ಸಾಮಾನ್ಯ ಲಕ್ಷಣಗಳು :

. ದೇಹ ರಚನೆಯು ಉಭಯ ಪಾರ್ಶ್ವ ಸಮಾಂಗತೆ (ಬೈಲ್ಯಾಟರಲ್‌ಸಿಮೆಟ್ರಿ) ರೂಪದಲ್ಲಿದೆ. ಅಂದರೆ ತಲೆಯಿಂದ ಬಾಲದವರೆಗೆ ದೇಹವನ್ನು, ಅಗ್ರಪಶ್ಚ ಅಕ್ಷ ರೇಖೆಯೊಂದನ್ನು ಎಳೆದರೆ, ಅಂಗ ರಚನೆಯು ಈ ಅಕ್ಷದ ಎರಡು ಪಕ್ಕಗಳನ್ನು ಸಮ ಬಾಗಗಳಾಗಿ ವಿಭಾಗಿಸಬಹುದು.

. ದೇಹರಚನೆಯಲ್ಲಿ ಖಂಡ ವಿಂಗಡಣೆ ಇದೆ. ಅಂದರೆ ದೇಹ ಭಾಗಗಳಾದ ಮಾಂಸ ಖಂಡಗಳು, ಅದಕ್ಕೆ ಸಂಬಂಧಿಸಿದ ಭಾಗಗಳು, ನರಗಳು ಮುಂತಾದವು ಖಂಡಗಳೆಂಬ ಪ್ರಮಾಣಗಳ ಪುನಾವರ್ತನೆಯ ವ್ಯವಸ್ಥೆಯನ್ನು ತೋರುತ್ತವೆ.

. ದೇಹದ ರಚನೆಯಲ್ಲಿ ಮೂರು ಮೂಲ ಜನನ ಪದರಗಳು ಇರುವ ಮುಪ್ಪದರದ ಪ್ರಾಣಿಗಳು.

. ಸೀಲೋಮ್‌ದೇಹಾಂತರವಕಾಶವು ಚೆನ್ನಾಗಿ ಬೆಳೆದಿದೆ.

. ಇವುಗಳ ಜೀವನದ ಒಂದು ಅವಸ್ಥೆಯಲ್ಲಿ ಬಾಗಬಲ್ಲ, ಪೆಡುಸಾದ ಅಸ್ಥಿಪಂಜರದ ಸರಳಿನಾಕಾರದ ನೋಟೊಕಾರ್ಡ ಎಂಬ ರಚನೆ ಇರುತ್ತದೆ. ಇದು ಭ್ರೂಣದ ಅನ್ನನಾಳವು ಮೇಲಕ್ಕೆ ಮಡಚಿಕೊಂಡು ಬೇರೆಯಾಗುವುದರಿಂದ ಉದ್ಭವವಾಗುತ್ತದೆ. ಇದು ಅನ್ನನಾಳದ ಮೇಲೆ, ನರಹುರಿಯ ಕೆಳಗಡೆ, ತಲೆಯಿಂದ ಬಾಲದ ಹಿಂತುದಿಯವರೆಗೂ ವಿಸ್ತರಿಸುತ್ತದೆ. ಆದಿ ಕಾರ್ಡೇಟುಗಳಲ್ಲಿರುವಂತೆ ಅವುಗಳ ಜೀವನವಿಡೀ ಉಪಸ್ಥಿತವಿರಬಹುದು. ಇಲ್ಲವೇ ಕಶೇರುಕಗಳಲ್ಲಿರುವಂತೆ ಭ್ರೂಣಾವಸ್ಥೆಯ ಆದಿ ಹಂತಗಳಲ್ಲಿ ಕಾಣಿಸಿಕೊಂಡು ಅನಂತರ ಕಶೇರುಸ್ತಂಭಕ್ಕೆ ದಾರಿ ಮಾಡಿಕೊಡಬಹುದು. ಕಶೇರುಕಗಳಲ್ಲಿ ಈ ಮೂಲ ರಚನೆಯಿಂದ ಅಸ್ಥಿಪಂಜರವು ಉದ್ಭವಿಸುತ್ತದೆ. ಪ್ರಬುದ್ಧಾವಸ್ಥೆಯಲ್ಲಿ ಕ್ಷೀಣಗೊಂಡು ಕಶೇರುಸ್ತಂಭದಿಂದ ಆವೃತಗೊಳ್ಳುತ್ತದೆ. ಇಲ್ಲವೆ ಸ್ಥಾನಪಲ್ಲಟಗೊಳ್ಳುತ್ತದೆ. ಕಶೇರುಕಗಳ ಬೆಳವಣಿಗೆಯಲ್ಲಿ ಅಂಗಾಂಗಗಳ ಆಕಾರೋದ್ಭವಕ್ಕೆ ನೋಟೊಕಾರ್ಡಿನ ಇರುವು ಅಗತ್ಯ. ಇದು ಭ್ರೂಣ ಬೆಳವಣಿಗೆಯ ಆನಂತರದ ಬೆಳವಣಿಗೆ ಶ್ರೇಣಿಗಳಿಗೆ ಪ್ರಚೋದನೆ ನೀಡುತ್ತದೆ. ದೇಹಕ್ಕೆ ನಿರ್ದಿಷ್ಟ ಆಕಾರ, ರೂಪ, ಕೊಡುವುದರ ಜೊತೆಗೆ ಮಾಂಸಖಂಡಗಳು ಅಂಟಿಕೊಳ್ಳಲು ಅಗತ್ಯವಾದ ಪೆಡಸು ಮೇಲ್ಮೈಯನ್ನು ಒದಗಿಸಿ ಸ್ನಾಯು ಸಂಕುಚನೆಗೆ, ದೇಹದ ವಿವಿಧ ಬಾಗು ಚಲನವಲನಗಳಿಗೆ ಆಧಾರ, ಅನುಕೂಲ ಒದಗಿಸುತ್ತದೆ.

