ಗಣ : ಸ್ಕ್ವಾಲಿಫಾರ್ಮಿಸ್‌(Squaliformes)
ಕುಟುಂಬ : ಸಾರ್ಕಾರಿನಿಡೀ (Carcharinidas)
ಉದಾ : ಸೊರ ಮೀನು/ಶಾರ್ಕು (Shark)
ಶಾಸ್ತ್ರೀಯ ನಾಮ : ಸ್ಕೊಲಿಯೊಡಾನ್
ಸೊರೈಕೋವ (Scoliodon sorraikowah)
001_69_PP_KUH

ವಿತರಣೆ : ಇದು ಜಗತ್ತಿನಾದ್ಯಂತ ವ್ಯಾಪಕವಾಗಿ ಹರಡಿದ ಕಡಲ ಮೀನು ಹಿಂದೂ ಮಹಾಸಾಗರ, ಅಟ್ಲಾಂಟಿಕ್‌ಮತ್ತು ಪೆಸಿಫಿಕ್‌ಸಾಗರಗಳಲ್ಲಿ ದೊರಕುತ್ತದೆ. ಭಾರತದಲ್ಲಿಯೆ ಇದರ ನಾಲ್ಕು ಪ್ರಭೇಧಗಳು ಇವೆ. ಸ್ಕೊ. ಡೊಮೆರಿಲ್ಲಿ, ಸ್ಕೊ. ಪಾಲಸೊರಕ್ಮತ್ತು ಸ್ಕೊ. ವಾಲ್ಬೀಶ್ಮಿಗಳು ಇತರ ಮೂರು ಪ್ರಭೇಧಗಳು.

ಗಾತ್ರ : ಇದು ೬೦ ಸೆಂ. ಮೀ. ಉದ್ದ ಬೆಳೆಯುತ್ತದೆ.

ಆಹಾರ : ಇದು ಮಾಂಸಹಾರಿ ಮತ್ತು ಹೊಟ್ಟೆಬಾಕ. ಏಡಿಗಳು, ಲೋಬ್‌ಸ್ಟರ್ ಗಳು, ಸೀಗಡಿಗಳು, ಹುಳುಗಳು ಮತ್ತು ಇತರ ಮೀನುಗಳು ಇದರ ಆಹಾರ. ವೇಗವಾಗಿ ಚಲಿಸುತ್ತ ತನ್ನ ಚೂಪು ಹಲ್ಲುಗಳಿಂದ ಆಹಾರ ಜೀವಿಗಳನ್ನು ಹಿಡಿದು ತಿನ್ನುತ್ತದೆ.

ಲಕ್ಷಣಗಳು : ದೇಹ ಉದ್ದವಾಗಿ ಕದುರಿನಾಕಾರವಾಗಿದೆ ಮತ್ತು ಪಕ್ಕಗಳಲ್ಲಿ ಸಂಪೀಡಿತವಾಗಿದೆ. ನಯವಾದ ದೇಹ ನೀರಿನಲ್ಲಿ ಘರ್ಷಣೆ ಇಲ್ಲದೆ ಸುಲಭವಾಗಿ ಸುಲಲಿತವಾಗಿ ಈಜಲು ಅನುಕೂಲವಾಗಿದೆ. ದೇಹದ ಮೇಲೆ ಚರ್ಮದಲ್ಲಿ ಹುದುಗಿರುವ ಪ್ಲಕಾಯಿಡ್‌ಮಾದರಿಯ ಹುರುಪೆಗಳ ಹೊದಿಕೆ ಇದೆ. ಹುರುಪೆಗಳ ಮುಳ್ಳುಗಳು ಹಿಮ್ಮುಖವಾಗಿ ಚಾಚಿದ್ದು ಕೈಯನ್ನು ಮುಂದಿನಿಂದ ಹಿಂದಕ್ಕೆ ಸವರಿದಾಗ ನಯವಾಗಿಯೂ, ಹಿಂದಿನಿಂದ ಮುಂದಕ್ಕೆ ಸವರಿದಾಗ ಒರಟಾಗಿರುವಂತೆಯೂ ಭಾಸವಾಗುತ್ತದೆ. ದೇಹದ ಬಣ್ಣ ಕಡು ಬೂದು. ಇದರಿಂದ ನೀರಿನ ಬಣ್ಣದೊಂದಿಗೆ ಮುಳುಗಿ ತಲೆಮರಿಸಿಕೊಳ್ಳಲು ನೆರವಾಗುತ್ತದೆ.

ದೇಹವನ್ನು ತಲೆ, ಮುಂಡ ಮತ್ತು ಬಾಲ ಎಂದು ಮೂರು ಭಾಗಗಳಾಗಿ ವಿಂಗಡಿಸಬಹುದು. ತಲೆಯನ್ನು ಮುಂಡದಿಂದ ಪ್ರತ್ಯೇಕಿಸುವ ಕುತ್ತಿಗೆ ಎಂಬ ಭಾಗ ಇಲ್ಲ. ತಲೆಯು ಮೇಲಿನಿಂದ ಕೆಳಕ್ಕೆ ತಟ್ಟಿದಂತೆ ಚಪ್ಪಟೆಯಾಗಿದೆ. ಮುಂದೆ ಚಾಚಿದ ರಾಸ್ಟ್ರಮ್‌ಅಥವಾ ಮೂತಿ ಇದೆ. ಮುಂಡ ಭಾಗವು ಅಡ್ಡ ಸೀಳಿಕೆಯಲ್ಲಿ ಸುಮಾರು ಅಂಡಾಕಾರ ರಚನೆ ತೋರುತ್ತದೆ. ಬಾಲದ ಹಿಂತುದಿಯು ತುಸು ಮೇಲಕ್ಕೆ ಬಾಗಿದೆ.

ಇದರಲ್ಲಿ ಮಧ್ಯದ ಆಯುಗ್ಮಿತ (ಜೋಡಿಯಲ್ಲದ) ಮತ್ತು ಯುಗ್ಮಿತ (ಜೋಡಿ) ಈಜುರೆಕ್ಕೆಗಳಿವೆ.

