ಕಾರ್ಬಾನಿಫೆರಸ್ (೩೫೦ ಮಿಲಿಯ ವರ್ಷಗಳ ಹಿಂದೆ) ಅವಧಿಯ ಪ್ರಥಮಾರ್ಧದಲ್ಲಿ ಕ್ರಾಸ್ಸೊಟೆರಿಗಿ ಗಣಕ್ಕೆ ಸೇರಿದ ಕೆಲವು ಮೀನುಗಳು ನೆಲದ ಮೇಲಕ್ಕೆ ಬಂದು ವಾಸಿಸುವ ಪ್ರಯತ್ನಮಾಡಿ ಮೊದಲ ಭೂವಾಸಿ ಕಶೇರುಕಗಳಾಗಿ ಪರಿವರ್ತನೆಗೊಂಡು ಎಲ್ಲ ಭೂವಾಸಿ ಕಶೇರುಕಗಳ ಉದ್ಭವಕ್ಕೆ, ವಿಕಾಸಕ್ಕೆ ನಾಂದಿ ಹಾಡಿದವು. ಅವನ್ನು ಪ್ರಾಚೀನ ಉಭಯ ಚರಿಗಳು ಎಂದು ಮತ್ತು ಅವುಗಳಿಂದ ಉದ್ಭವಿಸಿದ ತಕ್ಷಣ ಪೂರ್ವಜ ಪ್ರಾಣಿಗಳನ್ನು ಲ್ಯಾಬರಿಂತೊಡಾಂಟಿಯ ಎಂದು ವರ್ಗಿಕರಿಸಿದ್ದಾರೆ. ಇವು ಆಧುನಿಕ ಉಭಯಚರಿಗಳ ಉದ್ಭವಕ್ಕೆ ದಾರಿ ಮಾಡಿಕೊಟ್ಟವು. ಅವು ಪ್ರಪ್ರಥಮ ಭೂವಾಸಿ ಕಶೇರುಕಗಳೆಂಬ ಪ್ರಸಿದ್ದಿಗೆ ಕಾರಣವಾಗಿದ್ದರೂ ಅವು ನಿಜವಾಗಿಯೂ ಭೂವಾಸಕ್ಕೆ ಸರಿಯಾಗಿ ಹೊಂದಿಕೊಂಡಿರಲಿಲ್ಲ. ಅವು ತಮ್ಮ ಜೀವಿತದ ಕೆಲವು ಕಾಲವನ್ನು ನೀರಿನಲ್ಲಿಯೂ ಮತ್ತು ಉಳಿದ ಕಾಲವನ್ನು ನೆಲದ ಮೇಲೂ, ಹೀಗೆ ಎರಡು ಪರ್ಯಾವರಣಗಳಲ್ಲಿ ಜೀವಿಸುತ್ತಿದ್ದುದರಿಂದ ಉಭಯಚರಿ (ಆಂಪಿಬಿಯ, ಇದು ಆಂಫಿ = ಉಭಯ ಮತ್ತು ಬಯೊಸ್ = ಜೀವನ ಎಂಬ ಎರಡು ಗ್ರೀಕ್ ಭಾಷೆಯ ಪದಗಳ ಸಂಯೋಗದಿಂದ ಉತ್ಪಿತ್ತಿಯಾದ ಪದ) ಗಳೆಂಬ ಹೆಸರಿನಿಂದ ಕರೆಯಲ್ಪಟ್ಟವು. ಆದುದರಿಂದ ಈ ಪ್ರಾಣಿಗಳು ಸಂಪೂರ್ಣ ಜಲವಾಸಿಗಳಾದ ಆದಿ ಕಶೇರುಕಗಳಿಗೂ ಮತ್ತು ಆನಂತರದ ನೆಲದ ಮೇಲಿನ ಭೂವಾಸಿ ಕಶೇರುಕಗಳಿಗೂ ನಡುವಿನ ಪರಿವರ್ತನೆಯ ಅವಸ್ಥೆಯನ್ನು ಪ್ರತಿನಿಧಿಸುತ್ತವೆ. ಎಂದು ನಂಬಲಾಗಿದೆ.

ಭೂಮಿಯ ಮೇಲೆ ಜೀವಿಗಳ ಇತಿಹಾಸದಲ್ಲಿ ನಡೆದ ಅದ್ಭುತ ಘಟನೆ ಎಂದರೆ ಕಶೇರುಕಗಳು ನೀರನ್ನು ತೊರೆದು ನೆಲದ ಮೇಲಕ್ಕೆ ವಲಸೆ ಬಂದುದು. ಈ ನಾಟಕೀಯ ಘಟನೆಯ ಮುಖ್ಯ ಪಾತ್ರಧಾರಿಗಳು ಉಭಯಚರಿಗಳು. ಇವುಗಳ ಜೀವನ ನೀರಿಗೂ-ನೆಲಕ್ಕೂ ನಡುವೆ ಉಯ್ಯಾಲೆಯಾಡುತ್ತದೆ. ಉಭಯಚರಿಗಳು ತಮ್ಮ ಜೀವನದ ಕೆಲವು ಕಾಲವನ್ನು ನೀರಿನಲ್ಲಿಯೂ ಮತ್ತು ಕೆಲವು ಕಾಲವನ್ನು ನೆಲದ ಮೇಲೆಯೂ ಕಳೆಯಲು ಅನುವಾಗಿ ಹೊಂದಿಕೊಂಡಿವೆ.

ಸಾಮಾನ್ಯ ಲಕ್ಷಣಗಳು :

. ಇವು ಜಲಚರಿಗಳು ಅಥವಾ ಅರೆಜಲಚರಿಗಳು ನೀರು ಮತ್ತು ಗಾಳಿಗಳೆರಡನ್ನೂ ಉಸಿರಾಡಬಲ್ಲವು. ಮಾಂಸಾಹಾರಿಗಳು, ತಂಪು ರಕ್ತದ (ವಿಷಮತಾಪಿಗಳು) ಪ್ರಾಣಿಗಳು, ಅಂಡಜಗಳು ಮತ್ತು ಚತುಷ್ಪಾದಿಗಳು.

. ದೇಹವನ್ನು ತಲೆ, ನೀಳವಾದ ಮುಂಡ ಮತ್ತು ಬಾಲ ಎಂಬ ಮೂರು ಭಾಗಗಳಾಗಿ ವಿಂಗಡಿಸಬಹುದು. ಬಾಲ ಇರಬಹುದು ಅಥವಾ ಇಲ್ಲದಿರಲೂಬಹುದು.

. ಸಾಮಾನ್ಯವಾಗಿ ಎರಡು ಜೊತೆ ಕಾಲುಗಳಿರುತ್ತವೆ. ಕೆಲವು ಉಭಯಚರಿಗಳಲ್ಲಿ ಕಾಲುಗಳು ಇಲ್ಲದಿರಬಹುದು. ಕಾಲುಗಳಿದ್ದಲ್ಲಿ ಪ್ರತಿಕಾಲುಗಳಲ್ಲಿಯೂ ನಾಲ್ಕು ಅಥವಾ ಐದು ಬೆರಳುಗಳಿರುತ್ತವೆ. ಬೆರಳುಗಳಿಗೆ ನಖಗಳಿರುವುದಿಲ್ಲ.

. ಜೋಡು ಈಜುರೆಕ್ಕೆಗಳಿಲ್ಲ. ಒಂಟಿ ಈಜುರೆಕ್ಕೆಗಳು ಇರಬಹುದು. ಇದ್ದರೆ ಅವಕ್ಕೆ ರೆಕ್ಕೆ ಕಡ್ಡಿಗಳಿರುವುದಿಲ್ಲ. ಸಾಮಾನ್ಯವಾಗಿ ಇರುವುದು ಬಾಲದ ಈಜುರೆಕ್ಕೆ ಮಾತ್ರ.

. ಚರ್ಮ ಮೃದು, ಒದ್ದೆಯಾಗಿರುತ್ತದೆ ಮತ್ತು ಗ್ರಂಥಿಗಳಿರುತ್ತವೆ. ಚರ್ಮದಲ್ಲಿ ವರ್ಣಾಂಕ ಕೋಶಗಳಿವೆ.

. ಉಭಯಚರಿಗಳು ಸಂಪೂರ್ಣವಾಗಿ ಬಹಿರ್ ಅಸ್ಥಿಪಂಜರ ರಹಿತ. ಕೆಲವು ಉಭಯಚರಿಗಳ ಚರ್ಮದಲ್ಲಿ ಹುದುಗಿದ ಡರ್ಮಲ್ ಹುರುಪೆಗಳಿವೆ.

