ಒಂದು ದೇಶದ ಸ್ವಾಭಾವಿಕ ಸಂಪತ್ತು ಆ ದೇಶದ ಏಳಿಗೆ, ಪ್ರಗತಿಪರ ಬೆಳವಣಿಗೆ ಮತ್ತು ಅಭಿವೃದ್ಧಿಗಳಿಗೆ ಆಧಾರವಾಗುತ್ತದೆ. ಒಂದು ದೇಶ ತನ್ನ ಸ್ವಾಭಾವಿಕ ಸಂಪತ್ತನ್ನು ಹೇಗೆ ಬಳಸಿಕೊಳ್ಳುತ್ತದೆ ಎಂಬುದರ ಆಧಾರದ ಮೇಲೆ ಆ ದೇಶದ ಅಭಿವೃದ್ಧಿಯನ್ನು ತಿಳಿಯಬಹುದು. ದೇಶದ ನೆಲ-ಜಲಗಳಲ್ಲಿ ದೊರಕುವ ಖನಿಜಗಳು, ಅಲ್ಲಿ ವಾಸಿಸುವ ಪ್ರಾಣಿಗಳು, ಬೆಳೆಯುವ ಮರ-ಗಿಡಗಳು ಅದರ ಸ್ವಾಭಾವಿಕ ಸಂಪತ್ತು.

ಇದನ್ನು ಗ್ರಹಿಸಿದ ಸ್ವಾತಂತ್ರ್ಯ ಪೂರ್ವದ ಮೈಸೂರು ರಾಜ್ಯದ ಘನ ಸರ್ಕಾರ ‘ಮೈಸೂರು ಗೆಜಟೀರ್’ [ಭೂವಿವರ ನಿಘಂಟು] ಗ್ರಂಥವನ್ನು ಪ್ರಕಟಿಸುತ್ತಿತ್ತು. ಇದರಲ್ಲಿ ೧೯ನೇ ಶತಮಾನದ ಲ್ಯೂಯಿಸರ್ ರೈಸ್, ಆನಂತರ ೨೦ನೇ ಶತಮಾನದ ಹಯವದನರಾಯರು ಸಂಪಾದಿಸಿದ ಗೆಜಟೀರ್ ಗಳು ಮೈಸೂರು ರಾಜ್ಯದ ಸರ್ವತೋಮುಖ ಸಮೀಕ್ಷಾ ವರದಿಗಳನೊಳಗೊಂಡು ರಾಜ್ಯದ ಬೆಳವಣಿಗೆ ಪೂರಕವಾಗುವ ಯೋಜನೆಗಳನ್ನು ತಯಾರಿಸಲು ಆಧಾರವಾಗುತ್ತಿತ್ತು – ಆಧಾರವಾಗಿತ್ತು. ಈ ಗೆಜಟೀರ್ ಗಳು ಇಂಗ್ಲೀಷಿನಲ್ಲಿದ್ದವು. ಕಳೆದ ಶತಮಾನದ ೬೦ನೇ ದಶಕದಲ್ಲಿ ಹಯವದನರಾಯರು ಸಂಪಾದಿಸಿದ್ದ ಗೆಜಟೀರನ್ನು ಪುನರ್ ಪ್ರಕಟಿಸುವ ಕಾಲಕ್ಕೆ ಅದನ್ನು ಕನ್ನಡದಲ್ಲಿಯೂ ಹೊರತರುವ ಪ್ರಯತ್ನ ನಡೆಯಿತು. ಆ ಸಂದರ್ಭದಲ್ಲಿ ಅದರಲ್ಲಿದ್ದ ‘ಫಾನ್ ಆಫ್ ಮೈಸೂರು’ ಅಧ್ಯಾಯವನ್ನು ಕನ್ನಡಕ್ಕೆ ಅನುವಾದಿಸುವ ಸೌಭಾಗ್ಯ ನನಗೆ ಒದಗಿ ಬಂದಿತು. ಆಗ ಇಂಗ್ಲಿಷ್ ಲೇಖನವನ್ನು ಕನ್ನಡಕ್ಕೆ ಅನುವಾದಿಸುವುದಷ್ಟೇ ನನ್ನ ಕೆಲಸ. ಆ ಲೇಖನದ ಅಸಮರ್ಪಕತೆಯನ್ನು ಮನಗಂಡೆನಾದರೂ ನಾನೇನೂ ಮಾಡುವಂತಿರಲಿಲ್ಲ.

