ಇಪತ್ತನೇ ಶತಮಾನದ ಎರಡನೇ ದಶಕದಿಂದೀಚೆಗೆ ಪ್ರಾರಂಭವಾಗಿ ಕನ್ನಡ ಸಾಹಿತ್ಯದ ಒಂದು ಮುಖ್ಯ ಪ್ರಕಾರವೆಂದು ಇಂದು ಗುರುತಿಸಿಕೊಂಡಿರುವ ಜನಪ್ರಿಯ ವಿಜ್ಞಾನ ಸಾಹಿತ್ಯ ವಾಸ್ತವವಾಗಿ ಈಚಿನದಲ್ಲ. ನಮ್ಮ ಪ್ರಾಚೀನ ಸಾಹಿತ್ಯದಲ್ಲಿ ಶಾಸ್ತ್ರ ಕಾವ್ಯ ಎಂಬ ಹೆಸರಿನಲ್ಲಿ ಅಷ್ಟಿಷ್ಟು ವಿಜ್ಞಾನ ಸಾಹಿತ್ಯ ಇತ್ತು. ಕಾವ್ಯದ ಕಂಪನ್ನು ಮೈಗೂಡಿಸಿಕೊಂಡು ರಚಿತವಾದ ಅನೇಕ ಶಾಸ್ತ್ರ ಕಾವ್ಯಗಳು ಪ್ರಾಚೀನ ಕನ್ನಡ ಸಾಹಿತ್ಯದಲ್ಲಿವೆ ಮತ್ತು ಅವು ಬಹು ಜನಕ್ಕೆ ಪ್ರಿಯವಾಗಿದ್ದವು ಎಂಬುದನ್ನು ನಮ್ಮ ಅನೇಕ ಚರಿತ್ರಕಾರರು ಗುರುತಿಸಿದ್ದಾರೆ.

ನಮ್ಮ ಹಿಂದಿನವರು ಪ್ರಸ್ತಾಪಿಸಿರುವ ಶಾಸ್ತ್ರ ನಾವಿಂದು ವಿಜ್ಞಾನವೆಂದು ಪ್ರತ್ಯೇಕಿಸಿರುವ ವಿಷಯಗಳನ್ನು ಒಳಗೊಂಡಿತ್ತು ಎಂಬುದನ್ನು ಈ ಸಾಲು ಸ್ಪಷ್ಟಪಡಿಸುತ್ತದೆ:… ಕಾವ್ಯಗಳನ್ನು ಮಾತ್ರವಲ್ಲದೆ ತರ್ಕ, ಮೀಮಾಂಸೆ, ವೈದ್ಯ, ಜ್ಯೋತಿಷ್ಯ ಮೊದಲಾದ ಶಾಸ್ತ್ರಗಳನ್ನು ನಿರೂಪಿಸುವುದಕ್ಕೂ ಛಂದೋಬದ್ಧವಾದ ಭಾಷೆಯನ್ನೆ ಸಾಮಾನ್ಯವಾಗಿ ಬಳಸುತ್ತಿದ್ದರು. (ತೀ.ನಂ.ಶ್ರೀ: ಭಾರತೀಯ ಕಾವ್ಯ ಮೀಮಾಂಸೆ, ಪುಟ, ೧೦೪). ಈ ಸಾಲಿನಲ್ಲಿ ಪ್ರಸ್ತಾಪವಾಗಿರುವ ವೈದ್ಯ ನಾವಿಂದು ವೈದ್ಯ ವಿಜ್ಞಾನವೆಂದು ಕರೆಯುತ್ತಿರುವುದರ ಆಗಿನ ರೂಪ. ಜತೆಗೆ, ಭಾರತೀಯ ಕಾವ್ಯ ಮೀಮಾಂಸಕರು ಕಾವ್ಯಕ್ಕೆ ಸಾಹಿತ್ಯ ಮತ್ತೊಂದು ಹೆಸರೆಂದು ಪರಿಗಣಿಸಿದ್ದರು. ಅವರಿಗೆ ಪದ್ಯದಲ್ಲಿರುವುದೂ ಕಾವ್ಯವೇ ಗದ್ಯದಲ್ಲಿರುವುದೂ ಕಾವ್ಯವೇ ಅಗಿತ್ತು. ಹೀಗಾಗಿ ನಮ್ಮ ಪ್ರಾಚೀನ ಸಾಹಿತ್ಯದಲ್ಲಿ ಕಾಣಿಸಿಕೊಂಡಿರುವ ಶಾಸ್ತ್ರ ಕಾವ್ಯ ನಮ್ಮ ಆಧುನಿಕ ಪರಿಭಾಷೆಯಲ್ಲಿ ವಿಜ್ಞಾನ ಸಾಹಿತ್ಯವೇ ಆಗಿದೆ ಎಂಬುದು ಸ್ಪಷ್ಟವಾಗಿದೆ.

