ಭಾಮಿನಿ
ಎಲೆ ಧರಾಧಿಪ ಲಾಲಿಸೀಪರಿ |
ಕೊಳುಗುಳದೊಳಿಂದ್ರಾದಿದಿವಿಜರ |
ಖಳವರೇಣ್ಯನು ಗೆಲ್ದು ಬಿಜಯಂ ಗೈದ ನಿಜಪುರಕೇ ||
ನಳಿನಜನ ವರದಧಿಕ ಮಹಿಮೆಯೊ |
ಳಿಳೆಯಧಿಪರ ಸಮೂಹ ತ್ರಿದಶರ |
ಬಳಗ ಸಹಿತಿರುತೀರ್ದುದಾ ದಾನವನ ಸೇವೆಯಲೀ || ೧ ||
ರಾಗ ಭೈರವಿ ಝಂಪೆತಾಳ
ಇಂತು ಸುರ ನರ ದನುಜ | ಸಂತತಿಯ ಸೇವೆಯಲಿ |
ಕಾಂತನೆನಿಸಿದನು ಭೂ | ಕಾಂತೆಗಾ ಖಳನೂ || ೧ ||
ಒಂದು ದಿನ ಮನದೊಳಗೆ ಸಂದ ತಮ್ಮನ ನೆನದು |
ನೊಂದು ಮನದೊಳು ಶೋಕ | ದಿಂದಲಿಂತೆಂದಾ || ೨ ||
ಯಾತಕೀ ಪರಿ ವಿಭವ | ವ್ಯಾತಕೀ ಪರಿ ಬೆಡಗು |
ಯಾತಕಿ ಪರಿ ಮಾನ | ಭೂತಳದೊಳೆನಗೇ || ೩ ||
ತಮ್ಮನನು ಕೊಂದಿರುವ | ಹೆಮ್ಮೆಗಾರನ ಕಣ್ಣೊ |
ಳೊಮ್ಮೆ ಕಾಣದೆ ಪೋದೆ | ಸುಮ್ಮಗೀ ಭಾಳ್ವೇ || ೪ ||
ಎಂದೆನುತ ಖಳ ದುಃಖಿ | ಪಂದವನು ಕಾಣುತ್ತ |
ಒಂದು ಪೇಳಿದ ಮಂತ್ರಿ | ನಿಂದು ಖಳನೊಡನೇ || ೫ ||
ರಾಗ ಕಾಂಭೋಜ ಅಷ್ಟತಾಳ
ರಕ್ಕಸಾಧಿಪ ಕೇಳು ಮಾತಾ | ವ್ಯರ್ಥ | ದುಃಖವಿದೇನು ವಿಖ್ಯಾತಾ |
ಅಕ್ಕರ ದನುಜನು ಮಡಿದುದಕೊಭವ | ತಕ್ಕುದಲ್ಲೆನುತುರೆ ಧಿಕ್ಕರಿಸುವೆಯಾ || ೧ ||
ಬಿಡಿಬಿಡು ಮನದ ದುಗುಡವಾ | ಬೇಗ | ಕೊಡು ಕೊಡು ನಮಗೆ ವೀಳೆಯವಾ |
ಒಡಹುಟ್ಟಿದಾತನ ಕೆಡಹಿದ ಹರಿಯನ್ನು | ಹುಡುಕಿ ತಂದಿರಿಸುವೆನೊಡೆಯ ನಿನ್ನಿದಿರಲಿ || ೨ ||
ಅತ್ತರೆ ಪೋದವನಿನ್ನೂ | ತಿರು | ಗಿತ್ತ ಬಹನೆ ಪೇಳ್ವದೇನೂ |
ಚಿತ್ತಜಾಂತಕನಾಣೆ ಮರುಗದಿರ್ತಮ್ಮನ | ಮೃತ್ಯುವ ತಂದು ನಿನ್ನೊತ್ತಿನೊಳಿರಿಸುವೆ || ೩ ||
ಭಾಮಿನಿ
ಮಲ್ಲ ಸಚಿವನು ತನ್ನೊಳೀ ಪರಿ |
ಸೊಲ್ಲಿಸಲು ಕೇಳುತ್ತ ಸುರಕುಲ |
ದಲ್ಲಣನು ತಾನೆಂದ ಹರಿಯೊಳು ತಾನೆ ಹೊದಾಡೀ |
ಚಲ್ಲ ಬಡಿದರೆ ಮತ್ತೆ ಸರಿಯೆನ |
ಗಿಲ್ಲ ಲೋಕದೊಳೆನುತ ನಿಶಿಚತ |
ನಿಲ್ಲದೈದಿದನ್ಹರಿಯ ಪುಡುಕುವೆನೆನುತ ತವಕದಲೀ || ೧ ||
ರಾಗ ಸಾಂಗತ್ಯ ರೂಪಕತಾಳ