. ಉಭಯಚರಿಗಳ ಅಂತಃ ಅಸ್ಥಿಪಂಜರವೂ ಹೆಚ್ಚು ಕಡಿಮೆ ಸಂಪೂರ್ಣಮೂಳೆಗಳನ್ನು ಒಳಗೊಂಡಿದೆ. ಭ್ರೂಣಾವಸ್ಥೆಯಲ್ಲಿ ನೋಟೊಕಾರ್ಡ ಕಾಣಿಸಿಕೊಂಡರೂ ಪ್ರಬುದ್ಧಾವಸ್ಥೆಯವರೆಗೆ ಉಳಿಯುವುದಿಲ್ಲ. ತಲೆಬುರುಡೆಯಲ್ಲಿ ಎರಡು ಅಸ್ಥಿಕಂದ (ಆಕ್ಸಿಪಿಟಿಲ್ ಕಾಂಡೈಲ್) ಗಳಿವೆ.

. ಬಾಯಿ ಅಗಲ, ಮೇಲಿನ ಅಥವಾ ಎರಡೂ ದವಡೆಗಳಲ್ಲಿ ಒಂದೇ ತೆರನಾದ ಹಲ್ಲುಗಳಿರುತ್ತವೆ. ಚಾಚಬಹುದಾದ ನಾಲಿಗೆ ಇದೆ. ಅನ್ನನಾಳವು ಕ್ಲೊಯಕ (ಅವಸ್ಕರ)ಕ್ಕೆ ತೆರೆಯುತ್ತದೆ.

. ನೆಲವಾಸಿಗಳಾದುದರಿಂದ ಶ್ವಾಸಕೋಶಗಳು ಮುಖ್ಯ ಶ್ವಾಸಾಂಗಗಳಾದರೂ ಚರ್ಮ ಮತ್ತು ಬಾಯಂಗಳದ ಭಿತ್ತಿಯೂ ಉಸಿರಾಟದಲ್ಲಿ ನೆರವಾಗುತ್ತವೆ. ಲಾರ್ವ ಅವಸ್ಥೆಯಲ್ಲಿ ಹೊರಕಿವಿರುಗಳಿದ್ದು ಕೆಲವು ಉಭಯಚರಿಗಳಲ್ಲಿ ಪ್ರಬುದ್ಧಾವಸ್ಥೆಯಲ್ಲಿಯೂ ಉಳಿದು ಶ್ವಾಸಾಂಗಗಳಾಗಿ ಮುಂದುವರಿಯಬಹುದು.

೧೦. ಹೃದಯದಲ್ಲಿ ಮುಖ್ಯವಾಗಿ ಎರಡು ಹೃತ್ಕರಣ ಮತ್ತು ಒಂದು ಹೃತ್ಕುಕ್ಷಿ ಇದ್ದು ಮೂರು ಕೋಣೆಗಳಿದ್ದು ಕ್ಷಯಿಸಿದ ಸೈನಸ್ ವಿನೋಸಸ್ ಇರುತ್ತವೆ. ಹೃದಯದಿಂದ ೧ ರಿಂದ ೩ ಜೊತೆಮಹಾಪಧಮನಿಗಳು ಹೊರಡುತ್ತವೆ. ಕೆಂಪು ರಕ್ತಕಣಗಳು ದೊಡ್ಡವು, ಅಂಡಾಕಾರದವು ಮತ್ತು ಕೋಶಬೀಜ ಉಳ್ಳವು. ದೇಹದ ಶಾಖವು ಪರಿಸರದ ಶಾಖದೊಂದಿಗೆ ಬದಲಾಗುತ್ತದೆ. (ಅಸಮತಾಪಿಗಳು).

೧೧. ಪ್ರಬುದ್ಧ ಉಭಯಚರಿಗಳಲ್ಲಿ ಮೂತ್ರಪಿಂಡಗಳಾಗಿ ವರ್ತಿಸುವುದು ಮೀಸೋನೆಫ್ರಾಸ್. ಮೂತ್ರಕೋಶವಿದೆ. ಮೂತ್ರ ವಾಹಿನಿಗಳು ಕ್ಲೋಯಕಕ್ಕೆ ತೆರೆಯುತ್ತವೆ.

೧೨. ಮಿದುಳು ಚೆನ್ನಾಗಿ ಬೆಳೆದಿಲ್ಲ ಹತ್ತು ಜೊತೆ ಕಪಾಲ ನರಗಳಿವೆ.

೧೩. ನಾಸಿಕಗಳು ಬಾಯಂಗಳಕ್ಕೆ ತೆರೆಯುತ್ತವೆ. ನಡುಕಿವಿಯಲ್ಲಿ ಕಾಲುಮೆಲ್ಲ ಆರಿಸ್ ಎಂಬ ಒಂದು ಮೂಳೆ ಇದ್ದು ಕಿವಿಯ ತಮಟೆಯ ಕಂಪನಗಳನ್ನು ಒಳಕಿವಿಗೆ ಮುಟ್ಟಿಸುತ್ತದೆ. ಲಾರ್ವಾ ಅವಸ್ಥೆಯಲ್ಲಿ ಮತ್ತು ಕೆಲವು ಪ್ರಬುದ್ಧಾವಸ್ಥೆಯಲ್ಲಿಯೂ ಜಲಚರಿ ಉಭಯಚರಿಗಳಲ್ಲಿ ಪಾರ್ಶ್ವ ಪಂಕ್ತಿ ಮತ್ತು ಅದಕ್ಕೆ ಸಂಬಂಧಿಸಿದ ಸಂವೇದನಾಂಗಗಳು ಇರುತ್ತವೆ.

೧೪. ಇವು ಭಿನ್ನಲಿಂಗಿಗಳು ಗಂಡು ಪ್ರಾಣಿಗಳಲ್ಲಿ ಆಲಿಂಗನಾಂಗಗಳಿಲ್ಲ. ಅಂಡವಾಹಿನಿಗಳು ಕ್ಲೋಯಕಕ್ಕೆ ತೆರೆಯುತ್ತವೆ. ಸಾಮಾನ್ಯವಾಗಿ ನಿಷೇಚನ ದೇಹದ ಹೊರಗೆ ನಡೆಯುತ್ತದೆ ಮತ್ತು ಇವು ಅಂಡಜಗಳು.

೧೫. ಬೆಳವಣಿಗೆ ಅಪ್ರತ್ಯಕ್ಷ ರೀತಿಯದು. ಬೆಳವಣಿಗೆಯಲ್ಲಿ ಲಾರ್ವ ಅವಸ್ಥೆ ಇದ್ದು ರೂಪಪರಿವರ್ತನೆಯ ಅನಂತರ ಪ್ರಬುದ್ಧಾವಸ್ಥೆಯನ್ನು ತಲುಪುತ್ತದೆ. ಬೆಳವಣಿಗೆಯ ಕಾಲದಲ್ಲಿ ಯಾವ ರೀತಿಯ ಭ್ರೂಣೀಯ ಪಟಲಗಳು ಬೆಳೆಯುವುದಿಲ್ಲ.

ಇಂದು ಬದುಕಿರುವ ಉಭಯಚರಿಗಳನ್ನು ಮೂರು ಗಣಗಳಾಗಿ ವರ್ಗಿಕರಿಸಿದೆ.

ಗಣ ೧. ಯೂರೊಡೀಲ : ಇವುಗಳಲ್ಲಿ ಬಾಲ ಮತ್ತು ಕಾಲುವೆಗಳೆರಡೂ ಇವೆ. ಉದಾ : ಸಾಲಮಾಂಡರಗಳು (ಇವು ಕರ್ನಾಟಕದಲ್ಲಿ ದೊರಕುವುದಿಲ್ಲ)

ಗಣ ೨. ಅನ್ಯೂರ : ಕಾಲುಗಳಿವೆ, ಪ್ರಬುದ್ಧಾವಸ್ಥೆಯಲ್ಲಿ ಬಾಲವಿಲ್ಲ. ಉದಾ : ಕಪ್ಪೆ. ನೆಲಗಪ್ಪೆ

ಗಣ ೩. ಅಪೊಡ : (ಜಿಮ್ನೊಫಿಯಾನ ) ಕಾಲುಗಳಿಲ್ಲದ ಉಭಯಚರಿಗಳು ಉದಾ : ಇತ್ತಲೆ ಮಂಡಲ.

