ಪ್ರಧಾನ ಜೀವಕಲ್ಪಗಳು

ಅವಧಿಗಳು

ಯುಗಗಳು ಪ್ರಸಕ್ತ ಕಾಲದಿಂದ ಪ್ರಾಚೀನತೆ ಆಯಾ ಅವಧಿಯ ಪ್ರಮುಖ ಪ್ರಾಣಿ ಸಂಕುಲಗಳು ಫ್ರಭಲ ಪ್ರಾಣಿಗಳು
ಸೀನೋಜೋಯಿಕ್‌ ಕ್ವಾರ್ಟನರಿ ರೀಸೆಂಟ್ ೨೦,೦೦೦ ವರ್ಷಗಳು   ಮನುಷ್ಯ
ಪ್ಲೈಸ್ಟೊಸೀನ್ ೧ ಮಿಲಿಯ ವರ್ಷಗಳ ಹಿಂದೆ ಪ್ರಾಚೀನ ಮನುಷ್ಯ, ಅನೇಕ ಬೃಹದ್‌ಸಸ್ತನಿಗಳು, ಇವುಗಳಲ್ಲಿ ಕೆಲವು ಲುಪ್ತವಾದವು
ಟರ್ಷಿಯರಿ ಪ್ಲೈಯೋಸೀನ್ ೧೧ ಮಿಲಿಯ ವರ್ಷಗಳ ಹಿಂದೆ ಕೆಲವು ಸಸ್ತನಿಗಳ ಅವನತಿ ಸಸ್ತನಿಗಳು
ಮಿಯೋಸೀನ್ ೨೫ ಮಿಲಿಯ ವರ್ಷಗಳ ಹಿಂದೆ ಅನೇಕ ಸಸ್ತನಿಗಳು, ಆಧುನಿಕ ಕಾರ್ನಿವೋರ
ಅಲಿಗೋಸೀನ್ ೪೦ ಮಿಲಿಯ ವರ್ಷಗಳ ಹಿಂದೆ ಉನ್ನತ ಸಸ್ತನಿಗಳ ಉನ್ನತಿ
ಇಯೋಸೀನ್ ೬೦ ಮಿಲಿಯ ವರ್ಷಗಳ ಹಿಂದೆ ಆಧುನಿಕ ಸಸ್ತನಿಗಳ ಉಗಮ, ಪ್ರಾಚೀನ ಸಸ್ತನಿಗಳ ಕಣ್ಮರೆ
ಪೇಲಿಯೋಸೀನ್ ೭೦ ಮಿಲಿಯ ವರ್ಷಗಳ ಹಿಂದೆ ಪ್ರಾಸೆಂಟಲ್‌ಸಸ್ತನಿಗಳ ಉಗಮ, ಆಧುನಿಕ ಪಕ್ಷಿಗಳ ಉಗಮ
ಮೀಸೋಜೋಯಿಕ್‌ ಕ್ರಿಟೇಷಿಯಸ್‌   ೧೩೫ ಮಿಲಿಯ ವರ್ಷಗಳ ಹಿಂದೆ ಮಾರ್ಸುಪಿಯೇಲಿಯ, ಇನ್‌ಸೆಕ್ಟಿವೊರ, ಆದಿಮ ಪಕ್ಷಿಗಳು, ದೈತ್ಯೋರಗಗಳ ಏಳಿಗೆ ಮತ್ತು ಅವನತಿ, ಮೊದಲ ಹಾವುಗಳು, ಆಧುನಿಕ ಮೀನುಗಳು ಮತ್ತು ಅಕಶೇರುಕಗಳು ಸರೀಸೃಪಗಳ ಸುವರ್ಣ ಯುಗ
ಜುರಾಸಿಕ್‌   ೧೮೦ ಮಿಲಿಯ ವರ್ಷಗಳ ಹಿಂದೆ ಹಲ್ಲಿರುವ ಹಕ್ಕಿಗಳು, ದೈತ್ಯೋರಗಗಳು, ಮೊದಲ ಹಲ್ಲಿ ಮತ್ತು ಮೊಸಳೆಗಳು, ಆದಿ ಸಸ್ತನಿಗಳು ಆಧುನಿಕ ಶಾರ್ಕುಗಳು ಮತ್ತು ಮೂಳೆ ಮೀನುಗಳು, ಮೃದ್ವಂಗಿಗಳು
ಟ್ರೈಯಾಸಿಕ್   ೨೨೫ ಮಿಲಿಯ ವರ್ಷಗಳ ಹಿಂದೆ ಡೈನೊಸಾರ್ ಗಳ ಉಗಮ, ಕಡಲಿನಲ್ಲಿ ಅನೇಕ ಮೂಳೆ ಮೀನುಗಳು, ಕವಚಧಾರಿ ಉಭಯಚರಿಗಳು
ಪರ್ಮಿಯನ್‌   ೨೭೦ ಮಿಲಿಯ ವರ್ಷಗಳ ಹಿಂದೆ ಉಭಯಚರಿಗಳ ಅವನತಿ, ಪ್ರಾಚೀನ ಸರೀಸೃಪಗಳು ಆಧುನಿಕ ಕೀಟಗಳು
ಕಾರ್ಬಾನಿಫೆರಸ್‌   ೩೫೦ ಮಿಲಿಯ ವರ್ಷಗಳ ಹಿಂದೆ ಉಭಯಚರಿಗಳ ಪ್ರಭಲತೆ, ಮೊದಲ ಸರೀಸೃಪಗಳು ಪುಪ್ಪುಸ ಮೀನುಗಳು, ಅನೇಕ ಕೀಟಗಳು
ಪೇಲಿಯೋಜೋಯಿಕ್‌ (೨೪%) ಡಿವೋನಿಯನ್   ೪೦೦ ಮಿಲಿಯ ವರ್ಷಗಳ ಹಿಂದೆ ಆಸ್ಟ್ರೆಕೊಡರ್ಮಿ (ಮೂಳೆ ಕವಚದ ಮೀನುಗಳು) ಎಲ್ಲ ವಿವಿಧ ಮೀನುಗಳು, ಭೂಮಿಯ ಮೇಲೆ ಮೊದಲ ಬಾರಿಗೆ ಗಾಳಿ ಉಸಿರಾಡಿದ ಪ್ರಾಣಿಗಳು ಮೀನುಗಳ ಸುವರ್ಣ ಯುಗ
ಸೈಲೂರಿಯನ್‌   ೪೪೦ ಮಿಲಿಯ ವರ್ಷಗಳ ಹಿಂದೆ ಅನೇಕ ಮೃದ್ವಂಗಿಗಳು, ಆಸ್ಟ್ರೆಕೊಡರ್ಮಿಗಳು
ಆರ್ಡೊವೀಕಿಯನ್   ೫೦೦ ಮಿಲಿಯ ವರ್ಷಗಳ ಹಿಂದೆ ಪ್ರಾಚೀನ ಕವಚದ ಮೀನುಗಳು, ಅಕಶೇರುಕಗಳು
ಕೇಂಬ್ರಿಯನ್   ೬೦೦ ಮಿಲಿಯ ವರ್ಷಗಳ ಹಿಂದೆ ಕೇವಲ ಅಕಶೇರುಕಗಳು
ಪ್ರೊಟೆರೊಜೋಯಿಕ್ (೨೫%) ೯೨೫ ಮಿಲಿಯ ವರ್ಷಗಳ ಹಿಂದೆ  
ಆರ್ಕಿಯೊ ಜೋಯಿಕ್‌(೩೮%) ೧೫೦೦ ಮಿಲಿಯ ವರ್ಷಗಳ ಹಿಂದೆ  

. ಹಂಸ ಪಾದಗಳೊಳಗಿನ ಸಂಖ್ಯೆಯು ಭೂಮಿಯ ಒಟ್ಟು ಆಯುಸ್ಸಿನಲ್ಲಿ ಆಯಾ ಅವಧಿಗಳು ವಿಸ್ತರಿಸಿದ ಅವಧಿ ಕಾಲವನ್ನು ಸೂಚಿಸುತ್ತದೆ.
೨. ೩ನೆಯ ಪಟ್ಟಯಲ್ಲಿನ ವರ್ಷಗಳು ಆಯಾ ಅವಧಿಗಳು ಇಂದಿನಿಂದ ಎಷ್ಟು ವರ್ಷಗಳ ಹಿಂದಿನವು ಎನ್ನುವ ಪ್ರಾಚೀನತೆಯನ್ನು ಸೂಚಿಸುತ್ತದೆ.

ಈ ಹಿನ್ನಲೆಯಲ್ಲಿ ಪ್ರಾಚ್ಯ ಉಪ ಪ್ರದೇಶದ ಭಾಗವಾದ ಕರ್ನಾಟಕದ ಬೂಗೋಳ ಹಿನ್ನಲೆಯನ್ನು ತಿಳಿದುಕೊಳ್ಳುವುದು ಇಲ್ಲಿನ ಪ್ರಾಣಿ ವಿತರಣೆಯನ್ನು ಅರ್ಥ ಮಾಡಿಕೊಳ್ಳುವ ದೃಷ್ಟಿಯಿಂದ ಅಗತ್ಯ ಎಂದೆನ್ನಿಸುತ್ತದೆ.

