ಆಹಾರ ಮತ್ತು ಆಶ್ರಯಗಳು ಪ್ರಾಣಿಗಳ ಬದುಕಿನ ಯಶಸ್ಸಿನ ಮುಖ್ಯ ಆಧಾರ ಸ್ತಂಭಗಳು. ಅವುಗಳಿಗಾಗಿ ಅವುಗಳಲ್ಲಿಯೆ, ಅಂದರೆ ಪರಸ್ಪರ ಪ್ರಾಣಿಗಳ ನಡುವೆ ಸದಾ ಸ್ಪರ್ಧೆ, ಹೋರಾಟ ನಡೆಯುತ್ತಿರುತ್ತದೆ. ಈ ದೃಷ್ಟಿಯಿಂದಾಗಿ ಪ್ರಾಣಿಗಳಿಗೂ ಅವು ವಾಸಿಸುವ ವಸತಿಗೂ ಸಂಬಂಧವಿರುವಂತೆ ತೋರುತ್ತದೆ. ಈ ಆಧಾರದ ಮೇಲೆ ಪ್ರಾಣಿಗಳ ವಿತರಣೆ ನಡೆದಿದೆ, ನಡೆಯುತ್ತಿದೆ, ನಡೆಯುತ್ತಿರುತ್ತದೆ. ವಸತಿ ವಿಧಾನಗಳನ್ನಾಧಾರಿಸಿ ನಡೆಯುವ ಪ್ರಾಣಿಗಳ ವಿತರಣೆಯನ್ನು ಜೀವಿ, ಪ್ರಾಣಿ ಭೂಗೋಳ (ಜೂಜಿಯಾಗ್ರಫಿ) ಎಂದು ಕರೆಯುತ್ತಾರೆ.

ಯಾವುದೇ ಪ್ರಾಣಿಯೂ, ಸಾಕು ಪ್ರಾಣಿಗಳ ವಿನಹ, ಪ್ರಪಂಚಾದ್ಯಂತ ಏಕಪ್ರಕಾರವಾಗಿ ಹರಡಿರುವುದಿಲ್ಲ. ಏಕೆಂದರೆ ಪ್ರತಿಯೊಂದು ಪ್ರಾಣಿಗೂ ತನ್ನದೇ ಆದ ನಿರ್ದಿಷ್ಟ ಕ್ಷೇತ್ರವಿರುತ್ತದೆ ಅಥವಾ ಪ್ರತಿಯೊಂದು ಪ್ರಾಣಿಯೂ ಒಂದು ನಿರ್ದಿಷ್ಟ ಕ್ಷೇತ್ರಕ್ಕೆ ಸೀಮಿತವಾಗಿರುತ್ತದೆ. ಉದಾಹರಣೆಗೆ ಮೀನಿನಂತಹ ಪ್ರಾಣಿಗಳು ನೀರಿನ ವಾಸಕ್ಕೂ, ಹಲ್ಲಿ, ಸಸ್ತನಿಗಳಂತಹವು ನೆಲವಾಸಕ್ಕೂ ಹೊಂದಿ ಕೊಂಡಿವೆ. ಪ್ರಾಣಿಗಳ ವಿತರಣೆ ಮತ್ತು ಅದನ್ನು ನಿಯಂತ್ರಿಸುವ ಘಟಕಗಳ ಅಭ್ಯಾಸವೇ ಪ್ರಾಣಿ ಭೂವಿವರಣೆ. ಈ ಅಭ್ಯಾಸವು ಪ್ರಾಣಿಗಳಿಗೂ ಮತ್ತು ಅವು ವಾಸಿಸುವ ಕ್ಷೇತ್ರಗಳಿಗೂ ಇರುವ ಸಂಬಂಧಗಳು, ಅಲ್ಲಿ ಅವು ಎದುರಿಸುವ ಅಡ್ಡಿ, ಆತಂಕಗಳು, ಆ ಕ್ಷೇತ್ರವನ್ನು ತಲುಪುವ ಅಥವಾ ಅಲ್ಲಿಂದ ಹೊರ ಹೋಗುವ ವಿತರಣಾ ಮಾರ್ಗಗಳಲ್ಲಿ ಕಂಡುಬರುವ ಅಡಚಣೆಗಳು, ಹಾಗೂ ಆ ಕ್ಷೇತ್ರಗಳಲ್ಲಿ ಆ ಪ್ರಾಣಿಗಳು ಹೇಗೆ ಬಂದು ಸೇರಿದವು, ತಮ್ಮ ಜೀವನವನ್ನು ಆ ಕ್ಷೇತ್ರದಲ್ಲಿ ಹೇಗೆ ಆರಂಭಿಸಿದವು ಎಂಬ ಹಿನ್ನೆಲೆಯನ್ನು ಅವಲಂಬಿಸುತ್ತವೆ.

ಒಂದು ನಿರ್ದಿಷ್ಟ ನೆಲೆಯಲ್ಲಿ ವಾಸಿಸುವ ಪ್ರಾಣಿಗಳನ್ನು ಒಟ್ಟಾರೆ ಫಾನ (FAUNA/ ಪ್ರಾಣಿ ಸಂಕುಲ) ಎಂದು ಕರೆಯುತ್ತಾರೆ. ಇದೇ ರೀತಿ ಒಂದು ನೆಲೆಯ ಸಸ್ಯಸಂಕುಲವನ್ನು ಫ್ಲೋರ (FLORA) ಎಂದೂ, ಪ್ರಾಣಿ ಮತ್ತು ಸಸ್ಯಗಳೆಡರ ಒಕ್ಕೂಟವನ್ನು ಬಯೋಟ (BIOTA) ಎಂದೂ ಕರೆಯುತ್ತಾರೆ. ಒಂದು ಪ್ರಾಣಿ ಪ್ರಭೇಧವು ವಾಸಿಸುವ ನೆಲ ಅಥವಾ ನೀರಿನ ಒಟ್ಟು ವಿತರಣಾ ವಿಸ್ತಾರವನ್ನು ಭೌಗೋಳಿಕ ಪ್ರದೇಶ ಎಂದು ಕರೆಯುತ್ತಾರೆ. ಕೆಲವು ಪ್ರಾಣಿಗಳು ವ್ಯಾಪಕ ಪ್ರಾದೇಶಿಕ ವಿತರಣೆಯನ್ನು, ಮತ್ತೆ ಕೆಲವು ಸೀಮಿತ ಪ್ರಾದೇಶಿಕ ವಿತರಣೆಯನ್ನು ತೋರಬಹುದು. ಬಹುಪಾಲು ಪ್ರಾಣಿಗಳಿಗೆ ವಿಸ್ತಾರವಾದ ಭೌಗೋಳಿಕ ಪ್ರದೇಶ ಇರುವಂತೆ ತೋರುತ್ತದೆ. ಉದಾಹರಣೆಗೆ ಆನೆ ಆಫ್ರಿಕಾ ಮತ್ತು ಏಷ್ಯಾ ಖಂಡಗಳೆರಡಕ್ಕೂ ವ್ಯಾಪಕವಾಗಿ ವಿತರಣೆಗೊಂಡಿದೆ. ಆದರೆ ಸೀಲ್ ಮತ್ತು ಧ್ರುವ ಕರಡಿಗಳು ಧ್ರುವ ಪ್ರದೇಶಗಳಿಗೆ ಮಾತ್ರ ಸೀಮಿತವಾದ ವಿತರಣೆಯನ್ನು ತೋರುತ್ತವೆ.

ಪ್ರತಿಯೊಂದು ಪ್ರಾಣಿಯೂ ತನ್ನ ಕ್ಷೇತ್ರದಲ್ಲಿ ಬದುಕುವ ಕಾಯಕದಲ್ಲಿ ಅನೇಕ ಎಡರುತೊಡರುಗಳನ್ನು ಎದುರಿಸಬೇಕಾಗುತ್ತದೆ. ಈ ಎಡರುತೊಡರುಗಳನ್ನು ಎದುರಿಸುವಲ್ಲಿ ಪ್ರಾಣಿ ಪ್ರಭೇಧಗಳು ಎರಡು ಮುಖ್ಯ ವಿಧಾನಗಳನ್ನು ಅನುಸರಿಸಿ ಪರಿಹರಿಸಿಕೊಳ್ಳಬಹುದಾಗಿದೆ. ಒಂದನೆಯದಾಗಿ, ತನ್ನ ಬದುಕಿಗೆ ಅನುಕೂಲವಾದ ಪರಿಸ್ಥಿತಿಗಳಿರುವ ಕ್ಷೇತ್ರಗಳನ್ನು ಆರಿಸಿಕೊಂಡು, ಅಲ್ಲಿ ನೆಲಸಿ ಬಾಳುವುದು. ಎರಡನೆಯದಾಗಿ, ಬಯಸಿಯೋ ಬಯಸದೆಯೋ ಬಂದು ನೆಲಸಿದ ಕ್ಷೇತ್ರದಲ್ಲಿ ಬದುಕಲು ಅಗತ್ಯವಾದ ಮಾರ್ಪಾಡುಗಳನ್ನು ಮಾಡಿಕೊಂಡು, ವಸತಿಗೆ ಹೊಂದಿಕೊಂಡು ಬಾಳುವುದು.

