ಪ್ರಹ್ಲಾದ ಚರಿತ್ರೆ ಪ್ರಸಂಗವು
ಶಾರ್ದೂಲವಿಕ್ರೀಡಿತವೃತ್ತ
ಶಾಂತಂ ಬಾಲಮಧೋಕ್ಷ ಜಾಂಘ್ರಿಶರಣಂ, ಭಾಂತಂ ಗುಣೈರ್ದುರ್ಲಭೆಃ |
ಕಾಂತಂ ದ್ವೇಷಕೃತೈಸ್ತು ಷೀಡನಶತೈಃ ಶಾಂತಂ ಹಿ ಪ್ರಹ್ಲಾದಕಂ ||
ಸ್ವಾಂತಾಯಾರ್ದಯಿತುಂ ಹಿರಣ್ಯಕಶಿಪುಂ, ಯಾಂತಂ ಕ್ರುಧಾ ಶ್ರೀಹರಿಃ |
ಹಂತಾ ಶ್ರೀನರಸಿಂಹಮೂರ್ತಿರನಿಶಂ ಹಂತು ಪ್ರಪನ್ನಾ ಪದಂ || ೧ ||
ಭಾಮಿನಿ
ಈಶನಣುಗ ಜಗದ್ಭರಿತ ಸಂ |
ತೋಷನಿಧಿ ಮಾತಾ | ಂಡ ಕೋಟಿ ಪ್ರ |
ಕಾಶ ಮದಸಿಂಧುರನಿಭಾಕೃತಿವದನ ಗುಣಸದನಾ |
ಪಾಶಮೋದಕ ಹಸ್ತ ನಿರುಪಮ |
ಮೂಷಿಕಧ್ವಜನೆನಿಸಿ ಮೆರೆವ ಗ
ಣೇಶ ದಯದಿಂದೊಲಿದು ನಿರ್ವಿಘ್ನತೆಯ ನೀಡೆಮಗೇ || ೧ ||
ವಾರ್ಧಿಕ
ರಜತಾದ್ರಿಗೇಯನಂ ಕಲ್ಯಾಣಕಾಯನಂ
ಭುಜಗತತಿಭೂಷನಂ ನಿಖಿಲ ಜಗದೀಶನಂ
ವೃಜಿನಾಪಹಾರನಂ ಶರಧಿಗಂಭೀರನಂ ಸಾರನಂ ಸಾಕಾರನಂ
ದ್ವಿಜರಾಜಚೂಡನಂ ವರ ವೃಷಾರೂಢನಂ
ಸುಜನ ಜನರಕ್ಷನಂ ರಾಕ್ಷಸವಿಪಕ್ಷನಂ
ಗಜಚರ್ಮಚೇಲನಂ ಕಾಳೀವಿಲೋಲನಂ ನುತಿಸಿ ಕೃತಿಯಂ ಪೇಳ್ವೆನೂ || ೧ ||
ದ್ವಿಪದಿ
ಆದಿಕವಿಗಳ ಮನದಿ ನುತಿಸಿ ಲೇಸಾಗೀ |
ವೇದವ್ಯಾಸಾದಿ ಋಷಿಗಳಿಗೆ ತಲೆವಾಗೀ || ೧ ||
ಜನಕ ಜನನಿಯರಂಘ್ರಿಗೆರಗುತಾದರಿಸೀ |
ವಿನಯದಲಿ ಗುರುಪಾದಯುಗ್ಮವನು ಸ್ಮರಿಸೀ || ೨ ||
ಸಕಲ ತಾಪತ್ರಯವ ಪರಿದು ಸುಲಭದಲೀ |
ಮುಕುತಿದೋರುವ ಭಾಗವತ ಪುರಾಣದಲೀ || ೩ ||
ಸುತನ ಬಾಧಿಸುವಂಥ ಹೇಮಕಶಿಪುವನೂ |
ಖತಿಯಿಂದ ನರಸಿಂಹನಾಗಿ ಮಾಧವನೂ || ೪ ||
ಕೊಂದು ಮೂರ್ಲೋಕವನು ಪಾಲಿಸಿದ ಕಥೆಯಾ |
ಚಂದದಿಂದಭಿವರ್ಣಿಸುವೆನು ಸಂಗತಿಯಾ || ೫ ||
ಭಾಷೆ ವಡಿ ಗಣ ಪ್ರಾಸಗಳ ನೊಂದನರಿಯೇ |
ತೋಷದಲಿ ಸಲಹೆನ್ನ ನಿರತ ಶ್ರೀಹರಿಯೇ || ೬ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಸೋಮವಂಶೋದ್ಭವ ಪರೀಕ್ಷಿತ | ಭೂಮಿಪತಿಗಾ ಶುಕ ಮುನಿಪನೊಲಿ |
ದಾ ಮಹಾ ಭಾಗವತ ಕಥನವ | ಪ್ರೇಮದಿಂದಾ || ೧ ||
