುಮ್ಮನೆ ಕಳೆಯದೆನ್ನಯ ಬಾಲಕಂಗುರಗಗಳ ಕಚ್ಚಿಸಿ |
ಕಾಲನರಮನೆಗಟ್ಟಿ ಮಾಡದೆ | ಖೂಳತನವಾ || ೨ ||

ದುರುಳ ರಕ್ಕಸ ಪೇಳಲವದಿರ | ದುರಗಗಳ ಕೆರಳಿಚುತ ಬಿಡಲತಿ |
ಭರದಿ ಕಚ್ಚಲು ಬಂದು ನೆನೆದನು | ತರಳ ಹರಿಯಾ    || ೩ ||

ಸಿರಿವರನು ನೇಮಿಸಿದಡಲ್ಲಿಗೆ | ಗರುಡದೇವನು ಬರಲು ಫಣಿಗಳು |
ತ್ವರಿತದೊಳು ಭಯದಿಂದ ಪೊಕ್ಕವು | ಧರೆಯ ಕೊರೆದೂ        || ೪ ||

ಇತ್ತ ದೇವಾರಾತಿ ತಿಳಿದಿದ | ನತ್ಯಧಿಕ ಕೋಪದೊಳು ಖಳರೊಳು |
ಮತ್ತಗಜಗಳ ತರಿಸಿ ತುಳಿಸಿರೆ | ನುತ್ತ ನುಡಿದಾ        || ೫ ||

ವಾರ್ಧಿಕ

ಕರಿಪುರಾಧೀಶ ಕೇಳಸುರೇಂದ್ರ ಪೇಳಿದಂ |
ತಿರದೆ ದೈತ್ಯರು ಗಜಗಳಿಂದಲಾ ಬಾಲಕನ |
ಉರವ ಮೆಟ್ಟಿಸಲದೊರಳಿಷ್ಟ ಕೈಕೂಡದಿರೆ ಖಳ ಬಳಿಕ ಕೋಪದಿಂದಾ ||
ಗರಳಮಯದಡಿಗೆಯಂ ವಿರಚಿಸಲ್ಕೊರೆದದರ |
ತರಳಗುಣ್ಣಿಸಲವಂ ಹರುಷದಿಂದಾಡುತ್ತ |
ಲಿರುವದಂ ಕಂಡಸುರ ಬೆರಗತಾಳುತ್ತೊಡನೆ ವಲ್ಲಭೆಯ ಕರೆದೆಂದನೂ   || ೧ ||

ರಾಗ ಸುರುಟಿ  ಏಕತಾಳ

ಸಾರಸಸಮಮುಖಿಯೇ | ಕೇಳ್ಕೇಳ್ | ವಾರಿರುಹಾಂಬಕಿಯೇ |
ಮಿರಿದ ನುಡಿಯ ಕು | ಮಾರಕನದಕೇನ್ | ದಾರಿಗಾಣದೆ ನಿನ್ನ | ಭೋರನೆ ಕರೆಸಿದೆ         || ೧ ||

ಹರಿಹರಿಯೆನ್ನು ತಲೀ | ತರಳನು | ಸ್ಮರಿಸುವ ನಿರತದಲೀ ||
ತರವಲ್ಲೆನುತವ | ಗರುಹಿದರಾ ನುಡಿ | ಯಿರಿಸನು ಮನಸಿನೊ | ಳೊರೆವುದಿನ್ಯಾರಲಿ        || ೨ ||

ದ್ವೇಷಿಕ ಮೊದಲೆಮಗೇ | ಕೇಳಾ | ವಾಸುದೇವ ಮಗಗೇ ||
ಏಸೆಂದರು ತ | ನೀಸನು ಕೇಳನು | ಘಾಷಿ ಮಾಡುವೆನು | ಕೂಸನು ನಾಳೆಗೆ       || ೩ ||

