ಭೂಮಿಯ ಹುಟ್ಟಿನಷ್ಟೇ ಭೂಮಿಯ ಮೇಲೆ ಜೀವ ಕಾಣಿಸಿಕೊಂಡ ವಿಷಯವೂ ಇಂದಿಗೂ ನಿಗೂಢ ವಿಷಯವಾಗಿ ಉಳಿದಿದೆ. ಜೀವ ಭೂಮಿಯ ಮೇಲೆ ಕಾಣಿಸಿಕೊಂಡು ವಿಕಸನಗೊಂಡಿತೇ ಅಥವಾ ಬೇರೊಂದು ಗ್ರಹದಿಂದ ಭೂಮಿಗೆ ವಲಸೆ ಬಂದ ವಿಕಸಿಸಿತೆ ಎಂಬ ವಿಷಯ ಇನ್ನು ಇತ್ಯರ್ಥವಾಗದೆ ಉಳಿದಿರುವ ಅಪರಿಹಾರ್ಯ ಪ್ರಶ್ನೆ! ಜೀವ ಭೂಮಿಯ ಮೇಲೆ ಕಾಣಿಸಿಕೊಂಡಿತು ಎನ್ನುವುದಾದರೆ ಎಲ್ಲಿ ಯಾವಾಗ ಹೇಗೆ ಕಾಣಿಸಿಕೊಂಡಿತು ಎನ್ನುವುದು ಇನ್ನು ನಿರ್ಧಾರವಾಗದೆ ಜಿಜ್ಞಾಸೆಯಾಗಿಯೇ ಉಳಿದಿದೆ. ಆದರೆ ಬಹಳವಾಗಿ ಒಪ್ಪಿಕೊಂಡು, ಬಹುಪಾಲು ವಿಜ್ಞಾನಿಗಳ ಮನ್ನಣೆ ಮಡೆದ ಸಿದ್ಧಾಂತವೆಂದರೆ, ಭೂಮಿಯ ಆಯುಷ್ಯದ ಒಂದು ಅಜ್ಞಾತ, ಅನಿಶ್ಚಿತ ಕಾಲದಲ್ಲಿ, ಅಂದಿಗಾಗಲೇ ಅಸ್ತಿತ್ವದಲ್ಲಿದ್ದ ಆದಿ ಕಡಲುಗಳಲ್ಲಿ ಜೀವ ಕಾಣಿಸಿಕೊಂಡಿತು. ಅಂದು ಕಾಣಿಸಿಕೊಂಡ ಆ ಆದಿಜೀವ ಅನಿರ್ದಿಷ್ಟ ರೂಪದ ರಾಸಾಯನಿಕ ಸಂಯುಕ್ತವಾಗಿರಬಹುದು. ಈ ಸಂಯುಕ್ತ ವಸ್ತುವಿನಲ್ಲಿ ಜೀವ ಲಕ್ಷಣಗಳು ಕಾಣಿಸಿಕೊಂಡು ಆದಿ ಜೀವ ವಸ್ತುವಾಗಿ ರೂಪಗೊಂಡಿರಬಹುದು. ಅದೇ ಜೀವದ್ರವ್ಯ (ಪ್ರೊಟೊಪ್ಲಾಸಂ) ಭೂಮಿಯ ಮೇಲೆ ಜೀವ ಕಾಣಿಸಿಕೊಂಡು ಎರಡುಮೂರು ಬಿಲಿಯ (೨೦೦-೩೦೦ ಕೋಟಿ) ವರ್ಷಗಳಾಗಿರಬಹುದೆಂಬುದು ಒಂದು ಅಂದಾಜು.

ಅಂದು ಕಾಣಿಸಿಕೊಂಡ ಆ ಅನಾಕಾರ ಜೀವದ್ರವ್ಯವೂ ಇಂದಿಗೂ ಬದುಕುಳಿದಿರುವ ಆದಿಮ, ಪ್ರಾಚೀನ ಜೀವ ಅಮೀಬಾದಂತಿದ್ದಿರಬಹುದು ಅಥವಾ ಇಂದಿನ ಪರಿಶೀಲನೆಯ ಪ್ರಕಾರ, ಅಮೀಬಾದಂತಹ ಪ್ರಾಚೀನ ಜೀವಿಗಳಿಗಿಂತಲೂ ಆದಿಮವೆಂದು ಪರಿಗಣಿಸಲ್ಪಟ್ಟಿರುವ ಬ್ಯಾಕ್ಟೀರಿಯಾ, ವೈರಸ್‌ಗಳಂತಹ ಸೂಕ್ಷ್ಮಾತಿಸೂಕ್ಷ್ಮ ರಚನೆಯಾಗಿದ್ದಿರಬಹುದು ಈ ಆದಿಮ ಜೀವದ್ರವ್ಯವು ಕ್ರಮೇಣ ಕೋಶದ್ರವ್ಯ (ಸೈಟೊಪ್ಲಾಸಂ), ಕೋಶಬೀಜ (ನ್ಯೂಕ್ಲಿಯಸ್‌) ಮತ್ತು ತನ್ನ ಸುತ್ತ ಕೋಶ ಪಟಲ/ಪೊರೆ (ಸೆಲ್‌ಮೆಂಬ್ರೆನ್‌)ಗಳಂತಹ ರಚನಾ ಸಂಕೀರ್ಣಗಳನ್ನು ಸೃಷ್ಟಿಸಿಕೊಂಡು ಜೀವಕೋಶ (ಸೆಲ್‌)ವಾಗಿ ಪರಿವರ್ತನೆಗೊಂಡಿರಬಹುದು. ಜೀವಕೋಶ ಅಂತರ್ಗತ ವಸ್ತುಗಳಾದ ಕೋಶಬೀಜ ಮತ್ತು ಕೋಶದ್ರವ್ಯಗಳನ್ನು ಸುತ್ತುವರಿದು ಕೋಶಪಟಲವು ಅವುಗಳನ್ನು ಸಮಗ್ರವಾಗಿ ಹಿಡಿದಿಟ್ಟು ಹೊರ ಪ್ರಭಾವಗಳಿಂದ ರಕ್ಷಿಸುವ ರಚನೆಯಾಯ್ತು. ಕೋಶದ್ರವ್ಯವು ಜೀವಿಯ ವಿವಿಧ ಚಟುವಟಿಕೆಗಳಿಗೆ ಸ್ಥಳಾವಕಾಶ ಒದಗಿಸುವ ವೇದಿಕೆಯಾಗಿ ವರ್ತಿಸಿರಬಹುದು. ಜೀವಕೋಶದ ವಿವಿಧ ಜೀವಿ ಚಟುವಟಿಕೆಗಳನ್ನು ನಿರ್ವಹಿಸುವ, ಸಂಘಟಿಸುವ, ನಿರ್ದೇಶಿಸುವ ರಚನೆಯಾಗಿ ಕೋಶ ಬೀಜವು ರೂಪಗೊಂಡರಬಹುದು. ಈ ರೀತಿ ರೂಪಗೊಂಡ ಜೀವದ್ರವ್ಯವೇ ಜೀವಕೋಶವಾಗಿ ಪರಿವರ್ತನೆಗೊಂಡರಬಹುದು.

ಅಂದಿನ ಅವುಗಳ ಜೀವನ ಇಂದಿನಂತೆಯೆ ಆಹಾರ ಸೇವನೆ, ಪಚನ, ಸಂಚಯನ, ಸಂಚಲನೆ, ಸಂತಾನೋತ್ಪತ್ತಿಯಂತಹ ಜೀವ ಚಟುವಟಿಕೆಗಳನ್ನು ಒಳಗೊಂಡಿರಬಹುದು. ಇಂದಿಗೂ ಈ ಎಲ್ಲ ಜೀವ ಚಟುವಟಿಕೆಗಳನ್ನು ನಡೆಸುವ ಏಕಕೋಶ ಜೀವಿಗಳಾದ ಅಮೀಬಾ, ಯುಗ್ಲೀನಾ, ಪ್ಯಾರಾಮೀಸಿಯಂ, ಕ್ಲಾಮಿಡೊಮೊನಾಸ್‌ಗಳಂತಹ ಜೀವಿಗಳು ಬದುಕಿವೆ. ಈ ಜೀವಿಗಳ ರಚನೆಯಲ್ಲಿ ಅದೇ ಪ್ರಾಚೀನ ರಚನೆ, ಆದಿಮ ಜೀವ ಚಟುವಟಿಕೆಗಳನ್ನು ಇಂದೂ ಕಾಣಬಹುದು.

ಕಾಲಕ್ರಮದಲ್ಲಿ ಒಂದೇ ಜೀವಕೋಶ ಜೀವನ ನಿರ್ವಹಣೆಯ ಈ ಎಲ್ಲ ಜಟಿಲ ಚಟುವಟಿಕೆಗಳನ್ನು ನಡೆಸುವುಕ್ಕಿಂತ ಅವುಗಳನ್ನು ಹಂಚಿಕೊಂಡು ಸುಲಭವಾಗಿ ಹಾಗೂ ಸಮರ್ಥವಾಗಿ ನಿರ್ವಹಿಸಬಹುದಾದ ಬಹುಕೋಶ, ಬಹುಕೋಶ ಪದರ, ಬಹು ಅಂಗಾಂಶ, ಬಹು ಅಂಗ ಮಂಡಲ ಜೀವಿಗಳು ಉದ್ಭವಿಸಿರಬಹುದು. ಹೀಗೆ ಊಹಿಸಲು ಅನೇಕ ಸಾಕ್ಷಾಧಾರಗಳೂ ಇವೆ.