ಪೇಳುತಿರಲೊಂದಿನದೊಳರಸನು | ಕೇಳಿಕೊಂಡ ಹಿರಣ್ಯಕಶಿಪುಗೆ |
ಬಾಲನಾದ ಪ್ರಹ್ಲಾದ ಲಕ್ಷ್ಮೀ | ಲೋಲನಡಿಯಾ || ೨ ||
ಧ್ಯಾನಿಸುತ್ತಿರಲದನರಿತು ಖಳ | ಶ್ರೀನಿವಾಸನ ದ್ವೇಷದಿಂದಲಿ |
ಸೂನುವನು ಬಾಧಿಸಲು ವಿಷ್ವ | ಕ್ಷೇನ ಭರದೀ || ೩ ||
ನರಹರಿಯ ರೂಪವನು ತಾಳುತ | ದುರುಳ ದೈತ್ಯ ನ ವಧಿಸಿ ನಂಬಿದ |
ತರಳನನು ಪಾಲಿಸಿದನೆಂಬೀ | ಪರಮ ಕಥೆಯಾ || ೪ ||
ಬಿತ್ತರಿಸಬೇಕೆನುತ ನೃಪನತಿ | ಭಕ್ತಿಯಿಂದಲಿ ಬೆಸಗೊಳಲು ಮುನಿ |
ಪೋತ್ತಮನು ಬಳಿಕೊರೆದ ನಿಶ್ಚಲ ಚಿತ್ತದಿಂದಾ || ೫ ||
ವಾರ್ಧಿಕ
ನಳನಾರಿಕುಲತಿಲಕ ಲಾಲಿಸೈ ಸತ್ಕಥೆಯ |
ಕೊಳುಗುಳದಿ ಶ್ರೀಹರಿ ಹಿರಣ್ಯಾಕ್ಷನಂ ತರಿದು |
ಜಲಧಿಜೆಯನೊಡಗೂಡಿ ಹರುಷದಿಂದಿರುತೀರ್ದ ಕ್ಷೀರಾಬ್ಧಿ ಮಂದಿರದೊಳೂ ||
ಬಳಿಕಿತ್ತ | ನಿಖಿಲ ವಿಭವದೊಳಮರ ಲೋಕದೊಳ್ |
ಜ್ವಲನ ಮೊದಲಾದ ದೇವರ್ಕಳಿಂದೊಡಗೂಡಿ |
ವಲವಿನಿಂ ದೋಲಗವ ಗೊಟ್ಟು ವೃಂದಾರಕರೊಳಿಂತೆಂದ ದೇವೇಂದ್ರನೂ || ೧ ||
ರಾಗ ಭೈರವಿ ಝಂಪೆತಾಳ
ಕೇಳಿರನಿಮಿಷರೆಲ್ಲ | ಖೂಳ ರಕ್ಕಸರೆಮ್ಮ |
ಗೋಳುಗುಟ್ಟಿಸುವದನು | ಪೇಳಲೇನಿಂದೂ || ೧ ||
ಕನಕಾಕ್ಷನೆಂದೆಂಬ | ದನುಜ ತಾ ಮೊನ್ನೆ ಬಂ |
ದನುವರದಿ ಗೀರ್ವಾಣ | ರನು ಸೋಲಿಸಿದನೂ || ೨ ||
ಧರಣಿಯನು ಕದ್ದೊ ದು | ಹರಿಯನರಸುತ್ತ ತೆರ |
ಳಿರುವನಾತಣ ಬಲು ಹ | ನೊರೆಯಲಳವಲ್ಲಾ || ೩ ||
ಮುಂದೆ ನಮಗ್ಯಾವ ನಿ | ರ್ಬಂಧವೀವನೊ ತಿಳಿಯ |
ದೆಂದೆನಲು ಚಿತ್ರರಥ | ನಿಂದ್ರಗಿಂತೆಂದಾ || ೪ ||
ರಾಗ ನವರೋಜು ಏಕತಾಳ
ಅಚಲಾರಾತಿಯೆ ಕೇಳೂ | ಮ | ದ್ವಚನವನೂ ಕರುಣಾಳೂ |
ವಚಿಸುವದೇನ್ಸುರ | ನಿಚಯವ ಸಲಹುವ | ಪ್ರಚುರನು ಗೈದಿಹ | ಸುಚರಿತ ಕಾರ್ಯವ || ೧ ||
ರೂಢಿಯನೂ ಕನಕಾಕ್ಷಾ | ಹೊತ್ತೋಡುತಿರೇ ನಳಿನಾಕ್ಷಾ ||
ಕ್ರೋಡಾಕಾರದಿ | ಮಾಡುತ ಯುದ್ಧವ | ಕೂಡಿಸಿದನು ಯಮ | ನಾಡಿಗೆ ಖಳನನು || ೨ ||
ಮುನ್ನಿನಂತವನಿಯನೂ | ಪೂ | ಗಣ್ಣನುದ್ಧರಿಸಿದನೂ ||
