‘ಬ್ರಹ್ಮ ಸೃಷ್ಟಿಸಿದ ಯಾವ ಪ್ರಾಣಿಯಿಂದಲೂ ನನಗೆ ಸಾವು ಬರಬಾರದು.’

‘ಮನೆಯ ಒಳಗೆ ಸಾವು ಬರಬಾರದು, ಮನೆಯ ಹೊರಗೆ ಸಾವು ಬರಬಾರದು.’

‘ಹಗಲು ಸಾವು ಬರಬಾರದು, ರಾತ್ರಿ ಸಾವು ಬರಬಾರದು.’

‘ಯಾವ ಆಯುಧದಿಂದಲೂ ಸಾವು ಬರಬಾರದು.’

‘ಭೂಮಿಯ ಮೇಲಾಗಲಿ ಅಂತರಿಕ್ಷದಲ್ಲಾಗಲಿ ನಾನು ಸಾಯಬಾರದು.;

ಹೀಗೆ ಒಬ್ಬ ರಾಕ್ಷಸ ಬ್ರಹ್ಮನಿಂದ ವರ ಪಡೆದನಂತೆ. ಸಾವು ಬರುವುದೇ ಸಾಧ್ಯವಿಲ್ಲ, ನಾನು ಚಿರಂಜೀವಿ ಎಂದು ಕೊಬ್ಬಿದನಂತೆ. ದೇವತೆಗಳನ್ನೆಲ್ಲ ಹಿಂಸಿಸಿ, ತನಗೆ ಸಮಾನರೇ ಇಲ್ಲ ಎಂದು ಮೆರೆಯುತ್ತಿದ್ದನಂತೆ.

ಇವನಿಗೆ ವಿಷ್ಣು ಎಂಬ ಹೆಸರು ಕೇಳಿದರೇ ಮೈ ಎಲ್ಲ ಬೆಂಕಿ.

ಇಂತಹ ವರ ಪಡೆದಿದ್ದವನಿಗೂ ಅವನ ಅಹಂಕಾರಕ್ಕೆ ತಕ್ಕ ಶಿಕ್ಷೆಯಾಯಿತು, ಸಾವು ಬಂದಿತು. ಅವನ ಕೆಟ್ಟತನದಿಂದ ನಡುನಡುಗುತ್ತಿದ್ದ ಜನರಿಗೂ ದೇವತೆಗಳಿಗೂ ಬಿಡುಗಡೆ ಬಂದಿತು.

ಈ ಕಥೆಯನ್ನು ‘ಭಾಗವತ’ದಲ್ಲಿ ಹೇಳಿದೆ. ‘ಭಾಗವತ’ ಹಿಂದೂಗಳಿಗೆ ಪವಿತ್ರವಾದ ಒಂದು ಗ್ರಂಥ. ಇದರಲ್ಲಿ ಮಹಾದೈವಭಕ್ತರಾದ ಪುಣ್ಯಚೇತನರ ಕಥೆಗಳಿವೆ.

ಹಿರಣ್ಯಕಶಿಪುವಿನ ಶಕ್ತಿ-ಕ್ರೌರ್ಯಗಳಿಂದ ಜಗತ್ತನ್ನು ದೇವತೆಗಳೂ ಕಾಪಾಡಬಾರದೆ ಹೋದರಂತೆ. ಕಡೆಗೆ ಕಾಪಾಡಿದುದು ಒಬ್ಬ ಹುಡುಗನ ನಿರ್ಮಲವಾದ, ಅಚಲವಾದ ಭಕ್ತಿ. ಈ ಹುಡುಗನೇ ಪ್ರಹ್ಲಾದ.

ಬ್ರಹ್ಮನಿಂದ ಅಂತಹ ವರಗಳನ್ನು ಪಡೆದಿದ್ದವನಿಗೆ ಸಾವು ಹೇಗೆ ಬಂತು? ಪುಟ್ಟ ಹುಡುಗ ಏನು ಮಾಡಿದ?

ತುಂಬ ಸ್ವಾರಸ್ಯದ ಕಥೆ ಪ್ರಹ್ಲಾದನದು.

ನೀನು ಏನು ಕಲಿತೆ, ಮಗೂ?”

“ಶತ್ರು ಯಾರು, ಮಿತ್ರ ಯಾರು?” ಪುಟ್ಟ ಪ್ರಹ್ಲಾದನ ಮನಸ್ಸನ್ನು ಈ ಸಮಸ್ಯೆ ಕೆಣಕುತ್ತಿತ್ತು. ಶಾಂತ ಸ್ವಭಾವದ ಸುರುಳಿಗುರುಳಿನ ಸುಂದರನಾದ ಆ ಬಾಲಕ ಗುರುಕುಲದ ಮುಂದುಗಡೆ ಓಡಾಡುತ್ತ ಅನ್ಯಮನಸ್ಕನಾಗಿದ್ದ. ಅದು ರಾಕ್ಷಸರ ಗುರುಗಳಾದ ಶುಕ್ರಾಚಾರ್ಯರ ಪುತ್ರರಾದ ಚಂಡ-ಅಮರ್ಕರ ಗುರುಕುಲ. ಪ್ರಹ್ಲಾದರೊಡನೆ ಇತರ ದೈತ್ಯ ಬಾಲಕರು ಅಲ್ಲಿ ವಿದ್ಯೆಯನ್ನು ಕಲಿಯುತ್ತಿದ್ದರು. ಗಂಭೀರ ಸ್ವಭಾವದವನೂ ವಿನೀತನೂ ಆದ ಪ್ರಹ್ಲಾದನನ್ನು ಕಂಡರೆ ಗುರುಗಳಿಗೆ ತುಂಬ ಮೆಚ್ಚುಗೆ. ಅಲ್ಲದೆ ಅವನು ಮಹಾ ಪ್ರಭಾವಶಾಲಿಯಾದ ದೈತ್ಯರಾಜ ಹಿರಣ್ಯಕಶಿಪುವಿನ ಕುಮಾರ. ಹಿರಣ್ಯಕಶಿಪುವೇನು ಸಾಮಾನ್ಯನೇ? ಬ್ರಹ್ಮನನ್ನು ಮೆಚ್ಚಿಸಿ ವರಗಳನ್ನು ಪಡೆದವನು. ದಿಕ್ಕುಗಳನ್ನು ಕಾಯುವ ದೇವತೆಗಳು ದಿಕ್ಪಾಲಕರನ್ನು ಸದೆಬಡೆದವನು. ದೇವತೆಗಳಿಗೆ ಅವನೆಂದರೆ ನಡುಕ. ಅಂತಹ ರಾಕ್ಷಸನ ಮಗ ಪ್ರಹ್ಲಾದ. ದೈತ್ಯಗುರು ಶುಕ್ರಾಚಾರ್ಯರಿಗೆ ಇದರಿಂದ ಹೆಚ್ಚಿನ ಅಭಿಮಾನ. ಆದರೇನು? ಅವರ ಪಾಠ-ಪ್ರವಚನಗಳನ್ನು ಕೇಳುತ್ತ ಪ್ರಹ್ಲಾದ ಮನದಲ್ಲೇ ಚಿಂತಿಸುತ್ತಿದ್ದ. ಇವರು ಹೇಳುತ್ತಿರುವುದೇನು? ಲೋಕವನ್ನೆಲ್ಲ ಹರಿ ವ್ಯಾಪಿಸಿ ಕೊಂಡಿದ್ದಾನೆ. ಚರಾಚರ ಪ್ರಾಣಿಗಳಲ್ಲಿ ಅಡಗಿದ್ದಾನೆ. ನಾವೆಲ್ಲ ಅವನ ಅಂಶಗಳು. ಹೀಗಿರುವಾಗ ನಮ್ಮಲ್ಲಿ ಶತ್ರುಗಳಾರು? ಮಿತ್ರರಾರು? ನಮಗೇತರ ಭಯ?

ಅಷ್ಟರಲ್ಲೇ ಅರಮನೆಗೆ ಕುಮಾರನನ್ನು ಕಳಿಸಬೇಕೆಂದು ಅಪ್ಪಣೆಯಾಯಿತು. ಪ್ರಹ್ಲಾದ ಎಂದರೆ ತಂದೆಗೆ ಬಹು ಮುದ್ದು. ಅವನ ವಿದ್ಯಾಭ್ಯಾಸ ಹೇಗೆ ನಡೆದಿದೆ, ಮಗ ಏನು ಕಲಿತಿದ್ದಾನೆ, ತಿಳಿಯಬೇಕು ಎಂದು ತಂದೆಗೆ ಆಸೆ. ಹಿರಣ್ಯಕಶಿಪುವಿನ ಸಿಂಹಾಸನವನ್ನು ಸಮೀಪಿಸಿದ ಪ್ರಹ್ಲಾದ. ಹಿರಣ್ಯಕಶಿಪು ಮಗನನ್ನು ಎಷ್ಟೋ ಪ್ರೀತಿಯಿಂದ ಕರೆದು ತೊಡೆಯ ಮೇಲೆ ಕೂರಿಸಿಕೊಂಡು ಮುದ್ದು ಮಾಡುತ್ತಾ ಕೇಳಿದ: “ಮಗು ನೀನು ಗುರುಗಳ ಹತ್ತಿರ ಏನೇನು ವಿದ್ಯೆ ಕಲಿತೆಯೋ ಹೇಳು ನೋಡೋಣ.” ಆಗ ಬಾಲಕನು, “ಅಪ್ಪಾ, ಇವನು ಮಿತ್ರ ಅವನು ಶತ್ರು ಎನ್ನುತ್ತ ಅವರು ಕಲಿಸುವ ವಿದ್ಯೆ ಸರಿಬೀಳಲಿಲ್ಲ. ಇದೆಲ್ಲವನ್ನೂ ಬಿಟ್ಟು ಅಡವಿಗೆ ಹೋಗಿ ಶ್ರೀಹರಿಯ ಧ್ಯಾನ ಮಾಡುವುದು ನನಗೆ ಉತ್ತಮವೆಂದು ಕಾಣಿಸುತ್ತದೆ” ಎಂದ. ಇದನ್ನು ಕೇಳಿ ರಕ್ಕಸನ ಎದೆಯಲ್ಲಿ ಕಸಿವಿಸಿ ಆಯಿತು. ಶ್ರೀಹರಿ-ವಿಷ್ಣು ತನ್ನ ಶತ್ರು, ಅವನ ಹೆಸರು ಮಗನ ಬಾಯಲ್ಲಿ! ಅವನ ಧ್ಯಾನ ಮಗನ ಮನಸ್ಸಿನಲ್ಲಿ!

ಆದರೂ ನಗುಮುಖದಿಂದಲೇ ಮಗುವನ್ನು ಕಳಿಸಿಕೊಟ್ಟು ಗುರುಗಳನ್ನು ಬರಹೇಳಿದ. “ಸ್ವಾಮಿ, ನಿಮ್ಮ ಗುರುಕುಲದಲ್ಲಿ ಯಾರೋ ಶತ್ರುಗಳು ಸೇರಿಕೊಂಡು ನನ್ನ ಎಳೆಯ ಮಗನಿಗೆ ವಿಷ್ಣುವಿನ ಮೇಲೆ ಭಕ್ತಿ ಉಂಟಾಗುವಂತೆ ಮಾಡಿದ್ದಾರೆ. ನೀವು ಸ್ವಲ್ಪ ಎಚ್ಚರಿಕೆಯಿಂದ ಅವನ ಮನಸ್ಸನ್ನು ತಿದ್ದಿರಿ” ಎಂದು ಹೇಳಿ ಕಳುಹಿಸಿದ.

ಗುರುಗಳಾದ ಚಂಡ-ಅಮರ್ಕರಿಬ್ಬರೂ ಶ್ರೀಹರಿಯೇ ಪ್ರಹ್ಲಾದನ ಆರಾಧ್ಯದೈವವೆಂದು ತಿಳಿದು ಬೆದರಿದರು. ಅವನನ್ನು ಸಮೀಪಕ್ಕೆ ಕರೆದು ಅನುನಯದಿಂದ ನುಡಿಸುತ್ತ ಕೇಳಿದರು: “ಮಗು ಸುಳ್ಳು ಹೇಳಬೇಡ. ನಿಜವಾದ ಸಂಗತಿ ಹೇಳು. ಇಲ್ಲಿನ ಯಾವ ಹುಡುಗನಿಗೂ ಇಲ್ಲದ ಈ ಬುದ್ಧಿ ನಿನಗೆಲ್ಲಿಂದ ಬಂತು? ಯಾರಾದರೂ ಬೇರೆಯವರು ಹೇಳಿಕೊಟ್ಟರೆ? ಅಥವಾ ನಿನಗೇ ಈ ಬುದ್ಧಿ ಹುಟ್ಟಿದೆಯೋ?” ಆಗ ಪ್ರಹ್ಲಾದ ಹೆಳಿದ: ‘ಗುರುಗಳೇ, ನಿಮ್ಮ ಮಾತೇ ನನಗೆ ಅರ್ಥವಾಗುತ್ತಿಲ್ಲ. ನಾನು ಬೇರೆ, ಇತರರು ಬೇರೆಯವರು ಎಂಬ ಯೋಚನೆಯೇ ಬರಿಯ ಮಾಯೆ. ನನಗೆ ನಾರಾಯಣನ ಕರುಣೆಯಿಂದ ಆ ಮಾಯೆ ತೊಲಗಿದೆ. ನನ್ನಲ್ಲಿಯೇ ಇಂತಹ ತಿಳುವಳಿಕೆ ಹುಟ್ಟಿತೇ ಹೊರತು ಇತರರಿಂದಲ್ಲ.”

