ಕಿರು ಸ್ಟಿಂಟ್ (LITTLE STINT)
ಕ್ಯಾ. ಮೈನ್ಯೂಟ (Calidris minuta)

208_69_PP_KUH

ಗಾತ್ರ : ೧೩-೧೫ ಸೆಂ.ಮೀ.

ಆವಾಸ : ಇತರೆ ನೀರ್ನಡಿಗೆ ಪಕ್ಷಿಗಳೊಡನೆ ಗುಂಪಾಗಿ ಕಂಡುಬರುತ್ತವೆ. ಜವುಗು ಪ್ರದೇಶ, ಅಳಿವೆಯ ಮಣ್ಣಿನ ಹರಿವು ಮತ್ತು ಸಮುದ್ರ ತೀರ.

ಲಕ್ಷಣಗಳು : ಚಿಕ್ಕ ನೀರ್ನಡಿಗೆ ಹಕ್ಕಿ. ಗಂಡು-ಹೆಣ್ಣುಗಳು ಒಂದೇ ತೆರನಾಗಿವೆ. ಬೂದು-ಕಂಡು ಬಣ್ಣ. ಹೊಟ್ಟೆ ಭಾಗ ಬಿಳಿ ಕಪ್ಪು ಕಾಲುಗಳು ಮತ್ತು ಕೊಕ್ಕು. ಬಾಲದ ಮಧ್ಯದ ಗರಿಗಳು ಕಡುಕಂದು; ಹೊರ ಗರಿಗಳು ಹೊಗೆಕಂದು.

ಆಹಾರ : ಚಿಕ್ಕ ಪುಟ್ಟ ಮೃದ್ವಂಗಿ, ಏಡಿ ಮತ್ತು ಕೀಟಗಳು.

ಸಂತಾನಾಭಿವೃದ್ಧಿ : ಉತ್ತರ ಯುರೋಪು ಮತ್ತು ಸೈಬೀರಿಯಗಳಲ್ಲಿ. ಚಳಿಗಾಲದಲ್ಲಿ ಹಿಂಡು ಹಿಂಡಾಗಿ ಕರಾವಳಿ ತೀರಕ್ಕೆ ವಲಸೆ ಬರುತ್ತವೆ.

 —-

ಕೆಂಪು ಕಾಲು ಶಾಂಕ್ (RED SHANK)
ಟ್ರಿಂಗ ಟೊಟಾನಸ್(Tringa totanus)

209_69_PP_KUH

ಗಾತ್ರ : ೨೮-೩೦ ಸೆಂ.ಮೀ.

ಆವಾಸ : ಜವುಗು ಪ್ರದೇಶ, ಅಳಿವೆ, ಕಾಂಡ್ಲವನ, ನೀರಿರುವ ಭತ್ತದ ಗದ್ದೆ ಇತ್ಯಾದಿಗಳಲ್ಲಿ.

ಲಕ್ಷಣಗಳು : ಗಂಡು-ಹೆಣ್ಣು ಒಂದೇ ತೆರನಾಗಿರುತ್ತವೆ. ದೊಡ್ಡ ಜಾತಿಯ ಮರಳು ಪೀಪಿ. ಬೂದು-ಕಂದು ಮೇಲ್ಭಾಗ ಹೊಟ್ಟೆ ಭಾಗ ಬಿಳಿ. ಕಿತ್ತಳೆ ಕೆಂಪು ಬಣ್ಣದ ಉದ್ದನೆ ಕಾಲುಗಳು. ನೇರವಾದ ಉದ್ದನೆಯ ಕೆಂಪುಕೊಕ್ಕು, ತುದಿ ಕಪ್ಪು, ಬಿಳಿಬಾಲ, ಕಪ್ಪು ಅಡ್ಡ ಪಟ್ಟಿಗಳು.

ಆಹಾರ : ನೀರಿನಲ್ಲಿರುವ ಚಿಕ್ಕ ಪುಟ್ಟ ಪ್ರಾಣಿಗಳು.

ಸಂತಾನಾಭಿವೃದ್ಧಿ : ಉತ್ತರ ಭಾರತದಲ್ಲಿ. ಚಳಿಗಾಲದಲ್ಲಿ ಕರ್ನಾಟಕದ ಕಡಲತೀರಕ್ಕೆ ವಲಸೆ ಬರುವ ಹಕ್ಕಿಗಳು.

—- 

ಟೆಮಿಂಕ್ಸ್ ಸ್ಟಿಂಟ್ (TEMMINCKS STINT)
ಕ್ಯಾಲಿಡ್ರಿಸ್ ಟೆಮಿಂಕಿ (Calidris temmincki)


210_69_PP_KUH

ಗಾತ್ರ : ೧೩-೧೫ ಸೆಂ.ಮೀ.