೧೯೮೫ರಲ್ಲಿ ಮೈಸೂರು ಸಮಾವೇಶಗೊಂಡ ಮೊದಲ ವಿಶ್ವಕನ್ನಡ ಸಮ್ಮೇಳನದ ಸಂದರ್ಭದಲ್ಲಿ ಸಂಯೋಜಿಸಿದ ಗೋಷ್ಠಿಗಳಲ್ಲಿ ಭಾಗವಹಿಸಲಾಗಲಿಲ್ಲ. ಜಪಾನಿನ ವಿಜ್ಞಾನ ಪ್ರೋತ್ಸಾಹಕ ಸಂಸ್ಥೆ [Japan Society for Promotion of Science] ಯವರ ಆಹ್ವಾನದ ಮೇರೆಗೆ ಸಂದರ್ಶಕ ವಿಜ್ಞಾನಿಯಾಗಿ ಜಪಾನಿನ ವಿವಿಧ ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಲು ಪೂರ್ವನಿರ್ಧಾರವಾಗಿತ್ತು. ಆದರೆ ಸಮ್ಮೇಳನ ಸಂಸ್ಮರಣ ಗ್ರಂಥ ‘ಅವಲೋಕ’ನಕ್ಕೆ ‘ಫಾನ ಆಫ್ ಕರ್ನಾಟಕ’ [ಕರ್ನಾಟಕದ ಪ್ರಾಣಿ ಸಂಪತ್ತು] ಲೇಖನ ಬರೆದು ಕಳುಹಿಸಿದೆ. ಸಂಪಾದಕರ ಆಹ್ವಾನದ ಮೇರೆಗೆ, ಕಾಲಾವಕಾಶ, ಸ್ಥಳಾವಕಾಶಗಳ ಕೊರತೆಯಿಂದಾಗಿ, ‘ಸಂತೆಗೆ ಮೂರು ಮೊಳ’ ಎಂಬಂತೆ ಬರೆದ ಲೇಖನ ಅದು. ಆ ಲೇಖನ ವಸ್ತುನಿಷ್ಠವಾಗಿರದೆ ಕಾವ್ಯನಿಷ್ಠವಾಗಿತ್ತು. ಅದಕ್ಕೆ ಮುಖ್ಯಕಾರಣ ಆಕರವಸ್ತುವಿನ ಅಭಾವ.

ಸುಮಾರು ನಾಲ್ಕು ಶತಮಾನಗಳ ಹಿಂದೆ ಬ್ರಿಟಿಷರು ಸ್ವಾಭಾವಿಕ ಸಂಪತ್ತಿನ ಅಗತ್ಯತೆಯನ್ನು ಮನಗಂಡು ಭಾರತದ ಖನಿಜ, ಸಸ್ಯ, ಪ್ರಾಣಿಗಳ ಸಮೀಕ್ಷೆ ನಡೆಸಿದರು. ಅದರ ಫಲವಾಗಿ ಪ್ರಾಣಿಗಳ ವಿಷಯಗಳನ್ನೊಳಗೊಂಡ ‘ಫಾನ ಆಫ್ ಬ್ರಿಟಿಷ್ ಇಂಡಿಯ’ ಎಂಬ ಎಂಟು ಸಂಪುಟಗಳ ಗ್ರಂಥ ಪ್ರಕಟವಾಯ್ತು. ಇಂದಿಗೂ ಅದೇ ಆಕರಗ್ರಂಥ. ಅದರ ಪ್ರತಿಗಳು ಮುಗಿದುಹೋಗಿವೆ. ಅದನ್ನು ನವೀಕರಿಸಿ ಪುನರ್ ಮುದ್ರಿಸುವ ಪ್ರಯತ್ನಗಳು ನಡೆದಿಲ್ಲದಿರುವುದು ನಮ್ಮ ದೌರ್ಭಾಗ್ಯ.

ಎಲ್ಲಾ ಪ್ರಾಣಿಗಳೂ ಪ್ರಪಂಚದ ಎಲ್ಲಾ ಕಡೆಯೂ ದೊರಕುವುದಿಲ್ಲ ಪ್ರತಿಯೊಂದು ಪ್ರಾಣಿಗೂ ತನ್ನದೇ ಆದ ನಿರ್ದಿಷ್ಟ ನೆಲೆ ಇದೆ. ಆಹಾರ ಮತ್ತು ಆಶ್ರಯಗಳಿಗಾಗಿ ಪ್ರಾಣಿ, ಪ್ರಾಣಿಗಳ ನಡುವೆ ಸ್ಪರ್ಧೆ ಸದಾ ನಡೆಯುತ್ತಿರುತ್ತದೆ.ಆದ್ದರಿಂದ ಪ್ರಾಣಿಗಳಿಗೂ ಅವುಗಳ ವಸತಿಗಳಿಗೂ ನಡುವೆ ನಿಕಟ ಸಂಬಂಧವಿದೆ. ಈ ಆಧಾರದ ಮೇಲೆ ಭೂಮಿಯ ಮೇಲೆ ಪ್ರಾಣಿಗಳ ವಿಂಗಡಣೆ ಮತ್ತು ವಿತರಣೆ ನಡೆದಿದೆ-ನಡೆಯುತ್ತಿದೆ. ಒಂದು ನಿರ್ದಿಷ್ಟ ನೆಲೆಯಲ್ಲಿ ವಾಸಿಸುವ ಪ್ರಾಣಿಸಮೂಹವನ್ನು ಫಾನ [Fauna] ಎಂದು ಕರೆಯುತ್ತಾರೆ. ಪ್ರಾಣಿ ವಿತರಣೆ, ವಿಂಗಡಣೆ, ವಸತಿಗಳ ಆಯ್ಕೆ ಮತ್ತು ಅವಕ್ಕನುಗುಣವಾದ ಹೊಂದಾಣಿಕೆಗಳು ಜೀವವಿಕಾಸಕ್ಕೆ ಪೂರಕ ಪ್ರೇರಣೆಗಳಾಗಿವೆ.

