ಗಣ : ಸಿಪ್ರಿನಿಫಾರ್ಮಿಸ್ (Cypriniformes)
ಕುಟುಂಬ : ಸಿಪ್ರಿನಿಡೀ (Cyprinidae)
ಉದಾ : ಮ್ರಿಗಾಲ (Mrigala)
ಶಾಸ್ತ್ರೀಯ ನಾಮ : ಸಿರ್ಹಿನಸ್ ಮ್ರಿಗಾಲ (Cyrrhinus mrigala)

021_69_PP_KUH

ವಿತರಣೆ : ನದಿಗಳು, ಕೆರೆಕಟ್ಟೆಗಳಂತಹ ಸಿಹಿನೀರಿನಲ್ಲಿ ವಾಸ. ಮೂಲತಃ ಗಂಗ ಮತ್ತು ಸಿಂಧುನದಿ ವಾಸಿ. ಜಲಕೃಷಿಯಿಂದಾಗಿ ಭಾರತದ ಉಳಿದೆಲ್ಲ ಬಾಗಗಳಿಗೂ ಹರಡಿದಂತೆ ಕರ್ನಾಟಕವನ್ನು ತಲುಪಿದೆ.

ಗಾತ್ರ : ೯೯ ಸೆಂ. ಮೀ. ಉದ್ದ. ೧೨.೭ ಕೆ. ಜಿ. ತೂಕ ಬೆಳೆಯುತ್ತದೆ.

ಆಹಾರ : ನೀರುಗಳ ತಳದ ಆಳದಲ್ಲಿ ಕೊಳೆತಿನಿ.

ಲಕ್ಷಣಗಳು : ನೀರಿನಲ್ಲಿ ಘರ್ಷಣೆ ಇಲ್ಲದಂತೆ ಚಲಿಸಲು ಅನುಕೂಲವಾದ ಮಾದರಿ ಮೀನಿನ ಕದುರಿನಾಕಾರ. ಅನೇಕ ರಂಧ್ರಗಳಿರುವ ಮೊಂಡು ಮೂತಿ. ಅಗಲವಾದಬಾಯಿ. ಒಂದು ಜೊತೆ ದಾಡಿ ಮೀಸೆಗಳು. ಗಂಟಲು ಗೂಡಿನಲ್ಲಿ ಹಲ್ಲುಗಳಿವೆ. ದೇಹದ ಎತ್ತರದಷ್ಟೇ ಎತ್ತರವಾದ ಬೆನ್ನಿನ ಈಜುರೆಕ್ಕೆ, ಸಣ್ಣ ಭುಜದ ಈಜುರೆಕ್ಕೆಗಳು. ಕವೆಲೊಡೆದ ಬಾಲದ ಈಜುರೆಕ್ಕೆ, ಪಾರ್ಶ್ವಪಂಕ್ತಿಯಲ್ಲಿ ೪೦ ರಿಂದ ೪೫ ಹುರುಪೆಗಳಿರುತ್ತವೆ.

ದೇಹದ ಮೇಲ್ಭಾಗ ತುಸು ತಾಮ್ರ ವರ್ಣವೂ ಬೆರೆತ ಕಡಬೂದು ಬಣ್ಣ ಪಕ್ಕೆಗಳು ಹಳದಿ ಬೆರೆತ ಬೆಳ್ಳಿಬಣ್ಣ ಬಂಗಾರ ಬಣ್ಣದ ಕಣ್ಣುಗಳು. ಭುಜದ, ಸೊಂಟದ ಮತ್ತು ಗುದ ಈಜುರೆಕ್ಕೆಗಳಿಗೆ ಕಿತ್ತಳೆ ಬಣ್ಣದ ಅಂಚು, ಬಾಲದ ಮತ್ತು ಬೆನ್ನು ಈಜುರೆಕ್ಕೆಗಳು, ಮೊಬ್ಬು ಬಣ್ಣದವು.