ಆಯುಗ್ಮಿತ ಈಜುರೆಕ್ಕೆಗಳೆಂದರೆ ಎರಡು ಬೆನ್ನಿನ, ಒಂದು ಬಾಲದ ಮತ್ತು ತೆಳ್ಳಗಿನ ಈಜುರೆಕ್ಕೆಗಳು. ಮುಂದಿನ ಬೆನ್ನಿನ ಈಜುರೆಕ್ಕೆಯು ತ್ರಿಕೋನಾಕಾರವಾಗಿದೆ, ದೊಡ್ಡದು ಮತ್ತು ಬೆನ್ನಿನ ನಡುಭಾಗದಲ್ಲಿದೆ. ಹಿಂದಿನ ಅಥವಾ ಪಶ್ಚ ಬೆನ್ನು ಈಜುರೆಕ್ಕೆಯೂ ಕೂಡ ತ್ರಿಕೋನಾಕಾರವಾಗಿದೆಯಾದರೂ ಮುಂದಿನದಕ್ಕಿಂತ ಗಾತ್ರದಲ್ಲಿ ಚಿಕ್ಕದು. ಹಿಂದಿನ ಬೆನ್ನು ಈಜುರೆಕ್ಕೆಯು ಮುಂದಿನ ಬೆನ್ನು ಈಜುರೆಕ್ಕೆ ಮತ್ತು ಬಾಲದ ಬುಡದ ನಡುವಿನ ಅಂತರದಲ್ಲಿನ ಬಾಲವು ವಿಷಮಬಾಲಪುಶ್ಚ (ಹೆಟರೊಸರ್ಕಲ್‌) ಮಾದರಿಯದು. ಬಾಲದ ಹಿಂದಿನ ತುದಿಯು ಮೇಲಕ್ಕೆ ಬಾಗಿದೆ. ಬಾಲದ ಮೇಲೆ ಮತ್ತು ಕೆಳಗೆ ಬಾಲದ ಈಜುರೆಕ್ಕೆ ಸುತ್ತುವರಿದಂತೆ ಹರಡಿದೆ. ಆದ್ದರಿಂದ (ಊರ್ಧ್ವ) ಪಾಲಿಯು ಕ್ಷಯಿಸಿದೆ. ಕೆಳಗಿನ ಪಾಲಿಯು ಚೆನ್ನಾಗಿ ಬೆಳೆದಿದೆ ಮತ್ತು ಮೇಲಿನದಕ್ಕಿಂತ ದೊಡ್ಡದು ಹಾಗೂ ನಡುವೆ ಸೀಳಿ ಮುಂದಿನ ದೊಡ್ಡಭಾಗ ಮತ್ತು ಹಿಂದಿನ ಸಣ್ಣ ಭಾಗವಾಗಿ ವಿಭಾಗವಾಗಿದೆ. ಇಷ್ಟಾದರೂ ಒಳ ರಚನೆಯಲ್ಲಿ ಕಶೇರು ಸ್ತಂಭವು ಮೇಲಿನ ಪಾಲಿಯಲ್ಲಿದ್ದು ಬಾಲ ಮತ್ತು ಅದರ ಈಜುರೆಕ್ಕೆ ರಚನೆಯು ಅಸಮವಾಗಿದೆ. ಅದರಿಂದಲೇ ಅದಕ್ಕೆ ವಿಷಮ ಬಾಲಪುಶ್ಚ ಎಂದು ಹೆಸರಿಸಲಾಗಿದೆ ಮತ್ತು ಇದು ಮೃದ್ವಸ್ಥಿ ಮೀನುಗಳು ವಿಶೇಷ ಲಕ್ಷಣ.

ಅಧೋಭಾಗದ (ಉದರದ) ಅಯುಗ್ಮಿತ ಈಜು ರೆಕ್ಕೆಯು ಬಾಲದ ಈಜುರೆಕ್ಕೆಯ ಮುಂತುದಿಯಿಂದ ಸುಮಾರು ೫ ಸೆಂ. ಮೀ. ಮುಂದಿದೆ. ಬೆನ್ನಿನ ಮತ್ತು ಉದರದ ಈಜು ರೆಕ್ಕೆಗಳಿಗೆ ಹಿಂದಕ್ಕೆ ಚಾಚಿದ ಉದ್ದನೆಯ ಮಾಂಸಲವಾದ ಬುಡಪಾಲ (ಬೇಸಲ್ ಲೋಬ್) ಎಂಬ ಪ್ರವರ್ಧಗಳಿವೆ.

ಎರಡು ಜೊತೆ ಪಾರ್ಶ್ವ (ದೇಹದ ಪಕ್ಕಗಳಲ್ಲಿರುವ) ಯುಗ್ಮಿತ ಈಜುರೆಕ್ಕೆಗಳಿವೆ. ಇವು ದೇಹದ ಮುಂದೆ ಮತ್ತು ತಳಭಾಗದಲ್ಲಿ ಅಂಟಿಕೊಂಡಿವೆ. ಮುಂದಿನ ಭುಜದ (ಪೆಕ್ಟೊರಲ್) ಈಜುರೆಕ್ಕೆಗಳು ಗಾತ್ರದಲ್ಲಿ ದೊಡ್ಡವು ಮತ್ತು ತುಸು ಹಿಂದೆ ಇರುವ ಸೊಂಟದ (ಪೆಲ್ವಿಕ್‌) ಈಜುರೆಕ್ಕೆಗಳು ಸಣ್ಣವು. ಸೊಂಟದ ಈಜುರೆಕ್ಕೆಗಳ ಒಳ ಅಂಚಿನಲ್ಲಿ ಹಿಂದಕ್ಕೆ ಚಾಚಿದಂತೆ ಜಾಡಿರುವ ಪೆಡಸು ಸರಳಿನಾಕಾರದ ಕ್ಲಾಸ್ಪರ್ ಗಳೆಂಬ ಆಲಿಂಗನಾಂಗಗಳಿವೆ. ಇವು ಗಂಡು ಹೆಣ್ಣುಗಳ ಸಂಭೋಗ ಕಾಲದಲ್ಲಿ ಪುರುಷಾಣುಗಳನ್ನು ಗಂಡು ಮೀನಿನಿಂದ ಹೆಣ್ಣು ಮೀನಿಗೆ ವರ್ಗಾಯಿಸಲು ನೆರವಾಗುತ್ತವೆ.

ತಲೆಯ ಎರಡೂ ಪಕ್ಕಗಳಲ್ಲಿ ಒಂದೊಂದರಂತೆ ಎರಡು ದೊಡ್ಡವಾದ ಪ್ರಧಾನವಾದ ದುಂಡು ಕಣ್ಣುಗಳಿವೆ. ಕಣ್ಣುರೆಪ್ಪೆಗಳು ಚೆನ್ನಾಗಿ ಬೆಳದಿಲ್ಲ ಮತ್ತು ಚಲಿಸಲಾರವು. ಕೇವಲ ಚಾಚಿದ ಚರ್ಮದ ಮಡಿಕೆಗಳಂತೆ ಕಾಣುತ್ತವೆ. ಆದರೆ ಕಣ್ಣಿನ ಮೇಲೆ ಚಲಿಸಿ, ಅದನ್ನು ಮುಚ್ಚಿ ರಕ್ಷಿಸಬಹುದಾದ ನಿಮೇಷಕ ಪಟಲವಿದೆ. ಇದು ಕಣ್ಣುಗಳ ಮುಂಕೆಳ ತುದಿಯಲ್ಲಿದೆ. ತಲೆಯ ತಳಭಾಗದಲ್ಲಿ ಅರೆ ಚಂದ್ರಾಕಾರದ ಬಾಯಿ ಅಡ್ಡವಾಗಿ ಹರಡಿವೆ. ಮೇಲಿನ ಮತ್ತು ಕೆಳಗಿನ ದವಡೆಗಳೆರಡೂ ಇವೆ. ದವಡೆಗಳ ಮೇಲೆ ಚೂಪಾದ ಒಂದು ಅಥವಾ ಎರಡು ಸಾಲು ಹಲ್ಲುಗಳಿವೆ. ಹಲ್ಲುಗಳು ಹಿಂದಕ್ಕೆ ಬಾಗಿವೆ. ಆಹಾರ ಜೀವಿಗಳನ್ನು ಹಿಡಿಯಲು ಮತ್ತು ಸಿಗಿಯಲು ಹಲ್ಲುಗಳು ಅನುಕೂಲವಾಗಿವೆ.

