ಸಾಮಾನ್ಯ ಲಕ್ಷಣಗಳು : ಹಕ್ಕಿಗಳು ಹಾರುವ ಯಂತ್ರಗಳು. ಜೀವಂತ ಯಂತ್ರಗಳು. ಹಕ್ಕಿ ಸಮೂಹದಲ್ಲಿ ಗುರುತಿಸಬಹುದಾದ ಎಲ್ಲ ಲಕ್ಷಣಗಳೂ ಅವುಗಳ ಹಾರುವ ಪ್ರವೃತ್ತಿಗೆ ಪೂರಕ. ಬಹುಶಃ ಎಲ್ಲರೂ, ಎಲ್ಲ ಕಾಲದಲ್ಲೂ ಸುಲಭವಾಗಿ ಗುರುತಿಸಬಲ್ಲ ಏಕೈಕ ಪ್ರಾಣಿ ಗುಂಪೆಂದರೆ ಹಕ್ಕಿಗಳದ್ದು. ಆದ್ದರಿಂದ ಹಕ್ಕಿ – ಮನುಷ್ಯನ ನಂಟು ಅನಾದಿ, ಅನಂತ.

ಹಕ್ಕಿಗಳ ಪ್ರಮುಖ ಲಕ್ಷಣವೆಂದರೆ ಗರಿಗಳು. ಗರಿಗಳಿಲ್ಲದ ಹಕ್ಕಿಗಳೇ ಇಲ್ಲ. ದೇಹದ ಹೊದಿಕೆಯಾಗಿ, ಶಾಖನಿಯಂತ್ರಕವಾಗಿ ಗರಿಗಳು, ರೆಕ್ಕೆಗಳ ಅವಿಭಾಜ್ಯ ಅಂಗಗಳೂ ಹೌದು. ಹಕ್ಕಿ ಸಮೂಹಕ್ಕೆ ಬಣ್ಣ ವೈವಿಧ್ಯವೂ ಗರಿಗಳಿಂದಲೇ. ಗಂಡು ನವಿಲಿನ ಬಾಲದ ಗರಿಗಳು ಬೀಸಣಿಗೆಯಂತೆ ಚಾಚಿದಾಗ ಯಾರಿಗೆ ತಾನೆ ಖುಷಿಯಾಗುವುದಿಲ್ಲ.

ಹಕ್ಕಿಗಳಿಗೆ ನಾಲ್ಕು ಕಾಲುಗಳು! ಆದರೆ ಮುಂದಿನ ಎರಡು ಕಾಲುಗಳು ರೆಕ್ಕೆಗಳಾಗಿ ರೂಪಾಂತರಗೊಂಡಿವೆ. ಹಕ್ಕಿಗಳ ಹೆಚ್ಚುಗಾರಿಕೆಗೆ ಈ ರೆಕ್ಕೆಗಳೇ ಮೂಲ ಕಾರಣ. ಹಕ್ಕಿಯೊಂದರ ರೆಕ್ಕೆಗಳ ಆಕಾರ, ಗಾತ್ರ, ರಚನೆ ಅದರ ಹರಾಟದ ಸಾಮರ್ಥ್ಯವನ್ನು ಸೂಚಿಸುತ್ತವೆ. ಹಕ್ಕಿಗಳ ಇನ್ನೊಂದು ಗಮನಾರ್ಹ ಲಕ್ಷಣವೆಂದರೆ ಕೊಕ್ಕುಗಳು. ಹಕ್ಕಿಗಳ ಬಾಯಲ್ಲಿ ಹಲ್ಲಿಲ್ಲ. ಆದರೆ ಕೊಕ್ಕು ಆ ಕೊರತೆ ನೀಗಿಸುತ್ತದೆ. ಮಾತ್ರವಲ್ಲ ಕೊಕ್ಕು ಹಕ್ಕಿಗಳ ಆಹಾರಾಭ್ಯಾಸವನ್ನು ಸೂಚಿಸುತ್ತದೆ. ಗೂಡು ಕಟ್ಟುವ ಸಾಧನವಾಗಿ, ವೈರಿಗಳನ್ನು ಎದುರಿಸುವ ಅಸ್ತ್ರವಾಗಿ, ಮರಿಗಳಿಗೆ ಆಹಾರ ಉಣಿಸುವ ಚಮಚವಾಗಿ, ಪ್ರೇಮ ಸಲ್ಲಾಪದಲ್ಲಿ ಮುಖ ತೀಡುವ ಅಂಗವಾಗಿ ಕೊಕ್ಕು ಉಪಯುಕ್ತ.

ಹಾರುವಾಗ ದೇಹದ ಭಾರ ಕಡಿಮೆಯಾಗಿಸಿಕೊಳ್ಳುವುದು ಅನಿವಾರ್ಯ. ಹಕ್ಕಿ ದೇಹದ ಒಳರಚನೆ ಈ ದಿಸೆಯಲ್ಲಿ ರೂಪುಗೊಂಡಿದೆ. ಮೂಳೆಗಳು ತೆಳುವಾಗಿವೆ, ಇಲ್ಲವೆ ಒಂದಕ್ಕೊಂದು ಕೂಡಿಕೊಂಡಿವೆ. ಕೆಲವೆಡೆ ಮೂಳೆಗಳ ಸಂಖ್ಯೆಯೂ ಕಡಿಮೆ. ಜೊತೆಗೆ ಅನೇಕ ಮೂಳೆಗಳು ಟೊಳ್ಳು. ಹಕ್ಕಿಗಳ ಶ್ವಾಸಕೋಶಗಳಂತೂ ವಿಶಿಷ್ಟ ೯ ಚೀಲಗಳು ಶ್ವಾಸಕೋಶಗಳಿಗೆ ಅಂಟಿಕೊಂಡಿವೆ ಮತ್ತು ಶ್ವಾಸಕೋಶದ ಸಾಮಾರ್ಥ್ಯವನ್ನು ದುಪ್ಪಟ್ಟುಗೊಳಿಸಿವೆ. ಅತ್ಯಂತ ಲವಲವಿಕೆಯ, ಸದಾ ಚಟುವಟಿಕೆಯ ಹಕ್ಕಿಗಳ ಜೈವಿಕ ಕ್ರಿಯೆಗಳು ಇತರೆ ಪ್ರಾಣಿಗಳಿಗಿಂತ ಮೇಲ್ದರ್ಜೆಯದು. ಉದಾಹರಣೆಗೆ, ಮನುಷ್ಯನ ಉಷ್ಣಾಂಶ ೩೭ ಸೆ ಆದರೆ, ಹಕ್ಕಿಗಳದ್ದು ೪೨ ಯಿಂದ ೪೫ ಸೆ. ಅಂದರೆ ಹಕ್ಕಿಗಳ ದೇಹ ಯಾವಾಗಲೂ ಬಿಸಿ. ಹೀಗಾಗಿ ಹಕ್ಕಿಗಳ ಜೀರ್ಣಕ್ರಿಯೆಯೂ ಅಸಾಮಾನ್ಯ. ಸಸ್ತನಿಯೊಂದು ತನ್ನ ಒಂದು ಕಿಲೋ ಗ್ರಾಂ ಬೆಳವಣಿಗೆಗೆ ಸುಮಾರು ಹತ್ತು ಕಿಲೋ ಗ್ರಾಂ ಆಹಾರ ಉಪಯೋಗಿಸಿಕೊಳ್ಳುತ್ತದೆ. ಆದರೆ ಸ್ಟೋರ್ಕ್‌ಹಕ್ಕಿ ಮರಿಯೊಂದು ಕೇವಲ ಮೂರು ಕಿಲೋ ಗ್ರಾಂ ಆಹಾರದಿಂದ ಒಂದು ಕಿಲೋ ಗ್ರಾಂ ತೂಕ ಹೆಚ್ಚಿಸಿಕೊಳ್ಳುತ್ತದೆ. ರಕ್ತದ ಒತ್ತಡ, ಹೃದಯ ಬಡಿತ, ಶ್ವಾಸೋಚ್ಛಾಸ ಎಲ್ಲವೂ ಹಕ್ಕಿಗಳಲ್ಲಿ ಹೆಚ್ಚು.