ಭಾರತದ ಉಪ ಖಂಡದಲ್ಲಿ ವಿಭಿನ್ನ ವಾತಾವರಣಗಳನ್ನೊಳಗೊಂಡ ಅಪೂರ್ವ ರಾಜ್ಯವೆಂದರೆ ಕರ್ನಾಟಕ. ಇಲ್ಲಿನ ಮಣ್ಣಿನ ಮಳೆ ಮತ್ತು ಹವೆಗಳು ಜೀವಿಗಳ ಜೀವನಕ್ಕೆ ಹಿತಕರವಾಗಿವೆ. ಕರ್ನಾಟಕ ರಾಜ್ಯವು ೧,೯೨,೭೫೭ ಚದರ ಮೈಲಿ ವಿಸ್ತೀರ್ಣವಿದೆ. ಭಾರತ ಉಪಖಂಡದ ನೈರುತ್ಯ ಭಾಗದಲ್ಲಿ ಅಕ್ಷಾಂಶ ೧೧.೫ ದಕ್ಷಿಣ ೧೯ ಉತ್ತರ ಹಾಗೂ ರೇಖಾಂಶ ೭೪ ಪಶ್ಚಿಮದಿಂದ ೭೫ ಪೂರ್ವದವರೆಗೆ ವಿಸ್ತರಿಸಿದ ನಾಡು. ಪಶ್ಚಿಮದುದ್ದಕ್ಕೂ ಅರಬ್ಬಿಸಮುದ್ರ ಉತ್ತರಕ್ಕೆ ಗೋವ, ಮಹಾರಾಷ್ಟ್ರ ಪೂರ್ವಕ್ಕೆ ಆಂಧ್ರ ಮತ್ತು ತಮಿಳುನಾಡು ಹಾಗೂ ದಕ್ಷಿಣಕ್ಕೆ ಕೇರಳ ರಾಜ್ಯಗಳಿಂದ ಬಂಧಿತವಾದ ರಾಜ್ಯ ಅದರ ಮೇಲ್ಮೈ ಲಕ್ಷಣಗಳ ಅಧಾರದ ಮೇಲೆ ಕರ್ನಾಟಕವನ್ನು ನಾಲ್ಕು ಭಾಗಗಳಾಗಿ ವಿಭಾಗಿಸಲಾಗಿದೆ.

) ಪಶ್ಚಿಮದುದ್ದಕೂ ಅರಬ್ಬೀಸಮುದ್ರ ದಂಡೆಗೆ ಸಮಾಂತರವಾಗಿ ಹರಡಿದ ಕರಾವಳಿ. ಇದು ಅರಬ್ಬೀ ಸಮುದ್ರದಿಂದ ಪಶ್ಚಿಮ ಘಟ್ಟಗಳ ಪಶ್ಚಿಮ ಅಂಚಿನವರೆಗೂ ಹಬ್ಬಿದ ೩೨೦ ಕಿ.ಮೀ. ಉದ್ದ, ಉತ್ತರದಲ್ಲಿ ೧೩ ರಿಂದ ೨೩ ಕಿ.ಮೀ., ದಕ್ಷಿಣದಲ್ಲಿ ೫೦ ರಿಂದ ೬೫ ಕಿ.ಮೀ. ಅಗಲವಿರುವ ಭೂಭಾಗ. ನೆಲ ಹೆಚ್ಚಾಗಿ ಲ್ಯಾಟರೈಟ್ (ಕೆಂಪು ಜೇಡಿ ಮಣ್ಣು) ಮಣ್ಣು. ಸದಾ ಸೆಕೆಯಿಂದ ಬಳಲುವ ಭೂಭಾಗ. ಸಾಕಷ್ಟು ಮಳೆ ಬೀಳುವ ಭಾಗ. ಕರಾವಳಿಯ ಕೆಳಸ್ತರಕ್ಕೆ ಪಶ್ಚಿಮ ಘಟ್ಟದ ಏಣುಗಳು ಮತ್ತು ಶಿಖರಗಳು ಚಾಚಿಕೊಂಡಿವೆ. ಇಲ್ಲಿ ವಿಶೇಷವಾಗಿ ಬೆಳೆಯುವವು ತಾಳೆ ಮರಗಳು, ತೆಂಗಿನ ಮರಗಳು, ಗೇರುಬೀಜದ ಮರಗಳು. ಕಡಲ ದಂಡೆಯುದ್ದಕ್ಕೂ ಅಲ್ಲಲ್ಲಿ ಹರಡಿದ ಬಿಳಿಯ ಮಳಲಿನ ಕಡಲ ಕರೆಗಳು, ನದಿ, ಹೊಳೆಗಳ ಅಳಿವೆಗಳು, ನಡುನಡುವೆ ಕಡಲಿನಿಂದಾದ ನೆಲದೊಳಕ್ಕೆ ಚಾಚಿದ ಲ್ಯಾಗೂನ್‌‌ಗಳು (ನೆಲ ಸುತ್ತುವರಿದ ಕಡಲ ಉಪ್ಪು ನೀರು ಜಲಾಶಯಗಳು), ಕಡಲ ಹಿನ್ನೀರು, ಪೂರ್ವಕ್ಕೆ ಹಸಿರು ತೊಟ್ಟು ನಳನಳಿಸುವ ಪಶ್ಚಿಮ ಘಟ್ಟಗಳು, ಎಲ್ಲವೂ ಸೇರಿ ಸುಂದರ ಶಬಲ ಚಿತ್ರವನ್ನು ಸೃಷ್ಟಿಸುತ್ತವೆ. ಆದರೆ ವಾಸ್ತವವಾಗಿ ಹೊಳೆ, ಹಳ್ಳ, ನದಿಗಳು, ಖಾರಿಗಳು, ಅಲ್ಲಲ್ಲಿ ಮೇಲೆದ್ದು ಕಾಣುವ ಗಿರಿಶಿಖರಗಳು ಮತ್ತು ಏಕಪ್ರಕಾರವಾಗಿ ಹರಡುವ ಗುಡ್ಡ ಸಾಲುಗಳನ್ನೊಳಗೊಂಡ ಕಠಿಣ ಚಿತ್ರ ಬಿಂಬಿಸುವ ಭೂಭಾಗ ಇದು. ಕರಾವಳಿಯ ದಂಡೆಯು ಸಮುದ್ರ ಮಟ್ಟದಿಂದ ೨೫೦ ಮೀಟರ್ ಗಳಷ್ಟು ಎತ್ತರಕ್ಕೆ ಏರಿದೆ. ಕೆಲವು ಕಡೆ ೫೦೦ ಮೀಟರ್ ಎತ್ತರವನ್ನು ತಲುಪಬಹುದು. ಈ ಭಾಗದ ಒಟ್ಟು ವಿಸ್ತಾರ ೭೯೦೦ ಚದುರ ಮೈಲಿಗಳು. ಈ ಭಾಗದಲ್ಲಿ ವರ್ಷದಲ್ಲಿ ಸರಾಸರಿ ೨೫೦೦ ಮಿ.ಮಿ. ಮಳೆ ಬೀಳುತ್ತದೆ.

) ಮಲೆನಾಡು : ಪಶ್ಷಿಮ ಘಟ್ಟಗಳಿಂದ ಪೂರ್ವಕ್ಕೆ ೬೫೦ ಕಿ.ಮೀ. ಉದ್ದ, ೫೦ ರಿಂದ ೬೪ ಕಿ.ಮೀ. ಅಗಲವಿರುವ ಕರ್ನಾಟಕ ಪ್ರದೇಶ. ಪಶ್ಚಿಮ ಘಟ್ಟಗಳ ತಪ್ಪಲಿನ ೧೫೨ ಮೀಟರ್ ಉತ್ತರದಿಂದ ಸರಾಸರಿ ೯೦೦ ಮೀಟರ‍್ ಎತ್ತರವಿರುವ ಗುಡ್ಡಗಾಡು ಪ್ರದೇಶ. ಪಶ್ಚಿಮಕ್ಕೆ ಪಶ್ಚಿಮ ಘಟ್ಟ ಮತ್ತು ಉಳಿದೆಲ್ಲ ಭಾಗಗಳಲ್ಲಿ ಪ್ರಸ್ತ ಭೂಮಿ ಸುತ್ತುವರಿದ ಭಾಗ. ಹೆಚ್ಚು ಮಳೆ ಬೀಳುವ, ದಟ್ಟ ಕಾಡುಗಳನ್ನೊಳಗೊಂಡ, ಪುರಾತನ ವನ್ಯ ರಾಶಿಯನ್ನು ತನ್ನ ಅಂತರಾಳದಲ್ಲಿ ಅಡಗಿಸಿಕೊಂಡು, ಬಿಸಿಲು ಉರಿಯುವ ಫಲವತ್ತಾದ ಮಣ್ಣಿನ ಸಸ್ಯ ಸಮೃದ್ಧ ನಾಡು. ಎತ್ತರದ ಬೆಟ್ಟ ಸಾಲು-ಕಣಿವೆಗಳು ಅಡ್ಡ ಹಾಯುವ ಭೂಭಾಗ.