ಈ ಮಾತನ್ನು ಕೇಳಿ ಅವರು ಇನ್ನೂ ಕಂಗೆಟ್ಟರು. “ಎಲಾ, ಪಾಪಿ! ನೀನು ನಮ್ಮ ರಾಕ್ಷಸರ ಕುಲಕ್ಕೆ ಒಂದು ಕಳಂಕ. ಆ ಹರಿ ಎಂಬುವನು ರಾಕ್ಷಸರ ಕುಲವನ್ನೆಲ್ಲ ಕಡಿಯುವ ಕೊಡಲಿ ಎಂಬುದು ತಿಳಿಯದೆ? ಆತನೇ ನಿಮ್ಮ ಚಿಕ್ಕಪ್ಪನನ್ನು ಕೊಂದವನು” ಎಂದು ಮುಂತಾಗಿ ಗದರಿದರು. ಹುಡುಗನಿಗೆ ಬೇರೆ ವಿಷಯಗಳನ್ನು ಹೇಳಿಕೊಟ್ಟರೆ ಅವನು ಶ್ರೀಹರಿಯನ್ನು ಮರೆಯಬಹುದು ಎಂದು ಅವರ ಚಪಲ. ಸಾಮ, ದಾನ, ಭೇದ, ದಂಡವೇ ಮುಂತಾದ ರಾಜನೀತಿಗಳನ್ನು ಬೋಧಿಸಿ ಆ ಹುಡುಗನಲ್ಲಿ ನೆಲಸಿದ್ದ ವಿಷ್ಣುಭಕ್ತಿ ತಪ್ಪಿಸಲು ಬಹುವಾಗಿ ಪ್ರಯತ್ನಪಟ್ಟರು.

ಆದರೂ ಸ್ವಲ್ಪ ಭಯ ಅವರಿಗಿದ್ದೇ ಇತ್ತು. ಆದುದರಿಂದ ದೈತ್ಯರಾಜನ ಬಳಿಗೆ ಕಳಿಸುವ ಮೊದಲು ತಾಯಿಯಾದ ಕಯಾದುವಿನಲ್ಲಿಗೆ ಕಳಿಸಿದರು. ಆಕೆ ಪ್ರಹ್ಲಾದನಿಗೆ ಮಂಗಳ ಸ್ನಾನ ಮಾಡಿಸಿ, ಅಲಂಕರಿಸಿ ಕಳಿಸಿದಳು. ಮಂಗಳಾಲಂಕೃತನಾಗಿದ್ದ ಪ್ರಹ್ಲಾದ ಬಹು ಮುದ್ದಾಗಿ ಕಾಣುತ್ತಿದ್ದ. ಅವನು ವಿನಯದಿಂದ ತಂದೆಯನ್ನು ಸಮೀಪಿಸಿ, ಭಕ್ತಿಯಿಂದ ಪಾದಗಳಿಗೆ ನಮಸ್ಕರಿಸಿದ. ಹಿರಣ್ಯಕಶಿಪು ತುಂಬ ಪ್ರೀತಿಯಿಂದ ಅವನನ್ನು ಎತ್ತಿ ಬಾಯ್ತುಂಬ ಹರಸಿ ಆನಂದದಿಂದ ತೊಡೆಯ ಮೇಲೆ ಕೂರಿಸಿಕೊಂಡ. ಪ್ರೀತಿಯಿಂದ ಕೇಳಿದ: “ಮಗೂ, ನೀನು ಕಲಿತಿರುವ ವಿದ್ಯೆಗಳಲ್ಲಿ ಶ್ರೇಷ್ಠವಾದುದು ಯಾವುದು ?” ಪ್ರಹ್ಲಾದ ತನ್ನ ಅಂತರಂಗದ ಮಾತುಗಳನ್ನೇ ಒಪ್ಪಿಸಿದರು. “ಅಪ್ಪಾ, ಶ್ರೀಹರಿಯ ಮಂಗಳವಾದ ಹೆಸರನ್ನು ಕಿವಿಯಿಂದ ಕೇಳುವುದು, ನಾಲಿಗೆಯಿಂದ ಹಾಡುವುದು, ಮನಸ್ಸಿನಲ್ಲಿ ಧ್ಯಾನ ಮಾಡುವುದು, ಆತನನ್ನೇ ಪೂಜಿಸುವುದು, ವಂದಿಸುವುದು, ಆತನ ದಾಸನಂತೆ ಇರುವುದು, ಸ್ನೇಹಿತನಂತೆ ಇರುವುದು, ತನ್ನನ್ನೇ ಅವನಿಗೆ ಒಪ್ಪಿಸುವುದು – ಈ ವಿಧವಾಗಿ ಅವನಲ್ಲಿ ಭಕ್ತಿಯನ್ನು ಪಡೆಯುವುದು, ನಡೆಸುವುದು ಅತ್ಯುತ್ತಮವಾದ ವಿದ್ಯೆ.”

ಮಗನ ಮಾತನ್ನು ಕೇಳಿ ಹಿರಣ್ಯಕಶಿಪುವಿಗೆ ಮೈಯಲ್ಲಿ ಬೆಂಕಿ ಹರಿದಂತಾಯಿತು. ಆತನು ಅವನ ಗುರುಗಳನ್ನು ಕರೆಸಿ “ಅಯ್ಯಾ ನೀಚ ಬ್ರಾಹ್ಮಣರೇ, ನನ್ನ ಮಗನಿಗೆ ಎಂಥ ಕೆಟ್ಟ ವಿದ್ಯೆಗಳನ್ನು ಕಲಿಸಿ ಹಾಳು ಮಾಡಿದ್ದೀರಲ್ಲ! ಶತ್ರುಗಳ ಕಡೆ ಸೇರಿಕೊಂಡ ನಿಮಗೆ, ನನ್ನ ಭಯ ಸ್ವಲ್ಪವೂ ಇಲ್ಲವೆಂದು ತೋರುತ್ತದೆ” ಎಂದು ಗದರಿದನು.

ಪಾಪ, ಅವರಿಗೆ ಹೃದಯದ ತುಂಬ ದುಃಖ, ಭಯ. ಗಡಗಡೆ ನಡುಗುತ್ತ, ತಲೆಬಾಗಿ ಕೈಮುಗಿದು ಬಿನ್ನಹ ಮಾಡಿದರು: “ಮಹಾರಾಜ! ದಯವಿಟ್ಟು ಶಾಂತನಾಗು. ಇದನ್ನು ನಾವು ಕಲಿಸಲಿಲ್ಲ. ಇದು ತಾನಾಗಿಯೇ ಬಂದ ವಿದ್ಯೆ ಎಂದು ರಾಜಕುಮಾರನೇ ಹೇಳುತ್ತಿದ್ದಾನೆ. ನಮ್ಮ ಮೇಲೆ ದ್ರೋಹವನ್ನು ಹೊರಿಸಬೇಡ.”

ದೈತ್ಯರಾಜನ ಕೋಪ ಮಗನ ಕಡೆಗೆ ತಿರುಗಿತು. “ನಿರ್ಭಾಗ್ಯನಾದ ನಿನಗೆ ಇಂತಹ ದುರ್ಬುದ್ಧಿ ಎಲ್ಲಿಂದ ಬಂದಿತು” ಎಂದು ಗುಡುಗಿದನು. ಪ್ರಹ್ಲಾದ ಸ್ವಲ್ಪವೂ ಭಯಪಡಲಿಲ್ಲ. “ಅಪ್ಪಾ, ಇದು ದುರ್ಬುದ್ಧಿಯಲ್ಲ .  ಇದನ್ನು ಯಾರೂ ಹೇಳಿಕೊಡಲಿಲ್ಲ. ನಾನು ಬೇರೆ,  ಇತರರು ಬೇರೆ ಎಂಬುದೇ ತಪ್ಪು  ಭಾವನೆ. ಶ್ರೀಹರಿಯ ಕೃಪೆಯಿಂದ ನನಗೆ ಈ ಒಳ್ಳೆಯ ಬುದ್ಧಿ ಬಂದಿದೆ” ಎಂದು ಹೇಳಿದ. ಜೊತೆಗೆ, “ಅಪ್ಪಾ, ಕುರುಡರನ್ನು ಕುರುಡರು ನಡೆಸಿದರೆ ಹಳ್ಳವೇ ಗತಿ. ಹರಿಯ ಅನುಗ್ರಹವಿಲ್ಲದ ಜನ ಅವನನ್ನು ನಿಂದಿಸುತ್ತಾರೆ, ಸಹಜವೇ”  ಎಂದ.

ಇವನನ್ನು ಕೊಲ್ಲಲೇಬೇಕು

ಮಗನ ಮಾತುಗಳನ್ನು ಕೇಳಿ ಹಿರಣ್ಯಕಶಿಪು ಕೋಪದಿಂದ ನಡುಗಿದ. ಆತ ಅವನನ್ನು ತೊಡೆಯಿಂದ ಕೆಳಕ್ಕೆ ತಳ್ಳಿ, “ಏನು ನೋಡುತ್ತೀರಿ? ಈ ದುಷ್ಟ ನನ್ನ ಕಣ್ಣೆದುರಿಗೆ ಇರುವುದೇ ಬೇಡ. ಎಳೆದುಕೊಂಡು ಹೋಗಿ. ಕೊಂದುಬಿಡಿ. ಶರೀರದಲ್ಲಿ ಹುಟ್ಟಿದ ರೋಗ ಶರೀರವನ್ನೇ ಸುಡುವಂತೆ ಈ ಪಾಪಿ ಹುಟ್ಟಿದ ವಂಶಕ್ಕೇ ಮೃತ್ಯುವಾಗಿದ್ದಾನೆ. ಇವನನ್ನು ವಿಷದಿಂದಲೋ ಬೆಂಕಿಯಿಂದಲೋ ಶೂಲದಿಂದಲೋ ತೀರಿಸಿಬಿಡಿ”  ಎಂದು ಅರಚಿದನು.

ಭಯಂಕರಾಕಾರರೂ ಆಯುಧಪ್ರಾಣಿಗಳೂ ಆದ ರಕ್ಕಸರಿಗೆ ಅರಸರ ಅಪ್ಪಣೆಯನ್ನು ಕೇಳಿ ದಿಗ್ಭ್ರಮೆ. ರಾಜಕುಮಾರನನ್ನು ಕೊಲ್ಲುವುದೇ? ಆದರೂ ಅವನ ಆಜ್ಞೆಯನ್ನು ಮೀರುವ ಧೈರ್ಯವಿಲ್ಲದೆ ಬಾಲಕನನ್ನು ಸಮೀಪಿಸಿದರು.  ಪುಟ್ಟ ಹುಡುಗ ಹರಿಯನ್ನೆ ಧ್ಯಾನ ಮಾಡುತ್ತ ನಿಂತಿದ್ದ. ಅವರು ಅವನನ್ನು ಶೂಲಗಳಿಂದ ತಿವಿದರು. ಆದರೆ ಪ್ರಹ್ಲಾದನ ಮೈಯನ್ನು ಅವು ತಾಗಲೇ ಇಲ್ಲ. ಲಕೂದಲೂ ಸಹ ಕೊಂಕಾಗದೆ ಅವನು ನಿಂತಿದ್ದನು. ಯಾವ ಆಯುಧವೂ ಅವನನ್ನೇನೂ ಮಾಡಲಾಗದೆ ಹೋಯಿತು. ಹಿರಣ್ಯಕಶಿಪುವಿಗೆ ಆಶ್ಚರ್ಯ. ಮರುಕ್ಷಣವೇ ಅವನು ವಿಷ್ಣುಭಕ್ತ ಎಂಬುದು ನೆನಪಾಗಿ ಕಣ್ಣು ಕೆಂಪಾಯಿತು.

‘ಆನೆಗಳನ್ನು ತನ್ನಿ. ಇವನನ್ನು ತುಳಿಸಿಹಾಕಿ ಬಿಡೋಣ’ ಎಂದನು.

ರಾಜನ ಕಠೋರ ಆಜ್ಞೆಯನ್ನು ಕೇಳಿದವರಿಗೆಲ್ಲ ಮೈ ನಡುಗಿತು.

ಎಳೆಯ ಪ್ರಹ್ಲಾದ ಬೆದರದೆ, ಬೆಚ್ಚದೆ ನಿಂತ.

ಅರಮನೆಗೆ ಆನೆಗಳನ್ನು ತರಿಸಿದರು. ರಾಜನೇ ಎದುರಿಗೆ ನಿಂತ. ದ್ವೇಷದಿಂದ ಅವನ ಹೃದಯ ಅಷ್ಟು ಕಲ್ಲಾಗಿತ್ತು. ಹುಡುಗನ ಮೇಲೆ ಆನೆ ಹತ್ತಿತು.

ಆಶ್ಚರ್ಯವೋ ಆಶ್ಚರ್ಯ! ಹುಡುಗನಿಗೆ ಏನೂ ಆಗಲಿಲ್ಲ.

ಹಿರಣ್ಯಕಶಿಪುವಿಗೆ ಕೋಪ ಉಕ್ಕಿತು, ಅಪಮಾನವಾಯಿತು. ಇನ್ನೂ ರೋಷಗೊಂಡು ನದಿಯಲ್ಲಿ ಮುಳುಗಿಸಿದಾಗ, ಪ್ರಹ್ಲಾದ ‘ಹರಿಹರಿ’ ಎನ್ನುತ್ತ ಆನಂದದಿಂದ ತೇಲುತ್ತ ಇದ್ದನು. ತಂದೆಗೆ ಅಪಮಾನ. ಈ ಹುಡುಗನನ್ನು ಕೊಲ್ಲಲೇಬೇಕು ಎಂಬ ಛಲ ನೆತ್ತಿಯಿಂದ ಕಾಲಿನವರೆಗೆ ತುಂಬಿತು. ವಿಷ ಉಣಿಸಿದರೂ ಹರಿಭಕ್ತನಾದ ಪ್ರಹ್ಲಾದನಿಗೆ ಅದು ಅಮೃತದಂತಾಯಿತು. ಬೆಟ್ಟದ ಕಿಬ್ಬಿಗಳಿಂದ ತಳ್ಳಿಸಿದರೂ ರಾಜಕುಮಾರ ಹೂವಿನಂತೆ ಹಗುರಾಗಿ ಏನೂ ಘಾಸಿಯಾಗದೆ ಎದ್ದು ಬಂದನು. ಬೆಂಕಿಗೆ ಹಾಕಿಸಿದಾಗ ಅಗ್ನಿಪುರುಷನಂತೆ ಬೆಳಗುತ್ತಾ ಕುಳಿತನು. ಮಳೆ, ಗಾಳಿ, ಹಿಮ, ಬಿಸಿಲು ಯಾವುದರಿಂದಲೂ ಅವನ ಕ್ಷೇಮಕ್ಕೆ ಎಳ್ಳಷ್ಟಾದರೂ ಭಂಗ ಉಂಟಾಗಲಿಲ್ಲ.