ಭೂಮಿಯು ಅಸ್ತಿತ್ವಕ್ಕೆ ಬಂದು, ಸೌರವ್ಯೂಹದ ಒಂದು ಅವಿಭಾಜ್ಯ ಭಾಗವಾದಂದಿನಿಂದ ನಿರಂತರವಾಗಿ ಬದಲಾಗುತ್ತ ಬಂದಿದೆ. ಭೌತಿಕ, ರಾಸಾಯನಿಕ ಮತ್ತು ಅಂತರಿಕ್ಷೀಯ ಭೂಬಾಹ್ಯ ಪ್ರಭಾವಗಳು, ಭೂಕಂಪ, ಅಗ್ನಿಪರ್ವತಗಳಂತಹ ಭೂ ಆಂತರಿಕ ಚಟುವಟಿಕೆಗಳು, ಸೂರ್ಯನ ಸುತ್ತಲ ಪರಿಭ್ರಮಣೆಗಳಿಂದ ಉಂಟಾಗುವ ಋತುಮಾನೀಯ ವಾಯುಗುಣಗಳಂತಹ ಬದಲಾವಣೆಗಳಿಂದಾಗಿ ಭೂಮಿಯ ಮೇಲ್ಮೈ ರಚನೆ, ಪರಿಸರ, ಹವಾಮಾನ ಪರಿಸ್ಥಿತಿಗಳು ಕಾಲದಿಂದ ಕಾಲಕ್ಕೆ ಬದಲಾಗಿವೆ, ಬದಲಾಗುತ್ತ ಬಂದಿವೆ, ಬದಲಾಗುತ್ತಿವೆ. ಪ್ರಾಚೀನ ಪರಿಸರ ವಿಜ್ಞಾನ (ಪೇಲಿಯೊ ಈಕಾಲೊಜಿ) ಇದನ್ನು ಪರಿಚಯ ಮಾಡಿಕೊಡುತ್ತದೆ. ಬದಲಾಗುತ್ತಿದ್ದ ಪರಿಸರ, ಪರಿಸ್ಥಿಗಳಿಗನುಗುಣವಾಗಿ ಹೊಂದಿಕೊಳ್ಳುವ ಪ್ರಯತ್ನದಲ್ಲಿ ಜೀವಿಗಳು ಸ್ವತಃ ಬದಲಾಗಿ, ಹೊಸ ರಚನೆಗಳನ್ನು ಬೆಳಸಿಕೊಂಡು, ಹೊಸ ಶಾರೀರ ಕ್ರಿಯಾಕ್ರಮಗಳನ್ನು ರೂಢಿಸಿಕೊಂಡು ಭಿನ್ನ, ವಿಭಿನ್ನ ರೀತಿಯ ಜೀವಿಗಳು ಕಾಣಿಸಿಕೊಂಡಿವೆ. ಬದಲಾದ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲಾರದವು ಅಳಿದು ಕಣ್ಮರೆಯಾಗಿವೆ. ಆದರೆ ಸುದೈವದಿಂದ ತಾವು ಬದುಕಿದ್ದ ಸುಳಿವು ನೀಡುವ ಪಳೆಯುಳಿಕೆಗಳನ್ನು ಉಳಿಸಿ ಕಣ್ಮರೆಯಾಗಿವೆ. ಪಳೆಯುಳಿಕೆಗಳ ಅಭ್ಯಾಸ ಈ ಬದಲಾವಣೆಗಳ ಪರಂಪರೆ, ಬದಲಾದ ಜೀವಿಗಳ ಏಳಿಗೆ, ಅಭಿವೃದ್ಧಿಗಳ ಪರಿಚಯ ಮಾಡಿಕೊಡುತ್ತದೆ.

ಆದಿಯಲ್ಲಿ ಜೀವದ್ರವ್ಯ ರೂಪದಲ್ಲಿ ಕಾಣಿಸಿಕೊಂಡ ಜೀವ ಕಾಲಾಂತರದಲ್ಲಿ ಜೀವಕೋಶವಾಗಿ, ಬಹು ಜೀವಕೋಶ ಜೀವಿಗಳಾಗಿ ವಿವಿಧ ರೀತಿಯ ಜೀವಿಗಳ ಉದ್ಭವಕ್ಕೆ ಕಾರಣವಾಗಿರುವುದು ತಿಳಿದು ಬರುತ್ತದೆ. ಈ ರೀತಿಯ ಬದಲಾವಣೆಗಳ ಪರಂಪರೆಯಲ್ಲಿ ಅನುವಂಶೀಯತೆ, ಜೀವವಿಕಾಸದಂತಹ ಕಾರ್ಯಾಕಾರಣ ವಿಶೇಷಗಳು ಮಹತ್‌ಪಾತ್ರವಹಿಸಿ, ಪರಿಸರ ಗರ್ಭದಿಂದ ಹೊಸ ಜೀವಿಗಳ ಹುಟ್ಟಿಗೆ ಸೂಲಗಿತ್ತಿಯಾಗಿ, ಅನಂತರ ದಾದಿಯಾಗಿ ಪೋಷಿಸಿದ ಈ ಜೀವಿಗಳು ಇಂದಿನ ಜೀವಕೋಟಿಗೆ ಕಾರಣವಾಗಿವೆ.

ಈಗ ಒಂದು ಮುಖ್ಯ ಪ್ರಶ್ನೆ ಜೀವ-ಜೀವಿ ಎಂದರೇನು? ಪ್ರಶ್ನೆ ಸರಳವಾಗಿ ಕಂಡರೂ ಅದಕ್ಕೆ ಉತ್ತರಿಸುವುದು ಸುಲಭವಲ್ಲ. ಈ ಪದಗಳಿಗೆ ನಿರ್ದಿಷ್ಟ ವ್ಯಾಖ್ಯೆ ಕೊಡುವುದು ಸುಲಭವಲ್ಲ. ಇದಕ್ಕೆ ಜೀವ ವಿಜ್ಞಾನಿ ಅಪ್ರತ್ಯಕ್ಷ ಕ್ರಮವನ್ನು ಅನುಸರಿಸುತ್ತಾನೆ. ಜೀವಿ ಲಕ್ಷಣಗಳ ಪಟ್ಟಿಮಾಡಿ, ಆ ಲಕ್ಷಣಗಳನ್ನು ತೋರುವವು ಜೀವಿಗಳೆಂದು, ಆ ಲಕ್ಷಣಗಳನ್ನು ತೋರದಿರುವವು ನಿರ್ಜೀವಿಗಳು ಎಂದು ಉತ್ತರಿಸುತ್ತಾನೆ. ಸಧ್ಯದ ಪರಿಸ್ಥಿತಿಯಲ್ಲಿ ಆ ಉತ್ತರವನ್ನು ಒಪ್ಪಿಕೊಳ್ಳದೆ ಬೇರೆ ದಾರಿಯಿಲ್ಲ. ಆದರೆ ಜೀವಿಗಳ ವಿಷಯದಲ್ಲಿ ಹೇಳುವಾಗ ಇಷ್ಟಂತೂ ನಿಜ, ಜೀವಿಗಳು ಏಕತೆಯಲ್ಲಿ ಭೀನ್ನತೆಯನ್ನೂ ಭೀನ್ನತೆಯಲ್ಲಿ ಏಕತೆಯನ್ನೂ ತೋರುತ್ತವೆ. ಅದು ಅವುಗಳ ವೈಶಿಷ್ಟ್ಯ!

ಜೀವ ಚಟುವಟಿಕೆಗಳಿಗೆ ಅಗತ್ಯವಾದ ಶಕ್ತಿಯನ್ನು ಆಹಾರದ ಮೂಲಕ ಗಳಿಸುವುದು, ಆಹಾರಾನ್ವೇಷಣೆ, ರಕ್ಷಣೆ ಮತ್ತು ಸಂಗಾತಿಯ ಹುಡುಕಾಟಕ್ಕಾಗಿ ಸಂಚಲನೆ, ಪರಿಸರದ ಪ್ರಭಾವಗಳಿಗೆ ಪ್ರತಿಕ್ರಿಯಿಸುವ ಸಂವೇದನಾ ಕ್ರಮ, ತನ್ನ ವಂಶಾಭಿವೃದ್ಧಿಗಾಗಿ ನಡೆಸುವ ಸಂತಾನೋತ್ಪತ್ತಿಯಂತಹ ಲಕ್ಷಣಗಳಿಂದ ಜೀವಿಗಳನ್ನು ಗುರುತಿಸಿಯಾದ ಮೇಲೆ, ನಮ್ಮ ಅಭ್ಯಾಸದ ಅನುಕೂಲಕ್ಕಾಗಿ ಜೀವಿಗಳನ್ನು ವಿಂಗಡಿಸಬೇಕಾಗುತ್ತದೆ. ಇದೇ ವರ್ಗೀಕರಣ. ಜೀವಿ ಜೀವಿಗಳ ನಡುವಿನ, ಹೋಲಿಕೆ-ವ್ಯತ್ಯಾಸಗಳನ್ನು ಅನುಸರಿಸಿ ವರ್ಗೀಕರಿಸುತ್ತಾರೆ.