ಆದಿ ಕಾರ್ಡೇಟುಗಳಾದ ಹೆಮಿಕಾರ್ಡೇಟುಗಳಲ್ಲಿ ಇದೊಂದು ಸಣ್ಣ ತುಂಡಿನಂತಿದ್ದು ತಲೆಯಿಂದ ಮುಂದಿರುವ ಸೊಂಡಿಲು ಭಾಗಕ್ಕೆ ಚಾಚಿಕೊಂಡಂತಿದೆ. ಯೂರೊಕಾರ್ಡೇಟುಗಳಲ್ಲಿ ಇದು ಡಿಂಬಾ (ಲಾರ್ವ) ವ್ಯವಸ್ಥೆಯಲ್ಲಿ ಬಾಲದ ಭಾಗದಲ್ಲಿದ್ದು (ಅದಕ್ಕೆಂದೆ ಈ ಪ್ರಾಣಿ ಗುಂಪಿಗೆ ಯುರೋಕಾರ್ಡೇಗಳೆಂದು ಹೆಸರು) ರೂಪಪರಿವರ್ತನೆಯ ಕಾಲಕ್ಕೆ ಕಳೆದು ಹೋಗುತ್ತದೆ. ಸಿಫೆಲೊಕಾರ್ಡೇಟುಗಳಲ್ಲಿ ಇಡೀ ಜೀವನ ಉಳಿದಿರುತ್ತದೆ. ಕಶೇರುಕಗಳಲ್ಲಿ ಭ್ರೂಣಾವಸ್ಥೆಯಲ್ಲಿ ಮಾತ್ರ ಕಾಣಿಸಿಕೊಂಡು ಅನಂತರ ತಾನೇ ಕಶೇರುಸ್ತಂಭದ ಉದ್ಭವಕ್ಕೆ ಕಾರಣವಾಗಿ ಕಣ್ಮರೆಯಾಗುತ್ತದೆ. ಕಶೇರುಕಗಳಲ್ಲಿ ನೋಟೊಕಾರ್ಡ ಭ್ರೂಣಾವಸ್ಥೆಯಲ್ಲಿ ಕಾಣಿಸಿಕೊಂಡು ಕಣ್ಮರೆಯಾಗುವುದಾದರೂ ಇದರ ಬೆಳವಣಿಗೆ ನರಹುರಿಯ ನಿರ್ಮಾಣ ಮತ್ತು ಇತರ ದೇಹ ರಚನೆಗಳ ಬೆಳವಣಿಗೆಗೆ ಚಾಲನೆ ಒದಗಿಸುತ್ತದೆ. ಆದುದರಿಂದ ಭ್ರೂಣಾವಸ್ಥೆಯಲ್ಲಿ ಇದರ ಬೆಳವಣಿಗೆ ಅಗತ್ಯ.