ಹಿರಣ್ಯಕಶಿಪುವು ಸೇವಕರಿಗೆ “ಈ ದುಷ್ಟನನ್ನು ಎಳೆದುಕೊಂಡು ಹೋಗಿ, ಕೊಂದುಬಿಡಿ” ಎಂದು ಅರಚಿದನು.

ಹಿರಣ್ಯಕಶಿಪುವಿಗೆ ಇದನ್ನು ಕಂಡು ಅತ್ಯಾಶ್ಚರ್ಯವಾಯಿತು. “ಚೋಟುದ್ದದ ಹುಡುಗ! ಇನ್ನೂ ಐದೇ ವರ್ಷದವನು!! ಅವನಲ್ಲಿ ಇಂತಹ ಶಕ್ತಿಯೇ! ಭಲಾ,ನನ್ನಂತಹ ತಂದೆಗೆ ತಕ್ಕ ಮಗನೆ! ಆದರೆ? ಇವನ ವಿಷ್ಣುಭಕ್ತಿಯೋ? ಹಿರಣ್ಯಾಕ್ಷನನ್ನು ಕೊಂದ ಆ ನೀಚನಲ್ಲಿ ಇವನಿಗೆ ಭಕ್ತಿಯೇ? ಏನು ಮಾಡಲಿ? ನನ್ನ ಶತ್ರುವಿನ ಭಕ್ತ ಇವನು, ಈ ಹುಡುಗನಿಂದಲೇ ನನಗೆ ಸಾವು ಬಂದೀತೋ!” ಎಂದು ಚಿಂತೆಯಲ್ಲಿ ಮುಳುಗಿದನು.

ನಾನು ನಾರದರ ಶಿಷ್ಯ

ಆಗ ಆಚಾರ್ಯಪುತ್ರರು ಏಕಾಂತದಲ್ಲಿ ರಾಜನನ್ನು ಸಮೀಪಿಸಿ, “ದೈತ್ಯೇಂದ್ರ, ಮೂರು ಲೋಕದಲ್ಲಿಯೂ ನೀನು ಗೆಲ್ಲದವರು ಇಲ್ಲ. ಅಂತಹ ಶೂರನಾಗಿ ಈ ಹುಡುಗನನ್ನು ಕುರಿತು ಚಿಂತೆ ಮಾಡುವುದೇ? ಇಷ್ಟರಲ್ಲೇ ನಮ್ಮ ತಂದೆ ಶುಕ್ರಾಚಾರ್ಯರು ಬರುವರು. ಅವರು ಈತನನ್ನು ಹೇಗಾದರೂ ತಿದ್ದುವರು. ಅಲ್ಲದೆ ಇವನಿನ್ನೂ ಹುಡುಗ. ಬೆಳೆಯುತ್ತ ವಿವೇಕಿ ಆಗಬಹುದು. ಅಲ್ಲಿಯವರೆಗೂ ಪ್ರಹ್ಲಾದನು ನಮ್ಮ ಬಳಿಯಲ್ಲಿರಲಿ,” ಎಂದರು. ಅದಕ್ಕೆ ದಾನವಚಕ್ರವರ್ತಿ ಒಪ್ಪಿ ಮಗನನ್ನು ಅವರೊಡನೆ ಕಳುಹಿಸಿದನು. “ಅಯ್ಯಾ, ಇನ್ನು ಮುಂದೆ ಇವನಿಗೆ ಸಂಸಾರಿಗಳ ನಡವಳಿಕೆಯನ್ನೂ ರಾಜಧರ್ಮವನ್ನೂ ಬೋಧಿಸಿರಿ” ಎಂದು ಅಪ್ಪಣೆ ಮಾಡಿದನು.

ಪ್ರಹ್ಲಾದ ಮತ್ತೆ ಗುರುಕುಲವನ್ನು ಸೇರಿದ. ಆಚಾರ್ಯರು ರಾಜ್ಯವನ್ನು ಹೇಗೆ ಆಳಬೇಕು, ಶತ್ರುಗಳನ್ನು ಹೇಗೆ ಗೆಲ್ಲಬೇಕು ಇಂತಹ ವಿಷಯಗಳನ್ನು ಕಲಿಸತೊಡಗಿದರು. ಅವನಿಗೆ ಇವುಗಳಲ್ಲಿ ಏನೂ ಆಸಕ್ತಿ ಹುಟ್ಟಲಿಲ್ಲ. ಹೀಗೆಯೇ ಸ್ವಲ್ಪ ಕಾಲ ಕಳೆಯಿತು

ಒಮ್ಮೆ ಪ್ರಹ್ಲಾದನ ಗುರುಗಳಿಬ್ಬರೂ ಸ್ವಂತ ಕೆಲಸಗಳಿಗಾಗಿ ಮನೆಗೆ ಹೋಗಿದ್ದರು. ಹುಡುಗರಿಗೆ ಸ್ವಲ್ಪ ಹಾಯಾಗಿ ಆಡೋಣ ಎನ್ನಿಸಿತು. ಅವರು ಪ್ರಹ್ಲಾದನನ್ನೂ ಆಟಕ್ಕೆ ಕರೆದರು. ಅವನು ಮುಗುಳ್ನಗುತ್ತ ತನ್ನ ಮೃದು ಮಧುರವಾದ ಧ್ವನಿಯಲ್ಲಿ ಹೇಳಿದ: “ಸ್ನೇಹಿತರೆ, ಮನುಷ್ಯಜನ್ಮ ಸಿಕ್ಕುವುದೇ ಬಹು ಕಷ್ಟ. ಸಿಕ್ಕಿರುವಾಗ ಹಾಳು ಮಾಡಿಕೊಳ್ಳಬಾರದು. ನಾವು ಸುಖವಾಗಿ ಇರಬೇಕಾದರೆ ಚಿಕ್ಕಂದಿನಿಂದಲೂ ಶ್ರೀಹರಿಯ ಭಕ್ತರಾಗಬೇಕು. ನಮ್ಮ ಮೇಲ್ಮೆಗೆ ಅದೊಂದೇ ದಾರಿ. ಭಗವಂತನಿಗೆ ಸಂತೋಷವಾಗುವಂತೆ ನಡೆದುಕೊಂಡರೆ ಆತ ನಮಗೆ ಏನನ್ನು ಬೇಕಾದರೂ ಕೊಡಬಲ್ಲ. ಸಾಕ್ಷಾತ್‌ ನಾರದಮಹರ್ಷಿಯೇ ನನಗಿದನ್ನು ತಿಳಿಸಿದ್ದಾನೆ. ನಾನು ಕಲಿಯುತ್ತಿರುವ ಈ ಹಾಳು ವಿದ್ಯೆಯಿಂದ ಏನು ಪ್ರಯೋಜನ? ಅನ್ಯಾಯವಾಗಿ ನಮ್ಮ ಆಯಸ್ಸು ಹಾಳಾಗುತ್ತದೆ.” ಹುಡುಗರಿಗೆ ಆಶ್ಚರ್ಯವಾಯಿತು. ಪ್ರಹ್ಲಾದನೂ ತಮ್ಮ ಜೊತೆಗೇ ಓದುವವನು. ಚಂಡ-ಅಮರ್ಕರೇ ಎಲ್ಲರಿಗೂ ಗುರುಗಳಲ್ಲವೆ? ಪ್ರಹ್ಲಾದನಿಗೆ ನಾರದರು ಯಾವಾಗ ಗುರುಗಳಾಗಿದ್ದರು? ಅವರು ಪ್ರಹ್ಲಾದನನ್ನು ಕೇಳಿದರು: “ರಾಜಕುಮಾರ, ನೀನು ನಮ್ಮ ಜೊತೆಯಲ್ಲಿಯೆ ಇದ್ದೀಯೆ? ನಿನಗೆ ನಾರದರು ಎಲ್ಲಿ ಸಿಕ್ಕಿದರು? ಯಾವಾಗ ಬೋಧಿಸಿದರು?” ಅವರ ಸಂದೇಹ ನಿವಾರಣೆಗಾಗಿ ಪ್ರಹ್ಲಾದ ಹಿಂದಿನ ಕಥೆಯನ್ನು ಹೇಳಿದ.

ಅದೊಂದು ಸ್ವಾರಸ್ಯವಾದ ಕಥೆ. “ಹಿಂದೆ ನಮ್ಮ ತಂದೆ ತಪಸ್ಸಿಗಾಗಿ ಮಂದರ ಪರ್ವತಕ್ಕೆ ಹೋಗಿದ್ದುದು ನಿಮಗೆಲ್ಲ ಗೊತ್ತೇ ಇದೆ. ಆಗ ದೇವತೆಗಳು ಇದೇ ಸುಸಮಯವೆಂದು ರಾಕ್ಷಸರ ಮೇಲೆ ದಂಡೆತ್ತಿ ಬಂದರು. ಘೋರ ಯುದ್ಧವಾಯಿತು. ರಾಕ್ಷಸರಿಗೆ ತಮ್ಮ ರಾಜನ ರಕ್ಷಣೆ ಇಲ್ಲ. ಸೋತು ದಿಕ್ಕುದಿಕ್ಕಿಗೆ ಓಡಿಹೋದರು. ದೇವತೆಗಳು ಅರಮನೆಯನ್ನು ಸೂರೆ ಮಾಡಿದರು. ದೇವೇಂದ್ರ ನಮ್ಮ ತಾಯಿ ಕಯಾದುವನ್ನು ಕೈಸೆರೆ ಹಿಡಿದು ಎಳೆದೊಯ್ಯುತ್ತಿದ್ದ. ಆಕೆ ಗೊಳೋ ಎಂದು ಅಳುತ್ತಿದ್ದಳು. ಆಗ ನಾರದ ಮಹರ್ಷಿಗಳು ಅತ್ತ ಬಂದರು. ‘ಅಯ್ಯಾ, ದೇವರಾಜ, ಇದೆಂತಹ ಅನ್ಯಾಯ! ನೀನು ಹೀಗೆ ಮಾಡಬಹುದೆ? ಈಕೆ ತುಂಬ ಒಳ್ಳೆಯವಳು, ಇವಳನ್ನು ಹೀಗೆ ಎಳೆದೊಯ್ಯುತ್ತಿದ್ದೀಯಲ್ಲ! ಮೊದಲು ಈಕೆಯನ್ನು ಬಿಟ್ಟುಬಿಡು’ ಎಂದರು. ಆಗ ದೇವೇಂದ್ರ ಹೇಳಿದ: ‘ಸ್ವಾಮಿ, ಈಕೆಯ ವಿಚಾರದಲ್ಲಿ ನನಗೆ ಯಾವ ಕೆಟ್ಟ ಭಾವನೆಯೂ ಇಲ್ಲ. ಈಕೆ ಈಗ ಗರ್ಭಿಣಿ. ಇವಳ ಮಗನೂ ತಂದೆ ಹಿರಣ್ಯಕಶಿಪುವಿನ ಹಾಗೆಯೇ ನಮಗೆ ವಿಪತ್ತನ್ನು ತರುತ್ತಾನೆ ಎಂದು ನನ್ನ ಭಯ. ಈಕೆಯನ್ನು ನಮ್ಮ ಮನೆಗೆ ಕರೆದೊಯ್ಯುತ್ತೇನೆ; ಮಗು ಹುಟ್ಟುತ್ತಲೇ ಮಗುವನ್ನು ಕೊಂದುಹಾಕಿ ಈಕೆಯನ್ನು ಬಿಟ್ಟುಬಿಡುತ್ತೇನೆ’ ಎಂದನು.

ಆಗ ನಾರದರು ನಕ್ಕರು. “ಅಯ್ಯಾ, ನಿನಗೆ ವಿಷಯ ತಿಳಿಯದು. ಈಕೆಯ ಮಗ ದೊಡ್ಡ ದೈವಭಕ್ತ. ಅವನನ್ನು ಕೊಲ್ಲುವುದು ನಿನಗೆ ಸಾಧ್ಯವಿಲ್ಲ. ಅಲ್ಲದೆ ಅಂತಹ ಕೆಲಸ ದೇವತೆಗಳ ರಾಜನಾದ ನಿನಗೆ ಯೋಗ್ಯವೇ?’ ಎಂದರು. ಅದನ್ನು ಕೇಳಿದ ದೇವೇಂದ್ರ ನನ್ನ ತಾಯಿಗೆ ನಮಸ್ಕರಿಸಿ ಆಕೆಯನ್ನು ಬಿಟ್ಟುಬಿಟ್ಟ. ನಾರದರು ಅವಳನ್ನು ತಮ್ಮ ಆಶ್ರಮಕ್ಕೆ ಕರೆದುಕೊಂಡು ಹೋದರು. ಆ ಕಾಲದಲ್ಲೇ ಅವರು ನಮ್ಮ ತಾಯಿಗೆ ಭಾಗವತ ಧರ್ಮವನ್ನು ಬೋಧಿಸಿದುದು. ತಾಯಿಯ ಹೊಟ್ಟೆಯಲ್ಲಿದ್ದ ನಾನು ಅದನ್ನು  ತಿಳಿದುಕೊಂಡೆ. ನಮ್ಮ ತಂದೆ ಬಂದ ಮೇಲೆ ನಮ್ಮ ತಾಯಿ ಅರಮನೆಗೆ ಹಿಂದಿರುಗಿದರೂ ಕಾಲ ಕಳೆದ ಹಾಗೆ ಆಕೆಗೆ ಭಾಗವತಧರ್ಮ ಮರೆತುಹೋಯಿತು. ನನಗೆ ಮಾತ್ರ ಅದು ಹೃದಯದಲ್ಲಿ ಸ್ಪಷ್ಟವಾಗಿ ನಟ್ಟು ನಿಂತಿದೆ. ಅದನ್ನು ಕೇಳಿದರೆ ನಿಮಗೆ ನನ್ನಂತೆಯೇ ಜ್ಞಾನ ಹುಟ್ಟುತ್ತದೆ” ಎಂದನು.