ಬದುಕು ಈ ಪರ್ಯಾಯ ಮಾರ್ಗಗಳ ಆಯ್ಕೆಯಷ್ಟು ಸುಲಭವಲ್ಲ. ಪ್ರಾಣಿಗಳು ತಮ್ಮ ಬದುಕಿನ ಹೋರಾಟದಲ್ಲಿ ಇನ್ನೂ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪ್ರತಿಯೊಂದು ಜೀವಿಯೂ ತನ್ನ ಅನಂತರ ತನ್ನ ಕುಲ ಉಳಿದು ಊರ್ಜಿತಗೊಳ್ಳಲಿ ಎಂದು, ತನ್ನಂತೆ ಇರುವ ಇನ್ನೂ ಅನೇಕ ನಕಲು ಜೀವಿಗಳನ್ನು ಉತ್ಪತ್ತಿ ಮಾಡುತ್ತದೆ. ಇದೇ ಸಂತಾನೋತ್ಪತ್ತಿ. ಅವು ಸಾಮಾನ್ಯವಾಗಿ ಅಗತ್ಯಕ್ಕಿಂತ ಹೆಚ್ಚು ಸಂತಾನವನ್ನು ಉತ್ಪತ್ತಿ ಮಾಡುತ್ತವೆ. ಇವುಗಳಲ್ಲಿ ಕೆಲವಾದರೂ ಉಳಿದು ತನ್ನ ಕುಲ ಅಭಿವೃದ್ಧಿಗೊಳ್ಳಲಿ ಎಂಬುದು ಅದರ ಉದ್ದೇಶ. ಅದಕ್ಕೆಂದೇ ಇದನ್ನು ವಂಶಾಭಿವೃದ್ಧಿ ಎಂತಲೂ ಕರೆಯುತ್ತೇವೆ. ಹೀಗೆ ಅಗತ್ಯಕ್ಕಿಂತ ಹೆಚ್ಚು ಸಂತಾನಗಳ ಉತ್ಪತ್ತಿಯೂ ಒಂದು ರೀತಿಯ ಜೀವಿಸಂದಣಿ ಒತ್ತಡವನ್ನು ಉತ್ಪತ್ತಿ ಮಾಡುತ್ತದೆ. ಆಗ ಪ್ರಾಣಿಗಳು ಏನು ಮಾಡಬೇಕು, ಅಥವಾ ಮಾಡಬಹುದು? ತಮ್ಮ ವಸತಿ ಸೌಲಭ್ಯವನ್ನು ವಿಸ್ತರಿಸಿಕೊಳ್ಳುವುದು, ಹೆಚ್ಚು ಆಹಾರ ಮೂಲವನ್ನು ಹುಡುಕಿಕೊಳ್ಳುವುದು. ಈ ಪರಿಹಾರ ಕಂಡುಕೊಳ್ಳುವ ಸಂದರ್ಭದಲ್ಲಿ ಅವುಗಳ ನಡುವೆ ಪರಸ್ಪರ ಸ್ವರ್ಧೆ ಏರ್ಪಡುತ್ತದೆ. ಈ ಸ್ವರ್ಧೆಯಲ್ಲಿ ಸಮರ್ಥವಾದ ಪ್ರಾಣಿಗಳು ಗೆದ್ದು ಉಳಿಯುತ್ತವೆ. ಅಸಮರ್ಥವಾದವು ಸೋತು ಅಳಿಯುತ್ತವೆ. ಜೀವ ಸಂದಣಿಯೇ ಅಲ್ಲದೆ, ಅವುಗಳನ್ನು ತಿಂದು ಬದಕುವ ಹಿಂಸ ಪ್ರಾಣಿಗಳು (ಶತ್ರುಗಳು), ಅವುಗಳನ್ನು ಕಾಡುವ ರೋಗಗಳು, ಪರತಂತ್ರಜೀವಿಗಳು, ಆಹಾರದ ಕೊರತೆ, ಪರಿಸರ ವಾತಾವರಣದ ವೈಪರೀತ್ಯಗಳು (ಅತಿವೃಷ್ಟಿ ಅನಾವೃಷ್ಟಿ), ಆಶ್ರಯದ ಅಭಾವ ಮುಂತಾದ ಸಮಸ್ಯೆಗಳೂ ಪ್ರಾಣಿ ಜೀವನದ ಮೇಲೆ ಒತ್ತಡ ಹೇರುತ್ತವೆ. ಮತ್ತು ಪ್ರಾಣಿ ಸಂದಣಿಗಳ ಗಾತ್ರವನ್ನು ಹತೋಟಿಯಲ್ಲಿಡಲು ನೆರವಾಗುತ್ತದೆ. ಆದ್ದರಿಂದ ಪ್ರಾಣಿ ವಿತರಣೆಯು ಒಂದು ಚೈತನ್ಯಪೂರ್ಣ ಘಟನೆ ಪ್ರಾಣಿ ವಿತರಣೆ ಸ್ಥಿರವಲ್ಲ. ಬದಲಾವಣೆ ಜೀವಿಗಳ ಜೀವನದ ಜೀವಾಳ. ತನ್ನ ಕ್ಷೇತ್ರದಲ್ಲಿ ಪರಿಸ್ಥಿಗಳು ಪ್ರತಿಕೂಲವಾದಾಗ ಆ ಕ್ಷೇತ್ರವನ್ನು ಬಿಟ್ಟು ಅನುಕೂಲ ಪರಿಸ್ಥಿಗಳಿರುವೆಡೆಗಳನ್ನು ಹುಡುಕಿ ಕೊಂಡು ಹೋಗುವ ಪ್ರಯತ್ನದಲ್ಲಿ ಅನೇಕ ರೀತಿಯ ಪ್ರತಿರೋಧಗಳು ಎದುರಾಗಬಹುದು, ಈ ಪ್ರತಿರೋಧಗಳು ಭೌತಿಕವಾದುವಾಗಿರಬಹುದು. ಉದಾಹರಣೆಗೆ ಒಂದು ಜಲಾಶಯದಿಂದ ಮತ್ತೊಂದಕ್ಕೆ ಹೋಗಲು ನೆಲ ಅಡ್ಡಬರಬಹುದು. ಅದೇರೀತಿ ಒಂದು ಖಂಡದಿಂದ ಮತ್ತೊಂದಕ್ಕೆ ಹೋಗಲು ಕಡಲಿನ ನೀರು ಅಡ್ಡಬರಬಹುದು. ಭೌತಿಕ ಪ್ರತಿರೋಧಕಗಳೇ ಅಲ್ಲದೆ ವಿವಿಧ ಕ್ಷೇತ್ರಸೀಮಿತ ಶಾಖ, ಆರ್ದತೆ (ಮಳೆ, ಹಿಮ, ಗಾಳಿಯ ತೇವಾಂಶ, ಇತ್ಯಾದಿ) ಗಳಂತಹ ವಾತಾವಾರಣದ ಪ್ರತಿರೋಧಗಳು ಮತ್ತು ಬದುಕಿನ ಅಗತ್ಯವಾದ ಆಹಾರ, ಅದಕ್ಕಾಕಿ ಸ್ಪರ್ಧಿಸುವ ಇತರ ಪ್ರಭೇಧಗಳು, ಹಿಂಸ್ರಜೀವಿಶತ್ರುಗಳು, ಅಥವಾ ರೋಗರುಜಿನಗಳಂತಹ ಜೈವಿಕ ಪ್ರತಿರೋಧಕಗಳಾಗಿರಬಹುದು. ಉದಾಹರಣೆಗೆ, ಕೆಲವು ಕೀಟಗಳು ಒಂದು ನಿರ್ದೀಷ್ಟ ಸಸ್ಯಾಹಾರ, ಆಶ್ರಯ ಅಥವಾ ವಂಶಾಭಿವೃದ್ಧಿ ವಸತಿ ಗಳಿಗೆ ಸೀಮಿತವಾದ ಹೊಂದಾಣಿಕೆಗಳನ್ನು ಪಡೆದಿರುವುದು. ಅಂತಹ ಸಂದರ್ಭದಲ್ಲಿ ಆ ಸಸ್ಯ ಮತ್ತು ಆ ಸಸ್ಯದ ಬೆಳವಣಿಗೆಯನ್ನು ನಿಯಂತ್ರಿಸುವ ಘಟಕಗಳು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಆ ಕೀಟದ ವಿತರಣೆಯನ್ನು ನಿಯಂತ್ರಿಸುತ್ತವೆ.

ಪ್ರತಿಯೊಂದು ಪ್ರಾಣಿ ಪ್ರಭೇಧಕ್ಕೂ ಮತ್ತು ಅದು ಪರಿಸರದ ಪ್ರತಿಯೊಂದು ಘಟಕಕ್ಕೂ ಒಗ್ಗಿಕೊಳ್ಳುವ ಘಟನೆಯಲ್ಲಿ ಸಹನಾ ಮಿತಿ ಉಂಟು. ಪ್ರತಿಕೂಲ ಪರಿಸ್ಥಿತಿಗಳು ಸೃಷ್ಟಿಯಾದಾಗ ಪಕ್ಷಿಗಳು ಮತ್ತು ಮೀನುಗಳು ಅನುಕೂಲ ಪರಿಸ್ಥಿತಿಗಳಿರುವಲ್ಲಿಗೆ ವಲಸೆ ಹೋಗಬಹುದು. ಈ ಹೊಸ ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಬದುಕಬಹುದು. ಕೆಲವು ಸಂದರ್ಭಗಳಲ್ಲಿ, ಸಣ್ಣಪುಟ್ಟ ಜಲಚರಿಗಳು, ಜಲವಾಸಿ ಲಾರ್ವಾಗಳು, ಅಪರೂಪವಾಗಿ ದೊಡ್ಡ ಪ್ರಾಣಿಗಳೂ ಸೇರಿದಂತೆ ಅನೇಕ ಪ್ರಾಣಿಗಳು ಆಕಸ್ಮಿಕವಾಗಿ ಪ್ರವಾಹದಲ್ಲಿ ಕೊಚ್ಚಿ ಹೋಗಿ ಹೊಸ ಪರಿಸರಗಳನ್ನು ತಲುಪಬಹುದು.