ಧಾರುಣೀಪತಿ ಕೇಳು ಘೋರ ದಾನವನಿಂತು | ವಾರಿಜಾಕ್ಷನ ನೋಡಲೆಂದೂ ||
ಭೋರನೆ ಪುಡುಕುತ್ತ ಭೂತಳವನು ಸುತ್ತಿ | ಸಾರಿದ ಕ್ಷೀರಸಾಗರಕೇ || ೧ ||
ಹಿರಣ್ಯಕಶಿಪು ಬಂದ ಪರಿಯನರಿತು ಕ್ಷೀರ | ಶರಧಿಯೊಳಿಹ ರಮಾವರನೂ ||
ಧರಿಸುತ್ತ ತಾಪಸರಂಗವನಾಕ್ಷಣ | ಬರುತೀರ್ದ ಖಳಗಿದಿರಾಗೀ || ೨ ||
ಉಟ್ಟ ಕಾವಿಯ ವಸ್ತ್ರ ತೊಟ್ಟ ಕೃಷ್ಣಾಜಿ | ಮೆಟ್ಟಿದ ಹಾವಿಗೆ ಗಳದೀ ||
ಇಟ್ಟ ರುದ್ರಾಕ್ಷಿಯ ಮಾಲೆಯಿಂದೈತರೆ | ದುಷ್ಟ ತಾನೆರಗಿದನವಗೇ || ೩ ||
ಎರಗಿದಾತನ ಕಂಡು ಕಪಟ ತಾಪಸನಾಗ | ಶಿರ ಪಿಡಿದೆತ್ತಿ ಕುಳ್ಳಿರಿಸೀ ||
ವರದನು ದಾನವ ನೀ ನಿತ್ತ ಬಂದಿಹ | ಪರಿಯ ಪೇಳೆನಗೆಂದ ಮುನಿಪಾ || ೪ ||
ಎಂದುದ ಕೇಳುತ್ತ ನಿಶಿಚರವರ್ಯನು | ಚಂದದಿ ಕರವ ಜೋಡಿಸುತಾ ||
ಮಂದರಾಧರ ಗೈದ ದ್ರೋಹದ ಬಗೆಯ ತಾ | ನೆಂದನಿಂತೆಂದು ತಾಪಸಗೇ || ೫ ||
ರಾಗ ಶಂಕರಾಭರಣ ಏಕತಾಳ
ಭೂಸುರಾಗ್ರಗಣ್ಯ ಕೇಳು | ಬೇಸರ ಕೊಳ್ಳದಿರು ಪೇಳ್ವೆ |
ವಾಸುದೇವ ಗೈದನೊಂದು | ಮೋಸ ಕಾರ್ಯವಾ || ೧ ||
ಎನ್ನ ಮೋಹದನುಜನನ್ನು | ಮೊನ್ನೆ ಹರಿಯು ಹಂದಿಯಾಗಿ |
ನಿರ್ನಾಮ ಗೈದನು ಪರಿಯನೆನ್ನುವದೇನೈ || ೨ ||
ಧಾರುಣಿಯೊಳೆಲ್ಲಿಯು ಕಾಣೆ | ನಾರಾಯಣನ ಮೌನಿಪಾಲ |
ತೋರಿಕೊಡಿರಿ ಕರುಣದಿಂದ | ಚಾರುಶೀಲನೇ || ೩ ||
ಮೂರು ಲೋಕವನ್ನು ಚರಿಪ | ಕಾರಣಿಕರೆನಗೊಂದುಪ |
ಕಾರ ಗೈವುದೆಂದು ಮಣಿದ | ವೀರನಾಗಳೂ || ೪ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಏಳು ಮಗನೇ ಬರಿದೆ ವಡಲನು | ಹಾಳು ಮಾಡಲು ಬೇಡ ಶ್ರೀಹರಿ |
ಜಾಲವಿದ್ಯದ ಮೊದಲು ಮನೆಯವ | ಪೇಳಲೇನೈ || ೧ ||
ಧಡಿಗ ಕೇಳ್ ನಿನ್ನುವನು ವಂಚಿಸಿ | ವಡಲ ಹೊಕ್ಕವ ಕುಳಿತುಕೊಂಡಿಹ |
ಹಿಡಿವುದೆಂತವನನ್ನು ನೀನೆಲೆ | ಕಡು ವಿಚಿತ್ರಾ || ೨ ||
ಠಕ್ಕನಾಡುವಿರ್ಯಾತಕೆನ್ನೊಳು | ಹಕ್ಕಿ ವಾಹನನೆನ್ನುದರವನು |
ಹೊಕ್ಕಿ ಕುಳಿತಿಹನೆಂಬ ಮಾತಿದು | ತಕ್ಕು ದಲ್ಲಾ || ೩ ||