ಪನ್ನಗಾರಿಧ್ವಜ | ನನ್ನು ನಂಬಿದರಿ | ಗಿನ್ನೇತರ ಭಯ | ವೆಣ್ಣದಿರೆಂದನೂ || ೩ ||
ರಾಗ ಕೇದಾರಗೌಳ ಅಷ್ಟತಾಳ
ಸುರಸೂತನೆಂದುದ ಕೇಳಿ ಸಂತೋಷವ | ಧರಿಸುತ್ತ ಪುರುಹೂತನೂ ||
ಹರಿ ಮೊದಲಾದ ದೇವರ್ಕಳ ನೋಡುತ್ತ | ಲರುಹಿದ ಮಾತೆಂದನೂ || ೧ ||
ಧಾತ್ರಿಯ ಕದ್ದೊ ದ ಖಳ ಹಿರಣ್ಯಾಕ್ಷನ | ನಾ ತ್ರಿವಿಕ್ರಮ ರಣದೀ ||
ಆರ್ತರಕ್ಷಕನಾಗಿ ಮಡುಹಿದ ವಾರ್ತೆಯ | ಚಿತ್ರರಥನು ಪೇಳ್ದನೂ || ೨ ||
ಸುರರಾಜ ಪದವಿಯು ಸ್ಥಿರವಾಯಿತಿದಿರೆದ್ದು | ಬರುವರಿಗಳ ಕಾಣೆನೂ ||
ಹರುಷದೊಳಿರುವ ಮುಂದೆನೆ ಕೇಳುತಾಕ್ಷಣ | ತರಣಿಜನಿಂತೆಂದನೂ || ೩ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಸುರಪ ಕೇಳೈ ಬರಿದೆ ಹರುಷವ | ಧರಿಸಿಕೊಳದಿರು ಮಡಿದ ವೀರನ |
ಹಿರಿಯನೋರುವನಿಹನು ತಾನತಿ | ಭರಿತ ಬಲನೂ || ೧ ||
ಅನಲ ಬೊಬ್ಬಿರಿದೆಂದ ಯಮನೊಳು | ದನುಜ ಮತ್ತಿನ್ನೋರ್ವನಿಹನೆಂ |
ದೆನುವದನು ನೀನಾಡಬೇಡೈ | ಗಣಿಸೆನವನಾ || ೨ ||
ಎಂದ ಮಾತನು ಕೇಳುತಮರರ | ವೃಂದವತಿ ಸಂತಸದೊಳೀರ್ದುದು |
ಮುಂದಿನಾಗಮ ಪೇಳ್ವೆ ಕೇಳೆನು | ತೆಂದ ಮುನಿಪಾ || ೩ ||
ವಾರ್ಧಿಕ
ಹರಿದಯದಿ ಸುರವರರ್ ಹರುಷದಿಂದಿರುತಿರಲು |
ಹರಿನಯನ ಧೂರ್ತ ಖಳ ಹರಿಯೊಡನೆ ಸೆಣಸಾಡಿ |
ಹರಿಸುತನ ಪುರವರಕೆ ಹರಿದನೆಂಬೀ ವಾರ್ತೆ ಹರಿದುದೈ ತ್ರೈಜಗತಿಗೇ ||
ಹರಿಗಮನೆ ದಿತಿಕೆಳದಿಯೋರ್ವಲೀ ವಾರ್ತೆಯಂ |
ಭರದಿ ಕೇಳುತ್ತಾಗ ಹರಿತಂದು ದೈನ್ಯದಿಂ |
ಹರಿವಿಷ್ಟರ ದೊಳಿರುವ ಒಡತಿಯಂ ಕಂಡೊಡನೆ ಕಾಲ್ಗೆರಗುತಿಂತೆಂದಳೂ || ೧ ||
ರಾಗ ಸೌರಾಷ್ಟ್ರ ಏಕತಾಳ
ಹರಿಣಲೋಚನೆ ನಿನ್ನ ಸುತ ಹಿರಣ್ಯಾಕ್ಷನು | ಧುರಕೆಂದು ತೆರಳಿ ವಿಕ್ರಮದೀ ||
ಸುರ ನರ ಭುಜಗರ ದೆಸೆಗೆಡಿಸುತ ಜಯ ತರಣಿಯನೊಲಿಸಿ ಸಾದರದೀ || ೧ ||
ಕಡಲೊಡೆಯನ ಬಳಿಗೈದಲಾತನು ನಡ | ನಡುಗಿ ನಾರಾಯಣನೆಡೆಗೇ ||