ಪ್ರಾಣಿ ವಿತರಣೆ ಇಂದು ಒಂದು ಭೂ ಐತಿಹಾಸಿಕ ಘಟನೆ ಹೌದು. ಆದರೆ ವಿತರಣೆ ಇಂದೂ ನಡೆಯುತ್ತಿದೆ ಎಂದರೆ ಆಶ್ಚರ್ಯಪಡಬೇಕಾಗಿಲ್ಲ. ವಸತಿ ಒದಗಿಸುವ ಅನುಕೂಲಗಳು ಮತ್ತು ಅಲ್ಲಿನ ಹವಾಮಾನಗಳಂತಹ ಪರಿಸರ ಘಟಕಗಳು ಆ ವಸತಿಯಲ್ಲಿ ವಾಸಿಸುವ ಜೀವನದ ಮೇಲೆ ಪ್ರಭಾವ ಬೀರುತ್ತವೆ ಮತ್ತು ಅವುಗಳ ಜೀವನವನ್ನು ರೂಪಿಸುತ್ತವೆ. ಮಾನವನ ಚಟುವಟಿಕೆಗಳಿಂದಾಗಿ ಉಂಟಾಗುತ್ತಿರುವ ಪರಿಸರ ಮಾಲಿನ್ಯಗಳು ಪ್ರಾಣಿಗಳು ಮತ್ತು ಅವು ವಾಸಿಸುವ ವಸತಿಗಳ ಮೇಲೆ ಯಾವ ರೀತಿಯ ಪ್ರಭಾವ ಬೀರುತ್ತಿವೆ ಎಂಬ ವಿಷಯ ಮನುಷ್ಯನ ಆತ್ಮಸಾಕ್ಷಿಗೆ ಸಂಬಂಧಿಸಿದುದು. ಆದ್ದರಿಂದ ಮುಂದೇನಾಗಬಹುದು ಎನ್ನುವುದನ್ನು ಊಹಿಸಬೇಕಾದರೆ ಇಂದು ಇರುವುದನ್ನು ತಿಳಿದುಕೊಳ್ಳಬೇಕಾದುದು ಅಗತ್ಯ.

ಇದು ಸಾಮಾನ್ಯ ಅಗತ್ಯವಾದರೆ ಶೈಕ್ಷಣಿಕ ದೃಷ್ಟಿಯಿಂದ ಅತ್ಯಗತ್ಯ. ಸಂಶೋಧಕ ತನ್ನ ಅಭ್ಯಾಸಕ್ಕೆ ಆರಿಸಿಕೊಳ್ಳುವ ಪ್ರಾಣಿ/ಪ್ರಾಣಿ ಗುಂಪಿನ ಪೂರ್ಣ ವಿವರ ತಿಳಿದುಕೊಳ್ಳಬೇಕು. ಈ ವಿವರಗಳು ಇಲ್ಲದಿದ್ದರೆ ಸಂಶೋಧನೆ ಅರ್ಥಪೂರ್ಣವಾಗಿರುವುದಿಲ್ಲ ಮತ್ತು ಪ್ರಕಟಣೆಗೆ ಕಳುಹಿಸುವ ಸಂಶೋಧನಾ ಲೇಖನಗಳು ತಿರಸ್ಕೃತವಾಗಿ ಹಿಂದಿರುಗುತ್ತವೆ.

ಒಂದು ಪ್ರಾಣಿಯ ವಿವರಗಳೆಂದರೆ ಅದರ ಶಾಸ್ತ್ರೀಯ ನಾಮ, ವರ್ಗೀಕರಣ ಸವಿವರ ವರ್ಣನೆಗಳು. ಈ ಫಲಿತಾಂಶಗಳು ವಿವಿಧ ವಸತಿಗಳಲ್ಲಿ ವಾಸಿಸುವ ಒಂದೇ ಪ್ರಭೇಧದ ಅಥವಾ ಬಂಧು ಪ್ರಭೇಧಗಳೊಂದಿಗೆ ಹೋಲಿಸಿದಾಗ ತೋರುವ ವ್ಯತ್ಯಾಸಗಳು, ಸಾಮ್ಯತೆಗಳನ್ನು ತಾಳೆಹಾಕಿ ಪ್ರಾಣಿಗಳ ಹೊಂದಾಣಿಕ ವಿಕಾಸವನ್ನು ಗುರುತಿಸಬಹುದು ಮತ್ತು ಊಹಿಸಬಹುದು, ಮುಂದಿನ ಅಭ್ಯಾಸಗಳನ್ನು ಯೋಜಿಸಬಹುದು. ಈ ಕಾರಣಗಳಿಂದ ಅಭ್ಯಾಸಕ್ಕೆ ಆರಿಸಿಕೊಂಡ ಪ್ರಾಣಿಯ ಶಾಸ್ತ್ರೀಯ ಗುರುತಿಸುವಿಕೆ ಅಗತ್ಯ ಎನ್ನುವುದು ಪರಿಣಿತರ ಅಭಿಪ್ರಾಯ.