ನೋಡು ನೋಡೆನುತಾದರಾಕ್ಷಣ | ಓಡಿ ಬಂದವನೊಡಲ ಪೊಕ್ಕೊ |
ಲಾಡಲೇನದನೊಡನೆ ಮರುಗಿದ | ಖೂಳ ಖಳನೂ || ೪ ||
ರಾಗ ನೀಲಾಂಬರಿ ಆದಿತಾಳ
ಹರನೆ ನಾನಿನ್ನೇನ ಗೈವೆ | ಧರಣಿಸುರನೆಂದೆನುವಾ |
ಪರಿಯನರಿತು ದೈನ್ಯದಿಂದ | ಲೊರೆದೆನವಗೆನ್ನೊಳವಾ || ೧ ||
ಧರಣಿಸುರನ ವೇಷವನು | ಹರಿಯು ಧರಿಸ ಬಂದೂ ||
ಕೊರಳ ಕೊದನಯ್ಯೊ ಗಂಗಾ | ಧರನೆ ತನ್ನನಿಂದೂ || ೨ ||
ಒಡಲ ಪೊಕ್ಕ ಮೇಲೆ ಹರಿಯ | ಹಿಡಿಯುವದಿನ್ನೆಂತೂ |
ಸುಡು ಸುಡೆನ್ನ ಬಾಳ್ವೆಯನ್ನು | ನುಡಿವುದೇನು ಸಂತೂ || ೩ ||
ಹರಿಯ ಕೊಲಲು ಬಂದೀಗ ಸಂ | ಹರಿಸಿ ಕೊಂಡೆನೆನ್ನಾ ||
ಹರಿಯು ಬಲು ಮಾಯಾವಿ ಖರೆಯು | ಸರಿವೆ ಪುರಕೆ ಮುನ್ನಾ || ೪ ||
ಭಾಮಿನಿ
ಪರಿಪರಿಯ ದುಃಖದಲಿ ದಾನವ |
ಧರೆಗುರುಳುತೇಳುತ್ತ ಮನದಲಿ |
ಹರಿಯ ಗೆಲುವಡೆ ಯತ್ನವಾವುದೆನುತ್ತ ಯೋಚಿಸುತ್ತಾ ||
ಪುರಕೆ ನಡೆತರು ತೀರ್ದನಿತ್ತಲು |
ಸುರವರರು ನಿಶಿಚರನ ಸೇವೆಯೊ |
ಳಿರದೆ ಮರುಗುತ ಬಂದು ಶಚಿಪತಿಗೆರಗಿ ಪೇಳಿದರೂ || ೧ ||
ರಾಗ ಕಾಂಭೋಜ ಅಷ್ಟತಾಳ
ಪುರುಹೂತ ಕೇಳೆಮ್ಮ ಸೊಲ್ಲಾ | ಸುರು | ಚಿರ ಕಶ್ಯಪನು ನಮ್ಮನೆಲ್ಲಾ ||
ಪರಿಪರಿ ಸೇವೆಯೊ | ಳುರಿಸುವ ಪರಿಗಳ | ನೊರೆಯಲಾರೆವು ಸುರ | ರೆರೆಯನೆ ಕೇಳಿನ್ನು || ೧ ||
ಮಾತರಿಶ್ವನು ಕಸ ಬಳಿವಾ | ಮತ್ತೆ | ಜಾತವೇದನು ಪಾಕಗೈವಾ ||
ರೀತಿಯಾದುದು ಮಿಕ್ಕ | ಸೂತ ಮಾಗಧ ಸುರ | ವ್ರಾತವು ದಿತಿಜನ | ದೂತತ್ವಕಾದರು || ೨ ||
ಮೃಡನಾಣೆ ನಮ್ಮ ನಾರಿಯರೂ | ಖಳ | ಮಡದಿಯರುಗಳ ದಾಸಿಯರೂ ||
ಮುಡಿಯ ಬಾಚುತ ಬೊಟ್ಟ | ನಿಡಿಸುತ ಕೊಳದಿಂದ | ಜಡಜವ ತರಿಸುವ ನುಡಿವುದಿನ್ನೇನಯ್ಯ || ೩ ||
ಧರೆಯೊಳಗಪ್ಪ ಯಜ್ಞಗಳೂ | ನಿತಿ | ಚರನ ಪೆಸರಿನ ಸ್ವಾಹದೊಳೂ ||
ಮೆರವುದೆ ಹೊರತಾಗಿ | ವರ ಕ್ರತುಭುಜರೆಂಬ | ವುರು ತರ ನಾಮವ | ನೊರೆವರ ಕಾಣೆವು || ೪ ||