ಸಂತಾನಾಭಿವೃದ್ಧಿ : ಹಿಂಗಾರು ಮಳೆಗಾಲದಲ್ಲಿ ಸಂತಾನೋತ್ಪತ್ತಿ ನಡೆಸುತ್ತದೆ ಮತ್ತು ಮೊಟ್ಟೆಗಳನಿಡುತ್ತದೆ.

ಸ್ವಭಾವ : ಪ್ರಮುಖ ಕಾರ್ಪ್ : ಆಕರ್ಷಕ ಬೇಟೆ ಮೀನು. ಯಶ್ವಸಿಯಾಗಿ ದಕ್ಷಿಣ ಭಾರತಕ್ಕೆ ತಂದು ಸೇರಿಸಿದ ಮೀನು. ಸಮುದ್ರ ಮಟ್ಟ ದಿಂದ ೫೫೦ ಮೀ ಎತ್ತರದವರೆಗಿನ ಸಿಹಿನೀರು ಸ್ಥಾನಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ೧೪ ಸೆಂ. ಉಷ್ಣತೆಯ ತಾಪವನ್ನು ತಾಳಿಕೊಳ್ಳಬಹುದು. ಪಿಟುಯಿಟರಿ ರಸ ಬಳಸಿ ಮೊಟ್ಟೆ ಇಡಲು ಪ್ರಚೋದಿಸಬಹುದು.

—-

ಗುಣ : ಸಿಪ್ರಿನಿಫಾರ್ಮಿಸ್ (Cypriniformes)
ಕುಟುಂಬ : ಸಿಪ್ರಿನಿಡೀ (Cyprinidae)
ಉದಾ : ಕಾವೇರಿ ಬಿಳಿ ಕಾರ್ಪ್ ಮೀನು (Cauvery white corp)
ಶಾಸ್ತ್ರೀಯ ನಾಮ : ಸಿರ್ಹಿನಸ್
ಸಿರ್ಹೊಸಸ್(Cyrrhinus cyrrhosus)

022_69_PP_KUH

ವಿತರಣೆ : ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಹೆಚ್ಚು ದೊರಕುತ್ತದೆ.

ಗಾತ್ರ : ಸಾಮಾನ್ಯವಾಗಿ ೨೦ ರಿಂದ ೨೫ ಸೆಂ. ಮೀ. ಉದ್ದ, ೩೦೦ ಗ್ರಾಂ ತೂಕ. ೨ ವರ್ಷಗಳಲ್ಲಿ ೬೧ ಸೆಂ. ಮೀ. ಉದ್ದ ೧.೨ ಕೆ.ಜಿ. ತೂಕ ಬೆಳೆಯುತ್ತದೆ.

ಆಹಾರ : ಜಲ ಸಸ್ಯಗಳನ್ನು ಮೇಯುತ್ತದೆ. ತೇಲುಜೀವಿಗಳನ್ನು ಸೇವಿಸುತ್ತದೆ.

ಲಕ್ಷಣಗಳು : ಉದ್ದವಾದ ದೇಹ. ಮೂತಿ ಬಾಯಿಯಿಂದ ಮುಂದಕ್ಕೆ ಚಾಚುವುದಿಲ್ಲ. ಮೂತಿಯ ಮೇಲೆ ಕಲವು ಸೂಕ್ಷ್ಮ ರಂಧ್ರಗಳಿವೆ. ಬಾಯಿ ಅಗಲ. ಸುಮಾರು ದಪ್ಪನಾದ ಕೆಳ ತುಟಿ. ಉಳಿದ ಪ್ರಭೇಧಗಳಂತೆ ಮೇಲು ತುಟಿ ಸೀಳಿಲ್ಲ ಚೆನ್ನಾಗಿ ಬೆಳೆದ ಎರಡೂ ಜೊತೆ ದಾಡಿ ಮೀಸೆಗಳಿವೆ. ಹಿಂದಿನ ಜೊತೆ ದಾಡಿ ಮೀಸೆಗಳು ಮುಂದಿನವಕ್ಕಿಂತ ಹೆಚ್ಚು ಉದ್ದವಾಗಿವೆ. ಬಾಯಂಗಳದಲ್ಲಿ ಮೂರು ಸಾಲು ಹಲ್ಲುಗಳಿವೆ. ತುಸು ಎತ್ತರವಾದ ಬೆನ್ನಿನ ಈಜುರೆಕ್ಕೆ ಅದರ ಮುಂದಿನ ಕೆಲವು ಮುಳ್ಳುಗಳು ಉದ್ದವಾಗಿವೆ. ಬಾಲದ ಈಜುರೆಕ್ಕೆ ಆಳವಾಗಿ ಕವೆಲೊಡೆದಿದೆ. ಪಾರ್ಶ್ವ ಪಂಕ್ತಿಯಲ್ಲಿ ೪೨ ರಿಂದ ೪೬ ಹುರುಪೆಗಳಿವೆ.

ಬೆನ್ನು ಭಾಗ ಮತ್ತು ಪಕ್ಕೆಗಳು ಕಪ್ಪು ಬಣ್ಣವಾಗಿವೆ. ತಳಭಾಗ ಮಾಸಲು ಹಳದಿ ಮಿಶ್ರಿತ ಬಿಳುಪು. ಪಕ್ಕೆಯ ಭಾಗದಲ್ಲಿರುವ ಹುರುಪೆಗಳ ನಡುಭಾಗದಲ್ಲಿ ಕೆಂಪು ಚುಕ್ಕಿ ಇದೆ. ಬೆನ್ನಿನ ಮತ್ತು ಬಾಲದ ಈಜುರೆಕ್ಕೆಗಳು ಮೊಬ್ಬು ಬಣ್ಣದವು. ಗುದ ಮತ್ತು ಭುಜದ ಈಜುರೆಕ್ಕೆಗಳು ಕಪ್ಪು ಛಾಯೆ ತೋರುತ್ತವೆ.

ಸಂತಾನಾಭಿವೃದ್ಧಿ : ಮುಂಗಾರು ಕಾಲ ಇವುಗಳ ಋತುಮಾನವಾದರೂ ಬೇರೆ ತಿಂಗಳುಗಳಲ್ಲಿ ಮೊಟ್ಟೆಯಿಡಲು ಕೃತಕವಾಗಿ ಪ್ರಚೋದಿಸಬಹುದು. ಇದು ನಿಂತ ನೀರಿನ ಕೊಳಗಳಲ್ಲಿ ಬೆಳೆದರೂ ಮೊಟ್ಟೆ ಇಡಲು ವೇಗವಾಗಿ ಹರಿಯುವ ನೀರನ್ನು ಇಷ್ಟಪಡುತ್ತದೆ. ಬಹಳ ಗಡಸು ಮತ್ತು ಕಷ್ಟ ಸಹಿಷ್ಣುತೆ ಕಂಡುಬರುತ್ತದೆ.

ಸ್ವಭಾವ : ಇದು ಕಾವೇರಿ ಜಲಾನಯನ ಪ್ರದೇಶದ ಪ್ರಧಾನ ಕಾರ್ಪ್. ಇದಕ್ಕೆ ಹೆಚ್ಚು

—- 

ಗುಣ : ಸಿಪ್ರಿನಿಫಾರ್ಮಿಸ್ (Cypriniformes)
ಕುಟುಂಬ : ಸಿಪ್ರಿನಿಡೀ (Cyprinidae)
ಉದಾ : ಕಾಟ್ಲಾಮೀನು (Catla)
ಶಾಸ್ತ್ರೀಯ ನಾಮ : ಕಾಟ್ಲಾ ಕಾಟ್ಲಾ (Catla catla)

023_69_PP_KUH

ವಿತರಣೆ : ಸಿಹಿ ನೀರು ವಾಸಿಯಾದರೂ ಹೆಚ್ಚಾಗಿ ನದಿಗಳಲ್ಲಿ ದೊರಕುತ್ತದೆ.