ತಡೆಯದಟ್ಟಲು ಲಕ್ಷ್ಮೀಪತಿಯ ವೈಕುಂಠದಿ | ಪುಡುಕಿ ಕಾಣದೆ ತಾನು ಕಡೆಗೇ || ೨ ||
ಭರದಿ ರಸಾತಳಕಿಳಿದು ಪೋಗಲು ಚಕ್ರ | ಧರನು ನಿಟ್ಟಿಸುತ ಖಾತಿಯೊಳೂ ||
ತರಿದನಾತನನೆಂಬ ವಾರ್ತೆಯ ಕೇಳ್ದೆನೆಂ | ದೊರೆಯಲಿತುಸುರಿದಳವಳೂ || ೩ ||
ಭಾಮಿನಿ
ಇಂದುಮುಖಿ ಕೇಳೆನ್ನ ಕಂದನ |
ನಿಂದಿರಾಧವ ಕೊಂದನ್ಯಾಕದ |
ನೊಂದುಳಿಯದೆಲ್ಲವನು ಪೇಳೆನೆ ದೂತಿ ದುಗುಡದಲೀ ||
ಎಂದಳೀ ಧರಣಿಯನು ನಿನ್ನಯ |
ಕಂದ ಕದ್ದೊ ವುತಿರೆ ಶ್ರೀಹರಿ |
ಹಂದಿರೂಪದಿ ತರಿದನೆನೆ ಹಲುಬಿದಳು ಲಲಿತಾಂಗೀ || ೧ ||
ರಾಗ ನೀಲಾಂಬರಿ ಏಕತಾಳ
ಮಗುವೇ ನೀ ಮಡಿದೆಯಲ್ಲಾ | ನಿರ್ದಯದೊಳಿಂ | ತಗಲಿ ನೀ ಪೋದೆಯಲ್ಲಾ ||
ಹಗೆಯೇನು ಹರಿಗೆ ಬಂತೂ | ಎನ್ನಯ ಮಹಾ | ಸುಗುಣನ ಕೊಲ್ಲಲಿಂತೂ || ೧ ||
ತಂಗಿಯಾತ್ಮಜರನೆಲ್ಲಾ | ಕಾವರೆ ಕಂಜ | ಕಂಗಳ ರಮೆಯನಲ್ಲಾ ||
ಭಂಗಿಸಿದನೆ ಶಿಶುವಾ | ಹೀಗಾದ ಮೇಲೆ | ನುಂಗುವೆ ಘೋರ ವಿಷವಾ || ೨ ||
ಆಡಿಸಿದಂತ ಕೈಗೇ | ನಿನ್ನನು ಮುದ್ದು | ಮಾಡಿ ಪೊರೆದ ತಾಯಿಗೇ ||
ಕೇಡನೀವುತ ವಂಚಿಸೀ | ಬರಿದೆ ಎತ್ತ | ಲೋಡಿ ಪೋದೆಯೊ ಸಾಹಸೀ || ೩ ||
ಕನಕಲೋಚನ ಕುವರಾ | ಎನ್ನುತಲಿನ್ನು | ವಿನಯದಿ ಕರೆಯಲ್ಯಾರಾ ||
ಮನಸಿಜಾಂತಕ ಸಖನೇ | ನಿನ್ನಯ ಮನಕೆ | ತಣುವಾತೆ ಮಾಧವನೇ || ೪ ||
ಸತಿಗೇನು ಗತಿ ಮಗನೇ | ಧೈರ್ಯವ ನಿನ್ನ | ಸುತಗ್ಯಾರೆಂಬರು ಕಂದನೇ ||
ಶಿತಿಕಂಠ ಹರನೆನ್ನುತಾ | ಮೂರ್ಛೆಯ ತಾಳಿ | ಕ್ಷಿತಿಗೊರಗಿದಳಳುತಾ || ೫ ||
ಭಾಮಿನಿ
ಧರಣಿಪತಿ ಕೇಳ್ ಬಳಿಕ ಮೂರ್ಛೆಯೊ |
ಳೊರಗಿದಾ ಸತಿಯೇಳು ತಾಕ್ಷಣ |
ಮರುಗಿ ಮಾಡುವದೇನು ಕಾರ್ಯವು ತೀರಿತಿನ್ನಿದಕೇ ||
ಹಿರಿಯಣುಗ ಬಂಗಾರಕಶಿಪುವಿ |
ಗೊರೆದು ಶ್ರೀಧರನಿಂಗೆ ಮರಣವ |
ತರುವೆನೆನುತಲಿ ಪೊರಟಳಾತನ ಕಾಂಬ ತವಕದಲೀ || ೧ ||
ರಾಗ ಭೈರವಿ ಝಂಪೆತಾಳ
ಇತ್ತ ಶೋಣಿತಪುರದಿ | ದೈತ್ಯಕುಲ ಪುಂಗವನು |
ಮತ್ತವಾರಣ ನಂತೆ | ಚಿತ್ತದುಮ್ಮಹದೀ || ೧ ||