ದುರುಳನ ಸೇವಕತ್ವವನೂ | ಪರಿ | ಹರಿಸಿ ನೀ ರಕ್ಷಿಸೆಮ್ಮುವನೂ ||
ಒರೆಯಲರಿದು ಹೆಚ್ಚೆಂ | ದೆರಗಲು ಕಂಡಾಗ | ಸುರಪತಿ ನುಡಿದನು | ಕರುಣದಿಂದಲಿ ತಾನು || ೫ ||
ಭಾಮಿನಿ
ಹರಿ ವರುಣ ಮೊದಲಾದ ಸುರಗಣ |
ರೊರಲದಿರಿ ನಿರತದಲಿ ಬಾಧಿಪನು |
ದುರುಳನತಿ ಸಾಹಸಿಕನವನನು ಗೆಲ್ಲಲರಿದೆಮಗೇ ||
ಸರಸಿಜೋದ್ಭವ ನೆಡೆಗೆ ಗಮಿಸಿದ |
ರೊರೆವನೆಮಗವನೊಂದುಪಾಯವ |
ತೆರಳಿರೆನೆ ಸುರ ಪತಿಯ ಕೂಡೈತಂದರಜಪುರಿಗೇ || ೧ ||
ಕಂದ ಪದ್ಯ
ಬಂದಾ ಸುಮನಸರೆಲ್ಲರು |
ಚಂದದಿ ಪರಮೇಷ್ಠಿಯನು ನಿರೀಕ್ಷಿಸಿ ಪದಕಂ ||
ವಂದಿಸಿ ಬಳಿಕಾ ಕಾಶ್ಯಪ |
ನಂದನನಿಂತೊರೆದನಂದು ಕಮಲಜನೊಡನಂ || ೧ ||
ರಾಗ ಕಾಂಬೋದಿ ಝಂಪೆತಾಳ
ಸರಸಿಜೋದ್ಭವ ಕೇಳು ಕನಕಕಶ್ಶಿಪು ಯೆಂಬ | ದುರುಳ ದಾನವನ ಸೇವೆಯನೂ ||
ಸುರವರರು ನಿರತದಲಿ ವಿರಚಿಸುತ ದಣಿದರದ | ನೊರೆವುದೇನೀಗ ಮತ್ತಿನ್ನೂ || ೧ ||
ರಂಬೆ ಮೊದಲಾದಖಿಳ ಕಂಬುಕಂಠಿನಿಯರನು | ಯೆಂಬುದೆನೊದ ಸೆರೆಹಿಡಿದೂ ||
ಬೆಂಬಿಡದೆ ತ್ರಿದಸರ ಕದಂಬವ ನಿರೀಕ್ಷಿಸಿದ | ರಿಂಬುಗೊಡದೆಳೆದು ಬಾಧಿಪನೂ || ೨ ||
ಇಲ್ಲವೈ ನಮಗೆ ಯಜ್ಞದ ಹವಿರ್ಭಾಗ ಮ | ತ್ತಿಲ್ಲ ನವಗ್ರಹರ ವಂದನೆಯೂ ||
ಎಲ್ಲ ದಾನವಗಾದುದಿಲ್ಲ ನಮಗೇನೆನುತ | ಸೊಲ್ಲಿಸಿದ ಮರುಗಿ ಸುರಪತಿಯೂ || ೩ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಇಂದ್ರನೊರೆದುದ ಕೇಳಿ ವಿಧಿ ತಾ | ನೆಂದವನೊಳು ನಗುತ ಸುಮನಸ |
ವೃಂದ ಬಳಲಿದಿರೆಂಬುದಿದು ತಾ | ನಿಂದು ಸಹಜಾ || ೧ ||
ದುರುಳ ಪೂರ್ವದೊಳೆನ್ನ ಮೆಚ್ಚಿಸಿ | ವರವ ಪಡೆದಿಹನದರ ಬಲದಿಂ |
ಮೆರೆವನದಕಾನೊರೆವ ನಿನ್ನೊಳು | ಸುರಪ ಕೇಳೂ || ೨ ||
ಹರನ ಸನ್ನಿಧಿ ಗೈದಿ ಮತ್ತಿದ | ನೊರೆಯೆ ನಿಮಗಿದಕೊಂದುಪಾಯವ |
ನರುಹದಿರ ನಡಿರೆನಲು ಪೊರಟರು | ಸುರರು ಭರದೀ || ೩ ||
ಸಾರಸಾಸನ ಸಹಿತ ಹರುಷದಿ | ಸಾರಿದರು ಹರಗಿರಿಯನಲ್ಲಿಯೆ |