ನಾವು ಈಗ ನಮ್ಮ ಅಭ್ಯಾಸಕ್ಕೆ ಆರಿಸಿಕೊಂಡಿರುವ ಪ್ರಾಣಿ ಗುಂಪು ಕಶೇರುಕಗಳು. ಪ್ರಾಣಿರಾಜ್ಯದಲ್ಲಿ ಅತ್ಯಂತ ಮಹತ್ತರವಾದ, ಜಟಿಲ ರಚನೆಗಳ ಒಂದು ಗುಂಪು. ಆದರೆ ಇಲ್ಲಿ ಗುಂಪು ಎನ್ನುವ ಪದ ಬಹಳ ಸರಳವಾಯ್ತು. ಇದರ ಅರ್ಥವಾಗಬೇಕಾದರೆ ಕನಿಷ್ಠ ಪ್ರಾಣಿ ಗುಂಪಿನ ಸ್ಥೂಲ ವರ್ಗೀಕರಣದ ಪರಿಚಯ ಅಗತ್ಯ. ಪ್ರಾಣಿ ಸಮೂಹವನ್ನು ಗುರುತಿಸಲು ಅನುಕೂಲಕ್ಕಾಗಿ ಅನಿವಾರ್ಯವಾಗಿ, ಮತ್ತಾವ ಪದವೂ ನಾವು ಉದ್ದೇಶಿತ ಅರ್ಥಕೊಡಲಾರದು ಎಂದು ಸರಳವಾಗಿ ‘ಗುಂಪು’ ಎಂಬ ಪದವನ್ನು ಬಳಸಿದ್ದೇವೆ. ತಾತ್ವಿಕವಾಗಿ ಅದು ಸರಿಯಲ್ಲ. ಒಂದೇ ರೀತಿಯ ಅಥವಾ ವಿವಿಧ ರೀತಿಯ ಜೀವಿಗಳ ಸಂಗ್ರಹವನ್ನು ಗುರುತಿಸಲು ‘ಗುಂಪು’ ಪದವನ್ನು ಬಳಸಬಹುದಾದರೂ ಶಾಸ್ತ್ರರೀತ್ಯಾ ಅದು ಸರಿಯಾಗಲಾರದು. ಜೀವಶಾಸ್ತ್ರದ ಅಭ್ಯಾಸ ಕ್ರಮದಲ್ಲಿ ವರ್ಗಿಕರಣಕ್ಕೆ ಅನುವಾದ ಕ್ರಮವನ್ನು ಅನುಸರಿಸಿದ್ದಾರೆ. ಅದು ಶಾಸ್ತ್ರೀಯವಾದ ವಿಧಾನ. ಅದನ್ನು ಟ್ಯಾಕ್ಸಾನಮಿ, ಕ್ಲಾಸಿಫಿಕೇಷನ್‌ಅಥವಾ ವರ್ಗೀಕರಣ ಎಂದು ಕರೆದಿದ್ದಾರೆ.

ಶಾಸ್ತ್ರೀಯವಲ್ಲದ ಆದರೆ ಬಳಕೆಯಲ್ಲಿರುವ ವರ್ಗೀಕರಣ ವಿಧಾನವನ್ನು ಮನುಷ್ಯನಿಗೆ ಅನ್ವಯಿಸಿದಂತೆ ಉದಾಹರಿಸಬಹುದು. ಮನುಷ್ಯನನ್ನು ಅನೇಕ ವಿಧಾನಗಳಲ್ಲಿ ವರ್ಗೀಕರಿಸಬಹುದು. ಮನುಷ್ಯರ ಲಿಂಗವನ್ನು ಅವಲಂಬಿಸಿ ಅವರನ್ನು ಸ್ತ್ರೀ ಮತ್ತು ಪುರಷ ಎಂದು ವಿಂಗಡಿಸಬಹುದು. ಅವರು ಯಾವ ಭೂಖಂಡವಾಸಿಗಳು ಎನ್ನುವುದರ ಆಧಾರದ ಮೇಲೆ (ಏಷ್ಯನ್ನರು, ಆಫ್ರಿಕನ್ನರು, ಯೂರೋಪಿಯನ್ನರು, ಅಮೇರಿಕನ್ನರು, ಇತ್ಯಾದಿ), ಯಾವ ದೇಶವಾಸಿಗಳು ಎನ್ನುವುದನ್ನವಲಂಬಿಸಿ (ಭಾರತೀಯರು, ಚೀನಿಯರು, ಇಂಗ್ಲೀಷಿನ ಆಂಗ್ಲರು, ರಷ್ಯನ್ನರು ಇತ್ಯಾದಿ). ಯಾವ ಧರ್ಮೀಯರೆಂಬುರದರ ಮೇಲೆ (ಹೀದೂಗಳು, ಮುಸ್ಲಿಮರು, ಕ್ರಿಶ್ಚಿಯನ್ನರು, ಬೌದ್ಧರು, ಇತ್ಯಾದಿ) ಯಾವ ರಾಜ್ಯವಾಸಿಗಳು ಅಥವಾ ಯಾವ ಭಾಷೆ ಮಾತನಾಡುವವರು (ಕನ್ನಡಿಗರು, ತಮಿಳರು, ಬಂಗಾಳಿಗಳು, ಮಲಯಾಳಿಗಳು ಇತ್ಯಾದಿ) ಜಾತಿ, ಉಪಜಾತಿಗಳನ್ನು ಅನುಸರಿಸಬಹುದು. ಇದೆಲ್ಲವೂ ಯಾವುದೊ ಒಂದು ಮಾಪನ ವಿಷಯವನ್ನು ಅವಲಂಬಿಸಿ ಮಾಡಬಹುದಾದ ವಿಂಗಡಣೆ. ಇದನ್ನು ಶಾಸ್ತ್ರೀಯ ವರ್ಗೀಕರಣ ಎನ್ನುವುದು ಸಲ್ಲ. ಏಕೆಂದರೆ ಅದು ವೈಜ್ಞಾನಿಕವಲ್ಲ. ಮನಷ್ಯರ ಒಂದು ವರ್ಗೀಕರಣ ಎಂದರೆ ಮೈಬಣ್ಣ ಮುಖ ಲಕ್ಷಣ, ತಲೆಯ ಕೂದಲು ಮುಂತಾದ ಲಕ್ಷಣಗಳನ್ನು ಆಧರಿಸಿ ಮಾಡುವುದು; ಆಫ್ರಿಕಾದ ಮೂಲ ನೀವಾಸಿಗಳಾದ ನಿಗ್ರೋಗಳು (ಕಪ್ಪು ಮೈಬಣ್ಣ, ಹಪ್ಪರು ಮೂಗು, ದಪ್ಪ ತುಟಿಗಳು, ಗುಂಗುರು ಕೂದಲು), ಚೀನಾ, ಜಪಾನ, ಬರ್ಮಗಳಲ್ಲಿರುವ ಮಂಗೋಲಿಯನ್ನರು (ಹಳದಿ ಮೈಬಣ್ಣ, ಕುಳ್ಳು ಆಕೃತಿ, ಪರಸ್ಪರ ಹತ್ತಿರದಲ್ಲಿರುವ ಕಣ್ಣುಗಳು), ಯೂರೋಪಿನ ನಿವಾಸಿಗಳಾದ ಕಕೇಶಿಯನ್ನರು (ಕೆಂಪು ಮೈಬಣ್ಣ, ಕೆಂಬರು ಕೂದಲು, ಚೂಪು ಮೂಗು) ಮತ್ತು ಆಸ್ಟ್ರೇಲಿಯದ ಮೂಲ ನಿವಾಸಿಗಳಾದ ಆಸ್ಟ್ರೆಲಾಯಿಡರು (ಕಂದು ಮೈಬಣ್ಣ ಕುಳ್ಳು ಆಕಾರ) ಇತ್ಯಾದಿ.

ಶಾಸ್ತ್ರೀಯ ವರ್ಗೀಕರಣದ ರೀತಿಯಲ್ಲಿ ಜೀವರಾಶಿಯನ್ನು ಕೆಲವೊಂದು ಲಕ್ಷಣಗಳ ಆಧಾರದ ಮೇಲೆ ಪ್ರಾಣಿಗಳು ಮತ್ತು ಸಸ್ಯಗಳು ಎಂದು ಸ್ಥೂಲವಾಗಿ ವಿಂಗಡಿಸಿದ್ದಾರೆ. ಜೀವರಾಶಿಯನ್ನು ಜೀವ ಸಾಮ್ರಾಜ್ಯವೆಂದೂ ಅದನ್ನು ಪ್ರಾಣಿರಾಜ್ಯ ಮತ್ತು ಸಸ್ಯರಾಜ್ಯವೆಂದು ಕರೆದಿದ್ದಾರೆ.