ಹಕ್ಕಿಗಳ ಎದೆಯ ಮಾಂಸಖಂಡ ವಿಶಿಷ್ಟ ದೇಹದ ಶೇಕಡಾ ೩೦ರಷ್ಟು ತೂಕ ಈ ಮಾಂಸಖಂಡಗಳಿಂದ. ರೆಕ್ಕೆಗಳ ಬಡಿತದ ಹಿಡಿತ ಇರುವುದೇ ಈ ಎದೆಯ ಮಾಂಸಖಂಡಗಳಲ್ಲಿ.

ಹಕ್ಕಿಗಳು ತೀಕ್ಷ್ಣ ಇಂದ್ರಿಯದ ಜೀವಿಗಳು. ವಾಸನೆ ಗ್ರಹಿಸುವುದು ಹಕ್ಕಿಗಳಿಗೆ ಸಾಧ್ಯ. (ಕಿವಿ ಹಕ್ಕಿ ಇದಕ್ಕೆ ಅಪವಾದ) ಆದರೆ ಕಿವಿ ಸೂಕ್ಷ್ಮ ಇಂಚರದ ಇಂಪು ಆಲೈಸಲು ತಕ್ಕ ಕಿವಿ ಬೇಕಲ್ಲವೆ? ಕಣ್ಣುಗಳು ಕೂಡಾ ಹಕ್ಕಿಗಳಲ್ಲಿ ಅತಿ ಸೂಕ್ಷ್ಮ. ಗೂಬೆಯ ಕಣ್ಣು ಮನುಷ್ಯರ ಕಣ್ಣುಗಳಿಗಿಂತ ಒಂದು ಸಾವಿರ ಪಟ್ಟು ಸೂಕ್ಷ್ಮವಂತೆ! (ಕಣ್ಣು ಸೂಕ್ಷ್ಮ ವಾಗಿಸಲು ಗೂಬೆ ಕಣ್ಣು ತಿನ್ನುವ ಜನಾಂಗವೂ ಇದೆ) ರುಚಿ ಹಕ್ಕಿಗಳಿಗೆ ಅಷ್ಟೊಂದು ಪ್ರಾಮುಖ್ಯವಲ್ಲ ಕಾರಣ ರುಚಿ ನೋಡುವ ಗ್ರಂಥಿಗಳು ಬಾಯಿಯ ತೀರ ಹಿಂಭಾಗದಲ್ಲಿವೆ.

ಹಕ್ಕಿಗಳ ನಡವಳಿಕೆ ಜೀವ ವಿಜ್ಞಾನದ ಅಚ್ಚರಿಗಳಲ್ಲಿ ಒಂದು ವಲಸೆ ಹೋಗುವ ಪ್ರವೃತ್ತಿ ಕಾಲ ಪ್ರಜ್ಞೆ, ಕಾಳಜಿ ಗೂಡು ನಿರ್ಮಿಸುವದರಲ್ಲಿ ತೋರುವ ನೈಪುಣ್ಯ, ಮರಿಗಳ ಬಗೆಗಿನ ಸದಾ ತೋರುವ ಜೀವನೋತ್ಸಾಹ ಎಂತಹವರನ್ನು ಬೆರಗುಗೊಳಿಸಬಹುದು. ಜಗತ್ತಿನ ಎಲ್ಲೆಡೆ, ಎಲ್ಲ ಆವಾಸಗಳಲ್ಲಿ ಕಂಡುಬರುವ ಹಕ್ಕಿಗಳ ಗುಂಪು ನಿಸರ್ಗದ ಅದ್ಭುತ ಸೃಷ್ಟಿ.

ಪಕ್ಷಿಗಳ ವರ್ಗೀಕರಣ

ವರ್ಗ : ಏವಿಸ್

ಉಪವರ್ಗಗಳು :

೧.  ಆರ್ಖಿಯಾರ್ನಿಥಿಸ್ (Archeornithes) : ಈಗಾಗಲೇ ವಿನಾಶಗೊಂಡ ಪುರಾತನ ಪಕ್ಷಿಗಳ ಗುಂಪು. ಈಗ ಪಳೆಯುಳಿಕೆ ರೂಪದಲ್ಲಿ ಮಾತ್ರ ಲಭ್ಯ. ಹಲ್ಲುಗಳಿವೆ; ಉಗುರುಗಳುಳ್ಳ ಮೂರು ಬೆರಳಗಳು; ಮೂಳೆಗಳುಳ್ಳ ಉದ್ದನೆಯ ಬಾಲ ಈ ಉಪವರ್ಗದ ಪ್ರಮುಖ ಲಕ್ಷಣಗಳು.

೨.  ನಿಯೊರ್ನಿಥಿಸ್ (Neornithes) : ನಿಜವಾದ ಹಕ್ಕಿಗಳು; ಕೈ ಬೆರಳುಗಳು ಕೂಡಿಕೊಂಡಿವೆ; ಎದೆ ಮೂಳೆ ಬಲಿಷ್ಠ; ಬಾಲದ ಕಶೇರುಕ ಮಣಿಗಳು ಕಡಿಮೆ. ನಿಯೊರ್ನಿಥಿಸ್ ಉಪವರ್ಗದಲ್ಲಿ ೨೭ ಗಣಗಳು ಮತ್ತು ೧೬೫ ಕುಟುಂಬಗಳಿವೆ. ಇವುಗಳನ್ನು ಪ್ರಮುಖವಾಗಿ ಹಾರಲಾರದ ಮತ್ತು ಹಾರುವ ಪಕ್ಷಿಗಳೆಂದು ಗುಂಪಾಗಿಸಬಹುದು.

ಹಾರಲಾರದ ಪಕ್ಷಿಗಳು (Flightless birds) : ಸಾಮಾನ್ಯವಾಗಿ ದೊಡ್ಡ ಗಾತ್ರದ ಹಕ್ಕಿಗಳು. ನೆಲದ ಮೇಲೆ ಓಡಾಡುವುದು ಇಲ್ಲವೆ ಈಜುವುದು. ಭಾರತದಲ್ಲಿ ಹಾರಲಾರದ ಹಕ್ಕಿ ಜಾತಿ ಇಲ್ಲ.