ಮಾರವೈರಿಯ ಕಂಡರೆಲ್ಲರು | ದೂರದಿಂದಾ || ೪ ||
ವಾರ್ಧಿಕ
ಎಡಬಲದಿ ಗುಹ ಗಣಪ ನಂಬಿ ಭೃಂಗೀಶರಿಂ |
ದಡಿಗಡಿಗೆ ಪೊಗಳುತಿಹ ಯಕ್ಷ ಗಂಧರ್ವರಿಂ |
ದೆಡೆಬಿಡದೆ ಸುತ್ತಲುಂ ಮುತ್ತಿ ವೋಳೈಸುತಿಹ ಭೂತ ಪ್ರೇತಂಗಳಿಂದಾ ||
ಸಡಗರದಿ ಪಾರ್ವತಿಯನೊಡಗೂಡಿ ಹರುಷದಿಂ |
ದುಡುರಾಜನಂ ಧರಿಸುತಧಿಕ ಸೌಂದರ್ಯದಿಂ |
ದೊಡೆಯ ತಾ ನೀ ಜಗತಿಗೆಂದೆಂಬ ಗೌರವದೊಳಿಹ ಮಹೇಶನ ಕಂಡರೂ || ೧ ||
ಕಂದಪದ್ಯ
ಕಂದಾಕ್ಷಣ ಮೃಡನಂ ಸುರ |
ತಂಡವು ಫೇ ಯೆನುತ ತಮ್ಮ ನಿಜ ಕರಗಳನುಂ ||
ಮಂಡೆಯೊಳಿಡುತಾ ಶಂಭುವ |
ಕೊಂಡಾಡಿದರುತ್ಸಹದೊಳು ಭಕ್ತಿಯೊಳಾಗಂ || ೧ ||
ರಾಗ ಶಂಕರಾಭರಣ ರೂಪಕತಾಳ
ಜಯ ಕಪರ್ದಿ ಕಾಮವೈರಿ | ಜಯ ಕೃಪಾಕರಾ ||
ಜಯ ಮಹೇಶ ಕೃತ್ತಿವಾಸ | ಜಯತು ಶಂಕರಾ || ೧ ||
ಜಯ ಪರೇಶ ಜಯ ಗಿರೀಶ | ಜಯ ತ್ರಿಯಂಬಕಾ ||
ಜಯ ಸರ್ವೇಶ ಸ್ಥಾಣು ಭರ್ಗ | ಸುಜನ ರಕ್ಷಕಾ || ೨ ||
ಜಯ ಸುರೇಶ ಪಾರ್ವತೀಶ | ಭಸ್ಮಲೇಪಿತಾ ||
ಜಯ ನಮಃ ಶಿವಾಯ ಕಾಯೊ | ವೇದವಂದಿತಾ || ೩ ||
ಭಾಮಿನಿ
ಕಂತುನಿಧನನು ಸುರರು ನುತಿಪುದು |
ಸಂತಸದಿ ಕೇಳುತ್ತ ವಾಣೀ |
ಕಾಂತನೊಡನಿಂತೆಂದನಮರರ ಕೂಡಿ ನೀ ಬಂದೂ ||
ಇಂತು ಪೊಗಳುವಿರ್ಯಾಖೆ ಬಂದ |
ಧ್ಯಾಂತ ಚಿಂತೆಯ ಪೇಳಿರೆನೆ ನಲ |
ವಾಂತು ಕಮಲಜ ನುಡಿದ ಪರಶಿವನಿಂಗೆ ಕೈಮುಗಿದೂ || ೧ ||
ರಾಗ ಮಧ್ಯಮಾವತಿ ಏಕತಾಳ
ಭೂತೇಶ ಲಾಲಿಸಿ ಕೇಳೆನ್ನ ಮಾತಾ | ಜಾತರಹಿತ ಖ್ಯಾತ ವರ ಮಾಯಾತೀತಾ ||
ಯಾತರ ಭಯವೆಂದು ಪೇಳಲಭವನೇ | ಸೋತರು ಸುರರೆಲ್ಲ ಖಳರಿಂದ ಶಿವನೇ || ೧ ||
ಧರೆಯೊಳು ಕನಕಕಶಿಪುವೆನ್ನುವಸುರಾ | ಒರೆವದೇನುದಿಸಿ ಸಂಗರದಿ ಭೂಮಿಪರಾ ||
ಗರುವವ ಮುರಿದಟ್ಟಿ ನಾಕಕೈತಂದೂ | ಸುರರನ್ನು ಜೈಸಿದ ಹೇ ದಯಾಸಿಂಧೂ || ೨ ||
ಕಿಂಕರ ತನ ಗೈದು ಸುಮನಸರುಗಳಾ | ಬಿಂಕಗಳಡಗಿ ಕ್ಷೀಣಿಸಿದರು ಬಹಳಾ ||
ಶಂಕರ ಸಲಹಬೇಕವರ ನೀನೆನುತಾ | ಪಂಕಜೋದ್ಭವನೆನಲ್ ಹರನೆಂದ ನಗುತಾ || ೩ ||