ಪ್ರಾಣಿರಾಜ್ಯವನ್ನು ಅವುಗಳ ದೇಹ ರಚನೆಯಲ್ಲಿ ಬೆನ್ನೆಲುಬು (ಕಶೇರುಸ್ತಂಭ) ಇರುವ ಮತ್ತು ಇಲ್ಲದಿರುವ ಆಧಾರದ ಮೇಲೆ ಕ್ರಮವಾಗಿ ಕಶೇರುಕಗಳು ಮತ್ತು ಅಕಶೇರುಕಗಳೆಂದು ವರ್ಗೀಕರಿಸಿದ್ದಾರೆ. ಇವುಗಳನ್ನು ವಂಶ (ಫೈಲಮ್)ಗಳೆಂದು ಗುರುತಿಸಿದ್ದಾರೆ. ಅಕಶೇರುಕಗಳಲ್ಲಿ ಎಂಟು ವಂಶಗಳಿವೆ. ಕಶೇರುಕಗಳದು ಒಂದು ವಂಶ ಮಾತ್ರವಿದೆ. ವಂಶಗಳನ್ನು ವರ್ಗಗಳಾಗಿ (ಕ್ಲಾಸ್‌), ವರ್ಗಗಳನ್ನು ಗಣ (ಆರ್ಡರ್), ಕುಟುಂಬ (ಫ್ಯಾಮಿಲಿ), ಜಾತಿ (ಜೀನಸ್‌)ಗಳೆಂದು ನಿರ್ದಿಷ್ಠ ಪ್ರಾಣಿಗಳನ್ನು ಉದಾಹರಣೆಗೆ ಮನುಷ್ಯನ ಮಟ್ಟದ ವರ್ಗೀಕರಣ ಗುಂಪನ್ನು ಪ್ರಭೇಧ (ಸ್ಪಿಸೀಸ್‌) ಎಂದು ವರ್ಗೀಕರಿಸಿದ್ದಾರೆ. ಒಂದು ಪ್ರಾಣಿಯನ್ನು ಸಾಮಾನ್ಯ ಹೆಸರಿನಿಂದ, ಉದಾಹರಣಗೆ ಮನುಷ್ಯ, ಕಪ್ಪೆ, ಮೀನು, ಆಮೆ, ಇತ್ಯಾದಿಗಳಿಂದ ಗುರುತಿಸುತ್ತಾರೆ. ಆದರೆ ನಿರ್ದಿಷ್ಟ ಪ್ರಭೇಧಗಳನ್ನು ಸೂಚಿಸಲು ಎರಡು ಹೆಸರುಗಳನ್ನು ಬಳಸುತ್ತಾರೆ. ಅದರಲ್ಲಿ ಮೊದಲನೆಯದು ಜಾತಿಯ ಮತ್ತು ಎರಡನೆಯದು ನಿರ್ದಿಷ್ಟವಾಗಿ ಪ್ರಾಣಿ ಪ್ರಭೇಧಕ್ಕೆ ಸಂಬಂಧಿಸುತ್ತದೆ. ಉದಾಹರಣೆಗೆ ಮನುಷ್ಯ ಹೋಮೊ ಸೆಪಿಯನ್ಸ್, ಕಪ್ಪೆ, ರಾನ ಟೈಗರಿನ, ಇತ್ಯಾದಿ. ಈ ಹೆಸರುಗಳು ಅಂತರ ರಾಷ್ಟ್ರೀಯ ಒಪ್ಪಂದದ ಪ್ರಕಾರ ಲ್ಯಾಟಿನ್‌ಅಥವಾ ಗ್ರೀಕ್‌ಭಾಷೆಯ ಅಥವಾ ಆ ಭಾಷೆಗೆ ಬದಲಾಯಿಸಿದ ಪದಗಳಾಗಿರಬೇಕು. ಹೀಗೆ ಪ್ರತಿಯೊಂದು ಜೀವಿಯನ್ನು ಎರಡು ಹೆಸರುಗಳಿಂದ ಕರೆಯುವ ಕ್ರಮಕ್ಕೆ ದ್ವಿನಾಮ ನಾಮಕರಣ (ಬೈನಾಮಿಯಲ್ ನಾಮಿನಿಕ್ಲೇಚರ್) ಎಂದು ಹೆಸರು.

ಈಗ ವರ್ಗೀಕರಣದ ಈ ಹಿನ್ನಲೆಯಲ್ಲಿ ಮನುಷ್ಯನ ಜೀವ ಶಾಸ್ತ್ರೀಯ ಸ್ಥಾನಮಾನವನ್ನು ಪರಿಗಣಿಸಬಹುದಾದರೆ, ಅವನು ಹೋಮೊ ಸೆಪಿಯನ್ಸ್ ಅಂದರೆ ಸೆಪಿಯನ್ಸ್ ಎಂಬ ಪ್ರಭೇಧಕ್ಕೂ ಹೋಮೊ ಎಂಬ ಜಾತಿಗೂ ಹೋಮೊನಿಡೀ ಎಂಬ ಕುಟುಂಬಕ್ಕೂ ಪ್ರೈಮೇಟ್‌(ಪ್ರಮುಖಿ) ಎಂಬ ಗುಣಕ್ಕೂ, ಮಮ್ಮೇಲಿಯ (ಸಸ್ತನಿ) ಎಂಬ ವರ್ಗಕ್ಕೂ ಕಶೇರುಕ ಎಂಬ ಉಪವಂಶಕ್ಕೂ, ಕಾರ್ಡೆಟ್‌ಎಂಬ ವಂಶಕ್ಕೂ, ಅನಿಮಾಲಿಯ ಎಂಬ ಉಪರಾಜ್ಯಕ್ಕೂ ಸೇರುತ್ತಾನೆ.

ಪ್ರಸ್ತುತ ಅಭ್ಯಾಸದ ವಿಷಯವಾದ ಕಶೇರುಕಗಳು ಕಾರ್ಡೇಟುಗಳೆಂಬ ವಿಶಾಲ ಗುಂಪಿಗೆ ಸೇರುತ್ತವೆ ಮತ್ತು ಅವುಗಳಿಂದ ವಿಕಾಸಗೊಂಡಿವೆ. ಮೂರು ಮುಖ್ಯ ಲಕ್ಷಣಗಳಿಂದ ಕಾರ್ಡೇಟುಗಳನ್ನು ಗುರುತಿಸಬಹುದು. ಕಾರ್ಡೇಟು ಪ್ರಾಣಿಗಳಲ್ಲಿ ತಲೆಯ ಹಿಂಭಾಗದಿಂದ ಬಾಲದ ತುದಿಯವರೆಗೆ ವಿಸ್ತರಿಸಿದ, ಅನ್ನನಾಳದ ಉರ್ಧ್ವಭಾಗದಲ್ಲಿರುವ, ಬಾಗಬಲ್ಲ ಆದರೆ ಪೆಡುಸಾಗಿದ್ದು ದೇಹಕ್ಕೆ ಆಕಾರ, ಮಾಂಸಖಂಡಗಳು ಅಂಟಿಕೊಳ್ಳಲು ಪೆಡಸು ಸ್ಥಳವನ್ನು ಒದಗಿಸುವ ಸರಳಿನಾಕಾರದ ನೋಟೋಕಾರ್ಡಿದೆ. ಆದುದರಿಂದಲೇ ಇವಕ್ಕೆ ಕಾರ್ಡೇಟುಗಳೆಂದು ಹೆಸರು ಬಂದುದು. ಇದು ಪ್ರಾಣಿಯ ಜೀವನ ಪೂರ್ತಿ ಉಳಿದಿರಬಹುದು ಅಥವಾ ಬಹುಪಾಲು ಕಶೇರುಕಗಳಲ್ಲಿನಂತೆ ಜೀವನದ ಭ್ರೂಣಾವಸ್ಥೆಯಲ್ಲಿ ಮಾತ್ರ ಕಾಣಿಸಿಕೊಂಡು, ಬೆಳವಣಿಗೆಯ ಅನಂತರದ ಹಂತಗಳಲ್ಲಿ ಖಂಡ ತುಂಡವಾದ ಕಶೇರುಸ್ತಂಭಕ್ಕೆ ಅನುವು ಮಾಡಿಕೊಡಬಹುದು. ಆದುದರಿಂದಲೇ ಕಶೇರು ಸ್ತಂಭ (ವರ್ಟಿಬ್ರಲ್‌ಕಾಲಮ್ಸ್) ವಿರುವ ಈ ಗುಂಬಿನ ಪ್ರಾಣಿಗಳನ್ನು ಕಶೇರುಕಗಳೆಂದು ಕರೆದಿದ್ದಾರೆ.

ಇಡೀ ಜೀವನ ಪೂರ್ತಿ ಬಾಗಬಲ್ಲ ನೋಟೊಕಾರ್ಡನ್ನೇ ಉಳಿಸಿಕೊಂಡು ಇಂದಿಗೂ ಬದುಕಿರುವ ಕೆಲವು ಕಾರ್ಡೇಟು ಪ್ರಾಣಿಗಳಿವೆ. ಅವುಗಳನ್ನು ಅದಿಕಾರ್ಡೇಟುಗಳು (ಪೋಟೊಕಾರ್ಡೇಟ) ಎಂದು ಕರೆಯುತ್ತಾರೆ. ಇದರಲ್ಲಿ ಮೂರು ಉಪವಂಶಗಳಿವೆ : ಬಾಯಂಗಳದ ಮೇಲ್ಛಾವಣಿಯಿಂದ ತಲೆಯೊಳಕ್ಕೆ ಚಾಚಿಕೊಂಡಿರುವ ನೋಟೊಕಾರ್ಡನ್ನೊಳಗೊಂಡ ಹೆಮಿಕಾರ್ಡೇಟ (ಉದಾ : ಬೆಲನೊಗ್ಲಾಸಸ್), ಬೆಳವಣಿಗೆಯ ಗೊದಮೊಟ್ಟೆ (ಟ್ಯಾಡ್ ಪೋಲ್) ಅವಸ್ಥೆಯಲ್ಲಿ ಬಾಲದಲ್ಲಿ ಮಾತ್ರ ಇದ್ದು ಪ್ರಬುದ್ಧಾವಸ್ಥೆಯಲ್ಲಿ ಕಳೆದು ಹೋಗುವ ಯೂರೊ ಕಾರ್ಡೇಟ (ಉದಾ : ಕಡಲ ಚುರುಕಿಗಳು) ಮತ್ತು ತಲೆಯ ಭಾಗದಿಂದ ಬಾಲದ ತುದಿಯವರೆಗೆ ಅಖಂಡವಾಗಿ ವಿಸ್ತರಿಸಿದ ನೋಟೊಕಾರ್ಡನ್ನುಳ್ಳ ಸಿಫೆಲೊಕಾರ್ಡೇಟ (ಉದಾ : ಆಂಫಿಯಾಕ್ಸಸ) ಎಂಬವೇ ಮೂರು ಪ್ರೊಟೊಕಾರ್ಡೇಟು ಉಪವಂಶಗಳು.

