ಗಣ : ಪರ್ಸಿಫಾರ್ಮಿಸ್‌(Perciformes)
ಕುಟುಂಬ : ಅನಬಾಂಟಿಡೀ (Anabantidae)
ಉದಾ : ಏರುವ ಪರ್ಚ್ ಮೀನು (Climbing perch)
ಶಾಸ್ತ್ರೀಯನಾಮ : ಅನಬಾಸ್ ಟೆಸ್ಟೂಡಿಯನ್ಸ್ (Anabas tesudiens)

ಕರ್ನಾಟಕದಲ್ಲಿ ಇದನ್ನು ಪನ್ನೀರಿ ಕೆಂಡೈ ಎಂದು ಕರೆಯುತ್ತಾರೆ. 

051_69_PP_KUH

ವಿತರಣೆ : ಭಾರತೀಯ ಉಪಖಂಡ, ಸಿಹಿ ನಿರು ಮತ್ತು ಉಪ್ಪು ನೀರು ವಾಸಿ, ನಾಲೆಗಳು, ಕೆರೆಗಳು ಮತ್ತು ಜೌಗುನೀರುಗಳಲ್ಲಿ ದೊರಕುತ್ತದೆ.

ಗಾತ್ರ : ಸಾಧಾರಣ ಗಾತ್ರದ ಮೀನು. ೨೫ ಸೆಂ. ಮೀ. ಉದ್ದ ಬೆಳೆಯುತ್ತದೆ.

ಆಹಾರ : ಜಲಸಸ್ಯಗಳು, ತೇಲುಜೀವಿಗಳು, ಕೀಟಗಳು.

ಲಕ್ಷಣಗಳು : ನೀಳವಾದ, ಸಾಧಾರಣ ದಪ್ಪವಾದ ದೇಹ. ಸಾಮಾನ್ಯ ಉದ್ದಕ್ಕಿಂತ ೩ ರಿಂದ ೩.೫ ರಷ್ಟು ದಪ್ಪವಾದ ದೇಹ, ಮೂತಿ ೧೩ ರಿಂದ ೧೭.೫ ಪಟ್ಟು ಹೆಚ್ಚು ಉದ್ದ ಸುಮಾರು ದೊಡ್ಡದಾದಬಾಯಿ. ದವಡೆಗಳಲ್ಲಿ ಮೊಳಕೆ ಹಲ್ಲುಗಳಿವೆ. ಪಾರ್ಶ್ವ ಸರಣಿಯಲ್ಲಿ ೨೧ ರಿಂದ ೨೯ ಹುರುಪೆಗಳಿವೆ. ಹುರುಪೆಗಳು ದೊಡ್ಡವು.

ಬೆನಿನ ಭಾಗ ಮತ್ತು ಪಕ್ಕೆಗಳು ಹಸುರಿನಿಂದ ಕಡುಕಂದು ಬಣ್ಣ ಕೆಳಗೆ ಸರಿದಂತೆ ಹೊಟ್ಟೆಯ ಭಾಗದಲ್ಲಿ ತಿಳಿಯಾಗಿವೆ. ಮರಿಗಳಲ್ಲಿ ಪಕ್ಕೆಗಳ ಬಳಿ ನೇರವಾದ ಪಟ್ಟಿಗಳಿರುತ್ತವೆ. ಬಾಲದ ಈಜುರೆಕ್ಕೆಯ ಬುಡದ ಬಳಿ ಗಮನಾರ್ಹವಾದ ಕಪ್ಪು ಕಲೆ ಇದೆ. ವಯಸ್ಸಾದಂತೆ ಈ ಕಲೆ ಮಾಸುತ್ತದೆ. ಭುಜದ ಈಜುರೆಕ್ಕೆಗಳ ಬುಡದಬಳಿಯೂ ಒಂದು ಕಪ್ಪು ಕಲೆ ಇರುತ್ತದೆ. ಬೆನ್ನಿನ ಮತ್ತು ಬಾಲದ ಈಜುರೆಕ್ಕೆಗಳು ಕಡುಕಂದು, ಭುಜದ ಮತ್ತು ಗುದ ಈಜುರೆಕ್ಕೆಗಳು ತೆಳು ಹಳದಿ ಮತ್ತು ಸೊಂಟದ ಈಜುರೆಕ್ಕೆಗಳು ತೆಳು ಕಿತ್ತಳೆ ಬಣ್ಣವಾಗಿವೆ.