ಕಥೆ ಎಷ್ಟು ಸ್ವಾರಸ್ಯ ಅಲ್ಲವೆ? ಕೇಳಿ ಪ್ರಹ್ಲಾದನ ಸ್ನೇಹಿತರಿಗೂ ಸಂತೋಷವಾಯಿತು. ಹಾಗೆಯೇ ಇನ್ನೂ ತಿಳಿದುಕೊಳ್ಳಬೇಕು ಎನ್ನಿಸಿತು. “ಭಾಗವತ ಧರ್ಮ ಎಂದೆಯಲ್ಲ ಹಾಗೆಂದರೇನು?” ಎಂದು ಕೇಳಿದರು. ಪ್ರಹ್ಲಾದ ಹೇಳಿದ: “ಅದು ದೇವರ ಪ್ರೀತಿಯನ್ನು ಸಂಪಾದಿಸುವ ರೀತಿ. ದೇವರು ನಮ್ಮನ್ನು ಪ್ರೀತಿಸುವಂತೆ ಮಾಡಲು ಅನೇಕ ರೀತಿಗಳಿವೆ. ಅವುಗಳಲ್ಲಿ ತುಂಬ ಒಳ್ಳೆಯದು, ಸುಲಭವಾದದ್ದು ಭಾಗವತಧರ್ಮ. ದೇವರನ್ನು ಮನಸ್ಸು ಪೂರ್ತಿಯಾಗಿ ಪ್ರೀತಿಸಬೇಕು. ಯಾವಾಗಲೂ ಅವನನ್ನೆ ಸ್ಮರಿಸಬೇಕು. ಎಲ್ಲವೂ ಅವನಿಗೆ ಸೇರಿದುದು ಎಂದು ಯೋಚಿಸಬೇಕು. ನಡೆಯಬೇಕು. ಒಳ್ಳೆಯವರ ಜೊತೆಗೇ ಇರಬೇಕು. ಇದರಿಂದ ಮನಸ್ಸಿಗೆ ಸಂತೋಷ, ಶಾಂತಿ. ನಾರದರು ಇದನ್ನೇ ನನಗೆ ಹೇಳಿಕೊಟ್ಟರು.”

ಅವನ ಮಾತುಗಳನ್ನು ಕೇಳಿ ಉಳಿದ ಹುಡುಗರ ಮನಸ್ಸೂ ಒಲಿಯಿತು. ಅವರೂ ಹರಿಭಕ್ತರಾದರು.

ವರಾಹರೂಪಿ ವಿಷ್ಣು

ನಡೆದ ವಿಷಯ ಗುರುಗಳಿಗೆ ತಿಳಿಯಿತು. ದುಃಖ, ಕೋಪ ಎಲ್ಲ ತುಂಬಿತು. ಪ್ರಹ್ಲಾದನೊಬ್ಬ ಹರಿಭಕ್ತನಾದ ಎಂದೇ ರಾಜ ಸಿಟ್ಟಾಗಿದ್ದ, ಎಲ್ಲ ಹುಡುಗರೂ ಹರಿಭಕ್ತರಾದರೆಂದು ತಿಳಿದರೆ ಏನು  ಮಾಡುವನು? ಪ್ರಹ್ಲಾದನನ್ನು ಸಮೀಪಿಸಿ ಅನುನಯದಿಂದ, “ಮಗುವೆ, ನೀನು ಹೀಗೆ ಮಾಡಬಹುದೆ? ನಿಮ್ಮ ತಂದೆಗೆ ಶ್ರೀಮನ್ನಾರಾಯಣನಲ್ಲಿ ಎಷ್ಟು ದ್ವೇಷವೋ ನಗೆ ಗೊತ್ತಿಲ್ಲವೆ? ನಿನ್ನ ಚಿಕ್ಕಪ್ಪನಾದ ಹಿರಣ್ಯಾಕ್ಷನನ್ನು ವರಾಹರೂಪಿನಿಂದ ವಧಿಸಿದನಲ್ಲವೆ ಆ ಹರಿ?” ಎಂದು ಕೇಳಿದರು.

“ಹೇಳಿ ಆಚಾರ್ಯರೆ? ಅದೇನು?” ಪ್ರಹ್ಲಾದ ಕುತೂಹಲದಿಂದ ಕೇಳಿದ. ಆಗ ಗುರುಗಳು ಮರದ ನೆರಳನ್ನಾಶ್ರಯಿಸಿ ಬಾಲಕರನ್ನೆಲ್ಲ ಸುತ್ತ ಕರೆದುಕೊಂಡು, ಆದಿವರಾಹನನ್ನು ದೂಷಿಸುವಂತೆ ಶ್ರೀಮನ್ನಾರಾಯಣನ ಚರಿತ್ರೆಯನ್ನೇ ಹೇಳಲು ತೊಡಗಿದರು.

“ಕಶ್ಯಪ ಎಂಬುವನು ಒಬ್ಬ ಮಹರ್ಷಿ. ಅವನ ಹೆಂಡತಿ ದಿತಿದೇವಿಯ ಮಕ್ಕಳೇ ಹಿರಣ್ಯಕಶಿಪು ಮತ್ತು ಹಿರಣ್ಯಾಕ್ಷ . ಅವವು ಹುಟ್ಟಿದಾಗ ಅನೇಕ ಉತ್ಪಾತಗಳಾದವು. ದೇವತೆಗಳು ಭೀತಿಯಿಂದ ಕಂಪಸಿದರು. ಮಕ್ಕಳಿಬ್ಬರೂ ಭಯಂಕರ ಆಕಾರ ತಾಳಿ ದಿನದಿನಕ್ಕೂ ಬೆಳೆದು ಪರ್ವತಗಳಂತೆ ಆದರು. ತಮ್ಮನಾದ ಹಿರಣ್ಯಾಕ್ಷನು ಅಣ್ಣನಿಗಿಂತ ಬಲಶಾಲಿ. ಮತ್ತು ಮುತ್ತಿಗೆ ಹಾಕಿದುದು ದೇವಲೋಕಕ್ಕೆ! ಅವನನ್ನು ಕಾಣುತ್ತಲೇ ದೇವತೆಗಳೆಲ್ಲರೂ ಅಲ್ಲಲ್ಲಿಯೇ ಅಡಗಿಕೊಂಡರು. ಹಿರಣ್ಯಾಕ್ಷನು ಸಮುದ್ರರಾಜನಾದ ವರಣನನ್ನೇ ಯುದ್ಧಕ್ಕೆ ಕರೆದನು. ಆಗ ವರುಣನು, ‘ಅಯ್ಯಾ, ವೀರನೆ, ನಾನು ವಿರಾಗಿಯಾಗಿದ್ದೇನೆ, ಯುದ್ಧ ನನಗೆ ಬೇಕಿಲ್ಲ, ನಿನ್ನ ಜೊತೆಗೆ ಹೋರಾಡುವುದಕ್ಕೆ ಬೇರೆ ಯಾರಿಗೆ ಸಾಧ್ಯ? ಪರಮಾತ್ಮನೊಬ್ಬನಿಗೆ ಮಾತ್ರ ಸಾಧ್ಯ’ ಎಂದನು. ಆಗ ಹಿರಣ್ಯಾಕ್ಷನು ಹರಿಯನ್ನು ಹುಡುಕುತ್ತ ನಡೆದನು.”

 

ನರಸಿಂಹನು ಹಿರಣ್ಯಕಶಿಪುವನ್ನು ಉಗುರುಗಳಿಂದ ಬಗಿದುಹಾಕಿದ.

ಪ್ರಹ್ಲಾದ ಕಥೆಯನ್ನು ಕೇಳುತ್ತಿದ್ದ. ಗುರುಗಳು ಮುಮದೆ ಹೇಳಿದರು: “ಆ ವೇಳೆಗೆ ಪರಬ್ರಹ್ಮನ ಮೂಗಿನ ಹೊಳ್ಳೆಯಿಂದ ಒಂದು ವರಾಹ ಚಿಮ್ಮಿತು. ಮೊದಲು ಅದು ಬಹು ಚಿಕ್ಕದಾಗಿತ್ತು, ಒಂದೇ ಅಂಗುಲದಷ್ಟು ಗಾತ್ರ. ಆದರೆ ನೋಡುನೋಡುತ್ತಿರುವಂತೆಯೇ ಅದು ಪರ್ವತಾಕಾರವಾಗಿ ಬೆಳೆಯಿತು. ಸಮುದ್ರದಲ್ಲಿ ಮುಳುಗಿ ಅಲ್ಲಿ ಬಿದ್ದುಹೋಗಿದ್ದ ಭೂಮಿಯನ್ನು ತನ್ನ ಕೋರೆದಾಡೆಗಳ ಮೇಲೆ ಇಟ್ಟುಕೊಂಡು ಪುನಃ ಬ್ರಹ್ಮನಿಗೆ ಕೊಡಲು ಮೇಲಕ್ಕೆ ಹೊರಟಿದ್ದಿತು. ಹಿರಣ್ಯಾಕ್ಷ ಮಹದಾಕಾರದ ವರಾಹನನ್ನು ನೋಡಿದ, ಅವನಿಗೆ ಬಹು ಬೆರಗಾಯಿತು.  ಆದರೂ ಗರ್ವದಿಂದ ಬೀಗುತ್ತ, ‘ಮೂಢ ಹಂದಿಯೇ, ಈ ಭೂಮಿಯನ್ನು ಇದ್ದಲ್ಲಿಯೇ ಬಿಟ್ಟು ನಡೆ. ಹಂದಿಯ ರೂಪವನ್ನು ಧರಿಸಿದ ನೀನೇ ಮಹಾವಿಷ್ಣು, ನನಗೀಗ ಗೊತ್ತಾಯಿತು. ಕಪಟದಿಂದ ರಕ್ಕಸರನ್ನು ಕೊಂದು ದಾನವಾರಿ ಎಂದು ಹೆಮ್ಮೆಯಿಂದ ಮೆರೆಯುತ್ತಿದ್ದೀಯೆ; ನೋಡು,ನಾನು ಬಂದಿದ್ದೇನೆ, ನಿನ್ನ ಕೊಬ್ಬನ್ನು ಇಳಿಸಿ ಹೆಡತಲೆಯನ್ನು ಮುರಿಯಲು  ಸಿದ್ಧನಾಗಿದ್ದೇನೆ’ ಎನ್ನುತ್ತ ತಡೆದನು. ರಕ್ಕಸನ ಭಯಂಕರಾಕರವನ್ನು ಕಂಡು ಭೂದೇವಿ ಗಡಗಡನೆ ನಡುಗಿದಳು. ವರಾಹನು ಅತ್ತ ಲಕ್ಷ್ಯ ಮಾಡಲೇ ಇಲ್ಲ. ಸಮುದ್ರದಿಂದ ಮೇಲಕ್ಕೆ ಏಳುತ್ತಲೇ ಇದ್ದನು. ಹಿರಾಣ್ಯಕ್ಷನಿಗೆ ಇದರಿಂದ ರೇಗಿಹೋಯಿತು. ಅವನನ್ನು ಬೆನ್ನಟ್ಟುತ್ತ, ‘ಹೇಡಿ, ನಾಚಿಕೆ ಇಲ್ಲದವನೇ’ ಎಂದು ಮುಂತಾಗಿ ಮೂದಲಿಸಿದನು. ಅದನ್ನು ಕೇಳಿ ವರಾಹನು ಭೂಮಿಯನ್ನು ಒಂದು ಪಕ್ಕಕ್ಕೆ ಎತ್ತಿಟ್ಟು, ಕೆಂಗಣ್ಣಿನಿಂದ ಅವನನ್ನು ನೋಡುತ್ತ, ‘ಸಾವಿನ ಬಾಯನ್ನು ಹೋಗಲು ಇಂತಹ ಬಡಿವಾರ ಮಾಡುತ್ತಿರುವೆ; ಬಾ ಹೊಡೆದಾಡು’ ಎನ್ನುತ್ತ ಗದೆಯನ್ನು  ಹಿಡಿದು ಯುದ್ಧಕ್ಕೆ ನಿಂತನು. ಇಬ್ಬರ ಮಧ್ಯೆ ಭಯಂಕರ ಯುದ್ಧವೇ ನಡೆಯಿತು.”

ಗುರುಗಳು ಯುದ್ಧದ ಕಥೆಯನ್ನು ಮುಂದುವರಿಸಿದರು. “ಈ ಮೈನಡುಗಿಸುವ ಕಾಳಗವನ್ನು ದೇವತೆಗಳೆಲ್ಲ ನೋಡುತ್ತಿದ್ದರು. ಬೆಳಿಗ್ಗಿನಿಂದ ಸಂಜೆಯವರೆಗೆ ಯುದ್ಧ ನಡೆದೇ ನಡೆಯಿತು”.

“ಸಂಧ್ಯಾಕಾಲ ಹತ್ತಿರವಾದಂತೆಲ್ಲ ರಕ್ಕಸರ ಶಕ್ತಿಯು ಹೆಚ್ಚುವುದು. ಅಷ್ಟರಲ್ಲಿ ಆದಿವರಾಹನು ಹಿರಣ್ಯಾಕ್ಷನನ್ನು ಪೂರೈಸಬಾರದೆ? ಎಂದು ಬ್ರಹ್ಮನು ಕಳವಳಪಡಲು ತೊಡಗಿದನು. ಅದನ್ನರಿತವನಂತೆ ವರಾಹನು ನಸುನಗುತ್ತ ತನ್ನ ಚಕ್ರವನ್ನು ನಮ್ಮ ಯುವರಾಜ ಹಿರಣ್ಯಾಕ್ಷನ ಮೇಲೆ ಪ್ರಯೋಗಿಸದನು. ಅದು ಆತನ ನಾನಾ ಆಯುಧಗಳನ್ನು, ಶೂಲವನ್ನು ನಾಶ ಮಾಡಿತು. ಆಗ ಹಿರಣ್ಯಾಕ್ಷನಿಗೆ ತುಂಬ ಕೋಪ ಬಂದಿತು. ಮಹಾ ಆರ್ಭಟದಿಂದ ಮುಂದೆ ನುಗ್ಗಿ ವರಾಹನನ್ನು ತನ್ನ ತೋಳುಗಳಿಂದ ಹಿಸುಕಿಹಾಕಲು ಹೊರಟನು. ಆಗ ವರಾಹನು ದೈತ್ಯನ ಕಪಾಲಕ್ಕೆ ಬಲವಾಗಿ ಹೊಡೆದನು. ಆ ಭಯಂಕರ ಹೊಡೆತಕ್ಕೆಕ ಹಿರಣ್ಯಾಕ್ಷನು ಕೆಳಕ್ಕುರುಳಿದನು, ಪ್ರಾಣಬಿಟ್ಟನು.”

