ರಾತ್ರಿ ವೇಳೆ ನಿಮಗೆ ಇದ್ದಕ್ಕಿದ್ದಂತೆ ಬಾಯಾರಿಕೆ ಆಗಿ ಎಚ್ಚರವಾಯಿತು ಎಂದಿಟ್ಟುಕೊಳ್ಳಿ. ನೀರು ಕುಡಿಯಲು ಅಡುಗೆ ಮನೆಯ ದೀಪ ಹಾಕುತ್ತೀರಿ. ದೀಪ ಬೆಳಗಿದೊಡನೆ ಅಲ್ಲೆಲ್ಲಾ ಇದ್ದ ಜಿರಳೆಗಳು ಬೆಳಕಿನಿಂದ ದೂರ ಓಡಿ ಮರೆಯಾಗುವುದು ನಿಮ್ಮ ಅನುಭವಕ್ಕೆ ಬಂದಿರಬಹುದು. ಇಲ್ಲಿ ಬೆಳಕು ಒಂದು ಪ್ರಚೋದನೆ. ಜಿರಳೆಗಳು ಬೆಳಕನ್ನು ಕಂಡೊಡನೆ ತಮ್ಮಷ್ಟಕ್ಕೆ ತಾವೇ ಓಡಿ ಸಂದುಗೊಂದುಗಳಲ್ಲಿ ಅವಿತುಕೊಂಡು ಬಿಡುತ್ತವೆ. ಇದಕ್ಕೆ ವಿನಾಯಿತಿ ನಿಮಗೆ ಎಲ್ಲಿಯೂ ಕಾಣ ಸಿಗುವುದಿಲ್ಲ.

ನೀವು ಸುಟ್ಟ ಕೊಬ್ಬರಿಯ ಒಂದು ಚಿಕ್ಕ ತುಣುಕನ್ನು ಮನೆಯ ಮುಂದೆ ಇಡಿ. ಸ್ವಲ್ಪ ಹೊತ್ತಿನೊಳಗೆ ಬಹಳಷ್ಟು ಇರುವೆಗಳು ಆ ತುಣುಕಿನ ಕಡೆಗೆ ಧಾವಿಸಿಬರುವುದನ್ನು ನೀವು ನೋಡುತ್ತೀರಿ. ಪ್ರಾಣಿಗಳಲ್ಲಿ ಕಂಡುಬರುವ ಇಂಥ ವರ್ತನೆಗಳನ್ನು ನಾವು ಅನುಚಲನ ವರ್ತನೆಗಳು ಎನ್ನುತ್ತೇವೆ. ಇದನ್ನು ಇಂಗ್ಲಿಷಿನಲ್ಲಿ taxis ಎನ್ನುತ್ತಾರೆ. ‘ಅನುಚಲನ’ ಎಂಬುದು ಒಂದು ನಿರ್ದಿಷ್ಟ ಪ್ರಚೋದನೆ ಜೀವಿಗಳಲ್ಲಿ ಕಂಡುಬರುವ ನಿರ್ದಿಷ್ಟ ರೀತಿಯ ಸ್ವಚಾಲಿತ ಚಲನೆಗಳು. ಇದು ಆನುವಂಶಿಕವಾಗಿ ಇಲ್ಲವೇ ಕಲಿಕೆಯ ಮೂಲಕ ಜೀವಿಗಳಿಗೆ ಬರುವ ಒಂದು ನಡೆವಳಿಕೆ. ಅನುಚಲನವು ಪ್ರಾಣಿಗಳಲ್ಲಿ ಕಂಡುಬರುವ ಯಾದೃಚ್ಛಿಕ ಚಲನೆಗಳನ್ನ ಒಳಗೊಳ್ಳುವುದಿಲ್ಲ. ಪ್ರಾಣಿಗಳ ಅನುಚಲನಾ ನಡೆವಳಿಕೆಗಳನ್ನು ಪ್ರಧಾನವಾಗಿ ಎರಡು ಗುಂಪುಗಳನ್ನಾಗಿ ವಿಂಗಡಿಸುತ್ತಾರೆ. ಒಂದು ನಿರ್ದಿಷ್ಟ ಪ್ರಚೋದನೆಯ ಕಡೆಗೆ ಆಕರ್ಷಣೆಗೆ ಒಳಗಾದ ಪ್ರಾಣಿಗಳು ಆ ಪ್ರಚೋದನೆಯ ಆಕರದ ಕಡೆಗೆ ಚಲನೆಯನ್ನು ತೋರಿಸುತ್ತವೆ. ಈ ರೀತಿಯ ಅನುಚಲನ ವರ್ತನೆಯನ್ನು ಧನಾತ್ಮಕ ಅನುಚಲನ ಎಂದು ಕರೆಯುತ್ತಾರೆ. ಇಂಗ್ಲಿಷಿನಲ್ಲಿ ಇದಕ್ಕೆ positive taxis ಎಂದು ಹೆಸರು. ಇರುವೆಗಳು ಸುವಾಸನೆಯುಕ್ತ ಕೊಬ್ಬರಿಯ ತುಣುಕಿನ ಕಡೆಗೆ ಓಡೋಡಿ ಬರುವುದು ಧನಾತ್ಮಕ ಅನುಚಲನ ವರ್ತನೆ.