ಸ್ವಭಾವ : ಗಾತ್ರದಲ್ಲಿ ಸಣ್ಣದಾದರೂ ರುಚಿಯ ದೃಷ್ಟಿಯಿಂದ ಹೆಚ್ಚು ಜನಪ್ರಿಯವಾದುದು. ಇದನ್ನು ಸಾಕುವುದು ಸುಲಭ. ಎಂತಹ ನೀರಿನಲ್ಲಿಯಾದರೂ ಎಂತಹ ಪರಿಸ್ಥಿಗಳಲ್ಲಿಯೂ ಬದುಕಬಲ್ಲದು. ಬಹಳ ಕಷ್ಟು ಸಹಿಷ್ಣು ಬೇಸಿಗೆಯಲ್ಲೂ ದೊರಕುತ್ತದೆ. ಕೆರೆಕಟ್ಟೆಗಳು ಬೇಸಗೆಯಲ್ಲಿ ಒಣಗಿ ಉಳಿಯುವ ಸಣ್ಣ ಪುಟ್ಟ ಗುಂಡಿಗಳಲ್ಲಿ ಉಳಿಯುತ್ತವೆ. ಒಂದು ವಸತಿಯಿಂದ ಇನ್ನೊಂದಕ್ಕೆ, ಮಾಂಸಲವಾದ ಈಜುರೆಕ್ಕೆಗಳನ್ನು ಬಳಸಿ ನಡೆದು ಹೋಗುತ್ತದೆ.

ಇದನ್ನು ಕ್ಲೇರಿಯನ್ ಬೆಟ್ರಾಕಸ್ ಮತ್ತು ಹೆಟ್ಟರೊನ್ಯುಸ್ಟಿಸ್ ಫಾಸಿಲಿಸ್‌ಗಳ ಜೊತೆ ಸಾಕಬಹುದು. ಕೃತಕ ಸಂತಾನೋತ್ಪತ್ತಿ ವಿಧಾನಕ್ಕೆ ಸುಲಭವಾಗಿ ಪ್ರತಿಕ್ರಿಯಿಸುತ್ತದಾದ್ದರಿಂದ ಇದನ್ನು ಸಾಕುವುದು ಸುಲಭ.

—-

ಗಣ : ಟೆಟ್ರಒಡಾಂಟಿಫಾರ್ಮಿಸ್ (Tetraodontiformes)
ಕುಟುಂಬ : ಆಸ್ಟ್ರೇಸಿಯಾಂಟಿಡೀ (Ostraciontidae)
ಉದಾ : ಪೆಠಾರಿ ಮೀನು (Coffer fish)
ಶಾಸ್ತ್ರೀಯನಾಮ : ಆಸ್ಟ್ರೇಸಿಯಾನ್ ಲೆಂಟಿಗಿನೋಸ (Ostriacion lentiginosa)

052_69_PP_KUH

ವಿತರಣೆ : ಹಿಂದೂ ಮಹಾಸಾಗರವೂ ಸೇರಿದಂತೆ ಜಗತ್ತಿನ ಉಷ್ಣವಲಯದ ಕಡಲುಗಳ ಉತ್ತಲ ನೀರಿನಲ್ಲಿ ದೊರಕುತ್ತದೆ.