ಗಣ ೧ : ಇಂಪೆನ್ನೆ (Impennae) : ಹಾರಾಲಾರದ, ಜಾಲಪಾದ ವಿರುವ ಸಮುದ್ರವಾಸಿ ಪಕ್ಷಿಗಳು. ರೆಕ್ಕೆ ಈಜುರೆಕ್ಕೆಗಳಾಗಿವೆ. ಗರಿಗಳು ಹುರುಪೆಯಂತಿವೆ. ಉದಾ : ಪೆಂಗ್ವಿನ್.

ಗಣ ೨ : ಸ್ಟ್ರುತಿಯೋನಿಫಾರ್ಮಿಸ್ (Struthioniformes) : ವೇಗದ ನಡಿಗೆಯ ದೊಡ್ಡ ಪಕ್ಷಿ. ದೊಡ್ಡ ಭಾರವಾದ ಕಾಲುಗಳು, ಪ್ರತಿ ಕಾಲಿನಲ್ಲೂ ಎರಡೂ ಬೆರಳುಗಳು ಕುತ್ತಿಗೆ ಮತ್ತು ತಲೆ ಬೆತ್ತಲೆ. ಚಿಕ್ಕ ತೆಲೆ ಮಿದುಳು ಉದಾ : ಉಷ್ಟ್ರ ಪಕ್ಷಿ.

ಗಣ ೩ : ರಿಯಾಫಾರ್ಮಿಸ್ (Rheaformes) : ಆಸ್ಟ್ರೇಲಿಯಾದ, ವೇಗದ ನಡಿಗೆಯ ದೊಡ್ಡ ಪಕ್ಷಿ; ಬಲಿಷ್ಟ ಕಾಲು; ಪ್ರತಿ ಕಾಲಿನಲ್ಲೂ ಮೂರು ಬೆರಳುಗಳು. ಎತ್ತರ ೧.೫ ಮೀ. ಉದಾ : ರಿಯಾ (Rhea)

ಗಣ ೪ : ಕ್ಯಾಸುಯಾರಿಫಾರ್ಮಿಸ್ (Casuariformes) : ಸಾಮಾನ್ಯವಾಗಿ ಕಾಡಿನಲ್ಲಿ ವಾಸ. ನ್ಯೂಗಿನಿ, ಆಸ್ಟ್ರೇಲಿಯಾ ಮತ್ತು ಸನಿಹದ ಇತರೆ ದ್ವೀಪಗಳಿಗೆ ಸೀಮಿತ. ಗಂಡುಗಳಿಗಿಂತ ಹೆಣ್ಣು ಹಕ್ಕಿಗಳು ತುಸು ದೊಡ್ಡವು. ಕಾಲುಗಳಲ್ಲಿ ಮೂರು ಬೆರಳುಗಳು. ಕ್ಯಾಸುವಾರಿ ಮತ್ತು ಎಮು ಉದಾಹರಣೆಗಳು.

ಗಣ ೫ : ಎಟಿರಿಜಿಫಾರ್ಮಿಸ್ (Apterygiformes) : ನ್ಯೂಜಿಲೆಂಡಿನ ಹಾರಲಾರದ ಪಕ್ಷಿ. ಉಳಿದ ಹಾರಲಾರದ ಪಕ್ಷಿಗಳಿಗೆ ಹೋಲಿಸಿದರೆ ಚಿಕ್ಕವು. ಅತಿ ಚಿಕ್ಕ ರೆಕ್ಕೆಗಳು; ಉದ್ದನೆಯ ನಳಿಗೆಯಂತಹ ಕೊಕ್ಕು. ಕೊಕ್ಕಿನ ತುದಿಯಲ್ಲಿ ಮೂಗಿನ ಹೊಳ್ಳೆ ಈ ಗುಂಪಿನ ಪ್ರಮುಖ ಲಕ್ಷಣಗಳು-ಗರಿಗಳು ಕೂದಲಿನಂತಿವೆ. ಉದಾ : ಕಿವಿ (Kiwi)

ಹಾರುವ ಪಕ್ಷಿಗಳು :

ಸುಮಾರು ೨೦ ಗಣಗಳಲ್ಲಿ ೧೫೪ ಕುಟುಂಬಗಳಿವೆ.

ಗಣ ೧ : ಗೇವಿಫಾರ್ಮಿಸ್ (Gaviformes) : ಜಲವಾಸಕ್ಕೆ ಅನುಕೂಲವಾದ ರಚನೆಗಳುಳ್ಳ ಪಕ್ಷಿಗಳು. ಉದಾ : ಲೂನ್ಗಳು.

ಗಣ ೨ : ಪೊಡಿಸಿಪೆಡಿಫಾರ್ಮಿಸ್ (Podicipediformes) : ಜಲಚರ ಪಕ್ಷಗಳು. ಉದಾ : ನೀರು ಬಾತುಕೋಳಿಗಳು

ಗಣ ೩ : ಪ್ರೊಸೆಲ್ಲಾರಿಫಾರ್ಮಿಸ್ (Procellariformes) : ಸಮುದ್ರವಾಸಿ, ದೊಡ್ಡ ಗಾತ್ರದ, ಗಾಳಿಯಲ್ಲಿ ಬಹಳ ಕಾಲ ತೇಲ ಬಲ್ಲ ಪಕ್ಷಿ ಗುಂಪು. ಉದಾ : ಅಲ್ಬೆಟ್ರಾಸ್, ಪೆಟ್ರೆಲ್ ಗಳು.

ಗಣ ೪ : ಪೆಲಿಕಾನಿಫಾರ್ಮಿಸ್ (Plecaniformes) : ಮಧ್ಯಮ ಗಾತ್ರದ ಜಲಪಕ್ಷಿಗಳು. ಜಾಲಪಾದವಿದೆ. ಉದಾ : ಹೆಜ್ಜಾರ್ಲೆ, ನೀರು ಕಾಗೆ, ಹಾವು ಹಕ್ಕಿ ಮತ್ತು ಬೂಬಿ.

ಗಣ ೫ : ಸಿಕೋನಿಫಾರ್ಮಿಸ್ (Ciconiformes) : ಉದ್ದನೆ ಕಾಲಿನ ನೀರ್ನಡಿಗೆ ಹಕ್ಕಿಗಳು. ಜಾಲಪಾದವಿಲ್ಲ. ಉದಾ : ಬರ್ಕ, ಕೊಕ್ಕರೆ ತುಪ್ಪಳ, ನಾರಾಯಿಣಿ.

ಗಣ ೬ : ಆಂಸರಿಫಾರ್ಮಿಸ್ (Anseriformes) : ಬಹುತೇಕ ಸಿಹಿ ನೀರಿನಲ್ಲಿ ವಾಸಿಸುವ ಬಾತುಕೋಳಿಗಳಂತಹ ಹಕ್ಕಿಗಳ ಗುಂಪು. ಉದಾ : ಹಂಸ, ಬಾತುಕೋಳಿ, ಇತ್ಯಾದಿಗಳು.