ಪ್ರಾಣಿವಿತರಣೆ, ವಸತಿಗಳ ಆಯ್ಕೆ ಮತ್ತು ಅದಕ್ಕೆ ಅನುವಾದ ಹೊಂದಾಣಿಕೆಗಳು ಜೀವವಿಕಾಸಕ್ಕೆ ಪೂರಕವಾಗಿ ವರ್ತಿಸಿವೆ. ಆದ್ದರಿಂದ ಪ್ರಾಣಿಗಳಿಗೂ ಅವುಗಳ ಪರಿಸರಗಳಿಗೂ ನಡುವೆ ನಿಕಟ ಸಂಬಂಧ ಏರ್ಪಟ್ಟಿದೆ. ಹೀಗಾಗಿ ನಿರ್ದಿಷ್ಟ ನೆಲೆಗಳಲ್ಲಿ ನಿರ್ದಿಷ್ಟ ಪ್ರಾಣಿ ಪ್ರಭೇಧಗಳಿರುವುದು ಸಾಮಾನ್ಯ! ಉದಾಹರಣೆಗೆ ಕಡಲು, ನದಿ, ಹೊಳೆ, ಕೆರೆ, ಕೊಳ, ಜಲಾಶಯಗಳಲ್ಲಿ ಜಲಚರಿಗಳಿರುತ್ತವೆ. ಕಾಡಿನಲ್ಲಿ ವನ್ಯಜೀವಿಗಳು, ಹುಲ್ಲುಗಾವಲುಗಳಲ್ಲಿ ಸಸ್ಯಾಹಾರಿ ಪ್ರಾಣಿಗಳು ಇರುತ್ತವೆ. ಕಡಲು ನೀರಿನ ಆಗರ. ಭೂಮಿಯ ಮೇಲೆ ಬೀಳುವ ಮಳೆಯ ನೀರು ಅಂತಿಮವಾಗಿ ಕಡಲುಗಳನ್ನೇ ಸೇರುತ್ತದೆ. ಆದರೆ ಅದೇ ಹೊಳೆ, ಕೆರೆ, ಕೊಳಗಳಂತಹ ಮಳೆ ಅವಲಂಬಿತ ಜಲಾಶಯಗಳು ಬೇಸಗೆಯಲ್ಲಿ ಬತ್ತುತ್ತವೆ, ಬರಿದಾಗುತ್ತವೆ. ಪುನಃ ಮುಂದಿನ ಮಳೆಗಾಲದಲ್ಲಿ ತುಂಬಿ ನಳನಳಿಸುತ್ತವೆ. ನದಿಹೊಳೆಗಳು ತುಂಬಿ ಹರಿಯುತ್ತವೆ. ಈ ತುಂಬುವುದು ಮತ್ತು ಬತ್ತುವುದು ಪುನಃ ಪುನಃ ನಡೆಯುವ ಘಟನೆಗಳು. ಆದ್ದರಿಂದ ಈ ಜಲಾಶಯಗಳ ನೀರನ್ನು ಇಂಗ್ಲೀಷಿನಲ್ಲಿ ಫ್ರೆಶ್‌‌ವಾಟರ್ ಅಂದರೆ ಹೊಸ ನೀರು, ಪ್ರತಿ ಮಳೆಗಾಲದಲ್ಲಿಯೂ ನವೀಕರಣಗೊಳ್ಳುವ ನೀರೆಂದು ಗುರುತಿಸಿದ್ದಾರೆ. ಆದರೆ ಅದಕ್ಕೆ ಸಮಾನ ಪದವಿಲ್ಲದೆ ಕನ್ನಡದಲ್ಲಿ ಆ ನೀರನ್ನು ಕಡಲ ಉಪ್ಪು ನೀರಿಗೆ ಹೋಲಿಸಿ ಸಿಹಿ ನೀರೆಂದು ಕರೆಯುತ್ತಿದ್ದೇವೆ. ಇದು ಸರಿಯಲ್ಲ ಎಂದು ತಿಳಿದಿದೆ. ಏಕೆಂದರೆ ರಾಸಾಯನಿಕವಾಗಿ ನೀರು, ಬಣ್ಣರಹಿತ, ರಚಿರಹಿತ, ವಾಸನೆರಹಿತ ರಾಸಾಯನಿಕ ವಸ್ತು. ಆದರೆ ಬೇರೆ ದಾರಿ ಇಲ್ಲದೆ ಉಪ್ಪು ನೀರು-ಸಿಹಿ ನೀರುಗಳೆಂದು ಕರೆಯುತ್ತಿದ್ದೇವೆ.

ಒಂದು ಕ್ಷೇತ್ರದಲ್ಲಿ ವಸತಿ ಸೌಕರ್ಯದೊಂದಿಗೆ ಆ ಕ್ಷೇತ್ರದ, ವಾತಾವರಣದ ಘಟಕಗಳಾದ ಶಾಖ, ಬೆಳಕು, ಗಾಳಿಯ ಆರ್ದತೆ, ಆಹಾರ ದೊರಕುವಿಕೆಗಳಂತಹ ಘಟಕಗಳೂ ಆ ಕ್ಷೇತ್ರದಲ್ಲಿ ವಾಸಿಸುವ ಪ್ರಾಣಿಗಳು ಮತ್ತು ಅವುಗಳ ಜೀವನ ವಿಧಾನಗಳನ್ನು ರೂಪಿಸಿವೆ. ಉದಾಹರಣೆಗೆ ಧ್ರುವ ಪ್ರದೇಶಗಳ ಹಿಮಭರಿತ ಶೀತವಾತಾವರಣದಲ್ಲಿ ಸೀಲ್ ಮತ್ತು ಧ್ರುವಕರಡಿಗಳಂತಹ ಪ್ರಾಣಿಗಳು ಮಾತ್ರ ಬದುಕುವುದು ಸಾಧ್ಯ. ಏಕೆಂದರೆ ಅವು ಅಲ್ಲಿನ ಜೀವನಕ್ಕೆ ಹೊಂದಿಕೊಂಡಿವೆ.

ಒಟ್ಟಿನಲ್ಲಿ ಹೇಳುವುದಾದರೆ ಒಂದು ಕ್ಷೇತ್ರದ ವಸತಿ ಸೌಲಭ್ಯ, ಹವಾಮಾನಗಳಂತಹ ಪರಿಸರ ಘಟಕಗಳು ಅಲ್ಲಿ ವಾಸಿಸುವ ಪ್ರಾಣಿ ಜೀವನದ ಮೇಲೆ ಪ್ರಭಾವ ಬೀರುತ್ತವೆ ಮತ್ತು ಅವುಗಳ ಜೀವನವನ್ನು ರೂಪಿಸುತ್ತವೆ. ಇದಕ್ಕೆ ಅನುಗುಣವಾಗಿ ಪ್ರಾಣಿಗಳ ವಿತರಣೆ ಆಗಿದೆ, ಆಗುತ್ತಿದೆ.

ವಿತರಣೆ ಆಗಿರುವುದು ಐತಿಹಾಸಿಕ ಘಟನೆ. ಆದರೆ ಈ ‘ಆಗುತ್ತಿದೆ’ ಎಂದರೆ ಏನು ಎಂದು ಆಶ್ಚರ್ಯಪಡಬೇಡಿ. ನಿಮ್ಮ (ಓದುಗರ) ಮನಸ್ಸಿನಲ್ಲಿ ಸಂಶಯ ಮೂಡಬಹುದು. ಇದು ನಿಜವಾಗಿ ಮನುಷ್ಯನ ಆತ್ಮಸಾಕ್ಷಿಗೆ ಸಂಬಂಧಿಸಿದ ವಿಷಯ! ಪರಿಹಾರ ಆಗತ್ಯವೇ? ಉತ್ತರ ತಿಳಿದುಕೊಳ್ಳಬೇಕೇ?

ಈ ಸುದ್ಧಿಗಳನ್ನು ಪರಿಶೀಲಿಸುವ ಕೃಪೆ ಮಾಡಿ. ವನ್ಯಜೀವಿಗಳಾದ ಆನೆ, ಚಿರತೆ, ಹುಲಿಗಳು ಈಗೀಗ ಮನುಷ್ಯ ವಸತಿಗಳ ಕಡೆಗೆ ‘ಅತಿಕ್ರಮಿಸಿ’ ಬರತೊಡಗಿವೆ. ಕಾಡಿನಲ್ಲಿರಬೇಕಾದ ಈ ಪ್ರಾಣಿಗಳು ಮನುಷ್ಯ ವಸತಿಗೆ ಏಕೆ ಬರುತ್ತಿವೆ? ಕಾಡುಗಳು ಕಣ್ಮರೆಯಾಗಿ ಅಥವಾ ಕಿರಿದಾಗಿ, ಆಹಾರಾಭವ ಸೃಷ್ಟಿಯಾಗಿ ಪರ್ಯಾಯ ಆಹಾರವನ್ನು ಹುಡುಕುತ್ತ ಮನುಷ್ಯ ವಸತಿಗಳ ಕಡೆಗೆ ಬರುತ್ತಿವೆ. ಈ ಸಂಕಷ್ಟ ಪರಿಸ್ಥಿತಿಯ ಸೃಷ್ಟಿಗೆ ಮನುಷ್ಯನೇ ಕಾರಣ ಎಂದರೆ ಸಿಟ್ಟಾಗಬೇಡಿ, ಆಶ್ಚರ್ಯ ಪಡಬೇಡಿ. ಬೆಳೆಯುತ್ತಿರುವ ಮನುಷ್ಯ ಸಂತಾನದಿಂದಾಗಿ ಉಂಟಾದ ಜನಸಂಖ್ಯೆ ಆಸ್ಫೋಟ, ಅದಕ್ಕಾಗಿ, ಆಶ್ರಯ ಆಹಾರಗಳನ್ನು ಒದಗಿಸುವ ಸಡಗರದಲ್ಲಿ ಕಾಡುಗಳನ್ನು ಕಡಿದು, ಕೃಷಿ ಭೂಮಿ ಸೃಷ್ಟಿಸಿ, ವನ್ಯಜೀವಿಗಳ ಅಗತ್ಯಗಳನ್ನು ಪೂರೈಸುತ್ತಿದ್ದ ಕಾಡುಗಳು ಕಣ್ಮರೆಯಾಗುತಿರುವುದರಿಂದ ವನ್ಯಜೀವಿಗಳು ಆಹಾರ ಹುಡುಕುತ್ತ ಮನುಷ್ಯ ವಸತಿಗಳತ್ತ ಬರುವುದು. ಅನಿವಾರ್ಯವಾಗಿದೆ.