) ಉತ್ತರದ ಪ್ರಸ್ತಭೂಮಿ : ಅರೆ ಮಲೆನಾಡು ಭಾಗ. ಬಳ್ಳಾರಿಯಿಂದ ಉತ್ತರಕ್ಕೆ ರಾಜ್ಯದ ಉತ್ತರ, ಈಶಾನ್ಯ ಎಲ್ಲೆಯವರೆಗೆ ವಿಸ್ತರಿಸುವ, ಸಮುದ್ರ ಮಟ್ಟದಿಂದ ೩೬೫ ಮೀ. ನಿಂದ ೬೧೦ ಮೀಟರ್ ವರೆಗೆ ಇರುವ ಸಮತಟ್ಟು ಭೂ ಪ್ರದೇಶ. ಕೃಷ್ಣ, ಭೀಮ, ತುಂಗಭದ್ರ ನದಿಗಳು ಹರಿಯುವ, ಕಪ್ಪು ನೆಲದ ಫಲವತ್ತಾದ ಭೂಪ್ರದೇಶ. ಹೆಚ್ಚು ಕಡಿಮೆ ಕಾಡುಗಳಿಲ್ಲದ, ಮರಗಳು ವಿರಳವಾದ, ವರ್ಷಕ್ಕೆ ೩೫೦ ರಿಂದ ೯೦೦ ಮಿ,ಮೀ. ಮಳೆ ಬೀಳುವ ಭೂಭಾಗ.

) ದಕ್ಷಿಣದ ಬಯಲು ಸೀಮೆ : ವಾಸ್ತವವಾಗಿ ಮಲೆನಾಡಿನಿಂದ ಪೂರ್ವಕ್ಕಿರುವ ನಾಡು. ಸಮುದ್ರ ಮಟ್ಟದಿಂದ ೯೧೫ ರಿಂದ ೯೭೫ ಮೀಟರ್ ಎತ್ತರ. ತುಂಗ, ಭದ್ರ, ಕಾವೇರಿ, ಪೆನ್ನಾರ್, ಪಾಲಾರ ನದಿಗಳು ಹರಿಯುವ, ಕಡಿದಾದ ಬೆಟ್ಟಗಳು, ಕಣಿವೆಗಳಿರುವ ಕಡಿಮೆ ಫಲವತ್ತಾದ ಭೂಭಾಗ. ಮುಂಗಾರಿನ ಮಧ್ಯದಿಂದ ಶರದೃತುವಿನ ಕೊನೆಯವರೆಗೆ ಮಳೆ ಬೀಳುವ, ವರ್ಷದ ಹೆಚ್ಚು ಕಾಲ ಹಸುರಿನಿಂದ ಕಂಗೊಳಿಸವ ನಾಡು. ಇಲ್ಲಿ ಸರಾಸರಿ ಬೀಳುವ ಮಳೆ ೨೦೦ ಮಿ. ಮಿ.

ಕರ್ನಾಟಕ ಮುಖ್ಯವಾಗಿ ಉಷ್ಣ ವಲಯದಲ್ಲಿದೆ. ಮುಂಗಾರು ಈ ನಾಡಿನ ಮೂಲಕ ಹಾದು ಹೋಗುತ್ತದೆ. ಬಹುಭಾಗ ಬೇಸಗೆಯ ಸೆಕೆಯಲ್ಲಿ, ಚಳಿಗಾಲದ ಚಳಿಯಲ್ಲಿ ನರಳುತ್ತದೆ. ಆದರೆ ಉತ್ತರ ಭಾರತದ ವೈಪರೀತ್ಯಗಳಿಗೆ ಹೋಲಿಸಿದಾಗ ತಾಳಿಕೊಳ್ಳಬಲ್ಲ ಹವೆ : ಕೇವಲ ೧೮% ಇರುವ ಕರ್ನಾಟಕದ ಕಾಡಿನ ವ್ಯಾಪ್ತಿ ಭಾರತದ ೨೨% ಸರಾಸರಿಗೆ ಹೋಲಿಸಿದರೆ ಕಡಿಮೆ. ಇಂದು ಕಾಡು ಉಳಿದಿರುವುದು ಉ. ಕನ್ನಡದ. ಕನ್ನಡ, ಕೊಡಗು, ಮೈಸೂರು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಮಾತ್ರ.

ಒಟ್ಟಿನಲ್ಲಿ ಹೇಳುವುದಾದರೆ ಕೃಷ್ಣ, ಕಾವೇರಿ, ಕಾಳೀನದಿ, ತುಂಗಭದ್ರ, ಕಪಿಲ, ಶರಾವತಿ ಮುಂತಾದ ತುಂಬು ನದಿಗಳು ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಅದರ ಇಕ್ಕೆಲೆಗಳಲ್ಲಿ ಹರಿದು, ಕರಾವಳಿ, ಉತ್ತರದ ಪ್ರಸ್ತಭೂಮಿ ಮತ್ತು ದಕ್ಷಿಣದ ಬಯಲು ಸೀಮೆಗಳನ್ನು ತಲುಪಿ ಅರಬ್ಬೀ ಸಮುದ್ರ ಅಥವಾ ಬಂಗಾಳ ಕೊಲ್ಲಿಯನ್ನು ಸೇರುತ್ತವೆ. ಹೀಗಾಗಿ ಕರ್ನಾಟಕವು ಈ ನದಿಗಳು ಹರಿದು ತನುವುಣಿಸುವ ವಿಶಾಲ ಜಲಾನಯನ ಪ್ರದೇಶ. ಈ ನದಿಗಳು ಹೆಚ್ಚು ಕಡಿಮೆ ಕನ್ನಡ ನಾಡಿನ ಉದ್ದಗಲಕ್ಕೂ ವ್ಯಾಪಿಸಿ, ಹರಿದು ನಾಡನ್ನು ಪೋಷಿಸುತ್ತವೆ ಮತ್ತು ತಣಿಸುತ್ತವೆ. ವಿಸ್ತಾರದಲ್ಲಿ ವ್ಯಾಪಕವೂ, ಉಪಯುಕ್ತತೆಯಲ್ಲಿ ಅಪಾರವೂ ಆದ ಈ ನದಿಗಳು ನಾಡಿನ ಜನಜೀವನವನ್ನು ನಾಗರೀಕತೆಗಳನ್ನು ರೂಪಿಸಿವೆ, ರೂಪಿಸುತ್ತಿವೆ ಎಂದರೆ ಉತ್ಪ್ರೇಕ್ಷೆಯಾಗಲಾರದು. ಇತಿಹಾಸದ ಪುಟಗಳಲ್ಲಿ ಬರುವ ಸಿಂಧೂ ನದಿ, ಗಂಗಾ ನದಿಗಳೂ ನಾಗರೀಕತೆಗಳನ್ನು ರೂಪಿಸಿದ ನಿದರ್ಶನಗಳಿರುವಂತೆ ಕರ್ನಾಟಕದಲ್ಲಿಯೂ ತುಂಗಭದ್ರ ಮತ್ತು ಕಾವೇರಿ ನದಿಗಳು ವಿಜಯನಗರ ಮತ್ತು ಮೈಸೂರು ಸಾಮ್ರಾಜ್ಯಗಳು ಮರೆಯಲು ಕಾರಣವಾಗಿರುವುದು ಇವುಗಳ ಪಾತ್ರಕ್ಕೆ ಸಾಕ್ಷಿ.

ನದಿಗಳ ಈ ಉಪಯುಕ್ತ ಪಾತ್ರದ ಕಲ್ಪನೆ ಭೂವಿಜ್ಞಾನಿ ಜೀವ ವಿಜ್ಞಾನಿಗಳನ್ನಷ್ಟೇ ಅಲ್ಲದೆ ಕವಿಯ ಊಹಾಕಲ್ಪನೆಗೂ ಸ್ಫೂರ್ತಿ ಒದಗಿಸಿ ಮೆರೆದಿವೆ. ಕವಿ ನರಸಿಂಹಸ್ವಾಮಿಯವರ ನದಿಯ ಪಾತ್ರದ ವರ್ಣನೆ ನೋಡಿ :

‘ಹುಟ್ಟುವುದು ಬೆಟ್ಟದಲಿ, ಹರಿಯುವುದು ಬಯಲಿನಲಿ
ತುಂಬು ಹೊಳೆ ನಾಡ ನಗಿಸಿ’

ಈ ಕವನದ ಸಾಲು ಬದುಕಿನಲ್ಲಿ ಹೆಣ್ಣಿನ ಪಾತ್ರವನ್ನು ವರ್ಣೀಸುವುದಾದರೂ ನದಿಯ ಪಾತ್ರವನ್ನು ಸರಳ ನುಡಿಗಳಲ್ಲಿ ಕಾವ್ಯಮಯವಾಗಿ ಸುಂದರವಾಗಿ ಪ್ರತಿಬಿಂಬಿಸುತ್ತದೆ.