ಗಾತ್ರ : ೧.೩ ಮೀ. ಉದ್ದ, ೪೦ ಪೌಂ. ತೂಕ ಇರುತ್ತದೆ.

ಆಹಾರ : ನೀರಿನ ಮೇಲು ವಲಯದ ತೇಲು ಜೀವಿಗಳನ್ನು ಅತಿಯಾಗಿ ಸೂಕ್ಷ್ಮ ಸಸ್ಯಗಳನ್ನು ತಿಂದು ಜೀವಿಸುತ್ತದೆ.

ಲಕ್ಷಣಗಳು : ದೇಹ ಪಕ್ಕದಿಂದ ಪಕ್ಕಕ್ಕೆ ಒತ್ತಿದಂತಿದೆ. ತಲೆ ತುಂಬಾ ಅಗಲವಾಗಿದೆ. ಕೆಳತುಟಿ ಮುಂಚಾಚಿದೆ ಮೇಲು ತುಟಿ ಚಿಕ್ಕದು ಹುರುಪೆಗಳು ದೊಡ್ಡವು. ಪಾರ್ಶ್ವ ಪಂಕ್ತಿಯಲ್ಲಿ ೪೦-೪೩ ಹುರುಪೆಗಳಿವೆ.

ದೇಹದ ಬಣ್ಣ ಸಾಮಾನ್ಯವಾಗಿ ಮಾಸಲು ಬಿಳುಪು. ಆದರೆ ಪಾಚಿ ಹೆಚ್ಚಾಗಿರುವ ನೀರಿನಲ್ಲಿ ವಾಸಿಸುವ ಕಾಟ್ಲಮೀನು ಕಪ್ಪಾಗಿರುತ್ತದೆ.

ಸಂತಾನಾಭಿವೃದ್ಧಿ : ಜೂನ್‌ಸೆಪ್ಟೆಂಬರ್ ಮಾಸಗಳ ನಡುವಿನ ಮುಂಗಾರು ಕಾಲದಲ್ಲಿ ಸಂತಾನೋತ್ಪತ್ತಿ ನಡೆಸುತ್ತದೆ. ಇದು ಹರಿಯುವ ನೀರಿನ ನದಿಗಳಲ್ಲಿ ಮಾತ್ರ ಮೊಟ್ಟೆ ಇಡುತ್ತದೆ.

ಸ್ವಭಾವ : ಈ ಮೀನು ಅತಿ ಶೀಘ್ರಗತಿಯಲ್ಲಿ ಬೆಳೆಯುವುದರಿಂದ ಇದರ ಮೊಟ್ಟೆಗಳಿಗೆ ಮೀನು ಸಾಕುವವರಿಂದ ಹೆಚ್ಚಿನ ಬೇಡಿಕೆ ಉಂಟು. ಇದು ಕೆರೆ – ತೊಟ್ಟಿಗಳ ಇತರ ಸಾಕಿದ ಮೀನುಗಳನ್ನು ತಿನ್ನುವುದಿಲ್ಲ. ಬೆಂಗಳೂರಿನ ಬಳಿ ಹೇಸರುಘಟ್ಟದ ಜಲಾಶಯದಲ್ಲಿ ಇದನ್ನು ಕೃಷಿ ಮಾಡುತ್ತಿದ್ದಾರೆ. ಇಲ್ಲಿ ೬೪ ಪೌಂಡಿಗೂ ಹೆಚ್ಚು ತೂಗುವ ಮೀನುಗಳು ಬೆಳದಿವೆ. ಇದನ್ನು ಕೆರೆಕಟ್ಟೆಗಳಲ್ಲಿ ಸಾಕಿ ಬೆಳೆಸುವ ಪ್ರಯತ್ನಗಳು ನಡೆದಿವೆ. ಇದು ಮೂಲತಃ ಬಂಗಾಳದ ಮೀನು. ಇತ್ತೀಚೆಗಷ್ಟೇ ಕರ್ನಾಟಕಕ್ಕೆ ತರಲಾಗಿದೆ.

