ಬೆಳಿಗ್ಗೆ ಏಳುವ ವೇಳೆಗೆ ಹೋಟೆಲಿನ ಸುತ್ತ ಮಂಜಿನ ಪಹರೆ; ನಿನ್ನೆ ದಿನ ಕಾಣಿಸಿದ ಸೂರ‍್ಯ ಈ ದಿನ ಪತ್ತೆಯಿಲ್ಲ. ಕಿಟಕಿಯನ್ನು ಕೊಂಚ ಸರಿಸಿ ಹೊರಗೆ ಕೈ ಚಾಚಿದೆ, ಕೊರೆಯುವ ಛಳಿ.

ಬಿಸಿ ಬಿಸಿ ಸ್ನಾನದಿಂದ ಹಗುರವಾಗಿ, ಬೆಚ್ಚನೆಯ ಉಡುಪು ಧರಿಸಿ ಕೆಳಗಿಳಿದು ಬಂದು ಯಥಾಪ್ರಕಾರ, ಬ್ರೆಡ್ಡು, ಹಣ್ಣಿನರಸ, ಮೊಸರು, ಹಾಲಿಲ್ಲದ ಕರಿ ಕಾಫಿಯೊಂದಿಗೆ ಉಪಹಾರ ಮುಗಿಸಿ ಮತ್ತೆ ಕೋಣೆಗೆ ಬಂದೆ.

ಹನ್ನೆರಡು ಗಂಟೆಗೆ ನಿಗದಿಯಾದಂತೆ ‘ಇನ್‌ಸ್ಟಿಟ್ಯೂಟ್’ನಲ್ಲಿ ವಿದ್ಯಾರ್ಥಿ ಹಾಗೂ ಅಧ್ಯಾಪಕರ ಸಭೆ. ಪ್ರೊ. ಆಕ್ಸಿನೋವ್ ಅವರು ಅವರೆಲ್ಲರ ಪರಿಚಯ ಮಾಡಿಕೊಟ್ಟರು. ನಾನು ಮೊದಲು ಕನ್ನಡದಲ್ಲಿ, ನಂತರ ಇಂಗ್ಲಿಷಿನಲ್ಲಿ ನನ್ನ ಪರಿಚಯವನ್ನು ಹೇಳಿದೆ. ಪ್ರೊಫೆಸರ್ ಆಕ್ಸಿನೋವ್ ಅವರು ಈ ಭಾಷಾ ಸಂಸ್ಥೆಯ ಕಾರ್ಯ ವಿಧಾನಗಳನ್ನೂ, ಪಠ್ಯ ವಿವರಗಳನ್ನೂ ಪರಿಚಯಮಾಡಿಕೊಟ್ಟರು.

ಈ ಭಾಷಾ ಸಂಸ್ಥೆ ಮಾಸ್ಕೋ ಮಹಾವಿದ್ಯಾಲಯದ ಒಂದು ಭಾಗ. ಇಲ್ಲಿ ಉರ್ದು, ಬಂಗಾಳಿ, ನೇಪಾಲಿ ಇವು ಪ್ರಧಾನ ವಿಷಯಗಳಾಗಿಯೂ, ಸಂಸ್ಕೃತ, ಪಂಜಾಬಿ, ಬ್ರೆಜ್, ತಮಿಳು ಇವು ಪೂರಕ ವಿಷಯಗಳಾಗಿಯೂ ಬೋಧಿಸಲ್ಪಡುತ್ತಿವೆ ಯಂತೆ. ಮುಂದಿನ ಯೋಜನೆಯಲ್ಲಿ ಮರಾಠಿ. ಮಲೆಯಾಳಂ, ತೆಲುಗು ಭಾಷೆಗಳನ್ನು ಕಲಿಸುವ ಏರ್ಪಾಡನ್ನು ಮಾಡಲಾಗಿದೆ ಎಂದರು. ಕನ್ನಡಕ್ಕೆ ಯಥಾ ಪ್ರಕಾರ ಇಲ್ಲೂ ಸ್ಥಾನವಿಲ್ಲ. ‘ಕನ್ನಡವೊಂದನ್ನು ಬಿಟ್ಟು ಉಳಿದ ದ್ರಾವಿಡ ಭಾಷೆಗಳ ಬಗ್ಗೆ ಯೋಚಿಸುತ್ತೀರಿ. ಪ್ರಾಚೀನತೆಯಲ್ಲಿ ಮತ್ತು  ಸತ್ವದಲ್ಲಿ ಸಂಸ್ಕೃತ ಮತ್ತು ತಮಿಳುಗಳನ್ನು ಬಿಟ್ಟರೆ ಕನ್ನಡವೆ ಮುಂದಿನದು. ಹೀಗಿರುವಾಗ ಕನ್ನಡದಂಥ  ಪ್ರಮುಖ ಭಾಷೆಯನ್ನು ಹೊರತುಪಡಿಸಿದ ನಿಮ್ಮ ಅಧ್ಯಯನ ಯೋಜನೆ ಅಪೂರ್ಣವಾಗಿದೆ’ – ಎಂದೆ. ಅದಕ್ಕೆ ಆಕ್ಸಿನೋವ್ ಕೊಟ್ಟ ಉತ್ತರ ತೀರಾ ಅಸಮರ್ಪಕವಾಗಿತ್ತು. ತಮಿಳು – ಮಲೆಯಾಳಗಳನ್ನು ಕುರಿತು ಯೋಚಿಸುವ ಹಾಗೂ ಆಸಕ್ತಿ ತಾಳುವ ಈ ಸಂಸ್ಥೆ ಕನ್ನಡದ ಬಗ್ಗೆ ತಟಸ್ಥವಾಗಿರಲು ಅಥವಾ ಅವಜ್ಞೆಯಿಂದಿರಲು ಕಾರಣ ಏನಿರಬಹುದೆಂಬುದು ತಿಳಿಯದಾಯಿತು. ಇಲ್ಲಿ ಇಂತಿಂತಹ ಭಾಷೆಗಳನ್ನು ಕಲಿಸಿರಿ ಎಂದಾಗಲಿ, ಕಲಿಸುವುದು ಅಗತ್ಯವೆಂಬ ಬಗೆಗಾಗಲಿ ಸೂಚನೆ, ಒತ್ತಾಯ ಎಲ್ಲಿಂದ ಹೇಗೆ, ಯಾವ ಕಾರಣಗಳಿಂದಾಗಿ ಬರುತ್ತದೆ ಎಂಬುದು ವಿಚಾರಮಾಡಬೇಕಾದ ಸಂಗತಿ. ಇರಲಿ, ಮುಂದೆ ಸಮಯ ಬಿದ್ದಾಗ ಮತ್ತೆ ಕನ್ನಡದ ಬಗ್ಗೆ ಪ್ರಸ್ತಾಪಿಸೋಣ ಎಂದು, ಪ್ರೊ. ಆಕ್ಸಿನೋವ್ ಅವರ ವಿವರಣೆಗಳಿಗೆ ಕಿವಿಗೊಟ್ಟೆ.