ದೇಹ ಆಡ್ಡ ಸೀಳಿಕೆಯಲ್ಲಿ ಹೆಚ್ಚು-ಕಡಿಮೆ ತ್ರಿಕೋನಾಕಾರವಾಗಿದೆ. ಆರು ಮೂಲೆಯ ಮೂಳೆ ತಟ್ಟಿಗಳು ಒಂದರ ಪಕ್ಕದಲೊಂದು ಕೂಡಿ ಪೆಟ್ಟಿಗೆಯಂತಹ ರಚನೆ ನಿರ್ಮಾಣವಾಗಿದೆ. ಈ ತಟ್ಟೆಗಳು ಸ್ಪಲ್ಪ ಮಟ್ಟಿಗೆ ಅಲುಗಾಡಬಲ್ಲವು. ಈ ರಕ್ಷಾಕವಚ ಒಳಗೆ ದೇಹವು ಸುರಕ್ಷಿತವಾಗಿದೆ. ಈ ರಚನೆಯಿಂದಲೆ ಇವಕ್ಕೆ ಪೆಠಾರಿ ಮೀನುಗಳೆಂಬ ಹೆಸರು ಬಂದಿದೆ. ಕಣ್ಣುಗಳ ಮೇಲೆ ಎರಡು ಕೊಂಬಿನಂತಹ ಸೂಫ್ರಆರ್ಚೈಟಲ್ ಮುಳ್ಳುಗಳಿವೆ, ಇದರಿಂದಾಗಿ ಇವನ್ನು ಆಕಳು ಮೀನು ಎಂದೂ ಕರೆಯುವುದುಂಟು. ಉಳಿದಂತೆ ಇದು ಉಂಡೆ ಮೀನಿನ ರಚನೆಯನ್ನು ಹೋಲುತ್ತದೆ.

—- 

ಗಣ : ಎಕಿನಿಫಾರ್ಮಿಸ್‌(Echeneiformes)
ಕುಟುಂಬ : ಎಕಿನಿಡೀ (Echeneidae)
ಉದಾ : ಹೀರು ಬಟ್ಟಲು ಮೀನು (Sucker fish)
ಶಾಸ್ತ್ರೀಯನಾಮ : ಎಕಿನಿಸ್
ನಾಕ್ರೆಟಿಸ್‌(Echenies naucrates)

ವಿತರಣೆ : ಉಷ್ಣವಲಯದ ಕಡಲುಗಳಿಗೆ ಸೀಮಿತವಾದ ಮೀನು. ಹಿಂದೂ ಮಹಾಸಾಗರದಲ್ಲಿ ಕಂಡುಬರುತ್ತದೆ. ಕರ್ನಾಟಕದ ಕರಾವಳಿಯಲ್ಲಿ ಬೆಸ್ತರ ಬಲೆಗಳಲ್ಲಿ ಅಗಾಗ ದೊರಕುತ್ತವೆ.

ಗಾತ್ರ : ೧೮ ರಿಂದ ೨೧ ಅಂಗುಲ ಉದ್ದ.

ಆಹಾರ : ಕಡಲ ಸೂಕ್ಷ್ಮಜೀವಿಗಳು, ಸಣ್ಣ ಮೀನುಗಳು.

ಲಕ್ಷಣಗಳು : ದೇಹದ ಮೇಲೆ ಸಣ್ಣ ಹುರುಪೆಗಳಿವೆ. ತಲೆ ಚಪ್ಪಟೆಯಾಗಿದೆ. ಬೆನ್ನಿನ ಭಾಗದಲ್ಲಿ ದೊಡ್ಡದೊಂದು, ಚಪ್ಪಟೆಯಾದ ಅಂಡಾಕಾರದ ಅಂಟು ಫಲಕ ಅಥವಾ ಹೀರು ಬಟ್ಟಲಿದೆ ಈ ಹೀರು ಬಟ್ಟಲಿನಲ್ಲಿ ಅಡ್ಡಡ್ಡವಾಗಿ ಹರಡಿದ ಎರಡು ಸಾಲು ತಟ್ಟೆಯಂತಹ ರಚನೆಗಳಿವೆ. ವಾಸ್ತವವಾಗಿ ಈ ಹೀರುಬಟ್ಟಲು ಮಾರ್ಪಟ್ಟ ಬೆನ್ನಿನ ಈಜುರೆಕ್ಕೆ. ಈ ಹೀರುಬಟ್ಟಲ ಸಹಾಯದಿಂದ ದೊಡ್ಡ ಕಡಲು ಪ್ರಾಣಿಗಳಾದ ಶಾರ್ಕು, ತಿಮಿಂಗಿಲ, ಕಡಲಾಮೆಗಳು, ದೋಣಿಗಳು, ಹಡಗುಗಳಿಗೆ ಅಂಟಿಕೊಂಡು ಸ್ವಂತ ಶ್ರಮವಿಲ್ಲದೆ ದೂರ ದೂರ ಪ್ರಯಾಣ ಮಾಡುತ್ತವೆ. ತಾನು ವಾಸಿಸುವ ಸ್ಥಳದಲ್ಲಿ ಆಹಾರ ವಿರಳವಾದಾಗ, ಶತೃಗಳ ಭಾದೆ ಹೆಚ್ಚಾದಾಗ ಆ ಸ್ಥಳವನ್ನು ತ್ಯಜಿಸಿ ಅನುಕೂಲಕರ ಪರಿಸ್ಥಿತಿಗಳಿರುವ ಹೊಸ ಜಾಗಗಳನ್ನು ಹುಡುಕಿಕೊಂಡು ಹೋಗಲು ಈ ವಿಧಾನವನ್ನು ಅನುಸರಿಸುತ್ತದೆ. ಇದರ ಈ ತಂತ್ರವನ್ನು ಬಳಸಿಕೊಂಡು ಆಸ್ಟ್ರೇಲಿಯಾದ ಆದಿನಿವಾಸಿಗಳು ಈ ಮೀನುಗಳಿಗೆ ತರಬೇತಿ ಕೊಟ್ಟು ಅವುಗಳ ದೇಹಕ್ಕೆ ಬಲವಾದ ದಾರ/ತಂತಿಯನ್ನು ಕಟ್ಟಿ ಕಡಲಿನಲ್ಲಿ ಬಿಡುತ್ತಾರೆ. ಅವು ಕಡಲಿನಲ್ಲಿ ಕಡಲಾಮೆಗಳನ್ನು ಹಿಡಿಯುತ್ತಾರೆ.

 —-

ಗಣ : ಲೋಫಿಫಾರ್ಮಿಸ್‌(Lophilformes)
ಕುಟುಂಬ : ಲೋಫಿಡೀ (Lophidae)
ಉದಾ : ಗಾಳದ ಮೀನು (Angler fish)
ಶಾಸ್ತ್ರೀಯನಾಮ : ಆಂಟಿನ್ನೇರಿಯಸ್
ಕಮ್ಮೆನ್ಸೊನಿ (Antennarius commerasoni)

053_69_PP_KUH

ವಿತರಣೆ : ಉಷ್ಣವಲಯ ಮತ್ತು ಸಮಶೀತೋಷ್ಣ ವಲಯದ ಕಡಲುಗಳು. ಇದು ಕಡಲ ತಳದಲ್ಲಿ ವಾಸಿಸುವ ಮೀನು.

ಗಾತ್ರ : ೧.೫ ಮೀಟರ್ ಉದ್ದ ಬೆಳೆಯುತ್ತದೆ.

ಆಹಾರ : ಸಣ್ಣ ಪುಟ್ಟ ಕಡಲ ಪ್ರಾಣಿಗಳು.

ಲಕ್ಷಣಗಳು : ಕುರೂಪ ದೇಹದ ಮೀನು. ದೇಹದ ಮೇಲೆ ಹುರುಪೆಗಳ ಹೊದಿಕೆ ಇಲ್ಲದ ಒಂದು ರೀತಿಯ ಬೆತ್ತಲೆ ಪ್ರಾಣಿ. ಆದರೆ ದೇಹದ ಮೇಲೆಲ್ಲಾ ಮುಳ್ಳುಗಳು ಆಥವಾ ಗುಬುಟುಗಳಿವೆ. ದೇಹವು ಊರ್ಧ್ವ-ಅಧೋಮುಖನಾಗಿ ಚಪ್ಪಟೆಯಾಗಿದೆ. ಚರ್ಮ ದಪ್ಪ ತೊಗಲಿನಂತಿದೆ. ತಲೆ ಮತ್ತು ಮುಂಡದ ಮುಂಭಾಗ ದೊಡ್ಡದಾಗಿವೆ. ಅಗಲವಾದ ತೆರಪಿನಂತಿರುವ ಬಾಯಿ ಕಿಸಿದು ಅಗಲವಾಗಿ ತೆರೆಯಬಹುದಾಗಿದೆ. ಒಳಕ್ಕೆ ಮಡಿಸಿಕೊಂಡ ಚೂಪಾದ ಹಲ್ಲುಗಳಿವೆ. ಹಲ್ಲುಗಳ ಮೇಲೆ ಚುಕ್ಕಿ ಗುರುತಿರುವ ಚರ್ಮದ ಮಡಿಕೆ ಹೊದಿಕೆ ಇದೆ. ಸನಿಹಕ್ಕೆ ಬರುವ ಜೀವಿಗಳಿಗೆ ಹುಲ್ಲುಗಳು ಕಾಣದಂತೆ ಮಾಡಲು ಈ ಮಾರ್ಪಾಡು. ಕಿವಿರು ರಂಧ್ರಗಳು ಕ್ಷಯಿಸಿ ಸಣ್ಣ ತೂತುಗಳಂತಿವೆ.