ರಾಗ ಮುಖಾರಿ ಏಕತಾಳ
ಕೇಳೂ ಕೇಳಯ್ಯ ಯೆನ್ನ ಮಾತಾ | ಎಲ್ಲವೊ ವಿಧಾತಾ |
ಕೇಳೂ ಕೇಳಯ್ಯ ಯೆನ್ನ ಮಾತಾ || ಪಲ್ಲ ||
ಖೂಳನ ಘನತರ | ದೂಳಿಗವೆನ್ನೊಳು | ಪೇಳಲು ಬಂದಿರೆ |
ತಾಳುತ ದುಗುಡವ | ಕೇಳು || ಅನುಪಲ್ಲ ||
ದುಷ್ಟನ ಭುಜಬಲದನುವಾ | ಗ್ರಹಿಸದೆ ಬೇಗಾ | ಕೊಟ್ಟೆ ನೀನವಗೆ ಕೇಳಿದೊರವಾ ||
ಕುಟ್ಟುವನಮರರ | ಮೆಟ್ಟುವನಿದಕೇನ್ | ಬಟ್ಟೆ ಯೆನುತ ಬಾ | ಬಿಟ್ಟೊದರುವೆಯಾ || ಕೇಳೂ || ೧ ||
ಆದರಿನ್ನೊಂದುಂಟಿದಕೆದಾರೀ | ಪೇಳುವೆ ಪೋಗಿ | ಶ್ರೀಧರನೆಡೆಗೆ ಈ ಸಾರೀ ||
ಬಾಧಿಪವನ ಶಿರ ಛೇದನಕೊಡನೆಯೆ | ಹಾದಿಯ ಪೇಳುವ | ನಾದಿ ಪುರುಷನೂ || ಕೇಳೂ || ೨ ||
ವಾರ್ಧಿಕ
ಸಿರಿವರಂ ಮೋಹದಳಿಯಂ ಬ್ರಹ್ಮಮೊ ಮ್ಮಗಂ |
ಹರನೆನ್ನ ಮಗಳ ಗಂಡನ ಮಿತ್ರನಾಗಿಹಂ |
ಸುರಪತಿಗೆ ಬೇಕಾದ ವಸ್ತುವನ್ನೊಲಿದಿತ್ತೆ ನೆಂಬಧಿಕ ಹರ್ಷದಿಂದಾ ||
ಹರಿದಳಿದು ಬಳಿಕೇಳ್ವ ತೆರೆಗಳಿಂ ನೊರೆಗಳಿಂ |
ದುರುತರದಿ ಸಂಚರಿಪ ನಕ್ರದಿಂ ಚಕ್ರದಿಂ |
ಸರಸರನೆ ಮೇಲ್ವಾ ವ ಹನಿಗಳಿಂ ಧ್ವನಿಗಳಿಂದುದಧಿ ಮೆರೆವುದ ಕಂಡರೂ || ೧ ||
ಭಾಮಿನಿ
ಪೃಥ್ವಿಪತಿ ಕೇಳ್ ಬಳಿಕ ಶರಧಿಯ |
ನುತ್ತರಿಸಿ ಬ್ರಹ್ಮಾದಿ ಸುರರಾ |
ಚಿತ್ತಜಯ್ಯನ ಪುರ ಸಮಿಪಕ್ಕೈದಿ ಹರುಷದಲೀ ||
ಸತ್ಯನಿಧಿಯನು ವೇದಕಾಣದ |
ನಿತ್ಯ ನಿರ್ಮಲನನ್ನು ದೂರದೊ |
ಳರ್ತಿಯಲಿ ಹಾಡಿದರು ವರ್ಣಿಪೆನೇನನದನೆಂದಾ || ೧ ||
ಸುಳಿಗುರುಳ ವರದಂತಪಂಕ್ತಿಯ |
ಥಳಥಳಿಪ ನಗೆಮೊಗದ ಮಿಗೆ ಕಳ |
ಕಳಿಸುತಿರೆ ನಲಿನಲಿದು ಮೆರೆಯುವ ಮಕರ ಕುಂಡಲದಾ ||
ಪೊಳೆವ ಹಾರದ ಕೌಸ್ತುಭದ ಪ್ರ |
ಜ್ವಲಿಪ ಮಕುಟದ ಲಲಿತ ತಿಲಕದ |
ಚಲುವ ದೇವರ ದೇವನನು ಕಂಡೊಡನೆ ಪೊಗಳಿದರೂ || ೨ ||
ರಾಗ ಕಾಂಬೋಧಿ ತ್ರಿವುಡೆತಾಳ
ಓಂ ನಮೋ ನಾರಾಯಣ | ಜಯ ಜನಾರ್ದನ | ಓಂ ನಮೋ ನಾರಾಯಣಾ ||
ಓಂ ನಮಾಶ್ರಿತಪೋಷ ಹರಿವೋಂ | ಓಂ ನಮೋ ಭವನಾಶ ಸುರನುತ |
