ಕನ್ನಡ ವಿಶ್ವವಿದ್ಯಾಲಯವು ಕನ್ನಡ ಸಂಸ್ಕೃತಿಯ ಬಹುತ್ವದ ನೆಲೆಗಳನ್ನು ಹುಡುಕುವ, ಗಟ್ಟಿಗೊಳಿಸುವ, ಹರಡುವ ಕಾಯಕವನ್ನು ನೋಂಪಿಯಂತೆ ನಡೆಸಿಕೊಂಡು ಬರುತ್ತಿದೆ. ಕನ್ನಡ ಸಂಸ್ಕೃತಿಯನ್ನು ಮತ್ತೆ ಮತ್ತೆ ನಿರ್ವಚನ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಕನ್ನಡ ವಿಶ್ವವಿದ್ಯಾಲಯವು ಒಂದು ಆಡುಂಬೊಲವಾಗಿ ಕಾರ್ಯ ನಿರ್ವಹಿಸುತ್ತಿದೆ. ನಮಗೆ ಗೊತ್ತಿರುವ ಸಂಸ್ಕೃತಿಯ ಅರ್ಥಗಳ ಆಚೆಗೆ ಆನೂಹ್ಯಲೋಕಗಳ ಕಡೆಗೆ ಕನ್ನಡಿಗರನ್ನು ಒಯ್ಯುವ ಪಯಣದ ದಾರಿಗಳನ್ನು ರೂಪಿಸುವ ಮಹತ್ವದ ಸಾಹಸದ ಹೆಜ್ಜೆಗಳು ಮೂಡಿ ಬರುತ್ತಿವೆ. ಇದು ನಿರಂತರ ನಡೆಯಬೇಕಾದ ಬಹುದಾರಿಗಳ ಮಹಾಯಾನ.

ಇಪ್ಪತ್ತೊಂದನೆಯ ಶತಮಾನದ ಆರಂಭದಲ್ಲಿ ಜಾಗತೀಕರಣದ ಈ ಸಂಕ್ರಮಣ ಸ್ಥಿತಿಯಲ್ಲಿ ಕನ್ನಡ ವಿಶ್ವವಿದ್ಯಾಲಯದ ರಚನೆ ಮತ್ತು ಕಾರ್ಯಗಳು ಸವಾಲಿನವು ಮತ್ತು ಜವಾಬ್ದಾರಿಯವೂ ಆಗಿವೆ. ‘ಕನ್ನಡ’ ಎನ್ನುವ ಪರಿಕಲ್ಪನೆಯನ್ನು ಭಾಷೆ, ಸಾಹಿತ್ಯ, ಬದುಕು ಮತ್ತು ಅದರ ಆಧುನಿಕ ಸನ್ನಿವೇಶಗಳಲ್ಲಿ ಅರ್ಥೈಸುವ ಮತ್ತೆ ಕಟ್ಟುವ ಕೆಲಸವನ್ನು ಕನ್ನಡ ವಿಶ್ವವಿದ್ಯಾಲಯ ಒಂದು ಕಾಯಕದಂತೆ ಕೈಗೆತ್ತಿಕೊಂಡಿದೆ. ಕನ್ನಡ ಮತ್ತು ಅಭಿವೃದ್ಧಿ ಎನ್ನುವ ಎರಡು ಪರಿಕಲ್ಪನೆಗಳು ಎದುರುಬದುರಾಗುವ ಆತಂಕ ಒಂದು ಕಡೆಯಾದರೆ, ಅವು ಒಂದನ್ನೊಂದು ಪ್ರಭಾವಿಸಿ ನೆರವಾಗುವ ಆವರಣವನ್ನು ನಿರ್ಮಾಣ ಮಾಡುವುದು ಇನ್ನೊಂದೆಡೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾನಿಲಯವು ಈ ಸಂಬಂಧಿಯಾದ ಹೊಸ ಆಲೋಚನೆಗಳ ಸಂವಾದ ಮತ್ತು ಅದರ ಆನ್ವಯಿಕ ಸಾಧನೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ಬಯಸಿದೆ.