—- 

ಗಣ : ಸಿಪ್ರಿನಿಫಾರ್ಮಿಸ್ (Cypriniformes)
ಕುಟುಂಬ : ಸಿಪ್ರಿನಿಡೀ (Cyprinidae)
ಉದಾ : ನೀಲಿಮೀನು, ಕುರ್ರಿಮೀನು (Kolus)
ಶಾಸ್ತ್ರೀಯ ನಾಮ : ಗೊನೊಪ್ರೊಕ್ಟೊಪ್ಟೆರಸ್
ಕೊಲುಸ್(Gonoproktopterus kolus)

024_69_PP_KUH

025_69_PP_KUH

ವಿತರಣೆ : ಕೃಷ್ಣ, ಕಾವೇರಿ ನದಿಗಳ ಜಲಾನಯನ ಪ್ರದೇಶ.

ಗಾತ್ರ : ಸುಮಾರು ೩೦ ಸೆಂ.ಮೀ. ಉದ್ದ ಬೆಳೆಯುತ್ತದೆ.

ಆಹಾರ : ಜಲಸಸ್ಯಗಳು ಮತ್ತು ತೇಲು ಜೀವಿಗಳು.

ಲಕ್ಷಣಗಳು : ಸುಮಾರು ಗಾತ್ರದ ಚಪ್ಪಟೆ ದೇಹ. ತಲೆಯ ಹಿಂಭಾಗದಿಂದ ಬೆನ್ನಿನ ನಡುಭಾಗದವರೆವಿಗೆ ದೇಹ ಉಬ್ಬಿ ಎತ್ತರವಾಗಿದೆ. ಕಣ್ಣುಗಳು ದೊಡ್ಡವು. ಬಾಯಿ ತಲೆಯ ಮುಂತುದಿಯಿಂದ ತುಸು ಹಿಂದಿದೆ. ಒಂದು ಜೊತೆ ದಾಡಿ ಮೀಸೆಗಳಿವೆ. ಅವು ಕಣ್ಣಿರುವ ಭಾಗದವರೆಗೆ ವಿಸ್ತರಿಸುವಷ್ಟು ಉದ್ದವಾಗಿವೆ. ಬೆನ್ನಿನ ಈಜುರೆಕ್ಕೆ ಸೊಂಟದ ಈಜುರೆಕ್ಕೆಗಳ ನೇರಕ್ಕಿಂತ ಮುಂದೆ ಇದೆ. ಬೆನ್ನಿನ ಈಜುರೆಕ್ಕೆಯ ಕಡೆಯ ರೆಕ್ಕೆ ಮುಳ್ಳು ಉಳಿದವಂತೆ ಕವೆಲೊಡೆದಿಲ್ಲ, ಮೂಳೆಯಂತಿದ್ದು ದುರ್ಭಲವಾಗಿದೆ. ಹುರುಪೆಗಳು ತುಂಬಾ ಸಣ್ಣವು. ಪಾರ್ಶ್ವಪಂಕ್ತಿಯಲ್ಲಿ ೪೦-೪೩ ಹುರುಪೆಗಳಿರುತ್ತವೆ.

ಹಳದಿ ಛಾಯೆಯಿಂದ ಕೂಡಿದ ಬಿಳಿಯಬಣ್ಣ, ಎಳೆಯ ಮೀನುಗಳಲ್ಲಿ ತಲೆಯ ಮೇಲ್ಭಾಗ ಕಂದು ಮತ್ತು ಬೆನ್ನಿನ ಭಾಗ ಬಹಳೊಮ್ಮೆ ಕೆಂಪಾಗಿರುತ್ತದೆ. ಬೆನ್ನಿನ, ಗುದ ಮತ್ತು ಬಾಲದ ಈಜುರೆಕ್ಕೆಗಳ ತುದಿಯಂಚು ಬೂದು ಬಣ್ಣ.