. ಅಕಶೇರುಕಗಳು ಮತ್ತು ಕಶೇರುಕಗಳೆರಡರಲ್ಲಿಯೂ ಮುಂತುದಿಯಿಂದ ಹಿಂದಿನ ತುದಿಯವರೆಗೆ ಉದ್ದವಾಗಿ ಹರಡಿದ ನರಹುರಿ ಇದೆ. ಅಕಶೇರುಕಗಳಲ್ಲಿ ನರಹುರಿ ಅನ್ನನಾಳದ ತಳಭಾಗದಲ್ಲಿದ್ದರೆ, ಕಶೇರುಕಗಳಲ್ಲಿ ಅದು ಅನ್ನನಾಳದ ಮೇಲ್ಭಾಗದಲ್ಲಿದೆ. ಬೆಳವಣಿಗೆಯ ಒಂದು ಹಂತದಲ್ಲಿ ನೋಟೊಕಾರ್ಡಿನ ಮೇಲ್ಭಾಗದಲ್ಲಿರುವ ಭ್ರೂಣದ ಹೊರಪದರವು (ಹೊರಧರ್ಮ) ಕೆಳಕ್ಕೆ ತಗ್ಗಿ, ತಗ್ಗಿನ ಎರಡೂ ಪಕ್ಕದ ತುದಿಗಳು ಮೇಲಕ್ಕೆ ಬಾಗಿ, ಕೂಡಿಕೊಂಡು, ನಳಿಕೆಯಾಕಾರದ ಟೊಳ್ಳಾದ ನರಹುರಿ ನಿರ್ಮಾಣವಾಗುತ್ತದೆ. ಆದ್ದರಿಂದ ಕಶೇರುಕಗಳ ನರಹುರಿಯು ಅನ್ನನಾಳದ ಮೇಲ್ಭಾಗದಲ್ಲಿದ್ದು ಟೊಳ್ಳಾದ ನಳಿಕೆಯಾಕಾರವಾಗಿದ್ದರೆ ಅಕಶೇರುಕಗಳ ನರಹುರಿಯು ಅನ್ನನಾಳದ ತಳದಲ್ಲಿದೆ ಮತ್ತು ಗಟ್ಟಿಯಾಗಿದೆ.

ಕಶೇರುಕಗಳ ನರಹುರಿಯ ತಲೆಯ ಭಾಗದಲ್ಲಿ ಉಬ್ಬಿ, ವಿಸ್ತರಿಸಿ ಮಿದುಳಾಗುತ್ತದೆ. ಈ ಮಿದುಳು ತಲೆಬುರುಡೆಯ ಕಪಾಲದ (ಕ್ರೇನಿಯಂ) ಒಳಗಿದ್ದು ರಕ್ಷಿತವಾಗಿದೆ.

ತಲೆಯ ಹಿಂಭಾಗದ ಕತ್ತು, ಮುಂಡ, ಬಾಲಭಾಗದಲ್ಲಿನ ಕಶೇರು ಮಣಿಗಳಿಂದ ಮೇಲಕ್ಕೆ ಚಾಚುಗಳು ಬೆಳೆದು, ಕೂಡಿ ಕಮಾನಿನ ರಚನೆ ಉದ್ಭವವಾಗುತ್ತದೆ. ವಿವಿಧ ಕಶೇರುಮಣಿಗಳ ಈ ಕಮಾನುಗಳು ಒಂದರ ಹಿಂದೊಂದು ಜೋಡಿಸಿ ನಾಲೆಯಂತಹ ರಚನೆ ನಿರ್ಮಾಣವಾಗಿ, ನರಹುರಿಯು ಈ ನಾಲೆಯಲ್ಲಿ ಉಳಿದು ಸುರಕ್ಷಿತವಾಗಿದೆ.

. ಇಡೀ ಜೀವನ ಪೂರ್ತಿ (ಆದಿ ಕಾರ್ಡೇಟುಗಳು ಮತ್ತು ಮೀನುಗಳು) ಮತ್ತು ಚತುಷ್ಪಾದಿಗಳಲ್ಲಿ ಭ್ರೂಣಾವಸ್ಥೆಯಲ್ಲಿ ಫೆರೆಂಜಿಯಲ್‌(ಬ್ರೇಕಿಯಲ್‌ಗಂಟಲು ಗೂಡು) ಕಿವಿರು ರಂಧ್ರಗಳಿರುವುದು ಕಾರ್ಡೇಟುಗಳ ಮತ್ತೊಂದು ಮುಖ್ಯ ಲಕ್ಷಣ.