ಜೀವ ವಿಕಾಸದಲ್ಲಿ ಮನುಷ್ಯ ಕಾಣಿಸಿಕೊಂಡಿದ್ದು ತೀರಾ ಇತ್ತೀಚೆಗೆ, ಪ್ರಾಣಿಗಳ ಸಾವಿರ-ಸಾವಿರ ಮಿಲಿಯ ವರ್ಷಗಳ ಇತಿಹಾಸದಲ್ಲಿ ಮಾನವ ಕಾಣಿಸಿಕೊಂಡು ಒಂದು ಮಿಲಿಯ ವರ್ಷವೂ ಕಳೆದಿಲ್ಲ. ಭೂಮಿಯ ಮೇಲಿನ ಜೀವನ ನಾಟಕದ ಕಾಲಾವಧಿಯನ್ನು ೨೪ ಗಂಟೆಗಳೆಂದು ಪರಿಗಣಿಸುವುದಾದರೆ, ಭೂಮಿಯ ಮೇಲಿನ ಈ ಜೀವನ ನಾಟಕದಲ್ಲಿ ಮಾನವನ ಪ್ರವೇಶವಾಗಿ ಕೇವಲ ೫ ನಿಮಿಷಗಳು ಮಾತ್ರ ಸಂದಿವೆ.

ಆದ್ದರಿಂದ ಕರ್ನಾಟಕದ ನೆಲ-ಜಲಗಳು ಮನುಷ್ಯ ಕಾಣಿಸಿಕೊಳ್ಳುವುದಕ್ಕೂ ಮೊದಲಿನಿಂದಲೂ ಪ್ರಾಣಿಗಳ ಉದ್ಭವಕ್ಕೆ, ವಿಕಾಸಕ್ಕೆ, ಪ್ರಗತಿಗೆ, ಬೆಳವಣಿಗೆ ಅನುವು ಮಾಡಿಕೊಟ್ಟು ಪ್ರಾಣಿ ವಿತರಣೆಯಲ್ಲಿ ಮಹತ್ ಪಾತ್ರವಹಿಸಿವೆ. ಪಶ್ಚಿಮದ ಸಮುದ್ರ, ಅದರ ತೀರ ಪ್ರದೇಶ, ಅದಕ್ಕೆ ಸಮಾನಾಂತರವಾಗಿ ಉದ್ದಕ್ಕೂ ಹರಡಿದ ಕರಾವಳಿ, ತುಸುದೂರದಲ್ಲಿ ಮುಗಿಲೆತ್ತರಕ್ಕೆ ಎದ್ದು ನಿಂತ ಪಶ್ಚಿಮ ಘಟ್ಟದ ಅಂಗ ಭಾಗಗಳಾದ ಸಹ್ಯಾದ್ರಿಸಾಲು, ಚಂದ್ರದ್ರೋಣ ಪರ್ವತಗಳು, ಬೆಟ್ಟ ಗುಡ್ಡಗಳು, ಅವುಗಳ ತಪ್ಪಲಿನಲ್ಲಿ ತನುವುಂಡು ಬೆಳೆದುನಿಂತ ನಿತ್ಯಹರಿದ್ವರ್ಣ ಕಾಡುಗಳು, ಕಣಿವೆ ಕೆಳಗಿನ ಮಲೆನಾಡು, ಅಲ್ಲಿನ ದಟ್ಟ ಕಾಡುಗಳು, ಅನಂತರದ ಪ್ರಸ್ಥಭೂಮಿ, ಬಯಲು ಸೀಮೆಯ ಕುರುಚಲು ಕಾಡುಗಳು, ಹುಲ್ಲುಗಾವಲುಗಳು, ಭೂಮಿಯ ವೈವಿಧ್ಯಮಯ ವ್ಯತ್ಯಾಸ ಕಾಡುಗಳನ್ನು ಬೆಳಸಿ ಪೋಷಿಸಿದಂತ, ನಾಡು, ನುಡಿಗಳನ್ನು ರೂಪಿಸಿದಂತೆ, ವಾತಾವರಣವನ್ನು ನಿರ್ದೇಶಿಸಿ, ಪ್ರಾಣಿ ಪರಂಪರೆಯ ಬೆಳವಣಿಗೆ-ವಿತರಣೆಗಳನ್ನು ನಿಯಂತ್ರಿಸಿದೆ.

ನೈರುತ್ಯದಿಂದ ತೇವಾಂಶವನ್ನು ಹೊತ್ತು ಬೀಸಿ ಬರುವ ಮುಂಗಾರು ಮುಗಿಲು ಮಾಲೆ ಪಶ್ಚಿಮ ಘಟ್ಟದ ಬೆಟ್ಟ ಗುಡ್ಡಗಳಿಗೆ ತಾಡಿಸಿ, ಮಳೆ ಸುರಿಸಿ, ನೆಲ ತಣಿಸಿ, ಕಾಡುಗಳನ್ನು ಪೋಷಿಸಿ, ಅಳಿದುಳಿದ ತೇವಾಂಶದೊಂದಿಗೆ ಕರ್ನಾಟಕದ ಮೂಡಣ ಬಯಲು ಸೀಮೆಯನ್ನು ತಲಪುತ್ತದೆ. ಈ ಕಾರಣ ಆಯಾ ಪ್ರದೇಶಗಳ ಪ್ರತ್ಯೇಕ, ಪೂರಕ, ಅಪರೂಪದ ಅಸದೃಶ ವನ್ಯಶ್ರೀ ವನ್ಯಜೀನವನ್ನು ರೂಪಿಸಿದೆ. ಕರ್ನಾಟಕದ ನದಿಗಳು ಸಹ್ಯಾದ್ರಿಯಲ್ಲಿ ಹುಟ್ಟಿ ಹರಿಯುತ್ತ ಸಹ್ಯಾದ್ರಿಯ ಮಡಿಲಲ್ಲಿ ಬೆಳೆದ ಕಾಡುಗಳ ಅಗತ್ಯಗಳನ್ನು ಪೂರೈಸಿ, ಪೂರ್ವಾಭಿ ಮುಖವಾಗಿ ಉಷ್ಣವಲಯದ ಬಿಸಿಲಿನ ತಾಪದಲ್ಲಿ ಬೆಂದು ಬೆಂಗಾರಿದ ಬಯಲಿಗೆ ತಂಪನೆರೆದು, ತನುವುಣಿಸಿ, ಸಣ್ಣ ಪುಟ್ಟ ಕುರುಚಲು ಕಾಡುಗಳು ಬೆಳೆಯಲು ಕಾರಣವಾಗಿವೆ. ಸಹ್ಯಾದ್ರಿಯಲ್ಲಿಯೆ ಹುಟ್ಟುವ ನೇತ್ರಾವತಿ, ಕಾಳೀನದಿ, ಶರಾವತಿ ನದಿಗಳು, ಪಶ್ಚಿಮಾಭಿಮುಖವಾಗಿ ತುಸುವೇ ದೂರ ಹರಿದು, ಘಟ್ಟದ ಏರುತಗ್ಗುಗಳಲ್ಲಿ ಬಿದ್ದೆದ್ದು. ಜಲಪಾತಗಳನ್ನು ನಿರ್ಮಿಸಿ, ಪಾತ್ರದಲ್ಲಿ, ಉದ್ದದಲ್ಲಿ ಕಿರಿವಾದರೂ ಕೀರ್ತಿಯಲ್ಲಿ, ಉಪಯುಕ್ತತೆಯಲ್ಲಿ ಹಿರಿದಾಗಿ, ಆಧುನಿಕ ಕರ್ನಾಟಕವನ್ನು ರೂಪಿಸಿದಂತೆ ಪ್ರಾಚೀನ ಪ್ರಾಣಿ ಪರಂಪರೆಯನ್ನು ರೂಪಿಸುವಲ್ಲಿಯೂ ಸಮಾನ ಪ್ರಾತ್ರವಹಿಸಿವೆ.