 

ಗಣ : ಅನೂರ
ಕುಟುಂಬ : ರಾನಿಡೀ (Ranidae)
ಉದಾ : ಹಸಿರು ಕಪ್ಪೆ (Green frog)
ಶಾಸ್ತ್ರೀಯನಾಮ : ರಾನ ಹೆಕ್ಸಡ್ಯಾಕ್ಟೈಲ (Rana hexadactyla)

057_69_PP_KUH

ವಿತರಣೆ : ಸಿಹಿನೀರು ಕೆರೆ, ಕಟ್ಟೆ ಕೊಳ, ಹಳ್ಳ, ಹೊಳೆ, ನದಿಗಳಂತಹ ತೇವಭರಿತ ಪ್ರದೇಶಗಳಲ್ಲಿ ಇದು ವಾಸಿಸುತ್ತದೆ.

ಗಾತ್ರ : ೬-೮ ಸೆಂ. ಮೀ. ಉದ್ದ ೧೦೦ ರಿಂದ ೧೪೦ ಗ್ರಾಂ ತೂಕ

ಆಹಾರ : ಕೀಟಾಹಾರಿ, ಜೀವಂತವಿರುವ ಚಲಿಸುವ ಆಹಾರ ಜೀವಿಗಳನ್ನು ಮಾತ್ರ ಹಿಡಿದು ನುಂಗುತ್ತದೆ. ನಿಶ್ಚಲ ಜೀವಿಗಳನ್ನು ಮುಟ್ಟುವುದಿಲ್ಲ.

ಲಕ್ಷಣಗಳು : ದೇಹವನ್ನು ತಲೆ, ಮುಂಡ ಮತ್ತು ಕಾಲುಗಳೆಂದು ಮೂರು ಭಾಗಗಳಾಗಿ ವಿಂಗಡಿಸಬಹುದು.

ತಲೆ ಸುಮಾರು ತ್ರಿಕೋನಾಕಾರವಾಗಿದೆ. ಮುಂಬಾಗದಲ್ಲಿ ಮೊಂಡು ಮೂತಿ ಇದೆ. ಮೂತಿಯ ತುದಿಯಲ್ಲಿ ಅಗಲವಾದ ಬಾಯಿ ಇದೆ. ಬಾಯನ್ನು ಅಗಲವಾಗಿ ತೆರೆಯಬಹುದು. ಮೂತಿಯ ಮುಂತುದಿಯಲ್ಲಿ ಬಾಯಿಯ ಮೇಲೆ ಒಂದು ಜೊತೆ ಹೊರನಾಸಿಕಗಳಿವೆ. ಇವು ಬಾಯಂಗಳದೊಳಕ್ಕೆ ಒಳ ನಾಸಿಕಗಳ ಮೂಲಕ ತೆರೆಯುತ್ತವೆ. ಮತ್ತು ಉಸಿರಾಟದಲ್ಲಿ ಗಾಳಿಯನ್ನು ಸೆಳೆದುಕೊಳ್ಳಲು ಮತ್ತು ಹೊರಬಿಡಲು ನೆರವಾಗುತ್ತದೆ. ನಾಸಿಕಗಳ ಹಿಂದೆ, ತಲೆಯ ಮೇಲ್ಭಾಗದಲ್ಲಿ ಒಂದು ಜೊತೆ ಉಬ್ಬಿದಂತಿರುವ ಕಣ್ಣುಗಳಿವೆ. ಒಂದೊಂದು ಕಣ್ಣಿಗೂ ಮೇಲಿನ ಮತ್ತು ಕೆಳಗಿನ ಎಂಬ ಎರಡು ಕಣ್ಣು ರೆಪ್ಪೆಗಳಿವೆ. ಮೇಲಿನ ರೆಪ್ಪೆ ನಿಶ್ಚಲ ಮತ್ತು ಉಳಿದ ದೇಹದ ಚರ್ಮದ ಬಣ್ಣ ಹೊಂದಿದೆ. ಕೆಳಗಿನ ರೆಪ್ಪೆ ತೆಳುವು ಮತ್ತು ಅರೆಪಾರದರ್ಶಕ. ಇವೆರಡರ ಜೊತೆಗೆ, ಕಪ್ಪೆ ನೀರಿನಲ್ಲಿದ್ದಾಗ, ಕಣ್ಣನ್ನು ನೀರಿನಿಂದ ರಕ್ಷಸಿ ನೋಡಲು ಸಹಾಯ ಮಾಡುವ ಪಾರದರ್ಶಕವಾದ ನಿಮೇಷಕ ಪಟಲವೆಂಬ ಮೂರನೆಯ ಕಣ್ಣು ರೆಪ್ಪೆಯೊಂದಿದೆ. ಕಣ್ಣುಗಳ ಹಿಂಭಾಗದಲ್ಲಿ ಉಳಿದ ಚರ್ಮದಿಂದ ಗುರುತಿಸಬಹುದಾದ ಒಂದು ಜೊತೆ ದುಂಡು ಕಿವಿ ತಮಟೆಗಳಿವೆ.

ಮುಂಡ ಭಾಗಕ್ಕೆ ಪಕ್ಕೆಗಳಲ್ಲಿ ಅಂಟಿಕೊಂಡಂತೆ ಎರಡು ಜೊತೆ ಕಾಲುಗಳಿವೆ. ಮುಂಗಾಲುಗಳು ಕಿವಿ ತಮಟೆಗಳ ಹಿಂದೆ ಇವೆ. ಹಿಂಗಾಲುಗಳು ಮುಂಡದ ಹಿಂತುದಿಯಲ್ಲಿ ಅಕ್ಕಪಕ್ಕದಲ್ಲಿ ಅಂಟಿಕೊಂಡಿವೆ. ಹಿಂಗಾಲುಗಳು ಮುಂಡಕ್ಕೆ ತಗುಲಿದ ಭಾಗಗಳ ನಡುವೆ ಕ್ಲೊಯಕ ರಂಧ್ರವಿದೆ. ಇದರ ಮೂಲಕ ಮಲ, ಮೂತ್ರ ಮತ್ತು ಲಿಂಗಾಣುಗಳು ವಿಸರ್ಜನೆಗೊಳ್ಳುತ್ತವೆ. ಕಾಲುಗಳು ಪಂಚಾಂಗುಲಿ ಮಾದರಿಯವು. ಎರಡೂ ಒಂದೇ ತೆರೆನಾದ ವಿಭಜನೆಯನ್ನು ತೋರುತ್ತವೆ. ಹಸ್ತದಲ್ಲಿ ನಾಲ್ಕು ಬೆರಳುಗಳಿದ್ದು ಹೆಬ್ಬೆರಳು ಇಲ್ಲ. ಪಾದದಲ್ಲಿ ವಿವಿಧ ಉದ್ದದ ಐದು ಬೆರಳುಗಳಿದ್ದು ಅವುಗಳ ನಡುವೆ ಜಾಲಪಾದವಿದೆ. ಇದರಿಂದ ಕಪ್ಪೆ ನೀರಿನಲ್ಲಿ ಸುಲಭವಾಗಿ ಚಲಿಸಬಲ್ಲದು. ಪಾದದ ಹೆಬ್ಬೆರಳಿನ ಪಕ್ಕದಲ್ಲಿ ಕ್ಷೀಣಿಸಿದ ಬೆರಳನ್ನು ಹೋಲುವ ಒಂದು ರಚನೆ ಇದೆ. ಅದನ್ನು ಕ್ಯಾಲ್ಕಾರ ಎಂದು ಕರೆಯುತ್ತಾರೆ. ಅದು ಕ್ಷಯಿಸಿ ಕಳೆದು ಹೋದ ಆರನೆಯ ಬೆರಳನ್ನು ಪ್ರತಿನಿಧಿಸುತ್ತದೆಂದು ಈ ಕಪ್ಪೆ ಪ್ರಭೇಧಕ್ಕೆ ಹೆಕ್ಸಡ್ಯಾಕ್ಟೈಲ ಎಂಬ ಹೆಸರು ಕೊಟ್ಟಿದ್ದಾರೆ.

ಗಂಡು ಕಪ್ಪೆಯಲ್ಲಿ ಕತ್ತಿನ ಭಾಗದಲ್ಲಿ ಒಂದು ಜೊತೆ ಧ್ವನಿಸಂಚಿಗಳಿವೆ. ಇವು ದವಡೆಯ ಕೋನಗಳ ಬಳಿ ಚರ್ಮದ ಚೀಲಗಳಂತಿದ್ದು ಓರೆಯಾದ ಸೀಳಿನಂತಿರುವ ತೆರಪಿನ ಮೂಲಕ ಹೊರಕ್ಕೆ ತೆರೆಯುತ್ತವೆ. ಇದಕ್ಕೆ ಬಾಯಿ ಅಂಗಳದ ತಳಭಾಗದಿಂದ ಸಂಬಂಧವಿದೆ. ಕಪ್ಪೆ ಮಾಡುವ ಶಬ್ದವನ್ನು ಜೋರಾಗಿ ಮಾರ್ನುಡಿಸಿ ವಟ ಗುಟ್ಟುವ ಸದ್ದು ಹೊರಬರುವಂತೆ ಮಾಡುತ್ತದೆ.