ಕಶೇರುಕಗಳ (ಮುಖ್ಯವಾಗಿ ಮೀನುಗಳಲ್ಲಿ) ಕುತ್ತಿಗೆಯ ಭಾಗದಲ್ಲಿ, ಅನ್ನನಾಳದ ಮುಂದಿನ ತುದಿಯಾದ ಫ್ಯಾರಿಂಕ್ಸ (ಗಂಟಲು ಗೂಡು)ನ ಇಕ್ಕೆಡೆಗಳಲ್ಲಿಯೂ ಕಿವಿರುಗಳಿರುವ ಕಿವಿರು ಕೋಣೆಗಳಿವೆ. ಬಾಯಿಂದ ಗಂಟಲು ಗೂಡುಸೇರಿದ ನೀರು, ಗಂಟಲುಗೂಡಿನ ಇಕ್ಕೆಡೆಯ ಪಾರ್ಶ್ವ ಭಾಗಗಳ ಭಿತ್ತಿಯಲ್ಲಿರುವ ರಂಧ್ರಗಳ ಮೂಲಕ ಕಿವಿರು ಕೋಣೆಗಳನ್ನು ಸೇರಿ, ಅಲ್ಲಿರುವ ಕಿವಿರುಗಳ ಮೇಲೆ ಹರಿದು, ತನ್ನಲ್ಲಿರುವ ಆಮ್ಲಜನಕ (ಆಕ್ಷಿಜೆನ್‌)ವನ್ನು ಬಿಟ್ಟುಕೊಟ್ಟು ಅಲ್ಲಿಗೆ ರಕ್ತದ ಮೂಲಕ ಬಂದಿರುವ ಇಂಗಾಲದ ಡೈ ಆಕ್ಷೈಡನ್ನು ಪಡೆದುಕೊಂಡು ಕಿವಿರು ಕೋಣೆಯ ಹೊರಭಾಗದಲ್ಲಿ ಕುತ್ತಿಗೆಯ ಭಾಗದಲ್ಲಿರುವ ಕಿವಿರು ರಂಧ್ರಗಳ ಮೂಲಕ ಹೊರ ಹೋಗುತ್ತದೆ. ಇವು ವಾಸ್ತವವಾಗಿ ಕಿವಿರು ಕೋಣೆಗೆ ಸಂಬಂಧಿಸಿದಂತೆ ಹೊರಗಿನ ಕಿವಿರು ರಂಧ್ರಗಳಾದರೂ ಮುಖ್ಯವಾದ ಕಶೇರುಕಗಳ ಲಕ್ಷಣವಾದ ಫೆರೆಂಜಿಯಲ್‌ ಕಿವಿರುರಂಧ್ರಗಳು.

ನೀರನ್ನು ಉಸಿರಾಟಕ್ಕೆ ಬಳಸುವ ಮೀನುಗಳಂತಹ ಜಲಚರಿಗಳಲ್ಲಿ ಕಿವಿರುಗಳು ಅವುಗಳ ಜೀವನವಿಡೀ ಶ್ವಾಸಾಂಗಗಳಾಗಿ ಉಳಿದಿರುತ್ತವೆ.