ಈ ಹಿನ್ನೆಲೆಯಲ್ಲಿ ನಾವು ಮಾಡಹೊರಟಿರುವ ಆಭ್ಯಾಸ ಕರ್ನಾಟಕದ ಕಶೇರುಕಗಳು, ಆರಂಭಿಸುವ ಮುನ್ನ ನಾವು ಪ್ರಾಣಿ ವಿತರಣೆಯನ್ನು ತಿಳಿದುಕೊಳ್ಳಬೇಕಾಗುತ್ತದೆ. ಅದಕ್ಕೆ ಪೂರಕವಾಗಿ ಪ್ರಾಣಿಗಳ ಜೀವನ, ಅವುಗಳ ವಸತಿ ಭೂಗೋಲ, ವಾತಾವರಣ (ನೆಲ, ನೀರು, ಆಹಾರ, ಆಶ್ರಯ) ಗಳನ್ನು ಅರ್ಥಮಾಡಿಕೊಂಡಾಗ ಪ್ರದೇಶ ಸೀಮಿತ ಪ್ರಾಣಿಗಳ ವಿತರಣೆಯ ವಿಷಯಗಳನ್ನು ತಿಳಿದುಕೊಳ್ಳಬಹುದು ಮತ್ತು ಅರ್ಥಮಾಡಿಕೊಳ್ಳಬಹುದು. ಈ ಹಿನ್ನೆಲೆಯಲ್ಲಿ ಕರ್ನಾಟಕದ ವಿವಿಧ ಭಾಗಗಳಲ್ಲಿ ದೊರಕುವ ಪ್ರಾಣಿಗಳು, ಆ ಭಾಗಗಳಲ್ಲಿ ಅವು ಬಂದು ಸೇರಿದ ಬಗೆ ಹೇಗೆ ಎಂಬುದು ಆಗತ್ಯ. ಅಂದರೆ ಆ ಪ್ರಾಣಿಗಳು ಮೂಲತಃ ಆ ನೆಲೆಗಳಲ್ಲಿಯೆ ಉದ್ಭವಿಸಿ ವಿಕಸಿಸಿದವೇ ಅಥವಾ ಬೇರೆಡೆ ವಿಕಾಸಗೊಂಡು ಇಲ್ಲಿಗೆ ಬಂದು ನೆಲಸಿದವೇ ಎಂಬುದನ್ನು ತಿಳಿದು ಕೊಳ್ಳಬೇಕಾಗುತ್ತದೆ.

ಪ್ರಪಂಚದ ಪರ್ಯಾವರಣಗಳನ್ನು ಆಯಾ ಅವರಣಗಳಲ್ಲಿ ಕಂಡು ಬರುವ ಸಸ್ಯಗಳು, ಪ್ರಾಣಿಗಳು, ನಿರ್ದಿಷ್ಟವಾಗಿ ಆಕಶೇರುಕಗಳು, ಅವುಗಳ ನಡುವಿನ ಪಾರಸ್ಪರಿಕ ಸಂಬಂಧಗಳನ್ನು ಗುರುತಿಸಿ, ಪರಿಗಣಿಸಿ, ಪ್ರಪಂಚದಲ್ಲಿ ಐದು ಜೀವಭೌಗೋಳಿಕ ವಲಯಗಳನ್ನು ಗುರುತಿಸಿದ್ದದಾರೆ. ಇವುಗಳಲ್ಲಿ ಕರ್ನಾಟಕವೂ ಸೇರಿದಂತೆ ಭಾರತ ಮತ್ತು ಅದರ ನೆರೆಯ ಪ್ರದೇಶಗಳು ಪ್ರಾಚೀನ ಉಷ್ಣವಲಯದ ಪ್ರಾಚ್ಯ ಪ್ರದೇಶ (ಓರಿಯಂಟಲ್ ರೀಜನ್) ಕ್ಕೆ ಸೇರುತ್ತವೆ.

ಪ್ರಾಚ್ಯ ಪ್ರದೇಶವು ಮುಖ್ಯವಾಗಿ ಏಷ್ಯಾಖಂಡದ ಭೂಭಾಗ ಮತ್ತು ಅದರ ಸುತ್ತಲ ಸಮುದ್ರಗಳನ್ನು ಒಳಗೊಂಡಿದೆ. ಇದು ಉತ್ತರದಕ್ಷಿಣ ಅಕ್ಷಾಂಶ ೨೦ ಉ ಮತ್ತು ೯೦ದ, ವರೆಗೂ, ರೇಖಾಂಶ ೭೪ ಪ. ದಿಂದ ೧೨೦ ಪೂ. ವರೆಗೆ ಹರಡುತ್ತದೆ. ಇದರಲ್ಲಿ ಕರ್ನಾಟಕ ರಾಜ್ಯವು ಪೂರ್ವ ಪಶ್ಚಿಮ ರೇಖಾಂಶದಿಂದ ೭೪ ಪ. ೭೮.೨ ಪೂ. ದವರೆಗೂ ಮತ್ತು ಉತ್ತರ ದಕ್ಷಿಣ ಅಕ್ಷಾಂಶ ೧೨.೯ ದ. ದಿಂದ ೧೮.೪ ಉ. ವರೆಗೂ ವಿಸ್ತರಿಸುವ ಭೂಭಾಗ.

ಪ್ರಾಚ್ಯ ಪ್ರದೇಶವು ಉಷ್ಣವಲಯ ಪರ್ಯಾವರಣದ ಒಂದು ಭಾಗ. ಈ ಪ್ರದೇಶಕ್ಕೆ ಪ್ರಾಣಿಗಳ ಪ್ರವೇಶ ಮತ್ತು ನಿಷ್ಕೃಮಣಗಳನ್ನು ನಿಯಂತ್ರಿಸಬಹುದಾದ ಯಾವ ಪ್ರತಿರೋಧಗಳೂ ಇಲ್ಲ. ಈ ಉಪ ಪ್ರದೇಶವು ದೊಡ್ಡಖಂಡದೊಂದಿಗೆ ಕೂಡಿಕೊಂಡಿದೆ ಯಾಗಿ ಮತ್ತಾವ ಭೂಪ್ರದೇಶದೊಂದಿಗೂ ಸಂಪರ್ಕವಿಲ್ಲ. ಕರ್ನಾಟಕವು ಭಾರತ ಉಪ ಖಂಡದ ದಕ್ಷಿಣ ದ್ವೀಪಕಲ್ಪದ ಅಪೂರ್ವ ವಾತಾವರಣವನ್ನುಳ್ಳ ಭೂಭಾಗ. ಇಲ್ಲಿನ ನೆಲ, ಮಳೆ ಮತ್ತು ಹವೆಗಳು ಜೀವಿಗಳ ಜೀವನಕ್ಕೆ ಅನುಕೂಲವಾಗಿವೆ. ಈ ರಾಜ್ಯದ ವಿಸ್ತಾರ ೧,೯೨,೭೫೭ ಚದುರ ಮೈಲಿಗಳು. ಭಾರತ ದಕ್ಷಿಣ ದ್ವೀಪಕಲ್ಪದ ನೈರುತ್ಯ ಭಾಗದ ಅಕ್ಷಾಂಶ ೧೧.೫ ದಕ್ಷಿಣ ಮತ್ತು ೧೯ ಉತ್ತರ ಹಾಗೂ ರೇಖಾಂಶ ೭೪ ಪಶ್ಚಿಮ ಮತ್ತು ೭೫ ಪೂರ್ವದವರೆಗೆ ಹರಡಿದ ಭೂಭಾಗ.

ಭೂಮಿಯ ಆಯಸ್ಸಿನ ಪ್ಲೈಸ್ಟೊಸೀನ್‌(ಅತ್ಯಂತ ನೂತನ ಯುಗ, ೧ ಮಿಲಿಯ ವರ್ಷಗಳ ಹಿಂದೆ ಪುಟ. . .೧೧ ನೋಡಿ) ಅವಧಿಯ ಗ್ಲೇಷಿಯರ್ (ಹಿಮಪ್ರವಾಹ) ಕಾಲಕ್ಕೆ ಈ ಉಪಪ್ರದೇಶ ನೆರೆಯ ದ್ವೀಪಗಳೊಂದಿಗೆ ಕೂಡಿಕೊಂಡಿತ್ತು. ಇದರಿಂದಾಗಿ ಈ ಪ್ರದೇಶದ ಪ್ರಾಣಿ ಸಂಕುಲ ಪ್ರತ್ಯೇಕವಾಗಿ, ಪ್ರದೇಶ ಸೀಮಿತ ಸಂಕುಲಗಳಾಗಿ ಉಳಿಯುವುದಾಗಲಿಲ್ಲ.

ಅಂದಿಗೆ ಬದುಕಿದ್ದ ಕಶೇರುಕ ಸಂಕುಲಗಳ ಒಟ್ಟು ಸಂಖ್ಯೆ ೧೬೪. ಆದರೆ, ಈ ಪ್ರದೇಶ ಸೀಮಿತ ಪ್ರಾಣಿ ಸಂಕುಲಗಳ ಸಂಖ್ಯೆ ಕೇವಲ ೧೨. ಈ ಉಪಪ್ರದೇಶದ ಮೂಲಕ ಪ್ರಾಣಿಗಳು ಸುಲಭವಾಗಿ ಹಾದು ಹೋಗಬಹುದಾಗಿತ್ತದ್ದಾರಿಂದ ಮತ್ತು ಇಲ್ಲಿನ ಪರಿಸ್ಥಿತಿಗಳಿಗೆ ಸುಲಭವಾಗಿ ಹೊಂದಿಕೊಳ್ಳಬಹುದಾಗಿದ್ದರಿಂದ ಇಲ್ಲಿನ ಪ್ರಾಣಿಗಳ ಸಂಖ್ಯೆ ಹೆಚ್ಚಲು ಆಸ್ಪದವಾಯಿತು. ವಾಸ್ತವವಾಗಿ ಈ ಉಪ ಪ್ರದೇಶದಲ್ಲಿ ಕಶೇರುಕ ಸಂಕುಲಗಳು ಕರಗಿ ಹೋಗಲು ಅವಕಾಶ ಒದಗಿಸಿದಂತಿದೆ. ಪ್ರಾಣಿ ವಲಸೆ ಮತ್ತು ಪರಿಭ್ರಮಣೆಗಳ ಕಾಲಕ್ಕೆ ಈ ಪ್ರದೇಶ ಪ್ರಾಣಿಗಳ ಚಲನವಲನಗಳಿಗೆ ಅನುಕೂಲವಾದ ಅಡ್ಡರಸ್ತೆಯಾಗಿತ್ತು.