ತಲೆಯ ತಳಭಾಗದಲ್ಲಿ ಬಾಯಿಯ ಪಕ್ಕಗಳಲ್ಲಿ ಮುಂತುದಿಯಲ್ಲಿ ಎರಡು ಸಣ್ಣ ಅರೆಚಂದ್ರಾಕಾರದ ನಾಸಿಕ ರಂಧ್ರಗಳಿವೆ. ಇವು ಒಳಗಿನ ನಾಸಿಕ ರಂಧ್ರಗಳೊಂದಿಗಾಗಲಿ (ಅವು ಇಲ್ಲ, ಅವುಗಳನ್ನು ಒಳಗಿನ ಕಿವಿರು ರಂಧ್ರಗಳೆನ್ನುತ್ತಾರೆ) ಬಾಯಂಗಳದೊಂದಿಗಾಗಲಿ ಸಂಬಂಧ ಹೊಂದಿದ್ದು ಉಸಿರಾಟಕ್ಕೆ ನೆರವಾಗುವುದಿಲ್ಲ. ನಾಸಿಕ ರಂಧ್ರಗಳು ಕೇವಲ ಘ್ರಾಣೇಂದ್ರಿಯಗಳು.

ಕಣ್ಣುಗಳ ಹಿಂದೆ ದೇಹದ ಎರಡೂ ಪಕ್ಕಗಳಲ್ಲಿ, ಭುಜದ ಈಜುರೆಕ್ಕೆಗಳ ಮುಂದೆ, ಒಂದು ಪಕ್ಕದಲ್ಲಿ ಐದರಂತೆ ಐದು ಜೊತೆ ಹೊರ ಕಿವಿರು ರಂಧ್ರಗಳಿವೆ. ಇವು ಓರೆಯಾದ ಸೀಳು ರಂಧ್ರಗಳಂತಿವೆ. ಈ ರಂಧ್ರಗಳು ಒಳಗೆ ಕಿವಿರು ಕೋಣೆಗಳೊಂದಿಗೆ ಸಂಬಂಧ ಹೊಂದಿವೆ. ಬಾಯಂಗಳದ ಭಿತ್ತಿಯಲ್ಲಿ ಕಿವಿರು ಕೋಣೆಗಳಿಗೆ ತೆರೆಯುವ ಒಳ ಕಿವಿರು ರಂಧ್ರಗಳಿವೆ. ಬಾಯಿಯಿಂದ ಒಳಗೆ ನುಗ್ಗಿದ ನೀರು ಒಳಕಿವಿರು ರಂಧ್ರಗಳ ಮೂಲಕ ಕಿವಿರು ಕೋಣೆಯನ್ನು ಪ್ರವೇಶಿಸಿ, ಅಲ್ಲಿರುವ ಕಿವಿರುಗಳ ಮೇಲೆ ಹರಿದು, ಅನಿಲಗಳ (ಆಕ್ಸಿಜೆನ್ + ಕಾರ್ಬನ್‌ಡೈ ಆಕ್ಸೈಡ್) ವಿನಿಮಯಕ್ಕೆ ಅನುವು ಮಾಡಿಕೊಟ್ಟು ಹೊರ ಕಿವಿರು ರಂಧ್ರಗಳ ಮೂಲಕ ನಿರ್ಗಮಿಸುತ್ತದೆ. ಕಿವಿರುಗಳು ಇವುಗಳ ಶ್ವಾಸಾಂಗಗಳು ಮತ್ತು ಅವು ನೀರಿನಲ್ಲಿನ ಆಕ್ಸಿಜನ್‌ ಅನ್ನು ಪಡೆಯಲು ಅನುವಾಗಿವೆ.

ಸೊಂಟದ ಈಜುರೆಕ್ಕೆಗಳ ಬಳಿ, ಅವುಗಳ ನಡುವೆ ಉದ್ದವಾದ ನಡು ಜಾಡು ಅಥವಾ ಕ್ಲೋಯಕ ತೆರಪು ಇದೆ. ಇದು ಒಳಗೆ ಸಣ್ಣ ಆವರಣದಂತಿರುವ ಕ್ಲೋಯಕದ ಹೊರತೆರಪು, ಜೀರ್ಣಾಂಗಳ ವಿಸರ್ಜನಾ ರಂಧ್ರ, ಗುದದ್ವಾರ ಮತ್ತು ಮೂತ್ರಪ್ರಜನನಾಂಗಗಳು (ಸಂತಾನೋತ್ಪತ್ತಿ ಅಂಗಗಳು ಮತ್ತು ಮೂತ್ರಪಿಂಡಗಳಿಂದ ಮೂತ್ರವನ್ನು ಸಾಗಿಸುವ ಮೂತ್ರವಾಹಿನಿಗಳು) ಕ್ಲೋಯಕಕ್ಕೆ ತೆರೆಯುತ್ತವೆ. ಇವು ಕ್ಲೋಯಕದ ಹಿಂತುದಿಯಲ್ಲಿ ತೊಟ್ಟಿನಂತಿರುವ ಪ್ರವರ್ಧಗಳ ಮೇಲ್ತುದಿಯಲ್ಲಿ ತೆರೆಯುತ್ತವೆ. ಕ್ಲೋಯಕದ ಸನಿಹದಲ್ಲಿ ಅದರ ಒಳ ಅಂಚಿಗೆ ಸೇರಿದಂತೆ ಪ್ರವರ್ಧಗಳ ತುದಿಯಲ್ಲಿ ಹೊರಕ್ಕೆ ತೆರೆಯುವ ಎರಡು ಉದರ ರಂಧ್ರ (ಅಬ್ಡಾಮಿನಲ್ ಪೋರ್) ಗಳಿವೆ. ಇವುಗಳ ಮೂಲಕ ಉದರಾವಕಾಶವು ಹೊರಕ್ಕೆ ಸಂಪರ್ಕ ಪಡೆದಿದೆ.