ಗಣ ೭ : ಫಾಲ್ಕೊನಿಫಾರ್ಮಿಸ್ (Falconiformes) : ಹಿಂಸ್ರಕ ಹಕ್ಕಿಗಳು. ಉದಾ : ಹದ್ದು, ರಣಹದ್ದು, ಡೇಂಗೆ, ಗಿಡುಗ ಇತ್ಯಾದಿಗಳು.

ಗಣ ೮ : ಗ್ಯಾಲಿಫಾರ್ಮಿಸ್ (Galliformes) : ಕೋಳಿ, ಟರ್ಕಿ, ಗಿನಿ ಹಕ್ಕಿಗಳು.

ಗಣ ೯ : ಗ್ರೂಯಿಫಾರ್ಮಿಸ್ (Grueiformes) : ಉದ್ದ ಕಾಲಿನ ನೀರ್ನಡಿಗೆ ಹಕ್ಕಿಗಳು. ಉದಾ. ಕೊಕ್ಕರೆ, ಕೆನ್ನವಿಲು ಇತ್ಯಾದಿ.

ಗಣ ೧೦ : ಚರಾಡ್ರಿಫಾರ್ಮಿಸ್ (Charadriiformes) : ಜಕಣಾ, ಕಡಲುಕಾಗೆ, ತಿತ್ತಿರಿ, ಪ್ಲೋವರ‍್ ಮೊದಲಾದ ವಿಭಿನ್ನ ಪಕ್ಷಿಗಳು.

ಗಣ ೧೧ : ಕೊಲಂಬಿಫಾರ್ಮಿಸ್ (Columbiformes) : ಕಾಡು ಪಕ್ಷಿಗಳ ಗುಂಪು. ಕಪೋತ, ಪಾರಿವಾಳ ಮೊದಲಾದವು.

ಗಣ ೧೨ : ಸಿಟ್ಟಾಸಿಫಾರ್ಮಿಸ್ (Psittasiformes) : ಗಿಳಿಗಳ ಕುಟುಂಬಕ್ಕೆ ಸೇರಿದ ಪಕ್ಷಿಗಳು.

ಗಣ ೧೩ : ಸ್ವ್ರಿಜಿಫಾರ್ಮಿಸ್ (Strigiformes) : ಮಾಂಸಾಹಾರಿ ನಿಶಾಚರಿ ಪಕ್ಷಿಗಳು. ಉದಾ. ಗೂಬೆಗಳು.

ಗಣ ೧೪ : ಕುಕುಲಿಫಾರ್ಮಿಸ್ (Cuculiformes) : ಉದಾ. ಕೋಗಿಲೆ. ಕೆಂಬೂತ, ಮುಂತಾದವುಗಳು.

ಗಣ ೧೫ : ಕೇಪ್ರಿಮಲ್ಜಿಫಾರ್ಮಿಸ್ (Caprimulgiformes) : ಉದಾ. ನೆತ್ತಿಂಗ, ಕಪ್ಪೆ ಬಾಯಿ ಹಕ್ಕಿ ಮೊದಲಾದವುಗಳ ಗಣ

ಗಣ ೧೬ : ಅಪೊಡಿಫಾರ್ಮಿಸ್ (Apodiformes) : ಉದಾ. ತಾಳೆಗುಬ್ಬಿ ತೋಕೆ ಮೊದಲಾದ ಚಿಕ್ಕ ಹಕ್ಕಿಗಳ ಗಣ.

ಗಣ ೧೭ : ಟ್ರೋಗೊನಿಫಾರ್ಮಿಸ್ (Trogoniformes) : ಸುಂದರ ಗರಿಗಳ ಆಕರ್ಷಕ ಪಕ್ಷಿಗಳ ಗುಂಪು ಉದಾ : ಟ್ರೋಗಾನ್

ಗಣ ೧೮ : ಕೋರಾಸಿಫಾರ್ಮಿಸ್ (Coraciformes) : ಉದಾ. ಮೀಂಚುಳ್ಳಿ, ಚಂದ್ರಮುಕುಟ, ಜೇನ್ನೋಣಬಾಕ ಮೊದಲಾದ ಚಿಕ್ಕ ಪಕ್ಷಿಗಳ ಗುಂಪು.

ಗಣ ೧೯ : ಪಿಸಿಫಾರ್ಮಿಸ್ (Piciformes) : ಉದಾ. ಮರಕುಟಿಕ, ಕುಟ್ರುಹಕ್ಕಿ, ಮೊದಲಾದವುಗಳು.

ಗಣ ೨೦ : ಪ್ಯಾಸರಿಫಾರ್ಮಿಸ್ (Passeriformes) : ಅತ್ಯಂತ ಹೆಚ್ಚು ಪ್ರಭೇದಗಳುಳ್ಳ ಗಣವಿದು. ಉದಾ. ಪಿಕಾಳಾರ, ಮೈನಾ, ಮಡಿವಾಳ ಹಕ್ಕಿ, ಮುನಿಯಾ, ಪಿಟ್ಟಾ ಮೊದಲಾದ ಹಾಡುಹಕ್ಕಿಗಳ ಗುಂಪು.

ಪಕ್ಷಿಗಳ ವಲಸೆ

ವಲಸೆ ಹೋಗುವುದು ಅನೇಕ ಹಕ್ಕಿಗಳ ವಿಶಿಷ್ಟ ನಡವಳಿಕೆ. ನಮ್ಮ ದೇಶದಲ್ಲಿ ಕಂಡುಬರುವ ಸುಮಾರು ೨,೧೦೦ ವಿವಿಧ ರೀತಿಯ ಹಕ್ಕಿಗಳಲ್ಲಿ ೧೫೯ರಷ್ಟು ಹಕ್ಕಿಗಳು ವಿದೇಶಗಳಿಂದ ಚಳಿಗಾಳದಲ್ಲಿ ವಲಸೆ ಬರುವಂಥವು. ಕರ್ನಾಟಕದ ಕಡಲ ತೀರಕ್ಕೆ ೩೧ ವಿವಿಧ ಪಕ್ಷಿಗಳು ಹಿಮಾಲಯ ದಾಚೆಯಿಂದ ವಲಸೆ ಬರುತ್ತಿರುವುದನ್ನು ದಾಖಲಿಸಲಾಗಿದೆ.