ಒಂದು ಸ್ಪಷ್ಟೀಕರಣ: ಮುಂದೆ ಚರ್ಚಿಸಲಾಗಿರುವ ನಮ್ಮ ಪ್ರಾಚೀನ ಶಾಸ್ತ್ರ ಕಾವ್ಯ (ವಿಜ್ಞಾನ ಸಾಹಿತ್ಯ)ಗಳಲ್ಲಿ ಪ್ರಸ್ತಾಪವಾಗಿರುವ ವಿಷಯಗಳಲ್ಲಿ ಎಷ್ಟು ಇಂದಿನ ವಿಜ್ಞಾನದ ಹಿನ್ನೆಲೆಯಲ್ಲಿ ಸರಿತಪ್ಪೆನಿಸಿಕೊಳ್ಳುತ್ತದೆ ಎಂಬುದು ಇಲ್ಲಿ ಪ್ರಸ್ತುತವಲ್ಲ. ವಿಜ್ಞಾನ ಇಷ್ಟು ಮುಂದುವರಿಯದಿದ್ದ  (ಅಷ್ಟೇ ಏಕೆ, ತಾವು ಹೇಳಿದ್ದು ವಿಜ್ಞಾನ ಎಂಬುದೇ ತಿಳಿಯದಿದ್ದ) ಅಂದಿನ ಕಾಲದಲ್ಲಿ ಅವರು ಸತ್ಯವೆಂದು ನಂಬಿದ್ದ ವಿಜ್ಞಾನವನ್ನು ಎಷ್ಟು ಕಾವ್ಯಮಯವಾಗಿ ಹೇಳಿದ್ದಾರೆ ಎಂಬುದಷ್ಟೆ ಇಲ್ಲಿ ಪ್ರಸ್ತುತ.

ಈವರೆಗೆ ಸಿಕ್ಕಿರುವ ಗ್ರಂಥಗಳಲ್ಲೆಲ್ಲ ಗಂಗ ರಾಜನ ಸೈಗೊಟ್ಟ ಶಿವರಾಮ (ಕ್ರಿ.ಶ. ೮೦೦)ನ ಗಜಶಾಸ್ತ್ರವೇ ಅತ್ಯಂತ ಹಳೆಯದೆಂದು ಭಾವಿಸಲಾಗಿದೆ. ೧೦೭೭ರ ಕಾಲದ ಶಾಸನವೊಂದರ ಪ್ರಕಾರ ಈ ಗ್ರಂಥ ತನ್ನ ಸುಭಗ ಕವಿತಾ ಗುಣದಿಂದಾಗಿ ಓಬವ್ವನ ಒನಕೆ ಹಾಡಾಗಿ ನಾಡಿನಲ್ಲಿ ತುಂಬಾ ಪ್ರಸಿದ್ಧವಾಗಿತ್ತಂತೆ. ಈ ಗ್ರಂಥದಲ್ಲಿ ಆನೆಗಳನ್ನು ಪಳಗಿಸುವುದು ಮತ್ತು ಅವುಗಳನ್ನು ಉಪಯೋಗಿಸುವುದು ಹೇಗೆಂಬುದನ್ನು ಕುರಿತ ತಾಂತ್ರಿಕ ವಿಷಯಗಳನ್ನು ವಿವರಿಸಲಾಗಿದೆ.