ಜೀವನದ ಆದಿ ಹಂತಗಳಲ್ಲಿ ಅಥವಾ ಜೀವನ ಪೂರ್ತಿ ನೋಟೊಕಾರ್ಡ ಇರುವುದು ಕಾರ್ಡೇಟುಗಳ ಒಂದು ಮುಖ್ಯ ಲಕ್ಷಣ. ಇದರ ಜೊತೆಗೆ ಎಲ್ಲಾ ಪ್ರಾಣಿಗಳಲ್ಲಿಯೂ ಆಹಾರ ಸೇವನೆಗೆ ನೆರವಾಗುವ, ಆಹಾರ ದೇಹವನ್ನು ಜೀರ್ಣಾಂಗವ್ಯೂಹವನ್ನು ಪ್ರವೇಶಿಸಲು ಮೀಸಲಾದ ‘ಬಾಯಿ’ ಎಂಬ ತೆರವು ಇದೆ. ಕಶೇರುಕಗಳಲ್ಲಿ ಇದು ತೆರಪು ಮಾತ್ರವೇ ಆಗಿರದೆ ಅದಕ್ಕೆ ನಿರ್ದಿಷ್ಟ ಆಕಾರ ಮತ್ತು ಆಹಾರವನ್ನು ಅಗಿಯಲು ಅನುಕೂಲವಾಗುವಂತೆ, ಕಶೇರು ಸ್ತಂಭದ (ನೋಟೊಕಾರ್ಡೀನ ನಂತರದ ರಚನೆ) ಮುಂದಿನ ತುದಿಭಾಗದಿಂದ ಅಥವಾ ಕಿವಿರು ಕೋಣೆಯ ಆಧಾರಕ ಕಂಬ ರಚನೆಗಳಿಂದ ಉದ್ಭವಿಸಿದ ದವಡೆಗಳಿರುವುದು ಮತ್ತೊಂದು ಮುಖ್ಯ ಲಕ್ಷಣ. ಆದರೂ ಕೆಲವು ಆದಿಮ ಕಶೇರುಕ ಗುಂಪಿನ ಪ್ರಾಣಿಗಳಲ್ಲಿ ದವಡೆಗಳಿಲ್ಲದೆ ಬಾಯಿಯು ಒಂದು ಚಕ್ರಕಾರದ ರಚನೆಯನ್ನು ಹೊಂದಿರುವ ಅಗ್ನಾತ (ದವಡೆರಹಿತ) ಅಥವಾ ಸೈಕ್ಲೊಸ್ಟೊಮೇಟ (ಚಕ್ರಾಸ್ಯ) ಉಪವಂಶವಿದೆ. ಈ ಉಪವಂಶಕ್ಕೆ ಲ್ಯಾಂಪ್ರೆ ಮತ್ತು ಪೆಟ್ರೊಮೈಜಾನ್‌ಗಳೆಂಬ ಮೀನು ರೂಪದ ಕಡಲುವಾಸಿ ಪ್ರಾಣಿಗಳು ಸೇರುತ್ತವೆ. ಈ ಪ್ರಾಣಿಗಳು ತಮ್ಮ ಸಹಚರಿ ಜಲಚರಿಗಳಾದ ದೊಡ್ಡ ಮೀನುಗಳ ದೇಹಕ್ಕೆ ತಮ್ಮ ಹೀರುಬಟ್ಟಲು ರೂಪದ ಬಾಯಿಂದ ಅಂಟಿಕೊಂಡು ಬಾಯಂಗಳದಲ್ಲಿರುವ ಹಲ್ಲುಗಳಿಂದ ಅಂಟಿಕೊಂಡ ಜಲಚರಿ ಪ್ರಾಣಿಯ ದೇಹವನ್ನು ಕೊರೆದು ಅವುಗಳ ರಕ್ತವನ್ನು ಹೀರಿ ಬದುಕುತ್ತದೆ. ಈ ಪ್ರಾಣಿಗಳು ಪ್ರಪಂಚದ ಕೆಲವು ಕಡಲುಗಳಲ್ಲಿ ಮಾತ್ರವಿದ್ದು ಕರ್ನಾಟಕ, ಭಾರತದ ಕರಾವಳಿಯಲ್ಲೆಲ್ಲೊ ಕಾಣಸಿಗವು.

ಈಗ ನಾವು ಅಭ್ಯಸಿಸಲಿರುವ ಕಶೇರುಕಗಳನ್ನು ಗ್ನಾತೊಸ್ಟೊಮೇಟ (ದವಡೆಸಹಿತ) ಎಂಬ ಹೆಸರಿನಿಂದಲೂ ಕರೆಯುವುದುಂಟು.

ನಮ್ಮ ಅಭ್ಯಾಸ ‘ಕರ್ನಾಟಕದ ಕಶೇರುಕ’ಗಳಿಗೆ ಸೀಮಿತ ಹೌದು. ಆದರೂ ಕಶೇರುಕಗಳ ಸಾಮಾನ್ಯ ಲಕ್ಷಣಗಳನ್ನು ಅಂದರೆ ಎಲ್ಲ ಕಶೇರುಕಗಳಿಗೂ ಉಭಯ ಸಾಮಾನ್ಯವಾದ ಲಕ್ಷಣಗಳ ವಿಷಯಗಳನ್ನು ತಿಳಿದುಕೊಳ್ಳುವ ಅಗತ್ಯವಿದೆ.

ಹಿಂದೆ ತಿಳಿಸಿದಂತೆ ಈ ಪ್ರಾಣಿಗಳಲ್ಲಿ ಅನೇಕ ಕಶೇರು ಮಣಿಗಳು (ವರ್ಟಿಬ್ರ) ಕೂಡಿ ಉಂಟಾದ ಕಶೇರುಸ್ತಂಭ (ವರ್ಟಿಬ್ರಲ್ ಕಾಲಮ್ನ) ಇರುವುದರಿಂದ ಇವುಗಳನ್ನು ಕಶೇರುಕಗಳು (ವರ್ಟಿಬ್ರೇಟ) ಎಂದು ಕರೆಯುತ್ತಾರೆ. ಬೆಳವಣಿಗೆಯ ಆದಿ ಅವಸ್ಥೆಯಲ್ಲಿ ಕಾಣಿಸಿಕೊಳ್ಳುವ ಆದಿಯ ಅನ್ನನಾಳದ ಊರ್ಧ್ವಭಿತ್ತಿಯಿಂದ ಮೇಲಕ್ಕೆ ಚಾಚಿದ, ಊರ್ಧ್ವ ಭಾಗ ಅನ್ನನಾಳದಿಂದ ಬೇರ್ಪಟ್ಟು ನೋಟೊಕಾರ್ಡ ಆಗಿ ರೂಪುಗೊಳ್ಳುತ್ತದೆ. ಆನಂತರದ ಬೆಳವಣಿಗೆಯ ಹಂತಗಳಲ್ಲಿ ನೋಟೊಕಾರ್ಡಿನಿಂದ ಉದ್ಭವಿಸಿದ ಕಶೇರುಸ್ತಂಭ ಕಾಣಿಸಿಕೊಳ್ಳುತ್ತದೆ. ನೋಟೊಕಾರ್ಡು ವ್ಯವಸ್ಥಿತ ರೀತಿಯಲ್ಲಿ ತುಂಡು ರಚನೆಗಳಾಗಿ ಈ ತುಂಡುಗಳು ಅನುಕೂಲವಾದ ರೀತಿಯಲ್ಲಿ ಒಂದಕ್ಕೊಂದು ಕೀಲಿಕೊಂಡು ಕಶೇರುಸ್ತಂಭ ರೂಪುಗೊಳ್ಳುತ್ತದೆ. ಹೀಗೆ ಬಾಗಬಲ್ಲ ಆದರೆ ಪೆಡಸು ರಚನೆಯಾಗಿ ದೇಹಕ್ಕೆ ನಿರ್ದಿಷ್ಟ ಆಕಾರ, ಆಧಾರ ಒದಗಿಸುತ್ತಿದ್ದ ಸರಳಿನಾಕಾರದ ನೋಟೊಕಾರ್ಡ ಖಂಡ ವಿಂಗಡಣೆಗೊಂಡು, ಹೆಚ್ಚು ಬಾಗುವಿಕೆ, ವ್ಯವಸ್ಥಿತ ಆಧಾರ, ಮತ್ತು ಮಾಂಸಖಂಡಗಳು ಅಂಟಿಕೊಳ್ಳಲು ಗಟ್ಟಿಯಾದ ಮೇಲ್ಮೈಯನ್ನು ಒದಗಿಸುವ ಕಶೇರುಸ್ತಂಭ ಮತ್ತು ಅನಂತರ ಇದರಿಂದಲೇ ಉದ್ಭವಿಸಿ ರೂಪಗೊಳ್ಳುವ ಅಸ್ಥಿಪಂಜರಕ್ಕೆ ಅನುವು ಮಾಡಿಕೊಡುತ್ತದೆ.