ಈ ರಾಷ್ಟ್ರದಲ್ಲಿ ಹದಿನೈದು ಗಣರಾಜ್ಯಗಳು. ಇವುಗಳಲ್ಲಿ ‘ರಷ್ಯಾ’ ಎಂಬುದು ಅತ್ಯಂತ ದೊಡ್ಡ ಗಣರಾಜ್ಯ. ರಷ್ಯನ್ ಭಾಷೆಯೆ ರಾಷ್ಟ್ರಭಾಷೆ. ಉಳಿದ ಹದಿನಾಲ್ಕು ರಾಜ್ಯಗಳಿಗೂ ತಮ್ಮದೇ ಆದ ಪ್ರಾದೇಶಿಕ ಭಾಷೆಗಳಿವೆ. ಅಲ್ಲಿನ ರಾಜ್ಯಗಳಲ್ಲಿ, ಅಲ್ಲಿನ ರಾಜ್ಯ ಭಾಷೆಯೆ ಅಲ್ಲಿನ ಶಿಕ್ಷಣ ಮಾಧ್ಯಮವಾಗಿದೆ. ಆದರೆ ಪ್ರಾದೇಶಿಕ ಭಾಷೆಯ ಜತೆಗೆ ಪ್ರತಿಯೊಬ್ಬ ವಿದ್ಯಾರ್ಥಿಯೂ, ರಾಷ್ಟ್ರಭಾಷೆಯಾದ ರಷ್ಯನ್ ಅನ್ನು ಕಡ್ಡಾಯವಾಗಿ ಕಲಿಯುವುದರ ಜತೆಗೆ, ಇನ್ನೊಂದು ವಿದೇಶೀ ಭಾಷೆಯನ್ನೂ ಕಲಿಯಬೇಕು. ಈ ತ್ರಿಭಾಷಾ ಸೂತ್ರದಿಂದಾಗಿ ವಿದ್ಯಾಭ್ಯಾಸ ಪದ್ಧತಿಯಲ್ಲಿ ಗೊಂದಲಗಳಾಗುವುದು ತಪ್ಪಿದೆ. ಹೊರ ದೇಶದ ವಿದ್ಯಾರ್ಥಿಗಳು ರಷ್ಯಾಕ್ಕೆ ವಿದ್ಯಾಭ್ಯಾಸಕ್ಕೆಂದು ಬಂದಾಗ, ಅವರು ಮೊದಲು ಒಂದು ವರ್ಷ ರಷ್ಯನ್ ಭಾಷೆಯನ್ನು ಕಲಿಯಬೇಕಾಗುವುದು. ಅನಂತರ ಅವರ ಶಿಕ್ಷಣ ಹಾಗೂ ಪರೀಕ್ಷೆ ರಷ್ಯನ್ ಭಾಷೆಯಲ್ಲಿ ನಡೆಯುತ್ತದೆ.

ಇಲ್ಲಿನ ಶಿಕ್ಷಣ ಕ್ರಮ ಹೀಗೆ : ಹತ್ತು ವರ್ಷಗಳ ಶಾಲಾ ಮಟ್ಟದ ಶಿಕ್ಷಣ. ಅನಂತರ ಮೂರು ಮುಖ್ಯ ವಿಷಯಗಳನ್ನೊಳಗೊಂಡ ಐದು ವರ್ಷಾವಧಿಯ ಡಿಪ್ಲೊಮಾ ಕೋರ್ಸ್. ಇದಕ್ಕೆ ಸೇರಿಕೊಳ್ಳಬೇಕಾದರೂ ಪರೀಕ್ಷೆಗೆ ಅಭ್ಯರ್ಥಿಗಳನ್ನು ಒಳಗುಪಡಿಸಿ, ಅರ್ಹರಾದವರಿಗೆ ಮಾತ್ರ ಪ್ರವೇಶಾವಕಾಶವನ್ನು ನೀಡಲಾಗುತ್ತದೆ. ಮೊದಲ ವರ್ಷದಿಂದಲೂ ಕಟ್ಟುನಿಟ್ಟಿನ ಶಿಕ್ಷಣ. ಉದ್ದಕ್ಕೂ ಪ್ರಾಯೋಗಿಕ ತರಗತಿಗಳಿರುತ್ತವೆ. ಯಾರು ಯಾರು ಯಾವ ಯಾವ ವಿಷಯವನ್ನು ಕುರಿತೋದಬೇಕೆನ್ನುವುದನ್ನು ಸರ್ಕಾರವೇ ನಿರ್ದೇಶಿಸುತ್ತದೆ. ಪ್ರತಿಯೊಂದು ಶಿಕ್ಷಣ ಸಂಸ್ಥೆಯಲ್ಲೂ ಇದನ್ನು ನಿರ್ಧರಿಸುವ, ವಿಶೇಷ ಪರಿಣತಿಗಾಗಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ಸರ್ಕಾರದ ಪರವಾದ ಸಮಿತಿಯೊಂದು ಇರುತ್ತದೆ. ವಿದ್ಯಾರ್ಥಿಗಳ ಶಿಕ್ಷಣ ಉಚಿತ. ಹಾಜರಾತಿ ನೂರಕ್ಕೆ ತೊಂಬತ್ತೈದರಷ್ಟಿರಲೇಬೇಕು.