ಇಂತಹದೇ ಅತ್ಯುಪಯುಕ್ತವಾದ ಶಾಸ್ತ್ರೀಯ ಗ್ರಂಥವನ್ನು ಎರಡನೆಯ ಚಾವುಂಡರಾಯ (ಕ್ರಿ.ಶ. ೮೪೨-೧೦೨೫) ಲೋಕೋಪಕಾರ ಎಂಬ ಹೆಸರಿನಲ್ಲಿ ಬರೆದಿದ್ದಾನೆ. ಇದು ಪುಟ್ಟ ವಿಶ್ವಕೋಶ ಎಂದೇ ಹೆಸರಾಗಿದೆ. ಈ ಗ್ರಂಥದಲ್ಲಿ ಬಂಡೆಕಲ್ಲುಗಳನ್ನು ಒಡೆಯುವ ಕ್ರಮ, ಯಾವ ಹಣ್ಣಿನಲ್ಲೂ ಬೀಜವಿಲ್ಲದಂತೆ ಮಾಡುವ ಸಂಸ್ಕಾರ, ಕ್ಷಯಕ್ಕೆ, ಸಕಲ ವಿಷಕ್ಕೆ, ಬುದ್ಧಿವರ್ಧನೆಗೆ ಔಷಧೋಪಚಾರ ಇತ್ಯಾದಿ ಅನೇಕಾನೇಕ ಲೌಕಿಕ ವಿಷಯಗಳನ್ನು ವಿವರಿಸುವ ಸೊಗಸಾದ ಪದ್ಯಗಳಿವೆ. ಲೇಖಕನೇ ಹೇಳಿಕೊಂಡಿರುವ ಪ್ರಕಾರ ಅನೇಕ ಲೌಕಿಕ ಶಾಸ್ತ್ರಮುಳ್ಳ ಈ ಗ್ರಂಥವು ಜಗತ್ತಿಲಕವಾಗಿ ರಾಜಸಮಾಜ ಪೂಜಿತವಾಯಿತಂತೆ. ಇದರ ಸಾರವೆಂದರೆ ಬಂಗಾರದ ಕ್ಕೆ ಪರಿಮಳ ಬಂದ ಹಾಗಂತೆ.

ಹಳಗನ್ನಡದಲ್ಲಿ ಕಾಮಶಾಸ್ತ್ರ ಗ್ರಂಥವೂ ಇದೆ. ಮದನತಿಲಕವೆಂಬ ಇದನ್ನು ಬರೆದವನು ಚಂದ್ರರಾಜ (೧೦೪೦). ಈ ಗ್ರಂಥಕ್ಕೆ ಮೂಲ ವಾತ್ಸಾಯನನ ಕಾಮಸೂತ್ರ… ರಚನೆಯ ದೃಷ್ಟಿಯಿಂದ ಇದು ಚಿತ್ರ ಕವಿತಾ ಪ್ರಧಾನವಾದ ಚಂಪುವಾಗಿದೆ ಎಂದು ರಂ.ಶ್ರೀ.ಮುಗಳ ಅಭಿಪ್ರಾಯಪಟ್ಟಿದ್ದಾರೆ.

ಸಂದಿಗ್ಧತೆಯಿಲ್ಲದೆ ಲಾಲಿತ್ಯವಾಗಿ ಶಾಸ ವಿಷಯವನ್ನು ಪ್ರತಿಪಾದಿಸುವ ಕವಿತಾ ಸಾಮರ್ಥ್ಯ ಹೊಂದಿದ್ದ ಶ್ರೀಧರಾಚಾರ್ಯ (ಕ್ರಿ.ಶ. ೧೦೪೯) ಕನ್ನಡದ ಮೊದಲ ಜ್ಯೋತಿಷ್ಯ ಶಾಸ್ತ್ರ ಗ್ರಂಥವೆಂದು ಭಾವಿಸಲಾಗಿರುವ ಜಾತಕ ತಿಲಕವನ್ನು ಬರೆದ್ದಿದ್ದಾನೆ. ಈ ಗ್ರಂಥದಲ್ಲಿ ಶ್ರೀಧರಾಚಾರ್ಯನು ಶಬ್ದ ಸೌಂದರ್ಯ ಪ್ರಸಾದ ಗುಣಗಳಿಂದ ಶಾಸ್ತ್ರವನ್ನು ಕಾವ್ಯದಂತೆ ಹೇಳಿದ್ದಾನೆ.