ಅಭ್ಯಾಸಕ್ಕೆ ಆರಿಸಿಕೊಳ್ಳುವ ಪ್ರಾಣಿಯ ವಿವರಗಳನ್ನು ತಿಳಿಯಲು ತಿಳಿದವರನ್ನು ಕೇಳುವುದು ಅಥವ ಆಕರಗ್ರಂಥಗಳನ್ನು ಪರಿಶೀಲಿಸುವುದು.

ಮೊದಲನೆಯ ಆಯ್ಕೆಯನ್ನು ಅನುಸರಿಸುವುದಾದರೆ ಕೊಲ್ಕತ್ತಾದಲ್ಲಿರುವ ಇಂಡಿಯನ್ ಮ್ಯೂಸಿಯಮ್ [ಪ್ರಾಣಿ ಸಂಗ್ರಹಾಲಯ]ನ ನೆರವು ಪಡೆಯುವುದು. ಆದರೆ ಅಲ್ಲಿ ಪರಿಣಿತರ ಅಭಾವದಿಂದಾಗಿ ದೊರಕುವ ಮಾಹಿತಿ ನಿಖರವಿರುವುದಿಲ್ಲ. ಇಲ್ಲದಿದ್ದರೆ ಇಂಗ್ಲೆಂಡಿನ ಬ್ರಿಟಿಷ್ ಮ್ಯೂಸಿಯಮ್ ಮೊರೆ ಹೋಗುವುದು. ಅಲ್ಲಿಂದ ಸರಿಯಾದ ಮಾಹಿತಿ ದೊರಕುವುದಾದರೂ ಅಂಚೆವೆಚ್ಚವ್ಯಯ ಮತ್ತು ಮಾಹಿತಿಗೆ ಕಾಯುವ ಕಾಲಹರಣ.

ಆಕರಗ್ರಂಥಗಳನ್ನು ಪರಾಮರ್ಶಿಸುವುದೆಂದರೆ ಈಗ ದೊರಕುವುದು ನಾಲ್ಕು ನೋರು ವರ್ಷಗಳು ಹಳೆಯದಾವು ‘ಫಾನ ಆಫ್ ಬ್ರಿಟಿಷ್ ಇಂಡಿಯ’ ಮಾತ್ರ. ಆ ಗ್ರಂಥ ಪ್ರಕಟವಾದಂದಿನಿಂದೀಚೆಗೆ ಪ್ರಾಣಿಗಳ ವರ್ಗೀಕರಣ, ಶಾಸ್ತ್ರೀಯ ನಾಮ ನಿರ್ದೆಶನ, ವಿವರಣೆಗಳು ಬದಲಾಗಿವೆ, ಮಾರ್ಪಟ್ಟಿವೆ. ಆದ್ದರಿಂದ ನಿಖರ ಆಕರ ಗ್ರಂಥಗಳೆಂದು ಪರಿಗಣಿಸುವುದು ಸಲ್ಲ. ಕಳೆದ ನಾನೂರು ವರ್ಷಗಳಿಂದೀಚಗೆ ಅನೇಕ ಹೊಸ ಪ್ರಭೇಧಗಳು ಸೇರ್ಪಡೆಯಾಗಿವೆ. ನಿರ್ದಿಷ್ಟವಾಗಿ ಕರ್ನಾಟಕದ ಪ್ರಾದೇಸಿಕ ಪ್ರಾಣಿಗಳ ಮಾಹಿತಿ ದೊರಕುವುದಿಲ್ಲ. ಕರ್ನಾಟಕದ ಅಪರೂಪದ ಪ್ರಾಣಿ ಪ್ರಬೇಧಗಳು ಪಶ್ಚಿಮಘಟ್ಟ ಪ್ರದೆಶದಲ್ಲಿ ವಿಷೇಷವಾಗಿ ವಾಸಿಸುತ್ತಿವೆ. ಇತ್ತೀಚೆಗೆ ಪಶ್ಚಿಮಘಟ್ಟ ಪ್ರದೆಶದ ನೆರೆಯ ಪ್ರದೇಶಗಳಲ್ಲಿ ಬೃಹತ್ ಪ್ರಮಾಣದ ಔದ್ಯೋಗಿಕರಣ ನಡೆದಿದೆ, ನಡೆಯಲಿದೆ. ಪರಿಸರವಾದಿಗಳು ಪರಿಸರನಾಶ, ಅಪೂರ್ವ ಜೀವಿ ಪ್ರಭೇಧಗಳ ವಿನಾಶ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ ವಿನಹ ನಾಶವಾಗುವ ಪ್ರಭೇಧಗಳಿರಲಿ ಅಲ್ಲಿ ಇರುವ ಇದ್ದಿರಬಹುದಾದ ಜೀವಿ ಪ್ರಭೇಧಗಳ ವಿವರ ಸಂಗ್ರಹಿಸುವ ಪ್ರಯತ್ನ ಮಾಡುತ್ತಿಲ್ಲ. ಈಗ ಸರ್ವೆಕ್ಷಣ ನಡೆಯಬೇಕಾಗಿದೆ. ನಡೆಸಬೇಕಾಗಿದೆ. ಇತ್ತ ಯಾರೂ ಗಮನ ಹರಿಸಿಲ್ಲ ಕೇವಲ ವೇದಿಕೆಯ ಭಾಷಣಗಳಿಂದ ತೃಪ್ತರಾದರೆ ಸಾಲದು,