ಪ್ರತಿಯೊಂದು ವಿಷಯದ ಅಧ್ಯಯನಕ್ಕೆ ಪಾಠಗಳನ್ನು ತಯಾರಿಸಲಾಗುವುದು. ಸೈಂಟಿಫಿಕ್ ಗೈಡ್ ಅನ್ನುವವರ ಉಸ್ತುವಾರಿಕೆಯಲ್ಲಿ ವಿದ್ಯಾರ್ಥಿಗಳು ಕೆಲಸ ಮಾಡಬೇಕು. ರಾಷ್ಟ್ರದ ಎಲ್ಲ ಪ್ರೌಢ ಶಿಕ್ಷಣ ಸಂಸ್ಥೆಗಳ ಬಾಗಿಲು ತೆರೆಯುವುದು ಸೆಪ್ಟೆಂಬರ್ ಒಂದನೆ ತಾರೀಖು. ಜನವರಿ ಮೊದಲ ಪರೀಕ್ಷೆಗಳ ಕಾಲ. ಜನವರಿ ಇಪ್ಪತ್ತೈದರಿಂದ ಫೆಬ್ರುವರಿ ಏಳನೇ ತಾರೀಖಿನವರೆಗೆ ಚಳಿಗಾಲದ ರಜಾ. ಅನಂತರ ಜೂನ್ ತಿಂಗಳು ಎರಡನೇ ಪರೀಕ್ಷೆಗಳ ಕಾಲ. ಜುಲೈ, ಆಗಸ್ಟ್ ತಿಂಗಳು ಬೇಸಿಗೆಯ ರಜಾ.

ಇಲ್ಲಿನ ಪರೀಕ್ಷೆಗಳೆಂದರೆ ವರ್ಷದುದ್ದಕ್ಕೂ ಉಂಡದ್ದನ್ನು ಕಾಗದದ ಮೇಲೆ ಕಾರಿಕೊಳ್ಳುವ ತಂತ್ರವಲ್ಲ. ಇಲ್ಲಿ ಎಲ್ಲ ಪರೀಕ್ಷೆಗಳೂ ವಾಚಿಕ.

ಅರ್ಧ ವರ್ಷಕ್ಕೆರಡರಂತೆ ನಾಲ್ಕು ಪರೀಕ್ಷೆಗಳು; ಅನಂತರ ಇನ್ನೊಂದು ದೊಡ್ಡ ಪರೀಕ್ಷೆ. ಪರೀಕ್ಷೆಗೆ ಮೊದಲೆ ತೊಂಬತ್ತು ಪ್ರಶ್ನೆಗಳನ್ನು ಪ್ರಕಟಿಸಲಾಗುವುದು. ವಿದ್ಯಾರ್ಥಿಗಳು ಅಷ್ಟು ಪ್ರಶ್ನೆಗಳಿಗೂ ಉತ್ತರ ಕೊಡಲು ಸಿದ್ಧ ಮಾಡಿಕೊಳ್ಳಬೇಕಾಗುತ್ತದೆ. ಅನಂತರ ಪರೀಕ್ಷೆಯ ದಿನವನ್ನೂ, ಪರೀಕ್ಷೆ ತೆಗೆದುಕೊಳ್ಳಬೇಕಾದ ವಿದ್ಯಾರ್ಥಿಗಳ ಹೆಸರನ್ನೂ ಪ್ರಕಟಿಸಲಾಗುತ್ತದೆ. ಆಗ ಹಿಂದೆ ತಾನು ನೋಡಿದ ಆ ತೊಂಬತ್ತು ಪ್ರಶ್ನೆಗಳನ್ನೂ, ಒಂದು ಪ್ರಶ್ನಪತ್ರಿಕೆಗೆ ಮೂರರಂತೆ ಹಂಚಿ ಮೂವತ್ತು ಪ್ರಶ್ನಪತ್ರಿಕೆಗಳನ್ನು ಸಿದ್ಧಪಡಿಸಿ, ಟೇಬಲ್ಲಿನ ಮೇಲೆ ಮಗುಚಿ ಇರಿಸಲಾಗುತ್ತದೆ. ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿ ಆ ಮೂವತ್ತು ಪ್ರಶ್ನಪತ್ರಿಕೆಗಳಲ್ಲಿ ಯಾವುದೊಂದನ್ನಾದರೂ ಆರಿಸಿಕೊಳ್ಳಬಹುದು. ತಾನು ಹಿಂದೆ ಕಂಡ ತೊಂಬತ್ತು ಪ್ರಶ್ನೆಗಳಲ್ಲಿ ಯಾವ ಮೂರು ಪ್ರಶ್ನೆಗಳಿಗೆ ಉತ್ತರ ಕೊಡಲು ಸಿದ್ಧವಾಗಬೇಕೆಂಬುದು, ಆತ ತನಗೆ ಬಂದ ಪ್ರಶ್ನಪತ್ರಿಕೆಯನ್ನು ನೋಡಿದ ಮೇಲೆ ತಿಳಿಯುವುದು. ಆಗ ಆ ವಿದ್ಯಾರ್ಥಿಗೆ ಸಿದ್ಧವಾಗಲು ಸುಮಾರು ನಲವತ್ತೈದು ನಿಮಿಷಗಳ ಅವಧಿ. ಈ ಅವಧಿಯಲ್ಲಿ ಆತನಿಗೆ ಯಾವ ಪುಸ್ತಕಗಳನ್ನೂ ಒದಗಿಸಲಾಗುವುದಿಲ್ಲ. ಈ ಪ್ರಶ್ನೆಗಳಿಗೆ ಉತ್ತರಕೊಡಲು ಓದಿದ್ದನ್ನು ನೆನಪಿಸಿಕೊಳ್ಳಲು ಈ ಅವಕಾಶ. ವಿದ್ಯಾರ್ಥಿ ಆಗಲೇ ಸಿದ್ಧನಾಗಿದ್ದ ಪಕ್ಷದಲ್ಲಿ ಪರೀಕ್ಷೆ. ಮೂರು ನಾಲ್ಕು ಅಧ್ಯಾಪಕರೆದುರಿಗೆ ಕೂತು, ಆತ ತನಗೆ ಬಂದ ಆ ಮೂರು ಪ್ರಶ್ನೆಗಳಿಗೆ ಬಾಯಲ್ಲಿ ಉತ್ತರ ಹೇಳಬೇಕು. ಪರೀಕ್ಷಕರು ಹಾಕುವ ಪ್ರಶ್ನೆ – ಪ್ರತಿ ಪ್ರಶ್ನೆಗಳಿಗೆ ಉತ್ತರ ಕೊಡಬೇಕು. ಈ ಪರೀಕ್ಷೆಗೆ ಒಟ್ಟು ಐದು ಅಂಕಗಳು. ಐದಕ್ಕೆ ಐದು ಬಂದರೆ ‘ಎಕ್ಸ್‌ಲೆಂಟ್.’ ನಾಲ್ಕು ಬಂದರೆ ‘ಗುಡ್’, ಮೂರು ಬಂದರೆ ‘ಸಾಟಿಸ್‌ಫ್ಯಾಕ್ಟರಿ’, ಅಷ್ಪೂ ಬಾರದಿದ್ದರೆ ‘ಬ್ಯಾಡ್’. ವಿದ್ಯಾರ್ಥಿಗೆ ಆಗಿಂದಾಗಲೆ ಅವನ ಯೋಗ್ಯತೆ ಏನೆಂಬುದನ್ನು ತಿಳಿಸಲಾಗುತ್ತದೆ. ಎಲ್ಲಾ ಪರೀಕ್ಷೆಗಳಲ್ಲೂ ಐದು ವರ್ಷಾವಧಿಯಲ್ಲಿ ಬಂದ ಅಷ್ಟೂ ಅಂಕಗಳ ಆಧಾರದಿಂದ ಅವನಿಗೆ ಡಿಪ್ಲೊಮಾ ನೀಡಲಾಗುತ್ತದೆ.