ವಿಜ್ಞಾನದ ರಾಜನೆಂದು ಪರಿಗಣಿತವಾಗಿರುವ ಗಣಿತವನ್ನೂ ಕನ್ನಡಿಗರು ಕಡೆಗಣಿಸಿರಲಿಲ್ಲ. ಅದಕ್ಕೆ ಸಾಕ್ಷಿಯಾಗಿ ರಾಜಾದಿತ್ಯನು (ಸು.೧೧೨೦) ವ್ಯವಹಾರ ಗಣಿತ, ಕ್ಷೇತ್ರ ಗಣಿತ ಮೊದಲಾದ ಗಣಿತ ಗ್ರಂಥಗಳನ್ನು ರಚಿಸಿದ್ದಾನೆ. ಇವು ೧೨ನೇ ಶತಮಾನದ ಕರ್ನಾಟಕದಲ್ಲಿದ್ದ ಗಣಿತ ಜ್ಞಾನದ ಸ್ವರೂಪವನ್ನು ತಿಸಳಿಸುತ್ತದೆ ಎಂಬುದು ಪರಿಣಿತರ ಅಭಿಪ್ರಾಯ. ನಮ್ಮವರಿಗೆ ಸಾಮನ್ಯ ಗಣಿತವಷ್ಟೆ ಅಲ್ಲದೆ ಶ್ರೇಣಿ ಸೂತ್ರದಂತ ಉನ್ನತ ಗಣಿತ ಕೂಡ ತಿಳಿದಿತ್ತು ಎಂಬುದಕ್ಕೆ ದಾಖಲೆಗಳಿವೆ. ಇದೆಲ್ಲ ಅವರಿಗೆ ತಿಳಿದಿತ್ತು ಎಂಬುದಕ್ಕಿಂತ ಹೆಚ್ಚಾಗಿ ಅವರು ಗಣಿತದಂಥ ‘ಕಠಿಣ ಮತ್ತು ಶುಷ’ ವಿಷಯವನ್ನು ಮೃದುವಾದ ಮತ್ತು ಮಾಧುರ್ಯ ತುಂಬಿದ ಸೊಗಸಾದ ಕಾವ್ಯದಲ್ಲಿ ಅಭಿವ್ಯಕ್ತಿಸಿದ್ದರೆಂಬುದು ನಮಗಿಲ್ಲಿ ತುಂಬಾ ಮುಖ್ಯ.

ಜಗದ್ಧಳ ಸೋಮನಾಥ (೧೧೫೦)ನ ಕ್ಯಾಣಕಾರವೆಂಬ ಗ್ರಂಥ ಕನ್ನಡದಲ್ಲಿ ದೊರಕುವ ಮೊದಲ ವೈದ್ಯ ಗ್ರಂಥವೆಂಬ ಮಾನ್ಯತೆ ಪಡೆದಿದೆ. ಇದರ ಜತೆಗೆ ವೈದ್ಯ ಶಾಸ್ತ್ರದಲ್ಲಿ ಸುಮಾರು ೩೦ ಗ್ರಂಥಗಳು ಹುಟ್ಟಿವೆ. ಸಾಮಾನ್ಯ ವರ್ಗದಲ್ಲಿಯೇ ಸುಮಾರು ೧೫ ಗ್ರಂಥಗಳು ಗೋಚರಕ್ಕೆ ಬರುತ್ತವೆ. ಇದು ಅವುಗಳ ಸರ್ವ ಜನೋಪಯುಕ್ತತೆಯನ್ನು ಸಾರಿ ಹೇಳುತ್ತದೆ ಎಂದು ಎಂ.ವೀ.ಸೀ ಹೇಳುತ್ತಾರೆ.