ಗಂಡು ಕಪ್ಪೆಯ ಹಸ್ತದ ತೋಳು ಬೆರಳಿನ ಬುಡದಲ್ಲಿ ಋತು ಮಾಸದಲ್ಲಿ ಊದಿಕೊಂಡ ದಪ್ಪ ಮೆತ್ತೆಯೊಂದು ಬೆಳಯುತ್ತದೆ. ಮೊಟ್ಟೆ ಇಡುವ ಕಾಲದಲ್ಲಿ ಮೈತುನ ಸಂದರ್ಭದಲ್ಲಿ ಗಂಡು ಕಪ್ಪೆಯು ಹೆಣ್ಣು ಕಪ್ಪೆಯನ್ನು ಭದ್ರವಾಗಿ ಹಿಡಿದುಕೊಳ್ಳಲು ನೆರವಾಗುತ್ತದೆ.

ಹೆಣ್ಣು ಕಪ್ಪೆಯಲ್ಲಿ ಈ ಕೈಯ ಮೆತ್ತೆಯಾಗಲಿ, ಧ್ವನಿಯಾಗಲಿ ಇರುವುದಿಲ್ಲ.

ಚರ್ಮವು ಮೇಲ್ಬಾಗದಲ್ಲಿ ದಟ್ಟ ಹಸಿರು ಬಣ್ಣವಾಗಿದ್ದು, ಹೊಟ್ಟೆಯ ಭಾಗದಲ್ಲಿ ತಿಳಿ ಹಳದಿ ಬಣ್ಣವಾಗಿದೆ. ಚರ್ಮವು ಸಡಿಲವಾಗಿ ದೇಹಕ್ಕೆ ಅಂಟಿಕೊಂಡಿದೆ. ಇದಕ್ಕೆ ಯಾವುದೇ ರೀತಿಯ ಹೊರ ಅಸ್ಥಿಪಂಜರದ ಆಧಾರ, ರಕ್ಷಣೆ ಇಲ್ಲ.

ಸಂತಾನಾಭಿವೃದ್ಧಿ : ಮಳೆಗಾಲದ ಆರಂಭವು ಇವುಗಳ ಸಂತಾನೋತ್ಪತ್ತಿ ಚಟುವಟಿಕೆಯ ಕಾಲ. ಇದು ಅಂಡಜ. ಒಮ್ಮೆಗೆ ಹಲವು ನೂರು ಮೊಟ್ಟೆಗಳನ್ನಿಡುತ್ತದೆ. ಮೊಟ್ಟೆಗಳು ಸಾಸುವೆಯಂತೆ ದುಂಡಾಗಿವೆ. ಅವುಗಳ ಸುತ್ತು ಜೆಲ್ಲಿಯ ಒಂದು ಹೊದಿಕೆ ಇದ್ದು, ನೀರಿನಲ್ಲಿ ರಕ್ಷಿಸಿ, ತೇಲಲು ನೆರವಾಗುತ್ತದೆ. ಮೂರು ದಿನಗಳಲ್ಲಿ ಮೊಟ್ಟೆಗಳು ಒಡೆದು ಗೊದಮೊಟ್ಟೆಗಳು ಹೊರಬರುತ್ತವೆ. ಅವು ರೂಪ ಪರಿವರ್ತನೆಗೊಂಡು ಮರಿಕಪ್ಪೆಗಳು ನೀರಿನಿಂದ ಹೊರಕ್ಕೆ ಕುಪ್ಪಳಿಸುತ್ತ ಬರುತ್ತವೆ.

ಸ್ವಭಾವ : ಮೊದಲ ಮಳೆ ಬಿದ್ದು ಮಳೆಗಾಲ ಆರಂಭವಾಗುತ್ತಿದ್ದಂತೆಯೆ ಗಂಡು ಕಪ್ಪೆಗಳು ನೀರು ತುಂಬಿದ ಕೆರೆಕಟ್ಟೆಗಳ ಬಳಿಗೆ ವಲಸೆ ಬಂದು ಶಬ್ದ ಮಾಡಿ, ಮೊಟ್ಟೆಗಳನ್ನಿಡುವಂತೆ ಹೆಣ್ಣು ಕಪ್ಪೆಗಳನ್ನು ಆಹ್ವಾನಿಸುತ್ತವೆ. ನೀರಿನ ಬಳಿಗೆ ಹೆಣ್ಣು ಕಪ್ಪೆಗಳು ಬರುತ್ತಿದ್ದಂತೆಯೇ, ಹಾರಿ ಅವುಗಳ ಬೆನ್ನಮೇಲೆ ಕುಳಿತು ಕಾಲುಗಳಿಂದ ಅಪ್ಪಿಕೊಳ್ಳುತ್ತವೆ. ಇದನ್ನು ಆಂಪ್ಲೆಕ್ಸ್ಸ್ (ಮೈಥುನಾಲಿಂಗನ ಎಂದು ಕರೆಯುತ್ತಾರೆ). ಇದು ಹೆಣ್ಣು ಕಪ್ಪೆ ಮೊಟ್ಟೆಗಳನ್ನು ವಿಸರ್ಜಿಸಲು ಅಗತ್ಯವಾದ ಪ್ರಚೋದನೆಯನ್ನು ಕೊಡುತ್ತದೆ. ಹೆಣ್ಣು ಕಪ್ಪೆ ಮೊಟ್ಟೆಗಳನ್ನು ಹೊರಚೆಲ್ಲುತ್ತಿದ್ದಂತೆ ಅವುಗಳ ಮೇಲೆ ಗಂಡು ಕಪ್ಪೆಯು ತನ್ನ ವೀರ್ಯವನ್ನು ಸುರಿಸುತ್ತದೆ. ಮೊಟ್ಟೆಗಳು ನೀರನ್ನು ತಲುಪಿ, ಅವುಗಳ ಸುತ್ತಲಿನ ಜೆಲ್ಲಿ ಪದರ ಊದಿ ದಪ್ಪವಾಗುವ ಮೊದಲು ಪುರುಷಾಣುಗಳು ತತ್ತಿಯನ್ನು ತಲುಪಿ ನಿಷೇಚನಗೊಳ್ಳಬೇಕೆಂದು ಈ ಅಭ್ಯಾಸ. ಏಕೆಂದರೆ ಜೆಲ್ಲಿ ಊದಿತೆಂದರೆ ಅದು ಪುರುಷಾಣುಗಳ ಪ್ರವೇಶಕ್ಕೆ ತಡೆಯೊಡ್ಡುತ್ತದೆ.

ಮೊಟ್ಟೆಗಳು ಮತ್ತು ಗೊದಮೊಟ್ಟೆಗಳು ಸಂಪೂರ್ಣ ನೀರಿನಲ್ಲಿಯೇ ಬೆಳೆಯುತ್ತವೆ.

ಈ ಕಪ್ಪೆಯ ಕಾಲುಗಳಿಗೆ ಬೇಡಿಕೆಯುಂಟು. ದಕ್ಷಿಣ ಕನ್ನಡ ಜಿಲ್ಲೆಯ ಗದ್ದೆಗಳಲ್ಲಿ ಹೇರಳವಾಗಿ ದೊರಕುವ ಈ ಕಪ್ಪೆಗಳನ್ನು ಹಿಡಿದು, ಕಾಲುಗಳನ್ನು ಕತ್ತರಿಸಿ ರಪ್ತು ಮಾಡಲಾಗುತ್ತಿದೆ. ಈ ಕಪ್ಪೆಗಳನ್ನು ಕೃತಕವಾಗಿ ಸಂತಾನೋತ್ಪತ್ತಿ ನಡೆಸಬಹುದಾದ ಸಾಧ್ಯತೆ ಇದ್ದು ಕೃತಕವಾಗಿ ನಿಷೇಚಿಸಿ ಸಾಕಿ ಬೆಳಸಬಹುದಾದ ತಂತ್ರಜ್ಞಾನವಿದ್ದರೂ ಯಾರೂ ಭಾರತದಲ್ಲಿ ಇದರ ಕಡೆಗೆ ಗಮನ ನೀಡಿ ಕಪ್ಪೆ ಸಾಕಾಣಿಕೆ ಕೇಂದ್ರಗಳನ್ನು ಆರಂಭಿಸದಿರುವುದು ಶೋಚನೀಯ.