ಓಂ ನಮೋ ಜಲಶಾಯಿ ಗಿರಿಧರ | ಓಂ ನಮೋ ದುರಿತೌಘ ಪರಿಹರ || ಓಂ ನಮೋ || ೧ ||
ಆದಿಪುರುಷ ಶ್ರೀಕರಾ | ಕೌಸ್ತುಭಧರಾ | ವೇದವೇದಾಂತ ದೂರಾ ||
ಸಾಧುಗಳ ದಾತಾರ ನಿರುಪಮ | ಮೋದ ಭರಿತ ಸೃಷ್ಟಿ ಸ್ಥಿತಿಲಯ |
ಕಾದಿ ಕಾರಣ ಭೂತ ನಿರ್ಮಲ | ಮಾಧವಾಚ್ಚುತ ಪರಮ ಪೂರುಷ || ಓಂ ನಮೋ || ೨ ||
ಶತಕೋಟಿ ಸೂರ್ಯ ತೇಜಾ ಗರುಡಧ್ವಜ | ನುತ ಗುಣ ವದನಾಂಬುಜಾ ||
ರತಿಯ ಪಿತನಮಲ ಸುಚರಿತ | ಶ್ರುತಿಶಿರೋಮಣಿ ದೈತ್ಯಕುಲಜಿತ |
ಸತತ ನಂಬಿದ ಭಕುತರುಬ್ಬಸ | ಹತವ ಗೈಯ್ಯುವ ವಿತತ ಮಹಿಮನೆ || ಓಂ ನಮೋ || ೩ ||
ಭಾಮಿನಿ
ವಾರಿಜೋದ್ಭವ ಮುಖ್ಯ ದಿವಿಜಾ |
ವಾರ ಪೊಗಳ್ವದ ಕೇಳಿ ದೈತ್ಯ ವಿ |
ದಾರಣನು ತಾ ನುಡಿದ ತನ್ನಯ ಕುವರನೊಡನಂದೂ ||
ಕಾರಣವದೇನಿಂತು ಕೂಗಲು |
ಭೂರಿ ಬಾಧೆಯನಾರು ಕೊಟ್ಟರು |
ಭೂರಿ ಬಾಧೆಯನಾರು ಕೊಟ್ಟರು |
ಕಾರಿಯವಿದೇನ್ ಬಂದುದೇಕೆನೆ ಹರಿಗೆ ವಿಧಿ ನುಡಿದಾ || ೧ ||
ರಾಗ ನವರೋಜು ಏಕತಾಳ
ಲಾಲಿಸಂಬುಜನಯನಾ | ಕರು | ಣಾಳು ವಾರಿಧಿಶಯನಾ ||
ಪೇಳಿದೆ ಬಂದುದ | ಹೇಳಿರೆನುತ ಶ್ರೀ |
ಲೋಲ ಹಾಗಾದರೆ | ಕೇಳು ಬಿನ್ನಪವನು || ೧ ||
ಹಿರಣ್ಯಕಶಿಪು ಯೆನುವಾ | ಕೆಟ್ಟ | ದುರುಳ ಬೇಡಿದ ವರವ ||
ಕರುಣಿಸಲಾ ಸುರ | ವೈರಿಯು ಗೈದಿಹ | ಪರಿಯನು ಯೇನೆಂ |
ದೊರೆಯಲಿ ನಿನ್ನೊಳು || ೨ ||
ತ್ರಿದಶರನು ಸದೆ ಬಡಿದಾ | ಸುರ | ಸುದತಿಯರಾ ಪಿಡಿದೊದಾ ||
ಒದಗದಿರಲು ತನ್ನ | ಸದನದ ಕೆಲಸಕೆ |
ಬೆದರಿಪ ಕೋಪಿಪ | ಬೈದಪ ಜರದಪ || ೩ ||
ಭಾಮಿನಿ
ಬಳಲಿದರು ಬಾಡಿದರು ಸೋತರು |
ಖಳನ ಸೇವೆಯ ಗೈದು ನಿರ್ಜರ |
ಬಳಗ ಲಕ್ಷ್ಮೀರಮಣ ನೀನಾ ದುರುಳ ದಾನವನಾ ||
ಕೊಲದಿರಲು ಬೇಗದಲಿ ವಿಬುಧರ |
ಸಲಹುವವರಿನ್ನಿಲ್ಲ ಲೋಕದಿ |
ಹಲವು ಮಾತೇಕೆನಲು ಶ್ರೀಹರಿ ನುಡಿದ ನಳಿನಜಗೇ || ೧ ||
ರಾಗ ಮಧುಮಾಧವಿ ಏಕತಾಳ
ಸಾರಸಾಸನನೆ ನೀ ಕೇಳೆನ್ನ ಮಾತಾ | ಕಾರಿಯ ಲೇಸಾತು ವರ ವಾಣಿಪ್ರೀತಾ ||