ಪ್ರಾಚ್ಯ ಪ್ರದೇಶದ ಪ್ರಾಣಿ ಸಂಕುಲಸಂಪತ್ತು

ಜಾತಿಗಳು ಒಟ್ಟು ಸಂಖ್ಯೆ ಪ್ರದೇಶ ಸೀಮಿತ ಅಪೂರ್ವ ಜಾತಿಗಳ ಸಂಖ್ಯೆ
ಸಸ್ತನಿಗಳು ೧೧೮ ೫೫
ಪಕ್ಷಿಗಳು ೩೪೦ ೧೬೫

ಪ್ರಾಚ್ಯ ಪ್ರದೇಶವು ಪರ್ಮಿಯನ್‌ಅವಧಿಯಲ್ಲಿ (೨೭೦ ಮಿಲಿಯ ವರ್ಷಗಳ ಹಿಂದೆ) ಗೊಂಡ್ವಾನ ಎಂಬ ನೆಲಗಟ್ಟಿನ ಭಾಗವಾಗಿತ್ತು. ಅನಂತರದ ಅವಧಿಗಳಲ್ಲಿ ಇದು ಗ್ಲೇಷಿಯರ್ ಪ್ರಭಾವಕ್ಕೆ ಒಳಗಾಯ್ತು. ಆಗ ನಡೆದ ಖಂಡಾಂತಾರ ಚಲನೆಗಳಿಂದಾಗಿ ನಿರ್ದಿಷ್ಟ ಪ್ರದೇಶಗಳು ಮತ್ತು ಪ್ರಾಣಿಸಂಕುಲಗಳು ಉದ್ಭವಿಸಿದವು. ಗೊಂಡ್ವಾನ ಖಂಡಾಂತಾರ ಚಲನೆಯ ನಂತರ ಸಸ್ತನಿಗಳ ವಿಕಾಸ ಪ್ರಸರಣ ಆರಂಭವಾಯಿತು. ಆದರೆ ಗೊಂಡ್ವಾನ ಇರಿವು, ಭೂಫಲಕಗಳ ಆಧುನಿಕ ಪರಿಕಲ್ಪನೆ ಸಿದ್ಧಾಂತ ಪ್ರಕಟಗೊಂಡಿದ್ದು ಮತ್ತು ಅದು ಮಾನ್ಯವಾದದ್ದು ಇತ್ತೀಚೆಗೆ, ಕಳೆದ ೨೦ನೆ ಶತಮಾನದ ೭ನೆ ದಶಕದಲ್ಲಿ ಫಲಕಗಳ ಪರಿಕಲ್ಪನೆಯ ಆಧಾರದ ಮೇಲೆ ಖಂಡಾಂತಾರ ಚಲನೆಯನ್ನು ವೈಜ್ಞಾನಿಕವಾಗಿ ಒಪ್ಪಿ ಕೊಂಡುದರ ಹಿನ್ನೆಲೆಯಲ್ಲಿ ಭೂಖಂಡ ಪ್ರದೇಶಗಳು ಅಸ್ಥಿರ, ಬದಲಾಗುತ್ತವೆ. ಎಂಬುದನ್ನು ಒಪ್ಪಿಕೊಳ್ಳುವುದು ಸಾಧ್ಯವಾಯಿತು.

ಭಾರತದ ದಕ್ಷಿಣ ದ್ವೀಪಕಲ್ಪ ಆರಂಭದಲ್ಲಿ ಗೊಂಡ್ವಾನ ನೆಲಗಟ್ಟಿನ ಭಾಗವಾಗಿತ್ತು.ಗೊಂಡ್ವಾನ ನೆಲಗಟ್ಟು ಸೈಲೂರಿಯನ್ (೪೧೦ಮಿಲಿಯ ವರ್ಷಗಳ ಹಿಂದೆ ) ಮತ್ತು ಡೀವೊನಿಯನ್ (೪೦೦ ಮಿಲಿಯ ವರ್ಷಗಳ ಹಿಂದೆ ) ಅವಧಿಗೆ ಒಡೆಯದೆ ಅಖಂಡ ವಾಗಿತ್ತು. ಅಂದರೆ ಅಂದಿನವರೆಗೂ ಏಷ್ಯಾ ಖಂಡದ ಪರ್ಯಾಯ ದ್ವೀಪದಲ್ಲಿ ಪ್ರಾಣಿಗಳ ಮುಕ್ತ ಚಲನೆ ವಲಸೆಗಳು ಏಕಪ್ರಕಾರವಾಗಿ ನಡೆದಿದ್ದವು. ಡೀವೋನಿಯನ್ ಅವಧಿಯ ನಂತರ ಗೊಂಡ್ವಾನ ನೆಲಗಟ್ಟು ಅಮೇರಿಕಾ ಖಂಡದಿಂದ ಬೇರ್ಪಟ್ಟು ದೂರ ಸರಿಯ ತೊಡಗಿತು. ಆಗ ಉಂಟಾದ ಉತ್ತರ ಸಮುದ್ರ ಭಾಗವು ಏಷ್ಯಾ ಖಂಡದ ಮೂಲಕ ಹಾದು ಹೋಯಿತು.

ಭೂಮಿಯ ಇತಿಹಾಸ ಕಾಲದಲ್ಲಿ ಭಾರತ ಉಪಖಂಡವು ಯಾವಾಗ ಹೇಗೆ ಸ್ವತಂತ್ರವಾಯ್ತು ಎನ್ನುವ ವಿಷಯ ಸ್ಪಷ್ಟವಾಗಿ ತಿಳಿಯದು ಆದರೆ ೬೦ ಮಿಲಿಯ ವರ್ಷಗಳ ಹಿಂದಿನ ಇಯೋಸೀನ್ ಅವಧಿಯ ಮಧ್ಯ ಭಾಗದವರೆಗೆ ಭಾರತವು ಏಷ್ಯಾ ಖಂಡದ ಅಖಂಡ ಭಾಗವಾಗಿತ್ತು.

ಟ್ರೈಯಾಸಿಕ್ (೨೨೪ ಮಿಲಿಯ ವರ್ಷಗಳ ಹಿಂದೆ ) ಅವಧಿಯವರೆಗೆ ಈ ಪ್ರಾಚ್ಯ ಪ್ರದೇಶದಲ್ಲಿ ಸುಮಾರು ೬೦ ಪ್ರಾಣಿ ಕುಟುಂಬಗಳು ಇದ್ದವೆಂದು ತಿಳಿದುಬರುತ್ತದೆ. ಭೂ ಇತಿಹಾಸದಲ್ಲಿ ಡೈನೋಸಾರ್ (ದೈತ್ಯೋರಗ) ಗಳು ಭೂಮಿಯ ಮೇಲೆ ಪ್ರಭಲ ಕಶೇರುಕಗಳಾಗಿದ್ದ ಜುರಾಸ್ಸಿಕ್ (೧೮೦ ಮಿಲಿಯ ವರ್ಷಗಳ ಹಿಂದೆ ) ಮತ್ತು ಕ್ರಿಟೇಷಿಯಸ್ (೧೩೫ ಮಿಲಿಯ ವರ್ಷಗಳ ಹಿಂದೆ) ಅವಧಿಗಳಲ್ಲಿ ಖಂಡಾಂತರ ಚಲನೆ ಆರಂಭವಾಯ್ತು. ಕ್ರಿಟೇಷಿಯಸ್ ಅವಧಿಯ ನಂತರ ಭೂಮಿಯು ವೇಗಗತಿಯಲ್ಲಿ ಬದಲಾಗ ತೊಡಗಿತು. ಆಗ ರೂಪಗೊಂಡ ಭೂಪ್ರದೇಶಗಳು, ಅವುಗಳನ್ನು ಸುತ್ತುವರಿದ ಸಮುದ್ರದಿಂದ ಪ್ರತ್ಯೇಕಗೊಂಡು ಪ್ರತ್ಯೇಕವಾಗಿ ಉಳಿದಿದ್ದುದರಿಂದ ಆಯಾ ಪ್ರದೇಶಗಳಲ್ಲಿ ಪ್ರದೇಶ ಸೀಮಿತ ವಿಶಿಷ್ಟ ಪ್ರತ್ಯೇಕ ಸಸ್ಯ ಪ್ರಾಣಿ ಜಾತಿಗಳು ಉದ್ಭವಿಸಲು ಅವಕಾಶವಾಯಿತು.

ಆ ಕಾಲದಲ್ಲಿ ನಡೆದ ಕಡಲುಗಳ ಪ್ರಸರಣದಿಂದ ಭೂಮಿಯ ವಾಯುಗುಣ ಜೀವಿಗಳಿಗೆ ಹಿತಕರವಾಗಿ ಬದಲಾಯಿತು. ಆದರೆ ಪ್ಲೈಸ್ಟೊಸೀನ್ ಅವಧಿಯ ಹಿಮನದಿ ಪ್ರವಾಹದ ನಂತರ ಪ್ರಾಣಿಗಳ ಬೂವಾಸ ವಸತಿಗಳು ಕಿರಿದಾಗತೊಡಗಿದವು.