ಕಳೆದ ಕೆಲವು ದಶಕಗಳಿಂದ ಕರ್ನಾಟಕ ಪ್ರಾಣಿ ಸಂಪತ್ತಿನ ವ್ಯವಸ್ಥಿತ ಆಭ್ಯಾಸಕ್ಕೆ ಪ್ರಯತ್ನಗಳು ನಡೆದಿವೆ. ಇದಕ್ಕೆ ಧನಸಹಾಯ ಒದಗುತ್ತಿಲ್ಲ. ಕರ್ನಾಟಕ ಸರ್ಕಾರವೇ ಈ ಆಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಿಲ್ಲ. ಕರ್ನಾಟಕ ಸರ್ಕಾರಕ್ಕೆ ಕರ್ನಾಟಕದ ಪ್ರಾಣಿ ಸಂಪತ್ತಿನ ವಿಷಯದತ್ತ ಗಮನ ಹರಿಯುವುದು ಗೆಜಟೀರ್ ಗಳನ್ನು ಪ್ರಕಟಿಸುವಾಗ ಮಾತ್ರ. ಅವುಗಳಲ್ಲಿ ಬರುವುದು ಹಿಂದಿನ ಗೆಜಟೀರ್ ಗಳಲ್ಲಿನ ಲೇಖನದ ಪುನರುಕ್ತಿ, ಆದೇ ಚರ್ವಿತ ಚರ್ವಿಣ! ಪರಿಷ್ಕರಿಸುವ ಯೋಜನೆಗಳಿಲ್ಲ ನಡೆಸಬೇಕೆಂಬ ಅಭಿಲಾಷೆ ಇಲ್ಲ. ಸಂಪಾದಕರಾಗಿ ನೇಮಿತರಾದವರು ಬರೆದ- ಬೆರೆಸಿದ ಲೇಖನಗಳೇ ಗತಿ. ಆದರೆ ಆ ಸಂದರ್ಭದಲ್ಲಿ ಇಂಗ್ಲಿಷ್ ಲೇಖನಗಳ ಕನ್ನಡ ಅನುವಾದಕ್ಕೆ ಪ್ರಾಣಿಶಾಸ್ತ್ರತಜ್ಞರ ನೆರವು ಕೇಳುವಷ್ಟರ ಮಟ್ಟಿಗೆ ಸರ್ಕಾರ ತಜ್ಞರ ಆಗತ್ಯವನ್ನು ಮನಗಾಣುತ್ತದೆ. ಎನ್ನುವುದಷ್ಟೇ ಕನ್ನಡಿಗರ ಸೌಭಾಗ್ಯ.

೧೯೮೮ರಲ್ಲಿ ನಾನು [ಎಚ್. ಬಿ. ದೇವರಾಜ ಸರ್ಕಾರ್] ಮತ್ತು ನನ್ನ ಸಹೋದ್ಯೋಗಿ ಪ್ರಾಧ್ಯಾಪಕ ಡಾ. ಎನ್. ವಿ. ಆಶ್ಥನಾರಾಯಣ ‘ಕರ್ನಾಟಕದ ಪ್ರಾಣಿ ಸಂಪತ್ತು’ ಅಧ್ಯಯನ ಯೋಜನೆಯನ್ನು ‘ಕರ್ನಾಟಕ ಅಸೋಸಿಯೇಷನ್ ಫಾರ್ ಅಡ್ವಾನ್ಸ್ ಮೆಂಟ್ ಆಫ್ ಸೈನ್ಸ್’ ಸಂಸ್ಥೆಯ ಮೂಲಕ ಕರ್ನಾಟಕ ಸರ್ಕಾರಕ್ಕೆ ಮಂಡಿಸಿದೆವು. ಇಬ್ಬರು ಸಂಶೋಧನಾ ವಿದ್ಯಾರ್ಥಿಗಳ ವೇತನ, ಪ್ರಯಾಣ ಮತ್ತಿತರ ವೆಚ್ಚಗಳನ್ನೊಳಗೊಂಡ ಯೋಜನೆ. ಆದರೆ ನಮ್ಮ ದುರಾದೃಷ್ಟ ಕರ್ನಾಟಕ ಸರ್ಕಾರ ಅದನ್ನು ಮಾನ್ಯ ಮಾಡಲಿಲ್ಲ.