ಈ ಹಿನ್ನೆಲೆಯಲ್ಲಿ ಕರ್ನಾಟಕದ ಪರಂಪರೆಗೂ ಪ್ರಕೃತಿಗೂ ಇರುವ ಸಂಬಂಧ, ಸಾಮರಸ್ಯಗಳು ಪರಿಶೀಲನ ಯೋಗ್ಯ ಅದನ್ನು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ. ಬಂಡೀಪುರ, ನಾಗರಹೊಳೆ, ರಾಣಿಬೆನ್ನೂರು, ರಂಗನತಿಟ್ಟು ಬೆಳ್ಳೂರು ಪ್ರಾಣಿ-ಪಕ್ಷಿ ಧಾಮಗಳಿರುವುದು ಪಶ್ಚಿಮ ಘಟ್ಟಗಳ ನೆಲೆಯಲ್ಲಿ ಸಹ್ಯಾದ್ರಿಯ ಮಡಿಲಲ್ಲಿ ಈ ಜೀವ ನದಿಗಳ ಜಲಾನಯನ ಪ್ರದೇಶದಲ್ಲಿ ಇದು ಆಕಸ್ಮಿಕವಲ್ಲ. ಈ ವನ್ಯಶ್ರೀ ಸಸ್ಯ ಶ್ಯಾ,ಮಲೆಯ ನಡುವೆ ಬೆಳೆದು ವಿಪುಲ ಸಸ್ಯಾಹಾರಿ ಸಸ್ತನಿಗಳನ್ನವಲಂಭಿಸಿ ಮಾಂಸಾಹಾರಿ ಸಸ್ತನಿಗಳು ಬೆಳೆದಿರುವುದು ಅಷ್ಟೇ ಸ್ಟಷ್ಟ. ಈ ವರ್ಣರಂಜಿತ, ವೈವಿಧ್ಯಮಯ ಪರಿಸರದಲ್ಲಿ ಭಿನ್ನವಾದರೂ ಅನುಕೂಲವಾದ ವಾತಾವರಣದಲ್ಲಿ ವೈವಿಧ್ಯಪೂರ್ಣವಾದ, ಅಷ್ಟೇ ಅಪೂರ್ವವಾದ ಪ್ರಾಣಿಗಳು ನೆಲೆಸಿರುವುದು ಕಂಡು ಆಸ್ಚರ್ಯ ಪಡಬೇಕಾಗಿಲ್ಲ. ಕನ್ನಡಿಗರಾದ ನಾವು ಹೆಮ್ಮೆ ಪಡಬೇಕು. ಆದರೆ ದುರ್ದೈವದ ಸಂಗತಿ ಎಂದರೆ ಈ ಪ್ರಾಚೀನ ಪಿತ್ರಾರ್ಜಿತ ಪ್ರಾಣಿ ಸಂಪತ್ತಿನ ನಾಶಕ್ಕೆ ನಾವೇ ಕಾರಣವಾಗುತ್ತಿರುವುದು.

ಕರ್ನಾಟಕವು ಜೀವಿ ವೈವಿಧತೆಯಲ್ಲಿ ತುಂಬಾ ಶ್ರೀಮಂತವಾದ ಮತ್ತು ಸಂಪದ್ಭರಿತವಾದ ನಾಡು. ಅದಕ್ಕೆಂದೇ ಹಿಂದಿನ ಕವಿಗಳು ಚಿನ್ನದ ನಾಡು, ಗಂಧದ ಗುಡಿ ಎಂದೆಲ್ಲ ಹಾಡಿ ಹೊಗಳಿದ್ದಾರೆ. ಅಸಮಾನ್ಯ ಜೀವ ಭೌಗೋಳಿಕ ನೆಲೆಗಳು, ವಿಧವಿಧವಾದ ಹವಾಮಾನ ಪರಿಸ್ಥಿತಿಗಳು ಮತ್ತು ವಿಫುಲ ಪರಿಸರ ಪರ್ಯಾವರಣ ವೈವಿಧ್ಯಗಳು ಅಧ್ಯಯನಕ್ಕೆ ಆಕರ್ಷಕವಾಗಿವೆ. ಇಲ್ಲಿ ೧೦ ಜೀವ ಭೌಗೋಳಿಕ ವಲಯಗಳು, ೨೬ ಜೀವಿ ಪ್ರದೇಶಗಳು ಇವೆ; ಉದ್ದ ಹರಡಿದ ಕರಾವಳಿ, ಪಶ್ಚಿಮ ಘಟ್ಟ ಕೃಷ್ಣ-ಕಾವೇರಿ ನದಿಗಳ ಜಲಾನಯನ ಪ್ರದೇಶ, ಮಳೆಯ ನೆರಳಿನ ಪೂರ್ವ ಬಯಲು ಸೀವೆ, ಮಳೆ ಸಾಲದೆ ಬೆಂದು ಬಸವಳಿಯುವ ಕಲ್ಲು ನಾಡು (ರಾಯಲು ಸೀಮೆ) ವಿಫುಲ ಮಳೆ ಬೀಳುವ ಮಲೆನಾಡು, ಕಣಿವೆ ಮೇಲಿನ, ಕಣಿವೆ ಕೆಳಗಿನ ಪ್ರಸ್ತಭೂಮಿ. ಬಯಲು ಸೀಮೆಗಳೆಂದು ಕರ್ನಾಟಕದ ನೆಲವನ್ನು ಹಲವು ಹತ್ತು ಭಾಗಗಳಾಗಿ ಪ್ರತ್ಯೇಕಿಸಿ ಗುರುತಿಸಬಹುದು. ದಂಡೆಯ ಅಳಿವೆಗಳು, ಮ್ಯಾಂಗರೂ, ಬಂಜರು ಭೂಮಿ, ಎತ್ತರದ ಬೆಟ್ಟಗುಡ್ಡಗಳು ಮತ್ತು ಅರೆಬರಗಾಲ ಪೀಡಿತ ಬಂಜರು ಸೀಮೆ, ನದಿಗಳು, ನೆಲ ಸುತ್ತುವರಿದ ಜಲಾಶಯಗಳು, ದ್ವೀಪಗಳು ಮತ್ತು ಅರಬ್ಬೀ ಸಮುದ್ರ ಭಿನ್ನ ಪರಿಸರಗಳನ್ನು ಒದಗಿಸಿ ಭಿನ್ನ ಪರಿಸರ ಮಂಡಲಗಳ ಬೆಳವಣಿಗೆಗೆ ಕಾರಣವಾಗಿವೆ.

ಹವೆ ಹೈದರಾಬಾದ್‌ಕರ್ನಾಟಕದ ಅತಿ ಹೆಚ್ಚು ತಾಪದಿಂದ ಕೊಡಗಿನ ಅತಿ ಶೀತದವರೆಗೆ ಎಲ್ಲ ರೀತಿಯ ವ್ಯತ್ಯಯಗಳನ್ನು ತೋರುತ್ತದೆ. ವಾರ್ಷಿಕ ಸರಾಸರಿ ಮಳೆಯ ತೇವಾಂಶವೂ ಬದಲಾಗುತ್ತದೆ. ಕರ್ನಾಟಕಕ್ಕೆ ಸಂಬಂಧಿಸಿದಂತೆ ಈ ಅಂಕಿ ಅಂಶಗಳು ದೊರಕುವಂತೆ ಪ್ರಾಣಿಗಳ ವಿಷಯದಲ್ಲಿ ದತ್ತಾಂಶಗಳು ದೊರಕದಿರುವುದು ವಿಷಾದನೀಯ. ಆದ್ದರಿಂದ ಹೋಲಿಕೆಗೆ ಮತ್ತು ದಾಖಲೆಗೆಂದು ಪ್ರಪಂಚದ ಮತ್ತು ಭಾರತ ಉಪಖಂಡದ ಪ್ರಾಣಿಗಳಿಗೆ ಸಂಬಂಧಿಸಿದ ಅಂಕಿ ಅಂಶಗಳನ್ನೇ ಪರಿಗಣಿಸಿ, ಅದರ ಆಧಾರದ ಮೇಲೆ ಕರ್ನಾಟಕ ಜೀವ/ಪ್ರಾಣಿ ಭೌಗೋಳಿಕ ವಿತರಣೆಯನ್ನು ಚರ್ಚಿಸಲು ಪ್ರಯತ್ನಿಸುತ್ತೇವೆ.

ಒಟ್ಟು ಪ್ರಭೇಧಗಳ ಸಂಖ್ಯೆ

ಪ್ರಾಣಿವರ್ಗ ಪ್ರಪಂಚ ಭಾರತ ಕರ್ನಾಟಕ
ಕಶೇರುಕಗಳು ೪೮,೪೫೧ ೪೯೫೨ ೧೦೩೦
ಮೀನುಗಳು ೨೧,೨೨೩ ೨,೫೪೬ ೩೧೦
ಉಭಯಚರಿಗಳು ೫,೧೫೦ ೨೦೯ ೫೮
ಸರೀಸೃಪಗಳು ೫,೮೧೭ ೪೫೬ ೧೫೦
ಪಕ್ಷಿಗಳು ೯,೦೨೬ ೧,೨೩೨ ೪೨೦
ಸಸ್ತನಿಗಳು ೪,೬೨೯ ೩೯೦ ೯೨

ಭಾರತದ ಒಟ್ಟು ಕಶೇರುಕ ಸಂಖ್ಯೆಯಲ್ಲಿ ಕರ್ನಾಟಕದಲ್ಲಿ ಸರಿಸುಮಾರು ಶೇಕಡಾ ೨೫ರಷ್ಟು ಮಾತ್ರ ಇವೆ. ಇದು ನಿಖರವಾದ ಅಂಕಿ ಅಂಶವಲ್ಲ, ಕೇವಲ ಆಧಾರ ಪೂರ್ವಕ ಅಂದಾಜು ಊಹೆ ಮಾತ್ರ.