ಬಾಲದ ಈಜುರೆಕ್ಕೆಯ ಬುಡದ ಬಳಿ ಎರಡು ಆಳವಿಲ್ಲದ ತಗ್ಗುಗಳಿವೆ. ಇವನ್ನು ಅಗ್ರ ಮತ್ತು ಪಶ್ಚ ಬಾಲದ ಕುಳಿಗಳೆಂದು ಕರೆಯುತ್ತಾರೆ. ಇವು ಇರುವುದು ಸ್ಕೊಲಿಯೊಡಾನ್ ಜಾತಿಯ ಮೀನುಗಳ ವಿಶೇಷ ಲಕ್ಷಣ.

ದೇಹದ ಉದ್ದಕ್ಕೂ ಪಕ್ಕೆ ಭಾಗದಲ್ಲಿ ತಲೆಯಿಂದ ಬಾಲದವರೆಗೆ ಹರಡಿದಂತೆ ಅಸ್ಪಷ್ಟಪಾರ್ಶ್ವ ಪಂಕ್ತಿಗಳಿವೆ. ಇವುಗಳ ಕೆಳಗೆ ಒಂದು ಜಾಡಿನಂತಹ ಸ್ಥಳವಿದ್ದು, ಅದರಲ್ಲಿ ಪಾರ್ಶ್ವ ಪಂಕ್ತಿ ಸಂವೇದನಾಂಗಗಳೆಂಬ ಇಂದ್ರಿಯಾಂಗಗಳಿವೆ. ಇವು ಮೀನಿನ ಎರಡೂ ಪಕ್ಕಗಳ ನೀರಿನ ಒತ್ತಡವನ್ನು ಗ್ರಹಿಸಲು ಮತ್ತು ಮೀನಿನ ಸಮತೋಲನವನ್ನು ಕಾಪಾಡಿಕೊಳ್ಳಲು ಅನುಕೂಲವಾಗಿವೆ.

ತಲೆ ಮತ್ತು ಮೂತಿಯ ಮೇಲೆ ಹರಡಿದಂತೆ ಅನೇಕ ಗುಂಪುಗಳಲ್ಲಿ ಸೂಕ್ಷ್ಮ ಆಂಪುಲರಿ ರಂಧ್ರಗಳಿವೆ. ಇವುಗಳ ಮೂಲಕ ಒಳಗಿರುವ ಆಂಪುಲರ್ ಲೋರೆನ್ಜಿನಿ ಗ್ರಾಹಕಾಂಗಗಳು ಹೊರಕ್ಕೆ ತೆರೆಯುತ್ತವೆ.

ಸಂತಾನಾಭಿವೃದ್ಧಿ : ವರ್ಷದಲ್ಲಿ ಯಾವ ಕಾಲದಲ್ಲಿ ಬೇಕಾದರೂ ಸಂತಾನೋತ್ಪತ್ತಿ ಕ್ರಿಯೆ ನಡೆಯಬಹುದು. ಇವುಗಳಲ್ಲಿ ಗಂಡುಹೆಣ್ಣುಗಳ ಕೂಡುವಿಕೆ, ಪುರುಷಾಣುಗಳ ವರ್ಗಾವಣೆ ನಡೆದು ಅಂತರ್ನಿಷೇಚನ ನಡೆಯುತ್ತದೆ. ಅಂತರ್ನಿಷೇಚನ ಶಾರ್ಕ್ ಮೀನುಗಳ ವಿಶೇಷ ಲಕ್ಷಣ. ಇವು ಮೊಟ್ಟೆಗಳನ್ನು ಹೊರಗೆ ಇಡದೆ ಹೆಣ್ಣು ಮೀನಿನ ಗರ್ಭಕೋಶದಲ್ಲಿಯೆ ಉಳಿಸಿಕೊಂಡು, ಭ್ರೂಣೀಯ ಬೆಳವಣಿಗೆ ನಡೆದು ಮರಿಗಳು ಹುಟ್ಟತ್ತವೆ. ಈ ವಿಧಾನದ ಸಂತಾನೋತ್ಪತ್ತಿ ಕ್ರಮವನ್ನು ಸಸ್ತನಿಗಳ ನಿಜ ಜರಾಯುಜಗಳಿಂದ ಗುರುತಿಸಲು ಅಂಡಜರಾಯುಜ (ಓವೊವೈವಿಪ್ಯಾರಸ್‌) ವಿಧಾನ ಎಂದು ಕರೆಯುತ್ತಾರೆ. ತತ್ತಿಯು ಹೆಣ್ಣು ಮೀನಿನ ಗರ್ಭಕೋಶದಲ್ಲಿ ಉಳಿದು ಬೆಳೆದರೂ ಭ್ರೂಣವು ತತ್ತಿಯಲ್ಲಿ ಕೂಡಿಟ್ಟ ಆಹಾರ, ಬಂಡಾರವನ್ನು ಬಳಸಿಕೊಂಡು ಬೆಳೆಯುತ್ತದೆ. ಗರ್ಭಕೋಶದಲ್ಲಿ ಎರಡು ಪಾಲಿಗಳಿದ್ದು, ಒಂದೊಂದರಲ್ಲಿಯೂ ೫ ರಿಂದ ೭ ಮರಿಗಳು ಬೆಳೆಯುತ್ತವೆ. ಬೆಳವಣಿಗೆಯ ಕಾಲಕ್ಕೆ ಭ್ರೂಣದ ಅನ್ನನಾಳವು ಬಂಡಾರ ತೊಟ್ಟಿನ (ಯೋಕ್‌ಸ್ಟಾಕ್‌) ಮೂಲಕ ಬಂಡಾರ ಸಂಚಿಯಿಂದ ಪೋಷಕಾಂಶಗಳನ್ನು ಪಡೆದು ಬೆಳೆಯುತ್ತದೆ. ತತ್ತಿಯಲ್ಲಿ ಕೂಡಿಟ್ಟಿದ್ದ ಬಂಡಾರ ಬಳಕೆಯಾಗಿ ಮುಗಿದ ಮೇಲೆ, ಬಂಡಾರ ಸಂಚಿಯು ಮುದುರಿ ಗರ್ಭಕೋಶದ ಭಿತ್ತಿಯಲ್ಲಿ ಹುದುಗಿ ಒಂದು ರೀತಿಯ ಬಂಡಾರ ಸಂಚಿ (ಯೋಕ್‌ಸ್ಯಾಕ್‌) ಪ್ಲಾಸೆಂಟ ರೂಪುಗೊಳ್ಳುತ್ತದೆ.