ಹಿರಣ್ಯಾಕ್ಷನ ಸಾವಿನ ವಿಷಯ ಹೇಳುವಾಗ ದೈತ್ಯ ಗುರುಗಳಿಗೆ ಬಹು ದುಃಖ. ಆದರೆ ಪ್ರಹ್ಲಾದ ವಿಷ್ಣುವಿನ ಪರಮ ಶಕ್ತಿಯನ್ನು ಕಂಡು ಆಶ್ಚರ್ಯದಿಂದ ತಲೆ ದೂಗಿದನು. “ಮುಂದೇನಾಯಿತು ಗುರುಗಳೇ?’ ಎಂದು ಕೇಳಿದನು. ಗುರುಗಳು ಮುಂದುವರೆಸಿದರು. “ಇದರಿಂದ ಹಿರಣ್ಯಾಕ್ಷನ ಪತ್ನಿ ವೃಷದ್ಭಾನುವಿಗೂ ಅವನ ಮಕ್ಕಳಿಗೂ ತಡೆಯಲಾರದಷ್ಟು ದುಃಖವಾಯಿತು. ಅವನ ತಾಯಿ ದಿತಿದೇವಿಯು ಬಹು ವ್ಯಸನಪೀಡಿತಳಾದಳು. ನಮ್ಮ ಒಡೆಯ ಹಿರಣ್ಯಕಶಿಪುವಿಗೂ ತುಂಬ ದುಃಖವಾಯಿತು.  ಆದರೂ, ‘ಸಾವು, ಯಾರಿಗೂ ತಪ್ಪಿದ್ದಲ್ಲ, ಅಳಬೇಡಿ. ಹೋರಾಡಿ ವೀರನಂತೆ ಮಡಿದ ಶೂರನಿಗೆ ನೀವು ಅತ್ತು ಕರೆಯುವುದು ಯಾವ ನ್ಯಾಯ?’ ಎಂದು ಅವರನ್ನು ಸಮಾಧಾನಪಡಿಸಲು ಯತ್ನಿಸಿದನು.”

ನಾನು ಬೇಡುವ ವರ

“ನಮ್ಮ ರಾಜ ಹಿರಣ್ಯಕಶಿಪು ಇತರರಿಗೆ ಸಮಾಧಾನ ಹೇಳಿದರೂ, ದಾನವೇಂದ್ರನಿಗೆ ಒಳಗಳಗೆ ಶೋಕ ಬೆಂಕಿಯಂತೆ ವ್ಯಾಪಿಸಿತ್ತು. ಮೊದಲೇ ವಿಷ್ಣು ಎಂದರೆ ಆಗದು ನಮ್ಮ ರಾಜನಿಗೆ. ಈಗಂತೂ ಅವನ ಹೆಸರೇ ವಿಷವಾಯಿತು. ಹಗಲಿರುಳೂ ದ್ವೇಷದಿಂದ ಕುದಿದನು. ತನ್ನ ಪಡೆಯ ನಾಯಕರಾದ ಇಲ್ವಲ, ನಮುಚಿ ಮುಂತಾದ ರಕ್ಕಸರನ್ನು ಕರೆದು, ‘ನೀವು ಭೂಲೋಕಕ್ಕೆ ಹೋಗಿ ವಿಷ್ಣುವಿನ ಭಕ್ತರನ್ನೆಲ್ಲ ಚೆನ್ನಾಗಿ ಹೊಡೆಯಿರಿ, ಬಡಿಯಿರಿ. ಯಜ್ಞ ಯಾಗಾದಿಗಳನ್ನು ಮಾಡುತ್ತಾ ವಿಷ್ಣುವನ್ನು ಭಜಿಸುವ ಬ್ರಾಹ್ಮಣರನ್ನು ನಾಶ ಮಾಡಿರಿ. ವೇದಗಳನ್ನು ಸುಟ್ಟುಬನ್ನಿರಿ. ಗೋವುಗಳನ್ನು ಕೊಂದು ಹಾಕಿರಿ’ ಎಂದು ಅಪ್ಪಣೆ ಮಾಡಿದನು. ಅವರು ಪಟ್ಟಣಗಳನ್ನೇ ಸುಟ್ಟು ಕೋಟೆಕೊತ್ತಲುಗಳನ್ನು ಕಿತ್ತರು. ಬೆಳೆಗಳನ್ನೆಲ್ಲ ನೆಲಸಮಮಾಡಿಬಿಟ್ಟರು. ಜನರನ್ನು ಗೋಳಾಡಿಸಿದರು. ನಮ್ಮ ರಾಕ್ಷಸವೀರರ ಪರಾಕ್ರಮವನ್ನು ಕೇಳಬೇಕೆ?” ಗುರುಗಳೇನೊ ಇದನ್ನು ಸಂತೋಷದಿಂದ ವರ್ಣಿಸುತ್ತಿದ್ದರು. ಆದರೆ ಛೆ ಛೆ ಎಂದು ಪ್ರಹ್ಲಾದನ ಮನ ಕ್ರೌರ್ಯಕ್ಕೆ ಜಿಗುಪ್ಸೆಗೊಂಡಿತು. ಇಂತಹ ಕೆಟ್ಟ ಕೆಲಸ ಮಾಡುವ ರಾಕ್ಷಸರನ್ನು ಹೇಗಾದರೂ ತಡೆಯಬೇಕು, ಅವರ ಮನಸ್ಸು ಬದಲಾಯಿಸಬೇಕು ಎಂದು ಅವನ ಮನ ಬಯಸಿತು.

ಗುರುಗಳು ಮುಂದುವರಿಸಿದರು: “ಇತ್ತ ದಾನವೇಂದ್ರನು ಮಂದರಪರ್ವತ ಪ್ರಾಂತ್ಯವನ್ನು ಸೇರಿ ಬ್ರಹ್ಮನನ್ನು ಕುರಿತು ತಪಸ್ಸಿಗೆ ತೊಡಗಿದನು. ಎಂತಹ ತಪಸ್ಸು ಅದು! ಕಾಲ ಬೆರಳಿನ ಮೇಲೇ ದೇಹದ ಭಾರವೆಲ್ಲ! ತೋಳುಗಳನ್ನು ಮೇಲಕ್ಕೆ ಚಾಚಿ ಆಕಾಶದಲ್ಲಿ ದಿಟ್ಟ ನಟ್ಟು ಮಹಾ ಉಗ್ರವಾದ ತಪಸ್ಸಿಗೆ ತೊಡಗಿದನು. ಎಷ್ಟೋ ವರ್ಷಗಳೇ ಉರುಳಿದವು. ಅವನು ನಿಂತ ನಿಲುವಿನಿಂದ ಚಲಿಸಲಿಲ್ಲ. ಅವನ ತಪಸ್ಸಿನ ಜ್ವಾಲೆ ಮೂರುಲೋಕವನ್ನು ವ್ಯಾಪಿಸಿತು. ನದಿ ಸಮುದ್ರಗಳು ಕತಕತನೆ ಕುದಿದವು. ಭೂಮಿ ನಡುಗಿತು. ಎಲ್ಲಕಡೆ ಉರಿ. ದೇವತೆಗಳಿಗೇ ಹೆದರಿಕೆಯಾಯಿತು. ಸತ್ಯಲೋಕ್ಕೆ ಹೋಗಿ ಬ್ರಹ್ಮನ ಮೊರೆಹೊಕ್ಕರು. ಅವರ ಮೊರೆಗೆ ಕರಗಿ ಬ್ರಹ್ಮದೇವನು ತನ್ನ ಪರಿವಾರದೊಡನೆ ಹಿರಣ್ಯಕಶಿಪುವನ್ನು ಸಮೀಪಿಸಿದನು. ‘ಹಿರಣ್ಯಕಶಿಪು! ಏಳು, ಏಳು. ನಿನ್ನ ತಪಸ್ಸಿಗೆ ಮೆಚ್ಚಿದ್ದೇನೆ. ಇಷ್ಟು ಘೋರವಾದ ತಪಸ್ಸನ್ನು ನಾನು ಹಿಂದೆ ಕಂಡದ್ದಿಲ್ಲ. ಬೇಕಾದ ವರವನ್ನು ಕೇಳಿಕೋ’ ಎಂದನು.”

“ಬ್ರಹ್ಮದೇವನು ತನ್ನ ಕಮಂಡಲದಿಂದ ನೀರನ್ನು ತೆಗೆದುಕೊಂಡು ನಮ್ಮ ಚಕ್ರವರ್ತಿಯ ಮೇಲೆ ಪ್ರೋಕ್ಷಿಸುವುದೇ ತಡ ಅವನ ದೇಹ ಬಂಗಾರದಂತೆ ಹೊಳೆಯತೊಡಗಿತು. ಕಣ್ಣಿನಲ್ಲಿ ಸಂತೋಷದ ಹನಿಗಳು. ಆನಂದದಿಂದ ಅವನಿಗೆ ಮಾತೇ ಹೊರಡದು. ಕಷ್ಟದಿಂದ ಮಾತನಾಡಿದ: ‘ಓ ದೇವ,ಕಗ್ಗತ್ತಲೆ ತುಂಬಿದ ಜಗತ್ತಿಗೆ ನಿನ್ನ ತೇಜಸ್ಸಿನಿಂದಲೇ ಬೆಳಕು. ಎಲ್ಲವನ್ನೂ ಸೃಷ್ಟಿಸಿದವನು ನೀನು, ಕಾಪಾಡುವವನು ನೀನು, ಕಡೆಗೆ ನಾಶ ಮಾಡುವವನೂ ನೀನೇ, ನಿನಗೆ ತಿಳಿಯದುದೇ ಇಲ್ಲ. ನೀನು ಸರ್ವಶಕ್ತ; ಎಲ್ಲ ಕಡೆ ಇದ್ದೀಯೆ. ನಿನ್ನಲ್ಲಿ ದೋಷವೇ ಇಲ್ಲ. ಕರುಣೆಯಿಂದ ಭಕ್ತರಿಗೆ ನಿನ್ನಂತೆ ಬೇರೆ ಯಾರೂ ವರಗಳನ್ನು ಕೊಡಲಾರರು. ನಿನಗೆ ನಮಸ್ಕಾರ’. ಬ್ರಹ್ಮನು ಅವನ ಭಕ್ತಿಗೆ ಮೆಚ್ಚಿದನು. ‘ಇಂತಹ ಕಠಿಣವಾದ ತಪಸ್ಸನ್ನು  ಏಕೆ ಮಾಡುತ್ತಿರುವೆ?’ ಎಂದು ಕೇಳಿದನು. ಹಿರಣ್ಯಕಶಿಪು, ‘ನಾನು ಬೇಡುವ ವರಗಳನ್ನು ನೀಡುವೆಯಾದರೆ, ನಿನ್ನ ಸೃಷ್ಟಿಯೊಳಗಿನ ಯಾವ ಪ್ರಾಣಿಯಿಂದಲೂ ನನಗೆ ಮರಣವಾಗಬಾರದು. ಮನೆಯ ಒಳಗಾಗಲೀ ಹೊರಗಾಗಲೀ ನನಗೆ ಸಾವು ಕೂಡದು. ಯಾವ ಅಸ್ತ್ರ ಶಸ್ತ್ರಗಳಿಂದಲೂ ನನಗೆ ಸಾವು ಕೂಡದು. ಹಗಲಾಗಲಿ, ರಾತ್ರಿಯಾಗಲಿ ನಾನು ಸಾಯಬಾರದು. ಭೂಮಿಯ ಮೇಲಾಗಲೀ, ಅಂತರಿಕ್ಷದಲ್ಲಾಗಲೀ ನನಗೆ ಮರಣಭಯ ಇರಬಾರದು’ ಎಂದು ಬೇಡಿಕೊಂಡನು.”

“ಬ್ರಹ್ಮನು, ‘ಅಯ್ಯಾ, ಇಂತಹ ವರವನ್ನು ಕೊಡುವುದು ಸಾಧ್ಯವಿಲ್ಲ, ಆದರೂ ಕೊಟ್ಟಿದ್ದೇನೆ’ ಎನ್ನುತ್ತ ಅಂತರ್ಧಾನನಾದನು,” ಎಂದು ಹೇಳುತ್ತ ಗುರುಗಳು ಮುಂದೆ ತನ್ನ ರಾಜನ ಪ್ರಶಂಸೆಗೆ ತೊಡಗಿದರು.

“ಕೇಳಿದಿರಾ ಮಕ್ಕಳೆ, ನಮ್ಮ ದೈತ್ಯೇಂದ್ರನು ಎಂತಹ ಶಕ್ತ! ಅವನಿಗೆದುರಾಗಿ ಯಾವ ದೈವ ತಾನೆ ನಿಂತೀತು! ಮೂರು ಲೋಕಗಳು ಇಂದು ಅವನ ವಶವಾಗಿವೆ. ಇಂತಹ ಪರಾಕ್ರಮಿಯನ್ನು ಬಿಟ್ಟು ನೀವು ಬೇರೆ ದೇವರನ್ನು, ಧಮ್ವನ್ನು ಭಜಿಸುವುದೇಕೆ?” ಎಂದರು.

ಆಗ ಪ್ರಹ್ಲಾದನು ನಸುನಗುತ್ತಾ, “ಬ್ರಹ್ಮನಿಂದ ವರ ಪಡೆದ ಮಾತ್ರಕ್ಕೆ ಅಧರ್ಮವನ್ನು ಬೆಳೆಸಿದ ಅರಸ ನಿಲ್ಲಬಲ್ಲನೆ, ಗುರುಗಳೆ? ಬ್ರಹ್ಮನಿಗೂ ಒಡೆಯನಾದ ಮಹಾ ವಿಷ್ಣುವಿನ ಆಜ್ಞೆಗೆ ಎಲ್ಲರೂ ತಲೆಬಾಗಬೇಕು. ಅವನ ಕೃಪೆ ಅಸಂಖ್ಯ ದಾರಿಗಳಲ್ಲಿ ಪ್ರವಹಿಸಿ ಲೋಕವನ್ನು ಕಾಪಾಡುವುದು” ಎಂದನು. ಬಾಲಕರು ಅವನ ಮಾತಿಗೆ ತಲೆದೂಗಿದರು.