ಪ್ರಾಣಿ ಪ್ರಪಂಚದ ಪ್ರಭೇಧಗಳ ಅಭ್ಯಾಸದಲ್ಲಿ ತೊಡಗಿರುವವರ ಸಂಖ್ಯೆ ಕರ್ನಾಟಕದಲ್ಲಿ ಇಲ್ಲ ಎಂದೇ ಹೇಳಬೇಕು ಇಲ್ಲಿ ದೊರಕುವ ಪ್ರಾಣಿ ಪ್ರಭೇಧಗಳನ್ನು ಗುರುತಿಸಲು ಈಗಲೂ ಆಂಗ್ಲರ ಕಾಲದಲ್ಲಿ ೩೦೦-೪೦೦ ವರ್ಷಗಳ ಹಿಂದೆ ನಡೆದು ಪ್ರಕಟವಾದ ಫಾನ ಆಫ್ ಬ್ರಿಟಿಷ್ ಇಂಡಿಯಾ ಗ್ರಂಥಗಳನ್ನೇ ಅವಲಂಬಿಸಬೇಕಾಗಿದೆ. ಅವೂ ಸಹ ಅತಿ ಹಳೆಯ ವಿಷಯಗಳು. ಈಚಿನ ದಿನಗಳಲ್ಲಿ ವರ್ಗೀಕರಣ, ನಾಮಕರಣಗಳಲ್ಲಿ ಹೆಚ್ಚಿನ ಪರಿಷ್ಕರಣೆ ನಡೆದಿದೆ. ಆ ವಿಷಯಗಳು ಸುಲಭವಾಗಿ ದೊರಕುತ್ತಿಲ್ಲ. ಈ ಗ್ರಂಥಗಳ ಪ್ರತಿಗಳು ಮುಗಿದು ಹೋಗಿವೆ, ಮರು ಪ್ರಕಟಣಾ ಪ್ರಯತ್ನಗಳು ನಡೆದಿಲ್ಲ. ನಡೆದರೂ ಅವುಗಳ ಬೆಲೆ ದುಬಾರಿ. ಸಾಮಾನ್ಯ ಅಧ್ಯಾಪಕ-ಸಂಶೋಧಕನ ಜೇಬಿಗೆ ಎಟುಕದ ಮಾತು.

ಕಳೆದ ಎರಡು ದಶಕಗಳಿಂದ ಕರ್ನಾಟಕದ ಪ್ರಾಣಿಸಂಪತ್ತಿನ (ಫಾನ ಆಫ್‌ಕರ್ನಾಟಕ) ವ್ಯವಸ್ಥಿತವಾದ ಅಭ್ಯಾಸಕ್ಕೆ ಪ್ರಾಣೀಶಾಸ್ತ್ರ ತಜ್ಞರು ಪ್ರಯತ್ನಿಸಿದರೂ ಸಾಕಷ್ಟು ನೀಡುತ್ತಿಲ್ಲ. ಕರ್ನಾಟಕದ ಪ್ರಾಣಿ ಸಂಪತ್ತಿನ ಚಿಂತೆ ಸರ್ಕಾರದ ಗಮನಕ್ಕೆ ಬರುವುದು ಕಾಲಕಾಲಕ್ಕೆ ಪ್ರಕಟವಾಗುವ ‘ಕರ್ನಾಟಕದ ಗೆಜೆಟರ್’ಗಳನ್ನು ಅಚ್ಚಿಸುವಾಗ ಮಾತ್ರ. ಸಂತೆಗೆ ಮೂರು ಮೊಳ ನೇಯ್ದರು ಎಂಬಂತೆ ಹಿಂದಿನ ಗೆಜೆಟರ್ ಗಳ ಹಳಸಲು ವಿಷಯಗಳ ಪುನರುಕ್ತಿ, ಚರ್ವಿತ ಚರ್ವಣ. ಪರಿಷ್ಕರಣದ ಚಿಂತೆ ಇಲ್ಲ. ಹೊಸದಾಗಿ ಸರ್ವೇಕ್ಷಣ ನಡೆಯಬೇಕು, ತಜ್ಞರ ನೆರವು ಪಡೆಯಬೇಕು ಎಂಬ ಆಲೋಚನೆ ಬರುವುದಿಲ್ಲ. ಸಂಪಾದಕರಾಗಿ ನೇಮಕಗೊಂಡ ಅಧಿಕಾರಿ ಬರೆದ, ಬರೆಸಿದ ವಿಷಯ, ಇಲ್ಲಿ ಸೇರುತ್ತದೆ. ಆದರೆ ಆ ಸಂದರ್ಭಗಳಲ್ಲಿ ಇಂಗ್ಲೀಷ್‌ಲೇಖನದ ಕನ್ನಡ ಭಾಷಾಂತರಕ್ಕೆ ಪ್ರಾಣಿಶಾಸ್ತ್ರ ತಜ್ಞರನ್ನು ಕೇಳುವಷ್ಟರ ಮಟ್ಟಿಗೆ ಸರ್ಕಾರ ತಜ್ಞರನ್ನು ಗುರುತಿಸುತ್ತದೆ ಎನ್ನುವುದಷ್ಟೇ ಇಲ್ಲಿ ಸಂತಸದ ವಿಷಯ.

ವ್ಯವಸ್ಥಿತವಾಗಿ ಪ್ರಾಣಿಗಳ ಸಂಗ್ರಹಣೆ, ಅಧ್ಯಯನಗಳಿಗೆ ಸೀಮಿತವಾದ ಸಂಸ್ಥೆಗಳು ಹಾಗೂ ತಜ್ಞರು, ಪರಿಣಿತರು, ಅವರಿಗೆ ದೊರಕುವ ಅನುಕೂಲಗಳು ಕರ್ನಾಟಕದಲ್ಲಿ ಇಲ್ಲವೇ ಇಲ್ಲ. ಅಲ್ಲಲ್ಲಿ ನಡೆದ ಸಂಶೋಧನೆಯ ವಿವರಗಳು ಸಾಮಾನ್ಯರಿಗೇಕೆ ಸಂಶೋಧಕರಿಗೇ ದೊರಕುವುದಿಲ್ಲ. ಈ ಕ್ಷೇತ್ರದ ಪರಿಣಿತರ ಅಗತ್ಯವಿದೆ. ಯಾವುದೇ ಸಂಶೋಧನೆ ಆರಂಭಿಸುವಾಗ, ಆರಿಸಿಕೊಂಡ ಪ್ರಾಣಿಯ ಪೂರ್ಣ ಮಾಹಿತಿ ಬೇಕಾಗುತ್ತದೆ. ಆಗ ಕೆಲವು ಸಂಘ ಸಂಸ್ಥೆಗಳ ನೆರವು ಪಡೆಯಬೇಕಾಗುತ್ತದೆ. ಸಂಶೋಧಕನಿಗೆ ಪ್ರಾಣಿಯ ಶಾಸ್ತ್ರೀಯ ನಾಮ, ವರ್ಗೀಕರಣ, ಪ್ರಭೇಧ ಗುರುತಿಸುವಿಕೆಯಂತಹ ವಿವರಗಳು ಅಗತ್ಯವಾಗುತ್ತವೆ. ಇದಕ್ಕೆಂದೇ ಕಲಕತ್ತೆಯಲ್ಲಿ ಆರಂಭವಾದ ಪ್ರಾಣಿಶಾಸ್ತ್ರ ಮ್ಯೂಸಿಯಂ, ಅಥವಾ ಮತ್ತಾವುದೇ ಹೊರದೇಶದ ಸಂಸ್ಥೆಗಳಿಗೆ ಪ್ರಾಣಿಯೊಂದನ್ನು ಕಳುಹಿಸಿ ವಿವರ ಪಡೆಯಬೇಕಾಗುತ್ತದೆ. ಕೆಲವು ಸಾರಿ ಭಾರತದ ಸಂಸ್ಥೆ ತಪ್ಪು ಮಾಹಿತಿ ನೀಡುತ್ತಿತ್ತೆಂದು ಲಂಡನ್ನಿನ ನ್ಯಾಚುರಲ್‌ಹಿಸ್ಟರಿ ಮ್ಯೂಸಿಯಂಗೆ ಕಳುಹಿಸಬೇಕಾಗುತ್ತದೆ. ಇದಕ್ಕೆ ಅಂಚೆ ವೆಚ್ಚವನ್ನು ವಿಶ್ವವಿದ್ಯಾಲಯಗಳಾಗಲಿ, ಸಂಶೋಧನೆಗೆ ಹಣ ನೀಡುವ ಸಂಸ್ಥೆಗಳಾಗಲಿ ಭರಿಸುವುದಿಲ್ಲ. ಲಂಡನ್ನಿನ ಸಂಸ್ಥೆ ಒದಗಿಸುತ್ತಿದ್ದ ಗುರುತಿಸುವಿಕೆ ಮತ್ತು ಒದಗಿಸುವ ಮಾಹಿತಿಗಳು ನಿಖರವಾಗಿರುತ್ತಿದ್ದವು ಈಗೀಗ ಈ ಕೆಲಸಕ್ಕೂ ಅವರು ‘ಫೀ’ ಕೊಡಬೇಕೆಂಬ ನಿಯಮ ಜಾರಿಗೆ ತಂದಿದ್ದಾರೆ. ಭಾರತೀಯ ಸಂಸ್ಥೆಗೂ ಅವರು ನೀಡುವ ತಪ್ಪು ಮಾಹಿತಿಗೂ ‘ಫೀ’ ಕೊಡಬೇಕಾದ ಪರಿಸ್ಥಿತಿ. ಇಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಂಶೋಧಕ ಕೆಲಸ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಈ ಪುಸ್ತಕಕ್ಕೆ ಮಾಹಿತಿಗಳನ್ನು ದೊರಕಿಸಿಕೊಳ್ಳಲು ಕಷ್ಟಪಡಬೇಕಾಯ್ತು ಎಂದು ಬೇರೆ ಹೇಳಬೇಕಾಗಿಲ್ಲ.