 —-

ಗಣ : ಅನೂರ
ಕುಟುಂಬ : ರಾನಿಡೀ (Ranidae)
ಉದಾ : ಗೂಳಿ ಕಪ್ಪೆ (Bull frog)
ಶಾಸ್ತ್ರೀಯನಾಮ : ರಾನ ಟೈಗರಿನ (Rana tigerina)

058_69_PP_KUH

ವಿತರಣೆ : ಶಾಶ್ವತ ಸಿಹಿನೀರು ತಾಣಗಳಾದ ಕೆರೆ, ಕೊಳ ಮತ್ತು ನದಿಗಳು, ಸಿಹಿನೀರಿನ ಮೂಲದ ಬಳಿ ಅಥವಾ ತೇವ ಪ್ರದೇಶಗಳಲ್ಲಿ ವಾಸ. ಇದು ಚರ್ಮದ ಮೂಲಕವೂ ಉಸಿರಾಡುವುದರಿಂದ ಮತ್ತು ಸುಲಭವಾಗಿ ನೀರಿಗಿಳಿದು, ಮುಳುಗಿ, ಈಜಿ ಶತೃಗಳಿಂದ ತಪ್ಪಿಸಿಕೊಳ್ಳಬಹುದಾದುದರಿಂದ ತನ್ನ ಜೀವಿತದ ಹೆಚ್ಚು ಕಾಲವನ್ನು ನೀರಿನಲ್ಲಿ ಕಳೆಯುತ್ತದೆ.

ಗಾತ್ರ : ೧೨ ರಿಂದ ೧೮ ಸೆಂ. ಮೀ ಉದ್ದ, ೫ ರಿಂದ ೮ ಸೆಂ. ಮೀ ಅಗಲ, ೧೪೦ ರಿಂದ ೧೫೦ ಗ್ರಾಂ ತೂಕ.

ಆಹಾರ : ಮಾಂಸಹಾರಿ, ಜೀವಂತ ಕೀಟಗಳು, ಹುಳುಗಳು, ಮೃದ್ವಂಗಿಗಳು, ಗೊದಮೊಟ್ಟೆಗಳು ಇತ್ಯಾದಿ ಇದರ ಆಹಾರ.

ಲಕ್ಷಣಗಳು : ದೇಹವನ್ನು ತಲೆ, ಮುಂಡ, ಕಾಲುಗಳೆಂದು ವಿಭಾಗಿಸಬಹುದು. ತಲೆಯು ಮುಂಡದಿಂದ ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ತಲೆ ಚಪ್ಪಟೆ ಸುಮಾರಾಗಿ ತ್ರಿಕೋನಾಕಾರವಾಗಿದೆ. ಮುಂಭಾಗದಲ್ಲಿ ಮೊಂಡಾದ ಮೊಂಡು ಮೂತಿ ಉಂಟು. ಅಗಲವಾದ ದೊಡ್ಡಬಾಯಿ, ಎರಡು ಸಣ್ಣ ನಾಸಿಕಗಳು ತಲೆಯ ಮೇಲೆ ಮೂತಿಯ ತುದಿಯಲ್ಲಿವೆ. ಇವು ಉಸಿರಾಟಕ್ಕೆ ನೆರವಾಗುತ್ತವೆ. ಎರಡು ದೊಡ್ಡ ಉಬ್ಬಿದ ಕಣ್ಣುಗಳಿವೆ. ಮೇಲು ಕಣ್ಣು ರೆಪ್ಪೆ ದಪ್ಪ, ವರ್ಣಭರಿತ ಮತ್ತು ನಿಶ್ಚಲ. ಕೆಳರೆಪ್ಪೆಯು ತೆಳು, ಅರೆ ಪಾರದರ್ಶಕ ಮತ್ತು ಸುಲಭವಾಗಿ ಚಲಿಸುತ್ತದೆ. ಇದರ ಕೆಳಗೆ ನಿಮೇಷಕಪಟಲ ಎಂಬ ಸಂಪೂರ್ಣ ಪಾರದರ್ಶಕ ಮೂರನೆಯ ಕಣ್ಣು ರೆಪ್ಪೆಯೊಂದಿದೆ. ನೀರಿನಲ್ಲಿ ಈಜುವಾಗ ಕಣ್ಣನ್ನು ಮುಚ್ಚಿರಕ್ಷಿಸುತ್ತದೆ ಮತ್ತು ನೀರಿನಿಂದ ಹೊರಗಿರುವಾಗ ಕಣ್ಣನ್ನು ಒದ್ದೆಯಾಗಿಡುತ್ತದೆ. ಕಣ್ಣುಗಳ ಮುಂದೆ ಒಂದು ಹಣೆ ಗುರುತು ಇದೆ. ಇದು ಇಂಗಿ ಹೋದ ಪೈನಿಯಲ್, ಮೂರನೆಯ/ಹಣೆ ಕಣ್ಣನ್ನು ಪ್ರತಿನಿಧಿಸುತ್ತದೆ. ಪ್ರತಿಕಣ್ಣಿನ ಹಿಂಭಾಗದಲ್ಲಿ ಸುತ್ತಲ ಚರ್ಮದಿಂದ ಪ್ರತ್ಯೇಕವಾಗಿ ಸ್ಪಷ್ಟವಾಗಿ ಕಾಣುವ ದಂಡನೆಯ ಕಿವಿ ತಮಟೆ/ಟಿಂಪೆನಮ್‌ಇದೆ. ಇದು ಗಾಳಿಯಲ್ಲಿನ ಕಂಪನಗಳನ್ನು ಗ್ರಹಿಸಲು ನೆರವಾಗುತ್ತದೆ. ಇದರ ವಿನಹ ಹೊರ ಕಿವಿಗಳಿಲ್ಲ. ಗಂಡು ಗೂಳಿ ಕಪ್ಪೆಗಳಲ್ಲಿ ಗಂಟಲಿನ ಬಳಿ ಎರಡೂ ಪಕ್ಕಗಳಲ್ಲಿ ಒಂದೊಂದರಂತೆ ಎರಡು ನೀಲಿಬಣ್ಣದ ಚರ್ಮದ ಗುರುತಿದೆ. ಅದು ಒಳಗಿರುವ ಧ್ವನಿ ಸಂಚಿಯ ಸುಳಿವು ನೀಡುತ್ತವೆ. ಋತುಮಾಸದಲ್ಲಿ ಗಂಡುಕಪ್ಪೆ ಮಾಡು ವಟಗುಟ್ಟು ಸದ್ದನ್ನು ಈ ಸಂಚಿಗಳು ಧ್ವನಿವರ್ಧಿಸುತ್ತವೆ.

ಮುಂಡ ಭಾಗವು ಚಪ್ಪಟೆಯಾಗಿ ಅಂಡಾಕಾರವಾಗಿದೆ. ಇದು ವಿಸ್ತಾರವಾಗಿ ತಲೆಯೊಂದಿಗೆ ಕೂಡಿಕೊಂಡಿದೆ. ಮುಂಡದ ಮೇಲ್ಬಾಗವು ಸೊಂಟದ ಬಳಿ ಕುಳಿತಾಗ ವಿಶೇಷ ರೀತಿಯಲ್ಲಿ ಮೇಲೆದ್ದು ಗೂನು ರೀತಿಯಲ್ಲಿರುತ್ತದೆ. ಮುಂಡದ ಹಿಂದಿನ ತುದಿಯಲ್ಲಿ ಹಿಂಗಾಲುಗಳು ಮುಂಡಕ್ಕೆ ಸೇರಿರುವ ಭಾಗದಲ್ಲಿ ಅವೆರಡರ ನಡುವೆ ಕ್ಲೋಯಕ ರಂಧ್ರವಿದೆ. ಇದರ ಮೂಲಕ ಮಲ, ಮೂತ್ರ ಮತ್ತು ಲಿಂಗಾಣುಗಳ ವಿಸರ್ಜನೆಯಾಗುತ್ತದೆ. ಮುಂಡದ ಪಕ್ಕದಲ್ಲಿ ಮುಂಡಕ್ಕೆ ಸೇರಿದಂತೆ ಎರಡು ಜೊತೆ ಕಾಲುಗಳಿವೆ. ತಲೆಯ ಹಿಂಬಾಗದಲ್ಲಿ ಮುಂಡದ ಮುಂತುದಿಯಲ್ಲಿ, ಕುಳ್ಳಗಿನ ಮುಂಗಾಲುಗಳಿವೆ. ಹಸ್ತದಲ್ಲಿ ನಾಲ್ಕು ಬೆರಳುಗಳಿವೆ. ಇವಕ್ಕೆ ಜಾಲಪಾದವಿಲ್ಲ. ಹೆಬ್ಬೆರಳು ಕ್ಷೀಣಿಸಿದ ಅವಸ್ಥೆಯಲ್ಲಿದೆ. ಗಂಡು ಕಪ್ಪೆಯಲ್ಲಿ ಮುಂಗಾಲಿನ ಮೊದಲ ಬೆರಳ ಬುಡದಲ್ಲಿ ದಪ್ಪ ಮೆತ್ತೆ ಇದ್ದು ಋತು ಮಾಸದಲ್ಲಿ ಶೋಭನ (ನಪ್ಷಿಯಲ್) ಮೆತ್ತೆಯಾಗಿ ಮೈಥುನಾಲಿಂಗನ ಕಾಲದಲ್ಲಿ ಹೆಣ್ಣು ಕಪ್ಪೆಯನ್ನು ಬಿಗಿಯಾಗಿ ಅಪ್ಪಿಕೊಳ್ಳಲು ನೆರವಾಗುತ್ತದೆ. ಹಿಂಗಾಲುಗಳು ಬಲವಾಗಿವೆ, ಮುಂಗಾಲುಗಳಿಂತ ಉದ್ದವಾಗಿವೆ ಮತ್ತು ಮುಂಡದ ಹಿಂತುದಿಯಲ್ಲಿ ಪರಸ್ಪರ ಹತ್ತಿರದಲ್ಲಿ ಹುಟ್ಟುತ್ತವೆ. ಪಾದಗಳಲ್ಲಿ ನೀಳ ಐದು ಬೆರಳುಗಳಿದ್ದು ಅವು ಜಾಲಪಾದದಿಂದ ಕೂಡಿಕೊಂಡಿವೆ ಮತ್ತು ಈಜಲು ನೆರವಾಗುತ್ತವೆ.