ಸರಿಸುಮಾರು ಕ್ರಿಟೇಷಿಯಸ್, ಸೀನೋಜೋಯಿಕ ಅವಧಿಗಳ ಕಾಲದಲ್ಲಿ ಭಾರತದ ಭೂಭಾಗವು ಪ್ರತ್ಯೇಕವಾಗಿ ಉಳಿದ್ದಿದ್ದರೆ ಈ ನೆಲದಲ್ಲಿಯೂ ದೈತ್ಯೋರಗಗಳು ಮತ್ತು ಆದಿ ಸಸ್ತನಿಗಳು ಇರಬೇಕಾಗಿತ್ತು. ಇದುವರೆಗೂ ಭಾರತ ಭೂಖಂಡದಲ್ಲಿ ಡೈನೋಸಾರ್ ಗಳು ಇದ್ದುದರ ಕುರುಹು ಇಲ್ಲ. ದೊರಕಿಲ್ಲ ಎಂಬ ಆಭಿಪ್ರಾಯವಿತ್ತು. ಆದರೆ ಇತ್ತೀಚಿಗೆ ಡೈನೋಸಾರ್ ಹಲ್ಲಿಗಳ ಮೊಟ್ಟೆ (ಮಧ್ಯ ಪ್ರದೇಶದಲ್ಲಿ ) ದೊರಕಿದ ವರದಿಗಳಿವೆ. ಕ್ರಿಟೇಷಿಯಸ್ ಅವಧಿಯ ಉತ್ತರಾರ್ಧ ಭಾಗದ ಭಾರತದ ಕಶೇರುಕ ಸಂಕುಲಗಳ ವಿಷಯ ಹೆಚ್ಚು ತಿಳಿದಿರಿರುವುದು ನಿಜಕ್ಕೂ ದುರ್ದೈವದ ಸಂಗತಿ! ಭಾರತದ ಪೂರ್ವ ದ್ವೀಪ ಸ್ತೋಮಗಳೊಂದಿಗೆ ಸಂಪರ್ಕ ಏರ್ಪಟ್ಟ ಆನಂತರವೇ ಭಾರತದ ಸೀನೋಜೋಯಿಕ್ ಅವಧಿಯ ಪ್ರಾಣಿ ಸಂಕುಲಗಳ ವಿಷಯವನ್ನು ತಿಳಿಸುವ ಆಧಾರಗಳು ದೊರಕುವುದು. ಪ್ಲೈಸ್ಟೊಸೀನ್ ಹಿಮನದಿಗಳ ಪ್ರವಾಹದ ಆನಂತರವೇ ಪ್ರಾಚ್ಯ ಪ್ರದೇಶದ ಪ್ರಾಣಿ ಸಂಕುಲಗಳ ವಿಕಾಸದಲ್ಲಿ ಮುಖ್ಯ ಬದಲಾವಣೆಗಳು ನಡೆದವು. ಆ ಕಾಲದಲ್ಲಿ ಉತ್ತರ ಭೂಖಂಡದ ಪ್ರಾಣಿ ಸಂಕುಲಗಳು ಭಾರತದ ಪೂರ್ವ ದ್ವೀಪ ಸ್ತೋಮಗಳನ್ನು ಬಂದು ಸೇರಿದವು. ಈ ಅವಧಿಯ ಹಿಮನದಿ ಪ್ರಾವಾಹಗಳ ನಡುವಿನ ಕಾಲದಲ್ಲಿ ಪ್ರಾಚ್ಯ ಪ್ರದೇಶವನ್ನು ಇತರ ಭೂಬಾಗಗಳೊಂದಿಗೆ ಕೂಡಿಸುವ ಭೂಸಂಪರ್ಕ ವಿದ್ದುದರಿಂದ ಹೊರಗಿನಿಂದ ಇಲ್ಲಿಗೆ ಪ್ರಾಣಿಗಳು ವಲಸೆ ಬರುವುದು ಸಾಧ್ಯವಾಯಿತು.

ಈ ವಲಸೆಯ ಫಲವಾಗಿ ಹುಲಿಯಂತಹ ಮಾಂಸಾಹಾರಿ, ಅನೆ, ಖಡ್ಗಮೃಗಗಳಂತಹ ಸಸ್ಯಾಹಾರಿಗಳು ಮತ್ತು ಒರಾಂಗ್ ಉಟಾಂಗ್ ನಂತಹ (ಭಾರತದ ಈಶಾನ್ಯ ಪ್ರಾಂತ್ಯಗಳಲ್ಲಿನ ಕಾಡು ಮನುಷ್ಯ) ಪ್ರಮುಖಿ (ಫ್ರೈಮೇಟ್ ) ಗಳು ಪೂರ್ವ ಸೀಮೆಯನ್ನು ಪ್ರವೇಶಿಸುವುದು ಸಾಧ್ಯವಾಯಿತು. ಭಾರತ ಭೂಖಂಡವನ್ನು ಸೇರಿದ ಈ ಪ್ರಾಣಿಗಳು ಭಾರತಾದ್ಯಂತ ವ್ಯಾಪಿಸಿ ವಿತರಣೆಗೊಳ್ಳಲಿಲ್ಲ ಮತ್ತು ದಕ್ಷಿಣ ಕರ್ನಾಟಕವನ್ನು ತಲುಪಲಿಲ್ಲ ಎಂಬುದು ನಿಜಕ್ಕೂ ದುರ್ದೈವದ ವಿಷಯ. ಆ ಸಂದರ್ಭದಲ್ಲಿ ಭಾರತ ಭೂಖಂಡಕ್ಕೆ ವಲಸೆ ಬಂದ ಸಸ್ತನಿ ಸಂಕುಲಗಳಲ್ಲಿ ಎಮ್ಮೆ, ಆನೆ, ಹುಲಿಗಳು ಮಾತ್ರ ಕರ್ನಾಟಕ ಪ್ರಾಂತ್ಯವನ್ನು ಸೇರಿದವು, ಉಳಿದವು ಮತ್ತು ಊರ್ಜಿತ ಗೊಂಡವು. ಈಗ ಅವುಗಳು ಅವನತಿಯ ಹಾದಿಯಲ್ಲಿರುವುದು ಆತಂಕದ ವಿಷಯ !

ಪ್ರಾಣಿಗಳ ವಿತರಣೆಯಲ್ಲಿ ಅನೇಕ ತಪ್ಪುಗಳು ಸಂಭವಿಸಿವೆ. ಇವು ಅಪವಾದಗಳೇ ವಿನಃ ಸಾಮಾನ್ಯವಲ್ಲ! ವಿತರಣೆಯ ವಿವಿಧ ವಿಧಾನಗಳಿಂದಾಗಿ ಕಾಲ ಮತ್ತು ಅಂತರದಲ್ಲಿ ಸಂಭವಿಸಿದ ಪ್ರಾಣಿ ಪ್ರಸರಣ ಪ್ರವೃತ್ತಿಗಳಿಂದಾಗಿ ಈ ತಪ್ಪುಗಳು ಸಂಭವಿಸಿರಬಹುದು ಸಸ್ಯಗಳು ನೀರು ಮತ್ತು ಗಾಳಿಯ ಮೂಲಕ ಪ್ರಸರಿಸಬಹುದಾದರೂ ಅವೇ ಪ್ರಾಣಿಗಳ ಪ್ರಸರಣೆಗೆ ಅಡ್ಡಿಯಾದವು ಎಂದರೆ ಆಶ್ಚರ್ಯ ಪಡಬೇಕಾಗಿಲ್ಲ. ಭೂಬಾಗಗಳ ಮೂಲಕ ಹಾದು ಹೋದ ಹಿರಿಯ-ಕಿರಿಯ ಕಡಲು ಕಾಲುವೆ ಆಡ್ಡ ಹಾಯುವಿಕೆಗಳೂ ಸಹ ಪ್ರಸರಣಕ್ಕೆ ಆಡ್ಡಿ ಬಂದಿರಬಹುದು.

ಪ್ರಾಚ್ಯ ಪ್ರದೇಶದಲ್ಲಿ ನಾಲ್ಕು ಉಪ ಪ್ರದೇಶಗಳಿವೆ. ಇದರಲ್ಲಿ ನಮ್ಮ ಪ್ರಸ್ತುತ ಅಭ್ಯಾಸ ದೃಷ್ಟಿಯಿಂದ ಮುಖ್ಯವಾದ ಉಪ ಪ್ರದೇಶವೆಂದರೆ ಭಾರತ ಉಪ ಪ್ರದೇಶ. ಉತ್ತರದಲ್ಲಿ ಹಿಮಾಲಯದ ತಪ್ಪಲಿನಿಂದ ದಕ್ಷಿಣದಲ್ಲಿ ಕನ್ಯಾಕುಮಾರಿಯವರೆಗೆ, ಪಶ್ಚಿಮದ ಅರಬ್ಬೀ ಸಮುದ್ರ ದಂಡೆಯಿಂದ ಪೂರ್ವ ಅಸ್ಸಾಂ ಪ್ರಾಂತದವರೆಗೆ ವಿಸ್ತರಿಸಿದ ಭಾರತದ ಉಪಖಂಡ ಭಾರತದ ಉಪ ಪ್ರದೇಶವಾಗುತ್ತದೆ ಮತ್ತು ಕರ್ನಾಟಕವು ಈ ಉಪ ಪ್ರದೇಶದ ಭಾಗ.

ಪ್ರಾಚ್ಯ ಪ್ರದೇಶದಲ್ಲಿ ಅತಿ ಹೆಚ್ಚು ತೇವಾಂಶವಿರುವ ಭೂಬಾಗ ಇದ್ದು. ಆದರೆ ಅನೇಕ ಪ್ರಾಣಿ ಪ್ರಭೇಧಗಳು ಮತ್ತು ಕೆಲವೊಮ್ಮೆ ಪ್ರಾಣಿ ಸಂಕುಲಗಳು ಈ ಉಪ ಪ್ರದೇಶದ ಸೀಮೆಯನ್ನು ದಾಟಿ ಹೊರ ಹೋಗಲಾರದೆ ಉಳಿದಿವೆ. ಉದಾಹರಣೆಗೆ ಆಲಸಿ ಕರಡಿ (ಸ್ಲಾತ್ ಬೇರ್) ಚೌಸಿಂಘ ಮತ್ತು ಕೃಷ್ಣ ಮೃಗಗಳು. ಅಷ್ಟೇ ಆಶ್ಚರ್ಯದ ವಿಷಯವೆಂದರೆ ಹೊರಗಿನಿಂದ, ಉದಾಹರಣೆಗೆ ಆಪ್ರಿಕಾ ಖಂಡಭಾಗದಿಂದ ಅನೇಕ ಪ್ರಾಣಿ ಪ್ರಭೇಧಗಳು ಈ ಉಪ ಪ್ರದೇಶವನ್ನು ಪ್ರವೇಶಿಸಿವೆ.

ಪ್ರಪಂಚದ ಬೃಹದ್ ಮಾಂಸಾಹಾರಿ ಬೆಕ್ಕುಗಳು ಸ್ವಾಭಾವಿಕವಾಗಿ ವಿತರಣೆಗೊಂಡಿರುವ ಏಕೈಕ ಉಪ ಪ್ರದೇಶ ಎಂದರೆ ಭಾರತ ಉಪ ಪ್ರದೇಶ! ಪ್ರಪಂಚದ ಬೇರಾವ ಭೂ ಪ್ರದೇಶಗಳಲ್ಲಿಯೂ ಬೃಹದ್ ಮಾಂಸಾಹಾರಿಗಳಾದ ಹುಲಿ ಮತ್ತು ಸಿಂಹ, ಒಟ್ಟಾಗಿ ಒಂದೇ ಉಪ ಪ್ರದೇಶದಲ್ಲಿ ವಾಸಿಸುತ್ತಿಲ್ಲ. ಆದರೆ ಭಾರತ ಉಪ ಪ್ರದೇಶದಲ್ಲಿ ಅವೆರಡೂ ವಾಸಿಸುತ್ತಿರುವುದು ಏಕೈಕ ಅಪವಾದ. ಇನ್ನೊಂದು ಗಮನಾರ್ಹ ವಿಷಯವೆಂದರೆ ಭಾರತ ಉಪ ಪ್ರದೇಶದಲ್ಲಿ ಹಂದಿ ಮತ್ತು ಗೇರಿಯಲ್ ಮೊಸಳೆಗಳು ವಾಸಿಸುತ್ತಿವೆ.