ಹಕ್ಕಿಗಳೇಕೆ ವಲಸೆ ಹೋಗುತ್ತವೆ. ಎಂಬುದು ಪಕ್ಷಿ ತಜ್ಞರನ್ನು ಬಹಳ ಕಾಲದಿಂದ ಕಾಡಿದ ಸಮಸ್ಯೆ. ಸಾವಿರಾರು ಕಿ.ಮೀ.ಗಳಷ್ಟು ದೂರ ಸಾಗಿ, ಅನೇಕ ಕಷ್ಟ ನಷ್ಟಗಳನ್ನು ಅನುಭವಿಸಿ ನಿರ್ಧಿಷ್ಟ ಸ್ಥಳವೊಂದನ್ನು ಸೇರುವುದರಲ್ಲಿ ಯಾವುದೋ ಹೇಳದ ಅನುಕೂಲವಿರಬೇಕಷ್ಟೆ ಇತ್ತೀಚಿನ ಅಧ್ಯಯನಗಳ ಪ್ರಕರ ಹಕ್ಕಿಗಳು ವಲಸೆ ಹೋಗುವುದರಿಂದ ಅವುಗಳಿಗೆ ಹತ್ತು ವಿವಿಧ ಅನುಕೂಲಗಳಿವೆ. ಅತಿ ಮುಖ್ಯವಾದ ಅನುಕೂಲಗಳೆಂದರೆ ೧) ವರ್ಷವಿಡೀ ಸೂಕ್ತ ಹವಾಗುಣದ ಪರಿಸರದಲ್ಲಿ ಬದುಕುವುದು. ಚಳಿಗಾಲದಲ್ಲಿ ದಕ್ಷಿಣಾರ್ಧದ ಗೋಲಕ್ಕೆ ಬಿಸಿ ಹವೆಯತ್ತ ಬರುವುದು. ಬೇಸಗೆಯಲ್ಲಿ ಉತ್ತಾರಾರ್ಧ ಗೋಲದ ತವರೂರಿನಲ್ಲಿ ತಂಗುವುದು, ವಲಸೆ ಹೋಗುವುದರಿಮದ ಮತ್ರ ಸಾಧ್ಯ. ೨) ಉತ್ತರಾರ್ಧ ಗೋಲದಲ್ಲಿ ಬದುಕುವ ಹಕ್ಕಿ ಸಮೂಹ ಅಲ್ಲೆ ಉಳಿದು ಮುಂದುವರಿದರೆ ಆಹಾರದ ಕೊರೆತ ಸಹಜ. ವಲಸೆ ಹೋಗಿ ಬದುಕುವುದರಿಂದ ಸ್ಥಳೀಯವಾಗಿ ಲಭ್ಯವಿರುವ ಆಹಾರದ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ೩) ವಲಸೆ ಹೋಗುವುದರಿಂದ ಎರಡು ವಿಭಿನ್ನ ಆವಾಸಗಳ ಆಹಾರ ದೊರೆಯುವಂತಾಗಿ, ಆಹಾರದಲ್ಲಿ ಆಯ್ಕೆ, ವೈವಿಧ್ಯತೆ ಹೆಚ್ಚುತ್ತದೆ. ೪) ಕೆಲವು ಅಪೂರ್ವ ಖನಿಜ-ಲವಣಗಳ ಪೂರೈಕೆಯೂ ವಲಸೆ ಹೋಗುವುದರಿಂದ ಲಭ್ಯ. ಹಕ್ಕಿಗಳು ಚಳಿಗಾಲದಲ್ಲಿ ವಲಸೆ ಹೋಗಿ ತಮ್ಮ ಅಗತ್ಯದ ಖನಿಜಗಳನ್ನು ದೇಹದಲ್ಲಿ ಶೇಕರಿಸಿಕೊಂಡು ಬೇಸಗೆಯಲ್ಲಿ ಬಳಸುತ್ತವೆ. ೫) ಸಂತಾನಾಭಿವೃದ್ಧಿಯಾದ ನಂತರ ಮರಿಗಳೊಂದಿಗೆ ದೂರಕ್ಕೆ ವಲಸೆ ಹೋಗುವುದರಿಂದ, ಹಕ್ಕಿಗಳನ್ನು ಹಿಡಿದು ತಿನ್ನುವ ಹಿಂಸ್ರಕ ಪ್ರಾಣಿಗಳ ಮೇಲೆ ನಿಯಂತ್ರಣ ಉಂಟಾಗಿ, ಬದುಕು ನಿರುಮ್ಮಳವಾಗುತ್ತದೆ. ೬) ಬಹುಶಃ ಹಕ್ಕಿಗಳ ವಲಸೆ ಹೋಗುವ ಪ್ರವೃತ್ತಿ ಅನುವಂಶೀಯವಾಗಿಯೂ ನಿರ್ಧರಿಸಲ್ಪಡುತ್ತದೆ. ದೂರಕ್ಕೆ ವಲಸೆಹೋಗುವುದರಿಂದ ವಿಭಿನ್ನ ಹಕ್ಕಿಗಳ ಸಮೂಹ ಒಂದಾಗಿ, ಪರಸ್ಪರ ಜೀನಿ ವಿನಿಮಯವೂ ಸಾಧ್ಯ. ೭) ವಲಸೆಹೋಗುವುದರಿಂದ ಪಕ್ಷಿಗಳನ್ನು ಕಾಡುವ ಕ್ರಿಮಿ, ಕೀಟ ಮತ್ತಿತರ ಪರಾವಲಂಬಿಗಳ ಮೇಲೂ ನಿಯಂತ್ರಣವಿರುತ್ತದೆ. ಸ್ಥಳ ಬದಲಾದಾಗ, ಪರಾವಲಂಬಿಗಳ ಬದುಕು ದುಸ್ತರವಾಗುತ್ತದೆ. ೮) ಇಕ್ಕಟ್ಟಾದ ತಮ್ಮ ಸ್ವದೇಶದಿಂದ ವಿಶಾಲವಾದ ದೂರದ ಪ್ರದೇಶಕ್ಕೆ ಹೋಗುವುದರಿಂದ, ಸ್ವಜನ ಬಂಧುಗಳ ನಡುವಿನ ಕಾದಾಟ ಕಡಿಮೆಯಾಗುತ್ತದೆ. ೯) ಚಳಿ ಪ್ರದೇಶದಲ್ಲಿ ಪಕ್ಷಿಗಳ ಬೆಳವಣಿಗೆ ನಿಧಾನವಾಗುವುದು ಸಹಜ. ವಲಸೆ ಹೋಗುವುದರಿಂದ ಈ ಅನಾನುಕೂಲತೆ ಇರುವುದಿಲ್ಲ. ೧೦) ಬಹುಶಃ ಮಹತ್ವದ ಅನುಕೂಲವೆಂದರೆ ಡಾರ್ವಿನ್ನನ ವಿಕಾಸವಾದ ಸಬಲರ ಆಯ್ಕೆ. ಅತ್ಯಂತ ಕಠಿಣವಾದ ದೂರದ ವಲಸೆಯು ಹಕ್ಕಿಗಳ ಸಾಮಾರ್ಥ್ಯಕ್ಕೊಂದು ಸವಾಲು. ಈ ಪರೀಕ್ಷೆಯಲ್ಲಿ ಗೆದ್ದು ಬದುಕುವ ಹಕ್ಕಿಗಳು ನಿಜಕ್ಕೂ ಸರ್ವ ಸಮರ್ಥ.