ಸ್ವಭಾವ : ಇದು ತನ್ನ ಹೊಟ್ಟೆ ಬಾಕತನದಿಂದಾಗಿ ಆಹಾರ ಜೀವಿಗಳನ್ನು ತಿಂದು ಧ್ವಂಸ ಮಾಡುತ್ತದೆ. ಕಾರಾವಳಿಯ ಬಡ ಬೆಸ್ತರು ಇದನ್ನು ಆಹಾರವಾಗಿ ಬಳಸುತ್ತಾರಾದರೂ, ಇದರ ಮಾಂಸ ರುಚಿಯಿಲ್ಲವಾದುದಾದರೂ ಇದರಲ್ಲಿ ಅತಿ ಹೆಚ್ಚು ಮೊತ್ತದಲ್ಲಿ ಉತ್ಕೃಷ್ಟ ಪೋಷಕಾಂಶಗಳಿವೆ ಮತ್ತು ಸುಲಭ ಪಚನ. ಇದರ ಒಣಗಿದ ಚರ್ಮವನ್ನು ಶಾಗ್ರೀನ್ ಎಂದು ಕರೆಯುತ್ತಾರೆ. ಇದನ್ನು ಲೋಹದ ವಸ್ತುಗಳು ಮತ್ತು ಮರ ಮುಟ್ಟುಗಳನ್ನು ಉಜ್ಜಿ ನಯ ಮಾಡಲು ಬಳಸುತ್ತಾರೆ. ಅಧ್ಯಾಪನದಲ್ಲಿ ಉತ್ತಮ ಉದಾಹರಣೆ. ಅಂಗವಿಚ್ಛೇದನೆಗೆ ಉತ್ತಮ ಪ್ರಾಣಿ.

ಕೆಲವು ಜಾತಿಯ ಶಾರ್ಕುಗಳು ಕಡಲು ಸಾನ್ನಕ್ಕೆ ಹೋದವರನ್ನು ಆಕ್ರಮಿಸಿ, ದೋಣಿಗಳನ್ನು ಆಕ್ರಮಿಸಿ ಅಂಜಿಕೆ ಹುಟ್ಟಿಸುತ್ತವೆ ಮತ್ತು ಮನುಷ್ಯರನ್ನು ತಿನ್ನುವ ಶಾರ್ಕುಗಳು ಇವೆ.

—-

ಗಣ : ಇಲಾಸ್ಮೊಬ್ರಾಂಕಿ/ಸೆಲಾಕಿ (Elasmobronchi/selachi)
ಕುಟುಂಬ : ಪ್ಲೂರೊಸ್ಪೊಮೇಟ
(
Plerurostomata)
ಉದಾ : ಸುತ್ತಿಗೆ ತಲೆ ಶಾರ್ಕು (
Hammerheaded Shark)
ಶಾಸ್ತ್ರೀಯ ನಾಮ : ಪ್ಫಿರ್ನ ಜೈಗೀನ (
Sphyrna zygaena)

002_69_PP_KUH

ವಿತರಣೆ : ಉಷ್ಣ ವಲಯ ಮತ್ತು ಸಮಶೀತೋಷ್ಣ ವಲಯದ ಕಡಲುಗಳಲ್ಲಿ ವಾಸ. ಕರ್ನಾಟಕದ ಕರಾವಳಿಯಲ್ಲಿ ಬೆಸ್ತರು ಬೀಸಿದ ಬಲೆಗಳಲ್ಲಿ ಕೆಲವೊಮ್ಮೆ ಕಂಡು ಬರುವುದುಂಟು.

ಗಾತ್ರ : ೪ ರಿಂದ ೫ ಮೀಟರ್ ಉದ್ದ ಇದರ ಗರಿಷ್ಠ ಬೆಳವಣಿಗೆ.

ಆಹಾರ : ಇತರ ಸಣ್ಣ ಮೀನುಗಳು ಮತ್ತು ಕಡಲ ಜೀವಿಗಳು.

ಲಕ್ಷಣಗಳು : ಇದು ಒಂದು ಶಾರ್ಕಿನಂತೆಯೆ ಇದೆ. ಕದುರಿನಾಕಾರದ ದೇಹ, ಎರಡು ಬೆನ್ನಿನ ಈಜುರೆಕ್ಕೆಗಳು, ಒಂದು ಗುದ ಒಂದು ಬಾಲದ ಈಜುರೆಕ್ಕೆ. ಬಾಲದ ಮೇಲೆ ಮತ್ತು ಕೆಳಗೆ ಹರಡಿ, ಇದರ ಎರಡೂ ಪಾಲಿಗಳು ಅಸಮವಾಗಿವೆ. ಬೆನ್ನು ಮೂಳೆಯು ಮೇಲಿನ ಪಾಲಿಯಲ್ಲಿದೆ, ಕೆಳಗಿನ ಪಾಲಿ ಮೇಲಿನದಕ್ಕಿಂತ ದೊಡ್ಡದು ಮತ್ತು ಇದರಲ್ಲಿ ಒಂದು ಕಚ್ಚು ಇದೆ. ಇದು ಶಾರ್ಕು ಮೀನುಗಳ ವಿಶಿಷ್ಟ ಲಕ್ಷಣ. ಎರಡು ಜೊತೆ ಜೋಡು ಈಜುರೆಕ್ಕೆಗಳಿವೆ, ಭುಜದ ಈಜುರೆಕ್ಕೆಗಳು ಮತ್ತು ಗುದದ ಬಳಿಯ ಸೊಂಟದ ಈಜುರೆಕ್ಕೆ ಜೋಡಿಗಳು ಗಂಡು ಮೀನಿನ ಸೊಂಟದ ಈಜುರೆಕ್ಕೆಯ ಒಳ ಅಂಚಿನಲ್ಲಿ ಅಂಟಿದಂತ ಒಂದೊಂದು ಉದ್ದವಾದ, ಚೂಪಾದ, ಉರುಳೆಯಾಕಾರದ ಆಲಿಂಗನಾಂಗಗಳಿವೆ. ಇದರ ಮೂಲಕ ಸಂಭೋಗ ಕಾಲದಲ್ಲಿ ಪುರುಷಾಣುಗಳು ಗಂಡು ಮೀನಿನಿಂದ ಹೆಣ್ಣು ಮೀನಿನ ದೇಹದೊಳಕ್ಕೆ ವರ್ಗಾಯಿಸಲ್ಪಡುತ್ತವೆ.