ಪ್ರಸಕ್ತ ಈ ಪುಸ್ತಕದಲ್ಲಿ ಕಶೇರುಕಗಳನ್ನು ಮಾತ್ರ ಕುರಿತು ಬರೆಯಾಲಾಗಿದೆ. ಮುಂದೆ ಆಕಶೇರುಕಗಳನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದವರು ಬರೆಸಿ ಪ್ರಕಟಿಸುವರೆಂದು ಆಶಿಸೋಣ.

ಈ ಪುಸ್ತಕದಲ್ಲಿನ ವಿಷಯವನ್ನು ಈ ಕೆಳಕಂಡಂತೆ ಲೇಖಕರಿಗೆ ವಿತರಿಸಲಾಗಿ ಆಯಾ ಲೇಖಕರು ವಹಿಸಿದ ಭಾಗವನ್ನು ಬರೆದಿದ್ದಾರೆ.

. ಡಾ. ಹಾ. ಬ. ದೇವರಾಜ ಸರ್ಕಾರ್ : ಪ್ರಸ್ತಾವನೆ, ಪೀಠಿಕೆ, ಕಾರ್ಡೆಟುಗಳು, ವರ್ಗ : ಮೀನುಗಳು, ವರ್ಗ : ಉಭಯಚರಿಗಳು, ವರ್ಗ : ಸರೀಸೃಪಗಳು

. ಡಾ. ಎನ್.ಎ. ಮಧ್ಯಸ್ಥ : ವರ್ಗ : ಏವಿಸ್‌(ಪಕ್ಷಿಗಳು), ಪಕ್ಷಿಗಳ ವಲಸೆ, ಕರ್ನಾಟಕದ ಪಕ್ಷಿಗಳು

. ಡಾ. ಎಚ್. ಎಚ್. ಷಣ್ಮುಖಮ್ಮ : ವರ್ಗ : ಮ್ಯಾಮೆಲೆಯ (ಸಸ್ತನಿಗಳು)