ಕರ್ನಾಟಕಕ್ಕೆ ಸೀಮೀತವಾದಂತೆ, ಪ್ರಪಂಚದಲ್ಲಿ ಹೆಚ್ಚು ಭಾಗಗಳಲ್ಲಿ ಕಾಣಸಿಗದ ಒಂದೆರಡು ಪ್ರಭೇಧಗಳಿರುವುದು ಇಲ್ಲಿನ ವೈಶಿಷ್ಟ್ಯ, ಕಾಲುಗಳಿಲ್ಲದ ಉಭಯಚರಿಗಳಾದ ಇತ್ತಲೆ ಮಂಡಲ ಮತ್ತು ಸಿಂಹಬಾಲದ ಕಪಿ (ಲಯನ್‌ಟೈಲಡ್ ಮಂಕಿ) ಎಂದು ಹೆಸರಾದ ಕಪಿಗಳು ಕರ್ನಾಟಕದಲ್ಲಿ ಮಾತ್ರ ದೊರಕುತ್ತವೆ. ಅವು ಅವಸಾನದ ಅಂಚಿನಲ್ಲಿವೆ, ಅದಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ ಎನ್ನುವುದು ನಾಚಿಕೆಗೇಡಿತನದ ಪರಮಾವಧಿ.

ಮನುಷ್ಯ ಇಂದು ಜಗತ್ತಿನ ಎಲ್ಲ ಪರಿಸರಗಳಿಗೂ ಎಲ್ಲ ಪರಿಸ್ಥಿತಿಗಳಿಗೂ ಯಶಸ್ವಿಯಾಗಿ ಹೊಂದಿಕೊಂಡು ಜೀವಿಸುತ್ತಿದ್ದಾನೆ. ಹೊಸ ಕ್ಷೇತ್ರಗಳ ಕಡೆಗೆ ಆಸಕ್ತಿಯಿಂದ ನೋಡುತ್ತಿದ್ದಾನೆ. ಈಗ ಆತನ ಗಮನ ಅಂತರಿಕ್ಷದ ಕಡೆಗೆ ತಿರುಗಿ, ಬಾಹ್ಯಾಕಾಶದತ್ತ ಕೇಂದ್ರಿಕರಿಸಿ, ಆಕಾಶಕಾಯಗಳಾದ ಗ್ರಹಗಳು, ಉಪಗ್ರಹಗಳು, ನಕ್ಷತ್ರಗಳತ್ತ ಗಮನ ಹರಿಸಿದ್ದಾನೆ. ಅವುಗಳ ವಿಷಯ ತಿಳಿದು, ವಲಸೆ ಹೋಗಿ ಅವುಗಳಲ್ಲಿ ನೆಲಸಲು ಸಾಧ್ಯವೇ, ಅವು ಜೀವಿಗಳನ್ನು ಸಾಕಬಲ್ಲವೇ ಎಂಬ ವಿಷಯವನ್ನು ಕುರಿತು ಸಂಶೋಧಿಸ ತೊಡಗಿದ್ದಾನೆ. ಇಂದಲ್ಲ ನಾಳೆ ಇದು ಸಾಧ್ಯವಾಗಬಹುದು. ಆದರೆ ಈ ಭಾವನೆ ಆತನ ಮನಸ್ಸನಿನಲ್ಲಿ ಮೂಡಲು, ಆ ಕನಸನ್ನು ನನಸಾಗಿಸಿಕೊಳ್ಳಲು ಕಾರಣವಾದ, ಪೂರಕವಾದ, ಪ್ರೋತ್ಸಾಹಕವಾದ ಅಂಶಗಳು ಯಾವುವು?

ಈ ಆಂಶಗಳನ್ನು ತಿಳಿದುಕೊಂಡು ಅರ್ಥಮಾಡಿಕೊಳ್ಳಬೇಕಾದರೆ, ಮನುಷ್ಯನ ಉದ್ಭವ, ವಿಕಾಸ ಮುಂತಾದ ವಿಷಯಗಳನ್ನು ಆತನ ವಿಕಾಸಕ್ಕೆ ಕಾರಣವಾದ ಅಥವಾ ಆತನ ವಿಕಾಸದಲ್ಲಿ ಪ್ರತ್ಯಕ್ಷವಾಗಿ ಇಲ್ಲವೇ ಅಪ್ರತ್ಯಕ್ಷವಾಗಿ ಪಾಲುಗೊಂಡ ಆತನ ಹತ್ತಿರದ ಅಥವಾ ದೂರದ ಪ್ರಾಣಿ ಬಂಧುಗಳ ವಿಷಯ ತಿಳಿದುಕೊಳ್ಳಬೇಕಾಗುತ್ತದೆ. ಅದನ್ನು ತಿಳಿದುಕೊಳ್ಳಬೇಕಾದರೆ ಉಳಿದ ಪ್ರಾಣಿಗಳ ವ್ಯವಸ್ಥಿತ ಅಭ್ಯಾಸ ನಡೆಯಬೇಕು. ಅದಕ್ಕೆ ಪೂರ್ವಭಾವಿಯಾಗಿ ಅವುಗಳ ವರ್ಗೀಕರಣ ತಿಳಿದುಕೊಳ್ಳುವುದು ಅಗತ್ಯ.

ಜೀವಿಗಳೆಲ್ಲವನ್ನೂ ಸೇರಿಸಿ ಜೀವಿಸಂಕುಲವನ್ನು ಜೀವಿ ಸಾಮ್ರಾಜ್ಯವನ್ನಾಗಿ ಪರಿಗಣಿಸಲಾಗಿದೆ. ಜೀವಿ ಸಾಮ್ರಾಜ್ಯದಲ್ಲಿ ಪ್ರಾಣಿಗಳು ಮತ್ತು ಸಸ್ಯಗಳು ಎಂಬ ಎರಡು ರಾಜ್ಯಗಳಿವೆ.

ಸಸ್ಯಗಳು ಮತ್ತು ಪ್ರಾಣಿಗಳ ಪರಿಚಯವಿದ್ದರೂ ಅವೆರಡರ ನಡುವಿನ ವ್ಯತ್ಯಾಸಗಳನ್ನು ಸಂಕ್ಷಿಪ್ತವಾಗಿ ತಿಳಿದುಕೊಳ್ಳುವುದು ಮುಖ್ಯ.

ಸಸ್ಯಗಳು ಪ್ರಾಣಿಗಳಂತೆ ಸ್ಥಳದಿಂದ ಸ್ಥಳಕ್ಕೆ ಚಲಿಸಲಾರವು. ಅವು ಯಾವುದಾದರೊಂದು ಜಾಗಕ್ಕೆ ಅಂಟಿಕೊಂಡು ಜೀವಿಸುತ್ತವೆ. ಈ ಲಕ್ಷಣ ನಿರಪೇಕ್ಷವಲ್ಲ. ಚಲಿಸಬಲ್ಲ ಸಸ್ಯಗಳಿವೆ. ಉದಾಹರಣೆ, ಕ್ಲಾಮಿಡೊಮೊನಾಸ್‌, ವಾಲ್ವಾಕ್ಸ ಎಂಬ ಸೂಕ್ಷ್ಮ ಸಸ್ಯಗಳು. ಇದೇ ರೀತಿ ಚಲಿಸಲಾರದೆ ಒಂದು ಸ್ಥಳಕ್ಕೆ ಅಂಟಿಕೊಂಡು ಜೀವಿಸುವ ಪ್ರಾಣಿಗಳಿವೆ. ಉದಾ : ಹವಳದ ಪ್ರಾಣಿಗಳು, ಸ್ಪಂಜುಗಳು.