ಕಂಬ ಸೀಳಿ ಬಂದಿತು ಜಗತ್ತಿಗೆ ರಕ್ಷಣೆ

ಪರಿಸ್ಥಿತಿ ಹೀಗೆ ತಮ್ಮ ಕೈಬಿಟ್ಟುದನ್ನು ಕಂಡು ಗುರುಪುತ್ರರಿಬ್ಬರಿಗೂ ಭಯವಾಯಿತು. ಪ್ರಹ್ಲಾದನ ಮನಸ್ಸನ್ನು ಬದಲಾಯಿಸಲು ಇನ್ನು ತಮ್ಮಿಂದ ಸಾಧ್ಯವಿಲ್ಲ ಎಂದು ಅವರಿಗೆ ಅರ್ಥವಾಯಿತು. ದಾನವ ಚಕ್ರವರ್ತಿಯನ್ನು ಸಮೀಪಿಸಿ, ನಡೆದ ಸಂಗತಿಗಳನ್ನು ತಿಳಿಸಿದರು.  ಅದನ್ನು ಕೇಳಿ ಆತನ ಕೋಪಕ್ಕೆ ಎಲ್ಲೆ ಇಲ್ಲವಾಯಿತು. ಪ್ರಹ್ಲಾದನನ್ನು ಹಿಡಿತರಿಸಿ, “ನೀಚ ಮನೆಹಾಳ, ಇನ್ನೂ ನಿನ್ನ ದುರ್ಬುದ್ಧಿಯನ್ನು ಬಿಡಲಿಲ್ಲವೆ? ಮೂರು ಲೋಕಗಳೂ ನನ್ನನ್ನು ಕಂಡರೆ ನಡುಗುತ್ತವೆ, ನನ್ನ ಮಗನಾದ ನಿನಗೆ ನನ್ನ ಅಪ್ಪಣೆಯನ್ನು ಮೀರುವಷ್ಟು ಧೈರ್ಯ ಹೇಗೆ ಬಂದಿತು? ಚಿಕ್ಕ ಹುಡುಗ, ನಿನಗೆ ಈ ಬುದ್ಧಿ, ಧೈರ್ಯ ಇರಲಾರವು. ಯಾರೋ ನಿನಗೆ ಹೇಳಿಕೊಟ್ಟಿರಬೇಕು. ಯಾರು ನಿನಗೆ ಈ ನೀಚಬುದ್ಧಿಯನ್ನು ಕಲಿಸಿದವರು?” ಎಂದು ಅಬ್ಬರಿಸಿದ. ಅವನ ಆರ್ಭಟಕ್ಕೆ ಭೂಮಿಯೆ ತತ್ತರಿಸಿದರೂ ಪ್ರಹ್ಲಾದ ಶಾಂತನಾಗಿಯೇ ಉತ್ತರ ಕೊಟ್ಟ: “ಅಪ್ಪಾ ನನಗೆ ಧೈರ್ಯ ಕೊಟ್ಟವನು ಶ್ರೀಹರಿ. ಆತ ಎಲ್ಲರಿಗಿಂತ ಬಲಶಾಲಿ. ನಾನು, ನೀನು, ಬ್ರಹ್ಮಾಂಡ, ಬ್ರಹ್ಮದೇವರು ಎಲ್ಲರೂ ಅವನ ಬಲದ ಮುಂದೆ ಸೊನ್ನೆ, ಆತನೇ ಲೋಕೇಶ್ವರ.”

“ದೇವತೆಗಳನ್ನೆಲ್ಲ ಹೆಬ್ಬೆಟ್ಟಿನ ಕೆಳಗೆ ಒತ್ತಿದ ಪರಾಕ್ರಮಿಗೆ ಐದು ವರ್ಷದ ಹುಡುಗನ ಬುದ್ಧಿವಾದ! ದನುಜೇಶ್ವರನು ಹುಚ್ಚಾಗಿ ಹಾರಿ ಕೂಗಿದನು: “ನಿರ್ಭಾಗ್ಯ, ನಿನ್ನ ಸಾವು ಸಮೀಪವಾಯಿತು. ನಾನೇ ಎಲ್ಲ ಲೋಕಗಳ ಪ್ರಭು, ಲೋಕೇಶ್ವರ. ಇನ್ನೊಬ್ಬ ಇದ್ದಾನೆಯೆ? ಅವನೆಲ್ಲಿದ್ದಾಣೆ? ತೋರಿಸು,” ಎಂದು ಗರ್ಜಿಸಿದನು.

“ಎಲ್ಲೆಲ್ಲಿಯೂ ಇದ್ದಾನೆ.” ಕಾಲು ಕ್ಷಣವೂ ತಡ ಮಾಡದೆ ಎಳೆಯ ಪ್ರಹ್ಲಾದನ ಉತ್ತರ ಬಂದಿತು.

ರಾಕ್ಷಸರ ದೊರೆಗೆ ಸಿಟ್ಟನ್ನು ತಡೆಯಲಾಗಲಿಲ್ಲ. ಬೆಂಕಿಕಾರುವ ಅಗ್ನಿಪರ್ವತದಂತೆ ಆದನು ಅವನು. “ದುರಾತ್ಮಾ,  ಅವನು ಎಲ್ಲೆಲ್ಲಿಯೂ ಇದ್ದಾನೆಯೆ? ಹುಚ್ಚ, ಈ ಕಂಬದಲ್ಲೆಕೆ ಅವನು ನನಗೆ ಕಾಣಬಾರದು? ಈ ಕೂಡಲೇ ನಿನ್ನನ್ನು ಕೊಂದುಹಾಕುತ್ತೇನೆ, ಲೋಕೇಶ್ವರ ಲೋಕೇಶ್ವರ ಎಂಧು ಹೊಗಳುತ್ತೀಯಲ್ಲ, ಆ ಹರಿ ಎಂಬುವನಿದ್ದರೆ ಬಿಡಿಸಿಕೊಳ್ಳಲಿ!” ಎನ್ನುತ್ತ ಖಡ್ಗವನ್ನು ಹಿರಿದು ಮಗುವಿನ ಮೇಲೆ ಹಾರಿದನು.

ಆಗ ಬ್ರಹ್ಮಾಂಡ ಇಬ್ಭಾಗವಾದಂತಹ ಭಯಂಕರ ಶಬ್ದವಾಯಿತು. ಮಹಾ ಪರಾಕ್ರಮಶಾಲಿಯಾದ ಹಿರಣ್ಯಕಶಿಪುವು ಆ ಸದ್ದಿಗೆ ಮೆಟ್ಟಿಬಿದ್ದನು. ಸಭಿಕರು ಗಡಗಡ ನಡುಗಿ ಕಲ್ಲಿನ ಪ್ರತಿಮೆಗಳಂತೆ ಆದರು. ನೋಡು ನೋಡುತ್ತಿದ್ದಂತೆ ಸಭೆಯಲ್ಲಿದ್ದ ಆ ಕಂಬ ಇಬ್ಭಾಗವಾಯಿತು.

ಶ್ರೀಹರಿಯು ನರಸಿಂಹನ ರೂಪದಲ್ಲಿ ಪ್ರತ್ಯಕ್ಷನಾದನು. ಸಿಂಹದ ತಲೆ, ಮಾನವನ ದೇಹ.

ಆ ಭಯಂಕರ ಮೂರ್ತಿಯ ಕಣ್ಣು ಕೋರೈಸುವಂತಿತ್ತು. ಕಣ್ಣುಗಳು ಕಾದ ಚಿನ್ನದ ರಸದಂತಿದ್ದುವು. ತಲೆಗೂದಲೂ ಗಡ್ಡ ಮೀಸೆಗಳೂ ನೆಟ್ಟಗೆ ನಿಮಿರಿ ನಿಂತಿದ್ದುವು. ಮೊನಚಾದ ಕೋರೆದಾಡೆಗಳು ಕರಕರ ಎನ್ನುತ್ತಿದ್ದವು. ನಾಲಗೆ ಹೊರಚಾಚಿತ್ತು; ಅದು ಕತ್ತಿಯಂತೆ ಬಳುಕುತ್ತ, ಚೂರಿಯಂತೆ ಚೂಪಾಗಿತ್ತು. ನರಸಿಂಹನ ಹುಬ್ಬುಗಳು ಬಿಗಿದಿದ್ದುವು, ಕಿವಿಗಳು ನೆಟ್ಟಗೆ ನಿಮಿರಿ ನಿಂತಿದ್ದವು. ಬಾಯಿ ಬೆಟ್ಟದ ಗವಿಯಂತಿತ್ತು. ಮೂಗಿನ ಹೊಳ್ಳೆಗಳು ತಲೆಕೆಳಗಾದ ಬಾವಿಯಂತಿದ್ದವು. ಬೃಹದಾಕಾರದ ದೇಹ. ಅದು ಆಕಾಶವನ್ನೇ ಮುಟ್ಟಿ ಮೋಡಗಳನ್ನು ನಿಲ್ಲಿಸುವುದೋ ಎನ್ನುವಷ್ಟು ಎತ್ತರ. ಲೆಕ್ಕವಿಲ್ಲದಷ್ಟು ತೋಳುಗಳು. ಮೈತುಂಬ ಬೆಳದಿಂಗಳಿನಂತಹ ಬಿಳಿಯ ಕೂದಲು. ಉಗುರುಗಳನ್ನು ನೋಡಿದರೆ ಮೈ ನಡುಕ ಬರುತ್ತಿತ್ತು.

ಉಗ್ರವಾದ ಈ ಮೂರ್ತಿ ಕಂಬವನ್ನು ಸೀಳಿಕೊಂಡು ಹೊರಕ್ಕೆ ಬಂದಿತು. ರಾಕ್ಷಸರಾಜನ ಆಸ್ಥಾನದಲ್ಲಿ ತುಂಬಿದ್ದ ಅಷ್ಟು ಜನರಲ್ಲಿ ಯಾರಿಗೂ ಅವನ ಹತ್ತಿರ ಹೋಗುವುದಿರಲಿ, ಕಣ್ಣೆತ್ತಿ ಅವನನ್ನು ನೋಡುವಷ್ಟೂ ಧೈರ್ಯವಾಗಲಿಲ್ಲ.

ಹಿರಣ್ಯಕಶಿಪು ಆ ನರಹರಿಯ ಮೂರ್ತಿಯನ್ನು ದಿಟ್ಟಿಸಿ ನೋಡಿದ . ಅವನದು ಅಸಾಧಾರಣ ಧೈರ್ಯ. ಅವನಿಗೆ ನಿಜವಾದ ಸಂಗತಿ ಅರ್ಥವಾಯಿತು. “ಓಹೋ ಈತನೇ ಮಹಾವಿಷ್ಣು, ನನ್ನ ತಮ್ಮನನ್ನು ಹಂದಿಯಾಗಿ ಕೊಂದವನು. ಈತನನ್ನು ಕೊಂದರೆ ಬುಡ ಕಡಿದ ಮರದ ಕೊಂಬೆಗಳಂತೆ ದೇವತೆಗಳೆಲ್ಲರೂ ಶಕ್ತಿ ಕಳೆದುಕೊಳ್ಳುತ್ತಾರೆ . ಆಗಲಿ, ಇವನ ಶಕ್ತಿಯನ್ನು ನಾನೂ ನೋಡಿ ಬಿಡುತ್ತೇನೆ,” ಎಂದುಕೊಂಡನು. ಖಡ್ಗವನ್ನು ಹಿಡಿದು ನರಸಿಂಹನ ಮೇಲೆ ಬೀಳಲು ಹೋದನು.

ಹಿರಣ್ಯಕಶಿಪುವೇನೊ ಅಸಾಧಾರಣ ಬಲಶಾಳಿಯೆ, ಧೈರ್ಯವಂತನೆ. ಆದರೆ ನರಸಿಂಹನ ಮುಂದೆ ಅವನ ಆಟ ಹೇಗೆ ನಡೆದೀತು?  ಗುಬ್ಬಚ್ಚಿ ಬೆಟ್ಟಕ್ಕೆ ಹೊಡೆದಂತಾಯಿತು . ಆ ದೇವನೋ, ದನುಜನನ್ನು ಲೀಲಾಜಾಲವಾಗಿ ಗರುಡನು ಸರ್ಪವನ್ನು ಹಿಡಿದುಕೊಳ್ಳುವಂತೆ ಕೈಯಲ್ಲಿ ಹಿಡಿದೆತ್ತಿದನು. ಆತನು ಸರ್ಪದಂತೆಯೇ ನುಣುಚಿಕೊಂಡಾಗ, ಹಾವು ಇಲಿಯನ್ನು ಹಿಡಿವಂತೆ ಹಿಡಿದು , ‘ಹೂಂ’ ಕಾರ ಮಾಡಿ ಸಭೆಯ ಹೊಸ್ತಿಲಿನ ಮೇಲೆ ಕುಳಿತನು. ತೊಡೆಯ ಮೇಲೆ ಕೆಡವಿಕೊಂಡ ಆ ರಕ್ಕಸನನ್ನು ತನ್ನ ಉಗುರುಗಳಿಂದ ಸೀಳಿಹಾಕಿದನು. ಹೊಟ್ಟೆಯನ್ನು ಬಗೆದು ಅವನ ಕರುಳನ್ನು ಮಾಲೆಯಾಗಿ ಧರಿಸಿದನು.