ಬೆನ್ನಿನ ಈಜುರೆಕ್ಕೆ ಮುಳ್ಳುಮಯ. ಮುಂದಿನ ಕೆಲವು ಮುಳ್ಳುಗಳು ಉದ್ದವಾಗಿದ್ದು ಹೊಯ್ದಾಡುತ್ತವೆ. ಮುಳ್ಳುಗಳ ತುದಿಯಲ್ಲಿ ಮಾಂಸದ ತುಂಡಿನಂತಹ ಭಾಗವಿದೆ. ಈ ಮುಳ್ಳುಗಳನ್ನು ಗಾಳದಂತೆ ಆಡಿಸಿ ಆಹಾರ ಜೀವಿಗಳನ್ನು ತನ್ನೆಡೆಗೆ ಆಕರ್ಶಿಸುತ್ತದೆ. ದೇಹದ ಪಕ್ಕೆಗಳಲ್ಲಿ ಜಲಸಸ್ಯಗಳಾಕಾರದ, ಎಲೆಗಳನ್ನು ಹೋಲುವ ಚರ್ಮದ ಮಡಿಕೆಗಳಿವೆ. ಇವು ಈ ಮೀನೊಂದು ಸಸ್ಯವಿರಬಹುದೆಂಬ ಭ್ರಮೆ ಹುಟ್ಟಿಸುತ್ತವೆ. ಗಾಲ, ಜಲಸಸ್ಯ ರಚನೆಗಳೆಲ್ಲವು ಹೆಣ್ಣುಗಳ ಮೀನಿನಲ್ಲಿರುವುದು ಗಮನಾರ್ಹ. ಕುಬ್ಚಾಕಾರದ ಗಂಡುಮೀನುಗಳು ಹೆಣ್ಣು ಮೀನಿನ ತಲೆಗೆ ಶಾಶ್ವತವಾಗಿ ಅಂಟಿಕೊಂಡಿದ್ದು ಸಂತಾನೋತ್ಪತ್ತಿಗೆ ನೆರವಾಗುತ್ತವೆ.

ಕಡಲ ತಡಿಯ ಕೆಸರಿನಲ್ಲಿ ಹುದುಗಿದ್ದು, ಬೆನ್ನಿನ ಈಜುರೆಕ್ಕೆಯ ಉದ್ದ ಮುಳ್ಳು ಕಡ್ಡಿಗಳನ್ನು ಗಾಳದಂತೆ ಆಡಿಸುತ್ತವೆ. ಇದೊಂದು ಹುಳವಿರಬಹುದೆಂಬ ಭ್ರಮೆಯಲ್ಲಿ ಸನಿಹಕ್ಕೆ ಬರುವ ಇತರ ಆಹಾರ ಜೀವಿಗಳ ಮೆಲೆ ಹಟಾತ್ತಾನೆ ಮೇಲೆರಗಿ ನುಂಗುತ್ತದೆ.

ಬೇಸಿಗೆಯಲ್ಲಿ ಸಂತಾನೋತ್ಪತ್ತಿ ನಡೆಸುತ್ತವೆ. ಮೊಟ್ಟೆಯಿಂದ ಹೊರಬಿದ್ದ ಮರಿಗಳು ಕಡಲ ಮೇಲ್ಪದರದ ನೀರಿನಲ್ಲಿ ಈಜಾಡಿ ಅನಂತರ ತಳಕ್ಕೆ ಇಳಿದು ತಮ್ಮ ಜಡ ಜೀವನವನ್ನು ಆರಂಭಿಸುತ್ತವೆ.