ಸಸ್ಯಗಳು ತಮ್ಮ ಆಹಾರವನ್ನು ಸ್ವತಃ ತಾವೇ ತಯಾರಿಸಿಕೊಳ್ಳುತ್ತವೆ. ಪರಿಸರದಲ್ಲಿ ದೊರಕುವ ನೀರು, ಕಾರ್ಬನ್‌ಡೈ ಆಕ್ಷೈಡ್‌ಗಳೆಂಬ ನಿರವಯವ ವಸ್ತುಗಳನ್ನು ಬಳಸಿಕೊಂಡು ಸೂರ್ಯನ ಬಿಸಿಲಿನಲ್ಲಿ ತಮ್ಮ ಎಲೆಗಳಲ್ಲಿರುವ ಹರಿತ್ತು ಎಂಬ ವಸ್ತುವಿನ ಸಹಾಯದಿಂದ ಪೋಷಕ ವಸ್ತುಗಳನ್ನು ತಯಾರಿಸಿ ತಮ್ಮ ದೈನಂದಿನ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತವೆ. ಈ ವಿಧಾನದ ಪೋಷಣ ವಿಧಾನವನ್ನು ಸ್ವಪೋಷಣೆ (ಆಟೊಟ್ರೊಪಿಕ್‌) ಎಂದು ಕರೆಯುತ್ತಾರೆ. ಪ್ರಾಣಿಗಳು ತಮ್ಮ ಆಹಾರವನ್ನು ತಯಾರಿಸಿಕೊಳ್ಳಲಾರವು. ಅವು ಸಿದ್ಧಪಡಿಸಿದ ಆಹಾರವನ್ನು (ಸಸ್ಯ, ಮಾಂಸ) ಸೇವಿಸಿ ತಮ್ಮ ಪೋಷಕಾಂಶಗಳನ್ನು ಪಡೆಯುತ್ತವೆ. ಈ ವಿಧಾನಕ್ಕೆ ಪರಪೋಷಣೆ (ಹೆಟರೊಟ್ರೋಪಿಕ್‌) ಎಂದು ಹೆಸರು. ಸಸ್ಯಗಳು ಸ್ವಪೋಷಕಗಳು ಮತ್ತು ಪ್ರಾಣಿಗಳು ಪರಪೋಷಕಗಳು. ಇದಕ್ಕೂ ಅಪವಾದಗಳುಂಟು. ಸ್ವಪೋಷಕ ಪ್ರಾಣಿಗಳು (ಉದಾ : ಯುಗ್ಲಿನಾ) ಮತ್ತು ಪರಪೋಷಕ ಸಸ್ಯಗಳು (ಉದಾ : ಕೀಟಾಹಾರಿ ಸಸ್ಯಗಳು) ಇವೆ.

ಮೇಲೆ ತಿಳಿಸಿದ ಸ್ಥೂಲ ಲಕ್ಷಣ ವ್ಯತ್ಯಾಸಗಳೆ ಅಲ್ಲದೆ ಜೀವಕೋಶ ಮಟ್ಟದ ಸೂಕ್ಷ್ಮ ವ್ಯತ್ಯಾಸಗಳು ಇವೆ. ಸಸ್ಯ ಜೀವಕೋಶಗಳಿಗೆ ಸೆಲ್ಯುಲೋಸ ಪದಾರ್ಥವಿರುವ ದಪ್ಪ ಕೋಶಭಿತ್ತಿಯುಂಟು. ಸಸ್ಯ ಜೀವಕೋಶಗಳ ಕೋಶ ದ್ರವ್ಯದಲ್ಲಿ ಸಾಮಾನ್ಯವಾಗಿ ಅವಕಾಶಗಳಿರುತ್ತವೆ, ಪತ್ರ ಹರಿತ್ತನ್ನು ಒಳಗೊಂಡ ಕ್ಲೋರೊಪ್ಲಾಸ್ಟ್‌ಗಳೆಂಬ ಕೋಶಾಂಗಗಳಿವೆ, ಆದರೆ ಕೋಶ ವಿಭಜನೆಯ ಕಾಲಕ್ಕೆ ಪಾತ್ರವಹಿಸುವ ಕೇಂದ್ರಕಾಯ (ಸೆಂಟ್ರೊಸೋಮ) ಇಲ್ಲ. ಪ್ರಾಣಿಗಳ ಜೀವಕೋಶದಲ್ಲಿ ಕೋಶಭಿತ್ತಿ, ಕ್ಲೋರೊಪ್ಲಾಸ್ಟ್‌ಗಳಿಲ್ಲ. ಕೋಶದ್ರವ್ಯದಲ್ಲಿ ಅವಕಾಶಗಳು ಇಲ್ಲ ಅಥವಾ ಅಪರೂಪ. ಆದರೆ ಕೇಂದ್ರಕಾಯಗಳಿವೆ.

ಈಗ ಪ್ರಾಣಿ ರಾಜ್ಯವನ್ನು ಪರಿಶೀಲಿಸೋಣ. ಪ್ರಾಣಿರಾಜ್ಯವನ್ನು ಅವುಗಳ ದೇಹರಚನೆಯ ಆಧಾರದ ಮೇಲೆ ಬೆನ್ನಹುರಿ ಅಥವಾ ನೋಟೊಕಾರ್ಡ್‌ಇರುವ ಕಾರ್ಡೇಟಗಳು ಮತ್ತು ಇಲ್ಲದಿರುವ ನಾನ್ಕಾರ್ಡೇಟಗಳೆಂದು ವಿಭಾಗಿಸಿದ್ದಾರೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಬೆನ್ನು ಮೂಳೆ ಅಥವಾ ಕಶೇರುಸ್ತಂಭ ಇರುವ ಕಶೇರುಕಗಳು ಮತ್ತು ಅದಿಲ್ಲದ ಅಕಶೇರುಕಗಳೆಂದು ವಿಭಾಗಿಸಿದ್ದಾರೆ. ನಾನ್‌ಕಾರ್ಡೇಟ ಅಥವಾ ಅಕಶೇರುಕ ಎರಡೂ ಒಂದೇ. ಆದರೆ ಕಶೇರುಕಗಳು ಕಾರ್ಡೇಟಗಳ ಗುಂಪಿಗೆ ಸೇರಿದರೂ ಒಂದು ಸಣ್ಣ ವ್ಯತ್ಯಾಸದಿಂದ ಭಿನ್ನವಾಗಿವೆ.

ಕಶೇರುಕಗಳು ಕಾರ್ಡೇಟ ಉಪರಾಜ್ಯದ ಒಂದು ಉಪಗುಂಪು. ಕಾರ್ಡೇಟುಗಳಲ್ಲಿ ತಲೆಯ ಹಿಂಭಾಗದಿಂದ ಬಾಲದ ತುದಿಯವರೆಗೂ, ಪ್ರಾಣಿಗಳ ಬೆನ್ನಿನ ಭಾಗದಲ್ಲಿ ಉಪಸ್ಥಿತವಿರುವ, ಸಂಯೋಜಕ ಅಂಗಾಂಶದಿಂದ ರೂಪಗೊಂಡ ನೋಟೊಕಾರ್ಡ ಎಂಬ ರಚನೆ ಇರುತ್ತದೆ. ಇದು ಮೃದುವಾದ ದೇಹಕ್ಕೆ ಸ್ಥಿರತೆ ಮತ್ತು ನಿರ್ದಿಷ್ಠ ಆಕಾರವನ್ನು ಒದಗಿಸುತ್ತದೆ. ಈ ನೋಟೊಕಾರ್ಡ ಕೆಲವು ಕಾರ್ಡೇಟು ಪ್ರಾಣಿಗಳಲ್ಲಿ ಅವುಗಳ ಜೀವನಪೂರ್ತಿ ಇರುತ್ತದೆ. ಆದರೆ ಕಶೇರುಕಗಳಲ್ಲಿ ಬೆಳವಣಿಗಯ ಆದಿ ಹಂತಗಳಲ್ಲಿ, ಅಂದರೆ ಭ್ರೂಣಾವಸ್ಥೆಯಲ್ಲಿ ಬೆಳೆದು, ಅನಂತರದ ಬೆಳವಣಿಗೆಯಲ್ಲಿ ಕಶೇರುಸ್ತಂಭ ರಚನೆಗೆ ದಾರಿ ಮಾಡಿಕೊಡುತ್ತದೆ. ಕಶೇರುಕಗಳು ಕಾರ್ಡೇಟುಗಳೂ ಹೌದು. ಕಾರ್ಡೇಟುಗಳದು ಒಂದು ವಂಶ. ಕಶೇರುಕಗಳಲ್ಲದ ಕಾರ್ಡೇಟುಗಳನ್ನು ಆದಿ ಕಾರ್ಡೇಟುಗಳೆಂಬ (ಪ್ರೊಟೊಕಾರ್ಡೇಟು) ಗುಂಪಿಗೆ ಸೇರಿಸುತ್ತಾರೆ.

ಪ್ರಸ್ತುತ ಪರಿಶೀಲನೆಯ ಮುಖ್ಯ ಗುಂಪು ಕಶೇರುಕಗಳು. ನಾವು ‘ಕರ್ನಾಟಕದ ಕಶೇರುಕಗಳು’ ಶೀರ್ಷಿಕೆಯಡಿಯಲ್ಲಿ ಅಭ್ಯಸಿಸುವುದಾದರೂ ಅವುಗಳನ್ನೂ ಅರ್ಥಮಾಡಿಕೊಳ್ಳಬೇಕಾದರೆ ಕಶೇರುಕಗಳ ಸಾಮಾನ್ಯ ಲಕ್ಷಣಗಳನ್ನು ತಿಳಿದುಕೊಳ್ಳಬೇಕಾಗುತ್ತದೆ.

* * *