ಈ ಉಪ ಪ್ರದೇಶದಲ್ಲಿ ವಾಸಿಸುತ್ತಿರುವ ಸಿಹಿನೀರು ಜಲಚರಿ ಮೀನುಗಳು, ಉಭಯಚರಿಗಳು ಮತ್ತು ಸರೀಸೃಪಗಳು, ಅವುಗಳ ವಿತರಣೆಯ ಪ್ರರೂಪ ಪ್ರಿಕ್ವಾರ್ಟನರಿ (೧೧ ಮಿಲಿಯ ವರ್ಷಗಳ ಹಿಂದೆ) ಅವಧಿಯ ಖಂಡ ಪ್ರದೇಶಗಳ ಚಲನೆಯ ಫಲವಾಗಿ ಈ ಉಪ ಪ್ರದೇಶದವನ್ನು ಪ್ರವೇಶಿಸಿದ ಫಲ. ಪ್ರಾಚ್ಯ ಪ್ರದೇಶದ ನಾಲ್ಕು ಉಪ ಪ್ರದೇಶಗಳಲ್ಲಿ ಉಳಿದು ಬಂದಿರುವ ಸ್ಥಳೀಯ ಕಶೇರುಕ ಕುಟುಂಬಗಳೂ ವ್ಯಾಪಕವಾಗಿ ಪಸರಿಸಿದ ಗುಂಪುಗಳೊಂದಿಗೆ ಬೆರತು ಹೋಗಿದ್ದರೂ ತಮ್ಮ ಪ್ರಾಚೀನತೆಯನ್ನು ಉಳಿಸಿಕೊಂಡು ಈ ಉಪ ಪ್ರದೇಶದ ತಮ್ಮ ಭೂಭೌಗೋಳಿಕ ಸಂಬಂಧಗಳನ್ನು ಪ್ರದರ್ಶಿಸುತ್ತವೆ.

ಇದೇ ರೀತಿ ಭಾರತ ಉಪ ಪ್ರದೇಶದ ಬಹುಪಾಲು ಪಶು ಪಕ್ಷಿ, ಪ್ರಾಣಿ ಸಂಕುಲಗಳು ಈ ಪ್ರಾಚ್ಯ ಪ್ರದೇಶದಲ್ಲಿ ನಡೆದ ಪ್ಲೈಸ್ಟೋಸಿನ್ ಅವಧಿ ಮತ್ತು ಆನಂತರದ ಬದಲಾವಣೆಗಳಿಗೆ ಒಳಗಾದ ಪರ್ಯಾವರಣೀಯ ಪರಿಸ್ಥಿಗಳಿಗೆ ಸಾಕ್ಷ್ಯ ಒದಗಿಸುತ್ತವೆ. ಉತ್ತರ ಭಾರತದಿಂದ ದಕ್ಷಿಣಕ್ಕೆ ದಾಳಿ ಇಟ್ಟ ಕಶೇರುಕ ಸಂಕುಲಗಳ ವಿಷಯ ತಿಳಿಸುತ್ತವೆ.

ಆಯಾ ಪ್ರದೇಶಗಳಲ್ಲಿ ನೆಲೆಸಿರುವ ಪ್ರಾಣಿ ಸಂಕುಲಗಳು ಅವುಗಳ ಪ್ರಭೇಧಗಳು, ಜಾತಿಗಳು ಮತ್ತು ಕುಟುಂಬಗಳು ಆ ಸಂಕುಲಗಳ ಪೂರ್ವೇತಿಹಾಸ ಮತ್ತು ಅವುಗಳ ಪ್ರಸರಣ ವಿಧಾನವನ್ನು ಅವಲಂಬಿಸಿ ಬದಲಾಗುತ್ತಿವೆ ಮತ್ತು ಬದಲಾಗಿವೆ.

ಭಾರತ ಉಪ ಪ್ರದೇಶದಲ್ಲಿ ಅಂತರ ಪ್ರದೇಶ ವಿಜಾತೀಯ ಲಕ್ಷಣಗಳು ಇವೆ, ಉದಾಹರಣೆಗೆ ಪ್ರಾಚ್ಯ ಪ್ರದೇಶ ಮತ್ತು ಆಫ್ರಿಕಾ ಖಂಡ ಪ್ರದೇಶಗಳಿಗೆ ಉಭಯ ಸಾಮಾನ್ಯವಾದ ಕುಟುಂಬಗಳಾದ ಗೆಜೆಲ್ (ಚಿಂಕಾರ) ಮುಂಗಸಿ ಮತ್ತು ಕತ್ತೆಕಿರುಬಗಳು ನಮ್ಮ ಉಪ ಪ್ರದೇಶದಲ್ಲಿ ಇವೆ. ಪ್ರಾಚ್ಯ ಪ್ರದೇಶದ ಮಳೆ ಕಾಡುಗಳು ಮತ್ತು ದ್ವೀಪಗಳು, ಅನೇಕ ಆದಿಮ ಪ್ರಾಣಿ ಸಂಕುಲಗಳಿಗೆ, ಅವುಗಳ ಅವಶೇಷ ಉಳಿಕೆಗೆ ಅವಕಾಶ ನೀಡಿವೆ.

ಪ್ರಾಣಿ ಪ್ರಸರಣಾ ಪ್ರರೂಪಗಳು ಅವುಗಳ ಜೀವನ ಚರಿತ್ರೆಯಷ್ಟೇ ಜಟಿಲವಾಗಿವೆ. ಪ್ರತಿ ಪ್ರಾಣಿ ಸಂಕುಲಕ್ಕೂ ಅದರದೇ ಆದ ಅಳಿವು-ಉಳಿವು ಮತ್ತು ಪುನರ್ ಸ್ಥಾಪನೆಗಳ ಜಟಿಲ ಇತಿಹಾಸ ಇದೆ. ಪ್ರಾಣಿ ಸಂಕುಲಗಳ ಅಗತ್ಯಗಳು ಮತ್ತು ಅವುಗಳ ಪ್ರಸರಣ ಸಾಮರ್ಥ್ಯವನ್ನು ಅವಲಂಬಿಸಿ ಪ್ರಾಣಿ ಪ್ರರೂಪಗಳು ಬದಲಾಗುವುದಾಗಿ ತಿಳಿದು ಬರುತ್ತದೆ.

ಖಂಡಾಂತರ ಸೀಮೋಲ್ಲಂಘನ ನಡೆದು ಸಿಹಿನೀರು ಸಂಕುಲಗಳಾದ ಮೀನುಗಳು, ಉಭಯಚರಿಗಳು ಮತ್ತು ಸರೀಸೃಪಗಳ ಪ್ರಸರಣದ ಮೇಲೆ ಪ್ರಭಾವ ಬಿದ್ದಿದೆ. ಈ ಉಪಪ್ರದೇಶ ಸರಿ ಸುಮಾರು ಇಂದಿನ ಪರಿಸ್ಥಿತಿಗಳನ್ನು ತಲುಪಿದ ಮೇಲೆ ಪಶು, ಪಕ್ಷಿಗಳ ಪ್ರಸರಣ ನಡೆದಂತೆ ಕಾಣುತ್ತದೆ. ಹಾಗೆ ನೋಡಿದರೆ ಪ್ಲೈಸ್ಟೊಸೀನ್ ಅವಧಿಯಲ್ಲಿ ನಡೆದ ವಾತಾವರಣದ ಬದಲಾವಣೆಗಳು, ಉಭಯಚರಿಗಳು ಮತ್ತು ಸರೀಸೃಪಗಳಂತಹ ಭೂವಾಸಿ ಸಂಕುಲಗಳ ಮೇಲೆ ಪರಿಮಿತಿಯ ಪ್ರತಿ- ಬಂಧನ ಹೇರಿರುವಂತೆ ಕಂಡು ಬರುತ್ತದೆ. ಉದಾಹರಣೆಗೆ ಕಶೇರುಕಗಳ ವಿವಿಧ ವರ್ಗಗಳಲ್ಲಿ ಅವುಗಳ ಪ್ರಸರಣಾ ಪ್ರರೂಪಗಳು ಬದಲಾಗಿವೆ. ಇದರಿಂದಾಗಿ ಲ್ಯಾಂತೊಡಾಂಟಿಕ್ (ಲುಪ್ತ ಹಲ್ಲಿಗಳ ಗುಂಪು) ಮತ್ತು ವೆರಾನಿಡೀ ಕುಟುಂಬಕ್ಕೆ ಸೇರಿದ ಹಲ್ಲಿಗಳು ಬೇರೆ ಬೇರೆ ಪ್ರಸರಣಾ ಪ್ರರೂಪಗಳನ್ನು ಪ್ರದರ್ಶಿಸುತ್ತವೆ.

ಆದ್ದರಿಂದ ಯಾವುದೇ ಪ್ರಾಣಿಯ ವರ್ಗೀಕರಣ ಮತ್ತು ಅದನ್ನು ಅಭ್ಯಸಿಸುವಾಗ ಅವುಗಳ ಪ್ರಸರಣ ಪ್ರರೂಪಗಳನ್ನು ಪರಸ್ಪರ ಹೋಲಿಸುವುದು ಸಲ್ಲ. ಇದಕ್ಕೆ ಸರಳ ಉದಾಹರಣೆಯನ್ನು ಕೊಡಬಹುದಾದರೆ ಮೂರು ಖಂಡಗಳಲ್ಲಿ ವ್ಯಾಪಕವಾಗಿ ಹರಡಿರುವ ಕ್ಯಾನಿಸ್ ಲುಪಸ್ (ತೋಳ) ಎಂಬ ಮುಂದುವರಿದ ಸಸ್ತನಿ ಗಣ. ಮಾಂಸಾಹಾರಿ (ಕಾರ್ನಿವೋರ್) ಗಣದ ಪ್ರಾಣಿಗಳು ವ್ಯಾಪಕ ಪ್ರಸರಣ ಪ್ರರೂಪ ಪ್ರದರ್ಶಿಸಿದರೆ ಅದೇ ಗಣದ ಒಂದು ಕುಟುಂಬವಾದ ಪ್ರೊಸೈನಿಡೀ ಮಾತ್ರ ಬಿದಿರು ಕಾಡುಗಳಿಗೆ ಸೀಮಿತವಾಗಿ ಹರಡಿದೆ.