ಉಳಿದ ಕಶೇರುಕಗಳಾದ ಉಭಯಚರಿಗಳು, ಸರೀಸೃಪಗಳು, ಪಕ್ಷಿಗಳು ಮತ್ತು ಸಸ್ತನಿಗಳು ಗಾಳಿಯನ್ನು ಉಸಿರಾಡುತ್ತವಾದುದರಿಂದ ಕಿವಿರುಗಳ ಬದಲು ಅವುಗಳಲ್ಲಿ ಶ್ವಾಸಕೋಶಗಳಿವೆ. ಇವುಗಳಲ್ಲಿ ಕಿವಿರುಗಳು ಇಲ್ಲದಿರುವುದರಿಂದ ಕಿವಿರು ರಂಧ್ರಗಳ ಅಗತ್ಯವಿಲ್ಲವಾಗಿ ಅವು ಕಣ್ಮರೆಯಾಗಿರುವುದು ಸ್ವಾಭಾವಿಕ. ಆದರೆ ಈ ಭೂವಾಸಿ ಪ್ರಾಣಿಗಳ ಭ್ರೂಣಾವಸ್ಥೆಯಲ್ಲಿ ಕಿವಿರು ರಂಧ್ರಗಳು ಕಾಣಿಸಿಕೊಂಡು ಆನಂತರದ ಬೆಳವಣಿಗೆಯಲ್ಲಿ ಕಣ್ಮರೆಯಾಗುತ್ತವೆ. ಪ್ರಬುದ್ಧಾವಸ್ತೆಯಲ್ಲಿ ಶ್ವಾಸಕೋಶಗಳಿದ್ದು ಗಾಳಿಯನ್ನೇ ಉಸಿರಾಡುವ ಉಭಯಚರಿಗಳು ಮೊಟ್ಟೆಗಳನ್ನು ನೀರಿನಲ್ಲಿಟ್ಟು ಅಲ್ಲಿಯೇ ಬೆಳೆದು, ಮೊಟ್ಟೆಯೊಡೆದು ಹೊರಬರುವ ಗೊದಮೊಟ್ಟೆಯು ನೀರಿನಲ್ಲಿ ಮೀನಿನಂತೆಯೇ ನೀರನ್ನು ಉಸಿರಾಡಿ ಬೆಳೆಯುತ್ತದೆ. ಆದುದರಿಂದ ಇದರಲ್ಲಿ ಕಿವಿರು, ಕಿವಿರು ರಂಧ್ರಗಳು ಇರುವುದು ಸ್ವಾಭಾವಿಕ ಎನ್ನಬಹುದಾದರೂ, ಮೊಟ್ಟೆಗಳನ್ನು ನೆಲದ ಮೇಲೆ ಇರಿಸಿ, ನೀರಿನ ಸಂಪರ್ಕವೇ ಇಲ್ಲದೆ ಜಲಾಭೇದ್ಯ ತತ್ತಿಗಳ ಚಿಪ್ಪುಗಳ ಒಳಗೆ ಬೆಳೆಯುವ ಸರೀಸೃಪ ಮತ್ತು ಪಕ್ಷಿಗಳ ಭ್ರೂಣಗಳಲ್ಲಿ ಮತ್ತು ತಾಯಿಯ ದೇಹದ ಒಳಗೆ ಗರ್ಭಾಶಯದಲ್ಲಿ ಬೆಳೆಯುವ ಸಸ್ತನಿ ಭ್ರೂಣಗಳಲ್ಲಿಯೂ, ಬೆಳವಣಿಗೆಯ ಒಂದು ಹಂತದಲ್ಲಿ ಕಿವಿರು ರಂಧ್ರಗಳು ಕಾಣಿಸಿಕೊಂಡು ಅನಂತರದ ಬೆಳವಣಿಗೆಯಲ್ಲಿ ಕಣ್ಮರೆಯಾಗುತ್ತವೆ. ಸ್ವಾಭಾವಿಕ ಬೆಳವಣಿಗೆ, ಅಂಗ ಆಕಾರೋದ್ಭವ ದೃಷ್ಟಿಯಿಂದ ಹೀಗೆ ಕಿವಿರು ರಂಧ್ರಗಳು ಕಾಣಿಸಿಕೊಳ್ಳುವುದು ಮುಖ್ಯ ಮತ್ತು ಅಗತ್ಯ.

ಕಿವಿರು ರಂಧ್ರಗಳು ಮತ್ತು ಅವುಗಳಿಗೆ ಆಸರೆ ನೀಡುವ ಅಸ್ಥಿಪಂಜರದ ಭಾಗಗಳು, ಕಶೇರುಕಗಳ ವಿಕಾಸದಲ್ಲಿ ಕಿವಿರು ರಂಧ್ರಗಳು ಉಪಯೋಗವಿಲ್ಲವಾಗಿ ಕಣ್ಮರೆಯಾದ ಮೇಲೂ ಉಳಿದು ದವಡೆಗಳ ನಿರ್ಮಾಣ, ಬಾಯಂಗಳದ ಆಸರೆ, ಮತ್ತು ನಡುಕಿವಿಯಲ್ಲಿ ಶಬ್ದದ ಅಲೆಗಳನ್ನು ಕಿವಿಯ ತಮಟೆಯಿಂದ ಒಳ ಕಿವಿಗೆ ವರ್ಗಾಯಿಸುವ ಅಸ್ಥಿಕಗಳಾಗಿ ಮಾರ್ಪಟ್ಟು ಹೊಸ ಕ್ರಿಯೆಗಳನ್ನು ವಹಿಸಿಕೊಂಡು ನಿರ್ವಹಿಸುತ್ತಿವೆ.

