ಸದಾ ಹಾರಿ ಹೋಗಲೆಂದೇ
ತವಕಿಸುವ ಈ ಹಕ್ಕಿಗೆ
ಬೇಕಾಗಿದೆ ಅಥವಾ ಹುಡುಕುತ್ತಿದೆ
ಏನಾದರೂ ಒಂದು ನೆಪಕ್ಕೆ.

ಈ ಹಕ್ಕಿ ಹೇಗಿದೆಯೋ
ಇನ್ನೂ ಗೊತ್ತಿಲ್ಲ.
ಕಣ್ಣಿಗೆ ಕಾಣುವುದಲ್ಲ
ಹಿಡಿತಕ್ಕೆ ಸಿಕ್ಕುವುದಲ್ಲ
ಎಲ್ಲಿಂದ ಬಂತೋ ಎಲ್ಲಿಗೆ ಹೋಗುತ್ತೋ
ತಿಳಿಯುವುದಿಲ್ಲ
ಆದರೂ ಇರುವಷ್ಟು ಹೊತ್ತು
ಈ ಪಂಜರದೊಳಗೇ
ಇದರ ಚಡಪಡಿಕೆ.

ಪಂಜರದೊಳಗಿದ್ದೂ, ಇದು
ಏರದ ಎತ್ತರವಿಲ್ಲ
ಮುಳುಗದ ಆಳಗಳಿಲ್ಲ
ಕಾಣದ ನೋಟಗಳಿಲ್ಲ
ಆಡದ ಆಟಗಳಿಲ್ಲ.

ನಂಬುವಂತಿಲ್ಲ ಈ
ಹಕ್ಕಿಯನ್ನು
ಸದಾ ಹಾರಿ ಹೋಗಲೆಂದೇ
ತವಕಿಸುವ, ಈ
ಅತಿಥಿಯನ್ನು.