ಅಂದೋಲಗವಗೊಟ್ಟು | ಚಂದದಿಂದಿರುತಿರಲು |
ಬಂದಳಲ್ಲಿಗೆ ಜನನಿ | ಮಂದಗಮನದಲೀ || ೨ ||
ಜನನಿಯನು ಕಾಣುತ್ತ | ಘನ ಭಕ್ತಿಯಿಂದ ಮಿಗೆ |
ವಿನಯದಿಂದೆರಗಿದನು | ಕ್ಷಣ ತಡೆಯದವಳ್ಗೇ || ೩ ||
ಎಂದನಾ ಮಾತೆಯೊಡ | ನಂದು ನಿಮ್ಮಯ ವದನ |
ವೆಂದಿನಂತಿರದೀಗ | ಕಂದಿತ್ಯಾಕಮ್ಮಾ || ೪ ||
ಹೇಳವ್ವ ಮರುಗದಿರು | ಬಾಳುವೆಗೆ ಬಂದೆಡರ |
ಕೇಳುವೆನು ನಿಜವಾಗಿ | ತಾಳು ಧೈರ್ಯವನೂ || ೫ ||
ಹರಿಗಂಜೆ ಹರಗಂಜೆ | ಸುರರಿಗಂಜೆನು ನಾನು |
ಪರಿಭವವ ಪೇಳೆನಲು | ಒರೆದಳವಳೊಡನೇ || ೬ ||
ರಾಗ ಶಂಕರಾಭರಣ ಆದಿತಾಳ
ಏನ ಪೇಳಲಯ್ಯೊ ಮುದ್ದು | ಕಂದಾಕಂದಾ ||
ಕಿರಿಯ | ಸೂನುವನ್ನು ಹರಿಯು ರಣದಿ | ಕಂದಾಕಂದಾ || ೧ ||
ಧರಿಸಿ ಕ್ರೋಡರೂಪವನ್ನು | ಕಂದಾಕಂದಾ ||
ಮೊನ್ನೆ | ತರಿದನಂತಲ್ಲಯ್ಯೊ ಮಗನೆ | ಕಂದಾಕಂದಾ || ೨ ||
ಪೃಥ್ವಿಯ ಕದ್ದೊ ದರಿಂದ | ಕಂದಾಕಂದಾ ||
ಸುತಗೆ | ಚಿತ್ತಜಯ್ಯ ಮುನಿದನಂತೆ | ಕಂದಾಕಂದಾ || ೩ ||
ತರಳನನ್ನು ಕೊಂದವನನು | ಕಂದಾಕಂದಾ ||
ನೀನು ತರಿಯದಿರಲು ಬಾಳಲಾರೆ | ಕಂದಾಕಂದಾ || ೪ ||
ರಾಗ ಮಾರವಿ ಏಕತಾಳ
ಹೆತ್ತವ್ವೆಯ್ಯ ಮನ ಮರುಕವ ಕಾಣುತ | ಮೃತ್ಯುಂಜಯನಂತೇ ||
ಚಿತ್ತದಿ ಖತಿಯನು ತಾಳುತಲೆಂದನು | ಪೃಥ್ವಿಯು ಬಿರಿವಂತೇ || ೧ ||
ಅಮ್ಮ ನೀ ಲಾಲಿಪುದೆನ್ನಯ ಮೋಹದ | ತಮ್ಮನ ರಣಮುಖದೀ ||
ಕಮ್ಮ ಗೋಲನ ಪಿತ ತರಿದನೆ ಒಳ್ಳಿತು | ನಿಮ್ಮ ಚರಣ ದಯದೀ || ೨ ||
ಹರಿಯೆಂಬಧಮಗೆ ನಾನಾ ಯತ್ನದಿ | ಮರಣವನೆಸಗದಿರೇ ||
ತರಳನೆ ನಿಮಗೆ ಗಿರೀಶನ ಭಜಕನೆ | ಧುರಧೀರನೆ ಭಟನೇ || ೩ ||
ಸಿಂಧುವಿನೊಳಗಿಹೆ ಬಂದಪರ್ಯಾರೆನು | ತೆಂದರಿತಿಹ ಮನದೀ ||
ಇಂದಿರೆ ರಮಣನ ಬಿಡೆನೆಂದೆಂದಿಗು | ತಂದೆ ಕಾಶ್ಯಪನಾಣೇ || ೪ ||
ಎಂದೆನುತಲ್ಲಿಗೆ ಬಂದಿಹ ಜನನಿಯ | ಚಂದದೊಳೊಡಬಡಿಸೀ ||