ಕನ್ನಡದ ಮೊದಲ ಕೃಷಿ ವಿಜ್ಞಾನ ಪುಸ್ತಕವೆಂದು ಹೇಳಲಾದ ರಟ್ಟಮತ ಅಥವಾ ರಟ್ಟಶಾಸ್ತ್ರ ಎಂಬ ಪುಸ್ತಕವನ್ನು ರಟ್ಟಕವಿ (ಸು.ಕ್ರಿ.ಶ. ೧೩೦೦) ಬರೆದಿದ್ದಾನೆ. ಇದರಲ್ಲಿ ಕೃಷಿಗೆ ಉಪಯುಕ್ತ್ತವಾದ ಅನೇಕ ಸಂಗತಿಗಳನ್ನು ಹೇಳಲಾಗಿದೆ. ಮುಖ್ಯವಾಗಿ ಮಳೆ, ಬೆಳೆ, ನೀರು, ವಾಯುಗುಣ, ಬಿತ್ತನೆ ಇತ್ಯಾದಿಗಳನ್ನು ಕುರಿತ ಲೋಕಾನುಭವದ ಮಾತುಗಳು ಇದರಲ್ಲಿವೆ. ಜತೆಗೆ, ರೈತರಿಗೆ ನೀರು ತುಂಬಾ ಅಮೂಲ್ಯ. ಬಾವಿ ತೋಡಲು ಅಂತರ್ಜಲ ಇರುವ ಸ್ಥಳವನ್ನು ತಿಳಿದುಕೊಳ್ಳುವುದು ಅವರಿಗೆ ತೀರ ಅವಶ್ಯಕ. ನೀರನ್ನು ಕಂಡುಹಿಡಿಯಲು ರಟ್ಟಕವಿ ಅನೇಕ ಸೂತ್ರಗಳನ್ನು ಕೊಟ್ಟಿದ್ದಾನೆ. ನಾವು ಇಂದು ವಿಜ್ಞಾನಿಗಳ ಬಗ್ಗೆ ಹೇಳಿಕೊಳ್ಳುತೇವೆ; ಪುಸ್ತಕಗಳನ್ನು ಬರೆಯುತ್ತೇವೆ. ರಟ್ಟಕವಿ ಕೂಡ ಅಂದಿನ ಅನಾಮಧೇಯ ಜಿಯಾಲಜಿಸ್ಟರ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿ, ಅವರು ಭೂಮಿಯೊಳಗಿನ ನೀರಧಾರೆಯನ್ನು ಮನುಷ್ಯನ ಶರೀರದೊಳಗಿನ ರಕ್ತಸಂಚಾರವನ್ನರಿಯುವಂತೆ ಅರಿತಿದ್ದರು ಎಂದಿದ್ದಾನೆ.

ವಿಜಯನಗರದ ಮೊದಲನೆಯ ಹರಿಹರನ (೧೨೫೨-೧೩೩೬) ಕಾಲದಲ್ಲಿ ಜೀವಿಸಿದ್ದ ಮೊದಲನೆಯ ಮಂಗರಾಜ ಖಗೇಂದ್ರ ಮಣಿದರ್ಪಣವೆಂಬ ಗ್ರಂಥವನ್ನು ರಚಿಸಿದ್ದಾನೆ. ಶಾಸ್ತ್ರ ವಿಷಯವನ್ನು ಕುರಿತ ಗ್ರಂಥವಾದರೂ ಬರವಣಿಗೆಯಲ್ಲಿ ಕವಿತಾ ರಚನೆಯ ನೈಪುಣ್ಯ, ಕಲ್ಪನಾ ಶಕ್ತಿ ಕಂಡುಬರುತ್ತದೆ. ಶಾಸ್ತ್ರ ಜ್ಞಾನ ಅನುಭವಗಳನ್ನು ಪ್ರೌಢವಾದರೂ ಸುಲಭ ವೇದ್ಯವಾದ ಪದ್ಯದಲ್ಲಿ ನಿರೂಪಿಸಿರುವ ಶಾಸ್ತ್ರ ಕವಿಯ ಶಕ್ತಿ ಇಲ್ಲಿ ಎದ್ದು ಕಾಣುತ್ತದೆ ಎಂದು ರಂ.ಶ್ರೀ.ಮುಗಳಿಯವರು ಶಾಸ್ತ್ರಕ್ಕೂ ಕವಿತ್ವಕ್ಕೂ ಸಾಧ್ಯವಿರುವ ನಂಟನ್ನು ಭದ್ರವಾಗಿ ಸ್ಥಾಪಪಿಸಿದ್ದಾರೆ. ಶಾಸ್ತ್ರಾಭಿವ್ಯಕ್ತಿಯಲ್ಲಿ ಕವಿತ್ವದ ಸೊಗಸು ಸೊಗಯಿಸುವಂತೆ ಮಡುವುದು ಮತ್ತು ಶಾಸ್ತ್ರ ಗ್ರಂಥವೊಂದು ಕಾವ್ಯದ ಸ್ಥಾನಕ್ಕೇರುವುದು ಸಾಧ್ಯ ಎಂಬುದು ಇದರಿಂದ ವೇದ್ಯವಾಗುತ್ತದೆ.