ಇದುವರೆಗೆ ಹಿರಣ್ಯಕಶಿಪುವಿನ ಭಟರು, ಹಿಂಬಾಲಕರು ಭಯದಿಂದ ಅಲ್ಲಾಡದೆ ನೋಡುತ್ತಿದ್ದರು.  ತಮ್ಮ ರಾಜನು ಸತ್ತುದನ್ನು ಕಂಡು ಕೋಪದಿಂದ ಛಂಗನೆ ಮೇಲೆದ್ದರು. ನರಹರಿಯ ಮೇಲೆ ಬಿದ್ದರು. ಆದರೆ ಅವನು ಇವರೆಲ್ಲರನ್ನೂ ಕಣ್ಣುಮುಚ್ಚಿ ತೆರೆಯುವುದರಲ್ಲಿ ಸಿಗಿದು ಹಾಕಿದ.

ವೈರಿಗಳೆಲ್ಲರೂ ಹತರಾದ ಮೇಲೆ ನರಹರಿಯು ಧನುಜೇಂದ್ರನ ಸಿಂಹಾಸನವನ್ನೇರಿ ಎಲ್ಲರನ್ನೂ ಕೆಕ್ಕರಗಣ್ಣಿನಿಂದ ನೋಡುತ್ತ ಕುಳಿತನು. ದೇವತೆಗಳು ಹೂಮಳೆ ಕರೆದರು. ಗಂಧರ್ವರು ಗಾನ ಮಾಡಿದರು. ಅಪ್ಸರೆಯರು ಆನಂದದಿಂದ ನರ್ತಿಸಿದರು. ಪೃಥ್ವಿಯೇ ಆನಂದದಿಂದ ನಲಿಯಿತು. ಆದರೆ ನರಸಿಂಹನ ಕೋಪ ಶಾಂತವಾಗಲೆ ಇಲ್ಲ. ವಿಷ್ಣುವಿನ ಹೆಂಡತಿಯಾದ ಸಾಕ್ಷಾತ್‌ ಲಕ್ಷ್ಮೀದೇವಿಯು ಆತನನ್ನು ಸಮೀಪಿಸಲು ಭಯಪಟ್ಟಳು.

ನರಸಿಂಹನ ಕೋಪ ಇಳಿಯುವುದು ಹೇಗೆ? ಆಗ ಬಾಲಕ ಪ್ರಹ್ಲಾದನು ಭಕ್ತಿಯಿಂದ ನರಸಿಂಹನ ಪಾದಗಳ ಮೇಲೆ ಹಣೆಯಿಟ್ಟು ನಮಸ್ಕರಿಸಿದನು.

ಮಗುವಿನ ಕೈಯ ಸೋಂಕಿಗೆ ಸ್ವಾಮಿಯು ಪ್ರಸನ್ನನಾದನು. ಅವನ ಕೋಪ ಇಳಿಯಿತು. ಕರುಣೆಯಿಂದ ಬಾಲಕನನ್ನು ಮುದ್ದಿಸಿ, ‘ಏಳು ಮಗು ಏಳು’ ಎಂದು ಕೈ ಹಿಡಿದು ಎತ್ತಿದನು. ಆಗ ದೇವತೆಗಳು ಅಚ್ಚರಿಯಿಂದ ತಲೆದೂಗಿ ವಿಷ್ಣುವಿನ ಮಾಯೆಯನ್ನು  ಹೊಗಳಿ, “ದನುಜೇಂದ್ರನಿಗೆ ಬ್ರಹ್ಮನು ಕೊಟ್ಟ ವರಗಳಿಗೆ ಚ್ಯುತಿ ಬರಲಿಲ್ಲ.  ಹಗಲೂ ರಾತ್ರಿಯೂ ಅಲ್ಲದ ಸಂಧ್ಯಾಕಾಲದಲ್ಲಿ, ಮನೆಯ ಒಳಗೂ ಹೊರಗೂ ಅಲ್ಲದ ಹೊಸ್ತಿಲಿನ ಮೇಲೆ, ಭೂಮಿಯಾಗಲೀ, ಅಂತರಿಕ್ಷವಾಗಲೀ ಅಲ್ಲದ ತೊಡೆಯ ಮೇಲೆ, ಅಸ್ತ್ರವೂ ಶಸ್ತ್ರವ ಊ ಅಲ್ಲದ ಉಗುರುಗಳಿಂದ, ಬ್ರಹ್ಮನ ಸೃಷ್ಟಿಯಲ್ಲಿರುವ ಯಾವ ಪ್ರಾಣಿಯೂ ಅಲ್ಲದ ನರಸಿಂಹ ರೂಪಿನಿಂದ ವಿಷ್ಣುವು ದನುಜನನ್ನು ಕೊಂದನು, ಭಾಪು” ಎಂದು ಸ್ತುತಿಸಿದರು.

ಭಗವಂತನ ಅಮೃತಹಸ್ತ ತನ್ನ ಮೈಗೆ ತಾಗುವುದೇ ತಡ ಪ್ರಹ್ಲಾದನಿಗೆ ರೋಮಾಂಚನವಾಯಿತು. ಕಣ್ಣುಗಳಿಂದ ಆನಂದಬಾಷ್ಪ ಸುರಿಯಿತು. ಆತನ ದುಃಖವೆಲ್ಲ ಮಾಯವಾಯಿತು. ಪರಮಜ್ಞಾನ ಮೂಡಿತು. ಪ್ರಹ್ಲಾದ ಸ್ತುತಿಸಿದನು: “ದೇವ, ನೀನು ಭಕ್ತರು ಬೇಡಿದುದನ್ನು ಕೊಡುವ ಕರುಣಾಳು, ಪರಮ ದಯಾಳು. ಜಗತ್ತನ್ನೇ ಕಾಪಾಡುತ್ತಿ. ನಿನ್ನ ಮಹಿಮೆಯನ್ನು ದೇವತೆಗಳೂ ತಿಳಿಯಲಾರರು. ಜಗತ್ತಿಗೆ ಅನ್ಯಾಯ ಮಾಡುತ್ತಿದ್ದವರನ್ನು ಶಿಕ್ಷಿಸಿದೆ. ಇನ್ನೇಕೆ ಕೋಪ, ಒಡೆಯ? ಶಾಂತನಾಗಿ ಶಿಷ್ಟರನ್ನು ರಕ್ಷಿಸು.”

ನರಹರಿಗೆ, ಈ ಮಾತುಗಳನ್ನು ಕೇಳಿ ಸಂತೋಷವಾಯಿತು. “ಮಗು ಪ್ರಹ್ಲಾದ, ನಿನ್ನ ಭಕ್ತಿಗೆ ಮೆಚ್ಚಿದೆ. ಬೇಕಾದುದನ್ನು ಕೇಳು” ಎಂದನು.

ತಂದೆಗೂ ಮಗನಿಗೂ ಎಷ್ಟು ವ್ಯತ್ಯಾಸ! ಪ್ರಹ್ಲಾದನು ಎಳೆಯ ಹುಡುಗನಾದರೂ ಜ್ಞಾನಿ.

“ಸ್ವಾಮಿಭಕ್ತನಾದ ನನ್ನ ಮನಸ್ಸಿನಲ್ಲಿ ಭಕ್ತಿ ಮಾತ್ರ ಇರಲಿ, ಬೇರೆ ಯಾವ ಆಸೆಯೂ ಹುಟ್ಟದಂತೆ ವರಕೊಡು.” ಎಂದು ಕೇಳಿಕೊಂಡನು. ಪರಮ ಭಾಗವತ ಶಿರೋಮಣಿಯ ಈ ಕೋರಿಕೆಯನ್ನು ಕೇಳಿ ನರಿಹರಿ ಆನಂದಿಸಿದನು. “ಒಪ್ಪಿದೆ ಮಗುವೆ. ಒಂದು ಮನ್ವಂತರ ಕಾಲ ನೀನು ರಾಜನಾಗಿರು, ಬಹು ಸುಖದಿಂದ ಇರು. ಸರ್ವರೂ ಮೆಚ್ಚುವಂತೆ ಧರ್ಮದಿಂದ ಬಾಳು. ಕಡೆಗೆ ನನ್ನ ಸನ್ನಿಧಿ ಸೇರುವೆ” ಎಂದು ವರವನ್ನು ಕೊಟ್ಟನು.

*

ಕಥೆಯ ಹಿಂದಿನ ಕಥೆ

ಪ್ರಹ್ಲಾದನ ಕಥೆ ಎಷ್ಟು ಸ್ವಾರಸ್ಯ.  ಅಲ್ಲವೆ?

ಈ ಕಥೆಯ ಹಿಂದೆ ಒಂದು ಕಥೆ ಇದೆ.

ಹಿರಣ್ಯಾಕ್ಷ ಹಿರಣ್ಯಕಶಿಪು ವಿಷ್ಣುವನ್ನು ಅಷ್ಟು ದ್ವೇಷಿಸುತ್ತಿದ್ದುದಕ್ಕೆ ಕಾರಣವೇನು ?

ಅದೊಂದು ಕಥೆ.

ವೈಕುಂಠದಲ್ಲಿ ಶ್ರೀಮನ್ನಾರಾಯಣನ ಬಾಗಿಲನ್ನು ಕಾಯಲು ಜಯ-ವಿಜಯರೆಂಬ ಭಕ್ತರು ನಿಯಮಿತರಾಗಿದ್ದರು. ತಾವು ವೈಕುಂಠದ ದ್ವಾರಪಾಲಕರು, ಶ್ರೀಮನ್‌ ನಾರಾಯಣನಿಗೆ ಬಹು ಹತ್ತಿರ ಇರುವವರು ಎಂದು ಅವರಿಗೆ ಬಹಳ ಹೆಮ್ಮೆ.  ಒಂದು ಸಲ ಸನಕ, ಸನಂದನ, ಸನತ್ಕುಮಾರ ಸನತ್ಸು-ಜಾತರೆಂಬ ಮಹಾ ಬಾಲಯೋಗಿಗಳು ವಿಷ್ಣುವನ್ನು ಕಾಣಲು ಬಂದರು. ತಮ್ಮ ಯೋಗಮಹಿಮೆಯಿಂದ ವಯಕುಂಠವನ್ನು ಪ್ರವೇಶಿಸಿದರು. ಹೆಮ್ಮೆಯಿಂದ ಬೀಗುತ್ತಿದ್ದ ಜಯವಿಜಯರು ಅವರನ್ನು ತಡೆದರು. ಇದರಿಂದ ಅವರಿಗೆ ತುಂಬ ಕೋಪ ಬಮದಿತು. “ಪರಮಾತ್ಮನ ಸಾನ್ನಿಧ್ಯದಲ್ಲಿದ್ದೂ ನಿಮ್ಮ ಅಜ್ಞಾನ ತೊಲಗಿಲ್ಲ. ನಿಮಗೆ ಪರಮಜ್ಞಾನ ಲಭಿಸುವವರೆಗೆ ಕೆಳಗಿನ ಲೋಕದೊಳಗೆ ಸಂಚರಿಸಿರಿ” ಎಂದು ಶಪಿಸಿದರು. ಆಗ ಜಯವಿಜಯರಿಗೆ ಬುದ್ಧಿ ಬಂದಿತು. ದುಃಖದಿಂದ ನಡುಗಿ, ಪರಮಾತ್ಮನಲ್ಲಿ ಮೊರೆಯಿಟ್ಟರು. ಆಗ ನಾರಾಯಣನು, “ಸಾತ್ವಿಕರೂ ಸಂಯಮಿಗಳೂ ಆದ ಈ ಜ್ಞಾನಿಗಳ ಮಾತು ತಪ್ಪುವಂತಹುದಲ್ಲ. ನೀವು ಭೂಲೋಕದಲ್ಲಿದ್ದು ಜ್ಞಾನ ಮೂಡಿದ ನಂತರ ಇಲ್ಲಿಗೆ ಬರಬಹುದು” ಎಂದು ಅಪ್ಪಣೆ ಮಾಡಿದನು. “ಸ್ವಾಮಿ, ಅಜ್ಞಾನವಶರಾಗಿ, ದೈವವನ್ನೇ ಮರೆವ ದುಸ್ಥಿತಿ ಉಂಟಾದರೆ ನಮ್ಮ ಪಾಡೇನು?” ಎಂದು ಅವರು ಗೋಳಿಟ್ಟರು. ಶ್ರೀ ಹರಿಗೂ ಅವರಲ್ಲಿ ಕರುಣೆ ಬಂದಿತು. “ಜಯ-ವಿಜಯರೆ, ನನ್ನ ಭಕ್ತರಾಗಿ ಏಳು ಜನ್ಮವೆತ್ತುತ್ತೀರೋ? ಶತ್ರುಗಳಾಗಿ ಮೂರು ಜನ್ಮಗಳನ್ನು ಎತ್ತುತ್ತೀರೋ?” ಎಂದು ಕೇಳಿದನು. ಅವರು “ಸ್ವಾಮಿ, ನಿಮ್ಮನ್ನಗಲಿ ಬಹಳ ಕಾಲ ಇರಲಾರೆವು. ಶತ್ರುಗಳಾಗಿ ಮೂರೇ ಜನ್ಮಗಳನ್ನು ಕಳೆದು ನಿಮ್ಮಲ್ಲಿಗೆ ಬಂದು ಸೇರುವೆವು” ಎಂದರು.

ಅನಂತರ ಹತಭಾಗ್ಯರಾದ ಅವರು ವೈಕುಂಠಚ್ಯುತರಾಗಿ ಹಿರಣ್ಯಾಕ್ಷ, ಹಿರಣ್ಯಕಶಿಪುಗಳೆಂಬ ಅವಳಿಗಳಾಗಿ ಭಾಗವತ ಧರ್ಮವನ್ನೂ ಭಗವಂತನನ್ನೂ ವಿರೋಧಿಸುವ ದುಷ್ಟ ರಕ್ಕಸರಾಗಿ ಹುಟ್ಟಿದರು. ವರಾಹ ಮತ್ತು ನರಸಿಂಹ ರೂಪಿನಿಂದ ವಿಷ್ಣು ಅವರಿಬ್ಬರನ್ನು ಸಂಹರಿಸಿದನು.