ದೇಹದ ಮೇಲಿನ ಚರ್ಮವು ಲೋಳೆಯುಕ್ತವಾಗಿ ನುಣುಚಲಾಗಿ, ನಯವಾಗಿದೆ ಮತ್ತು ದೇಹಕ್ಕೆ ಸಡಿಲವಾಗಿ ಅಂಟಿಕೊಂಡಿದೆ. ಚರ್ಮದಲ್ಲಿ ಹುರುಪೆಗಳಿಲ್ಲ ಮತ್ತು ಯಾವುದೇ ರೀತಿಯ ಹೊರ ಅಸ್ಥಿಪಂಜರ ರಚನೆಗಳಿಲ್ಲ.

ಚರ್ಮವು ಬೆನ್ನಿನ ಭಾಗದಲ್ಲಿ ಹಸಿರು ಅದರ ಮೇಲೆ ಕಪ್ಪು ಅಥವ ಕಂದು ಚುಕ್ಕೆ ಗುರುತು ಕಂಗೊಳಿಸುವುದು. ಹೊಟ್ಟೆಯ ಭಾಗ ಬಿಳುಪು ಅಥವಾ ತೆಳು ಹಳದಿ. ಇದರ ಬೆನ್ನಿನ ಬಣ್ಣ ವೈವಿದ್ಯವು ಹುಲಿಯನ್ನು ಹೋಲುವುದರಿಂದ ಟೈಗರಿನ ಎಂದು ಹೆಸರಿಡಲಾಗಿದೆ. ಮೂತಿಯ ಮುಂತುದಿಯಿಂದ ಮಂಡದ ಹಿಂತುದಿಯವರೆಗೆ ಬೆನ್ನಿನ ಭಾಗದಲ್ಲಿ ಒಂದು ಮಸುಕು ಗೆರೆ ಇದೆ.

ಸಂತಾನಾಭಿವೃದ್ಧಿ : ಅಂಡಜ, ಮುಂಗಾರು ಕಾಲದಲ್ಲಿ ಮೊಟ್ಟೆಗಳನ್ನಿಡುತ್ತದೆ. ಮೊಟ್ಟೆಗಳ ಸುತ್ತ ಜೆಲ್ಲಿ ಹೊದಿಕೆ ಇದ್ದು ಅವುಗಳನ್ನು ರಕ್ಷಿಸುತ್ತದೆ. ಒಮ್ಮೆಗೆ ಹಲವು ನೂರು ಮೊಟ್ಟೆಗಳನ್ನಿಡುತ್ತದೆ. ಮೊಟ್ಟೆಗಳು ಬಂಡಾರಭರಿತವಾಗಿವೆ. ಮೂರು ದಿನಗಳಲ್ಲಿ ಮೊಟ್ಟೆ ಒಡೆದು ಗೊದ ಮೊಟ್ಟೆಗಳು ಹೊರಬಂದು, ಸ್ವತಂತ್ರ ಜೀವನ ನಡೆಸಿ, ಮೂರು ತಿಂಗಳಲ್ಲಿ ರೋಪಪರಿವರ್ತನೆಗೊಂಡು ಪ್ರಬುದ್ಧಾವಸ್ಥೆಯನ್ನು ತಲುಪುತ್ತವೆ.

ಸ್ವಭಾವ : ಇದೊಂದು ನಿರುಪದ್ರವಕಾರಿ, ವಿಷವಲ್ಲದ, ಸಾಮಾನ್ಯವಾಗಿ ನಿಃಶಬ್ಧವಾಗಿರುವ ಪ್ರಾಣಿ, ಗಲಭೆಯಾಗಿ ಅದು ಚಲಿಸುವವರೆಗೆ ಅದು ಇರುವುದೇ ಗೊತ್ತಾಗುವುದಿಲ್ಲ. ಕಪ್ಪೆ ನೆಲದ ಮೇಲೆ ಕುಪ್ಪಳಿಸಿ ನಡೆಯುತ್ತದೆ ಮತ್ತು ನೀರಿನಲ್ಲಿ ಸಮರ್ಥವಾಗಿ ಈಜುತ್ತದೆ.

ಇದರ ಸರಳ ರಚನೆ, ಹೆಚ್ಚು ವೆಚ್ಚವಿಲ್ಲದೆ ಸಂಶೋಧನಾಲಯದಲ್ಲಿ ಇಡಬಹುದಾದ ಅನುಕೂಲದಿಂದ ಪಾಠಕ್ರಮದ ಅಭ್ಯಾಸಕ್ಕೆ, ಸಂಶೋಧನೆಗೆ ಅದರಲ್ಲಿಯೂ ಶಾರೀರಕ್ರಿಯೆ, ಔಷಧಶಾಸ್ತ್ರ ಗರ್ಭಾವಸ್ಥೆ ಪರೀಕ್ಷೆಗಳಿಗೆ ಬಳಕೆಯಾಗುತ್ತದೆ. ಬೆಳವಣಿಗೆ ಹಾನಿಕಾರಕವಾದ ಕೀಟಗಳನ್ನು ತಿಂದು ರೈತನಿಗೆ ಸಹಾಯವಾಗುತ್ತದೆ. ಇವನ್ನು ಬೆಳಸಬಹುದು ಮತ್ತು ಸಾಕಬಹುದು. ಇದರ ಕಾಲುಗಳು ಉತ್ತಮ ಆಹಾರ ಮತ್ತು ಪಾಶ್ಚಿಮಾತ್ಯ ದೇಶಗಳಲ್ಲಿ ಅತ್ಯಧಿಕಾ ಬೇಡಿಕೆ ಉಂಟು. ಇದನ್ನು ಬೆಳಸದೆ, ನಿಸರ್ಗದಲ್ಲಿ ಸ್ವಾಭಾವಿಕವಾಗಿ ದೊರಕುವವುಗಳನ್ನೇ ಪಾಠ ಪ್ರವಚನಗಳಿಗೆ ಸಂಶೋಧನೆಗೆ ಕಾಲುಗಳನ್ನು ರಫ್ತು ಮಾಡಲು ಇದರ ನಾಶವಾಗುತ್ತಿದೆ. ಕೆಲವು ದೇಶಗಳಲ್ಲಿ ಅಭ್ಯಾಸಕ್ಕೆ ಇದರ ಬಳಕೆಯ ಮೇಲೆ ಕಾನೂನಿನ ತಡೆ ಇದೆ.