ವಲಸೆ ಪಕ್ಷಿಗಳ ಹಾರಾಟದ ಎತ್ತರ, ಹೋಗುವ ದೂರ, ಚಲಿಸುವ ವೇಗ, ಇತ್ಯಾದಿಗಳು ಪಕ್ಷಿ ವಿಜ್ಞಾನದ ರೋಚಕ ವಿಷಯಗಳು. ಅತ್ಯಂತ ದೂರ ವಲಸೆ ಹೋಗುವ ಹಕ್ಕಿಯೆಂದರೆ ಉತ್ತರ ಧ್ರುವದ ಟರ್ನ್ (Sterna paradesea), ಉತ್ತರಧ್ರುವ ಪ್ರದೇಶದಿಂದ ಹೊರಟ ಈ ಪಕ್ಷಿ ದಕ್ಷಿಣಧ್ರುವದ ಪ್ರದೇಶ ತಲುಪುವಾಗ ಸುಮಾರು ೧೮ ಸಾವಿರ ಕಿಲೋ ಮಿಟರ್ ಸಾಗಿರುತ್ತದೆ. ಇದೊಂದು ವಿಶ್ವದಾಖಲೆ! ಮತ್ತೆ ಅಷ್ಟೇ ದೂರ ಹಾರಿ ಸ್ವದೇಶ ತಲುಪುವುದನ್ನು ಊಹಿಸುವುದು ಕಷ್ಟ. ಆದರೆ ನಿಜ! ಯೂರೋಪಿನ ಉತ್ತರ ಭಾಗದಿಂದ ಕರ್ನಾಟಕದ ಕರಾವಳಿಗೆ ಬರುವ ಗೋಲ್ಡನ್ ಪ್ಲೋವರ್ ಕೂಡಾ ದೂರ ವಲಸೆಯ ವಿಶಿಷ್ಟ ಪಕ್ಷಿ.

ಇಷ್ಟು ದೂರ ವಲಸೆ ಹೋಗಲು ಅದೆಷ್ಟು ದಿನಗಳು ಬೇಕಾದೀತು ಎಂಬ ಪ್ರಶ್ನೆಯೂ ಸಹಜ ಉತ್ತರ ಧ್ರುವದ ಟರ್ನ್ ಹಕ್ಕಿ ಪ್ರತಿದಿನ ಸರಾಸರಿ ೧೨೫ ಕಿಲೋ ಮೀಟರ್ ಚಲಿಸಿದರೆ, ಯೂರೋಪಿನ ಸ್ವಿಫ್ಟ್ ಪ್ರತಿದಿನ ೯೦೦ ಕಿಲೋ ಮೀಟರ‍್ ಹಾರಬಹುದು. ಬಿಳಿ ನೆತ್ತಿಯ ಗುಬ್ಬಚ್ಚಿ ೫೦೦ ಕಿಲೋ ಮೀಟರ್ ದೂರವನ್ನು ೧೨ ಗಂಟೆಗಳಲ್ಲಿ ಹಾರಿಬಿಡುತ್ತವೆ. ಅಂದರೆ ದಿನಕ್ಕೆ ೧೦೦೦ ಕಿ.ಮೀ. ನಷ್ಟು. ಆದರೆ ವಲಸೆ ಪಕ್ಷಿಗಳು ಪ್ರತಿದಿನ ಸರಸರಿ ೧೦೦ ಕಿಲೋ ಮೀಟರ‍್ಗಳಷ್ಟು ಹಾರುವುದು ಸಾಮಾನ್ಯ.

ದೂರ ಮಾತ್ರವಲ್ಲ. ಎತ್ತರಕ್ಕೆ ಏರುವುದರಲ್ಲಿ ಪಕ್ಷಿಗಳು ಅದ್ವೀತೀಯ! ಹಿಮಾಲಯ ಪರ್ವತ ಶ್ರೇಣಿಯನ್ನು ದಾಟಿ ಪಕ್ಷಿಗಳು ಹಾರುವುದನ್ನು ಪರ್ವತಾರೋಹಿಗಳು ಗಮನಿಸಿದ್ದಾರೆ. ಬಹುಶಃ ೮,೮೦೦ ಮೀಟರ‍್ಗಳಷ್ಟು ಎತ್ತರದಲ್ಲಿ ಅನಾಯಾಸವಾಗಿ ಚಲಿಸುವ ಸಾಮರ್ಥ ಹಕ್ಕಿಗಳಿಗೆ ಮಾತ್ರ! ಹಿಮಾಲಯದ ಎತ್ತರಕ್ಕೆ ಹಾರಿ ನಮ್ಮ ದೇಶಕ್ಕೆ ಬರುವ ಹಕ್ಕಿಗಳಲ್ಲಿ ಪಟ್ಟೆತಲೆ ಬಾತು (barheaded goose) ಮುಖ್ಯವಾದುದು. ವಲಸೆ ಹೋಗುವ ಬಹುತೇಕ ಪಕ್ಷಿಗಳು ರಾತ್ರಿ ವೇಳೆ ಹೆಚ್ಚು ಕಡಿಮೆ ೧೫೦೦ ಮೀಟರ್ ಮತ್ತು ಹಗಲು ೬೫೦-೭೦೦ ಮೀಟರ್ ಎತ್ತರದಲ್ಲಿ ಸಾಗುತ್ತವೆ.

ಕರ್ನಾಟಕಕ್ಕೆ ಬಲುದೂರದಿಂದ ಚಳಿಗಾಲದಲ್ಲಿ ವಲಸೆ ಬರುವ ಸಹಸ್ರಾರು ಪಕ್ಷಿಗಳಲ್ಲಿ ಎರಡು ವಿಧೆ : ಅ) ಏಷ್ಯಾ ಯುರೋಪ್ ಖಂಡಗಳಿಂದ ಸುಮಾರು ೧೯ ವಿವಿಧ ಪಕ್ಷಿಗಳು ದಕ್ಷಿಣದ ದ್ವೀಪಗಳಿಗೆ ವಲಸೆ ಹೋಗುವ ದಾರಿಯಲ್ಲಿ ಕರ್ನಾಟಕದಲ್ಲಿ ಕೆಲಕಾಲ ತಂಗಿ ಮತ್ತೆ ಮುಂದುವರಿಯುವಂತವು. ಆ) ಚಳಿಗಾಲವಿಡೀ ಕರ್ನಾಟಕದಲ್ಲಿ ಉಳಿಯುವಂತವು.