ಅನಾದರ ಅಸಡ್ಡೆಗಳ ಪರಂಪರೆಯ ಅಂಧಕಾರದಲ್ಲಿ ತೊಳಲಾಡುತ್ತಿದ್ದವರಿಗೆ ದಾರಿ ತೋರಲು ಹಂಪೆಯ ಕನ್ನಡ ವಿಶ್ವವಿದ್ಯಾಲಯ ಹಣತೆಯೊಂದನ್ನು ಹೊತ್ತಿಸಿದೆ. ೨೦೦೦ದಲ್ಲಿ ಅಂದು ಕುಲಪತಿಗಳಾಗಿದ್ದ ಡಾ. ಎಂ. ಎಂ. ಕಲಬುರ್ಗಿಯವರು ಕರ್ನಾಟಕದ ಸ್ವಾಭಾವಿಕ ಸಂಪತ್ತನ್ನು ಕನ್ನಡಿಗರಿಗೆ ಪರಿಚಯ ಮಾಡಿಕೊಡುವ ಸದುದ್ದೇಶದಿಂದ ಕರ್ನಾಟಕದ ಸಸ್ಯಸಂಪತ್ತು ಮತ್ತು ಪ್ರಾಣಿಸಂಸಪತ್ತನ್ನು ಆರಿಸಿಕೊಂಡು. ಪ್ರಾಣಿಶಾಸ್ತ್ರ ಪರಿಣತರು, ಪ್ರಾಣಿ ವಿಜ್ಞಾನ ಮಿಷಯಗಳನ್ನು ಕನ್ನಡದಲ್ಲಿ ಬರೆಯಬಲ್ಲವರು, ತಜ್ಞರು, ಡಾ. ಎಚ್‌. ಬಿ. ದೇವರಾಜ ಸರ್ಕಾರ್, ಡಾ. ಎಂ. ಎನ್‌. ಮಧ್ಯಸ್ಥ ಮತ್ತು ಡಾ. ಎಚ್‌. ಎಚ್‌. ಷಣ್ಮುಖಮ್ಮನವರನ್ನು ಸೇರಿಸಿ ತಮ್ಮ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಿ, ವಿಷಯ ನಿರೂಪಣೆ ಸಾಧಕಬಾಧಕಗಳನ್ನು ಚರ್ಚಿಸಿ, ನೀತಿ ಸಂಹಿತೆಯನ್ನು ರೂಪಿಸಿ ಬರೆಯುವ ಕೆಲಸವನ್ನು ಮೂವರು ತಜ್ಞರಿಗೆ ವಹಿಸಿಕೊಟ್ಟರು. ಅಗತ್ಯವಾದ ಚಿತ್ರಗಳನ್ನು ಬರೆಯಲು ಶ್ರೀ ಸುರೇಶ್ ವೆಂ. ಕುಲಕರ್ಣಿಯವರನ್ನು ಅಧಿಕೃತ ಚಿತ್ರಕಲಾಕಾರರನ್ನಾಗಿ ನೇಮಿಸಿದರು. ಉತ್ಸಾಹದಿಂದ ಮತ್ತು ಉಲ್ಲಾಸದಿಂದ ವಿಷಯ ಸಂಗ್ರಹಣೆ ಮಾಡಿ, ನೀತಿ ಸಂಹಿತೆಯನುಸಾರ ಹಸ್ತಪ್ರತಿಯನ್ನು ಸಿದ್ಧಪಡಿಸಿ ಕಳುಹಿಸಿಕೊಟ್ಟೆವು. ಅಷ್ಟರಲ್ಲಿ ಕಲಬುರ್ಗಿಯವರು ನಿವೃತ್ತರಾಗಿ ಡಾ. ಎಚ್‌. ಜೆ. ಲಕ್ಕಪ್ಪಗೌಡರು ಅಧಿಕಾರವಹಿಸಿಕೊಂಡರು. ಅವರು ಹಸ್ತಪ್ರತಿಯನ್ನು ಪರಿಶೀಲಿಸಿ ಗದಗದ ಒಂದು ಮುದ್ರಣಾಲಯಕ್ಕೆ ಮುದ್ರಣಕ್ಕೆಂದು ಕಳುಹಿಸಿಕೊಟ್ಟರು. ಅಲ್ಲಿ ನಿಧಾನಗತಿಯಲ್ಲಿ ಸಾಗಿ ಕೊಳೆಯುತ್ತಿದ್ದ ಪುಸ್ತಕವನ್ನು ತೆಗೆಸಿ ಪ್ರಕಟಣೆಗೆ ಅನುಕೂಲವಾಗಲೆಂದು ಇಂದಿನ ಮಾನ್ಯ ಕುಲಪತಿಗಳಾದ ಬಿ. ಎ. ವಿವೇಕ ರೈ ಅವರು ಮೈಸೂರಿಗೆ ವರ್ಗಾಯಿಸಿ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್‌ಅವರಿಗೆ ಅದರ ಮುದ್ರಣ ಮತ್ತು ಪ್ರಕಟಣೆಯ ಜವಾಬ್ದಾರಿಯನ್ನು ವಹಿಸಿ ತ್ವರಿತಗತಿಯಲ್ಲಿ ಪ್ರಕಟಿಸಲು ವ್ಯವಸ್ಥೆಮಾಡಿದರು. ಮೇಲ್ಕಂಡ ಮೂವರು ಕುಲಪತಿಯವರಿಗೆ ಸಮಿತಿಯ ಸದಸ್ಯರೆಲ್ಲರ ಪರವಾಗಿ ನಮ್ಮ ಕೃತಜ್ಞತೆಗಳನ್ನು ಅರ್ಪಿಸುತ್ತೇವೆ.

ಇಂತಹುದೊಂದು ಗಹನವಾದ ಯೋಜನೆಯನ್ನು ಕೈಗೊಂಡು ಪ್ರಾಣಿಶಾಸ್ತ್ರ ಅಭ್ಯಾಸಿಗರಿಗೇ ಅಲ್ಲದೆ ಇಡೀ ಕನ್ನಡಿಗರಿಗೆ ವಿಷಯ ತಿಳಿಸಿಕೊಡುವ ಪ್ರಯತ್ನ ಮಾಡಿದ ಹಂಪಿಯ ಕನ್ನಡ ವಿಶ್ವವಿದ್ಯಾಲಯ ನಿಜವಾಗಿಯೂ ಅಭಿನಂದನಾರ್ಹ. ಈಗಿನ ಪುಸ್ತಕ ಕೇವಲ ಕಪ್ಪು ಬಿಳುಪು ಚಿತ್ರಗಳನ್ನು ಒಳಗೊಂಡಿದೆ. ಮುಂದೆ ವರ್ಣಚಿತ್ರಗಳನ್ನೊಳಗೊಂಡ ಪ್ರಾಣಿ ಸಂಕುಲವನ್ನು ತರಲಿ ಎಂದು ಆಶಿಸುತ್ತ ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ, ಅದರ ಕುಲಪತಿಗಳಾದ ಬಿ. ಎ. ವಿವೇಕ ರೈ ಮತ್ತು ವೈಯಕ್ತಿಕ ಆಸಕ್ತಿ ವಹಿಸಿ ಅದರ ಮುದ್ರಣದಲ್ಲಿ ನೆರವಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್‌ಅವರಿಗೆ ನಾವು ಚಿರ ಋಣಿಗಳು. ಕಲಸುಮೇಲೋಗರವಾಗಿದ್ದ ವಸ್ತುವನ್ನು ಸರಿಪಡಿಸಿ ಸುವ್ಯವಸ್ಥಿತ ರೀತಿಯಲ್ಲಿ ಪುಸ್ತಕವನ್ನು ಮುದ್ರಿಸಿಕೊಟ್ಟ ಶ್ರೀ ರಾಜೇಂದ್ರ ಪ್ರಿಂಟರ್ಸ್‌ಅಂಡ್‌ಪಬ್ಲಿಷರ್ಸ್‌‌ನ ಮಾಲಿಕರಾದ ಶ್ರೀಯುತ ಡಿ. ಎನ್‌. ಲೋಕಪ್ಪನವರು ಮತ್ತು ಮುದ್ರಣಾಲಯ ಸಿಬ್ಬಂದಿಯವರಿಗೆ ವಂದಿಸುತ್ತೇವೆ.