—- 

ಗಣ : ಪರ್ಸಿಫಾರ್ಮಿಸ್‌(Perciformes)
ಕುಟುಂಬ : ಆಸ್ಟ್ರೋನೇಮಿಡೀ (Ospronemidae)
ಉದಾ : ದೈತ್ಯ ಗೋರಾಮಿ (Gaint Gourami)
ಶಾಸ್ತ್ರೀಯನಾಮ : ಆಸ್ಟ್ರೋನೇಮಿಸ್
ಗೋರಾಮಿ (Osphronemis gourami)

054_69_PP_KUH

ವಿತರಣೆ : ಇದು ಮೂಲತಃ ಸುಮಾತ್ರ ಬೋರ್ನಿಯೊ ಮತ್ತು ಜಾವಾ ವಾಸಿ ಈಗ ಪ್ರಪಂಚಾದ್ಯಂತ ಹರಡಿದೆ. ಸಿಹೀರು ಮೀನು. ಜೌಗು ಮತ್ತು ಉಪ್ಪು ನೀರುಗಳನ್ನು ಇದು ಬಿಟ್ಟು ಬದುಕಲಾರದು.

ಗಾತ್ರ : ೬೦ ಸೆಂ. ಮೀ ಉದ್ದ ಮತ್ತು ೧೦ ಕೆ. ಜಿ. ತೂಕ ಬೆಳೆಯುತ್ತದೆ.

ಆಹಾರ : ಪ್ರಥಮತಃ ಸಸ್ಯಾಹಾರಿಯಾದರೂ ಕೀಟಗಳನ್ನು ಮತ್ತು ಹುಳುಗಳನ್ನು ತಿನ್ನುತ್ತದೆ.

ಲಕ್ಷಣಗಳು : ಅಂಡಾಕಾರವಾಗಿ ತೀರಾ ಚಪ್ಪಟೆಯಾದ ದೇಹ. ದೇಹದ ಗಾತ್ರಕ್ಕೆ ಹೋಲಿಸಿದಾಗ ಪುಟ್ಟದಾದ ತಲೆ, ಪುಟ್ಟಬಾಯಿ, ದವಡೆಯ ಹಲ್ಲುಗಳು ಸಣ್ಣವು ಮತ್ತು ಶಂಖುವಿನಾಕಾರದವು. ಬಾಯಂಗಳದಲ್ಲಿ ಹಲ್ಲುಗಳಿಲ್ಲ. ಸೊಂಟದ ಈಜುರೆಕ್ಕೆಯ ಹೊರ ರೆಕ್ಕೆ ಕಡ್ಡಿಯು ದಾರದಾಕಾರದಲ್ಲಿ ಉದ್ದವಾಗಿ ಬೆಳೆದಿದೆ ಮತ್ತು ಬಾಲದ ಈಜುರೆಕ್ಕೆಗೂ ಹಿಂದಕ್ಕೆ ಚಾಚುತ್ತದೆ. ಸಾಧಾರಣ ಗಾತ್ರದ ಹುರುಪೆಗಳು ಹೆಚ್ಚು ಕಡಿಮೆ ನೇರವಾಗಿರುವ ಪಾರ್ಶ್ವ ಪಂಕ್ತಿ. ಅದರಲ್ಲಿ ೩೦ ರಿಂದ ೩೫ ಹುರುಪೆಗಳಿವೆ.

ದೇಹದ ಬಣ್ಣ ಸಾಮಾನ್ಯ ಆಲಿವ್ ಛಾಯೆಯದು. ಎಳೆಯ ಮೀನುಗಳಲ್ಲಿ ಏಳರಿಂದ ಎಂಟು. ಓರೆಯಾದ ಕಪ್ಪು ಆಡ್ಡ ಪಟ್ಟಿಗಳಿರುತ್ತವೆ. ಭುಜದ ಈಜುರೆಕ್ಕೆಯ ಬುಡದ ಬಳಿ, ಗುದದ ಈಜುರೆಕ್ಕೆ ಹಿಂತುದಿಯ ಬಳಿ, ಒಂದೊಂದು ಕಪ್ಪು ಗುರುತುಗಳಿವೆ. ಈಜುರೆಕ್ಕೆಗಳ ಬಣ್ಣ ಕಡುಕಂದು ಛಾಯೆಯುಳ್ಳದ್ದು.