. ಕಾರ್ಡೇಟುಗಳಲ್ಲಿ ಚೆನ್ನಾಗಿ ರೂಪುಗೊಂಡ ರಕ್ತ ಪರಿಚಲನಾ ಮಂಡಲವಿದೆ. ಒಂದು ಮುಖ್ಯ ರಕ್ತನಾಳವು ಮಡಿಸಿಕೊಂಡು ಹಲವಾರು ಕೋಣೆಗಳ ಅಂಗವಾಗಿ ರಕ್ತವನ್ನು ದೇಹದ ವಿವಿಧ ಭಾಗಗಳಿಗೆ ಪಂಪ್‌ಮಾಡುವ ಕ್ರಿಯೆಯನ್ನು ನಿರ್ವಹಿಸುವ ಅಂಗವಾಗಿ ಮಾರ್ಪಟ್ಟಿದೆ. ಅದೇ ಹೃದಯ. ಈ ಹೃದಯ ಆದಿಯಲ್ಲಿ ಅಭಿಧಮನಿಗಳ ತುದಿಯ ಭಾಗ, ಅಪಧಮನಿಗಳ ಮೂಲಭಾಗಗಳನ್ನೂ ಒಳಗೊಂಡು ನಾಲ್ಕು ಕೋಣೆಯ ರಚನೆಯಾಗಿತ್ತು. ಅಭಿದಮನಿಗಳು (ಮಲಿನ ರಕ್ತನಾಳಗಳು) ದೇಹದ ವಿವಿಧ ಭಾಗಗಳಿಂದ ಮಲಿನ ರಕ್ತವನ್ನು ತಂದು ಹೃದಯಕ್ಕೆ ಪೂರೈಸುತ್ತವೆ. ಹೃದಯವು ಈ ಮಲಿನ ರಕ್ತವನ್ನು ಕಿವಿರುಗಳು ಅಥವಾ ಶ್ವಾಸಕೋಶಗಳಿಗೆ ಕಳುಹಿಸಿ ಆಕ್ಷಿಜನೀಕೃತವಾದ (ಶುದ್ಧ ರಕ್ತವನ್ನು) ರಕ್ತವನ್ನು ದೇಹದ ವಿವಿಧ ಭಾಗಗಳಿಗೆ ವಿತರಿಸುತ್ತದೆ.

. ಕಾರ್ಡೇಟುಗಳು ಸೇವಿಸುವ ಆಹಾರಕ್ಕನುಗುಣವಾಗಿ ಮಾರ್ಪಟ್ಟಿದ್ದರೂ ಚೆನ್ನಾಗಿ ರೂಪಗೊಂಡ ಜೀರ್ಣಾಂಗ ಮಂಡಲವಿದೆ.

೧೦. ದೇಹವನ್ನು ಪರಿಸರದ ಪ್ರಭಾವಗಳಿಂದ ರಕ್ಷಿಸಲು ದೇಹದ ಹೊರಗೆ ಒಂದು ಹೊರ ಅಸ್ಥಿಪಂಜರ (ಎಕ್ಲೊಸ್ಕೆಲಿಟನ್‌) ರೂಪುಗೊಂಡಿದೆ. ಅದು ಮೀನುಗಳಲ್ಲಿ ಹುರುಪೆಗಳ ರೂಪದಲ್ಲಿ, ಸರೀಸೃಪಗಳಲ್ಲಿ ಹುರುಪೆಗಳು, ಶಲ್ಕಗಳ ರೂಪದಲ್ಲಿ, ಪಕ್ಷಿಗಳಲ್ಲಿ ಪುಕ್ಕಗಳು, ಸಸ್ತನಿಗಳಲ್ಲಿ ಕೂದಲುಗಳ ರೂಪದಲ್ಲಿದೆ.

೧೧. ಬಹು ಪಾಲು ಕಾರ್ಡೇಟುಗಳಲ್ಲಿ ದೇಹಕ್ಕೆ ಆಕಾರ, ಸ್ನಾಯು ಬಂಧನಕ್ಕೆ ಮೇಲ್ಮೈ ಮತ್ತು ಸೂಕ್ಷ್ಮಾಂಗಗಳು, ಸಂವೇದನಾಂಗಗಳಿಗೆ ರಕ್ಷಣೆ ಒದಗಿಸುವ, ನೋಟೊಕಾರ್ಡ ಮೂಲದಿಂದ ಉತ್ಪತ್ತಿಯಾದ, ದೇಹದ ಒಳಗಿರುವ ಅಂತಸ್ತ ಅಸ್ಥಿಪಂಜರ (ಎಂಡೊಸ್ಕೆಲಿಟನ್‌)ವಿದೆ. ಇದು ಕೆಲವು ಮೀನುಗಳಲ್ಲಿರುವಂತೆ ಪೂರ್ಣ ಮೃದ್ವಸ್ಥಿಗಳನ್ನೊಳಗೊಂಡಿರಬಹುದು ಅಥವಾ ಇತರ ಕಶೇರುಕಗಳಲ್ಲಿರುವಂತೆ ಪೂರ್ಣ ಮೂಳೆಗಳನ್ನೊಳಗೊಂಡುದಾಗಿರಬಹುದು.