ಕೆಲವೊಂದು ಪ್ರಾಣಿಗಳು ನಿರ್ದಿಷ್ಟ ಪ್ರಚೋದನೆ ಗ್ರಹಿಕೆಗೆ ಬಂದೊಡನೆ ಆ ಪ್ರಚೋದನೆಯ ಆಕರದಿಂದ ದೂರ ಹೋಗುತ್ತವೆ. ಈ ರೀತಿಯ ಅನುಚಲನ ವರ್ತನೆಗಳಿಗೆ ಋಣಾತ್ಮಕ ಅನುಚಲನ ಎನ್ನುತ್ತಾರೆ. ಇದಕ್ಕೆ ಇಂಗ್ಲಿಷಿನಲ್ಲಿ negative taxis ಎನ್ನುವರು. ಜಿರಳೆಗಳು ಬೆಳಕಿನಿಂದ ದೂರಹೋಗುವುದು ಋಣಾತ್ಮಕ ಅನುಚಲನಕ್ಕೆ ಒಂದು ಉದಾಹರಣೆ. ಒಂದು ಜೀವಿ ಒಂದು ನಿರ್ದಿಷ್ಟ ಪ್ರಚೋದನೆಗೆ ಧನಾತ್ಮಕ ಅನುಚಲನತೆ ತೋರಿಸಬಹುದು ಇಲ್ಲವೇ ಋಣಾತ್ಮಕ ಅನುಚಲನತೆ ತೋರಿಸಬಹುದು. ಒಂದೇ ಜೀವಿ ಕೆಲವು ಸಂದರ್ಭಗಳಲ್ಲಿ ನಿರ್ದಿಷ್ಟ ಪ್ರಚೋದನೆಗೆ ಧನಾತ್ಮಕ ಅನುಚಲನ ವರ್ತನೆ ತೋರಿ, ಇನ್ನು ಕೆಲವು ಸಂದರ್ಭಗಳಲ್ಲಿ ಋಣಾತ್ಮಕ ಅನುಚಲನತೆಯನ್ನು ತೋರಬಹುದು. ಇದು ಪ್ರಚೋದನೆಯ ಸಾಮರ್ಥ್ಯ ಮತ್ತು ಜೀವಿಯ ಶರೀರದ ಆಂತರಿಕ ಸ್ಥಿತಿಗಳನ್ನು ಅವಲಂಬಿಸಿರುತ್ತದೆ. ಹೆಚ್ಚು ವಿಕಾಸಗೊಂಡಿರುವ ಉನ್ನತ ಪ್ರಾಣಿಗಳಲ್ಲಿ ಅನುವರ್ತನಾ ಚಲನೆಗಳು ಬಹುಮಟ್ಟಿಗೆ ಕಲಿಕೆಯ ಮೂಲಕ ಪಡೆದಿರುವ ನಡೆವಳಿಕೆಗಳು. ಮಾಗಿದ ಹಣ್ಣುಗಳಿರುವ ಕಡೆ ಗುಂಗುರು (ಹಣ್ಣುನೊಣ)ಗಳು ಸುತ್ತಾಡುವುದನ್ನು ನೀವು ಕಂಡಿರಬಹುದು. ಇದೂ ಧನಾತ್ಮಕ ಅನುಚಲನತೆಯೇ.