 —-

ಗಣ : ಅನೂರ
ಕುಟುಂಬ : ಬ್ಯೂಫೊನಿಡೀ (Bufonidae)
ಉದಾ : ನೆಲಗಪ್ಪೆ (Toad)
ಶಾಸ್ತ್ರೀಯನಾಮ : ಬುಪೋ ಮೆಲನೊಸ್ಟಿಕ್ಟಸ್
‌(Bufo melanostictus)

059_69_PP_KUH

ವಿತರಣೆ : ಆಸ್ಟ್ರೇಲಿಯಾ ಖಂಡ ವಿನಹ ಉಳಿದೆಲ್ಲ ಖಂಡಗಳಲ್ಲಿಯೂ ಕಂಡುಬರುತ್ತದೆ. ಈ ಕುಟುಂಬಕ್ಕೆ ಸೇರಿದಂತೆ ೩೦೦ ಪ್ರಭೇಧಗಳಿವೆ. ಸಮುದ್ರ ಮಟ್ಟದಿಂದ ೩೦೦೦ ಮೀಟರ್ ಎತ್ತರದವರೆಗೆ ಎಲ್ಲ ಪ್ರದೇಶಗಳಲ್ಲಿಯೂ ದೊರಕುತ್ತದೆ. ನೆಲದ ಮೇಲೆ ತೇವಾಂಶ ಇರುವಲ್ಲಿ ವಾಸಿಸುತ್ತದೆ.

ಗಾತ್ರ : ೩ ರಿಂದ ೪ ಸೆಂ. ಮೀ. ಉದ್ದ, ೨೫-೪೦ ಗ್ರಾಂ ತೂಕ

ಆಹಾರ : ಹುಳುಗಳು, ಶಂಭುಕಗಳು, ಕೀಟಗಳು.

ಲಕ್ಷಣಗಳು : ಕೆಲವು ಸಣ್ಣ ಪುಟ್ಟ ವ್ಯತ್ಯಾಸಗಳ ವಿನಹ ಉಳಿದೆಲ್ಲ ರಚನೆಗಳಲ್ಲಿ ಇದು ಕಪ್ಪೆಗಳನ್ನು ಹೋಲುತ್ತದೆ.

ತಲೆಯ ಮೆಲೆ ಚರ್ಮವು ಸುಕ್ಕುಗಟ್ಟಿ ಏಣುಗಳಾಗಿವೆ. ಚರ್ಮ ಹೆಚ್ಚು ಒಣಗಿದಂತಿದೆ ಮತ್ತು ಚರ್ಮವ ಮೇಲೆಲ್ಲಾ ಗಂತಿಗಳಿವೆ. ಕಿವಿ ತಮಟೆಗಳ ಹಿಂಭಾಗದಲ್ಲಿ ಚರ್ಮದ ಗ್ರಂಥಿಗಳು ಮಾರ್ಪಟ್ಟು ವಿಷ ಉತ್ಪತ್ತಿ ಮಾಡಲು. ಪರಿಣಿತವಾದ ಒಂದೂ ಜೊತೆ ಪೆರೊಟಿಡ್‌ಗ್ರಂಥಿಗಳಾಗಿವೆ. ಹಿಡಿಯುವ ಶತೃಗಳಿಗೆ ಕಿರುಕುಳ ಕೊಡುವಂತಹ ಒಂದು ರೀತಿಯ ಸ್ರಾವಿಕೆಯನ್ನು ಉತ್ಪತ್ತಿಮಾಡುತ್ತವೆ. ಎರಡೂ ದವಡೆಗಳಲ್ಲಿ ಹಲ್ಲುಗಳಿಲ್ಲ. ಕಪ್ಪೆಗಳಲ್ಲಿರುವ ವೂಮರೈನ್‌ಹಲ್ಲುಗಳೂ ಇಲ್ಲ. ಮೂತಿ ಸಣ್ಣದು ಮತ್ತು ಮೊಂಡು. ನಾಲಗೆ ಬಿಡಿ ತುದಿ ಸೀಳಿಲ್ಲ.

ಸೊಂಟ ಅಗಲವಾಗಿದೆ. ಹಿಂದಿನ ಕಾಲುಗಳು ಕಪ್ಪೆಗಳ ಹಿಂಗಾಲುಗಳಿಗೆ ಹೋಲಿಸದರೆ ಮೋಟು. ಹಸ್ತದಲ್ಲಿ ನಾಲ್ಕು ಬೆರಳುಗಳಿವೆ. ಪಾದಗಳಲ್ಲಿ ಅರೆಜಾಲಪಾದವಿರುವ ಐದು ಬೆರಗಳುಗಳಿವೆ. ಕೈಬೆರಳಿನ ತುದಿಗಳು ಹಿಗ್ಗಿ ಸಣ್ಣ ತಟ್ಟೆಗಳಂತಾಗಿವೆ.

ಸಂತಾನಾಭಿವೃದ್ಧಿ : ಮಳೆಗಾಲದಲ್ಲಿ ಮೊಟ್ಟೆ ಇಡುತ್ತವೆ. ಇವುಗಳಲ್ಲಿಯೂ ಗಂಡು ಹೆಣ್ಣನ್ನು ಅಪ್ಪಿಕೊಳ್ಳುವ ಮೈಥುನ ಆಲಿಂಗನ ಇದೆ. ಇವುಗಳಲ್ಲಿಯೂ ಮೊಟ್ಟೆಗಳ ಸುತ್ತ ಜೆಲ್ಲಿ ಇರುತ್ತಾದರೂ ಅದು ಮಣಿಸರದಂತೆ ಇರುತ್ತದೆ. ಜೆಲ್ಲಿ ಕೊಳವೆಯಾಕಾರವಾಗಿ ಉದ್ದವಾಗಿದ್ದು ಅದರೊಳಗೆ ಅಲ್ಲಲ್ಲಿ ಮೊಟ್ಟೆಗಳಿರುತ್ತವೆ. ಈ ಮೊಟ್ಟೆ ಸರಗಳನ್ನು ಯಾವುದಾದರೂ ಜಲಸಸ್ಯಕ್ಕೆ ಸುತ್ತಿ ಕೊಚ್ಚಿ ಹೋಗದಂತೆ ರಕ್ಷಿಸುತ್ತವೆ.

ಸ್ವಭಾವ : ನೆಲಗಪ್ಪೆಯನ್ನು ಹಿಡಿದಾಗ ಅವು ಮೂತ್ರ ವಿಸರ್ಜಿಸುವ ಮತ್ತು ದುರ್ಗಂಧ ಹೊಲಸು ಸ್ರವಿಕೆಯನ್ನು ಉತ್ಪತ್ತಿ ಮಾಡಿ ತನ್ನನ್ನು ರಕ್ಷಿಸಿಕೊಳ್ಳುವ ಪ್ರವೃತ್ತಿ ತೋರುತ್ತದೆ. ಇದರಿಂದ ಹೇಸಿಕೊಂಡ ಶತ್ರುಗಳು ಇವುಗಳನ್ನು ತಿನ್ನದಂತೆ ತ್ಯಜಿಸಲು ಪ್ರಚೋದಿಸುತ್ತದೆ. ನೆಲಗಪ್ಪೆಗಳನ್ನು ಮುಟ್ಟಿದರೆ ಕೈಗಳ ಮೇಲೆ ಗಂತಿಗಳೇಳುತ್ತವೆ ಎಂಬ ಮೂಢ ನಂಬಿಕೆ ಉಂಟು.

—- 

ಗಣ : ಅನೂರ
ಕುಟುಂಬ : ಮೈಕ್ರೊಹೈಲಿಡೀ (Microhylidae)
ಉದಾ : ಹಾರುವ ಕಪ್ಪೆ (Flying frog)
ಶಾಸ್ತ್ರೀಯನಾಮ : ಮೈಕ್ರೋಹೈಲ ಒರ್ನೇಟ (Microhyla ornata)

060_69_PP_KUH

ವಿತರಣೆ : ಪಶ್ಚಿಮ ಘಟ್ಟದ ಸುತ್ತಲಿನ ಪ್ರದೇಶ. ಕೊಟ್ಟಿಗೆಹಾರ ಬಳಿ (ಹಾಸನ ಜಿಲ್ಲೆ ) ಕೆಂಪು ಹೊಳೆಯ ಕೆಸವಿನ ಗಿಡದ ಪುಷ್ಪ ಗುಚ್ಛದಲ್ಲಿ ಸಾಮಾನ್ಯವಾಗಿ ವಾಸ.

ಗಾತ್ರ : ೧ ರಿಂದ ೨ ಸೆಂ. ಮೀ.

ಆಹಾರ : ಕೀಟಾಹಾರಿ.