೧೨. ಕಶೇರುಕಗಳಲ್ಲಿ ಚೆನ್ನಾಗಿ ರೂಪಗೊಂಡ ವಿಸರ್ಜನಾ ಮಂಡಲವಿದೆ. ದೇಹದ ಚಟುವಟಿಕೆಗಳಿಂದಾಗಿ ಉತ್ಪತ್ತಿಯಾಗುವ ಮಲಿನ ವಸ್ತುಗಳನ್ನು ಸಂಗ್ರಹಿಸಿ, ರಕ್ತದಂತಹ ದೇಹರಸಗಳಿಂದ ಪ್ರತ್ಯೇಕಿಸಿ ಹೊರಕ್ಕೆ ಸಾಗಿಸುವುದು ಇದರ ಕೆಲಸ. ಈ ಅಂಗಗಳಿಗೆ ಮೂತ್ರಪಿಂಡಗಳು (ಕಿಡ್ನಿ) ಎಂದು ಹೆಸರು. ಮೂತ್ರಪಿಂಡಗಳು ಕಶೇರುಕಗಳಲ್ಲಿ ಮೂಡಿಬಂದ ಅಸದೃಶ ಅಂಗಗಳು ಇವುಗಳ ಮೂಲ ಪ್ರಾಯಶಃ ಅಕಶೇರುಕ ವಲಯವಂತಗಳ (ಅನ್ನೆಲಿಡ) ನೆಫ್ರಿಡಿಯಂ ಶುದ್ಧಿಕರಣಾಂಗದಿಂದ ಉದ್ಭವಿಸಿದ ಅಂಗಗಳೆಂದು ನಂಬುತ್ತಾರೆ.

ಅವು ಬೆಳೆಯುವಾಗ ಒಂದು ತುದಿಯಲ್ಲಿ ಶಿಲಿಕಾಂಗಗಳ ಲಾಲಿಕೆಯನ್ನೊಳಗೊಂಡು ಹಿಂದೆ ಒಂದು ಉಭಯ ಸಾಮಾನ್ಯ ನಾಳವನ್ನು ಸೇರಿ, ಅದರ ಮೂಲಕ ತಾವು ಸಂಗ್ರಹಿಸಿದ ಮಲಿನ ವಸ್ತುವನ್ನು ಮೂತ್ರ ರೂಪದಲ್ಲಿ ವಿಸರ್ಜಿಸುತ್ತವೆ. ಈ ನಾಳ ರಚನೆಗಳಿಗೆ ನೆಫ್ರಾನ್‌ಗಳೆಂದು ಹೆಸರು.