ಭಾಮಿನಿ

ವಲ್ಲಭನ ನುಡಿ ಕೇಳುತಾಕ್ಷಣ
ಫುಲ್ಲಲೋಚನೆಯೆಂದಳವನೊಳು
ಸೊಲ್ಲಿಸಿದುದಾ ಮಾಳ್ಪೆನಿದಕಿನ್ನಂಜಲೇಕಿನ್ನೂ
ಇಲ್ಲ ಸಂಶಯವಿದಕೆನಲು
ದಲ್ಲಣನು ತಾನೆಂದ ಬಾಲಗೆ
ನಿಲ್ಲದೀಗಲೆ ವಿಷಯವನೀಯೆನೆ ಕಾಂತೆ ಹಲುಬಿದಳೂ || ೧ ||

ರಾಗ ನೀಲಾಂಬರಿ  ಏಕತಾಳ

ಹರಹರೆನ್ನಯ ಕಾಂತನೂ | ಬರ ಹೇಳುತೆನ್ನೊ | ಳೊರೆದನ್ಯಾಕಿಂತ ಮಾತನೂ ||
ತರಳನ ಕರೆದು ನಾನೂ | ಕೊಡುವದೆಂತು | ಗರಳವನವನಗಿನ್ನೂ        || ೧ ||

ವಿಷಯವನಿತ್ತರೆ ಬಾಲನೂ | ಯೋಚಿಪನೇನ | ಬಿಸಿಹಾಲೆಂದೆನುತ ತಾನೂ ||
ಶಿಶುವು ಕುಡಿವುತದನೂ | ಮಡಿದರೆ ಮತ್ತೆ | ನ್ನಸುವಿದ್ದು ಫಲಗಳೇನೂ    || ೨ ||

ವಸುಧೆಯೊಳ್ ಬಾಲರಿಗೇ | ಕೊಡುವದುಂಟು | ಎಸೆವ ಹಾಲನು ತೃಷೆಗೇ ||
ಹಸುಮಗಗಿಂದಿನಲೀ | ನಾನೀಯಲೆಂತಾ | ವಿಷವ ನಿಷ್ಕರುಣದಲೀ       || ೩ ||

ಭಾಮಿನಿ

ಪೃಥ್ವಿಪತಿ ಕೇಳಾ ಖಳನ ಸತಿ
ಯತ್ತು ಕೊಳುತಲಿ ತನ್ನ ಮೋಹದ
ಪುತ್ರನನು ಕರೆಸುತ್ತ ಬಿಗಿಯಪ್ಪುತ್ತ ಮುಂಡಾಡೀ
ಎತ್ತಿ ಕೊಳುತವನನ್ನು ವಿನಯದಿ
ನೆತ್ತಿಯನು ವಾಸನಿಸಿ ಬಿಡದುರೆ
ಮುತ್ತನೀವುತ್ತೊಡನೆ ಕುವರನೊಳೆಂದಳಿಂತೆಂದೂ     || ೧ ||

ರಾಗ ಸೌರಾಷ್ಟ್ರ  ತ್ರಿವುಡೆತಾಳ

ಮಗನೆ ಬಿಡು ಛಲ ಸರಿಯೆ ನಿನಗಿದು | ಹಗೆಯ ಕೊಂಡಾಡುವದು ನಿರತದಿ |
ಜಗತಿಯೊಳಗಿಹ ಜನರು ಬೈಯ್ಯರೆ | ಸುಗುಣ ನಿನಗೇ || ೧ ||

ತಂದೆಯವರೇನೆಂದರದರನು | ಹಿಂದುಗಳೆದಪೆಯಂತೆ ಗ್ರಹಿಸದೆ |
ಎಂದಿಗಾದರು ಪೇಳ್ವೆ ನಿನಗಿದು | ಚಂದವಲ್ಲಾ          || ೨ ||

ಹರಿಯ ನಾಮವ ಸ್ಮರಿಸದಿದ್ದರೆ | ಬರುವದೇನೆಲೆ ಕೊರತೆ ನಿನಗದ |
ಶಿರಿವರನು ತಾನೇನನೀವನು | ತರಳ ನಿನಗೇ         || ೩ ||

ಹಿಂದಕೆನ್ನಯ ಪಿತನು ಬಹುಪರಿ | ಯಿಂದ ಕೊಲಲೆತ್ನವನು ಕಲಿಸಲು |
ನೊಂದು ಬಿಡಿಸಿದರ್ಯಾರು ಹಸುಮಗು | ವೆಂದು ತನ್ನಾ        || ೪ ||