ಇದರ ತಲೆಯ ರಚನೆಯೊಂದು ವಿಶೇಷ ಲಕ್ಷಣ. ತಲೆ ಅಕ್ಕಪಕ್ಕಗಳಲ್ಲಿ ಅಡ್ಡಡ್ಡವಾಗಿ ಬೆಳೆದು ಗಮನಾರ್ಹ ಪಾಲಿಗಳು ಬೆಳೆದಿವೆ. ಇದರಿಂದ ತಲೆಯು ರಚನೆಯಲ್ಲಿ ಸುತ್ತಿಗೆಯನ್ನು ಹೋಲುತ್ತದೆ. ಆದ್ದರಿಂದ ಇದನ್ನು ಸುತ್ತಿಗೆ ತಲೆ ಶಾರ್ಕೆಂದು ಕರೆಯುತ್ತಾರೆ. ತಲೆಯ ಪಕ್ಕದ ಪಾಲಿಗಳ ಪಾರ್ಶ್ವ ತುದಿಗಳಲ್ಲಿ ಕಣ್ಣುಗಳಿವೆ. ಈ ಕಣ್ಣುಗಳಿಗೆ ಪಾರದರ್ಶಿಕ ನಿಮೇಷಕ ಪಟಲವೂ ಸೇರಿದಂತೆ ಮೂರು ಮೂರು ಕಣ್ಣು ರೆಪ್ಪೆಗಳಿವೆ. ತಲೆಯ ತಳಭಾಗದಲ್ಲಿ ಅರೆ ಚಂದ್ರಾಕಾರದ ಬಾಯಿ, ದವಡೆಗಳಲ್ಲಿ ಹಲ್ಲುಗಳು ಇವೆ.

ಸಂತಾನಾಭಿವೃದ್ಧಿ : ನಿಷೇಚನ ಹೆಣ್ಣು ಮೀನಿನ ದೇಹದ ಒಳಗಡೆ ಸಂಭವಿಸುತ್ತದೆ. ಅಪಾರ ಬಂಡಾರದ, ದೊಡ್ಡ ಕೆಲವೇ ಮೊಟ್ಟೆಗಳನ್ನು ಸಿದ್ಧಪಡಿಸಿ, ಅವುಗಳನ್ನು ಅಂಡವಾಹಿನಿಯಲ್ಲಿ ಉಳಿಸಿಕೊಂಡು, ಮರಿಗಳು ಬೆಳೆಯುತ್ತವೆ. ಬಂಡಾರದ ಸುತ್ತ ಬೆಳೆಯುತ್ತಿರುವ ಮರಿಗೆ ಆಹಾರವನ್ನು ಒದಗಿಸಲು ಬಂಡಾರ ಸಂಚಿ ಎಂಬ ಭ್ರೂಣಬಹಿರ್ ಪಟಲವೊಂದು ಬೆಳೆಯುತ್ತದೆ. ಪೂರ್ಣವಾಗಿ ಬೆಳೆದ ಮರಿ ಹೊರಬರುತ್ತದೆ. ಇದನ್ನು ಪೂರ್ಣ ತಾಯಿಯ ಅಂಗ, ಅಂಗಾಂಶಗಳಿಗೆ ಅಂಟಿಕೊಡು, ಅಗತ್ಯವಾದ ಪೋಷಕಾಂಶಗಳನ್ನು ತಾಯಿಯಿಂದ ಪಡೆದು ಬೆಳೆಯುವ ಸಸ್ತನಿ ಮರಿಗಳಿಗೆ ಹೋಲಿಸಿದರೆ ಇದು ಪರಿಪೂರ್ಣ ಜರಾಯುಜ ಬೆಳವಣಿಗೆಯಲ್ಲ ಎಂದು ಗೊತ್ತಾಗುತ್ತದೆ. ಆದ್ದರಿಂದ ಶಾರ್ಕುಗಳ ಈ ರೀತಿಯ ಬೆಳವಣಿಗೆಯನ್ನು ಅಂಡರಾಯುಜ ವಿಧಾನ ಎಂದು ಕರೆಯುತ್ತಾರೆ.

ಸ್ವಭಾವ : ಸದೃಢವಾದ ತಮ್ಮ ಸುತ್ತಿಗೆ ತಲೆಯನ್ನು ಶತೃಗಳ ಎದುರು ತನ್ನನ್ನು ರಕ್ಷಿಸಿಕೊಳ್ಳಲು ಮತ್ತು ಆಹಾರ ಜೀವಿಗಳನ್ನು ಆಕ್ರಮಿಸಿಕೊಳ್ಳಲು ಬಳಸುತ್ತದೆ. ಹಲ್ಲುಗಳು ಆಹಾರ ಜೀವಿಯನ್ನು ಕಚ್ಚಿ ಸಿಗಿದು ತಿನ್ನಲು ನೆರವಾಗುತ್ತವೆ. ಇವು ತುಂಬಾ ಉಗ್ರರೂಪದ ಕ್ರೂರ ಪ್ರಾಣಿಗಳು. ಕಡಲ ದಂಡೆಯಲ್ಲಿ ಸ್ನಾನಕ್ಕೆ ಹೋದವರನ್ನು ಆಕ್ರಮಿಸಿ ಕೊಂದ ನಿದರ್ಶನಗಳಿವೆ. ಆದರೆ ಕರ್ನಾಟಕದ ಕರಾವಳಿಯಲ್ಲಿ, ಮರಳು ದಂಡೆಗಳಲ್ಲಿ ಇದರ ಧಾಳಿಯ ಅಪಾಯ ಇದುವರೆಗೆ ವರದಿಯಾಗಿಲ್ಲ.

ಈ ಮೀನುಗಳ ಪಿತ್ತಜನಕಾಂಗ (ಯಕೃತ್‌) ಗಳಿಂದ ಶಾರ್ಕ್‌ಲಿವರ್ ಆಯಿಲ್ ತೆಗೆಯಲು ಇವುಗಳನ್ನು ಕೊಲ್ಲುತ್ತಾರೆ.

 —-

ಗಣ : ರಾಜಿಫಾರ್ಮಿಸ್‌ (Rajiformes) ಅಥವ ಹೈಪೊಟ್ರಿಮೇಟ (Hypotremata)
ಉದಾ : ಸ್ಕೇಟ್‌ಗಳು ಮತ್ತು ರೇಗಳು / ಕೊರಕೆಗಳು / ಸೊರಕೆಗಳು