ಇದರ ನಂತರ ಕೃತಯುಗದಲ್ಲಿ ರಾವಣ, ಕುಂಭಕರ್ಣರಾಗಿ ಹುಟ್ಟಿ, ಶ್ರೀರಾಮಚಂದ್ರನಿಂದ ಹತರಾದರು. ದ್ವಾಪರಯುಗದಲ್ಲಿ ಶಿಶುಪಾಲ ಮತ್ತು ದಂತವಕ್ರ ಎಂಬ ಹೆಸರಿನಿಂದ ಜನಿಸಿ ಶ್ರೀ ಕೃಷ್ಣ ಕೈಯಲ್ಲಿ ಸತ್ತು ಉದ್ಧಾರವಾದರು.

*

ರಾಕ್ಷಸರಾಜನ ಶಿಷ್ಯನಾಗಿ ದೇವರಾಜ

ಪ್ರಹ್ಲಾದನನ್ನು ಆಶೀರ್ವದಿಸಿ ನರಸಿಂಹನು ಮಾಯವಾದನಷ್ಟೆ? ಪ್ರಹ್ಲಾದನು ಸಿಂಹಾಸನವನ್ನು ಏರಿದನು.

ಸ್ವರ್ಗ, ಮರ್ತ್ಸ, ಪಾತಾಳಗಳನ್ನು ಒಂದು ಮನ್ವಂತರದವರೆಗೆ ಚೆನ್ನಾಗಿ ಆಳುತ್ತ, ತನ್ನ ಸದ್ಗುಣಗಳಿಂದ ಎಣೆಯಿಲ್ಲದ ಪ್ರಭಾವ ಉಳ್ಳವನಾಗಿದ್ದನು. ಪರಮ ಭಾಗವತನಾದ ಆತನ ಆಳ್ವಿಕೆಯಲ್ಲಿ ಲೋಕವೆಲ್ಲ ನೆಮ್ಮದಿಯಿಂದ ಬಾಳುತ್ತಿತ್ತು.  ಎಲ್ಲೆಲ್ಲಿಯೂ ಶಾಂತಿ ಧರ್ಮ ನೆಲೆಸಿತ್ತು. ಸಮೃದ್ಧಿ ತಾನೇತಾನಾಗಿದ್ದಿತು. ತನ್ನ ಸದ್ಗುಣ ಶೀಲಗಳಿಂದ ಉಂಟಾದ ಶಕ್ತಿಯಿಂದ, ಇಂದ್ರನನ್ನು ಸೋಲಿಸಿ ಅಮರಾವತಿಯನ್ನು ತನ್ನದಾಗಿ ಮಾಡಿಕೊಂಡಿದದನು. ಇದರಿಂದ ಇಂದ್ರ ನಿರ್ಗತಿಕನಾದ. ಅವನು ದೇವಗುರುಗಳಾದ ಬೃಹಸ್ಪತ್ಯಾಚಾರ್ಯರ ಮುಂದೆ ನಿಂತು, “ಗುರುಗಳೆ, ನಿಜವಾಗಿ ಮಂಗಳವಾಗುವುದಕ್ಕೆ, ಶ್ರೇಯಸ್ಸಿಗೆ ದಾರಿ ಯಾವುದು?” ಎಂದು ಕೇಳಿದ. ಆಗ ಆಚಾರ್ಯರು, “ಮುಕ್ತಿಗೆ ಕಾರಣವಾದ ಜ್ಞಾನದಿಂದ ಉತ್ತಮವಾದ ಶ್ರೇಯಸ್ಸು ಉಂಟಾಗುವುದು,” ಎಂದರು. “ಆದರೆ ಅದಕ್ಕಿಂತಲೂ, ವಿಶೇಷವಾದ ಮಾರ್ಗ ಯಾವುದಾದರೂ ಉಂಟೇ?” ಎಂದು ಇಂದ್ರನು ಕೇಳಿದನು. “ಉಂಟು, ಅದನ್ನು ಅಸುರ ಗುರುಗಳಾದ ಶುಕ್ರಾಚಾರ್ಯರು ಬಲ್ಲರು, ನೀನು ಅವರನ್ನು ಆಶ್ರಯಿಸು,” ಎಂದರು ದೇವತೆಗಳ ಗುರು.

ಆಗ ದೇವೇಂದ್ರನು ಶುಕ್ರಾಚಾರ್ಯರಲ್ಲಿಗೆ ಬಂದು ಮೋಕ್ಷವನ್ನು ಸಾಧಿಸಿಕೊಡುವ ಜ್ಞಾನವನ್ನು ಪಡೆದುಕೊಂಡನು. ಅನಂತರ “ಗುರುವೆ, ಇದಕ್ಕಿಂತ ಮಿಗಿಲಾದ ಶ್ರೇಯಸ್ಸು ಉಂಟೆ?” ಎಂದು ಕೇಳಿದನು. ಅವರು “ಉಂಟು, ಅದನ್ನು ಯುದ್ಧದಲ್ಲಿ ನಿನ್ನನ್ನು ಜಯಿಸಿದ ಪ್ರಹ್ಲಾದ ಬಲ್ಲನು, ಹೋಗಿ ಆತನನ್ನು ಕೇಳು” ಎಂದರು.

ಇಂದ್ರನಿಗೆ ಬಹು ಆಶ್ಚರ್ಯ. ಆತನು ಬ್ರಾಹ್ಮಣನ ವೇಷವನ್ನು ಧರಿಸಿ ಪ್ರಹ್ಲಾದನ ಅರಮನೆಯ ಬಾಗಿಲಲ್ಲಿ ನಿಂತನು. ಪ್ರಹ್ಲಾದನು ಅವನನ್ನು ಒಳಕ್ಕೆ ಕರೆದು ಸತ್ಕಾರ ಮಾಡಿದನು. ಅನಂತರ ಇಂದ್ರನು “ದೈತ್ರೇಂದ್ರ, ಅತ್ಯುತ್ತಮವಾದ ಶ್ರೇಯಸ್ಸು ಯಾವುದರಿಂದ ಉಂಟಾಗುತ್ತದೆಯೋ ಅದನ್ನು ನನಗೆ ತಿಳಿಸು” ಎಂದು ಕೇಳಿದನು. ಆಗ ಪ್ರಹ್ಲಾದನು, “ಅಯ್ಯಾ, ನನಗೆ ಮೂರು ಲೋಕಗಳನ್ನು ಚೆನ್ನಾಗಿ ಪಾಲಿಸಬೇಕೆಂಬ ಚಿಂತೆ. ನಿನಗೆ ಉಪದೇಶಿಸಲು ಹೊತ್ತೆಲ್ಲಿ?” ಎಂದನು.

ಆದರೆ ಇಂದ್ರನು ಬಿಡಲಿಲ್ಲ. “ನಿನಗೆ ಯಾವಾಗ ಅವಕಾಶವಾಗುವುದೋ ಆವಾಗ ಸ್ವಲ್ಪಸ್ವಲ್ಪವಾಗಿ ಹೇಳು. ಉತ್ತಮವಾದ ಕರ್ತವ್ಯವೇನೆಂಬುದನ್ನು ಕಲಿಯಲು ನಾನು ಬಯಸುತ್ತೇನೆ”  ಎಂದನು. ಪ್ರಹ್ಲಾದನು ಒಪ್ಪಿದನು. ಅಂದಿನಿಂದ ಇಂದ್ರನು ಪ್ರಹ್ಲಾದನ ಶಿಷ್ಯನಾದನು. ಕ್ರಮಕ್ರಮವಾಗಿ ಜ್ಞಾನವನ್ನು ಪಡೆದನು. ಪ್ರಹ್ಲಾದ ಮೆಚ್ಚುವಂತೆ ಪರಿಚರ್ಯೆ ಮಾಡಿದನು. ಅವನು ಸುಪ್ರೀತನಾಗಿರುವ ಹೊತ್ತಿನಲ್ಲಿ ಒಂದು ದಿನ ಇಂದ್ರನು ಕೇಳಿದನು: “ಮಹಾತ್ಮನೆ, ನೀನು ಮೂರು ಲೋಕಗಳನ್ನೂ, ಜಯಿಸಿದ್ದು ಹೇಗೆ? ಯಾವ ಉಪಾಯದಿಂದ?” ಪ್ರಹ್ಲಾದನಿಗೆ ಇವನು ಇಂದ್ರ, ತನ್ನಿಂದ ಪದವಿಯನ್ನು ಕಸಿಯಲು ಬಂದಿದ್ದಾನೆ ಎಂದು ತಿಳಿಯಲಿಲ್ಲ. “ಕೇಳು ಬ್ರಾಹ್ಮಣ, ನಾನು ನನ್ನ ಶೀಲದಿಂದ ಮೂರು ಲೋಕಗಳನ್ನೂ ಜಯಿಸಿದೆ. ನನಗೆ ಒಡೆಯನೆಂಬ ಗರ್ವವಿಲ್ಲ. ಬ್ರಾಹ್ಮಣರಲ್ಲಿ ಅಸೂಯೆಯಿಲ್ಲ. ಶುಕ್ರಾಚಾರ್ಯರಲ್ಲಿ ನಾನು ವಿಧೇಯ. ಗುರುಹಿರಿಯರನ್ನು ಶುಶ್ರೂಷೆ ಮಾಡುತ್ತ ಅವರ ಉಪದೇಶದಂತೆ ನಡೆಯುತ್ತೇನೆ. ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಂಡಿದ್ದೇನೆ.  ಆದ್ದರಿಂದಲೇ ಪರಮ ಶ್ರೇಯಸ್ಸನ್ನು ಪಡೆದೆ” ಎಂದನು. ಅನಂತರ ತನ್ನ ಶಿಷ್ಯನಿಗೆ ಶ್ರೇಯಸ್ಸಿನ ವಿಚಾರದಲ್ಲಿ ಇರುವ ಆಸಕ್ತಿಯನ್ನು ಕಂಡು ಸುಪ್ರೀತನಾಗಿ, “ಅಯ್ಯಾ ಬ್ರಾಹ್ಮಣ, ನಿನ್ನ ಸೇವಾವೃತ್ತಿಯಿಂದ ಸುಪ್ರೀತನಾಗಿದ್ದೇನೆ . ನಿನಗೇನು ವರ ಬೇಕೋ ಕೇಳು” ಎಂದನು.

ಬ್ರಾಹ್ಮಣವೇಷದ ಇಂದ್ರನು, “ದೈತ್ಯೇಂದ್ರ, ಅತ್ಯುತ್ತಮ ಶ್ರೇಯಸ್ಸು ಯಾವುದರಿಂದ ಉಂಟಾಗುತ್ತದೆಯೊ ಅದನ್ನು ನನಗೆ ತಿಳಿಸು” ಎಂದು ಪ್ರಹ್ಲಾದನನ್ನು ಕೇಳಿದನು

 ಇಂದ್ರನಿಗೆ ಹಿಗ್ಗಿನಿಂದ ಮೈ ಉಬ್ಬಿತು. “ದೈತ್ಯರಾಜ, ನೀನು ಪ್ರಸನ್ನನಾಗಿದ್ದರೆ, ನನಗೆ ಪ್ರಿಯವಾಗಬೇಕೆಂದಿದ್ದರೆ ನಿನ್ನ ಶೀಲವನ್ನು ನನಗೆ ಕೊಡು” ಎಂದನು.

ಈ ಮಾತನ್ನು ಕೇಳಿ ಪ್ರಹ್ಲಾದನಿಗೆ ಚಿಂತೆಯಾಯಿತು. ತನ್ನ ಶೀಲ ಹೋದ ನಂತರ ತೇಜಸ್ಸೂ ಪದವಿಯೂ ಹೋಗುತ್ತದೆ ಎಂದು ಅರ್ಥವಾಯಿತು ಆದರೇನು? ಕೊಟ್ಟ ಮಾತನ್ನು ಮುರಿಯುವಂತಿಲ್ಲ. “ಒಳ್ಳೆಯದು, ನನ್ನ ಶೀಲವನ್ನು ನಿನಗೆ ಕೊಟ್ಟಿದ್ದೇನೆ ಹೋಗು” ಎಂದನು. ಬ್ರಾಹ್ಮಣ ಹೋದ ಸ್ವಲ್ಪ ಹೊತ್ತಿನಲ್ಲಿಯೇ ಒಂದಾದ ಮೇಲೆ ಒಂದರಂತೆ ಶೀಲವೂ, ಸಚ್ಚಾರಿತ್ರವೂ ಧರ್ಮವೂ ಸತ್ಯವೂ ಬಲವೂ ತೇಜೋರೂಪಿಗಳಾಗಿ ಹೊರಟು ಪ್ರಹ್ಲಾದನ ಅಪ್ಪಣೆ ಪಡೆದು ಇಂದ್ರನನ್ನು ಸೇರಿದವು. ಪ್ರಹ್ಲಾದನು ವ್ಯಥೆ ಪಡಲಿಲ್ಲ. ಶಾಂತಮನಸ್ಕನಾಗಿ ನರಹರಿಯನ್ನು ಸೇರಿದನು.

ಪ್ರಹ್ಲಾದ ರಾಕ್ಷಸನ ಮಗನಾಗಿ ಹುಟ್ಟಿದ. ಇನ್ನೂ ಚಿಕ್ಕ ಹುಡುಗನಾಗಿದ್ದಾಗಲೆ ತಂದೆಯ ಕೋಪಕ್ಕೆ ಗುರಿಯಾದ. ಅವನ ಭಕ್ತಿಗೆ ಮೆಚ್ಚಿ ವಿಷ್ಣು ಪ್ರತ್ಯಕ್ಷನಾದ. ಹುಟ್ಟಿನಿಮದ ರಾಕ್ಷಸನಾದ ಪ್ರಹ್ಲಾದನಿಂದ ದೇವತೆಗಳ ದೊರೆ ಇಂದ್ರನೇ ಜ್ಞಾನವನ್ನು ಪಡೆಯಬೇಕಾಯಿತು. ಹುಟ್ಟು ಮುಖ್ಯವಲ್ಲ, ವಯಸ್ಸು ಮುಖ್ಯವಲ್ಲ, ಶುದ್ಧವಾದ ಮನಸ್ಸು ಮುಖ್ಯ, ಶುಭ್ರವಾದ ನಡತೆ ಮುಖ್ಯ, ಎಂಬ ಉದಾತ್ತ ಪಾಠವನ್ನು ಪ್ರಹ್ಲಾದನ ಕಥೆ ಬೆಳಗುತ್ತದೆ.

* * *