ಪ್ರಬುದ್ಧ ಗಂಡು ಮೀನಿನ ದೇಹದ ಮೇಲೆ, ಮೂತಿಯ ಪಕ್ಕದಲ್ಲಿ ಚೆನ್ನಾಗಿ ಬೆಳೆದ ಮುತ್ತು ಅಂಗ ರಚನೆಗಳಿವೆ.

ಸಂತಾನಾಭಿವೃದ್ಧಿ : ಋತುಮಾಸದಲ್ಲಿ ವರ್ಣವೈವಿಧ್ಯತೆ ಕಂಡುಬರುತ್ತದೆ. ಇದನ್ನು ಸಂಗಾತಿಯನ್ನು ಒಲಿಸಿಕೊಳ್ಳಲು ಬಳಸಿಕೊಳ್ಳುತ್ತವೆ. ಆದರೆ ಆಶ್ಚರ್ಯದ ವಿಷಯವೆಂದರೆ ವರ್ಣವೈವಿಧ್ಯ ತೋರಿ ಸಂಗಾತಿಯನ್ನು ಒಲಿಸಿಕೊಳ್ಳಲು ಪ್ರಯತ್ನಿಸುವುದು, ಈ ಮೀನು ಪ್ರಭೇಧದಲ್ಲಿ ಹೆಣ್ಣು ಜೂನ್ ತಿಂಗಳಿಂದ ಆಗಸ್ಟ್ ತಿಂಗಳುಗಳವರೆಗೆ ಮೊಟ್ಟೆ ಇಡುತ್ತದೆ.

—- 

ಗಣ : ಸೈಲೂರಿಫಾರ್ಮಿಸ್
ಕುಟುಂಬ : ಬ್ಯಾಗ್ರಿಡೀ
ಉದಾ : ಈ ಜಾತಿಯ ಇತರ ಪ್ರಭೇಧಗಳು
ಶಾಸ್ತ್ರೀಯನಾಮ : ಮಿಸ್ಟಸ್ ಬ್ಲೀಕೇರಿ (Mystus bleekeri)

026_69_PP_KUH

ಮಿಸ್ತಾಸ್ ಜಾತಿಯ ಲಕ್ಷಣಗಳನ್ನು ಹೊಂದಿದೆ. ಈ ಪ್ರಭೇಧಕ್ಕೆ ಸೀಮಿತವಾದ ಬಾರ್ಬೆಲ್ ಗಳಿದ್ದು ಮ್ಯಾಕ್ಸಿಲರಿ ಜೊತೆ ಗುದ ಈಜುರೆಕ್ಕೆಗಳವರೆಗೆ ಅಥವಾ ಅದಕ್ಕೂ ಹಿಂದಕ್ಕೆ ವಿಸ್ತರಿಸುತ್ತವೆ. ದೇಹದ ಮೇಲೆ ಅನೇಕ ಉದ್ದ ಸಮತಲ ಗೆರೆಗಳ ಗುರುತುಗಳಿವೆ.

ಶಾಸ್ತ್ರೀಯನಾಮ : ಮಿಸ್ಟಸ್ ವಿಟ್ಟೇಟಸ್ (Mystus vittatus)

027_69_PP_KUH

ಈ ಪ್ರಭೇಧದ ದೇಹದ ಮೇಲೆ, ಪಾರ್ಶ್ವಪಂಕ್ತಿಯ ಮೇಲೆ ಮತ್ತು ಕೆಳಗೆ ಕ್ಷಿತಿಜದಲ್ಲಿ ಮೂರು ಅಥವಾ ನಾಲ್ಕು ಪಟ್ಟಿಗಳಿವೆ. ಭುಜದ ಬಳಿ ಒಂದು ಗುರುತಿದೆ. ಬಾಲದ ಬುಡದ ಬಳಿ ಯಾವ ಗುರುತು ಇಲ್ಲ.