ಭಾಮಿನಿ

ಕಂದನಾಡಿದ ಮಾತ ಕೇಳುತ
ಲೆಂದಳಂಗನೆ ಸುರಮುನೀಂದ್ರನು
ಹಿಂದೆ ಬಂದೆನ್ನೊಡನೆ ಪೇಳಿದ ಮಾತು ದಿಟವ್ಯಾತೂ |
ನೊಂದುಕೊಳಲ್ಯಾಕೀತಶ್ರೀ ಗೋ
ವಿಂದನಡಿದಾವರೆಯ ಸೇವಕ
ನೆಂದು ಕೊಟ್ಟರೆ ವಿಷವ ಕುಡಿದತಿ ಸುಖದೊಳಿರುತೀರ್ದಾ       || ೧ ||

ವಾರ್ಧಿಕ

ಧರಣಿಪತಿ ಲಾಲಿಸೈ ತನ್ನಾತ್ಮಭವಗವೈ |
ಪುರುಷನಾಜ್ಞೆಯೊಳಿತ್ತ ವಿಷವ ಕುಡಿದಾ ಕುವರ |
ಹರುಷದಿಂದಾಡುತ್ತಲಿಹನೆಂಬುದಂ ಕೇಳ್ದು ದಾನವಂ ಕೋಪದಿಂದಾ ||
ಉರುಳಿಸಿದ ಬೆಟ್ಟದಿಂದುದಕದೊಳ್ ಮುಳುಗಿಸಿದ |
ಸುರಿವ ಮಳೆಯಲಿ ನಿಲಿಸಿ ಬಳಲಿಸಿದನುಪವಾಸ |
ವಿರಿಸಿ ಕಡೆಗಬುಧಿಯೊಳ್ ಕೆಡಹಿಸಿದನೇನೆಂಬೆ ಖಳ ಪುತ್ರಗಿತ್ತಳಲನೂ   || ೧ ||

ರಾಗ ಪಂಚಾಗತಿ  ಮಟ್ಟೆತಾಳ

ಪೃಥ್ವಿಪತಿಯೆ ಕೇಳು ಖಳನು  ಪುತ್ರನಳಿದ ಶರಧಿಯೊಳಗೆ |
ನುತ್ತಲಿರಲು ಹರುಷದಿಂದ | ಲಿತ್ತ ಕುವರನೂ ||
ಚಿತ್ತಜಯ್ಯ ಕಮಲನಯನ | ಚಿತ್ತ ಸಾಕ್ಷಿಯೆನ್ನು ತಾಗ |
ಪತ್ತಣಕ್ಕೆ ಬಂದ ನಸುನ | ಗುತ್ತ ನಲಿವುತಾ   || ೧ ||

ಬಂದ ತನುಜನನ್ನು ಕಾಣು | ತೆಂದನಸುರ ಶರಧಿಗಿಕ್ಕೆ |
ಬಂದೆಯೆಂತು ಪೇಳು ಮರಣ | ಹೊಂದದುಳಿದೆಯಾ ||
ತಂದೆ ಲಾಲಿಸಾ ಮುರಾರಿ | ಬಂದು ಕಾಯ್ದ ಬಂದೆನಿತ್ತ
ಲಿಂದಿರೇಶನೊಲಿದವರ್ಗೆ | ಬಂಧ ಕಾಣೆನೂ   || ೨ ||

ಹರಿಯ ಶರಣರನ್ನು ತರಿದ | ಹರಿಯ ಶತ್ರುಗಳನು ಪೊರೆದ |
ಉರು ಪರಾಕ್ರಮಿಗಳದಾರು | ತೋರಿಸಿದ್ದರೇ ||
ಬರಿದೆ ಯೆನ್ನ ಕೊಲುವೆನೆಂಬ | ಮರುಳುತನವ ತೊರೆದು ಲಕ್ಷ್ಮಿ |
ವರನ ಪಾದ ಸೇರಿ ಸುಖದೊ | ಳಿರುವುದೊಳ್ಳಿತೂ     || ೩ ||