ಆವಾಸ : ಸಮುದ್ರ ತೀರ ಮತ್ತು ಒಳನಾಡು ನೀರಿನಾಶ್ರಯ.

ಲಕ್ಷಣಗಳು : ಗಂಡು-ಹೆಣ್ಣುಗಳು ಒಂದೇ ತೆರನಾಗಿವೆ. ಕಿರು ಸ್ಟಿಂಟ್‌ನ್ನು ಹೋಲುತ್ತದೆ. ಆದರೆ ಕಾಲುಗಳು ಆಲಿವ್ ಹಸಿರು ಮತ್ತು ಬಾಲದ ಹೊರ ಬದಿಯ ಗರಿಗಳು ಶುದ್ಧ ಬಿಳಿ. ಸಾಮಾನ್ಯ ಮರಳು ಪೀಪಿಯನ್ನು ಹೋಲಿದರೂ ಗಾತ್ರದಲ್ಲಿ ಚಿಕ್ಕದು. ನೆಟ್ಟಗೆನಿಲ್ಲುವ ಪ್ರವೃತ್ತಿ ಪ್ರಮುಖ ಲಕ್ಷಣ.

—- 

ಡನ್ಲಿನ್ (DUNLIN)
ಕ್ಯಾ. ಆಲ್ಪೈನಾ (C. alpina)

211_69_PP_KUH

ಗಾತ್ರ : ೧೬-೨೨ ಸೆಂ.ಮೀ.

ಆವಾಸ : ಸಮುದ್ರ ತೀರ, ಅಳಿವೆ ಮಧ್ಯದ ಮಣ್ಣಿನ ದಿಣ್ಣೆ ನದಿ ತೀರ, ನೀರು ತುಂಬಿದ ಗದ್ದೆ ಇತ್ಯಾದಿಗಳಲ್ಲಿ.

ಲಕ್ಷಣಗಳು : ಗಂಡು-ಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಕರ್ಲ್ಯೂ ಮರಳು ಪೀಪಿಯನ್ನು ಹೋಲುತ್ತಿದ್ದರೂ, ಕೊಕ್ಕು ತುದಿಯಲ್ಲಿ ಸ್ವಲ್ಪ ಬಾಗಿದೆ. ಹೊಟ್ಟೆಯ ಮೇಲೆ ಕಪ್ಪು ಗರಿಗಳು ಉಳಿದಂತೆ ಬಿಳಿ. ಬೂದು ಕಂದು ಮೇಲ್ಭಾಗ.

ಆಹಾರ : ನೀರಿನಲ್ಲಿರುವ ಕೀಟ. ಏಡಿ ಇತ್ಯಾದಿ. ಕೆಲವೊಮ್ಮೆ ಕಾಳು ತಿನ್ನುವುದೂ ಉಂಟು.

ಸಂತಾನಾಭಿವೃದ್ಧಿ : ಉತ್ತರ ಅಮೇರಿಕಾ ಉತ್ತರ ಏಷ್ಯಾ. ಚಳಿಗಾಲದಲ್ಲಿ ವಲಸೆ ಬರುತ್ತವೆ.

—- 

ಕರ್ಲ್ಯೂ ಮರಳು ಪೀಪಿ (CURLEW SANDPIPER)
ಕ್ಯಾ. ಟೆಸ್ಟೇಸಿಯ (C. testacea)

212_69_PP_KUH

ಗಾತ್ರ : ೧೮-೨೩ ಸೆಂ.ಮೀ.

ಆವಾಸ : ಜವುಗು ಪ್ರದೇಶ, ನದಿ ಮಧ್ಯದ ನೆಲ, ಸಮುದ್ರತೀರ ಇತ್ಯಾದಿಗಳಲ್ಲಿ ಗುಂಪಾಗಿರುತ್ತವೆ.

ಲಕ್ಷಣಗಳು : ಗಂಡು ಹೆಣ್ಣುಗಳು ಒಂದೇ ತೆರನಾಗಿವೆ. ಡನ್ಲಿನ್ನನ್ನು ಹೋಲುತ್ತದೆ. ಆದರೆ ಗಾತ್ರದಲ್ಲಿ ಡನ್ಲಿನ್ನಿಗಿಂತ ದೊಡ್ಡದು. ಕಾಲುಗಳು ಉದ್ದ, ಹೊಟ್ಟೆಯ ಮೇಲೆ ಕಪ್ಪು ಛಾಯೆ ಇಲ್ಲ, ಬದಲಾಗಿ ಬಹುತೇಕ ಬಿಳಿ.

ಆಹಾರ : ಜಲ ಅಕಶೇರುಕಗಳು.

ಸಂತಾನಾಭಿವೃದ್ಧಿ : ಉತ್ತರ ಏಷ್ಯಾದಲ್ಲಿ. ಚಳಿಗಾಲದಲ್ಲಿ ವಲಸೆ ಬರುತ್ತವೆ.