ಸಿಂಧುಶಯನನ ಪುಡುಕುತ ಪೊರಟನು | ಕುಂದದೆ ಬಲು ಸಹಸೀ || ೫ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಧಾರುಣೀಶ್ವರ ಲಾಲಿಸೀಪರಿ | ಕ್ರೂರ ನಿಶಿಚರನಿಂತು ಹರಿಯನು |
ಧಾರುಣಿಯೋಳಲ್ಲ್ಯಲ್ಲಿ ಪುಡುಕುತ | ಮೇರುವರೆಗೇ || ೧ ||
ಅಜಭವಾದಿ ಸುರೌಘ ಸುಜನರ | ಭುಜಗ ಸಾಧ್ಯರ ಬಳಗದೊಳಗಾ |
ತ್ರಿಜಗವಂದ್ಯನ ನರಸಿ ಕಾಣದೆ | ಕುಜನನಂದೂ || ೨ ||
ಎತ್ತ ತಿರುಗಿದರಮರ ವೈರಿಯು | ಚಿತ್ತಜಯ್ಯನ ಪರಿಯನರಿಯದೆ |
ಹೆತ್ತವಳ ಕಂಡೊರೆಯಲೈದಿದ | ಮತ್ತೆ ಪುರಕೇ || ೩ ||
ಭಾಮಿನಿ
ಬಂದು ಮನೆಯೊಳಗಿರುವ ಜನನಿಯೊ |
ಳೆಂದನೆಲೆ ಯೆಲೆ ತಾಯೆ ದ್ವೇಷಿಕ |
ಸಿಂಧುಶಯನನ ಕಾಣೆ ಧಾರುಣಿ ಮೂರರೊಳಗಿನ್ನೂ ||
ತಂದುಕೊಳದಿರು ಮನಕೆ ಶೋಕವ |
ನಿಂದಜನ ತಪದಿಂದ ಮೆಚ್ಚಿಸಿ |
ಸಂದ ಕಳಚುವೆ ಹರಿಯ ವರವನು ಪಡೆದ ಬಳಿಕೆಂದಾ || ೧ ||
ರಾಗ ಭೈರವಿ ಝಂಪೆತಾಳ
ಕುವರನಾಡಿದ ಮಾತ | ಕುವಲಯಾಂಬಕಿ ಕೇಳ್ದು |
ತವಕದಿಂದೈದಿದಳು | ಭುವನೇಶ ಕೇಳೂ || ೧ ||
ಸರಿವುತಿರೆ ನಿಜ ಜನನಿ | ದುರುಳನುಹುಂಕರಿಸಿ |
ಪರಮೇಷ್ಠಿಯನು ವಲಿಸ | ಲಿರದೆ ಪೊರಮಟ್ಟಾ || ೨ ||
ಬಂದು ಮಂದರದ ಗಿರಿ | ಗೊಂದು ಕೊಳವಿರಲದರ |
ನಿಂದು ನೋಡಿದನು ಬಹು | ಚಂದಗಳ ಮುದದೀ || ೩ ||
ವಾರ್ಧಿಕ
ಅರೆಬಿರಿದ ಕಮಲದಿಂದುರೆ ಮೊರೆವ ಭ್ರಮರದಿಂ |
ತರತರದ ಮಿನ್ಗಳಿಂ ಪರಿದೊಗುವ ನೀರ್ಗಳಿಂ |
ದುರುತರದ ಗ್ರಾಹದಿಂ ಮೆರೆವಧಿಕ ಕಮಲದಿಂದಿರದೆ ಸಂತೋಷದಿಂದಾ ||
ತರಣಿ ಕಿರಣದಿ ಬೆಂದ ಪಾಂಥರು ಗಳೆಲ್ಲರುಂ |
ಸರಸಿಜದ ಕೊಳವಿರುವುದಿಲ್ಲಿ ಜಲ ನೀಂಟಿರೆಂ |
ದೊರೆವಂತೆ ಹಂಸ ಕಾರಂಡಾದಿ ಪಕ್ಷಿಗಳ್ ಸೊರವುತೀರ್ದವು ಸುತ್ತಲೂ || ೧ ||
ರಾಗ ಸಾಂಗತ್ಯ ರೂಪಕತಾಳ
ಖಳರಾಯ ದೃಢಚಿತ್ತದಲಿ ಸ್ನಾನ ಗೈದೊಂದು | ಕೊಳದಿ ಶುಚಿ ರ್ಭೂತನಾಗೀ ||
ಚಳಿಮಳೆ ಗಾಳಿಗೆ ಬೇಸರ ಗೊಳ್ಳದೆ | ಕುಳಿತೀರ್ದ ತಪಕೆ ಲೇಸಾಗೀ || ೧ ||
ನಿಂದೊಂಟಿ ಕಾಲಲಿ ಮೇಲ್ಮೊಗವಿರಿಸುತ | ಕುಂದದೆ ಬಳಿಕ ದೃಷ್ಟಿಯನೂ ||