ವಿಷಾದದ ಸಂಗತಿ ಎಂದರೆ ನಮ್ಮ ಪ್ರಾಚೀನರು ಕನ್ನಡ ಸಾಹಿತ್ಯದ ಒಂದು ಭಾಗವೆಂದು ಮಾನ್ಯ ಮಾಡಿದ್ದ ವಿಜ್ಞಾನ ಸಾಹಿತ್ಯವನ್ನು ನಮ್ಮ ಆಧುನಿಕರು ಕೊಂಚ ಮರೆತಿದ್ದಾರೆ. ಯಾವುದೇ ಸಾಹಿತ್ಯ ಜೀವಂತಿಕೆಯಿಂದ ನಳನಳಿಸುತಿರಬೇಕಾದರೆ ಅದು ಸಮಾಜದ ವಿವಿಧ ಸ್ತರಗಳಲ್ಲಾಗುವ ಎಲ್ಲ ಪ್ರಭಾವಗಳನ್ನು ಮೈಗೂಡಿಸಿಕೊಂಡು ಬೆಳೆಯಬೇಕಾಗುತ್ತದೆ. ಇಲ್ಲವಾದರೆ ಅದು ನಿಂತ ನೀರಾಗುತ್ತದೆ. ಇಂದು ವಿಜ್ಞಾನವನ್ನು ಅವಗಣಿಸಿ ಯಾವ ಕ್ಷೇತ್ರವೂ ಬದುಕಲಾರದು. ಇದಕ್ಕೆ ಸಾಹಿತ್ಯವೂ ಹೊರತಲ್ಲ; ಮತ್ತು, ಮನುಷ್ಯನ ವಿಕಾಸಕ್ಕೆ ವಿಜ್ಞಾನ ಅನಿವಾರ್ಯ ಎಂಬ ಸತ್ಯವನ್ನು ಕನ್ನಡ ನವೋದಯ ಗುರುತಿಸಿತ್ತು. ಕುವೆಂಪು ಅವರರು ‘ಓ ಬನ್ನಿ ಸೋದರರೆ ವಿಜ್ಞಾನ ದೀವಿಗೆಯ ಹಿಡಿದು ಬನ್ನಿ’ ಎಂದು ಆಗಲೆ ಕರೆ ಕೊಟ್ಟಿದ್ದಾರೆ.

ಒಂದೇ ಸುಲಭ ಮತ್ತು ಸಾಹಿತ್ಯಿಕ ಮಾರ್ಗವೆಂದರೆ ಅದು ಜನಪ್ರಿಯ ವಿಜ್ಞಾನ ಸಾಹಿತ್ಯದ ಅಧ್ಯಯನ. ಹೀಗಾಗಿ ಜನಪ್ರಿಯ ವಿಜ್ಞಾನ ಸಾಹಿತ್ಯಕ್ಕೆ ಶಿಕ್ಷಣ, ಸಾಹಿತ್ಯ ಮತ್ತು ಸಮೂಹ ಮಾಧ್ಯಮಗಳಲ್ಲಿ ಹೆಚ್ಚಿನ ಆದ್ಯತೆ ಸಿಗಬೇಕಾದದ್ದು ಸಮಾಜದ ಹಿತದೃಷ್ಟಿಯಿಂದ ತೀರ ಅಗತ್ಯ.