ಸಂತಾನಾಭಿವೃದ್ಧಿ : ಸ್ವಾಭಾವಿಕ ನೆಲೆಗಳಲ್ಲಿ ಇದು ಒಣ ಋತುಗಳಲ್ಲಿ ಸಂತಾನೋತ್ಪತ್ತಿ ಚಟುವಟಿಕೆ ತೋರುತ್ತದೆ. ನೀರಿನ ಜೊಂಡುಗಿಡ ಮತ್ತು ಹುಲ್ಲುಗಳ ನಡುವೆ ಮೊಟ್ಟೆ ಇಡುತ್ತದೆ. ಸಾಕು ತೊಟ್ಟಿಗಳಲ್ಲಿ ವರ್ಷವಿಡೀ ಸಂತಾನೋತ್ಪತ್ತಿ ಚಟುವಟಿಕೆ ತೋರುತ್ತದೆ. ಆಳವಿಲ್ಲದ ಉತ್ತಲ ನೀರಿನಲ್ಲಿ ಗೂಡುಕಟ್ಟಿ ಮೊಟ್ಟೆ ಇಡುತ್ತದೆ. ಗೂಡುಗಳು ಹಕ್ಕಿಗೂಡುಗಳಂತೆಯೇ ಇರುತ್ತವೆ. ಇವು ಮೊಟ್ಟೆಗಳನ್ನು ಕಾದು ರಕ್ಷಿಸುತ್ತವೆ.

ಸ್ವಭಾವ : ಬಹಳಜನಪ್ರಿಯವಾದ, ಹೆಸರು ವಾಸಿಯಾದ ಆಹಾರ ಮೀನು. ಮೀನುಗಾರಿಕೆಯಲ್ಲಿ ಹೆಚ್ಚು ಬೆಳೆಸುತ್ತಾರೆ. ಭಾರತದಲ್ಲಿ ಯಶ್ವಸಿಯಾಗಿ ಬದುಕುತ್ತಿದೆ. ಇದು ನಿಜ ಗೌರಾಮಿ ಮೀನು, ಚಳಿಯನ್ನು ತಾಳಲಾರದು.

—-

ಗಣ : ಟೆಟ್ರೂಡಾಂಟಿಫಾರ್ಮಿಸ್ (Tetrodonti formes)
ಕುಟುಂಬ : ಟೆಟ್ರೂಡಾಂಟಿಡೀ (Tetrodontidae)
ಉದಾ : ಉಂಡೆ ಮೀನು (Globe fish)
ಶಾಸ್ತ್ರೀಯನಾಮ : ಟೆಟ್ರೂಡಾನ್ ಕುಲ್ ಕುಟಿಯ (Tetrodon culcutia)

055_69_PP_KUH

ವಿತರಣೆ : ಕರಾವಳಿಯ ತೀರಪ್ರದೇಶ ಮತ್ತು ಅಳವೆಗಳು (ನದಿಮುಖಜ ಭೂಮಿ).

ಗಾತ್ರ : ೧ ರಿಂದ ೩ ಅಡಿ ಉದ್ದ.

ಅಹಾರ : ಜಲಸಸ್ಯಗಳು ಮತ್ತು ತೇಲು ಜೀವಿಗಳು.

ಲಕ್ಷಣಗಳು : ದೇಹದ ಮೇಲಿನ ಹುರುಪೆಗಳು ಸಣ್ಣ ಮುಳ್ಳುಗಳಾಗಿ ಮಾರ್ಪಟ್ಟಿವೆ. ವಿಶೇಷವಾಗಿ ಹೊಟ್ಟೆಯ ಭಾಗದ ಹುರುಪೆಗಳು ಮುಳ್ಳುಗಳಾಗಿವೆ. ಬಾಯಿ ಕಿರಿದು. ಹಲ್ಲುಗಳು ಊದಿಕೊಂಡು ಕೊಕ್ಕಿನಂತಾಗಿವೆ. ಕಣ್ಣುಗಳು ದೊಡ್ಡವು ಮತ್ತು ಉಬ್ಬಿಕೊಂಡಿವೆ. ಸೊಂಟದ ಜೋಡಿ ಈಜುರೆಕ್ಕೆಗಳಿಲ್ಲ. ಈ ಮೀನುಗಳು ವಿಷಪೂರಿತವಾದುದರಿಂದ ತಿನ್ನುವುದಕ್ಕೆ ಯೋಗ್ಯವಲ್ಲ.