ಪ್ರಾಣಿಗಳು ಯಾವ ರೀತಿಯ ಪ್ರಚೋದನೆಗಳ ಕಡೆಗೆ ಅಥವಾ ಅವಕ್ಕೆ ವಿಮುಖವಾಗಿ ಚಲನೆಗಳನ್ನು ತೋರುತ್ತವೆ ಎಂಬುದನ್ನು ಆಧರಿಸಿ ಅನುಚಲನ ನಡೆವಳಿಕೆಗಳನ್ನು ಹಲವು ಗುಂಪುಗಳಾಗಿ ವಿಂಗಡಿಸುತ್ತಾರೆ. ಉದಾಹರಣೆಗೆ, ಬೆಳಕಿಗೆ ಚಲನ ರೂಪದ ಸ್ಪಂದನಗಳನ್ನು – ಬೆಳಕಿನ ಆಕರದ ದಿಕ್ಕಿಗೆ ಇಲ್ಲವೇ ಆಕರದಿಂದ ದೂರಕ್ಕೆ ಹೋಗುವುದು – ದ್ಯುತಿ ಅನುಚಲನ ಎನ್ನುತ್ತಾರೆ. ಇಂಗ್ಲಿಷಿನಲ್ಲಿ ಇದಕ್ಕೆ   Phototaxis ಎಂದು ಹೆಸರು ಕೊಟ್ಟಿದ್ದಾರೆ. ಹಾಗೆಯೇ, ರಾಸಾಯನಿಕ ಪ್ರಚೋದನೆಗಳಿಗೆ ಪ್ರಾಣಿಗಳು ನೀಡುವ ಚಲನ ರೂಪದ      ಸ್ಪಂದನಗಳಿಗೆ ರಾಸಾಯನಿಕ ಅನುಚಲನೆ ಎಂದು ಕರೆದಿದ್ದಾರೆ. ಇಂಗ್ಲಿಷಿನಲ್ಲಿ ಇದಕ್ಕೆ chemotaxis ಎಂದು ಹೆಸರು. ಇತರ ರೀತಿಯ ಅನುಚಲನ ವರ್ತನೆಗಳಲ್ಲಿ ಸ್ಪರ್ಶ ಅನುಚಲನ, ಒತ್ತಡ ಅನುಚಲನ, ತಾಪ ಅನುಚಲನ, ವಿದ್ಯುದನುಚಲನ, ಮಾರುತ ಅನುಚಲನ, ತರಲ ಅನುಚಲನ, ಉಷ್ಣ ಅನುಚಲನ, ಗುರುತ್ವ ಅನುಚಲನ, ಕಾಂತೀಯ ಅನುಚಲನ, ಧ್ವನಿ ಅನುಚಲನಗಳು ಸೇರಿವೆ.

 

ಯೂಗ್ಲಿನಾ ಎಂಬ ಜೀವಿಯ ಬಗ್ಗೆ ನಿಮಗೆ ಗೊತ್ತಿರಬಹುದು. ಇದು ಏಕಕೋಶ ಜೀವಿ. ಈ ಜೀವಿಯ ದೇಹದಲ್ಲಿ ಹರಿತ್ತು ಇರುವುದರಿಂದ ಇದು ತನ್ನ ಆಹಾರವನ್ನು ತಾನೇ ತಯಾರಿಸಿಕೊಳ್ಳಬಲ್ಲುದು. ದ್ಯುತಿ ಸಂಶ್ಲೇಷಣೆಗೆ ಬೆಳಕು ಬೇಕು ತಾನೇ? ಯುಗ್ಲಿನಾದ ದೇಹದಲ್ಲಿ ‘ಕಣ್ಣಿನಂಥ’ ಒಂದು ರಚನೆ ಇದೆ. ಇದು ಬೆಳಕಿನ ಕಡೆಗೆ ಹೋಗುವುದಕ್ಕೆ ಯುಗ್ಲಿನಾಗೆ ನೆರವು ನೀಡುತ್ತದೆ. ಈ ನಡೆವಳಿಕೆಯಲ್ಲಿ ಕಂಡುಬರುವುದು ಧನಾತ್ಮಕ ದ್ಯುತಿ ಅನುಚಲನ. ಇದೇ ರೀತಿ, ಕ್ಲಾಮಿಡೊಮೊನಸ್ ಎಂಬ ಶೈವಲ ಸಹ ಧನಾತ್ಮಕ ದ್ಯುತಿ ಅನುಚಲನೆಯನ್ನು ತೋರಿಸುತ್ತದೆ. ಕೆಲವು ಮೀನುಗಳು ನೀರು ಹರಿಯುವುದಕ್ಕೆ ವಿರುದ್ಧ ದಿಕ್ಕಿನಲ್ಲಿ ಮುಖಮಾಡಿ ನಿಲ್ಲುತ್ತವೆ. ಇದು ತರಲ ಅನುಚಲನತೆ. ಪ್ರವಾಹದೊಂದಿಗೆ ಕೊಚ್ಚಿಹೋಗುವುದರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಕೆಲವು ಪ್ರಭೇದದ ಮೀನುಗಳು ಈ ರೀತಿಯ ಅನುಚಲನೆಯನ್ನು ತೋರುತ್ತವೆ. ಕೆಲವು ಬ್ಯಾಕ್ಟೀರಿಯಾಗಳಲ್ಲಿ ಕಂಡುಬರುವ ಕಾಂತೀಯ ಅನುಚಲನೆ ಕುತೂಹಲಕಾರಿ. ಮ್ಯಾಗ್ನೆಟೊಸ್ಪೈರಿಲ್ಲಮ್ ಎಂಬ ಬ್ಯಾಕ್ಟೀರಿಯಾಗಳ ದೇಹವೇ ಕಾಂತದಂತೆ ವರ್ತಿಸುತ್ತದೆ. ಈ ರೀತಿಯ ಬ್ಯಾಕ್ಟೀರಿಯಾಗಳು ಬಾಹ್ಯ ಕಾಂತಕ್ಷೇತ್ರವನ್ನು ಸಮೀಪಿಸಿದಾಗ ಆ ಕಾಂತಕ್ಷೇತ್ರಗಳ ಅಂತರ್‌ಕ್ರಿಯೆಯಿಂದ ಬ್ಯಾಕ್ಟೀರಿಯಾಗಳಲ್ಲಿ ವಿಶಿಷ್ಟ ಚಲನೆ ಉಂಟಾಗುವುದು. ವೀರ್ಯಾಣುಗಳಲ್ಲಿ ರಾಸಾಯನಿಕ ಅನುಚಲನತೆ ಕಂಡುಬರುತ್ತದೆ. ಅಂಡಾಣುಗಳು ಸ್ರವಿಸುವ ಒಂದು ರಾಸಾಯನಿಕವು ವೀರ್ಯಾಣುಗಳನ್ನು ತನ್ನೆಡೆಗೆ ಸೆಳೆಯುತ್ತದೆ. ಇದು ಧನಾತ್ಮಕ ರಸ ಅನುಚಲನೆ. ಜಂತುಗಳ ಗುಂಪಿಗೆ ಸೇರಿದ ಸಿ. ಎಲಿಗನ್ಸ್ ಎಂಬ ಒಂದು ಜೀವಿ ಇದೆ. ಅದು ಉಷ್ಣ ಸಂವೇದನೆಗಳಿಗೆ ಚಲನೆಯ ಮೂಲಕ ಸಂವೇದನೆ ತೋರುತ್ತದೆ. ಅದರ ಆವಾಸದಲ್ಲಿ ಉಷ್ಣ ವ್ಯತ್ಯಾಸವಿರುವ ಎರಡು ಪ್ರದೇಶಗಳಿವೆ ಎಂದಿಟ್ಟುಕೊಳ್ಳಿ. ಅದು ಈ ಪ್ರಚೋದನೆಯನ್ನು ಗ್ರಹಿಸಿ, ತನಗೆ ಹಿತವೆನಿಸುವ ತಾಪವಿರುವ ಪ್ರದೇಶದ ಕಡೆಗೆ ಕೂಡಲೆ ಯಾತ್ರೆ ಆರಂಭಿಸುತ್ತದೆ.

ಪ್ರಾಣಿಗಳು ಅನುಚಲನ ವರ್ತನೆಗಳನ್ನು ತೋರುವುವೇಕೆ? ಪ್ರಾಯಃ ಅದು ಬದುಕುಳಿಯುವುದಕ್ಕೆ ನೆರವಾಗುವ ಹೊಂದಾಣಿಕೆಯ ತಂತ್ರ. ಈ ಚಲನೆಗಳು ಇಲ್ಲದಿದ್ದ ಪಕ್ಷದಲ್ಲಿ ಬದುಕುಳಿದು ಸಂತಾನವನ್ನು ಮುಂದುವರಿಸಿಕೊಂಡು ಹೋಗುವುದು ಆಯಾ ಜೀವಿಗಳಿಗೆ ಸಾಧ್ಯವಾಗುತ್ತಿರಲಿಲ್ಲ. ಯುಗ್ಲಿನಾಗೆ ಬೆಳಕಿನ ಕಡೆಗೆ ಚಲಿಸುವ ಅನುಚಲನಾ ನಡೆವಳಿಕೆ ಇಲ್ಲದಿದ್ದರೆ ಅದು  ನಾಶಗೊಳ್ಳುತ್ತಿತ್ತೇನೊ. ಇಲ್ಲವೇ ಅದರ ದೇಹದಲ್ಲಿ ನೈಸರ್ಗಿಕ ಆಯ್ಕೆಯ ಮೂಲಕ ಯುಕ್ತ ಮಾರ್ಪಾಡುಗಳು
ಆಗಿರುತಿತ್ತು. ನಿಸರ್ಗ ಯಾವುದನ್ನೂ ಹಾಗೆಯೇ ಉಳಿಸುವುದಿಲ್ಲ, ಅಲ್ಲವೇ?