ಕನ್ನಡವು ಕಾಗದರಹಿತ ಮಾಧ್ಯಮದಲ್ಲಿ ಕಾಣಿಸಿಕೊಳ್ಳುತ್ತಿರುವಾಗಲೂ ಪುಸ್ತಕ ರೂಪದಲ್ಲಿ ಕನ್ನಡ ಕೃತಿಗಳ ಪ್ರಕಟಣೆ ಸಮಾನಾಂತರವಾಗಿ ಕ್ರಿಯಾಶೀಲವಾಗಿ ನಡೆಯುವುದು ಬಹಳ ಮುಖ್ಯವಾದದ್ದು. ಕನ್ನಡವು ತಾಂತ್ರಿಕ-ಮೌಖಿಕ ಮಾಧ್ಯಮದಲ್ಲಿ ಬಳಕೆಯಾಗುತ್ತಿರುವಾಗಲೇ ಕಾಗದದಲ್ಲಿ ಕನ್ನಡ ಅಕ್ಷರಗಳು ಮುದ್ರಣಗೊಂಡು ಕಣ್ಣಿಗೆ, ಕಿವಿಗೆ ಮತ್ತು ಮನಸ್ಸಿಗೆ ಕನ್ನಡವನ್ನು ಸಂವಹನಗೊಳಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯಬೇಕಿದೆ. ಇಲ್ಲಿ ಪ್ರಕಟಗೊಳ್ಳುವ ಮಾಧ್ಯಮದೊಂದಿಗೆ ಅಭಿವ್ಯಕ್ತಗೊಳ್ಳುವ ಚಿಂತನ ಶರೀರವೂ ಮುಖ್ಯವಾದದ್ದು. ಭಾಷೆ, ಸಾಹಿತ್ಯ, ಕಲೆಗಳು, ವಿಜ್ಞಾನ, ತಂತ್ರಜ್ಞಾನ, ಸಮಾಜವಿಜ್ಞಾನ ಎನ್ನುವ ಬೌದ್ಧಿಕ ಗಡಿರೇಖೆಗಳನ್ನು ಕಳಚಿಕೊಂಡು ಕನ್ನಡ ಜ್ಞಾನವು ಕನ್ನಡ ವಿಶ್ವವಿದ್ಯಾಲಯದಲ್ಲಿ ರೂಪುಗೊಳ್ಳುವ ಮತ್ತು ಪ್ರಕಟಗೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ.

ಕನ್ನಡ ವಿಶ್ವವಿದ್ಯಾಲಯವು ಕರ್ನಾಟಕದ ನಿಸರ್ಗ ಸಂಪತ್ತನ್ನು ವಿಸ್ಮಯದಿಂದ ಮಾತ್ರ ನೋಡದೆ, ವಿಜ್ಞಾನ ಮತ್ತು ಸಂಸ್ಕೃತಿಗಳ ಸೂಕ್ಷ್ಮ ಕಣ್ಣುಗಳ ಮೂಲಕ ಪರಿಭಾವಿಸುವ ಆಸಕ್ತಿಯನ್ನು ತಾಳಿದ ಪರಿಣಾವಾಗಿ ಈ ಪ್ರಾಣಿಪಕ್ಷಿ ಸಂಪುಟ ಪ್ರಕಟವಾಗುತ್ತಿದೆ. ಈಗಾಲೇ ಪ್ರಕಟವಾಗಿರುವ ‘ಸಸ್ಯಸಂಪುಟ’ ದ ಬಳಿಕ ಜೀವಜಗತ್ತಿನ ಜಾಲದ ಇನ್ನೊಂದು ಅದ್ಭುತಲೋಕ ಇಲ್ಲಿ ಅನಾವರಣವಾಗುತ್ತಿದೆ. ಕರ್ನಾಟಕ ರಾಜ್ಯವು ಜಗತ್ತಿನಲ್ಲಿಯೇ ಅತ್ಯಂತ ಜೀವ ವೈವಿಧ್ಯದ ತಾಣವೆಂದು ಗುರುತಿಸಲಾದ ಪಶ್ಚಿಮಘಟ್ಟದ ಪ್ರದೇಶವನ್ನು ಹೊಂದಿದೆ. ನಾಗರಗೊಳೆ, ಬಂಡೀಪುರ, ರಂಗನತಿಟ್ಟುವಿನಂತಹ ಪ್ರಸಿದ್ಧ ಪ್ರಾಣಿಪಕ್ಷಿಧಾಮಗಳ ಜತೆಗೆ ಅನೇಕ ಅಭಯಾರಣ್ಯಗಳು ಕರ್ನಾಟಕ ಬಹುಬಗೆಯ ಪ್ರಾಣಿಪಕ್ಷಿ ಸಂಕುಲಗಳ ಅಕ್ಕರೆಯ ಅಡುಂಬೊಲಗಳಾಗಿವೆ. ಆದರೆ, ಮನುಷ್ಯರ ಸ್ವಾರ್ಥದ ಕಬಂಧಬಾಹುಗಳು, ಜಾಗತೀಕರಣದ ಕರಾಳ ಮುಷ್ಟಿಗಳು ನಮ್ಮ ಕೋಮಲ ಪಕ್ಷಿಗಳನ್ನು ಚೇತನ ಸ್ವರೂಪಿಯಾದ ಪ್ರಾಣಿಗಳನ್ನು ನಲುಗಿಸಿ ಸಾಯಿಸುತ್ತಿವೆ. ಈ ದೃಷ್ಟಿಯಿಂದ ಕರ್ನಾಟಕ ಪ್ರಾಣಿ ಪಕ್ಷಿಗಳ ಸಮಗ್ರ ದಾಖಲಾತಿ ಮತ್ತು ಆ ಕುರಿತ ಅಪೂರ್ವ ಮಾಹಿತಿಗಳ ಪ್ರಕಟಣೆ, ಪರಿಸರ ಪ್ರೀತಿ ಮತ್ತು ಸಂರಕ್ಷಣೆಯ ದೃಷ್ಟಿಗಳಿಂದ ಬಹುಮುಖ್ಯವಾದುದು. ಈ ಜೀವಿಗಳ ವಂಶ, ಕುಟುಂಬ, ಭಿನ್ನ ಹೆಸರುಗಳು, ವಾಸದನೆಲೆ ಮತ್ತು ವಲಸೆ, ಆಹಾರ ಪದ್ಧತಿ, ಸಂತಾನೋತ್ಪತ್ತಿಯ ಸೊಗಸು ಇವೆಲ್ಲ ಶೋಧಿಸಿದಷ್ಟೂ ನಿಗೂಢವಾದ, ಅರಿತಷ್ಟೂ ಅಚ್ಚರಿ ಮೂಡಿಸುವ ಸಂಗತಿಗಳಾಗಿವೆ. ಹಳೆಯ ಗೆಝೆಟಿಯರ್ಗಳ ಸಾಮಗ್ರಿಯನ್ನೇ ನೆಮ್ಮಿಕೊಂಡು ಮತ್ತೆ ಮತ್ತೆ ಪ್ರಕಟಣೆಗಳನ್ನು ತರುವ ಬದಲು ಈ ಸಂಪುಟದ ಮೂರು ಮಂದಿ ವಿಜ್ಞಾನತಜ್ಞರಾದ ಡಾ. ಹಾ. ಬ. ದೇವರಾಜ ಸರ್ಕಾರ್, ಡಾ. ಎನ್. ಎ. ಮಧ್ಯಸ್ಥ, ಡಾ. ಎಚ್. ಎಚ್. ಷಣ್ಮುಖಮ್ಮ- ಇವರು ಹೊಸ ಸರ್ವೇಕ್ಷಣೆ ನಡೆಸಿ, ಹೊಸ ಪ್ರಾಣಿ ಪಕ್ಷಿಗಳನ್ನು ಕಂಡುಹಿಡಿದು ಚೂಲಮೂಲಗಳನ್ನು ಶೋಧಿಸಿ ಚಿತ್ರಗಳ ಸಹಿತ ಇಲ್ಲಿ ವರದಿ ಮಾಡಿದ್ದಾರೆ. ಸರೀಸೃಪಗಳು, ಸಸ್ತನಿಗಳು, ಪಕ್ಷಿಗಳು ಇವುಗಳ ರಮ್ಯ ಜಗತ್ತು ಇಲ್ಲಿ ರೆಕ್ಕೆ ಬಿಡಿಸಿಕೊಂಡಿವೆ. ಕರ್ನಾಟಕದ ಪರಿಸರ ಮತ್ತು ಜೀವಜಗತ್ತನ್ನು ತನ್ನ ಜೀವಧಾತುವಾಗಿ ಇಟ್ಟುಕೊಂಡು ಕೆಲಸ ಮಾದುತ್ತಿರುವ ಕನ್ನಡ ವಿಶ್ವವಿದ್ಯಾಲಯವು ಈ ಪ್ರಾಣಿಪಕ್ಷಿ ಸಂಪುಟದ ಪ್ರಕಟಣೆಯ ಮೂಲಕ ತನ್ನ ಭಾವಕೇಂದ್ರಿತ ಧೋರಣೆಗೆ ಉತ್ತಮ ಆಧಾರವನ್ನು ಒದಗಿಸಿದೆ. ವಿಜ್ಞಾನ, ತಂತ್ರಜ್ಞಾನದಂತಹ ಜ್ಞಾನಕ್ಷೇತ್ರಗಳು ಕನ್ನಡ ಭಾಷೆಯ ಮೂಲಕವೇ ಕನ್ನಡಿಗರಿಗೆ ದೊರಕಬೇಕು ಎನ್ನುವ ಕನ್ನಡ ವಿಶ್ವವಿದ್ಯಾಲಯದ ಸಂಕಲ್ಪ ಇಲ್ಲಿ ಫಲ ನೀಡಿದೆ.

ಜಾಗತಿಕ ಮಟ್ಟದಲ್ಲಿ ಜೀವವಿಜ್ಞಾನದ ಶ್ರೇಷ್ಠವಿದ್ವಾಂಸರಾದ ಡಾ. ಹಾ. ಬ. ದೇವರಾಜ ಸರ್ಕಾರ್ ಇವರ ಹಿರಿತನದಲ್ಲಿ ಸದಾ ಹಕ್ಕಿಗಳ ಜೊತೆಗೆ ಹಾರಾಡುವ ಪಕ್ಷಿ ವಿಜ್ಞಾನಿ ಡಾ. ಎನ್‌. ಎ. ಮಧ್ಯಸ್ಥರು ಮತ್ತು ಸಸ್ತನಿಗಳನ್ನು ಮಾತೆಯ ಮಮತೆಯಿಂದ ಕಾಣುವ ಡಾ. ಎಚ್‌. ಎಚ್‌. ಷಣ್ಮುಖಮ್ಮನವರು ಈ ಅದ್ಭುತ ಜಗತ್ತಿನ ಪ್ರಾಣಿಪಕ್ಷಿ ಸಂಪುಟವನ್ನು ಕನ್ನಡದಲ್ಲಿ ತುಂಬ ಪರಿಶ್ರಮ, ಪ್ರೀತಿ ಅರ್ಪಣ ಮನೋಭಾವದಿಂದ ರಚಿಸಿಕೊಟ್ಟಿದ್ದಾರೆ. ಡಾ. ಹಾ. ಬ. ದೇವರಾಜ ಸರ್ಕಾರ್ ಅವರಂತೂ ದೀರ್ಘಕಾಲದ ಸಂಶೋಧನ ಯಾತ್ರೆಯನ್ನು ನಡೆಸಿ, ಧೈರ್ಯಗುಂದದೆ ಕನ್ನಡ ವಿಶ್ವವಿದ್ಯಾಲಯದ ಈ ಕಾಯಕದ ತೇರನ್ನು ಜನರ ನಡುವೆ ಎಳೆದು ತಂದು ನಿಲ್ಲಿಸಿದ್ದಾರೆ. ತಮ್ಮ ಎಲ್ಲ ಕಷ್ಟನಷ್ಟಗಳ ನಡುವೆಯೂ ಈ ವಿಷಯದ ಮೇಲಣ ಅಪಾರ ಪ್ರೀತಿ ಮತ್ತು ಕನ್ನಡ ವಿಶ್ವವಿದ್ಯಾಲಯದ ಒಲವಿನಿಂದ ಅವರು ನಡೆಸಿದ ಈ ಬೃಹತ್‌ಸಾಹಸದ ಕಾರ್ಯಕ್ಕೆ ಕನ್ನಡ ವಿಶ್ವವಿದ್ಯಾಲಯದ ಪರವಾಗಿ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಡಾ. ಎನ್. ಎ. ಮಧ್ಯಸ್ಥ ಡಾ. ಎಚ್. ಎಚ್. ಷಣ್ಮುಖಮ್ಮ ಅವರ ವಿದ್ವತ್ತು ಮತ್ತು ಬೃಹತ್‌ಜ್ಞಾನಸಂಪತ್ತು ಕನ್ನಡಕ್ಕೆ ದೊರಕಿರುವುದು ಕನ್ನಡದ ವಿಶೇಷ ಭಾಗ್ಯವೆಂದು ಪರಿಗಣಿಸಿ ಅವರಿಗೆ ವಿಶೇಷ ವಂದನೆಗಳನ್ನು ಸಲ್ಲಿಸುತ್ತೇನೆ. ಈ ಸಂಪುಟದ ಚಿತ್ರಗಳನ್ನು ಕರಾರುವಕ್ಕಾಗಿ ಮತ್ತು ಸೃಜನಶೀಲವಾಗಿ ರಚಿಸಿದ ಶ್ರೀ ಸುರೇಶ ವೆಂ. ಕುಲಕರ್ಣಿ ಅವರ ಸಹಕಾರವನ್ನು ಇಲ್ಲಿ ಪ್ರೀತಿಯಿಂದ ನೆನೆಯುತ್ತೇನೆ.

ಈ ಯೋಜನೆಯನ್ನು ಆರಂಭಿಸಿ ಮುಂದುವರಿಸಿದ ಕನ್ನಡ ವಿಶ್ವವಿದ್ಯಾಲಯದ ಹಿಂದಿನ ಕುಲಪತಿಗಳಾದ ಡಾ. ಎಂ. ಎಂ. ಕಲಬುರ್ಗಿ ಮತ್ತು ಡಾ. ಎಚ್‌. ಜೆ. ಲಕ್ಕಪ್ಪಗೌಡ ಅವರ ಆಸಕ್ತಿ ಮತ್ತು ಪ್ರೇರಣೆಗಳನ್ನು ನಾನಿಲ್ಲಿ ವಿಶೇಷವಾಗಿ ನೆನೆಯುತ್ತೇನೆ. ಈ ಗ್ರಂಥವನ್ನು ಅಚ್ಚುಕಟ್ಟಾಗಿ ಹೊರತರುತ್ತಿರುವ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರಿಗೆ ನಾನು ಆಭಾರಿಯಾಗಿದ್ದೇನೆ.

ಬಿ. ಎ. ವಿವೇಕ ರೈ
ಕುಲಪತಿಗಳು