ಇವು ಹೈಪೊಟ್ರಿಮೇಟ ಇಲೊಸ್ಮೊಬ್ರಾಂಕಿ ಮೀನುಗಳು. ಈ ಗಣಕ್ಕೆ ಸೇರಿದಂತೆ ಸುಮಾರು ೪೦೦ಕ್ಕೂ ಹೆಚ್ಚು ಜೀವಂತ ಪ್ರಭೇಧಗಳಿವೆ. ಕದುರಿನಾಕಾರದ ಶಾರ್ಕು ಮೀನುಗಳಿಗೆ ಹೋಲಿಸಿದರೆ ಇವುಗಳ ದೇಹ ಚಪ್ಪಟೆಯಾಗಿದೆಮತ್ತು ಅಗಲವಾಗಿದೆ. ಎರಡೂ ಭುಜದ ಈಜುರೆಕ್ಕೆಗಳು ದೇಹದ ಇಕ್ಕೆಡೆಗಳಲ್ಲಿಯೂ ವಿಸ್ತರಿಸಿ ಬೆಳೆದು ತಲೆ ಮತ್ತು ಮುಂಡ ಭಾಗದ ಶರೀರಕ್ಕೆ ಪಕ್ಕದಲ್ಲಿ ಕೂಡಿಕೊಂಡಿವೆ. ಹೀಗಾಗಿ ದೇಹವು ಕಡುಬಿನ ಆಕಾರ, ತಟ್ಟೆಯಾಕಾರ ಅಥವಾ ವಜ್ರಾಕೃತಿಯ ಆಕಾರ ತಾಳಿದೆ. ಬಾಲವು ತೆಳುವಾಗಿ ಉದ್ದವಾಗಿದೆ. ಬಾಲದ ಈಜುರೆಕ್ಕೆ ಕ್ಷೀಣವಾಗಿದೆ. ಬೆನ್ನಿನ ಈಜುರೆಕ್ಕೆಗಳು ಬಾಲದ ಮೇಲಕ್ಕೆ ಸ್ಥಳಾಂತರಗೊಂಡಿವೆ ಮತ್ತು ಕೆಲವೊಮ್ಮೆ (ಕುಟುಕು ಕೊರಕೆಗಳಲ್ಲಿರುವಂತೆ) ಮುಳ್ಳುಗಳಾಗಿ ಮಾರ್ಪಟ್ಟಿವೆ. ಈ ಮಾರ್ಪಾಟುಗಳೆಲ್ಲವೂ ಈ ಮೀನುಗಳ ಕಡಲ ತಳದ ವಾಸಕ್ಕೆ ಅನುಕೂಲವಾಗಲೆಂದು ನಡೆದ ಮಾರ್ಪಾಡುಗಳು.

ಕಣ್ಣುಗಳು ತಲೆಯ ಮೇಲ್ಭಾಗದಲ್ಲಿವೆ. ಕಣ್ಣುಗಳ ಹಿಂಬದಿಯಲ್ಲಿ ಒಂದು ಜೊತೆ ಸ್ಪೈರಕಲ್‌ಗಳೆಂಬ ಶ್ವಾಸ ರಂಧ್ರಗಳಿವೆ. ಸ್ಪೈರಕಲ್‌ ತೆರಪುಗಳಿಗೆ ಕವಾಟಗಳಿದ್ದು ಕಿವಿರು ಕೋಣೆಗಳಿಗೆ ನೀರಿನ ಪ್ರವೇಶ ಮತ್ತು ಪ್ರವಾಹದ ಬಿರುಸನ್ನು ನಿಯಂತ್ರಿಸುತ್ತವೆ. ಕಿವಿರು ರಂಧ್ರಗಳು ಮತ್ತು ಬಾಯಿ ತಲೆಯ ತಳಭಾಗದಲ್ಲಿವೆ. ದವಡೆಗಳಲ್ಲಿರುವ ಹಲ್ಲುಗಳು ಚಪ್ಪಟೆಯಾಗಿದ್ದು ಆಹಾರವನ್ನು ಅಗಿಯಲು ಮತ್ತು ಜಜ್ಜಲು ಅನುಕೂಲವಾಗಿವೆ. ಚಿಪ್ಪು ಮೃದ್ವಸ್ಥಿಗಳು, ಸಂಧಿಪದಿ, ಕಠಿಣ ಚರ್ಮಿಗಳು ಮತ್ತು ಅಪರೂಪವಾಗಿ ಮೀನುಗಳು ಇವುಗಳ ಆಹಾರ. ವಿಸ್ತಾರವಾಗಿ ಬೆಳೆದ ಈಜುರೆಕ್ಕೆಗಳನ್ನು ಹಕ್ಕಿಯ ರೆಕ್ಕೆಗಳಂತೆ ಬಡಿದು ಈಜಲು ಉಪಯೋಗಿಸುತ್ತವೆ. ಈ ಈಜುರೆಕ್ಕೆಗಳ ವಿಸ್ತಾರ ೨ ರಿಂದ ೩ ಮೀಟರ್ ಗಳಷ್ಟು ಅಗಲವಾಗಿರಬಹುದು. ಮೇಲಿನಿಂದ ನೋಡಿದರೆ ಈ ಮೀನುಗಳು ಬಾಲಂಗೋಚಿ ಇರುವ ಪಟಗಳಂತೆ ಕಾಣುತ್ತವೆ.

—-

ಗಣ : ಸೆಲಾಕಿ (Selachii)
ಗಣ : ರಾಜಿಫಾರ್ಮಿಸ್‌ (
Rajiformes) (Hypotremata)
ಉದಾ : ಸೊರಕೆಗಳು (
Ray fishes, skates)

003_69_PP_KUH

ಸಾಮಾನ್ಯ ವಿವರಣೆ : ಸೊರಕೆಗಳು (ರೇ ಮೀನುಗಳು/ಚಾರು ಮೀನುಗಳು) ಕಡಲ ತಳದಲ್ಲಿ ವಾಸಿಸಲು ವಿಶೇಷತೆ ಪಡೆದ ಮೃದ್ವಸ್ಥಿ ಮೀನುಗಳು. ದೇಹವು ಮೇಲಿನಿಂದ ಕೆಳಕ್ಕೆ, ಊರ್ಧ್ವೋಭಿಮುಖವಾಗಿ ತಟ್ಟಿದಂತೆ ಚಪ್ಪಟೆಯಾಗಿದೆ. ಭುಜದ ಈಜುರೆಕ್ಕೆಗಳು ಅಗಲವಾಗಿ ಬೆಳೆದು ಹಿಂದಕ್ಕೂ ಮುಂದಕ್ಕೂ ವಿಸ್ತರಿಸಿ ದೇಹದೊಂದಿಗೆ ಕೂಡಿ ಕೊಂಡಿವೆ. ಇದರಿಂದ ದೇಹವು ಅಗಲವಾಗಿ ರೊಟ್ಟಿಯಂತೆ ಕಾಣುತ್ತದೆ. ಬಾಯಿ ತಲೆಯ ತಳಭಾಗದಲ್ಲಿದೆ. ಬಾಯಿಯಲ್ಲಿ ಅನೇಕ ಸಾಲು ಹಲ್ಲುಗಳು ಅರೆ ವರ್ತುಲಾಕಾರದಲ್ಲಿ ಸಾಲುಗಳಾಗಿ ಜೋಡಿಸಿದಂತೆ ವ್ಯವಸ್ಥೆಗೊಂಡಿವೆ. ಬಾಯಿಯ ಮುಂಭಾಗದಲ್ಲಿ ನಾಸಿಕಗಳಿವೆ. ಹಿಂದೆ ಐದು ಜೊತೆ ಕಿವಿರು ರಂಧ್ರಗಳಿವೆ. ತಲೆಯ ಮೇಲ್ಭಾಗದಲ್ಲಿ ಎರಡು ಕಣ್ಣುಗಳಿವೆ. ಕಣ್ಣುಗಳ ಹಿಂಭಾಗದಲ್ಲಿ ಒಂದು ಜೊತೆ ಸ್ಪೈರಕಲ್‌ಗಳೆಂಬ ಶ್ವಾಸ ರಂಧ್ರಗಳಿವೆ. ಬಾಲ ತೆಳ್ಳಗೆ, ನೀಳವಾಗಿ ಚಾಟಿಯಂತಿದೆ. ಬೆನ್ನಿನ ಈಜುರೆಕ್ಕೆಗಳು ಬಾಲದ ಮೇಲಕ್ಕೆ ಸ್ಥಳಾಂತರಗೊಂಡಿವೆ.