ಚಂದದಿ ನಾಸಾಗ್ರದೊಳಗಿರಿಸುತ್ತರ | ವಿಂದ ಭವನ ಧ್ಯಾನಿಸಿದನೂ || ೨ ||
ಸೃಷ್ಟಿಯೊಳೀಪರಿ ತಪದುರಿ ನಮ್ಮನು | ಹತಿಸುವದೆಡೆಬಿಡದೀಗಾ ||
ಪಥವದಾವುದು ದೇವ ಸಲಹೆನಲಾಗ ಕೇ | ಳುತ ಬೊಮ್ಮನಿಂತೆಂದ ನಗುತಾ || ೩ ||
ಭಾಮಿನಿ
ಸಾಕು ಸಾಕಂಜದಿರಿ ಬಿಡಿಸುವೆ |
ನೀ ಕುಠಾರನ ತಪವ ನಿಮಗೀ |
ವ್ಯಾಕುಲತೆ ಬೇಡೆನುತ ಹಂಸೆಯನೇರಿ ತವಕದಲೀ ||
ಲೋಕಪತಿಗಳು ಸಹಿತ ತ್ರಿಭುವನ |
ದಾಕೆವಾಳನು ಸಂತಸದಿ ಜಗ |
ದೇಕವೈರಿಗಳರಸನೆಡೆಗೈ ತರುತಲಿಂತೆಂದಾ || ೧ ||
ರಾಗ ನವರೋಜು ಏಕತಾಳ
ಮೆಚ್ಚಿದೆ ಮೆಚ್ಚಿದೆ ಖಳನೇ | ನಿನ್ನ | ಹೆಚ್ಚಿನ ಸ್ತೌತ್ಯಕೆ ಮಗನೇ ||
ನಿಚ್ಚಟದಲಿ ಮನ | ದಿಚ್ಛೆಯನೆನ್ನೊಡ | ನುಚ್ಚರಿಸಿದರದ | ನೀಕ್ಷಣ ಸಲಿಸುವೆ || ೧ ||
ಅಸುರರೊಳೂ ನಿನ್ನಂತೇ | ತಪ | ವೆಸಗಿದ ವೀರರು ಪಿಂತೇ ||
ರಸೆಯೊಳಿಲ್ಲ ಪರಿ | ಕಿಸಿದರೆ ಭಕ್ತರ | ವಿಸರದೊಳತಿ ಸಾ | ಹಸಿಗನು ಭಲೆಭಲೆ || ೨ ||
ಬಿಡುಬಿಡೂ ಬಿಡು ತಪವಾ | ಇಕ್ಕೊ | ಕೊಡುವೆನು ಕೇಳಿದ ವರವಾ ||
ತಡ ಮಾಡದೆ ನುಡಿ | ನುಡಿ ಮನದಿರವೆನ | ಲಡಿಗೆರಗುತ್ತಲಿ | ಜಡಜಜಗೆಂದನು || ೩ ||
ರಾಗ ಕಾಂಬೋಧಿ ಝಂಪೆತಾಳ
ಹರಿಮೋಹದಾತ್ಮಜನೆ ಕೇಳಯ್ಯ ನೀನೀಗ | ಸುರನರೋರಗ ಮುಖ್ಯರಿಂದಾ ||
ಪರಿಪರಿಯೊಳೆಸೆವುತಿಹ ಖಗಮೃಗಗಳಿಂ ಸಹಿತ | ಮರಣವಿಲ್ಲೆಂದು ಬಳಿಕಿನ್ನೂ || ೧ ||
ಹಲವುತರ ಮಂತ್ರಾಸ್ತ್ರ ಹಲವುತರ ವ್ಯಾಧಿಯಿಂ | ದಳಿಯದಂದದಿ ಮೇಲೆಕೆಳಗೇ ||
ಒಳಹೊರಗಹೋರಾತ್ರಿ ಸ್ನಾನಪಾನದಿ ಮರಣ | ಕೊಳಗಾಗದಂತೆ ವರವಿತ್ತೂ || ೨ ||
ಸಲಹೆನುತ ಪೊಡ ಮಡಲು ಕಂಡಾಗ ನಳಿನಭವ | ನೊಲಿದಿತ್ತೆ ನೀ ಕೇಳ್ದ ವರವಾ ||
ಹಲವು ಮಾತೇನಿನ್ನು ನಡೆಯೆಂದು ಕಳುಹುತಲಿ | ಜಲಜಸಂಭವ ಕಾಣದಾದಾ || ೩ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಪುಂಡರೀಕೋದ್ಭವನೊಳೀಪರಿ | ಗಂಡುಗಲಿ ಬಲು ವರವ ಸಾಧಿಸಿ |