ಅಸ್ಥಿಪಂಜರ ಮೂಲತಃ ಸಂಯೋಜಕ ಅಂಗಾಂಶದಿಂದ ಬೆಳದ ರಚನೆ. ಅಸ್ಥಿಪಂಜರದಲ್ಲಿ ಎರಡು ವಿಧ. ತುಸು ಮೃದುವಾದ ಮತ್ತು ಬಹುಪಾಲು ಕಶೇರುಕಗಳ ಬೆಳವಣಿಗೆಯ ಆದಿಹಂತಗಳಲ್ಲಿ ಕಾಣಿಸಿಕೊಳ್ಳುವ ಮೃದ್ವಸ್ಥಿ (ಕಾರ್ಟಿಲೇಜ್‌) ಯದಾಗಿರಬಹುದು. ಇಲಾಸ್ಮೊಬ್ರಾಂಕಿಗಳಲ್ಲಿ ಜೀವನ ಪೂರ್ತಿ ಮೃದ್ವಸ್ಥಿ ಅಸ್ಥಿಪಂಜರವಿರುತ್ತದೆ. ಆದರೆ ಉಳಿದ ಬಹುಪಾಲು ಕಶೇರುಕಗಳಲ್ಲಿ ಬೆಳವಣಿಗೆಯ ಆದಿ ಹಂತಗಳಲ್ಲಿ ಮೃದ್ವಸ್ಥಿ ಅಸ್ಥಿಪಂಜರ ಭಾಗಗಳು ಕಾಣಿಸಿಕೊಂಡು ಅನಂತರದ ಹಂತಗಳಲ್ಲಿ ಅವುಗಳ ಸ್ಥಾನದಲ್ಲಿ ಮೂಳೆಯ ಅಸ್ಥಿಪಂಜರ ಕಾಣಿಸಿಕೊಳ್ಳುತ್ತದೆ. ಕಶೇರುಸ್ತಂಭದ ಮುಂಭಾಗದಲ್ಲಿ ಮಿದುಳು ಮತ್ತು ಇತರ ಸಂವೇದನಾಂಗಗಳಾದ ಕಣ್ಣುಗಳು, ಕರ್ಣೇಂದ್ರಿಯಗಳು, ರಸನೇಂದ್ರಿಯಗಳಿಗೆ ರಕ್ಷಣೆ ಒದಗಿಸುವ ಕವಚಕೋಶಗಳು, ಕಿವಿರು ರಂಧ್ರಗಳ ಗೋಡೆಯಲ್ಲಿನ ಮೂಳೆ ಆಧಾರ ರಚನೆಗಳಿಂದ ದವಡೆಗಳು ಬೆಳೆದು, ಇವೆಲ್ಲ ಕೂಡಿ ತಲೆಬುರುಡೆ (ಸ್ಕಲ್‌), ಕಶೇರುಸ್ತಂಭ ಮತ್ತು ಕೈಕಾಲುಗಳ ಆಧಾರವಾದ ಮೂಳೆ ಸಮೂಹಗಳು ಸೇರಿ ಅಸ್ಥಿಪಂಜರವಾಗಿದೆ.

ಅಸ್ಥಿಪಂಜರವು ದೇಹದ ಆಕಾರವನ್ನು ಸಂರಕ್ಷಿಸಲು ನೆರವಾಗುತ್ತದೆ. ದೇಹದ ಮಾಂಸಖಂಡಗಳು ಸಮರ್ಥ ರೀತಿಯಲ್ಲಿ ತಮ್ಮ ಸಂಕುಚನ ಕ್ರಿಯೆಯನ್ನು ನಿರ್ವಹಿಸಲು ಅನುಕೂಲವಾಗುವಂತೆ, ಅವು ಅಂಟಿಕೊಳ್ಳಲು. ಗಟ್ಟಿಯಾದ ಪ್ರದೇಶವನ್ನು ಒದಗಿಸುತ್ತವೆ. ಉಳಿದ ಅಂಗಾಂಗಳಿಗೆ ರಕ್ಷಣಾ ಆವರಣ ಸೃಷ್ಟಿಸುತ್ತವೆ.

ಅಕಶೇರುಕಗಳಿಗೆ ಹೋಲಿಸಿದರೆ ಅವುಗಳಲ್ಲಿಯೂ ಇರುವ ಆದರೆ ಅವುಗಳಿಂದ ಭಿನ್ನವಾದ ನರಮಂಡಲವಿದೆ. ನರಮಂಡಲದ ಮುಖ್ಯ ಭಾಗವಾದ ಮಿದುಳು ತಲೆಯ ಭಾಗದಲ್ಲಿದ್ದರೆ, ಅದರ ಹಿಂದಿನಿಂದ ಬಾಲದ ತುದಿಯವರೆಗೆ ಹರಡುವ ನರಹುರಿಯು ಕಶೇಕರುಗಳಲ್ಲಿ ಅನ್ನನಾಳದ ಊರ್ಧ್ವಭಾಗದಲ್ಲಿದೆ ಮತ್ತು ಅದು ಟೊಳ್ಳಾದ ನಳಿಕೆಯಂತಿದೆ ಅಕಶೇರುಕಗಳ ನರಹುರಿಯು ಗಟ್ಟಿಯಾದ ರಚನೆ ಮತ್ತು ಅನ್ನನಾಳದ ಅಧೋಭಾಗದಲ್ಲಿದೆ. ಕಶೇರುಕಗಳ ನರಹುರಿಯು ಕಶೇರು ಮಣಿಗಳಿಂದ ಮೇಲಕ್ಕೆ ಚಾಚಿದ ಕಮಾನುಗಳು ಪರಸ್ಪರ ಕೂಡಿ ರಚಿಸುವ ನಾಲೆಯೊಳಗೆ ಸೇರಿ ಸುರಕ್ಷಿತವಾಗಿದೆ.

ಕಶೇರು ನರಮಂಡಲದಲ್ಲಿ ಕೇಂದ್ರ ನರಮಂಡಲ ಮತ್ತು ಪರಿಧಿಯ ನರಮಂಡಲಗಳೆಂಬ ಎರಡು ಮುಖ್ಯ ಭಾಗಗಳಿವೆ. ಮಿದುಳು ಮತ್ತು ನರಹುರಿಗಳು ಕೇಂದ್ರ ನರಮಂಡಲದ ಭಾಗಗಳಾದರೆ, ಮಿದುಳಿನಿಂದ ತಲೆಯಲ್ಲಿರುವ ಸಂವೇದನಾಂಗಗಳಿಗೆ, ಸ್ನಾಯುಗಳಿಗೆ ಹರಡುವ ಕಪಾಲ ನರಗಳು ಮತ್ತು ನರಹುರಿಯಿಂದ ಆಯಾ ಭಾಗದ ಅಂಗಗಳಿಗೆ, ಮಾಂಸಗಳಿಗೆ ಹರಡುವ ಸ್ಪೈನಲ್‌ನರಗಳು ಪರಿಧಿಯ ನರಮಂಡಲ ಭಾಗದ ಅಂಶಗಳಾಗುತ್ತವೆ. ಮೀನುಗಳು ಮತ್ತು ಉಭಯಚರಿಗಳಲ್ಲಿ ಹತ್ತು ಜೊತೆ ಕಪಾಲ ನರಗಳಿದ್ದರೆ ಉಳಿದ ಕಶೇರುಕಗಳಲ್ಲಿ ಹನ್ನೆರಡು ಜೊತೆ ಕಪಾಲ ನರಗಳಿವೆ.