ಲಕ್ಷಣಗಳು : ಉಳಿದೆಲ್ಲ ಲಕ್ಷಣಗಳಲ್ಲಿ ಕಪ್ಪೆಗಳಂತೆಯೇ ಇದ್ದು ಆಕಾರದಲ್ಲಿ ಸಣ್ಣವು. ದೇಹದ ಬಣ್ಣ ಹಸಿರು. ಬೆರಳುಗಳು ಉದ್ದವಾಗಿದ್ದು ಬೆರಳುಗಳ ತುದಿಯ ಮೂಳೆಗಳು ನಖಗಳಂತಿದ್ದು ಮರಗಳ ಜೀವನಕ್ಕೆ ಹೊಂದಿಕೊಂಡಿವೆ. ಬೆರಳುಗಳ ತುದಿಗಳು ಹಿಗ್ಗಿ ತಟ್ಟೆಯಂತಹ ರಚನೆಗಳು ಅಥವಾ ಮೆತ್ತೆಗಳಾಗಿವೆ. ಈ ಫಲಕಗಳು ಅಂಟಾಗಿದೆ. ಅವು ಹೀರು ಬಟ್ಟಲುಗಳಂತೆ ವರ್ತಿಸುವುದಿಲ್ಲ. ಆದರೆ ತೇವವಾದ ತಂತು ರೂಪದ ನೆರಿಗೆಗಳಿದ್ದು ಜಾರದಂತೆ ಹಿಡಿತ ಸಾಧಿಸಲು ಅನುವಾಗಿವೆ. ಇದರಿಂದ ಇದು ವಾಸಿಸುವ ಎಲೆಗಳ ಮೇಲೆ ಬಿಗಿ ಹಿಡಿತ ಸಾಧಿಸುತ್ತದೆ. ಇದರಲ್ಲಿ ಲೋಮನಾಳ ಆಕರ್ಷಣೆ ವಿಧಾನವು ಪಾತ್ರವಹಿಸುತ್ತದೆ. ಜೊತೆಗೆ ಲೋಳೆಯಿಂದ ಅಂಟಿಕೊಳ್ಳುವುದೂ ನಡೆಯುತ್ತದೆ.

ಇವು ಮರಗಿಡಗಳ ನಡುವಿನ ಜೀವನಕ್ಕೆ ಹೊಂದಿಕೊಂಡಿವೆ. ಬೆರಳುಗಳ ಅಂಗುಲಿ ಮೂಳೆಗಳ ನಡುವೆ ಮೃದ್ವಸ್ಥಿಗಳಿದ್ದು ವಸ್ತುಗಳನ್ನು ಭಧ್ರವಾಗಿ ಹಿಡಿಯಲು ಹೆಚ್ಚು ಒತ್ತು ಕೊಡುತ್ತದೆ.

ಇವು ಮಾದುವ ಸದ್ದು ಸುಮಾರು ದೂರದವರೆಗೆ ಕೇಳಿಸುತ್ತದೆ. ಇದು ಬಡಿಗೆಯಿಂದ ಹೊಡೆಯುವ ಅಥವಾ ಹಕ್ಕಿಗಳ ಶಿಲ್ಪಿ ಕೂಗಿನಂತೆ ಇರುತ್ತದೆ.

 

ಗಣ : ಅನೂರ
ಕುಟುಂಬ : ರ್ಹಾಕೋಫೋರಿಡೀ (Rhacophoridae)
ಉದಾ : ಮರಗಪ್ಪೆ (Tree frog)
ಶಾಸ್ತ್ರೀಯನಾಮ : ರ್ಹಾಕೊಫೋರಸ್
ಮಲಬಾರಿಕಸ್(Rhacophorus malabaricus)

061_69_PP_KUH

ವಿತರಣೆ : ಪಶ್ಚಿಮ ಘಟ್ಟದ ಆಜು ಬಾಜು ಜಿಲ್ಲೆಗಳಾದ ಚಾಮರಾಜನಗರ, ಮೈಸೂರು, ಕೊಡಗು, ದಕ್ಷಿಣ ಕನ್ನಡ ಮತ್ತು ಹಾಸನ ಇಲ್ಲಿ ಮರಗಿಡಗಳಲ್ಲಿ ಮತ್ತು ಕೆಲವೊಮ್ಮೆ ಮನೆಗಳ ಹಿತ್ತಲಲ್ಲಿ ಕಂಡುಬರುತ್ತವೆ.

ಗಾತ್ರ : ೨ ರಿಂದ ೩ ಸೆಂ. ಮೀ. ಉದ್ದ. ತೂಕ ೧೦-೧೨ ಗ್ರಾಂ.

ಆಹಾರ : ಮುಖ್ಯವಾಗಿ ಕೀಟಾಹಾರಿ.

ಲಕ್ಷಣಗಳು : ಉಳಿದೆಲ್ಲ ವಿಧದಲ್ಲಿಯೂ ಕಪ್ಪೆಯಂತಿರುವ ಈ ಪ್ರಾಣಿ ತನ್ನ ಶಾಖಾ ಜೀವನಕ್ಕೆ ಮತ್ತು ಗಾಳಿಯಲ್ಲಿ ತೇಲಿ, ಜಾರುವ ಜೀವನಕ್ಕೆ ಅನುವಾಗುವಂತೆ ಕೆಲವು ಮಾರ್ಪಾಡುಗಳನ್ನು ಮಾಡಿಕೊಂಡಿದೆ. ಕಾಲು ಬೆರಳುಗಳು ಉದ್ದವಾಗಿದ್ದು ಬೆರಳುಗಳ ನಡುವೆ ಜಾಲಪಾದ ಬೆಳೆದಿದೆ. ದೇಹದ ಬಣ್ಣ ಕಂದು ಅಥವಾ ಹಸಿರು ಮಿಶ್ರಿತ ಕಂದು. ಇದು ವಾಸಿಸುವ ಮರಗಿಡಗಳ ನಡುವೆ ಇದರ ಬಣ್ಣ ಈ ಕಪ್ಪೆಯನ್ನು ಶತೃಗಳಿಂದ ರಕ್ಷಿಸಲು ನೆರವಾಗುತ್ತದೆ ಇದು ಮಲಬಾರಿನ ತೇಲು ಜಾರುಕಪ್ಪೆ (ಮಲಬಾರ್ ಗ್ಲೇಡಿಂಗ್ ಫ್ರಾಗ್) ಎಂದೇ ಪ್ರಸಿದ್ಧಿಯಾಗಿದೆ.

ಇದರ ಅಗಲವಾದ ಹೊಟ್ಟೆಯ ಭಾಗ ಮತ್ತು ಉದ್ದನಾದ ಕಾಲು ಬೆರಳುಗಳ ನಡುವಿನ ಜಾಲಪಾದಗಳು ಜೊತೆಯಾಗಿ ಜಾರಿಳಿಯುವ ವಿಧಾನವನ್ನು ರೂಢಿಸಿಕೊಟ್ಟಿವೆ. ಇದರ ನೆರವಿನಿಂದ ಗಾಳಿಯಲ್ಲಿ ಜಾರಿ ಮರದ ರೆಂಬೆಗಳ ನಡುವೆ, ಮರದಿಂದ ಮರಕ್ಕೆ, ಸಾಮಾನ್ಯವಾಗಿ ಎತ್ತರ ಪ್ರದೇಶದಿಂದ ತಗ್ಗಾದ ಪ್ರದೇಶಕ್ಕೆ ಜಾರಿ ಚಲಿಸುತ್ತವೆ. ಇದು ಮರದಿಂದ ನೆಲಕ್ಕಿಳಿಯುವಾಗ ಸುಮಾರು ೩೦ ಅಡಿಗಳಿಗೂ ಹೆಚ್ಚು ದೂರವನ್ನು ಕ್ರಮಿಸಬಲ್ಲದು.

ಸಂತಾನಾಭಿವೃದ್ದಿ : ಸಾಮಾನ್ಯವಾಗಿ ಉಳಿದೆಲ್ಲ ಕಪ್ಪೆ ಜಾತಿಗಳಂತೆ ಇದೂ ಕೂಡ ಮಳೆಗಾಲದಲ್ಲಿಯೆ ಸಂತಾನೋತ್ಪತ್ತಿ ನಡೆಸುತ್ತದೆ. ಮೊಟ್ಟೆಗಳನ್ನು ಜಿಲಾಟಿನ್‌ಉಂಡೆಯ ಒಳಗೆ ಹುದುಗಿಸಿ ನೀರ ಮೇಲಿನ ಆಧಾರಗಳಿಗೆ ಅಂಟಿಸುತ್ತದೆ. ಬೆಳೆದ ಮರಿ ಮೊಟ್ಟೆಯೊಡೆದು ಕೆಳಗಿನ ನೀರಿಗೆ ಬಿದ್ದು, ನೀರಿನಲ್ಲಿ ಜೀವಿಸಿ, ರೂಪ ಪರಿವರ್ತನೆ ಗೊಳ್ಳುತ್ತದೆ.