ಒಂದು ಭೂಪ್ರದೇಶದ ಅಷ್ಟೇಕೆ ಇಡೀ ಭೂಮಿಯ ಇತಿಹಾಸದ ಅಭ್ಯಾಸಕ್ಕೆ ಜೀವಿ ಅವಶೇಷಗಳ ಅಭ್ಯಾಸ, ಭೂಮಿಯ ಮೇಲೆ ಶಿಲೆಗಳು ನಿರ್ಮಾಣವಾದ ಕ್ರಮವನ್ನು ಸ್ಪಷ್ಟವಾಗಿ ತಿಳಿಸುತ್ತದೆ. ಈ ಆಧಾರದ ಮೇಲೆ ಭೂವಿಜ್ಞಾನಿಗಳು ಭೂಮಿಯ ಆಯಸ್ಸನ್ನು ಅನೇಕ ಪ್ರಧಾನ ಮಹಾಕಲ್ಪ/ ಅವಧಿಗಳಾಗಿ ವಿಂಗಡಿಸಿದ್ದಾರೆ. ಈ ಅವಧಿಗಳು ಭೂಮಿಯ ಮೇಲೆ ನಡೆದ ಜೀವ ವಿಕಾಸದ ಮುನ್ನಡೆ, ಗತಿ ಮತ್ತು ಭೌಗೋಳಿಕವಾಗಿ ಪ್ರಾಣಿ ಸಂಕುಲಗಳ ಪ್ರಸರಣ ಪ್ರರೂಪವನ್ನು ಪ್ರತಿಭಿಂಬಿಸುತ್ತವೆ. ಪ್ರಸರಣದಲ್ಲಿ ಒಂದು ರೀತಿಯ ಅನುಕ್ರಮತೆ ಇರುವುದಾಗಿ ಕಂಡು ಬರುತ್ತದೆ.

ಅವಧಿಗಳನ್ನು ವಿಂಗಡಿಸುವಾಗ ಅವಧಿಯ ಕಾಲಾವಧಿಗಳನ್ನು ನಿರ್ಧರಿಸಲು ಅನೇಕ ಆಧಾರಗಳನ್ನು ಮತ್ತು ವಿಧಾನಗಳನ್ನು ಗಣನೆಗೆ ತೆಗೆದುಕೊಂಡಿದ್ದಾರೆ :

ಜೀವ್ಯಾವಶೇಷಗಳು, ಅವುಗಳ ಪ್ರಾಚೀನತೆ, ಪ್ರಸರಣಾ ಪ್ರರೂಪ ಮತ್ತು ಅವುಗಳಲ್ಲಿನ ಬದಲಾವಣೆಗಳು ಒಂದು ಆಧಾರ.

ಪ್ರತಿ ಅವಧಿಯಲ್ಲಿಯೂ ನಿರ್ದಿಷ್ಟ ಸಂಖ್ಯೆಯ ಹಿಮನದಿ ಪ್ರವಾಹಗಳು (ಗ್ಲೇಷಿಯರ‍್) ನಡೆದಿವೆ. ಅವುಗಳ ಆಧಾರವನ್ನು ಪರಿಗಣಿಸಲಾಗಿದೆ.

ಇವು ಏನು, ಹೇಗೆ ಎಂಬುದನ್ನು ಸರಳವಾಗಿ ಹೇಳುವ, ಅರ್ಥ ಮಾಡಿಕೊಡುವ ಪ್ರಯತ್ನ ಮಾಡಿದ್ದೇವೆ.

ನಿರಂತರವಾಗಿ ಹರಿಯುವ ನದಿಗಳು ಕೇವಲ ನೀರನ್ನಷ್ಟೇ ಅಲ್ಲದೇ ತಮ್ಮ ಪಾತ್ರದಲ್ಲಿ ಎದುರಾಗುವ ಮಣ್ಣು, ಪ್ರವಾಹ ಕಾಲದಲ್ಲಿ ಅನೇಕ ಜೀವಿಗಳನ್ನೂ ಕೊಚ್ಚಿಕೊಂಡು ತಂದು ಕಡಲಿಗೆ ಸುರಿಯುತ್ತವೆ. ಭಾರವಾದ ಈ ವಸ್ತುಗಳು ಕಡಲ ನೀರಿನಲ್ಲಿ ಮುಳುಗಿ ತಳದಲ್ಲಿ ಶೇಖರವಾಗುತ್ತವೆ. ಇವುಗಳ ಮೇಲಿರುವ ಲಕ್ಷ ಲಕ್ಷ ಟನ್ ತೂಕದ ನೀರಿನ ಭಾರದಿಂದಾಗಿ ಈ ತಳದ ಶೇಖರಣೆಗಳು ದಮ್ಮಸಗೊಂಡು ಶಿಲೆಗಳಾಗಿ ಮಾರ್ಪಟ್ಟಿವೆ. ಇವನ್ನು ಜಲಶಿಲೆಗಳೆಂದು ಕರೆಯುತ್ತಾರೆ. ಇವುಗಳ ನಡುವೆ ಸಿಕ್ಕಿದ ಜೀವಿಯ ಮೃದು ಭಾಗಗಳು ಕೊಳೆತು, ಕರಗಿ ಗಟ್ಟಿ ಭಾಗಗಳಾದ ಚಿಪ್ಪು, ಅಸ್ಥಿಪಂಜರದಂತಹ ರಚನೆಗಳು ಉಳಿಯುತ್ತವೆ. ಇವೇ ಅವಶೇಷಗಳು (ಫಾಸಿಲ್ಗಳು). ಭೂಮಿಯ ಮೇಲೆ ಕಾಲಕಾಲಕ್ಕೆ ಸಭವಿಸಿದ ಉತ್ಖನನಗಳಿಂದಾಗಿ ಕಡಲ ತಳದ ಜಲಶಿಲೆಗಳ ಮೇಲೆ ಬಂದು ಭೂಮಿಯ ನಿಕ್ಷೇಪಗಳಾಗಿ ಉಳಿದಿವೆ. ಇವುಗಳಲ್ಲಿ ಅವಶೇಷಗಳು ದೊರಕಿವೆ.

ಧುವ ಪ್ರದೇಶಗಳ ಶೀತ ವಾತಾವರಣದಿಂದಾಗಿ ಅಪಾರ ನೀರು ಹೆಪ್ಪು ಗಟ್ಟಿ ಹಿಮಗಡ್ಡೆಯಾಗಿ ಸಂಗ್ರಹವಾಗಿರುತ್ತದೆ. ಇದು ನಿರಂತರ ನಡೆಯುವ, ನಡೆಯುತ್ತಿರುವ ಘಟನೆ. ಕೆಲವೊಮ್ಮೆ ಹಲವು ಹತ್ತು ಸಾವಿರ ವರ್ಷಗಳಿಗೊಮ್ಮೆ ಭೂಮಿಯ ಶಾಖದಲ್ಲಿ ಏರುಪೇರಾಗಿ, ಧುವ ಪ್ರದೇಶದ ಶಾಖ ಹೆಚ್ಚಿ ಹಿಮಗಡ್ಡೆ ಸಂಗ್ರಹ ಕರಗಿ ಪ್ರವಾಹ ರೂಪದಲ್ಲಿ ಭೂಮಿಯ ಮೇಲೆ ಹರಿದು ಪ್ರಳಯಗಳಾಗಿವೆ. ಆಗ ಅವು ಕೊಚ್ಚಿ ತಂದು ಕಡಲಿಗೆ ಸುರಿಯುವ ಮಣ್ಣು ಪ್ರಾಣಿಗಳ ಸಂಖ್ಯೆ ಆಧಿಕವಾಗಿರುತ್ತದೆ. ಇದನ್ನು ಅವಶೇಷಗಳ ಸಂಖ್ಯಾ ಸಾಂದ್ರತೆ ಮತ್ತಿತ್ತರ ಆಧಾರಗಳಿಂದ ವಿಶ್ಲೇಷಿಸಿ ನಿರ್ಧರಿಸಿದ್ದಾರೆ. ಶಿಲೆಗಳ ಪ್ರಾಚೀನತೆಯನ್ನು ಆಳೆಯುವ (ಡೇಟಿಂಗ್) ವಿಧಾನ ತಿಳಿದ ಮೇಲೆ ಅವನ್ನೇ ವಿಂಗಡಿಸಿ ನಿರ್ಧರಿಸುವುದು ಸಾಧ್ಯವಾಗಿದೆ. ಇದು ಭೂಮಿಯ ಮೇಲೆ ಜೀವಿಗಳ ವಿಕಾಸ, ವಿಕಾಸದ ಮುನ್ನಡೆ ಮತ್ತು ಜೀವಿ ಪ್ರಸರಣದಂತಹ ವಿಷಯಗಳನ್ನು ತಿಳಿಸಿಕೊಟ್ಟಿದೆ. ಈ ಆಧಾರದ ಮೇಲೆ ರಚಿಸಿದ ಪಟ್ಟಿಯನ್ನು ಕೊಟ್ಟಿದೆ. ಅವಧಿಗಳನ್ನು ಅತ್ಯಂತ ಹಿಂದಿನ, ಪ್ರಾಚೀನ ಕಾಲದಿಂದ ಇತ್ತೀಚಿನವರೆಗೆ ವಿಂಗಡಿಸಿ, ಆಯಾ ಅವಧಿಗಳಲ್ಲಿ ಪ್ರಧಾನವಾಗಿ ಕಂಡು ಬರುವ ಪ್ರಾಣಿಗಳನ್ನು ಕೊಟ್ಟಿದೆ.