ಭುಜದ ಈಜುರೆಕ್ಕೆಗಳನ್ನು ಹಕ್ಕಿಯ ರೆಕ್ಕೆಗಳಂತೆ ಬಡಿದು ಕಡಲ ತಳದಲ್ಲಿ ಓಡಾಡುತ್ತವೆ.

ಮೈಲಿಯೊಬೇಟಸ್ ಎಂಬ ಹದ್ದು ಸೊರಕೆ ಮೀನಿನ ಭುಜದ ಈಜುರೆಕ್ಕೆಗಳ ಅಡ್ಡ ವಿಸ್ತಾರ ೪.೫ ಮೀಟರ್. ಇವಕ್ಕೆ ಉದ್ದ ಚಾಟಿಯಂತಹ ಮತ್ತು ಕೆಲವೊಮ್ಮೆ ಕುಟುಕು ಕಂಟಕಗಳಿರುವ ಬಾಲ ಇರುತ್ತದೆ.

ಕುಟುಕು ರೇ ಮೀನೆಂದೆ ಪ್ರಸಿದ್ಧವಾದ ದೇಸಿಯಾಟಿಸ್ಬ್ಲಿಕರ್ಸ,ಮೀನುಗಳು ಕಡಲ ದಂಡೆಯ ಬಳಿಯ ನೀರುಗಳಲ್ಲಿ, ಕೆಳಗೆ ಮರಳಿನಲ್ಲಿ ಅರೆಬರೆ ಹುದುಗಿ ಅಡಗಿರುತ್ತವೆ. ಮೇಲಿನಿಂದ ಬಂದು ಇವುಗಳ ಮೇಲೆ ಆಕ್ರಮಣ ಮಾಡುವ ಹಿಂಸ್ರಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಈ ವರ್ತನೆಯನ್ನು ಬೆಳೆಸಿಕೊಂಡಿದೆ. ಅವುಗಳ ಉದ್ದವಾದ ಚಾಟಿಯಂತಹ ಬಾಲ ರಕ್ಷಣಾ ಆಯುಧ. ಭುಜದ ಈಜುರೆಕ್ಕೆ ಅಂಚುಗಳು ಮುಳ್ಳುಗಳಾಗಿ ಮಾರ್ಪಟ್ಟಿವೆ. ಈ ಮುಳ್ಳುಗಳ ಅಲುಗು ಗರಗಸದಂತಿದ್ದು, ತನ್ನ ಬಳಿಗೆ ಬರುವ ಪ್ರಾಣಿಗಳಿಗೆ ಜಾಡಿಸಿ ಹೊಡೆದಾಗ ಅವುಗಳ ದೇಹದ ಮೇಲೆ ಗಾಯವಾಗುತ್ತದೆ. ಈ ಗಾಯಗಳು ಅತ್ಯಂತ ನೋವು ಕೊಡುತ್ತವೆ ಮತ್ತು ಗಾಯ ಮಾಯುವುದು ನಿಧಾನ. ಕೆಲವೊಮ್ಮೆ ಬಾಲದ ಮುಳ್ಳುಗಳ ಬುಡದಲ್ಲಿ ವಿಷಗ್ರಂಥಿಯಿರುತ್ತದೆ. ಇದರ ವಿಷ ಗಾಯವನ್ನು ಸೇರಿದರೆ ಉರಿ, ಊತ ಉಂಟಾಗುತ್ತದೆ ಮತ್ತು ಕೆಲವೊಮ್ಮೆ ಮಾರಕವೂ ಆಗಬಹುದು.

ರ್ಹೈನೊಬೇಟಸ್ಗ್ರಾನುಲೋಸಸ್ಎಂಬ ಗಿಟಾರ್ ಮೀನು ಆಕಾರದಲ್ಲಿ ಶಾರ್ಕ್ ಮೀನಿನಂತಿದ್ದರೂ ಕೆಲವಾರು ರೇ ಮೀನುಗಳ ಲಕ್ಷಣಗಳನ್ನು ತೋರುತ್ತದೆ. ತಲೆ ಚಪ್ಪಟೆಯಾಗಿದ್ದು ಕೊಡಲಿಯಾಕಾರವಾಗಿದೆ. ಕಿವಿರು ರಂಧ್ರಗಳು ತಲೆಯ ತಳಭಾಗದಲ್ಲಿವೆ. ತಲೆಯ ಮೇಲ್ಭಾಗದಲ್ಲಿ ಕಣ್ಣುಗಳ ಹಿಂದೆ ಒಂದು ಜೊತೆ ಸ್ಪೈರಕಲ್‌ಗಳಿವೆ. ಅಂದರೆ ಈ ಮೀನು ಶಾರ್ಕಮೀನು ಮತ್ತು ರೇ ಮೀನುಗಳೆರಡರ ಮಧ್ಯವರ್ತಿ ಲಕ್ಷಣಗಳನ್ನು ತೋರುತ್ತದೆ.

—- 

ಗಣ : ಲ್ಯಾಮಿನಿಫಾರ್ಮಿಸ್‌(Laminiformes)
ಕುಟುಂಬ : ಒರೆಕ್ಟೊಲೊಬಿಡೀ (Orectolobidae)
ಉದಾ : ಜೀಬ್ರಶಾರ್ಕ್ (Zebra Shark)
ಶಾಸ್ತ್ರೀಯ ನಾಮ : ಸ್ಟೀಗೊಸ್ಟೋಮ ಫ್ಯಾಸಿಯೇಟಸ್
‌(Stegostoma fasciatus)

ವಿತರಣೆ : ಕಡಲಮೀನು

ಗಾತ್ರ : ೩೦-೪೦ ಸೆಂ. ಮೀ. ಉದ್ದ

ಆಹಾರ : ಕಡಲ ಪ್ರಾಣಿಗಳು

ಲಕ್ಷಣಗಳು : ಉಳಿದೆಲ್ಲ ಲಕ್ಷಣಗಳಲ್ಲಿ ಶಾರ್ಕ್‌ನ್ನೇ ಹೋಲುತ್ತದೆ. ಆದರೆ ಇದರ ದೇಹದ ಮೇಲೆ ಜೀಬ್ರದಂತೆ ಪಟ್ಟೆಗಳಿವೆ. ಆದುದರಿಂದ ಈ ಹೆಸರು ಬಂದಿದೆ.