ಈ ಡಿಪ್ಲೊಮಾ ಪರೀಕ್ಷೆಯಲ್ಲಿ ಅತ್ಯುತ್ತಮವಾದ ದರ್ಜೆಯಲ್ಲಿ ತೇರ್ಗಡೆಯಾದವನು ಮುಂದೆ ಮೂರು ವರ್ಷಾವಧಿಯ ‘ಆಸ್ಪಿರಂಟೂರ’ (Aspirantura) ಎಂಬ ಶಿಕ್ಷಣಕ್ಕೆ ಅರ್ಹನಾಗುತ್ತಾನೆ. ಈ ಅವಧಿಯಲ್ಲಿ ಆತ ನಿಬಂಧವನ್ನು ಸಿದ್ಧಪಡಿಸಿ, ಅದರ ಮೂಲಕ ತೇರ್ಗಡೆಯಾದರೆ ‘ಕ್ಯಾಂಡಿಡೇಟ್ ಆಫ್ ಸೈನ್ಸ್’ ಎಂಬ ಪದವಿಯನ್ನು ಪಡೆಯುತ್ತಾನೆ. ಇದು ಬಹುಶಃ ನಮ್ಮ ಪಿ. ಎಚ್. ಡಿ. ಪದವಿಗೆ ಸಮಾನ ಎಂದು ಎಣಿಸಬಹುದು. ಆದರೆ ರಷ್ಯದಲ್ಲಿ ಇದು ಪಿ. ಹೆಚ್. ಡಿ ಅಲ್ಲ. ಈ ‘ಕ್ಯಾಂಡಿಡೇಟ್ ಆಫ್ ಸೈನ್ಸ್’ ಆದವನು, ಸ್ವತಂತ್ರವಾಗಿ ಕೆಲಸ ಮಾಡಿ, ನಿಜವಾದ ಸಂಶೋಧನೆಯನ್ನು ಪ್ರಕಟಿಸುವ ‘ಥೀಸೀಸ್’ ಅನ್ನು ಅರ್ಪಿಸಿದರೆ, ಆಗ ಆತ ‘ಡಿಎಸ್. ಸಿ’ ಅಥವಾ ಡಾಕ್ಟರೇಟ್ ಪದವಿಯನ್ನು ಪಡೆಯಬಹುದು. ಹೀಗಾಗಿ ಈ ಮಟ್ಟದ ಪದವಿಯನ್ನು ಪಡೆಯುವವರು ತುಂಬ ವಿರಳ.

ನಾನೂ ಇನ್‌ಸ್ಟಿಟ್ಯೂಟಿನ ವಿದ್ಯಾರ್ಥಿ ಹಾಗೂ ಅಧ್ಯಾಪಕರಿಗೆ ನಮ್ಮಲ್ಲಿನ ಶಿಕ್ಷಣ ಕ್ರಮವನ್ನು ವಿವರಿಸಿದೆ. ‘ನಮ್ಮಲ್ಲಿಯಂತೆ ನಿಮ್ಮಲ್ಲೂ ವಿದ್ಯಾರ್ಥಿ ಮುಷ್ಕರಗಳಿವೆಯೆ’ ಎಂದು ಡಾ. ಅಕ್ಸಿನೋವ್ ಅವರನ್ನು ಕೇಳಿದೆ. “No. God has saved us”  ಎಂದರು ! ಒಂದು ವೇಳೆ ಇಲ್ಲೂ ವಿದ್ಯಾರ್ಥಿ ಮುಷ್ಕರಗಳಿದ್ದ ಪಕ್ಷದಲ್ಲಿ ಈ ಊರಿನ ಎಲ್ಲಾ ಅಂಗಡಿ – ಹೋಟೆಲುಗಳ ಗಾಜುಗಳು ಇಷ್ಟರ ಮಟ್ಟಿಗೆ ಖಂಡಿತ ಸುರಕ್ಷಿತವಾಗಿರುತ್ತಿರಲಿಲ್ಲ !