ಕರ್ಲ್ಯೂ (Curlew) ಹಕ್ಕಿಗಳು ಜುಲೈ ತಿಂಗಳಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಕಂಡು ಬರುವುದು ಮೊದಲನೆ ವರ್ಗಕ್ಕೆ ಸೇರಿದವು. ೧೯೮೨ರ ಜನವರಿ ತಿಂಗಳಲ್ಲಿ ಉಡುಪಿ ಸಮೀಪದ ಮಲ್ಪೆ ತೀರದಲ್ಲಿ ಕಂಡು ಬಂದ ಮತ್ತು ರಶ್ಯಾದಲ್ಲಿ ತೊಡಿಸಿದ ಗುರುತಿನ ಉಂಗುರವುಳ್ಳ ಟರ್ನ್‌ಹಕ್ಕಿ ಈ ವಾದವನ್ನು ಸ್ಪಷ್ಟೀಕರಿಸುತ್ತದೆ. ಚಳಿಗಾಲದಲ್ಲಿ ಕರ್ನಾಟಕಕ್ಕೆ ವಲಸೆ ಬರುವ ಹಕ್ಕಿಗಳು ಬಹಳಷ್ಟಿವೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ನಮ್ಮ ಪ್ರದೇಶ ಪಕ್ಷಿಗಳ ವಲಸೆ ಬಗ್ಗೆ ತಿಳಿವಳಿಕೆ ತೀರ ಕಡಿಮೆ. ಕೇರಳದಲ್ಲಿ ಕಾಲುಂಗರ ತೋಡಿಸಿದ ಹಳದಿ ಸಿಂಪಿಗಹಕ್ಕಿ ಹಿಮಾಲಯ ಪ್ರದೇಶ ಮತ್ತು ಬಲೂಚಿಸ್ಥಾನದಲ್ಲಿ ಕಂಡುಬಂದಿದೆ. ಗುಲಾಬಿ ಮೈನಾ ಪಾಕಿಸ್ಥಾನದಿಂದ ಕರ್ನಾಟಕಕ್ಕೆ ಬರುವುದು ದಾಖಲಿಸಲಾಗಿದೆ. ಆದರೂ ನಮ್ಮ ಬಹುತೇಕ ವಲಸೆ ಪಕ್ಷಿಗಳ ಬಗ್ಗೆ ನಿಖರ ದಾಖಲಾತಿ ಸಧ್ಯಕ್ಕಂತೂ ಇಲ್ಲ.

ಚಳಿಗಾಲದಲ್ಲಿ ಕರ್ನಾಟಕಕ್ಕೆ ದೂರದಿಂದ ವಲಸೆ ಬರುವ ಹಕ್ಕಿಗಳು

ಕ್ರ. ಸಂ. ಹಕ್ಕಿಯ ಹೆಸರು ವೈಜ್ಞಾನಿಕ ಹೆಸರು ವಲಸೆ ಹೊರಡುವ ಪ್ರದೇಶ
೧. ಹೆಬ್ಬಾತು (ಹಂಸ) Anser indicus ಲಡಕ್, ಟಿಬೇಟೆ (ಚೀನಾ)
೨. ಕವಚಬಾತು (ಚಕ್ರವಾಕ) Tardorna ferruginea ಹಿಮಾಲಯ ಪ್ರದೇಶ
೩. ಟೀಲ್ (ಸೋಲಾರಿ ಹಕ್ಕಿ) Anas crecca ಉತ್ತರ ಯುರೋಪಿನಿಂದ, ಸೈಬೀರಿಯಾ
೪. ನೀಲಿ ರೆಕ್ಕೆಯ ಸೋಲಾರಿಹಕ್ಕಿ A. querquedula ಉತ್ತರ ಯುರೋಪಿನಿಂದ, ಸೈಬೀರಿಯಾ
೫. ಶೊವೆಲ್ಲರ‍್ A. clypeata ಉತ್ತರ ಯುರೋಪು
೬. ಸೂಜಿಬಾಲದ ಸೋಲಾರಿ A. acuta ಉತ್ತರ ಯುರೋಪು
೭. ನೀಲಿ ಬಾಲದ ಜೇನ್ನೋಣಬಾಕ Merops philippinus ಹಿಮಾಲಯ, ಬಾಂಗ್ಲದೇಶ, ಪಾಕಿಸ್ತಾನ
೮. ಗಿಡ್ಡಕಿವಿಯ ಗೂಬೆ Asio Flammeus ಉತ್ತರ ಕಾಶ್ಮೀರ, ಹಿಮಾಲಯ
೯. ಡೊಮೈಸೆಲ್ ಕೊಕ್ಕರೆ Anthropoides virgo ದಕ್ಷಿಣ ಯುರೋಪು, ಉತ್ತರ ಆಫ್ರಿಕಾ
೧೦. ಸಾಮಾನ್ಯ ಕೊಕ್ಕರೆ Grus grus ಯುರೋಪು
೧೧. ವುಡ್ ಕಾಕ್ Scolopax rusticola ಈಶಾನ್ಯ ಭಾರತ, ನೇಪಾಳ, ಆಸ್ಸಾಮ್ ಯುರೇಶಿಯಾ
೧೨. ಸೂಜಿಬಾಲದ ಸ್ನೈಪು Gallinago stenura ಸೈಬೀರಿಯಾ, ಉತ್ತರ ಏಷ್ಯಾ
೧೩. ವುಡ್ ಸ್ನೈಪು G. nemorical ಹಿಮಾಲಯ, ಟಿಬೇಟು
೧೪. ಸಾಮಾನ್ಯ ಸ್ನೈಪು G. gallinao ಉತ್ತರ ಯುರೋಪು, ಉತ್ತರ ಏಷ್ಯಾ
೧೫. ಜಾಕ್ ಸ್ನೈಪು Lymnocryptes minimus ಉತ್ತರ ಯುರೋಪು, ಸೈಬೀರಿಯಾ
೧೬. ಕಪ್ಪು ಬಾಲದ ಗೋಡ್ವಿಟ್ Limosa limosa ಮಧ್ಯಯುರೋಪು
೧೭. ವಿಂಬ್ರೆಲ್ Numenius phaecopus ಮಧ್ಯ ಯುರೋಪು
೧೮. ಕೊಂಚೆ N. arquata ಉ. ಮಧ್ಯ ಯುರೋಪು
೧೯. ಕೆಂಪು ಕಾಲಿನ ಚುಕ್ಕಿಹಕ್ಕಿ Tringa erythropus ಸೈಬೀರಿಯ, ಉ. ಯುರೋಪು
೨೦. ಕೆಂಪುಕಾಲಿನ ಹಕ್ಕಿ T. totanus ಮಧ್ಯಯುರೋಪು, ಟಿಬೇಟು
೨೧. ಜವುಗು ಮರಳು ಪೀಪಿ T. stagnatilis ಮಧ್ಯ ಯುರೋಪು
೨೨. ಹಸಿರು ಕಾಲಿನ ಹಕ್ಕಿ T. nebularia ಮಧ್ಯ ಯುರೋಪು, ಉ. ಏಷ್ಯಾ
೨೩. ಹಸಿರು ಮರಳು ಪೀಪಿ T. ochropus ಯುರೋಪು
೨೪. ಕೊಂಚೆ ಮರುಳು ಪೀಪಿ Micropalama himantopus ಯುರೋಪು
೨೫. ವುಡ್ ಮರಳು ಪೀಪಿ Tringa glareola ಉ. ಯುರೋಪು, ಸೈಬೀರಿಯಾ
೨೬. ಟೆರೆಕ್ ಮರಳು ಪೀಪಿ Xenus cinereus ಉ. ಯುರೋಪು, ಸೈಬೀರಿಯಾ
೨೭. ಸಾಮಾನ್ಯ ಮರಳು ಪೀಪಿ Actitis hypoleucos ಹಿಮಾಲಯ
೨೮. ಸ್ಯಾಂಡರ್ ಲಿಂಗ್ Calidris alba ಉತ್ತರಧ್ರುವ, ಗ್ರೀನ್ ಲೇಂಡ್‌
೨೯. ಪುಟ್ಟಸ್ಟಿಂಟ್ C. minuta ಸೈಬೀರಿಯಾ
೩೦. ಟಿಮಿಂಕ್ ಸ್ಟಿಂಟ್ C. temmincki ಉತ್ತರ ಯುರೋಪು
೩೧. ಡನ್ ಲಿನ್ C. alpina ಉ.ಯುರೋಪು, ಉ. ಏಷ್ಯಾ
೩೨. ರಫ್ ಮತ್ತು ರೀವ್ Philomachus pugnzx ಯುರೋಪು  
೩೩. ಏಡಿಹಿಡುಕ Dronias ardeola ಸೈಬೀರಿಯ
೩೪. ಅವೊಸೆಟ್ Recurvirostra avosetta ಮ. ಯುರೋಪು
೩೫. ಗೋಲ್ಡನ್ ಪ್ಲೋವರ್ Pluvialis dominica ಉತ್ತರ ಯುರೋಪು, ರಶ್ಯಾ
೩೬. ಬೂದು ಪ್ಲೋವರ್ P. squatarola ಸೈಬೀರಿಯಾ
೩೭. ಕೊರಳ ಪಟ್ಟೆ ಪ್ಲೋವರ್ Charadrius dubius ಹಿಮಾಲಯ
೩೮. ಕಿರು ಮರಳಪೀಪಿ C. mongolus ಹಿಮಾಲಯ
೩೯. ಕಪ್ಪು ತಲೆ ಕಡಲುಕಾಗೆ Larus ridibundus  
೪೦. ಕಂದು ತಲೆ ಕಡಲು ಕಾಗೆ L. brunnicephalus ಲಡಕ್ ಮತ್ತು ಟಿಬೇಟು
೪೧. ಕ್ಯಾಸ್ಪಿಯನ್ ಟರ್ನ್ Sterma caspia ಪಾಕ್ತಿಸ್ತಾನ
೪೨. ಜುಟ್ಟಿನ ಟರ್ನ್ S. bergii ಪಾಕ್ತಿಸ್ತಾನ
೪೩. ಸಾಮಾನ್ಯ ಟರ್ನ್ S. hirundo ಪಾಕ್ತಿಸ್ತಾನ, ವೆಂಗರ್ಲಿದ್ವೀಪ
೪೪. ಪುಟ್ಟಟರ್ನ್ S. albifrons ಪಾಕ್ತಿಸ್ತಾನ
೪೫. ವಿಕ್ಸರ್ಡಟರ್ನ್ Chlidonias Hybridus ಉ.ಭಾರತ (ಕಾಶ್ಮೀರ)
೪೬. ಆಸ್ಟ್ರೆ Pandion haliaetus ಯುರೋಪು, ಹಿಮಾಲಯ (?)
೪೭. ಜವುಗುಡೇಗೆ Circus aeruginosus ಪಶ್ಚಿಮ ಹಿಮಾಲಯ
೪೮. ಬೂದು ಕೊಕ್ಕರೆ Ardea cinerea ಯುರೋಪು ಉ. ಆಫ್ರಿಕಾ
೪೯. ಬೂದು ಕಳಿಂಗ Lanius cristatus ದಾಖಲೆ ಇಲ್ಲ
೫೦. ಉದ್ದ ಬಾಲದ ಕಳಿಂಗ L. schach ಹಿಮಾಲಯ
೫೧. ಬೂದು ಕಾಜಾಣ Dicrurus leucophaeus ಹಿಮಾಲಯ
೫೨. ನೀಲಿ ರಾಕ್ ಥ್ರಶ್ Monticola solitarius ಲಡಕ್
೫೩. ಸಿಂಪಿಹಿಡುಕ Haemotopus ostralegus ಮಧ್ಯಯುರೋಪು
೫೪. ಕೆಂಪು ಗಂಟಲಿನ ನೊಣ ಹಿಡುಕ Ficedula parva ಪಶ್ಚಿಮ ಹಿಮಾಲಯ
೫೫. ನೀಲಿ ಗಂಟಲಿನ ನೊಣ ಹಿಡುಕ Cyornis rubeculoides ಈಶಾನ್ಯ ಹಿಮಾಲಯ
೫೬. ಕಪ್ಪು ರೆಡ್ ಸ್ಟಾರ್ಟ್ Phoenicurus ochruros ಹಿಮಾಲಯ
೫೭. ಗುಲಾಬಿ ಮೈನಾ Sternus roseus ಪಶ್ಚಿಮ ಹಿಮಾಲಯ, ಪಾಕಿಸ್ತಾನ
೫೮. ಬಾರ್ನ್‌ತೋಕೆ Hirundo rustica ಪಾಕಿಸ್ತಾನ ಗುಡ್ಡಗಳು, ಹಿಮಾಲಯ
೫೯. ಕ್ರಾಗ್ ಮಾರ್ಟಿನ್ H. rupestris ಪಾಕಿಸ್ತಾನ, ಹಿಮಾಲಯ
೬೦. ಗದ್ದೆ ಉಳಿಯಕ್ಕಿ   Acrocephalus bistrigiceps
೬೧. ಬ್ಲಿತ್ಸ್ ಜೊಂಡು ಉಳಿಯಕ್ಕಿ   A. dumetorum
೬೨. ಕಾಡು ಕುಂಡೆಕುಸುಕ Dendronanthus indicus ಅಸ್ಸಾಮ್
೬೩. ಬಿಳಿ ಕುಂಡೆಕುಸುಕ Motacilla alba ಪಾಕಿಸ್ತಾನ, ಕಾಶ್ಮೀರ
೬೪. ಹಳದಿ ಕುಂಡೆಕುಸುಕ M. fkava ಹಿಮಾಲಯ
೬೫. ಬೂದು ಕುಂಡೆಕುಸುಕ M. cinerea ಹಿಮಾಲಯ
೬೬. ಮರದ ಪಿಪಿಟ್ Anthus tivialis ಪಶ್ಚಿಮ ಹಿಮಾಲಯ
೬೭. ಸಾಮಾನ್ಯ ಗುಲಾಬಿ ಫಿಂಚ್ Carpodacus erythrinus ಕಾಶ್ಮೀರಿ, ಟಿಬೇಟು
೬೮. ಕೆಂಪು ತಲೆಯ ಬಂಟಿಂಗ್ Emberiza bruniceps ಪಶ್ಚಿಮ ಏಷ್ಯಾ ಮತ್ತು ಪೂರ್ವ ಯುರೋಪು
೬೯. ಕೆಂಪು ತಲೆಯ ಬಂಟಿಂಗ್ E. melanocephala ಪಶ್ಚಿಮ ಏಷ್ಯಾ ಮತ್ತು ಪೂರ್ವ ಯುರೋಪು
೭೦. ಹಳದಿ ಕಂಠ ಬುಲ್ಬುಲ್ Pycnonotus xantholaemus ಹಿಮಾಲಯ