ಕೆಂಡದಂತುರಿ ಮಸಗಿ ಕುಣಿದನು | ದ್ದಂಡತನದೀ || ೧ ||
ಮರಣ ಸರ್ವಥವಿಲ್ಲವೆನುತತಿ | ವರವ ಪಡೆದೆನು ಬೊಮ್ಮನಿಂದಲಿ |
ಸರಿಯದಾರೆನಗಿನ್ನು ಲೋಕದಿ | ಹರಿಯೊ ಹರನೋ || ೨ ||
ಹೊಡಕೊಳುತ ಭುಜಗಳನು ತೋಷದಿ | ಪೊಡವಿ ನಡುಗುವ ತೆರದಿ ಬಂದನು |
ಧಡಿಗ ತನ್ನಯ ನಿಲಯ ಕಾಗಲು | ತಡೆಯದೊಡನೇ || ೩ ||
ಬಂದು ಶುಭ ಲಗ್ನದಲಿ ದೈತ್ಯರ | ವೃಂದಕೈವಾರಿಸಲು ಯೇರಿದ |
ನಂದು ಸಿಂಹಾಸನವನಾಗತಿ | ಚಂದದಿಂದಾ || ೫ ||
ರಾಗ ಭೈರವಿ ಝಂಪೆತಾಳ
ಧಾರುಣೀಶ್ವರ ಕೇಳು | ಕ್ರೂರ ನಿಶಿಚರನಿಂತು |
ಯೇರಿ ಸಿಂಹಾಸನವ | ಚಾರು ವಿಭವದಲೀ || ೧ ||
ಕುಳಿತು ಮನದೊಳಗೆಂದ | ನಳಿನಜನು ವರವಿತ್ತ |
ಫಲವೇನು ಗೆಲದೀರ್ದ | ಡಿಳೆಯ ಪಾಲಕರಾ || ೨ ||
ಸುರ ನರ ಭುಜಂಗಮರ | ಧುರದೊಳಗೆ ನಾ ಗೆಲ್ದು |
ಬರುವೆನೆನ್ನುತ ಪೊರಟ | ನೆರಹಿ ಮಾರ್ಬಲವಾ || ೩ ||
ಭಾಮಿನಿ
ಎಲೆ ಧರಾಧಿಪ ಕೇಳು ಖಳಕುಲ |
ತಿಲಕನೀ ಪರಿ ಯೋಚಿಸುತ್ತತಿ |
ಬಲರ ಕೂಡುತ ನಡೆದ ದಿವಿಜರ ಪುರಕೆ ಖಾತಿಯಲೀ ||
ಇಳೆಯು ಬ್ಯಾಬಿಡೆ ಕಮಲಜಾಂಡದ |
ತಲೆಯು ಕೆಳಗಾತೆಂಬ ತೆರದಲಿ |
ಖಳರ ಸಿಂಹಾರವದಿ ಮುತ್ತಿದ ಸ್ವರ್ಗವನು ದಿತಿಜಾ || ೧ ||
ರಾಗ ಶಂಕರಾಭರಣ ಮಟ್ಟೆತಾಳ
ಧರಣಿಪತಿಯೆ ಲಾಲಿಸಿಂತು ಕನಕಕಶ್ಶಿಪೂ | ಸುರಪುರವನು ಮುತ್ತಲೊಡನೆ ಕಂಡು ಬಲರಿಪೂ |
ಅರರೆನುತ್ತ ಸುರರ ನೆರಹಿ ಭರಿತ ರೌದ್ರದೀ | ಧುರಕೆ ಬರಲು ಕಾಣುತಾಗ ದೈತ್ಯ ಕೋಪದೀ || ೧ ||
ಪೂತುಮಝರೆ ಭಲರೆ ಭಾಪು ಸುರಪ ಕೇಳಯ್ಯಾ | ಯಾತುಧಾನವರೊಳು ಧುರಕೆ ಬಂದು ನಿಂದೆಯಾ ||
ಆತುಕೋ ನೀನೆನುತ ಬಿಟ್ಟ ಖಳನ ತರಗಳಾ | ಘಾತಿಸುತ್ತ ಸುರಪನದರನೆಸೆದ ಕೋಲ್ಗಳಾ || ೨ ||
ಬಿಟ್ಟ ಶರವ ಸುರವರೇಣ್ಯ ತರಿಯೆ ದನುಜನೂ | ತಟ್ಟನೈದುತಾತನೆದೆಯ ಮೆಟ್ಟಲಿದರನೂ ||
ನಿಟ್ಟಿಸುತ್ತ ಮಿಕ್ಕ ಸುರರು ಕಾಣುತಾಹವಾ | ಕೊಟ್ಟು ಸೋತು ಹರಿದರುಳುಹಿಕೊಂಡು ಪ್ರಾಣವಾ || ೩ ||
Leave A Comment