ಆದಿ ಕಾರ್ಡೇಟುಗಳು, ಅಗ್ನಾತ ಮತ್ತು ಮೀನುಗಳು ಸಂಪೂರ್ಣ ಜಲವಾಸಿಗಳು. ಈ ಪ್ರಾಣಿಗಳು ತಮ್ಮ ಉಸಿರಾಟಕ್ಕೆ ನೀರನ್ನು ಬಳಸುತ್ತವೆ. ನೀರಿನಲ್ಲಿರುವ ಆಕ್ಷಿಜೆನ್‌ಅನ್ನು ಪ್ರತ್ಯೇಕಿಸಿ ಬಳಸಿಕೊಳ್ಳುವ ಕಿವಿರುಗಳೆಂಬ ಶ್ವಾಸಾಂಗಗಳಿವೆ. ಮೀನುಗಳಲ್ಲಿ ಕಿವಿರುಗಳು ಗಂಟಲ ಭಾಗದಲ್ಲಿ ಅನ್ನನಾಳಕ್ಕೂ ಹೊರ ದೇಹಭಿತ್ತಿಗೂ ನಡುವೆ, ಫ್ಯಾರಿಂಕ್ಸ್‌ಭಾಗವು ವಿಸ್ತರಿಸಿ ನಿರ್ಮಾಣದ ಕೋಣೆಗಳಲ್ಲಿ ವ್ಯವಸ್ಥಿತವಾಗಿವೆ. ಇವುಗಳಿಗೆ ಸದಾ ನೀರು ಸರಬರಾಜು ಆಗಬೇಕು, ಹೊಸ ನೀರು ಬರುತ್ತಿರಬೇಕು, ಉಸಿರಾಟಕ್ಕೆ ಬಳಕೆಯಾದ ಹಳೆಯ ನೀರು ಹೊರಹೋಗಬೇಕು. ಇದಕ್ಕೆ ಮೀನುಗಳು ಸುಲಭವಾದ ವ್ಯವಸ್ಥೆ ಮಾಡಿಕೊಂಡಿವೆ. ಫ್ಯಾರಿಂಕ್ಸಿನ್‌ಭಿತ್ತಿಯಲ್ಲಿ ಕಿವಿರುಕೋಣೆಗಳಿಗೆ ಸಂಪರ್ಕ ಏರ್ಪಡಿಸಿ ತೆರೆಯುವ ರಂಧ್ರಗಳಿವೆ. ಉಸಿರಾಟದ ನೀರು ನಿರ್ಗಮಿಸಲು ಕಿವಿರುಕೋಣೆಯ ಹೊರಭಿತ್ತಿಯಲ್ಲಿ, ಗಂಟಲ ಭಾಗದಲ್ಲಿ ಹೊರ ಕಿವಿರು ರಂಧ್ರಗಳಿವೆ. ಉಸಿರಾಟದ ದೆಸೆಯಿಂದಾಗಿ ಮೀನುಗಳು ಬಾಯಿಯ ಮೂಲಕ ನೀರನ್ನು ನುಂಗುತ್ತಿರುತ್ತವೆ. ನೀರಿನಲ್ಲಿರುವ ಆಹಾರ ವಸ್ತುಗಳನ್ನು ಗಂಟಲ ಮೂಲಕ ಜಠರಕ್ಕೆ ಕಳುಹಿಸಿ ನೀರು ಒಳಕಿವಿರುಗಳ ರಂಧ್ರಗಳ ಮೂಲಕ ಕಿವಿರು ಕೋಣೆಗಳನ್ನು ಪ್ರವೇಶಿಸಿ, ಕಿವಿರುಗಳ ಮೇಲೆ ಹರಿದು, ತನ್ನಲ್ಲಿರುವ ಆಮ್ಲಜನಕವನ್ನು ಬಿಟ್ಟುಕೊಟ್ಟು, ಅಲ್ಲಿಗೆ ಬರುವ ರಕ್ತದಲ್ಲಿರುವ ಕಾರ್ಬನ್‌ಡೈ ಆಕ್ಸೈಡ್‌(CO2­­) ಅನ್ನು ಹೀರಿಕೊಂಡು ಹೊರ ಕಿವಿರು ರಂಧ್ರಗಳ ಮೂಲಕ ನಿರ್ಗಮಿಸುತ್ತದೆ. ಈ ಕಿವಿರು ರಂಧ್ರಗಳಿರುವುದು ಕಶೇರುಕಗಳ (ಕಾರ್ಡೇಟುಗಳ) ಮತ್ತೊಂದು ಪ್ರಮುಖ ಲಕ್ಷಣ. ಮೀನುಗಳಂತಹ ಕಶೇರುಕಗಳಲ್ಲಿ ಕಿವಿರು ರಂಧ್ರಗಳು ಇಡೀ ಜೀವನ ಇರುತ್ತವೆ. ಇದು ಸಹಜ, ಸ್ವಾಭಾವಿಕ ಆದರೆ ಉಳಿದ ಕಶೇರುಕಗಳಲ್ಲಿ ಕಿವಿರುರಂಧ್ರಗಳು ಬೆಳೆಯುವ ಭ್ರೂಣಾವಸ್ಥೆಯಲ್ಲಿ ಮಾತ್ರ ಕಾಣಿಸಿಕೊಂಡು ಅನಂತರದ ಹಂತಗಳಲ್ಲಿ ಕಣ್ಮರೆಯಾಗುತ್ತವೆ. ಕಪ್ಪೆಗಳ ಲಾರ್ವ ಗೊದಮೊಟ್ಟೆಗಳು ನೀರಿನಲ್ಲಿ ಜೀವಿಸಿ ಬೆಳೆಯುತ್ತವೆ. ಅವುಗಳಲ್ಲಿ ಕಿವಿರುಗಳು ಶ್ವಾಸಾಂಗಗಳಾಗಿ ಬೆಳೆಯುತ್ತವೆ. ಇದನ್ನು ಒಪ್ಪಿಕೊಳ್ಳಬಹುದು. ಗೊದಮೊಟ್ಟೆಗಳು ನೀರಿನಲ್ಲಿ ಜಲಚರಿಗಳಂತೆ ಸ್ವಲ್ಪ ಕಾಲ ಬದುಕುವುದರಿಂದ ಇವುಗಳಲ್ಲಿ ಕಿವಿರುಗಳು, ಕಿವಿರು ರಂಧ್ರಗಳು ಇರಬಹುದಾದರೂ, ನೀರಿನ ಸಂಪರ್ಕವೇ ಇಲ್ಲದೆ ನೆಲದ ಮೇಲೆ, ಮೊಟ್ಟೆಯ ಚಿಪ್ಪಿನ ಒಳಗೆ ಬೆಳೆಯುವ, ಸರೀಸೃಪಗಳು ಮತ್ತು ಪಕ್ಷಿಗಳಲ್ಲಿ ಹಾಗೂ ತಾಯಿಯ ಗರ್ಭದಲ್ಲಿ ಬೆಳೆಯುವ ಭ್ರೂಣಗಳಲ್ಲಿಯೂ ಒಂದು ಅವಸ್ಥೆಯಲ್ಲಿ ಕಿವಿರು ರಂಧ್ರಗಳು ಕಾಣಿಸಿಕೊಂಡು ಅನಂತರದ ಬೆಳವಣಿಗೆಯಲ್ಲಿ ಕಣ್ಮರೆಯಾಗುತ್ತವೆ. ಕಿವಿರು ರಂಧ್ರಗಳು ಕಾಣಿಸಿಕೊಳ್ಳುವುದು ಮುಂದಿನ ಬೆಳವಣಿಗೆ ಮತ್ತು ಅಂಗೋದ್ಭವ ಉದ್ದೇಶದಿಂದ ಅಗತ್ಯವೂ ಹೌದು. ಹೀಗಾಗಿ ಜೀವನ ಪೂರ್ತಿ ಅಥವಾ ಜೀವನದ ಬೆಳವಣಿಗೆಯ ಆದಿ ಹಂತಗಳಲ್ಲಿ ಮಾತ್ರವಾದರೂ ಕಿವಿರು ರಂಧ್ರಗಳಿರುವುದು ಕಶೇರುಕಗಳ ಮತ್ತೊಂದು ಮುಖ್ಯ ಲಕ್ಷಣ.

ಅಂತಃಅಸ್ಥಿಪಂಜರದ ಕಶೇರುಸ್ತಂಭ (ನೋಟೊಕಾರ್ಡ್‌), ನರಮಂಡಲದ ಭಾಗ ದೇಹದ ಊರ್ಧ್ವಭಾಗದ ಬೆನ್ನು ಹುರಿ, ಮತ್ತು ಕಿವಿರು ರಂಧ್ರಗಳು ಕಾರ್ಡೇಟುಗಳ ಪ್ರಮುಖ ಲಕ್ಷಣಗಳು. ಇವುಗಳ ಜೊತೆಗೆ, ಮೇಲೆ ತಿಳಿಸಿದ ಲಕ್ಷಣಗಳಷ್ಟು ನಿರ್ದಿಷ್ಟವಲ್ಲವಾದರೂ, ಅಕಶೇರುಕಗಳಿಂದ ಭಿನ್ನವಾಗಿ ಬೆಳೆದ ರಕ್ತ ಪರಿಚಲನಾ ಮಂಡಲ, ವಿಸರ್ಜನಾ ಮಂಡಲ ಮತ್ತು ಸಂತಾನೋತ್ಪತ್ತಿಯ ಅಂಗಗಳನ್ನೂ ಕಶೇರುಕಗಳು ನಿರ್ದಿಷ್ಟವಾಗಿ ಪಡೆದಿವೆ.

ಕಶೇರುಕಗಳ ರಕ್ತ ಪರಿಚಲನಾ ಮಂಡಲದಲ್ಲಿ ಅಭಿದಮನಿ, ಅಪಧಮನಿಗಳ ಜೊತೆಗೆ ರಕ್ತವನ್ನು ಸಂಗ್ರಹಿಸಿ, ಆಕ್ಷಿಜನೀಕರಿಸಿ, ದೇಹದ ವಿವಿಧ ಭಾಗಗಳಿಗೆ ಕಳುಹಸಿಕೊಡುವ, ಪಂಪಿನಂತೆ ವರ್ತಿಸುವ ಹೃದಯವಿರುವುದು ಮುಖ್ಯ. ಇದು ವಿವಿಧ ವರ್ಗದ ಪ್ರಾಣಿಗಳಲ್ಲಿ ಭಿನ್ನವಾಗಿ, ಭಿನ್ನ ಸಂಖ್ಯೆಯ ಕೋಣೆಗಳಿದ್ದು, ಮಲಿನ ಮತ್ತು ಶುದ್ಧ ರಕ್ತವನ್ನು ಬೇರ್ಪಡಿಸುವ ಪ್ರಯತ್ನ ನಡೆದಿದೆ.