ಈ ಕೆಲಸದ ಮೊದಲ ಸಭೆ ನಡೆದಾಗ ಕಶೇರುಕಗಳ ಗ್ರಂಥವನ್ನು ಹೊರ ತರುವಂತೆಯೆ ಕರ್ನಾಟಕದಲ್ಲಿ ದೂರಕುವ ಅಕಶೇರುಕಗಳ ವಿಷಯವನ್ನು ಬರೆಸಿ ಪ್ರಕಟಿಸುವ ಯೋಜೆನೆಯನ್ನು ರೂಪಿಸಿಕೊಡಿ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಆಗಿನ ಕುಲಪತಿಗಳಾದ ಡಾ. ಎಂ. ಎಂ. ಕಲಬುರ್ಗಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದರಂತೆ ಒಂದು ಸ್ಥೂಲ ವರದಿಯನ್ನು ಸಲ್ಲಿಸಲಾಗಿತ್ತು. ಈಗಲೂ ಆ ಕಾರ್ಯ ಆರಂಭಿಸಬಹುದಾಗಿದೆ. ಸಾವಿರ ಸಾವಿರ ಪುಟಗಳ ೧೪ ಸಂಪುಟದ ವಿಶ್ವಕೋಶ ಪ್ರಕಟಿಸಿ ಕರ್ನಾಟಕ ಉಳಿದ ಭಾರತೀಯ ಭಾಷೆಗಳಿಗೆ ಮಾದರಿಯಾಗಿದೆ ಮತ್ತು ಈ ಮೂಲಕ ಅಗ್ರಸ್ಥಾನ ಪಡೆದಿದೆ. ಅದನ್ನು ಉಳಿಸಿ ಮುಂದುವರಿಸಿ ಕನ್ನಡದ ಏಳಿಗೆ, ಬೆಳವಣಿಗೆಗಳಿಗೆಂದೆ ಆರಂಭವಾದ ಕನ್ನಡ ವಿಶ್ವವಿದ್ಯಾಲಯ, ಹಂಪಿ ಭಾರತದ ಅಗ್ರಮಾನ್ಯ ಭಾಷಾ ವಿಶ್ವವಿದ್ಯಾಲಯವಾಗಿ ಉಳಿದ ಭಾಷೆಗಳವರಿಗೆ ಮಾದರಿಯಾಗಬಹುದು ಎಂದು ವಿನಮ್ರತೆಯಿಂದ ಸೂಚಿಸ ಬಯಸುತ್ತೇವೆ. ಕನ್ನಡ ವಿಶ್ವವಿದ್ಯಾಲಯ, ಹಂಪಿ ಇಂದಿನ ಕುಲಪತಿಗಳಾದ ಡಾ. ಬಿ. ಎ. ವಿವೇಕ ರೈ ಅವರ ಬಲಗೈಯಾಗಿ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್‌ರವರ ಪಾಂಡಿತ್ಯದ ಜೊತೆಗೆ ಅನುಭವ ಉತ್ಸಾಹ ಹೊಂದಿದ ಕನ್ನಡ ಪರ ಅಧಿಕಾರಿಗಳು. ಇವರಿಬ್ಬರ ಮುಂದಾಳುತನದಲ್ಲಿ ಈ ಕೆಲಸ ಸಾಧ್ಯವಾಗುವುದು ಎಂಬ ಭರವಸೆಯಿಂದ ನನ್ನ ಈ ಮಾತುಗಳನ್ನು ಮುಗಿಸುತ್ತೇನೆ.

ಡಾ. ಹಾ. ಬಾ. ದೇವರಾಜ ಸರ್ಕಾರ್
ಸಂಪಾದಕರ ಪರವಾಗಿ