ಮೀನನ್ನು ನೀರಿನಿಂದ ಹೊರತೆಗೆದಾಗ, ತಕ್ಷಣ ಗಾಳಿಯನ್ನು ಸೆಳೆದುಕೊಂಡು ಬೆಲೂನಿನಂತೆ ಊದಿ ಚೆಂಡಿನಂತಾಗುತ್ತದೆ. ಇದು ಈ ಮೀನಿನ ರಕ್ಷಣೆಯ ವಿಧಾನ. ಗಾಳಿಯನ್ನು ವಿಸರ್ಜಿಸುವಾಗ ಒಂದು ರೀತಿಯ ಶಬ್ಧವಾಗುತ್ತದೆ. ಇದು ತನ್ನನ್ನು ತಿನ್ನಲೆಂದು ಬರುವ ಶತೃಗಳ ಎದುರು ಗಾಳಿಯನ್ನು ಸೇದಿ ಗಾತ್ರದಲ್ಲಿ ಹೆಚ್ಚಿ ಉಂಡೆಯಂತಾಗಿ ಶತೃವಿಗೆ ಗಾಬರಿ ಹಿಡಿಸಿ ರಕ್ಷಿಸಿಕೊಳ್ಳಲು ಈ ವಿಧಾನವನ್ನು ಅನುಸರಿಸುತ್ತದೆ. ಇದರ ಗೋಳಾಕಾರದಿಂದ ಗೋಳ/ಉಂಡೆ ಮೀನೆಂಬ ಹೆಸರು ಬಂದಿದೆ. ಈ ಮೀನುಗಳಲ್ಲಿ ಟೆಟ್ರೂಡೊಟಾಕ್ಸಿನ್ ಎಂಬ ವಿಷ ಉತ್ಪತ್ತಿಯಾಗುತ್ತದೆ. ಜಪಾನಿಗರು ಈ ವಿಷವನ್ನು ಶ್ವಾಸಕೋಶ ರೋಗಕ್ಕೆ ಮದ್ದಾಗಿ ಬಳಸುತ್ತಾರೆ.

—- 

ಗಣ : ಟೆಟ್ರೂಡಾಂಟಿಫಾರ್ಮಿಸ್ (Tetrodonti formes)
ಕುಟುಂಬ : ಡಯೊಡಾಂಟಿಡೀ (Diodontidae)
ಉದಾ : ಮುಳ್ಳು ಹಂದಿ ಮೀನು (Porcupine fish)
ಶಾಸ್ತ್ರೀಯನಾಮ : ಡಯೊಡಾನ್ ಹಿಸ್ಟ್ರಿಕ್ಸ್ (Diodon histrix)

056_69_PP_KUH

ಇದು ಕಡಲು ಮೀನು. ಸ್ವಭಾವ ಮತ್ತು ರಚನೆಯಲ್ಲಿ ಉಂಡೆ ಮೀನುಗಳನ್ನು ಹೋಲುತ್ತದೆ. ದೇಹದ ಮೇಲೆ, ಒಂದೇ ರೀತಿಯ, ಬಾಗಬಲ್ಲ, ಅಲುಗಾಡಬಲ್ಲ ಉದ್ದ ಮುಳ್ಳುಗಳಿವೆ. ಇದು ಈ ಮೀನುಗಳಲ್ಲಿ ರಕ್ಷಣೆಗಾಗಿ ನಡೆದ ಮಾರ್ಪಾಡು. ಈ ರಚನೆಯಿಂದ ಮೀನು ಮುಳ್ಳು ಹಂದಿಯನ್ನು ಹೋಲುವುದರಿಂದ ಈ ಹೆಸರು ಬಂದಿದೆ. ಈ ಮೀನಿನ ಬಾಯಲ್ಲಿ ಎರಡು ಹಲ್ಲುಗಳಿವೆ. ಅದ್ದರಿಂದ ಡಯೋಡಾನ್ ಎಂಬ ಜಾತಿಯ ಹೆಸರು ಬಂದಿದೆ.