ವಿಸರ್ಜನಾಂಗಗಳು ಮತ್ತು ಸಂತಾನೋತ್ಪತ್ತಿ ಅಂಗಗಳಿಗೆ ಸಂಬಂಧಿಸಿದಂತೆ, ಎರಡೂ ಹೊಂದಿಕೊಂಡು ಸಮಗ್ರ ಮೂತ್ರ ಪ್ರಜನನ (ಯೂರೊಜೆನೈಟಲ್‌) ಅಂಗ ರಚನೆ ರೂಪಗೊಂಡಿದೆ. ಮುಖ್ಯ ವಿಸರ್ಜನಾಂಗಗಳು ಮೂತ್ರ ಪಿಂಡಗಳು. ಅಕಶೇರುಕಗಳ ವಿಸರ್ಜನಾಂಗಗಳಿಗೂ ಕಶೇರುಕಗಳ ಮೂತ್ರಪಿಂಡಗಳಿಗೂ ವ್ಯತ್ಯಾಸವಿದೆ. ಆದರೂ ಅವುಗಳ ಬೆಳವಣಿಗೆಯ ಮೂಲ ರಚನೆಯನ್ನು ವಲಯವಂತಗಳ (ಅನೆಲಿಡ) ವಿಸರ್ಜನಾಂಗಗಳ ಹೆಸರು ಮೂಲದಿಂದ ಹೆಸರಿಸಿದ್ದಾರೆ. ಎರೆಹುಳು, ಜಿಗಣೆಗಳನ್ನೊಳಗೊಂಡ ವಲಯವಂತಗಳ ನೆಫ್ರಿಡಿಯಂ ಮೂಲವಿರಬಹುದಾದ, ಕಶೇರುಕಗಳ ಮೂತ್ರಪಿಂಡ ಮೂಲ ರಚನೆಯನ್ನು ನೆಫ್ರಾನ್‌ಗಳೆಂದು ಕರೆಯುತ್ತಾರೆ. ಇಲ್ಲಿ ನೆಫ್ರಾನ್‌ಗುಂಪುಗಳು ದೇಹದ ಎಡಬಲ ಪಕ್ಕಗಳಲ್ಲಿ ಕಾಣಿಸಿಕೊಂಡು, ಅವುಗಳ ವಿಸರ್ಜನಾ ತುದಿಗಳು ಒಡಗೂಡಿ ಒಂದೊಂದು ಪಕ್ಕಕ್ಕೂ ಒಂದು ಉಭಯ ಸಾಮಾನ್ಯನಾಳದ ಮೂಲಕ ಹೊರಕ್ಕೆ ತೆರೆಯುತ್ತವೆ. ಈ ನೆಫ್ರಾನ್‌ಗಳು ಬೆಳವಣಿಗೆಯ ಆದಿ, ಮಧ್ಯ ಮತ್ತು ಅನಂತರದ ಹಂತಗಳಲ್ಲಿ ಕಾಣಿಸಿಕೊಳ್ಳುತ್ತವೆ. ಜೊತೆಗೆ ಅವು ಅಗ್ರಪಶ್ಚ ಅಕ್ಷದಲ್ಲಿಯೂ ಮುಂದೆ, ನಡುವೆ ಮತ್ತು ಹಿಂದೆ ಕಾಣಿಸಿಕೊಳ್ಳುತ್ತವೆ. ಇವುಗಳನ್ನು ಕ್ರಮವಾಗಿ ಪ್ರೊನೆಫ್ರಾಸ್‌, ಮೀಸೊನೆಫ್ರಾಸ್‌ಮತ್ತು ಮೆಟನೆಫ್ರಾಸ್‌ಗಳೆಂದೂ, ಮೂತ್ರವಾಹಿನಿಗಳಾಗಿ ವರ್ತಿಸುವ ಅವುಗಳ ನಾಳಗಳನ್ನು ಕ್ರಮವಾಗಿ ಪ್ರೊನೆಫ್ರಿಕ್‌, ಮೀಸೊನೆಫ್ರಿಕ್‌ಮತ್ತು, ಮೆಟನೆಫ್ರಿಕ್ ನಾಳಗಳೆಂದು ಹೆಸರಿಸಲಾಗಿದೆ. ಇದರಲ್ಲಿ ಒಂದು ವಿಶೇಷವೆಂದರೆ ಯಾವೆರಡು ನೆಫ್ರಾಸ್‌ಗಳು ಒಟ್ಟಾಗಿ ಏಕಕಾಲದಲ್ಲಿ ವಿಸರ್ಜನಾಂಗಗಳಾಗಿ ಕಾರ್ಯನಿರ್ವಹಿಸುವುದಿಲ್ಲ. ಪ್ರೊನೆಫ್ರಾಸ್‌ಪೂರ್ಣವಾಗಿ ಭ್ರೂಣಾವಸ್ಥೆಯ ವಿಸರ್ಜನಾಂಗ. ಮೀನುಗಳು ಮತ್ತು ಉಭಯಚರಿಗಳಲ್ಲಿ ಪ್ರಬುದ್ಧಾವಸ್ಥೆಯಲ್ಲಿ ಮೀಸೊನೆಫ್ರಾಸ್‌ಗಳು ಮೂತ್ರಪಿಂಡಗಳಾಗಿ ವರ್ತಿಸುತ್ತಿವೆ. ಸರೀಸೃಪಗಳು, ಪಕ್ಷಿಗಳು ಮತ್ತು ಸಸ್ತನಿಗಳಲ್ಲಿ ಮೆಟನೆಫ್ರಾಸ್‌ಪ್ರಬುದ್ಧಾವಸ್ಥೆಯ ಮೂತ್ರಪಿಂಡಗಳಾಗಿ ಕಾರ್ಯನಿರ್ವಹಿಸುತ್ತವೆ. ಬೆಳವಣಿಗೆಯಲ್ಲಿ ಪ್ರೊನೆಫ್ರಾಸ್‌ಕಣ್ಮರೆಯಾಗಿ ಮೀಸೊ ಅಥವಾ ಮೆಟನೆಫ್ರಾಸ್‌ಗಳು ಪ್ರಬುದ್ಧಾವಸ್ಥೆಯ ಮೂತ್ರಪಿಂಡಗಳಾಗಿ ಕಾಣಿಸಿಕೊಂಡರೂ ಪ್ರೊನೆಫ್ರಿಕ್‌ನಾಳವು ಕಣ್ಮರೆಯಾಗದೆ ಉಳಿದು ಶುಕ್ರವಾಹಕವಾಗಿ ಪುರುಷಾಣು ಅಥವಾ ಅಂಡವಾಹಿನಿಯಾಗಿ ಅಂಡಾಣುಗಳನ್ನು ಸಾಗಿಸಲು ನೆರವಾಗತ್ತದೆ ಹೀಗೆ ವಿಸರ್ಜನಾಂಗಗಳಿಗೂ ಸಂತಾನೋತ್ಪತ್ತಿಯ ಅಂಗಗಳಿಗೂ ನಡುವೆ ಸಂಬಂಧ ಏರ್ಪಟ್ಟು ವಿಸರ್ಜನಾ ಮತ್ತು ಪ್ರಜನನ ಮಂಡಲಗಳನ್ನು ಮೂತ್ರಪ್ರಜನನಾ (ಯೂರೊಜೆನೈಟಲ್‌) ಮಂಡಲವೆಂದು ಅಭ್ಯಾಸ ಮಾಡುತ್ತಾರೆ.

ಸಸ್ತನಿಗಳ ವಿನಹ ಉಳಿದೆಲ್ಲ ಕಶೇರುಕಗಳು ಅಂಡಜಗಳು. ಅಂದರೆ ಅವೆಲ್ಲವೂ ಮೊಟ್ಟೆ ಇಡುತ್ತವೆ. ಸ್ವಲ್ಪ ಮಟ್ಟಿಗೆ ಸರೀಸೃಪಗಳು ಮತ್ತು ಪಕ್ಷಿಗಳು ತಮ್ಮ ಮೊಟ್ಟೆಗಳ ರಕ್ಷಣೆಯತ್ತ ಗಮನ ಕೊಡುತ್ತವೆ. ಸರೀಸೃಪಗಳು ಮೊಟ್ಟೆಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಇಡುವತ್ತ ಗಮನ ನೀಡಿದರೆ, ಪಕ್ಷಿಗಳು ಮೊಟ್ಟೆ ಇಡಲು ಗೂಡು ಕಟ್ಟಿ, ಕಾವು ಕೊಟ್ಟು ಮರಿಗಳಿಗೆ ಗುಟುಕು ಕೊಟ್ಟು ಬೆಳುಸವತ್ತ ಗಮನ ಹರಿಸುತ್ತವೆ. ಮೀನುಗಳು ಸಾವಿರ ಸಂಖ್ಯೆಯಲ್ಲಿ ಸಣ್ಣ ಮೊಟ್ಟೆಗಳನ್ನಿಟ್ಟರೆ, ಉಭಯಚರಿಗಳು ನೂರಾರು, ಸರೀಸೃಪಗಳು ಹತ್ತಾರು ಮತ್ತು ಪಕ್ಷಿಗಳು ಕೆಲವಾರು ಮೊಟ್ಟೆಗಳನ್ನಿಡುತ್ತವೆ ಮೊಟ್ಟೆಗಳ ಸಂಖ್ಯೆ ಕಡಿಮೆಯಾದಂತೆ ಅವುಗಳ ಗಾತ್ರ ಹೆಚ್ಚುತ್ತದೆ. ಮೊಟ್ಟೆಗಳೊಳಗೆ ಬೆಳೆಯುತ್ತಿರುವ ಭ್ರೂಣದ ಉಪಯೋಗಕ್ಕೆಂದು ಕೂಡಿಡುವ ಆಹಾರದ ದೆಸೆಯಿಂದ ಅವುಗಳ ಗಾತ್ರವು ಹೆಚ್ಚುತ್ತದೆ. ಸಸ್ತನಿಗಳು ಜರಾಯುಜಗಳು. ಅವು ನಿಷೇಚಿತ ತತ್ತಿಗಳನ್ನು ತಾಯಿ ಪ್ರಾಣಿಯ ಗರ್ಭಕೋಶದಲ್ಲಿ ಉಳಿಸಿಕೊಂಡು ರಕ್ಷಿಸಿ, ಪೋಷಿಸಿ ಪೂರ್ಣ ಬೆಳೆದ ಮರಿಗಳನ್ನು ಈಯುತ್ತವೆ. ಎಳೆಯ ಮರಿಗಳಿಗೆ ತಾಯಿ ಪ್ರಾಣಿಯ ಸ್ತನಗಳಲ್ಲಿ ಉತ್ಪತ್ತಿಯಾಗುವ ಹಾಲುಣಿಸಿ ಬೆಳಸುತ್ತವೆ.

ಕಾರ್ಡೇಟ ಉಪವಂಶವನ್ನು ಐದು ವರ್ಗಗಳಾಗಿ ವರ್ಗೀಕರಿಸಿದೆ.

ವರ್ಗ ೧ : ಮೀನುಗಳು
ವರ್ಗ ೨ : ಉಭಯ ಚರಿಗಳು : ಉದಾ : ಕಪ್ಪೆಗಳು
ವರ್ಗ ೩ : ಸರೀಸೃಪಗಳು : ಉದಾ : ಹಲ್ಲಿ, ಹಾವು, ಆಮೆ, ಮೊಸಳೆ
ವರ್ಗ ೪ : ಪಕ್ಷಿಗಳು
ವರ್ಗ ೫ : ಸಸ್ತನಿಗಳು : ಉದಾ : ನಾಯಿ, ಬೆಕ್ಕು, ಆಕಳು, ಆನೆ ಇತ್ಯಾದಿ.