ಇವು ಬೆಳೆಯುವುದು, ಬೆಳೆವಣಿಗೆಯ ಕಾಲದಲ್ಲಿ ಕಾಣಿಸಿಕೊಳ್ಳುವುದರಲ್ಲಿ ಒಂದು ವ್ಯವಸ್ಥಿತ ಕ್ರಮ ಮತ್ತು ವೇಳಾ ಪಟ್ಟಿಯ ಕಾರ್ಯಕ್ರಮ ವಿಚಕ್ಷಣೆ ಕಂಡುಬರುತ್ತದೆ. ನೆಫ್ರಾನ್‌ಗಳು ದೇಹಾಂತರವಕಾಶದಲ್ಲಿ ಜೋಡಿರಚನೆಗಳಾಗಿ ಕಾಣಿಸಿಕೊಳುತ್ತವೆ. ಇವು ಬೆಳವಣಿಗೆಯಲ್ಲಿ ಕಾಣಿಸಿಕೊಳ್ಳುವ ಅವಸ್ಥೆ, ಭ್ರೂಣ (ಪ್ರಾಣಿಯ) ಅಗ್ರಪಶ್ಚ ಅಕ್ಷದಲ್ಲಿ ಅವುಗಳ ಸ್ಥಾನವನ್ನನುಸರಿಸಿ, ಮೊದಲು ಅಗ್ರಭಾಗದಲ್ಲಿ ಕಾಣಿಸಿಕೊಳ್ಳುವ ನೆಫ್ರಾನ್‌ಗುಂಪುಗಳಿಗೆ ಫೊನೆಫ್ರಾಸ್ ಎಂದು, ಬೆಳವಣಿಗೆಯ ನಡು ಹಂತದಲ್ಲಿ ದೇಹದ ಅಕ್ಷದಲ್ಲಿ ತುಸು ಹಿಂದೆ ಕಾಣಿಸಿಕೊಳ್ಳುವ ಮೀಸೊನೆಫ್ರಾಸ್ ಮತ್ತು ಬೆಳವಣಿಗೆಯ ಕಡೆಯ ಹಂತದಲ್ಲಿ ತೀರಾ ಪಶ್ಚ ಭಾಗಕ್ಕೆ ಕಾಣಿಸಿಕೊಳ್ಳುವ ಮೆಟನೆಫ್ರಾಸ್. ಇವು ಬೆಳವಣಿಗೆಯ ಆಯಾ ಕಾಲದ ಮೂತ್ರ ವಿಸರ್ಜನೆಯ ಮೂತ್ರ ಪಿಂಡಗಳಾಗಿ ವರ್ತಿಸುತ್ತದೆ. ಯಾವ ಎರಡು ವಿಧದ ನೆಫ್ರಾಸ್‌ಗಳು ಒಟ್ಟಿಗೆ ಇರುವುದಿಲ್ಲ. ಏಕಕಾಲದಲ್ಲಿ ತಮ್ಮ ಕೆಲಸ ನಿರ್ವಹಿಸುವುದಿಲ್ಲ. ಪ್ರೊನೆಫ್ರಾಸ್‌ಸಂಪೂರ್ಣ ಭ್ರೂಣಾವಸ್ಥೆಯ ವಿಸರ್ಜನಾಂಗ. ಮೀನುಗಳು ಮತ್ತು ಉಭಯಚರಿಗಳ ಪ್ರಭುದ್ದಾವಸ್ಥೆಯಲ್ಲಿ ಮೀಸೊನೆಫ್ರಾಸ್‌ಗಳು ವಿಸರ್ಜನಾಂಗಗಳಾಗಿ ನಿರ್ವಹಿಸುವುದರಿಂದ ಪ್ರೊನೆಫ್ರಾಸ್‌ಕಣ್ಮರೆಯಾಗುತ್ತವೆ. ಸರೀಸೃಪಗಳು, ಪಕ್ಷಿಗಳು ಮತ್ತು ಸಸ್ತನಿಗಳು ಪ್ರಭುದ್ದಾವಸ್ಥೆಯಲ್ಲಿ ಮೆಟನೆಫ್ರಾಸ್‌ಗಳು ವಿಸರ್ಜನಾಂಗಗಳಾಗಿ ಕೆಲಸ ಮಾಡಿ ಮೀಸೊನೆಫ್ರಾಸ್‌ಗಳು ಕಣ್ಮರೆಯಾಗುತ್ತವೆ.

ಪ್ರೊನೆಫ್ರಾಸ್‌ಮತ್ತು ಮೀಸೊನೆಫ್ರಾಸ್‌ಗಳು ಕಣ್ಮರೆಯಾದರೂ ಅವುಗಳು ಮೂತ್ರ ವಿಸರ್ಜಿಸಲು ಬಳಸುತ್ತಿದ್ದ ನಾಳಗಳು ಉಳಿದು ಪ್ರಜನನಾಂಗಗಳ ಜೊತೆ (ಸಂತಾನೋತ್ಪತ್ತಿಯ ಅಂಗಗಳು) ಸೇರಿ ಲಿಂಗಾಣುಗಳ ಸಾಗಣಿಕೆಗೆ ನೆರವಾಗುತ್ತವೆ. ಆದ್ದರಿಂದ ಕಶೇರುಕಗಳಲ್ಲಿ ಮೂತ್ರ ವಿಸರ್ಜನಾಂಗಗಳು ಮತ್ತು ಪ್ರಜನನಾಂಗಗಳು ಕೂಡಿ ಎರಡೂ ಕ್ರಿಯೆಗಳನ್ನು ನಿರ್ವಹಿಸಲು ಸಹಕರಿಸುವುದರಿಂದ ಈ ಅಂಗಮಂಡಲವನ್ನು ಮೂತ್ರಪ್ರಜನನ (ಯೂರಿನೊಜೆನೈಟಲ್‌) ಮಂಡಲ ಎಂದು ಕರೆಯುತ್ತಾರೆ.

ಬಹುವಾಗಿ ಕಶೇರುಕಗಳಲ್ಲಿ ಲಿಂಬಭೇದವಿದೆ. ಬೆಳವಣಿಗೆ ನೇರ. ಉಭಯಚರಿಗಳ ಅಪವಾದವಿನಹ ಬೆಳವಣಿಗೆಯಲ್ಲಿ ರೂಪ ಪರಿವರ್ತನೆ ಇಲ್ಲ ಮೀನುಗಳು, ಉಭಯಚರಿಗಳು, ಪಕ್ಷಿಗಳು ಅಂಡಜಗಳು. ಸಸ್ತನಿಗಳು ಜರಾಯಜಗಳು ಅಂದರೆ ಈಯುವ ಪ್ರಾಣಿಗಳು.

* * *