ಚಾರು ತಪಕೆ ಮೆಚ್ಚಿ ಖಲಗೊರವಿತ್ತೂ | ಏರಿಸಿ ಬಂದೀಗಲೊರವೆಯಾಪತ್ತೂ || ೧ ||
ಒಳ್ಳಿತಾತಾದರು ಕಿರಿದು ದಿನದಲೀ | ಸುಳ್ಳಲ್ಲ ಕೊಲ್ಲುವೆ ಖಳನ ಯತ್ನದಲೀ ||
ಇಲ್ಲ ಸಂಶಯಗಳೆಂದೆನೆ ಕೇಳಿ ಸುರರೂ | ನಿಲ್ಲದೆ ತೆರಳಲು ಮನಗೈದರವರೂ || ೨ ||
ಕುಂಜರ ವರದನ ವರ ದಿವ್ಯ ಪಾದಾ | ಕಂಜಕೊಂದಿಸುತಲಿ ತಳೆದತಿ ಮೋದಾ ||
ಕುಂಜರ ಯಾನಾದಿ ಸುರವರರಾಗಾ | ಅಂಜಲಿನ್ಯಾಕೆಂದು ಪೋದರು ಬೇಗಾ || ೩ ||
ಭಾಮಿನಿ
ವರವಸುಂಧರೆಯಧಿಪ ಲಾಲಿಸು |
ಹರಿಹಯಾದಿ ಸುರೌಘ ತೆರಳಲು |
ಹರಿಯು ಯೋಚಿಸುತಿದಕೆ ಮುಂದೇನ್ದಾರಿ ಯೆನುತೊಡನೇ ||
ಸುರ ಮುನಿಪ ನಾರದನ ನೆನೆಯಲು |
ಭರದಿ ಬಂದವನೇನು ಬೆಸಸೆನೆ |
ಮುರಹರನು ಬರಸೆಳೆದು ಮನ್ನಿಸುತೆಂದನವನೊಡನೇ || ೧ ||
ರಾಗ ಕೇದಾರಗೌಳ ಅಷ್ಟತಾಳ
ನಾರದ ಮುನಿಯೆ ಕೇಳ್ ಕನಕಕಶಿಪುವಿನ | ನಾರಿಯ ಬಳಿಗೆ ಪೋಗೀ ||
ಚಾರು ನಯೋಕ್ತಿಯೊಳೊರೆವುದೀ ಪರಿ ಪೇಳ್ವೆ | ಕಾರಣೀಕನೆ ಲೇಸಾಗೀ || ೧ ||
ವಲ್ಲಭನನ್ನೊಡಗೂಡುವ ಸಮಯದಿ | ಫುಲ್ಲಾಕ್ಷಿಚಿತ್ತದಲೀ ||
ಸಲ್ಲಲಿತಾನಂದದಿಂದೆನ್ನ ಭಜಿಪಂತೆ | ಸೊಲ್ಲಿಸಿ ಬಳಿಕಿನಲೀ || ೨ ||
ಒರೆಯಬೇಕವಳಿಗೆ ನುಡಿದಂತೆ ಶ್ರೀಶನ | ಸ್ಮರಿಸಲು ಹರಿ ಭಕುತಾ ||
ಬರುವನು ಜನನಕೆ ನಿನ್ನ ಗರ್ಭದೊಳೆನು | ತರುಹಿ ಬಾ ಬೇಗಲಿತ್ತಾ || ೩ ||
ಇಂದಿರಾರಮಣನ ನುಡಿಯನು ಕೇಳುತಾ | ನಂದದಿ ಮುನಿಪನಂದೂ ||
ಬಂದನು ಶೋಣಿತ ಪುರಕಾಗಿ ಹರಿ ತನ್ನೊ | ಳೆಂದುದ ಪೇಳಲೆಂದೂ || ೪ ||
ವಾರ್ಧಿಕ
ಸಿಂಧುವಸನಾಧೀಶ ಲಾಲಿಸೀಪರಿಯೊಳಂ |
ಮಂದರಾಧರನಾಜ್ಞೆಯಿಂದ ನಾರದ ಮುನಿಪ |
ಬಂದ ಶೋಣಿತ ಪುರದ ದೈತ್ಯನರಸಿಮಯ ಬಳಿಗೆ ಯಾರರಿಯದಂತೆ ಭರದೀ ||
ಚಂದ್ರ ಭಾಸ್ಕರರಂತೆ ರಾಜಿಪಾ ಮುನಿ ಬಹಳ |
ಚಂದದಿಂದೈತಹುದ ಕಂಡು ಧಿಮ್ಮನೆ ಎದ್ದು |
ನಿಂದು ಭಕ್ತಿ ಯೊಳೆರಗಿ ಸತ್ಕರಿಸಿ ಋಷಿವರನೊಳೆಂದಳಾ ವರ ಕಯಾಧೂ || ೧ ||
Leave A Comment